ಮಂಗಳವಾರ, ಏಪ್ರಿಲ್ 9, 2024

 


ಹೆಸರಿನಲ್ಲೇನಿದೆ – ವೈದ್ಯಕೀಯ ಜಗತ್ತಿನ ಪರ್ಯಾಯ ಇತಿಹಾಸ

ಡಾ. ಕಿರಣ್ ವಿ.ಎಸ್.

ವೈದ್ಯರು

ವೈದ್ಯಕೀಯ ರಂಗದಲ್ಲಿ ಒಂದು ಹಳೆಯ ಜೋಕಿದೆ. ರೋಗಿಯೋರ್ವನಿಗೆ ವೈದ್ಯರು ಹೇಳುತ್ತಾರೆ “ನಿಮಗೆ ಒಳ್ಳೆಯ ಸುದ್ಧಿ ಮತ್ತು ಕೆಟ್ಟ ಸುದ್ಧಿ ಒಂದೇ ಮಾತಿನಲ್ಲಿ ತಿಳಿಸುತ್ತೇನೆ”. ರೋಗಿಗೆ ಅಚ್ಚರಿ. ಒಂದೇ ವಾಕ್ಯದಲ್ಲಿ ಎರಡೂ ಸುದ್ಧಿ ತಿಳಿಸಲು ಹೇಗೆ ಸಾಧ್ಯ? ವೈದ್ಯರು “ಹೊಸದೊಂದು ಕಾಯಿಲೆಗೆ ನಿಮ್ಮ ಹೆಸರನ್ನು ಇಡುತ್ತಿದ್ದೇವೆ” ಎನ್ನುತ್ತಾರೆ!    

ವೈದ್ಯಕೀಯದಲ್ಲಿ ಜೋಡಿ-ನಾಮಪದಗಳಿಗೆ ಬಹಳ ಮಹತ್ವವಿದೆ. ಯಾವುದೋ ಅಂಗ, ಅಂಗಾಂಶ, ಕಾಯಿಲೆ, ಪದ್ದತಿ, ಲೆಕ್ಕಾಚಾರ ಮೊದಲಾದುವು ಒಂದು ನಾಮಪದವಾದರೆ, ಅದಕ್ಕೆ ಸಂಬಂಧಿಸಿದ ಯಾರದ್ದೋ ಹೆಸರು ಅವುಗಳೊಡನೆ ಜೊತೆಗೂಡುವುದು ಮತ್ತೊಂದು ನಾಮಪದ. ಹೀಗೆ, ಆ ಇಡೀ ಹೆಸರು ಜೋಡಿ-ನಾಮಪದವಾಗುತ್ತದೆ. ಉದಾಹರಣೆಗೆ ಅಖಿಲೀಸನ ಹಿಮ್ಮಡಿ, ಶೇಷಾಚಲಂ ರಕ್ತನಾಳ, ಪಾಟ್ ಮೂಳೆ-ಮುರಿತ, ಡೌನ್ ಸಿಂಡ್ರೋಮ್, ಕ್ಯಾಸನೂರು ಕಾಡಿನ ಕಾಯಿಲೆ, ಬಾಂಬೆ ರಕ್ತದ ಗುಂಪು ಮುಂತಾದುವು. ಬಡಪಾಯಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹೆಸರನ್ನು ಮರೆತರೂ ಸರಿಯೇ; ಇಂತಹ ನೂರಾರು ಹೆಸರುಗಳನ್ನು ತಪ್ಪದೇ ನೆನಪಿಡಬೇಕಾಗುತ್ತದೆ. ಪರೀಕ್ಷಾ ನಿಮಿತ್ತಂ ಬಹುವಿಧ ನಾಮಧೇಯಂ!

ಈ ಹೆಸರುಗಳು ಎಲ್ಲಿಂದ ಬಂದವು ಎನ್ನುವುದು ಕುತೂಹಲದ ಸಂಗತಿ. ಕೆಲ ಹೆಸರುಗಳು ಗ್ರೀಕ್ ಮಿಥಕಗಳಿಂದ, ಕೆಲವು ರೋಮನ್ ಪುರಾಣಗಳಿಂದ, ಹಲವು ಆಯಾ ಸಂಗತಿಗಳನ್ನು ವಿವರಿಸಿದ ವೈದ್ಯರ ಹೆಸರಿನಿಂದ, ಕೆಲವು ರೋಗಿಗಳ ಆರೈಕೆಯಲ್ಲಿ ನಿರತವಾಗಿರುವಾಗ ಈ ಮುನ್ನ ತಿಳಿಯದ ವಿಶಿಷ್ಟ ಸಂಗತಿಯೊಂದನ್ನು ಗುರುತಿಸಿದ ನರ್ಸ್ಗಳಿಂದ, ಕೆಲವಷ್ಟು ಆಗಷ್ಟೇ ಪತ್ತೆಯಾದ ಕಾಯಿಲೆಯಿಂದ ಬಳಲಿದ ರೋಗಿಗಳಿಂದ, ಹಲವಷ್ಟು ಆಯಾ ಪ್ರದೇಶದ ಹೆಸರಿನಿಂದ, ಅಪರೂಪಕ್ಕೆ ಕಾಯಿಲೆ ಪತ್ತೆಯಾದ ಆಸ್ಪತ್ರೆಯ ಹೆಸರಿನಿಂದ, ಹೀಗೆ ಅವುಗಳ ಸ್ರೋತಗಳು ಹತ್ತು-ಹಲವಾರು.

ಜೋಡಿ-ನಾಮಪದಗಳು ಕೇವಲ ವೈದ್ಯಕೀಯ ರಂಗಕ್ಕೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಇವುಗಳ ಪಾಲಿವೆ. ಡಾರ್ವಿನ್ನನ ಸಿದ್ಧಾಂತ, ಅವೋಗಾಡ್ರೋ ಸಂಖ್ಯೆ, ರಾಮಾನುಜನ್ ಸಮೀಕರಣ, ಚಂದ್ರಶೇಖರ್ ಮಿತಿ, ರಾಮನ್ ಪರಿಣಾಮ, ಬೂಲಿಯನ್ ಗಣಿತ, ನ್ಯೂಟನ್ ನಿಯಮಗಳು, ಪೈಥಾಗೊರೊಸ್ ಪ್ರಮೇಯ, ಬೋಧಾಯನ ಸೂತ್ರ ಹೀಗೆ ವಿಜ್ಞಾನ ಕ್ಷೇತ್ರದ ಜೋಡಿ-ನಾಮಪದಗಳು ಎಲ್ಲರ ಗಣನೆಗೆ ಬಂದಿರುತ್ತವೆ. ಅರ್ಥಶಾಸ್ತ್ರದಲ್ಲಂತೂ ಇವುಗಳ ಬಳಕೆ ವಿಪರೀತ ಎನಿಸುವಷ್ಟಿದೆ. ಇವೆಲ್ಲವೂ ಬಹುತೇಕ ವ್ಯಕ್ತಿಸೂಚಕ.

ಆದರೂ, ವೈದ್ಯಕೀಯದಲ್ಲಿನ ಜೋಡಿ-ನಾಮಪದಗಳ ಖದರ್ರೇ ಬೇರೆ. ಇವು ಬಹುತೇಕ ನಮ್ಮ ಶರೀರಕ್ಕೆ ಸಂಬಂಧಪಟ್ಟ ಸಂಗತಿಗಳಾದ್ದರಿಂದ ಇವುಗಳಿವೆ ಮಹತ್ವ ಹೆಚ್ಚು. ಅಲ್ಲದೇ, ಇವುಗಳ ಹಿನ್ನೆಲೆ ಬಹಳ ರಸವತ್ತಾದುವು. ಕೆಲವೊಮ್ಮೆ ಕಾಯಿಲೆಯ ಒಣ ವಿವರಗಳಿಗಿಂತಲೂ ಅವುಗಳ ಹೆಸರಿನ ಹಿಂದಿರುವ ಕತೆಗಳೇ ಹೆಚ್ಚು ರೋಚಕ. ಆದರೆ, ಈ ರೀತಿ ಹೆಸರುಗಳ ಆಧಾರದ ಮೇಲೆ ಸಮಸ್ಯೆಗಳನ್ನು ಗುರುತಿಸುವ ವಿಧಾನ ಆಧುನಿಕ ಯುಗದಲ್ಲಿ ವೈಜ್ಞಾನಿಕವಲ್ಲ. ಹೀಗಾಗಿ, ಇಂತಹ ಜೋಡಿ-ನಾಮಪದಗಳನ್ನು ಕಡೆಗಣಿಸಿ, ಅವುಗಳ ಬದಲಿಗೆ ವೈಜ್ಞಾನಿಕ ಆಧಾರದ ಮೇಲೆ ಬೇರೊಂದು ಹೆಸರನ್ನು ಬಳಸುವ ವಿಧಾನ ಈಗಾಗಲೇ ಚಾಲ್ತಿಯಲ್ಲಿದೆ. ಇಷ್ಟಾದರೂ, ಹಳೆಯ ಗೆಳತಿಯ ನೆನಪಿನಂತೆ, ಜೋಡಿ-ನಾಮಪದಗಳ ಆಕರ್ಷಣೆ ವೈದ್ಯರಿಗೆ ಇನ್ನೂ ಹಸುರಾಗಿದೆ. ಹಿಂದಿನ ಪೀಳಿಗೆಯ ಬಹುತೇಕ ವೈದ್ಯರು ಈಗಲೂ ಹೊಸ ಹೆಸರಿನ ಬದಲಿಗೆ ಜೋಡಿ-ನಾಮಪದವನ್ನೇ ಬಳಸುತ್ತಾರೆ. ಕುತೂಹಲಕ್ಕೆ ಇಂತಹ ಕೆಲವೊಂದರ ನಿಷ್ಪತ್ತಿಯನ್ನು ಅರಿಯುವ ಸಾಹಸ ಮಾಡಬಹುದು.

ಆಕಾಶಕಾಯಗಳ ನಾಮಕರಣದಂತೆಯೇ ಶರೀರ ಭಾಗಗಳ ಅಥವಾ ಕಾಯಿಲೆಗಳ ಹೆಸರಿಸುವಿಕೆಯಲ್ಲಿ ಗ್ರೀಕ್ ಮಿಥಕಗಳ ದರ್ಬಾರು ಹೆಚ್ಚು. ನಮ್ಮ ಆಧುನಿಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಯೂರೋಪ್ ಮೂಲದ್ದು. ಹೀಗಾಗಿ, ಯಾವ್ಯಾವುದನ್ನು ಯಾವ್ಯಾವ ಹೆಸರಿನಿಂದ ಯೂರೋಪಿಯನ್ನರು ಗುರುತಿಸುತ್ತಿದ್ದರೋ, ಅದರ ತಲೆ-ಬುಡ ತಿಳಿಯದಿದ್ದರೂ ಅದೇ ಹೆಸರುಗಳನ್ನು ಬಳಸುವ ಪರಿಪಾಠ ನಮ್ಮದಾಯಿತು. ಈ ಬಹುತೇಕ ಹೆಸರುಗಳ ಮೂಲ ತಿಳಿಯದವರೂ ಇವುಗಳ ಪ್ರಾಯೋಗಿಕ ಬಳಕೆಯಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಗ್ರೀಕ್ ಮೂಲದ ಇಂತಹ ಕೆಲ ಹೆಸರುಗಳನ್ನು ನೋಡಬಹುದು:

ಅಖಿಲೀಸನ ಹಿಮ್ಮಡಿ: ಗ್ರೀಕ್ ಮಿಥಕಗಳ ಪರಿಚಯವಿರುವವರಿಗೆ ಅಖಿಲೀಸ್ ಎನ್ನುವ ಮಹಾವೀರನ ಬಗ್ಗೆ ತಿಳಿದಿರುತ್ತದೆ. ಆತ ಥೇಟಿಸ್ ಎಂಬ ಅಮರ ದೇವಿಯ ಮಗ. ಗ್ರೀಕ್ ಮಿಥಕಗಳಲ್ಲಿ ಭೂಮಿಯ ಜೀವಂತ ಲೋಕ ಮತ್ತು ಪಾತಾಳದ ಮರ್ತ್ಯಲೋಕದ ನಡುವೆ ಸ್ಟಿಕ್ಸ್ ಎನ್ನುವ ನದಿ ಹರಿಯುತ್ತದೆ. (ನಮ್ಮ ಪುರಾಣದಲ್ಲೂ ವೈತರಣಿ ಎನ್ನುವ ಇಂತಹ ನದಿಯಿದೆ). ಸ್ಟಿಕ್ಸ್ ನದಿಯಲ್ಲಿ ಮಿಂದವರಿಗೆ ಅಮರತ್ವ ಲಭಿಸುತ್ತದೆ ಎನ್ನುವ ಪ್ರತೀತಿ. ತನ್ನ ಮಗನೂ ಅಮರನಾಗಬೇಕೆಂದು ಥೇಟಿಸ್ ದೇವಿ ಅಖಿಲೀಸ್ ಇನ್ನೂ ಶಿಶುವಾಗಿದ್ದಾಗಲೇ ಆತನ ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವನ್ನು (tendon) ಹಿಡಿದು, ಆತನ ಇಡೀ ಶರೀರವನ್ನು ಸ್ಟಿಕ್ಸ್ ನದಿಯಲ್ಲಿ ಮುಳುಗಿಸುತ್ತಾಳೆ. (ಪ್ರಾಯಶಃ ಶಿಶು ಅಖಿಲೀಸನಿಗೆ ಕೈಗೆ ಸಿಗುವಷ್ಟು ತಲೆಗೂದಲು ಇರಲಿಲ್ಲ ಅನಿಸುತ್ತದೆ) ಆಕೆ ಹಿಡಿದಿದ್ದಷ್ಟು ದೇಹ ಭಾಗ ಹೊರತುಪಡಿಸಿ, ಅಖಿಲೀಸ್ ವಜ್ರಕಾಯನಾಗುತ್ತಾನೆ; ತನ್ನ ವಿಶಿಷ್ಟ ಸಾಮರ್ಥ್ಯದ ಕಾರಣದಿಂದ ಮಹಾವೀರನಾಗುತ್ತಾನೆ. ಟ್ರೋಜನ್ ಕದನದ ವೇಳೆ ಅಖಿಲೀಸನ ಶೌರ್ಯಕ್ಕೆ ಟ್ರಾಯ್ ತತ್ತರಿಸುತ್ತದೆ. ಕಡೆಗೆ ಬಾಣವೊಂದು ಅಕಸ್ಮಾತ್ತಾಗಿ ಅಖಿಲೀಸನ ಹಿಮ್ಮಡಿಗೆ ಇಳಿದಾಗ ಆತ ಮರಣಿಸುತ್ತಾನೆ. ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವಿಗೆ ಅಖಿಲೀಸನ ಹೆಸರಿದೆ. ಈ ಹೆಸರು ಜನಪ್ರಿಯ ಸಾಹಿತ್ಯದಲ್ಲಿ ರೂಪಕವಾಗಿಯೂ ಬಳಕೆಯಾಗುತ್ತದೆ. ಯಾರದ್ದಾದರೂ ನಿಶ್ಚಿತ ದೌರ್ಬಲ್ಯವನ್ನು ಅವರ “ಅಖಿಲೀಸನ ಹಿಮ್ಮಡಿ” ಎಂದು ಕರೆಯುವ ಪದ್ಧತಿಯಿದೆ. ಗ್ರೀಸಿನ ಒಲಿಂಪಸ್ ಬೆಟ್ಟದ ಮೇಲೆ ವಾಸವಿರುವ ಗ್ರೀಕ್ ದೇವತೆಗಳು ಆಗಾಗ ಬೆಟ್ಟ ಹತ್ತಿಳಿದು ತಮ್ಮ ಹಿಮ್ಮಡಿಯನ್ನು ನೋಯಿಸಿಕೊಂಡಾರು. ಆಗ ಅವರುಗಳು “ಈ ಬೆಟ್ಟವೇ ನಮ್ಮ ಪಾಲಿಗೆ ಅಖಿಲೀಸನ ಹಿಮ್ಮಡಿ” ಎಂದು ಶ್ಲೇಷಾರ್ಥದಲ್ಲಿ ಕೊರಗಬಹುದು!

ಅಟ್ಲಾಸ್: ಗ್ರೀಕ್ ಮಿಥಕಗಳಲ್ಲಿ ಬೃಹದ್ದೇಹಿ ಟೈಟನ್ನರ ಮತ್ತು ದೇವರುಗಳ ಸಂಘರ್ಷದ ಕತೆಯಿದೆ. ಈ ಮಹಾಕದನದಲ್ಲಿ ದೇವರುಗಳು ಗೆದ್ದು ಟೈಟನ್ನರು ಸೋಲುವಂತಾಗುತ್ತದೆ. ಸೋತ ಟೈಟನ್ನರನ್ನು ದೇವರುಗಳು ಕ್ರೂರವಾಗಿ ಶಿಕ್ಷಿಸುತ್ತಾರೆ. ಇಂತಹ ಟೈಟನ್ನರಲ್ಲಿ ಅಟ್ಲಾಸ್ ಒಬ್ಬ. ಆತನಿಗೆ ಆಕಾಶವನ್ನು ಬೀಳದಂತೆ ತನ್ನ ಬೆನ್ನಿನ ಮೇಲೆ ಹಿಡಿದು ನಿಂತಿರುವ ನಿರಂತರ ಕೆಲಸ ನೀಡಲಾಗುತ್ತದೆ. ಮಾನವ ಶರೀರದಲ್ಲಿ ತಲೆಬುರುಡೆಯಿಂದ ನರವ್ಯೂಹ ಬೆನ್ನುಮೂಳೆಗೆ ಇಳಿಯುತ್ತದೆ. ಬೆನ್ನುಮೂಳೆ ಮೂಲತಃ 33 ಮೂಳೆಗಳ ಘಟಕ. ಇದರಲ್ಲಿ ಅತ್ಯಂತ ಮೇಲಿನ ಮೂಳೆ ತಲೆಬುರುಡೆಯನ್ನು ಹಿಡಿದು ನಿಂತಿರುವಂತೆ ಕಾಣುತ್ತದೆ. ಈ ಮೂಳೆಗೆ ಅಟ್ಲಾಸ್ ಎನ್ನುವ ಹೆಸರಿದೆ. ನಾವು “ಇಲ್ಲ; ಆಗುವುದಿಲ್ಲ” ಎಂದು ಸೂಚಿಸಲು ತಲೆಯನ್ನು ಎಡ-ಬಲಗಳತ್ತ ಆಡಿಸುತ್ತೇವಷ್ಟೆ? ಆ ಚಲನೆಗೆ ಕಾರಣ ಈ ಮೂಳೆ. ತನ್ನ ಶಿಕ್ಷೆ ಏನೆಂದು ತಿಳಿದಾಗ ಅಟ್ಲಾಸ್ ಮಹಾಶಯ ತನ್ನ ತಲೆಯನ್ನು ಎಡ-ಬಲಗಳಿಗೆ ಆಡಿಸಿದ್ದರೆ ಈ ಹೆಸರಿನ ಭಾರ ಹೊರುವ ದುರವಸ್ಥೆ ಆತನಿಗೆ ಬರುತ್ತಿರಲಿಲ್ಲವೋ ಏನೋ! 

ಐರಿಸ್: ಕಣ್ಣಿನ ಮಧ್ಯದಲ್ಲಿರುವ ಗಾಢವರ್ಣದ ವೃತ್ತಾಕಾರ ಭಾಗವನ್ನು ಐರಿಸ್ ಎನ್ನುತ್ತಾರೆ. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ವರ್ಣದ ಛಾಯೆ ಹೊಂದಿರುತ್ತದೆ. ಐರಿಸ್ ಎನ್ನುವುದು ಗ್ರೀಕರ ಮಳೆಬಿಲ್ಲಿನ ದೇವತೆಯ ಹೆಸರು. ಗ್ರೀಕ್ ದೇವರುಗಳು ಒಲಿಂಪಸ್ ಎನ್ನುವ ಆಗಸದ ಪರ್ವತದ ಮೇಲೆ ವಾಸವಾಗಿರುತ್ತಾರೆ ಎನ್ನುವ ಪ್ರತೀತಿಯಿದೆ. ಐರಿಸ್ ದೇವಿ ದೇವರುಗಳ ಸಂದೇಶವಾಹಕಿಯಾಗಿ, ಮಳೆಬಿಲ್ಲನ್ನು ಸೃಜಿಸಿ, ಆಗಸದಿಂದ ಭೂಮಿಗೆ ಇಳಿಯುತ್ತಾಳೆ ಎನ್ನುವ ರಮ್ಯ ಕತೆ. ಅಂತೆಯೇ ವಾಪಸ್ ಹೋಗುವಾಗ ತನ್ನ ಹೂಜಿಯಲ್ಲಿ ಸಮುದ್ರದ ನೀರನ್ನು ಹೊತ್ತು ಮೋಡಗಳ ಮೇಲೆ ಸಿಂಪಡಿಸಿ ಮಳೆಗೆ ಕಾರಣಳಾಗುತ್ತಾಳೆ ಎನ್ನುವ ಕತೆಯೂ ಇದೆ. ಮಳೆಬಿಲ್ಲಿನ ಏಳು ಬಣ್ಣಗಳು ಆಕೆಯ ದಿರಿಸು. ಕಣ್ಣಿನ ಪಾಪೆಯ ಸುತ್ತಲಿನ ಐರಿಸ್ ಹಲವಾರು ಬಣ್ಣಗಳಲ್ಲಿ ಇರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಆ ಹೆಸರು.

ನಾರ್ಸಿಸಿಸಮ್: ಮನೋವಿಜ್ಞಾನದಲ್ಲಿ ಆತ್ಮರತಿಯಿಂದ ಬಳಲುವವರಿಗೆ ಈ ಹೆಸರು. ಗ್ರೀಕ್ ಮಿಥಕಗಳಲ್ಲಿ ನಾರ್ಸಿಸಸ್ ಎಂಬಾತನ ಪ್ರಸ್ತಾಪವಿದೆ. ಆತ ಬಹಳ ಸುಂದರ ವ್ಯಕ್ತಿ. ಆತನ ಪ್ರೇಮಕ್ಕಾಗಿ ಹಂಬಲಿಸುವ ಹೆಂಗಳೆಯರು ಎಷ್ಟೋ ಮಂದಿ. ಆದರೆ, ಆತ ಯಾರನ್ನೂ ಪುರಸ್ಕರಿಸಲಿಲ್ಲ. ಒಮ್ಮೆ ನಿರ್ಮಲವಾದ ನೀರಿನ ಕೊಳವೊಂದರಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ಕಂಡ ಆತ ತನ್ನ ಬಗ್ಗೆ ತಾನೇ ಮೋಹಗೊಂಡು, ಆ ಪ್ರತಿಬಿಂಬವನ್ನೇ ದಿಟ್ಟಿಸುತ್ತಾ ಇದ್ದು ಬಿಟ್ಟ. ಅದು ಯಾವ ಗೀಳಿನ ಸ್ವರೂಪ ಪಡೆಯಿತೆಂದರೆ, ಆ ಪ್ರತಿಬಿಂಬದಿಂದ ಆತನ ದೃಷ್ಟಿ ದೂರಾಗಲೇ ಇಲ್ಲ. ಹೀಗೆ ತನ್ನದೇ ಬಿಂಬವನ್ನು ನೋಡುತ್ತಾ, ಉಳಿದ ಪ್ರಪಂಚವನ್ನು ಮರೆತು ಕೊನೆಗೆ ಕಡೆಯುಸಿರೆಳೆದ. ತಮ್ಮ ಗುಣಲಕ್ಷಣಗಳ ಬಗ್ಗೆ ಅಂಧಾಭಿಮಾನವಿರುವವರ ಬಗ್ಗೆ ಈ ಹೆಸರು ಬಳಕೆಯಾಗುತ್ತದೆ. ಇಂತಹ ಲಕ್ಷಣದ ಲಕ್ಷಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ!

ಆಹಾರಕ್ಕೂ ಕಾಯಿಲೆಗಳಿಗೂ ಇರುವ ಸಂಬಂಧವನ್ನು ಎಲ್ಲ ಆರೋಗ್ಯ ಪದ್ಧತಿಗಳೂ ವಿವರಿಸುತ್ತವೆ. ಆದರೆ, ಕಾಯಿಲೆಗಳಿಗೆ, ಶರೀರದ ಅಸಹಜ ಸ್ಥಿತಿಗಳಿಗೂ ಆಹಾರ ವಸ್ತುಗಳ ಹೆಸರಿಡುವ ವಿಧಾನ ಹೇಗೋ ಬೆಳೆದುಬಿಟ್ಟಿದೆ. ಇದು ಕೂಡ ಬಹುತೇಕ ಯೂರೋಪ್ ಮೂಲದ್ದೇ ಆದರೂ, ಅಪರೂಪಕ್ಕೆ ಕೆಲವೊಂದು ದೇಸೀ ಮೂಲದ್ದೂ ಇರಬಹುದು. ಕಾಯಿಲೆಗಳ ಹೆಸರುಗಳನ್ನು ಆಹಾರ ವಸ್ತುಗಳಿಂದ ಗುರುತಿಸಿದರೆ ಆಯಾ ಆಹಾರಗಳನ್ನು ಕಂಡಾಗಲೆಲ್ಲ ಈ ಸಂಬಂಧ ನೆನಪಾಗಿ ಬಳಸಲು ಮುಜುಗರ ಎನಿಸಬಹುದು. ಪ್ರಾಯಶಃ ಇಂತಹ ಹೆಸರುಗಳನ್ನು ಮೊದಲು ಸೂಚಿಸಿದವರಿಗೆ ಈ ದ್ವಂದ್ವದ ಅಂದಾಜು ಇರಲಿಕ್ಕಿಲ್ಲ. ಉದಾಹರಣೆಗೆ, ಇಂಪೆಟಿಗೋ ಎನ್ನುವ ಚರ್ಮದ ಕಾಯಿಲೆಯಲ್ಲಿ ವ್ರಣಗಳು ಮಾಯುವಾಗ ಅದರ ಮೇಲ್ಪದರ ಹಳದಿಮಿಶ್ರಿತ ಕಂದು ಬಣ್ಣ ತಳೆಯುತ್ತದೆ. ಇದನ್ನು ಜೇನುತುಪ್ಪದ ಬಣ್ಣಕ್ಕೆ ಹೋಲಿಸಿ “ಹನಿ ಕಲರ್ಡ್ ಕ್ರಸ್ಟ್” ಎನ್ನುತ್ತಾರೆ. ಜೇನುಹುಳುಗಳು ನಮಗಿಂತ ಬುದ್ಧಿಶಾಲಿ ಎನ್ನಲು ಈ ಹೆಸರು ಒಂದು ನಿದರ್ಶನ!

ಒಂದು ಬಗೆಯ ಮೇದಸ್ಸಿನ ಆಮ್ಲ ಶರೀರದಲ್ಲಿ ಜೀರ್ಣವಾಗಲು ಅಗತ್ಯವಾದ ಕಿಣ್ವದ ಅನುಪಸ್ಥಿತಿಯಲ್ಲಿ ರೋಗಿಯ ಮೂತ್ರದ ವಾಸನೆ ಸುಟ್ಟ ಸಕ್ಕರೆಯ ಹರಳಿನ ರೀತಿಯಲ್ಲಿರುತ್ತದೆ. ಇದನ್ನು “ಮೇಪಲ್ ಸಿರಪ್ ಯೂರಿನ್ ಡಿಸೀಜ್” ಎನ್ನುತ್ತಾರೆ. ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳು ಈ ಹೆಸರನ್ನು ಬಳಸುತ್ತಾರಾದರೂ, ಇದರ ಹಿನ್ನೆಲೆ ತಿಳಿದವರು ತೀರಾ ಕಡಿಮೆ ಮಂದಿ. ಸಕ್ಕರೆಯ ಅವಿಷ್ಕಾರಕ್ಕೂ ಮುನ್ನ ಸಿಹಿಯ ಸ್ವಾದಕ್ಕೆ ಬಳಕೆ ಆಗುತ್ತಿದ್ದವು ಜೇನುತುಪ್ಪ ಮತ್ತು ಕೆಲವು ಮರಗಳ ಮೂಲದಿಂದ ಪಡೆದ ರಸಗಳು. ಮೇಪಲ್ ಎಂಬುದು ಇಂತಹ ಒಂದು ಮರ. ಸಿಹಿಯಾದ ರಸವನ್ನು ಸ್ರವಿಸುವ ಮೇಪಲ್ ಮರದ ಮೂಲ ಕೆನಡಾ ದೇಶ. ಕೆನಡಾದ ರಾಷ್ಟ್ರಧ್ವಜದ ಮೇಲಿರುವ ಎಲೆ ಮೇಪಲ್ ಮರದ್ದು. ಯೂರೋಪಿಯನ್ನರು ಅಮೆರಿಕಾ ಖಂಡಕ್ಕೆ ಲಗ್ಗೆಯಿಡುವ ಎಷ್ಟೋ ಶತಮಾನಗಳ ಮುನ್ನವೇ ಅಲ್ಲಿನ ಮೂಲನಿವಾಸಿಗಳು ಮೇಪಲ್ ಮರದ ಸಿಹಿಯಾದ ರಸವನ್ನು ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಮೇಪಲ್ ಸಿರಪ್ ಯೂರಿನ್ ಡಿಸೀಜ್ ರೋಗಿಗಳ ಮೂತ್ರದ ವಾಸನೆ ಈ ಮೇಪಲ್ ಸಿರಪ್ ವಾಸನೆಯನ್ನು ಹೋಲುತ್ತದೆ ಎಂದು ಈ ಹೆಸರು. ಜೀವನದಲ್ಲಿ ಮೇಪಲ್ ಸಿರಪ್ ಅನ್ನು ಎಂದೂ ಕಂಡಿಲ್ಲದ ಏಷ್ಯಾ, ಆಫ್ರಿಕನ್ ಖಂಡಗಳ ವೈದ್ಯಕೀಯ ವಿದ್ಯಾರ್ಥಿಗಳೂ ಇದೇ ಹೆಸರನ್ನು ಬಳಸುವುದು ವಿಪರ್ಯಾಸ. ಆದರೆ ಈ ಕಾಯಿಲೆ ತೀರಾ ಅಪರೂಪವಾದ್ದರಿಂದ ಹೆಚ್ಚು ಮಂದಿ ವೈದ್ಯರು ತಮ್ಮ ಜೀವನದಲ್ಲಿ ಇಂತಹ ಒಬ್ಬ ರೋಗಿಯನ್ನೂ ಕಂಡಿರುವುದಿಲ್ಲ. ಹೀಗಾಗಿ, “ತಿಳಿದಿಲ್ಲದ ಮೇಪಲ್ ಸಿರಪ್ ಗೆ ಕಂಡಿಲ್ಲದ ರೋಗಿಯ ಸಾಕ್ಷಿ” ಎಂದು ಗಾದೆ ಮಾಡಬಹುದು!

ಅಮೀಬಾ ಎಂಬ ಒಂದು ಬಗೆಯ ಏಕಕೋಶ ಪರಾವಲಂಬಿ ಜೀವಿಯಿಂದಾಗುವ ಸೋಂಕಿನಿಂದ ಯಕೃತ್ತಿನಲ್ಲಿ ಕೀವು ಉಂಟಾಗುತ್ತದೆ. ಈ ಕೀವನ್ನು ಯೂರೋಪಿಯನ್ ರೋಗಶಾಸ್ತ್ರಜ್ಞರು “ಆಂಕವಿ ಸಾಸ್ ಪಸ್” ಎಂದು ಕರೆಯುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಎಲ್ಲರೂ ಇದನ್ನು ಅದೇ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೀಷ್ ಮೂಲದವರಲ್ಲದ ವಿದ್ಯಾರ್ಥಿಗಳಿಗೆ ಈ ಹೆಸರಿನ ಹಿನ್ನೆಲೆ ತಿಳಿದಿರುವ ಸಾಧ್ಯತೆ ಇಲ್ಲ. ಈ ಹೆಸರಿನ ಬಳಕೆ ಆರಂಭವಾದದ್ದು ಸುಮಾರು 17ನೆಯ ಶತಮಾನದ ವೇಳೆಗೆ. ಆಗ ಆಂಕವಿ ಸಾಸ್ ಎನ್ನುವುದು ಯೂರೋಪಿನ ಆಹಾರದಲ್ಲಿ ಸಾಕಷ್ಟು ಬಳಕೆಯಲ್ಲಿತ್ತು. ಈಗ ಅದರ ಉಪಯೋಗ ತೀರಾ ಕಡಿಮೆ. ಅಂತರ್ಜಾಲದ ವ್ಯಾಪಕ ಬಳಕೆಗೆ ಮುನ್ನ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಂಕವಿ ಸಾಸ್ ಎಂದರೇನು, ಅದು ಹೇಗಿರುತ್ತದೆ ಎನ್ನುವುದು ತಿಳಿದಿರಲಿಲ್ಲ. ಈಗಲೂ ಅನೇಕರು ಆಂಕವಿ ಎನ್ನುವುದು ಒಂದು ಹಣ್ಣು ಅಥವಾ ತರಕಾರಿ ಇರಬಹುದು ಎಂದೇ ನಂಬಿದ್ದಾರೆ. ಆದರೆ ಆಂಕವಿ ಎನ್ನುವುದು ಸಮುದ್ರಗಳಲ್ಲಿ ಕಾಣುವ ಮೀನಿನ ಒಂದು ಪ್ರಭೇದ. ಇದನ್ನು ಅರೆದು ನುಣ್ಣನೆ ಪೇಸ್ಟ್ ಮಾಡಬಹುದು. ಅದು ಬಿಳಿಯ ಬಣ್ಣದ್ದು. ಆದರೆ, ಆಂಕವಿ ಮೀನನ್ನು ಅರೆದು, ಅದಕ್ಕೆ ಕೆಲವೊಂದು ಮಸಾಲೆಯುಕ್ತ ಪದಾರ್ಥಗಳನ್ನು ಸೇರಿಸಿ ಮಾಡುವ ದ್ರವರೂಪದ ಸಾಸ್ ಕಂದು ಬಣ್ಣದ್ದು. ತಮಾಷೆಯೆಂದರೆ, ಅಮೀಬಾ ಮೂಲದ ಯಕೃತ್ತಿನ ಸೋಂಕಿನ ಬಹುತೇಕ ರೋಗಿಗಳ ಕೀವು ಆಂಕವಿ ಸಾಸ್ ಮಾದರಿಯಲ್ಲಿ ಇರುವುದೇ ಇಲ್ಲ. ಆದರೆ, ಆ ಕೀವು ಹೇಗೇ ಇದ್ದರೂ ಅದನ್ನು “ಆಂಕವಿ ಸಾಸ್ ಪಸ್” ಎಂದೇ ಕರೆಯುತ್ತಾರೆ. ಏಕೆಂದರೆ, ಆಂಕವಿ ಸಾಸ್ ಹೇಗಿರುತ್ತದೆ ಎನ್ನುವುದೇ ಯಾರಿಗೂ ತಿಳಿದಿಲ್ಲವಲ್ಲ! ಇದೊಂದು ರೀತಿ ಹುಟ್ಟುಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ. ಜೋಡಿ-ನಾಮಪದಗಳ ವಿರೋಧಿಗಳಿಗೆ ಈ ವಿಷಯ ಅಚ್ಚುಮೆಚ್ಚು.

ಹೃದಯದ ಮಾಂಸಖಂಡಗಳ ದೌರ್ಬಲ್ಯದಿಂದ ಹೃದಯ ವೈಫಲ್ಯ ಉಂಟಾಗುತ್ತದೆ. ಆಗ ರಕ್ತಸಂಚಾರದಲ್ಲಿ ಏರುಪೇರಾಗಿ ಯಕೃತ್ತಿನಲ್ಲಿ ರಕ್ತ ನಿಂತು ಶೇಖರವಾಗುತ್ತದೆ. ಇದರಿಂದ ಯಕೃತ್ತಿನ ರಕ್ತನಾಳಗಳು ಹಿಗ್ಗಿ, ಜೀವಕೋಶಗಳು ಉಬ್ಬುತ್ತವೆ. ಇದನ್ನು ಹಿಂದಿನ ಕಾಲದಲ್ಲಿ “ನಟ್ಮೆಗ್ ಲಿವರ್” ಎಂದು ಗುರುತಿಸುತ್ತಿದ್ದರು. ಆಧುನಿಕ ವೈದ್ಯ ಬೆಳೆಯುವ ಮುನ್ನ ನಟ್ಮೆಗ್ (ಕನ್ನಡದಲ್ಲಿ ಜಾಯಿಕಾಯಿ ಅಥವಾ ಜಾಕಾಯಿ) ತನ್ನ ಔಷಧ ಗುಣಗಳಿಗೆ ಜಗತ್ತಿನಾದ್ಯಂತ ಪ್ರಸಿದ್ಧವಾಗಿತ್ತು. ಆಗಿನ ವೈದ್ಯರು ಜಾಕಾಯನ್ನು ತೇಯ್ದು, ಅದರ ಗಂಧವನ್ನು ಔಷಧಗಳಲ್ಲಿ ಬಳಸುತ್ತಿದ್ದರು. ಹೀಗೆ ತೇಯ್ದ ಅರ್ಧ ಜಾಕಾಯಿಯ ಭಾಗ ಉಬ್ಬಿದ ಜೀವಕೋಶಗಳ ಯಕೃತ್ತಿನಂತೆ ಕಾಣುತ್ತಿತ್ತು ಎಂಬ ಕಾರಣಕ್ಕೆ ಯೂರೋಪಿನ ವೈದ್ಯರು ಅದನ್ನು ನಟ್ಮೆಗ್ ಲಿವರ್ ಎಂದು ಹೆಸರಿಸಿದರು. ಈಗಿನ ಕಾಲದಲ್ಲಿ ಜಾಕಾಯಿಯ ಬಗ್ಗೆ ಬಲ್ಲವರು ತೀರಾ ಕಡಿಮೆ. ಕೆಲವೊಂದು ಸಾಂಪ್ರದಾಯಿಕ ಹಿಂದೂಗಳಿಗೆ ಮತ್ತು ಪಾಕಶಾಸ್ತ್ರ ನಿಪುಣರಿಗೆ ಜಾಕಾಯಿಯ ಬಗ್ಗೆ ತಿಳಿದಿರಬಹುದು. ಆದರೆ ಜಗತ್ತಿನ ಎಲ್ಲೆಡೆ ಈ ಕಾಯಿಲೆಯನ್ನು ಈಗಲೂ ನಟ್ಮಗ್ ಲಿವರ್ ಎಂದೇ ಕರೆಯುತ್ತಾರೆ. ಉಳಿದ ಹೆಸರುಗಳಿಗೆ ವ್ಯತಿರಿಕ್ತವಾಗಿ ಈ ಬಗ್ಗೆ “ನಿಮಗೆ ತಿಳಿಯದ್ದು ನಮಗೆ ತಿಳಿದಿದೆ” ಎಂದು ನಾವು ಭಾರತೀಯರು ಯೂರೋಪಿಯನ್ನರಿಗೆ, ಅಮೆರಿಕನ್ನರಿಗೆ ಹೇಳಬಹುದು.

ಒಟ್ಟಿನಲ್ಲಿ ಜೋಡಿ-ನಾಮಪದಗಳು ವೈದ್ಯಕೀಯ ಇತಿಹಾಸವನ್ನು ತನ್ನದೇ ಆದ ರೀತಿಯಲ್ಲಿ ಕಟ್ಟಿಕೊಡಬಲ್ಲವು. ಬಹಳಷ್ಟು ಬಾರಿ ಮುಖ್ಯ ಕತೆಗಿಂತ ಉಪಕತೆಗಳೇ ಹೆಚ್ಚು ರೋಚಕ. ಜೋಡಿ-ನಾಮಪದಗಳು ವೈದ್ಯಕೀಯ ಜಗತ್ತಿನ ಇಂತಹ ಕುತೂಹಲಕಾರಿ ಉಪಕತೆಗಳು. ಇವನ್ನು ಬೆದಕಿದಷ್ಟೂ ಬೆರಗು; ಅರಿತಷ್ಟೂ ಸೋಜಿಗ; ಕಲಿತಷ್ಟೂ ಹಸಿವು!

-----------------------

ಏಪ್ರಿಲ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಏಪ್ರಿಲ್ 2024 ರ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/6ab96b3caaca438a79951078399b6ab0ddf34dc5202404.pdf.html?fbclid=IwAR24lr9rq-iSh1ZEKUIznaVpiAv7KR2r0cOZIemeUC6tSY35dn8wKfr5RfU_aem_ARJ3atVJRkr2YSoOG2iKIqbXab00gbsrM4NiJMKG8QlKzJkMwnySDOu0epAjjzxt1QmIre63RaeiTU7vSpTjnHEy

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ