ಮಂಗಳವಾರ, ಏಪ್ರಿಲ್ 9, 2024

 


ಮೂಳೆಗಳ ಗಣಿತ

ಡಾ. ಕಿರಣ್ ವಿ,.ಎಸ್.

ವೈದ್ಯರು

ಸಿಮೆಂಟ್ ಕಾಂಕ್ರೀಟಿನಲ್ಲಿ ಉಕ್ಕು ಇರುವಂತೆ ಶರೀರದಲ್ಲಿ ಮೂಳೆಗಳು ಇರುತ್ತವೆ ಎಂದು ಕೆಲವರು ಬಣ್ಣಿಸುತ್ತಾರೆ. ಅದರ ವಿಲೋಮ ರೂಪಾಂತರ ಸರಿ – ಶರೀರದಲ್ಲಿ ಮೂಳೆಗಳಂತೆ ಕಾಂಕ್ರೀಟಿನಲ್ಲಿ ಉಕ್ಕು! ಮೂಳೆಗಳು ನಮ್ಮ ದೇಹದ ಯಾಂತ್ರಿಕ ಆಧಾರ. ಮೂಳೆಗಳ ಬೆಂಬಲದಿಂದಲೇ ಶರೀರದ ಚಲನೆಗೆ ಕಾರಣವಾದ ಅಂಗಾಂಶಗಳು ರೂಪುಗೊಂಡಿವೆ. ಅಂದರೆ, ಶರೀರದ ಚಲನೆಗೆ ಕಾರಣವಾದ ಯಾವುದೇ ಭಾಗವನ್ನು ಪರಿಗಣಿಸಿದರೂ ಅದರ ಆಂತರ್ಯದಲ್ಲಿ ಮೂಳೆ ಇರುತ್ತದೆ. ಅದರ ಮೇಲೆ ಮಾಂಸಖಂಡಗಳು, ಸ್ನಾಯುರಜ್ಜುಗಳು, ರಕ್ತನಾಳಗಳು, ಕೊಬ್ಬಿನ ಪದರ, ನರಗಳು, ಚರ್ಮದ ಹೊದಿಕೆ ಇರುತ್ತವೆ. ಇವೆಲ್ಲವನ್ನೂ ಸಮಗ್ರವಾಗಿ ಹಿಡಿದಿಡುವ ಮೂಲಾಧಾರ ಮೂಳೆಗಳು.

ಸಣ್ಣವು, ದೊಡ್ಡವು ಎಲ್ಲ ಸೇರಿ ಶರೀರದಲ್ಲಿ 206 ಮೂಳೆಗಳಿವೆ. ಇವುಗಳ ಪೈಕಿ ದೇಹದ ಮಧ್ಯಭಾಗದಲ್ಲಿನ ಮೂಳೆಗಳು ಒಂಟಿಯಾದರೆ, ಅದಕ್ಕೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ತಗುಲಿಕೊಂಡಿರುವ ಮೂಳೆಗಳು ಜಂಟಿ. ಇದರ ಅರ್ಥ, ತಲೆಬುರುಡೆಯ ಕೆಲ ಮೂಳೆಗಳು, ಬೆನ್ನು ಮೂಳೆಯ ಭಾಗಗಳು ಒಂದೊಂದೇ ಇರುತ್ತವೆ. ಆದರೆ ಕೈಗಳ, ಕಾಲುಗಳ, ಸೊಂಟದ, ಪಕ್ಕೆಗಳ ಮೂಳೆಗಳು ಎಡ ಮತ್ತು ಬಲಕ್ಕೆ ತಲಾ ಒಂದೊಂದರಂತೆ ಜಂಟಿ.

ನವಜಾತ ಶಿಶುವಿನ ಶರೀರದಲ್ಲಿ ಸುಮಾರು 270 ಮೂಳೆಗಳಿರುತ್ತವೆ. ಅವುಗಳಲ್ಲಿ ಕೆಲವು ಬೆಸೆದುಕೊಂಡು ಅಂತಿಮವಾಗಿ ಈ ಸಂಖ್ಯೆ 206ಕ್ಕೆ ಇಳಿಯುತ್ತದೆ. ತಲೆಬುರುಡೆಯಲ್ಲಿ 28 (ಇವುಗಳಲ್ಲಿ ಧ್ವನಿಗ್ರಹಣಕ್ಕೆ ಕಾರಣವಾದ, ಕಿವಿಗಳೊಳಗಿನ ತಲಾ ಮೂರು ಸೂಕ್ಷ್ಮ ಮೂಳೆಗಳು ಸೇರಿವೆ), ಬೆನ್ನುಮೂಳೆಯಲ್ಲಿ 26, ಹನ್ನೆರಡು ಜೋಡಿ ಎದೆಯ ಪಕ್ಕೆಲುಬುಗಳು ಮತ್ತು ಅವನ್ನು ಎದೆಭಾಗದಲ್ಲಿ ಬೆಸೆಯುವ ಸ್ಟರ್ನಮ್ ಎಂಬ ಮೂಳೆ, ಗಂಟಲ ಪ್ರದೇಶದ ಹಯಾಯ್ಡ್ ಎನ್ನುವ ಮೂಳೆ ಸೇರಿ 80 ಆಗುತ್ತವೆ. ಪ್ರತಿಯೊಂದು ಕೈಯಲ್ಲಿ 32 ಮೂಳೆಗಳಿವೆ. ಈ 32ರ ಪೈಕಿ ಮಣಿಕಟ್ಟು, ಹಸ್ತ ಮತ್ತು ಬೆರಳುಗಳಲ್ಲೇ 27 ಮೂಳೆಗಳಿವೆ. ಸೊಂಟದಲ್ಲಿ ಎರಡು ಅರೆ-ಕುಂಭಾಕಾರದ ಮೂಳೆಗಳಿವೆ. ಪ್ರತಿಯೊಂದು ಕಾಲಿನಲ್ಲಿಯೂ 30 ಮೂಳೆಗಳಿರುತ್ತವೆ. ಇವುಗಳ ಪೈಕಿ ಕಾಲಿನ ಮಣಿಕಟ್ಟು ಮತ್ತು ಪಾದಗಳಲ್ಲೇ ತಲಾ 26 ಇರುತ್ತವೆ. ಹೀಗೆ, ಎರಡೂ ಬದಿಯ ಜೋಡಿ ಮೂಳೆಗಳ ಒಟ್ಟು ಸಂಖ್ಯೆ 126. ಈ ಎಲ್ಲವುಗಳಲ್ಲಿ ಕೇವಲ ಹಯಾಯ್ಡ್ ಮೂಳೆಗೆ ಬೇರೆ ಯಾವುದೇ ಮೂಳೆಯ ಸಂಪರ್ಕ ಇಲ್ಲ. ಉಳಿದೆಲ್ಲ ಮೂಳೆಗಳೂ ಕನಿಷ್ಠ ಮತ್ತೊಂದು ಮೂಳೆಯ ಸಂಪರ್ಕದಲ್ಲಿರುತ್ತವೆ. ತಲೆಬುರುಡೆಯ 28 ಮೂಳೆಗಳ ಪೈಕಿ ಕೇವಲ ದವಡೆಯ ಮೂಳೆಗೆ ಮಾತ್ರ ಚಲನೆಯಿದೆ. ತಲೆಯ ಇತರ ಮೂಳೆಗಳೆಲ್ಲವೂ ಸ್ಥಿರ. ತೊಡೆಗಳ ಭಾಗದಲ್ಲಿರುವ ಫೀಮರ್ ಎನ್ನುವುದು ಶರೀರದ ಅತ್ಯಂತ ಉದ್ದದ ಮೂಳೆಯಾದರೆ, ಕಿವಿಯೊಳಗಿನ ಸ್ಟೇಪಿಸ್ ಎನ್ನುವ ಸೂಕ್ಷ್ಮ ಮೂಳೆ ಅತ್ಯಂತ ಕಿರಿದಾದದ್ದು. ಎಲ್ಲ 206 ಮೂಳೆಗಳ ಒಟ್ಟು ತೂಕ ಸುಮಾರು 11 ಕಿಲೋಗ್ರಾಂ. ಇದು ಶರೀರದ ಒಟ್ಟು ತೂಕದ ಶೇಕಡಾ 15. ಶರೀರದಲ್ಲಿನ ರಕ್ತದ ಪೈಕಿ ಶೇಕಡಾ 10 ಭಾಗ ಮೂಳೆಗಳ ನಿರ್ವಹಣೆಗೆ ಮೀಸಲಾಗಿದೆ.

ರಚನೆಯ ಆಧಾರದ ಮೇಲೆ ಮೂಳೆಗಳಲ್ಲಿ 5 ವಿಧಗಳಿವೆ. ಉದ್ದನೆಯ ಮೂಳೆಗಳು ತಮ್ಮ ಅಗಲಕ್ಕಿಂತ ಹೆಚ್ಚು ಉದ್ದವಾಗಿದ್ದು, ಕೊಳವೆಯ ಆಕಾರದಲ್ಲಿರುತ್ತವೆ. ಇವು ಹೆಚ್ಚಾಗಿ ಕೈ ಮತ್ತು ಕಾಲುಗಳಲ್ಲಿ ಕಾಣುತ್ತವೆ. ಸಣ್ಣದಾದ ಮೂಳೆಗಳು ಚಿಕ್ಕ ಘನಾಕೃತಿಯಲ್ಲಿರುತ್ತವೆ. ಇವುಗಳ ಹೊರ ಕವಚ ಹೆಚ್ಚು ಗಟ್ಟಿಯಿಲ್ಲ. ಇವು ಕೈಗಳ ಮಣಿಕಟ್ಟು ಮತ್ತು ಪಾದಗಳ ಕೋನದಲ್ಲಿ ಕಾಣುತ್ತವೆ. ಸಪಾಟು ಮೂಳೆಗಳು ತೆಳುವಾಗಿ, ಮಟ್ಟಸವಾಗಿಯೋ ಇಲ್ಲವೇ ಅರೆಚಂದ್ರಾಕೃತಿಯಲ್ಲಿರುತ್ತವೆ. ತಲೆಬುರುಡೆಯ ಬಹುತೇಕ ಮೂಳೆಗಳು, ಎದೆಯ ಮಧ್ಯದ ಮೂಳೆ ಈ ರೀತಿಯದ್ದು. ಸ್ನಾಯುರಜ್ಜುಗಳ ಒಳಗೆ ಮೂಳೆಗಳ ರಚನೆ ಆಗಿರುತ್ತವೆ. ಮಂಡಿ ಚಿಪ್ಪು ಇದಕ್ಕೆ ಉದಾಹರಣೆ. ಇಂತಹ ಯಾವುದೇ ಸ್ಥಿರ ಆಕಾರ ಇಲ್ಲದ ಮೂಳೆಗಳನ್ನು ಇತರೆ ವರ್ಗಕ್ಕೆ ಸೇರಿಸಬಹುದು. ಬೆನ್ನು ಮೂಳೆ, ಸೊಂಟದ ಮೂಳೆ, ತಲೆಬುರುಡೆಯ ಕೆಲ ಮೂಳೆಗಳು ಈ ವರ್ಗದವು.

ಇಡೀ ಮೂಳೆ ಗಟ್ಟಿಯಾಗಿಯೇ ಇರಬೇಕೆಂದೇನಿಲ್ಲ. ಬಹುತೇಕ ಮೂಳೆಗಳ ತುದಿಭಾಗಗಳಲ್ಲಿ ಸ್ಪಾಂಜಿನಲ್ಲಿರುವಂತೆ ರಂಧ್ರಗಳಿರುತ್ತವೆ. ಇವು ಮೂಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವುದಲ್ಲದೆ ರಕ್ತನಾಳಗಳ ಪರಿಚಲನೆಗೆ, ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಮೂಳೆಗಳ ಹೊರಭಾಗ ಗಟ್ಟಿಯಾಗಿದ್ದರೂ, ಅದರ ಒಳಭಾಗದಲ್ಲಿ ಮೆದುವಾದ ಎಲುಬಿನ ನೆಣ ಇರುತ್ತದೆ. ಬಹುತೇಕ ರಕ್ತಕೋಶಗಳ ಉತ್ಪತ್ತಿ ಆಗುವುದು ಈ ನೆಣದಲ್ಲಿಯೇ. ಮೂಳೆಯ ಶೇಕಡಾ 70 ಭಾಗ ಖನಿಜಯುಕ್ತ ಗಟ್ಟಿ ಪದಾರ್ಥವಾದರೆ, ಪ್ರತಿಶತ 30 ಮೆದುವಾದ ಭಾಗ.

ಮೂಳೆಗಳಿಗೆ ಒಟ್ಟು 6 ಕರ್ತವ್ಯಗಳಿವೆ. ಶರೀರದ ಅಂಗಗಳಿಗೆ ಆಸರೆ ನೀಡುವುದು; ಚಲನೆಗೆ ಬೆಂಬಲಿಸುವುದು; ಮಿದುಳು, ಹೃದಯ, ಶ್ವಾಸಕೋಶಗಳಂಥ ಕೆಲವು ಮುಖ್ಯ ಅಂಗಗಳನ್ನು ಸುತ್ತುವರೆದು ಕಾಪಾಡುವುದು; ರಕ್ತಕಣಗಳನ್ನು ಉತ್ಪಾದಿಸುವುದು; ಶರೀರಕ್ಕೆ ಅಗತ್ಯವಾದ ಹಲವು ಖನಿಜಗಳನ್ನು ಶೇಖರಿಸಿ, ಅಗತ್ಯವಾದಾಗ ಬಿಡುಗಡೆಗೊಳಿಸುವುದು; ಮತ್ತು ಚೋದಕವನ್ನು ಉತ್ಪಾದಿಸಿ, ಮತ್ತಷ್ಟು ಚೋದಕಗಳ ಕೆಲಸದಲ್ಲಿ ಸಹಕರಿಸುವುದು.  

ಬಹುತೇಕ ಮೂಳೆಗಳು ಪುರುಷರಲ್ಲಿ ಹೆಚ್ಚು ಬಲವಾಗಿರುತ್ತವೆ. ಭೌತಿಕ ಕೆಲಸಗಳ ಹಿನ್ನೆಲೆ ಮತ್ತು ಅವಕ್ಕೆ ಸಂಬಂಧಿಸಿದ ಹಾರ್ಮೋನುಗಳ ಪ್ರಭಾವದಿಂದ ಇಂತಹ ಕೆಲವು ಬದಲಾವಣೆಗಳಾಗುತ್ತವೆ. ಸೊಂಟದ ಮೂಳೆಗಳು ಸ್ತ್ರೀಯರಲ್ಲಿ ಹೆಚ್ಚು ವಿಶಾಲವಾಗಿರುತ್ತವೆ. ಮಕ್ಕಳನ್ನು ಹಡೆಯುವ ಕಾರಣದಿಂದ ಪ್ರಕೃತಿ ಈ ಬದಲಾವಣೆಯನ್ನು ಅವರ ಶರೀರದಲ್ಲಿ ತಂದಿದೆ. ಮೃತ ದೇಹಗಳ ಮೂಳೆಗಳನ್ನು ಅಧ್ಯಯನ ಮಾಡುವ ವಿಧಿವಿಜ್ಞಾನ ತಜ್ಞರು ಭೌತಿಕ ಪರೀಕ್ಷೆಯಿಂದಲೇ ಅವು ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಸಾಕಷ್ಟು ಕರಾರುವಾಕ್ಕಾಗಿ ನಿರ್ಧರಿಸಬಲ್ಲರು.

ಮೂಳೆಗಳಲ್ಲಿ 3 ವಿಧವಾದ ಜೀವಕೋಶಗಳಿವೆ. ಹೊರನೋಟಕ್ಕೆ ಮರದ ತುಂಡಿನಂತೆ ನಿಸ್ಸತ್ವವಾಗಿ ಕಾಣುವ ಮೂಳೆ ಜೀವಂತ ಅಂಗಾಂಶ. ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಾ, ಮೂಳೆಗಳ ನಿರಂತರ ಕೆಲಸಕ್ಕೆ ಸಹಕರಿಸುತ್ತವೆ. ಹಳೆಯ ಜೀವಕೋಶಗಳಲ್ಲಿನ ಸತ್ವಯುತ ಅಂಶಗಳು ಮತ್ತೆ ಪ್ರಯೋಜನಕ್ಕೆ ಬರುವಂತೆ ಅವುಗಳನ್ನು ನಿರ್ವಹಿಸುವ ಕೋಶಗಳು ಕೆಲಸ ಮಾಡುತ್ತವೆ. ಶರೀರದ ನಿರ್ವಹಣೆಯಲ್ಲಿ ಖನಿಜಗಳ ಅಗತ್ಯಗಳಿಗೆ ತಕ್ಕಂತೆ ಈ ಕೆಲಸ ವೇಗವನ್ನು ಪಡೆದುಕೊಳ್ಳುತ್ತದೆ.

ಮೂಳೆಗಳ ರಾಸಾಯನಿಕ ರಚನೆಯಲ್ಲಿ ಕ್ಯಾಲ್ಸಿಯಂ ಖನಿಜದ ಪಾತ್ರವೇ ದೊಡ್ಡದು. ಶರೀರದ ಇತರ ಭಾಗಗಳಲ್ಲಿ ಕಾರ್ಬನ್ನಿನ ಪಾರುಪತ್ಯವಾದರೆ, ಮೂಳೆಗಳಲ್ಲಿ ಕಾರ್ಬನ್ನಿನ ಪಾತ್ರ ಹೆಚ್ಚಿಲ್ಲ. ಕ್ಯಾಲ್ಸಿಯಂ, ರಂಜಕ (ಫಾಸ್ಫರಸ್), ಆಕ್ಸಿಜನ್ ಮತ್ತು ಹೈಡ್ರೋಜನ್ಗಳಿಂದ ಆದ ಹೈಡ್ರಾಕ್ಸಿ-ಅಪಟೈಟ್ ಎನ್ನುವ ಸಂಯುಕ್ತ ಮೂಳೆಗಳ ಪ್ರಮುಖ ರಾಸಾಯನಿಕ ವಸ್ತು. ಮೆಗ್ನೀಸಿಯಂ, ಸೋಡಿಯಂ, ಮತ್ತು ಪೊಟಾಸಿಯಂ ಎಂಬುವು ಮೂಳೆಗಳಲ್ಲಿ ಕಾಣುವ ಇತರ ಖನಿಜಗಳು. ಆರೋಗ್ಯವಂತ ಮೂಳೆಗಳಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಅನುಪಾತ ಸುಮಾರು 1.3 ರಿಂದ 2 ರ ನಡುವೆ ಇರುತ್ತದೆ. ಒಟ್ಟಾರೆ ಕಾರ್ಬನ್-ರಹಿತ ಸಂಯುಕ್ತಗಳು ಮೂಳೆಗಳ ವ್ಯವಸ್ಥೆಯ ಪ್ರತಿಶತ 70 ಆಕ್ರಮಿಸಿದರೆ, ಉಳಿದ 30ರಲ್ಲಿ ಕೋಶಗಳ ನಿರ್ವಹಣೆಗೆ ಸಹಾಯಕವಾಗುವ ಕಾರ್ಬನ್-ಯುಕ್ತ ಸಂಯುಕ್ತಗಳು ಇರುತ್ತವೆ. ಈ ಕಾರ್ಬನ್-ಯುಕ್ತ ಅಂಗಾಂಶಗಳ ಪೈಕಿ ಮುಖ್ಯವಾದದ್ದು ಕೊಲಾಜೆನ್ ಎಂಬ ನಾರಿನ ವಸ್ತು.

ಮೂಳೆಗಳು ಅತ್ಯಂತ ಬಲಶಾಲಿ. ಆದರೂ ಅವೇಕೆ ಮುರಿಯುತ್ತವೆ? ಇದಕ್ಕೆ ಕಾರಣವಿದೆ. ನೇರ ಒತ್ತಡವನ್ನು ಮೂಳೆಗಳು ಬಹಳ ಚೆನ್ನಾಗಿ ಸಹಿಸಬಲ್ಲವು. ಪ್ರಯೋಗಗಳ ಲೆಕ್ಕಾಚಾರದಲ್ಲಿ ಸುಮಾರು ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ ಅಂದಾಜು 1700 ಕಿಲೋಗ್ರಾಂ ಒತ್ತಡವನ್ನು ಸಹಿಸುವ ಶಕ್ತಿ ದೊಡ್ಡ ಮೂಳೆಗಳಿಗಿದೆ. ಇಷ್ಟೇ ಗಾತ್ರದ ಉಕ್ಕು ಸುಮಾರು 2000 ಕಿಲೋಗ್ರಾಂ ಒತ್ತಡ ತಡೆಯಬಲ್ಲದು. ಅಂದರೆ, ಮೂಳೆಗಳ ಶಕ್ತಿ ಉಕ್ಕಿನ ಜೊತೆ ಹೋಲಿಸುವಷ್ಟಿದೆ. ಆದರೆ, ಹಿಗ್ಗಿಸುವ  ವಿಷಯಕ್ಕೆ ಬಂದಾಗ ಮೂಳೆಯ ಶಕ್ತಿ ಕಡಿಮೆಯಾಗುತ್ತದೆ. ಇದರ ಅರ್ಥ, ಮೂಳೆಯ ಎರಡೂ ತುದಿಗಳನ್ನು ಅತ್ತಿತ್ತಲಾಗಿ ಎಳೆದರೆ ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ ಸುಮಾರು 1100 ಕಿಲೋಗ್ರಾಂ ಒತ್ತಡದಲ್ಲಿ ಅದು ಮುರಿಯುತ್ತದೆ. ಇದು ಉಕ್ಕಿನ ಬಲದಲ್ಲಿ ಅರ್ಧಕ್ಕಿಂತಲೂ ಕಡಿಮೆ. ಇದಕ್ಕೆ ಪ್ರತಿಯಾಗಿ ಮೂಳೆಯೊಂದರ ಆಚೀಚಿನ ಎರಡು ಬಿಂದುಗಳನ್ನು ಗುರುತಿಸಿ, ಅವುಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಬಲಪ್ರಯೋಗ ಮಾಡಿದರೆ (shearing stress) ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ 500 ಕಿಲೋಗ್ರಾಂ ಬಲಪ್ರಯೋಗಕ್ಕೆ ಮುರಿಯುತ್ತದೆ. ಹೀಗಾಗಿ, ಚಲನೆಯಲ್ಲಿರುವ ದೇಹಕ್ಕೆ ವಿರುದ್ಧ ದಿಕ್ಕಿನಿಂದ ಬೀಳುವ ಒತ್ತಡ ಮೂಳೆಗಳ ನಾಜೂಕಿನ ಭಾಗವನ್ನು ಮುರಿಯಬಲ್ಲವು. ಈ ಕಾರಣಕ್ಕೆ ವಾಹನ ಅಪಘಾತಗಳಲ್ಲಿ ಮೂಳೆ ಮುರಿತ ಹೆಚ್ಚು.   

ಮೂಳೆಗಳ ಗಣಿತ ಸ್ಥೂಲವೂ ಹೌದು; ಸೂಕ್ಷ್ಮವೂ ಹೌದು. ಶರೀರದ ಎಂಜಿನೀರಿಂಗ್ ಅಧ್ಯಯನದ ಮೂಲದ್ರವ್ಯ ಮೂಳೆಗಳು. ಭವಿಷ್ಯದಲ್ಲಿ ಕೃತಕ ಅಂಗಗಳ ನಿರ್ಮಾಣ ಪ್ರಕ್ರಿಯೆಗಳಾಗುವಾಗ ಈ ಅಧ್ಯಯನಕ್ಕೆ ಬಹಳ ಮಹತ್ವ ಬರಲಿದೆ.

-----------------------


ನವೆಂಬರ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://bit.ly/47aEDSD

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ