ಮಂಗಳವಾರ, ಏಪ್ರಿಲ್ 9, 2024

 


ಕಿವಿಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ನೆಟ್ಟಗೆ ನಿಂತು ಕಣ್ಣು ಮುಚ್ಚಿಕೊಂಡರೂ ನೇರವಾಗಿಯೇ ನಿಂತಿರುತ್ತೇವೆಯೇ ಹೊರತು ಜೋಲಿ ಹೊಡೆದು ಬೀಳುವುದಿಲ್ಲ. ಇದಕ್ಕೆ ಕಾರಣ ಕಿವಿಗಳು ಎಂದರೆ ಅಚ್ಚರಿಯಾಗುತ್ತದೆಯೇ? ಕಿವಿಗಳು ಧ್ವನಿಗ್ರಹಣಕಾಗಿ ಎನ್ನುವುದು ಜನಪ್ರಿಯ ಅಭಿಮತ. ಆದರೆ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವುದು ಕೂಡ ಕಿವಿಗಳೇ. ಎರಡು ಕಾಲುಗಳ ಮೇಲೆ ಕಂಬದಂತೆ ನಿಂತು ಜೀವನ ಸಾಗಿಸುವ ಮಾನವರಿಗೆ ಕಿವಿಗಳು “ಸ್ತಂಭದ ಆಧಾರ”! ನಮ್ಮ ಮಿದುಳಿಗೆ ಪಂಚೇಂದ್ರಿಯಗಳ ಮೂಲಕ ಒದಗುವ ಮಾಹಿತಿಯಲ್ಲಿ ಕಣ್ಣುಗಳದ್ದು ಶೇಕಡಾ 80; ಕಿವಿಗಳದ್ದು ಶೇಕಡಾ 10; ಉಳಿದ ಮೂರೂ ಸೇರಿ ಶೇಕಡಾ 10. ಅಂದರೆ, ಕಲಿಕೆಯ ವಿಷಯದಲ್ಲಿ ಕಣ್ಣಿನ ನಂತರದ ಸ್ಥಾನ ಕಿವಿಯದ್ದು.  

ಕಿವಿಯಲ್ಲಿ ಮೂರು ಭಾಗಗಳಿವೆ. ತಲೆಯ ಎರಡೂ ಬದಿಯಲ್ಲಿ ಚಾಚಿಕೊಂಡಿರುವುದು ಮಾತ್ರವೇ ಕಿವಿ ಅಲ್ಲ. ಅದು ಹೊರಗಿವಿಯ ಒಂದು ಭಾಗ. ಹೊರಗಿವಿ ಮತ್ತು ಮಧ್ಯಕಿವಿಯನ್ನು ಪ್ರತ್ಯೇಕಗೊಳಿಸುವುದು ಕಿವಿಯ ತಮಟೆ ಎನ್ನುವ ತೆಳುವಾದ ಪರದೆ. ಕಿವಿಯ ಮಧ್ಯಭಾಗ ಧ್ವನಿಗ್ರಹಣದ ಕೆಲಸ ಮಾಡಿದರೆ, ಒಳಗಿವಿ ಮುಖ್ಯವಾಗಿ ಧ್ವನಿಸಂಸ್ಕರಣೆಯ ಜೊತೆಗೆ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಕಿವಿಗಳ ಕಾಯಿಲೆಯಲ್ಲಿ ಕೇವಲ ತಾತ್ಕಾಲಿಕ ಕಿವುಡು ಮಾತ್ರವಲ್ಲ; ಶರೀರದ ಆಯ ತಪ್ಪುವುದು, ಕಣ್ಣುಗುಡ್ಡೆಗಳು ಅಂಚಿಗೆ ತಲುಪಿದಾಗ ವೇಗವಾಗಿ ಕಂಪಿಸುವುದು ಮೊದಲಾದ ಸಮಸ್ಯೆಗಳು ಕಾಣುತ್ತವೆ.

ಹೊರನೋಟಕ್ಕೆ ಕಾಣುವ ಕಿವಿಯ ಭಾಗದಲ್ಲಿ ಮೂಳೆ ಇಲ್ಲ. ಆದರೂ ಅದು ತನ್ನೊಳಗಿನ ಮೃದ್ವಸ್ತಿಯ ಕಾರಣದಿಂದ ಆಕಾರವನ್ನು ಉಳಿಸಿಕೊಂಡಿರುತ್ತದೆ. ಕಿವಿಯ ಕೆಳಭಾಗದಲ್ಲಿ ಇರುವ ಮೃದುಚರ್ಮದೊಳಗೆ ಮೃದ್ವಸ್ತಿ ಇಲ್ಲ. ಇದಕ್ಕೆ ರಂದ್ರ ಕೊರೆದು ಆಭರಣ ಧರಿಸುವ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೊರಗಿವಿಯ ಕಾಲುವೆಯಂತಹ ಆಂತರಿಕ ಭಾಗ ಸುಮಾರು ಒಂದು ಇಂಚು (2.5 ಸೆಂಟಿಮೀಟರ್) ಉದ್ದವಿದೆ. ಆರಂಭದಲ್ಲಿ ಇದರ ಕವಚ ಮೃದ್ವಸ್ತಿಯದ್ದೇ. ಒಳಗೆ ಹೋಗುತ್ತಾ ಕಿವಿಯ ತಮಟೆಯ ಸುತ್ತಮುತ್ತ ಮೂಳೆಯ ಆಸರೆ ಸಿಗುತ್ತದೆ. ಈ ಕಾಲುವೆಯುದ್ದಕ್ಕೂ ಇರುವ ಚರ್ಮದಲ್ಲಿ ತೈಲಯುಕ್ತ ಸ್ರವಿಕೆಯನ್ನು ಉತ್ಪಾದಿಸುವ ಸುಮಾರು 4000 ಗ್ರಂಥಿಗಳಿವೆ. ಈ ಸ್ರವಿಕೆಯೇ ಕಿವಿಯ ಮೇಣ (ಗುಗ್ಗೆ). ಸಾಮಾನ್ಯವಾಗಿ ಈ ಕಾಲುವೆ ತನ್ನನ್ನು ತಾನೇ ಸ್ವಚ್ಛಮಾಡಿಕೊಳ್ಳಬಲ್ಲದು. ದವಡೆಯ ಚಲನೆಯಿಂದ ಕಿವಿಯ ಮೇಣ ತಾನಾಗಿಯೇ ಹೊರಬರುತ್ತದೆ. ಆದರೆ ಕೆಲವೊಮ್ಮೆ ಅದರಲ್ಲಿನ ನೀರಿನ ಅಂಶ ಕಡಿಮೆಯಾಗಿ, ಅಲ್ಲಿಯೇ ಗಟ್ಟಿಯಾಗುತ್ತದೆ. ಕೇವಲ ಅಂತಹ ಸಂದರ್ಭಗಳಲ್ಲಿ ಹತ್ತಿಯನ್ನು ಬಳಸಿ ಅದನ್ನು ಮೆದುವಾಗಿ ಹೊರತೆಗೆದರೆ ಸಾಕು. ಗಟ್ಟಿಯಾದ ಅಥವಾ ಚೂಪಾದ ಕಡ್ಡಿಗಳನ್ನು ಈ ಕಾಲುವೆಯಲ್ಲಿ ತೂರಿಸಬಾರದು. ಇದರಿಂದ ಚರ್ಮಕ್ಕೆ ಹಾನಿಯಾಗಿ ಸೋಂಕು ಆಗಬಹುದು ಅಥವಾ ಕಿವಿಯ ತಮಟೆಗೆ ಘಾಸಿಯಾಗಬಹುದು. ತೀರಾ ಗಟ್ಟಿಯಾದ, ಕಿವಿಗೆ ನೋವುಂಟು ಮಾಡುವ, ಧ್ವನಿಗ್ರಹಣಕ್ಕೆ ಅಡ್ಡಿ ಮಾಡುವ ಮೇಣವನ್ನು ವೈದ್ಯರಿಂದ ತೆಗೆಸಬೇಕು.  

ಕಿವಿಯ ತಮಟೆ ಸುಮಾರು 10 ಮಿಲಿಮೀಟರ್ ವ್ಯಾಸದ, ಕೇವಲ 0.1 ಮಿಲಿಮೀಟರ್ (100 ಮೈಕ್ರೋಮೀಟರ್) ದಪ್ಪದ, ಮೂರು ಪದರಗಳ ಅತ್ಯಂತ ತೆಳುವಾದ ಪರದೆ. ಹೊರಜಗತ್ತಿನಿಂದ ಬರುವ ಧ್ವನಿತರಂಗಗಳಿಗೆ ಅನುಗುಣವಾಗಿ ಕಿವಿಯ ತಮಟೆ ಕಂಪಿಸುತ್ತದೆ. ಈ ಕಂಪನವನ್ನು ಮಿದುಳಿಗೆ ತಲುಪಿಸುವ ಸಂಕೀರ್ಣ ವ್ಯವಸ್ಥೆ ಮಧ್ಯಕಿವಿ ಮತ್ತು ಒಳಕಿವಿಗಳಲ್ಲಿ ಇವೆ. ಕಿವಿಯ ಧ್ವನಿಗ್ರಹಣದ ಅತಿ ಕಡಿಮೆ ಬಿಂದು ಎಂದರೆ ಸುಮಾರು 20 ಹರ್ಟ್ಸ್. ಇದಕ್ಕಿಂತಲೂ ಕಡಿಮೆ ಕಂಪನಕ್ಕೆ ಶ್ರವಣ ವ್ಯವಸ್ಥೆ ಸ್ಪಂದಿಸುವುದಿಲ್ಲ. ಇದರ ಅತಿ ಹೆಚ್ಚಿನ ಬಿಂದು ಎಂದರೆ 20,000 ಹರ್ಟ್ಸ್. ಇದಕ್ಕಿಂತಲೂ ಹೆಚ್ಚಾದರೆ ಕಂಪನವನ್ನು ಧ್ವನಿಗ್ರಹಣ ಅಂಗಗಳು ಮುಂದಕ್ಕೆ ಸಾಗಿಸಲಾರವು. ಅಂದರೆ, ನಮ್ಮ ಶ್ರವಣ ಶಕ್ತಿಯ ವ್ಯಾಪ್ತಿ 20 ರಿಂದ 20,000 ಹರ್ಟ್ಸ್. ಇಷ್ಟು ಸಾಮರ್ಥ್ಯದ ಧ್ವನಿಯನ್ನು ನಿರ್ವಹಿಸಲು ಬೇಕಾದ ಸುಮಾರು 15,000-20,000 ನರರೋಮಗಳು ನಮ್ಮ ಒಳಕಿವಿಯಲ್ಲಿವೆ.

ಹೊರಗಿವಿಯ ಮೂಲಕ ನಾವು ನೋಡಬಹುದಾದ ಕಿವಿಯ ತಮಟೆಯ ಮತ್ತೊಂದು ಬದಿಯಿಂದ ಮಧ್ಯಕಿವಿ ಆರಂಭವಾಗುತ್ತದೆ. ಕಿವಿಯ ತಮಟೆಯ ಮೇಲೆ ಬಿದ್ದ ಶಬ್ದತರಂಗಗಳನ್ನು ಒಳಗಿವಿಗೆ ತಲುಪಿಸಲು ಒಂದರ ಹಿಂದೊಂದರಂತೆ ಸಂಪರ್ಕದಲ್ಲಿರುವ ಮೂರು ಮೂಳೆಗಳು ಮಧ್ಯಕಿವಿಯಲ್ಲಿವೆ. ಇವು ಶರೀರದ 206 ಮೂಳೆಗಳ ಪೈಕಿ ಅತ್ಯಂತ ಸಣ್ಣ ಮೂಳೆಗಳು. ಇದರಲ್ಲಿ ಕೊನೆಯದಾದ ಮೂಳೆ ಇಡೀ ಶರೀರದ ಅತ್ಯಂತ ಸಣ್ಣ ಗಾತ್ರದ್ದು. ಇದರ ವ್ಯಾಸ ಸುಮಾರು 1.5 ಮಿಲಿಮೀಟರ್ ಮತ್ತು ಉದ್ದ 1 ಮಿಲಿಮೀಟರ್; ತೂಕ 6 ಮಿಲಿಗ್ರಾಂ. ಕುದುರೆ ಸವಾರರು ಏರಲು ಮತ್ತು ಸವಾರಿ ಮಾಡಲು ಜೀನಿನ ತುದಿಗಳಿಗೆ ಹಾಕಿರುವ ರಿಕಾಪಿನ ಮಾದರಿಯಲ್ಲಿ ಈ ಮೂಳೆ ಇರುತ್ತದೆ. ಇದರ ಪಾದದ ಭಾಗ ಒಳಕಿವಿಯ ಅಂಡಾಕಾರದ ಕಿಟಕಿಯ ಜೊತೆ ಸೇರಿಕೊಂಡಿದೆ. ಹೊರಜಗತ್ತಿನ ಶ್ರವಣ ಅಲೆಗಳು ಶಹನಾಯಿಯಂತಹ ಹೊರಕಿವಿಯ ನಾಳ ಮತ್ತು ಕಂಪನವನ್ನು ವರ್ಧಿಸಬಲ್ಲ ಮಧ್ಯಕಿವಿಯ ಮೂಳೆಗಳ ಮೂಲಕ ಹಾಯುವಾಗ ಅವುಗಳ ಕ್ಷಮತೆ ಸುಮಾರು 20 ಪಟ್ಟು ಅಧಿಕವಾಗುತ್ತವೆ.

ಮಧ್ಯಕಿವಿಯನ್ನು ಹೊರಜಗತ್ತಿಗೆ ಸಂಪರ್ಕಿಸುವ ನಾಳವೊಂದು ಅಲ್ಲಿಂದ ಹೊರಟು ಮೂಗು-ಗಂಟಲಿನ ಪ್ರದೇಶವನ್ನು ಸೇರುತ್ತದೆ. ಸುಮಾರು 3.5 ಸೆಂಟಿಮೀಟರ್ ಉದ್ದದ ಇದಕ್ಕೆ ಯುಸ್ತಾಷಿಯನ್ ನಾಳ ಎಂದು ಹೆಸರು. ಮಧ್ಯಕಿವಿಯಲ್ಲಿನ ಅಧಿಕ ಸ್ರವಿಕೆ ಈ ನಾಳದ ಮೂಲಕ ಹೊರಹೋಗುತ್ತದೆ. ಮಧ್ಯಕಿವಿಯ ಒತ್ತಡ ಹೊರಪ್ರಪಂಚದ ಒತ್ತಡಕ್ಕೆ ಸಮನಾಗಿ ಇರುವಂತೆ ಈ ನಾಳ ನೊಡಿಕೊಳ್ಳುತ್ತದೆ. ಇದರ ಜೊತೆಗೆ ಮಧ್ಯಕಿವಿಯಲ್ಲಿ ಧ್ವನಿಗೆ ಸಂಬಂಧವಿಲ್ಲದ ವಿಶಿಷ್ಟವಾದ ನರವೊಂದಿದೆ. ಆಹಾರದಲ್ಲಿನ ರುಚಿಯನ್ನು ಗುರುತಿಸುವ ನಾಲಗೆಯ ರುಚಿಮೊಗ್ಗುಗಳ ಸಂಕೇತಗಳನ್ನು ಕಾರ್ಡಾ ಟಿಂಪಾನಿ ಎನ್ನುವ ಈ ನರ ಮಿದುಳಿಗೆ ತಲುಪಿಸುತ್ತದೆ. ಈ ದಾರಿಯಲ್ಲಿ ಇದು ಮಧ್ಯಕಿವಿಯ ಮೂಲಕ ಹಾಯಬೇಕು. ಮಧ್ಯಕಿವಿಯ ಶಸ್ತ್ರಚಿಕಿತ್ಸೆಗಳಲ್ಲಿ ಈ ನರಕ್ಕೆ ಘಾಸಿಯಾದರೆ ರುಚಿಯ ಸಂವೇದನೆ ಮಂಕಾಗಬಹುದು, ಇಲ್ಲವೇ ನಶಿಸಬಹುದು.   

ಒಳಕಿವಿಗೆ ಎರಡು ಕಾರ್ಯಗಳಿವೆ – ಧ್ವನಿತರಂಗಗಳನ್ನು ಮಿದುಳಿಗೆ ತಲುಪಿಸುವುದು ಮತ್ತು ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವುದು. ಧ್ವನಿತರಂಗಗಳ ರವಾನೆಗೆ ಕಾಕ್ಲಿಯ ಮತ್ತು ಸಮತೋಲನಕ್ಕೆ ಅರ್ಧವರ್ತುಲಾಕಾರದ ನಾಳಗಳು ನಿಯೋಜಿತವಾಗಿವೆ. ಗ್ರೀಕ್ ಭಾಷೆಯಲ್ಲಿ ಕಾಕ್ಲಿಯಾ ಎಂದರೆ ಬಸವನಹುಳುವಿನ ಚಿಪ್ಪು. ಈ ಅಂಗವೂ ಅದೇ ರೀತಿಯಲ್ಲಿ ಎರಡೂಮುಕ್ಕಾಲು ಬಾರಿ ಸುರುಳಿ ಸುತ್ತಿರುತ್ತದೆ. ಈ ಸುರಳಿಗಳನ್ನು ನೇರವಾಗಿಸಿದರೆ ಅದರ ಉದ್ದ ಸುಮಾರು ಮೂರೂವರೆ ಸೆಂಟಿಮೀಟರ್. ಕಾಕ್ಲಿಯಾದ ಆಂತರ್ಯದಲ್ಲಿ ವಿಶಿಷ್ಠವಾದ ದ್ರವವಿದೆ. ಕಾಕ್ಲಿಯಾದ ಗೋಡೆಗೆ ಎರಡು ಸಾಲುಗಳಲ್ಲಿ ಅಂಟಿಕೊಂಡಿರುವ ಅತ್ಯಂತ ಸೂಕ್ಷ್ಮ ರೋಮಗಳಂತಹ ನರಗಳ ಗುಚ್ಛಗಳಿವೆ. ಹೊರಗಿನ ಸಾಲಿನಲ್ಲಿ ಸುಮಾರು 12,000 ನರರೋಮಗಳಿದ್ದರೆ ಒಳಗಿನ ಸಾಲಿನಲ್ಲಿ ಸುಮಾರು 4000 ನರರೋಮಗಳಿವೆ. ಮಧ್ಯಕಿವಿಯಿಂದ ಬಂದ ಧ್ವನಿತರಂಗಗಳು ಈ ದ್ರವದ ಮೂಲಕ ಸಾಗುತ್ತವೆ. ನರರೋಮಗಳ ಗುಚ್ಛಗಳು ಆಯಾ ಧ್ವನಿತರಂಗಗಳ ಮಟ್ಟಕ್ಕೆ ಸಂವಾದಿಯಾಗುವಂತೆ ಕಂಪಿಸುತ್ತವೆ. ಈ ಕಂಪನ ವಿದ್ಯುತ್-ರಾಸಾಯನಿಕ ಪ್ರಕ್ರಿಯೆಯ ಮೂಲಕ ಶ್ರವಣ ನರವನ್ನು ಪ್ರಚೋದಿಸುತ್ತವೆ. ಶ್ರವಣ ನರರೋಮಗಳು ಒಮ್ಮೆ ನಾಶವಾದರೆ ಮತ್ತೆ ಹುಟ್ಟಲಾರವು. ಕೆಲವು ಔಷಧಗಳು, ಕಾಯಿಲೆಗಳು, ಜೋರಾದ ಶಬ್ದಗಳು, ರಕ್ತನಾಳಗಳ ಕಾಯಿಲೆ, ವೃದ್ಧಾಪ್ಯ ಮೊದಲಾದ ಕಾರಣಗಳಿಂದ ನರರೋಮಗಳು ನಾಶವಾದರೆ ಸಂವಾದಿ ಧ್ವನಿ ತರಂಗಗಳನ್ನು ಗ್ರಹಿಸಲಾರವು. ವಯಸ್ಸಾದ ನಂತರ ಕೆಳದನಿಯ ಶಬ್ದಗಳು ಕೇಳಿಸದೇ ಹೋಗುವುದಕ್ಕೆ ಇದೂ ಒಂದು ಕಾರಣ.

ಶರೀರದ ಸಮತೋಲನವನ್ನು ಕಾಯ್ದುಕೊಳ್ಳಲು ಪರಸ್ಪರ ಲಂಬಕೋನದಲ್ಲಿರುವ ಮೂರು ಅರೆವರ್ತುಲಾಕಾರ ನಾಳಗಳಿವೆ. ಈ ನಾಳಗಳಲ್ಲಿನ ವಿಶಿಷ್ಠ ದ್ರವ ನಮ್ಮ ದೇಹದ ಚಲನೆಯ ಜೊತೆಗೆ ತಾನೂ ಚಲಿಸುತ್ತದೆ. ಮೂರೂ ನಾಳಗಳಲ್ಲಿನ ದ್ರವದ ಮಟ್ಟ, ಚಲನೆಯ ವೇಗ, ತಿರುಗುವ ದಿಕ್ಕು ಮೊದಲಾದ ಸೂಚಿಗಳನ್ನು ಅನುಸರಿಸಿ ಶರೀರದ ನಿಲುವಿನ ಸಂಕೇತಗಳು ಮಿದುಳನ್ನು ತಲುಪುತ್ತವೆ. ಹೀಗಾಗಿ ಕಣ್ಣು ಮುಚ್ಚಿದ್ದಾಗಲೂ ಶರೀರ ತುಸು ಓರೆಯಾದರೆ ಮಿದುಳಿಗೆ ಕೂಡಲೇ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಒಳಕಿವಿಯ ಸಣ್ಣಶಿಲೆಗಳಂತಹ ಅಂಗ ಕೂಡ ನೆರವಾಗುತ್ತದೆ.

ಹೊರಜಗತ್ತಿನ ಒಂದೇ ಶಬ್ದವನ್ನು ಎರಡೂ ಕಿವಿಗಳೂ ಗ್ರಹಿಸುತ್ತವೆ. ಆದರೆ ಶಬ್ದ ಬರುತ್ತಿರುವ ದಿಕ್ಕಿನ ಕಿವಿ ಅದನ್ನು ಸ್ವಲ್ಪ ಸಮಯ ಬೇಗನೇ ಗ್ರಹಿಸುತ್ತದೆ. ಆನಂತರ ಅದೇ ಶಬ್ದ ಮತ್ತೊಂದು ಕಿವಿಯನ್ನು ಸೇರುತ್ತದೆ. ಈ ಸಮಯದ ಅಂತರವನ್ನು ಗ್ರಹಿಸಿ ಶಬ್ದ ಬರುತ್ತಿರುವ ದಿಕ್ಕು, ಸುಮಾರು ಎಷ್ಟು ದೂರದಿಂದ ಬರುತ್ತಿದೆ ಎನ್ನುವ ಅಂದಾಜು ಮಿದುಳಿಗೆ ಆಗುತ್ತದೆ. ಇದು ಸಾಧ್ಯವಾಗಲು ಎರಡೂ ಕಿವಿಗಳೂ ಕೆಲಸ ಮಾಡಬೇಕು. ಒಂದು ಕಿವಿ ಕಿವುಡಾಗಿದ್ದರೆ, ಅಥವಾ ಒಂದೇ ಕಿವಿಗೆ ಶ್ರವಣಯಂತ್ರ ತೊಟ್ಟಿದ್ದರೆ ದೂರದ ಮತ್ತು ದಿಕ್ಕಿನ ಅಂದಾಜು ಕಷ್ಟವಾಗುತ್ತದೆ.

ಕಿವಿಯ ಗಣಿತ ಅದರ ಕೆಲಸದಷ್ಟೇ ಸಂಕೀರ್ಣ ಮತ್ತು ವಿಸ್ಮಯಕಾರಿ.

--------------------------

ಏಪ್ರಿಲ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಏಪ್ರಿಲ್ 2024 ರ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/6ab96b3caaca438a79951078399b6ab0ddf34dc5202404.pdf.html?fbclid=IwAR24lr9rq-iSh1ZEKUIznaVpiAv7KR2r0cOZIemeUC6tSY35dn8wKfr5RfU_aem_ARJ3atVJRkr2YSoOG2iKIqbXab00gbsrM4NiJMKG8QlKzJkMwnySDOu0epAjjzxt1QmIre63RaeiTU7vSpTjnHEy

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ