ರೋಗಗಳು ಎಷ್ಟೇ ಬರಲಿ; ಮನಸ್ಸು ಗಟ್ಟಿ ಇರಲಿ
ಡಾ. ಕಿರಣ್ ವಿ.ಎಸ್.
ವೈದ್ಯರು
ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ.
ಹೀಗಾಗಿ, ದೇಹದ ಯಾವುದೇ
ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ. ಆ ಸಮಸ್ಯೆಯ ನಿವಾರಣೆಗೆ ಅನೇಕ
ಅಂಗಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಸಹಾಯ ನೀಡುತ್ತವೆ. ಈ ಎಲ್ಲ ಹೊಂದಾಣಿಕೆಯ
ಪ್ರಕ್ರಿಯೆಗಳನ್ನೂ ಮಿದುಳು ನಿರ್ವಹಿಸುತ್ತದೆ. ಉದಾಹರಣೆಗೆ, ಕಾಲಿಗೆ ಪೆಟ್ಟಾದಾಗ ಹೃದಯದ ಬಡಿತ ವೇಗವಾಗಿ,
ಪೆಟ್ಟಾದ ಜಾಗಕ್ಕೆ ಹೆಚ್ಚು ರಕ್ತಸಂಚಾರ ಆಗುವಂತೆ ಮಾಡಿ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ; ರಿಪೇರಿ ಮಾಡಬಲ್ಲ
ರಕ್ತಕೋಶಗಳನ್ನು ತಲುಪಿಸುತ್ತದೆ. ಉಸಿರಾಟದ ಗತಿ ಮತ್ತು ಆಳ ಹೆಚ್ಚಾಗಿ, ಶ್ವಾಸಕೋಶಗಳು ಹೆಚ್ಚಿನ ಆಕ್ಸಿಜನ್ ಒದಗಿಸುತ್ತವೆ. ಸುತ್ತಮುತ್ತಲ ಸ್ನಾಯುಗಳು ತಮ್ಮ
ಕೆಲಸವನ್ನು ಕಡಿಮೆ ಮಾಡಿ ಪೆಟ್ಟಾದ ಜಾಗ ಹೆಚ್ಚು ಅಲುಗಾಡದಂತೆ ನೋಡಿಕೊಳ್ಳುತ್ತವೆ. ಒಟ್ಟಾರೆ,
ಇಡೀ ದೇಹ ಸಮಸ್ಯೆಗೆ ಸ್ಪಂದಿಸುತ್ತದೆ.
1. ಆರೋಗ್ಯ ಸಮಸ್ಯೆಗಳು ಎಷ್ಟೇ ಇರಲಿ; ಅವೆಲ್ಲವನ್ನೂ ನಿಮ್ಮ
ವಿಶ್ವಾಸಕ್ಕೆ ಪಾತ್ರವಾಗಿರುವ ಒಬ್ಬರು ವೈದ್ಯರ ಸುಪರ್ದಿಯಲ್ಲಿ ಇರಿಸಬೇಕು. ಸಣ್ಣ-ಪುಟ್ಟ
ಏರುಪೇರುಗಳನ್ನು ಇಂತಹ ಅನುಭವಿ ವೈದ್ಯರು ಸುಲಭವಾಗಿ ಪರಿಹರಿಸುತ್ತಾರೆ. ಪ್ರತಿಬಾರಿಯೂ ಆಯಾ
ಸಮಸ್ಯೆಯ ತಜ್ಞವೈದ್ಯರನ್ನೇ ಕಾಣಬೇಕು ಎಂಬುದಿಲ್ಲ. ಅನೇಕ ಬಾರಿ ಒಂದು ಸಮಸ್ಯೆಯ ತಜ್ಞವೈದ್ಯರಿಗೆ
ನಿಮಗೆ ಇರುವ ಮತ್ತೊಂದು ಸಮಸ್ಯೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಹೀಗಾಗಿ, ಅವರು ಔಷಧಗಳನ್ನು ಬದಲಾಯಿಸುವ ಮುನ್ನ ಈ ಸಂಗತಿಯನ್ನು ಗಮನಿಸದೆ ಇರಬಹುದು. ಆದರೆ ನೀವು
ಸದಾ ಕಾಣುವ ಕುಟುಂಬ ವೈದ್ಯರಿಗೆ ಇವೆಲ್ಲವೂ ತಿಳಿದಿರುತ್ತವೆ. ಅಗತ್ಯ ಬಂದಾಗ ಅವರೇ ಕ್ಲುಪ್ತ
ಮಾಹಿತಿಯನ್ನು ಬರೆದು ತಜ್ಞ ವೈದ್ಯರ ಸಲಹೆಗೆ ನಿಮ್ಮನ್ನು ಕಳಿಸುತ್ತಾರೆ. ಇದರಿಂದ
“ಏನಾಗಿಹೋಗುವುದೋ” ಎನ್ನುವ ಆತಂಕ ಇರುವುದಿಲ್ಲ.
2. ದೀರ್ಘಕಾಲಿಕ ಕಾಯಿಲೆಗಳನ್ನು
ಒಪ್ಪಿಕೊಳ್ಳಬೇಕು. ಶಾಶ್ವತ ಚಿಕಿತ್ಸೆ ಇಲ್ಲದಿರುವ ಕಾಯಿಲೆಗಳನ್ನು ಯಾವ್ಯಾವುದೋ ಜಾದೂ ಮಾದರಿಯ
ಚಿಕಿತ್ಸೆಯಿಂದ ಗುಣಪಡಿಸುವ ಮಾತುಗಳನ್ನು ನಂಬಬಾರದು.
ಈ ವಿಷಯದಲ್ಲಿ ತಜ್ಞವೈದ್ಯರ ಮಾತೇ ಅಂತಿಮ. ಕಾಯಿಲೆಗಳ ಜೊತೆಗೆ ಹೊಂದಾಣಿಕೆ
ಮಾಡಿಕೊಂಡು ಅವನ್ನು ನಿಯಂತ್ರಿಸಬೇಕೇ ಹೊರತು, ಎಂತಹದೋ ಅಪಾಯಕಾರಿ
ಪ್ರಯೋಗಗಳಿಗೆ ದೇಹವನ್ನು ಒಡ್ಡಬಾರದು.
3. ಪ್ರಾಣಾಯಾಮ, ಧ್ಯಾನ, ಆಧ್ಯಾತ್ಮ ಚಿಂತನೆ, ಸಮಾಜಕ್ಕೆ ಅಭಿಮುಖವಾದ ಹವ್ಯಾಸಗಳು,
ಆರೋಗ್ಯಕರ ಜೀವನಶೈಲಿ, ಕುಟುಂಬ ಸಭ್ಯರೊಡನೆ ಒಳ್ಳೆಯ ಸಂಬಂಧ,
ಸಮಾನಮನಸ್ಕ ಮಿತ್ರಬಳಗ, ಮಾನಸೋಲ್ಲಸವಾದ ಹವ್ಯಾಸಗಳು
ಮೊದಲಾದುವು ಮನಸ್ಸಿನ ಶಾಂತಿಗೆ, ಧೃಢತೆಗೆ ಕಾರಣವಾಗಿ, ಜೀವನದ ಕಠಿಣ ಆರೋಗ್ಯ ಸಮಸ್ಯೆಗಳನ್ನೂ ಸಹ್ಯವಾಗಿಸಬಲ್ಲವು.
ಜೀವನಪಯಣದಲ್ಲಿ ಅನಾರೋಗ್ಯಗಳು ಅಹಿತಕರ
ಸಹ-ಪ್ರಯಾಣಿಕರು! ದೇಹದ ಆರೋಗ್ಯವನ್ನು ಸಾಧ್ಯವಾದಷ್ಟೂ ಸ್ಥಿರವಾಗಿ ಇರಿಸಿಕೊಳ್ಳುವಲ್ಲಿ ನಮ್ಮ
ಮನಸ್ಸಿನ ಧೃಢತೆಯ ಪಾತ್ರ ದೊಡ್ಡದು. ಯಾವುದೇ ಕಾಯಿಲೆಯ ನಿರ್ವಹಣೆಯಲ್ಲೂ ಈ ಅಂಶವನ್ನು
ಮರೆಯಬಾರದು.
---------------------------
ದಿನಾಂಕ
07/05/2024 ರ ಪ್ರಜಾವಾಣಿಯ ಕ್ಷೇಮಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/multiple-health-issues-and-mental-health-2794354
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ