ಮಂಗಳವಾರ, ಏಪ್ರಿಲ್ 9, 2024

 


ರಸ್ತೆಬದಿಯ ಆಹಾರ ಮತ್ತು ಗಂಟಲು ನೋವು

 ಡಾ. ಕಿರಣ್ ವಿ.ಎಸ್.

ವೈದ್ಯರು

 "ಈಚೆಗೆ ಹೊರಗೆ ಹೋಗಿದ್ದಾಗ ರಸ್ತೆಯ ಬದಿಯಲ್ಲಿ ಪಾನಿಪೂರಿ ತಿಂದೆ. ಅಂದಿನಿಂದ ಗಂಟಲಲ್ಲಿ ಏನೋ ಅಹಿತ. ಎರಡು ದಿನಗಳಿಂದ ಧ್ವನಿ ಬದಲಾಗಿದೆ. ನಿನ್ನೆಯಿಂದ ನುಂಗಲೂ ಕಷ್ಟವಾಗುತ್ತಿದೆ" - ಇದು ಹಲವಾರು ಜನರ ಅನುಭವ. ರುಚಿಯ ಹಿಂದೆ ಬಿದ್ದು ಶುಚಿಯನ್ನು ಅಲಕ್ಷ್ಯ ಮಾಡುವ ಅನೇಕರು ಗಂಟಲಿನ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಈ ಸಮಸ್ಯೆ ತೀವ್ರಗೊಂಡು ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವಷ್ಟು ಗಂಭೀರವಾಗುತ್ತದೆ. ಆಹಾರ-ಪಾನೀಯಗಳ ಕಾರಣದಿಂದ ಉಂಟಾಗುವ ಗಂಟಲಿನ ಸಮಸ್ಯೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತ.

 ಮಲಿನ ಆಹಾರ ಪದಾರ್ಥಗಳು ಮುಖ್ಯವಾಗಿ ಎರಡು ಬಗೆಗಳಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಮೊದಲನೆಯದು - ಸೋಂಕುಕಾರಕ ಪರೋಪಜೀವಿಗಳು. ಶುಚಿಯಿಲ್ಲದ ವ್ಯಕ್ತಿಗಳು ತಯಾರಿಸುವ ಆಹಾರ ಪದಾರ್ಥಗಳ ಮೂಲಕ ಸೋಂಕು ಹರಡುವ ಸಾಧ್ಯತೆಗಳು ಅಧಿಕ. ಎರಡನೆಯದು - ಇಂತಹ ಆಹಾರ ಪದಾರ್ಥಗಳಲ್ಲಿ ಇರಬಹುದಾದ ರಾಸಾಯನಿಕ ಮಾಲಿನ್ಯ. ಇವುಗಳ ಪ್ರಭಾವದಿಂದ ಗಂಟಲಿನ ಸೂಕ್ಷ್ಮವಾದ ಲೋಳೆಪದರಕ್ಕೆ ಹಾನಿಯಾಗುತ್ತದೆ. ಆಗ ಗಂಟಲಿನಲ್ಲಿ ಕೆರೆದಂತೆ ಭಾಸವಾಗುತ್ತದೆ. ಬಿಸಿಯಾದ ಅಥವಾ ಖಾರವಾದ ಪದಾರ್ಥಗಳನ್ನು ಸೇವಿಸಿದಾಗ ಉರಿಯ ಅನುಭವವಾಗಬಹುದು. ಇದು ಮುಂದುವರೆದು, ನುಂಗುವಾಗ ಗಂಟಲಿನಲ್ಲಿ ನೋವಾಗುತ್ತದೆ, ಧ್ವನಿ ಬದಲಾಗುತ್ತದೆ. ಇದರ ಜೊತೆಗೆ ಮೂಗು ಸೋರುವಿಕೆ, ಶೀತ, ಕೆಮ್ಮು, ಜ್ವರ, ಚಳಿ, ಮೈ-ಕೈ ನೋವುಗಳು ಕಾಣಬಹುದು.

 ಗಂಟಲಿಗೆ ಹೀಗೆ ಘಾಸಿಯಾದಾಗ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಪ್ರವೇಶ ಗಿಟ್ಟಿಸುತ್ತವೆ. ಇದರಿಂದ ಸೋಂಕು ರಕ್ತಕ್ಕೆ ಸೇರುವ ಸಾಧ್ಯತೆಗಳಿರುತ್ತವೆ. ಶರೀರದ ರಕ್ಷಕ ವ್ಯವಸ್ಥೆ ಚೆನ್ನಾಗಿರುವವರಲ್ಲಿ ಇಂತಹ ಸೋಂಕು ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕ ವ್ಯವಸ್ಥೆ ಕ್ಷೀಣವಾಗಿರುವವರಲ್ಲಿ ಈ ಸೋಂಕು ಸಾಕಷ್ಟು ತೊಂದರೆ ನೀಡುತ್ತದೆ. ಮಧುಮೇಹಿಗಳು, ಸಣ್ಣ ವಯಸ್ಸಿನ ಮಕ್ಕಳು, ಯಾವುದೇ ಕಾರಣಕ್ಕೆ ಸ್ಟೀರಾಯ್ಡ್ ಔಷಧಗಳನ್ನು ಸೇವಿಸುತ್ತಿರುವವರು ಮೊದಲಾದವರಲ್ಲಿ ಗಂಟಲು ಬೇನೆಯನ್ನು ಉಪೇಕ್ಷಿಸುವಂತಿಲ್ಲ. ಅದಕ್ಕೆ ಸಾಧ್ಯವಾದಷ್ಟೂ ಶೀಘ್ರವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಆರಂಭಿಸಬೇಕಾಗುತ್ತದೆ.

 ಬಹುತೇಕ ಗಂಟಲು ಬೇನೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಬೇಕಾಗುವುದಿಲ್ಲ. ಸಾಕಷ್ಟು ಬಿಸಿನೀರನ್ನು ಕುಡಿಯುವುದು, ಉಪ್ಪು ನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಬೆಚ್ಚಗಿನ ದ್ರವಾಹಾರ ಸೇವನೆ, ಮಾತಿನಿಂದ ವಿಶ್ರಾಂತಿ, ಮಾತನಾಡುವಾಗ ದನಿಯನ್ನು ಏರಿಸದಿರುವುದು, ದೀರ್ಘ ಶ್ವಾಸ, ಮೊದಲಾದುವುಗಳು ಸಹಾಯಕ.  ಧೂಮಪಾನಿಗಳ ಗಂಟಲು ಸಾಮಾನ್ಯ ಜನರಿಗಿಂತ ಒಣದಾಗಿರುತ್ತದೆ. ಇಂತಹವರಲ್ಲಿ ಗಂಟಲು ಬೇನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇಂತಹವರು ಧೂಮಪಾನವನ್ನು ತ್ಯಜಿಸಲು ಗಂಟಲು ನೋವು ಒಳ್ಳೆಯ ಅವಕಾಶವನ್ನು ನೀಡುತ್ತದೆ.

 ಗಂಟಲು ಬೇನೆಯ ಯಾವ ಹಂತದಲ್ಲಿ ವೈದ್ಯರನ್ನು ಕಾಣಬೇಕು? ಬಹುತೇಕ ಗಂಟಲು ನೋವುಗಳನ್ನು ನಮ್ಮ ದೇಹದ ರಕ್ಷಕ ವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ ಮಾತ್ರ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಗಂಟಲಿನಲ್ಲಿ ಅಸೌಖ್ಯ ಎನಿಸಿದರೆ ವೈದ್ಯರನ್ನು ಕಾಣುವುದು ಸೂಕ್ತ. ಇದರ ಜೊತೆಗೆ ಏರುತ್ತಿರುವ ಜ್ವರ, ಧ್ವನಿಯಲ್ಲಿನ ಬದಲಾವಣೆ, ದ್ರವ ಪದಾರ್ಥಗಳನ್ನು ನುಂಗುವುದೂ ಕಷ್ಟವೆನಿಸುವುದು, ನಿದ್ರಿಸುವಾಗ ಜೊಲ್ಲು ಸೋರುವುದು, ಉಸಿರಾಟದ ಸಮಸ್ಯೆ, ಬಾಯನ್ನು ಅಗಲವಾಗಿ ತೆರೆಯಲು ಹಿಂಸೆಯಾಗುವುದು, ಉಗುಳಿನಲ್ಲಿ ರಕ್ತ ಕಾಣುವುದು, ಮುಖ ಅಥವಾ ಗಂಟಲಿನ ಊತ - ಇಂತಹ ಸಂದರ್ಭಗಳಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿರಬಹುದು. ಇವು ವೈದ್ಯರು ನಿರ್ಧರಿಸಬೇಕಾದ ಸಂದರ್ಭಗಳು. ಯಾವುದೇ ಕಾರಣಕ್ಕೂ ಸ್ವಯಂ-ವೈದ್ಯ ಮಾಡಿಕೊಂಡು ಪರಿಸ್ಥಿತಿಯನ್ನು ಹದಗೆಡಿಸಬಾರದು.

 ಹೊರಗಿನ ಆಹಾರ-ಪಾನೀಯಗಳನ್ನು ಸೇವಿಸಿ ತಂದುಕೊಳ್ಳುವ ಗಂಟಲು ಬೇನೆಯ ಚಿಕಿತ್ಸೆಗಿಂತಲೂ ಅದನ್ನು ಬಾರದಂತೆ ನಿರ್ವಹಿಸುವುದು ಜಾಣತನ. ಮನೆಯಲ್ಲಿ ಕೈ ತೊಳೆಯದೇ ನಾವು ಏನನ್ನೂ ಸೇವಿಸುವುದಿಲ್ಲ. ವೈದ್ಯರು ಯಾವುದಾದರೂ ಔಷಧವನ್ನು ಸೂಚಿಸಿದಾಗ ಅದರ ಅಡ್ಡ-ಪರಿಣಾಮಗಳ ಬಗ್ಗೆ ಪ್ರಶ್ನಿಸುತ್ತೇವೆ. ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುತ್ತೇವೆ. ಇಷ್ಟೆಲ್ಲ ಜಾಗರೂಕವಾಗಿರುವ ನಾವು ರಸ್ತೆ ಬದಿಯ ಅಶುಚಿಕರ ಆಹಾರವನ್ನು ಮುಲಾಜಿಲ್ಲದೆ ಬಾಯಿಗಿಳಿಸುವುದು ಸೋಜಿಗ. ಹತ್ತಾರು ಜನ ಅದನ್ನು ತಿನ್ನುತ್ತಿದ್ದಾರೆಂಬ ನಂಬಿಕೆಯೋ, ರುಚಿಯ ಚಪಲವೋ, ಜೊತೆಯಲ್ಲಿ ಇರುವವರ ಒತ್ತಾಯವೋ, "ಆಗಾಗ ಇಂತಹದ್ದನ್ನು ತಿನ್ನುತ್ತಿದ್ದರೆ ನಮ್ಮ ಇಮ್ಯುನಿಟಿ ಬೆಳೆಯುತ್ತದೆ" ಎನ್ನುವ ಭ್ರಮೆಯೋ, "ಜಗತ್ತಿನಾದ್ಯಂತ ಸ್ಟ್ರೀಟ್-ಫುಡ್ ತಿನ್ನುವವರಿದ್ದಾರೆ" ಎನ್ನುವ ಸಾಂಘಿಕ ಉಡಾಫೆಯ ಮನೋಭಾವವೋ - ಒಟ್ಟಿನಲ್ಲಿ ಏನೋ ಒಂದು ಕತೆಯನ್ನು ನಮಗೆ ನಾವೇ ಹೇಳಿಕೊಂಡು ಕಾಣದ ಅಪಾಯಕ್ಕೆ ಒಡ್ಡಿಕೊಳ್ಳುತ್ತೇವೆ. ಒಂದು ವಯಸ್ಸಿನ ನಂತರ ಇಂತಹ ದೈಹಿಕ, ಮಾನಸಿಕ ಪ್ರಲೋಭನೆಗಳನ್ನು ಹತ್ತಿಕ್ಕುವುದು ಬಹಳ ಮುಖ್ಯ.

 ಮುಂದುವರೆದ ದೇಶಗಳ ಪ್ರವಾಸಿ ತಾಣಗಳಲ್ಲಿ "ಸ್ಟ್ರೀಟ್-ಫುಡ್" ಎನ್ನುವುದು ದೊಡ್ಡ ಪಾತ್ರ ವಹಿಸುತ್ತದೆ ಎನ್ನುವ ಮಾತು ಸತ್ಯ. ಆದರೆ ಅಲ್ಲಿನ ವ್ಯವಸ್ಥೆ ಅದರ ಬಗ್ಗೆ ಬಹಳ ಕಠಿಣ ನಿರ್ಬಂಧಗಳನ್ನು ಹೇರಿ, ಸುರಕ್ಷತೆಯ ಬಗ್ಗೆ ಗಮನ ನೀಡಿರುತ್ತದೆ. ನಮ್ಮ ದೇಶದಲ್ಲಿ ಅಂತಹ ಕಟ್ಟುನಿಟ್ಟನ್ನು ಅಪೇಕ್ಷಿಸುವುದು ಕಷ್ಟ. ನಮ್ಮಲ್ಲಿ ರಸ್ತೆಬದಿಯ ಆಹಾರ ಮಾರಾಟ ಮಾಡುವ ಬಹುತೇಕರಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ, ಅವರ ಬಳಿ ಸುರಕ್ಷತೆಯ ಖಾತ್ರಿ ಇರುವುದಿಲ್ಲ. ಅಲ್ಲಿ ಆಹಾರ ಸೇವಿಸುತ್ತಿರುವ ಹತ್ತಾರು ಅಪರಿಚಿತ ಮಂದಿಗೆ ಮುಂದಿನ ಕೆಲದಿನಗಳಲ್ಲಿ ಯಾವ ಯಾವ ಆರೋಗ್ಯ ಸಮಸ್ಯೆಗಳು ಬಂದವು ಎಂದು ತಿಳಿಯುವುದು ಅಸಾಧ್ಯ. ಹೊರಗೆ ತಿನ್ನುವ ಅನಿವಾರ್ಯ ಪ್ರಸಂಗಗಳಲ್ಲಿ ಶುಚಿಯಾದ ಹೋಟೆಲಿನಲ್ಲಿ ಬಿಸಿಬಿಸಿಯಾದ, ಚೆನ್ನಾಗಿ ಬೇಯಿಸಿದ, ಹಬೆಯಾಡುತ್ತಿರುವ ಆಹಾರ ಸೇವನೆ ಸೂಕ್ತ. ಆಹಾರದ ಗುಣಮಟ್ಟದಲ್ಲಿ ರಾಜಿಯಾಗುವುದು ಆರೋಗ್ಯಕ್ಕೆ ಹಾನಿಕರ.

------------------------

ದಿನಾಂಕ 31/10/2023 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-tips-for-food-and-throat-infection-2541983    

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ