ಆಂಟಿಬಯಾಟಿಕ್ ಔಷಧಗಳ ತಪ್ಪು-ಒಪ್ಪು
ಡಾ. ಕಿರಣ್ ವಿ.ಎಸ್.
ವೈದ್ಯರು
ಆರೋಗ್ಯ ಕ್ಷೇತ್ರದಲ್ಲಿ ಇಪ್ಪತ್ತನೆಯ ಶತಮಾನದ
ಅತ್ಯಂತ ಮಹತ್ವದ ಸಾಧನೆ ಎಂದರೆ ಆಂಟಿಬಯಾಟಿಕ್ ಔಷಧಗಳ ಆವಿಷ್ಕಾರ. ಎರಡನೆಯ ಮಹಾಯುದ್ಧದ ಸಮಯದಲ್ಲಿ
ಸೋಂಕುಗಳ ಚಿಕಿತ್ಸೆಗೆ ಪ್ರಾಯೋಗಿಕವಾಗಿ ಲಭ್ಯವಾದ ಪೆನಿಸಿಲಿನ್ ಎಂಬ ಆಂಟಿಬಯಾಟಿಕ್, ಔಷಧ ವಿಜ್ಞಾನದ
ಮಹಾಸಂಕ್ರಮಣವೊಂದಕ್ಕೆ ನಾಂದಿ ಹಾಡಿತು. ನೂರಾರು ಬಗೆಯ ಆಂಟಿಬಯಾಟಿಕ್ ಔಷಧಗಳು ಈಗ ಲಭ್ಯವಿವೆ. ಇಂದಿಗೂ
ಪ್ರತಿದಿನವೂ ಸಾವಿರಾರು ಪ್ರಾಣಗಳು ಆಂಟಿಬಯಾಟಿಕ್ ಔಷಧಗಳ ನೆರವಿನಿಂದ ಉಳಿಯುತ್ತಿವೆ.
ಆಂಟಿಬಯಾಟಿಕ್ ಔಷಧಗಳಿಗೆ ವ್ಯತಿರಿಕ್ತ
ಪರಿಣಾಮಗಳೂ ಇವೆ. ಶರೀರದ
ಮೇಲೆ ಆಂಟಿಬಯಾಟಿಕ್ ಔಷಧಗಳ ದುಷ್ಪರಿಣಾಮಗಳೂ ಸಾಕಷ್ಟಿವೆ. ಹೊಟ್ಟೆ ತೊಳಸುವುದು, ವಾಂತಿ, ಭೇದಿ, ತಲೆಸುತ್ತು, ರಕ್ತಕೋಶಗಳ
ವ್ಯತ್ಯಯ, ಸುಸ್ತು, ಹಸಿವಾಗದಿರುವುದು
ಮೊದಲಾದ ಅಡ್ಡ ಪರಿಣಾಮಗಳು ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವ ಬಹಳಷ್ಟು ಜನರಲ್ಲಿ ಕಾಣುತ್ತವೆ. ಕೆಲವು ಆಂಟಿಬಯಾಟಿಕ್ ಔಷಧಗಳು ಕೆಲವು
ನಿರ್ದಿಷ್ಟ ವ್ಯಕ್ತಿಗಳಲ್ಲಿ ತೀವ್ರವಾದ ಅಲರ್ಜಿ ಪ್ರತಿಕ್ರಿಯೆಯ ಮೂಲಕ ಪ್ರಾಣಾಪಾಯ
ಉಂಟುಮಾಡಬಲ್ಲವು. ಎಗ್ಗಿಲ್ಲದೆ ಬಳಸುವ
ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾದಂತಹ ಸೋಂಕುಕಾರಕ ಜೀವಿಗಳು ಪ್ರತಿರೋಧ
ಬೆಳೆಸಿಕೊಳ್ಳಬಲ್ಲವು. ಇದರಿಂದ ಆಂಟಿಬಯಾಟಿಕ್ ಔಷಧದ ಪರಿಣಾಮ ಕುಗ್ಗಿ, ಕೆಲಸಕ್ಕೆ ಬಾರದಂತಾಗುತ್ತದೆ.
ಹೀಗಾಗಿ, ಆಂಟಿಬಯಾಟಿಕ್
ಔಷಧಗಳ ಬಳಕೆಯ ಬಗ್ಗೆ
ಕಟ್ಟೆಚ್ಚರ ಇರಬೇಕು.
ಆಂಟಿಬಯಾಟಿಕ್ ಔಷಧಗಳ ವಿರುದ್ಧ ಬ್ಯಾಕ್ಟೀರಿಯಾಗಳು
ಪ್ರತಿರೋಧ ಬೆಳೆಸಿಕೊಳ್ಳುವುದು ನಮ್ಮ ಕಾಲಘಟ್ಟದ ಅತ್ಯಂತ ಗಂಭೀರ ಸಮಸ್ಯೆಯಾಗುತ್ತಿದೆ. ಜಗತ್ತಿನ
ಯಾವ ದೇಶವೂ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಇಂತಹ ಪ್ರತಿರೋಧದ
ಬಗ್ಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳದಿದ್ದರೆ 2050ರ ವೇಳೆಗೆ ವಾರ್ಷಿಕವಾಗಿ ಸುಮಾರು ಒಂದು
ಕೋಟಿ ಮಂದಿ ಚಿಕಿತ್ಸೆಯ ನಿಯಂತ್ರಣಕ್ಕೆ ಸಿಗದ ಸೋಂಕುಗಳಿಗೆ ಬಲಿಯಾಗುತ್ತಾರೆ ಎಂಬ ಆಘಾತಕಾರಿ ಅಂಶ
ವ್ಯವಸ್ಥಿತ ಅಧ್ಯಯನಗಳ ಮೂಲಕ ಬೆಳಕಿಗೆ ಬಂದಿದೆ.
ಪರಿಣಾಮಕಾರಿ ಕ್ರಮಗಳು ಎಂದರೇನು? ತಾರ್ಕಿಕ ಆಲೋಚನೆಯ ಪ್ರಕಾರ ನಿರುಪಯುಕ್ತ
ಔಷಧದ ಸ್ಥಾನದಲ್ಲಿ ಹೊಸ ಆಂಟಿಬಯಾಟಿಕ್
ಔಷಧದ ಆವಿಷ್ಕಾರ
ಆಗಬೇಕು. ಇದು ಸುಲಭದ ಮಾತಲ್ಲ. ಔಷಧ ಆವಿಷ್ಕರಣ ನಿಯಮಗಳು ವಿಪರೀತ ಕಠಿಣ. ಸುರಕ್ಷತೆಯ ದೃಷ್ಟಿಯಿಂದ
ಕಟ್ಟುನಿಟ್ಟಿನ ವಿಷಯದಲ್ಲಿ ರಾಜಿಯಾಗುವ ಮಾತಿಲ್ಲ. ಹೀಗಾಗಿ ಆಂಟಿಬಯಾಟಿಕ್ ಔಷಧಗಳ ಆವಿಷ್ಕರಣ ಪ್ರಕ್ರಿಯೆ ಬಹಳ ದುಬಾರಿಯೂ, ದೀರ್ಘಕಾಲಿಕವೂ ಆಗುತ್ತದೆ.
ಹೊಸದೊಂದು ಆಂಟಿಬಯಾಟಿಕ್
ಔಷಧವನ್ನು ಪತ್ತೆ
ಮಾಡಲು ಸುಮಾರು 10-15 ವರ್ಷಗಳ ಕಾಲ ಹಿಡಿಯುತ್ತದೆ. ಇದಕ್ಕೆ ಆಗುವ ಖರ್ಚು ಸುಮಾರು ಒಂದು
ಬಿಲಿಯನ್ ಡಾಲರ್ (ಸುಮಾರು 8500 ಕೋಟಿ ರೂಪಾಯಿಗಳು). ಇಷ್ಟು ಖರ್ಚು ಮತ್ತು ಕಾಲವನ್ನು
ವ್ಯಯಿಸುವುದು ಕೆಲವೇ ದೈತ್ಯ ಔಷಧ ಕಂಪನಿಗಳಿಗೆ ಮಾತ್ರ ಸಾಧ್ಯ. ಹೀಗಿರುವಾಗ, ಇನ್ನು ಇಪ್ಪತ್ತೈದು ವರ್ಷಗಳಲ್ಲಿ
ಎಷ್ಟು ಹೊಸ ಆಂಟಿಬಯಾಟಿಕ್
ಔಷಧಗಳು
ಮಾರುಕಟ್ಟೆಯಲ್ಲಿ ಲಭ್ಯವಾಗಲು ಸಾಧ್ಯ?
ದುಬಾರಿ ಬೆಲೆಯನ್ನು ತೆತ್ತು ಅವುಗಳನ್ನು ಖರೀದಿಸಲು ಎಷ್ಟು ಜನರಿಗೆ ಚೈತನ್ಯ
ಇದ್ದೀತು? ಅದನ್ನು ಜನರು ದುರುಪಯೋಗ ಪಡಿಸಿಕೊಂಡು, ಪ್ರತಿರೋಧ ಬೆಳೆಯುವಂತೆ ಮಾಡಿ ಹಾಳುಗೆಡವುದಿಲ್ಲವೆಂಬ ಖಾತ್ರಿ ಏನು? ತತ್ಕಾರಣ, ತಾರ್ಕಿಕವಾದರೂ ಇದು ಸಮರ್ಥವಾದ ಆಯ್ಕೆಯಲ್ಲ.
ಆಂಟಿಬಯಾಟಿಕ್ ಔಷಧಗಳನ್ನು ಜತನದಿಂದ ಬಳಸುವುದು ಮತ್ತೊಂದು
ದಾರಿ. ಇದು ಕೇವಲ ನಿಯಮಗಳಿಂದ ಸಾಧ್ಯವಾಗುವ ಮಾತಲ್ಲ. ಪ್ರಗತಿಶೀಲ ದೇಶಗಳಲ್ಲಿ ಜನಸಾಮಾನ್ಯರಿಗೆ
ಅನ್ವಯವಾಗುವ ಆರೋಗ್ಯಸಂಬಂಧಿ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಬಹಳ ಕಷ್ಟ. ಇಂತಹ
ನಿಯಮಗಳು ಫಲಕಾರಿಯಾಗಲು ಸಮಷ್ಟಿಯ ಶಿಸ್ತು ಅಗತ್ಯವಾಗುತ್ತದೆ. ನಮ್ಮ ದೇಶವನ್ನೇ ಉದಾಹರಣೆಯಾಗಿ
ತೆಗೆದುಕೊಂಡರೆ, ಔಷಧ ಮಾರಾಟ ಮಾಡುವ ಮಳಿಗೆಗಳು ವೈದ್ಯರ ಸಲಹೆಯ ಚೀಟಿ ಇಲ್ಲದೆ ಯಾವುದೇ ಆಂಟಿಬಯಾಟಿಕ್ ಔಷಧವನ್ನಾದರೂ ಮಾರಾಟ ಮಾಡುತ್ತವೆ.
ವೈದ್ಯರು ಯಾವಾಗಲೋ ಯಾವುದೋ ಅಸೌಖ್ಯಕ್ಕೆ ಬರೆದು ಕೊಟ್ಟಿದ್ದ ಔಷಧಗಳನ್ನು ಪುನಃ ಖರೀದಿಸಿ, ಪ್ರತಿಯೊಂದು ಕಾಯಿಲೆಗೂ
ಬಳಸುವ ಜನರಿದ್ದಾರೆ. ಜೊತೆಗೆ, ಆಂಟಿಬಯಾಟಿಕ್
ಔಷಧಗಳ ಬಗ್ಗೆ ತಮ್ಮ
ವ್ಯಾಸಂಗದಲ್ಲಿ ಅಧ್ಯಯನವನ್ನೇ ಮಾಡದ ವೈದ್ಯಪದ್ದತಿಯವರೂ ಮುಕ್ತವಾಗಿ ಅವುಗಳನ್ನು ಸೇವಿಸುವ
ಅಧಿಕೃತ ಸಲಹೆಗಳನ್ನು ನೀಡುತ್ತಾರೆ. ಆಸ್ಪತ್ರೆಗಳು ರೋಗಿಗಳನ್ನು ಶೀಘ್ರವಾಗಿ ಗುಣಪಡಿಸುವ
ಉದ್ದೇಶದಿಂದ ಕಡಿಮೆ ಶಕ್ತಿಯ ಆಂಟಿಬಯಾಟಿಕ್
ಔಷಧಗಳನ್ನು ಹೆಚ್ಚು
ಕಾಲ ನೀಡುವ ಬದಲಿಗೆ, ಹೆಚ್ಚು ಶಕ್ತಿಯ ಆಂಟಿಬಯಾಟಿಕ್
ಔಷಧಗಳನ್ನು ಕಡಿಮೆ ಕಾಲ
ನೀಡುವ ಅಪಾಯಕಾರಿ ಪದ್ದತಿಗಳನ್ನು ಪಾಲಿಸುತ್ತವೆ. ಮುಂದುವರೆದ ದೇಶಗಳಲ್ಲಿ ಜನರ ಆರೋಗ್ಯದ
ಹೊಣೆಯನ್ನು ಸರ್ಕಾರ ವಹಿಸುತ್ತದೆ. ಅಲ್ಲಿನ ಚಿಕಿತ್ಸೆಗಳಿಗೆ ತಜ್ಞ ಸಮಿತಿ ರಚಿಸಿರುವ
ಕಟ್ಟುನಿಟ್ಟಿನ ನಿಯಮಾವಳಿಗಳು ಇರುತ್ತವೆ. ಯಾವುದಾದರೂ ನಿಯಮವನ್ನು ಉಲ್ಲಂಘಿಸಿದರೆ ವಿಚಾರಣೆಗೆ
ಒಳಗಾಗಬೇಕಾಗುತ್ತದೆ. ಆದರೆ ನಮ್ಮಂತಹ ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಜನಸಾಮಾನ್ಯರ ಆರೋಗ್ಯದ
ಬಗ್ಗೆ ಸರ್ಕಾರ ಜವಾಬ್ದಾರಿ ವಹಿಸುವುದಿಲ್ಲ. ಆರೋಗ್ಯದ ಹೊಣೆಗಾರಿಕೆ ಜನರ ಸ್ವಂತದ್ದೇ
ಆಗಿರುತ್ತದೆ. ಇದರಲ್ಲಿ ಖಾಸಗಿ ಆಸ್ಪತ್ರೆಗಳ ಪಾರುಪತ್ಯ ಹೆಚ್ಚು. ಜವಾಬ್ದಾರಿಯಿಂದ ವಿಮುಖವಾದ
ವ್ಯವಸ್ಥೆಗೆ ಯಾವುದೇ ನಿಯಮವನ್ನೂ ಕಟ್ಟುನಿಟ್ಟಾಗಿ ಜಾರಿ ಮಾಡುವ ನೈತಿಕತೆ ಇಲ್ಲವಾಗುತ್ತದೆ. ಆಂಟಿಬಯಾಟಿಕ್’ಗಳನ್ನು
ಬೇಕಾಬಿಟ್ಟಿ ಉಪಯೋಗಿಸುವುದರ ದುಷ್ಪರಿಣಾಮಗಳನ್ನು ಇಡೀ ಪ್ರಪಂಚ ಅನುಭವಿಸಬೇಕಾಗುತ್ತದೆ. ಆಂಟಿಬಯಾಟಿಕ್ ಬಳಕೆಯಲ್ಲಿ ಸಂಯಮ ಮತ್ತು ನಿಯಮಪಾಲನೆ ಸುರಕ್ಷೆಯ ಪ್ರಬಲವಾದ
ಮಾರ್ಗವಾದರೂ,
ಅದನ್ನು ಆಚರಣೆಗೆ ಯುಕ್ತವಾಗುವಂತೆ ಜಾರಿಗೊಳಿಸುವುದು ತೀರಾ ಕಷ್ಟ.
ಆಹಾರ, ನೈರ್ಮಲ್ಯ, ಶಿಸ್ತುಬದ್ಧ ಜೀವನಗಳು ಆರೋಗ್ಯ ರಕ್ಷಣೆಯ ಪ್ರಮುಖ ಭಾಗಗಳು. ಆರೋಗ್ಯವೆನ್ನುವುದು
ಕಾಯಿಲೆ ಬಂದ ನಂತರ ಅದನ್ನು ಗುಣಪಡಿಸುವುದು ಮಾತ್ರವಲ್ಲ; ಕಾಯಿಲೆ
ಬಾರದಂತೆ ಸಂರಕ್ಷಿಸಿಕೊಳ್ಳುವುದು ಕೂಡ. ಲಭ್ಯವಿರುವ ಆಂಟಿಬಯಾಟಿಕ್’ಗಳ
ಸತ್ಪರಿಣಾಮಗಳು ನಮ್ಮ ಮುಂದಿನ ಪೀಳಿಗೆಗೂ ಲಭ್ಯವಾಗುವಂತೆ ಮಾಡುವುದು ನಮ್ಮೆಲ್ಲರ ಸಂಘಟಿತ
ಜವಾಬ್ದಾರಿ.
-------------------
ದಿನಾಂಕ
13/5/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/use-and-abuse-of-antibiotics-antibiotic-resistance-misuse-health-awareness-medicine-overuse-drug-regulation-india-3283573
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ