ಸೋಮವಾರ, ಜೂನ್ 23, 2025


 

ನಾಯಿ ಕಡಿತ – ಮಾಡಬೇಕಾದ್ದು; ಮಾಡಬಾರದ್ದು

ಡಾ. ಕಿರಣ್ ವಿ.ಎಸ್.

ವೈದ್ಯರು

ಮಾನವನ ನಾಗರಿಕತೆಯ ಪಯಣದಲ್ಲಿ ದಕ್ಕಿದ ಮೊದಲ ಸಾಕುಪ್ರಾಣಿ ನಾಯಿ. ಸಾಂಪ್ರದಾಯಿಕ ಸಾಕುಪ್ರಾಣಿಗಳ ಪೈಕಿ ಬೆಕ್ಕು ಮತ್ತು ನಾಯಿ ಮಾತ್ರ ಮಾಂಸಾಹಾರಿಗಳು. ಮಾನವನ ಸಹವರ್ತಿಯಾಗಿ ನಾಯಿಗಳು ಬದುಕುವುದಕ್ಕೆ ಸುಮಾರು 20,000 ವರ್ಷಗಳಿಗೂ ಮೀರಿದ ಇತಿಹಾಸವಿದೆ ಎನ್ನಲಾಗಿದೆ. ಮನುಷ್ಯರಿಗೆ ನಾಯಿ ಕಡಿಯುವುದಕ್ಕೂ ಇಷ್ಟೇ ಕಾಲಾವಧಿಯ ಇತಿಹಾಸವಿದೆ ಎನ್ನಬಹುದು. ನಾಯಿಗಳು ಮನುಷ್ಯರನ್ನು ಕಡಿಯುವ ಪ್ರಕ್ರಿಯೆಯನ್ನು ಸರಳವಾಗಿ “ನಾಯಿ ಕಡಿತ” ಎನ್ನಬಹುದು. ಬದಲಾಗುತ್ತಿರುವ ಪ್ರಸ್ತುತ ಸಾಮಾಜಿಕ ವಾತಾವರಣದಲ್ಲಿ ನಾಯಿ ಕಡಿತದ ಪ್ರಸಂಗಗಳು ಪ್ರತಿವರ್ಷವೂ ಏರುತ್ತಿವೆ. ನಾಯಿ ಕಡಿತದ ಚಿಕಿತ್ಸೆಯ ಬಗ್ಗೆ ಮತ್ತು ಕಡಿತವನ್ನು ತಡೆಗಟ್ಟುವ ಬಗ್ಗೆ ಪ್ರತಿಯೊಬ್ಬರೂ ಅರಿಯುವುದು ಮುಖ್ಯ.

 

ನಾಯಿಗಳು ಪ್ರಪಂಚದ ಬಹುತೇಕ ಎಲ್ಲ ದೇಶಗಳಲ್ಲೂ ಕಂಡುಬರುತ್ತವೆ. ಪ್ರತಿ ವರ್ಷ ಒಂದು ಲಕ್ಷ ಜನರ ಪೈಕಿ 740 ಜನರಿಗೆ ನಾಯಿ ಕಡಿತ ಉಂಟಾಗುತ್ತದೆ. ಇವರಲ್ಲಿ ಮೂರು ಮಂದಿಗೆ ಆಸ್ಪತ್ರೆಯ ಚಿಕಿತ್ಸೆ, ಪ್ರಾಣಾಪಾಯದ ಸಾಧ್ಯತೆ ಇರುತ್ತದೆ. ನಾಯಿ ಕಡಿತಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯವಾಗಿ ಪ್ರಚೋದನೆ ಇಲ್ಲದೆ ನಾಯಿಗಳು ಕಡಿಯುವುದಿಲ್ಲ. ಮೂಲವಾಗಿ ತೋಳಗಳ ಗುಂಪಿಗೆ ಸೇರಿದ ನಾಯಿಗಳು ಸುತ್ತಮುತ್ತಲೂ ತಮ್ಮದೆನ್ನುವ ಒಂದು ಪ್ರದೇಶವನ್ನು ಗುರುತು ಮಾಡಿಕೊಂಡಿರುತ್ತವೆ. ಆ ವ್ಯಾಪ್ತಿಯೊಳಗೆ ಬಂದವರನ್ನು ಕಡಿಯುವ ಸಾಧ್ಯತೆ ಇರುತ್ತದೆ. ನಾಯಿಗಳು ಆಹಾರ ಸೇವಿಸುವಾಗ ಅಡ್ಡಿ ಪಡಿಸುವವರನ್ನು ಕಡಿಯುವುದು ಅಧಿಕ. ತಮ್ಮನ್ನು ದಿಟ್ಟಿಸಿ ನೋಡುವವರ ಬಗ್ಗೆ ನಾಯಿಗಳಿಗೆ ಆತಂಕ ಉಂಟಾಗಿ, ಆತ್ಮರಕ್ಷಣೆಗೆ ಕಡಿಯುವುದು ಉಂಟು. ತಮ್ಮ ಮೇಲೆ ಆಕ್ರಮಣ ಮಾಡುವರೆಂಬ ಗುಮಾನಿ ಬಂದಾಗ ನಾಯಿಗಳು ಕಡಿಯಲು ಸಿದ್ಧವಾಗುತ್ತವೆ. ತಮ್ಮ ಮರಿಗಳ ತಂಟೆಗೆ ಬಂದವರ ಮೇಲೆ ನಾಯಿಗಳು ಆಕ್ರಮಣ ನಡೆಸಿ ಕಡಿಯಬಲ್ಲವು. ಇದರ ಹೊರತಾಗಿ, ರೇಬೀಸ್ ಪೀಡಿತ ನಾಯಿಗಳು, ಮಾನಸಿಕ ಸ್ಥಿಮಿತ ಇಲ್ಲದವು ಯಾವುದೇ ಪ್ರಚೋದನೆ ಇಲ್ಲದಿದ್ದರೂ ಕಡಿಯಬಲ್ಲವು.

 

ನಾಯಿಗಳಲ್ಲಿ ಹಲವಾರು ಪ್ರಭೇದಗಳಿವೆ. ಸಾಮಾನ್ಯವಾಗಿ ದೊಡ್ಡ ಗಾತ್ರದ ನಾಯಿಗಳು ಕಡಿಯುವ ಸಾಧ್ಯತೆಗಳು ಹೆಚ್ಚು. ಆದರೆ ಯಾವುದೇ ಪ್ರಭೇದದ ನಾಯಿಯ ಕಡಿತವನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ಮನೆಯಲ್ಲಿನ ಸಣ್ಣ ಮಕ್ಕಳನ್ನು ಸಾಕು ನಾಯಿಗಳು ಕಡಿದ ಉದಾಹರಣೆಗಳಿವೆ. ಎಳೆಯ ಮಕ್ಕಳಲ್ಲಿ ನಾಯಿ ಕಡಿತ ಪ್ರಾಣಾಂತಿಕ. ಹೀಗಾಗಿ, ಎಷ್ಟೇ ಪಳಗಿದ, ಸ್ನೇಹಪರ ಸಾಕುನಾಯಿಯಾದರೂ ಎಳೆಯ ಮಕ್ಕಳ ಸಮೀಪಕ್ಕೆ ಬಿಡದಿರುವುದು ಕ್ಷೇಮ.

 

ನಾಯಿ ಕಡಿದಾಗ ಮೊಟ್ಟ ಮೊದಲನೆಯದಾಗಿ ಆತಂಕ ಪಡಬಾರದು. ಪ್ರಸ್ತುತ ನಾಯಿ ಕಡಿತಕ್ಕೆ ಬಹಳ ಒಳ್ಳೆಯ ಚಿಕಿತ್ಸೆಗಳಿವೆ. ಹೀಗಾಗಿ, ಧೈರ್ಯ ವಹಿಸಬೇಕು. ಪರಿಚಿತರ ನಾಯಿಯಾದರೆ, ಅದನ್ನು ಹತ್ತು-ಹದಿನೈದು ದಿನಗಳ ಕಾಲ ಸುಪರ್ದಿಯಲ್ಲಿ ಇಡಬೇಕು. ಈ ವೇಳೆಯಲ್ಲಿ ಆ ನಾಯಿ ರೇಬೀಸ್ ಲಕ್ಷಣಗಳನ್ನು ತೋರುವುದೇ ಎಂದು ಗಮನಿಸಬೇಕು. ವೈದ್ಯರಿಗೆ ತೋರಿಸಲು ನಾಯಿ ಕಡಿದ ಜಾಗದ ಫೋಟೋ ಮೊಬೈಲ್ ಫೋನಿನಲ್ಲಿ ತೆಗೆದು ಇಟ್ಟುಕೊಳ್ಳುವುದು ಒಳಿತು. ನಾಯಿ ಕಡಿತದ ಜಾಗವನ್ನು ಆದಷ್ಟು ಬೇಗ ನಲ್ಲಿಯ ಅಥವಾ ಪಾತ್ರೆಯನ್ನು ಬಳಸಿ ಧಾರೆಯಾಗಿ ಹಾಕುವ ನೀರನ್ನು ಬಳಸಿ ಕನಿಷ್ಠ ಐದು ನಿಮಿಷಗಳ ಕಾಲ ಚೆನ್ನಾಗಿ ತೊಳೆಯಬೇಕು. ಹೆಚ್ಚು ಕ್ಷಾರವಿಲ್ಲದ ಸಾಬೂನನ್ನು ಬಳಸಬಹುದು. ನಾಯಿಯ ಜೊಲ್ಲು, ಹಲ್ಲಿನ ತುಣುಕುಗಳನ್ನು ಗಾಯದಿಂದ ನಿವಾರಿಸಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಸಲೈನ್ ದ್ರಾವಣದಿಂದಲೂ ನಾಯಿ ಕಡಿತದ ಗಾಯವನ್ನು ಶುಚಿ ಮಾಡಬಹುದು. ಆನಂತರ ಗಾಯದ ಪ್ರಮಾಣವನ್ನು ಒಳ್ಳೆಯ ಬೆಳಕಿನಲ್ಲಿ ಪರಿಶೀಲಿಸಬೇಕು. ಕೇವಲ ಚರ್ಮದ ಮಟ್ಟದ್ದೇ; ಮಾಂಸಖಂಡ ಮತ್ತು ಮೂಳೆಯ ಆಳಕ್ಕೆ ಇಳಿದಿದೆಯೇ; ಸುತ್ತಮುತ್ತಲ ಅಂಗಾಂಶಗಳ ಹಾನಿಯಾಗಿದೆಯೇ; ಮುಖ, ಬೆನ್ನು, ಎದೆ ಅಥವಾ ಹೊಟ್ಟೆಯ ಮೇಲೆ ಕಡಿತವಾಗಿದ್ದರೆ, ಒಳಗಿನ ಅಂಗಗಳ ಪರಿಸ್ಥಿತಿ ಏನಾಗಿದೆ; ಕಡಿತದ ಜಾಗದಲ್ಲಿ ಊತ ಬಂದಿದೆಯೇ ಮೊದಲಾದ ಲಕ್ಷಣಗಳನ್ನು ಗಮನಿಸಿ, ನಮೂದಿಸಬೇಕು. ಧನುರ್ವಾಯು (ಟೆಟನಸ್) ಲಸಿಕೆಯನ್ನು ತೆಗೆದುಕೊಳ್ಳುವುದು ಸೂಕ್ತ. ಗಾಯ ಆಳವಾಗಿದ್ದರೆ ಆಂಟಿಬಯಾಟಿಕ್ ಔಷಧಗಳ ಅಗತ್ಯ ಬೀಳಬಹುದು. ಗಾಯದ ಮೇಲೆ ಸ್ಪಿರಿಟ್ ಅಥವಾ ಐಯೋಡಿನ್ ದ್ರಾವಣ ಬಳಸಬಹುದು. ನಿರ್ಲಕ್ಷ್ಯ ಮಾಡಿದರೆ ನಾಯಿ ಕಡಿತದ ಕಾರಣದಿಂದ ಹಲವಾರು ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ.

 

ರೇಬೀಸ್ ಪೀಡಿತ ನಾಯಿ ಕಾಯಿಲೆಯನ್ನು ಕಡಿತದ ಮೂಲಕ ಹಬ್ಬಿಸುತ್ತದೆ. ರೋಗ ಲಕ್ಷಣಗಳು ಆರಂಭವಾಗುವ ಮುನ್ನವೇ ತೆಗೆದುಕೊಂಡ ರೇಬೀಸ್ ಲಸಿಕೆ ರೋಗ ಬಾರದಂತೆ ತಡೆಯುತ್ತದೆ. ಮೊದಲ ಬಾರಿ ನಾಯಿ ಕಡಿತಕ್ಕೆ ಒಳಗಾದವರು ಆ ದಿನವನ್ನು ಶೂನ್ಯದಿನ ಎಂದು ಪರಿಗಣಿಸಿ ಮೊದಲನೆಯ ಡೋಸ್ ಲಸಿಕೆ ಚುಚ್ಚಿಸಿಕೊಳ್ಳಬೇಕು. ಆ ನಂತರದ 3ನೆಯ, 7ನೆಯ ಮತ್ತು 14ನೆಯ ದಿನಗಳಂದು ತೋಳಿನ ಮಾಂಸಖಂಡಗಳಿಗೆ ಚುಚ್ಚುಮದ್ದಿನ ಲಸಿಕೆಯನ್ನು ಪಡೆಯಬೇಕು. ಪುನಃ 30ನೆಯ ದಿನದಂದು ಮತ್ತೊಂದು ಬಾರಿ ಲಸಿಕೆ ಚುಚ್ಚಿಸಿಕೊಳ್ಳುವ ಆಯ್ಕೆಯೂ ಇದೆ. ಅದರ ಅಗತ್ಯವನ್ನು ವೈದ್ಯರು ನಿರ್ಧರಿಸುತ್ತಾರೆ. ಈ ರೀತಿ ಲಸಿಕೆ ಪಡೆದವರಿಗೆ ಭವಿಷ್ಯದಲ್ಲಿ ಮತ್ತೊಮ್ಮೆ ನಾಯಿ ಕಡಿದರೆ, ಕೇವಲ ಶೂನ್ಯದಿನ ಮತ್ತು 3ನೆಯ ದಿನಗಳ ಲಸಿಕೆ ಸಾಕಾಗುತ್ತದೆ. ಹಿಂದಿನ ಕಾಲದಲ್ಲಿ ಹೊಕ್ಕಳ ಸುತ್ತ ನೀಡುತ್ತಿದ್ದ ಚುಚ್ಚುಮದ್ದುಗಳ ಅಗತ್ಯ ಇಂದಿನ ದಿನಗಳಲ್ಲಿ ಇಲ್ಲ.

 

ಭಾರತ ದೇಶ ಜಗತ್ತಿನ ರೇಬೀಸ್ ರಾಜಧಾನಿ. 2001 ರಲ್ಲಿ ಬೀದಿನಾಯಿಗಳನ್ನು ಕೊಲ್ಲುವುದರ ವಿರುದ್ಧ ಬಂದ ಕಾನೂನಿನ ಕಾರಣದಿಂದ ಬೀದಿನಾಯಿಗಳ ಉಪದ್ರವ ಭಾರತದಲ್ಲಿ ವಿಪರೀತವಾಗಿದೆ. ವಾರ್ಷಿಕ 20,000 ಅಮಾಯಕ ಜನರು ಭಾರತದಲ್ಲಿ ರೇಬೀಸ್ ಕಾಯಿಲೆಗೆ ಬಲಿಯಾಗುತ್ತಾರೆ. ನಾಯಿ ಕಡಿತವನ್ನು ಸುಲಭವಾಗಿ ಪರಿಗಣಿಸಬಾರದು. ಅದಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯಗತ್ಯ.

--------------------

ದಿನಾಂಕ 24/12/2024 ರ ಪ್ರಜಾವಾಣಿಯ “ಕ್ಷೇಮ-ಕುಶಲ” ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/dog-bite-treatment-first-aid-and-how-to-prevent-infection-3098951

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ