ಜಾಂಗುಲಿಕ - ಕನ್ನಡದ ಮೊದಲ ಮೆಡಿಕಲ್ ಮಿಸ್ಟರಿ ಕಥಾಸರಣಿ - ನೆನಪುಗಳು
This blog is penned by Dr. Kiran. The contents are related to books, chapters, medical and non-medical articles published by Dr. Kiran in English and Kannada languages. The blog is intended for those curious about medical information of general interest.
ಭಾನುವಾರ, ನವೆಂಬರ್ 1, 2026
ಕನ್ನಡದಲ್ಲಿ ವಿಜ್ಞಾನ ಸಂವಹನ - ಇತಿಹಾಸದ ಬೆಳಕಿಂಡಿ
ಡಾ. ಕಿರಣ್ ವಿ ಎಸ್.
ವೈದ್ಯರು
ಜನಸಾಮಾನ್ಯರ ಮಟ್ಟದಲ್ಲಿ ವಿಜ್ಞಾನದ ವಿಷಯಗಳ ಸಂವಹನ
ಇಂದಿಗೂ ಸುಲಭದ ಮಾತಲ್ಲ. ಪದವಿಯವರೆಗೆ ವಿಜ್ಞಾನವನ್ನು ಓದಿಕೊಂಡಿರುವವರನ್ನು “ನಿಮ್ಮ ಅತ್ಯಂತ ನೆಚ್ಚಿನ ವಿಜ್ಞಾನ
ವಿಷಯವನ್ನು 250
ಪದಗಳಲ್ಲಿ, ಸರಳ
ಕನ್ನಡದಲ್ಲಿ,
ಜನರಿಗೆ ಅರಿವಾಗುವಂತೆ ಬರೆಯಿರಿ” ಎಂದರೆ ಬಹುತೇಕರು ತಿಣುಕಾಡುತ್ತಾರೆ. ಅವರಿಗೆ ವಿಷಯ
ತಿಳಿದಿಲ್ಲ ಎಂದಲ್ಲ; ಅದನ್ನು ನಮ್ಮ ಭಾಷೆಯಲ್ಲಿ ಸರಳವಾಗಿ ಸಂವಹನ
ಮಾಡುವ ನಿಟ್ಟಿನಲ್ಲಿ ಅವರಿಗೆ ಇರುವ ಅಡೆತಡೆಗಳು ಹೆಚ್ಚು. ತಾಂತ್ರಿಕ ಪದಗಳಿಗೆ ಕನ್ನಡ ಪರ್ಯಾಯ
ಇರುವುದು ಕಡಿಮೆ. ಹೊಸದಾಗಿ ಟಂಕಿಸುವ ಪದ ಓದುಗರಿಗೆ ಅರ್ಥವಾಗುವ ಸಾಧ್ಯತೆ ಮತ್ತೂ ಕಡಿಮೆ. ಲೇಖನದ
ಮೊದಲ ಕೆಲವು ವಾಕ್ಯಗಳು ಪೆಡಸಾದರೆ ಓದುಗರು ಮುಂದುವರೆಯುವ ಸಂಭವನೀಯತೆ ತೀರಾ ಕಡಿಮೆ. ಹೀಗೆ,
ವಿಜ್ಞಾನ ಸಂವಹನದ ಸವಾಲುಗಳು ಹಲವಾರು.
ಇಂದಿನ ದಿನಗಳಲ್ಲಿ ಅನಕ್ಷರಸ್ಥರ ಸಂಖ್ಯೆ ಗೌಣ; ಬಹುತೇಕ ಎಲ್ಲರಿಗೂ ಓದು,
ಬರಹ ಬರುತ್ತದೆ. ತಂತ್ರಜ್ಞಾನವನ್ನು ಕೂಡ ಸರಾಗವಾಗಿ ಬಳಸಬಲ್ಲರು. ಇಂತಹ
ಪರಿಸ್ಥಿತಿಯಲೂ ವಿಜ್ಞಾನ ಸಂವಹನದಲ್ಲಿ ಸಮಸ್ಯೆಗಳು ಕಾಡುತ್ತವೆ. ಇದನ್ನೇ ನೂರು ವರ್ಷಗಳ ಹಿಂದೆ
ಒಯ್ಯೋಣ. ಆಗ ದೇಶ ಪರಾಧೀನವಾಗಿತ್ತು. ಪ್ರತಿಯೊಬ್ಬರೂ ಅಕ್ಷರ ಕಲಿಯಲು ಒತ್ತಾಸೆ ಇರಲಿಲ್ಲ.
ಹಳ್ಳಿಗೆ ಕೆಲವರು ಮಾತ್ರ ಶಾಲೆಯಲ್ಲಿ ಓದಿದವರು ಇದ್ದರು. ತಂತ್ರಜ್ಞಾನದ ಸೊಲ್ಲು ಕೂಡ ಇರಲಿಲ್ಲ.
ದೇಶದ 99 ಪ್ರತಿಶತ ಜನರಿಗೆ ವಿದ್ಯುತ್ ಸರಬರಾಜು ಇರಲಿಲ್ಲ. ಕೊಳಾಯಿ ನೀರನ್ನು ಕಂಡವರೂ ವಿರಳ.
ಇಂತಹ ದುರ್ಭರ ಕಾಲಘಟ್ಟದಲ್ಲೂ ಕನ್ನಡದಲ್ಲಿ ವಿಜ್ಞಾನಕ್ಕೆ ಮೀಸಲಾದ ಪತ್ರಿಕೆ ಇತ್ತು ಎನ್ನುವುದು
ನಿಜವಾಗಿಯೂ ಅಚ್ಚರಿ ಮೂಡಿಸುವ ಸಂಗತಿ. ಅಂದಿನವರ ಉತ್ಸಾಹಕ್ಕೆ ಹೋಲಿಸಿದರೆ ಇಂದು ನಮ್ಮ ವ್ಯವಸ್ಥೆ
ಆ ಮಟ್ಟದ ಪ್ರಯತ್ನಗಳನ್ನು ಮಾಡುತ್ತಿಲ್ಲ ಎನಿಸುತ್ತದೆ.
ಸ್ವಾತಂತ್ರ್ಯಪೂರ್ವ ಮೈಸೂರು ಸಂಸ್ಥಾನದಲ್ಲಿ
ವಿಜ್ಞಾನ ಸಂವಹನದ ಅಂಕುರಾರ್ಪಣ ಮಾಡಿದ್ದು ಮಹನೀಯರಾದ ಸರ್ ಎಂ. ವಿಶ್ವೇಶ್ವರಯ್ಯನವರು. ಅವರು
ಜಗತ್ತನ್ನು ಸುತ್ತಿದವರು; ವಿಜ್ಞಾನ-ತಂತ್ರಜ್ಞಾನ
ಕ್ಷೇತ್ರಗಳಲ್ಲಿ ಪಾಶ್ಚಾತ್ಯ
ದೇಶಗಳು ಬೆಳವಣಿಗೆ
ಸಾಧಿಸಿದ್ದನ್ನು ಕಂಡವರು; ದಿವಾನರಾಗಿದ್ದ ಕಾಲದಲ್ಲಿ ಮೈಸೂರು
ಪ್ರಾಂತ್ಯದಲ್ಲಿ ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಕೌಶಲ್ಯ
ತರಬೇತಿ ಕೇಂದ್ರಗಳನ್ನು ನಿರ್ಮಿಸಿದ ಸಾಹಸಿಗಳು; ಯುರೋಪಿನ ದೇಶಗಳು
ಸಾಧಿಸಿದ್ದ ವೈಜ್ಞಾನಿಕ ಪ್ರಗತಿ ನಮ್ಮಲ್ಲೂ ಆಗಬೇಕೆನ್ನುವ ಕನಸು ಹೊತ್ತವರು. ಸರ್ ಎಂ.ವಿ. ಅವರ ಸತತ ಪ್ರಯತ್ನ
ಹಾಗೂ ಪ್ರೋತ್ಸಾಹದ ಫಲವಾಗಿ 1917 ರಲ್ಲಿ 'ಕರ್ನಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ' ಆರಂಭವಾಯಿತು. ಇದರ
ವತಿಯಿಂದ ವಿಜ್ಞಾನವನ್ನು ಪ್ರಚುರಪಡಿಸುವ ಪತ್ರಿಕೆಯನ್ನು ತರಬೇಕೆಂದು ದಿವಾನರ ಅಭಿಮತ. ಅದರಿಂದ
ಮೊದಲಾದದ್ದು “ವಿಜ್ಞಾನ” ಎನ್ನುವ ಹೆಸರಿನ ಮಾಸಪತ್ರಿಕೆ. ಈ ಪತ್ರಿಕೆಯ ಪ್ರಕಟಣೆ, ವಿಷಯಗಳ ಪರಿಷ್ಕರಣೆ, ಸಂಪಾದನೆ,
ಮುದ್ರಣ, ಪ್ರಸಾರ, ಪ್ರಚಾರಗಳ
ಜವಾಬ್ದಾರಿ
ತೆಗೆದುಕೊಂಡಿದ್ದವರು ಬೆಳ್ಳಾವೆ ವೆಂಕಟನಾರಣಪ್ಪನವರು ಹಾಗೂ ನಂಗಪುರಂ ವೆಂಕಟೇಶ ಅಯ್ಯಂಗಾರರು.
"ಆಂಗ್ಲಭಾಷಾಭ್ಯಾಸವು
ನಮ್ಮ ದೇಶದಲ್ಲಿ ದಿನೇದಿನೇ ಅಭಿವೃದ್ಧಿಯಾಗುತ್ತಿದ್ದರೂ ವಿಜ್ಞಾನದ ವಿಷಯವಾಗಿ ಮಾತ್ರ ವಿಶೇಷ
ಶ್ರದ್ಧೆಯು ತೋರಿಬಂದಿಲ್ಲ. ಆ ಭಾಗದಲ್ಲಿ ಈಗೀಗ ಕಣ್ಣುಬಿಡುತ್ತಿದ್ದೇವೆ. ಜನಸಾಮಾನ್ಯದಲ್ಲೆಲ್ಲಾ
ಈ ವಿಜ್ಞಾನವನ್ನು ಹರಡಿದ ಹೊರತು ದೇಶವು ಅಭಿವೃದ್ಧಿಸ್ಥಿತಿಗೆ ಬರಲಾರದು" ಎನ್ನುವ ಮಾತುಗಳು
ಪ್ರಕಟವಾದದ್ದು 1918 ನೆ ಇಸವಿಯ ಪೈಂಗಳ ಸಂವತ್ಸರದ
ಚೈತ್ರಮಾಸದಲ್ಲಿ ಆರಂಭವಾದ “ವಿಜ್ಞಾನ” ಮಾಸಪತ್ರಿಕೆಯ ಮೊದಲ
ಸಂಚಿಕೆಯಲ್ಲಿ. ಕೇವಲ ವಿಜ್ಞಾನದ ವಿಷಯಗಳ ಸಂವಹನಕ್ಕಾಗಿ ಕನ್ನಡ
ಭಾಷೆಯಲ್ಲಿ ಪ್ರಕಟವಾದ ಮೊದಲ ಪತ್ರಿಕೆ ಎನ್ನುವ ಶ್ರೇಯ ಇದರದ್ದು.

(ಚಿತ್ರ ಕೃಪೆ: ಇ-ಜ್ಞಾನ)

(ಚಿತ್ರ ಕೃಪೆ: ಇ-ಜ್ಞಾನ)
ಸರ್ ಎಂ.ವಿ ಅವರು ದಿವಾನರಾಗಿ ಇದ್ದಷ್ಟು
ಕಾಲ “ವಿಜ್ಞಾನ” ಮಾಸಪತ್ರಿಕೆಯ ಪ್ರಕಟಣೆಗೆ ಯಾವ ಅಡ್ಡಿ, ಆತಂಕವೂ ಉಂಟಾಗಲಿಲ್ಲ. ಆದರೆ,
ಅವರು ದಿವಾನಗಿರಿಯಿಂದ ನಿವೃತ್ತಿ ಪಡೆದ ನಂತರ ಪತ್ರಿಕೆಯ ಪರಿಸ್ಥಿತಿ
ಕಠಿಣವಾಯಿತು. ಒಟ್ಟಾರೆ, “ವಿಜ್ಞಾನ” ಮಾಸಪತ್ರಿಕೆ ಚಿರಾಯುವಾಗಲಿಲ್ಲ;
ಅದು ಕ್ರಮಿಸಿದ್ದು ಕೇವಲ ಎರಡು ವರ್ಷಗಳನ್ನು ಮಾತ್ರ. ಆದರೆ ಈ ಎರಡು ವರ್ಷಗಳಲ್ಲಿ
ಪ್ರತಿ ತಿಂಗಳೂ ತಪ್ಪದೇ ಪ್ರಕಟವಾಗುತ್ತಾ, 24 ಸಂಚಿಕೆಗಳು ಬಂದವು.
ಪ್ರತಿಯೊಂದು ಸಂಚಿಕೆಯಲ್ಲೂ ಎರಡು ಅಥವಾ ಮೂರು ದೊಡ್ಡ ಗಾತ್ರದ ಪ್ರಧಾನ ಲೇಖನಗಳು ಹಾಗು ಹಲವಾರು
ಸಣ್ಣ ಲೇಖನಗಳು ಇರುತ್ತಿದ್ದವು. ಹೀಗೆ 24 ಸಂಚಿಕೆಗಳಿಂದ 60 ಪ್ರಧಾನ ಲೇಖನಗಳು ಮತ್ತು 180ಕ್ಕೂ
ಮಿಕ್ಕು ಸಣ್ಣ ಲೇಖನಗಳು ಪ್ರಕಟವಾದವು. ಬಹುತೇಕ ಲೇಖನಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ
ಚಿತ್ರಗಳು ಇರುತ್ತಿದ್ದವು. ಸಮಾಜದಲ್ಲಿನ ವಿದ್ಯಾಭ್ಯಾಸದ ಮಟ್ಟ ಬಹಳ ಕ್ಷೀಣವಾಗಿದ್ದ ಅಂದಿನ
ಕಾಲದಲ್ಲೂ, ಓದು ಬಲ್ಲ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗಬಲ್ಲ ಭಾಷೆ
ಮತ್ತು ಶೈಲಿಯನ್ನು ಈ ಪತ್ರಿಕೆ ತನ್ನದಾಗಿಸಿಕೊಂಡದ್ದು ಹೆಗ್ಗಳಿಕೆಯ ಮಾತು. ಪ್ರತಿಯೊಂದು
ಲೇಖನವನ್ನೂ ಬರೆಯುತ್ತಿದ್ದವರು ವಿಜ್ಞಾನವನ್ನು ಅಧ್ಯಯನ ಮಾಡಿ ನುರಿತವರು. ಇವರಲ್ಲಿ ಅನೇಕರು
ಶಾಲಾ ಕಾಲೇಜು ಮಟ್ಟದಲ್ಲಿ ವಿಜ್ಞಾನವನ್ನು ಬೋಧನೆ ಮಾಡುತ್ತಿದ್ದರು. ಮತ್ತೂ ಹಲವರು ವಿಜ್ಞಾನ
ಸಂಬಂಧಿ ಉದ್ಯಮಗಳಲ್ಲಿ ಗುರುತಿಸಿಕೊಂಡವರು. ಲೇಖನಕ್ಕೆ ಬೇಕಾದ ಮಾಹಿತಿಯನ್ನು ಸೂಕ್ತ ಆಕರಗಳಿಂದ
ಒಗ್ಗೂಡಿಸಿ, ಅದನ್ನು ಸರಳ ಕನ್ನಡಕ್ಕೆ ತರುವಲ್ಲಿ ಲೇಖಕರು ಮತ್ತು
ಸಂಪಾದಕರು ವಹಿಸಿದ್ದ ಶ್ರದ್ಧೆ ಅನನ್ಯ.
ವ್ಯವಸ್ಥೆಯ ಪ್ರೋತ್ಸಾಹ
ಕುಂಠಿತವಾಗುತ್ತಿದ್ದದ್ದೂ ಸೇರಿ ಹಲವಾರು ಸಮಸ್ಯೆಗಳ ನಡುವೆಯೂ “ವಿಜ್ಞಾನ” ಮಾಸಪತ್ರಿಕೆ
ವೈವಿಧ್ಯಕ್ಕೆ ಮತ್ತು ನಾವೀನ್ಯಕ್ಕೆ ಬೆಲೆ ಕೊಡುತ್ತಿತ್ತು. ಜಗತ್ತಿನಲ್ಲಿ ವಿಜ್ಞಾನ ವಿಷಯವಾಗಿ
ನಡೆಯುತ್ತಿದ್ದ ಬೆಳವಣಿಗೆಗಳು; ಪ್ರಸಿದ್ಧ
ವಿಜ್ಞಾನಿಗಳ
ಕುರಿತಾದ ಪರಿಚಯ; ಜಿಜ್ಞಾಸುಗಳ ಮನಸ್ಸಿನಲ್ಲಿ ಮೂಡುತ್ತಿದ್ದ ಹಲವಾರು ಆಸಕ್ತಿಕರ
ಪ್ರಶ್ನೆಗಳ ವಿಶ್ಲೇಷಣೆ ಹಾಗೂ ಉತ್ತರಗಳು; ಕೃಷಿಯ ಬಗ್ಗೆ
ಬೆಳಕು ಚೆಲ್ಲುವ ಮಾಹಿತಿ, ಹೊಸದಾಗಿ
ಮೂಡುತ್ತಿದ್ದ ಆರೋಗ್ಯ ಕ್ಷೇತ್ರಗಳ ಪರಿಚಯ - ಹೀಗೆ ದೊಡ್ಡ ವ್ಯಾಪ್ತಿಯಲ್ಲಿ ಹಲವಾರು
ಲೇಖನಗಳು “ವಿಜ್ಞಾನ” ಪತ್ರಿಕೆಯಲ್ಲಿ ಪ್ರಕಟವಾದವು. 'ವಿವಿಧ ವಿಜ್ಞಾನ
ವಿಷಯ ಸಂಗ್ರಹ' ಎನ್ನುವ ಶೀರ್ಷಿಕೆ ಹೊತ್ತು, ಅಂದಿನ ಕಾಲದಲ್ಲಿ ನಡೆಯುತ್ತಿದ್ದ
ವಿಸ್ಮಯಕಾರಿ ಸಂಶೋಧನೆಗಳ ಸಾರಾಂಶ ಈ ಪತ್ರಿಕೆಯಲ್ಲಿ ಬೆಳಕು ಕಾಣುತ್ತಿತ್ತು. ಜನಸಾಮಾನ್ಯರಿಗೆ ಹೊಸತು
ಅಥವಾ ವಿಚಿತ್ರ ಎನ್ನುವ ಹಲವಾರು ವಿಷಯಗಳನ್ನು ಅಧಿಕೃತ ಮೂಲಗಳಿಂದ ಪಡೆದು, ಅದನ್ನು ಕನ್ನಡ
ಭಾಷೆಯಲ್ಲಿ ಸುಲಭ ಗ್ರಾಹ್ಯವಾಗಿಸುವ ಶೈಲಿಯಲ್ಲಿ ಪ್ರಸ್ತುತಪಡಿಸುವ ದೊಡ್ಡ ಸವಾಲನ್ನು “ವಿಜ್ಞಾನ”
ಮಾಸಪತ್ರಿಕೆ ಯಶಸ್ವಿಯಾಗಿ ಮಾಡಿತು. ತಾನು ಖುದ್ದು ಅಲ್ಪಾಯುವಾದರೂ, ಕನ್ನಡದಲ್ಲಿ
ಮುಂದಿನ ದಿನಗಳ ವಿಜ್ಞಾನ ಸಾಹಿತ್ಯ ಹೇಗಿರಬೇಕು ಎಂಬುದಕ್ಕೆ ಭದ್ರವಾದ ಬುನಾದಿ ಹಾಕಿಕೊಟ್ಟಿತು. ದೇಶಿ
ಭಾಷೆಗಳಲ್ಲಿ ಪ್ರಾಯಶಃ ಬಂಗಾಳಿ ಮತ್ತು ತಮಿಳು ಹೊರತುಪಡಿಸಿದರೆ ಇಂತಹ ಪ್ರಯೋಗ ಆದದ್ದು
ಕನ್ನಡದಲ್ಲೇ.
ಪತ್ರಿಕೆಯ ಸಂಪಾದಕರು ಮೊದಲಿನಿಂದ
ಕೊನೆಯವರೆಗೆ ಸರಳವಾದರೂ ಆಕರ್ಷಕ ಶೈಲಿಯನ್ನು ಅನುಸರಿಸುತ್ತಿದ್ದರು; ಸಂವಹನದ ಹೊಸ
ವಿಧಾನಗಳನ್ನು ಪ್ರಯೋಗಿಸುತ್ತಿದ್ದರು. ಮೊದಲ ಬಾರಿಗೆ ವಿಜ್ಞಾನವನ್ನು ಕತೆಯ ರೂಪದಲ್ಲಿ ಹೇಳುವ
ತಂತ್ರವನ್ನು “ವಿಜ್ಞಾನ” ಮಾಸಪತ್ರಿಕೆ ಬಳಸಿತ್ತು. ಇದರ ಜೊತೆಗೆ ಸಾರ್ವಜನಿಕರಿಗಾಗಿ ಜನಪ್ರಿಯ
ವಿಜ್ಞಾನದ ಉಪನ್ಯಾಸಗಳನ್ನೂ ಸಮಿತಿಯ ವತಿಯಿಂದ ಆಯೋಜಿಸಲಾಗುತ್ತಿತ್ತು. ಅಂದಿನ ಕಾಲದ ದೃಷ್ಟಿಯಿಂದ
ನೋಡಿದರೆ, “ವಿಜ್ಞಾನ” ಮಾಸಪತ್ರಿಕೆ ಇಂದಿನ ಹಲವಾರು ಉನ್ನತ ಮಟ್ಟದ
ವೈಜ್ಞಾನಿಕ ಪತ್ರಿಕೆಗಳಿಗೆ ಸಡ್ಡು ಹೊಡೆಯುವಂತಹ ಗುಣಮಟ್ಟ ಹೊಂದಿತ್ತು. ಹುಡುಕಿದರೂ ಒಂದು
ಮುದ್ರಣದೋಷವೂ ಕಾಣದ, ಬಹಳ ಅಚ್ಚುಕಟ್ಟಾದ ಪ್ರಕಟಣೆಯ ಮೌಲ್ಯದ, ಉತ್ತಮ ಕಾಗದದಲ್ಲಿ ಮುದ್ರಣವಾಗುತ್ತಿದ್ದ, ಸಮಯಕ್ಕೆ ಸರಿಯಾಗಿ
ಓದುಗರನ್ನು ತಲುಪುತ್ತಿದ್ದ “ವಿಜ್ಞಾನ” ಮಾಸಪತ್ರಿಕೆಯ ಸ್ಥಾನ ಇತಿಹಾಸದಲ್ಲಿ ಚಿರಂತನವಾಗಿ
ಉಳಿದಿದೆ.
“ವಿಜ್ಞಾನ”
ಪತ್ರಿಕೆಯ
ಪ್ರಕಟಣೆ ಸ್ಥಗಿತವಾದ ಮೇಲೂ ಬೆಳ್ಳಾವೆ ವೆಂಕಟನಾರಣಪ್ಪನವರು ವಿಜ್ಞಾನ ಸಂವಹನವನ್ನು
ಮುಂದುವರೆಸಿದರು. ಬೆಳ್ಳಾವೆಯವರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿದ್ದ ಯುವರಾಜ
ಶ್ರೀ ಕಂಠೀರವ ನರಸಿಂಹರಾಜ ಒಡೆಯರ ಬೆಂಬಲದಿಂದ 'ಶ್ರೀ ಕಂಠೀರವ ನರಸಿಂಹರಾಜ ಪರಿಪೋಷಿತ ಕರ್ಣಾಟಕ ವೈಜ್ಞಾನಿಕ ಗ್ರಂಥಮಾಲೆ'ಯನ್ನು
ಪ್ರಾರಂಭಿಸಿದರು. ಅದರ ಮೊದಲ ಪ್ರಕಟಣೆಯಾಗಿ ನಂಗಪುರಂ ವೆಂಕಟೇಶ ಅಯ್ಯಂಗಾರ್ಯರ 'ಜ್ಯೋತಿರ್ವಿನೋದಿನಿ' ಕೃತಿ 1931ರಲ್ಲಿ ಬಂದಿತು.
ನಂತರ ಬೆಳ್ಳಾವೆಯವರೇ 'ಜೀವ ವಿಜ್ಞಾನ' ಎಂಬ ಪುಸ್ತಕವನ್ನು 1939ರಲ್ಲಿ
ಮೈಸೂರು ವಿಶ್ವವಿದ್ಯಾನಿಲಯದಿಂದ ಹೊರತಂದರು.
ಪತ್ರಿಕೆಗಳನ್ನು ಹೊರತುಪಡಿಸಿ
ವಿಜ್ಞಾನ ಕುರಿತಾದ ಬಿಡಿ ಪುಸ್ತಕಗಳೂ ಆ ಮುನ್ನವೇ ಕನ್ನಡದಲ್ಲಿ ಬೆಳಕು ಕಂಡಿದ್ದವು. 1872 ರಲ್ಲಿ
ರೇಖಾಗಣಿತದ ಕುರಿತಾದ ಪುಸ್ತಕ; 1905 ರಲ್ಲಿ ಕೃಷಿಶಾಸ್ತ್ರದ ಪುಸ್ತಕ; 1909 ರಲ್ಲಿ ಎಂ.ಡಿ.ಅಳಸಿಂಗಾಚಾರ್ಯರು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ “ಓಷಧಿ
ಶಾಸ್ತ್ರ” (ತಮಿಳು ಮೂಲ – ಕೆ.ರಂಗಾಚಾರ್ಯ); 1917 ರಲ್ಲಿ ಪ್ರೊಫೆಸರ್ ಎಚ್.ನಾರಾಯಣರಾಯರು ಬರೆದ “ಭೂಮಿಶಾಸ್ತ್ರವು”; 1918 ರಲ್ಲಿ ಪ್ರಕಟವಾದ “ಸಸ್ಯಶಾಸ್ತ್ರವು”; 1919 ರಲ್ಲಿ
ಪಂಜೆ ಮಂಗೇಶರಾಯರು ಕನ್ನಡಕ್ಕೆ ಅನುವಾದಿಸಿದ “ಜೀವಶಾಸ್ತ್ರ”; ಪಂಜೆಯವರು
ಉದ್ಯಾವರ ಭವಾನಿಶಂಕರ ರಾಯರ ಜೊತೆಗೂಡಿ ಪ್ರಕಟಿಸಿದ “ಪ್ರಾಣಿಗಳೂ ಪ್ರದೇಶಗಳೂ”; 1921 ರಲ್ಲಿ ಮ.ರಾಮಬ್ರಹ್ಮರು ಬರೆದು ಪ್ರಕಟಿಸಿದ “ಸೃಷ್ಟಿವ್ಯಾಪಾರಗಳ ನಿರೀಕ್ಷಣೆ”;
ಮೊದಲಬಾರಿಗೆ ಚಿತ್ರಗಳ ಪ್ರಕಟಣೆಯಲ್ಲಿ ದೊಡ್ಡ ವೈವಿಧ್ಯ ಸಾಧಿಸಿದ 1921 ರ
“ಸರಳಾರೋಗ್ಯಶಾಸ್ತ್ರಸಂಬಂಧವಾದ ಚಿತ್ರಗಳು”; 1924 ರಲ್ಲಿ
ಎಸ್.ಎನ್.ನರಸಿಂಹಯ್ಯನವರ “ಖಗೋಳಶಾಸ್ತ್ರ” ಮೊದಲಾದುವುಗಳನ್ನು
ನೆನೆಯಬಹುದು.

ಪಂಜೆಯವರ ಕೃತಿ – ಚಿತ್ರಕೃಪೆ: ಇಜ್ಞಾನ

(ಚಿತ್ರಕೃಪೆ: ಇಜ್ಞಾನ)
ಮೈಸೂರು ವಿಶ್ವವಿದ್ಯಾಲಯದ
“ಕರ್ಣಾಟಕ ಸಂಘ”ದ ವತಿಯಿಂದ 1919 ರಲ್ಲಿ “ಪ್ರಬುದ್ಧ ಕರ್ಣಾಟಕ” ಎನ್ನುವ ಪತ್ರಿಕೆ ಆರಂಭವಾಯಿತು.
ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ನಿರ್ಮಾಣದಲ್ಲಿ ಈ ಪತ್ರಿಕೆ ವಹಿಸಿದ ಪಾತ್ರ
ಮಹತ್ತರವಾದದ್ದು. ಹೊಸಗನ್ನಡದ ಉದಯಕಾಲದಲ್ಲೇ ಕನ್ನಡಿಗರಿಗೆ ವಿಜ್ಞಾನ ಸಾಹಿತ್ಯದ ಅಗತ್ಯ
ಇರುವುದನ್ನು ಕಂಡುಕೊಂಡ ಸಂಪಾದಕರು “ಪ್ರಬುದ್ಧ ಕರ್ಣಾಟಕ”ದ ಐದನೆಯ ಸಂಚಿಕೆಯಿಂದಲೇ ವಿಜ್ಞಾನ
ಲೇಖನಗಳನ್ನು ಪ್ರಕಟಿಸಿದರು. ಆನಂತರ ಪತ್ರಿಕೆಯಲ್ಲಿ ವಿಜ್ಞಾನ ಲೇಖನಗಳ ಸಂಖ್ಯೆ, ಮೌಲ್ಯ
ಹೆಚ್ಚುತ್ತಲೇ ಹೋಯಿತು. 1969ರಲ್ಲಿ ನಡೆದ ಪ್ರಬುದ್ಧ ಕರ್ಣಾಟಕ ಪತ್ರಿಕೆಯ ಸುವರ್ಣ ಸಂಭ್ರಮದಲ್ಲಿ
“ವಿಜ್ಞಾನ ಕರ್ಣಾಟಕ” ಎನ್ನುವ ನಿಯತಕಾಲಿಕೆಯನ್ನು ಆರಂಭಿಸಲಾಯಿತು. ಜಾಗತಿಕ ವಿಜ್ಞಾನದ ಬೆಳವಣಿಗೆ,
ನಾಗರಿಕತೆಯ ಹಾದಿಯಲ್ಲಿ ವಿಜ್ಞಾನದ ಕೊಡುಗೆ, ವಿಜ್ಞಾನ
ಇತಿಹಾಸದ ಪ್ರಮುಖ ಮೈಲಿಗಲ್ಲುಗಳು, ವಿಜ್ಞಾನಿಗಳ ಸಂಕ್ಷಿಪ್ತ ಜೀವನ
ಚರಿತ್ರೆ, ತಂತ್ರಜ್ಞಾನದ ಹಾದಿಯಲ್ಲಿ ವಿಜ್ಞಾನದ ಪಾತ್ರ ಮೊದಲಾದ ಸರಣಿ
ಲೇಖನಗಳು ವಿಜ್ಞಾನ ಕರ್ಣಾಟಕ ನಿಯತಕಾಲಿಕೆಯಲ್ಲಿ ಪ್ರಕಟವಾಗಿ, ಕನ್ನಡದಲ್ಲಿ
ವಿಜ್ಞಾನ ಸಂವಹನದ ಹೊಸ ಹಾದಿಗಳನ್ನು ತೆರೆದವು.
1930ರ ದಶಕದಲ್ಲಿ ಮೈಸೂರು
ವಿಶ್ವವಿದ್ಯಾಲಯ “ಪ್ರಚಾರ ಪುಸ್ತಕಮಾಲೆ” ಎನ್ನುವ ಮಹತ್ವದ ಯೋಜನೆಯನ್ನು ಪ್ರಾರಂಭಿಸಿತು. "ವಿಶ್ವವಿದ್ಯಾನಿಲಯದ
ವಿದ್ಯೆ ಪಟ್ಟಣಗಳಲ್ಲಿ ಮಾತ್ರ ಕೇಂದ್ರೀಕೃತವಾಗದೆ ನಾಡಿನ ಮೂಲೆಮೂಲೆಗೂ ಪ್ರಸರಿಸಬೇಕು" ಎನ್ನುವುದು
ಮೈಸೂರು ವಿವಿಯ ಮೊದಲ ಕುಲಪತಿ ನಾಲ್ವಡಿ ಕೃಷ್ಣರಾಜ ಒಡೆಯರ ಆಶಯವಾಗಿತ್ತು. ಅದನ್ನು ಈಡೇರಿಸಲು
ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕ ಸಂಘವು ನಾಡಿನ ಅನೇಕ ಪಟ್ಟಣಗಳಲ್ಲಿ ಆಯಾ ವಿಷಯ ತಜ್ಞರಿಂದ
ಸಾರ್ವಜನಿಕ ಆಸಕ್ತಿಯ ವಿಷಯಗಳ ಬಗ್ಗೆ ಉಪನ್ಯಾಸಗಳನ್ನು ಏರ್ಪಡಿಸಿತು. 'ಪ್ರಚಾರೋಪನ್ಯಾಸ'ಗಳೆಂದೇ
ಜನಪ್ರಿಯವಾದ ಇವುಗಳನ್ನು ಪುಸ್ತಕರೂಪದಲ್ಲಿ ಹೊರತರಲು ಅಂದಿನ ಉಪಕುಲಪತಿ ಡಾ.
ಎನ್.ಎಸ್.ಸುಬ್ಬರಾಯರ ಒತ್ತಾಸೆ. ಇಂಥ ಪುಸ್ತಕಗಳನ್ನು ಜಿ.ಹನುಮಂತರಾಯರ
ಪ್ರಧಾನ ಸಂಪಾದಕತ್ವದಲ್ಲಿ 'ಪ್ರಚಾರ ಪುಸ್ತಕಮಾಲೆ' ಎಂಬ ಸರಣಿಯಲ್ಲಿ ಮುದ್ರಿಸಿದ ವಿಶ್ವವಿದ್ಯಾನಿಲಯದ ಪ್ರಸಾರಾಂಗ, ನಾಡಿನ ಜನತೆಗೆ ಸುಲಭ ದರದಲ್ಲಿ ತಲುಪಿಸಿತು. ಈ ಸರಣಿಯ ಮೊದಲ ಕೃತಿ ಸಿ.ಎನ್.ಶ್ರೀನಿವಾಸ
ಅಯ್ಯಂಗಾರ್ಯರ “ಖಗೋಳಶಾಸ್ತ್ರ ಪ್ರವೇಶ”. ನಂತರ ಬಿ.ಎ.ಕೃಷ್ಣಸ್ವಾಮಿರಾಯರ 'ವಿದ್ಯುಚ್ಛಕ್ತಿಯ
ವೈಭವ', ಎ.ನಾರಾಯಣರಾಯರ 'ಪ್ರಾಣಿಜೀವನ', ಕೆ.ಶೇಷಾದ್ರಿ ಅಯ್ಯಂಗಾರರ 'ವಾಯುಗುಣ', ಡಾ. ಡಿ.ಶಾಮಣ್ಣರ 'ಕಣ್ಣು ಮತ್ತು ಅದರ ರಕ್ಷಣೆ' ಮತ್ತು 'ರಕ್ತ', ಎಚ್.ಸುಬ್ಬಾಜೋಯಿಸರ 'ಸಾರಜನಕದ ಮಹತ್ವ', ಡಿ.ಎಚ್.ವೀರಯ್ಯನವರ 'ಕೀಟಗಳು', ಜೆ.ಆರ್.ಲಕ್ಷ್ಮಣರಾಯರ
'ಆಹಾರ', ಕೆ.ಎಸ್.ಲಕ್ಷ್ಮಣರಾವ್
ಅವರ 'ಕಲ್ಲಿದ್ದಲು', ಗಣಿತದ ಕುರಿತು ಸಿ.ಎನ್.ಶ್ರೀನಿವಾಸ ಅಯ್ಯಂಗಾರರು ಹಾಗೂ
ವಿ.ಕೆ.ದೊರೆಸ್ವಾಮಿಯವರು, ಪ್ರಾಣಿವಿಜ್ಞಾನದ ಕುರಿತು ಡಾ. ಎಚ್.ಬಿ.ದೇವರಾಜ ಸರ್ಕಾರರು ರಚಿಸಿದ
ಕೃತಿಗಳನ್ನು ಈ ಮಾಲೆಯಲ್ಲಿ ಪ್ರಕಟಿಸಲಾಯಿತು. ನಾಲ್ಕಾಣೆ ಪುಸ್ತಕಗಳೆಂದು ಖ್ಯಾತವಾದ ಇವುಗಳನ್ನು
ಇಂದಿಗೂ ಪುಸ್ತಕ ಸಂಗ್ರಾಹಕರಲ್ಲಿ ಕಾಣಬಹುದು.

(ಚಿತ್ರಕೃಪೆ: ಇಜ್ಞಾನ)
ಮೈಸೂರು
ವಿಶ್ವವಿದ್ಯಾಲಯದ ಈ ಹೆಜ್ಜೆ ಕರ್ನಾಟಕ, ಮಂಗಳೂರು, ಮತ್ತು ಬೆಂಗಳೂರು
ವಿಶ್ವವಿದ್ಯಾಲಯಗಳನ್ನೂ ಪ್ರೇರೇಪಿಸಿತು. ಜಿ.ಟಿ.ನಾರಾಯಣರಾಯರ 'ನಕ್ಷತ್ರ ಲೋಕ', ಪಿ.ಎಸ್.ವೆಂಕಟಸ್ವಾಮಿ
ಶೆಟ್ಟಿಯವರ 'ಚಂದ್ರಲೋಕ ಯಾತ್ರೆ', ಬಿ.ವಿ.ನಾರಾಯಣರಾವ್ ಅವರ 'ಬೆಳಕಿನ ಸ್ವರೂಪ', ಕೆ.ಶೇಷಾದ್ರಿ ಅಯ್ಯಂಗಾರರ 'ಸೂಕ್ಷ್ಮದರ್ಶಕಗಳು ಮತ್ತು ದೂರದರ್ಶಕಗಳು', ಎಸ್.ಬಿ.ವಸಂತ
ಕುಮಾರ್ ಅವರ 'ದೇಹರಚನೆ ಹಾಗೂ ಮೂಳೆಗಳು' ಮುಂತಾದ ಕೃತಿಗಳು ಪ್ರಕಟವಾದವು.
ಕನ್ನಡ ವಿಜ್ಞಾನ
ಸಾಹಿತ್ಯದ ಬೆಳವಣಿಗೆಯಲ್ಲಿ ಶಿವರಾಮ ಕಾರಂತರು ಸ್ಮರಿಸಲೇಬೇಕಾದ ಹೆಸರು. ಅಪಾರ ಆಸಕ್ತಿಗಳ, ನಡೆದಾಡುವ ವಿಶ್ವಕೋಶದ ಖ್ಯಾತಿಯ ಕಾರಂತರು 1959-64ರ
ಅವಧಿಯಲ್ಲಿ ನಾಲ್ಕು ಸಂಪುಟಗಳ “ವಿಜ್ಞಾನ ಪ್ರಪಂಚ” ಎನ್ನುವ ವಿಶ್ವಕೋಶದ ಮಾದರಿಯ ಪ್ರಕಟಣೆಗಳನ್ನು
ಸಾಧಿಸಿದರು. ವಿಜ್ಞಾನವನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕೃತಿಗಳು ಮಹತ್ವದ ಪ್ರಯತ್ನ. ಕನ್ನಡ
ಜನತೆ ಮಾತೃಭಾಷೆಯ ಮೂಲಕ ವೈಚಾರಿಕ, ವೈಜ್ಞಾನಿಕ ಪ್ರಜ್ಞೆಯನ್ನು
ಬೆಳೆಸಿಕೊಳ್ಳಬೇಕೆನ್ನುವ ಕಾರಂತರ ಹಂಬಲ ಅವರಿಂದ ಅಗಾಧ ಸಾಧನೆಗಳನ್ನು ಮಾಡಿಸಿದೆ. ಇದಕ್ಕಾಗಿ
ಅವರು ಮಾಡಿದ ಪ್ರಯತ್ನ, ಪಟ್ಟ ಶ್ರಮ ಸಾಧಾರಣ ಜನರಿಗೆ ಅಸಾಧ್ಯ. ಅಂತೆಯೇ
ಕನ್ನಡದಲ್ಲಿ ವಿಜ್ಞಾನ ಸಂವಹನದ ವಿವಿಧ ಸಾಧ್ಯತೆಗಳನ್ನು ಪರಿಚಯ ಮಾಡಿಸಿದವರು
ಜಿ.ಟಿ.ನಾರಾಯಣರಾಯರು. ಅವರ ಶೈಲಿಯನ್ನು ಅನುಸರಿಸಿ ಗೆದ್ದವರು, ಬಿದ್ದವರು
ಇದ್ದಾರೆ. ಅವರದ್ದು ಬಹುಮುಖಿ ವ್ಯಕ್ತಿತ್ವ. ವಿಜ್ಞಾನದ ಭಾಷೆ, ಪರಿಭಾಷೆಗಳು
ಅವರ ವ್ಯಕ್ತಿತ್ವದ ಪ್ರಮುಖ ಭಾಗವಾಗಿತ್ತು. ಈ ಸಾಲಿಗೆ ಸೇರುವ ಮತ್ತಷ್ಟು ಹೆಸರುಗಳು
ಜೆ.ಆರ್.ಲಕ್ಷ್ಮಣರಾವ್, ಎಂ.ಆರ್.ನಾಗರಾಜು, ಡಿ.ಆರ್.ಬಳೂರಗಿ,
ನಾಗೇಶ ಹೆಗಡೆ, ಟಿ.ಆರ್.ಅನಂತರಾಮು, ಡಾ.ಸಿ.ಆರ್.ಚಂದ್ರಶೇಖರ್, ಡಾ.ಪಿ.ಎಸ್.ಶಂಕರ್, ಡಾ.ಸ.ಜ.ನಾಗಲೋಟಿಮಠ, ಡಾ.ರಾಮಕೃಷ್ಣರಾವ್, ಡಾ.ಅನುಪಮಾ ನಿರಂಜನ, ಡಾ.ನಾ.ಸೋಮೇಶ್ವರ ಮೊದಲಾದವರು.

ಶಿವರಾಮ ಕಾರಂತರ
'ವಿಜ್ಞಾನ ಪ್ರಪಂಚ'ದ ಒಂದು ಸಂಪುಟ (ಚಿತ್ರಕೃಪೆ: ಇಜ್ಞಾನ)
ಆನಂತರದ ದೊಡ್ಡ ಹೆಜ್ಜೆ ಎಂದರೆ
1966 ರಲ್ಲಿ ಸುರತ್ಕಲ್ ವಿಜ್ಞಾನ ಸಂಘದ ಪ್ರಕಟಣೆಯಾದ “ವಿಜ್ಞಾನಲೋಕ” ಪತ್ರಿಕೆ. ಕನ್ನಡದ ಮಹತ್ವದ
ವಿಜ್ಞಾನ ಸಂವಹನಕಾರರಾದ ಅಡ್ಯನಡ್ಕ ಕೃಷ್ಣಭಟ್ಟರು “ವಿಜ್ಞಾನಲೋಕ”ದ ಮೊದಲ ಸಂಪಾದಕರು. ವಿಜ್ಞಾನದ ವಿವಿಧ
ಕ್ಷೇತ್ರಗಳ ಬಗ್ಗೆ “ವಿಜ್ಞಾನಿ”, “ವಿಜ್ಞಾನ ದೇಗುಲ”, “ವಿಜ್ಞಾನದ ಮುನ್ನಡೆ” ಮುಂತಾದ ಸ್ಥಿರ
ಶೀರ್ಷಿಕೆಗಳ ಅಡಿಯಲ್ಲಿ ಲೇಖನಗಳು ಇದ್ದವು. ವಿಜ್ಞಾನ ಲೇಖನಗಳಲ್ಲಿ ಉಪಯೋಗಿಸಿದ ಪಾರಿಭಾಷಿಕ ಶಬ್ದಗಳನ್ನು
ಪಟ್ಟಿ ಮಾಡಿ, ಅವುಗಳ ಅರ್ಥವನ್ನು ಆಯಾ
ಸಂಚಿಕೆಯ ಕೊನೆಯಲ್ಲೇ ಕೊಡಲಾಗುತ್ತಿತ್ತು. ಓದುಗರ ಟೀಕೆ-ಟಿಪ್ಪಣಿಗಳನ್ನು ಪ್ರಕಟಿಸಲಾಗುತ್ತಿತ್ತು; ಅವರ ಪ್ರಶ್ನೆಗಳಿಗೆ ಪತ್ರಿಕೆಯ ಮೂಲಕವೇ ಉತ್ತರ ನೀಡಲಾಗುತ್ತಿತ್ತು. ಸಂವಹನವೇ ಮೂಲ
ಉದ್ದೇಶವಾದ್ದರಿಂದ ಸಾಮಾನ್ಯ ಬಳಕೆಯ ಕನ್ನಡದಲ್ಲಿ ನಿರೂಪಣೆ ಇರುತ್ತಿತ್ತು. ಕೆಲವು ಹೊಸ
ಪದಗಳನ್ನು ಬಳಸಿದಾಗ ಆವರಣದಲ್ಲಿ ಇಂಗ್ಲಿಷ್ ಶಬ್ದಗಳನ್ನು ನೀಡಲಾಗುತ್ತಿತ್ತು. ಆರಂಭದಲ್ಲಿ ಮೂರು
ತಿಂಗಳಿಗೊಮ್ಮೆ ಪ್ರಕಟವಾಗುತ್ತಿದ್ದ ವಿಜ್ಞಾನಲೋಕ 1968 ರಿಂದ ಮಾಸಿಕವಾಯಿತು. ವಿದೇಶಿ ಲೇಖಕರ ವಿಜ್ಞಾನ
ಲೇಖನಗಳ ಅನುವಾದ, ವಿದ್ಯಾರ್ಥಿಗಳಿಂದ ಲೇಖನ ಬರೆಸುವಿಕೆ, ಹೊಸ ಲೇಖಕರಿಂದ ಲೇಖನ ಬರೆಯಿಸಿ ಸಂಪಾದಕ ಮಂಡಳಿಯಿಂದ ಅದನ್ನು ಪ್ರಕಟಣಾರ್ಹ ಮಾಡುವುದು –
ಮೊದಲಾದ ಪ್ರಯೋಗಗಳಲ್ಲಿ “ವಿಜ್ಞಾನಲೋಕ” ಯಶಸ್ಸು ಕಂಡಿತು. ಮೊದಲ ಬಾರಿಗೆ ವೈಜ್ಞಾನಿಕ ಲೇಖನಗಳ
ಸ್ಪರ್ಧೆಯನ್ನು ಕನ್ನಡದಲ್ಲಿ ನಿಯೋಜಿಸಿದ ಕೀರ್ತಿ; ಖರ್ಚು ಹೆಚ್ಚಾದರೂ ಬಣ್ಣದ
ಚಿತ್ರಗಳನ್ನು ಬಳಸಿದ ಪರಿಪಾಠ; ಪತ್ರಗಳ ಮೂಲಕ ವಿಜ್ಞಾನ ಮಾಹಿತಿ ಹರಡುವ
ಪ್ರಯತ್ನಗಳು ಈ ಪತ್ರಿಕೆಯದ್ದೇ. ಅನೇಕ ಮಿತಿಗಳ ನಡುವೆಯೂ 12 ವರ್ಷಗಳ ಕಾಲ ಪ್ರಕಟಣೆಯಾಗಿ,
1978ರಲ್ಲಿ ಮುಕ್ತಾಯ ಕಂಡ “ವಿಜ್ಞಾನಲೋಕ” ಕನ್ನಡ ವಿಜ್ಞಾನ ಪತ್ರಿಕೆಗಳ
ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿ ಉಳಿದಿದೆ. ಆಗಸ್ಟ್ 2007 ರಿಂದ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿಜ್ಞಾನ
ಮತ್ತು ತಂತ್ರಜ್ಞಾನ ಅಕಾಡೆಮಿ “ವಿಜ್ಞಾನ ಲೋಕ” ಎನ್ನುವ ಹೆಸರಿನಲ್ಲಿಯೇ ದ್ವೈಮಾಸಿಕವೊಂದನ್ನು
ಆರಂಭಿಸಿ, ಇಂದಿಗೂ
ಸಫಲವಾಗಿ ನಡೆಸುತ್ತಿದೆ. ಇದರ ಜೊತೆಗೆ “ವಿಜ್ಞಾನ
ವಾಹಿನಿ” ಎನ್ನುವ ತ್ರೈಮಾಸಿಕವನ್ನೂ ಅಕಾಡೆಮಿ ಹೊರತರುತ್ತದೆ.
`
(ಚಿತ್ರಕೃಪೆ – ಇಂಟರ್ನೆಟ್ ಆರ್ಕೈವ್) (ಚಿತ್ರಕೃಪೆ – ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕಾಡೆಮಿ)
1975 ರಿಂದ ಬೆಂಗಳೂರಿನ ರಾಷ್ಟ್ರೀಯ
ವೈಮಾಂತರಿಕ್ಷ ಸಂಸ್ಥೆಯ ಕನ್ನಡ ಸಾಂಸ್ಕೃತಿಕ ಸಂಘ “ಕಣಾದ” ಎನ್ನುವ ಹೆಸರಿನ ವಾರ್ಷಿಕ ವಿಜ್ಞಾನ
ಪತ್ರಿಕೆಯನ್ನು ತರುತ್ತಿದೆ. ಈವರೆಗೆ ಐವತ್ತು ವರ್ಷಗಳ ಕಾಲ ಐವತ್ತು ಸಂಚಿಕೆಗಳು ಬಂದಿರುವುದು
ವಿಶೇಷ. ನಾಡಿನ ಹಲವಾರು ಪ್ರಸಿದ್ಧ ವಿಜ್ಞಾನ ಲೇಖಕರು ಕಣಾದಕ್ಕೆ ಲೇಖನಗಳನ್ನು ಬರೆಯುತ್ತಾರೆ.
ಯಾವುದೇ ವಿಜ್ಞಾನ ಲೇಖಕರ ಲೇಖನ ಕಣಾದದಲ್ಲಿ ಪ್ರಕಟವಾಗುವುದು ಪ್ರತಿಷ್ಠೆಯ ಸಂಗತಿ.
ಅತ್ತ ವಿಜ್ಞಾನಲೋಕ 1978 ರಲ್ಲಿ ಆರುತ್ತಿದ್ದಂತೆ ಇತ್ತ
ಬೆಳಗಿದ್ದು ಮತ್ತೊಂದು ದೀಪ. 1978ರ ನವೆಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯ
ವಿಜ್ಞಾನ ಮತ್ತು ತಂತ್ರವಿದ್ಯಾಮಂಡಲಿಯ ವತಿಯಿಂದ “ವಿಜ್ಞಾನ” ಎನ್ನುವ ಹೆಸರಿನಲ್ಲಿ ಪ್ರಾಯೋಗಿಕ ಪತ್ರಿಕೆಯೊಂದು ಆರಂಭವಾಯಿತು. ಮುಖ್ಯವಾಗಿ
ಶಾಲೆಯ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಆರಂಭಿಸಿದ್ದ ಈ ಪತ್ರಿಕೆಯನ್ನು
ಮತ್ತಷ್ಟು ಉದ್ದೇಶಪೂರಕವನ್ನಾಗಿ ಮಾಡಲು 1979ರ ಜನವರಿಯಲ್ಲಿ “ಬಾಲವಿಜ್ಞಾನ” ಎಂದು
ಬದಲಾಯಿಸಲಾಯಿತು. ಇಂದು ವಿಜ್ಞಾನ ಸಾಹಿತ್ಯದ ಮುಂಚೂಣಿಯಲ್ಲಿರುವ ಬಹುತೇಕ ಲೇಖಕರನ್ನು
ರೂಪಿಸಿದ್ದು ಬಾಲವಿಜ್ಞಾನ ಪತ್ರಿಕೆಯೇ. 1980ರಲ್ಲಿ ಆರಂಭವಾದ ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತು, 1981ರ
ಜನವರಿಯಿಂದ ಬಾಲವಿಜ್ಞಾನದ ಪ್ರಕಟಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿತು. ವಿಜ್ಞಾನ ಪತ್ರಿಕೆ
ಎಷ್ಟು ಮುಕ್ತವಾಗಿ ಇರಬೇಕೆನ್ನುವ ನಿಟ್ಟಿನಲ್ಲಿ ಉದಾಹರಣೆಯಾಗಿ ರೂಪಿತವಾದದ್ದು ಬಾಲವಿಜ್ಞಾನ. ಓದುಗರ
ಕಟುವಾದ ಟೀಕೆಗಳನ್ನು ಯಾವುದೇ ಬದಲಾವಣೆಯಿಲ್ಲದೆ ಪತ್ರಿಕೆಯಲ್ಲಿ ಪ್ರಕಟಿಸುವ ಧೋರಣೆ ಇದ್ದ
ಸಂಪಾದಕರು ಬಾಲವಿಜ್ಞಾನವನ್ನು ಬೆಳೆಸಿದರು. ಓದುಗರಿಂದ ವಿಜ್ಞಾನದ ಕುರಿತಾದ ಪ್ರಶ್ನೆಗಳನ್ನು
ಆಹ್ವಾನಿಸಿ, ಅವುಗಳಿಗೆ
ಉತ್ತರವನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಸಂಪ್ರದಾಯವನ್ನು ಬಹಳ ದೊಡ್ಡದಾಗಿ ಬೆಳೆಸಿದ್ದು
ಬಾಲವಿಜ್ಞಾನದ ಸಂಪಾದಕ ಮಂಡಳಿ – ಅದರಲ್ಲೂ ಮುಖ್ಯವಾಗಿ ಪ್ರೊಫೆಸರ್ ಎಂ.ಆರ್.ನಾಗರಾಜು ಅವರು. ಲೇಖನದ
ಜೊತೆಗೆ ಅತ್ಯುತ್ತಮ ಚಿತ್ರಗಳನ್ನು ಪ್ರಕಟಿಸುತ್ತಿದ್ದ ಸಂಪಾದಕರು, ಅದಕ್ಕಾಗಿ ಚಿತ್ರಕಾರರಿಗೆ
ವಿಶೇಷ ತರಬೇತಿ ನೀಡುತ್ತಿದ್ದರು. ಮಕ್ಕಳು ಮನೆಯಲ್ಲಿ ಮಾಡಬಹುದಾದ ವಿಜ್ಞಾನ ಪ್ರಯೋಗಗಳನ್ನು
ಸರಳವಾಗಿ ನಿರೂಪಿಸುವ ಪ್ರತ್ಯೇಕ ಸರಣಿ ಬಾಲವಿಜ್ಞಾನದ ಕೊಡುಗೆ.

(ಚಿತ್ರಕೃಪೆ: ಇಜ್ಞಾನ)
ಹಾಗೆಂದ ಮಾತ್ರಕ್ಕೆ ಬಾಲವಿಜ್ಞಾನಕ್ಕೆ
ಅಡೆತಡೆಗಳು ಆಗಿಲ್ಲವೆಂದಲ್ಲ. ಆದರೆ ವಿಜ್ಞಾನ ಮಾಸಪತ್ರಿಕೆಯೊಂದು ಅದೆನ್ನೆಲ್ಲ ಮೀರಿ, ನಾಲ್ಕು ದಶಕಗಳನ್ನು ದಾಟಿ, ಇಂದಿಗೂ ಚಾಲ್ತಿಯಲ್ಲಿರುವುದು ಬೆರಗಿನ ಸಂಗತಿಯೇ. ಕರ್ನಾಟಕ ರಾಜ್ಯ ವಿಜ್ಞಾನ
ಪರಿಷತ್ತಿನ ಜಾಲತಾಣದಲ್ಲಿ ಇದುವರೆಗೆ ಪ್ರಕಟವಾಗಿರುವ ಬಾಲವಿಜ್ಞಾನದ ಪ್ರತಿಯೊಂದು ಸಂಚಿಕೆಯ
ಡಿಜಿಟಲ್ ಪ್ರತಿಯೂ ದೊರೆಯುತ್ತದೆ. ಕನ್ನಡ ವಿಜ್ಞಾನಾಸಕ್ತರು ಅಗತ್ಯವಾಗಿ ನೋಡಲೇಬೇಕಾದ ಪತ್ರಿಕೆ
ಬಾಲವಿಜ್ಞಾನ.
ಬಾಲವಿಜ್ಞಾನದ ನಿಟ್ಟಿನಲ್ಲಿ ಬರುತ್ತಿರುವ
ಮತ್ತೊಂದು ವಿಜ್ಞಾನ ಪತ್ರಿಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದ “ವಿಜ್ಞಾನ ಸಂಗಾತಿ”. 1993-94
ರಲ್ಲಿ ಆರಂಭವಾದ ಈ ಪತ್ರಿಕೆ ಈಗ ತ್ರೈಮಾಸಿಕವಾಗಿದೆ;
ಮೂರು ದಶಕಗಳಿಗೂ ಮೀರಿ ಅಚ್ಚುಕಟ್ಟಾದ ವಿಜ್ಞಾನ ಲೇಖನಗಳನ್ನು ಪ್ರಕಟಿಸುತ್ತಿದೆ.
ಕನ್ನಡದ ಪ್ರಮುಖ ವಿಜ್ಞಾನ ಲೇಖಕರು “ವಿಜ್ಞಾನ ಸಂಗಾತಿ”ಗೆ ಲೇಖನಗಳನ್ನು ಬರೆಯುತ್ತಾರೆ.
ಪ್ರಸ್ತುತ ಕನ್ನಡದಲ್ಲಿ ವಿಜ್ಞಾನ ಸಂವಹನವನ್ನು
ಬಹುವಾಗಿ ಚಾಲ್ತಿಯಲ್ಲಿ ಇಟ್ಟಿರುವುದು ದಿನಪತ್ರಿಕೆ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟವಾಗುವ
ಅಂಕಣ ಬರಹಗಳು. ವಿಜ್ಞಾನದ ಯಾವುದೇ ಬೆಳವಣಿಗೆಯನ್ನೂ ಅತ್ಯಂತ ಶೀಘ್ರವಾಗಿ, ಅಷ್ಟೇ ಸರಳವಾಗಿ
ಪತ್ರಿಕೆಗಳಲ್ಲಿ ಬರೆಯುತ್ತಿದ್ದ ದಿ. ಸುಧೀಂದ್ರ ಹಾಲ್ದೊಡ್ಡೇರಿ ಅವರನ್ನು ಸ್ಮರಿಸಬಹುದು. ಈ
ನಿಟ್ಟಿನಲ್ಲಿ ಟಿ.ಆರ್.ಅನಂತರಾಮು, ನಾಗೇಶ ಹೆಗಡೆ, ಕೊಳ್ಳೇಗಾಲ ಶರ್ಮಾ, ಯು.ಬಿ.ಪವನಜ, ಉದಯ
ಶಂಕರ ಪುರಾಣಿಕ, ಡಾ. ಸಿ.ಆರ್.ಚಂದ್ರಶೇಖರ್, ಎಚ್.ಆರ್.ಕೃಷ್ಣಮೂರ್ತಿ,
ಬಿ.ಎಸ್.ಶೈಲಜಾ, ಟಿ.ಜಿ.ಶ್ರೀನಿಧಿ, ರೋಹಿತ್ ಚಕ್ರತೀರ್ಥ, ಸುನೀಲ್ ಬಾರ್ಕೂರು, ವಿಕ್ರಂ ಜೋಶಿ, ತೋಂಟದಾರ್ಯ ಸಂಪಿಗೆ, ಡಾ. ಮೋಹನ್ ತಲಕಾಲುಕೊಪ್ಪ, ಡಾ. ಟಿ.ಎಸ್.ಚನ್ನೇಶ್, ಮಧು ವೈ.ಎನ್., ಪುರುಷೋತ್ತಮ ರಾವ್, ಡಾ. ಡಿ.ಎಂ.ಸಾಗರ್, ಡಾ. ನಾ ಸೋಮೇಶ್ವರ, ಎಲ್.ಪಿ.ಕುಲಕರ್ಣಿ, ಸಿ.ಪಿ.ರವಿಕುಮಾರ್, ವಿನೋದ್ ಕೃಷ್ಣ ಮಕ್ಕಿಮನೆ, ವಿನಾಯಕ ಕಾಮತ್, ಡಾ. ಚೈತ್ರಾ, ಡಾ, ಪವಿತ್ರಾ,
ಡಾ.ಶುಭ್ರತಾ, ಡಾ. ದಯಾನಂದ ಲಿಂಗೇಗೌಡ, ಡಾ. ಎನ್.ಬಿ.ಶ್ರೀಧರ, ನಾರಾಯಣ ಬಾಬಾನಗರ್, ಡಾ. ಪಾಲಹಳ್ಳಿ ವಿಶ್ವನಾಥ, ಶರತ್ ಭಟ್ ಸೆರಾಜೆ, ಶ್ರೀನಿವಾಸಮೂರ್ತಿ ಶೃಂಗೇರಿ, ಡಾ. ಶಿಶುಪಾಲ, ಡಾ. ಸುಕನ್ಯಾ ಸೂನಗಹಳ್ಳಿ, ನಿರಂಜನ ಪ್ರಭು, ಮಹಾಂತೇಶ ಅಂಗಡಿ, ವಿ. ರೋಹಿತ್, ಡಾ.
ಪ್ರಸನ್ನ ಸಂತೆಕಡೂರು, ಓಂಶಿವಪ್ರಕಾಶ್, ಕಲ್ಗುಂಡಿ
ನವೀನ್ ಮೊದಲಾದವರು ವಿಜ್ಞಾನದ ಹಲವಾರು ಮಜಲುಗಳನ್ನು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಮುಟ್ಟಿಸುವ
ಪ್ರಯತ್ನಗಳನ್ನು ಮುಂದುವರೆಸಿದ್ದಾರೆ. ಸಾರ್ವಜನಿಕರಿಗೆ ಕನ್ನಡದಲ್ಲಿ ವಿಜ್ಞಾನ ಸಂವಹನ ಮಾಡಬಲ್ಲ
ಹೊಸ ಲೇಖಕರನ್ನು, ಉಪನ್ಯಾಸಕಾರರನ್ನು, ತಂತ್ರಜ್ಞರನ್ನು
ತಯಾರಿಸಬೇಕಾದ ಅಗತ್ಯ ಬಹಳಷ್ಟಿದೆ.

(ಚಿತ್ರಕೃಪೆ: ಇಜ್ಞಾನ)
ಕನ್ನಡದ ಇಂದಿನ ವಿಜ್ಞಾನ ಸಂವಹನಕಾರರು ಹೊಸ ಹಾದಿಗಳನ್ನು ನಿರಂತರವಾಗಿ
ಶೋಧಿಸುತ್ತಲೇ ಇದ್ದಾರೆ. ಮುಕ್ತ ಜ್ಞಾನ ಪ್ರಸಾರದ ಅಡಿಯಲ್ಲಿ ಕ್ರಿಯೇಟಿವ್ ಕಾಮನ್ಸ್ ಮೂಲಕ
ಹಲವಾರು ಲೇಖಕರು ತಮ್ಮ ಪುಸ್ತಕಗಳ ಡಿಜಿಟಲ್ ಪ್ರತಿಗಳನ್ನು ಉಚಿತ ಓದಿಗಾಗಿ ನೀಡಿದ್ದಾರೆ.
ಇವರಲ್ಲಿ ಜಿ.ಟಿ.ನಾರಾಯಣರಾಯರು, ಟಿ.ಆರ್.ಅನಂತರಾಮು ಅವರನ್ನು ಹೆಸರಿಸಬಹುದು. ಧ್ವನಿ ಮಾಧ್ಯಮದ ಮೂಲಕ ವಿಜ್ಞಾನ
ಪತ್ರಿಕೆಯನ್ನು ಪ್ರಸರಿಸಬಹುದು ಎಂದು ಕನ್ನಡದ ಮೊದಲ ಪಾಡ್’ಕಾಸ್ಟ್
“ಜಾಣಸುದ್ಧಿ”ಯನ್ನು ನಿರ್ಮಿಸಿದ ಕೊಳ್ಳೇಗಾಲ ಶರ್ಮಾ ಅವರು ತೋರಿದ್ದಾರೆ. ಅವರ ಸಾಹಸವನ್ನು
ಜಗತ್ತಿನ ಅನೇಕ ದೇಶಗಳು ಗುರುತಿಸಿ, ಮೆಚ್ಚುಗೆ ಸೂಚಿಸಿವೆ. ಮೌಲಿಕ
ವಿಜ್ಞಾನ ಲೇಖನಗಳ ಪ್ರಸಾರಕ್ಕಾಗಿಯೇ “ಇ-ಜ್ಞಾನ” ಎನ್ನುವ ಪ್ರಶಸ್ತಿ ವಿಜೇತ ಜಾಲತಾಣವನ್ನು
ಟಿ.ಜಿ.ಶ್ರೀನಿಧಿ, ಜಿ.ಎಸ್.ಅಭಿಷೇಕ್ ಅವರು ನಿರ್ವಹಿಸುತ್ತಿದ್ದಾರೆ. ಲೇಖಕರಾಗಿಯೂ,
ಪ್ರಕಾಶಕರಾಗಿಯೂ ಸಾಮಾನ್ಯ ಪರಿಕಲ್ಪನೆಗಿಂತ ಭಿನ್ನವಾದ ಕೃತಿಗಳನ್ನು ರೋಹಿತ್
ಚಕ್ರತೀರ್ಥ ಅವರು ಹೊರತರುತ್ತಿದ್ದಾರೆ. ಕೇಂದ್ರ ಸರ್ಕಾರದ ವಿಜ್ಞಾನ್ ಪ್ರಸಾರ್ ಸಂಸ್ಥೆ ಮುಚ್ಚಿ
ಹೋದ ನಂತರವೂ, ಅದು ಪ್ರಕಟಿಸುತ್ತಿದ್ದ “ಕುತೂಹಲಿ” ಎಂಬ ವಿಜ್ಞಾನ
ಮಾಸಿಕವನ್ನು ತಮ್ಮ ಕೆಲ ಉತ್ಸಾಹಿ ಗೆಳೆಯರ ಜೊತೆಗೂಡಿ ಕೊಳ್ಳೇಗಾಲ ಶರ್ಮಾ ಅವರು ಅಪಾರ ಸಾಹಸದಿಂದ
ಮುಂದುವರೆಸಿದ್ದಾರೆ. ಇದರ ಜೊತೆಗೆ ಹೊಸ ಪೀಳಿಗೆಯ ಹಲವಾರು ವಿಜ್ಞಾನ ಲೇಖಕರು ತಮ್ಮ ಅಧ್ಯಯನ,
ಸಮಯಗಳನ್ನು ವ್ಯಯಿಸಿ ಓದುಗರಿಗೆ ವಿಜ್ಞಾನದ ಹೊಸ ಮಜಲುಗಳನ್ನು
ಪರಿಚಯಿಸುತ್ತಿದ್ದಾರೆ. ಇವೆಲ್ಲವೂ ಸ್ವಂತ ಪ್ರಯತ್ನದಿಂದ, ನಿರ್ವಂಚನೆಯ
ವಿಜ್ಞಾನ ಪ್ರೀತಿಯಿಂದ, ಯಾವುದೇ ಸರ್ಕಾರಿ ಬೆಂಬಲವಿಲ್ಲದೆ, ಯಾವುದೇ ಆರ್ಥಿಕ ಲಾಭವಿಲ್ಲದೆ (ಬಹುತೇಕ ಸ್ವಂತ ಹಣ ವ್ಯಯಿಸಿ) ಮಾಡುತ್ತಿರುವ ಕೆಲಸಗಳು.
ಈ ದೃಷ್ಟಿಯಿಂದ ಕನ್ನಡದ ವಿಜ್ಞಾನ ಸಾಹಿತ್ಯ ಲೋಕ ಭಾಗ್ಯಶಾಲಿಯೇ ಸರಿ! ಇದಕ್ಕೆ ಓದುಗರ ಬೆಂಬಲ,
ಆಸಕ್ತಿ, ಸಹಭಾಗಿತ್ವ ದೊರಕಿದರೆ “ಕುಂದಣಕ್ಕೆ ಕಂಪು ಕೊಟ್ಟಂತೆ”!
---------------------
(ಈ ಲೇಖನದ ನಿರ್ಮಾಣಕ್ಕೆ ಮಾಹಿತಿ ಮತ್ತು ಚಿತ್ರಗಳನ್ನು ಒದಗಿಸಿಕೊಟ್ಟ
ಇ-ಜ್ಞಾನ ಜಾಲತಾಣದ ರೂವಾರಿ, ಖ್ಯಾತ ವಿಜ್ಞಾನ ಲೇಖನರಾದ ಶ್ರೀಯುತ ಟಿ.ಜಿ.ಶ್ರೀನಿಧಿ ಅವರಿಗೆ ಧನ್ಯವಾದಗಳು)
ಮೌಂಟ್ ಕಾರ್ಮಲ್ ಕಾಲೇಜು ಕನ್ನಡ ಸಂಘದ ವರ್ಷ 2025 ರ ಸ್ಮರಣಿಕೆಯಲ್ಲಿ ಪ್ರಕಟವಾದ ಲೇಖನ.
ಲೇಖಕ:
ಡಾ. ಕಿರಣ್ ವಿ.ಎಸ್.
ವೈದ್ಯರು
ಕುರುಕ್ಷೇತ್ರದ
ವಿಶಾಲವಾದ ರಣರಂಗವು ಭಗವದ್ಗೀತೆಯಲ್ಲಿ
ಅರ್ಜುನ ಮತ್ತು ಪಾರ್ಥಸಾರಥಿಯ ನಡುವಿನ ಸಂಭಾಷಣೆಗೆ ವೇದಿಕೆ. ಅವರಿಬ್ಬರ ಮಾತುಕತೆ ಮಾನವ ಮನಸ್ಸಿನ
ನಿರಂತರ ಸಂಘರ್ಷದ ಆಳವಾದ ರೂಪಕ. ಸಮರದ ಮುನ್ನ ಬಂಧುಗಳನ್ನು ಕಂಡಾಗ, ಸ್ವಧರ್ಮ
ಮತ್ತು ಮೋಹಗಳ ತಾಕಲಾಟವನ್ನು ಗುರುತಿಸಲಾಗದೆ ಕಂಗೆಟ್ಟ ಅರ್ಜುನ, ತೀವ್ರವಾದ
ತುಮುಲ ಮತ್ತು ಆತಂಕದ ಸ್ಥಿತಿಗೆ ಕುಸಿಯುತ್ತಾನೆ. ತನ್ಮೂಲಕ ಆತ
ಅತ್ಯಂತ ನಿರ್ಣಾಯಕ ಸಂದರ್ಭಗಳಲ್ಲಿ ಎಲ್ಲರೂ
ಅನುಭವಿಸಬಹುದಾದ ಮನೋದೌರ್ಬಲ್ಯಗಳ ಪ್ರತೀಕವಾಗುತ್ತಾನೆ. ತನ್ನ ನಿಲುವನ್ನು ಸಮರ್ಥಿಸಲು
ಮೇಲ್ನೋಟಕ್ಕೆ ತಾರ್ಕಿಕ ಎನಿಸುವ ಅಸಂಗತಗಳನ್ನು ಪಟ್ಟಿ ಮಾಡುತ್ತಾನೆ. ಸ್ವಧರ್ಮದಿಂದ ದೂರಾಗುವ
ತನ್ನ ಪ್ರಯತ್ನಕ್ಕೆ ಪ್ರಾಪಂಚಿಕ ವ್ಯವಸ್ಥೆಯನ್ನು ಉಳಿಸುವ ದೊಡ್ಡ ಧ್ಯೇಯದ ರೂಪವನ್ನು ನೀಡಿ
ಸಮರ್ಥನೆಗೆ ಇಳಿಯುತ್ತಾನೆ. ಆಧುನಿಕ ಮನೋವಿಜ್ಞಾನ ಇಂತಹ ಸ್ಥಿತಿಯನ್ನು
ಇಚ್ಛಾಶಕ್ತಿಯ ಬಿಕ್ಕಟ್ಟು (crisis of will), ಋಣಾತ್ಮಕ ದ್ವಂದ್ವ,
ಬುದ್ಧಿ-ಭಾವನೆಗಳ ಅಸಾಂಗತ್ಯ ಮೊದಲಾಗಿ ಗುರುತಿಸುತ್ತದೆ. ಈ ನಿಟ್ಟಿನಲ್ಲಿ ಭಗವದ್ಗೀತೆಯು ಅತ್ಯುನ್ನತ ಸ್ತರದ ಆನ್ವಯಿಕ ಮನೋವಿಶ್ಲೇಷಣೆಯ ಪ್ರಬಂಧ. ಮಾನವ ಮನಸ್ಸಿನ ದುಗುಡಗಳ ಪರಿಭಾಷೆ, ದುಃಖದ
ಮೂಲ ಕಾರಣಗಳ ವಿಶ್ಲೇಷಣೆ, ಮತ್ತು ಆತ್ಮನಿಯಂತ್ರಣಕ್ಕೆ ಅತ್ಯಾಧುನಿಕ ಪರಿಹಾರಗಳನ್ನು
ಸೂಚಿಸುವ ಅದ್ಭುತ ಆಕರವಾಗಿ ಭಗವದ್ಗೀತೆ ಏಕೀಭವಿಸುತ್ತದೆ.
ಆಧುನಿಕ
ಮನೋವಿಜ್ಞಾನ ಬಹುತೇಕ ಪಾಶ್ಚಾತ್ಯ ಮೂಲದ್ದು; ಮಾನವನ ವರ್ತನೆ ಮತ್ತು ಮಾನಸಿಕ ಪ್ರಕ್ರಿಯೆಗಳ ವೈಜ್ಞಾನಿಕ ಅಧ್ಯಯನಕ್ಕೆ
ಸ್ಥಾಪಿತ ವಿಧಾನಗಳನ್ನು ಆಧರಿಸಿ ಅದು ಬೆಳೆಯುತ್ತಿದೆ. ಇಂತಹ ಪರಿಕಲ್ಪನೆಗಳನ್ನು ಭಗವದ್ಗೀತೆಯು ಸಾವಿರಾರು
ವರ್ಷಗಳ ಹಿಂದೆಯೇ ಅನನ್ಯವಾದ ತಾತ್ತ್ವಿಕ ಚೌಕಟ್ಟಿನಲ್ಲಿ ಆಳವಾಗಿ ವಿಶ್ಲೇಷಿಸಿದೆ ಎಂಬುದು
ಮನೋತಜ್ಞರ ಕುತೂಹಲಕ್ಕೆ ಕಾರಣವಾಗಿದೆ. ಆಧ್ಯಾತ್ಮಿಕ ಅಥವಾ ನೈತಿಕ ಗ್ರಂಥವನ್ನಾಗಿ ನೋಡಿದರೂ,
ಭಗವದ್ಗೀತೆಯನ್ನು ಮನೋವೈಜ್ಞಾನಿಕ ಪಠ್ಯದ ಮಾದರಿಯಲ್ಲೇ ಅರ್ಥೈಸಬಹುದು.
ಮನಸ್ಸಿನ ಕಾರ್ಯವೈಖರಿ, ಸ್ವಧರ್ಮದ ಮಹತ್ವ, ಭಾವನೆಗಳ
ನಿಯಂತ್ರಣ, ಮತ್ತು ವೈಯಕ್ತಿಕ ಪರಿವರ್ತನೆಯ ಕಾರ್ಯವಿಧಾನಗಳ ಬಗ್ಗೆ ಭಗವದ್ಗೀತೆಯು ಆಧುನಿಕ
ಮನಶಾಸ್ತ್ರಜ್ಞರನ್ನೂ ಅಚ್ಚರಿಗೊಳಿಸುವಷ್ಟು ನಿಖರ ಒಳನೋಟಗಳನ್ನು ನೀಡುತ್ತದೆ.
ಪಾಶ್ಚಾತ್ಯ
ಸಿದ್ಧಾಂತಗಳು ಮಾನವ
ಅಹಂನ ಸ್ವರೂಪ, ಸುಪ್ತಪ್ರಜ್ಞೆಯ
ಕಂಡೀಷನಿಂಗ್, ಮತ್ತು ನಿರಾಸಕ್ತ ಕ್ರಿಯೆಗಳ ಅಧ್ಯಯನ-ಇವುಗಳನ್ನು ಆಧರಿಸಿಯೇ ಚಿಕಿತ್ಸೆಯನ್ನು ರೂಪುಗೊಳಿಸುತ್ತದೆ.
ಅರ್ಜುನನಿಗೆ ಕೃಷ್ಣನ ಉಪದೇಶವು ಕೂಡ ಇಂತಹುದೇ ಚಿಕಿತ್ಸೆಯ ಸ್ವರೂಪದಲ್ಲಿದೆ. ಅರ್ಜುನನ
ಗ್ಲಾನಿಯಿಂದ ಜನಿಸಿದ ಮಾನಸಿಕ ದೌರ್ಬಲ್ಯಗಳನ್ನು ನಿವಾರಿಸುವುದು ಭಗವದ್ಗೀತೆಯ ಉದ್ದೇಶ.
ವ್ಯಕ್ತಿಯ ಕರ್ತವ್ಯ ಹಾಗೂ ಇಚ್ಛಾಸ್ವಾತಂತ್ರ್ಯಗಳ ನಡುವಿನ ಗೊಂದಲಗಳನ್ನು ದಾಟುವ ವಿಧಾನಗಳನ್ನು ತಿಳಿಸಿಕೊಡುವಲ್ಲಿ ಭಗವದ್ಗೀತೆಯು ಅಚಲವಾದ ಸ್ಪಷ್ಟತೆಯಿಂದ ಮಾರ್ಗದರ್ಶನ
ಮಾಡುತ್ತದೆ. ಕೇವಲ ರೋಗಲಕ್ಷಣಗಳ ನಿರ್ವಹಣೆಗೆ ಸೀಮಿತಗೊಳಿಸದೆ, ಪರಿಪೂರ್ಣ
ಮಾನಸಿಕ ಒಳಿತಿನತ್ತ ಒಯ್ಯುವ ಭಗವದ್ಗೀತೆಯು, ತಾತ್ವಿಕ ಮತ್ತು ಆಧ್ಯಾತ್ಮಿಕ ಭಾಷೆಯಲ್ಲಿ ಇಡೀ ಮಾನವ ಜನಾಂಗಕ್ಕೆ
ಆಚರಣಯೋಗ್ಯವಾದ ಸಮಗ್ರ ಮಾದರಿಯನ್ನು ನೀಡಿದೆ.
ಈ
ಹಿನ್ನೆಲೆಯಲ್ಲಿ ಭಗವದ್ಗೀತೆ ಮತ್ತು ಆಧುನಿಕ ಮನೋವಿಜ್ಞಾನಗಳ ಕೆಲವು ಸಂಧಿಸ್ಥಾನಗಳನ್ನು ಗುರುತಿಸಬಹುದು.
ಭಗವದ್ಗೀತೆ ವಿವರಿಸುವ ಮನಸ್ಸು ಎಂಬುದು ಸಂವೇದನೆ ಮತ್ತು ಆಲೋಚನೆಗಳನ್ನು ಏಕತ್ರಗೊಳಿಸುವ ಸಾಧನವಾದರೆ, ಬುದ್ಧಿಯು ವಿವೇಚನೆ ಮತ್ತು
ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ. ಆಧುನಿಕ ಮನೋವಿಜ್ಞಾನದಲ್ಲಿ ಇವು ಕ್ರಮವಾಗಿ Cognitive
Apparatus ಮತ್ತು Executive Function ಗೆ ಸಂವಾದಿ.
ಅರ್ಜುನನು
ಕೃಷ್ಣನಲ್ಲಿ ಶರಣಾಗತನಾಗಿ ಮಾರ್ಗದರ್ಶನ ಕೇಳುವುದು ಆಧುನಿಕ ಮನೋವಿಜ್ಞಾನದಲ್ಲಿ ಬಾಧಿತ ಹಾಗೂ
ಚಿಕಿತ್ಸಕರ ನಡುವಿನ ಬಾಂಧವ್ಯದ ಸಂಕೇತ. ಕೃಷ್ಣನು
ಇಲ್ಲಿ ಅರ್ಜುನನ ಮನೋವೈಜ್ಞಾನಿಕ ತಡೆಗಳನ್ನು ವಿಶ್ಲೇಷಿಸುವ ಮತ್ತು ಸ್ವಧರ್ಮ ಸಾಕ್ಷಾತ್ಕಾರತ್ತ ನಿರ್ದೇಶಿಸುವ ಗುರು-ಸ್ವರೂಪಿ ಮನೋಚಿಕಿತ್ಸಕನ ಪಾತ್ರವನ್ನು
ನಿರ್ವಹಿಸುತ್ತಾನೆ.
ಭಗವದ್ಗೀತೆಯಲ್ಲಿ ಆತ್ಮವು ಶಾಶ್ವತವಾದ,
ಬದಲಾಗದ, ನಿಜವಾದ ಸತ್ಯ. ಅದನ್ನು
ಹೊರತುಪಡಿಸಿ, ಅದರ
ಅವಲಂಬನೆಯಲ್ಲಿರುವ ದೇಹ, ಮನಸ್ಸು,
ಬುದ್ಧಿ, ಮತ್ತು ಅಹಂಗಳು ನಾಶವಾಗುವ ಉಪಾಧಿಗಳು.
ಆಧುನಿಕ ಮನೋವಿಜ್ಞಾನವು ವ್ಯಕ್ತಿತ್ವವನ್ನು ಬಾಹ್ಯ ಪ್ರಭಾವದಿಂದ ರೂಪುಗೊಂಡ ಅಹಂನಿಂದ
ಗುರುತಿಸಿದರೆ, ಭಗವದ್ಗೀತೆ ಆತ್ಮಚಿಂತನೆಯ ಮೂಲಕ ಅಹಂನ ಮಿತಿಗಳನ್ನು ಮೀರುವ ಮಾರ್ಗವನ್ನು
ತೋರಿಸುತ್ತದೆ.
ಭಗವದ್ಗೀತೆಯು
ಮಾನಸಿಕ ದುಃಖಕ್ಕೆ ಮೂಲ ಕಾರಣಗಳನ್ನು ಪಟ್ಟಿ ಮಾಡುತ್ತದೆ. ಬಯಕೆ ಈಡೇರದಿದ್ದಾಗ ಕ್ರೋಧ ಉಂಟಾಗಿ,
ವಿವೇಕ ನಾಶವಾಗುತ್ತದೆ. ಭಾವನೆಗಳ ನಿಯಂತ್ರಣದಲ್ಲಿ ಆಗುವ ವೈಫಲ್ಯವನ್ನು ಆಧುನಿಕ
ಮನೋವಿಜ್ಞಾನ ಇದೇ ಪರಿಭಾಷೆಯಲ್ಲಿ ವಿವರಿಸುತ್ತದೆ. ಭಗವದ್ಗೀತೆಯಲ್ಲಿ ಹೇಳುವ ಸಂಸ್ಕಾರಗಳು ಮೂಲತಃ ಗತದ ಕಾರ್ಯಗಳು ಮತ್ತು ಅನುಭವಗಳಿಂದ
ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಮಾನಸಿಕ ಪ್ರವೃತ್ತಿಯ ಮುದ್ರೆಗಳು. ಆಧುನಿಕ ಮನೋವಿಜ್ಞಾನ
ವಿವರಿಸುವ “ಸುಪ್ತಪ್ರಜ್ಞೆಯಲ್ಲಿನ ನೆನಪುಗಳು ಮತ್ತು ನಂಬಿಕೆಗಳು ಯಾವ ರೀತಿ ನಮ್ಮ ವರ್ತನೆಯನ್ನು ನಿಯಂತ್ರಿಸುತ್ತವೆ” ಎಂಬುದಕ್ಕೆ ಸಂಸ್ಕಾರಗಳ
ವಿವರಣೆ ಹೊಂದಿಕೆಯಾಗುತ್ತದೆ.
ಭಗವದ್ಗೀತೆಯು
“ವ್ಯಕ್ತಿಯು ತನ್ನ ಹಿಂದಿನ ಕರ್ಮದ
ಬಂಧನಕ್ಕೆ ಒಳಗಾಗಿದ್ದರೂ, ಪ್ರಯತ್ನ ಮತ್ತು ಬುದ್ಧಿಗಳ ಸಮನ್ವಯದ ಮೂಲಕ ಭವಿಷ್ಯದ ಕರ್ಮವನ್ನು ಉತ್ತಮಗೊಳಿಸುವ ಸ್ವಾತಂತ್ರ್ಯ
ಹೊಂದಿರುತ್ತಾನೆ” ಎಂದು ಒತ್ತಿ ಹೇಳುತ್ತದೆ. ಇದು ಆಧುನಿಕ ಮನೋವಿಜ್ಞಾನದ "ಜೈವಿಕವಾಗಿ
ಮತ್ತು ಪರಿಸರದಿಂದ ಮಿತಿಗಳಿಗೆ ಒಳಪಟ್ಟಿದ್ದರೂ, ಧನಾತ್ಮಕ ಚಿಂತನೆ ಮತ್ತು ನಿರಂತರ ಕೃಷಿಯ ನೆರವಿನಿಂದ ಜೀವನದಲ್ಲಿ ಬದಲಾವಣೆ ಸಾಧಿಸುವ ಸಾಮರ್ಥ್ಯ ನಮ್ಮಲ್ಲಿದೆ" ಎಂಬ ನಂಬಿಕೆಗೆ
ಅನುಗುಣವಾಗಿದೆ.
ನಿರ್ಲೇಪ
ಕರ್ಮಯೋಗದಲ್ಲಿ ‘ಫಲದ ಮೇಲಿನ
ಆಸಕ್ತಿಯನ್ನು ಬದಿಗಿಟ್ಟು ಕರ್ತವ್ಯವನ್ನು ಮಾಡಬೇಕು’ ಎನ್ನುವ
ಮಂತ್ರ ಪ್ರಬಲವಾದ ‘ಅರಿವಿನ ಮರು-ರೂಪಿಸುವಿಕೆ’.
ಇದು ಮನುಷ್ಯನ
ಚಿತ್ತವೃತ್ತಿಯನ್ನು “ನಿಯಂತ್ರಿಸಲು ಅಸಾಧ್ಯವಾದ ಫಲಿತಾಂಶ”ಗಳಿಂದ ಹೊರತೆಗೆದು, “ನಿಯಂತ್ರಿಸಲು ಸಾಧ್ಯವಿರುವ ಪ್ರಯತ್ನ”ಗಳತ್ತ ಹೊರಳಿಸುತ್ತದೆ. ಈ ಮೂಲಕ ಆತಂಕ
ಮತ್ತು ಕಾರ್ಯಕ್ಷಮತೆಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಆಧುನಿಕ ಮನೋವೈದ್ಯದಲ್ಲಿ ಇಂತಹ ವಿಭಾಗೀಕರಣ
ಅತ್ಯಂತ ಫಲಪ್ರದ ಚಿಕಿತ್ಸೆಯ ಪದ್ಧತಿ.
ಸ್ಥಿತಪ್ರಜ್ಞ
ವ್ಯಕ್ತಿತ್ವವೆಂದರೆ ಸ್ಥಿರವಾದ
ಪ್ರಜ್ಞೆ ಹಾಗೂ ಬುದ್ಧಿಶಕ್ತಿಗಳನ್ನು ಹೊಂದುವುದು.
ಇಂತಹ ಸಾಧಕನು ಸುಖ-ದುಃಖ, ಯಶಸ್ಸು-ವೈಫಲ್ಯಗಳಿಂದ
ವಿಚಲಿತನಾಗದೆ ಭಾವನಾತ್ಮಕವಾಗಿ ಸಮಚಿತ್ತನಾಗಿರುತ್ತಾನೆ. ಸ್ಥಿತಪ್ರಜ್ಞ
ಪರಿಕಲ್ಪನೆಯು ಎಲ್ಲ ರೀತಿಯ ಲಾಭ-ನಷ್ಟಗಳನ್ನು
ಸಮಾನವಾಗಿ ಸ್ವೀಕರಿಸುವ ಮಾನಸಿಕ ಸ್ಥಿತಿಯನ್ನು ವಿವರಿಸುತ್ತದೆ. ಈ ಅತ್ಯುನ್ನತ ಮಾನಸಿಕ ಸ್ಥಿತಿ ಭಗವದ್ಗೀತೆಯ
ಆದರ್ಶಕ್ಕೆ ಸೂಕ್ತ ಉದಾಹರಣೆ. ಇದನ್ನು ಸಾಧಿಸಲು ನಾಲ್ಕು ಹಂತಗಳನ್ನು ವಿವರಿಸಲಾಗುತ್ತದೆ:
ಭಾವನೆಗಳ ಗ್ರಹಿಕೆ; ಗ್ರಹಿಸಿದ
ಭಾವಗಳ ಸೂಕ್ತ ಸಂಯೋಜನೆ; ಸಂಯೋಜನೆಯ ಅನುಕ್ರಮದಲ್ಲಿ ಅವುಗಳ ಅರ್ಥವಿವರಣೆ; ಮತ್ತು
ಅಂತಿಮವಾಗಿ ಅರ್ಥೈಸಿಕೊಂಡ ವಿವರಗಳ ಸರಿಯಾದ ನಿರ್ವಹಣೆ. ಈ
ನಾಲ್ಕು ಹಂತಗಳ ಪರಿಕಲ್ಪನೆಯು ಸಮಕಾಲೀನ ಮನೋವಿಜ್ಞಾನದಲ್ಲಿ ವ್ಯಕ್ತಪಡಿಸಲಾಗುವ ಭಾವನಾತ್ಮಕ ಸಮತೋಲನ ಮತ್ತು ನಿರ್ಲಿಪ್ತ ಚಿತ್ತವ್ಯಾಪಾರದ
ಕಲ್ಪನೆಯನ್ನು ನಿಕಟವಾಗಿ ಹೋಲುತ್ತದೆ. ಸ್ಥಿತಪ್ರಜ್ಞ ಸ್ಥಿತಿ ಎಲ್ಲರೂ ಪಡೆಯಬೇಕೆಂದು ಬಯಸುವ,
ಆದರೆ ಸುಲಭದಲ್ಲಿ
ದಕ್ಕಿಸಿಕೊಳ್ಳಲಾಗದ ಉನ್ನತ ಆದರ್ಶ.
ಭಗವದ್ಗೀತೆಯಲ್ಲಿ ಸತ್ತ್ವ, ರಜಸ್ಸು,
ಮತ್ತು ತಮಸ್ಸು ಎಂಬ ತ್ರಿಗುಣಗಳ
ಪರಿಕಲ್ಪನೆ ಮಹತ್ವದ್ದು. ಇವುಗಳ ಪರಸ್ಪರ ಮಥನ ಮಾನವನ ಸ್ವಭಾವ ಮತ್ತು ವರ್ತನೆಯನ್ನು
ನಿರ್ಧರಿಸುತ್ತವೆ. ಅಂತೆಯೇ, ಮಾನಸಿಕ ತಜ್ಞರು ‘ಸಹಜ
ಪ್ರವೃತ್ತಿ, ವಾಸ್ತವ, ಮತ್ತು
ನೈತಿಕತೆ’ ಎಂಬ ಮೂರು ಚಿತ್ತವೃತ್ತಿಗಳ ನಡುವಿನ ಸಂಘರ್ಷದಲ್ಲಿ
ಮಧ್ಯಸ್ಥಿಕೆ ವಹಿಸುವ ಆಲೋಚನೆಯ ಮಹತ್ವವನ್ನು ವಿವರಿಸುತ್ತಾರೆ. ಆಧುನಿಕ ಚಿಕಿತ್ಸಕರಿಗೂ ಸವಾಲು
ಎನಿಸುವ ಈ ಸಂಕೀರ್ಣ ಸಂದರ್ಭವನ್ನು ಪರಿಷ್ಕರಿಸಲು ಭಗವದ್ಗೀತೆಯು ಸ್ಪಷ್ಟವಾದ ಮಾರ್ಗಗಳನ್ನು
ಸೂಚಿಸುತ್ತದೆ. ಮಾನಸಿಕ ಸ್ಥಿಮಿತವನ್ನು ಸಾಧಿಸಲು ಶ್ರಮಿಸುವ ಆಧುನಿಕ ಮನೋವಿಶ್ಲೇಷಣಾತ್ಮಕ
ಪ್ರಯತ್ನಗಳಿಗೆ ಭಗವದ್ಗೀತೆಯು ಸೂಚಿಸುವ ನಿರ್ಲೇಪ (non-attachment)
ಮತ್ತು ವರ್ತಮಾನ ಸ್ಥಿತಿಯ
ಅರಿವಿನ (present-moment awareness) ಸೂಚನೆಗಳು
ತಳಹದಿಯಾಗಿವೆ.
ಭಗವದ್ಗೀತೆಯು
ಮತ್ತೆ-ಮತ್ತೆ ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿ ಸ್ವಧರ್ಮಕ್ಕೆ ಒತ್ತು ನೀಡುತ್ತದೆ; ಕ್ರಿಯೆಯ ಫಲಗಳಿಂದ ನಿರ್ಲಿಪ್ತವಾಗುವ ಮತ್ತು ಬಾಹ್ಯ ಸಂದರ್ಭಗಳ ಅನಿತ್ಯತೆಯನ್ನು ಸ್ವೀಕರಿಸುವ
ಮನಸ್ಥಿತಿಯನ್ನು ಬೋಧಿಸುತ್ತದೆ. ಇಂತಹ ಒಳನೋಟಗಳು, ಪರಿಸ್ಥಿತಿಗಳ ಪ್ರಭಾವವನ್ನು ಒಪ್ಪಿಕೊಂಡು, ಹೊಂದಿಕೊಳ್ಳಬಲ್ಲ ನಮ್ಯವನ್ನು ಬೆಳೆಸಿಕೊಳ್ಳುವ, ಮತ್ತು ಮಾನಸಿಕ ವೇದನೆಯನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ. ಇದೇ
ಫಲಿತಾಂಶಗಳು ಆಧುನಿಕ ಮನೋವಿಜ್ಞಾನದ ಸಂಶೋಧನೆಗಳೊಂದಿಗೆ ಹೊಂದಾಣಿಕೆ ಆಗುತ್ತವೆ.
ವ್ಯಕ್ತಿಯ
ವೈಯಕ್ತಿಕ ಬೆಳವಣಿಗೆಯ ಪಯಣದಲ್ಲಿ ಅನಿವಾರ್ಯವಾಗಿ ಒದಗುವ ದುಃಖಗಳನ್ನು ನಿರಾಕರಿಸುವುದು ಅಸಾಧ್ಯ.
ಆದರೆ, ದುಃಖದ ಬಗೆಗಿನ ದೃಷ್ಟಿಕೋನವನ್ನು ಪರಿವರ್ತಿಸುವುದು ಭಗವದ್ಗೀತೆಯ
ಪ್ರಮುಖ ಉಪದೇಶಗಳಲ್ಲಿ ಒಂದು. ದುಃಖವು ಮಾನವನ ಅಸ್ತಿತ್ವದ ಸಹಜ ಭಾಗ. ಇದು ಆತ್ಮವಿಮರ್ಶೆಯ ಹಾದಿಯನ್ನು ಹಿಡಿದು ಆಧ್ಯಾತ್ಮಿಕ ಮತ್ತು ಮಾನಸಿಕ ವಿಕಾಸಕ್ಕೆ ಪ್ರೇರಕ ಶಕ್ತಿಯಾಗಬಹುದು. ದುಃಖ ಮತ್ತು ಆಂತರಿಕ
ಸಂಘರ್ಷವನ್ನು ಎದುರಿಸುವುದರ ಮೂಲಕ ಪ್ರಬುದ್ಧತೆಯ ಹಂತಕ್ಕೆ ಏರುವ ಚಿಕಿತ್ಸಕ ಸಾಧ್ಯತೆಗಳನ್ನು
ಆಧುನಿಕ ಮನೋವಿಜ್ಞಾನ ಕೂಡ ಗ್ರಹಿಸಿದೆ. ಇದರ ಮೂಲ ಸ್ವರೂಪವನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ
ಕಾಣಬಹುದು.
ಕೃಷ್ಣನ
ಉಪದೇಶದ ನಂತರ ಅರ್ಜುನನು ಚೇತರಿಸಿಕೊಂಡು ಆಲೋಚನೆಯ ಸ್ಪಷ್ಟತೆ ಮತ್ತು ದೃಢ ಸಂಕಲ್ಪವನ್ನು
ಸಾಧಿಸುವುದು ಚಿಕಿತ್ಸಕ ಪರಿವರ್ತನೆಯ ಶ್ರೇಷ್ಠ
ಉದಾಹರಣೆಯಾಗಿ ನಿಲ್ಲುತ್ತದೆ. ಆಧುನಿಕ ಮನೋವಿಜ್ಞಾನದಲ್ಲಿ ಚಿಕಿತ್ಸೆಯೆಂಬುದು ಧ್ಯೇಯವನ್ನು
ಸಾಧಿಸುವ ಪ್ರಕ್ರಿಯೆ. ಅದರ ಸಾಧನೆಗೆ ಸರಿಯಾದ ಮಾರ್ಗದರ್ಶನ, ವಾಸ್ತವದ
ಜ್ಞಾನ, ಮತ್ತು ಶಿಸ್ತುಬದ್ಧ ಅಭ್ಯಾಸಗಳು ಮುಖ್ಯ. ಆಂತರಿಕ ಅಡೆತಡೆಗಳನ್ನು ನಿವಾರಿಸುವ ಯಥಾವತ್
ದಾರಿಗಳನ್ನು ಭಗವದ್ಗೀತೆ ಸೂಚಿಸಿದೆ.
ಸ್ವಧರ್ಮ
ಪರಿಪಾಲನೆ, ಭಾವನಾತ್ಮಕ ನಿಯಂತ್ರಣ, ಮತ್ತು ಮಾನಸಿಕ ಧೃಡತೆಗೆ ಸಂಬಂಧಿಸಿದ
ಪ್ರಾಚೀನ ಜ್ಞಾನ ಮತ್ತು ಸಮಕಾಲೀನ ಚಿಂತನೆಯ ನಡುವಿನ ಏಕತೆಯನ್ನು ಭಗವದ್ಗೀತೆ ಮತ್ತು ಆಧುನಿಕ
ಮನೋವಿಜ್ಞಾನದ ನಡುವಿನ ಸಂಧಿಸ್ಥಾನಗಳು ಸ್ಪಷ್ಟವಾಗಿ
ತೋರುತ್ತವೆ. ಆತ್ಮಾವಲೋಕನ, ನಿರ್ಲಿಪ್ತ
ಸ್ಥಿತಿ, ಮತ್ತು ಶಿಸ್ತುಬದ್ಧ ಅಭ್ಯಾಸಗಳಂತಹ ತತ್ತ್ವಗಳ ಮೂಲಕ ಎರಡೂ ಪರಂಪರೆಗಳು ಆಂತರಿಕ ಸಂಘರ್ಷವನ್ನು ನಿವಾರಿಸಲು ಮತ್ತು ಮಾನಸಿಕ
ಯೋಗಕ್ಷೇಮವನ್ನು ಸಾಧಿಸಲು ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತವೆ. ಇಂತಹ ಶ್ರೀಮಂತ ಒಳನೋಟಗಳಿಂದ ಭಗವದ್ಗೀತೆ ಆಧುನಿಕ ಮಾನಸಿಕ ದೃಷ್ಟಿಕೋನಗಳನ್ನು ಸಮೃದ್ಧಗೊಳಿಸುತ್ತಿದೆ. ಪ್ರಸ್ತುತ ಜಗತ್ತಿಗೆ
ಅಗತ್ಯವಾದ ಶಾಂತಿ, ನೈತಿಕ ಜೀವನಶೈಲಿ,
ಮತ್ತು ವೈಯಕ್ತಿಕ ಉತ್ತುಂಗವನ್ನು ಉತ್ತೇಜಿಸುವಲ್ಲಿ ಭಗವದ್ಗೀತೆಯ ಪಾತ್ರವನ್ನು ಜಗತ್ತು
ಮತ್ತೊಮ್ಮೆ-ಮಗದೊಮ್ಮೆ ಮನಗಾಣುತ್ತಿದೆ.
-------------------
ಡಿಸೆಂಬರ್ 2025 ರ ಸ್ವರ್ಣವಲ್ಲಿಪ್ರಭಾ
ಪತ್ರಿಕೆಯಲ್ಲಿ ಪ್ರಕಟವಾದ ಲೇಖನ










