ಮಂಗಳವಾರ, ಏಪ್ರಿಲ್ 9, 2024

 


ಹೆಸರಿನಲ್ಲೇನಿದೆ – ವೈದ್ಯಕೀಯ ಜಗತ್ತಿನ ಪರ್ಯಾಯ ಇತಿಹಾಸ

ಡಾ. ಕಿರಣ್ ವಿ.ಎಸ್.

ವೈದ್ಯರು

ವೈದ್ಯಕೀಯ ರಂಗದಲ್ಲಿ ಒಂದು ಹಳೆಯ ಜೋಕಿದೆ. ರೋಗಿಯೋರ್ವನಿಗೆ ವೈದ್ಯರು ಹೇಳುತ್ತಾರೆ “ನಿಮಗೆ ಒಳ್ಳೆಯ ಸುದ್ಧಿ ಮತ್ತು ಕೆಟ್ಟ ಸುದ್ಧಿ ಒಂದೇ ಮಾತಿನಲ್ಲಿ ತಿಳಿಸುತ್ತೇನೆ”. ರೋಗಿಗೆ ಅಚ್ಚರಿ. ಒಂದೇ ವಾಕ್ಯದಲ್ಲಿ ಎರಡೂ ಸುದ್ಧಿ ತಿಳಿಸಲು ಹೇಗೆ ಸಾಧ್ಯ? ವೈದ್ಯರು “ಹೊಸದೊಂದು ಕಾಯಿಲೆಗೆ ನಿಮ್ಮ ಹೆಸರನ್ನು ಇಡುತ್ತಿದ್ದೇವೆ” ಎನ್ನುತ್ತಾರೆ!    

ವೈದ್ಯಕೀಯದಲ್ಲಿ ಜೋಡಿ-ನಾಮಪದಗಳಿಗೆ ಬಹಳ ಮಹತ್ವವಿದೆ. ಯಾವುದೋ ಅಂಗ, ಅಂಗಾಂಶ, ಕಾಯಿಲೆ, ಪದ್ದತಿ, ಲೆಕ್ಕಾಚಾರ ಮೊದಲಾದುವು ಒಂದು ನಾಮಪದವಾದರೆ, ಅದಕ್ಕೆ ಸಂಬಂಧಿಸಿದ ಯಾರದ್ದೋ ಹೆಸರು ಅವುಗಳೊಡನೆ ಜೊತೆಗೂಡುವುದು ಮತ್ತೊಂದು ನಾಮಪದ. ಹೀಗೆ, ಆ ಇಡೀ ಹೆಸರು ಜೋಡಿ-ನಾಮಪದವಾಗುತ್ತದೆ. ಉದಾಹರಣೆಗೆ ಅಖಿಲೀಸನ ಹಿಮ್ಮಡಿ, ಶೇಷಾಚಲಂ ರಕ್ತನಾಳ, ಪಾಟ್ ಮೂಳೆ-ಮುರಿತ, ಡೌನ್ ಸಿಂಡ್ರೋಮ್, ಕ್ಯಾಸನೂರು ಕಾಡಿನ ಕಾಯಿಲೆ, ಬಾಂಬೆ ರಕ್ತದ ಗುಂಪು ಮುಂತಾದುವು. ಬಡಪಾಯಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹೆಸರನ್ನು ಮರೆತರೂ ಸರಿಯೇ; ಇಂತಹ ನೂರಾರು ಹೆಸರುಗಳನ್ನು ತಪ್ಪದೇ ನೆನಪಿಡಬೇಕಾಗುತ್ತದೆ. ಪರೀಕ್ಷಾ ನಿಮಿತ್ತಂ ಬಹುವಿಧ ನಾಮಧೇಯಂ!

ಈ ಹೆಸರುಗಳು ಎಲ್ಲಿಂದ ಬಂದವು ಎನ್ನುವುದು ಕುತೂಹಲದ ಸಂಗತಿ. ಕೆಲ ಹೆಸರುಗಳು ಗ್ರೀಕ್ ಮಿಥಕಗಳಿಂದ, ಕೆಲವು ರೋಮನ್ ಪುರಾಣಗಳಿಂದ, ಹಲವು ಆಯಾ ಸಂಗತಿಗಳನ್ನು ವಿವರಿಸಿದ ವೈದ್ಯರ ಹೆಸರಿನಿಂದ, ಕೆಲವು ರೋಗಿಗಳ ಆರೈಕೆಯಲ್ಲಿ ನಿರತವಾಗಿರುವಾಗ ಈ ಮುನ್ನ ತಿಳಿಯದ ವಿಶಿಷ್ಟ ಸಂಗತಿಯೊಂದನ್ನು ಗುರುತಿಸಿದ ನರ್ಸ್ಗಳಿಂದ, ಕೆಲವಷ್ಟು ಆಗಷ್ಟೇ ಪತ್ತೆಯಾದ ಕಾಯಿಲೆಯಿಂದ ಬಳಲಿದ ರೋಗಿಗಳಿಂದ, ಹಲವಷ್ಟು ಆಯಾ ಪ್ರದೇಶದ ಹೆಸರಿನಿಂದ, ಅಪರೂಪಕ್ಕೆ ಕಾಯಿಲೆ ಪತ್ತೆಯಾದ ಆಸ್ಪತ್ರೆಯ ಹೆಸರಿನಿಂದ, ಹೀಗೆ ಅವುಗಳ ಸ್ರೋತಗಳು ಹತ್ತು-ಹಲವಾರು.

ಜೋಡಿ-ನಾಮಪದಗಳು ಕೇವಲ ವೈದ್ಯಕೀಯ ರಂಗಕ್ಕೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಇವುಗಳ ಪಾಲಿವೆ. ಡಾರ್ವಿನ್ನನ ಸಿದ್ಧಾಂತ, ಅವೋಗಾಡ್ರೋ ಸಂಖ್ಯೆ, ರಾಮಾನುಜನ್ ಸಮೀಕರಣ, ಚಂದ್ರಶೇಖರ್ ಮಿತಿ, ರಾಮನ್ ಪರಿಣಾಮ, ಬೂಲಿಯನ್ ಗಣಿತ, ನ್ಯೂಟನ್ ನಿಯಮಗಳು, ಪೈಥಾಗೊರೊಸ್ ಪ್ರಮೇಯ, ಬೋಧಾಯನ ಸೂತ್ರ ಹೀಗೆ ವಿಜ್ಞಾನ ಕ್ಷೇತ್ರದ ಜೋಡಿ-ನಾಮಪದಗಳು ಎಲ್ಲರ ಗಣನೆಗೆ ಬಂದಿರುತ್ತವೆ. ಅರ್ಥಶಾಸ್ತ್ರದಲ್ಲಂತೂ ಇವುಗಳ ಬಳಕೆ ವಿಪರೀತ ಎನಿಸುವಷ್ಟಿದೆ. ಇವೆಲ್ಲವೂ ಬಹುತೇಕ ವ್ಯಕ್ತಿಸೂಚಕ.

ಆದರೂ, ವೈದ್ಯಕೀಯದಲ್ಲಿನ ಜೋಡಿ-ನಾಮಪದಗಳ ಖದರ್ರೇ ಬೇರೆ. ಇವು ಬಹುತೇಕ ನಮ್ಮ ಶರೀರಕ್ಕೆ ಸಂಬಂಧಪಟ್ಟ ಸಂಗತಿಗಳಾದ್ದರಿಂದ ಇವುಗಳಿವೆ ಮಹತ್ವ ಹೆಚ್ಚು. ಅಲ್ಲದೇ, ಇವುಗಳ ಹಿನ್ನೆಲೆ ಬಹಳ ರಸವತ್ತಾದುವು. ಕೆಲವೊಮ್ಮೆ ಕಾಯಿಲೆಯ ಒಣ ವಿವರಗಳಿಗಿಂತಲೂ ಅವುಗಳ ಹೆಸರಿನ ಹಿಂದಿರುವ ಕತೆಗಳೇ ಹೆಚ್ಚು ರೋಚಕ. ಆದರೆ, ಈ ರೀತಿ ಹೆಸರುಗಳ ಆಧಾರದ ಮೇಲೆ ಸಮಸ್ಯೆಗಳನ್ನು ಗುರುತಿಸುವ ವಿಧಾನ ಆಧುನಿಕ ಯುಗದಲ್ಲಿ ವೈಜ್ಞಾನಿಕವಲ್ಲ. ಹೀಗಾಗಿ, ಇಂತಹ ಜೋಡಿ-ನಾಮಪದಗಳನ್ನು ಕಡೆಗಣಿಸಿ, ಅವುಗಳ ಬದಲಿಗೆ ವೈಜ್ಞಾನಿಕ ಆಧಾರದ ಮೇಲೆ ಬೇರೊಂದು ಹೆಸರನ್ನು ಬಳಸುವ ವಿಧಾನ ಈಗಾಗಲೇ ಚಾಲ್ತಿಯಲ್ಲಿದೆ. ಇಷ್ಟಾದರೂ, ಹಳೆಯ ಗೆಳತಿಯ ನೆನಪಿನಂತೆ, ಜೋಡಿ-ನಾಮಪದಗಳ ಆಕರ್ಷಣೆ ವೈದ್ಯರಿಗೆ ಇನ್ನೂ ಹಸುರಾಗಿದೆ. ಹಿಂದಿನ ಪೀಳಿಗೆಯ ಬಹುತೇಕ ವೈದ್ಯರು ಈಗಲೂ ಹೊಸ ಹೆಸರಿನ ಬದಲಿಗೆ ಜೋಡಿ-ನಾಮಪದವನ್ನೇ ಬಳಸುತ್ತಾರೆ. ಕುತೂಹಲಕ್ಕೆ ಇಂತಹ ಕೆಲವೊಂದರ ನಿಷ್ಪತ್ತಿಯನ್ನು ಅರಿಯುವ ಸಾಹಸ ಮಾಡಬಹುದು.

ಆಕಾಶಕಾಯಗಳ ನಾಮಕರಣದಂತೆಯೇ ಶರೀರ ಭಾಗಗಳ ಅಥವಾ ಕಾಯಿಲೆಗಳ ಹೆಸರಿಸುವಿಕೆಯಲ್ಲಿ ಗ್ರೀಕ್ ಮಿಥಕಗಳ ದರ್ಬಾರು ಹೆಚ್ಚು. ನಮ್ಮ ಆಧುನಿಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಯೂರೋಪ್ ಮೂಲದ್ದು. ಹೀಗಾಗಿ, ಯಾವ್ಯಾವುದನ್ನು ಯಾವ್ಯಾವ ಹೆಸರಿನಿಂದ ಯೂರೋಪಿಯನ್ನರು ಗುರುತಿಸುತ್ತಿದ್ದರೋ, ಅದರ ತಲೆ-ಬುಡ ತಿಳಿಯದಿದ್ದರೂ ಅದೇ ಹೆಸರುಗಳನ್ನು ಬಳಸುವ ಪರಿಪಾಠ ನಮ್ಮದಾಯಿತು. ಈ ಬಹುತೇಕ ಹೆಸರುಗಳ ಮೂಲ ತಿಳಿಯದವರೂ ಇವುಗಳ ಪ್ರಾಯೋಗಿಕ ಬಳಕೆಯಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಗ್ರೀಕ್ ಮೂಲದ ಇಂತಹ ಕೆಲ ಹೆಸರುಗಳನ್ನು ನೋಡಬಹುದು:

ಅಖಿಲೀಸನ ಹಿಮ್ಮಡಿ: ಗ್ರೀಕ್ ಮಿಥಕಗಳ ಪರಿಚಯವಿರುವವರಿಗೆ ಅಖಿಲೀಸ್ ಎನ್ನುವ ಮಹಾವೀರನ ಬಗ್ಗೆ ತಿಳಿದಿರುತ್ತದೆ. ಆತ ಥೇಟಿಸ್ ಎಂಬ ಅಮರ ದೇವಿಯ ಮಗ. ಗ್ರೀಕ್ ಮಿಥಕಗಳಲ್ಲಿ ಭೂಮಿಯ ಜೀವಂತ ಲೋಕ ಮತ್ತು ಪಾತಾಳದ ಮರ್ತ್ಯಲೋಕದ ನಡುವೆ ಸ್ಟಿಕ್ಸ್ ಎನ್ನುವ ನದಿ ಹರಿಯುತ್ತದೆ. (ನಮ್ಮ ಪುರಾಣದಲ್ಲೂ ವೈತರಣಿ ಎನ್ನುವ ಇಂತಹ ನದಿಯಿದೆ). ಸ್ಟಿಕ್ಸ್ ನದಿಯಲ್ಲಿ ಮಿಂದವರಿಗೆ ಅಮರತ್ವ ಲಭಿಸುತ್ತದೆ ಎನ್ನುವ ಪ್ರತೀತಿ. ತನ್ನ ಮಗನೂ ಅಮರನಾಗಬೇಕೆಂದು ಥೇಟಿಸ್ ದೇವಿ ಅಖಿಲೀಸ್ ಇನ್ನೂ ಶಿಶುವಾಗಿದ್ದಾಗಲೇ ಆತನ ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವನ್ನು (tendon) ಹಿಡಿದು, ಆತನ ಇಡೀ ಶರೀರವನ್ನು ಸ್ಟಿಕ್ಸ್ ನದಿಯಲ್ಲಿ ಮುಳುಗಿಸುತ್ತಾಳೆ. (ಪ್ರಾಯಶಃ ಶಿಶು ಅಖಿಲೀಸನಿಗೆ ಕೈಗೆ ಸಿಗುವಷ್ಟು ತಲೆಗೂದಲು ಇರಲಿಲ್ಲ ಅನಿಸುತ್ತದೆ) ಆಕೆ ಹಿಡಿದಿದ್ದಷ್ಟು ದೇಹ ಭಾಗ ಹೊರತುಪಡಿಸಿ, ಅಖಿಲೀಸ್ ವಜ್ರಕಾಯನಾಗುತ್ತಾನೆ; ತನ್ನ ವಿಶಿಷ್ಟ ಸಾಮರ್ಥ್ಯದ ಕಾರಣದಿಂದ ಮಹಾವೀರನಾಗುತ್ತಾನೆ. ಟ್ರೋಜನ್ ಕದನದ ವೇಳೆ ಅಖಿಲೀಸನ ಶೌರ್ಯಕ್ಕೆ ಟ್ರಾಯ್ ತತ್ತರಿಸುತ್ತದೆ. ಕಡೆಗೆ ಬಾಣವೊಂದು ಅಕಸ್ಮಾತ್ತಾಗಿ ಅಖಿಲೀಸನ ಹಿಮ್ಮಡಿಗೆ ಇಳಿದಾಗ ಆತ ಮರಣಿಸುತ್ತಾನೆ. ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವಿಗೆ ಅಖಿಲೀಸನ ಹೆಸರಿದೆ. ಈ ಹೆಸರು ಜನಪ್ರಿಯ ಸಾಹಿತ್ಯದಲ್ಲಿ ರೂಪಕವಾಗಿಯೂ ಬಳಕೆಯಾಗುತ್ತದೆ. ಯಾರದ್ದಾದರೂ ನಿಶ್ಚಿತ ದೌರ್ಬಲ್ಯವನ್ನು ಅವರ “ಅಖಿಲೀಸನ ಹಿಮ್ಮಡಿ” ಎಂದು ಕರೆಯುವ ಪದ್ಧತಿಯಿದೆ. ಗ್ರೀಸಿನ ಒಲಿಂಪಸ್ ಬೆಟ್ಟದ ಮೇಲೆ ವಾಸವಿರುವ ಗ್ರೀಕ್ ದೇವತೆಗಳು ಆಗಾಗ ಬೆಟ್ಟ ಹತ್ತಿಳಿದು ತಮ್ಮ ಹಿಮ್ಮಡಿಯನ್ನು ನೋಯಿಸಿಕೊಂಡಾರು. ಆಗ ಅವರುಗಳು “ಈ ಬೆಟ್ಟವೇ ನಮ್ಮ ಪಾಲಿಗೆ ಅಖಿಲೀಸನ ಹಿಮ್ಮಡಿ” ಎಂದು ಶ್ಲೇಷಾರ್ಥದಲ್ಲಿ ಕೊರಗಬಹುದು!

ಅಟ್ಲಾಸ್: ಗ್ರೀಕ್ ಮಿಥಕಗಳಲ್ಲಿ ಬೃಹದ್ದೇಹಿ ಟೈಟನ್ನರ ಮತ್ತು ದೇವರುಗಳ ಸಂಘರ್ಷದ ಕತೆಯಿದೆ. ಈ ಮಹಾಕದನದಲ್ಲಿ ದೇವರುಗಳು ಗೆದ್ದು ಟೈಟನ್ನರು ಸೋಲುವಂತಾಗುತ್ತದೆ. ಸೋತ ಟೈಟನ್ನರನ್ನು ದೇವರುಗಳು ಕ್ರೂರವಾಗಿ ಶಿಕ್ಷಿಸುತ್ತಾರೆ. ಇಂತಹ ಟೈಟನ್ನರಲ್ಲಿ ಅಟ್ಲಾಸ್ ಒಬ್ಬ. ಆತನಿಗೆ ಆಕಾಶವನ್ನು ಬೀಳದಂತೆ ತನ್ನ ಬೆನ್ನಿನ ಮೇಲೆ ಹಿಡಿದು ನಿಂತಿರುವ ನಿರಂತರ ಕೆಲಸ ನೀಡಲಾಗುತ್ತದೆ. ಮಾನವ ಶರೀರದಲ್ಲಿ ತಲೆಬುರುಡೆಯಿಂದ ನರವ್ಯೂಹ ಬೆನ್ನುಮೂಳೆಗೆ ಇಳಿಯುತ್ತದೆ. ಬೆನ್ನುಮೂಳೆ ಮೂಲತಃ 33 ಮೂಳೆಗಳ ಘಟಕ. ಇದರಲ್ಲಿ ಅತ್ಯಂತ ಮೇಲಿನ ಮೂಳೆ ತಲೆಬುರುಡೆಯನ್ನು ಹಿಡಿದು ನಿಂತಿರುವಂತೆ ಕಾಣುತ್ತದೆ. ಈ ಮೂಳೆಗೆ ಅಟ್ಲಾಸ್ ಎನ್ನುವ ಹೆಸರಿದೆ. ನಾವು “ಇಲ್ಲ; ಆಗುವುದಿಲ್ಲ” ಎಂದು ಸೂಚಿಸಲು ತಲೆಯನ್ನು ಎಡ-ಬಲಗಳತ್ತ ಆಡಿಸುತ್ತೇವಷ್ಟೆ? ಆ ಚಲನೆಗೆ ಕಾರಣ ಈ ಮೂಳೆ. ತನ್ನ ಶಿಕ್ಷೆ ಏನೆಂದು ತಿಳಿದಾಗ ಅಟ್ಲಾಸ್ ಮಹಾಶಯ ತನ್ನ ತಲೆಯನ್ನು ಎಡ-ಬಲಗಳಿಗೆ ಆಡಿಸಿದ್ದರೆ ಈ ಹೆಸರಿನ ಭಾರ ಹೊರುವ ದುರವಸ್ಥೆ ಆತನಿಗೆ ಬರುತ್ತಿರಲಿಲ್ಲವೋ ಏನೋ! 

ಐರಿಸ್: ಕಣ್ಣಿನ ಮಧ್ಯದಲ್ಲಿರುವ ಗಾಢವರ್ಣದ ವೃತ್ತಾಕಾರ ಭಾಗವನ್ನು ಐರಿಸ್ ಎನ್ನುತ್ತಾರೆ. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ವರ್ಣದ ಛಾಯೆ ಹೊಂದಿರುತ್ತದೆ. ಐರಿಸ್ ಎನ್ನುವುದು ಗ್ರೀಕರ ಮಳೆಬಿಲ್ಲಿನ ದೇವತೆಯ ಹೆಸರು. ಗ್ರೀಕ್ ದೇವರುಗಳು ಒಲಿಂಪಸ್ ಎನ್ನುವ ಆಗಸದ ಪರ್ವತದ ಮೇಲೆ ವಾಸವಾಗಿರುತ್ತಾರೆ ಎನ್ನುವ ಪ್ರತೀತಿಯಿದೆ. ಐರಿಸ್ ದೇವಿ ದೇವರುಗಳ ಸಂದೇಶವಾಹಕಿಯಾಗಿ, ಮಳೆಬಿಲ್ಲನ್ನು ಸೃಜಿಸಿ, ಆಗಸದಿಂದ ಭೂಮಿಗೆ ಇಳಿಯುತ್ತಾಳೆ ಎನ್ನುವ ರಮ್ಯ ಕತೆ. ಅಂತೆಯೇ ವಾಪಸ್ ಹೋಗುವಾಗ ತನ್ನ ಹೂಜಿಯಲ್ಲಿ ಸಮುದ್ರದ ನೀರನ್ನು ಹೊತ್ತು ಮೋಡಗಳ ಮೇಲೆ ಸಿಂಪಡಿಸಿ ಮಳೆಗೆ ಕಾರಣಳಾಗುತ್ತಾಳೆ ಎನ್ನುವ ಕತೆಯೂ ಇದೆ. ಮಳೆಬಿಲ್ಲಿನ ಏಳು ಬಣ್ಣಗಳು ಆಕೆಯ ದಿರಿಸು. ಕಣ್ಣಿನ ಪಾಪೆಯ ಸುತ್ತಲಿನ ಐರಿಸ್ ಹಲವಾರು ಬಣ್ಣಗಳಲ್ಲಿ ಇರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಆ ಹೆಸರು.

ನಾರ್ಸಿಸಿಸಮ್: ಮನೋವಿಜ್ಞಾನದಲ್ಲಿ ಆತ್ಮರತಿಯಿಂದ ಬಳಲುವವರಿಗೆ ಈ ಹೆಸರು. ಗ್ರೀಕ್ ಮಿಥಕಗಳಲ್ಲಿ ನಾರ್ಸಿಸಸ್ ಎಂಬಾತನ ಪ್ರಸ್ತಾಪವಿದೆ. ಆತ ಬಹಳ ಸುಂದರ ವ್ಯಕ್ತಿ. ಆತನ ಪ್ರೇಮಕ್ಕಾಗಿ ಹಂಬಲಿಸುವ ಹೆಂಗಳೆಯರು ಎಷ್ಟೋ ಮಂದಿ. ಆದರೆ, ಆತ ಯಾರನ್ನೂ ಪುರಸ್ಕರಿಸಲಿಲ್ಲ. ಒಮ್ಮೆ ನಿರ್ಮಲವಾದ ನೀರಿನ ಕೊಳವೊಂದರಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ಕಂಡ ಆತ ತನ್ನ ಬಗ್ಗೆ ತಾನೇ ಮೋಹಗೊಂಡು, ಆ ಪ್ರತಿಬಿಂಬವನ್ನೇ ದಿಟ್ಟಿಸುತ್ತಾ ಇದ್ದು ಬಿಟ್ಟ. ಅದು ಯಾವ ಗೀಳಿನ ಸ್ವರೂಪ ಪಡೆಯಿತೆಂದರೆ, ಆ ಪ್ರತಿಬಿಂಬದಿಂದ ಆತನ ದೃಷ್ಟಿ ದೂರಾಗಲೇ ಇಲ್ಲ. ಹೀಗೆ ತನ್ನದೇ ಬಿಂಬವನ್ನು ನೋಡುತ್ತಾ, ಉಳಿದ ಪ್ರಪಂಚವನ್ನು ಮರೆತು ಕೊನೆಗೆ ಕಡೆಯುಸಿರೆಳೆದ. ತಮ್ಮ ಗುಣಲಕ್ಷಣಗಳ ಬಗ್ಗೆ ಅಂಧಾಭಿಮಾನವಿರುವವರ ಬಗ್ಗೆ ಈ ಹೆಸರು ಬಳಕೆಯಾಗುತ್ತದೆ. ಇಂತಹ ಲಕ್ಷಣದ ಲಕ್ಷಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ!

ಆಹಾರಕ್ಕೂ ಕಾಯಿಲೆಗಳಿಗೂ ಇರುವ ಸಂಬಂಧವನ್ನು ಎಲ್ಲ ಆರೋಗ್ಯ ಪದ್ಧತಿಗಳೂ ವಿವರಿಸುತ್ತವೆ. ಆದರೆ, ಕಾಯಿಲೆಗಳಿಗೆ, ಶರೀರದ ಅಸಹಜ ಸ್ಥಿತಿಗಳಿಗೂ ಆಹಾರ ವಸ್ತುಗಳ ಹೆಸರಿಡುವ ವಿಧಾನ ಹೇಗೋ ಬೆಳೆದುಬಿಟ್ಟಿದೆ. ಇದು ಕೂಡ ಬಹುತೇಕ ಯೂರೋಪ್ ಮೂಲದ್ದೇ ಆದರೂ, ಅಪರೂಪಕ್ಕೆ ಕೆಲವೊಂದು ದೇಸೀ ಮೂಲದ್ದೂ ಇರಬಹುದು. ಕಾಯಿಲೆಗಳ ಹೆಸರುಗಳನ್ನು ಆಹಾರ ವಸ್ತುಗಳಿಂದ ಗುರುತಿಸಿದರೆ ಆಯಾ ಆಹಾರಗಳನ್ನು ಕಂಡಾಗಲೆಲ್ಲ ಈ ಸಂಬಂಧ ನೆನಪಾಗಿ ಬಳಸಲು ಮುಜುಗರ ಎನಿಸಬಹುದು. ಪ್ರಾಯಶಃ ಇಂತಹ ಹೆಸರುಗಳನ್ನು ಮೊದಲು ಸೂಚಿಸಿದವರಿಗೆ ಈ ದ್ವಂದ್ವದ ಅಂದಾಜು ಇರಲಿಕ್ಕಿಲ್ಲ. ಉದಾಹರಣೆಗೆ, ಇಂಪೆಟಿಗೋ ಎನ್ನುವ ಚರ್ಮದ ಕಾಯಿಲೆಯಲ್ಲಿ ವ್ರಣಗಳು ಮಾಯುವಾಗ ಅದರ ಮೇಲ್ಪದರ ಹಳದಿಮಿಶ್ರಿತ ಕಂದು ಬಣ್ಣ ತಳೆಯುತ್ತದೆ. ಇದನ್ನು ಜೇನುತುಪ್ಪದ ಬಣ್ಣಕ್ಕೆ ಹೋಲಿಸಿ “ಹನಿ ಕಲರ್ಡ್ ಕ್ರಸ್ಟ್” ಎನ್ನುತ್ತಾರೆ. ಜೇನುಹುಳುಗಳು ನಮಗಿಂತ ಬುದ್ಧಿಶಾಲಿ ಎನ್ನಲು ಈ ಹೆಸರು ಒಂದು ನಿದರ್ಶನ!

ಒಂದು ಬಗೆಯ ಮೇದಸ್ಸಿನ ಆಮ್ಲ ಶರೀರದಲ್ಲಿ ಜೀರ್ಣವಾಗಲು ಅಗತ್ಯವಾದ ಕಿಣ್ವದ ಅನುಪಸ್ಥಿತಿಯಲ್ಲಿ ರೋಗಿಯ ಮೂತ್ರದ ವಾಸನೆ ಸುಟ್ಟ ಸಕ್ಕರೆಯ ಹರಳಿನ ರೀತಿಯಲ್ಲಿರುತ್ತದೆ. ಇದನ್ನು “ಮೇಪಲ್ ಸಿರಪ್ ಯೂರಿನ್ ಡಿಸೀಜ್” ಎನ್ನುತ್ತಾರೆ. ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳು ಈ ಹೆಸರನ್ನು ಬಳಸುತ್ತಾರಾದರೂ, ಇದರ ಹಿನ್ನೆಲೆ ತಿಳಿದವರು ತೀರಾ ಕಡಿಮೆ ಮಂದಿ. ಸಕ್ಕರೆಯ ಅವಿಷ್ಕಾರಕ್ಕೂ ಮುನ್ನ ಸಿಹಿಯ ಸ್ವಾದಕ್ಕೆ ಬಳಕೆ ಆಗುತ್ತಿದ್ದವು ಜೇನುತುಪ್ಪ ಮತ್ತು ಕೆಲವು ಮರಗಳ ಮೂಲದಿಂದ ಪಡೆದ ರಸಗಳು. ಮೇಪಲ್ ಎಂಬುದು ಇಂತಹ ಒಂದು ಮರ. ಸಿಹಿಯಾದ ರಸವನ್ನು ಸ್ರವಿಸುವ ಮೇಪಲ್ ಮರದ ಮೂಲ ಕೆನಡಾ ದೇಶ. ಕೆನಡಾದ ರಾಷ್ಟ್ರಧ್ವಜದ ಮೇಲಿರುವ ಎಲೆ ಮೇಪಲ್ ಮರದ್ದು. ಯೂರೋಪಿಯನ್ನರು ಅಮೆರಿಕಾ ಖಂಡಕ್ಕೆ ಲಗ್ಗೆಯಿಡುವ ಎಷ್ಟೋ ಶತಮಾನಗಳ ಮುನ್ನವೇ ಅಲ್ಲಿನ ಮೂಲನಿವಾಸಿಗಳು ಮೇಪಲ್ ಮರದ ಸಿಹಿಯಾದ ರಸವನ್ನು ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಮೇಪಲ್ ಸಿರಪ್ ಯೂರಿನ್ ಡಿಸೀಜ್ ರೋಗಿಗಳ ಮೂತ್ರದ ವಾಸನೆ ಈ ಮೇಪಲ್ ಸಿರಪ್ ವಾಸನೆಯನ್ನು ಹೋಲುತ್ತದೆ ಎಂದು ಈ ಹೆಸರು. ಜೀವನದಲ್ಲಿ ಮೇಪಲ್ ಸಿರಪ್ ಅನ್ನು ಎಂದೂ ಕಂಡಿಲ್ಲದ ಏಷ್ಯಾ, ಆಫ್ರಿಕನ್ ಖಂಡಗಳ ವೈದ್ಯಕೀಯ ವಿದ್ಯಾರ್ಥಿಗಳೂ ಇದೇ ಹೆಸರನ್ನು ಬಳಸುವುದು ವಿಪರ್ಯಾಸ. ಆದರೆ ಈ ಕಾಯಿಲೆ ತೀರಾ ಅಪರೂಪವಾದ್ದರಿಂದ ಹೆಚ್ಚು ಮಂದಿ ವೈದ್ಯರು ತಮ್ಮ ಜೀವನದಲ್ಲಿ ಇಂತಹ ಒಬ್ಬ ರೋಗಿಯನ್ನೂ ಕಂಡಿರುವುದಿಲ್ಲ. ಹೀಗಾಗಿ, “ತಿಳಿದಿಲ್ಲದ ಮೇಪಲ್ ಸಿರಪ್ ಗೆ ಕಂಡಿಲ್ಲದ ರೋಗಿಯ ಸಾಕ್ಷಿ” ಎಂದು ಗಾದೆ ಮಾಡಬಹುದು!

ಅಮೀಬಾ ಎಂಬ ಒಂದು ಬಗೆಯ ಏಕಕೋಶ ಪರಾವಲಂಬಿ ಜೀವಿಯಿಂದಾಗುವ ಸೋಂಕಿನಿಂದ ಯಕೃತ್ತಿನಲ್ಲಿ ಕೀವು ಉಂಟಾಗುತ್ತದೆ. ಈ ಕೀವನ್ನು ಯೂರೋಪಿಯನ್ ರೋಗಶಾಸ್ತ್ರಜ್ಞರು “ಆಂಕವಿ ಸಾಸ್ ಪಸ್” ಎಂದು ಕರೆಯುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಎಲ್ಲರೂ ಇದನ್ನು ಅದೇ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೀಷ್ ಮೂಲದವರಲ್ಲದ ವಿದ್ಯಾರ್ಥಿಗಳಿಗೆ ಈ ಹೆಸರಿನ ಹಿನ್ನೆಲೆ ತಿಳಿದಿರುವ ಸಾಧ್ಯತೆ ಇಲ್ಲ. ಈ ಹೆಸರಿನ ಬಳಕೆ ಆರಂಭವಾದದ್ದು ಸುಮಾರು 17ನೆಯ ಶತಮಾನದ ವೇಳೆಗೆ. ಆಗ ಆಂಕವಿ ಸಾಸ್ ಎನ್ನುವುದು ಯೂರೋಪಿನ ಆಹಾರದಲ್ಲಿ ಸಾಕಷ್ಟು ಬಳಕೆಯಲ್ಲಿತ್ತು. ಈಗ ಅದರ ಉಪಯೋಗ ತೀರಾ ಕಡಿಮೆ. ಅಂತರ್ಜಾಲದ ವ್ಯಾಪಕ ಬಳಕೆಗೆ ಮುನ್ನ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಂಕವಿ ಸಾಸ್ ಎಂದರೇನು, ಅದು ಹೇಗಿರುತ್ತದೆ ಎನ್ನುವುದು ತಿಳಿದಿರಲಿಲ್ಲ. ಈಗಲೂ ಅನೇಕರು ಆಂಕವಿ ಎನ್ನುವುದು ಒಂದು ಹಣ್ಣು ಅಥವಾ ತರಕಾರಿ ಇರಬಹುದು ಎಂದೇ ನಂಬಿದ್ದಾರೆ. ಆದರೆ ಆಂಕವಿ ಎನ್ನುವುದು ಸಮುದ್ರಗಳಲ್ಲಿ ಕಾಣುವ ಮೀನಿನ ಒಂದು ಪ್ರಭೇದ. ಇದನ್ನು ಅರೆದು ನುಣ್ಣನೆ ಪೇಸ್ಟ್ ಮಾಡಬಹುದು. ಅದು ಬಿಳಿಯ ಬಣ್ಣದ್ದು. ಆದರೆ, ಆಂಕವಿ ಮೀನನ್ನು ಅರೆದು, ಅದಕ್ಕೆ ಕೆಲವೊಂದು ಮಸಾಲೆಯುಕ್ತ ಪದಾರ್ಥಗಳನ್ನು ಸೇರಿಸಿ ಮಾಡುವ ದ್ರವರೂಪದ ಸಾಸ್ ಕಂದು ಬಣ್ಣದ್ದು. ತಮಾಷೆಯೆಂದರೆ, ಅಮೀಬಾ ಮೂಲದ ಯಕೃತ್ತಿನ ಸೋಂಕಿನ ಬಹುತೇಕ ರೋಗಿಗಳ ಕೀವು ಆಂಕವಿ ಸಾಸ್ ಮಾದರಿಯಲ್ಲಿ ಇರುವುದೇ ಇಲ್ಲ. ಆದರೆ, ಆ ಕೀವು ಹೇಗೇ ಇದ್ದರೂ ಅದನ್ನು “ಆಂಕವಿ ಸಾಸ್ ಪಸ್” ಎಂದೇ ಕರೆಯುತ್ತಾರೆ. ಏಕೆಂದರೆ, ಆಂಕವಿ ಸಾಸ್ ಹೇಗಿರುತ್ತದೆ ಎನ್ನುವುದೇ ಯಾರಿಗೂ ತಿಳಿದಿಲ್ಲವಲ್ಲ! ಇದೊಂದು ರೀತಿ ಹುಟ್ಟುಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ. ಜೋಡಿ-ನಾಮಪದಗಳ ವಿರೋಧಿಗಳಿಗೆ ಈ ವಿಷಯ ಅಚ್ಚುಮೆಚ್ಚು.

ಹೃದಯದ ಮಾಂಸಖಂಡಗಳ ದೌರ್ಬಲ್ಯದಿಂದ ಹೃದಯ ವೈಫಲ್ಯ ಉಂಟಾಗುತ್ತದೆ. ಆಗ ರಕ್ತಸಂಚಾರದಲ್ಲಿ ಏರುಪೇರಾಗಿ ಯಕೃತ್ತಿನಲ್ಲಿ ರಕ್ತ ನಿಂತು ಶೇಖರವಾಗುತ್ತದೆ. ಇದರಿಂದ ಯಕೃತ್ತಿನ ರಕ್ತನಾಳಗಳು ಹಿಗ್ಗಿ, ಜೀವಕೋಶಗಳು ಉಬ್ಬುತ್ತವೆ. ಇದನ್ನು ಹಿಂದಿನ ಕಾಲದಲ್ಲಿ “ನಟ್ಮೆಗ್ ಲಿವರ್” ಎಂದು ಗುರುತಿಸುತ್ತಿದ್ದರು. ಆಧುನಿಕ ವೈದ್ಯ ಬೆಳೆಯುವ ಮುನ್ನ ನಟ್ಮೆಗ್ (ಕನ್ನಡದಲ್ಲಿ ಜಾಯಿಕಾಯಿ ಅಥವಾ ಜಾಕಾಯಿ) ತನ್ನ ಔಷಧ ಗುಣಗಳಿಗೆ ಜಗತ್ತಿನಾದ್ಯಂತ ಪ್ರಸಿದ್ಧವಾಗಿತ್ತು. ಆಗಿನ ವೈದ್ಯರು ಜಾಕಾಯನ್ನು ತೇಯ್ದು, ಅದರ ಗಂಧವನ್ನು ಔಷಧಗಳಲ್ಲಿ ಬಳಸುತ್ತಿದ್ದರು. ಹೀಗೆ ತೇಯ್ದ ಅರ್ಧ ಜಾಕಾಯಿಯ ಭಾಗ ಉಬ್ಬಿದ ಜೀವಕೋಶಗಳ ಯಕೃತ್ತಿನಂತೆ ಕಾಣುತ್ತಿತ್ತು ಎಂಬ ಕಾರಣಕ್ಕೆ ಯೂರೋಪಿನ ವೈದ್ಯರು ಅದನ್ನು ನಟ್ಮೆಗ್ ಲಿವರ್ ಎಂದು ಹೆಸರಿಸಿದರು. ಈಗಿನ ಕಾಲದಲ್ಲಿ ಜಾಕಾಯಿಯ ಬಗ್ಗೆ ಬಲ್ಲವರು ತೀರಾ ಕಡಿಮೆ. ಕೆಲವೊಂದು ಸಾಂಪ್ರದಾಯಿಕ ಹಿಂದೂಗಳಿಗೆ ಮತ್ತು ಪಾಕಶಾಸ್ತ್ರ ನಿಪುಣರಿಗೆ ಜಾಕಾಯಿಯ ಬಗ್ಗೆ ತಿಳಿದಿರಬಹುದು. ಆದರೆ ಜಗತ್ತಿನ ಎಲ್ಲೆಡೆ ಈ ಕಾಯಿಲೆಯನ್ನು ಈಗಲೂ ನಟ್ಮಗ್ ಲಿವರ್ ಎಂದೇ ಕರೆಯುತ್ತಾರೆ. ಉಳಿದ ಹೆಸರುಗಳಿಗೆ ವ್ಯತಿರಿಕ್ತವಾಗಿ ಈ ಬಗ್ಗೆ “ನಿಮಗೆ ತಿಳಿಯದ್ದು ನಮಗೆ ತಿಳಿದಿದೆ” ಎಂದು ನಾವು ಭಾರತೀಯರು ಯೂರೋಪಿಯನ್ನರಿಗೆ, ಅಮೆರಿಕನ್ನರಿಗೆ ಹೇಳಬಹುದು.

ಒಟ್ಟಿನಲ್ಲಿ ಜೋಡಿ-ನಾಮಪದಗಳು ವೈದ್ಯಕೀಯ ಇತಿಹಾಸವನ್ನು ತನ್ನದೇ ಆದ ರೀತಿಯಲ್ಲಿ ಕಟ್ಟಿಕೊಡಬಲ್ಲವು. ಬಹಳಷ್ಟು ಬಾರಿ ಮುಖ್ಯ ಕತೆಗಿಂತ ಉಪಕತೆಗಳೇ ಹೆಚ್ಚು ರೋಚಕ. ಜೋಡಿ-ನಾಮಪದಗಳು ವೈದ್ಯಕೀಯ ಜಗತ್ತಿನ ಇಂತಹ ಕುತೂಹಲಕಾರಿ ಉಪಕತೆಗಳು. ಇವನ್ನು ಬೆದಕಿದಷ್ಟೂ ಬೆರಗು; ಅರಿತಷ್ಟೂ ಸೋಜಿಗ; ಕಲಿತಷ್ಟೂ ಹಸಿವು!

-----------------------

ಏಪ್ರಿಲ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಏಪ್ರಿಲ್ 2024 ರ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/6ab96b3caaca438a79951078399b6ab0ddf34dc5202404.pdf.html?fbclid=IwAR24lr9rq-iSh1ZEKUIznaVpiAv7KR2r0cOZIemeUC6tSY35dn8wKfr5RfU_aem_ARJ3atVJRkr2YSoOG2iKIqbXab00gbsrM4NiJMKG8QlKzJkMwnySDOu0epAjjzxt1QmIre63RaeiTU7vSpTjnHEy

 


ಸಮಯಸಾಧಕ ಸೋಂಕುಗಳು – ಎಚ್ಚರವಿರಲಿ

ಡಾ. ಕಿರಣ್ ವಿ.ಎಸ್.

ವೈದ್ಯರು

 ಸಮಯಸಾಧಕರು ಅಥವಾ ಅವಕಾಶವಾದಿಗಳ ಬಗ್ಗೆ ಎಚ್ಚರದಿಂದ ಇರಬೇಕು ಎನ್ನುವ ಕಿವಿಮಾತನ್ನು ಚಿಕ್ಕಂದಿನಿಂದ ಕೇಳಿರುತ್ತೇವೆ. ಒಳ್ಳೆಯ ಕಾಲದಲ್ಲಿ ಹಿತೈಷಿಗಳ ಸೋಗಿನಲ್ಲಿ ಇದ್ದು, ಕೆಟ್ಟ ಕಾಲ ಬಂದಾಗ ಅದರ ಲಾಭವನ್ನು ಪಡೆದು, ಈಗಾಗಲೇ ನೊಂದಿರುವವರನ್ನು ಮತ್ತಷ್ಟು ತುಳಿದು ಸಂತಸ ಪಡುವ ಮಂದಿಯನ್ನು ಒಂದಲ್ಲ ಒಂದು ಬಾರಿಯಾದರೂ ಕಂಡಿರುತ್ತೇವೆ. ಸೋಂಕುಗಳ ವಿಷಯದಲ್ಲೂ ಹೀಗೆ ಆಗುತ್ತದೆ. ನಮ್ಮ ಶರೀರದಲ್ಲಿ ಹಲವಾರು ಪರೋಪಜೀವಿಗಳು ಸದಾ ಇರುತ್ತವೆ. ನಮ್ಮ ಆರೋಗ್ಯ ಚೆನ್ನಾಗಿರುವಾಗ ಈ ಪರೋಪಜೀವಿಗಳು ಯಾವುದೇ ಅಪಾಯ ಮಾಡುವುದಿಲ್ಲ. ಆದರೆ ಯಾವುದಾದರೂ ಕಾರಣಕ್ಕೆ ರೋಗನಿರೋಧ ಶಕ್ತಿ ಕುಗ್ಗಿದಾಗ ಇವು ತಮ್ಮ ಪ್ರಭಾವ ತೋರುತ್ತವೆ. ಇಂತಹ ಕಾಯಿಲೆಗಳಿಗೆ ಸಮಯಸಾಧಕ ಸೋಂಕುಗಳು ಎನ್ನಬಹುದು. ಇಂತಹ ಸೋಂಕುಗಳನ್ನು ಉಂಟುಮಾಡುವ ಪರೋಪಜೀವಿಗಳು ಅನೇಕ ಬಗೆಯವು; ಬ್ಯಾಕ್ಟೀರಿಯಾ, ಫಂಗಸ್, ಏಕಾಣುಕೋಶಗಳು, ವೈರಸ್ ಇದರಲ್ಲಿ ಪ್ರಮುಖವಾದುವು. ಕರುಳಿನ ಕಾಯಿಲೆ, ಶ್ವಾಸಕೋಶಗಳ ಸೋಂಕು, ಚರ್ಮದ ಸಮಸ್ಯೆ, ರಕ್ತದ ನಂಜು, ಮೊದಲಾದುವು ಈ ಸಮಯಸಾಧಕ ಪರೋಪಜೀವಿಗಳ ಪರಿಣಾಮ.

 ಸಮಯಸಾಧಕ ಸೋಂಕುಗಳು ಯಾರಲ್ಲಿ ಉಂಟಾಗುತ್ತವೆ? ಮುಖ್ಯವಾಗಿ ಶರೀರದ ರೋಗನಿರೋಧ ಶಕ್ತಿ ಕುಂಠಿತವಾದಾಗ ಅದರ ಅವಕಾಶ ಪಡೆದು ಇಂತಹ ಸೋಂಕು ತಗುಲುತ್ತದೆ. ಅಪೌಷ್ಟಿಕತೆ, ವೃದ್ಧಾಪ್ಯ, ಮಧುಮೇಹ, ಭೌತಿಕ ಹಾಗೂ ಮಾನಸಿಕ ದಣಿವು, ಖಿನ್ನತೆ, ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಯ ವೇಳೆ ಬಳಸುವ ಔಷಧಗಳ ಬಳಕೆ, ಎಚ್.ಐ.ವಿ. ವೈರಸ್ ಸೋಂಕಿನಿಂದ ಉಂಟಾಗುವ ಏಡ್ಸ್ ಕಾಯಿಲೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಪರಿಣಾಮ, ರೋಗನಿರೋಧ ಪ್ರಕ್ರಿಯೆಗೆ ಅಡ್ಡಿ ಮಾಡಬಲ್ಲ ಜೆನೆಟಿಕ್ ದೋಷಗಳು, ಚರ್ಮ ಸೀಳುವಂತಹ ಸಂದರ್ಭಗಳು, ಹೆಚ್ಚು ಆಂಟಿಬಯಾಟಿಕ್ ಬಳಕೆ, ಸುಟ್ಟ ಗಾಯಗಳು, ಗರ್ಭಿಣಿಯರು, ಶಸ್ತ್ರಚಿಕಿತ್ಸೆಗಳ ನಂತರದ ಕಾಲ, ಜನ್ಮಜಾತವಾಗಿ ಬರುವ ರೋಗನಿರೋಧ ಶಕ್ತಿಯ ದೌರ್ಬಲ್ಯ ಮೊದಲಾದ ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರೋಗನಿರೋಧ ಶಕ್ತಿ ನಿತ್ರಾಣವಾಗುತ್ತದೆ. ಈ ಎಲ್ಲ ಸಂದರ್ಭಗಳಲ್ಲೂ ಸಮಯಸಾಧಕ ಪರೋಪಜೀವಿಗಳು ಆಕ್ರಮಣ ಮಾಡಿ ಸೋಂಕು ಉಂಟುಮಾಡಬಲ್ಲವು. ಸಣ್ಣ ವಯಸ್ಸಿನಲ್ಲಿ ಬಹುತೇಕ ಎಲ್ಲರನ್ನೂ ಕಾಡುವ ಸೀತಾಳೆ ಸಿಡುಬು (ಚಿಕನ್ ಪಾಕ್ಸ್) ಮೂಲತಃ ವೈರಸ್ ಕಾಯಿಲೆ. ಇದು ಗುಣವಾದ ನಂತರವೂ ಅದರ ವೈರಸ್ ನಮ್ಮ ಬೆನ್ನುಹುರಿಯ ನರಗಳ ಗಂಟುಗಳಲ್ಲಿ ಸುಪ್ತವಾಗಿ ಕುಳಿತಿರುತ್ತದೆ. ರೋಗನಿರೋಧ ಶಕ್ತಿ ಇಳಿದ ಅವಕಾಶ ದೊರೆತಾಗ ಈ ವೈರಸ್ ಪುನಃ ಆಕ್ರಮಣಶೀಲವಾಗಿ ಆಯಾ ನರದ ಮೂಲಕ ಸಾಗುತ್ತಾ ಚರ್ಮದ ಮೇಲೆ ಒಂದು ನಿರ್ದಿಷ್ಟ ಪಟ್ಟಿಯಂತೆ ಸೋಂಕು ಕಾಣುತ್ತದೆ. ಇದನ್ನು ಸರ್ಪಸುತ್ತು ಅಥವಾ ಹರ್ಪಿಸ್ ಝೋಸ್ಟರ್ ಎನ್ನುತ್ತಾರೆ. ವೃದ್ಧಾಪ್ಯದಲ್ಲಿ ಶರೀರವನ್ನು ಬಹಳ ಕಂಗಾಲು ಮಾಡುವ ಸಮಯಸಾಧಕ ಸೋಂಕುಗಳಲ್ಲಿ ಸರ್ಪಸುತ್ತು ಕೂಡ ಒಂದು.

 ಸಮಯಸಾಧಕ ಸೋಂಕುಗಳನ್ನು ಗುಣಪಡಿಸುವುದು ಸುಲಭವಲ್ಲ. ರೋಗನಿರೋಧ ಶಕ್ತಿ ಈ ಮೊದಲೇ ಕುಂಠಿತವಾಗಿರುವುದರಿಂದ ಇಂತಹ ಸೋಂಕುಗಳ ವಿರುದ್ಧ ಹೋರಾಡಲು ಶರೀರ ಸಮರ್ಥವಾಗಿರುವುದಿಲ್ಲ. ಹೀಗಾಗಿ, ಸಮಯಸಾಧಕ ಸೋಂಕುಗಳು ಶರೀರದ ಮೇಲೆ ವಿಪರೀತ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲೂ ಫಂಗಸ್ ಸೋಂಕುಗಳಿಂದ ಕೆಲವೊಮ್ಮೆ ಪ್ರಾಣಾಪಾಯವೂ ಆಗಬಹುದು. ಕೋವಿಡ್-19 ಎಂಬ ಜಾಗತಿಕ ವಿಪತ್ತಿನ ಸಂದರ್ಭದಲ್ಲಿ ಹಲವಾರು ಸಮಯಸಾಧಕ ಸೋಂಕುಗಳಿಂದ ಪ್ರಾಣ ತೆತ್ತವರು ಬಹಳ ಸಂಖ್ಯೆಯಲ್ಲಿ ಇದ್ದರು. ಈ ಕಾರಣಕ್ಕೆ ಸಮಯಸಾಧಕ ಸೋಂಕುಗಳನ್ನು ಬಾರದಂತೆ ಎಚ್ಚರ ವಹಿಸುವುದು ಅವುಗಳ ಚಿಕಿತ್ಸೆಗಿಂತಲೂ ಹೆಚ್ಚು ಫಲದಾಯಕ.

 ರೋಗನಿರೋಧ ಶಕ್ತಿ ನಿತ್ರಾಣವಾಗಬಹುದಾದ ಸಂದರ್ಭಗಳಲ್ಲಿ ಅವು ಯಾವ ಸೋಂಕಿಗೆ ಕಾರಣವಾಗಬಹುದು ಎಂಬ ಅಂದಾಜುಗಳನ್ನು ತಜ್ಞ ವೈದ್ಯರು ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಸೋಂಕು ಕಾಡುವ ಮುನ್ನವೇ ಔಷಧೋಪಚಾರ ಆರಂಭಿಸುತ್ತಾರೆ. ಈ ಮಾರ್ಗವನ್ನು “ನಿಯಂತ್ರಕ ಚಿಕಿತ್ಸೆ” ಎನ್ನಲಾಗುತ್ತದೆ. ಇದು ಪ್ರತಿಯೊಂದು ಸೋಂಕಿನ ವಿರುದ್ಧವೂ ಕೆಲಸ ಮಾಡುತ್ತದೆ ಎನ್ನುವ ಖಚಿತವಾದ ಭರವಸೆ ಇಲ್ಲವಾದರೂ, ಬಹುತೇಕ ಸಂದರ್ಭಗಳಲ್ಲಿ ಸೋಂಕು ಬಾರದಂತೆ ಕಾಯಬಲ್ಲವು. ಅಂತೆಯೇ, ಮೂಲ ರೋಗವನ್ನು ಶೀಘ್ರವಾಗಿ ತಹಬಂದಿಗೆ ತಂದು ರೋಗನಿರೋಧ ಶಕ್ತಿ ಯಥಾಸ್ಥಿತಿಗೆ ಮರಳುವಂತೆ ಮಾಡುವುದು ಕೂಡ ಸಮಯಸಾಧಕ ಸೋಂಕುಗಳನ್ನು ತಡೆಗಟ್ಟುವ ಪ್ರಮುಖ ಮಾರ್ಗ. ಉದಾಹರಣೆಗೆ, ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆಯ ಅಂಶದ ನಿಯಂತ್ರಣ ಎಷ್ಟು ಕಟ್ಟುನಿಟ್ಟಾಗಿದ್ದರೆ, ಸಮಯಸಾಧಕ ಸೋಂಕುಗಳ ಸಾಧ್ಯತೆ ಅಷ್ಟು ಕಡಿಮೆ. ಎಚ್.ಐ.ವಿ. ಸೋಂಕಿತರಲ್ಲಿ ಪ್ರಾಥಮಿಕ ಚಿಕಿತ್ಸೆಯ ಮೂಲಕ ರಕ್ತದಲ್ಲಿನ ವೈರಸ್ ಪ್ರಮಾಣವನ್ನು ಮಿತಿಯಲ್ಲಿ ಇಟ್ಟುಕೊಂಡರೆ ಇತರೆ ಸೋಂಕುಗಳ ಸಾಧ್ಯತೆಯನ್ನು ಗಣನೀಯವಾಗಿ ನಿಯಂತ್ರಿಸಬಹುದು.

 ಶರೀರದ ಸಹಜ ರೋಗನಿರೋಧ ಶಕ್ತಿಯನ್ನು ಜಾಗೃತಗೊಳಿಸಬಲ್ಲ ರಾಸಾಯನಿಕ ಸಂಯುಕ್ತಗಳು ಪ್ರಸ್ತುತ ಲಭ್ಯವಿವೆ. ಆದರೆ ಕೆಲವು ಆಯ್ದ ರೋಗಿಗಳಲ್ಲಿ ಮಾತ್ರ ಈ ಅತ್ಯಂತ ದುಬಾರಿ ಔಷಧಗಳ ಬಳಕೆ ಪ್ರಯೋಜನಕಾರಿಯಾಗಬಲ್ಲವು. ಮತ್ತೆ ಕೆಲವರಲ್ಲಿ ನಿಯಮಿತವಾಗಿ ಆಂಟಿಬಯಾಟಿಕ್ ಔಷಧಗಳನ್ನು ಬಳಸುತ್ತಾ ಕೆಲವೊಂದು ಸಮಯಸಾಧಕ ಸೋಂಕು ಆಗದಂತೆ ತಡೆಯಬಹುದು. ಇಂತಹ ಸೋಂಕುಗಳ ಸಾಧ್ಯತೆ ಹೆಚ್ಚಾಗಿರುವವರು ಮಾಸ್ಕ್ ಬಳಕೆ, ಅಶುಚಿಯುತ ಆಹಾರವನ್ನು ಸೇವಿಸದಿರುವುದು, ಇತರ ರೋಗಿಗಳಿಂದ ದೂರವಿರುವುದು, ಸಾಕುಪ್ರಾಣಿಗಳನ್ನು ಮುದ್ದಾಡದಿರುವುದು, ಕೊಳಕಾದ ಸ್ಥಳಗಳಿಗೆ ಹೋಗದಿರುವುದು, ಲೈಂಗಿಕ ಸಂಪರ್ಕದಲ್ಲಿ ಎಚ್ಚರಿಕೆ ಮೊದಲಾದ ವಿಧಾನಗಳನ್ನು ಪಾಲಿಸಿ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು. ಇವೆಲ್ಲವನ್ನೂ ಮೀರಿ ಸಮಯಸಾಧಕ ಸೋಂಕು ಕಾಡಿದರೆ ತಡಮಾಡದೆ ತಜ್ಞ ವೈದ್ಯರನ್ನು ಕಾಣಬೇಕು. ಇಂತಹ ಸೋಂಕುಗಳ ಚಿಕಿತ್ಸೆಯನ್ನು ಎಷ್ಟು ಬೇಗ ಆರಂಭಿಸಿದರೆ ಅಷ್ಟೇ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಇದರ ಬಗೆಗಿನ ಜ್ಞಾನ ಮತ್ತು ಎಚ್ಚರ ಜೀವರಕ್ಷಕವಾಗಬಲ್ಲವು.

-------------------------

ದಿನಾಂಕ 9/4/2024 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/infectious-diseases-in-body-2748035

 


ಕಿವಿಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ನೆಟ್ಟಗೆ ನಿಂತು ಕಣ್ಣು ಮುಚ್ಚಿಕೊಂಡರೂ ನೇರವಾಗಿಯೇ ನಿಂತಿರುತ್ತೇವೆಯೇ ಹೊರತು ಜೋಲಿ ಹೊಡೆದು ಬೀಳುವುದಿಲ್ಲ. ಇದಕ್ಕೆ ಕಾರಣ ಕಿವಿಗಳು ಎಂದರೆ ಅಚ್ಚರಿಯಾಗುತ್ತದೆಯೇ? ಕಿವಿಗಳು ಧ್ವನಿಗ್ರಹಣಕಾಗಿ ಎನ್ನುವುದು ಜನಪ್ರಿಯ ಅಭಿಮತ. ಆದರೆ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವುದು ಕೂಡ ಕಿವಿಗಳೇ. ಎರಡು ಕಾಲುಗಳ ಮೇಲೆ ಕಂಬದಂತೆ ನಿಂತು ಜೀವನ ಸಾಗಿಸುವ ಮಾನವರಿಗೆ ಕಿವಿಗಳು “ಸ್ತಂಭದ ಆಧಾರ”! ನಮ್ಮ ಮಿದುಳಿಗೆ ಪಂಚೇಂದ್ರಿಯಗಳ ಮೂಲಕ ಒದಗುವ ಮಾಹಿತಿಯಲ್ಲಿ ಕಣ್ಣುಗಳದ್ದು ಶೇಕಡಾ 80; ಕಿವಿಗಳದ್ದು ಶೇಕಡಾ 10; ಉಳಿದ ಮೂರೂ ಸೇರಿ ಶೇಕಡಾ 10. ಅಂದರೆ, ಕಲಿಕೆಯ ವಿಷಯದಲ್ಲಿ ಕಣ್ಣಿನ ನಂತರದ ಸ್ಥಾನ ಕಿವಿಯದ್ದು.  

ಕಿವಿಯಲ್ಲಿ ಮೂರು ಭಾಗಗಳಿವೆ. ತಲೆಯ ಎರಡೂ ಬದಿಯಲ್ಲಿ ಚಾಚಿಕೊಂಡಿರುವುದು ಮಾತ್ರವೇ ಕಿವಿ ಅಲ್ಲ. ಅದು ಹೊರಗಿವಿಯ ಒಂದು ಭಾಗ. ಹೊರಗಿವಿ ಮತ್ತು ಮಧ್ಯಕಿವಿಯನ್ನು ಪ್ರತ್ಯೇಕಗೊಳಿಸುವುದು ಕಿವಿಯ ತಮಟೆ ಎನ್ನುವ ತೆಳುವಾದ ಪರದೆ. ಕಿವಿಯ ಮಧ್ಯಭಾಗ ಧ್ವನಿಗ್ರಹಣದ ಕೆಲಸ ಮಾಡಿದರೆ, ಒಳಗಿವಿ ಮುಖ್ಯವಾಗಿ ಧ್ವನಿಸಂಸ್ಕರಣೆಯ ಜೊತೆಗೆ ಶರೀರದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಕಿವಿಗಳ ಕಾಯಿಲೆಯಲ್ಲಿ ಕೇವಲ ತಾತ್ಕಾಲಿಕ ಕಿವುಡು ಮಾತ್ರವಲ್ಲ; ಶರೀರದ ಆಯ ತಪ್ಪುವುದು, ಕಣ್ಣುಗುಡ್ಡೆಗಳು ಅಂಚಿಗೆ ತಲುಪಿದಾಗ ವೇಗವಾಗಿ ಕಂಪಿಸುವುದು ಮೊದಲಾದ ಸಮಸ್ಯೆಗಳು ಕಾಣುತ್ತವೆ.

ಹೊರನೋಟಕ್ಕೆ ಕಾಣುವ ಕಿವಿಯ ಭಾಗದಲ್ಲಿ ಮೂಳೆ ಇಲ್ಲ. ಆದರೂ ಅದು ತನ್ನೊಳಗಿನ ಮೃದ್ವಸ್ತಿಯ ಕಾರಣದಿಂದ ಆಕಾರವನ್ನು ಉಳಿಸಿಕೊಂಡಿರುತ್ತದೆ. ಕಿವಿಯ ಕೆಳಭಾಗದಲ್ಲಿ ಇರುವ ಮೃದುಚರ್ಮದೊಳಗೆ ಮೃದ್ವಸ್ತಿ ಇಲ್ಲ. ಇದಕ್ಕೆ ರಂದ್ರ ಕೊರೆದು ಆಭರಣ ಧರಿಸುವ ಪದ್ಧತಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹೊರಗಿವಿಯ ಕಾಲುವೆಯಂತಹ ಆಂತರಿಕ ಭಾಗ ಸುಮಾರು ಒಂದು ಇಂಚು (2.5 ಸೆಂಟಿಮೀಟರ್) ಉದ್ದವಿದೆ. ಆರಂಭದಲ್ಲಿ ಇದರ ಕವಚ ಮೃದ್ವಸ್ತಿಯದ್ದೇ. ಒಳಗೆ ಹೋಗುತ್ತಾ ಕಿವಿಯ ತಮಟೆಯ ಸುತ್ತಮುತ್ತ ಮೂಳೆಯ ಆಸರೆ ಸಿಗುತ್ತದೆ. ಈ ಕಾಲುವೆಯುದ್ದಕ್ಕೂ ಇರುವ ಚರ್ಮದಲ್ಲಿ ತೈಲಯುಕ್ತ ಸ್ರವಿಕೆಯನ್ನು ಉತ್ಪಾದಿಸುವ ಸುಮಾರು 4000 ಗ್ರಂಥಿಗಳಿವೆ. ಈ ಸ್ರವಿಕೆಯೇ ಕಿವಿಯ ಮೇಣ (ಗುಗ್ಗೆ). ಸಾಮಾನ್ಯವಾಗಿ ಈ ಕಾಲುವೆ ತನ್ನನ್ನು ತಾನೇ ಸ್ವಚ್ಛಮಾಡಿಕೊಳ್ಳಬಲ್ಲದು. ದವಡೆಯ ಚಲನೆಯಿಂದ ಕಿವಿಯ ಮೇಣ ತಾನಾಗಿಯೇ ಹೊರಬರುತ್ತದೆ. ಆದರೆ ಕೆಲವೊಮ್ಮೆ ಅದರಲ್ಲಿನ ನೀರಿನ ಅಂಶ ಕಡಿಮೆಯಾಗಿ, ಅಲ್ಲಿಯೇ ಗಟ್ಟಿಯಾಗುತ್ತದೆ. ಕೇವಲ ಅಂತಹ ಸಂದರ್ಭಗಳಲ್ಲಿ ಹತ್ತಿಯನ್ನು ಬಳಸಿ ಅದನ್ನು ಮೆದುವಾಗಿ ಹೊರತೆಗೆದರೆ ಸಾಕು. ಗಟ್ಟಿಯಾದ ಅಥವಾ ಚೂಪಾದ ಕಡ್ಡಿಗಳನ್ನು ಈ ಕಾಲುವೆಯಲ್ಲಿ ತೂರಿಸಬಾರದು. ಇದರಿಂದ ಚರ್ಮಕ್ಕೆ ಹಾನಿಯಾಗಿ ಸೋಂಕು ಆಗಬಹುದು ಅಥವಾ ಕಿವಿಯ ತಮಟೆಗೆ ಘಾಸಿಯಾಗಬಹುದು. ತೀರಾ ಗಟ್ಟಿಯಾದ, ಕಿವಿಗೆ ನೋವುಂಟು ಮಾಡುವ, ಧ್ವನಿಗ್ರಹಣಕ್ಕೆ ಅಡ್ಡಿ ಮಾಡುವ ಮೇಣವನ್ನು ವೈದ್ಯರಿಂದ ತೆಗೆಸಬೇಕು.  

ಕಿವಿಯ ತಮಟೆ ಸುಮಾರು 10 ಮಿಲಿಮೀಟರ್ ವ್ಯಾಸದ, ಕೇವಲ 0.1 ಮಿಲಿಮೀಟರ್ (100 ಮೈಕ್ರೋಮೀಟರ್) ದಪ್ಪದ, ಮೂರು ಪದರಗಳ ಅತ್ಯಂತ ತೆಳುವಾದ ಪರದೆ. ಹೊರಜಗತ್ತಿನಿಂದ ಬರುವ ಧ್ವನಿತರಂಗಗಳಿಗೆ ಅನುಗುಣವಾಗಿ ಕಿವಿಯ ತಮಟೆ ಕಂಪಿಸುತ್ತದೆ. ಈ ಕಂಪನವನ್ನು ಮಿದುಳಿಗೆ ತಲುಪಿಸುವ ಸಂಕೀರ್ಣ ವ್ಯವಸ್ಥೆ ಮಧ್ಯಕಿವಿ ಮತ್ತು ಒಳಕಿವಿಗಳಲ್ಲಿ ಇವೆ. ಕಿವಿಯ ಧ್ವನಿಗ್ರಹಣದ ಅತಿ ಕಡಿಮೆ ಬಿಂದು ಎಂದರೆ ಸುಮಾರು 20 ಹರ್ಟ್ಸ್. ಇದಕ್ಕಿಂತಲೂ ಕಡಿಮೆ ಕಂಪನಕ್ಕೆ ಶ್ರವಣ ವ್ಯವಸ್ಥೆ ಸ್ಪಂದಿಸುವುದಿಲ್ಲ. ಇದರ ಅತಿ ಹೆಚ್ಚಿನ ಬಿಂದು ಎಂದರೆ 20,000 ಹರ್ಟ್ಸ್. ಇದಕ್ಕಿಂತಲೂ ಹೆಚ್ಚಾದರೆ ಕಂಪನವನ್ನು ಧ್ವನಿಗ್ರಹಣ ಅಂಗಗಳು ಮುಂದಕ್ಕೆ ಸಾಗಿಸಲಾರವು. ಅಂದರೆ, ನಮ್ಮ ಶ್ರವಣ ಶಕ್ತಿಯ ವ್ಯಾಪ್ತಿ 20 ರಿಂದ 20,000 ಹರ್ಟ್ಸ್. ಇಷ್ಟು ಸಾಮರ್ಥ್ಯದ ಧ್ವನಿಯನ್ನು ನಿರ್ವಹಿಸಲು ಬೇಕಾದ ಸುಮಾರು 15,000-20,000 ನರರೋಮಗಳು ನಮ್ಮ ಒಳಕಿವಿಯಲ್ಲಿವೆ.

ಹೊರಗಿವಿಯ ಮೂಲಕ ನಾವು ನೋಡಬಹುದಾದ ಕಿವಿಯ ತಮಟೆಯ ಮತ್ತೊಂದು ಬದಿಯಿಂದ ಮಧ್ಯಕಿವಿ ಆರಂಭವಾಗುತ್ತದೆ. ಕಿವಿಯ ತಮಟೆಯ ಮೇಲೆ ಬಿದ್ದ ಶಬ್ದತರಂಗಗಳನ್ನು ಒಳಗಿವಿಗೆ ತಲುಪಿಸಲು ಒಂದರ ಹಿಂದೊಂದರಂತೆ ಸಂಪರ್ಕದಲ್ಲಿರುವ ಮೂರು ಮೂಳೆಗಳು ಮಧ್ಯಕಿವಿಯಲ್ಲಿವೆ. ಇವು ಶರೀರದ 206 ಮೂಳೆಗಳ ಪೈಕಿ ಅತ್ಯಂತ ಸಣ್ಣ ಮೂಳೆಗಳು. ಇದರಲ್ಲಿ ಕೊನೆಯದಾದ ಮೂಳೆ ಇಡೀ ಶರೀರದ ಅತ್ಯಂತ ಸಣ್ಣ ಗಾತ್ರದ್ದು. ಇದರ ವ್ಯಾಸ ಸುಮಾರು 1.5 ಮಿಲಿಮೀಟರ್ ಮತ್ತು ಉದ್ದ 1 ಮಿಲಿಮೀಟರ್; ತೂಕ 6 ಮಿಲಿಗ್ರಾಂ. ಕುದುರೆ ಸವಾರರು ಏರಲು ಮತ್ತು ಸವಾರಿ ಮಾಡಲು ಜೀನಿನ ತುದಿಗಳಿಗೆ ಹಾಕಿರುವ ರಿಕಾಪಿನ ಮಾದರಿಯಲ್ಲಿ ಈ ಮೂಳೆ ಇರುತ್ತದೆ. ಇದರ ಪಾದದ ಭಾಗ ಒಳಕಿವಿಯ ಅಂಡಾಕಾರದ ಕಿಟಕಿಯ ಜೊತೆ ಸೇರಿಕೊಂಡಿದೆ. ಹೊರಜಗತ್ತಿನ ಶ್ರವಣ ಅಲೆಗಳು ಶಹನಾಯಿಯಂತಹ ಹೊರಕಿವಿಯ ನಾಳ ಮತ್ತು ಕಂಪನವನ್ನು ವರ್ಧಿಸಬಲ್ಲ ಮಧ್ಯಕಿವಿಯ ಮೂಳೆಗಳ ಮೂಲಕ ಹಾಯುವಾಗ ಅವುಗಳ ಕ್ಷಮತೆ ಸುಮಾರು 20 ಪಟ್ಟು ಅಧಿಕವಾಗುತ್ತವೆ.

ಮಧ್ಯಕಿವಿಯನ್ನು ಹೊರಜಗತ್ತಿಗೆ ಸಂಪರ್ಕಿಸುವ ನಾಳವೊಂದು ಅಲ್ಲಿಂದ ಹೊರಟು ಮೂಗು-ಗಂಟಲಿನ ಪ್ರದೇಶವನ್ನು ಸೇರುತ್ತದೆ. ಸುಮಾರು 3.5 ಸೆಂಟಿಮೀಟರ್ ಉದ್ದದ ಇದಕ್ಕೆ ಯುಸ್ತಾಷಿಯನ್ ನಾಳ ಎಂದು ಹೆಸರು. ಮಧ್ಯಕಿವಿಯಲ್ಲಿನ ಅಧಿಕ ಸ್ರವಿಕೆ ಈ ನಾಳದ ಮೂಲಕ ಹೊರಹೋಗುತ್ತದೆ. ಮಧ್ಯಕಿವಿಯ ಒತ್ತಡ ಹೊರಪ್ರಪಂಚದ ಒತ್ತಡಕ್ಕೆ ಸಮನಾಗಿ ಇರುವಂತೆ ಈ ನಾಳ ನೊಡಿಕೊಳ್ಳುತ್ತದೆ. ಇದರ ಜೊತೆಗೆ ಮಧ್ಯಕಿವಿಯಲ್ಲಿ ಧ್ವನಿಗೆ ಸಂಬಂಧವಿಲ್ಲದ ವಿಶಿಷ್ಟವಾದ ನರವೊಂದಿದೆ. ಆಹಾರದಲ್ಲಿನ ರುಚಿಯನ್ನು ಗುರುತಿಸುವ ನಾಲಗೆಯ ರುಚಿಮೊಗ್ಗುಗಳ ಸಂಕೇತಗಳನ್ನು ಕಾರ್ಡಾ ಟಿಂಪಾನಿ ಎನ್ನುವ ಈ ನರ ಮಿದುಳಿಗೆ ತಲುಪಿಸುತ್ತದೆ. ಈ ದಾರಿಯಲ್ಲಿ ಇದು ಮಧ್ಯಕಿವಿಯ ಮೂಲಕ ಹಾಯಬೇಕು. ಮಧ್ಯಕಿವಿಯ ಶಸ್ತ್ರಚಿಕಿತ್ಸೆಗಳಲ್ಲಿ ಈ ನರಕ್ಕೆ ಘಾಸಿಯಾದರೆ ರುಚಿಯ ಸಂವೇದನೆ ಮಂಕಾಗಬಹುದು, ಇಲ್ಲವೇ ನಶಿಸಬಹುದು.   

ಒಳಕಿವಿಗೆ ಎರಡು ಕಾರ್ಯಗಳಿವೆ – ಧ್ವನಿತರಂಗಗಳನ್ನು ಮಿದುಳಿಗೆ ತಲುಪಿಸುವುದು ಮತ್ತು ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವುದು. ಧ್ವನಿತರಂಗಗಳ ರವಾನೆಗೆ ಕಾಕ್ಲಿಯ ಮತ್ತು ಸಮತೋಲನಕ್ಕೆ ಅರ್ಧವರ್ತುಲಾಕಾರದ ನಾಳಗಳು ನಿಯೋಜಿತವಾಗಿವೆ. ಗ್ರೀಕ್ ಭಾಷೆಯಲ್ಲಿ ಕಾಕ್ಲಿಯಾ ಎಂದರೆ ಬಸವನಹುಳುವಿನ ಚಿಪ್ಪು. ಈ ಅಂಗವೂ ಅದೇ ರೀತಿಯಲ್ಲಿ ಎರಡೂಮುಕ್ಕಾಲು ಬಾರಿ ಸುರುಳಿ ಸುತ್ತಿರುತ್ತದೆ. ಈ ಸುರಳಿಗಳನ್ನು ನೇರವಾಗಿಸಿದರೆ ಅದರ ಉದ್ದ ಸುಮಾರು ಮೂರೂವರೆ ಸೆಂಟಿಮೀಟರ್. ಕಾಕ್ಲಿಯಾದ ಆಂತರ್ಯದಲ್ಲಿ ವಿಶಿಷ್ಠವಾದ ದ್ರವವಿದೆ. ಕಾಕ್ಲಿಯಾದ ಗೋಡೆಗೆ ಎರಡು ಸಾಲುಗಳಲ್ಲಿ ಅಂಟಿಕೊಂಡಿರುವ ಅತ್ಯಂತ ಸೂಕ್ಷ್ಮ ರೋಮಗಳಂತಹ ನರಗಳ ಗುಚ್ಛಗಳಿವೆ. ಹೊರಗಿನ ಸಾಲಿನಲ್ಲಿ ಸುಮಾರು 12,000 ನರರೋಮಗಳಿದ್ದರೆ ಒಳಗಿನ ಸಾಲಿನಲ್ಲಿ ಸುಮಾರು 4000 ನರರೋಮಗಳಿವೆ. ಮಧ್ಯಕಿವಿಯಿಂದ ಬಂದ ಧ್ವನಿತರಂಗಗಳು ಈ ದ್ರವದ ಮೂಲಕ ಸಾಗುತ್ತವೆ. ನರರೋಮಗಳ ಗುಚ್ಛಗಳು ಆಯಾ ಧ್ವನಿತರಂಗಗಳ ಮಟ್ಟಕ್ಕೆ ಸಂವಾದಿಯಾಗುವಂತೆ ಕಂಪಿಸುತ್ತವೆ. ಈ ಕಂಪನ ವಿದ್ಯುತ್-ರಾಸಾಯನಿಕ ಪ್ರಕ್ರಿಯೆಯ ಮೂಲಕ ಶ್ರವಣ ನರವನ್ನು ಪ್ರಚೋದಿಸುತ್ತವೆ. ಶ್ರವಣ ನರರೋಮಗಳು ಒಮ್ಮೆ ನಾಶವಾದರೆ ಮತ್ತೆ ಹುಟ್ಟಲಾರವು. ಕೆಲವು ಔಷಧಗಳು, ಕಾಯಿಲೆಗಳು, ಜೋರಾದ ಶಬ್ದಗಳು, ರಕ್ತನಾಳಗಳ ಕಾಯಿಲೆ, ವೃದ್ಧಾಪ್ಯ ಮೊದಲಾದ ಕಾರಣಗಳಿಂದ ನರರೋಮಗಳು ನಾಶವಾದರೆ ಸಂವಾದಿ ಧ್ವನಿ ತರಂಗಗಳನ್ನು ಗ್ರಹಿಸಲಾರವು. ವಯಸ್ಸಾದ ನಂತರ ಕೆಳದನಿಯ ಶಬ್ದಗಳು ಕೇಳಿಸದೇ ಹೋಗುವುದಕ್ಕೆ ಇದೂ ಒಂದು ಕಾರಣ.

ಶರೀರದ ಸಮತೋಲನವನ್ನು ಕಾಯ್ದುಕೊಳ್ಳಲು ಪರಸ್ಪರ ಲಂಬಕೋನದಲ್ಲಿರುವ ಮೂರು ಅರೆವರ್ತುಲಾಕಾರ ನಾಳಗಳಿವೆ. ಈ ನಾಳಗಳಲ್ಲಿನ ವಿಶಿಷ್ಠ ದ್ರವ ನಮ್ಮ ದೇಹದ ಚಲನೆಯ ಜೊತೆಗೆ ತಾನೂ ಚಲಿಸುತ್ತದೆ. ಮೂರೂ ನಾಳಗಳಲ್ಲಿನ ದ್ರವದ ಮಟ್ಟ, ಚಲನೆಯ ವೇಗ, ತಿರುಗುವ ದಿಕ್ಕು ಮೊದಲಾದ ಸೂಚಿಗಳನ್ನು ಅನುಸರಿಸಿ ಶರೀರದ ನಿಲುವಿನ ಸಂಕೇತಗಳು ಮಿದುಳನ್ನು ತಲುಪುತ್ತವೆ. ಹೀಗಾಗಿ ಕಣ್ಣು ಮುಚ್ಚಿದ್ದಾಗಲೂ ಶರೀರ ತುಸು ಓರೆಯಾದರೆ ಮಿದುಳಿಗೆ ಕೂಡಲೇ ತಿಳಿಯುತ್ತದೆ. ಈ ನಿಟ್ಟಿನಲ್ಲಿ ಒಳಕಿವಿಯ ಸಣ್ಣಶಿಲೆಗಳಂತಹ ಅಂಗ ಕೂಡ ನೆರವಾಗುತ್ತದೆ.

ಹೊರಜಗತ್ತಿನ ಒಂದೇ ಶಬ್ದವನ್ನು ಎರಡೂ ಕಿವಿಗಳೂ ಗ್ರಹಿಸುತ್ತವೆ. ಆದರೆ ಶಬ್ದ ಬರುತ್ತಿರುವ ದಿಕ್ಕಿನ ಕಿವಿ ಅದನ್ನು ಸ್ವಲ್ಪ ಸಮಯ ಬೇಗನೇ ಗ್ರಹಿಸುತ್ತದೆ. ಆನಂತರ ಅದೇ ಶಬ್ದ ಮತ್ತೊಂದು ಕಿವಿಯನ್ನು ಸೇರುತ್ತದೆ. ಈ ಸಮಯದ ಅಂತರವನ್ನು ಗ್ರಹಿಸಿ ಶಬ್ದ ಬರುತ್ತಿರುವ ದಿಕ್ಕು, ಸುಮಾರು ಎಷ್ಟು ದೂರದಿಂದ ಬರುತ್ತಿದೆ ಎನ್ನುವ ಅಂದಾಜು ಮಿದುಳಿಗೆ ಆಗುತ್ತದೆ. ಇದು ಸಾಧ್ಯವಾಗಲು ಎರಡೂ ಕಿವಿಗಳೂ ಕೆಲಸ ಮಾಡಬೇಕು. ಒಂದು ಕಿವಿ ಕಿವುಡಾಗಿದ್ದರೆ, ಅಥವಾ ಒಂದೇ ಕಿವಿಗೆ ಶ್ರವಣಯಂತ್ರ ತೊಟ್ಟಿದ್ದರೆ ದೂರದ ಮತ್ತು ದಿಕ್ಕಿನ ಅಂದಾಜು ಕಷ್ಟವಾಗುತ್ತದೆ.

ಕಿವಿಯ ಗಣಿತ ಅದರ ಕೆಲಸದಷ್ಟೇ ಸಂಕೀರ್ಣ ಮತ್ತು ವಿಸ್ಮಯಕಾರಿ.

--------------------------

ಏಪ್ರಿಲ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಏಪ್ರಿಲ್ 2024 ರ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/6ab96b3caaca438a79951078399b6ab0ddf34dc5202404.pdf.html?fbclid=IwAR24lr9rq-iSh1ZEKUIznaVpiAv7KR2r0cOZIemeUC6tSY35dn8wKfr5RfU_aem_ARJ3atVJRkr2YSoOG2iKIqbXab00gbsrM4NiJMKG8QlKzJkMwnySDOu0epAjjzxt1QmIre63RaeiTU7vSpTjnHEy

 


ವೆರಿಕೋಸ್ - ಉಬ್ಬಿದ ರಕ್ತನಾಳಗಳ ಕಾರಣ ಮತ್ತು ಪರಿಹಾರ

ಡಾ. ಕಿರಣ್ ವಿ. ಎಸ್.

ವೈದ್ಯರು

ಜೀವವಿಕಾಸದ ಆದ್ಯತೆಯಲ್ಲಿ ಯಾವುದೋ ಸ್ಥಾನದಲ್ಲಿದ್ದ ಮನುಷ್ಯ ಪ್ರಾಣಿ ಉತ್ತುಂಗಕ್ಕೆ ಏರಿದ್ದು ಹಲವಾರು ಬದಲಾವಣೆಗಳ ದೆಸೆಯಿಂದ. ಇಂತಹ ಒಂದು ಬದಲಾವಣೆ ಎರಡು ಕಾಲುಗಳ ಮೇಲೆ ಬಹುಕಾಲ ನಿಲ್ಲಬಲ್ಲ ವೈಶಿಷ್ಟ್ಯ. ಚತುಷ್ಪಾದಿಗಳಿಗೆ ಹೋಲಿಸಿದರೆ ಈ ಸಾಮರ್ಥ್ಯ ಎರಡು ಕೈಗಳನ್ನು ಮುಕ್ತವಾಗಿ ಬಳಸಲು ಅವಕಾಶ ನೀಡಿತು. ಜೀವವಿಕಾಸ ಸಾಗುತ್ತಾ ಹೋದಂತೆ ಈ ಕರ-ಕೌಶಲ್ಯ ಮನುಷ್ಯ ಜೀವಿಯ ಏಳಿಗೆಗೆ ಕಾರಣವಾಯಿತು. ಆದರೆ ಕಾಲುಗಳ ಮೇಲೆ ನೇರವಾಗಿ ನಿಲ್ಲುವ ಸಾಮರ್ಥ್ಯಕ್ಕಾಗಿ ಹಲವಾರು ಸಮಸ್ಯೆಗಳನ್ನು ದೇಹ ಎದುರಿಸಬೇಕಿದೆ. ಬೆನ್ನುನೋವು, ಮಂಡಿ-ಸವೆತ, ಹರ್ನಿಯಾ, ಮೂಲವ್ಯಾಧಿ, ತಲೆಸುತ್ತಿ ಬೀಳುವಿಕೆ ಮೊದಲಾದುವುಗಳ ಕಾರಣ ನಾವು ದ್ವಿಪಾದಿಗಳಾಗಿ ಬದಲಾದದ್ದೇ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಕಾಲುಗಳಲ್ಲಿ ಉಬ್ಬುವ ರಕ್ತನಾಳಗಳು. ಇದನ್ನೇ ವೆರಿಕೋಸ್ (ಲ್ಯಾಟಿನ್ ಭಾಷೆಯಲ್ಲಿ ಉಬ್ಬಿದ, ಸೊಟ್ಟಗಾದ) ರಕ್ತನಾಳಗಳು ಎನ್ನುತ್ತಾರೆ.

 ಇಡೀ ಶರೀರದ ರಕ್ತ ಪರಿಚಲನೆಯನ್ನು ನಿರ್ವಹಿಸುವುದು ಹೃದಯ. ಇದು ಶರೀರದ ಮೇಲ್ಭಾಗದಲ್ಲಿ, ಎದೆಯ ಗೂಡಿನಲ್ಲಿದೆ. ನಮ್ಮೆ ನೆತ್ತಿಯ ತುದಿ ಮತ್ತು ಸೊಂಟದ ಭಾಗಕ್ಕೆ ಸರಿಸುಮಾರು ನಡುಭಾಗದಲ್ಲಿ ಹೃದಯ ಬರುತ್ತದೆ. ಚತುಷ್ಪಾದಿಗಳ ದೇಹಕ್ಕೆ ಈ ಸ್ಥಾನ ಬಹಳ ಅನುಕೂಲಕಾರಿ. ಆದರೆ, ದ್ವಿಪಾದಿ ಮಾನವನಲ್ಲಿ ಕಾಲಿನ ಉದ್ದವೂ ಸೇರಿ, ಈ ಲೆಕ್ಕಾಚಾರ ಏರುಪೇರಾಗಿದೆ. ಗುರುತ್ವಕ್ಕೆ ವಿರುದ್ಧವಾಗಿ ಹರಿಯಬೇಕಾದ ಆವಶ್ಯಕತೆ ಶರೀರದ ಕೆಳಭಾಗದ ರಕ್ತನಾಳಗಳದ್ದು. ಇದು ಸುಲಭದ ಮಾತಲ್ಲ. ನಾವು ಚಲಿಸುವಾಗ ಕಾಲುಗಳ ಬಲಿಷ್ಠ ಮಾಂಸಖಂಡಗಳು ಸತತವಾಗಿ ಸಂಕೋಚನ-ವಿಕಸನಗೊಳ್ಳುತ್ತಾ ರಕ್ತನಾಳಗಳನ್ನು ಒತ್ತುತ್ತವೆ. ಜೊತೆಗೆ, ಈ ರಕ್ತನಾಳಗಳಲ್ಲಿ ಮುಂದೆ ಹರಿದ ರಕ್ತ ಮತ್ತೆ ಹಿಂದೆ ಹರಿಯದಂತೆ ತಡೆಯುವ ಏಕಮುಖ ಕವಾಟಗಳಿವೆ. ಈ ಮೂಲಕ ರಕ್ತ ಸರಾಗವಾಗಿ ಮೇಲೆ ಮೇಲೆ ಹರಿಯುತ್ತಾ ಹೃದಯವನ್ನು ಸೇರುತ್ತದೆ. ಇದು ಜೀವನದುದ್ದಕ್ಕೂ ಸಾಗುತ್ತಲೇ ಇರಬೇಕಾದ ನಿರಂತರ ಪ್ರಕ್ರಿಯೆ.

 ಕಾಲಿನ ಮಾಂಸಖಂಡಗಳಿಗೆ ಸರಿಯಾದ ಕೆಲಸ ನೀಡದಿದ್ದರೆ ರಕ್ತಸಂಚಾರ ಅಸಮಂಜಸವಾಗುತ್ತದೆ. ಒಂದೆಡೆ ಕುಳಿತು ಕೆಲಸ ಮಾಡುವ ವೃತ್ತಿ; ಹೆಚ್ಚು ಕಾಲ ನಿಂತು ಕೆಲಸ ಮಾಡಬೇಕಾದ ನೌಕರಿ; ವ್ಯಾಯಾಮ ಇಲ್ಲದ ಜೀವನಶೈಲಿ; ಬೊಜ್ಜು, ಧೂಮಪಾನ, ಅಪಘಾತ ಮೊದಲಾದ ಸಂದರ್ಭಗಳಲ್ಲಿ ಬಹಳ ಕಾಲ ಚಲನೆಯಿಲ್ಲದ ಸ್ಥಿತಿ ಮೊದಲಾದ ಸಂದರ್ಭಗಳು ಇದಕ್ಕೆ ಉದಾಹರಣೆ. ಆಗ ಕಾಲುಗಳ ರಕ್ತವು ಮೇಲೆ ಹರಿಯಲಾಗದೇ ರಕ್ತನಾಳಗಳಲ್ಲೇ ಉಳಿದುಬಿಡುತ್ತದೆ. ಇದು ನಾಳಗಳ ಒಳಗಿನ ಏಕಮುಖ ಕವಾಟಗಳನ್ನು ಘಾಸಿ ಮಾಡುತ್ತದೆ. ಇದರಿಂದ ನಾಳಗಳ ಗೋಡೆಗಳು ಹಿಗ್ಗುತ್ತಾ, ಅದರ ರಚನೆಯನ್ನು ದುರ್ಬಲವಾಗಿಸುತ್ತದೆ. ಇಂತಹ ರಕ್ತನಾಳಗಳು ದಪ್ಪನಾಗಿ, ಸೊಟ್ಟಗಾಗಿ, ಚರ್ಮದ ಮೇಲೆ ಉಬ್ಬಿದಂತೆ ಕಾಣುತ್ತದೆ. ಇಂತಹವುಗಳನ್ನು ವೆರಿಕೋಸ್ ರಕ್ತನಾಳ ಎನ್ನಬಹುದು. ಗರ್ಭಿಣಿಯರಲ್ಲಿ ಗರ್ಭಕೋಶದ ಒತ್ತಡದಿಂದ, ಹೃದಯದತ್ತ ಸಾಗುವ ದೊಡ್ಡ ಗಾತ್ರದ ಅಪಧಮನಿಗಳಲ್ಲಿನ ರಕ್ತಸಂಚಾರಕ್ಕೆ ತಡೆಯಾಗುತ್ತದೆ. ಇದರಿಂದ ದೊಡ್ಡ ಗಾತ್ರದ ಅಪಧಮನಿಗಳ ಸಂಪರ್ಕವಿರುವ ಕಾಲುಗಳ ರಕ್ತನಾಳಗಳಲ್ಲಿನ ರಕ್ತಸಂಚಾರವೂ ನಿಧಾನವಾಗುತ್ತದೆ. ಇದು ಕೂಡ ವೆರಿಕೋಸ್ ಸಮಸ್ಯೆ ಉಂಟುಮಾಡಬಹುದು.

 ವೆರಿಕೋಸ್ ರಕ್ತನಾಳಗಳು ಚರ್ಮದ ಮೇಲೆ ಉಬ್ಬಿರುವ ನೀಲಿ, ನೇರಳೆ ಬಣ್ಣದ ಸೊಟ್ಟ ಗೆರೆಗಳಂತೆ, ಗಂಟುಗಳಂತೆ ವಿಕಾರವಾಗಿ ಎದ್ದು ಕಾಣುತ್ತವೆ. ಇವುಗಳಿಗೆ ಪೆಟ್ಟಾದರೆ ಅಧಿಕ ರಕ್ತಸ್ರಾವ ಉಂಟಾಗಬಹುದು. ಕಾಲಿನ ಮಾಂಸಖಂಡಗಳ ನೋವು, ಜೋಮು ಹಿಡಿಯುವಿಕೆ, ಪಾದಗಳ ಊತ, ಚರ್ಮ ತೆಳುವಾಗಿ ಬೇಗನೆ ಗಾಯವಾಗುವುದು, ತುರಿಕೆ, ಶೀಘ್ರವಾಗಿ ಗುಣವಾಗದ ಹುಣ್ಣುಗಳು, ಕಾಲಿನ ಸ್ನಾಯು ಸೆಳೆತ, ಮೀನಖಂಡಗಳ ಬಿಗುವು, ಉರಿ, ಕಾಲಿನ ಚರ್ಮ ಕಪ್ಪುಗಟ್ಟುವಿಕೆ ಮೊದಲಾದ ಲಕ್ಷಣಗಳು ವೆರಿಕೋಸ್ ರಕ್ತನಾಳಗಳ ಸಮಸ್ಯೆಯ ಪರಿಣಾಮಗಳು. ಈ ರಕ್ತನಾಳಗಳಲ್ಲಿ ರಕ್ತ ಸಂಚಾರ ತಗ್ಗುವ ಕಾರಣ ಅಲ್ಲಿ ರಕ್ತ ಹೆಪ್ಪುಗಟ್ಟಿ, ಹೆಪ್ಪಿನ ಭಾಗ ಕಳಚಿಕೊಂಡು ನಿಧಾನವಾಗಿ ಏರುತ್ತಾ ಹೃದಯವನ್ನು ಸೇರಿ ಶ್ವಾಸಕೋಶಗಳನ್ನು ಹಾಳು ಮಾಡಬಹುದು. ಇದು ತೀವ್ರವಾದ ಸಮಸ್ಯೆ. 

 ನಿಯಮಿತ ವ್ಯಾಯಾಮ ವೆರಿಕೋಸ್ ಸಮಸ್ಯೆಯನ್ನು ತಡೆಯಬಲ್ಲ ಉತ್ತಮ ವಿಧಾನ. ಚುರುಕು ನಡಿಗೆ, ಈಜು, ಸೈಕಲ್ ಸವಾರಿ, ಯೋಗಾಸನಗಳು, ದೀರ್ಘಶ್ವಾಸ ಪ್ರಾಣಾಯಾಮ, ಒಳ್ಳೆಯ ಪ್ರೋಟೀನ್-ಯುಕ್ತ ಆಹಾರ, ಸಾಕಷ್ಟು ನೀರಿನ ಸೇವನೆ ಮೊದಲಾದುವು ವೆರಿಕೋಸ್ ಸಮಸ್ಯೆ ಆಗದಂತೆ ತಡೆಯಬಲ್ಲವು. ಹೆಚ್ಚುಕಾಲ ಕುಳಿತು ಕೆಲಸ ಮಾಡಬೇಕಾದವರು ಆಗಾಗ ಎದ್ದು ಕೆಲವು ಹೆಜ್ಜೆ ನಡೆಯುವುದು ಸೂಕ್ತ. ಇದರ ಜೊತೆಗೆ ಗಂಟೆಗೆ ಒಂದು ಸಾರಿ ಕುರ್ಚಿಯನ್ನು ಬಿಟ್ಟು ಒಂದು ಸುತ್ತು ಓಡಾಡಿ ಬರುವುದು ಒಳ್ಳೆಯ ಪದ್ಧತಿ. ಅಂತೆಯೇ ಶರೀರ ತೂಕದ ನಿರ್ವಹಣೆ, ಧೂಮಪಾನ ಮಾಡದಿರುವಿಕೆ, ಚಲನೆ ಇಲ್ಲದಿರುವ ಪರಿಸ್ಥಿತಿಯಲ್ಲಿ ಕಾಲುಗಳ ಮಾಲೀಸು, ಅನುಭವಿ ಭೌತಚಿಕಿತ್ಸಕರಿಂದ ಮಾಡಿಸಿಕೊಳ್ಳುವ ಪರೋಕ್ಷ ವ್ಯಾಯಾಮ ಮೊದಲಾದ ಜೀವನಶೈಲಿಯ ಬದಲಾವಣೆಗಳು ಪ್ರಯೋಜನಕಾರಿ.

 ವೆರಿಕೋಸ್ ರಕ್ತನಾಳಗಳನ್ನು ಭೌತಿಕ ತಪಾಸಣೆ ಮತ್ತು ಅಲ್ಟ್ರಾಸೌಂಡ್ ತರಂಗಗಳ ಪರೀಕ್ಷೆಗಳ ನೆರವಿನಿಂದ ಪತ್ತೆ ಮಾಡುತ್ತಾರೆ. ವೆರಿಕೋಸ್ ಸಮಸ್ಯೆಯಿಂದ ಈಗಾಗಲೇ ಆಗಿರುವ ವ್ರಣಗಳಂತಹ ಸಮಸ್ಯೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ರಕ್ತನಾಳಗಳ ಮೇಲೆ ಬಾಹ್ಯವಾಗಿ ಒತ್ತಡ ಹಾಕಿ, ಅವುಗಳಲ್ಲಿನ ಸಂಚಾರವನ್ನು ಪ್ರಚೋದಿಸುವ ಸ್ಟಾಕಿಂಗ್ಗಳನ್ನು ಬಳಸಬಹುದು. ತೀವ್ರವಾದ ಸಮಸ್ಯೆ ಇರುವಾಗ ಶಸ್ತ್ರಚಿಕಿತ್ಸೆ, ರಾಸಾಯನಿಕಗಳ ಚುಚ್ಚುಮದ್ದು, ವಿಶೇಷ ರೀತಿಯ ಅಂಟಿನ ಬಳಕೆ, ಲೇಸರ್ ಚಿಕಿತ್ಸೆ, ರೇಡಿಯೋತರಂಗಗಳ ಆನ್ವಯಿಕ ಚಿಕಿತ್ಸೆ ಲಭ್ಯವಿವೆ. ಇದರಲ್ಲಿ ಸೂಕ್ತವಾದದ್ದನ್ನು ತಜ್ಞರು ಸೂಚಿಸುತ್ತಾರೆ.

 ವೆರಿಕೋಸ್ ರಕ್ತನಾಳಗಳನ್ನು ನಿರ್ಲಕ್ಷಿಸುವುದು ಸೂಕ್ತವಲ್ಲ. ಆರಂಭಿಕ ಹಂತದಲ್ಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಅತ್ಯಂತ ಪರಿಣಾಮಕಾರಿ.

---------------------

ದಿನಾಂಕ 19/3/2024 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/varicose-veins-or-varicosities-are-swollen-twisted-veins-that-lie-just-under-the-skin-2728977 


 

ಆನಂದದ ಪರಿಭಾಷೆ

ಲೇಖಕ: ಡಾ. ಕಿರಣ್ ವಿ.ಎಸ್.

 ಆನಂದವಾಗಿ ಬದುಕುವುದು ಯಾರಿಗೆ ಬೇಕಿಲ್ಲ? ಜೀವನದಲ್ಲಿ ಹಣ ಮತ್ತು ಆನಂದಗಳ ನಡುವೆ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ ಎಂದರೆ ಬಹುತೇಕರ ಆಯ್ಕೆ ಆನಂದವೇ ಇದ್ದೀತು. ಇಂದು ಕಷ್ಟಪಟ್ಟು ಕೆಲಸ ಮಾಡಬೇಕು ಎನ್ನುವುದು ನಾಳಿನ ಬದುಕು ಆನಂದ, ನೆಮ್ಮದಿಯಿಂದ ಕೂಡಿರಲಿ ಎಂಬ ಆಶಾಭಾವನೆಯಿಂದಲೇ. ಆನಂದ ಎಂದರೇನು? ಅದು ಹೇಗೆ ಸಿಗುತ್ತದೆ? ಎಂಬ ಪ್ರಶ್ನೆಗಳು ಕಠಿಣ.  ಆನಂದವನ್ನು ವಿವರಿಸಲು ಮನೋವಿಜ್ಞಾನಿಗಳು, ದಾರ್ಶನಿಕರು ಬಳಸುವ ಸಂಕೀರ್ಣ ಭಾಷೆ ಸಾಮಾನ್ಯ ಜನರ ತಲೆಯ ಮೇಲಿಂದ ಹಾರಿಹೋಗಿರಲು ಸಾಧ್ಯ. “ಹೆಸರಿಗಿಂತಲೂ ಭಾವ ಮುಖ್ಯ” ಎಂದು ಆಲೋಚಿಸುವ ಹಲವಾರು ಸಂಗತಿಗಳ ಪೈಕಿ ಆನಂದವೂ ಒಂದು. 

 ಆನಂದಕ್ಕೆ ಅನೇಕ ಆಯಾಮಗಳಿವೆ. ಸಂತಸದ ಭಾವ, ಸ್ವಾತಂತ್ರ್ಯ, ಜೀವನದ ಅರ್ಥೋದ್ದೇಶಗಳನ್ನು ಕಂಡುಕೊಳ್ಳುವಿಕೆ, ಏಳಿಗೆ, ಸಮಾಧಾನದ ಬದುಕು, ವೈಯಕ್ತಿಕ ವಿಕಸನ – ಮುಂತಾದುವು ಆನಂದದ ಪರಿಭಾಷೆಗಳು. ಆನಂದಕ್ಕೂ, ಆರೋಗ್ಯಕ್ಕೂ ಪರಸ್ಪರ ಪೂರಕ ಸಂಬಂಧವಿದೆ. ಒಳ್ಳೆಯ ಜೀವನಶೈಲಿ, ನಿಯಮಿತ ವ್ಯಾಯಾಮ, ಕ್ರಮಬದ್ಧ ಆಹಾರ, ಮನಸ್ಸಿಗೆ ಹಿತವಾದವರ ಜೊತೆಗಿನ ಒಡನಾಟಗಳು ದೀರ್ಘಕಾಲಿಕ ಆನಂದಕ್ಕೆ ಕಾರಣವಾಗಬಲ್ಲವು. ಆನಂದಕರ ಮನಸ್ಸು ಶರೀರದ ಹಾರ್ಮೋನ್ಗಳನ್ನು ಸಮಸ್ಥಿತಿಯಲ್ಲಿ ಇಡುತ್ತದೆ; ರೋಗನಿರೋಧಕ ಶಕ್ತಿಯನ್ನು ಬೆಳೆಸುತ್ತದೆ; ಚಯಾಪಚಯಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಇವೆಲ್ಲವೂ ಉತ್ತಮ ಆರೋಗ್ಯದ ನಿರ್ವಹಣೆಯಲ್ಲಿ ಧನಾತ್ಮಕ ಅಂಶಗಳು. 

 1954ರಲ್ಲಿ ಅಮೆರಿಕೆಯ ಪ್ರಸಿದ್ಧ ಮನೋತಜ್ಞ ಅಬ್ರಹಾಮ್ ಮಾಸ್ಲೊ “ಮನುಷ್ಯರು ಸಾಧಿಸುತ್ತಿರುವ ಪ್ರತಿಯೊಂದು ಪ್ರಗತಿಯೂ ಜೀವವನ್ನು ಹೆಚ್ಚು ಕಾಲ ಉಳಿಸಲು ಹೆಣಗುತ್ತಿದೆಯೇ ಹೊರತು ಜೀವನದ ಮೌಲ್ಯಾಭಿವೃದ್ಧಿಗೆ ಪೂರಕವಾಗುತ್ತಿಲ್ಲ” ಎಂದು ಅಭಿಪ್ರಾಯ ಪಟ್ಟಿದ್ದರು. ಆನಂತರದ ದಶಕಗಳಲ್ಲಿ ಬದುಕನ್ನು ಹೆಚ್ಚು ಒಳಿತುಗೊಳಿಸುವುದು ಹೇಗೆಂಬ ಚಿಂತನೆಗಳು ನಡೆದವು. ಅಭಿವೃದ್ಧಿಯನ್ನು ಯಶಸ್ಸಿನ ಅಳತೆಗೋಲುಗಳ ಮೇಲೆ ಅಳೆಯುತ್ತಿದ್ದ ಬಹುತೇಕ ಪಾಶ್ಚಾತ್ಯ ಸಂಶೋಧಕರು, “ಜೀವನ ಪಯಣದಲ್ಲಿ ಆನಂದದ ಪಾತ್ರ ಬಹಳ ದೊಡ್ಡದು” ಎಂಬುದನ್ನು ಮನಗಂಡರು.

 ಜೀವನ ಸರಳ ರೇಖೆಯ ಪಯಣವಲ್ಲ; ಅದು ಹಲವಾರು ಏಳು-ಬೀಳುಗಳ ಮೂಲಕ ಹಾದುಹೋಗುವ ಕಸರತ್ತು. ಬದುಕನ್ನು ಸಹ್ಯವಾಗಿಸುವ ಮೂರು ಆಧಾರಗಳನ್ನು ತಜ್ಞರು ಗುರುತಿಸುತ್ತಾರೆ: ವೈಯಕ್ತಿಕ ಧನಾತ್ಮಕ ಅನುಭವಗಳು (ಆನಂದ, ತೃಪ್ತಿ); ವ್ಯಕ್ತಿ-ವಿಶೇಷ ಲಕ್ಷಣಗಳು (ಒಳ್ಳೆಯ ನಡತೆ, ಸಮಾಜದ ಅಂಗೀಕಾರ); ವ್ಯಕ್ತಿಯು ತೊಡಗಿಸಿಕೊಂಡ ಸಂಘಗಳು (ಕುಟುಂಬ, ಕೆಲಸದ ತಾಣ, ಸಾಮಾಜಿಕ ಚಟುವಟಿಕೆಗಳ ಕೇಂದ್ರಗಳು). ಇಲ್ಲೆಲ್ಲ ಉತ್ತಮ ಫಲಿತಾಂಶಗಳು ದೊರೆಯುತ್ತಿದ್ದರೆ ವ್ಯಕ್ತಿಯ ಆನಂದದ ಮಟ್ಟ ಸಹಜವಾಗಿಯೇ ಏರುತ್ತದೆ. ಅಂತೆಯೇ, ಜೀವನದ ಪಯಣ ಇಳಿಮುಖವಾದಾಗ ಈ ಎಡೆಗಳಲ್ಲಿನ ಉತ್ತಮ ಸಂಬಂಧಗಳು ವ್ಯಕ್ತಿಯ ಆಧಾರಕ್ಕೆ ನಿಲ್ಲುತ್ತವೆ; ಕಷ್ಟಗಳನ್ನು ಸಹ್ಯವಾಗಿಸುತ್ತವೆ; ಶೀಘ್ರ ಚೇತರಿಕೆಗೆ ಕಾರಣವಾಗುತ್ತವೆ.

 ಆನಂದದ ಮೂಲಗಳು ಯಾವುವು? ಯಾವುದೇ ವ್ಯಕ್ತಿ ಮೂರು ವಿಧಗಳಿಂದ ಆನಂದ ಪಡೆಯಬಹುದು: ಇತರರಿಗೆ ಒಳಿತನ್ನು ಮಾಡುವುದರಿಂದ; ತನಗೆ ನೈಪುಣ್ಯವಿರುವ ಕೆಲಸಗಳನ್ನು ಮಾಡುವುದರಿಂದ; ಹಾಗೂ ತನ್ನ ಸ್ವಂತಕ್ಕೆ ಮತ್ತು ಕುಟುಂಬಕ್ಕೆ ಒಳಿತನ್ನು ಮಾಡುವುದರಿಂದ. 2005 ರಲ್ಲಿ ಪ್ರಕಟವಾದ ಅಧ್ಯಯನವೊಂದರಲ್ಲಿ ಬ್ರಿಟನ್ನಿನ ಸಂಶೋಧಕರು ಶರೀರದ ಜೈವಿಕ ಕ್ರಿಯೆಗಳ ಮೇಲೆ ಆನಂದದ ಮನಸ್ಥಿತಿಯ ಪರಿಣಾಮಗಳನ್ನು ಅಳೆದರು. ಸತತ ಮೂರು ವರ್ಷಗಳ ಕಾಲ ನಡೆದ ಈ ಸಂಶೋಧನೆಯಲ್ಲಿ, ಆಯಾ ದಿನದ ಕೆಲಸದ ಕೊನೆಯಲ್ಲಿ ಮಧ್ಯವಯಸ್ಕ ವ್ಯಕ್ತಿಗಳ ಆನಂದದ ಸ್ಥಿತಿಯನ್ನು ಅವರ ಶರೀರದ ಸಹಜ ಸ್ಟೀರಾಯ್ಡ್ ಹಾರ್ಮೋನುಗಳ ಮಟ್ಟ; ಒತ್ತಡದ ಸಮಯದಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳ ಮಟ್ಟ; ಹೃದಯ ಬಡಿತದ ಗತಿ; ರಕ್ತದ ಒತ್ತಡ ಮೊದಲಾದುವುಗಳ ಜೊತೆಯಲ್ಲಿ ಹೋಲಿಕೆ ಮಾಡಿದರು. ಒಂದೇ ರೀತಿಯ ಕೆಲಸ ಮಾಡುವ, ಸರಿಸುಮಾರು ಒಂದೇ ವಯಸ್ಸಿನ, ಒಂದೇ ರೀತಿಯ ಸಾಮಾಜಿಕ ಹಿನ್ನೆಲೆಯ ವ್ಯಕ್ತಿಗಳ ಮಧ್ಯೆ ಸಂತಸದ ಮನಸ್ಥಿತಿ ಉಳ್ಳವರು ಹೆಚ್ಚು ಆರೋಗ್ಯಶಾಲಿಗಳೂ, ಕಡಿಮೆ ಕಾಯಿಲೆ ಬೀಳುವವರೂ, ಅನಾರೋಗ್ಯಗಳಿಂದ ಬೇಗನೇ ಚೇತರಿಸಿಕೊಳ್ಳುವವರೂ ಆಗಿದ್ದರು. ಈ ರೀತಿಯ ಪರಿಣಾಮಗಳು ವೃದ್ಧಾಪ್ಯಕ್ಕೂ ವಿಸ್ತರಿಸುತ್ತವೆ ಎಂದು ಸಂಶೋಧಕರ ಅಭಿಪ್ರಾಯ. ಅಂದರೆ, ಆನಂದದ ಮನಸ್ಥಿತಿ ಉಳ್ಳವರ ವೃದ್ಧಾಪ್ಯ ಹೆಚ್ಚು ಆರೋಗ್ಯಕರವೂ, ಫಲಕಾರಿಯೂ, ಮತ್ತು ಧನಾತ್ಮಕವೂ ಆಗಿರುತ್ತದೆಂದು ವಿಜ್ಞಾನಿಗಳ ಅಭಿಮತ.

 1938 ರಲ್ಲಿ ಆರಂಭವಾಗಿ, ಈಗ ಎರಡನೆಯ ಹಂತಕ್ಕೆ ಸಾಗಿರುವ, ಪ್ರಪಂಚದ ಅತ್ಯಂತ ದೀರ್ಘಾವಧಿ ಅಧ್ಯಯನಗಳಲ್ಲಿ ಒಂದಾದ ಹಾವರ್ಡ್ ವಿಶ್ವವಿದ್ಯಾಲಯದ “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಆನಂದದ ಪರಿಭಾಷೆಯತ್ತಲೂ ದೃಷ್ಟಿ ಹರಿಸಿದೆ. ಈ ಅಧ್ಯಯನದ ಮೂಲ ಉದ್ದೇಶ ಇದ್ದದ್ದು “ಒಳ್ಳೆಯ ಜೀವನ ಎಂದರೇನು? ಸಾಫಲ್ಯದ ಮಾನದಂಡ ಯಾವುದು?” ಎನ್ನುವ ಪ್ರಶ್ನೆಗಳಿಗೆ ಉತ್ತರ ಪಡೆಯುವುದು. ಈ ಅಧ್ಯಯನದ ಫಲಶ್ರುತಿ ಬಹಳ ಕುತೂಹಲಕಾರಿ. ಯಾವುದೇ ವ್ಯಕ್ತಿಗೆ ದೀರ್ಘಕಾಲಿಕ ಅವಧಿಯಲ್ಲಿ ಹೆಚ್ಚು ಆನಂದ ಮತ್ತು ವೃತ್ತಿ ಸಾಫಲ್ಯವನ್ನು ತಂದುಕೊಡುವುದು ವಿದ್ಯೆಯಾಗಲೀ, ಬುದ್ಧಿಯಾಗಲೀ, ಜಾಣತನವಾಗಲಿ ಅಲ್ಲ; ಬದಲಿಗೆ ನಮ್ಮ ವೃತ್ತಿನಿರತ ಸಂಬಂಧಗಳನ್ನು ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂಬುದು. ನಾವು ಜೀವನದಲ್ಲಿ ಸಂಬಂಧಗಳನ್ನು ಸಲಹುವ ರೀತಿಯೇ ನಮ್ಮ ಆನಂದದ ಮೂಲ ಸ್ರೋತ. ಜೀವನದಲ್ಲಿ ದೀರ್ಘಕಾಲಿಕ ಆನಂದ ಹೊಂದುವ ಪ್ರಮುಖ ವಿಧಾನವೆಂದರೆ ತಮ್ಮ ಆಪ್ತರೊಡನೆ ಆತ್ಮೀಯ ಒಡನಾಟವನ್ನು ನಿರ್ವಹಿಸುವುದು. ಸಾಮಾಜಿಕ ಸ್ತರ, ಸಂಪತ್ತು, ಕೀರ್ತಿ, ಜಾಣ್ಮೆಗಳಿಗಿಂತಲೂ ಪರಸ್ಪರ ಸಂಬಂಧಗಳ ಮಹತ್ವ ಹೆಚ್ಚೆಂದು ಈ ಅಧ್ಯಯನ ನಿರೂಪಿಸಿದೆ.

 ಆನಂದವೆನ್ನುವುದು ಜೀವನದ ಒಂದು ಆಯ್ಕೆ. ಅದನ್ನು ಸರಿಯಾಗಿ ರೂಢಿಸಿಕೊಳ್ಳುವುದು, ರೂಪಿಸಿಕೊಳ್ಳುವುದು ನಮ್ಮ ಕೈಲಿದೆ. ಆನಂದದ ಮನಸ್ಥಿತಿ ಆರೋಗ್ಯಕರ ಬದುಕಿಗೆ ರಹದಾರಿ ಎನ್ನುವುದು ವೈಜ್ಞಾನಿಕ ಸತ್ಯ.

-------------------------

20/3/2024 ರ ವಿಶ್ವ ಆನಂದ ದಿನದ ಪ್ರಯುಕ್ತ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

 


 

ಕಣ್ಣಿನ ಗಣಿತ - ಭಾಗ 2

ಡಾ. ಕಿರಣ್ ವಿ.ಎಸ್.

ವೈದ್ಯರು

ಸುಮಾರು 28 ಗ್ರಾ ತೂಗುವ ಪ್ರತಿಯೊಂದು ಕಣ್ಣು ಸುಮಾರು 20 ಲಕ್ಷ ಸಣ್ಣ-ಸಣ್ಣ ಭಾಗಗಳಿಂದ ಮಾಡಲ್ಪಟ್ಟಿದೆ ಎಂದರೆ ಅದರ ನಿಷ್ಕೃಷ್ಟತೆಯ ಅಂದಾಜು ಆಗಬಹುದು. ನಮಗೆ ಹೊರನೋಟಕ್ಕೆ ಕಾಣುವ ಕಣ್ಣು ಇಡೀ ಕಣ್ಣುಗುಡ್ಡೆಯ ಶೇಕಡಾ 16 ಮಾತ್ರ. ಉಳಿದ ಶೇಕಡಾ 84 ತಲೆಬುರುಡೆಯ ಕಣ್ಣಿನ ಕುಳಿಯ ಒಳಗೆ ಇರುತ್ತದೆ. ಮಿದುಳನ್ನು ಹೊರತುಪಡಿಸಿದರೆ ದೇಹದ ಅತ್ಯಂತ ಸಂಕೀರ್ಣ ಅಂಗ ಕಣ್ಣು. ಇಷ್ಟಾದರೂ, ದೃಷ್ಟಿಹೀನತೆಗೆ ಸಂಬಂಧಿಸಿದ ಶೇಕಡಾ 80 ಕಾರಣಗಳಿಗೆ ಚಿಕಿತ್ಸೆ ಇದೆ.

 ಇಡೀ ದೇಹದ ರಕ್ತಸಂಚಾರಕ್ಕೆ ಹೋಲಿಸಿದರೆ ಕಣ್ಣುಗಳು ಪಡೆಯುವುದು ಶೇಕಡಾ 1 ಕ್ಕಿಂತ ಕಡಿಮೆ ಪ್ರಮಾಡ ರಕ್ತ. ರೆಟಿನಾ ಪರದೆಗೆ ಇರುವ ರಕ್ತನಾಳಕ್ಕೆ ಕವಲುಗಳೂ ಇಲ್ಲ. ಅಂದರೆ, ಯಾವುದಾದರೂ ಕಾರಣಕ್ಕೆ ರೆಟಿನಾ ರಕ್ತನಾಳ ಕಟ್ಟಿಕೊಂಡರೆ ಅದಕ್ಕೆ ಬೇರೆ ಯಾವುದೇ ಗತ್ಯಂತರವಿಲ್ಲ. ರಕ್ತ ಸರಬರಾಜು ಇಲ್ಲದ ರೆಟಿನಾ 15-60 ನಿಮಿಷಗಳ ಅವಧಿಯಲ್ಲಿ ನಶಿಸಿಹೋಗುತ್ತದೆ; ತುರ್ತಾಗಿ ಚಿಕಿತ್ಸೆ ದೊರೆಯದಿದ್ದರೆ ಆ ಕಣ್ಣಿಗೆ ಶಾಶ್ವತವಾದ ಕುರುಡು ಉಂಟಾಗುತ್ತದೆ. ಪ್ರಾಯಶಃ ಕಣ್ಣುಗಳು ವಿಕಾಸವಾದ ವೇಗದಲ್ಲಿ ಅದರ ರಕ್ತಸಂಚಾರ ಆಗಲಿಲ್ಲ ಎನಿಸುತ್ತದೆ. ಹೀಗಾಗಿ, ಕಣ್ಣುಗಳು ನಮ್ಮ ಬದುಕಿಗೆ ಅದೆಷ್ಟು ಪ್ರಮುಖ ಅಂಗ ಅನ್ನುವುದನ್ನು ಮಿದುಳು ಇನ್ನೂ ಮನಗಂಡಿಲ್ಲ. ಮಿದುಳಿನ ಪಾಲಿಗೆ ಕಣ್ಣುಗಳು ಮತ್ತೊಂದು ಇಂದ್ರಿಯ ಅಷ್ಟೇ. ಆದರೆ, ನಾಗರಿಕತೆಯ ವೇಗ ನಮ್ಮ ಕಣ್ಣುಗಳಿಗೆ ಇತರ ಇಂದ್ರಿಯಗಳಿಗಿಂತಲೂ ಹೆಚ್ಚು ಮಹತ್ವ ತಂದಿದೆ. 

 ನಮ್ಮ ಮಿದುಳು ಐದು ಇಂದ್ರಿಯಗಳಿಂದ ಬರುವ ಸಂಕೇತಗಳನ್ನು ಗುರುತಿಸಿ, ಗ್ರಹಿಸಿ, ಸಂಸ್ಕರಿಸುತ್ತದೆ. ಇದರ ಪೈಕಿ ಕಣ್ಣಿನ ಸಂಕೇತಗಳಿಗೆ ಶೇಕಡಾ 50 ಸ್ಥಾನವಿದೆ. ಉಳಿದ ನಾಲ್ಕು ಇಂದ್ರಿಯಗಳು ಸೇರಿ ಶೇಕಡಾ 50 ಪಾಲು ಪಡೆಯುತ್ತವೆ. ಹೀಗಾಗಿ, ದೃಷ್ಟಿಮೂಲದ ಕಲಿಕೆ ಹೆಚ್ಚು. ಬಹುತೇಕ ಜನರಲ್ಲಿ ಕಣ್ಣಿಂದ ಕಂಡದ್ದು ಹೆಚ್ಚು ಕಾಲ, ಹೆಚ್ಚು ವಿವರಗಳ ಜೊತೆಗೆ ನೆನಪಿನಲ್ಲಿ ಉಳಿಯುತ್ತವೆ. ನಮ್ಮ ನೆನಪುಗಳ ಕೋಶದ ಶೇಕಡಾ 80 ಕಣ್ಣುಗಳಿಂದ ಕಂಡ ಚಿತ್ರಿಕೆಗಳು. ಶಬ್ದ, ರಸ, ಗಂಧ, ಸ್ಪರ್ಶಗಳು ಸೇರಿ ಉಳಿದ ಶೇಕಡಾ 20 ನೆನಪುಗಳಿಗೆ ಕಾರಣವಾಗಿವೆ. ದೃಷ್ಟಿ ಇಲ್ಲದವರಲ್ಲಿ ಉಳಿದ ನಾಲ್ಕರ ಪ್ರಮಾಣ ನೆನಪುಗಳ ಸಂಚಿಯಲ್ಲಿ ಏರುತ್ತದೆ. ಅವರು ನೀಡುವ ಕೆಲವು ವಿವರಗಳು ಸಾಮಾನ್ಯ ಜನರನ್ನು ಚಕಿತಗೊಳಿಸಬಹುದು.  

 ಕಣ್ಣುಗುಡ್ಡೆಗೆ ಬಣ್ಣವನ್ನು ನೀಡುವ ಐರಿಸ್ ಪರದೆಯ ರಚನೆ ಬೆರಳ ಗುರುತುಗಳಂತೆಯೇ ಪ್ರತಿಯೊಬ್ಬರಲ್ಲೂ ವಿಭಿನ್ನ. ಬೆರಳ ಗುರುತುಗಳು ಸುಮಾರು 40 ವಿವಿಧ ವಿನ್ಯಾಸಗಳನ್ನು ಹೊಂದಿರುತ್ತವೆ. ಈ 40 ವಿನ್ಯಾಸಗಳ ಪರಸ್ಪರ ಸಂಯೋಜನೆ ಕೋಟ್ಯಂತರ ಆಯ್ಕೆಗಳನ್ನು ನೀಡುತ್ತದೆ. ಒಬ್ಬರ ಬೆರಳ ಗುರುತಿನಂತೆ ಮತ್ತೊಬ್ಬರದ್ದು ಇರುವುದಿಲ್ಲ. ಐರಿಸ್ ನಲ್ಲಿ ಇಂತಹ 256 ವಿನ್ಯಾಸಗಳಿವೆ. ಹೀಗಾಗಿ, ಐರಿಸ್ ಸ್ಕ್ಯಾನ್ ಗಳು ಯಾವುದೇ ವ್ಯಕ್ತಿಯ ಗುರುತಿಸುವಿಕೆಯನ್ನು ಮತ್ತಷ್ಟು ನಿಖರವಾಗಿಸುತ್ತವೆ. ಅಂತೆಯೇ, ರೆಟಿನಾ ಪರದೆಯ ಮೇಲೆ ಇರುವ ರಕ್ತನಾಳಗಳ ವಿನ್ಯಾಸವೂ ಪ್ರತಿಯೊಬ್ಬರಲ್ಲೂ ವಿಭಿನ್ನ. ಈ ರಕ್ತನಾಳಗಳ ಮಾದರಿಯನ್ನು ಕೂಡ ವ್ಯಕ್ತಿಯೊಬ್ಬರ ಖಚಿತ ಗುರುತನ್ನಾಗಿ ಬಳಸಬಹುದು.

 ಐರಿಸ್ ನ ಹಿಂಭಾಗದಲ್ಲಿ ಕಣ್ಣಿನ ಮಸೂರವಿದೆ. ಇದು ಎರಡೂ ಬದಿ ಮುಂದಕ್ಕೆ ಚಾಚಿರುವ, ಅಗತ್ಯಕ್ಕೆ ತಕ್ಕಂತೆ ಹಿಗ್ಗಬಲ್ಲ ಯಾ ಕುಗ್ಗಬಲ್ಲ, ಸಂಪೂರ್ಣ ಪಾರದರ್ಶಕ ಪೀನ ಮಸೂರ. ಶರೀರದ ಯಾವುದೇ ಅಂಗಕ್ಕಿಂತಲೂ ಹೆಚ್ಚಿನ ಶೇಕಡಾವಾರು (ಪ್ರತಿಶತ 60) ಪ್ರೋಟೀನ್ ಅಂಶ ಮಸೂರದಲ್ಲಿದೆ. ಕೇವಲ 200 ಮಿಲಿಗ್ರಾಂ ತೂಗುವ ಮಸೂರ ನಿಖರ ದೃಷ್ಟಿಯನ್ನು ನೀಡುವ ಪ್ರಮುಖ ಅಂಗ. ಹೊರಪ್ರಪಂಚದಿಂದ ಬರುವ ಬೆಳಕಿನ ಕಿರಣಗಳನ್ನು ರೆಟಿನಾ ಪರದೆಯ ಮೇಲೆ ನಿಖರವಾಗಿ ಬಿಂಬಿಸುವುದು ಮಸೂರದ ಕೆಲಸ. ಬೆಳಕು ದೂರದಿಂದ ಬರುತ್ತಿದ್ದರೆ ಮಸೂರ ಉದ್ದುದ್ದವಾಗಿ ಹಿಗ್ಗುತ್ತದೆ. ಹತ್ತಿರದ ಬೆಳಕಿಗೆ ಮಸೂರ ಉದ್ದದ್ದಲ್ಲಿ ಕುಗ್ಗಿ, ದಪ್ಪನಾಗುತ್ತದೆ. ಈ ಹೊಂದಾಣಿಕೆ ಅತ್ಯಂತ ಕ್ಷಿಪ್ರವಾಗಿ, 200-250 ಮಿಲಿಸೆಕೆಂಡುಗಳಲ್ಲಿ ಜರುಗುತ್ತದೆ. ವಯಸ್ಸಾಗುತ್ತಾ ಹೋದಂತೆ ಮಸೂರದ ಪಾರದರ್ಶಕತೆ ಕಡಿಮೆಯಾಗುತ್ತದೆ. ಇದು ಒಂದು ಹಂತ ತಲುಪಿದಾಗ ಮಸೂರ ಬಿಳುಪಾಗಿ, ದೃಷ್ಟಿ ಮಸುಕಾಗುತ್ತದೆ. ಇದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ನೈಸರ್ಗಿಕ ಮಸೂರವನ್ನು ತೆಗೆದು, ಅದರ ಸ್ಥಾನದಲ್ಲಿ ಕೃತಕ ಮಸೂರವನ್ನು ಜೋಡಿಸಲಾಗುತ್ತದೆ. ಸಂಖ್ಯೆಯ ರೀತ್ಯಾ ಶರೀರದ ಎಲ್ಲ ಬಗೆಯ ಶಸ್ತ್ರಚಿಕಿತ್ಸೆಗಳ ಪೈಕಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಅಗ್ರಸ್ಥಾನದಲ್ಲಿದೆ.

 ಮಸೂರ ಮತ್ತು ರೆಟಿನಾ ಪರದೆಯ ನಡುವಿನ ಜಾಗವನ್ನು ವಿಟ್ರಿಯಸ್ ಎನ್ನುವ ಗಾಜಿನಂತಹ ಪಾರದರ್ಶಕ ಜೆಲ್ ನಂತಹ ವಸ್ತು ಆಕ್ರಮಿಸಿದೆ. ಕಣ್ಣುಗುಡ್ಡೆಯ ಶೇಕಡಾ 80 ಭಾಗ ಇದರಿಂದಲೇ ಆಗಿದೆ. ಕಣ್ಣುಗುಡ್ಡೆಯ ಆಕಾರವನ್ನು ನಿರ್ವಹಿಸುವ, ಕಣ್ಣೀಗೆ ಪೋಷಣೆಯನ್ನು ಒದಗಿಸುವ ಕೆಲಸ ಇದರದ್ದು. ಇದರ ಪ್ರಮಾಣ ಕಡಿಮೆಯಾದರೆ ಕಣ್ಣಿನ ಆಕಾರ ಬದಲಾಗುತ್ತದೆ. ರೆಟಿನಾ ಪರದೆಗೂ ಘಾಸಿಯಾಗಬಹುದು.

 ಪ್ರತಿಯೊಂದು ಕಣ್ಣಿನ ರೆಟಿನಾ ಪರದೆಯಲ್ಲಿ ಬೆಳಕನ್ನು ಗ್ರಹಿಸುವ ಹನ್ನೊಂದು ಕೋಟಿಗೂ ಮಿಗಿಲಾದ ಸಂಖ್ಯೆಯ ವಿಶಿಷ್ಟ ಕೋಶಗಳಿವೆ. ಇವುಗಳ ಪೈಕಿ ಸುಮಾರು 70 ಲಕ್ಷ ಕೋಶಗಳು ಶಂಕುವಿನ ಆಕೃತಿಯವು. ಇವು ಬೆಳಕಿನ ಜೊತೆ ಬಣ್ಣಗಳನ್ನು ಮತ್ತು ಆಕಾರದ ಸೂಕ್ಷ್ಮಗಳನ್ನು ಗ್ರಹಿಸುತ್ತವೆ. ಮನುಷ್ಯರ ಕಣ್ಣುಗಳ ಶಂಕು ಕೋಶಗಳು ಕೆಂಪು, ಹಸಿರು ಮತ್ತು ನೀಲಿ ಎಂಬ ಮೂರು ಬಣ್ಣಗಳನ್ನು ಗುರುತಿಸಬಲ್ಲವು. ಇವನ್ನು ಪ್ರಾಥಮಿಕ ಬಣ್ಣಗಳು ಎನ್ನುತ್ತಾರೆ. 70 ಲಕ್ಷ ಶಂಕು ಕೋಶಗಳ ಪೈಕಿ ಶೇಕಡಾ 64 (45 ಲಕ್ಷ) ಕೆಂಪು ಬಣ್ಣವನ್ನೂ, ಶೇಕಡಾ 32 (22 ಲಕ್ಷ) ಹಸಿರು ಬಣ್ಣವನ್ನೂ ಗುರುತಿಸುತ್ತವೆ. ಇವು ರೆಟಿನಾದ ಮಧ್ಯಭಾಗದಲ್ಲಿ ಕೇಂದ್ರೀಕೃತವಾಗಿವೆ. ಉಳಿದ 3 ಲಕ್ಷ ಶಂಕು ಕೋಶಗಳು ನೀಲಿ ಬಣ್ಣವನ್ನು ಗುರುತಿಸುತ್ತವೆ. ಇವು ರೆಟಿನಾ ಪರದೆಯ ಅಂಚುಗಳಲ್ಲಿ ಇರುತ್ತವೆ. ಈ ಮೂರೂ ಬಣ್ಣಗಳ ಸಂಯೋಜನೆಯಿಂದ ನಮ್ಮ ಕಣ್ಣುಗಳು ಸುಮಾರು ಒಂದು ಕೋಟಿ ವಿವಿಧ ಬಣ್ಣಗಳ ಛಾಯೆಗಳನ್ನು ಗುರುತಿಸಬಲ್ಲವು. ಯಾವುದೇ ಒಂದು ಬಗೆಯ ಶಂಕು ಕೋಶಗಳು ಸರಿಯಾಗಿಲ್ಲದಿದ್ದರೆ ಬಣ್ಣಗುರುಡು ಉಂಟಾಗುತ್ತದೆ. ದುಂಬಿ, ಚಿಟ್ಟೆಗಳಲ್ಲಿ ನಾಲ್ಕು ಬಗೆಯ ಶಂಕು ಕೋಶಗಳಿವೆ. ಅವುಗಳು ಮನುಷ್ಯರಿಗಿಂತಲೂ 350 ಪಟ್ಟು ಹೆಚ್ಚು ಬಣ್ಣಗಳನ್ನು ನೋಡಬಲ್ಲವು. ಹಕ್ಕಿಗಳಲ್ಲಿ ಐದು ಬಗೆಯ ಶಂಕು ಕೋಶಗಳಿವೆ. ಅವುಗಳ ವರ್ಣಗ್ರಹಣ ಸಾಮರ್ಥ್ಯ ಊಹೆಗೂ ನಿಲುಕದ್ದು.

 ರೆಟಿನಾದ ಉಳಿದ ಹತ್ತು ಕೋಟಿಗೂ ಅಧಿಕ ಕೋಶಗಳು ಸರಳಿನ ಆಕೃತಿಯವು. ಇವು ಮಂದ ಬೆಳಕನ್ನು ಗ್ರಹಿಸುತ್ತವೆ. ಇವುಗಳಿಗೆ ವರ್ಣಗ್ರಹಣ ಸಾಮರ್ಥ್ಯ ಇಲ್ಲ. ಕೆಲಸದ ದೃಷ್ಟಿಯಿಂದ ಇವು ಶಂಕು ಕೋಶಗಳಿಗಿಂತಲೂ ಒಂದು ಸಾವಿರ ಪಟ್ಟು ಹೆಚ್ಚು ಸಾಮರ್ಥ್ಯ ಉಳ್ಳವು. ಬೆಳಕಿನ ಅತ್ಯಂತ ಸೂಕ್ಷ್ಮ ತರಂಗಗಳನ್ನೂ ಇವು ಪತ್ತೆ ಮಾಡುತ್ತವೆ. ಆದರೆ, ಇವುಗಳ ಸಾಮರ್ಥ್ಯ ಸಂಪೂರ್ಣವಾಗಿ ಅನಾವರಣಗೊಳ್ಳಲು ಸುಮಾರು ಮೂವತ್ತು ನಿಮಿಷಗಳ ಸಮಯ ಬೇಕು. ಅಂದರೆ, ಸುಮಾರು ಅರ್ಧಗಂಟೆ ಅವಧಿಯ ಕತ್ತಲೆಯಲ್ಲಿ ಇದ್ದರೆ ಅತ್ಯಂತ ಕ್ಷೀಣವಾದ ಬೆಳಕು ಕೂಡ ನಮಗೆ ಗೋಚರಿಸಬಲ್ಲದು. ಸರಳಿನ ಕೋಶಗಳು ರೆಟಿನಾದ ತೀರಾ ಮಧ್ಯಭಾಗವನ್ನು ಹೊರತುಪಡಿಸಿ ಉಳಿದೆಲ್ಲೆಡೆ ಹರಡಿವೆ. ಸರಳಿನ ಕೋಶಗಳು ಎದುರಿನ ವಸ್ತುವಿನ ಚಲನೆಗೆ ಕೂಡ ಸ್ಪಂದಿಸುತ್ತವೆ. ನೀಲಿ ಬೆಳಕು ಈ ಕೋಶಗಳನ್ನು ಪ್ರಚೋದಿಸಬಲ್ಲವು. ಆದರೆ, ಕೆಂಪು ಬೆಳಕು ಸರಳಿನ ಕೋಶಗಳ ಮೇಲೆ ಪ್ರಭಾವ ಬೀರುವುದಿಲ್ಲ. ಹೀಗಾಗಿ, ಮಂದ ಬೆಳಕಿನಲ್ಲಿ ಕೆಲಸ ಮಾಡಬೇಕಾದವರು (ಫೋಟೋಗ್ರಾಫಿ, ಎಕ್ಸ್-ರೆ ಫಲಕಗಳನ್ನು ಸಂಸ್ಕರಿಸುವವರು) ಕೆಂಪು ಬಣ್ಣದ ದೀಪ ಉರಿಸುವುದು ಸೂಕ್ತ. ಇದರಿಂದ ಕತ್ತಲೆಯಲ್ಲಿ ಅವರ ಸರಳಿನ ಕೋಶಗಳ ಸಾಮರ್ಥ್ಯಕ್ಕೆ ಕುಂದು ಉಂಟಾಗುವುದಿಲ್ಲ.

 ಕಣ್ಣಿಗೆ ಘಾಸಿಯಾಗುವ ಪ್ರಮುಖ ಕಾರಣಗಳಲ್ಲಿ ಒಂದು ಕಣ್ಣನ್ನು ಚಂದಗಾಣಿಸಲು ಮಾಡಿಕೊಳ್ಳುವ ಮೇಕಪ್ ಪ್ರಕ್ರಿಯೆ. ಈ ನಿಟ್ಟಿನಲ್ಲಿ ಬಳಸುವ ಸಲಕರಣೆಗಳು ಕಣ್ಣಗೆ ಭೌತಿಕವಾಗಿ ಪೆಟ್ಟು ಮಾಡಬಲ್ಲವು. ಕಣ್ಣಿನ ಅಂದ ಹೆಚ್ಚಿಸುತ್ತದೆ ಎಂದು ನಂಬಿರುವ ಕೆಲವು ವಸ್ತುಗಳಲ್ಲಿನ ರಾಸಾಯನಿಕಗಳು ಕಣ್ಣಿನ ಕೆಲಸಕ್ಕೆ ಧಕ್ಕೆ ಮಾಡಬಲ್ಲವು. ಕಣ್ಣಿಗೆ ಸಾಕಷ್ಟು ವಿಶ್ರಾಂತಿ ನೀಡುವುದು, ಧೂಳು-ಮಾಲಿನ್ಯ-ಹೊಗೆಗಳಿಂದ ಕಣ್ಣನ್ನು ರಕ್ಷಿಸುವುದು, ಆಗಾಗ ಶುದ್ಧನೀರನ್ನು ಎರಚಿಕೊಂಡು ಕಣ್ಣುಗಳನ್ನು ಶುಚಿಯಾಗಿಡುವುದು, ಸಾಕಷ್ಟು ನಿದ್ರೆ ಮಾಡುವುದು, ಪೋಷಕಾಂಶಭರಿತ ಆಹಾರ ಸೇವನೆ ಮೊದಲಾದವು ಕಣ್ಣಿನ ಆರೋಗ್ಯದ ಮೂಲ ಸ್ರೋತಗಳು. ಆರೋಗ್ಯಕರ ಕಣ್ಣಿಗೆ ಇರುವ ಹೊಳಪೇ ಅದರ ಚಂದ. ಬೇರೆ ಯಾವ ಮೇಕಪ್ಪಿನ ಅಗತ್ಯವೂ ಕಣ್ಣುಗಳಿಗೆ ಇಲ್ಲ.

 ಕಣ್ಣಿನ ಗಣಿತ ಅಗಣಿತ ಅಚ್ಚರಿಗಳ ಸಮೂಹ!

---------------------------   

 ಮಾರ್ಚ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/306f9afb953a7f6a19ca3b49d78c007fc848c96b202403.pdf.html?fbclid=IwAR2REHPo1N1RTn8QvYHwjWMnvh_D5Fy6VHzvWwePu_XG2ylfPL8AL5bO_mo

 

 


ಗರ್ಭಕಂಠದ ಕ್ಯಾನ್ಸರ್ – ನಿರ್ಲಕ್ಷ್ಯ ಕೂಡದು

ಡಾ. ಕಿರಣ್ ವಿ. ಎಸ್.

ವೈದ್ಯರು

 ಇತ್ತೀಚಿಗೆ ಅನೇಕ ಕಾರಣಗಳಿಂದ ಗರ್ಭಕಂಠದ ಕ್ಯಾನ್ಸರ್ ಸುದ್ಧಿಯಲ್ಲಿದೆ. ವಿಶ್ವದಾದ್ಯಂತ ಪ್ರತಿ ವರ್ಷ ಮೂರೂವರೆ ಲಕ್ಷಕ್ಕೂ ಹೆಚ್ಚು ಮಹಿಳೆಯರು ಗರ್ಭಕಂಠದ ಕ್ಯಾನ್ಸರ್ ನಿಂದ ಮರಣಿಸುತ್ತಾರೆ. ಜಗತ್ತಿನಲ್ಲಿ ಸ್ತ್ರೀಯರನ್ನು ಕಾಡುವ ಕ್ಯಾನ್ಸರ್ ಗಳ ಪೈಕಿ ಸ್ತನಗಳು, ಶ್ವಾಸಕೋಶಗಳು, ಕರುಳಿನ ನಂತರ ಗರ್ಭಕಂಠದ ಕ್ಯಾನ್ಸರ್ ಗೆ ನಾಲ್ಕನೆಯ ಸ್ಥಾನ. ವಾರ್ಷಿಕವಾಗಿ ಸುಮಾರು ಆರೂವರೆ ಲಕ್ಷ ಸ್ತ್ರೀಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪತ್ತೆಯಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇದು ಪತ್ತೆಯಾಗದೇ ಉಳಿಯುತ್ತದೆ ಎಂದು ತಜ್ಞರ ಅಭಿಮತ. ಜಗತ್ತಿನ ಎಲ್ಲ ದೇಶಗಳಲ್ಲೂ ಗರ್ಭಕಂಠದ ಕ್ಯಾನ್ಸರ್ ಕಾಣುತ್ತದೆಯಾದರೂ, ಇದರಿಂದ ಮರಣಿಸುವವರು ಆಫ್ರಿಕಾ, ದಕ್ಷಿಣ ಏಷ್ಯಾ, ಮತ್ತು ಮಧ್ಯ ಅಮೆರಿಕಗಳಲ್ಲಿ ಹೆಚ್ಚಾಗಿ ಕಾಣುತ್ತಾರೆ. ಇದಕ್ಕೆ ಮುಖ್ಯ ಕಾರಣಗಳು ಈ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಾಣುವ ಸ್ತ್ರೀ-ಆರೋಗ್ಯದ ಅವಗಣನೆ, ಕ್ಯಾನ್ಸರ್ ಪತ್ತೆ ಮಾಡಲು ಅನುಕೂಲಗಳ ಅಭಾವ, ಚಿಕಿತ್ಸೆಯ ಅಲಭ್ಯತೆ, ಲಸಿಕೆಗಳ ಬಗೆಗಿನ ಅಜ್ಞಾನ. ಇದರ ಜೊತೆಗೆ ಜಗತ್ತಿನಲ್ಲೆಲ್ಲ ಪಸರಿಸಿರುವ ಎಚ್.ಐ.ವಿ. ಕಾಯಿಲೆ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸಿ, ಗರ್ಭಕಂಠದ ಕ್ಯಾನ್ಸರ್ ನ ಸಾಧ್ಯತೆಯನ್ನು ಆರು ಪಟ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.  

 ಗರ್ಭಕಂಠ ಎಂದರೇನು? ಗರ್ಭಕೋಶ ಎನ್ನುವುದು ಸ್ತ್ರೀಯರ ಕಿಬ್ಬೊಟ್ಟೆಯಲ್ಲಿರುವ ಚೀಲದಂತಹ ಅಂಗ. ಇದರ ಆರಂಭಿಕ ಭಾಗ ಗರ್ಭಕಂಠ. ಇದು ಯೋನಿಯನ್ನು ಗರ್ಭಾಶಯಕ್ಕೆ ಸಂಪರ್ಕಿಸುವ ಕಿರಿದಾದ ಭಾಗ. ಗರ್ಭಾಶಯದಿಂದ ಮಾಸಿಕ ಋತುಸ್ರಾವ ಗರ್ಭಕಂಠದ ಮೂಲಕ ಹಾಯ್ದು ಯೋನಿಯ ದಾರಿಯಿಂದ ಹೊರಹೋಗುತ್ತದೆ. ಹೆಣ್ಣು ಗರ್ಭ ಧರಿಸಿದಾಗ ಬೆಳೆಯುತ್ತಿರುವ ಭ್ರೂಣಕ್ಕೆ ಸಮನಾಗಿ ಗರ್ಭಕೋಶದ ಮೇಲಿನ ಭಾಗ ಹಿಗ್ಗುತ್ತಾ ಹೋಗುತ್ತದೆ. ಇದಕ್ಕೆ ವಿರುದ್ಧವಾಗಿ ಗರ್ಭಕಂಠ ಕಿರಿದಾಗಿಯೇ ಇದ್ದು, ಭ್ರೂಣವು ಹೊರಗೆ ಜಾರದಂತೆ ಕಾಪಾಡುತ್ತದೆ. ಶಿಶುವಿನ ಜನನದ ವೇಳೆ ಗರ್ಭಕಂಠ ಹಿಗ್ಗಿ, ಹೆರಿಗೆಗೆ ಅನುವು ಮಾಡಿಕೊಡುತ್ತದೆ.  

 ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕು ಎನ್ನುವ ಲೈಂಗಿಕವಾಗಿ ಹರಡುವ ಕಾಯಿಲೆ ಗರ್ಭಕಂಠದ ಕ್ಯಾನ್ಸರ್ ನ ಅತಿ ಮುಖ್ಯ ಕಾರಣ. ಲೈಂಗಿಕವಾಗಿ ಸಕ್ರಿಯರಾಗಿರುವ ಬಹುತೇಕ ಜನರಲ್ಲಿ ಈ ವೈರಸ್ ಸೋಂಕು ಸಣ್ಣ ಮಟ್ಟದಲ್ಲಿ ಇರುತ್ತದೆ. ಶರೀರದ ರಕ್ಷಕ ವ್ಯವಸ್ಥೆ ಇದರ ಸೋಂಕನ್ನು ಬಹುಮಟ್ಟಿಗೆ ನಿಗ್ರಹಿಸುತ್ತದೆ. ಆದರೆ ಈ ವೈರಸ್ ಸೋಂಕು ಪದೇ ಪದೇ ಗರ್ಭಕಂಠವನ್ನು ಘಾಸಿ ಮಾಡುತ್ತಲೇ ಹೋದರೆ ಸಾಮಾನ್ಯ ಜೀವಕೋಶಗಳು ನಶಿಸಿ, ಆ ಸ್ಥಾನದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವ ಸಾಧ್ಯತೆಗಳು ಹೆಚ್ಚು. ಲೈಂಗಿಕ ಸಂಗಾತಿಗಳ ಸಂಖ್ಯೆ ಅಧಿಕವಾದಷ್ಟೂ ಗರ್ಭಕಂಠದ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಇದರ ಜೊತೆಗೆ ಸಣ್ಣವಯಸ್ಸಿನಲ್ಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ಶರೀರದ ರೋಗನಿರೋಧಕ ಶಕ್ತಿಯ ಇಳಿಕೆ, ಪೌಷ್ಟಿಕ ಆಹಾರದ ಕೊರತೆ, ಅಶುಚಿ, ಹೆಚ್ಚು ಬಾರಿ ಗರ್ಭ ಧರಿಸುವುದು, ಹಾರ್ಮೋನ್-ಯುಕ್ತ ಗರ್ಭನಿರೋಧಕಗಳ ಬಳಕೆ, ಧೂಮಪಾನ, ಮದ್ಯಪಾನಗಳ ಅಭ್ಯಾಸ, ಮಾದಕ ದ್ರವ್ಯಗಳ ವ್ಯಸನ, ಸ್ಟೀರಾಯ್ಡ್ ಔಷಧಗಳ ಚಿಕಿತ್ಸೆ, ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುವ ಎಚ್.ಐ.ವಿ. ಯಂತಹ ಕಾಯಿಲೆಗಳು ಮೊದಲಾದುವು ಗರ್ಭಕಂಠದ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತವೆ.

 ಅಸಹಜ ಮತ್ತು ಅನಿಯಮಿತವಾಗಿ ಯೋನಿಯ ಮೂಲಕ ರಕ್ತಸ್ರಾವ ಆಗುವುದು ಗರ್ಭಕಂಠದ ಕ್ಯಾನ್ಸರ್ ನ ಪ್ರಮುಖ ಲಕ್ಷಣ. ಎರಡು ಮಾಸಿಕ ಋತುಸ್ರಾವಗಳ ನಡುವೆ ಆಗಾಗ ರಕ್ತಸ್ರಾವ ಆಗುವುದು, ಸಂಭೋಗದ ನಂತರ ಸಣ್ಣಪ್ರಮಾಣದಲ್ಲಿ ರಕ್ತಸ್ರಾವ ಕಾಣುವುದು, ಕಿಬ್ಬೊಟ್ಟೆ, ಸೊಂಟ ಮತ್ತು ಬೆನ್ನಿನ ಹಿಂಭಾಗದ ನೋವು, ಯೋನಿಸ್ರಾವದಲ್ಲಿ ದುರ್ವಾಸನೆ, ಮಾಸಿಕ ಋತುಸ್ರಾವ ನಿಂತ ಕೆಲವರ್ಷಗಳ ಬಳಿಕೆ ಮತ್ತೆ ರಕ್ತಸ್ರಾವ ಕಾಣುವುದು, ಪದೇ ಪದೇ ನೋವುಯುಕ್ತ ಮೂತ್ರವಿಸರ್ಜನೆ ಆಗುವಿಕೆ, ಮೊದಲಾದುವು ಗರ್ಭಕಂಠದ ಕ್ಯಾನ್ಸರ್ ನ ಕೆಲವು ಲಕ್ಷಣಗಳು. ಆರಂಭಿಕ ಹಂತದಲ್ಲಿ ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಿದರೆ ಕ್ಯಾನ್ಸರ್ ಕೋಶಗಳು ಶರೀರದ ಇತರ ಅಂಗಗಳಿಗೆ ವ್ಯಾಪಿಸುವ ಸಾಧ್ಯತೆಗಳಿರುತ್ತವೆ. ಒಮ್ಮೆ ಕ್ಯಾನ್ಸರ್ ಗರ್ಭಕಂಠದಿಂದ ಇತರ ಅಂಗಗಳಿಗೆ ಹರಡಿದರೆ ಚಿಕಿತ್ಸೆ ಬಹಳ ಕಷ್ಟ; ಫಲಿತಾಂಶವೂ ಕಡಿಮೆ.

 ಗರ್ಭಕಂಠದ ಕ್ಯಾನ್ಸರ್ ಪತ್ತೆಗಾಗಿ ಸಾಕಷ್ಟು ಪರೀಕ್ಷೆಗಳಿವೆ. ಪ್ಯಾಪ್ ಸ್ಮಿಯರ್ ಎಂದು ಕರೆಯುವ ಪೂರ್ವಭಾವಿ ಪರೀಕ್ಷೆಯಲ್ಲಿ ಗರ್ಭಕಂಠದ ಮೇಲ್ಮೈ ಕೋಶಗಳನ್ನು ತೆಗೆದು ಸೂಕ್ಷ್ಮದರ್ಶಕದ ಅಡಿಯಲ್ಲಿಟ್ಟು ಪರೀಕ್ಷಿಸುತ್ತಾರೆ. ಕ್ಯಾನ್ಸರ್ ಕೋಶಗಳು ಸಾಮಾನ್ಯ ಜೀವಕೋಶಗಳಿಗಿಂತಲೂ ಭಿನ್ನವಾಗಿರುತ್ತವೆ. ಇದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಬಹುದು. ಪ್ಯಾಪ್ ಸ್ಮಿಯರ್ ಪರೀಕ್ಷೆ ಗರ್ಭಕಂಠದ ಕ್ಯಾನ್ಸರ್ ನ ಸಾಧ್ಯತೆಗಳನ್ನು ತೋರಿದರೆ, ಅದನ್ನು ನಿಖರವಾಗಿ ಪತ್ತೆ ಮಾಡಲು ಇನ್ನಷ್ಟು ಪರೀಕ್ಷೆಗಳನ್ನು ಮಾಡಿ ಖಚಿತಪಡಿಸಿಕೊಳ್ಳಬಹುದು. ಈ ಹಂತದಲ್ಲಿ ಚಿಕಿತ್ಸೆ ಸರಳ ಮತ್ತು ಪರಿಣಾಮಕಾರಿ. 

 ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಗಟ್ಟುವ ಲಸಿಕೆ ಲಭ್ಯವಿದೆ. ಈ ಲಸಿಕೆ ಹ್ಯೂಮನ್ ಪ್ಯಾಪಿಲೋಮ ವೈರಸ್ ಸೋಂಕಿನ ವಿರುದ್ಧ ರಕ್ಷಣೆ ನೀಡುತ್ತದೆ. 12-13 ವರ್ಷಗಳ ವಯಸ್ಸಿನ ಮಕ್ಕಳಿಗೆ ಈ ಲಸಿಕೆಯನ್ನು ನೀಡುವುದು ಸೂಕ್ತ ಎಂದು ತಜ್ಞರ ಅಭಿಪ್ರಾಯ. ಈ ಬಗ್ಗೆ ಕಳೆದ ಕೇಂದ್ರ ಬಜೆಟ್ ನಲ್ಲಿ ವಿಶೇಷ ಉಲ್ಲೇಖ ಮಾಡಲಾಗಿದೆ.

ಗರ್ಭಕಂಠದ ಕ್ಯಾನ್ಸರ್ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಆರೋಗ್ಯಕರ ಜೀವನಶೈಲಿ, ಸಮತೋಲಿತ ಆಹಾರ, ಪ್ರಲೋಭನೆಗಳಿಗೆ ಒಳಗಾಗದ ಮಾನಸಿಕ ಧೃಢತೆ, ಶಿಸ್ತುಬದ್ಧ ಬದುಕು, ಆರೋಗ್ಯಕ್ಕೆ ಮಾರಕವಾಗುವ ಚಟಗಳಿಂದ ದೂರ ಉಳಿಯುವಿಕೆ, ಸಮಯೋಚಿತ ಪರೀಕ್ಷೆಗಳು, ಲಸಿಕೆ, ಮೊದಲಾದ ವಿಧಾನಗಳು ಗರ್ಭಕಂಠದ ಕ್ಯಾನ್ಸರ್ ನಿಂದ ಆಗಬಹುದಾದ ಅನಾಹುತಗಳನ್ನು ತಡೆಯಬಲ್ಲವು. ಇದರ ಬಗ್ಗೆ ಪ್ರತಿಯೊಬ್ಬರೂ ಅರಿವನ್ನು ಮೂಡಿಸಿಕೊಂಡು ಕಾರ್ಯಪ್ರವೃತ್ತರಾಗುವುದು ಈ ನಿಟ್ಟಿನಲ್ಲಿ ಮಹತ್ತರ ಹೆಜ್ಜೆ.

----------------

ದಿನಾಂಕ 5/3/2024 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/an-article-on-cervical-cancer-care-and-treatment-2709376

 


ಕಣ್ಣಿನ ಗಣಿತ - ಭಾಗ 1

 ಡಾ. ಕಿರಣ್ ವಿ.ಎಸ್.

ವೈದ್ಯರು

 ನಮ್ಮ ದೇಹದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ವಿಕಾಸವಾಗಿರುವ ಅಂಗ ಕಣ್ಣು. ಈ ಪ್ರಮಾಣದ ಸಂಕೀರ್ಣ ರಚನೆಯ ಅಂಗ ಇಡೀ ಶರೀರದಲ್ಲಿ ಮತ್ತೊಂದಿಲ್ಲ. ಇದು ಕಾಲಾಂತರದಿಂದ ಎಲ್ಲರನ್ನೂ ಚಕಿತಗೊಳಿಸಿರುವ ಸಂಗತಿ. "ಕಣ್ಣಿನಂತಹ ಅತ್ಯುನ್ನತ ಮಟ್ಟದ ಸಂಕೀರ್ಣ, ಅದ್ಭುತ ವಿನ್ಯಾಸವನ್ನು ನಿರ್ಮಿಸಲು ಯಾವುದೇ ಗೊತ್ತು-ಗುರಿ ಇಲ್ಲದೇ ಸಿಕ್ಕಸಿಕ್ಕ ಹಾದಿಯಲ್ಲಿ ಸಾಗುವ ಜೀವವಿಕಾಸಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ, ಸೃಷ್ಟಿಯನ್ನು ಒಂದು ನಿರ್ದಿಷ್ಟ ದಿಕ್ಕಿನೆಡೆಗೆ ರಚಿಸುತ್ತಿರುವ ಯಾವುದೋ ಬುದ್ಧಿಶಾಲಿ ನಿರ್ಮಾತೃ ಇರಲೇಬೇಕು. ದೇವರ ಅಸ್ತಿತ್ವಕ್ಕೆ ಕಣ್ಣುಗಳ ರಚನೆಯೇ ಸಾಕ್ಷಿ" ಎಂದು ಜೀವವಿಕಾಸದ ವಿರೋಧಕರು ವಾದಿಸುತ್ತಾರೆ. ಈ ಸಂವಾದ The Blind Watchmaker ಎನ್ನುವ ವಾಗ್ಯುದ್ಧದಿಂದ ವಿಜ್ಞಾನರಂಗದಲ್ಲಿ ಪ್ರಸಿದ್ಧವಾಗಿದೆ. ತನ್ನನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಜೀವವಿಕಾಸದ ಪರ-ವಿರೋಧಗಳ ಯುದ್ಧವನ್ನು ಕಣ್ಣುಗಳು ಮೂಕಸಾಕ್ಷಿಯಂತೆ ನೋಡುತ್ತಿವೆ!

 ವಿಶ್ವದ ಆರಂಭ ಎನ್ನಲಾಗುವ ಮಹಾಸ್ಫೋಟ ಆದದ್ದು ಸುಮಾರು 1380 ಕೋಟಿ ವರ್ಷಗಳ ಹಿಂದೆ ಎಂದು ಅಂದಾಜು. ಭೂಮಿಯ ಮೇಲೆ ಮೊದಲ ಏಕಕೋಶ ಜೀವಿ ಉಗಮವಾದದ್ದು ಸುಮಾರು ಮುನ್ನೂರು ಕೋಟಿ ವರ್ಷಗಳ ಹಿಂದೆ ಎಂದು ನಂಬಲಾಗಿದೆ. ಜೀವವಿಕಾಸದಲ್ಲಿ ಮೊದಲ ಬಾರಿಗೆ ಕಣ್ಣಿನ ಕೋಶಗಳು ಉದಿಸಿ, ಸುಧಾರಿಸುತ್ತಾ ಇಂದಿನ ರಚನೆಗೆ ಬಂದದ್ದು ಸುಮಾರು 55 ಕೋಟಿ ವರ್ಷಗಳ ಕಾಲಾವಧಿಯಲ್ಲಿ. ಈ ಪ್ರಕ್ರಿಯೆಯಲ್ಲಿ, ಇಷ್ಟು ಕಡಿಮೆ ಕಾಲಾವಧಿಯಲ್ಲಿ, ಇಷ್ಟೊಂದು ಶೀಘ್ರವಾಗಿ ವಿಕಾಸಗೊಂಡು ಅತ್ಯುನ್ನತ ಮಟ್ಟದ ಸಂಕೀರ್ಣತೆಯನ್ನು ತಲುಪಿದ ಅಂಗ ಶರೀರದಲ್ಲಿ ಬೇರೊಂದಿಲ್ಲ. ಕಣ್ಣಿನ ರಚನೆ, ಕಾರ್ಯನಿರ್ವಹಣೆ, ವೇಗ - ಎಲ್ಲವೂ ಚಕಿತಗೊಳಿಸುವಷ್ಟು ಕೌಶಲ್ಯಪೂರ್ಣ.

 ಕ್ಯಾಮೆರಾದಂತೆ ವರ್ತಿಸುವ ನಮ್ಮ ಕಣ್ಣುಗಳು ಎದುರಿನ ಬಿಂಬವನ್ನು ಗ್ರಹಿಸುವ ಗ್ರಾಹಿಗಳು ಮಾತ್ರ. ಈ ನೋಟ ದೃಷ್ಟಿಯಾಗಿ ಮಾರ್ಪಾಡಾಗುವುದು ಮಿದುಳಿನಲ್ಲಿ. ಪ್ರತಿಯೊಂದು ಕಣ್ಣನ್ನೂ ಮುಂದಿನ, ಮಧ್ಯ, ಮತ್ತು ಒಳ ಎನ್ನುವ ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಒಟ್ಟು ಏಳು ವಿಭಾಗಗಳಿವೆ. ಪ್ರತಿಯೊಂದು ವಿಭಾಗವನ್ನೂ ಜೀವಕೋಶಗಳ ರಚನೆಯ ಮತ್ತು ಕೆಲಸದ ದೃಷ್ಟಿಯಿಂದ ಇನ್ನಷ್ಟು ಪದರಗಳಾಗಿ ವಿಭಜಿಸಬಹುದು. ಕಣ್ಣಿನ ಮುಂಭಾಗದ ಪಾರದರ್ಶಕ ಕಾರ್ನಿಯಾ ಪದರಕ್ಕೆ ರಕ್ತಸಂಚಾರವೇ ಇಲ್ಲ. ಅದು ನೇರವಾಗಿ ವಾತಾವರಣದಿಂದ ಆಕ್ಸಿಜನ್ ಹೀರಿ ತನ್ನ ಕೋಶಗಳನ್ನು ಸಲಹುತ್ತದೆ. ಕಣ್ಣಿನ ಒಳಭಾಗದಲ್ಲಿರುವ ಸಿನೆಮಾ ಪರದೆಯಂತಹ ರೆಟಿನಾದಲ್ಲಿ ಒಟ್ಟು ಹತ್ತು ಪದರಗಳನ್ನು ಸದ್ಯಕ್ಕೆ ಗುರುತಿಸಲಾಗಿದೆ! ಇಷ್ಟಾಗಿಯೂ, ಕಣ್ಣಿನ ರಚನೆಯನ್ನು ಅರ್ಥಮಾಡಿಕೊಳ್ಳುವ ಪ್ರಾಥಮಿಕ ಹಂತವನ್ನೂ ನಾವು ದಾಟಿಲ್ಲ ಎಂದು ವಿಜ್ಞಾನಿಗಳ ಅನಿಸಿಕೆ. ಬೆಳಕು ಕಣ್ಣಿನ ಮೂಲಕ ಇಷ್ಟೆಲ್ಲಾ ಪದರಗಳನ್ನು ದಾಟಿ ಮಿದುಳನ್ನು ತಲುಪಿ, ಅಲ್ಲಿ ದೃಷ್ಟಿ ಸಂಸ್ಕರಣವಾಗಲು ಹಿಡಿಯುವ ಸಮಯ ಕೇವಲ 13 ಮಿಲಿಸೆಕೆಂಡುಗಳು - ಅಂದರೆ, ಒಂದು ಸೆಕೆಂಡಿನ ಸಾವಿರ ಭಾಗಗಳಲ್ಲಿ 13 ಭಾಗಗಳು. ಮಿದುಳು ಆ ದೃಶ್ಯದ ಮಹತ್ವವನ್ನು ಗ್ರಹಿಸಿ, ಏನು ಮಾಡಬೇಕೆಂಬ ಸೂಚನೆಯನ್ನು ನರಮಂಡಲದ ಮೂಲಕ ಸ್ನಾಯುಗಳಿಗೆ ಕಳಿಸಲು ತಗುಲುವ ಸಮಯ ಸುಮಾರು ಅರ್ಧ ಸೆಕೆಂಡು! ಕ್ರಿಕೆಟ್ ಆಟದಲ್ಲಿ ಧೋನಿಯವರು ಸ್ಟಂಪಿಂಗ್ ಮಾಡುವ ವೇಗದ ಅವಧಿಯನ್ನು ಅತ್ಯಂತ ನಿಖರ ಎಲೆಕ್ಟ್ರಾನಿಕ್ ಗಡಿಯಾರಗಳನ್ನು ಮೂಲಕ ತೋರಿಸುತ್ತಾರಷ್ಟೇ? ಅದು ಕಣ್ಣು ಮತ್ತು ಮಿದುಳಿನ ಪರಸ್ಪರ ಹೊಂದಾಣಿಕೆಯ ಸಾಮರ್ಥ್ಯವನ್ನು ತೋರುವ ನಿದರ್ಶನ. ಮನುಷ್ಯರಿಗಿಂತಲೂ ಪ್ರಾಣಿಗಳಲ್ಲಿ ಈ ಹೊಂದಾಣಿಕೆಯ ವೇಗ ಹೆಚ್ಚು ಎಂದು ಅಧ್ಯಯನಗಳು ತೋರಿವೆ.

 ಕಣ್ಣುಗಳ ಸಾಮರ್ಥ್ಯ ಕೇವಲ ವೇಗಕ್ಕೆ ಸೀಮಿತವಾಗಿಲ್ಲ; ಅದರ ಗುಣಮಟ್ಟವೂ ಅತ್ಯಧಿಕವೇ. ಈಗೆಲ್ಲ ಮೊಬೈಲ್ ಫೋನಿನ ಕ್ಯಾಮೆರಾಗಳನ್ನು ಮೆಗಾಪಿಕ್ಸೆಲ್ ಮಾಪನದಲ್ಲಿ ಅಳೆಯುತ್ತಾರೆ. ಆ ಲೆಕ್ಕಾಚಾರದಲ್ಲಿ ಮನುಷ್ಯರ ಕಣ್ಣಿನ ಸೂಕ್ಷ್ಮತೆಯ ಸಾಮರ್ಥ್ಯ ಸುಮಾರು 576 ಮೆಗಾಪಿಕ್ಸೆಲ್. ಇಷ್ಟು ಸಾಮರ್ಥ್ಯದ ದಕ್ಷತೆಯ ಉದಾಹರಣೆ ಎಂದರೆ, ನಿರ್ಜನ ಪ್ರದೇಶದ ಬೆಟ್ಟದ ಮೇಲೆ ನಿಂತಿರುವ ವ್ಯಕ್ತಿ, ನಡುವೆ ಯಾವ ಅಡತಡೆಯೂ ಇಲ್ಲದಿದ್ದರೆ ಸುಮಾರು 22 ಕಿಲೋಮೀಟರ್ ದೂರದಲ್ಲಿ ಬೆಳಗುತ್ತಿರುವ ದೀಪದ ಬೆಳಕನ್ನು ಗ್ರಹಿಸಬಲ್ಲ. ಒಂದು ಕಣ್ಣಿನ ನೋಟವೂ ಮಿದುಳಿಗೆ ಎರಡು ಆಯಾಮಗಳಲ್ಲಿ ಎಲ್ಲ ಸಂದೇಶಗಳನ್ನೂ ರವಾನಿಸಬಲ್ಲದು. ಆದರೆ, ಎರಡು ಕಣ್ಣುಗಳ ಸಮಗ್ರ ನೋಟದಿಂದ ಮಿದುಳಿಗೆ ಆಳದ ಆಯಾಮ ತಿಳಿಯುತ್ತದೆ. ಇದನ್ನು ಪರೀಕ್ಷಿಸಲು ಒಂದು ಸರಳ ಪ್ರಯೋಗ ಮಾಡಬಹುದು. ಎರಡೂ ಕೈಗಳಲ್ಲಿ ಒಂದೊಂದು ಸೂಜಿಯನ್ನು ಹಿಡಿದು, ಕೈಗಳನ್ನು ಕಣ್ಣಿನ ಮಟ್ಟದಲ್ಲಿ ಪೂರಾ ಚಾಚಿ, ಒಂದು ಕಣ್ಣನ್ನು ಮುಚ್ಚಿಕೊಂಡು ಸೂಜಿಗಳ ತುದಿಗಳನ್ನು ನಿಧಾನವಾಗಿ ಒಂದಕ್ಕೊಂದು ತಾಕಿಸಲು ಪ್ರಯತ್ನಿಸಿದರೆ ಸಫಲವಾಗುವ ಸಾಧ್ಯತೆಗಳು ತೀರಾ ಕಡಿಮೆ. ಇದೇ ಕೆಲಸವನ್ನು ಎರಡೂ ಕಣ್ಣುಗಳನ್ನು ತೆರೆದಾಗ ಆರಾಮವಾಗಿ ಮಾಡಬಹುದು. ಯಾವುದೇ ವಸ್ತು ಎಷ್ಟು ದೂರದಲ್ಲಿದೆ ಎಂದು ಗ್ರಹಿಸಲು ಎರಡು ಕಣ್ಣುಗಳ ಇರುವಿಕೆ ಅಗತ್ಯ.

 ಕಣ್ಣಿನ ಚಲನೆಯನ್ನು ನಿಯಂತ್ರಿಸಲು ಪಟ್ಟಿಯಂತಹ ತಲಾ ಆರು ಮಾಂಸಖಂಡಗಳಿವೆ. ಶರೀರದಲ್ಲಿ ಸಾಮಾನ್ಯವಾಗಿ ಆಯಾ ಕೀಲಿನ ಚಲನೆಗೆ ಅಗತ್ಯವಾದಷ್ಟು ಶಕ್ತಿಯ ಮಾಂಸಖಂಡಗಳು ಮಾತ್ರ ಇರುತ್ತವೆ. ಆದರೆ ಕಣ್ಣಿನ ಮಾಂಸಪಟ್ಟಿಗಳ ಒಟ್ಟಾರೆ ಶಕ್ತಿ ಕಣ್ಣಿನ ಚಲನೆಗೆ ಬೇಕಾದ ಅಗತ್ಯಕ್ಕಿಂತಲೂ ಸುಮಾರು ನೂರು ಪಟ್ಟು ಹೆಚ್ಚು. ಇದರಿಂದ ಮಿಲಿಮೀಟರ್ ಮಟ್ಟದಲ್ಲಿ ಕಣ್ಣಿನ ಅತ್ಯಂತ ನಿಖರ ಚಲನೆಗೆ ಅವಕಾಶ ದೊರೆಯುತ್ತದೆ. ಎರಡೂ ಕಣ್ಣುಗಳ ಮಾಂಸಪಟ್ಟಿಗಳು ಸಂಪೂರ್ಣವಾಗಿ ಸ್ವತಂತ್ರವಾಗಿದ್ದರೂ ಅವುಗಳ ಚಲನೆ ಪರಸ್ಪರ ಪೂರಕವಾಗಿರುತ್ತದೆ. ಎಡಗಣ್ಣು ಹೇಗೆ ಚಲಿಸುತ್ತದೋ ಬಲಗಣ್ಣು ಕೂಡ ಅಯಾಚಿತವಾಗಿ, ಯಥಾವತ್ತಾಗಿ ಹಾಗೆಯೇ ಚಲಿಸುತ್ತದೆ. ಇಡೀ ದೇಹದ ಮಾಂಸಖಂಡಗಳ ಪೈಕಿ ಕಣ್ಣಿನವು ಅತ್ಯಂತ ಚುರುಕು. ಕೇವಲ ಸೆಕೆಂಡಿನ ನೂರನೆಯ ಒಂದು ಅಂಶದ ಅವಧಿಯಲ್ಲಿ ಅವು ಪ್ರತಿಕ್ರಿಯೆ ತೋರುತ್ತವೆ. ಎಚ್ಚರವಾಗಿರುವ ಪ್ರತಿಯೊಂದು ಕ್ಷಣ ಮತ್ತು ನಿದ್ರೆಯ ಸಾಕಷ್ಟು ಅವಧಿಯಲ್ಲಿ ಕಣ್ಣಿನ ಮಾಂಸಪಟ್ಟಿಗಳು ಒಂದೇ ಸಮನೆ ಕೆಲಸ ಮಾಡುತ್ತಲೇ ಇರುತ್ತವೆ. ಒಟ್ಟಾರೆ ಏಳು ಬಗೆಯ ಚಲನೆಗಳು ಕಣ್ಣಿಗೆ ಈ ಮಾಂಸಪಟ್ಟಿಗಳಿಂದ ಸಾಧ್ಯವಾಗುತ್ತದೆ. ಈ ಮಾಂಸಪಟ್ಟಿಗಳ ಪೈಕಿ ಯಾವುದೇ ಒಂದರಲ್ಲಿ ಅನತಿ ದೋಷವಿದ್ದರೂ ಮೆಳ್ಳಗಣ್ಣು ಉಂಟಾಗುತ್ತದೆ. 

 ಕಣ್ಣಿನ ಮುಂಭಾಗದಲ್ಲಿರುವ ಐರಿಸ್ ಎನ್ನುವ ವಿಭಾಗ ಕಣ್ಣುಗುಡ್ಡೆಗೆ ಬಣ್ಣವನ್ನು ನೀಡುತ್ತದೆ. ಇದರಲ್ಲಿನ ಮೆಲನಿನ್ ಎಂಬ ವರ್ಣದ್ರವ್ಯದ ಪ್ರಮಾಣದ ಅನುಸಾರ ಕಣ್ಣಿನ ಬಣ್ಣ ಬದಲಾಗುತ್ತದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚಾಗಿ ಕಾಣುವ ಕಣ್ಣುಗಳ ಬಣ್ಣ ಕಂದು. ಜೀವವಿಕಾಸದ ರೀತ್ಯಾ ನೀಲಿ ಬಣ್ಣದ ಕಣ್ಣುಗಳು ತೀರಾ ಈಚಿನವು - ಪ್ರಾಯಶಃ ಕಳೆದ ಹತ್ತು ಸಾವಿರ ವರ್ಷಗಳ ಹಿಂದೆ ಮೊದಲಿಗೆ ಕಾಣತೊಡಗಿದವು ಎಂದು ಸಂಶೋಧಕರ ಅಭಿಮತ. ಹೀಗಾಗಿ, "ನೀಲಿ ಕಣ್ಣು ಇರುವ ಎಲ್ಲರೂ ಪರಸ್ಪರ ಜೆನೆಟಿಕ್ ಸಂಬಂಧಿಗಳು" ಎಂದು ವಿಜ್ಞಾನಿಗಳ ಅಭಿಪ್ರಾಯ. ಎರಡೂ ಕಣ್ಣುಗಳೂ ಬೇರೆ ಬೇರೆ ಬಣ್ಣದಲ್ಲಿರುವುದೂ ಸಾಧ್ಯ. ಅಂತಹವರ ಸಂಖ್ಯೆ ವಿರಳ. ಕಣ್ಣುಗಳ ಗಾತ್ರ ಜನ್ಮದಿಂದ ಸಾಯುವವರೆಗೆ ಹೆಚ್ಚು ಬದಲಾಗುವುದಿಲ್ಲ. ಹೀಗಾಗಿ ಮಕ್ಕಳ ಮುಖದಲ್ಲಿ ಕಣ್ಣುಗಳು ಪ್ರಧಾನವಾಗಿ ಕಾಣುತ್ತವೆ. ಪ್ರಾಣಿವರ್ಗದ ಬಹುತೇಕ ಜೀವಿಗಳಲ್ಲಿ ಹೀಗೆಯೇ ಇರುತ್ತದೆ. ಉಷ್ಟ್ರಪಕ್ಷಿಯ ಕಣ್ಣುಗಳು ಅವುಗಳ ಮಿದುಳಿನ ಗಾತ್ರಕ್ಕಿಂತಲೂ ದೊಡ್ಡವು.

 ಕಣ್ಣಿನ ರೆಪ್ಪೆಗಳು ಕಣ್ಣನ್ನು ಹೊರಗಿನ ಅಪಾಯಗಳಿಂದ ಕಾಪಾಡುವ ಹೊಣೆ ಹೊತ್ತಿವೆ. ಕಣ್ಣು ಮಿಟುಕಿಸುವುದು ದೇಹದ ಅತ್ಯಂತ ವೇಗದ ಚಲನೆಗಳಲ್ಲಿ ಒಂದು. ಇದು ಸುಮಾರು 100-150 ಮಿಲಿಸೆಕೆಂಡುಗಳಲ್ಲಿ ಆಗುವ ಪ್ರಕ್ರಿಯೆ. ದಿನವೊಂದಕ್ಕೆ ಸುಮಾರು 12000 ದಂತೆ ಇಡೀ ಜೀವನದಲ್ಲಿ ಸುಮಾರು 32 ಕೋಟಿ ಬಾರಿ ನಮಗೆ ಅರಿವಿಲ್ಲದಂತೆ ಕಣ್ಣು ಮಿಟುಕಿಸಿರುತ್ತೇವೆ. ಪ್ರತಿ ಬಾರಿ ಕಣ್ಣು ಮಿಟುಕಿಸಿದಾಗ ದೃಷ್ಟಿಗೆ ವಿಶ್ರಾಂತಿ ದೊರೆಯುತ್ತದೆ. ಜೊತೆಗೆ ಕಣ್ಣಿನ ಆರ್ದ್ರತೆಯ ನವೀಕರಣವಾಗುತ್ತದೆ. ಕಂಪ್ಯೂಟರ್, ಮೊಬೈಲ್ ಫೋನ್, ದೂರದರ್ಶನಗಳ ಬೆಳಕಿನ ಪರದೆಯನ್ನು ನೋಡುವಾಗ ಕಣ್ಣು ಮಿಟುಕಿಸುವುದು ಕಡಿಮೆಯಾಗುತ್ತದೆ. ಆಗ ಕಣ್ಣುಗಳ ಸ್ನಾಯುಗಳಿಗೆ ವಿಶ್ರಾಂತಿ ಕಡಿಮೆಯಾಗಿ, ನೀರಿನ ಪಸೆ ಆರಿ ಹೋಗಿ ಕಣ್ಣು ನೋಯುತ್ತದೆ. ಇಂತಹ ವೃತ್ತಿಗಳಲ್ಲಿ ನಿರತರಾಗಿರುವವರು ಆಗಾಗ್ಗೆ ಪರದೆಯಿಂದ ದೂರಾಗಿ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು. ಹೆಚ್ಚು ಮಾತನಾಡುವವರು ತಮಗೆ ಅರಿವಿಲ್ಲದಂತೆ ಹೆಚ್ಚು ಬಾರಿ ಕಣ್ಣು ಮಿಟುಕಿಸುತ್ತಾರೆ.

 ಪರದೆಯ ಮೇಲಿನ ಪಠ್ಯವನ್ನು ಓದಲು ಕಾಗದದ ಮೇಲಿನ ಮುದ್ರಿತ ವಾಕ್ಯಗಳನ್ನು ಓದುವುದಕ್ಕಿಂತಲೂ ಸುಮಾರು ಶೇಕಡಾ 25ರಷ್ಟು ಹೆಚ್ಚು ಕಾಲ ಹಿಡಿಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದಕ್ಕೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲವಾದರೂ, ಮಿದುಳು ಕಾಗದಕ್ಕೆ ಹೆಚ್ಚಾಗಿ ಹೊಂದಿಕೊಂಡಿದೆ ಎನ್ನಬಹುದು.

 ಕಣ್ಣುಗಳ ಗಣಿತ ಅಸಾಮಾನ್ಯ. ಇದನ್ನು ಎರಡನೆಯ ಭಾಗದಲ್ಲಿ ಮುಂದುವರೆಸಿ, ಉಳಿದ ಕೌತುಕಗಳತ್ತ ಕಣ್ಣು ಹಾಯಿಸೋಣವಂತೆ!   

 --------------------

ಫೆಬ್ರವರಿ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಫೆಬ್ರವರಿ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/4a1b9b67da571e0b61a775dcbe352aba964bcb3c202402.pdf.html