ಮಂಗಳವಾರ, ಮೇ 3, 2022

 


ಸ್ನಾನಕ್ಕೆ ಸಾಮಾನ್ಯ ಉಷ್ಣತೆಯ ನೀರು ಸೂಕ್ತವೇ ಅಥವಾ ಬಿಸಿ ನೀರೆ?

ಡಾ. ಕಿರಣ್ ವಿ.ಎಸ್.

ವೈದ್ಯರು

ಸ್ನಾನ ಮತ್ತು ವೈಯಕ್ತಿಕ ಶುಚಿತ್ವ ನಮ್ಮ ಆರೋಗ್ಯ ರಕ್ಷಣೆಯ ಪ್ರಮುಖ ಹೆಜ್ಜೆಗಳಲ್ಲಿ ಒಂದು. ಸರಸ್ವತೀ ನದಿಯ ಹರಪ್ಪಾ-ಮೊಹೆಂಜೆದಾರೋ ನಾಗರಿಕತೆಯ ಕಾಲದಿಂದಲೂ ನಮ್ಮ ಸಂಸ್ಕೃತಿಯಲ್ಲಿ ಸ್ನಾನಕ್ಕೆ ಮುಖ್ಯ ಸ್ಥಾನವಿದೆ. ಬಿಸಿನೀರಿನ ಸ್ನಾನದ ಪದ್ದತಿ ಆರಂಭವಾದದ್ದು ನಾಗರಿಕತೆ ಸಾಕಷ್ಟು ಪ್ರಗತಿ ಹೊಂದಿದ ನಂತರವೇ. ಅದಕ್ಕಿಂತ ಮುನ್ನ ಸಹಜ ಪ್ರಕೃತಿಯಲ್ಲಿನ ಸಾಮಾನ್ಯ ಉಷ್ಣತೆಯ ನೀರಿನ ಸ್ನಾನ ಎಲ್ಲರ ದಿನಚರಿಯಾಗಿತ್ತು. ಪ್ರಸ್ತುತ ನಮಗೆ ಬಿಸಿನೀರಿನ ಸೌಲಭ್ಯ ಸುಲಭವಾಗಿ ಕೈಗೆ ಎಟುಕುವಂತಿದೆ. ಆದರೆ, ವೈಜ್ಞಾನಿಕವಾಗಿ ಸ್ನಾನಕ್ಕೆ ಸಾಮಾನ್ಯ ಉಷ್ಣತೆಯ ನೀರು ಸೂಕ್ತವೇ ಅಥವಾ ಬಿಸಿ ನೀರೆ ಎಂಬ ಪ್ರಶ್ನೆ ಆಗಾಗ ಬರುತ್ತದೆ.

ಸ್ನಾನದ ಅಗತ್ಯವೇನು? ಮೊದಲನೆಯದಾಗಿ ಶುಚಿತ್ವ; ದಿನವಿಡೀ ಚರ್ಮದ ಮೇಲೆ ಸಂಗ್ರಹವಾಗುವ ಬಾಹ್ಯ ಕೊಳೆ ಮತ್ತು ಶರೀರದ ಒಳಗಿನಿಂದ ಚರ್ಮದ ಮೂಲಕ ಸ್ರವಿಸುವ ಮಲಿನ ವಸ್ತುಗಳನ್ನು ತೊಳೆಯುವುದು. ಇದರ ಜೊತೆಗೆ ಶರೀರದ ಮಾಂಸಖಂಡಗಳನ್ನು ಸಡಿಲಾಗಿಸುವುದು, ರಕ್ತಸಂಚಾರವನ್ನು ಉತ್ತೇಜನಗೊಳಿಸುವುದು, ಶರೀರವನ್ನು ಉಲ್ಲಸಿತವಾಗಿಸುವುದು, ಚರ್ಮಕ್ಕೆ ಬೇಕಾದ ಆರ್ದ್ರತೆಯನ್ನು ಒದಗಿಸುವುದು - ಮುಂತಾದ ಪ್ರಯೋಜನಗಳಿವೆ. ಈ ದೃಷ್ಟಿಯಿಂದ ಸ್ನಾನ ಮಾಡುವ ನೀರಿನ ಉಷ್ಣತೆಯ ಗುಣಾವಗುಣಗಳನ್ನು ಪರೀಕ್ಷಿಸಬೇಕು.

ಚರ್ಮದ ತುರಿಕೆಯ ಒಂದು ಪ್ರಮುಖ ಕಾರಣ ಅದು ತೇವ ಕಳೆದುಕೊಂಡು ಒಣದಾಗುವುದು. ಶರೀರದ ಇತರ ಅಂಗಗಳಂತೆ ಚರ್ಮಕ್ಕೂ ತನ್ನ ಆರ್ದ್ರತೆಯನ್ನು ಕಾಪಾಡಿಕೊಳ್ಳಲು ನೀರಿನ ಅಗತ್ಯವಿದೆ. ಈ ನೀರು ಇಂಗದಂತೆ ಮಾಡಲು ಚರ್ಮಕ್ಕೆ ಹಲವಾರು ತೈಲಯುಕ್ತ ಲೇಪನಗಳನ್ನು ಹಚ್ಚಲಾಗುತ್ತದೆ. ನಾವು ಸೇವಿಸುವ ನೀರು ಚರ್ಮ ಆರ್ದ್ರಗೊಳ್ಳಲು ಸಹಾಯಕ. ಅಂತೆಯೇ, ಸ್ನಾನ ಮಾಡುವಾಗ ಚರ್ಮ ಸಾಕಷ್ಟು ನೀರನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ. ಹೀಗಾಗಿ, ಸ್ನಾನದ ವೇಳೆ ತೀಕ್ಷವಾದ ಸಾಬೂನನ್ನು ಬಳಸಬಾರದು. ಅಂತೆಯೇ, ಸ್ನಾನದ ನಂತರ ನೀರನ್ನು ಇಂಗಿಸಿಕೊಳ್ಳಲು ಸ್ವಲ್ಪ ಕಾಲ ಚರ್ಮಕ್ಕೆ ಅವಕಾಶ ನೀಡಬೇಕು. ಸ್ನಾನದ ಒಡನೆಯೇ ಚರ್ಮವನ್ನು ಟವೆಲಿನಿಂದ ಉಜ್ಜುವುದು ತಪ್ಪು. ಬದಲಿಗೆ, ಅಧಿಕಾಂಶ ನೀರನ್ನು ಮಾತ್ರ ಮೃದುವಾಗಿ ಒತ್ತಿ ತೆಗೆಯಬೇಕು. ಆಗ ಚರ್ಮವು ಹೆಚ್ಚಿನಂಶ ನೀರನ್ನು ಒಡಗೂಡಿಸಿಕೊಳ್ಳುತ್ತದೆ. ಸ್ನಾನದ ವೇಳೆ ಚರ್ಮವು ಬಿಸಿನೀರಿಗಿಂತ ಸಾಮಾನ್ಯ ಉಷ್ಣತೆಯ ನೀರನ್ನು ಚೆನ್ನಾಗಿ ಹೀರಿಕೊಳ್ಳುತ್ತದೆ.

ಚರ್ಮದ ಮೇಲೆ ತಣ್ಣೀರು ಬಿದ್ದಾಗ ಶರೀರಕ್ಕೆ ಸಣ್ಣ ಆಘಾತದ ಅನುಭವ ಆಗುತ್ತದೆ. ಇದರಿಂದ ಉತ್ಪಾದನೆಯಾಗುವ ಚೋದಕಗಳು ಉಸಿರಾಟದ ಗತಿಯನ್ನು ಹೆಚ್ಚಿಸುತ್ತವೆ; ಹೃದಯದ ಬಡಿತ ಏರುತ್ತದೆ; ಮಿದುಳು ಪರಿಸ್ಥಿತಿಯನ್ನು ಗ್ರಹಿಸಲು ಚುರುಕಾಗುತ್ತದೆ; ಶರೀರ ಒಟ್ಟಾರೆ ಎಚ್ಚರದ ಸ್ಥಿತಿಯನ್ನು ತಲುಪುತ್ತದೆ; ಮಾಡುವ ಕೆಲಸಗಳ ಬಗ್ಗೆ ನಿಗಾ ಇರುವಂತಾಗುತ್ತದೆ. ಸಾಮಾನ್ಯ ಉಷ್ಣತೆಯ ನೀರು ಚರ್ಮದ ಮೇಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದರಿಂದ ಶರೀರದ ಒಳಗಿನ ಅಂಗಗಳಿಗೆ ಸಾಕಷ್ಟು ರಕ್ತ ಸಂಚಾರ ಆಗುತ್ತದೆ. ಸ್ನಾಯುಗಳಿಗೆ ರಕ್ತದ ಸರಬರಾಜು ಹೆಚ್ಚಿ, ಅವುಗಳು ಶೀಘ್ರವಾಗಿ ಸುಧಾರಿಸುತ್ತವೆ. ಸಾಮಾನ್ಯ ಉಷ್ಣತೆಯ ನೀರಿನ ಸ್ನಾನ ಮಾಡುವವರಿಗೆ ಅನತಿಕಾಲದಲ್ಲೇ ಶರೀರದ ಒಳಗೆ ಬೆಚ್ಚಗಿನ ಅನುಭವ ಆಗುವುದು ಇದೇ ಕಾರಣಕ್ಕೆ.

ಚಳಿಯ ವೇಳೆ ನಮ್ಮ ಶರೀರದ ತಾಪಮಾನ ಕಡಿಮೆಯಾದಾಗ ನಮಗೆ ನಡುಕ ಬರುತ್ತದೆ. ಇದು ನಮ್ಮ ಶರೀರದ ಸಹಜ ಉಷ್ಣತೆಯನ್ನು ಹೆಚ್ಚಿಸುವ ಒಂದು ವಿಧಾನ. ಇದಲ್ಲದೇ, ನಮ್ಮ ಶರೀರದಲ್ಲಿ ಕಂದು ಕೊಬ್ಬು ಎಂಬ ಪ್ರಭೇದದ ಉಪಯುಕ್ತ ಕೊಬ್ಬಿನ ಅಂಶವಿದೆ. ಇದು ಕರುಗುವ ಪ್ರಕ್ರಿಯೆಯಲ್ಲಿ ಹೆಚ್ಚಿನ ಉಷ್ಣತೆ ಬಿಡುಗಡೆ ಆಗುತ್ತದೆ. ಸಾಮಾನ್ಯ ಉಷ್ಣತೆಯ ನೀರಿನ ಸ್ನಾನದ ವೇಳೆ ಕಂದು ಕೊಬ್ಬು ಕರಗಿ, ಹೆಚ್ಚು ಕಂದು ಕೊಬ್ಬು ಉತ್ಪತ್ತಿಯಾಗಲು ನೆರವಾಗುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಶರೀರದ ಕೊಬ್ಬಿನ ಅಂಶದ ನಿರ್ವಹಣೆಯಲ್ಲಿ ಇದು ಪಾತ್ರ ವಹಿಸಬಹುದು.  

ಬಿಸಿ ನೀರಿನ ಸ್ನಾನದ ವೇಳೆ ಚರ್ಮದ ರಕ್ತನಾಳಗಳು ಹಿಗ್ಗುತ್ತವೆ. ಚರ್ಮದ ಮೇಲಿನ ಪೊರೆಗಳು ತೆರೆದುಕೊಳ್ಳುತ್ತವೆ. ಇದರಿಂದ ಚರ್ಮದ ಮಾಲಿನ್ಯ ಬೇಗ ತೊಡೆಯುತ್ತದೆ. ಆದರೆ, ಬಿಸಿ ನೀರು ಮತ್ತು ಅತಿಯಾದ ಸಾಬೂನಿನ ಬಳಕೆಯಿಂದ ಚರ್ಮದ ಮೇಲಿನ ಉಪಯುಕ್ತ ತೈಲಗಳು ನಷ್ಟವಾಗುತ್ತವೆ. ಇದು ದೀರ್ಘಕಾಲಿಕ ಅವಧಿಯಲ್ಲಿ ಚರ್ಮದ ಬಿರುಸುತನಕ್ಕೆ ಕಾರಣವಾಗಬಹುದು.

ಬಿಸಿ ನೀರಿನಿಂದ ಶ್ವಾಸನಾಳಗಳು ತೆರೆದುಕೊಳ್ಳುತ್ತವೆ. ಕಫದ ಸಮಸ್ಯೆ ಇರುವವರಲ್ಲಿ ಇದು ಉತ್ತಮ. ಬಿಸಿ ನೀರು ಸ್ನಾಯುಗಳನ್ನು ಸಡಿಲಗೊಳಿಸುತ್ತವೆ. ಶರೀರಕ್ಕೆ ಆರಾಮವೆನಿಸುತ್ತದೆ. ಅತಿಯಾದ ಬಿಸಿ ನೀರಿನ ಸ್ನಾನದಿಂದ ಚರ್ಮದ ಮೇಲಿನ ಅಲರ್ಜಿಕಾರಕ ಕೋಶಗಳು ಪ್ರಚೋದನೆಗೊಳ್ಳುತ್ತವೆ. ಕೆಲವರಿಗೆ ಬಿಸಿ ನೀರಿನ ಸ್ನಾನದ ನಂತರ ತುರಿಕೆಯ ಅನುಭವ ಆಗುವುದಿದೆ.

ಸ್ನಾನಕ್ಕೆ ಯಾವ ನೀರು ಉತ್ತಮ? ತಣ್ಣಗಿನ ನೀರನ್ನು ಸಹಿಸುವುದು ಬಹುತೇಕರಿಗೆ ಸಾಧ್ಯವಿಲ್ಲ. ಜೊತೆಗೆ, ಆರಂಭದಲ್ಲೇ ಅಸಹನೀಯ ಅನುಭವಗಳಾದರೆ, ಯಾವುದೇ ಅಭ್ಯಾಸವೂ ದೀರ್ಘಕಾಲಿಕವಾಗುವುದಿಲ್ಲ. ಸಾಮಾನ್ಯ ಉಷ್ಣತೆಯ ನೀರಿನ ಸ್ನಾನದಿಂದ ಆರೋಗ್ಯದ ಮೇಲೆ ಒಳಿತಿನ ಪರಿಣಾಮಗಳಿವೆ ಎಂಬುದು ಸಾಬೀತಾಗಿದೆ. ಆದರೆ, ಇದನ್ನು ಏಕ್-ದಂ ಪಾಲಿಸುವುದು ಕಷ್ಟ. ಹೀಗಾಗಿ, ಮೊದಲ ಹೆಜ್ಜೆಯಲ್ಲಿ ಸ್ನಾನದ ನೀರಿನ ಉಷ್ಣತೆಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತಾ, ಕಡೆಗೆ ಉಗುರು ಬೆಚ್ಚಗಿನ ನೀರಿನ ಸ್ನಾನದ ಅಭ್ಯಾಸವಾದರೆ, ಅದನ್ನು ಮುಂದುವರೆಸುವುದು ಸುಲಭ. ಈ ಅಭ್ಯಾಸವನ್ನು ಬೇಸಿಗೆಯ ಕಾಲದಲ್ಲಿ ಆರಂಭಿಸುವುದು ಪ್ರಾಯೋಗಿಕ ದೃಷ್ಟಿಯಿಂದ ಸೂಕ್ತ. ಹಾಲೆಂಡ್ ದೇಶದಲ್ಲಿ ನಡೆದ ಒಂದು ದೊಡ್ಡ ಅಧ್ಯಯನದಲ್ಲಿ ಬಿಸಿ ನೀರಿನ ಸ್ನಾನದ ಕೂಡಲೇ ಸುಮಾರು ಅರ್ಧ ನಿಮಿಷದಿಂದ ಎರಡು ನಿಮಿಷಗಳವರೆಗೆ ತಣ್ಣೀರಿನಲ್ಲಿ ಸ್ನಾನ ಮಾಡುವ  ವಿಧಾನವನ್ನು ಪ್ರಯೋಗ ಮಾಡಿದಾಗ, ಆರೋಗ್ಯದ ಸುಧಾರಣೆ ಕಂಡು, ಕೆಲಸದ ಹಾಜರಾತಿ ಹೆಚ್ಚಿತು ಎಂದು ಅರಿಯಲಾಗಿದೆ. ಈ ರೀತಿಯ ಹಲವಾರು ಅಧ್ಯಯನಗಳು ಸಾಮಾನ್ಯ ಉಷ್ಣತೆಯ ನೀರಿನ ಸ್ನಾನದ ಲಾಭಗಳನ್ನು ಪಟ್ಟಿ ಮಾಡಿವೆ.

ಯಾವುದಾದರೂ ಕಾಯಿಲೆಗಳಿಂದ ಬಳಲುತ್ತಿರುವವರು ಸ್ನಾನದ ನೀರಿನ ವಿಷಯದಲ್ಲಿ ಪ್ರಯೋಗಗಳನ್ನು ಮಾಡುವುದಕ್ಕಿಂತ ಮೊದಲು ತಮ್ಮ ವೈದ್ಯರ ಬಳಿ ಚರ್ಚಿಸಬೇಕು. ನಿರೋಗಿಗಳು ತಮ್ಮ ಆರೋಗ್ಯದ ರಕ್ಷಣೆಗೆ ಸಾಮಾನ್ಯ ಉಷ್ಣತೆಯ ನೀರಿನ ಸ್ನಾನವನ್ನು ಅವಲಂಬಿಸಬಹುದು. ಈ ಪದ್ದತಿಯನ್ನು ನಮ್ಮ ಹಿರಿಯರು ಶತಮಾನಗಳಿಂದ ಬಳಸಿದ್ದಾರೆ. ಈಗ ಆ ಪದ್ದತಿ ವೈಜ್ಞಾನಿಕವಾಗಿ ಸಾಬೀತಾಗುತ್ತಿದೆ.

--------------------

 ಮಾರ್ಚ್ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಲೇಖನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ