ಮಂಗಳವಾರ, ಮೇ 3, 2022


 

ಆನಂದದ ಮೂಲವೇನು? ವೈಜ್ಞಾನಿಕ ಜಿಜ್ಞಾಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

“ಸದಾ ಸಂತಸದಿಂದ ಇರುವಂತಾಗಲಿ” ಎಂದು ಹಿರಿಯರು ಹರಸುತ್ತಾರೆ. ಆನಂದ ಎಂದರೇನು? ಅದು ಹೇಗೆ ಸಿಗುತ್ತದೆ? ಎಂಬುದು ಮಾತ್ರ ಮಹಾಭಾರತದ ಯಕ್ಷಪ್ರಶ್ನೆಗಳಿಗಿಂತಲೂ ಕಠಿಣ. ಸಂತೋಷವನ್ನು ಅವ್ಯಕ್ತ ರೂಪದಲ್ಲಿ ಮಾತ್ರ ವಿವರಿಸಬಹುದು ಎಂದು ದಾರ್ಶನಿಕರು ಹೇಳಿಯಾರು. ಆದರೆ, ಈ ಸಂಕೀರ್ಣ ವಿವರಣೆ ಸಾಮಾನ್ಯ ಜನರ ಉತ್ಸುಕತೆಯನ್ನು ತಣಿಸಲಾರದು. ವಿಜ್ಞಾನ ಈ ನಿಟ್ಟಿನಲ್ಲಿ ಏನನ್ನು ಹೇಳುತ್ತದೆ?

ಪ್ರಪಂಚದ ಅತ್ಯಂತ ದೀರ್ಘಾವಧಿ ಅಧ್ಯಯನಗಳಲ್ಲಿ ಒಂದಾದ ಹಾವರ್ಡ್ ವಿಶ್ವವಿದ್ಯಾಲಯದ “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಈ ಸಂಗತಿಯನ್ನು ಪರಿಷ್ಕರಿಸಿದೆ. 1938 ರಲ್ಲಿ ಆರಂಭವಾಗಿ, ಈಗ ಎರಡನೆಯ ಹಂತಕ್ಕೆ ದಾಪುಗಾಲಿಟ್ಟಿರುವ ಈ ಅಧ್ಯಯನದ ಉತ್ತರ ಏನೆಂದು ತಿಳಿಯುವ ಮುನ್ನ, ಅದರ ಸ್ವರೂಪ, ರೂಪು-ರೇಷೆಗಳನ್ನು ತಿಳಿಯಬೇಕು.

1938ನೆಯ ಇಸವಿಯಲ್ಲಿ ಜಗತ್ತು ದ್ವಿತೀಯ ಮಹಾಯುದ್ಧದ ಹೊಸಿಲಿನಲ್ಲಿದ್ದಾಗ ಆರ್ಲಿ ಬೊಕ್ ಎಂಬ ವೈದ್ಯರೊಬ್ಬರು “ವೈದ್ಯಕೀಯ ಅಧ್ಯಯನ ಎಂದರೆ ಸದಾ ರೋಗಗಳದ್ದೇ ಏಕಾಗಬೇಕು? ಸಾಮಾನ್ಯ ಜನರ, ಜೀವನದಲ್ಲಿ ಸಾಫಲ್ಯ ಗಳಿಸಿದ ಯಶಸ್ವಿ ಮಂದಿಯ ಬಗ್ಗೆ ಏಕೆ ಮಾಡಬಾರದು?” ಎಂದು ಚಿಂತಿಸಿದರು. ಇದಕ್ಕೆ ಇಂಬು ನೀಡಿದ್ದು ಆ ಕಾಲದ ಸೂಪರ್ ಮಾರ್ಕೆಟ್ ಸರಣಿಗಳ ಮಾಲೀಕರಾಗಿದ್ದ ಗ್ರಾಂಟ್ ಅವರು. ಅವರು ನೀಡಿದ ದೇಣಿಗೆಯಿಂದ “ಒಳ್ಳೆಯ ಜೀವನ ಎಂದರೇನು? ಸಾಫಲ್ಯದ ಮಾನದಂಡ ಯಾವುದು?” ಎನ್ನುವ ಬಗ್ಗೆ ಈ ಅಧ್ಯಯನ ಆರಂಭವಾಯಿತು.

1939-44 ರ ಅವಧಿಯಲ್ಲಿ ಅಮೆರಿಕೆಯ ಹಾವರ್ಡ್ ವಿಶ್ವವಿದ್ಯಾಲಯದ ಎರಡನೆಯ ವರ್ಷದಲ್ಲಿ ಓದುತ್ತಿದ್ದ 248 ವಿದ್ಯಾರ್ಥಿಗಳನ್ನು ಅಧ್ಯಯನ ಪರಿಗಣಿಸಿತು. ಆಗಿನ್ನೂ ಸ್ತ್ರೀಯರಿಗೆ ವಿಶ್ವವಿದ್ಯಾಲಯದ ವ್ಯಾಸಂಗಕ್ಕೆ ಅನುಮತಿ ಇರಲಿಲ್ಲ! ಹೀಗಾಗಿ, ಈ ಅಧ್ಯಯನದಲ್ಲಿ ಕೇವಲ ಪುರುಷರೇ ಇದ್ದರು. ಇದಕ್ಕೆ ಸಂವಾದಿಯಾಗಿ ಶೆಲ್ಡನ್ ಗ್ಲುಎಕ್ ಎಂಬ ಪೋಲೆಂಡ್ ಸಂಜಾತ ಅಮೆರಿಕನ್ ಅಪರಾಧ ತಜ್ಞ 1940 ರಿಂದ ಹತ್ತು ವರ್ಷಗಳ ಕಾಲ ಬೊಸ್ಟನ್ ನಗರದ ಆಸುಪಾಸಿನಲ್ಲಿದ್ದ 456 ಮಂದಿ ಅವಿದ್ಯಾವಂತ ಬಡಯುವಕರನ್ನು ಅಧ್ಯಯನ ನಡೆಸಿದರು. ಇವೆರಡನ್ನೂ ವಿಶ್ವವಿದ್ಯಾಲಯವೇ ಮುಂದುವರೆಸಿ, “ಗ್ರಾಂಟ್-ಗ್ಲುಎಕ್ ಅಧ್ಯಯನ” ಎಂಬ ಹೆಸರನ್ನು ನೀಡಿತು. ಮುಂದೆ ಇದು “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಎನ್ನುವ ಅಧಿಕೃತ ಹೆಸರನ್ನು ಪಡೆಯಿತು.

ಈ ಅಧ್ಯಯನದಲ್ಲಿ ನೊಂದಾಯಿಸಿಕೊಂಡವರನ್ನು ಕನಿಷ್ಠ ಎರಡು ವರ್ಷಕ್ಕೆ ಒಮ್ಮೆಯಾದರೂ ನಿಶ್ಚಿತ ಪ್ರಶ್ನಾವಳಿಯ ಮೂಲಕ ಸಂದರ್ಶಿಸಲಾಗುತ್ತಿತ್ತು. ಕೆಲವೊಮ್ಮೆ ಇದರಲ್ಲಿ ಭಾಗವಹಿಸಿದವರ ವೈದ್ಯರಿಂದ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹಲವರನ್ನು ಅವರು ಇರುವಲ್ಲಿಗೇ ಹೋಗಿ ಭೇಟಿ ಮಾಡಿ, ಪ್ರಶ್ನೋತ್ತರ ನಡೆಸುತ್ತಿದ್ದರು. ಅಧ್ಯಯನದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಆರೋಗ್ಯ; ಅವರ ವೃತ್ತಿಯ ಬಗ್ಗೆ ಅಭಿಪ್ರಾಯಗಳು; ನಿವೃತ್ತಿಯ ನಂತರದ ಅನುಭವಗಳು; ಮದುವೆ ಮತ್ತು ಸಂಗಾತಿಯ ಬಗ್ಗೆ ಅಭಿಮತಇಂತಹ ಮಾಹಿತಿಗಳನ್ನು ಪಡೆಯುತ್ತಿದ್ದರು. ಅಧ್ಯಯನದ ಮೂಲ ಉದ್ದೇಶ “ಜೀವನವನ್ನು ಒಳಿತಾಗಿಸಲು ಬೇಕಾದದ್ದೇನು?” ಎಂಬ ಪ್ರಶ್ನೆಗೆ ಉತ್ತರ.

ಇದು ಅತ್ಯಂತ ಸರಳ ಪ್ರಶ್ನೆಯಾದರೂ, ಉತ್ತರಗಳು ಮಾತ್ರ ಸಂಕೀರ್ಣ. ವ್ಯಾಸಂಗ ಮುಗಿಸಿದ ನಂತರ ಯುದ್ಧ, ಮದುವೆ, ಮಕ್ಕಳು, ವೃತ್ತಿ, ಕೌಟುಂಬಿಕ ಜವಾಬ್ದಾರಿಗಳು, ಜೀವನದ ಸಮಸ್ಯೆಗಳು, ಆರೋಗ್ಯ, ವೃದ್ಧಾಪ್ಯ – ಹೀಗೆ ಹಲವಾರು ಹಂತಗಳನ್ನು ದಾಟಿ, ಮಾಗಿರುವವರ ಅನುಭವಗಳ ಸಾರವನ್ನು ಉತ್ತರಗಳನ್ನಾಗಿ ಪಡೆದು, ಅಧ್ಯಯನ ಮಾಡಲಾಯಿತು. ವಿದ್ಯಾರ್ಥಿ ದೆಸೆಯಲ್ಲಿ ಈ ಅಧ್ಯಯನದಲ್ಲಿ ಭಾಗಿಯಾದವರಲ್ಲಿ ನಾಲ್ವರು ಶಾಸಕರಾದರು; ಒಬ್ಬರು ಪ್ರಸಿದ್ಧ ಲೇಖಕರಾದರು; ಒಬ್ಬರು ಅಮೆರಿಕೆಯ ಅಧ್ಯಕ್ಷರಾದರು! ಇಡೀ ಅಧ್ಯಯನದ ಒಟ್ಟಾರೆ ಅನುಭವಗಳು ಅತ್ಯಂತ ವೈವಿಧ್ಯಮಯವಾಗಿದ್ದವು. ಅಧ್ಯಯನದ ಫಲಶ್ರುತಿ ಹೀಗಿತ್ತು:

1. ಜೀವನ ನಿಂತ ನೀರಲ್ಲ; ಅದು ಹರಿಯುವ ಹೊಳೆ. ನಮ್ಮ ನಿರ್ಧಾರಗಳು ಇಂದಿನ ಪರಿಸ್ಥಿತಿಗೆ ಸೀಮಿತವಾಗಬಾರದು. ಮುಂದಾಲೋಚನೆಯಿಂದ ಕೈಗೊಂಡ ನಿರ್ಧಾರಗಳು ನಮ್ಮ ನಾಳೆಗಳನ್ನು ಕಾಯ್ದು; ನಮ್ಮ ವರ್ತಮಾನವನ್ನು ಸುಖಿಯಾಗಿಸುತ್ತವೆ.

2. ಮದ್ಯಪಾನಕ್ಕೆ ತೀವ್ರವಾದ ನಾಶಕ ಶಕ್ತಿಯಿದೆ. ಕುಟುಂಬ ಒಡೆಯುವುದು, ಮಾನಸಿಕ ಖಿನ್ನತೆ, ಹತಾಶೆ, ಅನಾರೋಗ್ಯಗಳು ಮದ್ಯಪಾನಿಗಳಲ್ಲಿ ಹೆಚ್ಚು. ಇದರೊಂದಿಗೆ ಧೂಮಪಾನವೂ ಸೇರಿದರೆ, ಅದು ಆರೋಗ್ಯದ ಮೇಲೆ ಅತೀವ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ.

3. ದೀರ್ಘಕಾಲಿಕ ಅವಧಿಯಲ್ಲಿ ಹೆಚ್ಚು ಆದಾಯ ಮತ್ತು ವೃತ್ತಿ ಸಾಫಲ್ಯವನ್ನು ತಂದುಕೊಡುವುದು ವಿದ್ಯೆಯಾಗಲೀ, ಬುದ್ಧಿಯಾಗಲೀ, ಜಾಣತನವಾಗಲಿ ಅಲ್ಲ – ಬದಲಿಗೆ ನಾವು ನಮ್ಮ ವೃತ್ತಿನಿರತ ಸಂಬಂಧಗಳನ್ನು ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂಬುದು. ವೃತ್ತಿ ಆರಂಭಿಸಿದ ಕಾಲದಲ್ಲಿ ಜಾಣತನ ಕೆಲಸ ಮಾಡಬಹುದು. ಆದರೆ, ಅದು ಒಂದು ಹಂತಕ್ಕಿಂತ ಮುಂದುವರೆಯಲಾರದು.

4. ಚಿಕ್ಕಂದಿನಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರೀತಿ-ವಾತ್ಸಲ್ಯಗಳ ನಡುವೆ ಬೆಳೆದ ಮಕ್ಕಳು ದೊಡ್ಡವರಾದ ನಂತರ ತಾವು ಮಾಡುವ ಯಾವುದೇ ಕೆಲಸದಲ್ಲೂ ಹೆಚ್ಚು ಸಫಲರಾಗುತ್ತಾರೆ. ಇದರಿಂದ ವಂಚಿತರಾದವರಲ್ಲಿ ವಯಸ್ಸಾದ ನಂತರ ಮರೆವಿನ ಕಾಯಿಲೆ ಕಾಣುವ ಸಾಧ್ಯತೆ ಹೆಚ್ಚು.

5.  ಜೀವನದ ಕಷ್ಟಗಳಿಗೆ ಮನಸ್ಸನ್ನು ಒಗ್ಗಿಸಿಕೊಂಡು, ತಮ್ಮ ಮಾನಸಿಕ ಆರೋಗ್ಯವನ್ನು ಸ್ಥಿಮಿತದಲ್ಲಿರಿಸಿ, ಸಂಕಟಗಳಿಂದ ಹೊರಬರುವ ಮನಸ್ಥಿತಿ ಬೆಳೆಸಿಕೊಂಡವರು ವೃದ್ಧಾಪ್ಯದಲ್ಲಿ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ತಮ್ಮ ಕಷ್ಟಗಳಿಗೆ ಇತರರನ್ನು ಹೊಣೆ ಮಾಡುವವರು, ಕಷ್ಟಗಳು ಬಂದಾಗ ಸದಾ ಇತರರ ಆಸರೆ ಬಯಸುವವರು ವಯಸ್ಸಾದ ನಂತರ ಹೆಚ್ಚು ಕಾಯಿಲೆಗಳಿಗೆ ಈಡಾಗುವ ಸಾಧ್ಯತೆಗಳು ಅಧಿಕ.

6. ಸಂತಸದ ಮೂಲ ಸ್ರೋತ ನಾವು ಜೀವನದಲ್ಲಿ ಸಂಬಂಧಗಳನ್ನು ಸಲಹುವ ರೀತಿ. ತಮ್ಮವರೊಡನೆ ಆತ್ಮೀಯ ಸಂಬಂಧ ಹೊಂದುವುದು ಜೀವನದಲ್ಲಿ ದೀರ್ಘಕಾಲಿಕ ಆನಂದ ಹೊಂದುವ ಪ್ರಮುಖ ವಿಧಾನ. ಸಾಮಾಜಿಕ ಸ್ತರ, ಸಂಪತ್ತು, ಕೀರ್ತಿ, ಜಾಣ್ಮೆ, ಜೀನ್ಗಳ ಪ್ರಭಾವಗಳಿಗಿಂತಲೂ ಸಂಬಂಧಗಳ ಮಹತ್ವ ಹೆಚ್ಚೆಂದು ಈ ಅಧ್ಯಯನ ನಿರೂಪಿಸಿದೆ. ಒಂಟಿತನ, ಜಗಳಗಂಟ ಸ್ವಭಾವಗಳು ವೃದ್ಧಾಪ್ಯದಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತವೆ.

ಈ ಅಧ್ಯಯನದ ಮುಂದಿನ ಭಾಗ ಈಗ ಚಾಲ್ತಿಯಲ್ಲಿದೆ. ಹಿಂದಿನ ಅಧ್ಯಯನದಲ್ಲಿದ್ದವರ ಮಕ್ಕಳು ಈ ಎರಡನೆಯ ಅಧ್ಯಯನದಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ 1300 ಕ್ಕಿಂತಲೂ ಹೆಚ್ಚು ಮಂದಿ ಇದಕ್ಕೆ ನೊಂದಾಯಿಸಿಕೊಂಡಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಕಠೋಪನಿಷತ್ತಿನಲ್ಲಿ ಶಾಂತಿ ಮಂತ್ರವನ್ನು ಹೀಗೆ ಬೋಧಿಸಿದರು: ಓಂ ಹ ನಾ'ವವತು ಹ ನೌ' ಭುನಕ್ತು  ವೀರ್ಯಂ' ಕರವಾವಹೈ ತೇಜಸ್ವಿನಾವಧೀ'ತಮಸ್ತು ಮಾ ವಿ'ದ್ವಿಷಾವಹೈ'' ||

ಇದನ್ನೇ ಜಗತ್ತಿನ ಅತ್ಯಂತ ದೀರ್ಘಕಾಲಿಕ ವೈಜ್ಞಾನಿಕ ಅಧ್ಯಯನವೊಂದು ಮತ್ತೊಮ್ಮೆ ಹೇಳುತ್ತಿದೆ.

------------------------

ಏಪ್ರಿಲ್ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ