ಮಂಗಳವಾರ, ಏಪ್ರಿಲ್ 26, 2022

 

ಉಪವಾಸದ ವೈಜ್ಞಾನಿಕ ಮಹತ್ವ

ಡಾ. ಕಿರಣ್ ವಿ.ಎಸ್.

ವೈದ್ಯರು

ಆಹಾರ ಸೇವನೆಯ ವಿಷಯದಲ್ಲಿ ಜಗತ್ತು ಎರಡು ವಿಧವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಬಡದೇಶಗಳಲ್ಲಿ ಅಪೌಷ್ಟಿಕತೆ ಬಹುದೊಡ್ಡ ಸಮಸ್ಯೆಯಾಗಿದ್ದರೆ, ಇತರ ದೇಶಗಳಲ್ಲಿ ಅತಿ-ಪೌಷ್ಟಿಕತೆ ಅಷ್ಟೇ ದೊಡ್ಡ ತಲೆನೋವಾಗಿದೆ. ಅಪೌಷ್ಟಿಕತೆಯಿಂದ ದೇಹ ಕೃಶವಾಗಿ, ರೋಗನಿರೋಧಕ ಶಕ್ತಿ ಕುಗ್ಗುತ್ತದೆ; ವಿಟಮಿನ್ ಕೊರತೆಯ ಸಮಸ್ಯೆಗಳು ಉದ್ಭವಿಸುತ್ತವೆ; ದುರ್ಬಲ ದೇಹ ಸಾಂಕ್ರಾಮಿಕ ಕಾಯಿಲೆಗಳಿಗೆ ಆಗರವಾಗುತ್ತದೆ; ಮಿದುಳಿನ ಸಾಮರ್ಥ್ಯ ಕುಂದುತ್ತದೆ. ಜೀವನದಲ್ಲಿ ಸಾಧನೆ ಮಾಡಲು, ಸಾಮಾಜಿಕ ಸ್ತರಗಳಲ್ಲಿ ಮೇಲೆ ಏರಲು ಈ ಕೊರತೆಗಳು ಅಡ್ಡಿಯಾಗುತ್ತವೆ; ಬಡದೇಶಗಳು ಮತ್ತಷ್ಟು ಬಡವಾಗುತ್ತವೆ.

ಮಧ್ಯಮ ಮತ್ತು ಸಿರಿವಂತ ದೇಶಗಳಲ್ಲಿ ಅತಿ-ಪೌಷ್ಟಿಕತೆಯ ಸಮಸ್ಯೆ ತೀವ್ರವಾಗುತ್ತಿದೆ. ಅಧಿಕ ಕ್ಯಾಲೊರಿ ಆಹಾರ ಸೇವನೆಯಿಂದ ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಮೂಳೆಗಳ ಸವೆತ, ನಿದ್ರಾಹೀನತೆ, ಜೀರ್ಣಾಂಗಗಳ ಕ್ಯಾನ್ಸರ್, ಹೃದಯ ವೈಫಲ್ಯ ಮೊದಲಾದ ಕಾಯಿಲೆಗಳಿಂದ ಬಳಲುವವರು ಹೆಚ್ಚುತ್ತಿದ್ದಾರೆ. ಈ ಮೊದಲಿಗೆ ವೃದ್ಧಾಪ್ಯದಲ್ಲಿ ಕಂಡುಬರುತ್ತಿದ್ದ ವ್ಯಾಧಿಗಳು ಈಗ ನಡುವಯಸ್ಕರನ್ನೂ ಬಾಧಿಸುತ್ತಿವೆ. ಒಂದೆಡೆ ಸರಿಯಾದ ಪ್ರಮಾಣದ ಆಹಾರ ದೊರೆಯದೆ ಬಡದೇಶಗಳು ಬಳಲುತ್ತಿದ್ದರೆ, ಮತ್ತೊಂದೆಡೆ ತಿನ್ನುವ ಆಹಾರವನ್ನು ಯಾವ ಹಂತದಲ್ಲಿ ನಿಲ್ಲಿಸಬೇಕು ಎಂದು ತಿಳಿಯದ ಜನರು ತೊಂದರೆಗೆ ಒಳಗಾಗುತ್ತಿದ್ದಾರೆ.

ಆಹಾರದಲ್ಲಿನ ಶಿಸ್ತು ವೈಯಕ್ತಿಕವಾಗಿ ಅಗಾಧ ಪರಿಣಾಮ ಬೀರಬಲ್ಲದು. ಈ ಶಿಸ್ತು ದೊಡ್ಡ ಮಟ್ಟದಲ್ಲಿ ಪ್ರಚಲಿತವಾದರೆ ದೂರಗಾಮಿ ನೆಲೆಗಟ್ಟಿನಲ್ಲಿ, ಸರ್ಕಾರಗಳ ದೂರದೃಷ್ಟಿಯನ್ನು ಆಧರಿಸಿ ಸಮಷ್ಟಿಗೂ ಉಪಯೋಗಕರವಾಗಬಲ್ಲದು. ಹೀಗಾಗಿ, ಆಹಾರ ಸೇವನೆಯ ಶಿಸ್ತನ್ನು ರೂಢಿಸಿಕೊಳ್ಳುವುದು ಆರಂಭದ ಹೆಜ್ಜೆ. ಪ್ರಾಯೋಗಿಕ ವಿಧಾನಗಳನ್ನು ಬಳಸಿ ವೈಜ್ಞಾನಿಕವಾಗಿ ಇದನ್ನು ಸಾಧಿಸುವುದು ಹೇಗೆ? ನಮ್ಮ ದೇಶದಲ್ಲಿ ಮೊದಲಿನಿಂದಲೂ ಕಾಲಕಾಲಕ್ಕೆ ಉಪವಾಸ ಮಾಡುವ ಕ್ರಮ ಚಾಲ್ತಿಯಲ್ಲಿತ್ತು. ಈ ಬಗ್ಗೆ ಆಧುನಿಕ ವಿಜ್ಞಾನ ಏನು ಹೇಳುತ್ತದೆ?

ವಾರದಲ್ಲಿ ಒಂದು ಇಡೀ ದಿನ ಗಟ್ಟಿ ಆಹಾರ ಸೇವಿಸದೇ ಉಳಿಯುವುದು; ಪ್ರತಿದಿನವೂ ಸೇವಿಸುವ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು; “ದಿನದ ಇಷ್ಟು ಕಾಲದಿಂದ ಇಷ್ಟು ಕಾಲದವರೆಗೆ ಆಹಾರ ಸೇವಿಸುವುದಿಲ್ಲ” ಎಂದು ನಿರ್ಧರಿಸಿ, ಅದನ್ನು ಮನಸ್ಸಿಗೆ ಒಗ್ಗಿಸಿ, ಅನುಸರಿಸುವುದು; ದಿನ ಬಿಟ್ಟು ದಿನ ಆಹಾರದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಹೋಗುವುದು ಮೊದಲಾದ ಅನೇಕ ಮಾರ್ಗಗಳನ್ನು ಉಪವಾಸ ಕ್ರಮಗಳಲ್ಲಿ ಸೂಚಿಸಲಾಗಿದೆ. ಪ್ರತಿದಿನವೂ ಮುಂಜಾನೆ 7 ರಿಂದ ಸಂಜೆ 7 ರವರೆಗೆ ಯಾವುದೇ ಗಟ್ಟಿ ಆಹಾರ ತಿನ್ನುವುದಿಲ್ಲ” ಎಂದು ನಿರ್ಧರಿಸಿದರೆ, ಅದನ್ನು ಹೆಚ್ಚು ಮಂದಿ ಪಾಲಿಸಬಲ್ಲರು. ಸಮಯಾನುಸಾರ ಅನುಸರಿಸಬಲ್ಲ ಈ ರೀತಿಯ ಪದ್ದತಿಗಳು ಪ್ರತಿನಿತ್ಯವೂ ಕಡಿಮೆ ಆಹಾರ ಸೇವಿಸುವಷ್ಟೇ ಪರಿಣಾಮಕಾರಿ ಎಂದು ಅಧ್ಯಯನಗಳು ತೋರಿವೆ. ತೂಕ ತಗ್ಗಿಸುವಲ್ಲಿ, ಮಧುಮೇಹ ನಿಯಂತ್ರಣದಲ್ಲಿ, ಹೃದಯದ ಕಾಯಿಲೆಗಳನ್ನು ಹಿಡಿತದಲ್ಲಿ ಇರಿಸುವಲ್ಲಿ ಈ ವಿಧಾನ ಪ್ರಯೋಜನ ಕಂಡಿದೆ. ಇದರ ಜೊತೆಗೆ, ಪ್ರತಿದಿನ ಸೇವಿಸುವ ಆಹಾರದಲ್ಲಿ ಹಣ್ಣು, ತರಕಾರಿ, ಪಾಲಿಶ್ ಮಾಡಿರದ ಸಮಗ್ರ ಧಾನ್ಯಗಳ ಸೇವನೆ, ದಿನಕ್ಕೆ ಸುಮಾರು 30-45 ನಿಮಿಷಗಳ ಕಾಲ ಉಸಿರಾಟ ಹೆಚ್ಚಿಸುವ ವ್ಯಾಯಾಮ ಆರೋಗ್ಯ ಪಾಲನೆಗೆ ಮತ್ತು ಶರೀರದ ಪುನಶ್ಚೇತನಕ್ಕೆ ಸಹಕಾರಿ ಎಂದು ತಿಳಿದುಬಂದಿದೆ.

ಕಾಯಿಲೆಗಳ ಹಿನ್ನೆಲೆ ಉಳ್ಳವರು ಯಾವುದೇ ರೀತಿಯ ಉಪವಾಸ ಕ್ರಮಗಳನ್ನು ಕೈಗೊಳ್ಳುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸಿ, ‘ಉಪವಾಸದ ಯಾವ ವಿಧಾನ ತಮ್ಮ ಶರೀರಕ್ಕೆ ಸೂಕ್ತ ಎಂದು ತಿಳಿಯಬೇಕು. ಆ ನಂತರ, ಆಹಾರ ತಜ್ಞರಿಂದ ಯಾವ ರೀತಿಯ ಆಹಾರ ಸೇವನೆ ತಮ್ಮ ದೇಹದ ಪರಿಸ್ಥಿತಿಗೆ ಹೊಂದುತ್ತದೆ ಎಂದು ಅರಿಯಬೇಕು. ಅವರಿಂದ ಉಪವಾಸದ ಅವಧಿ, ಆವರ್ತನ, ತಿನ್ನಬಹುದಾದ ಆಹಾರಗಳು, ಕ್ಯಾಲೊರಿ, ಸೇವಿಸಬೇಕಾದ ದ್ರವದ ಪರಿಮಾಣಗಳನ್ನು ನಿರ್ಧರಿಸಿ, ಪಟ್ಟಿ ಮಾಡಿಕೊಳ್ಳಬೇಕು. ಒಮ್ಮೆ ಇದು ನಿರ್ಧಾರವಾದ ನಂತರ ಶಿಸ್ತುಬದ್ಧವಾಗಿ ಅನುಸರಿಸಬೇಕು. ಉಪವಾಸದ ಕಾಲದ ಸಂಯಮ ಮತ್ತು ಆಹಾರ ಸೇವನೆಯ ಶಿಸ್ತು ರೂಢಿಸಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದರೆ ಪ್ರಯೋಜನ ಕಾಣುವುದಿಲ್ಲ.

ಉಪವಾಸದ ಸಮಯದಲ್ಲಿ ಏನಾಗುತ್ತದೆ? ಶಕ್ತಿಯ ಅಗತ್ಯ ಬಿದ್ದಾದ ನಮ್ಮ ಶರೀರದ ಮೊದಲ ಆದ್ಯತೆ ಗ್ಲುಕೋಸ್ ಎಂಬ ಸಕ್ಕರೆ. ನಾವು ತಿನ್ನುವ ಆಹಾರದ ಬಹುತೇಕ ಭಾಗ ಪಚನಾಂಗಗಳಲ್ಲಿ ಕೊನೆಗೆ ಗ್ಲುಕೋಸ್ ಮಾದರಿಯ ಸಕ್ಕರೆಯ ರೂಪಕ್ಕೆ ಬಂದು, ಜೀರ್ಣವಾಗುತ್ತದೆ. ಒಂದು ವೇಳೆ ಶರೀರಕ್ಕೆ ಗ್ಲುಕೋಸ್ ಲಭ್ಯವಾಗದಿದ್ದರೆ, ಅದು ಮೊದಲಿಗೆ ಗ್ಲುಕೋಸ್ ಶೇಖರಣೆಯ ದಾಸ್ತಾನನ್ನು, ನಂತರ ಶರೀರದ ಕೊಬ್ಬಿನ ಅಂಶವನ್ನು ಶಕ್ತಿಗೆ ಬಳಸಿಕೊಳ್ಳುತ್ತದೆ. ಆಹಾರದ ರೂಪದಲ್ಲಿ ಗ್ಲುಕೋಸ್ ಒಂದೇ ಸಮನೆ ಲಭ್ಯವಾಗುತ್ತಲೇ ಇದ್ದರೆ ಶರೀರದ ಕೊಬ್ಬು ಕರಗುವುದೇ ಇಲ್ಲ. ಉಪವಾಸದಿಂದ ಗ್ಲುಕೋಸ್ ಲಭ್ಯತೆ ಕಡಿಮೆಯಾಗುತ್ತದೆ. ಆಗ ಶಕ್ತಿಯ ಅಗತ್ಯಕ್ಕೆ ಶರೀರ ಕೊಬ್ಬನ್ನು ಕರಗಿಸುತ್ತದೆ. ಇದರಿಂದ ದೇಹದ ತೂಕ, ಬೊಜ್ಜು ಇಳಿಯುತ್ತದೆ. ಈ ಪ್ರಕ್ರಿಯೆ ನಿಧಾನಗತಿಯಲ್ಲಿ ಜರುಗುವುದರಿಂದ ಶರೀರಕ್ಕೆ ಪರಿಸ್ಥಿತಿಗೆ ಹೊಂದಿಕೊಳ್ಳಲು ಸಾಕಷ್ಟು ಕಾಲಾವಕಾಶ ದೊರೆಯುತ್ತದೆ. ಹೀಗಾಗಿ, ತೀವ್ರಗತಿಯಲ್ಲಿ ಪರಿಣಾಮಗಳನ್ನು ಅಪೇಕ್ಷಿಸಬಾರದು. ಉಪವಾಸವನ್ನು ಶಿಸ್ತುಬದ್ಧವಾಗಿ ಮಾಡಿದರೆ ಮಾತ್ರ ಆರೋಗ್ಯ ಸುಧಾರಿಸುತ್ತದೆ.   

ಉಪವಾಸದಿಂದ ಕೆಲವು ಅಡ್ಡಪರಿಣಾಮಗಳೂ ಆಗಬಹುದು. ನಿಶ್ಶಕ್ತಿ, ನಿರ್ಜಲೀಕರಣ, ತಲೆನೋವು, ಏಕಾಗ್ರತೆಯ ಭಂಗ, ತಲೆಸುತ್ತು ಮೊದಲಾದ ಅನುಭವಗಳು ಆಗಬಹುದು. ಹೀಗಾಗಿ, ತಜ್ಞರ ಸಲಹೆ ಪಡೆದು, ಉಪವಾಸದ ತೀವ್ರತೆಯನ್ನು ನಿಧಾನವಾಗಿ ಏರಿಸಬೇಕು. ಉಪವಾಸ ಸಹಿಸುವ ಸಾಮರ್ಥ್ಯ ಇಲ್ಲದವರು ಅದನ್ನು ಮಾಡಬಾರದು.

ತೂಕ ಇಳಿಸುವುದು ಗೀಳಿನ ವಿಷಯವಾಗಬಾರದು. ಅದನ್ನು ವೈಜ್ಞಾನಿಕ ಪದ್ದತಿಯಲ್ಲಿ ಅನುಸರಿಸುವುದೇ ಸೂಕ್ತ. ಮಾರುಕಟ್ಟೆಯಲ್ಲಿ ಶರೀರದ ತೂಕ ಇಳಿಸಲು ಜಾದೂ ಮಾದರಿಯ ಪರಿಣಾಮಗಳನ್ನು ನೀಡುವಂತಹ ಜಾಹೀರಾತುಗಳು ಬರುತ್ತಲೇ ಇರುತ್ತವೆ. ಇದು ಎರಡು ವಿಧಗಳಲ್ಲಿ ಅಪಾಯಕಾರಿ. ಒಂದು – ಇದು ಪರಿಣಾಮಕಾರಿಯಲ್ಲದೇ ಕೇವಲ ಗ್ರಾಹಕರ ಹಣ ಲಪಟಾಯಿಸುವ ಯೋಜನೆಗಳಾಗಿರಬಹುದು. ಇದಕ್ಕಿಂತಲೂ ಅಪಾಯಕಾರಿಯೆಂದರೆ, ಶರೀರದ ಮೇಲೆ, ಮಿದುಳಿನ ಮೇಲೆ ತೀವ್ರ ಅಡ್ಡಪರಿಣಾಮಗಳನ್ನು ಉಂಟುಮಾಡಬಲ್ಲಂತಹ ಅಪಾಯಕಾರಿ ಔಷಧಗಳ ಬಳಕೆ. ಶರೀರದ ತೂಕವನ್ನು ತೀವ್ರಗತಿಯಲ್ಲಿ ಇಳಿಸುವ ವಿಧಾನಗಳು ದೇಹಕ್ಕೆ ಕೆಡುಕು ಮಾಡದೇ ಬಿಡುವುದಿಲ್ಲ. ತೂಕ ಇಳಿಸುವ ವಿಧಾನಗಳು ಒಂದು ಸರಿಯಾದ ಪದ್ಧತಿಯಲ್ಲಿ, ಸರಿಯಾದ ಅವಧಿಯಲ್ಲಿ, ನಿಧಾನವಾಗಿ ಆಗಬೇಕು. ಇಲ್ಲವಾದರೆ ಅಪಾಯ ಕಟ್ಟಿಟ್ಟಿದ್ದೇ.

---------------

ಫೆಬ್ರವರಿ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ