ಭಾನುವಾರ, ಮೇ 8, 2022


 

ಊಟ ಮಾಡುವ ಸರಿಯಾದ ವೇಳೆ ಯಾವುದು?

ಡಾ. ಕಿರಣ್ ವಿ.ಎಸ್.

ವೈದ್ಯರು

“ಊಟಕೆ ಬಾರೋ ತಿಮ್ಮ....ಓಡಿ ಬಂದೇನಮ್ಮ” ಎಂದು ಕೊನೆಯಾಗುವ ಸೋಮಾರಿ ತಿಮ್ಮನ ಕುರಿತಾದ ಪದ್ಯವಿದೆ. ಪ್ರತಿಯೊಂದು ಕೆಲಸಕ್ಕೂ ನೆಪ ಹೇಳುವ ತಿಮ್ಮ ಊಟಕ್ಕೆ ಮಾತ್ರ ಸದಾ ಸಿದ್ಧ ಎನ್ನುವ ತಮಾಷೆ. “ನಾವು ಏನನ್ನು ತಿನ್ನುತ್ತೇವೋ, ಅದೇ ಆಗುತ್ತೇವೆ” ಎನ್ನುವುದರ ಮೇಲೆ ಸಾತ್ವಿಕ, ರಾಜಸಿಕ, ತಾಮಸಿಕ ಆಹಾರಗಳ ಪರಿಕಲ್ಪನೆಯಾಗಿದೆ. ಏನು ತಿನ್ನಬೇಕು, ಏಕೆ ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದು ನಮಗೆ ತಿಳಿದಿದೆ. ಯಾವಾಗ ತಿನ್ನಬೇಕು ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. “ಹಸಿವಾದಾಗ ತಿನ್ನಬೇಕು” ಎನ್ನುವ ಉತ್ತರ ಅಸ್ಪಷ್ಟ. ಕೆಲವರಿಗೆ ಸದಾ ಬಾಯಾಡಿಸುತ್ತಲೇ ಇರಬೇಕು ಎನ್ನುವ ಚಪಲ. ಅದನ್ನು ಹಸಿವು ಎನ್ನಲಾದೀತೆ ಎನ್ನುವ ಪ್ರಶ್ನೆ ಬರುತ್ತದೆ. ಕ್ಲುಪ್ತ ವೇಳೆಗೆ ಊಟ ಮಾಡುವುದು ವೈಜ್ಞಾನಿಕವೇ ಅಥವಾ ವಿವರಣೆಯಿಲ್ಲದ ನಂಬಿಕೆಯೇ?

ಪ್ರತಿಯೊಂದು ಜೀವಿಯ ಒಡಲಿನಲ್ಲೂ ಒಂದೊಂದು ಜೈವಿಕ ಗಡಿಯಾರವಿದೆ. ಸೂರ್ಯನ ಬೆಳಕಿಗೆ ಸಂವಾದಿಯಾಗಿ ಚಲಿಸುವ ಈ ಜೈವಿಕ ಗಡಿಯಾರದ ರೀತ್ಯಾ ಹಸಿವು, ನಿದ್ರೆ, ಎಚ್ಚರ ಮೊದಲಾದ ದೈನಂದಿನ ಕೆಲಸಗಳು ಜರುಗುತ್ತವೆ. ಶರೀರದಲ್ಲಿ ಚೋದಕಗಳ ಬಿಡುಗಡೆ, ಹೃದಯ ಬಡಿತದ ಲಯ, ಮಿದುಳಿನ ಸಂಕೇತಗಳು ಮುಂತಾದುವು ಈ ಗಡಿಯಾರವನ್ನು ಅವಲಂಬಿಸಿವೆ. ನಮ್ಮ ಸುತ್ತಮುತ್ತಲಿನ ಪ್ರಕೃತಿಯ ಜೊತೆಗೆ ನಮ್ಮ ಶರೀರದ ಕೆಲಸವನ್ನು ಬೆಸೆಯುವ ಕೆಲಸದಲ್ಲಿ ಜೈವಿಕ ಗಡಿಯಾರದ ಪಾತ್ರ ಹಿರಿದು. ಈ ಸಾಮರಸ್ಯಕ್ಕೆ ಅಡೆತಡೆಯಾದಾಗ ಅಸ್ವಸ್ಥತೆಯ ಲಕ್ಷಣಗಳು ಕಾಣಬಹುದು. ದೀರ್ಘಕಾಲ ಬದುಕಿರುವವರಲ್ಲಿರುವ ಸಮಾನ ಅಂಶವೆಂದರೆ, ಅವರ ಶಿಸ್ತುಬದ್ಧ ಜೀವನಶೈಲಿ ಮತ್ತು ಆಹಾರದ ವಿಷಯದಲ್ಲಿ ಅವರ ಶ್ರದ್ಧೆ.

ನಮ್ಮ ಮಿದುಳಿನಲ್ಲಿರುವ ಪೀನಿಯಲ್ ಗ್ರಂಥಿ ಮೆಲಟೋನಿನ್ ಎಂಬ ಚೋದಕವನ್ನು ಸ್ರವಿಸುತ್ತದೆ. ಈ ಚೋದಕದ ಮಟ್ಟ ಕತ್ತಲಿನ ಸಮಯದಲ್ಲಿ ಏರುತ್ತದೆ ಮತ್ತು ನಿದ್ರೆಗೆ ಕಾರಣವಾಗುತ್ತದೆ. ಸೂರ್ಯನ ಬೆಳಕು ಪ್ರಖರವಾಗಿರುವಾಗ ಈ ಚೋದಕದ ಸ್ರವಿಕೆ ಕಡಿಮೆ. ಶರೀರದಲ್ಲಿ ಮೆಲಟೋನಿನ್ ಏರು ಮಟ್ಟದಲ್ಲಿ ಇರುವಾಗ ಆಹಾರ ಸೇವಿಸಿದರೆ ಕೊಬ್ಬಿನ ಶೇಖರಣೆ ಹೆಚ್ಚುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಒಂದೇ ರೀತಿಯ ಆಹಾರವನ್ನು ಸಂಜೆಯ ವೇಳೆ ಸೇವಿಸಿದರಿಗೆ ಹೋಲಿಸಿದರೆ, ತಡರಾತ್ರಿ ಸೇವಿಸಿದವರ ಶರೀರದಲ್ಲಿ ಕೊಬ್ಬಿನ ಅಂಶ ಅಧಿಕವಾಗಿತ್ತು. ಮಧುಮೇಹಿಗಳಲ್ಲಿ ಕೂಡ ರಾತ್ರಿ ತಡವಾಗಿ ಆಹಾರ ಸೇವಿಸಿದವರ ರಕ್ತದ ಗ್ಲುಕೋಸ್ ಮಟ್ಟ ಹದ ತಪ್ಪಿತ್ತು ಮತ್ತು ಹೆಚ್ಚು ಇನ್ಸುಲಿನ್ ಅಗತ್ಯ ಕಂಡಿತ್ತು.

ಆಹಾರದ ಜೀರ್ಣಕ್ರಿಯೆಗೆ ಬೇಕಾದ ಬಹಳಷ್ಟು ಚೋದಕಗಳು ಜೈವಿಕ ಗಡಿಯಾರವನ್ನು ಅವಲಂಬಿಸುವುದರಿಂದ ಆಹಾರ ಪದ್ದತಿ ಅದಕ್ಕೆ ಅನುಗುಣವಾಗಿರುವುದು ಸೂಕ್ತ. ದಿನದ ಆರಂಭದಲ್ಲಿ ಆಹಾರದ ಪ್ರಮಾಣ ಹೆಚ್ಚಾಗಿದ್ದರೆ ಶರೀರ ಅದನ್ನು ಸರಾಗವಾಗಿ ನಿರ್ವಹಿಸುತ್ತದೆ. ಅಂತೆಯೇ, ಹೊತ್ತು ಮುಳುಗಿದ ನಂತರ ಮಿತವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳಿತು. ಕೆಲಸದ ಒತ್ತಡದಲ್ಲಿ ಮುಂಜಾನೆಯ ತಿಂಡಿಯನ್ನು ತಿನ್ನದೇ, ಮಧ್ಯಾಹ್ನ ಅರೆಹೊಟ್ಟೆ ತಿಂದು, ಇಡೀ ದಿನಕ್ಕೆ ಬೇಕಾದದ್ದನ್ನು ತಡರಾತ್ರಿ ಆರಾಮವಾಗಿ ತಿನ್ನುವವರಲ್ಲಿ ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಗಳು ಅಧಿಕ ಎಂದು ಹಲವಾರು ಅಧ್ಯಯನಗಳು ತೋರಿವೆ. ಇದಕ್ಕೆ ಪ್ರತಿಕೂಲವಾಗಿ, ಮುಂಜಾನೆಯ ತಿಂಡಿಯನ್ನು ತಪ್ಪಿಸದೇ, ಮಧ್ಯಾಹ್ನದ ಊಟವನ್ನು ಸರಿಯಾದ ವೇಳೆಗೆ ಸೇವಿಸಿ, ರಾತ್ರಿ ಮಿತಾಹಾರ ತಿಂದು ಬೇಗನೆ ಮಲಗುವವರಲ್ಲಿ ಕಾಯಿಲೆಗಳ ಸಾಧ್ಯತೆಗಳು ಗಣನೀಯವಾಗಿ ಕಡಿಮೆ ಇರುತ್ತವೆ. ಹೀಗಾಗಿ, “ಬೆಳಗ್ಗಿನ ತಿಂಡಿಯನ್ನು ಮಹಾರಾಜನಂತೆಯೂ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆಯೂ, ರಾತ್ರಿಯ ಆಹಾರವನ್ನು ಭಿಕಾರಿಯಂತೆಯೂ ಸೇವಿಸಬೇಕು” ಎನ್ನುವ ಆಂಗ್ಲ ನುಡಿಗಟ್ಟು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಜೈವಿಕ ಗಡಿಯಾರದ ಜೊತೆ ಜೀರ್ಣಾಂಗದ ಚೋದಕಗಳ ಹೊಂದಾಣಿಕೆಯಿದೆ. ಈ ಚೋದಕಗಳ ಜೊತೆ ನಮ್ಮ ಊಟದ ಸಮಯದ ಹೊಂದಾಣಿಕೆ ಇರಬೇಕು. ಈ ಲೆಕ್ಕದಲ್ಲಿ ಪ್ರತಿದಿನವೂ ಕ್ಲುಪ್ತ ಸಮಯದಲ್ಲಿ ಆಹಾರ ಸೇವಿಸುವ ಪದ್ದತಿ ಜೈವಿಕ ಗಡಿಯಾರವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಒಂದೊಂದು ದಿನ ಒಂದೊಂದು ಹೊತ್ತಿಗೆ ಆಹಾರ ಸೇವನೆ ಮಾಡುವುದರಿಂದ ಜೈವಿಕ ಗಡಿಯಾರ ಗಲಿಬಿಲಿಗೊಳ್ಳುತ್ತದೆ. ಈ ಗಡಿಯಾರದ ಚಲನೆಯ ಮೇಲೆ ಹಲವಾರು ಪ್ರಕ್ರಿಯಗಳು ನಿಂತಿವೆ. ಅವೆಲ್ಲವೂ ಏರುಪೇರಾಗುತ್ತವೆ. ಇದರ ಒಟ್ಟಾರೆ ಪರಿಣಾಮ ಆರೋಗ್ಯದ ಮೇಲೆಯೇ ಆಗುತ್ತದೆ. ಒಂದು ಅಧ್ಯಯನದಲ್ಲಿ ಮೊಬೈಲ್ ಆಪ್ ಗಳನ್ನು ಬಳಸಿ, ಆಹಾರ ಸೇವನೆಯ ಸಮಯದ ಜೊತೆಗೆ ಆರೋಗ್ಯದ ಸೂಚಕಗಳನ್ನು ತಾಳೆ ನೋಡಲಾಗಿದೆ. ಇದರ ಪ್ರಕಾರ ಆಹಾರ ಸೇವನೆಯ ಸಮಯಪಾಲನೆ ದೀರ್ಘಕಾಲಿಕ ಅವಧಿಯಲ್ಲಿ ರೋಗಗಳ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಅಧ್ಯಯನಗಳ ಪ್ರಕಾರ ಆಹಾರ ಸೇವನೆಯ ವಿಷಯಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಬಹುದು. ರಾತ್ರಿಯ ಊಟ ಮತ್ತು ಬೆಳಗ್ಗಿನ ತಿಂಡಿಯ ನಡುವೆ ಹನ್ನೆರಡು ಗಂಟೆಗಳ ಅಂತರ ಒಳಿತು. ಮುಂಜಾನೆ ಹೆಚ್ಚು ಆಹಾರ ಸೇವಿಸಿ, ರಾತ್ರಿ ಮಿತಾಹಾರ ಪದ್ಧತಿ ಇಟ್ಟುಕೊಳ್ಳುವುದು ಸೂಕ್ತ. ಮನಸ್ಸಿಗೆ ಬಂದಾಗಲೆಲ್ಲಾ ಏನನ್ನಾದರೂ ತಿನ್ನುತ್ತಲೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವೆ ಹೆಚ್ಚು ಆಹಾರ ಸೇವಿಸದಿರುವುದು ಆರೋಗ್ಯಕರ.

ಬೆಳಗ್ಗಿನ ತಿಂಡಿಯನ್ನು ಏಳರಿಂದ ಎಂಟು ಗಂಟೆಯ ಸುಮಾರಿಗೆ, ಮಧ್ಯಾಹ್ನದ ಊಟವನ್ನು ಒಂದರಿಂದ ಎರಡು ಗಂಟೆಯ ವೇಳೆಗೆ ಮತ್ತು ರಾತ್ರಿ ಮಿತಾಹಾರ ಭೋಜನವನ್ನು ಏಳರಿಂದ ಎಂಟು ಗಂಟೆಯ ನಡುವೆ ಸೇವಿಸುವ ಪದ್ದತಿ ಒಟ್ಟಾರೆ ಆರೋಗ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಾಯಿಚಪಲಕ್ಕೆ ಕಡಿವಾಣ ಹಾಕುವುದು, ನಡುನಡುವೆ ಉಪವಾಸ ಮಾಡುವುದು, ಸಾಕಷ್ಟು ನೀರಿನ ಸೇವನೆ, ವ್ಯಾಯಾಮ, ಒಳ್ಳೆಯ ನಿದ್ರೆ – ಇವುಗಳು ಆರೋಗ್ಯ ಸಂರಕ್ಷಣೆಯಲ್ಲಿ, ಅನಾರೋಗ್ಯದ ನಿರ್ವಹಣೆಯಲ್ಲಿ, ಅನೇಕ ಕಾಯಿಲೆಗಳ ನಿಯಂತ್ರಣದಲ್ಲಿ ಬಹಳ ಪ್ರಭಾವಶಾಲಿ ಪರಿಣಾಮಗಳನ್ನು ತೋರಿವೆ. ಆಹಾರದಲ್ಲಿನ ಶಿಸ್ತು ಕೇವಲ ಕ್ಯಾಲೊರಿ ಗಣನೆಗೆ ಮಾತ್ರ ಸೀಮಿತವಾಗದೇ, ಆಹಾರ ಸೇವನೆಯ ಸಮಯಕ್ಕೂ ವಿಸ್ತರಿಸಿದರೆ ಮತ್ತಷ್ಟು ಒಳ್ಳೆಯ ಫಲಿತಾಂಶ ಲಭಿಸುತ್ತದೆ. ದೀರ್ಘಕಾಲಿಕ ಆರೋಗ್ಯ ನಿರ್ವಹಣೆಯಲ್ಲಿ ಆಹಾರ ಸೇವನೆಯ ಸಮಯದ ಅಗತ್ಯವನ್ನು ವೈಜ್ಞಾನಿಕ ಅಧ್ಯಯನಗಳು ತೋರಿವೆ. ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದ ಆರೋಗ್ಯ ಸೇವನೆಯ ನಿಯಮಗಳು ಸಮ್ಯಕ್ಕಾದವು ಎಂದು ಇಂದಿನ ವಿಜ್ಞಾನ ದೃಢಪಡಿಸಿದೆ.

-----------------------

  ಮೇ 2002 ರ ಸೂತ್ರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ