ಮಂಗಳವಾರ, ಮೇ 3, 2022

ಕುತೂಹಲಿ ವಿಜ್ಞಾನ ಪತ್ರಿಕೆ ಭಾರತೀಯ ವಿಜ್ಞಾನ್ ಪ್ರಸಾರ್ ಕೊಡುಗೆ. ಇದರ ಸಾರಥ್ಯ ವಹಿಸಿರುವ ಶ್ರೀಯುತ Kollegala Sharma ರವರು ಈ ಬಾರಿಯ ಏಪ್ರಿಲ್ 2022 ಸಂಚಿಕೆಯನ್ನು ಹಾಸ್ಯಕಾಗಿ ಮೀಸಲಿಟ್ಟಿದ್ದಾರೆ. ವಿಜ್ಞಾನ ಪತ್ರಿಕೆಯೊಂದು ಹಾಸ್ಯಕಾಗಿ ವಿಶೇಷ ಸಂಚಿಕೆ ಮಾಡಿರುವ ಉದಾಹರಣೆಗಳು ತೀರಾ ಅಪರೂಪ. ಅವರ ಸಲಹೆಯ ಮೇರೆಗೆ "ವೈದ್ಯಕೀಯದಲ್ಲಿ ಹಾಸ್ಯ" ಕುರಿತಾಗಿ ವೈಯಕ್ತಿಕ ಅನುಭವದ ಕೆಲವು ಪ್ರಸಂಗಗಳನ್ನು ಹಂಚಿಕೊಂಡಿದ್ದೇನೆ.

ವೈದ್ಯಕೀಯ ವೃತ್ತಿಯಲ್ಲಿ ಸಹಜ ಹಾಸ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

ಪ್ರಾಯಶಃ ಬೇರೆ ಯಾವುದೇ ವೃತ್ತಿಯಲ್ಲೂ ಕಾಣದಷ್ಟು ವೈವಿಧ್ಯಮಯ ಜನರ ಸಂಪರ್ಕ ದೊರೆಯುವುದು ವೈದ್ಯಕೀಯ ವೃತ್ತಿಯಲ್ಲೇ. ಒಂದೆಡೆ ತನಗೆ ಇರುವ ಆರೋಗ್ಯ ಸಮಸ್ಯೆಗಳನ್ನೆಲ್ಲಾ ಕೂಲಂಕಷವಾಗಿ ಗೂಗಲ್ ಮಾಡಿ ಸೋಸುವವರಾದರೆ, ಮತ್ತೊಂದೆಡೆ ಚರ್ಮದ ಒಳಗೆ ಅಂಗಾಂಗಗಳಿರುತ್ತವೆ ಎಂದಾಗ “ಹೌದಾ” ಎಂದು ಅಚ್ಚರಿಯಿಂದ ಕಣ್ಣರಳಿಸುವ ಮುಗ್ಧರು. ವೈದ್ಯಕೀಯ ಕ್ಷೇತ್ರದಲ್ಲಿ ಹಾಸ್ಯ ಉಕ್ಕುವುದು ಈ ವಿರೋಧಾಭಾಸಗಳಿಂದಲೇ. ಅನುಭವಕ್ಕೆ ನಿಲುಕಿದ ಕೆಲವು ಪ್ರಸಂಗಗಳು:

1.      ಹುಡುಗನೊಬ್ಬನ ಸಿಜೇರಿಯನ್

ಗರ್ಭಿಣಿಯ ಹೆರಿಗೆ ಒಂದು ನೈಸರ್ಗಿಕ, ಸಹಜ ವಿಧಾನ. ಆದರೆ, ಈ ಪ್ರಕ್ರಿಯೆಯಲ್ಲಿ ಅಡೆತಡೆ ಉಂಟಾದರೆ, ಅಥವಾ ಸಹಜ ಹೆರಿಗೆಗೆ ಬೇರೆ ಯಾವುದಾದರೂ ಸಮಸ್ಯೆ ಇದ್ದರೆ, ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಕೋಶದಿಂದ ಮಗುವಿನ ಹೆರಿಗೆ ಮಾಡಿಸಲಾಗುತ್ತದೆ. ಬಹಳ ಕಾಲದಿಂದಲೂ ಇದನ್ನು ಸಿಜೇರಿಯನ್ ಹೆರಿಗೆ ಎಂದು ಕರೆಯುತ್ತಾರೆ. ರೋಮಿನ ಚಕ್ರವರ್ತಿಯಾಗಿದ್ದ ಜೂಲಿಯಸ್ ಸೀಜರ್ ಇಂತಹ ಶಸ್ತ್ರಚಿಕಿತ್ಸೆಯ ಮೂಲಕವೇ ಜನಿಸಿದ ಎಂದು ಪ್ರತೀತಿ. ಅದಕ್ಕೇ ಆ ಹೆಸರು.

ಒಮ್ಮೆ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ “ಸಾ... ಸಾ... ಎನ್ನುವ ದನಿ ಹಿಂಬಾಲಿಸಿತು. ತಿರುಗಿ ನೋಡಿದರೆ ಇಬ್ಬರು ನಡುವಯಸ್ಕ ವ್ಯಕ್ತಿಗಳು ನನ್ನೆಡೆಗೆ ಓಡಿಬರುತ್ತಿದ್ದರು. “ಸಾ... ನಮ್ಮ ಮಗೂಗೆ ಇನ್ನೂ ಸಿಜೇರಿಯನ್ ಮಾಡಿಲ್ಲ. ಸ್ವಲ್ಪ ನೋಡ್ತೀರಾ?” ಎಂದರು. ಯಾವ ಗರ್ಭಿಣಿಯ ಬಗ್ಗೆ ಹೇಳುತ್ತಿದ್ದಾರೆ ಎಂದು ನೆನಪಾಗಲಿಲ್ಲ. “ಬಸುರಿ ವಾರ್ಡಿನಲ್ಲಿ ಕೇಳಿ” ಎಂದೆ. ಅವರು ಅಚ್ಚರಿಯಿಂದ, “ಬಸುರಿ ವಾರ್ಡಿನಲ್ಲಿ ಅಲ್ಲ ಸಾ. ನಮ್ಮ ಮಗಾ ಇರೋದು ಮೂರನೇ ಮಹಡಿಯಲ್ಲಿ” ಎಂದರು. ಅದು ಸಾಮಾನ್ಯ ಶಸ್ತ್ರಚಿಕಿತ್ಸೆಯ ರೋಗಿಗಳ ವಾರ್ಡ್. ಅಲ್ಲೇಕೆ ಬಸುರಿಯನ್ನು ದಾಖಲಿಸಿದರು ಎಂದು ಆಲೋಚಿಸುತ್ತಾ, “ಹೆಸರೇನು?” ಎಂದೆ. “ಮಾದೇಸ” ಎಂದರು. “ನಿನ್ನ ಹೆಸರಲ್ಲಪ್ಪಾ; ಬಸುರಿಯ ಹೆಸರೇನು?” ಎಂದೆ. “ಬಸುರಿ ಅಲ್ಲ ಸಾ. ನಮ್ಮ ಮಗಾ ಮಾದೇಸಾ. ಹದಿನಾರು ವರ್ಷದೋನು” ಎಂದರು.

ನನಗೆ ಪೀಕಲಾಟ. ಹದಿನಾರು ವರ್ಷದ ಹುಡುಗನನ್ನು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಲು ಸಾಮಾನ್ಯ ಶಸ್ತ್ರಚಿಕಿತ್ಸೆಯ ರೋಗಿಗಳ ವಾರ್ಡಿಗೆ ಯಾರು ಸೇರಿಸಿದರು? ದಾಖಲಾತಿ ಮಾಡುವಾಗ ಗುಮಾಸ್ತರಿಂದ ಏನಾದರೂ ತಪ್ಪಾಯಿತೇ? ಇದು ನಾಲ್ಕು ಜನರಿಗೆ ತಿಳಿದರೆ ಆಸ್ಪತ್ರೆಗೆ ಕೆಟ್ಟ ಹೆಸರಲ್ಲವೇ? ತಲೆ ಕೆರೆದುಕೊಂಡು ಹೇಳಿದೆ, “ನೀವು ಇಲ್ಲೇ ಇರಿ. ನಾನು ವಿಚಾರಿಸಿ ಬರುತ್ತೇನೆ”. ಅವರು ತಲೆಯಾಡಿಸಿದರು.

ಮತ್ತೆ ಕಾಲೆಳೆದುಕೊಂಡು ಮೂರು ಮಹಡಿ ಹತ್ತಿದ್ದಾಯಿತು. ರೋಗಿ ಮಾದೇಶ ಅಲ್ಲಿಯೇ ಇದ್ದ. ಆತನ ದಾಖಲಾತಿ ನೋಡಿದೆ. ಆತನಿಗೆ ಹೊಟ್ಟೆಯಲ್ಲಿ ಗೆಡ್ಡೆ ಇತ್ತು. ಅದರ ಸಲುವಾಗಿ ಶಸ್ತ್ರಚಿಕಿತ್ಸೆಯ ವಾರ್ಡಿಗೆ ದಾಖಲಾಗಿದ್ದ. ನಿರಾಳದ ನಿಟ್ಟುಸಿರು ಬಿಡುವಂತಾಯಿತು. ಆ ವೇಳೆಗೆ ಪರಿಚಿತ ಹಿರಿಯ ವೈದ್ಯರೊಬ್ಬರು ಬಂದರು. “ಏನಿಲ್ಲಿ?” ಎಂದು ಕುಶಲ ವಿಚಾರಿಸಿದರು. ನಡೆದುದ್ದನ್ನೆಲ್ಲಾ ಅವರಿಗೆ ಹೇಳಿದೆ. ಅವರು ನಕ್ಕು ಹೇಳಿದರು “ಹಲವಾರು ಹಳ್ಳಿ ಮಂದಿ ಯಾವುದೇ ಶಸ್ತ್ರಚಿಕಿತ್ಸೆಯನ್ನೂ ಸಿಜೇರಿಯನ್ ಎಂದೇ ಕರೆಯುತ್ತಾರೆ. ಅವರಿಗೆ ತಿಳಿದಿರುವ ಶಸ್ತ್ರಚಿಕಿತ್ಸೆಯ ಹೆಸರು ಅದೊಂದೇ. ಮಿದುಳಿನದ್ದಾಗಲೀ, ಹೃದಯದ್ದಾಗಲೀ, ಕಾಲಿನದ್ದಾಗಲೀ – ಶಸ್ತ್ರಚಿಕಿತ್ಸೆ ಎಂದರೆ ಅವರ ಪಾಲಿಗೆ ಅದು ಸಿಜೇರಿಯನ್. ಲ್ಯಾಪ್ರಾಟಮಿ, ವ್ಯಾಲ್ವೋಟಮಿ, ಇಂಪ್ಲ್ಯಾಂಟ್ ಮೊದಲಾದ ಕಷ್ಟಕರ ಹೆಸರುಗಳಿಗಿಂತಲೂ ಸಿಜೇರಿಯನ್ ಎನ್ನುವುದು ಅವರಿಗೆ ಸರಾಗ. ಜೊತೆಗೆ, ತಮ್ಮದಲ್ಲದ ಪದವನ್ನು ಹೇಳಲು ಅವರಿಗೆ ಬಹಳ ಹೆಮ್ಮೆ ಅನಿಸುತ್ತದೆ. ಅವರ ಜೊತೆಯಲ್ಲಿರುವವರೂ ಇಂಗ್ಲೀಷ್ ಹೆಸರು ಕೇಳಿ ಪ್ರಭಾವಿತರಾಗುತ್ತಾರೆ. ಅವರ ಮಾತಿನ ಅರ್ಥ ಶಸ್ತ್ರಚಿಕಿತ್ಸೆ ಎಂದೇ. ನೀವು ತಲೆ ಕೆಡಿಸಿಕೊಳ್ಳಬೇಡಿ” ಎಂದರು.

ನನಗೆ ಜ್ಞಾನೋದಯವಾಯಿತು! ಕೆಳಗಿಳಿದು ಹೋಗಿ ಅವರ ಬಳಿ, “ಮಾದೇಶನಿಗೆ ನಾಳೆ ಸಿಜೇರಿಯನ್ ಮಾಡುತ್ತಿದ್ದಾರೆ. ಎಲ್ಲಾ ಸರಿಹೋಗುತ್ತದೆ. ನೀವು ಚಿಂತಿಸಬೇಡಿ” ಎಂದೆ. ಅವರು ಖುಷಿಯಾಗಿ ಕೈಮುಗಿದು ನಿರ್ಗಮಿಸಿದರು. ಹೊಸ ಭಾಷೆ ಕಲಿತ ಸಂತಸದಲ್ಲಿ ನಾನೂ ಹೊರಟೆ! 

2.     ಅವಳು ಕೂಡ ನಾನೇ

ದಿನ ತುಂಬಿದ ಬಸುರಿ. ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತವಾದ ಪರಿಣಾಮ ಕಡೆಯ ಘಳಿಗೆಯಲ್ಲಿ ಆಸ್ಪತ್ರೆ ತಲುಪಿದ್ದಾರೆ. ಆಕೆಗೆ ಹೆರಿಗೆ ನೋವು. ಇನ್ನೂ ಆಸ್ಪತ್ರೆ ತಲುಪುವ ಮುನ್ನವೇ ಆಕೆಗೆ ನೋವು ತೀವ್ರವಾಗಿದೆ. ಆಕೆ ಹೆರಿಗೆ ವಾರ್ಡ್ ತಲುಪುವುದು ತಡವಾದೀತು ಎಂದು ಆಸ್ಪತ್ರೆಯ ಆಗಮನದ ಲಾಬಿಯಲ್ಲೇ ನಾಲ್ಕೂ ಬದಿಗಳಲ್ಲಿ ತೆರೆಗಳನ್ನು ಹಾಕಿ ತಾತ್ಕಾಲಿಕ ಚಿಕಿತ್ಸೆಯ ಕೋಣೆಯೊಂದರಂತೆ ವ್ಯವಸ್ಥೆ ಮಾಡಿ, ಸುತ್ತಮುತ್ತಲ ವಿಕ್ಷಿಪ್ತ ಆಸಕ್ತಿಯ ಜನರನ್ನು ಸೆಕ್ಯುರಿಟಿಯ ಸಹಾಯದಿಂದ ದೂರಮಾಡುತ್ತಾ, ಸ್ತ್ರೀ ವೈದ್ಯರನ್ನು ತುರ್ತಾಗಿ ಕರೆದು, ಹೆರಿಗೆ ಮಾಡಿಸಿದ್ದಾರೆ. ಸಹಜವಾಗಿ ಹೆರಿಗೆಯಾಗಿದೆ. ಹೆರಿಗೆಯ ನಂತರ ಆಕೆ ಕ್ಷೇಮವಾಗಿದ್ದಾರೆಯೇ ಎಂದು ಪರೀಕ್ಷೆ ಮಾಡುತ್ತಿದ್ದೆ. ಆಕೆಯೋ, ಈ ವಿಷಮ ಪರಿಸ್ಥಿತಿ ತಂದ ನಾಚಿಕೆಯನ್ನು ಸಹಿಸಲಾಗದೇ ಜೋರಾಗಿ ಅಳುತ್ತಿದ್ದಾರೆ. ಸುಮ್ಮನೆ ಇರಲೊಲ್ಲರು.

ಅವರನ್ನು ಸಮಾಧಾನ ಪಡಿಸಲು ನಾನೆಂದೆ “ಈ ರೀತಿ ಎಷ್ಟೋ ಜನಕ್ಕೆ ಆಗುತ್ತದೆ ಕಣಮ್ಮಾ. ನೀವು ಭಾಗ್ಯವಂತೆ. ಕನಿಷ್ಠ ಆಸ್ಪತ್ರೆಯ ಒಳಭಾಗದಲ್ಲಿ ಕ್ಷೇಮವಾಗಿ ಹೆರಿಗೆ ಮಾಡಿಸಿಕೊಂಡಿದ್ದೀರಿ. ಎರಡು-ಮೂರು ವರ್ಷಗಳ ಹಿಂದೆ ಒಬ್ಬರು ಬಂದಿದ್ದರು. ಅವರಿಗೆ ಆಂಬ್ಯುಲೆನ್ಸ್ ಒಳಗೇ ಹೆರಿಗೆ ನೋವು ಬಂದಿತ್ತು. ಆಸ್ಪತ್ರೆಯ ಒಳಗೂ ಬರಲಾಗಲಿಲ್ಲ. ಕಡೆಗೆ ಆಸ್ಪತ್ರೆಯ ವೈದ್ಯರು ಆಗಮನ ದ್ವಾರದ ಮುಂಭಾಗದಲ್ಲಿ ನಿಲ್ಲಿಸಿದ ಆಂಬ್ಯುಲೆನ್ಸ್ ಒಳಗೇ ಹೋಗಿ ಅವರ ಹೆರಿಗೆ ಮಾಡಿಸಿದರು. ಯಾರಿಗಾದರೂ ಅದಕ್ಕಿಂತಲೂ ಪೇಚಿನ ವಿಷಯ ಇದ್ದೀತೇ? ಅವರಿಗೆ ಲೆಕ್ಕ ಹಾಕಿದರೆ ನೀವು ಪುಣ್ಯ ಮಾಡಿದ್ದೀರಿ.”

ಆಕೆಗೆ ಸಮಾಧಾನ ಆಗುತ್ತದೆ ಎಂದು ಭಾವಿಸಿ ಹೇಳಿದ ಈ ಮಾತುಗಳನ್ನು ಕೇಳಿ ಆಕೆ ಇನ್ನೂ ಜೋರಾಗಿ ಅಳಲು ಆರಂಭಿಸಿದರು. ಆ ತಾರಕ ಗೋಳಿನ ನಡುವೆ ಅವರ ಅಸ್ಪಷ್ಟ ಮಾತುಗಳು ಕೇಳಿದವು “ಅದೂ ನಾನೇ.....”!   

3.     ಬಾಯಿಗೆ ಬೆರಳು

ವ್ಯಾಸಂಗದ ತರಬೇತಿಯ ವೇಳೆ ಮಕ್ಕಳ ವೈದ್ಯ ತಜ್ಞರೊಬ್ಬರಿದ್ದರು. ಬಹಳ ಬುದ್ಧಿವಂತರಾದರೂ ಶೀಘ್ರಕೋಪಿ, ಖಡಕ್ ಸ್ವಭಾವದವರು. ಮಕ್ಕಳ ವೈದ್ಯರಿಗೆ ವಿಪರೀತ ತಾಳ್ಮೆ ಬೇಕು. ಆದರೆ, ಇವರಿಗೆ ಅದೊಂದು ಬಿಟ್ಟು ಬೇರೆಲ್ಲವೂ ಇತ್ತು. ಅವರ ತರಗತಿಗಳಲ್ಲಿ ಕಮಕ್ ಕಿಮಕ್ ಎನ್ನುವಂತಿಲ್ಲ.

ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅವರು ಒಮ್ಮೆ ಸಣ್ಣ ಮಕ್ಕಳನ್ನು ಪರೀಕ್ಷೆ ಮಾಡುವ ವಿಧಾನವನ್ನು ನಮಗೆ ಪ್ರಾತ್ಯಕ್ಷಿಕವಾಗಿ ಕಲಿಸುತ್ತಿದ್ದರು. ಮಗು ಜೋರಾಗಿ ಅಳುತ್ತಿದ್ದರೆ ಅದರ ಹೃದಯದ ಬಡಿತ, ಶ್ವಾಸದ ಸದ್ದುಗಳನ್ನು ಕೇಳಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಅಳುವನ್ನು ನಿಲ್ಲಿಸಲು ನಾನಾ ತಂತ್ರಗಾರಿಗೆ ಮಾಡಬೇಕಾಗುತ್ತದೆ. ಮಗುವಿನ ಗಮನವನ್ನು ಸೆಳೆಯುವ ಸದ್ದುಗಳು, ಚೇಷ್ಟೆಗಳು, ಮಾತುಗಳನ್ನು ಬಳಸಬೇಕಾಗುತ್ತದೆ. ಇದನ್ನೆಲ್ಲಾ ಹೇಳಿಕೊಡುತ್ತಿದ್ದ ಅವರು ಅಳುವ ಮಗುವನ್ನು ಸಮಾಧಾನಗೊಳಿಸಲು ಮಗುವಿನ ತಾಯಿಗೆ “ಬಾಯಿಗೆ ಬೆರಳು ಕೊಡಮ್ಮಾ” ಎಂದು ಹೇಳಿ ತಮ್ಮ ಸ್ಟೆಥೋಸ್ಕೋಪ್ ಕಿವಿಗೆ ಹಾಕಿಕೊಂಡು ಮಗುವಿನ ಹೃದಯದ ಬಡಿತ ಆಲಿಸಲು ಸನ್ನದ್ಧರಾದರು. ಹತ್ತಾರು ಸೆಕೆಂಡುಗಳ ನಂತರವೂ ಮಗು ಅಳುತ್ತಲೇ ಇತ್ತು. ನಾವುಗಳು ಸಣ್ಣನೆ ನಗುತ್ತಿದ್ದೆವು. ಕೋಪಗೊಂಡ ಅವರು “ಬಾಯಿಗೆ ಬೆರಳು ಕೊಡಲು ಹೇಳಿದೆನಲ್ಲಾ?” ಎಂದು ಜೋರು ಮಾಡಿ ಮಗುವಿನ ತಾಯಿಯ ಕಡೆ ನೋಡಿದರು. ಆ ಮಹಾತಾಯಿ ತನ್ನ ಬೆರಳನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ನಿಂತಿದ್ದರು! ಆಕೆಗೆ ಹೇಳಬೇಕೆನಿಸಿದರೂ, ಆ ವೈದ್ಯರ ಕೋಪದ ಅರಿವಿದ್ದ ನಾವುಗಳು ನಮ್ಮಲ್ಲೇ ನಗುತ್ತಾ ಗಪ್-ಚುಪ್ ಆಗಿದ್ದೆವು.

ಅಸಹನೆಗೊಂಡ ನಮ್ಮ ತಜ್ಞ ವೈದ್ಯರು ಆಕೆಯನ್ನು ಆಕ್ಷೇಪಿಸುತ್ತಾ, “ನಿನ್ನ ಬಾಯಿಗಲ್ಲ; ಸರಿಯಾಗಿ ಬಾಯಿಗೆ ಬೆರಳು ಕೊಡು” ಎಂದು ಮಗುವಿನತ್ತ ತೋರಿದರು. ಆದರೆ, ಈಗಾಗಲೇ ವೈದ್ಯರ ಕೋಪದಿಂದ ದಿಗಿಲು ಬಿದ್ದಿದ್ದ ಆಕೆ ತನ್ನ ಬಾಯಿಂದ ಬೆರಳು ತೆಗೆದು ಸೀದಾ ನಮ್ಮ ವೈದ್ಯರ ಬಾಯಿಗೇ ಇಡಲು ಹೋದರು! ಈ ಏಕಾಏಕಿ ಅನಿರೀಕ್ಷಿತ ಬೆಳವಣಿಗೆಯಿಂದ ಅಪ್ರತಿಭರಾದ ತಜ್ಞ ವೈದ್ಯರು ಸೀದಾ ಹಿಂದಕ್ಕೆ ಜಿಗಿದು ಅಂತಿಮ ಕ್ಷಣದಲ್ಲಿ ತಪ್ಪಿಸಿಕೊಂಡರು! ಅಲ್ಲಿಯವರೆಗೆ ನಗುವನ್ನು ಬಿಗಿ ಹಿಡಿದಿದ್ದ ನಾವುಗಳು ಜೋರಾಗಿ ನಗುವಂತಾಯಿತು. ಗೊಂದಲಕ್ಕೆ ಬಿದ್ದ ಮಗುವಿನ ತಾಯಿ ತಾನೂ ಪೆಚ್ಚಾಗಿ ನಕ್ಕಳು. ಘಟನೆಯ ಸರಣಿ ಎಷ್ಟು ಬಲವಾಗಿತ್ತೆಂದರೆ, ಆ ಶೀಘ್ರ ಕೋಪಿ ವೈದ್ಯರೂ ಜೋರಾಗಿ ನಕ್ಕುಬಿಟ್ಟರು! ಅಂದಿನ ತರಗತಿ ಅಲ್ಲಿಗೇ ಬರಖಾಸ್ತಾಯಿತು!

4.    ಈವತ್ತೇ

ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ದಾಖಲಾತಿ ವಿಭಾಗದಲ್ಲಿ ನಿಂತಿದ್ದರು. ತಮ್ಮ ಸರದಿ ಬಂದಾಗ “ಹೆರಿಗೆ ವಾರ್ಡಿನಲ್ಲಿ ಅಡ್ಮಿಟ್ ಆಗಬೇಕು” ಎಂದರು. ಆದರೆ, ತಕ್ಷಣಕ್ಕೆ ಹೆರಿಗೆ ಆಗುವ ಯಾವ ಲಕ್ಷಣಗಳೂ ಅವರಿಗೆ ಇರಲಿಲ್ಲ. ಹೆರಿಗೆ ನೋವು, ಗರ್ಭಸ್ಥ ಮಗುವಿನ ಚಲನೆ, ಇತ್ಯಾದಿ ಪ್ರಶ್ನೆಗಳನ್ನೆಲ್ಲಾ ತಾಳ್ಮೆಯಿಂದ ಕೇಳಿದ್ದಾಯಿತು. ಅಡ್ಮಿಟ್ ಮಾಡುವಂಥ ಪ್ರಮೇಯವೇನೂ ಅವರಿಗೆ ಇರಲಿಲ್ಲ. ಕಡೆಗೆ, “ನೀವು ಏತಕ್ಕಾಗಿ ಅಡ್ಮಿಟ್ ಆಗುತ್ತಿದ್ದೀರಿ?” ಎಂದಾಗ ಆಕೆ “ಡಾಕ್ಟರು ಈ ದಿನ ನನಗೆ ಹೆರಿಗೆ ಆಗುತ್ತದೆ ಎಂದು ಚೀಟಿಯಲ್ಲಿ ಬರೆದುಕೊಟ್ಟಿದ್ದಾರೆ. ಅದಕ್ಕೇ ಬಂದು ಹೆರಿಗೆ ಮಾಡಿಸಿಕೊಂಡು ಮಗು ತೆಗೆದುಕೊಂಡು ಹೋಗಲು ಬಂದಿದ್ದೇನೆ” ಎಂದರು! ಬಸುರಿಯ ಅಂತಿಮ ಋತುಸ್ರಾವ ದಿನದ ಲೆಕ್ಕಾಚಾರದಲ್ಲಿ ಹೆರಿಗೆ ಆಗಬಹುದಾದ ಒಂದು ಅಂದಾಜು ತಾರೀಖನ್ನು ವೈದ್ಯರು ನೀಡುತ್ತಾರೆ. ಆ ದಿನಾಂಕವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಆಕೆ ಆನ್ಲೈನ್ ಡೆಲಿವರಿ ಮಾದರಿಯಲ್ಲಿ ನಿಖರವಾಗಿ ಅದೇ ದಿನ ಹೆರಿಗೆ ಮಾಡಿಸುತ್ತಾರೆ ಎಂದು ನಂಬಿದ್ದರು. ಕಡೆಗೆ ಸಮಾಧಾನಪಡಿಸಿ ಅವರನ್ನು ಕಳಿಸಿದ್ದಾಯಿತು. ನಾಲ್ಕು ದಿನಗಳ ನಂತರ ಅವರಿಗೆ ಪ್ರಸವವಾಯಿತು. ಹೆರಿಗೆಗೆ ತಪ್ಪು ತಾರೀಖು ಕೊಟ್ಟರೆಂದು ವೈದ್ಯರ ಮೇಲೆ ಅವರು ಆಸ್ಪತ್ರೆಯಲ್ಲಿ ಎಲ್ಲರಿಗೂ ಶಿಕಾಯತು ಮಾಡಿದರು!

--------------------------

ಮೂಲ ಲೇಖನ ಇರುವ ಕುತೂಹಲಿ ಏಪ್ರಿಲ್ 2022 ಸಂಚಿಕೆಯ ಕೊಂಡಿ: https://bit.ly/3NBw9eh

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ