ಮಂಗಳವಾರ, ಮೇ 3, 2022

 

ಆರೋಗ್ಯ ರಕ್ಷಣೆಯಲ್ಲಿ ವೈಯಕ್ತಿಕ ಶಿಸ್ತಿನ ಪಾತ್ರ

ಡಾ. ಕಿರಣ್ ವಿ.ಎಸ್.

ವೈದ್ಯರು

ಯಶಸ್ವಿ ವ್ಯಕ್ತಿಗಳ ಸಾಧನೆಯ ಹಿಂದಿನ ಮರ್ಮಗಳನ್ನು ಅರಿಯಲು ಹಲವಾರು ಅಧ್ಯಯನಗಳು ನಡೆದಿವೆ. ಜಾಣತನ, ಓದು, ಹಣ, ಚಾಲಾಕಿತನ, ಮೋಸಗೊಳಿಸುವ ಕಲೆಗಾರಿಕೆ, ನಯವಾದ ಮಾತುಗಾರಿಕೆ ಮೊದಲಾದವು ಜೀವನದಲ್ಲಿ ಸಫಲತೆಯನ್ನು ನೀಡಬಹುದೆಂದು ಹಲವರ ನಂಬಿಕೆ. ಆದರೆ ವೈಜ್ಞಾನಿಕ ಅಧ್ಯಯನಗಳು, “ಮಾಡುವ ಕೆಲಸದ ಬಗ್ಗೆ ನಿಷ್ಠೆ, ಅದನ್ನು ಸಾಧಿಸುವ ಛಲ, ಮತ್ತು ಶಿಸ್ತುಬದ್ಧ ನಡವಳಿಕೆ” ಯಶಸ್ಸಿನ ಮೂಲಕಾರಣಗಳು ಎಂದು ತೋರಿವೆ. ಈ ಮಾತನ್ನು ಆರೋಗ್ಯ ರಕ್ಷಣೆಯ ವಿಷಯದಲ್ಲೂ ಹೇಳಬಹುದು. ಜೀವನವಿಡೀ ಒಳ್ಳೆಯ ಆರೋಗ್ಯಕ್ಕಿಂತ ಹೆಚ್ಚಿನ ಸಾಫಲ್ಯ ಬೇರೇನೂ ಇರಲಿಕ್ಕಿಲ್ಲ.   

ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಅಂದರೆ, ಕೇವಲ ಕಾಯಿಲೆ ಬಾರದಂತೆ ಎಚ್ಚರಿಕೆ ತೆಗೆದುಕೊಳ್ಳುವುದು ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನವಲ್ಲ. ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ.

ಶಿಸ್ತಿನ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಶಿಸ್ತು ಎಂದರೆ ತಾನು ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವುದು; ಕೆಲಸದ ಆವಶ್ಯಕತೆಗಳು, ಜವಾಬ್ದಾರಿಗಳನ್ನು ಅರಿತುಕೊಳ್ಳುವುದು; ಆ ಕೆಲಸದಲ್ಲಿನ ಒತ್ತಡವನ್ನು ನಿರ್ವಹಿಸುವುದು; ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ, ಅರ್ಥ ಮಾಡಿಕೊಳ್ಳುವುದು; ಕೆಲಸದ ಪ್ರತಿ ನಮ್ಮ ನಿರ್ವಹಣೆಯ ಬಗ್ಗೆ ಪ್ರಾಮಾಣಿಕ ವಿಶ್ಲೇಷಣೆ ನಡೆಸುವುದು; ಈ ಪ್ರಕ್ರಿಯೆಯಲ್ಲಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಪತ್ತೆ ಮಾಡುವುದು; ವ್ಯವಸ್ಥಿತ ಕಾರ್ಯನಿರ್ವಹಣೆಯನ್ನು ಮೈಗೂಡಿಸಿಕೊಳ್ಳುವುದು; ಧನಾತ್ಮಕ ಚಿಂತನೆ; ಕೋಪ, ಆವೇಶಗಳ ಮೇಲೆ ಹಿಡಿತ ಸಾಧಿಸುವುದು; ಸೋಲುಗಳನ್ನು ಒಪ್ಪಿ, ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು, ಮುಂತಾದುವು ವೈಯಕ್ತಿಕ ಶಿಸ್ತಿನ ಭಾಗಗಳು. ಆರೋಗ್ಯ ರಕ್ಷಣೆಯ ಸಾಫಲ್ಯದಲ್ಲಿ ಈ ಎಲ್ಲ ಅಂಶಗಳೂ ಸೇರಿವೆ.

ವಿದ್ಯೆಗೂ, ಶಿಸ್ತಿಗೂ ನೇರ ಸಂಬಂಧವಿಲ್ಲ. ಆದರೆ, ಶಿಸ್ತನ್ನು ಮೈಗೂಡಿಸುವಲ್ಲಿ ಶಿಕ್ಷಣ ನೆರವಾಗುತ್ತದೆ. ಗಮ್ಯವನ್ನು ಅರಿತವರ ಹೆಜ್ಜೆಗಳು ಧೃಢವಾಗಿರುತ್ತವೆ; ಸಫಲತೆ ಹೆಚ್ಚಾಗಿರುತ್ತದೆ. ಇತರ ದೈನಂದಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸದೆ, ಪ್ರತಿಯೊಂದು ಕೆಲಸಕ್ಕೂ ಅಗತ್ಯ ಕಾಲವನ್ನು ನೀಡುವ ಪ್ರಕ್ರಿಯೆಯಲ್ಲಿ ಶಿಸ್ತಿನ ಪಾತ್ರವಿದೆ. ಆರೋಗ್ಯದ ವಿಷಯಗಳಲ್ಲಿ ನೆಪಗಳನ್ನು ಹುಡುಕುವುದು ಬಹಳ ಸುಲಭ. ನೆಪಗಳ ಪ್ರಲೋಭನೆಯನ್ನು ಹತ್ತಿಕ್ಕುವುದಕ್ಕೆ ಶಿಸ್ತು ಮುಖ್ಯ. ಇದರ ಅಗತ್ಯವನ್ನು ಎಲ್ಲರೂ ಮನಗಾಣಬೇಕು. ಆರಂಭದಲ್ಲಿ ಕಷ್ಟವೆನಿಸಿದರೂ, ಶಿಸ್ತಿನ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಕಾಲಕ್ರಮೇಣ ಅನುಭವಕ್ಕೆ ಬರುತ್ತವೆ.

ವ್ಯಾಯಾಮ, ಊಟ, ನಿದ್ರೆ, ವಿಶ್ರಾಂತಿ, ಧ್ಯಾನ, ಧನಾತ್ಮಕ ಚಿಂತನೆ, ಒಳ್ಳೆಯ ಆಲೋಚನೆಗಳು, ವಯಸ್ಸಿಗೆ ಅನುಗುಣವಾದ ನಿಯಮಿತ ಆರೋಗ್ಯ ತಪಾಸಣೆಗಳು, ಮನೆಯಲ್ಲಿ ಮತ್ತು ವೃತ್ತಿ ಕ್ಷೇತ್ರದಲ್ಲಿ ಮಧುರ ಬಾಂಧವ್ಯಗಳು, ಸ್ವಚ್ಚತೆ, ಮುಂತಾದುವು ಆರೋಗ್ಯ ರಕ್ಷಣೆಗೆ ಪೂರಕ. ಇವುಗಳನ್ನು ಕ್ಲುಪ್ತ ಕಾಲಕ್ಕೆ ನಿಯಮಿತವಾಗಿ ಅಭ್ಯಾಸ ಮಾಡುವುದು ಆರೋಗ್ಯ ಪಾಲನೆಯ ಆವಶ್ಯಕ ಅಂಗ. ನಿಯಮಿತ ಆಚರಣೆಯನ್ನು ಸಾಧಿಸಲು ಶಿಸ್ತಿನ ಪದ್ಧತಿ ಮುಖ್ಯ. ಇದನ್ನು ಪ್ರಾಯೋಗಿಕವಾಗಿ ಆಚರಿಸಲು ಕೆಲವು ದಾರಿಗಳಿವೆ:

ನಿಯಮಿತ ದೈನಂದಿನ ಆಚರಣೆ: ಪ್ರತಿಯೊಬ್ಬರಿಗೂ ದಿನದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳ ಕಾಲಾವಧಿಯೇ ಇರುತ್ತದೆ. ಶಿಸ್ತಿನ ಪಾಲನೆ ಮಾಡುವವರು ಈ ಅವಧಿಯಲ್ಲಿ ಹೆಚ್ಚು ಸಾಧಿಸಬಲ್ಲರು. ಉಳಿದವರಿಗೆ ಸಮಯವಿಲ್ಲ ಎನ್ನುವ ನೆಪ ಮಾತ್ರ ದೊರೆಯುತ್ತದೆ. ಪ್ರತಿನಿತ್ಯವೂ ಆಯಾ ಕಾಲಕ್ಕೆ ಮಾಡಬೇಕಾದ ಕೆಲಸಗಳನ್ನು ಪದ್ದತಿಯಂತೆ ಮಾಡುತ್ತಾ ಹೋದರೆ ಕಾಲಕ್ರಮೇಣ ಅದೊಂದು ಪರಿಪಾಠವಾಗುತ್ತದೆ. ಇದನ್ನು ಆರಂಭಿಸಿ, ಕೆಲಕಾಲ ತಪ್ಪದೇ ನಡೆಸಿಕೊಂಡು ಹೋದರೆ, ಆನಂತರ ಅದು ತಂತಾನೇ ಜರುಗುತ್ತದೆ.

ಆರೋಗ್ಯ ರಕ್ಷಣೆಯ ಮಹತ್ವ: ನಮ್ಮ ಅಧೀನದಲ್ಲಿರುವ ವಸ್ತುವಿನ ಮಹತ್ವ ನಮಗೆ ತಿಳಿದಿರುವುದಿಲ್ಲ. ಬಹಳ ವೇಳೆ ಅದನ್ನು ಕಳೆದುಕೊಂಡಾಗಲೇ ಅದರ ಮೌಲ್ಯ ತಿಳಿಯುತ್ತದೆ. ಆರೋಗ್ಯದ ವಿಷಯದಲ್ಲಿ ಈ ಮಾತು ಜಾಗತಿಕ ಸತ್ಯ. ನಮ್ಮ ಆರೋಗ್ಯ ಅಮೂಲ್ಯವೆಂದೂ, ಅದನ್ನು ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವಪೂರ್ಣ ಸಂಗತಿಯೆಂದೂ ನಮಗೆ ತಿಳಿದಿರಬೇಕು. ಶಿಸ್ತಿನ ಆಚರಣೆ ಈ ಸಂಗತಿಯನ್ನು ಬೇರೂರಿಸುತ್ತದೆ.

ನಿಯಮಿತ ಆಚರಣೆಯ ಲಾಭಗಳು: ಆರೋಗ್ಯದಲ್ಲಿ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಅಂಗಗಳಿವೆ. ಸಾಂಕ್ರಾಮಿಕ ರೋಗಿಗಳು ಇಡೀ ಸಮಾಜಕ್ಕೆ ಯಾವ ರೀತಿ ಅಪಾಯ ಉಂಟುಮಾಡಬಲ್ಲರೆಂಬುದನ್ನು ಈಚಿನ ನಮ್ಮ ಕಾಲದ ಜಾಗತಿಕ ಪಿಡುಗೊಂದು ನಮಗೆ ಮನಗಾಣಿಸಿದೆ. ಹೀಗಾಗಿ, ಇಡೀ ಸಮಾಜದ ಆರೋಗ್ಯವೂ ಪ್ರತಿಯೊಬ್ಬರ ವೈಯಕ್ತಿಕ ಹೊಣೆಗಾರಿಕೆ ಎಂಬ ಅರಿವು ಇರಬೇಕು. ಈ ದೃಷ್ಟಿಕೋನ ಶಿಸ್ತು, ಸಂಯಮಗಳ ನಿಯಮಿತ ಆಚರಣೆಯಿಂದ ಮಾತ್ರವೇ ಲಭಿಸುತ್ತದೆ.

ಯುಕ್ತಾಯುಕ್ತ ವಿವೇಚನೆ: ಶಿಸ್ತುಬದ್ಧ ಜೀವನದ ಒಂದು ದೊಡ್ಡ ಲಾಭವೆಂದರೆ ಸರಿ-ತಪ್ಪಗಳ ಬಗ್ಗೆ ಸರಿಯಾದ ಅರಿವು. ಆಧುನಿಕ ಕಾಲದಲ್ಲಿ ಹಲವಾರು ಪ್ರಲೋಭನೆಗಳು ನಮ್ಮ ಬದುಕಿನೊಡನೆ ಹಾಸುಹೊಕ್ಕಾಗಿವೆ. ಇವುಗಳನ್ನು ಹತ್ತಿಕ್ಕುವುದು ಸುಲಭವಲ್ಲ. ಅಧ್ಯಯನಗಳ ರೀತ್ಯಾ ಶಿಸ್ತಿನ ಪಾಲಕರಿಗೆ ಇಂತಹ ವಿವೇಚನೆಯ ವಿಶ್ಲೇಷಣೆ ಇತರರಿಗಿಂತ ಸುಲಭ. ತಮ್ಮ ದಿನಚರಿಯಲ್ಲಿ ಬೇರೊಂದು ಹವ್ಯಾಸವನ್ನು ರೂಡಿಸಿಕೊಳ್ಳುವಾಗ, ಅದರ ಗುಣಾವಗುಣಗಳನ್ನು ಪರಿಶೀಲಿಸುವ ಸ್ವಭಾವ ಶಿಸ್ತಿನ ಜನರಲ್ಲಿ ಸಹಜವಾಗಿ ಕಾಣುತ್ತದೆ. ಇದರಿಂದ ಯೋಗ್ಯ-ಅಯೋಗ್ಯಗಳ ನಡುವಿನ ನಿರ್ಧಾರ ಸುಲಭವಾಗುತ್ತದೆ.

ಆರೋಗ್ಯ ರಕ್ಷಣೆಯಲ್ಲಿ ಶಿಸ್ತಿನ ಲಾಭಗಳು ಹಲವಾರು. ಜೀವನ ನಿಂತ ನೀರಾಗಬಾರದು. ಅದು ಪ್ರಗತಿ ಹೊಂದಲು ಹಿಂದಿನ ಮಟ್ಟವನ್ನು ಕಾಲಾನುಸಾರ ಮೀರಬೇಕು. ಇದು ಒಂದೇ ಏಟಿಗೆ ಆಗುವಂಥದ್ದಲ್ಲ. ಕಾಲಕ್ರಮೇಣ ಕೊಂಚ-ಕೊಂಚ ಪ್ರಗತಿಯನ್ನು ಸಾಧಿಸುತ್ತಾ, ಮೇಲೇರಬೇಕಾಗುತ್ತದೆ. ನಿಯಮಿತ ಆಚರಣೆಗಳಿಂದ ಆಯಾ ಕೆಲಸದಲ್ಲಿ ನಮ್ಮ ಪ್ರಾವೀಣ್ಯ ವೃದ್ಧಿಸುತ್ತದೆ. ಇದು ಶಿಸ್ತುಬದ್ಧ ಪದ್ದತಿಗಳಿಂದ ಮಾತ್ರ ಸಾಧ್ಯ. ಶಿಸ್ತಿನ ಆಚರಣೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯ ನಿರ್ವಹಣೆಗೆ ಪೂರಕ.

ಆರೋಗ್ಯ ರಕ್ಷಣೆ ನಾವು ಜೀವನವಿಡೀ ಪಾಲಿಸಬೇಕಾದ ಕರ್ತವ್ಯ. ಇದಕ್ಕೆ ನಾವೇ ಸರಿಯಾದ ಚೌಕಟ್ಟನ್ನು ನಿರ್ಮಿಸಬೇಕು. ಈ ಪ್ರಕ್ರಿಯೆಯಲ್ಲಿ ಶಿಸ್ತಿನ ಪಾತ್ರ ಮಹತ್ವದ್ದು.

-------------------------

5/ಏಪ್ರಿಲ್/2022 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/self-discipline-to-improve-your-health-925353.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ