ಸೋಮವಾರ, ಜೂನ್ 23, 2025


 

ಹೃದ್ರೋಗ ತಪಾಸಣೆ – ಭಾಗ 2 – ಹೃದಯದ ಆರೋಗ್ಯ ಪತ್ತೆ ಮಾಡುವ ಪರೀಕ್ಷೆಗಳು

 

ಡಾ. ಶ್ರೀಕಾಂತ್ ಕೆ. ವಿ.

ಹೃದ್ರೋಗ ಮತ್ತು ಹೃದಯ ಕಸಿ ತಜ್ಞರು

 

ಹೃದಯಾಘಾತಕ್ಕೆ ಅತಿ ಮುಖ್ಯ ಕಾರಣ ರೋನರಿ ಅಥೆರೋಸ್ಲ್ಕೀರೋಸಿಸ್. ಇದನ್ನು ಗುರುತಿಸಲು ವೈದ್ಯರು ಮೊದಲು ಕೆಲವು ಆರೋಗ್ಯ-ಸಂಬಂಧಿ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರ ವ್ಯಕ್ತಿಯ ತೂಕ, ಎತ್ತರ, ನಾಡಿ ಪರೀಕ್ಷೆ, ರಕ್ತದೊತ್ತಡದ ಮಾಪನ ಮತ್ತು ದೈಹಿಕ ಲಕ್ಷಣಗಳ ಭೌತಿಕ ಪರೀಕ್ಷೆ ಮಾಡುತ್ತಾರೆ. ಆಯಾ ವ್ಯಕ್ತಿಯ ಹೃದಯಾಘಾತದ ಸಾಧ್ಯತೆಯ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಆರಂಭಿಕ ಹಂತದ ಪರೀಕ್ಷೆಗಳನ್ನು ಸೂಚಿಸುತ್ತಾರೆ. ಇವುಗಳಲ್ಲಿ ಮುಖ್ಯವಾದುವು ಇಸಿಜಿ, ಎದೆಯ ಕ್ಷ-ಕಿರಣ, ಇಕೋಕಾರ್ಡಿಯೋಗ್ರಾಫಿ, ಮತ್ತು ರಕ್ತ ಪರೀಕ್ಷೆಗಳು.

 

ಹೃದಯದ ವಿದ್ಯುತ್ ಸಂಕೇತಗಳನ್ನು ನಕ್ಷೆಯ ರೂಪದಲ್ಲಿ ಮೂಡಿಸುವ ಇಸಿಜಿ ಪರೀಕ್ಷೆಯಿಂದ ಹೃದಯದ ಲಯ, ಹೃದಯದ ಸ್ನಾಯುಗಳ ಗಾತ್ರ, ಈಗ ಆಗುತ್ತಿರಬಹುದಾದ ಮತ್ತು ಹಿಂದೆ ಆಗಿರಬಹುದಾದ ಹೃದಯಘಾತದ ಚಿಹ್ನೆಗಳನ್ನು ಪತ್ತೆಹಚ್ಚಬಹುದು. ಎದೆಯ ಕ್ಷ-ಕಿರಣ ಪರೀಕ್ಷೆಯಿಂದ ಹೃದಯದ ಗಾತ್ರ ಮತ್ತು ಶ್ವಾಸಕೋಶಗಳ ಆರೋಗ್ಯ ತಿಳಿಯುತ್ತದೆ. ಇಕೋಕಾರ್ಡಿಯೋಗ್ರಫಿ ಹೃದಯದ ಬಗ್ಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಹೆಚ್ಚು ಮಾಹಿತಿ ನೀಡಬಲ್ಲ ಪರೀಕ್ಷೆ. ಹೃದಯದ ಕಾರ್ಯಕ್ಷಮತೆ, ಕವಾಟಗಳ ಚಲನೆ, ಹೃದಯಾಘಾತದಲ್ಲಿ ಉಂಟಾಗುವ ಸ್ನಾಯುಗಳ ದೌರ್ಬಲ್ಯ, ಹಾಗೂ ಜನ್ಮಜಾತ ಹೃದ್ರೋಗಗಳನ್ನು ಇಕೋಕಾರ್ಡಿಯೋಗ್ರಫಿ ಗುರುತಿಸುತ್ತದೆ. ಈ ಅಂಶಗಳ ಬಗ್ಗೆ ಹೆಚ್ಚಿನ ಮತ್ತು ನಿಖರ ಮಾಹಿತಿಯನ್ನು ಹೃದಯದ ಎಂಆರ್ ನೀಡಬಲ್ಲದು. ರಕ್ತದಲ್ಲಿನ ಅಧಿಕ ಸಕ್ಕರೆಯ ಅಂಶ ಮತ್ತು ಕೊಬ್ಬಿನ ಅಂಶಗಳು ಹೃದಯಘಾತ ಉಂಟಾಗಬಹುದಾದ ಸಾಧ್ಯತೆಗಳನ್ನು ಸೂಚಿಸುತ್ತವೆ. ಹೃದಯಘಾತವಾದ 10-14 ದಿನಗಳವರೆಗೆ ರಕ್ತದಲ್ಲಿ ಟ್ರೋಪೋನಿನ್ ಎಂಬ ರಾಸಾಯನಿಕ ಕಂಡುಬರುತ್ತದೆ.

 

ಕರೋನರಿ  ಅಥೆರೋಸ್ಲ್ಕೀರೋಸಿಸ್ ಕಾರಣದಿಂದ ಹೃದಯದ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನಂಶದ ಜೊತೆಗೆ ಕ್ಯಾಲ್ಸಿಯಂ ಕೂಡ ಇರುತ್ತದೆ. ಸಿಟಿ ಸ್ಕ್ಯಾನ್ ಮೂಲಕ ಕೊರೊನರಿ ಕ್ಯಾಲ್ಸಿಯಂ ಸ್ಕೋರ್ ಕಂಡುಹಿಡಿಯಬಹುದು. ಸ್ಕೋರ್ ಸೊನ್ನೆ ಇದ್ದರೆ ರಕ್ತನಾಳದಲ್ಲಿ ಕೊಬ್ಬಿನಂಶ ಶೇಖರವಾಗಿರುವ ಸಾಧ್ಯತೆ ಅತಿ ಡಿಮೆ. ಹೃದಯದ ರಕ್ತನಾಳಗಳ ಆಂತರಿಕ ವ್ಯಾಸ ಎಷ್ಟು ಕಿರಿದಾಗಿದೆ ಎನ್ನುವ ಪ್ರಮಾಣಕ್ಕೆ ಅನುಗುಣವಾಗಿ ವೈದ್ಯರು ಮುಂದಿನ ಚಿಕಿತ್ಸಾವಿಧಾನವನ್ನು ನಿರ್ಧರಿಸುತ್ತಾರೆ. ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇಕಡಾ 70ಕ್ಕಿಂತ ಕಡಿಮೆ ಇರುವವರೆಗೂ ಕರೋನರಿ ರಕ್ತನಾಳಗಳಲ್ಲಿ ಹರಿವಿನ ಕೊರತೆ ಬಹುತೇಕ ಇರುವುದಿಲ್ಲ. ಇದು ಶೇಕಡಾ 70ನ್ನು ಮೀರಿದರೆ, ವಿಶ್ರಾಂತ ಸ್ಥಿತಿಯಲ್ಲಿ ಸಮಸ್ಯೆ ಇಲ್ಲದಿದ್ದರೂ, ಒತ್ತಡದ ಪರಿಸ್ಥಿತಿಯಲ್ಲಿ ಕರೋನರಿ ರಕ್ತದ ಹರಿವಿನ ಕೊರತೆ ಉಂಟಾಗುತ್ತದೆ. ಟ್ರೆಡ್ಮಿಲ್ ಯಂತ್ರದ ಮೇಲೆ ವ್ಯಕ್ತಿಯನ್ನು ನಡೆಸಿ, ಸ್ಥಿರವಾಗಿರುವ ಬೈಸಿಕಲ್ ತುಳಿಸಿ, ಅಥವಾ ಹೃದಯದ ಬಡಿತವನ್ನು ಹೆಚ್ಚಿಸುವ ಔಷಧಿಗಳನ್ನು ನೀಡಿ ಒತ್ತಡದ ಪರಿಸ್ಥಿತಿಯನ್ನು ಕೃತಕವಾಗಿ ಸೃಷ್ಟಿಸಬಹುದು. ತಜ್ಞರ ಸುಪರ್ದಿಯಲ್ಲಿ ನಡೆಯುವ ಇಂಥ ಪರೀಕ್ಷೆಗಳ ವೇಳೆ ಜೊತೆಜೊತೆಗೆ ಇಸಿಜಿ, ಇಕೋಕಾರ್ಡಿಯೋಗ್ರಾಫಿ, ಎಂಆರ್, ನ್ಯೂಕ್ಲಿಯರ್ ಸ್ಕ್ಯಾನ್ ಮೊದಲಾದುವುಗಳನ್ನು ಬಳಸಿ, ಒತ್ತಡದ ಸಮಯದಲ್ಲಿ ಹೃದಯಕ್ಕೆ ರಕ್ತದ ಕೊರತೆ ಆಗುತ್ತಿದೆಯೇ ಎನ್ನುವುದನ್ನು ಬಹುತೇಕ ಖಚಿತವಾಗಿ ತಿಳಿಯಬಹುದು.

 

ಕರೋನರಿ ರಕ್ತನಾಳಗಳ ಆಂತರಿಕ ವ್ಯಾಸದ ಕಿರಿದಾಗುವಿಕೆ ಶೇಕಡ 85-90ನ್ನು ದಾಟಿದರೆ ವಿಶ್ರಾಂತಿಯ ಸ್ಥಿತಿಯಲ್ಲಿಯೂ ರಕ್ತದ ಹರಿವಿನ ಕೊರತೆಯಾಗಿ, ಹೃದಯಾಘಾತ ಉಂಟಾಗಬಹುದು. ಪರೀಕ್ಷೆಗಳ ಮೂಲಕ ಹೃದಯಕ್ಕೆ ರಕ್ತದ ಹರಿವಿನ ಕೊರತೆ ಇರುವುದು ಖಾತ್ರಿಯಾದಲ್ಲಿ, ಮೂರು ರೊನರಿ ರಕ್ತನಾಳಗಳ ಪೈಕಿ ಯಾವುದರಲ್ಲಿ, ಯಾವ ಮಟ್ಟಲ್ಲಿ , ರಕ್ತನಾಳಗಳ ಯಾವ ನಿಖರವಾದ ಸ್ಥಳದಲ್ಲಿ, ಶೇಕಡಾವಾರು ಎಷ್ಟು ಸಮಸ್ಯೆ ಇದೆ ಎಂಬುದನ್ನು ತಿಳಿಯಲು, ವಿಶೇಷವಾದ ಕ್ಷ-ಕಿರಣ ಸಜ್ಜಿತ ಥಿಯೇಟರ್ನಲ್ಲಿ ಆಂಜಿಯೋಗ್ರಾಮ್ ಪರೀಕ್ಷೆ ಮಾಡಲಾಗುತ್ತದೆ. ಮಣಿಕಟ್ಟು ಅಥವಾ ತೊಡೆಯ ಅಪಧಮನಿಯ ಒಳಗೆ ವಿಶೇಷವಾಗಿ ನಿರ್ಮಿಸಲಾದ ಸೂಕ್ಷ್ಮ ನಳಿಕೆಗಳನ್ನು ಹಾಯಿಸಿ, ಅವನ್ನು ಧಮನಿಯ ಹಾದಿಯಲ್ಲಿ ಮುನ್ನಡೆಸುತ್ತಾ ಹೃದಯದತ್ತ ಸಾಗಿ, ಕರೋನರಿ ರಕ್ತನಾಳದ ಮೂಲದಲ್ಲಿ ಇರಿಸಿ, ವಿಶಿಷ್ಟ ಅಪಾರದರ್ಶಕ ರಾಸಾಯನಿಕವನ್ನು ಕರೋನರಿ ರಕ್ತನಾಳಕ್ಕೆ ಹರಿಸಲಾಗುತ್ತದೆ. ರಕ್ತ ಹರಿಯುವಿಕೆಯ ಕ್ಷಕಿರಣದ ಚಲನಚಿತ್ರವನ್ನು ವಿವಿಧ ಕೋನಗಳಲ್ಲಿ ಸೆರೆ ಹಿಡಿದು ವಿಶ್ಲೇಷಿಸಲಾಗುತ್ತದೆ. ರಕ್ತದೊತ್ತಡ, ರಕ್ತದಲ್ಲಿನ ಆಮ್ಲಜನಕದ ಪ್ರಮಾಣ, ಹೃದಯದ ಕೋಣೆಗಳಲ್ಲಿನ ಒತ್ತಡಗಳನ್ನು ದಾಖಲಿಸಲಾಗುತ್ತದೆ. ಆಂಜಿಯೋಗ್ರಾಮ್ ವೇಳೆ ಅಥೆರೋಸ್ಲ್ಕೀರೋಸಿಸ್ಗೆ ಸಂಬಂಧಿಸಿದ ಕತ್ತಿನ ಮತ್ತು ಮೂತ್ರಪಿಂಡಗಳ ರಕ್ತನಾಳಗಳ ಪರೀಕ್ಷೆಯನ್ನೂ ಮಾಡಬಹುದು. ಪರೀಕ್ಷೆಯ ನಂತರ ನಾಲ್ಕರಿಂದ ಆರು ತಾಸು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ತಂಗಬೇಕು. ಆಂಜಿಯೋಗ್ರಾಮ್ ಬಹುತೇಕ ಸುರಕ್ಷಿತ ಪರೀಕ್ಷೆಯಾದರೂ, ಅಪರೂಪವಾಗಿ ರಕ್ತಸ್ರಾವ, ನೋವು, ಅಲರ್ಜಿ, ಮೂತ್ರಪಿಂಡದ ತಾತ್ಕಾಲಿಕ ದೋಷಗಳು ಕಂಡು ಬರಬಹುದು.

 

ಸಿಟಿ ಕರೋನರಿ ಆಂಜಿಯೋಗ್ರಾಮ್ನಲ್ಲಿ ಕೂಡ ಮಾಹಿತಿ ಲಭಿಸುತ್ತದಾದರೂ ನಿಖರತೆಯ ಪ್ರಮಾಣ ಕಡಿಮೆ. ಆದರೆ ಇದಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾಗುವ ಅಗತ್ಯವಿಲ್ಲ; ಪರೀಕ್ಷೆಯ ನಂತರ ತಂಗಬೇಕಿಲ್ಲ. ಕರೋನರಿ ಅಥೆರೋಸ್ಲ್ಕೀರೋಸಿಸ್ ಸಾಧ್ಯತೆ ಕಡಿಮೆ ಇರುವವರಿಗೆ ಸಿಟಿ ಕೊರೋನರಿ ಆಂಜಿಯೋಗ್ರಾಮ್ ಉಪಯುಕ್ತವಾದರೂ, ಇದರ ಮೂಲಕ ಮುಂದಿನ ಚಿಕಿತ್ಸೆ ಸಾಧ್ಯವಿಲ್ಲ; ಅದಕ್ಕಾಗಿ ಸಾಂಪ್ರದಾಯಿಕ ಆಂಜಿಯೋಗ್ರಾಮ್ ಪುನಃ ಮಾಡಬೇಕಾಗುತ್ತದೆ.

 

(ಮುಂದಿನ ಭಾಗ: ಹೃದಯಾಘಾತಕ್ಕೆ ವಿವಿಧ ಚಿಕಿತ್ಸೆಗಳು)

------------------------

ದಿನಾಂಕ 25/03/2025 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ https://www.prajavani.net/health/heart-health-and-clinical-tests-what-are-the-tests-for-heart-health-3217955


 

ಹೃದ್ರೋಗ ತಪಾಸಣೆ ಮತ್ತು ಚಿಕಿತ್ಸೆ - ಭಾಗ 1 – ಹೃದಯಾಘಾತ ಹೇಗೆ ಆಗುತ್ತದೆ?

ಡಾ. ಶ್ರೀಕಾಂತ್ ಕೆ.ವಿ.

ಹೃದ್ರೋಗ ಮತ್ತು ಕೃದಯ ಕಸಿ ತಜ್ಞರು

 

ನಮ್ಮ ದೇಹದಲ್ಲಿ ಹಲವಾರು ಅಂಗಗಳಿವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಇತರ ಅಂಗಗಳ ಕೆಲಸಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಆರೋಗ್ಯವಂತ ಶರೀರದ ಪ್ರತಿಯೊಂದು ಅಂಗವ್ಯವಸ್ಥೆಯೂ, ಅವುಗಳ ಜೀವಕೋಶಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಇದಕ್ಕಾಗಿ ಜೀವಕೋಶಗಳಿಗೆ ನಿರಂತರವಾಗಿ ಆಕ್ಸಿಜನ್ ಮತ್ತು ಪೋಷಕಾಂಶಗಳ ಪೂರೈಕೆ ಆಗುತ್ತಲೇ ಇರಬೇಕು. ಜೀವಕೋಶಗಳ ಚಯಾಪಚಯಗಳ ಕಾಲದಲ್ಲಿ ಉತ್ಪತ್ತಿ ಆಗುವ ಕಾರ್ಬನ್ ಡೈಆಕ್ಸೈಡ್ನಂತಹ ಮಾಲಿನ್ಯಗಳ ತೆರವು ಸಾಧ್ಯವಾಗಬೇಕು. ಈ ಪ್ರಕ್ರಿಯೆಗಳನ್ನು ನಿರ್ವಹಿಸುವ ರಕ್ತಪರಿಚಲನಾ ವ್ಯವಸ್ಥೆಯ ಕೇಂದ್ರಬಿಂದುವಾಗಿರುವ ಹೃದಯ, ಸದಾ ರಕ್ತವನ್ನು ಪಂಪ್ ಮಾಡುತ್ತಾ, ರಕ್ತನಾಳಗಳ ಬೃಹತ್ ಜಾಲದ ಮೂಲಕ ಎಲ್ಲ ಜೀವಕೋಶಗಳಿಗೂ ರಕ್ತವನ್ನು ಪೂರೈಸುತ್ತದೆ.

 

ಹೃದಯದೊಳಗೆ ರಕ್ತದ ಮಡುವಿದ್ದರೂ, ಅದನ್ನು ತನ್ನ ಸ್ವಂತ ಕೆಲಸಕ್ಕೆ ಬಳಸಿಕೊಳ್ಳಲಾಗದು. ಹೀಗಾಗಿ, ಸ್ವಂತ ಜೀವಕೋಶಗಳ ಕಾರ್ಯನಿರ್ವಹಣೆಗಾಗಿ ಹೃದಯ ಕರೊನರಿ ರಕ್ತನಾಳಗಳೆನ್ನುವ ಮೂರು ಪ್ರತ್ಯೇಕ ರಕ್ತನಾಳಗಳನ್ನು ಹೊಂದಿದೆ. ಕ್ಷಣದ ಬಿಡುವೂ ಇಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ, ನಿಮಿಷದ ಗಡುವೂ ಇಲ್ಲದಂತೆ ನಿರಂತರವಾಗಿ ರಕ್ತದ ಪೂರೈಕೆ ಆಗುತ್ತಲೇ ಇರಬೇಕು. ಕರೊನರಿ ರಕ್ತನಾಳಗಳ ರಕ್ತದ ಪ್ರವಹನಕ್ಕೆ  ಅಡೆತಡೆಗಳು ಉಂಟಾದರೆ ಹೃದಯ ಕೆಲಸ ಮಾಡಲಾಗದು. ಆಗ ಇಡೀ ಶರೀರದ ವ್ಯವಸ್ಥೆ ಕುಸಿದು, ಜೀವಕ್ಕೆ ಮಾರಕವಾಗಬಹುದು.

 

ಆರೋಗ್ಯವಂತ ವ್ಯಕ್ತಿಯ ನೂರು ಮಿಲಿಲೀಟರ್ ಶುದ್ಧ ರಕ್ತದಲ್ಲಿ, ಸುಮಾರು 20 ಮಿಲಿಲೀಟರ್ ಆಕ್ಸಿಜನ್ ಇರುತ್ತದೆ. ಬಹುತೇಕ ಅಂಗಾಂಗಗಳು ಇದರಲ್ಲಿ 5 ಮಿಲಿಲೀಟರ್ ಆಕ್ಸಿಜನನ್ನು ಮಾತ್ರ ಹೀರಿ, 15 ಮಿಲಿಲೀಟರ್ ಆಕ್ಸಿಜನ್ ಉಳಿಸಿರುತ್ತವೆ. ಅಂಗಗಳಿಗೆ ಹೆಚ್ಚಿನ ಆಕ್ಸಿಜನ್ ಅವಶ್ಯಕತೆ ಇರುವಾಗ, 5 ಮಿಲಿಲೀಟರ್ಗಿಂತ ಹೆಚ್ಚು ಪ್ರಮಾಣದ ಆಕ್ಸಿಜನ್ ಅನ್ನು ಸೆಳೆದುಕೊಳ್ಳಬೇಕು. ಜೊತೆಗೆ, ರಕ್ತದ ಹರಿವಿನ ಪ್ರಮಾಣ ಹೆಚ್ಚಿಸಿಕೊಳ್ಳುತ್ತಾ, ಬೇಕಿರುವಷ್ಟು ಆಕ್ಸಿಜನ್ ಪಡೆದುಕೊಳ್ಳಬೇಕು. ಉಳಿದ ಅಂಗಗಳಿಗೆ ಹೋಲಿಸಿದರೆ, ಹೃದಯ ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಹೀರುತ್ತದೆ. ಸಾಮಾನ್ಯ ಕೆಲಸದ ವೇಳೆ ಹೃದಯವು 100 ಮಿಲಿಲೀಟರ್ ರಕ್ತದಿಂದ 15 ಮಿಲಿಲೀಟರ್ ಆಕ್ಸಿಜನ್  ಸೆಳೆಯುತ್ತದೆ. ಹೀಗಾಗಿ, ಹೃದಯಕ್ಕೆ ಆಕ್ಸಿಜನ್ ಅಗತ್ಯ ಅಧಿಕವಾದಾಗ, ರಕ್ತನಾಳಗಳು ಹಿಗ್ಗಿ, ರಕ್ತದ ಹರಿವನ್ನು ಹೆಚ್ಚಿಸಿಕೊಳ್ಳುವ ಮೂಲಕ ಬೇಡಿಕೆಯನ್ನು ಪೂರೈಸಿಕೊಳ್ಳುತ್ತದೆ. ಅತಿಶ್ರಮದ ಕೆಲಸ ಮಾಡುವಾಗ ಆರೋಗ್ಯವಂತ ವ್ಯಕ್ತಿಯ ಹೃದಯವು ರಕ್ತ ಹರಿಯುವ ಪ್ರಮಾಣವನ್ನು ಐದರಿಂದ ಆರು ಪಟ್ಟು ಹೆಚ್ಚಾಗಿಸಿ, ಆಕ್ಸಿಜನ್ನಿನ ಬೇಡಿಕೆಯನ್ನು ಈಡೇರಿಸಿಕೊಳ್ಳುತ್ತದೆ.

 

ದೈಹಿಕ ಚಟುವಟಿಕೆ, ವ್ಯಾಯಾಮ, ಮಾನಸಿಕ ಒತ್ತಡದ, ಸೋಂಕು, ಹಾಗೂ ಅನಾರೋಗ್ಯದ ಸಮಯಗಳಲ್ಲಿ ನಮ್ಮ ರಕ್ತದ ಪರಿಚಲನೆಯು ಹೆಚ್ಚಾಗಿ, ಹೃದಯವು ಹೆಚ್ಚಿನ ಕಾರ್ಯನಿರ್ವಹಿಸಬೇಕಾಗುತ್ತದೆ. ಆರೋಗ್ಯವಂತ ಹೃದಯ ಇಂಥಹ ಪರಿಸ್ಥಿತಿಯನ್ನು ಸುಸೂತ್ರವಾಗಿ ನಿಭಾಯಿಸಬಲ್ಲದು. ವಿಶ್ರಾಂತಿ ಪಡೆದ ಕೂಡಲೇ ಪರಿಸ್ಥಿತಿ ಸಾಮಾನ್ಯ ಹಂತಕ್ಕೆ ಬರುತ್ತದೆ. ರಕ್ತದಲ್ಲಿ ಹಿಮೊಗ್ಲೊಬಿನ್ ಅಂಶ ಕಡಿಮೆಯಾದಾಗ ಅಥವಾ ಶ್ವಾಸಕೋಶಗಳ ಸಮಸ್ಯೆ ಇದ್ದಾಗ ಆಕ್ಸಿಜನ್ ಕೊಂಡೊಯ್ಯುವ ಶಕ್ತಿ ಇಳಿಮುಖವಾಗುತ್ತದೆ. ಅಧಿಕ ರಕ್ತದೊತ್ತಡ, ಹೃದಯ ಬಡಿತದ ಅಸಹಜ ಏರುವಿಕೆ, ಹೃದಯದ ಕವಾಟಗಳ ಕಾಯಿಲೆ, ಹೃದಯದ ಸ್ನಾಯುಗಳ ಹಿಗ್ಗುವಿಕೆಯ ಸಂದರ್ಭಗಳಲ್ಲಿ ಆಕ್ಸಿಜನ್ನಿನ ಅವಶ್ಯಕತೆಯೂ ಹೆಚ್ಚಾಗುತ್ತದೆ.

 

ಹೃದಯ ರಕ್ತನಾಳಗಳ ಒಳಭಾಗದಲ್ಲಿ ಕೊಬ್ಬಿನ ಅಂಶ ಸೇರಿದಾಗ ಆಂತರಿಕ ವ್ಯಾಸ ಕಿರಿದಾಗಿ, ರಕ್ತದ ಒಳಹರಿವು ಕಡಿಮೆಯಾಗುತ್ತದೆ. ವಿಶ್ರಾಂತಿಯ ಸ್ಥಿತಿಯಲ್ಲಿ ಅಗತ್ಯ ಆಕ್ಸಿಜನ್ ಪೂರೈಕೆ ಆಗುತ್ತದಾದರೂ, ದೈಹಿಕ/ಮಾನಸಿಕ ಶ್ರಮದ ವೇಳೆ ರಕ್ತನಾಳಗಳ ವ್ಯಾಸ ಹಿಗ್ಗಲಾರದೆ, ಹೃದಯದ ರಕ್ತ ಪೂರೈಕೆ ಕುಂಠಿತಗೊಳ್ಳುತ್ತದೆ.  ಅಥೆರೊಸ್ಕ್ಲೀರೊಸಿಸ್ ಎನ್ನಲಾಗುವ ಇದು ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ಹೃದ್ರೋಗ. ಹೀಗೆ, ಆಕ್ಸಿಜನ್ನಿನ ಬೇಡಿಕೆ-ಪೂರೈಕೆಗಳ ಅಸಮತೋಲನದಿಂದ ಹೃದಯಾಘಾತ ಉಂಟಾಗುತ್ತದೆ; ಎದೆ ನೋವು, ಉಸಿರಾಟದ ತೊಂದರೆ, ಗಂಟಲು ಉರಿ, ಬೆನ್ನಿನ ನೋವು, ಆತಂಕ ಕಾಣಿಸಿಕೊಳ್ಳುತ್ತದೆ.

 

ರಕ್ತನಾಳಗಳ ಸಮಸ್ಯೆಯಿಂದ ಹೃದಯಕ್ಕೆ ಉಂಟಾಗುವ ತಾತ್ಕಾಲಿಕ ಆಕ್ಸಿಜನ್ ಕೊರತೆಯು ವಿಶ್ರಾಂತಿ ತೆಗೆದುಕೊಂಡ ಕೂಡಲೇ ನಿವಾರಣೆಯಾಗಬೇಕು; ಇಲ್ಲವಾದರೆ ರೋಗವು ತೀವ್ರವಾಗಿದೆ ಎಂದರ್ಥ. ಅಗತ್ಯ ಪ್ರಮಾಣದ ರಕ್ತಪೂರೈಕೆ ಆಗದೆ ಹೃದಯದ ಜೀವಕೋಶಗಳು ಸಾವನ್ನಪ್ಪಿದರೆ, ಟ್ರೋಪೋನಿನ್ ಎಂಬ ಪ್ರೋಟಿನ್ ಬಿಡುಗಡೆಯಾಗುತ್ತದೆ. ಹೃದಯಾಘಾತದ ವೇಳೆ ಏರುಪ್ರಮಾಣದ ಟ್ರೋಪೋನಿನ್ ರಕ್ತದಲ್ಲಿ ಕಂಡುಬರುತ್ತದೆ. ಅಂತಹ ರೋಗಿಗೆ ತೀವ್ರ-ನಿಗಾ ಘಟಕಗಳಲ್ಲಿ ತುರ್ತುಚಿಕಿತ್ಸೆ ನೀಡಬೇಕು.

 

ಕರೊನರಿ ಅಥಿರೋಸ್ಕ್ಲಿರೋಸಿಸ್ಗೆ ಪ್ರಮುಖ ಕಾರಣಗಳು ಅತಿಯಾದ ರಕ್ತದೊತ್ತಡ, ಮಧುಮೇಹ, ಅಧಿಕ ಕೊಬ್ಬಿನ ಪ್ರಮಾಣ, ತಂಬಾಕು ಸೇವನೆ, ಅನಾರೋಗ್ಯಕರ ಆಹಾರ, ಮಾನಸಿಕ ಒತ್ತಡ, ಬೊಜ್ಜು, ಸೋಮಾರಿತನದ ಜೀವನಶೈಲಿ, ಆನುವಂಶೀಯತೆ. ಇಂತಹವರಲ್ಲಿ ಹೆಚ್ಚಿನ ಶ್ರಮಪಟ್ಟು ಕೆಲಸ ಮಾಡಿದಾಗ ಅಥವಾ ಮಾನಸಿಕ ಒತ್ತಡವಾದಾಗ ಎದೆನೋವಾಗುತ್ತದೆ. ಹೃದಯದ ಬಡಿತದಲ್ಲಿ ಏರುಪೇರು, ಅಸಹಜ ಎದೆಬಡಿತ, ಪ್ರಜ್ಞೆ ಕಳೆದುಕೊಳ್ಳುವುದು, ರಕ್ತಚಲನೆ ನಿಂತು, ಸಾವನ್ನಪ್ಪಬಹುದು. ರಕ್ತದ ಕೊರತೆಯ ಕಾರಣ ಹೃದಯದ ಸ್ನಾಯುಗಳು ಶಕ್ತಿಗುಂದಿ, ಹೃದಯವೈಫಲ್ಯವಾಗಬಹುದು.

 

(ಕರೋನರಿ ಅಥಿರೋಸ್ಕ್ಲಿರೋಸಿಸ್ ಗುರುತಿಸುವುದು ಮತ್ತು ಚಿಕಿತ್ಸಾ ವಿಧಾನಗಳು ಮುಂದಿನ ಸಂಚಿಕೆಯಲ್ಲಿ)

-----------------------

18/3/2025 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. https://www.prajavani.net/health/heart-and-its-problems-health-article-3208983  


 

ಪ್ಲಾಸ್ಟಿಕ್ ಸರ್ಜರಿ ಎಂಬ ಸುರೂಪಿ ಚಿಕಿತ್ಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಎಲ್ಲ ಪ್ರಾಚೀನ ನಾಗರಿಕತೆಗಳಲ್ಲೂ ಮೂಗು ಎನ್ನುವುದು ಪ್ರತಿಷ್ಠೆಯ ಸಂಕೇತವಾಗಿತ್ತು. ತಪ್ಪು ಮಾಡಿದವರ ಮೂಗು ಕತ್ತರಿಸುವ ಪದ್ಧತಿ ಭಾರತ, ಇಜಿಪ್ಟ್, ಮೆಸೆಪೆಟೊಮಿಯಾ ನಾಗರಿಕತೆಗಳಲ್ಲಿ ನಾಲ್ಕು ಸಾವಿರ ವರ್ಷಗಳಿಂದ ದಾಖಲಾಗಿದೆ. ತಮ್ಮ ಪ್ರತಿಷ್ಠೆ ಭಂಗವಾದಾಗ ಸಿರಿವಂತರು ಏನಾದರೂ ಪರಿಹಾರ ಹುಡುಕುವುದು ಸಾಮಾನ್ಯ. ಈ ನಿಟ್ಟಿನಲ್ಲಿ ಬೆಳೆದದ್ದು ಕತ್ತರಿಸಿದ ಮೂಗನ್ನು ಸರಿಪಡಿಸುವ ಸುರೂಪಿ ಚಿಕಿತ್ಸೆ. ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ಕುಂಬಾರರು ಮಣ್ಣಿನಿಂದ ಮಾಡಿದ ಆಕೃತಿಗಳನ್ನು ಬಳಸಿ ಕತ್ತರಿಸಿದ ಮೂಗನ್ನು ಸಾಮಾನ್ಯವಾಗಿ ಕಾಣುವಂತೆ ಮಾಡುತ್ತಿದ್ದರು ಎನ್ನುವ ದಾಖಲೆಗಳಿವೆ. ಇದು ಮುಂದೆ ಅಭಿವೃದ್ಧಿಯಾಗಿ ಹಣೆಯ ಮೇಲಿನ ಚರ್ಮವನ್ನು ಹೆರೆದು, ಅದನ್ನು ಕತ್ತರಿಸಿದ ಮೂಗಿನ ಭಾಗಕ್ಕೆ ಜೋಡಿಸುವ ಕಲೆಯಾಗಿ ಮಾರ್ಪಾಡಾಯಿತು. ಇದನ್ನು ಸಾಧಿಸಿದವರು ಸಣ್ಣ ಚಾಕುಗಳ ಬಳಕೆ, ನಿಖರವಾದ ಕೈಚಲನೆಯಲ್ಲಿ ಪಳಗಿದ್ದ ಕ್ಷೌರಿಕರು. 11ನೆಯ ಶತಮಾನದ ಕಾಶ್ಮೀರದ ಕವಿ ಕ್ಷೇಮೇಂದ್ರ ತನ್ನ ಸಮಯಮಾತೃಕಾ ಎನ್ನುವ ಕೃತಿಯಲ್ಲಿ ಕತ್ತರಿಸಿದ ಮೂಗನ್ನು ಸರಿಪಡಿಸುತ್ತಿದ್ದ ಕ್ಷೌರಿಕನ ಪ್ರಸ್ತಾಪ ಮಾಡಿದ್ದಾನೆ. ಶತಮಾನಗಳ ಕಾಲ ಜಗತ್ತಿನ ಗಮನಕ್ಕೆ ಬಾರದಂತೆ ಈ ಪದ್ಧತಿ ಭಾರತದಲ್ಲಿ ನಡೆಯುತ್ತಲೇ ಇತ್ತು. 1794 ರಲ್ಲಿ ಮಿ.ಅರ್ಬನ್ ಮತ್ತು ಜನರಲ್ ಲ್ಯುಕಸ್ ಎಂಬ ಬ್ರಿಟಿಷ್ ಅಧಿಕಾರಿಗಳು ಇಂಗ್ಲೆಂಡಿನ ಪತ್ರಿಕೆಯೊಂದರಲ್ಲಿ ಮೈಸೂರು ಸಂಸ್ಥಾನದಲ್ಲಿ ಕಂಡು ಬಂದ ಕತ್ತರಿಸಿದ ಮೂಗಿನ ಸುರೂಪಿ ಶಸ್ತ್ರಚಿಕಿತ್ಸೆಯ ಪ್ರಸಂಗವೊಂದನ್ನು ವರದಿ ಮಾಡಿ, ಜಗತ್ತಿಗೆ ಅಚ್ಚರಿ ಮೂಡಿಸಿದ್ದರು.

ಇಂದು ಪ್ಲಾಸ್ಟಿಕ್ ಸರ್ಜರಿ ಎಂದು ಕರೆಯಲ್ಪಡುವ ಸುರೂಪಿ ಶಸ್ತ್ರಚಿಕಿತ್ಸೆ ಬಹಳ ಪ್ರಗತಿ ಸಾಧಿಸಿದೆ. ಊನವಾದ ಅಂಗಗಳನ್ನು ಮೊದಲಿನಂತೆ ಸರಿಪಡಿಸುವುದು, ಬೇರೆ ವಿಧಾನಗಳಿಂದ ಅವುಗಳನ್ನು ಮತ್ತೆ ನಿರ್ಮಿಸುವುದು, ವಕ್ರವಾಗಿ ಬೆಳೆದಿರುವ ಅಂಗಗಳನ್ನು ಚಂದವಾಗಿ ಕಾಣುವಂತೆ ಸರಿಪಡಿಸುವುದು ಪ್ಲಾಸ್ಟಿಕ್ ಸರ್ಜರಿಯ ಧ್ಯೇಯಗಳು. ಇದರಲ್ಲಿ ಪ್ಲಾಸ್ಟಿಕ್ ಎನ್ನುವ ಪದ ಗ್ರೀಕ್ ಮೂಲದ್ದು. ಅದರ ಅರ್ಥ “ಬೇಕಾದಂತಹ ಆಕೃತಿಗೆ ತರುವುದು”. ಶಸ್ತ್ರಚಿಕಿತ್ಸೆಯಲ್ಲಿ ಈ ಪದದ ಬಳಕೆ ಬಂದದ್ದು 1816 ರಲ್ಲಿ. ನಾವು ಇಂದು ಬಳಸುವ ಪೆಟ್ರೋಲಿಯಂ ಮೂಲದ ಪ್ಲಾಸ್ಟಿಕ್ ಎನ್ನುವ ವಸ್ತು ಆವಿಷ್ಕಾರವಾದದ್ದು 1908ರಲ್ಲಿ. ಪ್ಲಾಸ್ಟಿಕ್ ಸರ್ಜರಿಗೂ, ಸಾಮಾನ್ಯ ಬಳಕೆಯ ಪ್ಲಾಸ್ಟಿಕ್ಕಿಗೂ ಯಾವ ಸಂಬಂಧವೂ ಇಲ್ಲ.

ಮೊದಲನೆಯ ಮಹಾಯುದ್ಧದ ವೇಳೆ ಅಂಗಚ್ಛೇದಗಳಿಗೆ ಒಳಗಾಗಿದ್ದ ಸೈನಿಕರ ವಿಕೃತವಾದ ಅಂಗಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಿದ ನ್ಯೂಜಿಲ್ಯಾಂಡಿನ ವೈದ್ಯ ಸರ್ ಹೆರಾಲ್ಡ್ ಗಿಲ್ಲೆಸ್ ಆಧುನಿಕ ಪ್ಲಾಸ್ಟಿಕ್ ಸರ್ಜರಿಯ ಜನಕ ಎನಿಸಿಕೊಂಡಿದ್ದಾರೆ. ಇಂದು ಪ್ಲಾಸ್ಟಿಕ್ ಸರ್ಜರಿ ಅಗಾಧವಾಗಿ ಬೆಳೆದಿದೆ. ನಟರ ಸೊಟ್ಟ ಮೂಗುಗಳನ್ನು ನೆಟ್ಟಗಾಗಿಸುವ, ನಟಿಯರ ಸ್ತನಗಳ ಗಾತ್ರಗಳನ್ನು ಹಿಗ್ಗಿಸುವ ವಿಧಾನಗಳು ಇದರ ಅಲ್ಪಭಾಗ ಮಾತ್ರ. ಸುಟ್ಟ ಗಾಯಗಳ ಚರ್ಮದ ಪುನರ್ನಿರ್ಮಾಣ; ಮಕ್ಕಳ ಸೀಳು-ತುಟಿ, ಸೀಳು-ಅಂಗಳಗಳನ್ನು ಕೂಡಿಸುವಿಕೆ; ಕ್ಯಾನ್ಸರ್ ಮೂಲಕ ಘಾಸಿಗೊಂಡಿರುವ ಮುಖದ ಮೂಳೆಗಳ ಮರುನಿರ್ಮಾಣ; ಜನ್ಮಜಾತವಾಗಿಯೋ ಅಥವಾ ಅವಘಡಗಳ ಮೂಲಕವೋ ಸಂಭವಿಸಿದ ಕೈಬೆರಳುಗಳ ವಿಕೃತಿಗಳನ್ನು ತಿದ್ದುವಿಕೆ; ಕ್ಯಾನ್ಸರ್ ಮೂಲಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸ್ತನಗಳ ಕೃತಕ ನಿರ್ಮಿತಿ; ತೀರಾ ಸಣ್ಣಗಾತ್ರದ, ಆದರೆ ಬಹಳ ಮಹತ್ವದ ಕಾರ್ಯ ನಿರ್ವಹಿಸುವ ರಕ್ತನಾಳಗಳು ಮತ್ತು ನರಗಳ ಜೋಡಣೆ ಮೊದಲಾದುವುಗಳು ಪ್ಲಾಸ್ಟಿಕ್ ಸರ್ಜರಿಯ ದಾಯರೆಗೆ ಬರುತ್ತವೆ.

ಸುರೂಪಿ ಚಿಕಿತ್ಸೆಯ ಅತ್ಯಂತ ಮಹತ್ವದ ಅಂಶ ಚರ್ಮದ ರಕ್ಷಣೆ. ರೂಪ ಎನ್ನುವುದು ಮುಖ್ಯವಾಗಿ ಚರ್ಮದ ಆರೋಗ್ಯ ಮತ್ತು ಕಾಂತಿಯನ್ನು ಆಧರಿಸುತ್ತದೆ. ಹೀಗಾಗಿ, ಸಫಲ ಪ್ಲಾಸ್ಟಿಕ್ ಸರ್ಜರಿಯಲ್ಲಿ ಆಯಾ ಅಂಗದ ಮೇಲಿನ ಚರ್ಮವನ್ನು ಸಹಜವಾಗಿ ಕಾಣುವಂತೆ ಮಾಡುವುದು ಬಹಳ ಮುಖ್ಯ. ಬಹುತೇಕ ಸುಟ್ಟ ಗಾಯಗಳ ಚಿಕಿತ್ಸೆಯಲ್ಲಿ ಚರ್ಮದ ಶಸ್ತ್ರಚಿಕಿತ್ಸೆಯೇ ಪ್ರಮುಖ ಭಾಗ. ಒಂದು ಭಾಗದ ಚರ್ಮವನ್ನು ಮತ್ತೊಂದು ಭಾಗಕ್ಕೆ ಜೋಡಿಸುವ ಪ್ರಕ್ರಿಯೆ ಸುರೂಪಿ ಶಸ್ತ್ರಚಿಕಿತ್ಸೆಯ ಅಂಗಭಾಗ. ಇದು ಆಯಾ ರೋಗಿಯ ಚರ್ಮವನ್ನೇ ಬಳಸಿ ಮಾಡಬಹುದು. ರೋಗಿಯ ತೊಡೆಯ ಚರ್ಮವು ಮುಖದ ಶಸ್ತ್ರಚಿಕಿತ್ಸೆಯಲ್ಲಿ ನೆರವಾಗುತ್ತದೆ. ಕೆಲವೊಮ್ಮೆ ಇತರ ದಾನಿಗಳ ಚರ್ಮದ ಬಳಕೆಯೂ ಆಗುತ್ತದೆ. ಈಚೆಗೆ ಮೃತ ದೇಹಗಳಿಂದ ಚರ್ಮವನ್ನು ತೆಗೆದು ಸಂರಕ್ಷಿಸಿ, ರೋಗಿಗಳಿಗೆ ಬಳಕೆ ಮಾಡುವ ಚರ್ಮದ ಬ್ಯಾಂಕ್ ನಿರ್ಮಾಣವಾಗಿದೆ. ಇದು ರೋಗಿಗಳ ಪಾಲಿಗೆ, ಅದರಲ್ಲೂ ಸುಟ್ಟ ಗಾಯಗಳ ಸಂತ್ರಸ್ತರಿಗೆ ವರದಾನವಾಗಿದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರಾಣಿಗಳ ಚರ್ಮದ ಬಳಕೆಯೂ ಆಗುತ್ತದೆ.

ಚರ್ಮದ ಮೇಲೆ ಕಲೆಗಳು ಕಾಣದಂತೆ ನಡೆಸುವ ಶಸ್ತ್ರಚಿಕಿತ್ಸೆಗಳಿಗೆ ಮಹತ್ವವಿದೆ. ಇದಕ್ಕಾಗಿ ಶಸ್ತ್ರಚಿಕಿತ್ಸೆಯ ವೇಳೆ ಚರ್ಮವನ್ನು ಯಾವ ರೀತಿಯಲ್ಲಿ, ಯಾವ ಕೋನದಲ್ಲಿ, ಯಾವ ಹಾದಿಯಲ್ಲಿ ವಿಂಗಡಿಸಬೇಕು ಎನ್ನುವ ಕರಾರುವಾಕ್ ಅಧ್ಯಯನಗಳಿವೆ. ಚರ್ಮದ ಸಹಜ ಅಂಗಾಂಶಗಳ ನಿರ್ಮಿತಿಯ ದಾರಿಯನ್ನು ಅನುಸರಿಸುವ ಈ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯ ನಂತರ ಚರ್ಮ ಬಹಳ ಸಹಜವಾಗಿ ಕೂಡಿಕೊಳ್ಳುತ್ತದೆ. ಇದಕ್ಕೆ ಪೂರಕವಾಗುವಂತೆ ಅತ್ಯಂತ ಸಪೂರ ಹೊಲಿಗೆ ದಾರಗಳ ಬಳಕೆ, ಚರ್ಮದ ಆಂತರ್ಯದಲ್ಲೇ ಹಾಕುವ ಸೂಕ್ಷ್ಮ ಹೊಲಿಗೆಗಳು, ಬಹಳ ನಾಜೂಕಾಗಿ ಚರ್ಮದ ಪದರಗಳನ್ನು ಒಟ್ಟುಗೂಡಿಸುವ ವಿಧಾನ, ಚರ್ಮದ ಸಹಜ ಬಣ್ಣವನ್ನು ಏರುಪೇರು ಮಾಡದ ವಿಶಿಷ್ಟ ಔಷಧಗಳ ಬಳಕೆ ಮೊದಲಾದುವುಗಳು ಸಹಕಾರಿ.

ಸುರೂಪಿ ಶಸ್ತ್ರಚಿಕಿತ್ಸೆ ಎಷ್ಟು ಪ್ರಾಚೀನವೋ ಅಷ್ಟೇ ನವೀನ. ಸಾಮಾನ್ಯ ಜೀವನ ಸಹಜವಾಗಿಯೂ, ಸುಂದರವಾಗಿಯೂ ಇರಬೇಕೆನ್ನುವುದು ಎಲ್ಲರ ಬಯಕೆ. ಸುರೂಪಿ ಶಸ್ತ್ರಚಿಕಿತ್ಸೆಯ ಧ್ಯೇಯವೂ ಜೀವನದ ಈ ಆಶಯವನ್ನೇ ಬಿಂಬಿಸುವ ಪ್ರಯತ್ನ.

-----------------------

ದಿನಾಂಕ 18/02/2025 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಬರಹ. ಮೂಲ ಲೇಖನದ ಕೊಂಡಿ: https://www.prajavani.net/health/plastic-surgery-beauty-treatment-3172279


 

ಗುಲ್ಮದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಹಿಂದೂಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಪರಿಕಲ್ಪನೆ ಇದೆ. ಇವರುಗಳು ಕ್ರಮವಾಗಿ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣ ಎಂಬ ನಂಬಿಕೆ ಇದೆ. ಇವರಿಂದಲೇ ಜಗತ್ತಿನ ಜೀವರಾಶಿ ಒಂದು ಸಮತೋಲನದಲ್ಲಿ ಇರುತ್ತದೆ ಎನ್ನುವ ಭಾವನೆಯಿದೆ. ನಮ್ಮ ದೇಹದಲ್ಲಿ ಅತ್ಯಂತ ಅಧಿಕ ಸಂಖ್ಯೆಯಲ್ಲಿ ಕಾಣುವುದು ಕೆಂಪು ರಕ್ತಕಣಗಳು. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 500-ಕೋಟಿ ಕೆಂಪು ರಕ್ತಕಣಗಳು ಇರುತ್ತವೆ. ಆರೋಗ್ಯವಂತ ವ್ಯಕ್ತಿಯಲ್ಲಿ ಸುಮಾರು 5 ಲೀಟರ್ ರಕ್ತ ಎನ್ನುವ ಲೆಕ್ಕದಲ್ಲಿ ದೇಹದ ಕೆಂಪು ರಕ್ತಕಣಗಳ ಒಟ್ಟು ಸಂಖ್ಯೆ 25-ಲಕ್ಷ-ಕೋಟಿಯನ್ನು ಮೀರುತ್ತದೆ. ಒಂದು ಸೆಕೆಂಡಿಗೆ ಸುಮಾರು 25-ಲಕ್ಷ ಕೆಂಪು ರಕ್ತಕಣಗಳು ಉತ್ಪಾದನೆ ಆಗುತ್ತವೆ. ಕೆಂಪು ರಕ್ತಕಣದ ಸರಾಸರಿ ಆಯುಸ್ಸು 120 ದಿನಗಳು. ವಯಸ್ಸಾದ ಕೆಂಪು ರಕ್ತಕಣಗಳು ಸೆಕೆಂಡಿಗೆ 20-25 ಲಕ್ಷ ಸಂಖ್ಯೆಯಲ್ಲಿ ನಿರ್ನಾಮವೂ ಆಗಬೇಕು.

ಆಕ್ಸಿಜನ್ ಹೊತ್ತೊಯ್ದು ಶರೀರದ ಕೋಶಗಳಿಗೆ ಪೂರೈಕೆ ಮಾಡುವ, ಸ್ವಂತ ಕೋಶಕೇಂದ್ರವಿಲ್ಲದ, ಜೀವಂತ ಕೋಶ ಎಂದೂ ಪರಿಗಣಿಸಲಾಗದ ಕೆಂಪು ರಕ್ತಕಣಗಳ ಸೃಷ್ಟಿ ಮುಖ್ಯವಾಗಿ ಆಗುವುದು ಮೂಳೆಯ ಒಳಭಾಗದಲ್ಲಿರುವ ಅಸ್ಥಿಮಜ್ಜೆಯಲ್ಲಿ. ಕೆಂಪು ರಕ್ತಕಣಗಳು ಸರಾಗವಾಗಿ ರಕ್ತದಲ್ಲಿ ಹರಿದಾಡುತ್ತಾ ಆಕ್ಸಿಜನ್ ಹೊತ್ತು ಅಂಗಗಳನ್ನು ತಲುಪುವುದು ಹೃದಯ ಮತ್ತು ರಕ್ತನಾಳಗಳ ಮೂಲಕ. ಇಷ್ಟು ವಿಷಯಗಳನ್ನು ಬಹುತೇಕ ಎಲ್ಲರೂ ತಿಳಿದಿರುತ್ತಾರೆ. ಆದರೆ, ವಯಸ್ಸಾದ ಕೆಂಪು ರಕ್ತಕಣಗಳನ್ನು ಶರೀರದಲ್ಲಿ ನಿರ್ಮೂಲನ ಮಾಡುವುದು ಯಾವ ಅಂಗ ಎನ್ನುವುದು ಹೆಚ್ಚು ಜನರಿಗೆ ತಿಳಿದಿರಲಿಕ್ಕಿಲ್ಲ. ಇದಕ್ಕೆ ಉತ್ತರ “ಗುಲ್ಮ”. ಇದನ್ನು ಇಂಗ್ಲೀಷಿನಲ್ಲಿ “ಸ್ಪ್ಲೀನ್” ಎಂದು ಕರೆಯುತ್ತಾರೆ. ಶರೀರದ ಕೆಂಪು ರಕ್ತಕಣಗಳ ಲಯ ಆಗುವುದು ಇಲ್ಲಿಯೇ. ಗುಲ್ಮದ ಕಾರಣದಿಂದಲೇ ಶರೀರದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆಯಲ್ಲಿ ಸಮತೋಲನ ಇರುತ್ತದೆ. ಇದರ ಜೊತೆಗೆ ಶರೀರದ ರಕ್ಷಕ ವ್ಯವಸ್ಥೆಯ ಭಾಗವಾಗಿಯೂ ಗುಲ್ಮಕ್ಕೆ ಮುಖ್ಯ ಪಾತ್ರವಿದೆ.

ಸುಮಾರು 7-14 ಸೆಂಟಿಮೀಟರ್ ಉದ್ದ, 5-8 ಸೆಂಟಿಮೀಟರ್ ಅಗಲ, 3 ಸೆಂಟಿಮೀಟರ್ ದಪ್ಪದ, 70-150 ಗ್ರಾಂ ತೂಗುವ ಆರೋಗ್ಯಕರ ಗುಲ್ಮ ನೇರಳೆ ಬಣ್ಣದ್ದು. ವ್ಯಕ್ತಿಯ ಎತ್ತರ ಮತ್ತು ತೂಕಗಳನ್ನು ಆಧರಿಸಿ ಗುಲ್ಮದ ಗಾತ್ರ ಇರುತ್ತದೆ. ಇದರ ಸ್ಥಾನ ಜಠರದ ಎಡಭಾಗ. ಎದೆ ಮತ್ತು ಹೊಟ್ಟೆಯ ಭಾಗಗಳನ್ನು ಪ್ರತ್ಯೇಕಿಸುವ ವಪೆ ಎಂಬ ಮಾಂಸದ ಹಾಳೆಯ ಅಡಿಯಲ್ಲಿ, ಪಕ್ಕೆಲುಬುಗಳ ರಕ್ಷಣೆಯಲ್ಲಿ, ಎಡ ಮೂತ್ರಪಿಂಡದ ಮೇಲ್ಭಾಗದಲ್ಲಿ ಮೇಲ್ನೋಟಕ್ಕೆ ಕಾಣದಂತೆ ಗುಲ್ಮ ಇರುತ್ತದೆ. ಮೇದೊಜೀರಕ ಗ್ರಂಥಿಯ ಬಾಲದ ಭಾಗ ಗುಲ್ಮದ ಮೇಲೆಯೇ ಚಾಚಿರುತ್ತದೆ. ಗುಲ್ಮವನ್ನು ಸ್ವಸ್ಥಾನದಲ್ಲಿ ಇರಿಸಲು ನಾಲ್ಕು ರಜ್ಜುಗಳಿವೆ. ರಜ್ಜುಗಳ ಒಂದು ಭಾಗ ಗುಲ್ಮಕ್ಕೆ ಅಂಟಿಕೊಂಡರೆ, ಮತ್ತೊಂದು ಭಾಗ ಕ್ರಮವಾಗಿ ಜಠರ, ಎಡಗಡೆಯ ಮೂತ್ರಪಿಂಡ, ಎಡಭಾಗದಲ್ಲಿ ಸಾಗುವ ದೊಡ್ಡ ಕರುಳು, ಮತ್ತು ಎಡಭಾಗದ ವಪೆಗೆ ಸೇರಿರುತ್ತವೆ. ಒಂದು ಅರ್ಥದಲ್ಲಿ ಗುಲ್ಮ ಸ್ವತಂತ್ರ ಅಂಗ; ಇದಕ್ಕೆ ಬೇರೆ ಯಾವುದೇ ಅಂಗದ ಜೊತೆಯಲ್ಲೂ ನೇರ ಸಂಪರ್ಕವಿಲ್ಲ; ಇದಕ್ಕೆ ಯಾವುದೇ ಪ್ರತ್ಯೇಕ ನಾಳಗಳಿಲ್ಲ; ಇತರ ಯಾವುದೇ ಅಂಗದ ಆಸರೆಯೂ ಇದಕ್ಕಿಲ್ಲ. ಅಂತೆಯೇ, ತನ್ನ ಕೆಲಸಕ್ಕೆ ಬೇರೆ ಯಾವುದೇ ಅಂಗದ ನೆರವನ್ನೂ ಗುಲ್ಮ ಬಯಸುವುದಿಲ್ಲ.

ಕೆಂಪು ರಕ್ತಕಣಗಳ ಸಂಹಾರಕ್ಕೆ ಕಾರಣವಾಗುವ ಗುಲ್ಮಕ್ಕೆ, ಅದರ ಗಾತ್ರದ ಅಗತ್ಯಕ್ಕಿಂತಲೂ ಹೆಚ್ಚಿನ ಸುತ್ತಳತೆಯ ಧಮನಿಯಿಂದ ರಕ್ತ ಪೂರೈಕೆ ಆಗುತ್ತದೆ. ಶರೀರದ ಬಹುತೇಕ ಅಂಗಗಳು ತಮ್ಮ ಅಶುದ್ಧ ರಕ್ತವನ್ನು ನೇರವಾಗಿ ಹೃದಯಕ್ಕೆ ತಲುಪುವ ಮುಖ್ಯ ರಕ್ತನಾಳಕ್ಕೆ ಸೇರಿಸುತ್ತವೆ. ಆದರೆ ಗುಲ್ಮ ಹಾಗಲ್ಲ; ಗುಲ್ಮದಿಂದ ರಕ್ತವನ್ನು ಹೊರಗೆ ಒಯ್ಯುವ ಧಮನಿ ಬೇರೆಲ್ಲೂ ಹೋಗದೆ ನೇರವಾಗಿ ಯಕೃತ್ತಿನ ರಕ್ತನಾಳಗಳನ್ನು ಸೇರುತ್ತದೆ. ಇದರ ಹಿಂದೆ ಒಂದು ಮಹತ್ವದ ಕಾರಣವಿದೆ. ಗುಲ್ಮದ ಮುಖ್ಯ ಕೆಲಸ ವಯಸ್ಸಾದ ಕೆಂಪು ರಕ್ತಕಣಗಳ “ಸುರಕ್ಷಿತ” ನಾಶ. ಈ ಸುರಕ್ಷೆ ಅಗತ್ಯ. ಏಕೆಂದರೆ, ಕೆಂಪು ರಕ್ತಕಣಗಳ ಒಡಲಿನಲ್ಲಿರುವ ಹೀಮೋಗ್ಲೋಬಿನ್ ಎನ್ನುವ ವಿಶಿಷ್ಟ ರಾಸಾಯನಿಕ ವಸ್ತುವೇ ನಮ್ಮ ಶರೀರದ ಆಕ್ಸಿಜನ್ ವಾಹಕ. ಇದರ ಕೇಂದ್ರದಲ್ಲಿ ಹೀಮ್ ಎನ್ನುವ, ಆಕ್ಸಿಜನ್ ಅನ್ನು ತನ್ನೊಳಗೆ ಬಿಗಿದು ಇಡುವ ರಾಸಾಯನಿಕವಿದೆ. ಮುಕ್ತರೂಪದಲ್ಲಿ ಹೀಮ್ ಶರೀರದ ಕೋಶಗಳಿಗೆ ಅಪಾಯಕಾರಿ. ಇದರ ಅಪಾಯದಿಂದ ಕೋಶಗಳನ್ನು ಕಾಪಾಡಲು ಇದರ ಸುತ್ತ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆಯಿದೆ. ವಯಸ್ಸಾದ ಕೆಂಪು ರಕ್ತಕಣಗಳು ಒಡೆದಾಗ ಹೀಮ್ ಮತ್ತು ಗ್ಲೋಬಿನ್ ಬೇರೆ-ಬೇರೆ ಆಗುತ್ತವೆ. ಹೀಮ್ ಮೊದಲು ಬೇರಾವುದೇ ಅಂಗವನ್ನು ಸೋಕುವ ಮುನ್ನವೇ ನಿಷ್ಕ್ರಿಯವಾಗಬೇಕು. ಈ ಕೆಲಸ ನಡೆಯುವುದು ಯಕೃತ್ತಿನಲ್ಲಿ. ಇದಕ್ಕಾಗಿ ಯಕೃತ್ತು ಹ್ಯಾಪ್ಟೋಗ್ಲೋಬಿನ್ ಎಂಬ ವಿಶೇಷ ರಾಸಾಯನಿಕವನ್ನು ಉತ್ಪಾದಿಸಿ, ಹೀಮ್ ಅನ್ನು ಜೋಪಾನವಾಗಿ ಬಂಧಿಸಿ, ಅದನ್ನು ಬಿಲಿವರೆಡಿನ್ ಎಂಬ ಹಸಿರು ರಾಸಾಯನಿಕವನ್ನಾಗಿ ಬದಲಾಯಿಸಿ, ಶರೀರದಿಂದ ಹೊರಹಾಕುತ್ತದೆ. ಈ ಕಾರಣಕ್ಕಾಗಿ ಗುಲ್ಮದಿಂದ ಹೊರಹೋಗುವ ಹೀಮ್-ಯುಕ್ತ ರಕ್ತ ಬೇರೆಲ್ಲೂ ಹೋಗದೇ ಸೀದಾ ಯಕೃತ್ತನ್ನು ಸೇರುತ್ತದೆ. ದಿನವೊಂದಕ್ಕೆ ಸುಮಾರು 20 ಸಾವಿರ ಕೋಟಿ ಕೆಂಪು ರಕ್ತಕಣಗಳು ಗುಲ್ಮದಲ್ಲಿ ನಿರ್ನಾಮವಾಗುತ್ತವೆ.

ಜೀವವಿಕಾಸ ಪ್ರಕ್ರಿಯೆಯಲ್ಲಿ ಗುಲ್ಮ ಬಹಳ ಪುರಾತನ ಅಂಗ. ಆದಿಮ ಗುಲ್ಮವನ್ನು ಮೀನಿನಂತಹ ಜೀವಿಗಳ ಮಟ್ಟದಿಂದಲೇ ಗುರುತಿಸಬಹುದು. ಸರೀಸೃಪಗಳಲ್ಲಿ ಮತ್ತು ಹಕ್ಕಿಗಳಲ್ಲಿ ಇವು ನಿಶ್ಚಿತ ರೂಪ ಪಡೆಯುತ್ತವೆ. ಬೆನ್ನುಮೂಳೆ ಇರುವ ಜೀವಿಗಳಲ್ಲಿ ಇವು ಸರಿಸುಮಾರು ಮಾನವನಲ್ಲಿ ಇರುವ ರೀತಿಯಲ್ಲೇ ಕಾಣುತ್ತವೆ. ಗುಲ್ಮಕ್ಕೆ ತನ್ನದೇ ಆದ ನರಗಳ ವ್ಯವಸ್ಥೆ ಇದೆ. ಗುಲ್ಮದ ನರಗಳ ನಿಯಂತ್ರಣ ಮಿದುಳಿನ ಅಡಿಭಾಗದಲ್ಲಿರುವ ಪ್ರಾಥಮಿಕ ಕೇಂದ್ರದಲ್ಲಿ ಇರುತ್ತದೆ. ಶರೀರದ ಅತ್ಯಂತ ಪ್ರಮುಖ ಎನಿಸುವ ಅಗತ್ಯಗಳಿಗೆ ಈ ಸ್ಥಾನವೇ ನಿಯಂತ್ರಕ ಬಿಂದು. ಹೀಗಾಗಿ, ನಿಸರ್ಗ ಗುಲ್ಮಕ್ಕೆ ವಿಶಿಷ್ಟ ಸ್ಥಾನ ನೀಡಿದೆ. ಇಂತಹ ಮಹತ್ವ ಗುಲ್ಮದ ಆಜೂಬಾಜೂ ಇರುವ ಬೇರಾವ ಅಂಗಕ್ಕೂ ಇಲ್ಲ. ಅಂತೆಯೇ, ಭ್ರೂಣದಲ್ಲೂ ಗುಲ್ಮದ ಉಗಮ ಆಗುವುದು ಕೂಡ ವಿಶಿಷ್ಟವಾಗಿಯೇ. ಅದರ ಸುತ್ತಮುತ್ತಲಿನ ಜಠರ ಮೊದಲಾದ ಬೇರೆಲ್ಲ ಅಂಗಗಳೂ ಒಂದು ಪ್ರಭೇದದ ಅಂಗಾಂಶಗಳಿಂದ ಸೃಷ್ಟಿಯಾದರೆ, ಗುಲ್ಮ ಮಾತ್ರ ಅವುಗಳಿಗೆ ಸಂಬಂಧ ಇಲ್ಲದ ಬೇರೆಯೇ ಕೋಶಗಳ ಮೂಲದಿಂದ ಹುಟ್ಟುತ್ತದೆ. ಹೀಗೆ “ನಿಮ್ಮೊಡನಿದ್ದೂ ನಿಮ್ಮಂತಲ್ಲದ” ರೀತಿಯ ಅಂಗವಾಗಿ ಗುಲ್ಮ ಪ್ರತ್ಯೇಕತೆ ಕಾಯ್ದುಕೊಂಡಿದೆ.

ಗುಲ್ಮದ ಆಂತರ್ಯದಲ್ಲಿ 2 ಮುಖ್ಯ ಭಾಗಗಳಿವೆ. ಮೊದಲನೆಯ ಕೆಂಪು ಭಾಗ ಕೆಂಪು ರಕ್ತಕಣಗಳನ್ನು ನಾಶ ಮಾಡುತ್ತದೆ. ಈ ಕೆಲಸಕ್ಕೆ 3 ಬಗೆಯ ಕೋಶಗಳ ಸಮುಚ್ಚಯಗಳಿವೆ. ಎರಡನೆಯ ಬಿಳಿಯ ಭಾಗದಲ್ಲಿ ಶರೀರದ ರಕ್ಷಕ ವ್ಯವಸ್ಥೆಯ ಕೆಲಸವನ್ನು ನಿರ್ವಹಿಸುವ 4 ಬಗೆಯ ಕೋಶಗಳಿವೆ. ತನ್ನೊಳಗೆ ಪ್ರವೇಶಿಸಿದ ಸೋಂಕುಕಾರಕ ಕೋಶಗಳನ್ನು ಗುಲ್ಮ ನಿರ್ಮೂಲನ ಮಾಡುತ್ತದೆ. ಜೊತೆಗೆ, ಶರೀರದ ಇತರ ಅಂಗಗಳಲ್ಲಿ ಆಗಿರುವ ಗಾಯಗಳನ್ನು ಗುಣಪಡಿಸುವ ಕೋಶಗಳನ್ನೂ ಸಂಗ್ರಹಿಸಿ, ಅಗತ್ಯ ಬಂದ ವೇಳೆ ಆಯಾ ಅಂಗಕ್ಕೆ ರವಾನೆ ಮಾಡುತ್ತದೆ. ಭ್ರೂಣದ ಹಂತದಲ್ಲಿ ಗುಲ್ಮ ಉತ್ಪತ್ತಿಯಾಗದಿದ್ದರೆ, ಅಥವಾ ಶಸ್ತ್ರಚಿಕಿತ್ಸೆಯ ವೇಳೆ ಗುಲ್ಮವನ್ನು ತೆಗೆದುಹಾಕಬೇಕಾದಲ್ಲಿ, ಅಂತಹ ವ್ಯಕ್ತಿಗೆ ಅನೇಕ ವಿಧದ ಸೋಂಕುಗಳು ಆವರಿಸುವ ಸಾಧ್ಯತೆ ಇರುತ್ತವೆ. ಅಂತಹವರು ಅದಕ್ಕೆ ಸೂಕ್ತವಾದ ಲಸಿಕೆಗಳನ್ನು ಪಡೆದು ತಮ್ಮನ್ನು ಕಾಪಾಡಿಕೊಳ್ಳಬೇಕು.

ಭ್ರೂಣದಲ್ಲಿ ಅಸ್ಥಿಮಜ್ಜೆ ಉತ್ಪತ್ತಿ ಆಗುವುದಕ್ಕಿಂತ ಮುಂಚಿನ ಹಂತದಲ್ಲಿ ಐದನೆಯ ತಿಂಗಳಿನವರೆಗೆ ಗುಲ್ಮ ರಕ್ತಕಣಗಳ ಉತ್ಪಾದನೆಯನ್ನೂ ಮಾಡುತ್ತದೆ. ಒಂದು ವೇಳೆ ಭ್ರೂಣದ ಅಸ್ಥಿಮಜ್ಜೆಯ ಉತ್ಪತ್ತಿಯಲ್ಲಿ ಏರುಪೇರಾದರೆ ಗುಲ್ಮ ಈ ಕೆಲಸವನ್ನು ಜನನದ ನಂತವೂ ಮುಂದುವರೆಸಿಕೊಂಡು ಹೋಗುತ್ತದೆ. ರಕ್ತಕಣಗಳ ಉಗ್ರಾಣದಂತೆಯೂ ಗುಲ್ಮ ಕೆಲಸ ಮಾಡುತ್ತದೆ. ಅಪಘಾತ ಮೊದಲಾದ ಕಾರಣಕ್ಕೆ ಶರೀರ ರಕ್ತ ಕಳೆದುಕೊಂಡಾಗ, ಸುಮಾರು 250 ಮಿಲಿಲೀಟರ್ ಪ್ರಮಾಣದ ರಕ್ತವನ್ನು ಗುಲ್ಮ ಮರುಪೂರಣ ಮಾಡಬಲ್ಲದು. ಮಲೇರಿಯಾ, ರಕ್ತದ ಕ್ಯಾನ್ಸರ್, ರಕ್ತ ಉತ್ಪಾದನೆಯ ಕಾಯಿಲೆಗಳಲ್ಲಿ ಗುಲ್ಮ ತನ್ನ ಸಹಜ ಗಾತ್ರಕ್ಕಿಂತಲೂ ಸುಮಾರು 15 ಪಟ್ಟು ದೊಡ್ಡದಾಗಬಹುದು.  ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಗುಲ್ಮವನ್ನು ಹೊರಗಿನಿಂದ ಸ್ಪರ್ಶಿಸಲಾಗದು; ಅದು ಸ್ಪರ್ಶಕ್ಕೆ ಸಿಗಲು ಕನಿಷ್ಠ 2 ಪಟ್ಟು ಗಾತ್ರ ದೊಡ್ಡದಾಗಬೇಕು.

ಗ್ರೀಕ್ ಮೂಲದಲ್ಲಿ ಗುಲ್ಮದ ಹೆಸರು ಹೃದಯದ ಹೆಸರಿನ ಸಂವಾದಿ. ದುಃಖದ ಭಾವಗಳನ್ನು ಸೃಜಿಸುವ ಅಂಗ ಎನ್ನುವ ಪ್ರಾಚೀನ ನಂಬಿಕೆಯಿಂದ ಆ ಹೆಸರು ಬಂದಿರಬಹುದು. ವಿಡಂಬನೆ ಎಂದರೆ, ನಮ್ಮ ನೈಜ ಸಂತಸವಾದ ಆರೋಗ್ಯ ರಕ್ಷಣೆಯಲ್ಲಿ ಗುಲ್ಮದ ಪಾತ್ರ ದೊಡ್ಡದು; ಅದು ಇಲ್ಲವಾದರೆ ದುಃಖ. 

ಗುಲ್ಮದ ಗಣಿತ ವಿಸ್ಮಯಕಾರಿ.

---------------------------

ಜನವರಿ-ಫೆಬ್ರವರಿ 2025 ರ ಕುತೂಹಲಿ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಇಡೀ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/c2a22bb7de00108256ca5506bcbfc67b50b3d1c4FBP32051436.pdf.html?fbclid=IwY2xjawISXhpleHRuA2FlbQIxMQABHYU5xkHYGbups7LQhJk5zlHZN1MHOv5s95CPBj3TZMtJoLHWVzO7q8_sEQ_aem_stZZ6zynTEPQPm3KtF34fw   

 

 


 

ಕ್ಯಾನ್ಸರ್ – ಇರಲಿ ಅರಿವು; ಬೇಡ ಭೀತಿ

ಡಾ. ಕಿರಣ್ ವಿ.ಎಸ್.

ವೈದ್ಯರು

ಮನುಷ್ಯರಿಗೆ ಬರಬಹುದಾದ ಕಾಯಿಲೆಗಳ ಪಟ್ಟಿಯಲ್ಲಿ ಎಲ್ಲರನ್ನೂ ಹೆದರಿಸುವ ಹೆಸರು – ಕ್ಯಾನ್ಸರ್. ಬಹಳಷ್ಟು ಜನರಿಗೆ ಕ್ಯಾನ್ಸರ್ ಎನ್ನುವುದು ಹೆಸರಿನ ತಿಳಿವು; ಅದರ ವಿವರಗಳನ್ನು ಅರಿತವರು ಕಡಿಮೆ. ಏನಿದು ಕ್ಯಾನ್ಸರ್? ಏತಕ್ಕಾಗಿ ಅದರ ಬಗ್ಗೆ ಎಲ್ಲರಿಗೂ ಭೀತಿ? ಕ್ಯಾನ್ಸರ್ ಎನ್ನುವುದು ಮರಣದ ಸೂಚಕವೇ?

 

ನಮ್ಮ ದೇಹ ಕೋಟ್ಯಂತರ ಜೀವಕೋಶಗಳ ರಾಶಿ. ಹಲವಾರು ಅಂಗಗಳ ರೂಪದಲ್ಲಿ ಈ ಜೀವಕೋಶಗಳು ಒತ್ತೊಟ್ಟಾಗಿರುತ್ತವೆ. ನರಕೋಶಗಳಿಂದ ಆದ ಮಿದುಳು, ವಿಶಿಷ್ಟ ಸ್ನಾಯುಗಳಿಂದ ಆದ ಹೃದಯ, ಪೋಷಕಾಂಶಗಳನ್ನು ಸೆಳೆದುಕೊಳ್ಳುವಂತೆ ನಿರ್ಮಾಣವಾಗಿರುವ ಕರುಳು, ನಾಳಗಳ ಮೂಲಕ ಎಲ್ಲೆಡೆ ಸಂಚಾರವಾಗುವ ರಕ್ತಕೋಶಗಳು, ದೇಹದ ಬಹುತೇಕ ರಾಸಾಯನಿಕ ಪ್ರಕ್ರಿಯೆಗಳನ್ನು ನಿಭಾಯಿಸುವ ಯಕೃತ್ – ಹೀಗೆ ಹಲವಾರು ಅಂಗಗಳು ನಮ್ಮ ದೇಹದಲ್ಲಿವೆ. ಪ್ರತಿಯೊಂದು ಅಂಗದ ಜೀವಕೋಶವೂ ಆಯಾ ಅಂಗದ ಕಾರ್ಯ ನಿರ್ವಹಣೆಗೆ ಪೂರಕವಾಗಿ ಕೆಲಸ ಮಾಡುತ್ತದೆ. ಪ್ರತಿಯೊಂದು ಜೀವಕೋಶವೂ ತನ್ನ ಅಂಗದ ಶಿಸ್ತಿನ ಅಂಕೆಯಲ್ಲಿಯೇ ಇರುತ್ತದೆ; ಕೊಟ್ಟ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ; ಮಿದುಳಿನ ಮೂಲಕ ಬಂದ ಸಂಕೇತಗಳನ್ನು ಗ್ರಹಿಸಿ, ಅದಕ್ಕೆ ಸರಿಯಾಗಿ ವರ್ತಿಸುತ್ತದೆ. ಅಂಗಗಳು ದೇಹವೆನ್ನುವ ಸಂಕೀರ್ಣ ಯಂತ್ರದ ಘಟಕಗಳು. ಎಲ್ಲ ಅಂಗಗಳೂ ಪರಸ್ಪರ ಹೊಂದಿಕೊಂಡು ಸಮಂಜಸವಾಗಿ ಕೆಲಸ ಮಾಡುತ್ತಿದ್ದರೆ ಆರೋಗ್ಯ; ವ್ಯವಸ್ಥೆ ಕೆಟ್ಟರೆ ಅನಾರೋಗ್ಯ.

ಯಂತ್ರವೊಂದು ಸರಾಗವಾಗಿ ಕೆಲಸ ಮಾಡಬೇಕೆಂದರೆ ಒಳ್ಳೆಯ ನಿರ್ವಹಣೆ ಬೇಕು. ಕೆಟ್ಟು ಹೋದ ಬಿಡಿಭಾಗಗಳನ್ನು ಬದಲಾಯಿಸಬೇಕು; ಅಡ್ಡಿಗಳನ್ನು ನಿವಾರಿಸಬೇಕು; ಜೀರ್ಣಾವಸ್ಥೆಗೆ ಬಂದಿರುವ ಭಾಗಗಳನ್ನು ರಿಪೇರಿ ಮಾಡಬೇಕು. ಅಂತೆಯೇ ದೇಹ ಯಂತ್ರವೂ. ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು, ಒಳ್ಳೆಯ ವಾತಾವರಣವನ್ನು ಕಲ್ಪಿಸಿದರೆ ರಿಪೇರಿ ಕೆಲಸವನ್ನು ನಮ್ಮ ದೇಹ ತಂತಾನೇ ಮಾಡಿಕೊಳ್ಳುತ್ತದೆ. ತೊಂದರೆಯಾಗುವುದು ರಿಪೇರಿ ಕೆಲಸ ಸರಿಯಾಗಿ ಆಗದಿದ್ದಾಗ ಇಲ್ಲವೇ ರಿಪೇರಿಯ ಸಾಮರ್ಥ್ಯವನ್ನು ಮೀರಿದ ಸಮಸ್ಯೆ ಬಂದು ಒದಗಿದಾಗ. 

 

ಒಂದು ಪರಿಸ್ಥಿತಿ ಊಹಿಸಿಕೊಳ್ಳೋಣ. ಯಾವುದೋ ಒಂದು ಅಂಗದಲ್ಲಿ ಇರುವ ಜೀವಕೋಶಗಳ ಪೈಕಿ ಕೆಲವು ಅಸಹಜವಾಗಿ, ಅನಿಯಂತ್ರಿತವಾಗಿ ಬೆಳೆಯಲು ಆರಂಭಿಸಿದರೆ? ಮಾಡಬೇಕಾದ ಕೆಲಸ ಮಾಡದಿರುವುದು; ಪೋಷಕಾಂಶಗಳನ್ನು ಯದ್ವಾತದ್ವಾ ಕಬಳಿಸುವುದು; ತನ್ನ ನಿಶ್ಚಿತ ಗಾತ್ರಕ್ಕಿಂತ ಕೆಲವು ಪಟ್ಟು ಹಿಗ್ಗುವುದು; ಅಕ್ಕಪಕ್ಕದ ಜೀವಕೋಶಗಳ ಮೇಲೆ ಒತ್ತಡ ಹಾಕುವುದು; ತನ್ನ ಅಶಿಸ್ತನ್ನು ಇತರ ಜೀವಕೋಶಗಳಿಗೂ ಹರಡುವುದು; ದುಷ್ಟತನವನ್ನು ಅಕ್ಕಪಕ್ಕದ ಅಂಗಗಳಿಗೂ ತಲುಪಿಸಿ, ಅವುಗಳ ಕೆಲಸವನ್ನೂ ಕೆಡಿಸುವುದು. ಈ ರೀತಿಯ ಅಶಿಸ್ತು ಒಂದು ಸಂಘಟನೆಯಲ್ಲೋ, ಒಂದು ಕಾರ್ಖಾನೆಯಲ್ಲೋ ಆದರೆ ಇಡೀ ವ್ಯವಸ್ಥೆಯ ಕೆಲಸ ಹದಗೆಡುತ್ತದೆ. ಅಂತೆಯೇ, ಶರೀರದ ಅಂಗಗಳಲ್ಲಿ ಅಶಿಸ್ತಿನ ಕೋಶಗಳು ಒಂದು ಮಿತಿಗಿಂತಲೂ ಅಧಿಕವಾದರೆ, ಆಯಾ ಅಂಗಕ್ಕೂ ಹಾನಿ; ಇಡೀ ಶರೀರಕ್ಕೂ ಸಮಸ್ಯೆ. ಇಂತಹ ಅಸಹಜ, ಅಶಿಸ್ತಿನ ಕೋಶಗಳ ಸಮೂಹಕ್ಕೆ ಕ್ಯಾನ್ಸರ್ ಎನ್ನಬಹುದು. ವಿವಿಧ ಅಂಗಗಳನ್ನು ಕಾಡಬಲ್ಲ 200ಕ್ಕೂ ಹೆಚ್ಚು ಬಗೆಯ ಕ್ಯಾನ್ಸರ್ಗಳನ್ನು ಗುರುತಿಸಲಾಗಿದೆ. ಕ್ಯಾನ್ಸರ್ ಎಂದರೆ ಒಂದು ಕಾಯಿಲೆಯಲ್ಲ; ಬಹಳ ಪ್ರಭೇದಗಳಿರುವ ಅನಾರೋಗ್ಯದ ಸಾಮಾನ್ಯ ಹೆಸರು.

 

ಕ್ಯಾನ್ಸರ್ ವಿನಾಶಕಾರಿ, ಪ್ರಾಣಘಾತಕ ಎಂದೇನಿಲ್ಲ. ಅಪಾಯಕಾರಿಯಲ್ಲದ ಕ್ಯಾನ್ಸರ್ಗಳ ಸಂಖ್ಯೆಯೇ ಹೆಚ್ಚು. ಇವು ಗಂತಿಯ ಸ್ವರೂಪ ಪಡೆಯುವ ಭಿನ್ನರೂಪದ ಜೀವಕೋಶಗಳು. ಅಕ್ಕಪಕ್ಕದ ಕೋಶಗಳ ಮೇಲೆ ಒತ್ತಡ ಹಾಕುವುದನ್ನು ಬಿಟ್ಟರೆ ಇವುಗಳಿಂದ ಹೆಚ್ಚು ಅಪಾಯವಿಲ್ಲ. ಸ್ನಾಯುಗಳ ಗಂಟುಗಳು, ಚರ್ಮದ ಮೇಲೆ ಬೆಳೆಯುವ ಸಣ್ಣಪುಟ್ಟ ಗೆಡ್ಡೆಗಳು ಮೊದಲಾದುವುದು ಈ ಗುಂಪಿಗೆ ಸೇರುತ್ತವೆ. ಇವುಗಳಿಂದ ಸಮಸ್ಯೆಯಾದರೆ ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಬಹುದು. ತೆಗೆದು ಹಾಕಿದ ಭಾಗವನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸಿ ಹಾನಿಕಾರಕವಲ್ಲ” ಎಂದು ಖಚಿತಪಡಿಸಬಹುದು.

 

ಅಪಾಯಕಾರಿ ಕ್ಯಾನ್ಸರ್ ಹಲವಾರಿವೆ. ಶರೀರದ ಒಂದು ಭಾಗದಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿ ಕ್ಯಾನ್ಸರ್ ತನ್ನ ಅಕ್ಕಪಕ್ಕದ ಕೋಶಗಳನ್ನು ಆಕ್ರಮಿಸಬಹುದು. ರಕ್ತ ಅಥವಾ ಹಾಲ್ರಸದ ಮೂಲಕ ಶರೀರದ ಇತರ ಭಾಗಗಳಿಗೆ ಕ್ಷಿಪ್ರವಾಗಿ ಹರಡಬಹುದು. ಶರೀರದ ಯಾವುದೇ ಭಾಗಕ್ಕಾದರೂ ಕ್ಯಾನ್ಸರ್ ಬರಬಹುದು. ರಕ್ತ, ಸ್ತನ, ಕರುಳು, ಶ್ವಾಸಕೋಶ, ವೃಷಣ, ಅಂಡಾಶಯ, ಪ್ರಾಸ್ಟೇಟ್ ಗ್ರಂಥಿ, ಮೂಳೆಗಳ ಕ್ಯಾನ್ಸರ್ ಹೆಚ್ಚಾಗಿ ಕಾಣುತ್ತದೆ. ಹೃದಯದ ಕ್ಯಾನ್ಸರ್ ಅಪರೂಪ. ಒಂದೇ ವ್ಯಕ್ತಿಯಲ್ಲಿ ಒಂದಕ್ಕಿಂತ ಹೆಚ್ಚಿನ ಅಂಗಗಳ ಕ್ಯಾನ್ಸರ್ ಆಗಬಹುದು. ಆರು ರೋಗಿಗಳಲ್ಲಿ ಒಬ್ಬರಿಗೆ ಒಂದಕ್ಕಿಂತ ಹೆಚ್ಚಿನ ಅಂಗಗಳ ಕ್ಯಾನ್ಸರ್ ಕಾಣಬಹುದು.

 

ಅಪಾಯಕಾರಿ ಕ್ಯಾನ್ಸರ್ನಲ್ಲಿ ಹಲವಾರು ಹಂತಗಳಿವೆ. ಆರಂಭಿಕ ಹಂತಗಳಲ್ಲಿ ಅವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ. ನಿರ್ದಿಷ್ಟ ಹಂತವನ್ನು ದಾಟಿ ಹರಡಿರುವ ಕ್ಯಾನ್ಸರ್ ಮಾತ್ರ ಪ್ರಾಣಾಂತಿಕ. ಈ ಹಂತಕ್ಕಿಂತ ಮೊದಲು ಪತ್ತೆಯಾದರೆ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಇಲ್ಲವೇ ಉಲ್ಬಣವಾಗದಂತೆ ನಿಯಂತ್ರಣದಲ್ಲಿ ಇಡಬಹುದು. ಹೀಗಾಗಿ ಕ್ಯಾನ್ಸರ್ ಎನ್ನುವುದು ಸಾವು ಎನ್ನುವುದರ ಸಮಾನಾರ್ಥಕ ಪದವಲ್ಲ.

 

ಕ್ಯಾನ್ಸರ್ಗೆ ಕಾರಣಗಳು ಹಲವಾರು. ಕೆಲವೊಂದನ್ನು ತಡೆಗಟ್ಟಬಹುದು; ಕೆಲವು ನಮ್ಮ ನಿಯಂತ್ರಣದಲ್ಲಿ ಇಲ್ಲದವು. ಕ್ಯಾನ್ಸರ್ನ ಅತಿ ಮುಖ್ಯ ಕಾರಣ ತಂಬಾಕು ಬಳಕೆ. ಯಾವುದೇ ರೂಪದಲ್ಲೂ ತಂಬಾಕು ಕ್ಯಾನ್ಸರ್ ತರಬಲ್ಲದು. ಶರೀರದ ಎಂಟು ಅಂಗಗಳ, 12 ಬಗೆಯ ಕ್ಯಾನ್ಸರ್ಗಳಿಗೆ ತಂಬಾಕು ಕಾರಣ. ಯಾವುದೇ ವಯಸ್ಸಿನಲ್ಲೂ, ಯಾವುದೇ ರೂಪದಲ್ಲೂ ತಂಬಾಕು ಆರೋಗ್ಯಕ್ಕೆ ಶತ್ರು. ಈಗಾಗಲೇ ಕ್ಯಾನ್ಸರ್ ಬಂದಿರುವ ರೋಗಿಗಳು ತಂಬಾಕು ಸೇವನೆ ನಿಲ್ಲಿಸಿದರೆ ಕ್ಯಾನ್ಸರ್ ನಿಯಂತ್ರಣ ಸಾಧ್ಯ. ಕೇವಲ ತಂಬಾಕು ಸೇವನೆಯನ್ನು ನಿಲ್ಲಿಸುವುದರಿಂದ ಜಗತ್ತಿನ ಕ್ಯಾನ್ಸರ್ ಪ್ರಮಾಣ ಮಹತ್ತರವಾಗಿ ಇಳಿಯಬಲ್ಲದು.

 

ಅಸಹಜ ಆಹಾರ ಪದ್ಧತಿ ಕ್ಯಾನ್ಸರ್ನ ಮತ್ತೊಂದು ಕಾರಣ. ನೈಸರ್ಗಿಕ ಆಹಾರವನ್ನು ತ್ಯಜಿಸಿ, ಸಂಸ್ಕರಿತ ಆಹಾರವನ್ನು ಅವಲಂಬಿಸಿರುವ ಸಮಾಜಗಳಲ್ಲಿ ಕರುಳಿನ ಕ್ಯಾನ್ಸರ್ ಬಹಳ ಹೆಚ್ಚು. ಅಂತೆಯೇ, ಲೈಂಗಿಕ ಸೋಂಕು, ವಾಯುಮಾಲಿನ್ಯ, ವಿಕಿರಣ, ವೈರಸ್ ಸೋಂಕು, ಅಪಾಯಕಾರಿ ರಾಸಾಯನಿಕಗಳ ಸಂಪರ್ಕ, ಚರ್ಮದ ಮೇಲೆ ಊದಾತೀತ ಕಿರಣಗಳ ಪ್ರಭಾವ ಮೊದಲಾದುವು ಕ್ಯಾನ್ಸರ್ ತಡೆಗಟ್ಟಬಹುದಾದ ಕಾರಣಗಳು. ದೇಹದ ಜೆನೆಟಿಕ್ ರಚನೆ, ವಂಶವಾಹಿಯಲ್ಲಿ ಬರುವ ಅಪಾಯಕಾರಿ ಜೀನ್ಗಳು, ಶರೀರದಲ್ಲಿ ಕಿಣ್ವಗಳ ಕೊರತೆ, ಅಂಗಗಳ ಉತ್ಪತ್ತಿಯ ದೋಷಗಳು, ಶರೀರದ ಆಂತರಿಕ ಸಮಸ್ಯೆಗಳು, ಹಾರ್ಮೋನುಗಳ ಏರುಪೇರು, ಸಾಧಾರಣ ಸಮಸ್ಯೆಗಳಿಗೆ ತೀವ್ರವಾಗಿ ಪ್ರತಿಸ್ಪಂದಿಸುವ ಶರೀರದ ಗುಣ, ಜೀವಕೋಶದ ಕಾರ್ಯದಲ್ಲಿನ ದೋಷಗಳು ಮೊದಲಾದುವುಗಳನ್ನು ನಿಯಂತ್ರಿಸಲಾಗದು. ಇಂತಹ ಸಮಸ್ಯೆಗಳು ಉಳ್ಳವರಲ್ಲಿ ಕ್ಯಾನ್ಸರ್ ಆಗುವುದನ್ನು ತಡೆಗಟ್ಟುವುದು ಬಹುತೇಕ ಅಶಕ್ಯ.

 

ಸರಿಯಾದ ಸಮಯಕ್ಕೆ ಕ್ಯಾನ್ಸರ್ ಪತ್ತೆಮಾಡುವುದು ಚಿಕಿತ್ಸೆಯಷ್ಟೇ ಮುಖ್ಯ. ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಕೆಲವು ಕ್ಯಾನ್ಸರ್ ಪತ್ತೆಗೆ ಒಂದು ವಯಸ್ಸಿನ ನಂತರ ಎಲ್ಲರನ್ನೂ ಒಳಪಡಿಸುವ ಸ್ಕ್ರೀನಿಂಗ್ ವಿಧಾನ ಅಗ್ಗ ಮತ್ತು ಸೂಕ್ತ. ಉದಾಹರಣೆಗೆ, ಸ್ತನ ಕ್ಯಾನ್ಸರ್ ಮತ್ತು ಗರ್ಭದ ಕೊರಳಿನ ಕ್ಯಾನ್ಸರ್. ನಿಗದಿತ ಅವಧಿಗೆ ಒಮ್ಮೆಯಂತೆ ಸ್ತ್ರೀಯರನ್ನು ಸರಳ ಪರೀಕ್ಷೆಗಳಿಗೆ ಒಳಪಡಿಸಿ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲೇ ಪತ್ತೆಮಾಡಬಹುದು. ಇದರಿಂದ ಕ್ಯಾನ್ಸರ್ ವ್ಯಾಪಿಸುವ ಮುನ್ನವೇ ಅದಕ್ಕೆ ಚಿಕಿತ್ಸೆ ನೀಡಿ, ಗುಣಪಡಿಸಬಹುದು.

 

ಈಗಾಗಲೇ ಶರೀರದಲ್ಲಿ ಇರಬಹುದಾದ ಕ್ಯಾನ್ಸರ್ ಪತ್ತೆಗೆ ಭೌತಿಕ ಪರೀಕ್ಷೆ, ರಕ್ತದ ಪರೀಕ್ಷೆ, ಸ್ಕ್ಯಾನಿಂಗ್, ಗಂತಿಯ ಸಣ್ಣ ಭಾಗವನ್ನು ಸೂಕ್ಷ್ಮದರ್ಶಕದ ಸಹಾಯದಿಂದ ಕ್ಯಾನ್ಸರ್ ಕೋಶಗಳನ್ನು ಪತ್ತೆ ಮಾಡುವ ಬಯಾಪ್ಸಿ, ನ್ಯೂಕ್ಲಿಯರ್ ಇಮೇಜ್, ಶಸ್ತ್ರಚಿಕಿತ್ಸೆ, ವರ್ಣತಂತು ತಳಿಗುಣಗಳ ಜೆನೆಟಿಕ್ ಪರೀಕ್ಷೆ, ಅಂಗಾಶದ ಕೋಶಗಳ ರಾಸಾಯನಿಕ ಪರೀಕ್ಷೆ ಮೊದಲಾದುವುಗಳನ್ನು ಬಳಸಬಹುದು. ಕ್ಯಾನ್ಸರ್ ಪತ್ತೆಗೆ ಮಾತ್ರವಲ್ಲದೆ, ಕ್ಯಾನ್ಸರ್ ಯಾವ ಹಂತದಲ್ಲಿದೆ; ಚಿಕಿತ್ಸೆಯ ಪರಿಣಾಮಗಳೆಷ್ಟು ಎನ್ನುವ ನಿರ್ಧಾರ ಕೂಡ ಸಾಧ್ಯ.

 

ವೈವಿಧ್ಯಮಯ ಕ್ಯಾನ್ಸರ್ಗಳಿಗೆ ಒಂದು ಸಾಮಾನ್ಯ ಲಸಿಕೆ ಸಾಧ್ಯವಿಲ್ಲ. ವೈರಸ್ ಸೋಂಕುಗಳ ಮೂಲಕ ಬರುವ ಕ್ಯಾನ್ಸರ್ ತಡೆಯಲು ಲಸಿಕೆಗೆ ಸಾಧ್ಯ. ಗರ್ಭಕೋಶದ ಕೊರಳಿನ ಸೋಂಕು, ಯಕೃತ್ತಿನ ಒಂದು ಬಗೆಯ ಸೋಂಕು ತಡೆಯುವ ಲಸಿಕೆಗಳ ಬಳಕೆ ಸೂಕ್ತ. ಸೋಂಕು ಇಲ್ಲವೆಂದ ಮೇಲೆ ಅವು ಕ್ಯಾನ್ಸರ್ಗೆ ತಿರುಗುವುದೂ ಇಲ್ಲ. ಹೀಗೆ ಕ್ಯಾನ್ಸರ್ ಲಸಿಕೆಗಳದ್ದು ಪರೋಕ್ಷ ಪ್ರಭಾವ.

 

ಕ್ಯಾನ್ಸರ್ ನಿರ್ವಹಣೆಯಲ್ಲಿ ಕೀಮೊಥೆರಪಿ ಎನ್ನುವುದು ಔಷಧಗಳ ಚಿಕಿತ್ಸೆ. ಗಂತಿಗಳಿಗೆ ನೇರವಾಗಿ ವಿಕಿರಣ ಹಾಯಿಸುವ ಮೂಲಕ ಕ್ಯಾನ್ಸರ್ ಕೋಶಗಳನ್ನು ನಾಶಮಾಡುವುದು ವಿಕಿರಣ ಚಿಕಿತ್ಸೆ. ಇವೆರಡೂ ಸಾಮಾನ್ಯ ಜೀವಕೋಶಗಳಿಗೂ ಕೆಡುಕು ಮಾಡಬಲ್ಲವು. ಶಸ್ತ್ರಚಿಕಿತ್ಸೆಯ ಮೂಲಕ ಗಂತಿಗಳನ್ನು ತೆಗೆದುಹಾಕಬಹುದು. ಆದರೆ ಕೆಲವು ಕ್ಯಾನ್ಸರ್ ಕೋಶಗಳು ಶಸ್ತ್ರಚಿಕಿತ್ಸೆಯ ಕತ್ತಿಗೆ ದೊರಕದೆ ಹಾಗೆಯೇ ಉಳಿದುಬಿಡಬಹುದು. ಇದರ ಜೊತೆಗೆ ಅಸ್ಥಿಮಜ್ಜೆಯ ಬದಲಾವಣೆ, ಮೊನೋಕ್ಲೋನಲ್ ಪ್ರತಿಜೀವಕಗಳು ಮೊದಲಾದ ವಿಧಾನಗಳೂ ಚಾಲ್ತಿಯಲ್ಲಿವೆ. ಒಂದಕ್ಕಿಂತ ಹೆಚ್ಚಿನ ವಿಧಾನಗಳನ್ನು ಅನುಕ್ರಮವಾಗಿ ಒಗ್ಗೂಡಿಸಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.

 

ಚಿಕಿತ್ಸೆಯ ನಂತರ ಕ್ಯಾನ್ಸರ್ ಮರುಕಳಿಸಬಹುದು. ಕೆಲವು ಕ್ಯಾನ್ಸರ್ಗಳಲ್ಲಿ ಮರುಕಳಿಕೆಯ ಪ್ರಮಾಣ ಅಧಿಕ. ಮಿದುಳಿನ ಒಂದು ವಿಧದ ಕ್ಯಾನ್ಸರ್ ಸರಿಸುಮಾರು ಎಲ್ಲ ರೋಗಿಗಳಲ್ಲೂ ಮರುಕಳಿಸುತ್ತದೆ. ಅಂಡಾಶಯದ ಕ್ಯಾನ್ಸರ್ ಮರುಕಳಿಕೆ ಶೇಕಡಾ 80ಕ್ಕಿಂತಲೂ ಅಧಿಕ. ದುಗ್ಧಗ್ರಂಥಿಗಳ ಕೆಲವು ಕ್ಯಾನ್ಸರ್ ನಾಲ್ಕು ರೋಗಿಗಳಲ್ಲಿ ಮೂವರಿಗೆ ಮತ್ತೆ ಬರುತ್ತದೆ. ಮೂತ್ರಪಿಂಡ ಮತ್ತು ಮೂತ್ರಕೋಶಗಳ ಕ್ಯಾನ್ಸರ್ ಮರುಕಳಿಕೆ ಶೇಕಡಾ 50. ಚರ್ಮದ ಕ್ಯಾನ್ಸರ್ನ ಕೆಲವು ಪ್ರಭೇದಗಳಲ್ಲಿ ಮೂಲ ಕ್ಯಾನ್ಸರ್ ಗುಣವಾದರೂ, ಶೇಕಡಾ 85 ರೋಗಿಗಳಲ್ಲಿ ಶರೀರದ ಬೇರೆಡೆ ಹರಡಿರುತ್ತದೆ. ಚಿಕಿತ್ಸೆಗೆ ರೋಗಿ ಸ್ಪಂದಿಸುವ ರೀತಿ, ಪ್ರತಿಯೊಂದು ಹಂತದ ಚಿಕಿತ್ಸೆಯ ಹಂತದ ನಂತರ ಎಷ್ಟು ಪ್ರಮಾಣದ ಕ್ಯಾನ್ಸರ್ ಕೋಶಗಳು ನಾಶವಾಗಿವೆ ಎಂಬುದರ ಲೆಕ್ಕಾಚಾರ, ಅಡ್ದಪರಿಣಾಮಗಳ ತೀವ್ರತೆಯಿಂದ ಚಿಕಿತ್ಸೆಯನ್ನು ನಿಲ್ಲಿಸಬೇಕಾದ ತುರ್ತು – ಇಂತಹ ಹಲವಾರು ಅಂಶಗಳನ್ನು ಹಿಡಿದು ಯಾವ ರೋಗಿಯಲ್ಲಿ ಕ್ಯಾನ್ಸರ್ ಮರುಕಳಿಸಬಹುದು ಎಂಬ ಊಹೆ ಮಾಡಬಹುದು. ಆದರೆ, ನಿಖರವಾಗಿ ಇಂತಹ ರೋಗಿಗೆ ಕ್ಯಾನ್ಸರ್ ಮರುಕಳಿಸುತ್ತದೆ ಎಂದು ಹೇಳುವುದು ಸಾಧ್ಯವಿಲ್ಲ. 

 

ಕ್ಯಾನ್ಸರ್ ಎನ್ನುವುದು ಈಗ ಭೀತಿಗೆ ಕಾರಣವಾಗಿ ಉಳಿದಿಲ್ಲ. ನಮ್ಮ ದೇಶದಲ್ಲಿ ಉತ್ತಮವಾದ, ಸೋವಿಯಾದ, ಪರಿಣಾಮಕಾರಿಯಾದ ಕ್ಯಾನ್ಸರ್ ಚಿಕಿತ್ಸೆ ಲಭ್ಯವಿದೆ. ಕ್ಯಾನ್ಸರ್ ಎಷ್ಟು ಬೇಗ ಪತ್ತೆಯಾಗುತ್ತದೆ ಎನ್ನುವುದು ಚಿಕಿತ್ಸೆಯ ಅತ್ಯಂತ ಪ್ರಮುಖ ಅಂಶ. ಕ್ಯಾನ್ಸರ್ನ ಆರಂಭಿಕ ಚಿಹ್ನೆಗಳನ್ನು ನಿರ್ಲಕ್ಷ್ಯ ಮಾಡದೆ, ಸೂಕ್ತವಾಗಿ ತಪಾಸಣೆ ಮಾಡಿಸಿ, ಶೀಘ್ರವಾಗಿ ಚಿಕಿತ್ಸೆ ನೀಡಿದರೆ ಅದು ಶರೀರದಲ್ಲಿ ಹೇಳಹೆಸರಿಲ್ಲದಂತೆ ಮಾಯವಾಗಬಲ್ಲದು. ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅತ್ಯಂತ ಮುಖ್ಯ. ಕ್ಯಾನ್ಸರ್ ಅರಿವು ಉಳ್ಳವರಲ್ಲಿ ಅನಗತ್ಯ ಭೀತಿ ಇರುವುದಿಲ್ಲ.  

--------------------

ದಿನಾಂಕ 2/2/2025 ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭ ಪುರವಣಿಯಲ್ಲಿ ಪ್ರಕಟವಾದ ಲೇಖನ.


 

ಕೊಲೆಸ್ಟ್ರಾಲ್ – ಸತ್ಯ ಮಿಥ್ಯೆಗಳ ಸಂಘರ್ಷ

ಡಾ. ಕಿರಣ್ ವಿ.ಎಸ್.

ವೈದ್ಯರು

ಕೊಲೆಸ್ಟ್ರಾಲ್ ಎನ್ನುವ ಪದ ಕೇಳಿದ ಕೂಡಲೇ ಕೆಲವರಿಗೆ ಆತಂಕ; ಹಲವರಿಗೆ ಗಾಬರಿ; ಒಟ್ಟಿನಲ್ಲಿ ಎಲ್ಲರಿಗೂ ಕುತೂಹಲ. ಜೀವರಸಾಯನವಿಜ್ಞಾನ ಅಧ್ಯಯನ ಮಾಡುವವರು “ಶರೀರದ ಹಲವಾರು ಪ್ರಮುಖ ರಾಸಾಯನಿಕಗಳ, ಹಾರ್ಮೋನ್ಗಳ ಉತ್ಪತ್ತಿಕ್ಕೆ ಕೊಲೆಸ್ಟ್ರಾಲ್ ಮುಖ್ಯ ಕಚ್ಚಾವಸ್ತು” ಎನ್ನುತ್ತಾರೆ. ಆದರೆ ವೈದ್ಯರು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಪತ್ತೆ ಮಾಡಿ, ಔಷಧ ನೀಡಿ, ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತೆ ಸಲಹೆ ಮಾಡುತಾರೆ; ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದರೆ ಆಗುವ ಹಲವಾರು ಸಮಸ್ಯೆಗಳ ಬಗ್ಗೆ ವಿವರಿಸುತ್ತಾರೆ. ಕೊಲೆಸ್ಟ್ರಾಲ್ ಎನ್ನುವುದು ಶತ್ರುವೆಂದು ಭಾವಿಸಲಾದ ಗೆಳೆಯನೋ ಅಥವಾ ಮಿತ್ರನ ವೇಷದ ವೈರಿಯೋ” ಎನ್ನುವ ಪ್ರಶ್ನೆ ಬಹಳ ಜನರ ಮನಸ್ಸಿನಲ್ಲಿದೆ. ವೈದ್ಯಕೀಯ ಅಧ್ಯಯನದ ಆಸಕ್ತಿಕರ ವಿಷಯಗಳಲ್ಲಿ ಕೊಲೆಸ್ಟ್ರಾಲ್ ಒಂದು. ಕೊಲೆಸ್ಟ್ರಾಲ್ ಅಧ್ಯಯನಕ್ಕೆ ಇದುವರೆಗೆ ಲಭಿಸಿರುವ ನೊಬೆಲ್ ಬಹುಮಾನಗಳು ಹತ್ತಕ್ಕಿಂತ ಹೆಚ್ಚು.

ಕೊಲೆಸ್ಟ್ರಾಲ್ ಎಂದರೇನು? ನಮ್ಮ ಆಯುರ್ವೇದದಲ್ಲಿ ವಾತ, ಪಿತ್ತ, ಕಫ ಎಂಬ ಮೂರು ದೋಷಗಳಿವೆ. ಇದೇ ರೀತಿಯಲ್ಲಿ ಗ್ರೀಕ್ ವೈದ್ಯರೂ ಶರೀರದಲ್ಲಿ ನಾಲ್ಕು ರೀತಿಯ “ಹ್ಯೂಮರ್” ಇರುತ್ತವೆ ಎಂದು ನಂಬಿದ್ದರು. ಆ ನಾಲ್ಕರಲ್ಲಿ “ಖೋಲ್” ಎಂದರೆ ಪಿತ್ತ; “ಸ್ಟೀರೊಸ್” ಎಂದರೆ ಗಟ್ಟಿಯಾದ ಎಂದರ್ಥ. ಪಿತ್ತಕೋಶದ ಕಲ್ಲುಗಳಲ್ಲಿ ದೊರೆಯುವ ಜಿಡ್ಡಿನಂತಹ ಅಂಶವನ್ನು ಗ್ರೀಕರು “ಗಟ್ಟಿಯಾದ ಪಿತ್ತ” ಅಥವಾ “ಕೊಲೆಸ್ಟ್ರಾಲ್” ಎಂದು ಕರೆದಿದ್ದರು.

ಕೊಲೆಸ್ಟ್ರಾಲ್ ಎಂಬುದು ಶರೀರದ ಅನೇಕ ಅವಶ್ಯಕತೆಗಳಿಗೆ ಅಗತ್ಯವಾಗಿ ಬೇಕಾದ ಒಂದು ಕೊಬ್ಬಿನ ಅಣು. ಇದು ಸಾಮಾನ್ಯವಾಗಿ ನಮ್ಮ ಯಕೃತ್ನಲ್ಲಿ ಉತ್ಪತ್ತಿ ಆಗುತ್ತಲೇ ಇರುತ್ತದೆ. ದಪ್ಪಗಾತ್ರದ ಅಣು ಆಗಿರುವುದರಿಂದ ಕೊಲೆಸ್ಟ್ರಾಲ್ ತಾನೇ ತಾನಾಗಿ ರಕ್ತದಲ್ಲಿ ಮುಕ್ತವಾಗಿ ಓಡಾಡಲು ಕಷ್ಟ. ಹಾಗಾಗಿ ಇದನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಒಯ್ಯಲು ಲೈಪೋ-ಪ್ರೊಟೀನ್ ಎಂಬ ವಾಹಕಗಳು ಇರುತ್ತವೆ. ಸಾಂದ್ರತೆಯ ಆಧಾರದ ಮೇಲೆ “ಕಡಿಮೆ ಸಾಂದ್ರತೆಯ ಲೈಪೋ-ಪ್ರೊಟೀನ್ (LDL) ಮತ್ತು ಹೆಚ್ಚು ಸಾಂದ್ರತೆಯ ಲೈಪೋ-ಪ್ರೊಟೀನ್ (HDL)” ಎಂಬ ಎರಡು ಪ್ರಮುಖ ಕೊಲೆಸ್ಟ್ರಾಲ್ ವಾಹಕಗಳಿವೆ. ರಕ್ತದಲ್ಲಿ ಲೈಪೋ-ಪ್ರೊಟೀನ್ಗಳ ಪ್ರಮಾಣವನ್ನು ಅಳೆದರೆ ಅದು ಕೊಲೆಸ್ಟ್ರಾಲ್ನ ಪರೋಕ್ಷ ಅಳತೆ ಆಗುತ್ತದೆ. ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಅಳೆಯುವಾಗ ಸಂಬಂಧಿಸಿದ ಲೈಪೋ-ಪ್ರೋಟೀನ್ಗಳ ಮಟ್ಟವನ್ನೂ ಅಳೆಯಲಾಗುತ್ತದೆ.  LDL ಮಾದರಿಯ ಕೊಲೆಸ್ಟ್ರಾಲ್ ವಾಹಕ ಅಧಿಕವಾಗಿ ಇರುವಂತಹವರಲ್ಲಿ ಹೃದಯಾಘಾತಗಳಂತಹ ಸಮಸ್ಯೆ ಹೆಚ್ಚಾಗಿ ಕಾಣುತ್ತದೆ. ಅಂತೆಯೇ, HDL ವಾಹಕ ಅಧಿಕವಾಗಿ ಇರುವವರಲ್ಲಿ ಹೃದಯಾಘಾತ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.

ಶರೀರದ ಪ್ರತಿಯೊಂದು ಪ್ರಮುಖ ಕಾರ್ಯಗಳಿಗೂ ರಕ್ತದ ಅಗತ್ಯವಿದೆ. ದೇಹದ ಅಂಗಗಳ ಕೆಲಸಕ್ಕೆ ಬೇಕಾದ ಆಕ್ಸಿಜನ್, ಪೋಷಕಾಂಶಗಳನ್ನು ಒದಗಿಸಿ, ಅವುಗಳ ತ್ಯಾಜ್ಯವನ್ನು ನಿವಾರಿಸುವುದು ರಕ್ತವೇ. ಯಾವುದೇ ಅಂಗಕ್ಕೆ ರಕ್ತ ಹರಿಯುವುದು ಟೊಳ್ಳಾದ ರಕ್ತನಾಳಗಳ ಮೂಲಕ. ಇಡೀ ಶರೀರಕ್ಕೆ ರಕ್ತ ಸರಬರಾಜು ಮಾಡುವ ಹೃದಯವೂ ತನ್ನ ವೈಯಕ್ತಿಕ ಅಗತ್ಯಗಳಿಗೆ ಬೇಕಾದ ರಕ್ತವನ್ನು ಪಡೆದುಕೊಳ್ಳುವುದು ಇಂತಹ ರಕ್ತನಾಳಗಳ ಮೂಲಕವೇ. ಹೃದಯಕ್ಕೆ ರಕ್ತ ಪೂರೈಸುವ ಮೂರು ಪ್ರಮುಖ ನಾಳಗಳನ್ನು ಕರೊನರಿ ರಕ್ತನಾಳಗಳು ಎನ್ನುತ್ತಾರೆ. ಇವುಗಳ ಒಳಗೋಡೆಗಳಲ್ಲಿ ಕೆಲವೊಮ್ಮೆ ರಾಳದಂತಹ ವಸ್ತುಗಳು ಜಮೆಯಾಗಿ, ರಕ್ತನಾಳಗಳ ಆಂತರಿಕ ವ್ಯಾಸವನ್ನು ಕಿರಿದಾಗಿಸುತ್ತವೆ. ಇದರಿಂದ ರಕ್ತನಾಳಗಳ ಒಳಗೆ ರಕ್ತದ ಹರಿಯುವಿಕೆಗೆ ಅಡ್ಡಿಯಾಗುತ್ತದೆ. ಇಂತಹ ಯಾವುದೇ ರಕ್ತನಾಳದಲ್ಲಿನ ಸಂಚಾರ ಸಂಪೂರ್ಣ ನಿಂತುಹೋದರೆ, ಅದು ಸರಬರಾಜು ಮಾಡುತ್ತಿದ್ದ ಭಾಗದಲ್ಲಿ ರಕ್ತ ಪೂರೈಕೆ ಆಗದೆ ಹೃದಯಾಘಾತವಾಗುತ್ತದೆ. ರಕ್ತನಾಳದ ಆಂತರಿಕ ವ್ಯಾಸ ಎಷ್ಟು ಕಡಿಮೆಯಾಗದೆ ಎಂದು ಅರಿಯಲು ಆಂಜಿಯೋಗ್ರಾಮ್ ಎನ್ನುವ ಪರೀಕ್ಷೆ ಬೇಕಾಗುತ್ತದೆ.

ರಕ್ತನಾಳಗಳ ಆಂತರಿಕ ವ್ಯಾಸವನ್ನು ಕಿರಿದಾಗಿಸುವ ರಾಳದಲ್ಲಿ ಪ್ರಮುಖವಾಗಿ ಕಾಣುವುದು ಕೊಲೆಸ್ಟ್ರಾಲ್ ಅಂಶ. ನಾವು ಸೇವಿಸುವ ಆಹಾರದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ, ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕೂಡ ಏರುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ಅಂದರೆ, ನಮ್ಮ ದೇಹದ ಅಗತ್ಯಗಳಿಗೆ ಬೇಕಾಗುವಷ್ಟು ಪ್ರಮಾಣದ ಕೊಲೆಸ್ಟ್ರಾಲ್ ಅನ್ನು ನಮ್ಮ ಶರೀರವೇ ಉತ್ಪತ್ತಿ ಮಾಡುತ್ತದೆ. ಇದಕ್ಕೆ ಬೇಕಾಗುವ ಕಚ್ಚಾವಸ್ತುಗಳು ನಮ್ಮ ಸಹಜ ಆಹಾರದ ಮೂಲಕ ಒದಗುತ್ತವೆ. ಇದರ ಮೇಲೆ ನಾವು ಆಹಾರದಲ್ಲಿ ಒಂದು ಮಟ್ಟದವರೆಗೆ ಕೊಲೆಸ್ಟ್ರಾಲ್ ಅನ್ನು ಸೇವಿಸಿದರೂ ಶರೀರ ಅದನ್ನು ನಿಭಾಯಿಸುತ್ತದೆ. ಆದರೆ ಒಂದು ನಿಯಮಿತ ಮಟ್ಟಕ್ಕಿಂತ ಹೆಚ್ಚಿನ ಕೊಲೆಸ್ಟ್ರಾಲ್ ಸೇವನೆಯಾದರೆ ಅದು ಅಪಾಯಕಾರಿ ಆಗಬಲ್ಲದು. ಈ ಸುರಕ್ಷಿತ ಸೇವನೆಯ ಮಟ್ಟ ಪ್ರತಿಯೊಬ್ಬರಲ್ಲೂ ವಿಭಿನ್ನ. ಕೆಲವರ ಶರೀರ ಬಹಳ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಸೇವನೆ ನಿಭಾಯಿಸಬಲ್ಲದಾದರೆ, ಇನ್ನು ಕೆಲವರಲ್ಲಿ ಅಲ್ಪಸ್ವಲ್ಪ ಕೊಲೆಸ್ಟ್ರಾಲ್ ಸೇವನೆ ಕೂಡ ಸರಿಯಾಗಿ ನಿರ್ವಹಣೆಯಾಗದೆ ಸಮಸ್ಯೆ ಆಗಬಹುದು. ಇಲ್ಲಿ ಎಲ್ಲರಿಗೂ ಅನ್ವಯಿಸುವ ಏಕಸೂತ್ರತೆ ಇಲ್ಲ. ಅವರವರ ಜೆನೆಟಿಕ್ ರಚನೆಯ ಮೇಲೆ, ಕೊಲೆಸ್ಟ್ರಾಲ್ ನಿರ್ವಹಣೆಯಲ್ಲಿ ಅಗತ್ಯವಿರುವ ಕಿಣ್ವಗಳ ಉತ್ಪಾದನೆಯ ಮೇಲೆ ಇವೆಲ್ಲವೂ ನಿರ್ಧಾರವಾಗುತ್ತವೆ. ಯಾರೋ ಒಬ್ಬರು ವರ್ಷಗಳ ಕಾಲ ಯದ್ವಾತದ್ವಾ ಜಿಡ್ಡಿನ ಅಂಶವನ್ನು ತಿಂದೂ ಆರೋಗ್ಯವಾಗಿದ್ದಾರೆ ಎನ್ನುವ ಉದಾಹರಣೆ ಹಿಡಿದು ಎಲ್ಲರೂ ಅದನ್ನೇ ಮಾಡಲು ಹೋಗಬಾರದು.

ಯಕೃತ್ನಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ನಿಯಂತ್ರಿಸಬಲ್ಲ ಔಷಧಗಳನ್ನು ಹೃದಯಾಘಾತ ಸಂಬಂಧಿ ಕಾಯಿಲೆ ಇರುವವರಲ್ಲಿ ಬಳಸಲಾಗುತ್ತದೆ. ಇದರ ಬಗ್ಗೆ ವಿವಾದಗಳು ಇವೆಯಾದರೂ, ಹೃದಯಾಘಾತದ ಅಪಾಯ ಹೆಚ್ಚಾಗಿ ಇರುವವರಲ್ಲಿ ಇವುಗಳ ಬಳಕೆಯನ್ನು ಅನುಮೋದಿಸಲಾಗಿದೆ. 

ಕೊಲೆಸ್ಟ್ರಾಲ್ ಎಂಬ ಎರಡಲುಗಿನ ಕತ್ತಿ ನಮ್ಮ ಯುಗದ ಅತ್ಯಂತ ಕುತೂಹಲಕಾರಿ ಜಿಜ್ಞಾಸೆಗಳಲ್ಲಿ ಒಂದು.

----------------------

ದಿನಾಂಕ 28/01/2025 ರ ಪ್ರಜಾವಾಣಿಯ “ಕ್ಷೇಮ-ಕುಶಲ” ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/cholesterol-and-our-health-3141947