ಸೋಮವಾರ, ನವೆಂಬರ್ 11, 2024


 

ಗರ್ಭದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಗರ್ಭಧಾರಣೆ ಮತ್ತು ಸಂತಾನೋತ್ಪತ್ತಿಯಷ್ಟು ವಿಸ್ಮಯಕಾರಿ ಹಾಗೂ ಮಹತ್ವದ ಪ್ರಕ್ರಿಯೆ ಮಾನವ ಶರೀರದಲ್ಲಿ ಬೇರೊಂದಿಲ್ಲ. ಇದು ಸಂಪೂರ್ಣವಾಗಿ ನಡೆಯುವುದು ಹೆಣ್ಣಿನ ಶರೀರದಲ್ಲಿ. ಹೀಗಾಗಿ ನಾಗರಿಕತೆಯ ಉದ್ದಕ್ಕೂ ಹೆಣ್ಣನ್ನು ಪ್ರಕೃತಿಗೆ ಹೋಲಿಸಿ ಬಹಳ ಪೂಜನೀಯ ಸ್ಥಾನವನ್ನು ನೀಡಲಾಗಿತ್ತು. ಮಾತೃಪ್ರಧಾನ ಸಂಸ್ಕೃತಿ ಪಿತೃಪ್ರಧಾನವಾಗಿ ಬದಲಾದದ್ದು ಪ್ರಾಯಶಃ ವಾಣಿಜ್ಯ ಎಂಬುದು ನಾಗರಿಕತೆಯಲ್ಲಿ ಪ್ರಮುಖ ಸ್ಥಾನ ಗಿಟ್ಟಿಸಿದಾಗ ಅನಿಸುತ್ತದೆ. ಇಂದಿಗೂ ಬಹುತೇಕ ಪ್ರಾಣಿಗಳಲ್ಲಿ ಮಾತೃಪ್ರಧಾನ ವ್ಯವಸ್ಥೆಯೇ ಮುಂದುವರೆದಿದೆ. ಅಂತೆಯೇ ನಿಸರ್ಗವೂ ಬಹುತೇಕ ಜೀವಪ್ರಭೇದಗಳಲ್ಲಿ ಹೆಣ್ಣನ್ನು ಬಲಶಾಲಿಯಾಗಿಟ್ಟು, ಗಂಡನ್ನು ಕೇವಲ ಸಂತಾನಕ್ಕಾಗಿ ಬಳಸುವ ಉಪಕರಣದಂತೆ ಸೃಷ್ಟಿ ಮಾಡಿರುತ್ತದೆ.

 

ಗರ್ಭಧಾರಣೆಯ ಪ್ರಮುಖ ಅಂಗಗಳು ಗರ್ಭಕೋಶ ಮತ್ತು ಅಂಡಾಶಯಗಳು. ಎರಡೂ ಅಂಗಗಳ ನಡುವೆ ಸೇತುವೆಯಂತೆ ಕೆಲಸ ಮಾಡುವುದು ಎರಡು ಫೆಲೋಪಿಯನ್ ನಾಳಗಳು. ದೇಹದ ಮಧ್ಯಭಾಗದಲ್ಲಿರುವ ಇತರ ಅಂಗಗಳಂತೆ ಗರ್ಭಕೋಶವೂ ಒಂದೇ ಇರುತ್ತದೆ. ದೇಹದ ಆಚೀಚೆ ಇರುವ ಅಂಗಗಳ ಮಾದರಿಯಲ್ಲಿ ಅಂಡಾಶಯಗಳು ಎರಡು ಇರುತ್ತವೆ. ಎರಡು ಋತುಚಕ್ರಗಳ ನಡುವಿನ ಅವಧಿಯಲ್ಲಿ ಅಂಡಾಶಯ ಅಂಡಾಣುವನ್ನು ಬಿಡುಗಡೆ ಮಾಡುತ್ತದೆ. ಇದು ಫೆಲೋಪಿಯನ್ ನಾಳದ ಮೂಲಕ ಹಾಯ್ದು ಗರ್ಭಕೋಶವನ್ನು ಸೇರುತ್ತದೆ. ಈ ಸಂಚಾರದ ವೇಳೆ ಅಂಡಾಣುವಿಗೆ ಸುಮಾರು 48 ಗಂಟೆಗಳ ಅವಧಿಯೊಳಗೆ ವೀರ್ಯಾಣುವಿನ ಮಿಲನವಾದರೆ ಗರ್ಭ ಕಟ್ಟುತ್ತದೆ. ಇಲ್ಲವಾದರೆ ಆ ಅಂಡಾಣು ಋತುಚಕ್ರದ ಜೊತೆಗೆ ಹೊರಹೋಗುತ್ತದೆ.

 

ಗರ್ಭಕೋಶ ಸ್ತ್ರೀಯರ ಕಿಬ್ಬೊಟ್ಟೆಯ ಭಾಗದಲ್ಲಿರುತ್ತದೆ. ಮೇಲ್ಭಾಗ ಅಗಲವಾಗಿಯೂ, ಕೆಳಭಾಗ ಕಿರಿದಾಗಿಯೂ ಇರುವ ಪೇರಳೆ ಹಣ್ಣಿನ ಆಕೃತಿ ಇದರದ್ದು. ಗರ್ಭ ಧರಿಸಿರದ ಸಮಯದಲ್ಲಿ ಇದರ ಉದ್ದ ಸುಮಾರು 8 ಸೆಂಟಿಮೀಟರ್; ಮೇಲ್ಭಾಗದ ಅಗಲ 4.5 ಸೆಂಟಿಮೀಟರ್; ದಪ್ಪ 3 ಸೆಂಟಿಮೀಟರ್; ತೂಕ 60 ಗ್ರಾಂ. ಇದರಲ್ಲಿ ಮೂರು ಪದರಗಳಿವೆ. ಹೊರ ಆವರಣ  ಬಾಹ್ಯ ಅಂಗಗಳಿಂದ ಗರ್ಭಕೋಶವನ್ನು ಪ್ರತ್ಯೇಕಿಸುತ್ತದೆ. ಮಧ್ಯದ ಆವರಣ ನಯವಾದ ಅನೈಚ್ಛಿಕ ಮಾಂಸಖಂಡಗಳದ್ದು. ಅಂದರೆ, ಈ ಮಾಂಸಖಂಡಗಳ ಸಂಕೋಚನ-ವಿಕಸನ ಅಗತ್ಯಕ್ಕನುಗುಣವಾಗಿ ತಂತಾನೇ ಆಗುತ್ತದೆ. ಇದರ ಮೇಲೆ ವ್ಯಕ್ತಿಯ ಇಚ್ಛೆಯ ನಿಯಂತ್ರಣವಿಲ್ಲ. ಒಳಗಿನದ್ದು ಲೋಳೆಪದರ. ಇದು ಋತುಚಕ್ರದ ಹಂತಗಳಿವೆ ಸಂವಾದಿಯಾಗಿ ಬದಲಾಗುತ್ತಿರುತ್ತದೆ. ಪ್ರತಿಯೊಂದು ಋತುಚಕ್ರದ ವೇಳೆಯೂ ಇದರ ಕೋಶಗಳು ಭ್ರೂಣದ ಪೋಷಣೆಗೆ ಸನ್ನದ್ಧವಾಗಿ, ಬೆಳೆಯುತ್ತವೆ. ಒಂದು ವೇಳೆ ಆ ಚಕ್ರದಲ್ಲಿ ಅಂಡಾಣು-ವೀರ್ಯಾಣುಗಳ ಮಿಲನ ಆಗದಿದ್ದಲ್ಲಿ, ಈ ಕೋಶಗಳು ಕಳಚಿಕೊಂಡು ಅಂಡಾಣುವಿನ ಜೊತೆಗೆ ಋತುಸ್ರಾವದ ಮೂಲಕ ಹೊರಗೆ ಹೋಗುತ್ತವೆ. ಅಂತೆಯೇ, ಯಾವುದಾದರೂ ಋತುಚಕ್ರದ ವೇಳೆ ಅಂಡಾಣು-ವೀರ್ಯಾಣುಗಳ ಮಿಲನವಾಗಿ ಭ್ರೂಣ ಸ್ಥಾಪಿತವಾದಾಗ ಹೀಗೆ ಬೆಳೆದ ಕೋಶಗಳು ಆ ಭ್ರೂಣವನ್ನು ಸಲಹುತ್ತವೆ. ಆ ಸಂದರ್ಭದಲ್ಲಿ ಕೋಶಗಳು ಕಳಚಿಕೊಳ್ಳುವುದಿಲ್ಲ. ಹೀಗಾಗಿ ಋತುಸ್ರಾವ ಆಗುವುದಿಲ್ಲ. ಇದು ಭ್ರೂಣ ಕಟ್ಟಿರುವುದರ ಸಂಕೇತವಾಗುತ್ತದೆ.

 

ಗರ್ಭಕೋಶದಲ್ಲಿ ನಾಲ್ಕು ಭಾಗಗಳಿವೆ. ಮೇಲಿನಿಂದ ಕೆಳಗಿನ ಕಡೆಗೆ ಮೇಲ್ಭಾಗದ ದುಂಡಗಿನ ಫಂಡಸ್, ಅದರ ಕೆಳಗಿನ ಕಾಯ ಭಾಗ, ಕೆಳಗೆ ಸಂಕುಚಿತವಾಗುವ ಗರ್ಭದ ಕೊರಳಿನ ನಳಿಕೆ, ಮತ್ತು ಯೋನಿಯ ಭಾಗವನ್ನು ಸಂಪರ್ಕಿಸುವ ಗರ್ಭದ ಕೊರಳು. ಗರ್ಭಕೋಶಕ್ಕೆ ಯಾವುದೇ ಮೂಳೆಯ ಸಂಪರ್ಕವಿಲ್ಲ. ಹೀಗಾಗಿ, ಅದನ್ನು ಅದರ ಸ್ಥಾನದಲ್ಲಿ ಇರಿಸಲು ಮೂರು ಮುಖ್ಯ ರಜ್ಜುಗಳು ನೆರವಾಗುತ್ತವೆ. ಮೊದಲನೆಯದು ಗರ್ಭದ ಕೊರಳಿನ ಹಿಂಬದಿಯಿಂದ ಆರಂಭವಾಗಿ ಬೆನ್ನುಮೂಳೆಯ ಅಡಿಭಾಗಕ್ಕೆ ಸೇರುತ್ತದೆ. ಎರಡನೆಯದು ಗರ್ಭದ ಕೊರಳಿನ ಪಕ್ಕೆಗಳಿಂದ ಆರಂಭವಾಗಿ ಸೊಂಟದ ಮೂಳೆಯ ಭಾಗವೊಂದಕ್ಕೆ ಸೇರುತ್ತದೆ. ಮೂರನೆಯದು ಗರ್ಭದ ಕೊರಳಿನ ಪಕ್ಕದಿಂದ ಮೊದಲುಗೊಂಡು ಕಿಬೊಟ್ಟೆಯ ಕೆಳಭಾಗದಲ್ಲಿ ಇರುವ ಸೊಂಟದ ಮೂಳೆಗೆ ಸೇರುತ್ತದೆ. ಗರ್ಭಿಣಿಯ ಗರ್ಭಕೋಶ ಭ್ರೂಣದ ಗಾತ್ರಕ್ಕೆ ಅನುಗುಣವಾಗು ಹಿಗ್ಗುತ್ತಾ ಹೋಗುವುದರಿಂದ ಈ ಭಾಗಗಳಿಗೆ ಯಾವ ಮುಖ್ಯ ರಜ್ಜುವೂ ಇರುವುದಿಲ್ಲ. ಆದರೆ ಗರ್ಭದ ಕೊರಳು ಸದಾ ಒಂದೇ ಜಾಗದಲ್ಲಿ ಇರುತ್ತದೆ. ಹೀಗಾಗಿ, ಮುಖ್ಯ ರಜ್ಜುಗಳು ಅದರ ಜೊತೆಗೆ ಹೊಂದಿಕೊಂಡಿರುತ್ತವೆ. ಇದರ ಜೊತೆಗೆ ಹೊಟ್ಟೆಯ ಎಲ್ಲ ಭಾಗವನ್ನೂ ಸುತ್ತುವರೆದಿರುವ ಪೆರಿಟೋನಿಯಮ್ ಎನ್ನುವ ಹಾಳೆಯಂತಹ ಪದರದ ಜೊತೆಗೂ ಗರ್ಭಕೋಶ ಹೊಂದಿಕೊಂಡು ತನ್ನ ಸ್ಥಾನದಲ್ಲಿ ತಕ್ಕಮಟ್ಟಿಗೆ ಸ್ಥಿರವಾಗಿ ಉಳಿಯುತ್ತದೆ. ಬೆನ್ನುಮೂಳೆಯ ಸ್ಥಾನಕ್ಕೆ ಹೋಲಿಸಿದರೆ ಶೇಕಡಾ 50 ಮಹಿಳೆಯರಲ್ಲಿ ಗರ್ಭಕೋಶ ಮುಂದಕ್ಕೆ ವಾಲಿರುತ್ತದೆ. ಶೇಕಡಾ 25 ರಲ್ಲಿ ಹಿಂದಕ್ಕೂ, ಉಳಿದವರಲ್ಲಿ ಮಧ್ಯಕ್ಕೂ ಇರುತ್ತದೆ.  

 

ಗರ್ಭಕೋಶದ ಎರಡೂ ಬದಿಗಳಲ್ಲಿ ಒಂದೊಂದು ಅಂಡಾಶಯವಿರುತ್ತದೆ. ಇವು ಗಂಡಿನ ದೇಹದ ವೃಷಣಕ್ಕೆ ಸಂವಾದಿ. ಅಂಡಾಶಯಕ್ಕೆ ಎರಡು ಮುಖ್ಯ ಕಾರ್ಯಗಳಿವೆ: ಭ್ರೂಣಕ್ಕೆ ಕಾರಣವಾಗುವ ಅಂಡಕೋಶವನ್ನು ಉತ್ಪಾದಿಸುವುದು ಮತ್ತು ಸ್ತ್ರೀ ದೇಹಕ್ಕೆ ಅಗತ್ಯವಾದ ಹಾರ್ಮೋನುಗಳನ್ನು ತಯಾರಿಸುವುದು. ಅಂಡಕೋಶ ಎನ್ನುವುದು ಗಂಡು ದೇಹದ ವೀರ್ಯಾಣುವಿಗೆ ಸಂವಾದಿ. ಗಂಡಿನ ದೇಹ ಕೋಟಿಗಳ ಸಂಖ್ಯೆಯಲ್ಲಿ ವೀರ್ಯಾಣುಗಳ ಉತ್ಪಾದನೆ ಮಾಡಿದರೆ, ಹೆಣ್ಣಿನ ದೇಹ ಒಂದು ಋತುಚಕ್ರಕ್ಕೆ ಸರಾಸರಿ ಒಂದು ಅಂಡಕೋಶವನ್ನು ಮಾತ್ರ ಉತ್ಪತ್ತಿ ಮಾಡುತ್ತದೆ. ಅಂಡಾಶಯಗಳಲ್ಲಿ ಸುಮಾರು ಹತ್ತು ಲಕ್ಷ ಅಂಡಕೋಶಗಳನ್ನು ಉತ್ಪತ್ತಿಸುವ ಸಾಮರ್ಥ್ಯ ಇದ್ದರೂ, ಒಂದು ಜೀವಿತಾವಧಿಯಲ್ಲಿ ಸುಮಾರು 500 ಅಂಡಕೋಶಗಳು ಮಾತ್ರ ಬಿಡುಗಡೆಯಾಗುತ್ತವೆ. ಅಂಡಕೋಶದಲ್ಲಿ ಕೇವಲ 23 ವರ್ಣತಂತುಗಳು ಇರುತ್ತವೆ. ಇದು ವೀರ್ಯಾಣುವಿನ 23 ವರ್ಣತಂತುಗಳ ಜೊತೆ ಬೆಸೆದು 46 ವರ್ಣತಂತುಗಳ ಜೀವಿಗೆ ಕಾರಣವಾಗುತ್ತದೆ. ಸುಮಾರು 120 ಮೈಕ್ರೊಮೀಟರ್ ವ್ಯಾಸ ಇರುವ ಅಂಡಕೋಶ ಮಾನವರ ದೇಹದಲ್ಲಿ ಕಾಣುವ ಅತಿ ದೊಡ್ಡ ಜೀವಕೋಶ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದು ಬರಿಗಣ್ಣಿಗೆ ಕಾಣುತ್ತದೆ ಎಂದು ತಜ್ಞರ ಅಭಿಮತ. ಒಂದು ಹೊಸ ಜೀವಿಯ ಬೆಳವಣಿಗೆಗೆ ಬೇಕಾದ ಎಲ್ಲ ಪರಿಕರಗಳೂ ಅಂಡಕೋಶದಲ್ಲಿ ಇರುತ್ತವೆ. ಇದು ಭ್ರೂಣವಾಗಲು ಕೇವಲ ಡಿ.ಎನ್.ಎ. ಮಾತ್ರ ಹೊಂದಿರುವ ವೀರ್ಯಾಣು ಸೇರಿದರೆ ಸಾಕು.

 

ಗರ್ಭಕೋಶ ಮತ್ತು ಅಂಡಾಶಯಗಳನ್ನು ಬೆಸೆಯುವುದು ಫೆಲೋಪಿಯನ್ ನಾಳಗಳು. ಗರ್ಭಕೋಶದ ಫಂಡಸ್ ಮತ್ತು ಕಾಯದ ಭಾಗಗಳು ಬೆಸೆಯುವ ಎರಡೂ ಬದಿಗಳಲ್ಲಿ ಇವು ಗರ್ಭಕೋಶದ ಒಳಭಾಗವನ್ನು ಸೇರುತ್ತವೆ. ಇವುಗಳ ಉದ್ದ ತಲಾ 10-15 ಸೆಂಟಿಮೀಟರ್, ವ್ಯಾಸ 1 ಸೆಂಟಿಮೀಟರ್. ಇದರಲ್ಲಿ ನಾಲ್ಕು ಭಾಗಗಳನ್ನು ತಜ್ಞರು ಗುರುತಿಸುತ್ತಾರೆ. ಇದರ ಮತ್ತೊಂದು ತುದಿ ಆಯಾ ಬದಿಯ ಅಂಡಾಶಯದ ಸುತ್ತ ಬೆರಳುಗಳಂತೆ ಚಾಚಿಕೊಂಡು ಇರುತ್ತದೆ.  ಈ ನಾಳಗಳ ಒಳಭಾಗದಲ್ಲಿನ ಕೋಶಗಳ ಮೇಲೆ ಉದ್ದನೆಯ ರೋಮಗಳಂತಹ ರಚನೆಗಳಿವೆ. ಅಂಡಾಶಯದಿಂದ ಅಂಡಕೋಶ ಹೊರಬಂದ ಕೂಡಲೇ ಅದನ್ನು ಫೆಲೋಪಿಯನ್ ನಾಳದ ಬೆರಳುಗಳ ರಚನೆ ಹಿಡಿದು, ನಾಳದ ಒಳಗೆ ತಳ್ಳುತ್ತದೆ. ನಾಳದ ಒಳಗಿನ ರೋಮಗಳು ಅಂಡಕೋಶವನ್ನು ತಮ್ಮ ಮೇಲೆ ಅಲೆಯಂತೆ ತೇಲಿಸುತ್ತಾ ಗರ್ಭಕೋಶದ ಕಡೆಗೆ ಒಯ್ಯುತ್ತವೆ. ಬಹುತೇಕ ಸಂದರ್ಭಗಳಲ್ಲಿ ಈ ನಾಳದ ಒಳಗೆ ಅಂಡಕೋಶ ವೀರ್ಯಾಣುವನ್ನು ಸಂಧಿಸಿ, ಭ್ರೂಣದ ಆದಿಕೋಶ ಆಗುತ್ತದೆ. ಈ ಆದಿಕೋಶ ನಿಧಾನವಾಗಿ ಹಲವು ಬಾರಿ ಇಬ್ಭಾಗಗೊಳ್ಳುತ್ತಾ, ಫೆಲೋಪಿಯನ್ ನಾಳದ ಮತ್ತೊಂದು ತುದಿಯಿಂದ ಗರ್ಭಕೋಶದಲ್ಲಿ ಇಳಿದು, ಅಲ್ಲಿ ಸ್ಥಿತವಾಗುತ್ತದೆ.  ಯಾವುದಾದರೂ ಕಾರಣಗಳಿಗೆ ಫೆಲೋಪಿಯನ್ ನಾಳಗಳ ರಚನೆಯಲ್ಲಿ ದೋಷವಿದ್ದರೆ, ಅಥವಾ ಅವುಗಳ ಒಳಭಾಗದಲ್ಲಿ ಅಂಡಕೋಶ ಸರಾಗವಾಗಿ ಸಂಚರಿಸಲು ಸಾಧ್ಯವಾಗದಂತಹ ಅಡೆತಡೆಗಳಿದ್ದರೆ ಅಂಡಕೋಶ-ವೀರ್ಯಾಣುಗಳ ಮಿಲನ ಆಗುವುದಿಲ್ಲ; ಭ್ರೂಣದ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ. ಬಂಜೆತನದ ಶೇಕಡಾ ಮೂವತ್ತು ಪ್ರಸಂಗಗಳು ಫೆಲೋಪಿಯನ್ ನಾಳದ ಸಮಸ್ಯೆಗಳಿಂದ ಆಗುತ್ತವೆ.

 

ಗರ್ಭ ಧರಿಸಿದ ನಂತರ ಗರ್ಭಕೋಶ ಹಿಗ್ಗಲು ಆರಂಭಿಸುತ್ತದೆ. ಪ್ರಸವದ ಮುನ್ನ ಗರ್ಭಕೋಶದ ತೂಕ ಸುಮಾರು 900 ಗ್ರಾಂ ಇರುತ್ತದೆ. ಸಾಮಾನ್ಯ ಸ್ಥಿತಿಯಲ್ಲಿ 60 ಗ್ರಾಂ ತೂಗುತ್ತದೆ ಎನ್ನುವ ಲೆಕ್ಕಕ್ಕೆ ಇದು 15 ಪಟ್ಟು ಹೆಚ್ಚಾಯಿತು. ಶರೀರದ ಯಾವುದೇ ಅಂಗವೂ ಇಷ್ಟು ಪ್ರಮಾಣದಲ್ಲಿ ಹಿಗ್ಗುವುದಿಲ್ಲ. ಆ ಸಮಯದಲ್ಲಿ ಹೊಟ್ಟೆಯ ಭಾಗದ ಬಹುತೇಕ ಅಂಗಗಳ ಮೇಲೆ ಗರ್ಭಕೋಶದ ಒತ್ತಡ ಬೀಳುತ್ತದೆ. ಪ್ರಸವದ ನಂತರ ಸುಮಾರು ಆರು ವಾರಗಳಲ್ಲಿ ಗರ್ಭಕೋಶದ ಗಾತ್ರ ಮೊದಲಿನಂತಾಗುತ್ತದೆ. ಪ್ರತಿಯೊಂದು ಬಾರಿ ಗರ್ಭ ಧರಿಸಿದಾಗಲೂ ಗರ್ಭಕೋಶವನ್ನು ಅದರ ಸ್ಥಾನದಲ್ಲಿ ಹಿಡಿದಿಟ್ಟುಕೊಳ್ಳುವ ರಜ್ಜುಗಳು ದುರ್ಬಲವಾಗುತ್ತವೆ. ಈ ಪ್ರಕ್ರಿಯೆ ಹಲವು ಬಾರಿ ಘಟಿಸಿದಾಗ ಗರ್ಭಕೋಶ ಸ್ವಸ್ಥಾನದಲ್ಲಿ ಭದ್ರವಾಗಿ ಉಳಿಯದೆ ಸಮಸ್ಯೆಗಳಾಗುತ್ತವೆ.

 

ಅಂಡಾಶಯದ ಮತ್ತೊಂದು ಮುಖ್ಯ ಕಾರ್ಯ ಸ್ತ್ರೀ ಹಾರ್ಮೋನುಗಳ ಉತ್ಪತ್ತಿ. ಋತುಚಕ್ರ ಆರಂಭವಾಗುವ ಕೆಲ ಮಾಸಗಳ ಮುನ್ನ ಹಾರ್ಮೋನುಗಳ ಉತ್ಪತ್ತಿ ಆರಂಭವಾಗುತ್ತದೆ. ಒಟ್ಟು 4 ಮುಖ್ಯ ಹಾರ್ಮೋನುಗಳನ್ನು ಅಂಡಾಶಯ ಉತ್ಪತ್ತಿ ಮಾಡುತ್ತದೆ. ಸ್ತ್ರೀ ಶರೀರದ ಬಾಹ್ಯ ಲಕ್ಷಣಗಳ ಬೆಳವಣಿಗೆಗೆ ಈ ಹಾರ್ಮೋನುಗಳು ಕಾರಣ. ಗರ್ಭಕೋಶ ಮತ್ತು ಅದಕ್ಕೆ ಸಂಬಂಧಿಸಿದ ಅಂಗಗಳ ಬೆಳವಣಿಗೆ ಮತ್ತು ಸರಿಯಾದ ಕಾರ್ಯವನ್ನು ನಿರ್ವಹಿಸುವುದೂ ಈ ಹಾರ್ಮೋನುಗಳೇ. ಅಂಡಾಶಯಗಳ ಹಾರ್ಮೋನ್ ಉತ್ಪತ್ತಿ ಸಾಮರ್ಥ್ಯ ಕಡಿಮೆ ಆಗುತ್ತಿದ್ದಂತೆ ರಜೋನಿವೃತ್ತಿಯಾಗಿ ಮುಟ್ಟು ನಿಲ್ಲಲು ಆರಂಭಿಸುತ್ತದೆ.

 

ಗರ್ಭದ ಗಣಿತ ಜನ್ಮಪ್ರಕ್ರಿಯೆಯಷ್ಟೇ ಸೋಜಿಗಗಳ ಗೂಡು.

----------------

ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸೆಪ್ಟಂಬರ್ 2024 ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಇಡೀ ಸಂಚಿಕೆಯನ್ನು ಉಚಿತವಾಗಿ ಓದಲು ಕೊಂಡಿ: https://www.flipbookpdf.net/web/site/c8ab7a5c527ec2a50177c77c173071c12f3661c6FBP32051436.pdf.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ