ಆರೋಗ್ಯ ಸಂಹಿತೆಗೊಂದು ಪ್ರವೇಶಿಕೆ
ನಮ್ಮ ಹಿರಿಯರು ಅನೇಕ ಬಗೆಯ ವೈರಾಗ್ಯಗಳನ್ನು
ಹೆಸರಿಸುತ್ತಾರೆ – ಪ್ರಸವ ವೈರಾಗ್ಯ, ಉದರ
ವೈರಾಗ್ಯ, ಸ್ಮಶಾನ
ವೈರಾಗ್ಯ, ಅಭಾವ ವೈರಾಗ್ಯ – ಹೀಗೆ. ಹೆರಿಗೆಯ ನೋವು ತಾಳದ ಹೆಣ್ಣು
ಮಕ್ಕಳು “ಇನ್ನು ಮುಂದೆ ನನಗೆ ಗಂಡ ಮಕ್ಕಳು ಏನೂ ಬೇಡ” ಎಂದು ನೂರು ದೇವರ ಮೇಲೆ ಆಣೆ ಮಾಡಿದರೂ,
ಆನಂತರ ಸಹಜವಾಗಿ ಏನೂ ಆಗಿಲ್ಲದಂತೆ ಸಂಸಾರಕ್ಕೆ ಹೊಂದಿಕೊಳ್ಳುತ್ತಾರೆ. ಪರಿಚಿತರು
ಯಾರಾದರೂ ಮೃತರಾದಾಗ “ಮನುಷ್ಯ ಏನು ಮಾಡಿದರೇನು? ಕಡೆಗೆಲ್ಲಾ
ಮಣ್ಣಾಗುವುದೇ. ಬದುಕಿರುವಾಗ ಒಳ್ಳೆಯ ಕೆಲಸ ಮಾಡಬೇಕು. ಕೂಡಿಟ್ಟ ಹಣ ಸತ್ತವರನ್ನು
ಹಿಂಬಾಲಿಸುವುದಿಲ್ಲ” ಎಂದೆಲ್ಲಾ ಮಾತನಾಡುವವರು ಮರುದಿನವೇ ಯಾವುದೋ ವ್ಯವಹಾರದಲ್ಲಿ ಯಾರನ್ನು
ಹೇಗೆ ಹೆಡೆಮುರಿ ಕಟ್ಟಬೇಕು ಎಂದು ಲೆಕ್ಕಾಚಾರ ಹಾಕುತ್ತಾರೆ. ಹೀಗೆ ಸಂಧರ್ಭದ ಸಾಂದ್ರತೆಯಲ್ಲಿ
ಮೂಡುವ ಹಲವು ಚಿಂತನೆಗಳು ಆಯಾ ಪ್ರಸಂಗದ ನಂತರ ದುರ್ಬಲವಾಗುತ್ತವೆ.
ಈ ಪಟ್ಟಿಗೆ ಸೇರಿಸಬಹುದಾದ ಮತ್ತೊಂದು ವೈರಾಗ್ಯ
ಎಂದರೆ – ಆಸ್ಪತ್ರೆ ವೈರಾಗ್ಯ! ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಂಧು-ಮಿತ್ರರನ್ನು ನೋಡಲು
ಬಂದವರು “ಜೀವನದಲ್ಲಿ ಎಲ್ಲಕ್ಕಿಂತ ಆರೋಗ್ಯವೇ ಮುಖ್ಯ. ಆರೋಗ್ಯ ಒಂದಿದ್ದರೆ ಅಷ್ಟಸಿರಿಗಳೂ
ಇದ್ದಂತೆ. ಆಹಾರದಲ್ಲಿ ಶಿಸ್ತು, ನಿಯಮಿತ ವ್ಯಾಯಮ ಬಹಳ ಮುಖ್ಯ. ಆರೋಗ್ಯ ವಿಮೆ ಇಲ್ಲದಿದ್ದರೆ ಈ ಕಾಲದಲ್ಲಿ ಆಸ್ಪತ್ರೆಗಳ
ದುಬಾರಿ ಖರ್ಚು ಭರಿಸಲು ಸಾಧ್ಯವಿಲ್ಲ” ಮುಂತಾಗಿ ಚರ್ಚೆ ಮಾಡುತ್ತಾರೆ. ಅಂತೆಯೇ, ಆಸ್ಪತ್ರೆಯಿಂದ ನೂರು ಮೀಟರ್ ದೂರ ಹೋದಾಗ ಸಿಗುವ ರಸ್ತೆಬದಿಯ ಪಾನಿಪೂರಿ
ತಿನ್ನುತ್ತಾರೆ. ಮರುದಿನ ಸೂರ್ಯ ನೆತ್ತಿಯ ಮೇಲೆ ಹತ್ತುವವರೆಗೆ ಹಾಸಿಗೆ ಬಿಟ್ಟು ಏಳುವುದಿಲ್ಲ.
ಆರೋಗ್ಯ ವಿಮೆಯ ಬಗ್ಗೆ ಮಾತನಾಡಿದರೆ “ನಾನು ಕಲ್ಲುಗುಂಡಿನ ಹಾಗೆ ಗಟ್ಟಿಮುಟ್ಟಾಗಿದ್ದೀನಿ.
ಬೇಡದ್ದಕ್ಕೆ ವ್ಯರ್ಥವಾಗಿ ಹಣ ಸುರಿಯಬೇಕಿಲ್ಲ” ಎನ್ನುತ್ತಾರೆ. ಇದು ನಮ್ಮ ಕಾಲದ ಆಸ್ಪತ್ರೆ
ವೈರಾಗ್ಯ!
ವಸ್ತುಸ್ಥಿತಿ ಹೀಗಿದ್ದರೂ, ಪ್ರತಿಯೊಬ್ಬರಿಗೂ ಮನಸ್ಸಿನ
ಮೂಲೆಯಲ್ಲಿ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ, ಕೊನೆಗಾಲದವರೆಗೆ ಇನ್ನೊಬ್ಬರಿಗೆ
ಹೊರೆಯಾಗದಂತೆ ತಮ್ಮ ದೇಹ-ಮನಸ್ಸುಗಳನ್ನು ನಿರ್ವಹಿಸುವ, ಶಿಸ್ತುಬದ್ಧ
ಜೀವನ ನಡೆಸುವ ಆಶಯ ಇದ್ದೇ ಇರುತ್ತದೆ. ಆದರೆ ಬಹುತೇಕರಿಗೆ ಸೂಕ್ತ ಸಲಹೆ ದೊರೆಯುವುದು ಬಹಳ ಕಷ್ಟ.
ದಶಕಗಳ ಹಿಂದೆ ಮನೆಯ ಮತ್ತೋರ್ವ ಸದಸ್ಯನಂತೆ ಇರುತ್ತಿದ್ದ, ಎಲ್ಲ ರೀತಿಯ
ಆರೋಗ್ಯ ಸಮಸ್ಯೆಗಳಿಗೂ ಸೂಕ್ತ ಪರಿಹಾರ ನೀಡಬಲ್ಲವರಾಗಿದ್ದ “ಕುಟುಂಬ ವೈದ್ಯರು”, ಸೂಪರ್-ಸ್ಪೆಷಲಿಷ್ಟ್ ವೈದ್ಯರ ಭರಾಟೆಯ ಇಂದಿನ ಯುಗದಲ್ಲಿ ಕಣ್ಮರೆಯಾಗಿದ್ದಾರೆ. ಸೂಪರ್-ಸ್ಪೆಷಲಿಷ್ಟ್
ವೈದ್ಯರಲ್ಲಿ ಬಹುತೇಕರು ತಮ್ಮ ಪರಿಣತಿಯ ಕ್ಷೇತ್ರದ ಯಾವುದೇ ರೋಗವನ್ನಾದರೂ ಗುಣಪಡಿಸಬಲ್ಲವರಾದರೂ,
ರೋಗ ಬಾರದಂತೆ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ಸೂತ್ರಗಳನ್ನು
ಬೋಧಿಸುವಷ್ಟು ಸಮಯ ಕೊಡುವುದು ಅಪರೂಪ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣುವ “ತಜ್ಞರು”
ಹೇಳಿದ್ದನ್ನು ಪಾಲಿಸಿ ಇದ್ದಬದ್ದ ಆರೋಗ್ಯವನ್ನೂ ಕಳೆದುಕೊಂಡವರು ಅದೆಷ್ಟೋ ಮಂದಿ. ಆರೋಗ್ಯಕ್ಕೆ
ಸಂಬಂಧಿಸಿದ ಬಿಡಿ-ಬಿಡಿ ಪುಸ್ತಕಗಳು ಇವೆಯಾದರೂ, ಅಂತಹ ಅನೇಕ
ಪುಸ್ತಕಗಳಲ್ಲಿ ಹರಿದು ಹಂಚಿಹೋಗಿರುವ ಸಮಗ್ರ ಆರೋಗ್ಯ ರಕ್ಷಣೆಯ ಮಾಹಿತಿಯನ್ನು
ಒಗ್ಗೂಡಿಸಿಕೊಳ್ಳುವುದು ಸಾಮಾನ್ಯ ಓದುಗರ ವ್ಯಾಪ್ತಿಯನ್ನು ಮೀರಿದ್ದು.
ಈ ನಿರ್ವಾತವನ್ನು ತುಂಬಲು ಬಂದಿರುವ ಕೃತಿ
“ಆರೋಗ್ಯ ಸಂಹಿತೆ”. ಇಂತಹ ಸಮಗ್ರ,
ಸಮರ್ಥ ಕೃತಿಯನ್ನು ಕನ್ನಡದಲ್ಲಿ ಬರೆಯಬಲ್ಲ ವೈದ್ಯ ಸಾಹಿತಿಗಳ ಪೈಕಿ
ಅಗ್ರಪಂಕ್ತಿಯಲ್ಲಿ ಇರುವವರು ಡಾ. ನಾ. ಸೋಮೇಶ್ವರರು. ಅವರ ದಶಕಗಳ ವೈದ್ಯಕೀಯ ಪರಿಣತಿ, ವಿಸ್ತಾರವಾದ ಓದು, ಸಾವಿರಾರು ಜನರೊಡನೆ ಒಡನಾಡಿದ ಜೀವನಾನುಭವ,
ಕ್ಲಿಷ್ಟಕರ ಪರಿಭಾಷೆಗಳನ್ನು ಸರಳವಾಗಿ ನಿರೂಪಿಸಬಲ್ಲ ಕಲೆಗಾರಿಕೆ, ಸುಲಲಿತವಾದ ಕನ್ನಡದಲ್ಲಿ ಆಸಕ್ತಿಕರವಾಗಿ ಓದುಗರನ್ನು ತಲುಪಬಲ್ಲ ಸಾಮರ್ಥ್ಯ –
ಇವೆಲ್ಲವೂ ಪಾಕವಾಗಿ ಪ್ರಸ್ತುತ “ಆರೋಗ್ಯ ಸಂಹಿತೆ” ರೂಪುಗೊಂಡಿದೆ.
“ಆರೋಗ್ಯ ಸಂಹಿತೆ” ಓದುಗರ ನಿರ್ದಿಷ್ಟ ಆರೋಗ್ಯ
ಸಮಸ್ಯೆಗಳಿಗೆ ಪರಿಹಾರ ಹೇಳುವುದಿಲ್ಲ. ಆದರೆ ಪ್ರತಿಯೊಬ್ಬರಿಗೂ ಆರೋಗ್ಯವನ್ನು ಹೇಗೆ
ಕಾಪಾಡಿಕೊಳ್ಳಬೇಕೆಂಬ ಅರಿವು ಮೂಡಿಸುತ್ತದೆ. ಆರೋಗ್ಯ ಎಂದರೇನು ಎನ್ನುವುದರಿಂದ ಹಿಡಿದು, ಆರೋಗ್ಯ ರಕ್ಷಣೆಯ
ಪ್ರತಿಯೊಂದು ಆಯಾಮವನ್ನೂ ಈ ಕೃತಿ ಓದುಗರಿಗೆ ತಿಳಿಸಿಕೊಡುತ್ತದೆ. ನೀವು ನಿರೋಗಿಗಳಾದರೆ,
ಕಾಯಿಲೆ ಕಾಡದಂತೆ ನಿಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ಹೇಗೆ; ನಿಮಗೆ ಈಗಾಗಲೇ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ, ಅದನ್ನು
ನಿಭಾಯಿಸುತ್ತಾ, ಚೆನ್ನಾಗಿ ಬದುಕುವುದು ಹೇಗೆ; ವಾಸಿಯಾಗದ ದೀರ್ಘಕಾಲಿಕ ಕಾಯಿಲೆಗಳ ನಿರ್ವಹಣೆ ಮತ್ತು ಸಹಬಾಳ್ವೆ ಹೇಗೆ – ಈ ಮೊದಲಾದ ವಿಷಯಗಳನ್ನು ನಿರಾಯಾಸ ಶೈಲಿಯಲ್ಲಿ, ಆಚರಣೆಗೆ
ಅನುಕೂಲವಾದ ಸರಳ ವಿಧಾನಗಳಲ್ಲಿ ಹೇಳುವುದು ಈ ಕೃತಿಯ ವೈಶಿಷ್ಟ್ಯ. ಮುಂಜಾನೆ ಎದ್ದು ಹಲ್ಲುಗಳ
ಸ್ವಚ್ಛತೆಯಿಂದ ಹಿಡಿದು ಆರೋಗ್ಯ ವಿಮೆಯವರೆಗೆ, ಸ್ನಾನದ ಅಗತ್ಯದಿಂದ
ಹಿಡಿದು ಕಾರ್ಖಾನೆಗಳ ಪರಿಸರದಲ್ಲಿ ಯಾವ ರೀತಿ ಆರೋಗ್ಯ ರಕ್ಷಣೆ ಮಾಡಬೇಕಾಗುತ್ತದೆ ಎನ್ನುವವರೆಗೆ
“ಆರೊಗ್ಯ ಸಂಹಿತೆ” ಬೆಳಕು ಚೆಲ್ಲುತ್ತದೆ.
ಈ ರೀತಿಯ ಪುಸ್ತಕಗಳ ಅಗತ್ಯವನ್ನು, ಅದರಲ್ಲೂ ದೇಶೀಯ ಭಾಷೆಗಳಲ್ಲಿ
ಇಂಥ ಮಹತ್ವದ ಮಾಹಿತಿಗಳನ್ನು ಸರಳ ಶೈಲಿಯಲ್ಲಿ ವಿವರಿಸಬಲ್ಲ ಕೃತಿಗಳ ಆವಶ್ಯಕತೆಯನ್ನು ಹೆಚ್ಚಾಗಿ
ವಿವರಿಸಲಾಗದು. ಇಂಗ್ಲೀಷಿನಲ್ಲಿ ಇಂತಹ ಕೆಲವು ಪುಸ್ತಕಗಳು ದೊರಕಬಲ್ಲವಾದರೂ, ಅವು ದೇಶ-ಕಾಲಗಳ ಪರಿಮಿತಿಯಿಂದ ನಮ್ಮ ಜನರಿಗೆ ಉಪಯುಕ್ತ ಎನ್ನಿಸದಿರಬಹುದು. ಅಮೆರಿಕ
ಮತ್ತು ಯುರೋಪು ಖಂಡಗಳ ಚಳಿದೇಶಗಳ ಆರೋಗ್ಯ ಸಮಸ್ಯೆಗಳನ್ನು ನಮ್ಮಂತಹ ಉಷ್ಣ ಮತ್ತು ಸಮಶೀತೋಷ್ಣ
ವಲಯಗಳಲ್ಲಿ ಹರಡಿರುವ ದೇಶಗಳ ಜೊತೆಗೆ ಸಮೀಕರಿಸಲು ಸಾಧ್ಯವಿಲ್ಲ. ಅವರ ಆಹಾರ, ಅವರ ಜೀವನಶೈಲಿ, ಅವರ ನಂಬಿಕೆಗಳು ನಮಗಿಂತಲೂ ಬಹಳ ಭಿನ್ನ. ಆರೋಗ್ಯ
ಎಂಬುದು ಇವೆಲ್ಲದರ ಪರಿಪಾಕದಿಂದ ಮೂಡುವ ಸಂಗತಿ. ಹೀಗಾಗಿ, ಕೆನಡಾ ದೇಶದ
ಪ್ರಜೆಗಳಿಗೆ ಯಾರೋ ಬರೆದ ಆರೋಗ್ಯ ವಿಚಕ್ಷಣೆಯ ಕೃತಿ ಸಾರಾಸಗಟಾಗಿ ನಮ್ಮ ಜನರಿಗೆ
ಅನ್ವಯವಾಗುವುದಿಲ್ಲ. ಕೆಲ ಹೊಂದಾಣಿಕೆಗಳು ಇದ್ದರೂ, ಬಹುಮಟ್ಟಿಗೆ ಅವರ
ಅಗತ್ಯಗಳು ನಮಗಿಂತಲೂ ಭಿನ್ನ. ಆರೋಗ್ಯ ವಿಮೆ ಎನ್ನುವ ಒಂದು ವಿಷಯವೇ ನಮಗೂ ಅವರಿಗೂ ಇರುವ
ಅಂತರವನ್ನು ಬಯಲು ಮಾಡುತ್ತದೆ.
ಕೆಲ ಆಯುರ್ವೇದ ಗ್ರಂಥಗಳಲ್ಲಿ ಸ್ವಸ್ಥವೃತ್ತ
ಎನ್ನುವ ಮಾಹಿತಿ ಇರುತ್ತದೆ; ದಿನನಿತ್ಯದ ನಡವಳಿಕೆಗಳನ್ನು ಯಾವ ರೀತಿ ಇಟ್ಟುಕೊಂಡರೆ ಅವು ನಮ್ಮ ಆರೋಗ್ಯ ರಕ್ಷಣೆಗೆ
ಪೂರಕವಾಗಿರಬಲ್ಲವು ಎನ್ನುವ ಸೂತ್ರಗಳ ಸಂಗ್ರಹ. ಆದರೆ ಈ ರೀತಿಯ ಸೂತ್ರಗಳು ವಿವರಣೆಯನ್ನು
ನೀಡುವುದಿಲ್ಲ. ಅವುಗಳಲ್ಲಿ ಎಷ್ಟೋ ಪ್ರಸ್ತುತ ಜೀವನಶೈಲಿಗೆ ಹೊಂದಲಾರವು. ಏನನ್ನೂ ಪ್ರಶ್ನಿಸದೆ,
ಹೇಳಿದ್ದನ್ನು ಮಾಡುವ ಪ್ರಭು ಸಮ್ಮಿತೆಯ ಶೈಲಿಯಲ್ಲಿ ಮಾತ್ರ ಅವನ್ನು
ಪಾಲಿಸಬಹುದು. ಆದರೆ ಡಾ. ನಾ. ಸೋಮೇಶ್ವರರ ಕೃತಿ ಮಿತ್ರ ಸಮ್ಮಿತೆ ಮತ್ತು ಆಚಾರ್ಯ ಸಮ್ಮಿತೆಗಳ
ಮಾದರಿಯನ್ನು ಪಾಲಿಸುತ್ತದೆ. ಕೆಲವೊಮ್ಮೆ ಗೆಳೆಯನೊಬ್ಬ ನಮ್ಮ ಒಳಿತಿನ ಬಗ್ಗೆ ಹೇಳುವ ವಿಧಾನ
ಇದ್ದರೆ, ಮತ್ತೂ ಹಲವೆಡೆ ಗುರುಗಳು ನಮ್ಮ ಯೋಗಕ್ಷೇಮಗಳನ್ನು ಮನದಟ್ಟು
ಮಾಡುವ ರೀತಿಯಲ್ಲಿ ನಿರೂಪಣೆ ಸಾಗುತ್ತದೆ.
ಇದು ಒಂದು ಬಾರಿಗೆ ಓದಿ ಮುಗಿಸುವ ಪುಸ್ತಕವಲ್ಲ; ಇದೊಂದು ರೀತಿಯ ಆಕರ ಕೃತಿ.
ಇದನ್ನು ಆಗಾಗ ಓದುತ್ತಾ ಮನದಟ್ಟು ಮಾಡಿಕೊಳ್ಳಬೇಕು. ಆರೋಗ್ಯ ರಕ್ಷಣೆಯ ಯಾವುದೇ ವಿಷಯದ ಬಗ್ಗೆ
ಅನುಮಾನ ಮೂಡಿದಾಗ, ಪುಸ್ತಕವನ್ನು ತೆರೆದು ಆ ವಿಷಯವನ್ನು ಮತ್ತೆ ಓದಿ,
ಪರಿಹಾರ ಕಂಡುಕೊಳ್ಳಬೇಕು. ಒಟ್ಟಿನಲ್ಲಿ, ಈ ಕೃತಿ
ಪ್ರತಿಯೊಬ್ಬರ ಪುಸ್ತಕದ ಕಪಾಟಿನಲ್ಲೂ ಕೈಗೆ ಎಟುಕುವಂತೆ ಸದಾ ಇರಬೇಕು. ಆ ವಿಧಾನವೇ ಕೃತಿಯ
ಸರಿಯಾದ ಮೌಲ್ಯಮಾಪನ.
ಡಾ. ಕಿರಣ್. ವಿ.ಎಸ್.
ವೈದ್ಯರು
--------------------
ಆರೋಗ್ಯ
ಸಂಹಿತೆ – ಡಾ. ನಾ. ಸೋಮೇಶ್ವರ
ಅಯೋಧ್ಯಾ
ಪ್ರಕಾಶನ, ಬೆಂಗಳೂರು
ಬೆಲೆ:
ರೂ. 250/-
ಪುಸ್ತಕ
ಖರೀದಿಸಲು ಜಾಲತಾಣ: https://www.ayodhyabooks.com/product/arogya-samhite/
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ