ಸೋಮವಾರ, ನವೆಂಬರ್ 11, 2024


 

ವೃಷಣಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಪುರುಷರ ದೇಹದ ಬಹಳ ಮುಖ್ಯ ಅಂಗ ವೃಷಣಗಳು. ಪುರುಷ ಎನ್ನುವ ಲಿಂಗ ಸ್ಥಾಪಿತವಾಗುವುದು ಈ ಅಂಗದ ಮೂಲಕವೇ. ಇದು ಸ್ತ್ರೀಯರ ದೇಹದ ಅಂಡಾಶಯಕ್ಕೆ ಸಂವಾದಿ. ಮಾನವ ಪುರುಷರಲ್ಲಿ ಸರಿಸುಮಾರು ಒಂದೇ ಗಾತ್ರದ ಎರಡು ವೃಷಣಗಳಿವೆ. ಇವು ವೀರ್ಯದ ಜೊತೆಗೆ ಪುರುಷ ಹಾರ್ಮೋನುಗಳನ್ನೂ ಉತ್ಪಾದಿಸುತ್ತವೆ. ವೃಷಣಗಳ ಗಣಿತದ ಬಗ್ಗೆ ಒಂದು ನೋಟ.

ಪ್ರತಿಯೊಂದು ವೃಷಣವೂ ಸರಾಸರಿ 5 ಸೆಂಟಿಮೀಟರ್ ಉದ್ದ, 3 ಸೆಂಟಿಮೀಟರ್ ಅಗಲ ಮತ್ತು 2 ಸೆಂಟಿಮೀಟರ್ ದಪ್ಪ ಇರುತ್ತದೆ. ಒಂದು ವೃಷಣದ ಸರಾಸರಿ ಘನ ಅಳತೆ 18 ಕ್ಯುಬಿಕ್ ಸೆಂಟಿಮೀಟರ್. ಒಂದು ಹಂತದವರೆಗೆ ವೃಷಣದ ಗಾತ್ರ ಹೆಚ್ಚು ಇದ್ದಷ್ಟೂ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಕೆಲ ಕಾಯಿಲೆಗಳಲ್ಲಿ ಇದು 12 ಕ್ಯುಬಿಕ್ ಸೆಂಟಿಮೀಟರ್ ಗಿಂತಲೂ ಕಡಿಮೆ ಇರುತ್ತವೆ. ಇನ್ನೂ ಕೆಲ ಸಂದರ್ಭಗಳಲ್ಲಿ ಇದು 30 ಕ್ಯುಬಿಕ್ ಸೆಂಟಿಮೀಟರ್ ಗಿಂತಲೂ ಹೆಚ್ಚಿರುತ್ತದೆ. ಇವೆರಡೂ ಅತಿರೇಕಗಳೂ ಅನಾರೋಗ್ಯದ ಸೂಚಕಗಳು. ವೃಷಣಗಳ ಗಾತ್ರವನ್ನು ಅಳೆಯುವುದಕ್ಕೆ ಬಹಳ ಕಾಲ ಆರ್ಕಿಡೋಮೆಟರ್ ಎನ್ನುವ ಸಾಧನದ ಬಳಕೆ ಇತ್ತು. ಈಚಿನ ದಿನಗಳಲ್ಲಿ ಶ್ರವಣಾತೀತ ತರಂಗಗಳ ಸ್ಕ್ಯಾನಿಂಗ್ ಮೂಲಕ ಈ ಗಾತ್ರವನ್ನು ಮತ್ತೂ ನಿರ್ದಿಷ್ಟವಾಗಿ ಅಳೆಯಲು ಸಾಧ್ಯವಾಗಿದೆ.

ಭ್ರೂಣದ ಆರಂಭದ ಹಂತದಲ್ಲಿ ಸಂತಾನಾಭಿವೃದ್ಧಿ ಅಂಗಗಳಿಗೆ ಮೀಸಲಾದ ಕೋಶಗಳು ಅಂಡಾಶಯವಾಗುವ ದಿಕ್ಕಿನಲ್ಲಿ ಮುನ್ನಡೆಯುತ್ತವೆ. ಒಂದು ವೇಳೆ ಭ್ರೂಣದ ವರ್ಣತಂತುಗಳಲ್ಲಿ Y ಎನ್ನುವ ವರ್ಣತಂತು ಇದ್ದರೆ ಈ ಕೋಶಗಳು ಒಂದು ಹಂತದಲ್ಲಿ ವೃಷಣಗಳಾಗಿ ಪರಿವರ್ತಿತವಾಗುತ್ತವೆ. Y ವರ್ಣತಂತು ಇಲ್ಲವಾದಲ್ಲಿ ಅದು ಅಂಡಾಶಯವಾಗಿಯೇ ಬೆಳೆಯುತ್ತದೆ. ಅಂದರೆ, ಪುರುಷ ವರ್ಣತಂತು ಇರದಿದ್ದರೆ ನಿಸರ್ಗದ ಸಹಜ ಲಿಂಗ ಸ್ತ್ರೀ.

ವೃಷಣ ಪುರುಷ ಶರೀರದ ಪಾಲಿಗೆ ಬಹಳ ಮುಖ್ಯ ಅಂಗ. ಹೀಗಾಗಿ, 3 ವಿವಿಧ ಎಡೆಗಳಿಂದ ಅವುಗಳ ರಕ್ತಸಂಚಾರ ಆಗುತ್ತದೆ. ಈ ಮೂರರ ಪೈಕಿ ಮುಖ್ಯ ರಕ್ತನಾಳ ಖುದ್ದು ಮಹಾಧಮನಿ ಅಯೋರ್ಟಾದಿಂದಲೇ ಬರುತ್ತದೆ. ಮಾನವ ಶರೀರದಲ್ಲಿ ಪ್ರೋಟೀನ್ಗಳನ್ನು ತಯಾರಿಸುವ ಸುಮಾರು 20,000 ಬಗೆಯ ಜೀನ್ಗಳು ಇವೆ. ಇವುಗಳ ಪೈಕಿ ಶೇಕಡಾ 80 ರಷ್ಟು ಜೀನ್ಗಳು ವೃಷಣದಲ್ಲಿ ಕಾಣುತ್ತವೆ. ಇದು ಶರೀರದ ಬೇರೆ ಯಾವುದೇ ಅಂಗಕ್ಕಿಂತಲೂ ಹೆಚ್ಚು. ವೃಷಣಗಳಿಗೆ ಸಂಬಂಧಿಸಿದಂತೆ ಸುಮಾರು 1000 ವಿಶಿಷ್ಟ ಜೀನ್ಗಳಿವೆ. ಮಿದುಳನ್ನೂ ಸೇರಿಸಿ ಬೇರೆ ಯಾವುದೇ ಅಂಗಕ್ಕೂ ಇಷ್ಟೊಂದು ಭಾಗ್ಯವಿಲ್ಲ! ಮಿದುಳಿಗೆ ಇಂತಹ ಕೇವಲ 320 ಜೀನ್ಗಳು ಲಭ್ಯವಾಗಿವೆ. ಈ 1000 ಜೀನ್ಗಳ ಪೈಕಿ ಬಹುತೇಕವು ವೀರ್ಯಾಣುಗಳ ಉತ್ಪತ್ತಿಗೆ ಸಂಬಂಧಿಸಿದವು. ಇಂತಹ ಅನೇಕ ಪ್ರೋಟೀನ್ಗಳನ್ನು ವೀರ್ಯಾಣುಗಳು ತಮ್ಮ ಬಾಲದ ತಯಾರಿಕೆಗೆ ಬಳಸುತ್ತವೆ. ಈ ಬಾಲದ ಚಲನೆಯಿಂದಲೇ ವೀರ್ಯಾಣುಗಳಿಗೆ ಅಂಡಾಶಯವನ್ನು ಅರಸಿ ಮುನ್ನುಗ್ಗುವ ಸಾಮರ್ಥ್ಯ ಲಭಿಸುತ್ತದೆ. ಒಮ್ಮೆ ಅಂಡಾಶಯವನ್ನು ತಲುಪಿದ ಕೂಡಲೇ ವೀರ್ಯಾಣುಗಳ ಬಾಲ ತಂತಾನೇ ಕಳಚಿಕೊಳ್ಳುತ್ತದೆ. ಹೀಗೆ, ಅತ್ಯಲ್ಪ ಕಾಲದ, ಆದರೆ ಅತ್ಯಂತ ಮಹತ್ವದ ಕೆಲಸವೊಂದಕ್ಕೆ ಶರೀರ ಅತಿ ಹೆಚ್ಚು ಜೀನ್ಗಳನ್ನು ಮೀಸಲಿಟ್ಟಿದೆ. ಅಂದರೆ, ಶರೀರದ ಪ್ರಥಮ ಆದ್ಯತೆ ಸಂತಾನೋತ್ಪತ್ತಿ; ಸಕಲ ಚಯಾಪಚಯಗಳನ್ನು ನಿಯಂತ್ರಿಸುವ ಮಿದುಳಿಗೆ ಇದರ ನಂತರದ ಆದ್ಯತೆ. 

ಸಾಮಾನ್ಯವಾಗಿ ಶರೀರದ ಎಲ್ಲ ಮುಖ್ಯ ಅಂಗಗಳನ್ನೂ ನಿಸರ್ಗ ಬಹಳ ಜೋಪಾನವಾಗಿ, ಹಲವಾರು ಮಟ್ಟದ ರಕ್ಷಣೆ ಕೊಟ್ಟು ಕಾಪಾಡುತ್ತದೆ. ಉದಾಹರಣೆಗೆ, ಮಿದುಳಿಗೆ ಹಲವಾರು ಮೂಳೆಗಳ ಹೊರವ್ಯೂಹದ ಜೊತೆಗೆ ಆಘಾತಗಳನ್ನು ಹೀರಿಕೊಳ್ಳುವಂತಹ ವಿಶೇಷ ದ್ರವ ಇರುವ 2 ಪದರಗಳ ಬಾಹ್ಯ ಆವರಣವಿದೆ. ಹೃದಯಕ್ಕೆ ಇಂತಹುದೇ ದ್ರವದ ಆವರಣವಿದ್ದು, ಎದೆಗೂಡಿನಲ್ಲಿ ಎಲುಬುಗಳ ಹಂದರದ ಜೊತೆಗೆ 2 ಪದರಗಳ ಮಾಂಸಖಂಡಗಳಿವೆ. ಆದರೆ, ವೃಷಣಗಳು ನಿಸರ್ಗದ ಪಾಲಿಗೆ ಉಳಿದ ಯಾವುದೇ ಅಂಗಕ್ಕಿಂತಲೂ ಅತ್ಯಂತ ಮುಖ್ಯ ಅಂಗಗಳಾದರೂ ಅವುಗಳಿಗೆ ಪ್ರಕೃತಿ ಕಲ್ಪಿಸಿರುವ ರಕ್ಷಣೆ ಏನೇನೂ ಸಾಲದು. ಹೊಟ್ಟೆಯ ಭಾಗದಲ್ಲಿರುವ ಚರ್ಮ ಒಂದು ಚೀಲದ ರೂಪದಲ್ಲಿ ಶರೀರದ ಇತರ ಅಂಗಗಳಿಂದ ಪ್ರತ್ಯೇಕವಾಗಿ ವೃಷಣಗಳಿಗೆ ಮನೆಯಾಗುತ್ತದೆ. ಇದನ್ನು ವೃಷಣ ಸಂಚಿ ಎನ್ನಬಹುದು. ಇದಕ್ಕೆ ಪ್ರತ್ಯೇಕ ರಕ್ತ ಸಂಚಾರವಿದೆ. ಅಂಡಾಕಾರದ ವೃಷಣಗಳು ಈ ಸಂಚಿಯಲ್ಲಿ ಒಂದೇ ಮಟ್ಟದಲ್ಲಿ ಇರುವುದಿಲ್ಲ. ಬಹುತೇಕ ಪುರುಷರಲ್ಲಿ ಬಲ ವೃಷಣ ಸ್ವಲ್ಪ ಕೆಳಮಟ್ಟದಲ್ಲಿ ಇರುತ್ತದೆ. ಈ ಚೀಲಕ್ಕೆ ಯಾವುದೇ ಎಲುಬು ಗೂಡಿನ, ವಿಶಿಷ್ಟ ದ್ರವ ಪದರದ ರಕ್ಷಣೆ ಇಲ್ಲ. ಇದರ ಸುತ್ತಲೂ ಯಾವುದೇ ಗಟ್ಟಿಯಾದ ಮಾಂಸಖಂಡದ ಆಸರೆ ಇಲ್ಲ. ಕಡೆಗೆ ತುಸು ಆಘಾತವನ್ನಾದರೂ ಸಹಿಸಬಲ್ಲ ಗಟ್ಟಿಯಾದ ಚರ್ಮವೂ ಇಲ್ಲ. ಮಿದುಳನ್ನು ಹೊರಗಿನಿಂದ ಸ್ಪರ್ಶಿಸಲೂ ಸಾಧ್ಯವಿಲ್ಲದಷ್ಟು ರಕ್ಷಣೆ ಇದ್ದರೆ, ವೃಷಣಗಳನ್ನು ಮಾತ್ರ ಚೀಲದ ಮೂಲಕ ನೇರವಾಗಿ ಮುಟ್ಟಬಹುದು. ಅಂದರೆ, ಚೀಲದ ಒಳಗೂ ವೃಷಣಗಳನ್ನು ಯಾವುದೇ ಗಟ್ಟಿ ಆವರಣವೂ ಸುತ್ತುವರಿದಿಲ್ಲ. ಬಿಳಿಯ ಬಣ್ಣದ ತೆಳುವಾದ ಪರದೆಯೊಂದು ವೃಷಣದ ಕೆಲಭಾಗವನ್ನು ಆವರಿಸಿರುತ್ತದೆ. ಈ ಪರದೆಯ ಅಡಿಯಲ್ಲೇ ವೀರ್ಯಾಣುಗಳನ್ನು ಉತ್ಪಾದಿಸುವ ನಾಳಗಳು ಇರುತ್ತವೆ. ಒಟ್ಟಾರೆ, ಸರಿಯಾದ ಬಾಹ್ಯ ರಕ್ಷಣೆಯನ್ನು ನಾವೇ ನಾವಾಗಿ ನೀಡದಿದ್ದರೆ ವೃಷಣಗಳ ಮೇಲೆ ಆಗುವ ಯಾವುದೇ ಸಣ್ಣ ಆಘಾತವೂ ಅವುಗಳ ಪಾಲಿಗೆ ಅಪಾಯಕಾರಿಯಾಗಬಹುದು. ಎಷ್ಟೋ ಅಪಘಾತಗಳಲ್ಲಿ ಉಳಿದ ಅಂಗಗಳು ಸುರಕ್ಷಿತವಾಗಿದ್ದರೂ ವೃಷಣಗಳು ಜರ್ಜರಿತವಾಗುತ್ತವೆ. ನಿಸರ್ಗ ವೃಷಣಗಳ ವಿಷಯದಲ್ಲಿ ಇಷ್ಟು ಅಜಾಗರೂಕವಾಗಲು ಏನಾದರೂ ಕಾರಣವಿದೆಯೇ ಎನ್ನುವ ಸಂದೇಹ ಸಹಜ. ಇದಕ್ಕೆ ಮಹತ್ವದ ಕಾರಣವಿದೆ.

ವೃಷಣಗಳಲ್ಲಿನ ವೀರ್ಯೋತ್ಪಾದನೆ ಸಕ್ಷಮವಾಗಿ ಆಗಲು ಅದಕ್ಕೆ ಶರೀರದ ತಾಪಮಾನಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನದ ಅಗತ್ಯವಿದೆ. ಈ ಕಾರಣಕ್ಕಾಗಿ ವೃಷಣಗಳ ಚೀಲ ಅವನ್ನು ಶರೀರದ ಇತರ ಭಾಗಗಳಿಗಿಂತಲೂ ಸ್ವಲ್ಪ ದೂರದಲ್ಲಿ ಇಟ್ಟಿರುತ್ತದೆ. ವೃಷಣಗಳ ಚೀಲದಲ್ಲಿನ ಮಾಂಸಪಟ್ಟಿಗಳು ಸಹಜ ಸ್ಥಿತಿಯಲ್ಲಿ ಇರುವಾಗ ಅದು ದೊಗಳೆಯಾಗಿರುತ್ತದೆ. ಆ ಸಮಯದಲ್ಲಿ ವೃಷಣಗಳ ತಾಪಮಾನ ಉಳಿದ ಶರೀರಕ್ಕಿಂತಲೂ ಸುಮಾರು 3-4 ಡಿಗ್ರಿ ಕಡಿಮೆ ಇರುತ್ತದೆ. ಅಧಿಕ ತಾಪಮಾನದ ಅಗತ್ಯ ಇದ್ದಾಗ ಮಾಂಸಪಟ್ಟಿಗಳು ಸೆಟೆದುಕೊಳ್ಳುತ್ತವೆ. ಆಗ ವೃಷಣದ ಚೀಲ ಸ್ವಲ್ಪ ಮೇಲಿನ ಸ್ಥಾನಕ್ಕೆ ಬರುತ್ತದೆ. ಇದರಿಂದ ವೃಷಣಗಳ ತಾಪಮಾನ ಏರುತ್ತದೆ. ಚಳಿಗಾಲ, ಬೇಸಿಗೆಗಳಲ್ಲಿ ಇದರ ಪರಿಣಾಮ ಗೋಚರಿಸುತ್ತದೆ. ಮಧ್ಯಾಹ್ನ ಮತ್ತು ಸಂಜೆಯ ವೇಳೆ ಕೂಡ ಈ ಪ್ರಕ್ರಿಯೆಯನ್ನು ಕಾಣಬಹುದು.

ವೃಷಣಗಳ ಅತಿ ಮುಖ್ಯ ಕೆಲಸ ವೀರ್ಯದ ಉತ್ಪಾದನೆ. ಈ ಪ್ರಕ್ರಿಯೆಯಲ್ಲಿನ ಮೂಲ ಕೋಶಗಳು ಒಟ್ಟು 5 ಹಂತಗಳನ್ನು ದಾಟಿ ವೀರ್ಯಾಣುಗಳಾಗುತ್ತವೆ. ಪ್ರತಿದಿನವೂ ಸುಮಾರು 20 ಕೋಟಿ ವೀರ್ಯಾಣುಗಳು ವೃಷಣಗಳಲ್ಲಿ ಉತ್ಪತ್ತಿಯಾಗುತ್ತವೆ. ಒಂದು ಸ್ಖಲನದಲ್ಲಿ ಸುಮಾರು 4 ಕೋಟಿಯಿಂದ 12 ಕೋಟಿ ವೀರ್ಯಾಣುಗಳು ಬಿಡುಗಡೆಯಾಗುತ್ತವೆ. ಜೀವಮಾನದುದ್ದಕ್ಕೂ ಓರ್ವ ಆರೋಗ್ಯವಂತ ಪುರುಷನಲ್ಲಿ ಸುಮಾರು 50,000 ಕೋಟಿ ವೀರ್ಯಾಣುಗಳನ್ನು ಉತ್ಪಾದಿಸಬಲ್ಲ ಸಾಮರ್ಥ್ಯ ಇರುತ್ತದೆ. ವೀರ್ಯಾಣುಗಳು ಪುರುಷ ಶರೀರದ ಯಾವುದೇ ಜೀವಕೋಶಕ್ಕಿಂತಲೂ ಭಿನ್ನ. ವೀರ್ಯಾಣುವಿನಲ್ಲಿ ಕೇವಲ ಡಿ.ಎನ್.ಎ. ಮಾತ್ರ ಇರುತ್ತದೆ. ಸಾಮಾನ್ಯ ಜೀವಕೋಶಗಳಲ್ಲಿ ಕಾಣುವ ಬೇರಾವುದೇ ರಚನೆಗಳೂ ವೀರ್ಯಾಣುಗಳಲ್ಲಿ ಇರುವುದಿಲ್ಲ. ಪ್ರತಿಯೊಂದು ವೀರ್ಯಾಣುವಿನಲ್ಲಿಯೂ ಸುಮಾರು 37.5 ಮೆಗಾಬೈಟ್ ನಷ್ಟು ದತ್ತಾಂಶ ಇರುತ್ತದೆ ಎಂದು ಸಂಶೋಧಕರು ಲೆಕ್ಕ ಹಾಕಿದ್ದಾರೆ. ಬೇರೆಲ್ಲ ಜೀವಕೋಶಗಳಲ್ಲಿ 46 ವರ್ಣತಂತುಗಳು ಇದ್ದರೆ, ವೀರ್ಯಾಣುವಿನಲ್ಲಿ ಕೇವಲ 23 ಇರುತ್ತವೆ. ಅಂತೆಯೇ, ಸ್ತ್ರೀ ಶರೀರದ ಅಂಡಾಣುವಿನಲ್ಲಿಯೂ 23 ವರ್ಣತಂತುಗಳು ಇರುತ್ತವೆ. ಈ ಎರಡೂ ಕೋಶಗಳೂ ಬೆರೆತಾಗ 46 ವರ್ಣತಂತುಗಳು ಇರುವ ಜೀವಕೋಶಗಳು ಮತ್ತೆ ಸ್ಥಾಪಿತವಾಗುತ್ತವೆ. ವೀರ್ಯಾಣುವಿನ ರಚನೆಯ ಭಿನ್ನತೆಯ ಕಾರಣ ನಮ್ಮ ಶರೀರದ ರಕ್ಷಕ ವ್ಯವಸ್ಥೆ ಇದನ್ನು “ಪರಕೀಯ ಕೋಶ” ಎಂದೇ ಭಾವಿಸುತ್ತದೆ. ಹೀಗಾಗಿ, ವೀರ್ಯಾಣುಗಳು ಯಾವುದೇ ಕಾರಣಕ್ಕೂ ರಕ್ತದ ಸಂಪರ್ಕಕ್ಕೆ ನೇರವಾಗಿ ಬರಬಾರದು. ಇದನ್ನು ನಿರ್ವಹಿಸಲು ಶರೀರ ವೀರ್ಯಾಣುಗಳ ಸೃಷ್ಟಿ, ನಿರ್ವಹಣೆ, ಮತ್ತು ನಿರ್ಗಮನದ ಬಹುತೇಕ ದಾರಿಗೆ ಪ್ರತ್ಯೇಕ ರಚನೆಯನ್ನು ನಿರ್ಮಿಸಿದೆ. ಈ ಹಾದಿಯಲ್ಲಿ ವೀರ್ಯಾಣುಗಳನ್ನು ಹೊರತುಪಡಿಸಿದರೆ, ಅವುಗಳ ಪೋಷಣೆಗೆ ಅಗತ್ಯವಾದ ದ್ರವಗಳು ಮಾತ್ರ ಇರುತ್ತವೆ. ಬೇರೆ ಯಾವ ಕೋಶಗಳಿಗೂ ಅಲ್ಲಿ ಆಸ್ಪದವಿಲ್ಲ.   

ವೃಷಣಗಳ ಮತ್ತೊಂದು ಕೆಲಸವೆಂದರೆ ಪುರುಷ ಹಾರ್ಮೋನುಗಳ ತಯಾರಿಕೆ. ಪುರುಷ ಶರೀರದ ಬಾಹ್ಯ ಲಕ್ಷಣಗಳು ಗೋಚರಿಸುವುದು ಈ ಹಾರ್ಮೋನುಗಳ ಮೂಲಕವೇ. ಪುರುಷತ್ವ ಎನ್ನುವ ಪರಿಭಾಷೆ ಒದಗುವುದು ಈ ಹಾರ್ಮೋನುಗಳಿಂದ. ಈ ಹಾರ್ಮೋನುಗಳನ್ನು ತಯಾರಿಸುವುದು ವೃಷಣಗಳಲ್ಲಿನ ಕೆಲವು ವಿಶಿಷ್ಟ ಕೋಶಗಳು. ಇವು ವೀರ್ಯಾಣು ಉತ್ಪಾದಕ ಕೋಶಗಳಿಗಿಂತಲೂ ಭಿನ್ನವಾದರೂ ಅವುಗಳ ನಡುವೆಯೇ ಇರುತ್ತವೆ. ಸುಮಾರು 5 ಬಗೆಯ ಪುರುಷ ಹಾರ್ಮೋನುಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 3 ಪ್ರಮುಖವಾದುವು.

ವೃಷಣಗಳ ಗಣಿತ ಅದರ ಕೆಲಸದಷ್ಟೇ ಮಹತ್ವದ್ದು.

----------------------------

ಕುತೂಹಲಿಯ ಆಗಸ್ಟ್ 2024 ರಲ್ಲಿ ಪ್ರಕಟವಾದ ಲೇಖನ. ಇಡೀ ಸಂಚಿಕೆಯನ್ನು ಉಚಿತವಾಗಿ ಓದಲು ಕೊಂಡಿ: https://www.flipbookpdf.net/web/site/7bb8f7afb3751ee623fcdcb690bdb7619912ec3aFBP32051436.pdf.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ