ಹಲ್ಲುಗಳ ಗಣಿತ
ಡಾ. ಕಿರಣ್ ವಿ.ಎಸ್.
ವೈದ್ಯರು
ಹಲವಾರು ಬಗೆಯ ಅಂಗಾಂಶಗಳನ್ನು ಹೊಂದಿರುವ ನಮ್ಮ
ಶರೀರದಲ್ಲಿ ಅತ್ಯಂತ ಗಡುಸಾದ ಅಂಗಾಂಶ ಎಲ್ಲಿದೆ?
ಮೂಳೆ? ಉಗುರು? ಕೀಲು?
ಸ್ನಾಯು? ಸರಿಯಾದ ಉತ್ತರ: ಹಲ್ಲು. ನಮ್ಮ
ಹಲ್ಲಿನಲ್ಲಿರುವ ಎನಾಮೆಲ್ ಇಡೀ ಶರೀರದ ಅತ್ಯಂತ ಗಡುಸಾದ, ಅತಿ ಹೆಚ್ಚಿನ
ಖನಿಜಯುಕ್ತ ಅಂಗಾಂಶ. ನಮ್ಮ ಹಲ್ಲುಗಳು ಅಚ್ಚರಿಗಳ ಆಗರ. ಇವುಗಳ ಗಣಿತೀಯ ಮಾಹಿತಿಯತ್ತ ಒಂದು ನೋಟ
ಇಲ್ಲಿದೆ.
ನಾವು ಸೇವಿಸುವ ಆಹಾರವನ್ನು ಸಣ್ಣ ಸಣ್ಣ
ಚೂರುಗಳಾಗಿ ವಿಭಜಿಸುವ ಹೊಣೆಗಾರಿಕೆ ಹಲ್ಲುಗಳದ್ದು. ಆಹಾರಗಳ ವೈವಿಧ್ಯದಂತೆ ಹಲ್ಲುಗಳ ರಚನೆಯೂ
ವಿಭಿನ್ನ. ಬಾಯಿಯಲ್ಲಿ ಇರುವ ಒಟ್ಟು 32 ಹಲ್ಲುಗಳನ್ನು ರಚನೆಯ ಪ್ರಭೇದದಂತೆ 4 ಗುಂಪುಗಳನ್ನಾಗಿ
ವಿಂಗಡಿಸಬಹುದು – ಮೇಲ್ದವಡೆಯ ಬಲಭಾಗದ 8;
ಎಡಭಾಗದ 8 ಮತ್ತು ಕೆಳದವಡೆಯ ಬಲಭಾಗದ 8; ಎಡಭಾಗದ 8.
ಹೀಗೆ 8 ಹಲ್ಲುಗಳ ಒಂದು ಗುಂಪಿನಲ್ಲಿ 4 ವಿವಿಧ ಆಕಾರಗಳ ಹಲ್ಲುಗಳಿವೆ – ಮಧ್ಯದಲ್ಲಿರುವ 2 ಬಾಚಿಹಲ್ಲುಗಳ
ಕೆಲಸ ಆಹಾರವನ್ನು ಕತ್ತರಿಸುವುದು. ಒಂದು ಕೋರೆಹಲ್ಲು ಆಹಾರವನ್ನು ಸಿಗಿಯುತ್ತದೆ. ಎರಡು ಅರೆದವಡೆ
ಹಲ್ಲುಗಳು ಮತ್ತು ಮೂರು ದವಡೆ ಹಲ್ಲುಗಳು ಆಹಾರವನ್ನು ಅರೆಯುತ್ತವೆ. ಹೀಗೆ ಇಡೀ ಬಾಯಿಯಲ್ಲಿ 8
ಬಾಚಿ ಹಲ್ಲುಗಳು, 4 ಕೋರೆ ಹಲ್ಲುಗಳು, 8 ಅರೆದವಡೆ
ಹಲ್ಲುಗಳು ಮತ್ತು 12 ದವಡೆ ಹಲ್ಲುಗಳು ಸೇರಿ 32 ಹಲ್ಲುಗಳಾಗುತ್ತವೆ.
ಬಹುತೇಕ ಸ್ತನಿಗಳಂತೆ ಮಾನವರಲ್ಲೂ ಹಲ್ಲುಗಳು
ಎರಡು ಬಾರಿ ಹುಟ್ಟುತ್ತವೆ. ಮೊದಲ ಬಾರಿ ಹುಟ್ಟುವ ಹಾಲುಹಲ್ಲುಗಳು ಒಟ್ಟು 20 ಇರುತ್ತವೆ.
ಇವೆಲ್ಲವೂ ಕಾಲಕ್ರಮೇಣ ಬಿದ್ದು, ಆ ಸ್ಥಾನದಲ್ಲಿ 32 ಹೊಸ ಹಲ್ಲುಗಳು ಬರುತ್ತವೆ. ಇವು ಬಿದ್ದರೆ ಪುನಃ ಹಲ್ಲು
ಬರುವುದಿಲ್ಲವಾದ್ದರಿಂದ ಇವನ್ನು ಖಾಯಂ ಹಲ್ಲುಗಳು ಎನ್ನಬಹುದು. ಹಲ್ಲಿನಲ್ಲಿ 3 ಮುಖ್ಯ
ಭಾಗಗಳನ್ನು ಗುರುತಿಸಬಹುದು. ಮೇಲ್ನೋಟಕ್ಕೆ ಕಾಣುವ ಶಿರದ ಭಾಗವನ್ನು ಕ್ರೌನ್ ಎಂದು, ಒಸಡಿನಿಂದ ಆವೃತವಾದ ಕತ್ತಿನ ಭಾಗವನ್ನು ನೆಕ್ ಎಂದು, ಮತ್ತು
ಮೂಳೆಯೊಳಗಿನ ಬೇರಿನ ಭಾಗವನ್ನು ರೂಟ್ ಎಂದು ಹೆಸರಿಸಲಾಗಿದೆ. ಹಲ್ಲಿನ ಪೋಷಣೆಗೆ ಅಗತ್ಯವಾದ
ರಕ್ತನಾಳಗಳು, ನರಗಳು ಬೇರುಭಾಗದ ಮೂಲಕ ಹಲ್ಲಿನ ಒಳಗೆ ಬರುತ್ತವೆ.
ರಚನೆಯ ದೃಷ್ಟಿಯಿಂದ ಹಲ್ಲಿನಲ್ಲಿ 4 ಭಾಗಗಳಿವೆ. ಹಲ್ಲಿನ
ಹೊರಭಾಗದಲ್ಲಿ ಕಾಣುವ ನಸುಹಳದಿ ಅಥವಾ ಬೂದುಬಿಳಿ ಬಣ್ಣದ ಅರೆಪಾರದರ್ಶಕ ರಚನೆ ಎನಾಮೆಲ್. ಶರೀರದ
ಅತ್ಯಂತ ಕಠಿಣವಾದ ಅಂಗಾಂಶ ಇದೇ. ಎನಾಮೆಲ್ ನ ಶೇಕಡಾ 96 ರಷ್ಟು ಭಾಗ ಖನಿಜಗಳಿಂದ, ಮುಖ್ಯವಾಗಿ ಕ್ಯಾಲ್ಸಿಯಂ
ಮತ್ತು ರಂಜಕಗಳಿಂದ ಮಾಡಲ್ಪಟ್ಟಿದೆ. ಹಾಗಾಗಿ ಇದರ ಗಡುಸು ಬಹಳ ಅಧಿಕ. ಜೀವನದ ಉದ್ದಕ್ಕೂ ಎನಾಮೆಲ್
ಸವೆಯುತ್ತಾ ಹೋಗುತ್ತದೆ. ಇದರ ಸಹಜ ಸವೆತ ಪ್ರತಿವರ್ಷ ಸುಮಾರು 8 ಮೈಕ್ರೋಮೀಟರ್ ಎಂದು ಅಂದಾಜು.
ಆದರೆ ಪ್ರಸ್ತುತ ನಾವು ಸೇವಿಸುತ್ತಿರುವ ಆಹಾರದ ಕಾರಣದಿಂದ ನಡೆಯುವ ಅಸಹಜ ರಾಸಾಯನಿಕ
ಪ್ರಕ್ರಿಯೆಗಳು ಈ ಸವೆತವನ್ನು ತೀವ್ರವಾಗಿ ಹೆಚ್ಚಿಸಬಲ್ಲವು. ಹಲ್ಲಿನ ಹುಳುಕಿನಂತಹ ಬಹುತೇಕ
ಸಮಸ್ಯೆಗಳಿಗೆ ನಾವು ಸೇವಿಸುವ ಆಹಾರ, ಹಲ್ಲುಗಳ ಅಸಮರ್ಪಕ ಸ್ವಚ್ಚತೆ,
ನಿರ್ವಹಣೆಯ ಬಗೆಗಿನ ನಿರ್ಲಕ್ಷ್ಯ ಮತ್ತು ಅಜ್ಞಾನಗಳು ಕಾರಣ.
ಎನಾಮೆಲ್ ಅಡಿಯಲ್ಲಿ ಡೆಂಟಿನ್ ಎನ್ನುವ
ಅಂಗಾಂಶವಿದೆ. ಹಲ್ಲಿನ ಶಿರಭಾಗಕ್ಕೆ ಇದು ಆಸರೆಯಂತೆ ಕೆಲಸ ಮಾಡುತ್ತದೆ. ಇದರ ರಚನೆಯಲ್ಲಿ ಶೇಕಡಾ
10 ನೀರಿನ ಅಂಶ, ಶೇಕಡಾ 20 ಜೈವಿಕ ಸಂಯುಕ್ತಗಳು, ಉಳಿದವು ಅಜೈವಿಕ
ರಾಸಾಯನಿಕಗಳು. ಒಟ್ಟು 3 ಬಗೆಯ ಡೆಂಟಿನ್
ಮಾದರಿಗಳನ್ನು ಗುರುತಿಸಲಾಗಿದೆ. ಸಹಜ ಡೆಂಟಿನ್ ರಚನೆಯು ಒತ್ತಡದ ಸಂದರ್ಭಗಳಲ್ಲಿ ಯಾ
ಹಲ್ಲುಕುಳಿಗಳಿಗೆ ಸಂವೇದಿಯಾಗಿ ಉತ್ಪತ್ತಿಯಾಗುವ ಡೆಂಟಿನ್ ರಚನೆಯಿಂದ ವಿಭಿನ್ನವಾಗಿರುತ್ತದೆ.
ಹಲ್ಲಿನ ಬೇರನ್ನು ಎಲ್ಲ ಬದಿಗಳಿಂದ ಸುತ್ತುವರೆದಿರುವ
ಮೂಳೆಯಂತಹ ನಸುಹಳದಿ ಬಣ್ಣದ ರಚನೆಯನ್ನು ಸಿಮೆಂಟಮ್ ಎನ್ನುತ್ತಾರೆ. ಇದರ ಸರಿಸುಮಾರು ಅರ್ಧ ಭಾಗ
ಕ್ಯಾಲ್ಸಿಯಂ ಮತ್ತು ರಂಜಕದ ಸಂಯುಕ್ತ; ಮೂರರಲ್ಲಿ ಒಂದು ಭಾಗ ಕೊಲಾಜೆನ್ ಎಂಬ ಜೈವಿಕ ಅಂಗಾಂಶ;
ಉಳಿದದ್ದು ನೀರಿನ ಅಂಶ. ಹಲ್ಲನ್ನು ಒಸಡಿನ ಜೊತೆಗೆ ಬಿಗಿಯುವ ಅಸ್ಥಿರಜ್ಜುಗಳಿಗೆ ಮಾಧ್ಯಮವನ್ನು
ಒದಗಿಸುವುದು ಸಿಮೆಂಟಮ್ ನ ಮುಖ್ಯ ಕೆಲಸ. ಹಲ್ಲಿನ ಶಿರಭಾಗದತ್ತ ಇರುವ ಸಿಮೆಂಟಮ್ ನ ರಚನೆಯಲ್ಲಿ
ಜೀವಕೋಶಗಳಿಲ್ಲ; ಬೇರಿನ ತುದಿಯತ್ತ ಸಾಗುತ್ತಿರುವಂತೆ ಇವುಗಳಲ್ಲಿನ ಜೀವಕೋಶಗಳ
ಸಂಖ್ಯೆ ಹೆಚ್ಚಾಗುತ್ತದೆ.
ಹಲ್ಲಿನ ಕೇಂದ್ರ ರಚನೆಯನ್ನು ತಿರುಳು
ಎನ್ನಬಹುದು. ಇದರಲ್ಲಿ ಮೃದುವಾದ ಅಂಗಾಂಶವಿದೆ. ಹಲ್ಲಿನ ಪೋಷಣೆಗೆ ಬೇಕಾದ ರಕ್ತನಾಳಗಳು ಮತ್ತು ಸಂವೇದನೆಗೆ
ಅಗತ್ಯವಾದ ನರಗಳು ಇದರ ಮೂಲಕವೇ ಹಾಯ್ದು ಹೋಗುತ್ತವೆ. ಹೀಗಾಗಿ ತಿರುಳನ್ನು ಹಲ್ಲಿನ ನರಮಂಡಲ ಎಂದೂ
ಕರೆಯಲಾಗುತ್ತದೆ. ಡೆಂಟಿನ್ ಅಂಗಾಂಶವನ್ನು ತಯಾರಿಸುವ ಕೋಶಗಳ ಜೊತೆಯಲ್ಲಿ 5 ಇತರ ಜೀವಕೋಶಗಳು
ತಿರುಳಿನಲ್ಲಿ ಕಾರ್ಯಪ್ರವೃತ್ತವಾಗಿವೆ.
ಹಲ್ಲಿನ ಬೆಳವಣಿಗೆಯಲ್ಲಿ ನಾಲ್ಕು ಹಂತಗಳಿವೆ:
ಮೊಗ್ಗು, ಟೋಪಿ,
ಗಂಟೆ ಮತ್ತು ಅಂತಿಮ ಸ್ವರೂಪ. ಇವೆಲ್ಲವೂ ಒಂದರ ಹಿಂದೊಂದರಂತೆ ಕ್ರಮವಾಗಿ
ನಡೆಯುತ್ತಿರುತ್ತವೆ. ಬೆಳವಣಿಗೆಯ ಬಹುಭಾಗ ಒಸಡಿನ ಒಳಗೇ ಆಗುತ್ತಿರುತ್ತದೆ. ಅದು ಒಂದು ಹಂತಕ್ಕೆ
ಬಂದಾಗ ಮಾತ್ರ ಒಸಡಿನ ಮೇಲ್ಪದರವನ್ನು ಸೀಳಿ ಹಲ್ಲು ಹೊರಗೆ ಬರುತ್ತದೆ. ಹಾಲುಹಲ್ಲುಗಳು ಆರನೆಯ
ತಿಂಗಳ ವಯಸ್ಸಿನಿಂದ ವಸಡಿನ ಅಂಚಿನಲ್ಲಿ ಮೊಳೆಯುವುದು ಕಾಣುತ್ತವೆ. ಸುಮಾರು ಎರಡು ವರ್ಷಗಳ
ವಯಸ್ಸಿನವರೆಗೆ ಈ ಪ್ರಕ್ರಿಯೆ ಮುಂದುವರೆಯುತ್ತದೆ. ಸುಮಾರು ಆರು ವರ್ಷಗಳ ವಯಸ್ಸಿಗೆ ಖಾಯಂ ಹಲ್ಲುಗಳು
ಮೂಡಲು ಆರಂಭಿಸಿ ಹಾಲುಹಲ್ಲುಗಳು ಬೀಳುತ್ತಾ ಹೋಗುತ್ತವೆ. ಸುಮಾರು ಹನ್ನೆರಡು ವರ್ಷಗಳ
ವಯಸ್ಸಿನವರೆಗೆ ಬಾಯಲ್ಲಿ ಕೆಲ ಹಾಲುಹಲ್ಲುಗಳು ಮತ್ತು ಕೆಲ ಖಾಯಂ ಹಲ್ಲುಗಳ ಮಿಶ್ರಸ್ಥಿತಿ
ಇರುತ್ತದೆ. ಹಲವಾರು ಸಂಸ್ಕೃತಿಗಳಲ್ಲಿ ಮೊದಲನೆಯ ಹಾಲುಹಲ್ಲು ಬೀಳುವವರೆಗೆ ಶಾಲೆಗೆ
ಸೇರಿಸುವುದಿಲ್ಲ!
ಹಲ್ಲುಗಳು ತಮ್ಮ ಸ್ಥಾನದಲ್ಲಿ ಮೊಳೆತು
ಗಟ್ಟಿಯಾಗಿ ನಿಲ್ಲಲು ಹಲವಾರು ಸಹಾಯಕ ಅಂಗಾಂಶಗಳು ನೆರವಾಗುತ್ತವೆ. ಹಲ್ಲಿನ ಸುತ್ತಲೂ ಇದ್ದು
ಅವನ್ನು ಬಿಗಿಯುವ ಒಸಡಿನ ರಜ್ಜುಗಳು,
ಹಲ್ಲಿನ ಬುಡವನ್ನು ಆವರಿಸಿ ಅವನ್ನು ಅಲುಗಾಡದಂತೆ ಭದ್ರತೆ ಒದಗಿಸುವ ದವಡೆಯ
ಮೂಳೆಗಳು, ಈ ಮೂಳೆಗಳ ಆಧಾರದ ಮೇಲೆ ನಿಂತು ಹಲ್ಲುಗಳ ನಿರ್ಮಾಣಕ್ಕೆ
ನೆರವಾಗುವ ಒಸಡು ಎಂಬ ನಯವಾದ ಲೋಳೆಪದರ ಆವರಿಸಿರುವ ಅಂಗಾಂಶಗಳು ಮುಖ್ಯವಾದುವು.
ಪ್ರತಿಯೊಂದು ಜೀವಿಯ ಹಲ್ಲುಗಳೂ ಅವುಗಳು
ನಿಸರ್ಗದಲ್ಲಿ ಸೇವಿಸುವ ಆಹಾರವನ್ನು ಸಿಗಿಯಲು,
ಅರೆಯಲು ಬೇಕಾದ ರೀತ್ಯಾ ತಯಾರಾಗಿವೆ. ಸಸ್ಯಾಹಾರಿ ಜೀವಿಗಳ ಹಲ್ಲಿನ ರಚನೆ
ಮಾಂಸಾಹಾರಿಗಳ ರಚನೆಗಿಂತ ಬಹಳವೇ ಭಿನ್ನ. ಬಾಯಲ್ಲಿ ಸ್ರವಿಸುವ ಲಾಲಾರಸದಲ್ಲಿ ಆಯಾ ಜೀವಿಯ ಹಲ್ಲಿನ
ರಕ್ಷಣೆಗೆ ಬೇಕಾದ ರಾಸಾಯನಿಕಗಳನ್ನು ಒದಗಿಸುತ್ತದೆ. ಇದರಿಂದ ನಿರ್ದಿಷ್ಟ ರೀತಿಯ ಆಹಾರವನ್ನು ಮಾತ್ರ
ಸೇವಿಸುವ ಪ್ರಾಣಿಗಳು ತಮ್ಮ ಹಲ್ಲುಗಳ ಆರೋಗ್ಯವನ್ನು ಯಾವುದೇ ಪ್ರಯಾಸವಿಲ್ಲದೆ
ಕಾಪಾಡಿಕೊಳ್ಳುತ್ತವೆ. ಆದರೆ ಮನುಷ್ಯರ ಸಂಗತಿ ಹಾಗಿಲ್ಲ. ನಾಗರಿಕತೆ ಮತ್ತು ಕೃಷಿ ಆರಂಭವಾದ ಬಳಿಕ
ಮನುಷ್ಯರು ಆಹಾರದ ವಿಷಯದಲ್ಲಿ ನಿಸರ್ಗದಿಂದ ದೂರಾಗುತ್ತಾ ಹೋದರು. ಪ್ರಕೃತಿಯಲ್ಲಿ ಲಭ್ಯವಿದ್ದ
ಆಹಾರದ ಬದಲಿಗೆ ತಾವು ಬೆಳೆದ ಆಹಾರವನ್ನು ಸೇವಿಸಲು ಆರಂಭಿಸಿದರು. ಇದರ ಜೊತೆಗೆ ಬೆಂಕಿಯನ್ನು
ಬಳಸಿ ಅಡುಗೆ ಮಾಡಲು ಕಲಿತು, ನೈಸರ್ಗಿಕ ಆಹಾರಗಳ ರಾಸಾಯನಿಕ
ಸ್ವರೂಪವನ್ನು ಬದಲಾಯಿಸಿದರು. ಸಾಲದು ಎಂಬುದಕ್ಕೆ ರುಚಿಯ ಪ್ರಲೋಭನೆಗೆ ಮಾರುಹೋಗಿ ಉಪ್ಪು,
ಮಸಾಲೆ, ಸಕ್ಕರೆಯುಕ್ತ ಪದಾರ್ಥಗಳನ್ನು ಸೇವಿಸಿದರು.
ಧಾವಂತದ ಬದುಕಿಗೆ ಹೊಂದಿಕೊಳ್ಳಲು ಸಂಸ್ಕರಿತ ಆಹಾರವನ್ನು ಕಂಡುಹಿಡಿದರು. ಈ ಎಲ್ಲ ಬದಲಾವಣೆಗಳೂ
ಕಳೆದ ಕೆಲ ಸಾವಿರ ವರ್ಷಗಳಲ್ಲಿ ಆಗಿಹೋದವು. ನಿಸರ್ಗದ ದೃಷ್ಟಿಯಿಂದ ಈ ಅವಧಿ ತೀರಾ ಕಡಿಮೆ.
ಹೀಗಾಗಿ ಪ್ರಕೃತಿಗೆ ನಾವು ನಮ್ಮ ಆಹಾರ ವಿಧಾನಗಳನ್ನು ಬದಲಾಯಿಸಿದ್ದೇವೆ ಎನ್ನುವ ಅಂದಾಜು ಕೂಡ
ಇಲ್ಲ. ನಾವು ನೈಸರ್ಗಿಕ ಪ್ರಾಣಿಗಳಾಗಿದ್ದಾಗ ನಮ್ಮ ಹಲ್ಲುಗಳಿಗೆ ಯಾವ ಸಹಜ ರಕ್ಷಣೆ ಇತ್ತೋ ಅದು
ಇಂದಿಗೂ ಬದಲಾಗಿಲ್ಲ. ಹೀಗಾಗಿ, ನಮ್ಮ ಬಾಯಿ ಸ್ರವಿಸುವ ಲಾಲಾರಸದಲ್ಲಿ
ಇರುವ ರಕ್ಷಣೆ ನಮ್ಮ ಆಹಾರ ಪದ್ಧತಿಯಿಂದ ಘಾಸಿಗೆ ಒಳಗಾಗಿರುವ ಹಲ್ಲುಗಳಿಗೆ ಏನೇನೂ ಸಾಲದು. ಅದಕ್ಕೇ
ನಿಸರ್ಗದಲ್ಲಿರುವ ಯಾವ ಪ್ರಾಣಿಗೂ ಹಲ್ಲು ಉಜ್ಜುವ ಅಗತ್ಯ ಇಲ್ಲದಿದ್ದರೂ ಮನುಷ್ಯರು ಮಾತ್ರ
ನಿತ್ಯವೂ ಸಾಕಷ್ಟು ಸಮಯವನ್ನು ಹಲ್ಲಿನ ರಕ್ಷಣೆಗೆ ನೀಡಬೇಕು. ಅಲ್ಲದೇ, ನಿಯಮಿತವಾಗಿ
ಹಲ್ಲಿನ ವೈದ್ಯರ ಮೊರೆ ಹೋಗಿ ಸಮಯಾನುಸಾರ ರಿಪೇರಿ ಮಾಡಿಸಬೇಕು.
ಹಲ್ಲುಗಳು ನಮ್ಮ ಜೀವನದ ಒಡನಾಡಿಗಳು.
ಆಹಾರವಿಲ್ಲದೆ ಜೀವಿಸಲಾಗದ ನಮ್ಮ ಬದುಕಿಗೆ ಹಲ್ಲುಗಳ ಅಗತ್ಯವನ್ನು ಹೆಚ್ಚಾಗಿ ವಿವರಿಸುವುದು
ಅನಗತ್ಯ. ಹಲ್ಲುಗಳ ಗಣಿತದ ಸೋಜಿಗವೂ ಇಂತಹ ಕುತೂಹಲದ ಸಂಗತಿಯೇ.
---------------------
ಜುಲೈ 2024
ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ
ಲೇಖನ. ಇಡೀ ಸಂಚಿಕೆಯ ಉಚಿತ ಓದಿಗಾಗಿ ಕೊಂಡಿ: https://flipbookpdf.net/web/site/c561fc061d34a73e2d75a178c8507ef8a3eb150dFBP32051436.pdf.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ