ಸೋಮವಾರ, ನವೆಂಬರ್ 11, 2024

ಮೇದೋಜೀರಕದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಶ್ರೀಯುತ ಡಿ.ವಿ.ಗುಂಡಪ್ಪನವರ “ವನಸುಮ” ಎನ್ನುವ ಪ್ರಸಿದ್ಧ ಕವನವಿದೆ; ತನ್ನ ಇರುವಿಕೆಯನ್ನು ಸೌರಭದಿಂದ ತೋರಿಸಿ, ತಾನು ಮಾತ್ರ ಎಲೆಯ ಹಿಂದೆ ಇದ್ದುಕೊಂಡು, ಜಗದ ಕಣ್ಣಿನಿಂದ ಮರೆಯಾಗಿರುವ ಹೂವಿನ ನಿದರ್ಶನ ಅದು. ಅದೇ ರೀತಿ ಮಾನವ ದೇಹದಲ್ಲೂ “ವನಸುಮ”ದಂತಹ ಒಂದು ಅಂಗವಿದೆ. ಜಠರದ ಹಿಂಬಾಗದಲ್ಲಿ ಬಚ್ಚಿಟ್ಟುಕೊಂಡು, ಯಾರ ಕಣ್ಣಿಗೂ ಸುಲಭವಾಗಿ ಬೀಳದೆ, ಕೇವಲ ತನ್ನ ಕೆಲಸದ ಮೂಲಕವೇ ತನ್ನ ಇರುವನ್ನು ತಿಳಿಸುವ ಈ ಅಂಗದ ಹೆಸರು ಮೇದೋಜೀರಕ ಗ್ರಂಥಿ. ಮೃತದೇಹಗಳ ವಿಚ್ಛೇದನದ ಮೂಲಕ ಮೊದಮೊದಲ ಬಾರಿಗೆ ಮಾನವನ ಅಂಗಶಾಸ್ತ್ರದ ಅಧ್ಯಯನವನ್ನು ಆರಂಭಿಸಿದ ಕಾಲದಲ್ಲಿ ಈ ಅಂಗವನ್ನು “ಮಾಂಸದ ಮುದ್ದೆ” ಎಂದು ತಪ್ಪಾಗಿ ಭಾವಿಸಿದ್ದರು. ಆ ಕಾರಣಕ್ಕೇ ಇದನ್ನು “ಮಾಂಸಲ” (Pan-Creas = ಪೂರ್ತಿ ಮಾಂಸ) ಎಂದು ಕರೆದರು. ಮೊದಲ ಬಾರಿಗೆ ಈ ಅಂಗದ ಮಹತ್ವ ತಿಳಿದದ್ದು 19ನೆಯ ಶತಮಾನದ ಅಂತ್ಯದ ವೇಳೆಗೆ. ಅಲ್ಲಿಂದ ಮುಂದೆ ಪದರಪದರವಾಗಿ ಇದರ ಕೆಲಸಗಳ ಸರಣಿ ಅನಾವರಣಗೊಳ್ಳುತ್ತಲೇ ಇದೆ. ಗಣಿತದ ದೃಷ್ಟಿಯಿಂದಲೂ ಮೇದೋಜೀರಕ ಗ್ರಂಥಿ ಅಚ್ಚರಿಗಳ ಆಗರವೇ ಆಗಿದೆ.

 

ಸುಮಾರು 12 ರಿಂದ 15 ಸೆಂಟಿಮೀಟರ್ ಉದ್ದದ ಮೇದೋಜೀರಕ, ಜಠರದ ಅಡಿಭಾಗದಲ್ಲಿ ಸಣ್ಣಕರುಳಿನ ಆರಂಭದ ಭಾಗದಿಂದ ಮೊದಲುಗೊಂಡು ಎಡಕ್ಕೆ ಅಡ್ಡಡ್ಡಲಾಗಿ ಚಾಚಿಕೊಂಡಿರುತ್ತದೆ. ನಸುಗೆಂಪು ಬಣ್ಣದ ಇದರ ಉರುಟಾದ ಮೇಲ್ಮೈ, ಉಂಡೆ ಉಂಡೆಯಂತಿರುತ್ತದೆ. ಅಂಗಶಾಸ್ತ್ರಜ್ಞರು ಇದರಲ್ಲಿ 4 ಭಾಗಗಳನ್ನು ಗುರುತಿಸುತ್ತಾರೆ - ಶಿರದ, ಕತ್ತಿನ, ಶರೀರದ, ಮತ್ತು ಬಾಲದ ಭಾಗಗಳು. ಮೇದೋಜೀರಕದ ಶೇಕಡಾ 99 ಭಾಗ ಆಹಾರ ಪಚನಕ್ಕೆ ಬೇಕಾದ ರಸಗಳನ್ನು, ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಇದು ಮುಖ್ಯವಾಗಿ ಆಹಾರದಲ್ಲಿನ ಮೇದಸ್ಸಿನ ಅಂಶವನ್ನು ಪಚನ ಮಾಡಲು ನೆರವಾಗುವುದರಿಂದ ಇದು “ಮೇದೋಜೀರಕ”. ಆಹಾರದ ಜಿಡ್ಡಿನ ಭಾಗವನ್ನು ಸಣ್ಣದಾಗಿ ಒಡೆಯಲು ಯಕೃತ್ತಿನ ಪಿತ್ತರಸ ಬೇಕಾದರೆ, ಅದನ್ನು ಪಚನ ಮಾಡಲು ಮೇದೋಜೀರಕದ ಕಿಣ್ವಗಳ ಅಗತ್ಯವಿದೆ. ಮೇದೋಜೀರಕದ ಉದ್ದಕ್ಕೂ ಅದರ ಸ್ರವಿಕೆಯನ್ನು ಕೊಂಡೊಯ್ಯುವ ಒಂದು ನಾಳವಿದೆ. ಯಕೃತ್ ಸ್ರವಿಸುವ ಪಿತ್ತರಸವನ್ನು ಕೂಡಿಡುವ ಪಿತ್ತಕೋಶದ ನಾಳ ಕೂಡ ಮೇದೋಜೀರಕ ನಾಳದ ಅಂತಿಮ ಭಾಗವನ್ನು ಸೇರುತ್ತದೆ. ಹೀಗೆ, ಆಹಾರದ ಜಿಡ್ಡಿನ ಅಂಶವನ್ನು ಪಚನ ಮಾಡುವ ಎಲ್ಲ ರಾಸಾಯನಿಕಗಳೂ ಮೇದೋಜೀರಕ ನಾಳದ ಮೂಲಕವೇ ಹಾಯುವಂತಾಗುತ್ತದೆ. ಈ ನಾಳ ತನ್ನ ಎಲ್ಲ ಸ್ರವಿಕೆಯನ್ನೂ ಸಣ್ಣ ಕರುಳಿನ ಆರಂಭದ ಭಾಗವಾದ, ಜಠರದ ನಂತರ ಮುಂದುವರೆಯುವ ಡುಯೊಡೆನಮ್ ಗೆ ತಲುಪಿಸುತ್ತದೆ.   

 

ನಾವು ಸೇವಿಸುವ ಬಗೆಬಗೆಯ ಆಹಾರಗಳನ್ನು ಜೀರ್ಣ ಮಾಡುವ ಪ್ರಕ್ರಿಯೆಯ ಮೊದಲ ಪ್ರಮುಖ ಹೆಜ್ಜೆ ಜಠರದಲ್ಲಿ ಉತ್ಪತ್ತಿಯಾಗುವ ಹೈಡ್ರೋಕ್ಲೋರಿಕ್ ಆಮ್ಲ. ಈ ಆಮ್ಲದ ಅಂಶ ಭಾಗಶಃ ಜೀರ್ಣವಾದ ಆಹಾರದ ಜೊತೆಗೆ ಸಣ್ಣ ಕರುಳನ್ನು ಸೇರುತ್ತದೆ. ಜಠರದ ರಚನೆ ಆಮ್ಲವನ್ನು ಪ್ರತಿರೋಧಿಸುವಂತೆ ಇರುತ್ತದಾದರೂ, ಸಣ್ಣ ಕರುಳಿಗೆ ಅಂತಹ ಸಾಮರ್ಥ್ಯ ಇರುವುದಿಲ್ಲ. ಹೀಗಾಗಿ, ಕರುಳನ್ನು ಸುಡಬಲ್ಲ ಆಮ್ಲವನ್ನು ಕೂಡಲೇ ಶಮನ ಮಾಡುವುದು ಅಗತ್ಯ. ಈ ಕೆಲಸ ಮಾಡುವುದು ಮೇದೋಜೀರಕ ರಸ. ಜಠರ ಆಮ್ಲವನ್ನು ತಯಾರಿಸುವಂತೆ, ಮೇದೋಜೀರಕ ಪ್ರತ್ಯಾಮ್ಲದ ಮೂಲ ವಸ್ತುವಾದ ಬೈಕಾರ್ಬೊನೇಟ್ ಅನ್ನು ಉತ್ಪತ್ತಿ ಮಾಡುತ್ತದೆ. ಜಠರದಿಂದ ಆಹಾರ ಪ್ರವೇಶಿಸಿದ ಕೂಡಲೇ ಮೇದೋಜೀರಕ ರಸ ಅದರೊಳಗೆ ಪ್ರವಹಿಸಿ, ತನ್ನ ಪ್ರತ್ಯಾಮ್ಲದ ಅಂಶವನ್ನು ಬೆರೆಸಿ, ಆಮ್ಲವನ್ನು ನಿಷ್ಕ್ರಿಯಗೊಳಿಸುತ್ತದೆ. ಈ ಕೆಲಸದಲ್ಲಿ ಅಡೆತಡೆಯಾದರೆ ಆಮ್ಲವು ಕರುಳನ್ನು ಸುಟ್ಟು, ಘಾಸಿ ಮಾಡಬಲ್ಲದು. ಆರೋಗ್ಯವಂತ ವ್ಯಕ್ತಿಯಲ್ಲಿ ನಿರಂತರವಾಗಿ ದಿನಕ್ಕೆ ಕನಿಷ್ಠ 2 ಲೀಟರ್ ಸ್ರವಿಕೆಯನ್ನು ಮೇದೋಜೀರಕ ಗ್ರಂಥಿ ಉತ್ಪತ್ತಿ ಮಾಡುತ್ತಾ, ಕರುಳನ್ನು ಆಮ್ಲದಿಂದ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯ ನಾಳದ ಜೊತೆಗೆ ಮೇದೋಜೀರಕಕ್ಕೆ ಒಂದು ಪರ್ಯಾಯ ನಾಳವೂ ಇದೆ. ಇಷ್ಟೆಲ್ಲಾ ಮಹತ್ವದ ಕೆಲಸ ಮಾಡುವ ಮೇದೋಜೀರಕಕ್ಕೆ ವಿಫುಲ ರಕ್ತಸಂಚಾರವಿದೆ; 3 ಮುಖ್ಯ ರಕ್ತನಾಳಗಳು, ಹಲವಾರು ಸಣ್ಣ ರಕ್ತನಾಳಗಳು ಶುದ್ಧ ರಕ್ತವನ್ನು ಮೇದೋಜೀರಕಕ್ಕೆ ಸರಬರಾಜು ಮಾಡುತ್ತವೆ. ಅವೆಲ್ಲವೂ ಒಂದರ ಜೊತೆಗೊಂದು ಸಂಪರ್ಕ ಪಡೆದಿರುತ್ತವೆ. ಮೇದೋಜೀರಕದ ಕೆಂಪು-ಗುಲಾಬಿ ಬಣ್ಣಕ್ಕೆ ಈ ರಕ್ತಪ್ರವಾಹವೂ ಕಾರಣ. ಅಂತೆಯೇ, 4 ಪ್ರತ್ಯೇಕ ಧಮನಿಗಳು ಅಶುದ್ಧರಕ್ತವನ್ನು ಅಲ್ಲಿಂದ ಕೊಂಡೊಯ್ಯುತ್ತವೆ.

 

ಆಹಾರದ ಜಿಡ್ಡಿನ ಅಂಶದ ಪಚನ ಮೇದೋಜೀರಕದ ಪ್ರಮುಖ ಕೆಲಸವಾದರೂ, ಅದು ಆಹಾರದ ಎಲ್ಲ ಅಂಶಗಳನ್ನೂ ಜೀರ್ಣಿಸುವಲ್ಲಿ ಸಹಕಾರಿಯಾಗಿದೆ. ಜಿಡ್ಡಿನ ಪಚನಕ್ಕೆ ಮೇದೋಜೀರಕದ ಸ್ರವಿಕೆಯಲ್ಲಿ 4 ಪ್ರಮುಖ ಕಿಣ್ವಗಳಿವೆ. ಪ್ರೋಟೀನ್ ಪಚನಕ್ಕೆ 2 ಮತ್ತು ಪಿಷ್ಟದ ಜೀರ್ಣಪಕ್ರಿಯೆಯಲ್ಲಿ ನೆರವಾಗುವುದಕ್ಕೆ ಒಂದು ಕಿಣ್ವ ಮೇದೋಜೀರಕದ ಕೊಡುಗೆ. ಇದರ ಕಿಣ್ವಗಳು ಬಹಳ ಶಕ್ತಿಶಾಲಿ ರಾಸಾಯನಿಕಗಳು; ಇವು ಖುದ್ದು ಮೇದೋಜೀರಕವನ್ನೇ ಜೀರ್ಣ ಮಾಡಿಬಿಡಬಲ್ಲವು. ಹೀಗಾಗಿ, ಈ ಕಿಣ್ವಗಳನ್ನು ಮೇದೋಜೀರಕ ಗ್ರಂಥಿ ಸಣ್ಣ ಚೀಲಗಳಲ್ಲಿ ಬಂದಿಯಾಗಿ ಇರಿಸಿರುತ್ತದೆ. ಇಂತಹ ಚೀಲಗಳು ಮೇದೋಜೀರಕದ ನಾಳದ ಮೂಲಕ ಸಣ್ಣ ಕರುಳನ್ನು ತಲುಪುತ್ತವೆ. ಡುಯೋಡೆನಮ್ ಭಾಗದಲ್ಲಿ ಈ ಚೀಲಗಳು ಒಡೆದು, ಕಿಣ್ವಗಳು ಆಹಾರದ ನೇರ ಸಂಪರ್ಕಕ್ಕೆ ಬರುತ್ತವೆ. ಚೀಲಗಳನ್ನು ಒಡೆಯುವ ಆರಂಭಿಕ ಪ್ರಕ್ರಿಯೆಯಲ್ಲಿ ಶರೀರದ ಹಲವಾರು ರಾಸಾಯನಿಕಗಳು ಮೇದೋಜೀರಕಕ್ಕೆ ನೆರವಾಗುತ್ತವೆ. ಒಮ್ಮೆ ಒಂದು ಚೀಲ ಒಡೆದರೆ, ಬಿಡುಗಡೆಯಾದ ಕಿಣ್ವಗಳು ಇತರ ಚೀಲಗಳನ್ನು ಒಡೆಯುತ್ತವೆ. ಪಚನ ಪ್ರಕ್ರಿಯೆಯ ಕಿಣ್ವಗಳ ಜೊತೆಯಲ್ಲಿ ಇನ್ನೂ ಐದಾರು ಪ್ರತ್ಯೇಕ ರಾಸಾಯನಿಕಗಳನ್ನು ಮೇದೋಜೀರಕ ಬಿಡುಗಡೆ ಮಾಡುತ್ತದೆ. ಇವೆಲ್ಲವೂ ಆಹಾರದ ಪಚನಕ್ರಿಯೆ ಮತ್ತು ಭಾಗಶಃ ಜೀರ್ಣವಾದ ಆಹಾರವನ್ನು ಸಣ್ಣಕರುಳಿನ ಮುಂಭಾಗಕ್ಕೆ ತಳ್ಳುವುದರಲ್ಲಿ ಸಹಕಾರ ನೀಡುತ್ತವೆ.

 

ಮೇದೋಜೀರಕದ ಶೇಕಡಾ 99 ಭಾಗ ಈ ರೀತಿ ಆಹಾರ ಪಚನದ ಕ್ರಿಯೆಗೆ ಮೀಸಲಾದರೆ, ಉಳಿದ ಶೇಕಡಾ 1 ಭಾಗ ಅಷ್ಟೇ ಮಹತ್ವದ ಕೆಲಸ ನಿರ್ವಹಿಸುತ್ತದೆ. ಮೇದೋಜೀರಕದ ಬಾಲದ ಭಾಗದ ತುದಿಯಲ್ಲಿರುವ 1.5 ರಿಂದ 3 ಸೆಂಟಿಮೀಟರ್ ಪ್ರದೇಶದ ಸುಮಾರು 3000 ಕೋಶಗಳು ನಿರ್ನಾಳ. ಅಂದರೆ, ಇದರ ಸ್ರವಿಕೆಗಳು ಯಾವುದೇ ನಾಳಕ್ಕೆ ಹೋಗದೇ ಸೀದಾ ರಕ್ತವನ್ನು ಸೇರುತ್ತವೆ. ಸೂಕ್ಷ್ಮದರ್ಶಕ ಯಂತ್ರದಲ್ಲಿ ನೋಡಿದಾಗ, ಪಚನಕ್ಕೆ ಸಂಬಂಧಿಸಿದ ಕೋಶಗಳು ಒತ್ತೊತ್ತಾಗಿ ಗುಂಪುಗಳಲ್ಲಿ ಕಂಡರೆ, ನಿರ್ನಾಳ ಪ್ರದೇಶದ ಕೋಶಗಳು ಬಿಡಿಬಿಡಿಯಾದ ದ್ವೀಪಗಳಂತೆ ಕಾಣುತ್ತವೆ. ನಿರ್ನಾಳ ಭಾಗದಲ್ಲಿ 3 ಮುಖ್ಯ ಪ್ರಭೇದದ ಕೋಶಗಳಿವೆ. ಅಲ್ಫಾ-ಕೋಶಗಳು ಗ್ಲುಕಗಾನ್ ಎನ್ನುವ ಚೋದಕವನ್ನು ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಏರಿಸುತ್ತದೆ. ಬೀಟಾ-ಕೋಶಗಳು ರಕ್ತದಲ್ಲಿ ಸಕ್ಕರೆಯ ಅಂಶವನ್ನು ಇಳಿಸುವ ಇನ್ಸುಲಿನ್ ಎನ್ನುವ ರಸದೂತವನ್ನು ಬಿಡುಗಡೆ ಮಾಡುತ್ತವೆ. ಇವೆರಡು ಚೋದಕಗಳ ಬಿಡುಗಡೆಯನ್ನು ನಿಯಂತ್ರಿಸುವ ಸೊಮಟೊಸ್ಟಾಟಿನ್ ಎನ್ನುವ ಚೋದಕವನ್ನು ಡೆಲ್ಟಾ-ಕೋಶಗಳು ಉತ್ಪತ್ತಿಸುತ್ತವೆ. ನಾವು ಸೇವಿಸುವ ಆಹಾರ ನಮ್ಮ ಶರೀರದ ಸಕ್ಕರೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ರಕ್ತದಲ್ಲಿ ಒಂದು ಹಂತಕ್ಕಿಂತ ಸಕ್ಕರೆಯ ಅಂಶ ಏರಿದಾಗ ಅದನ್ನು ಇಳಿಸಿ, ಸಮಸ್ಥಿತಿಗೆ ತರುವುದು ಇನ್ಸುಲಿನ್; ರಕ್ತದ ಸಕ್ಕರೆಯ ಪ್ರಮಾಣ ಒಂದು ಹಂತಕ್ಕಿಂತಲೂ ಕಡಿಮೆಯಾದಾಗ, ಶರೀರದಲ್ಲಿ ಶೇಖರಣೆಯಾದ ಇತರ ಮೂಲಗಳಿಂದ ಪಿಷ್ಟವನ್ನು ಕರಗಿಸಿ, ರಕ್ತದ ಸಕ್ಕರೆಯ ಪ್ರಮಾಣವನ್ನು ಏರಿಸುವುದು ಗ್ಲುಕಗಾನ್. ಇವೆರಡರ ಸ್ರವಿಕೆಯನ್ನು ನಿಯಂತ್ರಿಸುವುದು ಸೊಮಾಟೊಸ್ಟಾಟಿನ್. ಹೀಗೆ, ಮೇದೋಜೀರಕದ ನಿರ್ನಾಳ ಭಾಗ ರಕ್ತದಲ್ಲಿನ ಸಕ್ಕರೆಯ ಅಂಶದ ಅತ್ಯಂತ ಪ್ರಮುಖ, ಪ್ರಭಾವಶಾಲಿ ನಿಯಂತ್ರಕ. ಇವಲ್ಲದೇ, ಇನ್ನೂ ಕೆಲವು ರಾಸಾಯನಿಕಗಳು ಈ ಭಾಗದಿಂದ ಸ್ರವಿಸಲ್ಪಟ್ಟು, ಶರೀರದ ಹಲವಾರು ಪರಸ್ಪರ ಸಂಬಂಧಿ ರಾಸಾಯನಿಕ ಪ್ರಕ್ರಿಯೆಗಳ ಕೆಲಸಕ್ಕೆ ನೆರವಾಗುತ್ತವೆ. ಮೇದೋಜೀರಕದ ಬೀಟಾ-ಕೋಶಗಳು ದಿನವೊಂದಕ್ಕೆ ಸುಮಾರು 200 ಯುನಿಟ್ ಇನ್ಸುಲಿನ್ ತಯಾರಿಸಬಲ್ಲ ಸಾಮರ್ಥ್ಯ ಹೊಂದಿದೆ. ಆರೋಗ್ಯವಂತ ವ್ಯಕ್ತಿಯ ಪ್ರತಿದಿನದ ಇನ್ಸುಲಿನ್ ಆವಶ್ಯಕತೆ ಸುಮಾರು 30 ರಿಂದ 50 ಯುನಿಟ್. ಇನ್ಸುಲಿನ್ ಮೇಲೆ ಅವಲಂಬಿತರಾಗಿರುವ ಬಹುತೇಕ ಮಧುಮೇಹಿಗಳು ದಿನವೊಂದಕ್ಕೆ ಇಷ್ಟೇ ಪ್ರಮಾಣದ ಇನ್ಸುಲಿನ್ ಚುಚ್ಚುಮದ್ದನ್ನು ಬಾಹ್ಯವಾಗಿ ಪಡೆಯುವುದನ್ನು ಗಮನಿಸಬಹುದು. ಸುಮಾರು 100 ಬಗೆಯ ವಿಶಿಷ್ಟ ಜೀನ್ಗಳು ಕೇವಲ ಮೇದೋಜೀರಕದ ಕೆಲಸಕ್ಕಾಗಿಯೇ ಶರೀರದಲ್ಲಿ ವಿಕಾಸವಾಗಿವೆ.

ಇಷ್ಟೆಲ್ಲಾ ಪ್ರಮುಖ ಕೆಲಸಗಳನ್ನು ಮಾಡಿದರೂ ಮೇದೋಜೀರಕವನ್ನು ಅಗತ್ಯ ಅಂಗಗಳ ಪಟ್ಟಿಯಲ್ಲಿ ಸೇರಿಸುವುದಿಲ್ಲ. ಪಚನ ಕ್ರಿಯೆಗೆ ಕಾರಣವಾಗುವ ರಾಸಾಯನಿಕಗಳನ್ನು ಬಾಹ್ಯವಾಗಿ ನೀಡಲು ಸಾಧ್ಯ. ಅಂತೆಯೇ, ಇನ್ಸುಲಿನ್ ಚೋದಕವನ್ನು ಕೂಡ. ಹೀಗಾಗಿ, ಸೋಂಕು, ಕ್ಯಾನ್ಸರ್ನಂತಹ ಯಾವುದಾದರೂ ಕಾರಣಕ್ಕಾಗಿ ಮೇದೋಜೀರಕವನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಿದರೂ, ಔಷಧಗಳ ಮೂಲಕ ಅಂತಹ ವ್ಯಕ್ತಿಯನ್ನು ಜೀವಂತ ಇರಿಸಬಹುದು.

ಮೇದೋಜೀರಕ ನಾಳ-ನಿರ್ನಾಳ ಗಣಿತೀಯ ಅಚ್ಚರಿಗಳ ಸಮಾಗಮ.

----------------------

ಸೆಪ್ಟೆಂಬರ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ – ಇಡೀ ಸಂಚಿಕೆಯ ಉಚಿತ ಓದಿಗೆ ಕೊಂಡಿ: https://www.flipbookpdf.net/web/site/c8ab7a5c527ec2a50177c77c173071c12f3661c6FBP32051436.pdf.html

 



 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ