ಭಾನುವಾರ, ಜೂನ್ 16, 2024


 

ಮಾನವ ದೇಹಕ್ಕೆ ಪ್ರಾಣಿಗಳ ಅಂಗ ಕಸಿ

ಡಾ. ಕಿರಣ್ ವಿ.ಎಸ್.

ವೈದ್ಯರು

ದೇಶದ ಹೊರಗಿನಿಂದ ಬಂದು ದೇಶವಾಸಿಗಳ ಮೇಲೆ ಆಕ್ರಮಣ ಮಾಡಿ ಅಮಾಯಕರಿಗೆ ಹಾನಿ ಮಾಡಬಲ್ಲ ಶತ್ರುಗಳನ್ನು ತಡೆಯಲು ಪ್ರತಿಯೊಂದು ದೇಶವೂ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿರುತ್ತದಷ್ಟೇ? ಇವನ್ನು ರಕ್ಷಣಾ ಪಡೆಗಳು ಎನ್ನುತ್ತಾರೆ. ಅದೇ ರೀತಿ ಹೊರಗಿನಿಂದ ಬಂದ ಯಾವುದೇ ಬಾಹ್ಯ ಜೀವಕೋಶದ ಮೇಲೂ ಧಾಳಿ ಮಾಡಿ, ಅದನ್ನು ಚೆಂಡಾಡಬಲ್ಲ ಸಶಕ್ತ ವ್ಯವಸ್ಥೆಯೊಂದು ನಮ್ಮ ದೇಹದಲ್ಲೂ ಇರುತ್ತದೆ.  ಇದನ್ನು “ದೇಹದ ರಕ್ಷಕ ವ್ಯವಸ್ಥೆ” ಎನ್ನಬಹುದು.

 

ದೇಹದ ರಕ್ಷಕ ವ್ಯವಸ್ಥೆ

·         ಇದರ ವಿಶಿಷ್ಟ ಕೋಶಗಳು ಭ್ರೂಣದ ಹಂತದಲ್ಲಿಯೇ ರೂಪುಗೊಳ್ಳುತ್ತದೆ.

·         ವ್ಯಕ್ತಿಯೊಬ್ಬರ ಜೀವಕೋಶಗಳ ಹೊರ ಆವರಣದ ಮೇಲೆ ಇರುವ ಸೂಕ್ಷ್ಮ ಗ್ರಾಹಿಗಳು ಮತ್ತು ಅವುಗಳ ರಾಸಾಯನಿಕ ನಿರ್ಮಾಣಗಳು ಪ್ರತಿಯೊಬ್ಬರಲ್ಲೂ ವಿಭಿನ್ನ. ರಕ್ಷಕ ವ್ಯವಸ್ಥೆಯ ವಿಶಿಷ್ಟ ಕೋಶಗಳು ಇಂತಹ ವಿನ್ಯಾಸಗಳನ್ನು ಗುರುತಿಸಿ, ತಮ್ಮ ನೆನಪಿನಲ್ಲಿ ಇಡುತ್ತವೆ.

·         ಇವುಗಳ ನೆನಪಿಗೆ ತಾಳೆ ಆಗುವ ಕೋಶಗಳೂ “ಸ್ವಂತ”; ಸ್ವಂತ ಕೋಶಗಳನ್ನು ಘಾಸಿಯಾಗದಂತೆ ಕಾಪಾಡುವುದು ಇದರ ಕಾರ್ಯ.

·         ಇವುಗಳ ನೆನಪಿಗೆ ಹೊಂದಾಣಿಕೆ ಆಗದ ಕೋಶಗಳು “ಬಾಹ್ಯ” ಅಥವಾ “ಪರಕೀಯ”.

·         ತನ್ನದಲ್ಲದ ಎಲ್ಲವೂ ರಕ್ಷಕ ವ್ಯವಸ್ಥೆಯ ಪಾಲಿಗೆ ಪರಕೀಯ – ಆಪ್ತ ರಕ್ತಸಂಬಂಧಿಗಳ ಜೀವಕೋಶಗಳೂ ಕೂಡ.

·         ದೇಹವನ್ನು ಸೇರಿದ ಯಾವುದೇ ಪರಕೀಯ ಕೋಶವನ್ನೂ ರಕ್ಷಕ ವ್ಯವಸ್ಥೆ ಉಳಿಯಲು ಬಿಡುವುದಿಲ್ಲ.

·         ಪರಕೀಯ ಕೋಶವನ್ನು ಗುರುತಿಸಿದ ಕೂಡಲೇ ಇಡೀ ರಕ್ಷಕ ವ್ಯವಸ್ಥೆ ಜೋರಾಗಿ ಬೊಬ್ಬೆ ಹೊಡೆದು, ಹಲವಾರು ರಾಸಾಯನಿಕಗಳನ್ನು ಚಿಮ್ಮಿ, ತನ್ನ ಸೇನೆಯ ನೂರಾರು, ಸಾವಿರಾರು, ಲಕ್ಷಾಂತರ ರಕ್ಷಕ ಭಂಟರನ್ನು ಒಗ್ಗೂಡಿಸುತ್ತದೆ. ಇವೆಲ್ಲವೂ ಒಟ್ಟಾಗಿ ಆ ಪರಕೀಯ ಕೋಶದ ಮೇಲೆ ನಿರಂತರ ಧಾಳಿ ಮಾಡುತ್ತಾ, ಅದನ್ನು ಹಣ್ಣುಗಾಯಿ-ನೀರುಗಾಯಿ ಮಾಡಿ, ಕೊನೆಗೆ ಪರಕೀಯ ಕೋಶವನ್ನು ಇಲ್ಲವಾಗಿಸುತ್ತವೆ.

 

ಹೊರಗಿನಿಂದ ಧಾಳಿ ಮಾಡುವ ವೈರಸ್, ಬ್ಯಾಕ್ಟೀರಿಯಾ, ಶಿಲೀಂದ್ರ, ಏಕಾಣು ಪರೋಪಜೀವಿ ಮೊದಲಾದ ಸೋಂಕುಕಾರಕಗಳು ಯಾವುದೇ ಆದರೂ ರಕ್ಷಕ ವ್ಯವಸ್ಥೆ ಕಾರ್ಯಪ್ರವೃತ್ತವಾಗುತ್ತದೆ. ಒಂದು ವೇಳೆ ಧಾಳಿ ಮಾಡುವ ಇಂತಹ ಸೋಂಕುಕಾರಕ ಜೀವಿಗಳ ಪ್ರಭಾವ ಕಡಿಮೆ ಇದ್ದರೆ, ಈ ಹೋರಾಟ ನಮ್ಮ ಗಮನಕ್ಕೂ ಬರುವುದಿಲ್ಲ. ಆದರೆ, ಪರೋಪಜೀವಿಗಳ ಪ್ರಮಾಣ ಅಧಿಕವಾಗಿದ್ದರೆ ರಕ್ಷಕ ವ್ಯವಸ್ಥೆಯ ಹೋರಾಟವೂ ಪ್ರಬಲವಾಗಿರುತ್ತದೆ. ಈ ಕದನದಲ್ಲಿ ನಮ್ಮ ದೇಹದ ಸ್ವಂತ ಜೀವಕೋಶಗಳೂ ಘಾಸಿಗೆ ಒಳಗಾಗಬಹುದು. ಯುದ್ಧ ತೀವ್ರವಾಗುತ್ತಿದ್ದಂತೆ ಸೋಂಕಿನ ಲಕ್ಷಣಗಳು ಕಾಣುತ್ತವೆ. ಜ್ವರ, ಸುಸ್ತು, ನಿರುತ್ಸಾಹ ಮೊದಲಾದ ಚಿಹ್ನೆಗಳು ಪರೋಪಜೀವಿಗಳ ಮೇಲೆ ರಕ್ಷಕ ವ್ಯವಸ್ಥೆ ಹೋರಾಡುತ್ತಿರುವ ಸಂಕೇತಗಳು. ಈ ನಿಟ್ಟಿನಲ್ಲಿ ರಕ್ಷಕ ವ್ಯವಸ್ಥೆಗೆ ಪೂರಕವಾಗಲು ಆಂಟಿಬಯಾಟಿಕ್, ಆಂಟಿಫಂಗಲ್, ಮೊದಲಾದ ಔಷಧಗಳನ್ನು ಬಳಸಬೇಕಾಗುತ್ತದೆ. ಈ ಔಷಧಗಳು ಪರೋಪಜೀವಿಗಳನ್ನು ಕೊಲ್ಲಬಲ್ಲವು ಇಲ್ಲವೇ ನಿಶ್ಚೇಷ್ಟಗೊಳಿಸಬಲ್ಲವು. ಇದರಿಂದ ರಕ್ಷಕ ವ್ಯವಸ್ಥೆಯ ವೈರಿಗಳ ಸಂಖ್ಯೆ ಕಡಿಮೆಯಾಗಿ, ಕದನದ ತೀವ್ರತೆ ಇಳಿಯುತ್ತದೆ. ಇಂತಹ ಔಷಧಗಳನ್ನು ಯಾವ ಹಂತದಲ್ಲಿ ಬಳಸಬೇಕು ಎನ್ನುವುದಕ್ಕೆ ಮಾರ್ಗಸೂಚಿಗಳಿವೆ. ಅದನ್ನು ವೈದ್ಯರು ಸಮಯಾನುಸಾರ ಪಾಲಿಸುತ್ತಾರೆ.

ಬಾಹ್ಯ ಜೀವಕೋಶ ಯಾವಾಗಲೂ ಪರೋಪಜೀವಿಯೇ ಆಗಬೇಕಿಲ್ಲ. ತನ್ನ ದೇಹಕ್ಕೆ ಸಂಬಂಧಿಸಿರದ ಯಾವುದೇ ಜೀವಕೋಶವೂ – ಅದು ಸೋಂಕುಕಾರಕ ಕೋಶವೋ ಅಥವಾ ಸೋಂಕು ತಾರದ ಸಾಮಾನ್ಯ ಜೀವಕೋಶವೋ – ರಕ್ಷಕ ವ್ಯವಸ್ಥೆಯ ಪಾಲಿಗೆ ಅದೊಂದು ವೈರಿ. ಅದನ್ನು ನಿರ್ನಾಮಗೊಳಿಸುವವರೆಗೆ ರಕ್ಷಕ ವ್ಯವಸ್ಥೆಯ ಕೋಶಗಳಿಗೆ ನೆಮ್ಮದಿ ಇಲ್ಲ. ಉದಾಹರಣೆಗೆ, ರಕ್ತದಾನದ ಪ್ರಸಂಗವನ್ನು ಗಮನಿಸಬಹುದು. ರಕ್ತದಲ್ಲಿ ಕೆಂಪು ಮತ್ತು ಬಿಳಿಯ ರಕ್ತಕಣಗಳಿವೆ. ಕೆಂಪು ರಕ್ತಕಣಗಳು ರಾಸಾಯನಿಕಗಳ ಚೀಲ ಮಾತ್ರ. ನೈಜಾರ್ಥದಲ್ಲಿ ಅವುಗಳಿಗೆ ಜೀವವಿಲ್ಲ. ಅಂದರೆ, ಅವುಗಳಲ್ಲಿ ಕೋಶವಿಭಜನೆಗೆ ಬೇಕಾದ ನ್ಯೂಕ್ಲಿಯಸ್ ಎಂಬ ಕೋಶಕೇಂದ್ರವಿಲ್ಲ. ಹೀಗಾಗಿ, ಅವುಗಳನ್ನು ರಕ್ಷಕ ವ್ಯವಸ್ಥೆ ಜೀವಂತ ಕೋಶ ಎಂದು ಪರಿಗಣಿಸುವುದಿಲ್ಲ. ಆಯಾ ಗುಂಪಿನ ರಕ್ತ ಹೊಂದಾಣಿಕೆಯಾದರೆ ಸಾಕು; ರಕ್ಷಕ ವ್ಯವಸ್ಥೆಯ ಅಸಮ್ಮತಿ ಇಲ್ಲ. ಆದರೆ, ರಕ್ತದ ಬಿಳಿಯ ಕಣಗಳು ಜೀವಂತ ಕೋಶಗಳು. ಅವುಗಳನ್ನು ರಕ್ಷಕ ವ್ಯವಸ್ಥೆ ಅಟ್ಟಾಡಿಸಿ ಧ್ವಂಸ ಮಾಡುತ್ತವೆ. ಅಂದರೆ, ಒಂದು ವ್ಯಕ್ತಿಯ ರಕ್ಷಕ ವ್ಯವಸ್ಥೆ ತನ್ನ ದೇಹ ಸೇರಿದ ಮತ್ತೊಂದು ಮನುಷ್ಯನ ಯಾವುದೇ ಜೀವಂತ ಕೋಶವನ್ನೂ ಪರಕೀಯ ಎಂದೇ ಭಾವಿಸಿ, ಅದರ ಮೇಲೆ ಸಮರ ಸಾರಿ, ಅದನ್ನು ಇಲ್ಲವಾಗಿಸುತ್ತದೆ. ಹೀಗಾಗಿ ಈಚಿನ ದಿನಗಳಲ್ಲಿ ದಾನಿಯ ರಕ್ತದಲ್ಲಿನ ಕೆಂಪು ರಕ್ತಕಣಗಳನ್ನು ಪ್ರತ್ಯೇಕಿಸಿ, ಬಿಳಿಯ ರಕ್ತಕಣಗಳನ್ನು ವಿಕಿರಣದ ಮೂಲಕ ಕೊಂದು, ಅಂತಹ ರಕ್ತವನ್ನು ಮಾತ್ರ ರೋಗಿಗೆ ನೀಡಲಾಗುತ್ತದೆ.

ಅಂಗಾಂಗ ಕಸಿ ಮತ್ತು ರಕ್ಷಕ ವ್ಯವಸ್ಥೆ:

·         ಅಂಗ ಎಂದರೆ ಕೋಟ್ಯಂತರ ಜೀವಕೋಶಗಳ ಸಮೂಹ

·         ಇಷ್ಟೊಂದು ಪರಕೀಯ ಕೋಶಗಳನ್ನು ದೇಹದೊಳಗೆ ಇರಲು ರಕ್ಷಕ ವ್ಯವಸ್ಥೆ ಬಿಡುವುದಿಲ್ಲ

·         ಅಂಗಾಂಗ ಕಸಿ ಮತ್ತು ರಕ್ಷಕ ವ್ಯವಸ್ಥೆಯ ಸಮನ್ವಯ ವೈದ್ಯರಿಗೆ ಅತ್ಯಂತ ಕಠಿಣ ಸವಾಲು

·         ಸಾಧ್ಯವಾದಷ್ಟೂ ಕಡಿಮೆ ಪರಕೀಯ (ಅತ್ಯಂತ ನಿಕಟ ವಲಯದ ಸಂಬಂಧಿಗಳ) ಅಂಗವನ್ನು ಕಸಿ ಮಾಡಬೇಕು

·         ರಕ್ಷಕ ವ್ಯವಸ್ಥೆಯ ಸಾಮರ್ಥ್ಯವನ್ನು ಕುಂದಿಸುವ ಔಷಧಗಳನ್ನು ಸದಾ ನೀಡಬೇಕು

·         “ಅತ್ಯಂತ ಕಡಿಮೆ ಪರಕೀಯ” ಅಂಗವನ್ನು ಹುಡುಕುವುದು ಅತ್ಯಂತ ತ್ರಾಸದಾಯಕ

·         ರೋಗಿ ಮತ್ತು ದಾನಿಗಳ ಜೆನೆಟಿಕ್ ಗುಣಗಳು ಎಷ್ಟು ಹೊಂದಾಣಿಕೆ ಆಗುತ್ತವೆ ಎಂದು ನೋಡಬೇಕು

·         ಕಸಿಯ ನಂತರದ ಸವಾಲುಗಳನ್ನು ನಿಭಾಯಿಸಬೇಕು

 

ಅಂಗಾಂಗ ಕಸಿಯ ಅಗತ್ಯ ಇರುವವರು ನೂರು ಮಂದಿಯಾದರೆ, ದಾನಿಗಳ ಲಭ್ಯತೆ ಒಂದು ಎನ್ನಬಹುದು. ಅಂಗಾಂಗ ಕಸಿಯ ವಿಷಯದಲ್ಲಿ ಕಾನೂನು ಬಹಳ ಕಟ್ಟುನಿಟ್ಟು. ಯಾರಿಗೂ ಅನ್ಯಾಯ ಆಗದಂತೆ ಹೊಸೆಯುವ ಕ್ಲಿಷ್ಟಕರ ಕಾನೂನುಗಳಲ್ಲಿ ಯಾವುದೋ ಒಂದು ಪಕ್ಷಕ್ಕೆ ನಷ್ಟ ಹೆಚ್ಚೇ ಆಗಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ರೋಗಿಗಳ ಪಾಡು ಹೇಳತೀರದು. ತಂತ್ರಜ್ಞಾನವನ್ನು ಬಳಸಿ ಎಷ್ಟೇ ಚೆನ್ನಾಗಿ ಈ ಅಂತರವನ್ನು ನಿಭಾಯಿಸಲು ಪ್ರಯತ್ನಿಸಿದರೂ ಬಹಳ ಬಾರಿ ದಾನಿಗಳ ಅಂಗಾಂಗಗಳು ದೊರೆಯದೆ ರೋಗಿಗಳು ಮೃತಪಟ್ಟದ್ದು, ಕೆಲವೊಂದು ಸಮಯದಲ್ಲಿ ದೊರೆತಿರುವ ದಾನಿಯ ಅಂಗವನ್ನು ಪಡೆಯಬಲ್ಲ ರೋಗಿ ಕ್ಲುಪ್ತ ವೇಳೆಯಲ್ಲಿ ಅಲಭ್ಯರಾಗಿ, ಆ ಅಂಗ ವ್ಯರ್ಥವಾಗುವುದು ಇದ್ದೇ ಇರುತ್ತದೆ.   

ಮಾನವರ ದೇಹಕ್ಕೆ ಪ್ರಾಣಿಗಳ ಅಂಗಾಂಗಗಳನ್ನು ಕಸಿ ಮಾಡಲು ಸಾಧ್ಯವೇ?

·         ಮನುಷ್ಯ-ಮನುಷ್ಯರ ಜೆನೆಟಿಕ್ ಮಟ್ಟದಲ್ಲೇ ಸಾಮ್ಯತೆ ಇಲ್ಲ; ಇತರ ಪ್ರಭೇದದ ಜೀವಿಯ ಅಂಗ ಹೊಂದಿಕೆ ಆಗುವುದು ಹೇಗೆ?

·         ಮಾನವನ ಜೆನೆಟಿಕ್ ರಚನೆಗೆ ಅತ್ಯಂತ ನಿಕಟವಾದ ಜೀವಿಗಳು: ಹಂದಿ, ಮಂಗ, ಚಿಂಪಾಂಜಿ, ಬಬೂನ್

·         ಅಂಗಗಳ ಗಾತ್ರ, ರಚನೆ, ರಕ್ತಪರಿಚಲನೆಯ ಮಾದರಿ, ರಕ್ಷಕ ವ್ಯವಸ್ಥೆಯ ಸಾಮ್ಯಗಳ ದೃಷ್ಟಿಯಿಂದ ಹಂದಿಗಳು ಮಾನವನ ದೇಹದ ಅಂಗಾಂಗಗಳಿಗೆ ಹೆಚ್ಚು ಸೂಕ್ತ

·         ಹಂದಿಗಳ ಮೂತ್ರಪಿಂಡಗಳ ಕಸಿಯನ್ನು ಮಾನವ ದೇಹಕ್ಕೆ ಮಾಡುವ ಪ್ರಯತ್ನಗಳು 1980ರ ದಶಕದಿಂದ ನಡೆಯುತ್ತಿವೆ; ಸಾಫಲ್ಯ ತೀರಾ ಕಡಿಮೆ

·         ಹಂದಿಗಳ ವೈರಸ್ ಕಾಯಿಲೆಗಳಿಂದ ಕಸಿಗಳು ವಿಫಲವಾಗಿವೆ

·         ಆಧುನಿಕ ಜೆನೆಟಿಕ್ ತಂತ್ರಜ್ಞಾನವನ್ನು ಬಳಸಿ, ಹಂದಿಗಳ ಮೂತ್ರಪಿಂಡಗಳ 69 ಮೇಲ್ಮೈ ಗ್ರಾಹಿಗಳನ್ನು ಅಳಿಸಿ, “ಈ ಅಂಗ ಪರಕೀಯ” ಎನ್ನುವ ಭಾವನೆ ಮಾನವ ರಕ್ಷಕ ವ್ಯವಸ್ಥೆಗೆ ಬಾರದಂತೆ ಮಂಕುಬೂದಿ ಎರಚಲಾಗಿದೆ

·         ವೈರಸ್ ಪತ್ತೆ ಮತ್ತು ಚಿಕಿತ್ಸೆಯ ಅತ್ಯುತ್ತಮ ಮಾದರಿಗಳಿಂದ ಸೋಂಕು ನಿರ್ವಹಣೆ ಸಾಧ್ಯ

ಜೀವಿಗಳ ಅಂಗಾಂಗಗಳ ಮೇಲ್ಮೈ ಜೆನೆಟಿಕ್ ರಚನೆಯನ್ನು ಬದಲಿಸಿ, ಅವನ್ನು ನಮ್ಮ ರಕ್ಷಕ ವ್ಯವಸ್ಥೆಗೆ ಒಗ್ಗುವಂತೆ ಮಾಡುತ್ತಾ, ಮತ್ತೊಂದೆಡೆ ಅಂತಹ ಪ್ರಾಣಿಗಳಲ್ಲಿ ಇರಬಹುದಾದ ಅಪಾಯಕಾರಿ ಸೋಂಕುಗಳನ್ನು ನಿವಾರಿಸುತ್ತಾ, ಇನ್ನೊಂದೆಡೆ ಹಂದಿಯ ಮೂತ್ರಪಿಂಡದ ಜೊತೆಜೊತೆಗೆ ಅದರ ರಕ್ಷಕ ವ್ಯವಸ್ಥೆಯ ಥೈಮಸ್ ಎನ್ನುವ ಮತ್ತೊಂದು ಅಂಗವನ್ನೂ ಕಸಿ ಮಾಡುವ ಪ್ರಯತ್ನದ ಮೂಲಕ ಹೆಚ್ಚಿನ ಸುರಕ್ಷತೆಯನ್ನು ನೀಡುವ ಪ್ರಯತ್ನಗಳು ಸಫಲವಾದರೆ ಮಾನವ ಕುಲವನ್ನು ಸದ್ಯಕ್ಕೆ ಕಾಡುತ್ತಿರುವ ಮತ್ತೊಂದು ದೊಡ್ಡ ಆರೋಗ್ಯ ಸಮಸ್ಯೆಯನ್ನು ಗೆದ್ದಂತೆ ಆಗುತ್ತದೆ.

-------------------------

27/5/2024 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನಕ್ಕೆ ಮಾಹಿತಿ ಕೊಟ್ಟದ್ದು. ಕೊಂಡಿ: https://vijaykarnataka.com/news/vk-special/why-xenotransplantation-is-failing-again-and-again/articleshow/110448999.cms  


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ