ಭಾನುವಾರ, ಜೂನ್ 16, 2024


 

ಮೂಗಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ನಮ್ಮ ಮುಖದ ಮೇಲೆ ಪ್ರಧಾನವಾಗಿ ಕಾಣುವ ಅಂಗ ಮೂಗು. ಮುಖದ ಮೇಲಿನ ಎಲ್ಲ ಅಂಗಗಳೂ ಸರಿಸುಮಾರು ಒಂದು ಸಮತಲದಲ್ಲಿ ಇದ್ದರೆ, ಮೂಗು ಮಾತ್ರ ಮುಂದಕ್ಕೆ ಚಾಚಿಕೊಂಡು ತನ್ನ ಛಾಪನ್ನು ಮೂಡಿಸುವಂತೆ ಇರುತ್ತದೆ. ಮೂಗು ಮುಖದ ಸೌಂದರ್ಯದ ಪ್ರಮುಖ ಭಾಗ. ಈಜಿಪ್ಟ್ ರಾಣಿ ಕ್ಲಿಯೋಪಾತ್ರಾಳ ಮೂಗಿನ ಅಂದಕ್ಕೆ ರೋಮನ್ ಸಾಮ್ರಾಜ್ಯ ಅಲ್ಲೋಲಕಲ್ಲೋಲವಾಗಿತ್ತು. ರಾಮಾಯಣದ ಸುಂದರಕಾಂಡದಲ್ಲಿ ಸೀತೆಯನ್ನು ಅಶೋಕವನದಲ್ಲಿ ಕಾಯುವ ರಾಕ್ಷಸಿಯರ ವಿಲಕ್ಷಣ ಮೂಗನ್ನು ಬಣ್ಣಿಸಿ, ಅವರ ಕುರೂಪವನ್ನು ತೋರುವುದಾಗಿದೆ. ಬಹಳ ಕಾಲದಿಂದ ಮೂಗು ಪ್ರತಿಷ್ಠೆಯ ಸಂಕೇತ ಕೂಡ. ಮರ್ಯಾದೆಯ ರೂಪಕದಂತೆ ಮೂಗಿನ ಉಲ್ಲೇಖವನ್ನು ಬಳಸುವುದಿದೆ. ಕುಮಾರವ್ಯಾಸನೂ ಭೀಮನ ಬಾಯಲ್ಲಿ ಸೋದರರಿಂದ ಉಂಟಾದ ತನ್ನ ಕ್ಲೈಬ್ಯದ ಕುರಿತು “ನಾನು ಮೂಗುಳ್ಳವನೇ?” ಎಂದು ಪರಿತಪಿಸುವಂತೆ ಚಿತ್ರಿಸುತ್ತಾನೆ. ತಪ್ಪು ಮಾಡಿದವರ ಮೂಗನ್ನು ಕತ್ತರಿಸುವ ಪದ್ದತಿ ಬಹಳ ಕಾಲದಿಂದ ಭಾರತದಲ್ಲಿ ಚಾಲ್ತಿಯಲ್ಲಿತ್ತು. ಇಂತಹವರ ಮೂಗನ್ನು ಪುನಃ ನಿರ್ಮಾಣ ಮಾಡುವಂತಹ ಸುರೂಪಿ ಶಸ್ತ್ರಚಿಕಿತ್ಸೆಯ ಕೌಶಲ್ಯ ನಮ್ಮ ವೈದ್ಯರಿಗೆ ಸಾವಿರಾರು ವರ್ಷಗಳ ಹಿಂದೆಯೇ ಸಿದ್ಧಿಸಿತ್ತು. ಹೀಗೆ, ಮೂಗಿನ ಜೊತೆಗೆ ನಮ್ಮ ಭಾವಕೋಶದ ಒಡನಾಟಕ್ಕೆ ನಿಕಟ ಸಂಬಂಧವಿದೆ.

 

ಮೂಗು ಮುಖದ ನಡುಭಾಗದ ಅಂಗ. ಮಧ್ಯದಲ್ಲಿನ ಗೋಡೆ ಮೂಗನ್ನು 2 ಭಾಗಗಳಾಗಿ ವಿಂಗಡಿಸುತ್ತದೆ. ಮೂಗಿನ ಒಂದೊಂದು ಬದಿಯೂ 8 ವಿವಿಧ ಮೂಳೆಗಳ ಭಾಗಗಳನ್ನು ಒಳಗೊಂಡಿದೆ. ಇದರ ಜೊತೆಗೆ ಮೂಗಿನ ಎರಡೂ ಬದಿಗಳೂ ಸೇರಿ 9 ಮೃದ್ವಸ್ತಿಗಳು ಇರುತ್ತವೆ. ಇವೆರಡರ ಸಂಘಟಿತ ರಚನೆಯಿಂದ ಮೂಗು ಆಕಾರ ಪಡೆಯುತ್ತದೆ. ಮುಖದ ಸ್ನಾಯುಗಳು ಮೂಗಿಗೂ ಹರಡಿ ಉಸಿರಾಟದಲ್ಲಿ ಮತ್ತು ಮುಖದ ಭಾವಗಳನ್ನು ವ್ಯಕ್ತಪಡಿಸುವಲ್ಲಿ ನೆರವಾಗುತ್ತವೆ. ಹೀಗೆ ಸುಮಾರು 10 ವಿವಿಧ ಸ್ನಾಯುಗಳು ಮೂಗಿನ ಕಾರ್ಯದಲ್ಲಿ ಪಾತ್ರ ವಹಿಸುತ್ತವೆ. ಭ್ರೂಮಧ್ಯದ ಭಾಗದಿಂದ ಮೊದಲುಗೊಂಡು ಮೂಗಿನ ತುದಿಯವರೆಗೆ ಇರುವ 4 ಪದರಯುಕ್ತ ಚರ್ಮದ ಕೆಲಭಾಗಗಳು ತೆಳು; ಕೆಲಭಾಗಗಳು ದಪ್ಪ. ಚರ್ಮದ ಕೆಲಭಾಗಗಳು ಮೂಳೆ-ಮೃದ್ವಸ್ತಿಗಳಿಗೆ ಅಂಟಿಕೊಂಡಿದ್ದರೆ ಮತ್ತೂ ಕೆಲಭಾಗಗಳನ್ನು ಅತ್ತಿತ್ತ ಸರಿಸಬಹುದು. ಮೂಗಿನ ಚರ್ಮದಲ್ಲಿ ಬೆವರನ್ನು ಸ್ರವಿಸುವ ಸ್ವೇದ ಗ್ರಂಥಿಗಳು ಮತ್ತು ತೈಲಯುಕ್ತ ಸ್ರವಿಕೆಯ ಮೇದೋ ಗ್ರಂಥಿಗಳು ಹೇರಳವಾಗಿ ಇರುತ್ತವೆ. ಈ ಕಾರಣಕ್ಕಾಗಿಯೇ ಮೂಗಿನ ಮೇಲೆ ಮೊಡವೆಗಳ ಸಮಸ್ಯೆ ಹೆಚ್ಚು. ಪುರುಷ ಹಾರ್ಮೋನುಗಳ ಪ್ರಭಾವದಿಂದ ಗಂಡಸರ ಮೂಗಿನ ಗಾತ್ರ ದೊಡ್ಡದು; ಹೆಂಗಸರ ಮೂಗು ಸಣ್ಣದು.  

 

ಹೊಳ್ಳೆಗಳಿಂದ ಆರಂಭವಾಗುವ ಮೂಗಿನ ಒಳಭಾಗ ಪಿರಮಿಡ್ ಆಕಾರದಲ್ಲಿ ಮೇಲೆ ವ್ಯಾಪಿಸುತ್ತದೆ. ಆರಂಭದ ಭಾಗದಲ್ಲಿ ಮೃದ್ವಸ್ತಿ, ಚರ್ಮ, ಕೂದಲು, ಲೋಳೆ ಪದರ, ಹಾಗೂ ವಿಫುಲ ಸಂಖ್ಯೆಯ ಮೇದೋ ಗ್ರಂಥಿಗಳು ಇರುತ್ತವೆ. ಮೇಲೆ ಹೋದಂತೆಲ್ಲ ಲೋಳೆ ಪದರದ ರಚನೆ ಬದಲಾಗುತ್ತಾ, ಉಸಿರಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಡಾಗುತ್ತದೆ. ಮೂಗಿನ ಅತಿ ಮುಖ್ಯ ಕಾರ್ಯ ಉಸಿರಾಟದ ಸಂವಹನೆ. ಅದರ ಇತರ ಕಾರ್ಯಗಳು ವಾಸನೆಯ ಗ್ರಹಿಕೆ ಮತ್ತು ಧ್ವನಿಯ ನಿರ್ವಹಣೆ.    

 

ಮೂಗಿನ ಎರಡೂ ಬದಿಗಳಲ್ಲಿ ಶಂಕುವಿನಂತಹ ತೆಳು ಪದರದ ತಲಾ 3 ಮೂಳೆಗಳಿವೆ. ಇವು ಒಟ್ಟಾಗಿ ಮೂಗಿನ ಒಳಭಾಗದಲ್ಲಿ ಮೂರು ಉಬ್ಬುಗಳನ್ನು, ನಾಲ್ಕು ತಗ್ಗುಗಳನ್ನು ನಿರ್ಮಿಸುತ್ತವೆ. ಮೂಗಿನ ಒಂದೊಂದು ಬದಿಯಲ್ಲೂ 4 ರಂತೆ ಒಟ್ಟು 8  ಸೈನಸ್ ಇರುತ್ತವೆ. ಸೈನಸ್ ಎನ್ನುವುದು ಮೂಲತಃ ಮುಖದ ಕೆಲ ಮೂಳೆಗಳ ಒಳಗಿನ ಟೊಳ್ಳು ಜಾಗ. ಇದರ ಏಕೈಕ ದ್ವಾರ ಮೂಗಿನ ಒಳಭಾಗಕ್ಕೆ ತೆರೆದುಕೊಳ್ಳುತ್ತದೆ. ಮನುಷ್ಯ ಚತುಷ್ಪಾದಿಯಾಗಿದ್ದಾಗ ಎಲ್ಲ ಸೈನಸ್ಗಳ ದ್ವಾರಗಳು ಗುರುತ್ವಕ್ಕೆ ಸಂವಾದಿಯಾಗಿ ಇದ್ದವು. ಆದರೆ ಮನುಷ್ಯ ಜೀವಿ ದ್ವಿಪಾದಿಯಾಗಿ ಬದಲಾದಾಗ ಕೆಲ ಸೈನಸ್ಗಳ ದ್ವಾರಗಳು ಸಹಜವಾಗಿಯೇ ಗುರುತ್ವಕ್ಕೆ ವಿರುದ್ಧವಾಗಿ ನಿಲ್ಲುತ್ತವೆ. ಇಂತಹ ಸೈನಸ್ಗಳಲ್ಲಿ ಸ್ರವಿಸುವ ಲೋಳೆ ಸರಾಗವಾಗಿ ಹೊರಹೋಗಲಾರದೆ ಅಲ್ಲಿಯೇ ಸಂಚಯವಾಗುತ್ತವೆ. ಇದರೊಳಗೆ ಸೋಂಕು ಉಂಟಾಗುವ ಸಾಧ್ಯತೆಗಳೂ ಹೆಚ್ಚು. ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಬಾರಿ ಕಾಡುವ ಸೈನಸೈಟಿಸ್ ಎನ್ನುವ ಸಮಸ್ಯೆಯ ಮೂಲ ಇದೇ.

 

ಉಸಿರಾಟದ ವೇಳೆ ಹೊರಗಿನ ವಾತಾವರಣದಿಂದ ನಾವು ಸೆಳೆದುಕೊಳ್ಳುವ ಗಾಳಿ ಮೂಗಿನ ಮೂಲಕ ಹಾಯುವಾಗ ಮೊದಲು ಹೊರಮೂಗಿನ ಕೂದಲು ಹಾಗೂ ಶ್ಲೇಷ್ಮದಲ್ಲಿ ಸೋಸಲ್ಪಡುತ್ತದೆ. ಧೂಳಿನ ಕಣಗಳಿಂದ ಮುಕ್ತವಾದ ಗಾಳಿ ಮೂಗಿನ ಉಬ್ಬು-ತಗ್ಗುಗಳ ಮೂಲಕ ಸಾಗುತ್ತಾ, ಶಂಕುಮೂಳೆಗಳು, ಲೋಳೆಪದರ ಮತ್ತು ಸೈನಸ್ಗಳು ಒದಗಿಸುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹೊರಗಿನ ಗಾಳಿಯ ಉಷ್ಣಾಂಶ ಏನೇ ಇದ್ದರೂ ಮೂಗಿನ ವ್ಯವಸ್ಥೆ ಅದನ್ನು ಶರೀರದ ತಾಪಮಾನಕ್ಕೆ ಹತ್ತಿರವಾಗಿ ತರುತ್ತದೆ. ಈ ರೀತಿ ಶುದ್ಧವಾದ, ತೇವಾಂಶಯುಕ್ತವಾದ ಮತ್ತು ತಾಪಮಾನ ಮಾರ್ಪಾಡಾದ ಗಾಳಿ ಶ್ವಾಸಕೋಶವನ್ನು ಸೇರುತ್ತದೆ. ಇದಕ್ಕೆ ವಿರುದ್ಧವಾಗಿ ಬಾಯಿಂದ ಉಸಿರಾಡುವ ಗಾಳಿಯ ಗುಣಮಟ್ಟ ಇಷ್ಟೊಂದು  ಬದಲಾಗುವುದಿಲ್ಲ. ಶ್ವಾಸಕೋಶದ ಕೆಲಸ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೂಗಿನ ಮೂಲಕ ಉಸಿರಾಡುವುದು ಆರೋಗ್ಯಕರ. ಆರೋಗ್ಯವಂತ ವ್ಯಕ್ತಿಯೊಬ್ಬರು ದಿನವೊಂದಕ್ಕೆ ಸುಮಾರು 10,000 ದಿಂದ 12,000 ಬಾರಿ ಉಸಿರಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿದಿನ ಸುಮಾರು 300-400 ಎಂ.ಎಲ್. ನೀರಿನಷ್ಟು ತೇವಾಂಶ ಮೂಗಿನಿಂದ ಒದಗುತ್ತದೆ. ಬಾಯಿಂದ ಉಸಿರಾಡುವಾಗ ಇದಕ್ಕಿಂತ ಹೆಚ್ಚಿನ ತೇವಾಂಶ ಖರ್ಚಾಗುತ್ತಾದರೂ ಶ್ವಾಸಕೋಶಗಳಿಗೆ ಒದಗುವ ಗಾಳಿಯ ಗುಣಮಟ್ಟ ಕಡಿಮೆ ಇರುತ್ತದೆ.

 

ಮಾನವ ಶರೀರದಲ್ಲಿ ನಡೆಯುವ ಅತ್ಯಂತ ವೇಗವಾದ ಪ್ರಕ್ರಿಯೆಗಳಲ್ಲಿ ಒಂದಾದ ಸೀನು ಮೂಗಿನ ಮೂಲದ್ದು. ಆ....ಕ್ಷೀ... ಎನ್ನುವ ಕ್ರಿಯೆಯ ವೇಗ ಗಂಟೆಗೆ 150 ಕಿಲೋಮೀಟರ್ ದಾಟುತ್ತದೆ. ಮೂಗಿನ ಲೋಳೆಪದರದ ತುರಿಕೆ ಉಂಟಾದಾಗ ಮಿದುಳು ಕೂಡಲೇ ಗ್ರಹಿಸಿ, ಅದನ್ನು ಹೋಗಲಾಡಿಸಲು ಸಂಕೇತಗಳನ್ನು ಹೊಟ್ಟೆ, ವಪೆ, ಎದೆ ಮೊದಲಾದ ಮಾಂಸಖಂಡಗಳಿಗೆ ರವಾನಿಸುತ್ತದೆ. ಈ ಸ್ನಾಯುಗಳ ನೆರವಿನಿಂದ ಶ್ವಾಸಕೋಶಗಳು ಅತೀವ ವೇಗದಲ್ಲಿ ಗಾಳಿಯನ್ನು ಶ್ವಾಸಮಾರ್ಗಗಳಿಂದ ಹೊರ ಹಾಕುತ್ತವೆ. ಪ್ರತಿಯೊಂದು ಸೀನಿನಲ್ಲಿ ಸುಮಾರು 40,000 ಅತ್ಯಂತ ಸಣ್ಣ ದ್ರವಕಣಗಳು ಇರುತ್ತವೆ. ಎಷ್ಟೇ ವೇಗದಿಂದ ಚಿಮ್ಮಿ ಬಂದರೂ ಮೂಗಿನಿಂದ ಹೊರಬಂದ ಕೂಡಲೇ ಎಲ್ಲ ದಿಕ್ಕುಗಳಲ್ಲೂ ಈ ದ್ರವಕಣಗಳು ವ್ಯಾಪಿಸುವುದರಿಂದ ಅವು ಸುಮಾರು 5-6 ಅಡಿಗಳ ದೂರ ತಲುಪುವುದರೊಳಗೆ ತೀರಾ ನಿರ್ಬಲವಾಗುತ್ತವೆ. ಹೀಗಾಗಿ ಕೋವಿಡ್-19 ಜಾಗತಿಕ ಸೋಂಕಿನ ವೇಳೆ ವ್ಯಕ್ತಿಗಳ ನಡುವೆ 6 ಅಡಿಗಳಷ್ಟು ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿತ್ತು.   

 

ಘ್ರಾಣಶಕ್ತಿ ಅಥವಾ ವಾಸನೆಗಳನ್ನು ಪತ್ತೆ ಹಚ್ಚುವಿಕೆ ಮೂಗಿನ ಇನ್ನೊಂದು ಕೆಲಸ. ಮೂಗಿನ ಮೇಲ್ಭಾಗದ ವಿಶೇಷ ಲೋಳೆಪದರದಲ್ಲಿ ಘ್ರಾಣಗ್ರಾಹಿಗಳೆಂಬ ವಿಶಿಷ್ಟ ನರಕೋಶಗಳಿವೆ. ಈ ನರಕೋಶಗಳ ಕೆಲವಂಶ ಮೂಗನ್ನು ಆವರಿಸಿರುವ ಮೂಳೆಗಳ ಮೇಲಿನ ಪದರಗಳಲ್ಲೂ ಇರುತ್ತವೆ. ಮೂಗಿನಿಂದ ಸೆಳೆದುಕೊಂಡ ಗಾಳಿಯಲ್ಲಿ ಇರುವ ಗಂಧಕಾರಕ ರಾಸಾಯನಿಕಗಳನ್ನು ಈ ಗ್ರಾಹಿಗಳು ಪತ್ತೆ ಮಾಡುತ್ತವೆ. ಬಾಯಲ್ಲಿ ಇಟ್ಟುಕೊಂಡ ಆಹಾರವನ್ನು ನಾಲಗೆಯ ಮೂಲಕ ಒಳಗೆ ಸೆಳೆದುಕೊಂಡಾಗ ಅದರ ವಾಸನೆ ಅಂಗಳುವಿನ ಭಾಗದಿಂದ ಹಿಮ್ಮುಖವಾಗಿ ಚಲಿಸಿ ಗ್ರಾಹಿಗಳನ್ನು ಪ್ರಚೋದಿಸುತ್ತದೆ. ವಾಸನೆ ಎನ್ನುವುದು ಅತ್ಯಂತ ಪ್ರಾಥಮಿಕ ಅರಿವು. ಮಿದುಳಿನ ವಿಕಾಸ ಸಾಕಷ್ಟು ಕೆಳಹಂತಗಳಲ್ಲಿ ಇರುವ ಜೀವಿಗಳಲ್ಲೂ ವಾಸನೆಯ ಅರಿವು ತೀಕ್ಷ್ಣವಾಗಿ ಇರುತ್ತದೆ. ನರಮಂಡಲದ ಹಲವಾರು ಭಾಗಗಳು ವಾಸನೆಯಿಂದ ಪ್ರಚೋದಿತವಾಗುತ್ತವೆ. ಒಟ್ಟಾರೆ, ವಾಸನೆಯನ್ನು ಪತ್ತೆ ಮಾಡಿ, ಅದರ ವೈವಿಧ್ಯವನ್ನು ಗ್ರಹಿಸಲು ನರಮಂಡಲದಲ್ಲಿ 27 ತಾಣಗಳಿವೆ. ಅದರಿಂದ ಬರುವ ಮಾಹಿತಿ ಶರೀರದ ಸುಮಾರು 20 ವಿವಿಧ ಭಾಗಗಳನ್ನು ತಲುಪುತ್ತದೆ ಎಂದರೆ ಇದರ ಮಹತ್ವ ತಿಳಿಯುತ್ತದೆ. ನಾಗರಿಕತೆ ಬೆಳೆದಂತೆ ಕಣ್ಣು, ಕಿವಿಗಳ ಕೆಲಸ ಹೆಚ್ಚಾಗಿ, ಮೂಗಿನ ಘ್ರಾಣಶಕ್ತಿಗೆ ನೀಡುವ ಮಹತ್ವ ಮನುಷ್ಯರಲ್ಲಿ ಕಡಿಮೆಯಾಗಿದೆ. ಆದಾಗ್ಯೂ, ನವಜಾತ ಶಿಶುಗಳಲ್ಲಿ ಈ ಸಾಮರ್ಥ್ಯ ಜನ್ಮತಃ ಅಧಿಕವಾಗಿಯೇ ಇರುತ್ತದೆ ಎನ್ನಲಾಗಿದೆ.

 

ಧ್ವನಿಯ ನಿರ್ವಹಣೆ ಮೂಗಿನ ಮತ್ತೊಂದು ಕಾರ್ಯ. ಶ್ವಾಸಕೋಶಗಳಿಂದ ಹೊರಬರುವ ಗಾಳಿ ಗಂಟಲಿನ ಧ್ವನಿಪೆಟ್ಟಿಗೆಯ ಮೂಲಕ ಹಾಯುವಾಗ ಶಬ್ದದ ಸ್ವರೂಪ ಪಡೆಯುತ್ತದೆ. ಆ ಶಬ್ದವನ್ನು ಭಾಷಾಸೂತ್ರಗಳ ಅನ್ವಯ ಅರ್ಥಪೂರ್ಣ ಪ್ರಕ್ರಿಯೆಯಾಗಿ ಬದಲಾಯಿಸುವುದು ಬಾಯಿ ಮತ್ತು ಮೂಗು. ಗಂಟಲಿನ ಅಂಗುಳು ಭಾಗವನ್ನು ಕೆಳಗೆ ಒತ್ತಿ, ಗಾಳಿಯನ್ನು ಮೂಗಿನ ಮೂಲಕ ಹಾಯಿಸಿ, ಅನುನಾಸಿಕ ಅಕ್ಷರಗಳನ್ನು ಉಚ್ಛರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೂಗಿನ ಆಸುಪಾಸು ಇರುವ ಸೈನಸ್ಗಳು ಧ್ವನಿಯ ಅನುರಣನಕ್ಕೆ ಕಾರಣವಾಗಿ, ಶಬ್ದಗಳಿಗೆ ಗಾತ್ರವನ್ನು ನೀಡುತ್ತವೆ. ಜಗತ್ತಿನ ಹಲವಾರು ಭಾಷೆಗಳಲ್ಲಿ ಅನುನಾಸಿಕ ಅಕ್ಷರಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಹುತೇಕ ಭಾರತೀಯ ಭಾಷೆಗಳು ಇದಕ್ಕೆ ಮಾದರಿ. ಸಂಸ್ಕೃತದ ಪ್ರಭಾವ ದಟ್ಟವಾಗಿರುವ ಮಲಯಾಳಂನಂತಹ ಭಾಷೆಗಳಲ್ಲಿ ಮೂಗಿನ ಮೂಲಕ ಉಚ್ಛರಿಸುವ ಪದಗಳೇ ಹೆಚ್ಚು. ಅಂತೆಯೇ, ಫ್ರೆಂಚ್, ಪೋರ್ತುಗೀಸ್, ನೇಪಾಳಿ, ಚೆರೋಕಿ ಮೊದಲಾದ ಭಾಷೆಗಳು ಕೂಡ.

 

ಮೂಗು ಕೇವಲ ಸೌಂದರ್ಯ ಮತ್ತು ಪ್ರತಿಷ್ಠೆಯ ರೂಪಕ ಮಾತ್ರವಲ್ಲ. ಅದು ನಮ್ಮ ಶರೀರದ ಅನೇಕ ಮುಖ್ಯ ಕಾರ್ಯಗಳನ್ನು ನಿರ್ವಹಿಸುವ ಮಾಧ್ಯಮ ಕೂಡ. ಮೂಗಿನ ಗಣಿತ ಮಾತುಗಳಿಗೆ ಮಿಗಿಲಾದ ಅಚ್ಚರಿಗಳ ಸಮಾಗಮ.  

-----------------------

ಜೂನ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇಡೀ ಸಂಚಿಕೆಯ ಉಚಿತ ಓದಿಗಾಗಿ ಕೊಂಡಿ: https://flipbookpdf.net/web/site/4611bb6eb6dd25f80ac70b8db3d1e9a9faa259ed202406.pdf.html


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ