ಭಾನುವಾರ, ಜೂನ್ 16, 2024


 

ವೈದ್ಯಕೀಯದಲ್ಲಿ ದೂರಸಂಪರ್ಕ – ಭಾರತದ ಉದಾಹರಣೆ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಜೀವನದ ಪ್ರಾಥಮಿಕ ಅಗತ್ಯಗಳಲ್ಲಿ ಆರೋಗ್ಯ ರಕ್ಷಣೆಯೂ ಒಂದು. ಅನೇಕ ದೇಶಗಳಲ್ಲಿ ಪ್ರಜೆಗಳ ಆರೋಗ್ಯವನ್ನು ಮೂಲಭೂತ ಹಕ್ಕು ಎಂದು ಭಾವಿಸಿ, ಅವರ ಆರೋಗ್ಯ ರಕ್ಷಣೆಯ ಹೊಣೆಯನ್ನು ಸರ್ಕಾರಗಳು ನಿರ್ವಹಿಸುತ್ತವೆ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಅಂತಹ ಅನುಕೂಲ ಇಲ್ಲ. ದಶಕಗಳ ಕಾಲ ನಮ್ಮನ್ನು ಆಳಿದ ಸರ್ಕಾರಗಳು ಪ್ರಜೆಗಳ ಆರೋಗ್ಯ ರಕ್ಷಣೆಯನ್ನು ಎಂದೂ ಆದ್ಯತೆಯೆಂದು ಪರಿಗಣಿಸಲೇ ಇಲ್ಲ. ನಮ್ಮ ದೇಶದ ಬೃಹತ್ ಜನಸಂಖ್ಯೆಗೆ ಹೋಲಿಸಿದರೆ ಜನರ ಆರೋಗ್ಯಕ್ಕೆಂದು ಸರ್ಕಾರಗಳು ಆಯವ್ಯಯದಲ್ಲಿ ನಿಗದಿ ಪಡಿಸುವ ಮೊತ್ತ ತೀರಾ ಅಲ್ಪ. ಇದರಲ್ಲಿ ಬಹುತೇಕ ಅಂಶ ಜನರನ್ನು ತಲುಪುವುದೇ ಇಲ್ಲ ಎಂಬುದು ಅನುಭವದ ಮಾತು. ಅದಕ್ಕೆ ಕಾರಣಗಳು ಏನೇ ಇದ್ದರೂ ಸಾರ್ವಜನಿಕ ಆರೋಗ್ಯ  ಸರ್ಕಾರದ ಅವಗಣನೆಗೆ ಪಾತ್ರವಾಗಿರುವ ಕ್ಷೇತ್ರಗಳಲ್ಲಿ ಒಂದು. ಇಂದಿಗೂ ನಮ್ಮ ದೇಶದ ಆರೋಗ್ಯ ವಲಯ ಖಾಸಗಿಯವರ ಮೇಲೆ ನಿಂತಿದೆ. ನಗರಗಳಲ್ಲಿ ಶೇಕಡಾ 80 ಮಂದಿ ತಮ್ಮ ಆರೋಗ್ಯಕ್ಕೆ ಖಾಸಗಿಯವರ ಮೊರೆ ಹೋಗುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಶೇಕಡಾ 70ರಷ್ಟಿದೆ. ಒಟ್ಟಾರೆ ದೇಶದ ಪ್ರತಿ ನಾಲ್ಕು ಜನರಲ್ಲಿ ಒಬ್ಬರನ್ನು ಕೂಡ ಸರ್ಕಾರಿ ಆರೋಗ್ಯ ವ್ಯವಸ್ಥೆ ತಲುಪುತ್ತಿಲ್ಲ ಎನ್ನುವುದು ಇಂದಿನ ವಾಸ್ತವ.

 

ಸಂಖ್ಯೆಯ ನೆಲೆಗಟ್ಟಿನಿಂದಷ್ಟೇ ಅಲ್ಲದೆ ವ್ಯಾಪ್ತಿಯ ದೃಷ್ಟಿಯಿಂದಲೂ ನಮ್ಮ ದೇಶದ ಆರೋಗ್ಯ ಸೇವೆಗಳು ಅಸಮರ್ಪಕವಾಗಿವೆ. ಆಸ್ಪತ್ರೆಗಳ ಮೇಲೆ ಹಣ ಹೂಡುವ ಖಾಸಗಿ ವಲಯಕ್ಕೆ ಅದು ವ್ಯಾವಹಾರಿಕವಾಗಿ ಕೂಡ ಲಾಭದಾಯಕವಾಗಬೇಕು. ಇಲ್ಲವಾದರೆ ಅವು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸುತ್ತವೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ನಗರ ಪ್ರದೇಶಗಳಲ್ಲಿ ಇರುತ್ತವೆ. ರಾಜ್ಯಗಳ ರಾಜಧಾನಿಗಳು ಮತ್ತು ಪ್ರಮುಖ ವಾಣಿಜ್ಯ ನಗರಗಳಲ್ಲಿ ಎಲ್ಲ ರೀತಿಯ ಅನುಕೂಲಗಳು, ತಜ್ಞ ವೈದ್ಯರು, ಸುಸಜ್ಜಿತ ಯಂತ್ರೋಪಕರಣಗಳಿರುವ ಅತ್ಯಂತ ಮೇಲ್ದರ್ಜೆಯ ಆಸ್ಪತ್ರೆಗಳು ಇರುತ್ತವೆ. ಜಿಲ್ಲೆಗಳ ಪ್ರಮುಖ ಶಹರುಗಳಲ್ಲಿ ಎರಡನೆಯ ಸ್ತರದ ಆಸ್ಪತ್ರೆಗಳು ಇರುತ್ತವೆ. ಇದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಆಸ್ಪತ್ರೆಗೆ ಹಣ ಹೂಡುವುದು ಖಾಸಗಿ ವಲಯಕ್ಕೆ ಲಾಭದಾಯಕ ಎನಿಸಿಕೊಳ್ಳುವುದಿಲ್ಲ. ಈ ಸಮೀಕರಣದಲ್ಲಿ ಅತ್ಯಂತ ಹೆಚ್ಚಿನ ಹೊಡೆತ ಬೀಳುವುದು ಗ್ರಾಮೀಣ ಪ್ರದೇಶಗಳಿಗೆ. ಒಂದೆಡೆ ಸರ್ಕಾರಕ್ಕೆ ಜನರ ಆರೋಗ್ಯದತ್ತ ಗಮನವಿಲ್ಲ. ಮತ್ತೊಂದೆಡೆ ಖಾಸಗಿಯವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹಣ ಹೂಡುವ ವ್ಯಾವಹಾರಿಕ ಅನುಕೂಲವಿಲ್ಲ. ಇಂತಹ ಜನತೆ ಪ್ರತಿಯೊಂದಕ್ಕೂ ಹತ್ತಿರದ ಶಹರವನ್ನೋ ಅಥವಾ ದೂರದ ಮಹಾನಗರವನ್ನೋ ಆಶ್ರಯಿಸಬೇಕು. ಯಾರಿಗೋ ಹೊಟ್ಟೆನೋವು ಬಂದರೆ ಅದಕ್ಕೆ ಕಾರಣ ಆಮ್ಲದ ಹೆಚ್ಚಳವೇ, ಅಜೀರ್ಣವೇ, ಸೋಂಕೇ, ಮಲಬದ್ಧತೆಯೇ, ಕರುಳಿನ ಬಂಧನವೇ, ಔಷಧಗಳ ಮೂಲಕ ಗುಣವಾಗುವಂತಹದ್ದೇ ಅಥವಾ ಶಸ್ತ್ರಚಿಕಿತ್ಸೆ ಬೇಕಾಗುತ್ತದೆಯೇ ಎನ್ನುವ ಮೂಲಭೂತ ಸಲಹೆಗೂ ನೂರಾರು ಮೈಲಿಗಳ ಪ್ರಯಾಣವನ್ನು ಹತ್ತಾರು ಗಂಟೆಗಳ ಕಾಲ, ನಾಲ್ಕಾರು ವಾಹನಗಳ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ. ಈ ಸಮಸ್ಯೆ ವೃದ್ಧರನ್ನೋ, ಓಡಾಟ ಕೈಲಾಗದವರನ್ನೋ, ಹಸುಳೆಗಳನ್ನೋ ಕಾಡಿದರೆ ಪರಿಸ್ಥಿತಿ ಮತ್ತೂ ಖೇದನೀಯ. ಉಲ್ಬಣ ಪರಿಸ್ಥಿತಿಯಲ್ಲಿ ಹಣಕಾಸಿನ ಸಂದಿಗ್ಧ ಮತ್ತೊಂದು ಭೀಕರ ಆಯಾಮವನ್ನು ತೋರುತ್ತದೆ. ಒಟ್ಟಿನಲ್ಲಿ ಗ್ರಾಮೀಣ ಜನತೆಗೆ ಆರೋಗ್ಯ ನಿರ್ವಹಣೆ ಸುಲಭದ ಮಾತಲ್ಲ.

 

ಎರಡನೆಯ ಜಾಗತಿಕ ಸಮರದ ನಂತರ ಪಾಶ್ಚಾತ್ಯ ದೇಶಗಳಲ್ಲಿ ದೂರಸಂಪರ್ಕ ಕ್ರಾಂತಿ ಆರಂಭವಾಯಿತು. ದೂರದ ಪ್ರದೇಶಗಳಲ್ಲಿ ಇರುವ ಜನರನ್ನು ತಂತ್ರಜ್ಞಾನ ಬೆಸೆಯಿತು. ಬಾನುಲಿ, ದೂರದರ್ಶನಗಳಂತಹ ಮಾಧ್ಯಮಗಳು ಪ್ರಭಾವಶಾಲಿಯಾದವು. ಆಗಸದಲ್ಲಿ ನೆಲೆ ನಿಂತ ಕೃತಕ ಉಪಗ್ರಹಗಳು ದೇಶ-ವಿದೇಶಗಳನ್ನು ಬೆಸೆಯಲು ನೆರವಾದವು. ವ್ಯೋಮಕಕ್ಷೆಯಲ್ಲಿ ಭೂಮಿಯ ಪರಿಭ್ರಮಣಕ್ಕೆ ಸಂವಾದಿಯಾಗಿ ಚಲಿಸುವ ಉಪಗ್ರಹಗಳು ಇಡೀ ದೇಶದ ಯಾವುದೇ ಭಾಗವನ್ನಾದರೂ ಕೆಲವೇ ಕ್ಷಣಗಳಲ್ಲಿ ಸಂಪರ್ಕಿಸಲು ಸನ್ನದ್ಧವಾದವು. ನಿಧಾನವಾಗಿ ಈ ತಂತ್ರಜ್ಞಾನ ಮೂರನೆಯ ವಿಶ್ವವನ್ನೂ ತಲುಪಿತು. ಕಳೆದ ಶತಮಾನದ ಅಂತ್ಯದ ವೇಳೆಗೆ ದೂರಸಂಪರ್ಕ ಜನರ ದೈನಂದಿನ ಬದುಕಿನ ಭಾಗವಾಗಿತ್ತು. ಈ ಕ್ರಾಂತಿಯನ್ನು ಭಾರತದ ಆರೋಗ್ಯ ವಲಯಕ್ಕೂ ವಿಸ್ತರಿಸಲು ಹಲವಾರು ಸಾಹಸಿಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯದ ನೇತಾರರು ಕಾರಣರಾದರು.  

 

ಈ ನಿಟ್ಟಿನಲ್ಲಿ ಮೊದಲು ಕಾರ್ಯಗತವಾದದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ). ಅಮೆರಿಕೆಯ ನಾಸಾ ಸಂಸ್ಥೆಯ ATS-F ಎನ್ನುವ ಉಪಗ್ರಹದ ನೆರವಿನಿಂದ ಭಾರತದ ಸುಮಾರು 2000 ಹಳ್ಳಿಗಳಲ್ಲಿ “ಉಪಗ್ರಹದ ಮೂಲಕ ದೂರದರ್ಶನದಿಂದ ಸೂಚನೆಗಳನ್ನು ನೀಡುವ ಪ್ರಯೋಗ” (SITE) ಎನ್ನುವ ಕಾರ್ಯಕ್ರಮಗಳನ್ನು 1976-78ರಲ್ಲಿ ನಿಯೋಜಿಸಿ, ಹಳ್ಳಿಗಳ ಜನರಿಗೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ನೈರ್ಮಲ್ಯ, ಮತ್ತು ವಯಸ್ಕ ಶಿಕ್ಷಣದಂತಹ ಜ್ಞಾನಾಭಿವೃದ್ಧಿ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತು. ಅಂದಿನ ಕಾಲಕ್ಕೆ ಇಡೀ ಪ್ರಪಂಚದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಮೀಸಲಾದ ಅತ್ಯಂತ ದೊಡ್ಡ ಪ್ರಯೋಗ ಎಂದು ಇದು ಹೆಸರಾಗಿತ್ತು. ಇದು ಮತ್ತಷ್ಟು ವಿಸ್ತಾರಗೊಂಡು ಸ್ಯಾಟ್-ಕಾಮ್ ಮೂಲಕ ತರಬೇತಿ ಮತ್ತು ಅಭಿವೃದ್ಧಿಗಳ ಸಂವಹನದ ವಾಹಿನಿ (TDCC) ಮೊದಲಾಯಿತು. ಸಾರ್ವಜನಿಕ ಆರೋಗ್ಯ ಸಂವಹನದಲ್ಲಿ ಅಪಾರ ಜನಮನ್ನಣೆ ಪಡೆದ ಇದರ ನೂತನ ಪ್ರಯೋಗಗಳು 1990ರ ದಶಕಕ್ಕೂ ಮುಂದುವರೆದವು. ದೇಶೀಯ ಇನ್-ಸ್ಯಾಟ್ ಉಪಗ್ರಹದ ಉಡಾವಣೆಗಳ ನಂತರ ಈ ಪ್ರಯತ್ನಗಳು ಮತ್ತಷ್ಟು ಗರಿಗೆದರಿದವು. ಈ ಎಲ್ಲ ಸಾಧನೆಗಳಿಂದ ಪ್ರೇರಿತವಾಗಿ 2001ರಲ್ಲಿ ಗ್ರಾಮ್-ಸ್ಯಾಟ್ (ಗ್ರಾಮೀಣ ಉಪಗ್ರಹ) ಎನ್ನುವ ಕಾರ್ಯಕ್ರಮದ ಅಡಿ ವೈದ್ಯಕೀಯ ಸೇವೆಗಳನ್ನು ದೂರಸಂಪರ್ಕದ ಮೂಲಕ ನೀಡುವ ಪರೀಕ್ಷಾರ್ಥ ಪ್ರಯೋಗಗಳು ಆರಂಭವಾದವು. ಆರಂಭದಲ್ಲಿ ಇದು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಇನ್-ಸ್ಯಾಟ್ ಮತ್ತು ಎಜು-ಸ್ಯಾಟ್ ಉಪಗ್ರಹಗಳ ಸಂಯೋಗದಿಂದ ಶುರುವಾಯಿತು. ಈ ಯಶಸ್ವಿ ಪ್ರಯೋಗಗಳು ಮುಂದೆ ಜಮ್ಮು, ಕಾಶ್ಮೀರ, ಲಡಾಖ್, ಈಶಾನ್ಯ ರಾಜ್ಯಗಳು, ಅಂಡಮಾನ್-ನಿಕೋಬಾರ್ ದ್ವೀಪಗಳು ಮೊದಲಾದೆಡೆಗೆ ವಿಸ್ತಾರವಾದವು. ಇದು ಇಂದು ದೇಶದ ಬಹುತೇಕ ಪ್ರದೇಶಗಳಿಗೆ ವ್ಯಾಪಿಸಿದೆ.

 

ವೈದ್ಯಕೀಯ ಕ್ಷೇತ್ರದಲ್ಲಿ ದೂರಸಂಪರ್ಕ ಸೌಲಭ್ಯವನ್ನು ನಾಲ್ಕು ಆಯಾಮಗಳಲ್ಲಿ ಬಳಸಬಹುದು.

1.      ದೂರದ ಹಳ್ಳಿಯ ಆರೋಗ್ಯ ಕೇಂದ್ರ ಮತ್ತು ಮಹಾನಗರದಲ್ಲಿನ ಸುಸಜ್ಜಿತ ಆಸ್ಪತ್ರೆಗಳ ನಡುವೆ ವಿಡಿಯೊ-ಆಡಿಯೊಯುಕ್ತ ನೇರ ಸಂಪರ್ಕ ಕಲ್ಪಿಸುವುದು. ಹಳ್ಳಿಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಯ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುತ್ತಾರೆ. ತಜ್ಞ ವೈದ್ಯರ ನಿರ್ದೇಶನ, ಮಾರ್ಗದರ್ಶನದ ಮೂಲಕ ಹಳ್ಳಿಯ ರೋಗಿಗೆ ಮಹಾನಗರದಲ್ಲಿನ ತಜ್ಞ ವೈದ್ಯರ ಚಿಕಿತ್ಸೆ ಲಭ್ಯವಾಗುತ್ತದೆ. ಇದನ್ನು ವಿಸ್ತರಿಸಿ ಹಳ್ಳಿಯ ಆರೋಗ್ಯ ಕೇಂದ್ರದ ಪ್ರಾಥಮಿಕ ವೈದ್ಯರು, ಆರೋಗ್ಯ ಸಹಾಯಕರು, ಪ್ರಯೋಗಾಲಯ ತಂತ್ರಜ್ಞರು, ವೈದ್ಯಕೀಯ ಕಾರ್ಯಕರ್ತರಿಗೆ ಅವರವರ ವಿಷಯದಲ್ಲಿ ಅವರು ಇರುವಲ್ಲಿಯೇ ಪರಿಣತ ತರಬೇತಿ ನೀಡಬಹುದು. ಇಂತಹವರು ತಮ್ಮ ಕೆಲಸಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವಲ್ಲಿ ನೆರವು ನೀಡಬಹುದು.

2.     ದೇಶದ ಅತ್ಯುನ್ನತ ವೈದ್ಯಕೀಯ ಕಾಲೇಜುಗಳ ನುರಿತ ತಜ್ಞ ವೈದ್ಯರು ಸಣ್ಣ ಊರುಗಳ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು, ತರಬೇತಿಯ ಮಾರ್ಗದರ್ಶನವನ್ನು, ಕಾರ್ಯಾಗಾರ ನಡೆಸಲು ಬೇಕಾದ ಸಲಹೆ-ಸೂಚನೆಗಳನ್ನು ನೀಡುವುದು ಮತ್ತು ಅದರ ಮೇಲ್ವಿಚಾರಣೆ ನಡೆಸುವುದು.

3.     ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದ ಹಳ್ಳಿಗಳಿಗೆ ವಾಹನದ ಮೂಲಕ ವೈದ್ಯರನ್ನೂ, ಅವರ ಸಹಾಯಕ ಸಿಬ್ಬಂದಿಯನ್ನೂ ಕಳಿಸಿ, ಅಲ್ಲಿಂದಲೇ ದೂರಸಂಪರ್ಕದ ಮೂಲಕ ಸಮುದಾಯ ಚಿಕಿತ್ಸೆಯನ್ನು ನಡೆಸುವುದು. ನಗರದ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಇಂತಹ ಹಳ್ಳಿಯ ಜನರ ಪೈಕಿ ಯಾರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ; ಯಾರಿಗೆ ಸರಳ ಚಿಕಿತ್ಸೆಯ ಮೂಲಕ ಅಲ್ಲಿಯೇ ಪರಿಹಾರ ನೀಡಬಹುದು; ಯಾವ ರೀತಿ ಸಮೀಪದ ಶಹರುಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯ – ಮೊದಲಾದ ಸಲಹೆಗಳನ್ನು ನೀಡಿ ಅವರ ಸಮಸ್ಯೆಯನ್ನು ಸರಿಯಾದ ಮಾರ್ಗದಲ್ಲಿ ನಿರ್ವಹಿಸಲು ಅನುಕೂಲವಾಗುತ್ತದೆ.

4.    ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಅಗತ್ಯವಾದ ಆರೋಗ್ಯ ಪರಿಹಾರಗಳನ್ನು ಒದಗಿಸಲು ನೆರವಾಗುವುದು ದೂರಸಂಪರ್ಕದ ಮೂಲಕ ಸಾಧ್ಯ. ಇಂತಹ ಸಮಯದಲ್ಲಿ ಅತ್ಯಂತ ಕಡಿಮೆ ಸಂಪನ್ಮೂಲಗಳು ಲಭ್ಯವಿರುತ್ತವೆ; ಅತ್ಯಂತ ಹೆಚ್ಚಿನ ಮಂದಿ ಕಷ್ಟಕ್ಕೆ ಒಳಗಾಗಿರುತ್ತಾರೆ. ಆಗ ಯಾವ ರೀತಿ ಸಂಪನ್ಮೂಲದ ಆದ್ಯತೆಗಳನ್ನು ನಿರ್ವಹಿಸಬೇಕು; ಅತ್ಯಂತ ಹೆಚ್ಚಿನ ಪರಿಣಾಮಕ್ಕಾಗಿ ಹೇಗೆ ಪರಿಸ್ಥಿತಿಯನ್ನು ಸಂಭಾಳಿಸಬೇಕು; ಹತ್ತಿರದ ಯಾವ ಪ್ರದೇಶದಿಂದ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯ – ಮುಂತಾದ ಯೋಜನೆಗಳು ದೂರಸಂಪರ್ಕದ ಮೂಲಕ ಕಾರ್ಯಗತಗೊಳ್ಳಬಲ್ಲವು.

 

ಸರಳವಾದ ಕಂಪ್ಯೂಟರ್, ಸ್ಪಷ್ಟ ಚಿತ್ರ ನೀಡಬಲ್ಲ ಪರದೆ, ಸರ್ವರ್ ಮತ್ತು ಬ್ರೌಸರ್ ಬಳಸಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಯ ನಡುವೆ ನೇರ ಸಂಪರ್ಕ ಕಲ್ಪಿಸಬಲ್ಲ ವ್ಯವಸ್ಥೆಯಿಂದ ಆರಂಭವಾದ ದೂರಸಂಪರ್ಕ ವೈದ್ಯಕೀಯ ಪ್ರಕ್ರಿಯೆ ಇಂದು ಹತ್ತು-ಹಲವಾರು ದಿಕ್ಕುಗಳಿಗೆ ಹಬ್ಬಿ ವಿಶಾಲವಾಗಿ ವ್ಯಾಪಿಸಿದೆ. ಈಗ ನೂರಾರು ಆಸ್ಪತ್ರೆ, ಆರೋಗ್ಯ ಕೇಂದ್ರಗಳನ್ನು ಏಕಕಾಲಕ್ಕೆ ಬೆಸೆಯಬಲ್ಲ ತಂತ್ರಜ್ಞಾನ ಲಭ್ಯವಿದೆ. ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಹತ್ತಾರು ತಜ್ಞರಿಗೆ ಒಮ್ಮೆಗೇ ತಲುಪಿಸಬಲ್ಲ ಅನುಕೂಲವಿದೆ. ಗಿಗಾಬೈಟ್ ಗಾತ್ರದ ಎಂ.ಆರ್.ಐ ಚಿತ್ರಗಳನ್ನು ಕೆಲ ನಿಮಿಷಗಳಲ್ಲಿ ಸಾವಿರಾರು ಮೈಲುಗಳ ದೂರದಲ್ಲಿರುವ ತಜ್ಞರ ಅಭಿಪ್ರಾಯಕ್ಕೆ ಕಳಿಸಬಹುದಾದ ಶಕ್ತಿಯುತ ಸಂಪರ್ಕವಿದೆ. ರೋಗಿಗಳ ಇದ್ಯಾವುದೇ ವಿವರ ಬೇರೆ ಯಾರ ಕೈಗೂ ಸೇರದಂತೆ ಗೌಪ್ಯತೆಯನ್ನು ನಿರ್ವಹಿಸುವ ಗೂಢಲಿಪಿಯ ಗೋಡೆಗಳ ಸುರಕ್ಷತೆ ಇದೆ. ಸ್ಕ್ಯಾನಿಂಗ್ ಯಂತ್ರಗಳ ಬಳಕೆಯಲ್ಲಿ ಕೆಲಕಾಲ ತರಬೇತಿ ಪಡೆದ ವೈದ್ಯರು ಹಳ್ಳಿಯ ಆರೋಗ್ಯ ಕೇಂದ್ರದಲ್ಲಿನ ಯಂತ್ರವನ್ನು ಬಳಸಿ ರೋಗಿಯ ಸ್ಕ್ಯಾನಿಂಗ್ ಮಾಡಿದರೆ ಅದೇ ಸಮಯಕ್ಕೆ ಆ ಚಿತ್ರಗಳನ್ನು ನೂರಾರು ಮೈಲಿ ದೂರದಿಂದ ತಮ್ಮ ಕಂಪ್ಯೂಟರ್ ಪರದೆಯ ಮೇಲೆ ಸುಸ್ಪಷ್ಟವಾಗಿ ನೋಡುತ್ತಾ ಕಾಯಿಲೆಯನ್ನು ನಿಖರವಾಗಿ ಪತ್ತೆ ಮಾಡಬಲ್ಲ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುವ ಅನುಕೂಲವಿದೆ. ಹಲವಾರು ಸರ್ಕಾರೇತರ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಉದ್ಯಮದಲ್ಲಿ ಹಣ ಹೂಡಿ, ಬಡ ರೋಗಿಗಳಿಗೆ ಉಚಿತವಾಗಿ ನೆರವು ನೀಡುತ್ತಿವೆ. ಹಳ್ಳಿಯ ಮೂಲೆಯಲ್ಲಿರುವ ರೋಗಿಗೆ ದೂರದೇಶದಲ್ಲಿ ಕುಳಿತಿರುವ ತಜ್ಞ ಸರ್ಜನ್ ಒಬ್ಬರು ರೋಬೋಟುಗಳ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಬಲ್ಲ ದಿನಗಳು ಹತ್ತಿರದಲ್ಲಿವೆ. ಒಟ್ಟಿನಲ್ಲಿ ದೇಶ-ವಿದೇಶಗಳ ಗಡಿಯನ್ನು ದಾಟಿ ದೂರಸಂಪರ್ಕ ಸವಲತ್ತುಗಳ ನೆರವಿನಿಂದ ವೈದ್ಯಕೀಯ ಕ್ಷೇತ್ರ ಕ್ರಾಂತಿಯನ್ನು ಸಾಧಿಸಿದೆ. ಇದಿನ್ನೂ ಆರಂಭ ಮಾತ್ರ. ಒಳ್ಳೆಯ ದಿನಗಳು ಭವಿಷ್ಯದಲ್ಲಿ ಬರಲಿವೆ!

------------------

2024ರ ಮೇ ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ