ಭಾನುವಾರ, ಜೂನ್ 16, 2024


 

ನಾಲಗೆಯ ಗಣಿತ

ಡಾ.ಕಿರಣ್ ವಿ.ಎಸ್.

ವೈದ್ಯರು

 

ನಮ್ಮ ಶರೀರದಲ್ಲಿ ಅತ್ಯಂತ ವೈವಿಧ್ಯಮಯ ತಾಪಮಾನಗಳನ್ನು ಅನುಭವಿಸುವ ಅಂಗ ಯಾವುದು? ಬಿಸಿಲು, ಚಳಿಗಳು ನಮ್ಮ ಚರ್ಮವನ್ನು ನೇರವಾಗಿ ಸೋಕಿ ಸೆಖೆ, ಶೈತ್ಯಗಳ ಅನುಭವ ನೀಡುತ್ತವೆ. ಆದರೆ ಇದಕ್ಕಿಂತ ಹೆಚ್ಚಿನ ಅಂತರದ ತಾಪಮಾನಕ್ಕೆ ಒಳಗಾಗುವುದು ನಮ್ಮ ನಾಲಗೆ. ಸುಡುಸುಡುವ ಕಾಫಿ, ಟೀ, ಕಷಾಯಗಳೋ ಅಥವಾ ಅತಿ ತಣ್ಣಗಿನ ಐಸ್-ಕ್ರೀಂಗಳು ಚರ್ಮದ ಮೇಲೆ ಬಿದ್ದರೆ ಆಗುವ ಅಹಿತಕರ, ಅಪಾಯಕಾರಿಯಾಗಬಲ್ಲ ಪರಿಣಾಮ ನಮಗೆ ತಿಳಿದಿದೆ. ಆದರೆ ಇವುಗಳನ್ನು ನಾಲಗೆ ಆರಾಮವಾಗಿ ಆಸ್ವಾದಿಸುತ್ತದೆ. ನಮ್ಮ ದೇಹದ ಅತ್ಯಂತ ಬಲಿಷ್ಠ ಅಂಗಗಳಲ್ಲಿ ನಾಲಗೆಯೂ ಒಂದು. ಅದರ ಗಣಿತದ ಬಗ್ಗೆ ಒಂದು ನೋಟ.

 

ನಾಲಗೆಯಲ್ಲಿ ಸ್ಥೂಲವಾಗಿ 2 ಭಾಗಗಳಿವೆ: ಬಾಯಿನ ಭಾಗ ಮತ್ತು ಗಂಟಲಿನ ಭಾಗ. ಇದರ ಒಟ್ಟಾರೆ ಉದ್ದ ಸುಮಾರು 10-12 ಸೆಂಟಿಮೀಟರ್ (4-5 ಇಂಚು); ಅಗಲ ಸುಮಾರು 5-7 ಸೆಂಟಿಮೀಟರ್ (2-2.5 ಇಂಚು); ದಪ್ಪ ಸುಮಾರು 1-1.5 ಸೆಂಟಿಮೀಟರ್. ನಾಲಗೆಯ ತೂಕ ಸುಮಾರು 80-100 ಗ್ರಾಂಗಳು. ಬಹುತೇಕ ಮಾಂಸಖಂಡಗಳನ್ನೇ ಹೊಂದಿರುವ ನಾಲಗೆಯಲ್ಲಿ 2 ಬಗೆಯ ಒಟ್ಟು 8 ವಿವಿಧ ಮಾಂಸಖಂಡಗಳನ್ನು ಶರೀರ ಶಾಸ್ತ್ರಜ್ಞರು ಗುರುತಿಸುತ್ತಾರೆ. ಇದರಲ್ಲಿ 4 ನಾಲಗೆಯ ಆಕಾರವನ್ನು ಬದಲಿಸಬಲ್ಲ ಸ್ನಾಯುಗಳು. ಇವು ನಾಲಗೆಯ ಒಳಗೇ ಅಂತರ್ಗತವಾಗಿವೆ. ಈ 4 ಸ್ನಾಯುಗಳಿಗೆ ಯಾವುದೇ ಮೂಳೆಯ ಆಸರೆ ಇಲ್ಲ. ನಾಲಗೆಯ ನಡುವಿನಲ್ಲಿ ಉದ್ದುದ್ದಲಾದ ಒಂದು ಮಧ್ಯಗೆರೆ ಇರುತ್ತದೆ. ಅದರ ಉದ್ದಕ್ಕೂ ನಾಲಗೆಯನ್ನು ಮಡಚಬಹುದು. ನಾಲಗೆಯ ತುದಿಯಿಂದ ಆರಂಭಿಸಿ ಅದನ್ನು ಒಳಗೆ ಸ್ವಲ್ಪ ಸುರುಳಿಯಾಕಾರದಲ್ಲಿ ಮಗಚಬಹುದು. ಉಳಿದ 4 ಸ್ನಾಯುಗಳು ನಾಲಗೆಯನ್ನು ಹೊರಚಾಚಲು, ಒಳಗೆ ಎಳೆದುಕೊಳ್ಳಲು ನೆರವಾಗುತ್ತವೆ. ಇವುಗಳಿಗೆ ಗಂಟಲಿನ ಮೂಳೆಗಳ ಆಸರೆಯಿದೆ. ಹೀಗಾಗಿ ನಾಲಗೆಯ ಚಲನೆ ಸಾಕಷ್ಟು ಸಾಧ್ಯವಾದರೂ, ಅದರ ವ್ಯಾಪ್ತಿಗೆ ಮಿತಿಗಳಿವೆ. 

 

ನಾಲಗೆಯ ಬಾಯಿನ ಭಾಗದ ರಚನೆ ಅದರ ಗಂಟಲಿನ ಭಾಗದ ರಚನೆಗಿಂತಲೂ ಭಿನ್ನ. ಅಂತೆಯೇ, ಮೇಲ್ಭಾಗದ ರಚನೆ ಅದರ ಕೆಳಭಾಗಕ್ಕಿಂತಲೂ ವಿಭಿನ್ನ. ನಾಲಗೆಯ ಮುಂಭಾಗ ತೆಳ್ಳಗೆ, ಕಿರಿದಾಗಿರುತ್ತದೆ. ಇದರ ತುದಿ ಕೆಳ ದವಡೆಯ ಹಲ್ಲುಗಳ ಹಿಂಬದಿಗೆ ಹೊಂದಿಕೊಳ್ಳುತ್ತದೆ. ಹಿಂದಕ್ಕೆ ಹೋದಂತೆ ನಾಲಗೆಯ ದಪ್ಪ, ಅಗಲಗಳು ಹೆಚ್ಚಾಗುತ್ತವೆ. ನಾಲಗೆಯ ಪೋಷಣೆಯನ್ನು ಒದಗಿಸಲು 2 ಮುಖ್ಯ ರಕ್ತನಾಳ ಮತ್ತು 4 ಪರ್ಯಾಯ ರಕ್ತನಾಳಗಳಿವೆ. ಒಂದು ನಿಮಿಷಕ್ಕೆ ಸರಾಸರಿ 30-40 ಎಂಎಲ್ ರಕ್ತ ಸಂಚಾರ ನಾಲಗೆಗೆ ಲಭಿಸುತ್ತದೆ. ಗಾತ್ರದ ಹೋಲಿಕೆಯಲ್ಲಿ ಈ ಪ್ರಮಾಣ ದೇಹದ ಅನೇಕ ಅಂಗಗಳಿಗಿಂತಲೂ ಬಹಳ ಹೆಚ್ಚು. ಹೀಗಾಗಿ ನಾಲಗೆಗೆ ಆಗುವ ಗಾಯಗಳಲ್ಲಿ ರಕ್ತಸ್ರಾವ ಅಧಿಕ. ಅಂತೆಯೇ, ನಾಲಗೆಯ ಗಾಯಗಳು ಬಹಳ ಬೇಗ ಗುಣವಾಗುತ್ತವೆ. ನಾಲಗೆಯ ಸಹಜ ಗುಲಾಬಿ ಬಣ್ಣಕ್ಕೆ ಈ ವಿಫುಲ ರಕ್ತಸಂಚಾರವೂ ಒಂದು ಕಾರಣ.

 

ನಾಲಗೆಗೆ ಅನೇಕ ಕೆಲಸಗಳು. ಇವುಗಳಲ್ಲಿ ಮುಖ್ಯವಾದವು ರುಚಿಯ ಆಸ್ವಾದ, ಆಹಾರವನ್ನು ಅರಗಿಸಲು ಹಲ್ಲು ಮತ್ತು ಅಂಗುಳಿಗೆ ನೆರವಾಗುವಿಕೆ, ಮತ್ತು ಮಾತಿನ ನಿರ್ವಹಣೆ. ರುಚಿಯ ಆಸ್ವಾದಕ್ಕೆ ನಾಲಗೆಗೆ ಪ್ರತ್ಯೇಕ ನರಗಳ ವ್ಯವಸ್ಥೆಯಿದೆ. ಅದನ್ನು ಹೊರತುಪಡಿಸಿ ಸ್ಪರ್ಶ ಸಂವೇದನೆ ಮತ್ತು ಸ್ನಾಯುಗಳ ಒತ್ತಡವನ್ನು ನಿರ್ವಹಿಸಲು ಇತರ ನರಗಳು ನೆರವಾಗುತ್ತವೆ. ಒಟ್ಟಾರೆ ನಾಲಗೆಯ ಎಲ್ಲ ಕೆಲಸಗಳಿಗೆ ಸೇರಿ 6 ವಿವಿಧ ಬಗೆಯ ನರಗಳು ಸಹಕಾರ ನೀಡುತ್ತವೆ. ಪ್ರತಿಯೊಂದು ನರದ ವ್ಯಾಪ್ತಿ, ಕಾರ್ಯಗಳು ವಿಭಿನ್ನ. ಹೀಗಾಗಿ, ನಾಲಗೆಯ ಎಲ್ಲ ಭಾಗಗಳನ್ನೂ ವ್ಯವಸ್ಥಿತವಾಗಿ ರುಚಿ, ಸಂವೇದನೆ ಮತ್ತು ಸ್ನಾಯುಗಳ ಶಕ್ತಿ ಎನ್ನುವ ಮಾದರಿಯಲ್ಲಿ ಪರೀಕ್ಷೆ ಮಾಡಿದರೆ ಸಮಸ್ಯೆಗೆ ಕಾರಣವಾದ ನರ ಯಾವುದು ಎನ್ನುವ ಸಂಗತಿ ನರ ತಜ್ಞರಿಗೆ ಸುಲಭವಾಗಿ ತಿಳಿದುಹೋಗುತ್ತದೆ.

 

ಮಾಂಸಖಂಡಗಳ ಹೊರತಾಗಿ ನಾಲಗೆಯನ್ನು ಆವರಿಸಿರುವ ಲೋಳೆಪದರವಿದೆ. ನಾಲಗೆಯ ಮೇಲ್ಭಾಗದ ಲೋಳೆಪದರ ಸಾಕಷ್ಟು ಕಠಿಣವಾದ ಕೋಶಗಳನ್ನು ಹೊಂದಿದೆ. ಹೀಗಾಗಿ ಇವು ಆಹಾರವನ್ನು ಬಾಯಿಯೊಳಗೆ ಅರಗಿಸುವ ಪ್ರಕ್ರಿಯೆಯಲ್ಲಿ ನೆರವಾಗಬಲ್ಲವು. ಆಹಾರವನ್ನು ಅಂಗುಳಿಗೆ ಒತ್ತಿ ಅದನ್ನು ಮೆತ್ತಗೆ ಮಾಡುವ, ಮುರಿಯುವ, ಅಗಲಿಸುವ ಕೆಲಸಗಳನ್ನು ಮಾಡಲು ನಾಲಗೆಯ ಸ್ನಾಯುಗಳು ಮತ್ತು ಲೋಳೆಪದರ ಮಾಡುತ್ತವೆ. ನಾಲಗೆಯ ಮೇಲೆ ಬೆರಳನ್ನು ಹಾಯಿಸಿದರೆ ಅದು ತರಿತರಿಯಾಗಿ, ಒರಟಾಗಿ ಭಾಸವಾಗುತ್ತದೆ. ಇದಕ್ಕೆ ಕಾರಣ ಪ್ಯಾಪಿಲ್ಲೆ ಎನ್ನುವ ಮುಳ್ಳಿನಂತಹ ರಚನೆಗಳು. ಒಟ್ಟು 4 ಬಗೆಯ ಪ್ಯಾಪಿಲ್ಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 3 ಬಗೆಯ ಪ್ಯಾಪಿಲ್ಲೆಗಳ ಮೇಲೆ ರುಚಿ ಮೊಗ್ಗುಗಳಿವೆ. ಓರ್ವ ವ್ಯಕ್ತಿಯಲ್ಲಿ ಪ್ಯಾಪಿಲ್ಲೆಗಳ ವಿನ್ಯಾಸ ಜೀವನವಿಡೀ ಒಂದೇ ಆಗಿರುತ್ತದೆ. ಆದರೆ ಇಂತಹ ವಿನ್ಯಾಸ ಪ್ರತಿಯೊಬ್ಬರಲ್ಲೂ ವಿಭಿನ್ನ. ಕೈಬೆರಳಿನ ಗುರುತುಗಳಂತೆ ನಾಲಗೆಯ ಪ್ಯಾಪಿಲ್ಲೆಗಳ ವಿನ್ಯಾಸದ ಮೂಲಕವೂ ನಿರ್ದಿಷ್ಟ ವ್ಯಕ್ತಿಯನ್ನು ಇನ್ನೂ ಹೆಚ್ಚು ನಿಖರವಾಗಿ ಗುರುತಿಸಲು ಸಾಧ್ಯ. ನಾಲಗೆಯ ಅಡಿಭಾಗದ ಲೋಳೆಪದರ ತೆಳುವಾಗಿ, ನಯವಾಗಿರುತ್ತದೆ. ಇಲ್ಲಿ ರಕ್ತನಾಳಗಳು ಹೆಚ್ಚು. ಹೀಗಾಗಿ, ನಾಲಿಗೆಯ ಅಡಿಯಲ್ಲಿ ಇಟ್ಟುಕೊಳ್ಳಬಲ್ಲ ಔಷಧಗಳು ತಯಾರಾಗಿವೆ. ಇವನ್ನು ನಾಲಿಗೆಯ ಕೆಳಭಾಗದ ವಿಫುಲ ರಕ್ತನಾಳಗಳು ನೇರವಾಗಿ ಹೀರಿಕೊಂಡು ಕೆಲಸ ಮಾಡುತ್ತವೆ. ಹೃದ್ರೋಗಿಗಳಲ್ಲಿ, ಏನೇ ಸೇವಿಸಿದರೂ ವಾಂತಿ ಆಗುವ ರೋಗಿಗಳಲ್ಲಿ ಚುಚ್ಚುಮದ್ದಿನ ಬದಲಿಗೆ ಕೆಲವು ಔಷಧಗಳನ್ನು ನಾಲಗೆಯ ಅಡಿಯಲ್ಲಿ ಇಟ್ಟು ಪರಿಣಾಮ ಬೀರಲು ಸಾಧ್ಯ.  

 

ಸಾಮಾನ್ಯ ಜನರ ನಾಲಗೆಯಲ್ಲಿ ಸುಮಾರು 2000 ದಿಂದ 5000 ರುಚಿ ಮೊಗ್ಗುಗಳಿವೆ. 10000 ಕ್ಕಿಂತಲೂ ಅಧಿಕ ರುಚಿ ಮೊಗ್ಗುಗಳು ಇರುವವರನ್ನು ಸೂಪರ್-ಟೇಸ್ಟರ್ಸ್ ಎಂದು ಕರೆಯುತ್ತಾರೆ. ಇಂತಹವರಿಗೆ ಕೆಲವು ರುಚಿಗಳ ಸಂವೇದನೆ ಸಾಮಾನ್ಯ ಜನರಿಗಿಂತಲೂ ಅಧಿಕ. ಆಹಾರವನ್ನು ಬಾಯಲ್ಲಿ ನಿರ್ವಹಿಸಿದರೂ ಅದರ ರುಚಿಯ ನಿರ್ಧಾರ ಆಗುವುದು ಮಿದುಳಿನ ಮುಂಭಾಗದಲ್ಲಿ. ಒಟ್ಟು 5 ಬಗೆಯ ರುಚಿಗಳನ್ನು ತಜ್ಞರು ಗುರುತಿಸಿದ್ದಾರೆ. ಸಿಹಿ, ಕಹಿ, ಹುಳಿ, ಉಪ್ಪು, ಮತ್ತು ಉಮಾಮಿ ಎನ್ನುವ ರುಚಿಗಳನ್ನು ನಮ್ಮ ನಾಲಗೆ ಅರಿಯಬಲ್ಲದು. ಪ್ರತಿಯೊಂದು ರುಚಿ ಮೊಗ್ಗು ಒಂದು ಬಗೆಯ ರುಚಿಯನ್ನು ಗ್ರಹಿಸಬಲ್ಲದು. ಈ ಮುನ್ನ ಇವುಗಳು ನಾಲಗೆಯ ನಿರ್ದಿಷ್ಟ ಸ್ಥಾನಗಳಲ್ಲಿ ಇರುತ್ತವೆ ಎಂದು ನಂಬಲಾಗಿತ್ತು. ಆದರೆ ಎಲ್ಲ ಬಗೆಯ ರುಚಿ ಮೊಗ್ಗುಗಳೂ ನಾಲಗೆಯ ಎಲ್ಲೆಡೆ ಹರಡಿವೆ ಎಂದು ತಿಳಿದುಬಂದಿದೆ. ಕೆಲ ಬಗೆಯ ರುಚಿ ಮೊಗ್ಗುಗಳು ಕೆಲವೆಡೆ ಸ್ವಲ್ಪ ಸಾಂದ್ರವಾಗಿ ಇರಲು ಸಾಧ್ಯ.

 

ಪ್ರತಿಯೊಂದು ರುಚಿ ಮೊಗ್ಗಿನ ಮೇಲೂ ರುಚಿ ಗ್ರಾಹಿಗಳಿವೆ. ರುಚಿಯನ್ನು ಗ್ರಹಿಸಲು ಆಹಾರವು ಬಾಯಿನ ಲಾಲಾರಸದ ಜೊತೆಗೆ ಬೆರೆಯಬೇಕು. ಒಣಬಾಯಿಗೆ ರುಚಿ ತಿಳಿಯುವುದಿಲ್ಲ. ಆಹಾರದ ರೂಪ, ಗಂಧ, ಉಷ್ಣತೆ, ನಯ/ತರಿ ಸ್ವರೂಪ, ಅಂತಹ ಆಹಾರವನ್ನು ಹಿಂದೆ ಸೇವಿಸಿದ್ದರ ನೆನಪು – ಇವೆಲ್ಲವೂ ಸೇರಿ ಮಿದುಳಿನಲ್ಲಿ ರುಚಿಯ ಅನುಭವ ಕೊಡುತ್ತವೆ. ಉಮಾಮಿ ಎನ್ನುವ ಪ್ರತ್ಯೇಕ ರುಚಿಯನ್ನು 1985ರಲ್ಲಿ ವಿಜ್ಞಾನಿಗಳು ಅನುಮೋದಿಸಿದರು. ಚೀನಿ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಅಜಿನೊಮೊಟೊ ಎಂಬ ಹೆಸರಿನಿಂದ ಖ್ಯಾತವಾದ ಮೋನೋಸೋಡಿಯಂ ಗ್ಲುಟಮೇಟ್ ಎನ್ನುವ ರಾಸಾಯನಿಕ ಬೇರೆಯೇ ರುಚಿ ಸಂವೇದನೆಯನ್ನು ನೀಡುತ್ತದೆ ಎನ್ನುವ ಪ್ರಶ್ನೆ ಬಹುಕಾಲ ಜಿಜ್ಞಾಸೆಗೆ ಕಾರಣವಾಗಿತ್ತು. ಉಮಾಮಿ ರುಚಿ ಇದನ್ನು ಪುಷ್ಟೀಕರಿಸಿತು. ಟೊಮ್ಯಾಟೋ, ಕೆಲ ಅಣಬೆಗಳು, ಕೆಲ ಜಾತಿಯ ಒಣಗಿದ ಮೀನು, ಮೊದಲಾದುವು ಈ ರುಚಿಯ ಸಹಜ ಮೂಲಗಳಾಗಿವೆ. ಸಿಹಿ ರುಚಿಗೆ ಒಂದು ಬಗೆಯ ಗ್ರಾಹಿ ಇದ್ದರೆ, ಉಪ್ಪಿಗೆ 3 ಬಗೆಗಳು, ಹುಳಿಗೆ ಒಂದು ಬಗೆ, ಉಮಾಮಿಗೆ 3 ಇವೆ. ಕಹಿ ರುಚಿಗಾಗಿ 25 ಬಗೆಯ ಗ್ರಾಹಿಗಳಿವೆ. ನಮ್ಮ ದೇಹವನ್ನು ಯಾವುದೇ ಬಗೆಯ ವಿಷಕಾರಿ ಆಹಾರದಿಂದ ಕಾಪಾಡಲು ನಿಸರ್ಗ ಕಹಿ ರುಚಿಯನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳ ಅಭಿಮತ. ಹೀಗಾಗಿ, ಕಹಿ ರುಚಿಯನ್ನು ಪತ್ತೆ ಮಾಡುವ ವಿಧಾನ ಬಲಿಷ್ಠವಾಗಿ ವಿಕಾಸವಾಗಿದೆ.  

 

ಮಾತಿನ ಉತ್ಪತ್ತಿಯಲ್ಲಿ ನಾಲಗೆಯ ಪಾತ್ರ ದೊಡ್ಡದು. ಗಂಟಲಿನ ಧ್ವನಿಪೆಟ್ಟಿಗೆಯ ಮೂಲಕ ಹೊರಡುವ ಗಾಳಿ ನಾಲಗೆಯ, ಹಲ್ಲುಗಳ, ಮತ್ತು ತುಟಿಗಳ ವಿವಿಧ ಸ್ಥಾನಗಳನ್ನು ಹಾಯ್ದು ಭಾಷೆಯ ಸ್ವರೂಪ ಪಡೆಯುತ್ತದೆ. ಪ್ರತಿಯೊಂದು ಸ್ವರಾಕ್ಷರ ಮತ್ತು ಆಯಾ ವರ್ಗದ ವ್ಯಂಜನಾಕ್ಷರದ ಉಚ್ಛಾರಕ್ಕೆ ನಾಲಗೆಯ ಸ್ಥಾನ ತುಸು ಬದಲಾಗುತ್ತದೆ. ಜಗತ್ತಿನ ಪ್ರತಿಯೊಂದು ಭಾಷೆಯ ಕಲಿಕೆಗೂ ನಾಲಗೆಯ ಸರಿಯಾದ ಸ್ಥಾನ ನಿರ್ದೇಶನ ಮತ್ತು ವಾಯುಸಂಚಾರದ ನಿಯಂತ್ರಣ ಅತ್ಯಗತ್ಯ. ಭಾಷಾ ವಿಜ್ಞಾನ ಮಾನವರ ಅಗಾಧ ಪ್ರಗತಿಗೆ ಬಹು ಮುಖ್ಯ ಕಾರಣ.

 

ನಾಲಗೆಯ ಗಣಿತ ರುಚಿಕಟ್ಟಾದ ಅಚ್ಚರಿಯುತ ಮಾಹಿತಿಗಳ ಆಗರ! ಇದು ಆಸ್ವಾದಿಸಿದಷ್ಟೂ ಚೇತೋಹಾರಿ.  

-------------------------

2024ರ ಮೇ ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ