ಭಾನುವಾರ, ಜೂನ್ 16, 2024


 

ಮೂಗಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 

ನಮ್ಮ ಮುಖದ ಮೇಲೆ ಪ್ರಧಾನವಾಗಿ ಕಾಣುವ ಅಂಗ ಮೂಗು. ಮುಖದ ಮೇಲಿನ ಎಲ್ಲ ಅಂಗಗಳೂ ಸರಿಸುಮಾರು ಒಂದು ಸಮತಲದಲ್ಲಿ ಇದ್ದರೆ, ಮೂಗು ಮಾತ್ರ ಮುಂದಕ್ಕೆ ಚಾಚಿಕೊಂಡು ತನ್ನ ಛಾಪನ್ನು ಮೂಡಿಸುವಂತೆ ಇರುತ್ತದೆ. ಮೂಗು ಮುಖದ ಸೌಂದರ್ಯದ ಪ್ರಮುಖ ಭಾಗ. ಈಜಿಪ್ಟ್ ರಾಣಿ ಕ್ಲಿಯೋಪಾತ್ರಾಳ ಮೂಗಿನ ಅಂದಕ್ಕೆ ರೋಮನ್ ಸಾಮ್ರಾಜ್ಯ ಅಲ್ಲೋಲಕಲ್ಲೋಲವಾಗಿತ್ತು. ರಾಮಾಯಣದ ಸುಂದರಕಾಂಡದಲ್ಲಿ ಸೀತೆಯನ್ನು ಅಶೋಕವನದಲ್ಲಿ ಕಾಯುವ ರಾಕ್ಷಸಿಯರ ವಿಲಕ್ಷಣ ಮೂಗನ್ನು ಬಣ್ಣಿಸಿ, ಅವರ ಕುರೂಪವನ್ನು ತೋರುವುದಾಗಿದೆ. ಬಹಳ ಕಾಲದಿಂದ ಮೂಗು ಪ್ರತಿಷ್ಠೆಯ ಸಂಕೇತ ಕೂಡ. ಮರ್ಯಾದೆಯ ರೂಪಕದಂತೆ ಮೂಗಿನ ಉಲ್ಲೇಖವನ್ನು ಬಳಸುವುದಿದೆ. ಕುಮಾರವ್ಯಾಸನೂ ಭೀಮನ ಬಾಯಲ್ಲಿ ಸೋದರರಿಂದ ಉಂಟಾದ ತನ್ನ ಕ್ಲೈಬ್ಯದ ಕುರಿತು “ನಾನು ಮೂಗುಳ್ಳವನೇ?” ಎಂದು ಪರಿತಪಿಸುವಂತೆ ಚಿತ್ರಿಸುತ್ತಾನೆ. ತಪ್ಪು ಮಾಡಿದವರ ಮೂಗನ್ನು ಕತ್ತರಿಸುವ ಪದ್ದತಿ ಬಹಳ ಕಾಲದಿಂದ ಭಾರತದಲ್ಲಿ ಚಾಲ್ತಿಯಲ್ಲಿತ್ತು. ಇಂತಹವರ ಮೂಗನ್ನು ಪುನಃ ನಿರ್ಮಾಣ ಮಾಡುವಂತಹ ಸುರೂಪಿ ಶಸ್ತ್ರಚಿಕಿತ್ಸೆಯ ಕೌಶಲ್ಯ ನಮ್ಮ ವೈದ್ಯರಿಗೆ ಸಾವಿರಾರು ವರ್ಷಗಳ ಹಿಂದೆಯೇ ಸಿದ್ಧಿಸಿತ್ತು. ಹೀಗೆ, ಮೂಗಿನ ಜೊತೆಗೆ ನಮ್ಮ ಭಾವಕೋಶದ ಒಡನಾಟಕ್ಕೆ ನಿಕಟ ಸಂಬಂಧವಿದೆ.

 

ಮೂಗು ಮುಖದ ನಡುಭಾಗದ ಅಂಗ. ಮಧ್ಯದಲ್ಲಿನ ಗೋಡೆ ಮೂಗನ್ನು 2 ಭಾಗಗಳಾಗಿ ವಿಂಗಡಿಸುತ್ತದೆ. ಮೂಗಿನ ಒಂದೊಂದು ಬದಿಯೂ 8 ವಿವಿಧ ಮೂಳೆಗಳ ಭಾಗಗಳನ್ನು ಒಳಗೊಂಡಿದೆ. ಇದರ ಜೊತೆಗೆ ಮೂಗಿನ ಎರಡೂ ಬದಿಗಳೂ ಸೇರಿ 9 ಮೃದ್ವಸ್ತಿಗಳು ಇರುತ್ತವೆ. ಇವೆರಡರ ಸಂಘಟಿತ ರಚನೆಯಿಂದ ಮೂಗು ಆಕಾರ ಪಡೆಯುತ್ತದೆ. ಮುಖದ ಸ್ನಾಯುಗಳು ಮೂಗಿಗೂ ಹರಡಿ ಉಸಿರಾಟದಲ್ಲಿ ಮತ್ತು ಮುಖದ ಭಾವಗಳನ್ನು ವ್ಯಕ್ತಪಡಿಸುವಲ್ಲಿ ನೆರವಾಗುತ್ತವೆ. ಹೀಗೆ ಸುಮಾರು 10 ವಿವಿಧ ಸ್ನಾಯುಗಳು ಮೂಗಿನ ಕಾರ್ಯದಲ್ಲಿ ಪಾತ್ರ ವಹಿಸುತ್ತವೆ. ಭ್ರೂಮಧ್ಯದ ಭಾಗದಿಂದ ಮೊದಲುಗೊಂಡು ಮೂಗಿನ ತುದಿಯವರೆಗೆ ಇರುವ 4 ಪದರಯುಕ್ತ ಚರ್ಮದ ಕೆಲಭಾಗಗಳು ತೆಳು; ಕೆಲಭಾಗಗಳು ದಪ್ಪ. ಚರ್ಮದ ಕೆಲಭಾಗಗಳು ಮೂಳೆ-ಮೃದ್ವಸ್ತಿಗಳಿಗೆ ಅಂಟಿಕೊಂಡಿದ್ದರೆ ಮತ್ತೂ ಕೆಲಭಾಗಗಳನ್ನು ಅತ್ತಿತ್ತ ಸರಿಸಬಹುದು. ಮೂಗಿನ ಚರ್ಮದಲ್ಲಿ ಬೆವರನ್ನು ಸ್ರವಿಸುವ ಸ್ವೇದ ಗ್ರಂಥಿಗಳು ಮತ್ತು ತೈಲಯುಕ್ತ ಸ್ರವಿಕೆಯ ಮೇದೋ ಗ್ರಂಥಿಗಳು ಹೇರಳವಾಗಿ ಇರುತ್ತವೆ. ಈ ಕಾರಣಕ್ಕಾಗಿಯೇ ಮೂಗಿನ ಮೇಲೆ ಮೊಡವೆಗಳ ಸಮಸ್ಯೆ ಹೆಚ್ಚು. ಪುರುಷ ಹಾರ್ಮೋನುಗಳ ಪ್ರಭಾವದಿಂದ ಗಂಡಸರ ಮೂಗಿನ ಗಾತ್ರ ದೊಡ್ಡದು; ಹೆಂಗಸರ ಮೂಗು ಸಣ್ಣದು.  

 

ಹೊಳ್ಳೆಗಳಿಂದ ಆರಂಭವಾಗುವ ಮೂಗಿನ ಒಳಭಾಗ ಪಿರಮಿಡ್ ಆಕಾರದಲ್ಲಿ ಮೇಲೆ ವ್ಯಾಪಿಸುತ್ತದೆ. ಆರಂಭದ ಭಾಗದಲ್ಲಿ ಮೃದ್ವಸ್ತಿ, ಚರ್ಮ, ಕೂದಲು, ಲೋಳೆ ಪದರ, ಹಾಗೂ ವಿಫುಲ ಸಂಖ್ಯೆಯ ಮೇದೋ ಗ್ರಂಥಿಗಳು ಇರುತ್ತವೆ. ಮೇಲೆ ಹೋದಂತೆಲ್ಲ ಲೋಳೆ ಪದರದ ರಚನೆ ಬದಲಾಗುತ್ತಾ, ಉಸಿರಾಟಕ್ಕೆ ಅನುಕೂಲವಾಗುವ ರೀತಿಯಲ್ಲಿ ಮಾರ್ಪಾಡಾಗುತ್ತದೆ. ಮೂಗಿನ ಅತಿ ಮುಖ್ಯ ಕಾರ್ಯ ಉಸಿರಾಟದ ಸಂವಹನೆ. ಅದರ ಇತರ ಕಾರ್ಯಗಳು ವಾಸನೆಯ ಗ್ರಹಿಕೆ ಮತ್ತು ಧ್ವನಿಯ ನಿರ್ವಹಣೆ.    

 

ಮೂಗಿನ ಎರಡೂ ಬದಿಗಳಲ್ಲಿ ಶಂಕುವಿನಂತಹ ತೆಳು ಪದರದ ತಲಾ 3 ಮೂಳೆಗಳಿವೆ. ಇವು ಒಟ್ಟಾಗಿ ಮೂಗಿನ ಒಳಭಾಗದಲ್ಲಿ ಮೂರು ಉಬ್ಬುಗಳನ್ನು, ನಾಲ್ಕು ತಗ್ಗುಗಳನ್ನು ನಿರ್ಮಿಸುತ್ತವೆ. ಮೂಗಿನ ಒಂದೊಂದು ಬದಿಯಲ್ಲೂ 4 ರಂತೆ ಒಟ್ಟು 8  ಸೈನಸ್ ಇರುತ್ತವೆ. ಸೈನಸ್ ಎನ್ನುವುದು ಮೂಲತಃ ಮುಖದ ಕೆಲ ಮೂಳೆಗಳ ಒಳಗಿನ ಟೊಳ್ಳು ಜಾಗ. ಇದರ ಏಕೈಕ ದ್ವಾರ ಮೂಗಿನ ಒಳಭಾಗಕ್ಕೆ ತೆರೆದುಕೊಳ್ಳುತ್ತದೆ. ಮನುಷ್ಯ ಚತುಷ್ಪಾದಿಯಾಗಿದ್ದಾಗ ಎಲ್ಲ ಸೈನಸ್ಗಳ ದ್ವಾರಗಳು ಗುರುತ್ವಕ್ಕೆ ಸಂವಾದಿಯಾಗಿ ಇದ್ದವು. ಆದರೆ ಮನುಷ್ಯ ಜೀವಿ ದ್ವಿಪಾದಿಯಾಗಿ ಬದಲಾದಾಗ ಕೆಲ ಸೈನಸ್ಗಳ ದ್ವಾರಗಳು ಸಹಜವಾಗಿಯೇ ಗುರುತ್ವಕ್ಕೆ ವಿರುದ್ಧವಾಗಿ ನಿಲ್ಲುತ್ತವೆ. ಇಂತಹ ಸೈನಸ್ಗಳಲ್ಲಿ ಸ್ರವಿಸುವ ಲೋಳೆ ಸರಾಗವಾಗಿ ಹೊರಹೋಗಲಾರದೆ ಅಲ್ಲಿಯೇ ಸಂಚಯವಾಗುತ್ತವೆ. ಇದರೊಳಗೆ ಸೋಂಕು ಉಂಟಾಗುವ ಸಾಧ್ಯತೆಗಳೂ ಹೆಚ್ಚು. ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಬಾರಿ ಕಾಡುವ ಸೈನಸೈಟಿಸ್ ಎನ್ನುವ ಸಮಸ್ಯೆಯ ಮೂಲ ಇದೇ.

 

ಉಸಿರಾಟದ ವೇಳೆ ಹೊರಗಿನ ವಾತಾವರಣದಿಂದ ನಾವು ಸೆಳೆದುಕೊಳ್ಳುವ ಗಾಳಿ ಮೂಗಿನ ಮೂಲಕ ಹಾಯುವಾಗ ಮೊದಲು ಹೊರಮೂಗಿನ ಕೂದಲು ಹಾಗೂ ಶ್ಲೇಷ್ಮದಲ್ಲಿ ಸೋಸಲ್ಪಡುತ್ತದೆ. ಧೂಳಿನ ಕಣಗಳಿಂದ ಮುಕ್ತವಾದ ಗಾಳಿ ಮೂಗಿನ ಉಬ್ಬು-ತಗ್ಗುಗಳ ಮೂಲಕ ಸಾಗುತ್ತಾ, ಶಂಕುಮೂಳೆಗಳು, ಲೋಳೆಪದರ ಮತ್ತು ಸೈನಸ್ಗಳು ಒದಗಿಸುವ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹೊರಗಿನ ಗಾಳಿಯ ಉಷ್ಣಾಂಶ ಏನೇ ಇದ್ದರೂ ಮೂಗಿನ ವ್ಯವಸ್ಥೆ ಅದನ್ನು ಶರೀರದ ತಾಪಮಾನಕ್ಕೆ ಹತ್ತಿರವಾಗಿ ತರುತ್ತದೆ. ಈ ರೀತಿ ಶುದ್ಧವಾದ, ತೇವಾಂಶಯುಕ್ತವಾದ ಮತ್ತು ತಾಪಮಾನ ಮಾರ್ಪಾಡಾದ ಗಾಳಿ ಶ್ವಾಸಕೋಶವನ್ನು ಸೇರುತ್ತದೆ. ಇದಕ್ಕೆ ವಿರುದ್ಧವಾಗಿ ಬಾಯಿಂದ ಉಸಿರಾಡುವ ಗಾಳಿಯ ಗುಣಮಟ್ಟ ಇಷ್ಟೊಂದು  ಬದಲಾಗುವುದಿಲ್ಲ. ಶ್ವಾಸಕೋಶದ ಕೆಲಸ ಮತ್ತು ಸುರಕ್ಷತೆಯ ದೃಷ್ಟಿಯಿಂದ ಮೂಗಿನ ಮೂಲಕ ಉಸಿರಾಡುವುದು ಆರೋಗ್ಯಕರ. ಆರೋಗ್ಯವಂತ ವ್ಯಕ್ತಿಯೊಬ್ಬರು ದಿನವೊಂದಕ್ಕೆ ಸುಮಾರು 10,000 ದಿಂದ 12,000 ಬಾರಿ ಉಸಿರಾಡುತ್ತಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿದಿನ ಸುಮಾರು 300-400 ಎಂ.ಎಲ್. ನೀರಿನಷ್ಟು ತೇವಾಂಶ ಮೂಗಿನಿಂದ ಒದಗುತ್ತದೆ. ಬಾಯಿಂದ ಉಸಿರಾಡುವಾಗ ಇದಕ್ಕಿಂತ ಹೆಚ್ಚಿನ ತೇವಾಂಶ ಖರ್ಚಾಗುತ್ತಾದರೂ ಶ್ವಾಸಕೋಶಗಳಿಗೆ ಒದಗುವ ಗಾಳಿಯ ಗುಣಮಟ್ಟ ಕಡಿಮೆ ಇರುತ್ತದೆ.

 

ಮಾನವ ಶರೀರದಲ್ಲಿ ನಡೆಯುವ ಅತ್ಯಂತ ವೇಗವಾದ ಪ್ರಕ್ರಿಯೆಗಳಲ್ಲಿ ಒಂದಾದ ಸೀನು ಮೂಗಿನ ಮೂಲದ್ದು. ಆ....ಕ್ಷೀ... ಎನ್ನುವ ಕ್ರಿಯೆಯ ವೇಗ ಗಂಟೆಗೆ 150 ಕಿಲೋಮೀಟರ್ ದಾಟುತ್ತದೆ. ಮೂಗಿನ ಲೋಳೆಪದರದ ತುರಿಕೆ ಉಂಟಾದಾಗ ಮಿದುಳು ಕೂಡಲೇ ಗ್ರಹಿಸಿ, ಅದನ್ನು ಹೋಗಲಾಡಿಸಲು ಸಂಕೇತಗಳನ್ನು ಹೊಟ್ಟೆ, ವಪೆ, ಎದೆ ಮೊದಲಾದ ಮಾಂಸಖಂಡಗಳಿಗೆ ರವಾನಿಸುತ್ತದೆ. ಈ ಸ್ನಾಯುಗಳ ನೆರವಿನಿಂದ ಶ್ವಾಸಕೋಶಗಳು ಅತೀವ ವೇಗದಲ್ಲಿ ಗಾಳಿಯನ್ನು ಶ್ವಾಸಮಾರ್ಗಗಳಿಂದ ಹೊರ ಹಾಕುತ್ತವೆ. ಪ್ರತಿಯೊಂದು ಸೀನಿನಲ್ಲಿ ಸುಮಾರು 40,000 ಅತ್ಯಂತ ಸಣ್ಣ ದ್ರವಕಣಗಳು ಇರುತ್ತವೆ. ಎಷ್ಟೇ ವೇಗದಿಂದ ಚಿಮ್ಮಿ ಬಂದರೂ ಮೂಗಿನಿಂದ ಹೊರಬಂದ ಕೂಡಲೇ ಎಲ್ಲ ದಿಕ್ಕುಗಳಲ್ಲೂ ಈ ದ್ರವಕಣಗಳು ವ್ಯಾಪಿಸುವುದರಿಂದ ಅವು ಸುಮಾರು 5-6 ಅಡಿಗಳ ದೂರ ತಲುಪುವುದರೊಳಗೆ ತೀರಾ ನಿರ್ಬಲವಾಗುತ್ತವೆ. ಹೀಗಾಗಿ ಕೋವಿಡ್-19 ಜಾಗತಿಕ ಸೋಂಕಿನ ವೇಳೆ ವ್ಯಕ್ತಿಗಳ ನಡುವೆ 6 ಅಡಿಗಳಷ್ಟು ಅಂತರವನ್ನು ಕಾಯ್ದುಕೊಳ್ಳಲು ಸೂಚಿಸಲಾಗಿತ್ತು.   

 

ಘ್ರಾಣಶಕ್ತಿ ಅಥವಾ ವಾಸನೆಗಳನ್ನು ಪತ್ತೆ ಹಚ್ಚುವಿಕೆ ಮೂಗಿನ ಇನ್ನೊಂದು ಕೆಲಸ. ಮೂಗಿನ ಮೇಲ್ಭಾಗದ ವಿಶೇಷ ಲೋಳೆಪದರದಲ್ಲಿ ಘ್ರಾಣಗ್ರಾಹಿಗಳೆಂಬ ವಿಶಿಷ್ಟ ನರಕೋಶಗಳಿವೆ. ಈ ನರಕೋಶಗಳ ಕೆಲವಂಶ ಮೂಗನ್ನು ಆವರಿಸಿರುವ ಮೂಳೆಗಳ ಮೇಲಿನ ಪದರಗಳಲ್ಲೂ ಇರುತ್ತವೆ. ಮೂಗಿನಿಂದ ಸೆಳೆದುಕೊಂಡ ಗಾಳಿಯಲ್ಲಿ ಇರುವ ಗಂಧಕಾರಕ ರಾಸಾಯನಿಕಗಳನ್ನು ಈ ಗ್ರಾಹಿಗಳು ಪತ್ತೆ ಮಾಡುತ್ತವೆ. ಬಾಯಲ್ಲಿ ಇಟ್ಟುಕೊಂಡ ಆಹಾರವನ್ನು ನಾಲಗೆಯ ಮೂಲಕ ಒಳಗೆ ಸೆಳೆದುಕೊಂಡಾಗ ಅದರ ವಾಸನೆ ಅಂಗಳುವಿನ ಭಾಗದಿಂದ ಹಿಮ್ಮುಖವಾಗಿ ಚಲಿಸಿ ಗ್ರಾಹಿಗಳನ್ನು ಪ್ರಚೋದಿಸುತ್ತದೆ. ವಾಸನೆ ಎನ್ನುವುದು ಅತ್ಯಂತ ಪ್ರಾಥಮಿಕ ಅರಿವು. ಮಿದುಳಿನ ವಿಕಾಸ ಸಾಕಷ್ಟು ಕೆಳಹಂತಗಳಲ್ಲಿ ಇರುವ ಜೀವಿಗಳಲ್ಲೂ ವಾಸನೆಯ ಅರಿವು ತೀಕ್ಷ್ಣವಾಗಿ ಇರುತ್ತದೆ. ನರಮಂಡಲದ ಹಲವಾರು ಭಾಗಗಳು ವಾಸನೆಯಿಂದ ಪ್ರಚೋದಿತವಾಗುತ್ತವೆ. ಒಟ್ಟಾರೆ, ವಾಸನೆಯನ್ನು ಪತ್ತೆ ಮಾಡಿ, ಅದರ ವೈವಿಧ್ಯವನ್ನು ಗ್ರಹಿಸಲು ನರಮಂಡಲದಲ್ಲಿ 27 ತಾಣಗಳಿವೆ. ಅದರಿಂದ ಬರುವ ಮಾಹಿತಿ ಶರೀರದ ಸುಮಾರು 20 ವಿವಿಧ ಭಾಗಗಳನ್ನು ತಲುಪುತ್ತದೆ ಎಂದರೆ ಇದರ ಮಹತ್ವ ತಿಳಿಯುತ್ತದೆ. ನಾಗರಿಕತೆ ಬೆಳೆದಂತೆ ಕಣ್ಣು, ಕಿವಿಗಳ ಕೆಲಸ ಹೆಚ್ಚಾಗಿ, ಮೂಗಿನ ಘ್ರಾಣಶಕ್ತಿಗೆ ನೀಡುವ ಮಹತ್ವ ಮನುಷ್ಯರಲ್ಲಿ ಕಡಿಮೆಯಾಗಿದೆ. ಆದಾಗ್ಯೂ, ನವಜಾತ ಶಿಶುಗಳಲ್ಲಿ ಈ ಸಾಮರ್ಥ್ಯ ಜನ್ಮತಃ ಅಧಿಕವಾಗಿಯೇ ಇರುತ್ತದೆ ಎನ್ನಲಾಗಿದೆ.

 

ಧ್ವನಿಯ ನಿರ್ವಹಣೆ ಮೂಗಿನ ಮತ್ತೊಂದು ಕಾರ್ಯ. ಶ್ವಾಸಕೋಶಗಳಿಂದ ಹೊರಬರುವ ಗಾಳಿ ಗಂಟಲಿನ ಧ್ವನಿಪೆಟ್ಟಿಗೆಯ ಮೂಲಕ ಹಾಯುವಾಗ ಶಬ್ದದ ಸ್ವರೂಪ ಪಡೆಯುತ್ತದೆ. ಆ ಶಬ್ದವನ್ನು ಭಾಷಾಸೂತ್ರಗಳ ಅನ್ವಯ ಅರ್ಥಪೂರ್ಣ ಪ್ರಕ್ರಿಯೆಯಾಗಿ ಬದಲಾಯಿಸುವುದು ಬಾಯಿ ಮತ್ತು ಮೂಗು. ಗಂಟಲಿನ ಅಂಗುಳು ಭಾಗವನ್ನು ಕೆಳಗೆ ಒತ್ತಿ, ಗಾಳಿಯನ್ನು ಮೂಗಿನ ಮೂಲಕ ಹಾಯಿಸಿ, ಅನುನಾಸಿಕ ಅಕ್ಷರಗಳನ್ನು ಉಚ್ಛರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಮೂಗಿನ ಆಸುಪಾಸು ಇರುವ ಸೈನಸ್ಗಳು ಧ್ವನಿಯ ಅನುರಣನಕ್ಕೆ ಕಾರಣವಾಗಿ, ಶಬ್ದಗಳಿಗೆ ಗಾತ್ರವನ್ನು ನೀಡುತ್ತವೆ. ಜಗತ್ತಿನ ಹಲವಾರು ಭಾಷೆಗಳಲ್ಲಿ ಅನುನಾಸಿಕ ಅಕ್ಷರಗಳು ಪ್ರಮುಖ ಪಾತ್ರ ವಹಿಸುತ್ತವೆ. ಬಹುತೇಕ ಭಾರತೀಯ ಭಾಷೆಗಳು ಇದಕ್ಕೆ ಮಾದರಿ. ಸಂಸ್ಕೃತದ ಪ್ರಭಾವ ದಟ್ಟವಾಗಿರುವ ಮಲಯಾಳಂನಂತಹ ಭಾಷೆಗಳಲ್ಲಿ ಮೂಗಿನ ಮೂಲಕ ಉಚ್ಛರಿಸುವ ಪದಗಳೇ ಹೆಚ್ಚು. ಅಂತೆಯೇ, ಫ್ರೆಂಚ್, ಪೋರ್ತುಗೀಸ್, ನೇಪಾಳಿ, ಚೆರೋಕಿ ಮೊದಲಾದ ಭಾಷೆಗಳು ಕೂಡ.

 

ಮೂಗು ಕೇವಲ ಸೌಂದರ್ಯ ಮತ್ತು ಪ್ರತಿಷ್ಠೆಯ ರೂಪಕ ಮಾತ್ರವಲ್ಲ. ಅದು ನಮ್ಮ ಶರೀರದ ಅನೇಕ ಮುಖ್ಯ ಕಾರ್ಯಗಳನ್ನು ನಿರ್ವಹಿಸುವ ಮಾಧ್ಯಮ ಕೂಡ. ಮೂಗಿನ ಗಣಿತ ಮಾತುಗಳಿಗೆ ಮಿಗಿಲಾದ ಅಚ್ಚರಿಗಳ ಸಮಾಗಮ.  

-----------------------

ಜೂನ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇಡೀ ಸಂಚಿಕೆಯ ಉಚಿತ ಓದಿಗಾಗಿ ಕೊಂಡಿ: https://flipbookpdf.net/web/site/4611bb6eb6dd25f80ac70b8db3d1e9a9faa259ed202406.pdf.html



 

ಮಾನವ ದೇಹಕ್ಕೆ ಪ್ರಾಣಿಗಳ ಅಂಗ ಕಸಿ

ಡಾ. ಕಿರಣ್ ವಿ.ಎಸ್.

ವೈದ್ಯರು

ದೇಶದ ಹೊರಗಿನಿಂದ ಬಂದು ದೇಶವಾಸಿಗಳ ಮೇಲೆ ಆಕ್ರಮಣ ಮಾಡಿ ಅಮಾಯಕರಿಗೆ ಹಾನಿ ಮಾಡಬಲ್ಲ ಶತ್ರುಗಳನ್ನು ತಡೆಯಲು ಪ್ರತಿಯೊಂದು ದೇಶವೂ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿರುತ್ತದಷ್ಟೇ? ಇವನ್ನು ರಕ್ಷಣಾ ಪಡೆಗಳು ಎನ್ನುತ್ತಾರೆ. ಅದೇ ರೀತಿ ಹೊರಗಿನಿಂದ ಬಂದ ಯಾವುದೇ ಬಾಹ್ಯ ಜೀವಕೋಶದ ಮೇಲೂ ಧಾಳಿ ಮಾಡಿ, ಅದನ್ನು ಚೆಂಡಾಡಬಲ್ಲ ಸಶಕ್ತ ವ್ಯವಸ್ಥೆಯೊಂದು ನಮ್ಮ ದೇಹದಲ್ಲೂ ಇರುತ್ತದೆ.  ಇದನ್ನು “ದೇಹದ ರಕ್ಷಕ ವ್ಯವಸ್ಥೆ” ಎನ್ನಬಹುದು.

 

ದೇಹದ ರಕ್ಷಕ ವ್ಯವಸ್ಥೆ

·         ಇದರ ವಿಶಿಷ್ಟ ಕೋಶಗಳು ಭ್ರೂಣದ ಹಂತದಲ್ಲಿಯೇ ರೂಪುಗೊಳ್ಳುತ್ತದೆ.

·         ವ್ಯಕ್ತಿಯೊಬ್ಬರ ಜೀವಕೋಶಗಳ ಹೊರ ಆವರಣದ ಮೇಲೆ ಇರುವ ಸೂಕ್ಷ್ಮ ಗ್ರಾಹಿಗಳು ಮತ್ತು ಅವುಗಳ ರಾಸಾಯನಿಕ ನಿರ್ಮಾಣಗಳು ಪ್ರತಿಯೊಬ್ಬರಲ್ಲೂ ವಿಭಿನ್ನ. ರಕ್ಷಕ ವ್ಯವಸ್ಥೆಯ ವಿಶಿಷ್ಟ ಕೋಶಗಳು ಇಂತಹ ವಿನ್ಯಾಸಗಳನ್ನು ಗುರುತಿಸಿ, ತಮ್ಮ ನೆನಪಿನಲ್ಲಿ ಇಡುತ್ತವೆ.

·         ಇವುಗಳ ನೆನಪಿಗೆ ತಾಳೆ ಆಗುವ ಕೋಶಗಳೂ “ಸ್ವಂತ”; ಸ್ವಂತ ಕೋಶಗಳನ್ನು ಘಾಸಿಯಾಗದಂತೆ ಕಾಪಾಡುವುದು ಇದರ ಕಾರ್ಯ.

·         ಇವುಗಳ ನೆನಪಿಗೆ ಹೊಂದಾಣಿಕೆ ಆಗದ ಕೋಶಗಳು “ಬಾಹ್ಯ” ಅಥವಾ “ಪರಕೀಯ”.

·         ತನ್ನದಲ್ಲದ ಎಲ್ಲವೂ ರಕ್ಷಕ ವ್ಯವಸ್ಥೆಯ ಪಾಲಿಗೆ ಪರಕೀಯ – ಆಪ್ತ ರಕ್ತಸಂಬಂಧಿಗಳ ಜೀವಕೋಶಗಳೂ ಕೂಡ.

·         ದೇಹವನ್ನು ಸೇರಿದ ಯಾವುದೇ ಪರಕೀಯ ಕೋಶವನ್ನೂ ರಕ್ಷಕ ವ್ಯವಸ್ಥೆ ಉಳಿಯಲು ಬಿಡುವುದಿಲ್ಲ.

·         ಪರಕೀಯ ಕೋಶವನ್ನು ಗುರುತಿಸಿದ ಕೂಡಲೇ ಇಡೀ ರಕ್ಷಕ ವ್ಯವಸ್ಥೆ ಜೋರಾಗಿ ಬೊಬ್ಬೆ ಹೊಡೆದು, ಹಲವಾರು ರಾಸಾಯನಿಕಗಳನ್ನು ಚಿಮ್ಮಿ, ತನ್ನ ಸೇನೆಯ ನೂರಾರು, ಸಾವಿರಾರು, ಲಕ್ಷಾಂತರ ರಕ್ಷಕ ಭಂಟರನ್ನು ಒಗ್ಗೂಡಿಸುತ್ತದೆ. ಇವೆಲ್ಲವೂ ಒಟ್ಟಾಗಿ ಆ ಪರಕೀಯ ಕೋಶದ ಮೇಲೆ ನಿರಂತರ ಧಾಳಿ ಮಾಡುತ್ತಾ, ಅದನ್ನು ಹಣ್ಣುಗಾಯಿ-ನೀರುಗಾಯಿ ಮಾಡಿ, ಕೊನೆಗೆ ಪರಕೀಯ ಕೋಶವನ್ನು ಇಲ್ಲವಾಗಿಸುತ್ತವೆ.

 

ಹೊರಗಿನಿಂದ ಧಾಳಿ ಮಾಡುವ ವೈರಸ್, ಬ್ಯಾಕ್ಟೀರಿಯಾ, ಶಿಲೀಂದ್ರ, ಏಕಾಣು ಪರೋಪಜೀವಿ ಮೊದಲಾದ ಸೋಂಕುಕಾರಕಗಳು ಯಾವುದೇ ಆದರೂ ರಕ್ಷಕ ವ್ಯವಸ್ಥೆ ಕಾರ್ಯಪ್ರವೃತ್ತವಾಗುತ್ತದೆ. ಒಂದು ವೇಳೆ ಧಾಳಿ ಮಾಡುವ ಇಂತಹ ಸೋಂಕುಕಾರಕ ಜೀವಿಗಳ ಪ್ರಭಾವ ಕಡಿಮೆ ಇದ್ದರೆ, ಈ ಹೋರಾಟ ನಮ್ಮ ಗಮನಕ್ಕೂ ಬರುವುದಿಲ್ಲ. ಆದರೆ, ಪರೋಪಜೀವಿಗಳ ಪ್ರಮಾಣ ಅಧಿಕವಾಗಿದ್ದರೆ ರಕ್ಷಕ ವ್ಯವಸ್ಥೆಯ ಹೋರಾಟವೂ ಪ್ರಬಲವಾಗಿರುತ್ತದೆ. ಈ ಕದನದಲ್ಲಿ ನಮ್ಮ ದೇಹದ ಸ್ವಂತ ಜೀವಕೋಶಗಳೂ ಘಾಸಿಗೆ ಒಳಗಾಗಬಹುದು. ಯುದ್ಧ ತೀವ್ರವಾಗುತ್ತಿದ್ದಂತೆ ಸೋಂಕಿನ ಲಕ್ಷಣಗಳು ಕಾಣುತ್ತವೆ. ಜ್ವರ, ಸುಸ್ತು, ನಿರುತ್ಸಾಹ ಮೊದಲಾದ ಚಿಹ್ನೆಗಳು ಪರೋಪಜೀವಿಗಳ ಮೇಲೆ ರಕ್ಷಕ ವ್ಯವಸ್ಥೆ ಹೋರಾಡುತ್ತಿರುವ ಸಂಕೇತಗಳು. ಈ ನಿಟ್ಟಿನಲ್ಲಿ ರಕ್ಷಕ ವ್ಯವಸ್ಥೆಗೆ ಪೂರಕವಾಗಲು ಆಂಟಿಬಯಾಟಿಕ್, ಆಂಟಿಫಂಗಲ್, ಮೊದಲಾದ ಔಷಧಗಳನ್ನು ಬಳಸಬೇಕಾಗುತ್ತದೆ. ಈ ಔಷಧಗಳು ಪರೋಪಜೀವಿಗಳನ್ನು ಕೊಲ್ಲಬಲ್ಲವು ಇಲ್ಲವೇ ನಿಶ್ಚೇಷ್ಟಗೊಳಿಸಬಲ್ಲವು. ಇದರಿಂದ ರಕ್ಷಕ ವ್ಯವಸ್ಥೆಯ ವೈರಿಗಳ ಸಂಖ್ಯೆ ಕಡಿಮೆಯಾಗಿ, ಕದನದ ತೀವ್ರತೆ ಇಳಿಯುತ್ತದೆ. ಇಂತಹ ಔಷಧಗಳನ್ನು ಯಾವ ಹಂತದಲ್ಲಿ ಬಳಸಬೇಕು ಎನ್ನುವುದಕ್ಕೆ ಮಾರ್ಗಸೂಚಿಗಳಿವೆ. ಅದನ್ನು ವೈದ್ಯರು ಸಮಯಾನುಸಾರ ಪಾಲಿಸುತ್ತಾರೆ.

ಬಾಹ್ಯ ಜೀವಕೋಶ ಯಾವಾಗಲೂ ಪರೋಪಜೀವಿಯೇ ಆಗಬೇಕಿಲ್ಲ. ತನ್ನ ದೇಹಕ್ಕೆ ಸಂಬಂಧಿಸಿರದ ಯಾವುದೇ ಜೀವಕೋಶವೂ – ಅದು ಸೋಂಕುಕಾರಕ ಕೋಶವೋ ಅಥವಾ ಸೋಂಕು ತಾರದ ಸಾಮಾನ್ಯ ಜೀವಕೋಶವೋ – ರಕ್ಷಕ ವ್ಯವಸ್ಥೆಯ ಪಾಲಿಗೆ ಅದೊಂದು ವೈರಿ. ಅದನ್ನು ನಿರ್ನಾಮಗೊಳಿಸುವವರೆಗೆ ರಕ್ಷಕ ವ್ಯವಸ್ಥೆಯ ಕೋಶಗಳಿಗೆ ನೆಮ್ಮದಿ ಇಲ್ಲ. ಉದಾಹರಣೆಗೆ, ರಕ್ತದಾನದ ಪ್ರಸಂಗವನ್ನು ಗಮನಿಸಬಹುದು. ರಕ್ತದಲ್ಲಿ ಕೆಂಪು ಮತ್ತು ಬಿಳಿಯ ರಕ್ತಕಣಗಳಿವೆ. ಕೆಂಪು ರಕ್ತಕಣಗಳು ರಾಸಾಯನಿಕಗಳ ಚೀಲ ಮಾತ್ರ. ನೈಜಾರ್ಥದಲ್ಲಿ ಅವುಗಳಿಗೆ ಜೀವವಿಲ್ಲ. ಅಂದರೆ, ಅವುಗಳಲ್ಲಿ ಕೋಶವಿಭಜನೆಗೆ ಬೇಕಾದ ನ್ಯೂಕ್ಲಿಯಸ್ ಎಂಬ ಕೋಶಕೇಂದ್ರವಿಲ್ಲ. ಹೀಗಾಗಿ, ಅವುಗಳನ್ನು ರಕ್ಷಕ ವ್ಯವಸ್ಥೆ ಜೀವಂತ ಕೋಶ ಎಂದು ಪರಿಗಣಿಸುವುದಿಲ್ಲ. ಆಯಾ ಗುಂಪಿನ ರಕ್ತ ಹೊಂದಾಣಿಕೆಯಾದರೆ ಸಾಕು; ರಕ್ಷಕ ವ್ಯವಸ್ಥೆಯ ಅಸಮ್ಮತಿ ಇಲ್ಲ. ಆದರೆ, ರಕ್ತದ ಬಿಳಿಯ ಕಣಗಳು ಜೀವಂತ ಕೋಶಗಳು. ಅವುಗಳನ್ನು ರಕ್ಷಕ ವ್ಯವಸ್ಥೆ ಅಟ್ಟಾಡಿಸಿ ಧ್ವಂಸ ಮಾಡುತ್ತವೆ. ಅಂದರೆ, ಒಂದು ವ್ಯಕ್ತಿಯ ರಕ್ಷಕ ವ್ಯವಸ್ಥೆ ತನ್ನ ದೇಹ ಸೇರಿದ ಮತ್ತೊಂದು ಮನುಷ್ಯನ ಯಾವುದೇ ಜೀವಂತ ಕೋಶವನ್ನೂ ಪರಕೀಯ ಎಂದೇ ಭಾವಿಸಿ, ಅದರ ಮೇಲೆ ಸಮರ ಸಾರಿ, ಅದನ್ನು ಇಲ್ಲವಾಗಿಸುತ್ತದೆ. ಹೀಗಾಗಿ ಈಚಿನ ದಿನಗಳಲ್ಲಿ ದಾನಿಯ ರಕ್ತದಲ್ಲಿನ ಕೆಂಪು ರಕ್ತಕಣಗಳನ್ನು ಪ್ರತ್ಯೇಕಿಸಿ, ಬಿಳಿಯ ರಕ್ತಕಣಗಳನ್ನು ವಿಕಿರಣದ ಮೂಲಕ ಕೊಂದು, ಅಂತಹ ರಕ್ತವನ್ನು ಮಾತ್ರ ರೋಗಿಗೆ ನೀಡಲಾಗುತ್ತದೆ.

ಅಂಗಾಂಗ ಕಸಿ ಮತ್ತು ರಕ್ಷಕ ವ್ಯವಸ್ಥೆ:

·         ಅಂಗ ಎಂದರೆ ಕೋಟ್ಯಂತರ ಜೀವಕೋಶಗಳ ಸಮೂಹ

·         ಇಷ್ಟೊಂದು ಪರಕೀಯ ಕೋಶಗಳನ್ನು ದೇಹದೊಳಗೆ ಇರಲು ರಕ್ಷಕ ವ್ಯವಸ್ಥೆ ಬಿಡುವುದಿಲ್ಲ

·         ಅಂಗಾಂಗ ಕಸಿ ಮತ್ತು ರಕ್ಷಕ ವ್ಯವಸ್ಥೆಯ ಸಮನ್ವಯ ವೈದ್ಯರಿಗೆ ಅತ್ಯಂತ ಕಠಿಣ ಸವಾಲು

·         ಸಾಧ್ಯವಾದಷ್ಟೂ ಕಡಿಮೆ ಪರಕೀಯ (ಅತ್ಯಂತ ನಿಕಟ ವಲಯದ ಸಂಬಂಧಿಗಳ) ಅಂಗವನ್ನು ಕಸಿ ಮಾಡಬೇಕು

·         ರಕ್ಷಕ ವ್ಯವಸ್ಥೆಯ ಸಾಮರ್ಥ್ಯವನ್ನು ಕುಂದಿಸುವ ಔಷಧಗಳನ್ನು ಸದಾ ನೀಡಬೇಕು

·         “ಅತ್ಯಂತ ಕಡಿಮೆ ಪರಕೀಯ” ಅಂಗವನ್ನು ಹುಡುಕುವುದು ಅತ್ಯಂತ ತ್ರಾಸದಾಯಕ

·         ರೋಗಿ ಮತ್ತು ದಾನಿಗಳ ಜೆನೆಟಿಕ್ ಗುಣಗಳು ಎಷ್ಟು ಹೊಂದಾಣಿಕೆ ಆಗುತ್ತವೆ ಎಂದು ನೋಡಬೇಕು

·         ಕಸಿಯ ನಂತರದ ಸವಾಲುಗಳನ್ನು ನಿಭಾಯಿಸಬೇಕು

 

ಅಂಗಾಂಗ ಕಸಿಯ ಅಗತ್ಯ ಇರುವವರು ನೂರು ಮಂದಿಯಾದರೆ, ದಾನಿಗಳ ಲಭ್ಯತೆ ಒಂದು ಎನ್ನಬಹುದು. ಅಂಗಾಂಗ ಕಸಿಯ ವಿಷಯದಲ್ಲಿ ಕಾನೂನು ಬಹಳ ಕಟ್ಟುನಿಟ್ಟು. ಯಾರಿಗೂ ಅನ್ಯಾಯ ಆಗದಂತೆ ಹೊಸೆಯುವ ಕ್ಲಿಷ್ಟಕರ ಕಾನೂನುಗಳಲ್ಲಿ ಯಾವುದೋ ಒಂದು ಪಕ್ಷಕ್ಕೆ ನಷ್ಟ ಹೆಚ್ಚೇ ಆಗಿರುವುದು ಅನಿವಾರ್ಯ. ಈ ನಿಟ್ಟಿನಲ್ಲಿ ರೋಗಿಗಳ ಪಾಡು ಹೇಳತೀರದು. ತಂತ್ರಜ್ಞಾನವನ್ನು ಬಳಸಿ ಎಷ್ಟೇ ಚೆನ್ನಾಗಿ ಈ ಅಂತರವನ್ನು ನಿಭಾಯಿಸಲು ಪ್ರಯತ್ನಿಸಿದರೂ ಬಹಳ ಬಾರಿ ದಾನಿಗಳ ಅಂಗಾಂಗಗಳು ದೊರೆಯದೆ ರೋಗಿಗಳು ಮೃತಪಟ್ಟದ್ದು, ಕೆಲವೊಂದು ಸಮಯದಲ್ಲಿ ದೊರೆತಿರುವ ದಾನಿಯ ಅಂಗವನ್ನು ಪಡೆಯಬಲ್ಲ ರೋಗಿ ಕ್ಲುಪ್ತ ವೇಳೆಯಲ್ಲಿ ಅಲಭ್ಯರಾಗಿ, ಆ ಅಂಗ ವ್ಯರ್ಥವಾಗುವುದು ಇದ್ದೇ ಇರುತ್ತದೆ.   

ಮಾನವರ ದೇಹಕ್ಕೆ ಪ್ರಾಣಿಗಳ ಅಂಗಾಂಗಗಳನ್ನು ಕಸಿ ಮಾಡಲು ಸಾಧ್ಯವೇ?

·         ಮನುಷ್ಯ-ಮನುಷ್ಯರ ಜೆನೆಟಿಕ್ ಮಟ್ಟದಲ್ಲೇ ಸಾಮ್ಯತೆ ಇಲ್ಲ; ಇತರ ಪ್ರಭೇದದ ಜೀವಿಯ ಅಂಗ ಹೊಂದಿಕೆ ಆಗುವುದು ಹೇಗೆ?

·         ಮಾನವನ ಜೆನೆಟಿಕ್ ರಚನೆಗೆ ಅತ್ಯಂತ ನಿಕಟವಾದ ಜೀವಿಗಳು: ಹಂದಿ, ಮಂಗ, ಚಿಂಪಾಂಜಿ, ಬಬೂನ್

·         ಅಂಗಗಳ ಗಾತ್ರ, ರಚನೆ, ರಕ್ತಪರಿಚಲನೆಯ ಮಾದರಿ, ರಕ್ಷಕ ವ್ಯವಸ್ಥೆಯ ಸಾಮ್ಯಗಳ ದೃಷ್ಟಿಯಿಂದ ಹಂದಿಗಳು ಮಾನವನ ದೇಹದ ಅಂಗಾಂಗಗಳಿಗೆ ಹೆಚ್ಚು ಸೂಕ್ತ

·         ಹಂದಿಗಳ ಮೂತ್ರಪಿಂಡಗಳ ಕಸಿಯನ್ನು ಮಾನವ ದೇಹಕ್ಕೆ ಮಾಡುವ ಪ್ರಯತ್ನಗಳು 1980ರ ದಶಕದಿಂದ ನಡೆಯುತ್ತಿವೆ; ಸಾಫಲ್ಯ ತೀರಾ ಕಡಿಮೆ

·         ಹಂದಿಗಳ ವೈರಸ್ ಕಾಯಿಲೆಗಳಿಂದ ಕಸಿಗಳು ವಿಫಲವಾಗಿವೆ

·         ಆಧುನಿಕ ಜೆನೆಟಿಕ್ ತಂತ್ರಜ್ಞಾನವನ್ನು ಬಳಸಿ, ಹಂದಿಗಳ ಮೂತ್ರಪಿಂಡಗಳ 69 ಮೇಲ್ಮೈ ಗ್ರಾಹಿಗಳನ್ನು ಅಳಿಸಿ, “ಈ ಅಂಗ ಪರಕೀಯ” ಎನ್ನುವ ಭಾವನೆ ಮಾನವ ರಕ್ಷಕ ವ್ಯವಸ್ಥೆಗೆ ಬಾರದಂತೆ ಮಂಕುಬೂದಿ ಎರಚಲಾಗಿದೆ

·         ವೈರಸ್ ಪತ್ತೆ ಮತ್ತು ಚಿಕಿತ್ಸೆಯ ಅತ್ಯುತ್ತಮ ಮಾದರಿಗಳಿಂದ ಸೋಂಕು ನಿರ್ವಹಣೆ ಸಾಧ್ಯ

ಜೀವಿಗಳ ಅಂಗಾಂಗಗಳ ಮೇಲ್ಮೈ ಜೆನೆಟಿಕ್ ರಚನೆಯನ್ನು ಬದಲಿಸಿ, ಅವನ್ನು ನಮ್ಮ ರಕ್ಷಕ ವ್ಯವಸ್ಥೆಗೆ ಒಗ್ಗುವಂತೆ ಮಾಡುತ್ತಾ, ಮತ್ತೊಂದೆಡೆ ಅಂತಹ ಪ್ರಾಣಿಗಳಲ್ಲಿ ಇರಬಹುದಾದ ಅಪಾಯಕಾರಿ ಸೋಂಕುಗಳನ್ನು ನಿವಾರಿಸುತ್ತಾ, ಇನ್ನೊಂದೆಡೆ ಹಂದಿಯ ಮೂತ್ರಪಿಂಡದ ಜೊತೆಜೊತೆಗೆ ಅದರ ರಕ್ಷಕ ವ್ಯವಸ್ಥೆಯ ಥೈಮಸ್ ಎನ್ನುವ ಮತ್ತೊಂದು ಅಂಗವನ್ನೂ ಕಸಿ ಮಾಡುವ ಪ್ರಯತ್ನದ ಮೂಲಕ ಹೆಚ್ಚಿನ ಸುರಕ್ಷತೆಯನ್ನು ನೀಡುವ ಪ್ರಯತ್ನಗಳು ಸಫಲವಾದರೆ ಮಾನವ ಕುಲವನ್ನು ಸದ್ಯಕ್ಕೆ ಕಾಡುತ್ತಿರುವ ಮತ್ತೊಂದು ದೊಡ್ಡ ಆರೋಗ್ಯ ಸಮಸ್ಯೆಯನ್ನು ಗೆದ್ದಂತೆ ಆಗುತ್ತದೆ.

-------------------------

27/5/2024 ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನಕ್ಕೆ ಮಾಹಿತಿ ಕೊಟ್ಟದ್ದು. ಕೊಂಡಿ: https://vijaykarnataka.com/news/vk-special/why-xenotransplantation-is-failing-again-and-again/articleshow/110448999.cms  



 

ಮನೆಯಲ್ಲಿ ಪ್ರಥಮ ಚಿಕಿತ್ಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಮನೆಯಲ್ಲಿ ಏನಾದರೂ ಅಪಘಾತ, ಅವಘಡಗಳಾದಾಗ ಮೊದಲು ಗಾಬರಿಯಾಗುತ್ತದೆ; ದಿಕ್ಕು ತೋಚದಂತಾಗುತ್ತದೆ. ಆ ಸಮಯದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಕಣ್ಮುಂದೆ ಸಂಭವಿಸುವ ಅಪಘಾತಗಳನ್ನು ನಿಭಾಯಿಸಲು ಪೂರ್ವಸಿದ್ಧತೆ ಇಲ್ಲದಿದ್ದರೆ ಕೆಲವೊಮ್ಮೆ ಪರಿಣಾಮ ತೀವ್ರವಾಗಬಹುದು. ಆಪತ್ತಿನ ಸಮಯದಲ್ಲಿ ಮೊದಲು ಏನು ಮಾಡಬೇಕು ಎಂಬ ವಿವೇಚನೆಯನ್ನು ನೀಡುವುದು ಪ್ರಥಮ ಚಿಕಿತ್ಸೆ. ಕಾಯಿಲೆಯಾಗಲೀ, ಪೆಟ್ಟಾಗಲಿ – ಸಣ್ಣದೋ ಅಥವಾ ಗಂಭೀರವೋ, ನಿರ್ದಿಷ್ಟ ಚಿಕಿತ್ಸೆ ದೊರೆಯುವ ಮುನ್ನ ಪ್ರಥಮ ಚಿಕಿತ್ಸೆ ಎಂಬುದನ್ನು ಜೀವರಕ್ಷಕವಾಗಿ, ಸಮಸ್ಯೆಯ ಪ್ರಮಾಣವನ್ನು ಮಿತಗೊಳಿಸುವುದಕ್ಕಾಗಿ, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವುದಕ್ಕಾಗಿ, ಕಾಯಿಲೆ ಸುಧಾರಿಸುವ ಆರಂಭದ ಮಜಲುಗಳಾಗಿ ಬಳಸಬಹುದು.

ಪ್ರಥಮ ಚಿಕಿತ್ಸೆಯಲ್ಲಿ ಐದು ಅಂಶಗಳಿವೆ.

1.      ಅವಘಡ ನಡೆದ ಸುತ್ತಮುತ್ತಲ ಸ್ಥಳವನ್ನು ಪರಿಶೀಲಿಸಬೇಕು. ಪ್ರಥಮ ಚಿಕಿತ್ಸೆ ನೀಡುವವರು ಮೊದಲು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಪಘಾತ ನಡೆದ ಸ್ಥಳದಲ್ಲಿ ಬೆಂಕಿ, ಅಪಾಯಕಾರಿ ರಾಸಾಯನಿಕಗಳು, ತುಂಡಾದ ವಿದ್ಯುತ್ ತಂತಿಗಳು, ಜಾರಿ ಬೀಳುವ ಸಾಧ್ಯತೆ ಇರುವ ನೆಲ ಮೊದಲಾದುವುಗಳು ಇವೆಯೇ ಎಂದು ಗಮನಿಸಬೇಕು. ಅಂತಹ ಯಾವುದೇ ಅಪಾಯಗಳು ಇದ್ದರೆ ಮೊದಲು ತಮ್ಮನ್ನು ಮತ್ತು ಅಪಾಯಕ್ಕೆ ಒಳಗಾದವರನ್ನು ಹೇಗೆ ಸುರಕ್ಷಿತವಾಗಿ ಇರಿಸಬಹುದು ಎಂದು ಆಲೋಚಿಸಬೇಕು. ಇತರರ ಸಹಾಯ ದೊರೆಯುವಂತಿದ್ದರೆ ಮೊದಲು ಅದನ್ನು ಪಡೆಯುವ ಕೆಲಸ ಮಾಡಬೇಕು.

2.     ಗಾಯಗೊಂಡ ವ್ಯಕ್ತಿಯನ್ನು ಗಮನಿಸಬೇಕು. ಪ್ರಜ್ಞೆ ತಪ್ಪಿದೆಯೇ, ಉಸಿರಾಡುತ್ತಿದ್ದಾರೆಯೇ, ಶರೀರದ ಯಾವುದಾದರೂ ಭಾಗ ಅಲುಗಾಡದೆ ನಿಶ್ಚೇಷ್ಟಿತವಾಗಿದೆಯೇ, ರಕ್ತಸ್ರಾವ ಆಗುತ್ತಿದೆಯೇ ಎಂದು ಅಂದಾಜಿಸಬೇಕು. ರಕ್ತಸ್ರಾವವನ್ನು ಸಾಧ್ಯವಾದಷ್ಟೂ ಮಿತಗೊಳಿಸಬೇಕು. ಉಸಿರು ನಿಂತಿದ್ದರೆ ಶ್ವಾಸ-ಹೃದಯಗಳ ಪುನಶ್ಚೇತನವನ್ನು ನೀಡಬೇಕು. ಪ್ರಥಮ ಚಿಕಿತ್ಸೆಯ ತರಬೇತಿಯಲ್ಲಿ ಇದನ್ನು ಕಲಿಸಲಾಗುತ್ತದೆ. ಗಾಯಗೊಂಡವರ ಸುತ್ತಮುತ್ತಲ ಪ್ರದೇಶ ಸುರಕ್ಷಿತವಾಗಿದ್ದರೆ ಅವರನ್ನು ಅನಗತ್ಯವಾಗಿ ಕದಲಿಸಬಾರದು. ಮೂಳೆಮುರಿತದಂತಹ ಸಂದರ್ಭಗಳಲ್ಲಿ ಒಂದು ಸ್ಥಳದಿಂದ ಮತ್ತೊಂದೆಡೆಗೆ ವ್ಯಕ್ತಿಯನ್ನು ವರ್ಗಾಯಿಸುವುದು ಅಪಾಯಕಾರಿಯಾಗಬಹುದು. ಇದನ್ನು ಚೆನ್ನಾಗಿ ತರಬೇತಿ ಉಳ್ಳವರು ಸೂಕ್ತ ಸಲಕರಣೆಗಳ ನೆರವಿನಿಂದ ಮಾತ್ರ ಮಾಡಬೇಕು.

3.     ಸಹಾಯ ಪಡೆಯಬೇಕು. ಮನೆಯ ಇತರ ಸದಸ್ಯರು, ನೆರೆಹೊರೆಯ ಮಂದಿ, ಶೀಘ್ರವಾಗಿ ಅವಘಡದ ಸ್ಥಳ ತಲುಪಬಲ್ಲ ಪರಿಚಿತರು, ಹತ್ತಿರದ ಆಸ್ಪತ್ರೆಯ ಸಿಬ್ಬಂದಿ – ಹೀಗೆ ಯಾರದ್ದೇ ಸಹಾಯ ದೊರೆತರೂ ಅನುಕೂಲ. ಆದರೆ, ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ಅರಿಯದ ಜನರಿಗೆ ಪರಿಸ್ಥಿತಿ ನಿಭಾಯಿಸುವ ಹೊಣೆಗಾರಿಕೆಯನ್ನು ನೀಡಬಾರದು. ಅಂತಹವರು ಸಹಾಯಕರ ಮಟ್ಟದಲ್ಲಿ ಹೇಳಿದ ಕೆಲಸ ಸರಿಯಾಗಿ ಮಾಡಬಲ್ಲಂತೆ ಇರಬೇಕೇ ಹೊರತು, ನಿರ್ಧಾರವನ್ನು ಕೈಗೊಳ್ಳುವ ವ್ಯಕ್ತಿಯಾಗಿ ಅಲ್ಲ. ಪರಿಸ್ಥಿತಿ ಸಾಮಾನ್ಯ ನಿರ್ವಹಣೆಯ ಕೈಮೀರಿದೆ ಎಂದು ಅನಿಸಿದರೆ ಆದಷ್ಟು ಬೇಗ ಆಂಬುಲೆನ್ಸ್ ವ್ಯವಸ್ಥೆ ಮಾಡಬೇಕು.

4.    ನಮ್ಮಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಬಲವಂತವಾಗಿ ನೀರು ಕುಡಿಸುವ ಜನರಿದ್ದಾರೆ. ಯಾವ ಕಾರಣಕ್ಕೂ ತೀವ್ರವಾಗಿ ಗಾಯಗೊಂಡ, ಉಸಿರಾಡಲು ಕಷ್ಟ ಪಡುತ್ತಿರುವ, ವಾಂತಿ ಮಾಡುತ್ತಿರುವ, ಅಥವಾ ಪ್ರಜ್ಞೆ ಇಲ್ಲದ ವ್ಯಕ್ತಿಗಳಿಗೆ ನೀರು ಕುಡಿಸುವ ಪ್ರಯತ್ನ ಮಾಡಬಾರದು. ಗಾಯಗೊಂಡ ವ್ಯಕ್ತಿಗೆ ಪ್ರಜ್ಞೆ ಇದ್ದರೆ, ಅವರಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು; ಏನಾಗಿದೆ ಎಂದು ಸ್ಥೂಲವಾಗಿ ವಿವರಿಸಬೇಕು.

5.     ಗಾಯಗೊಂಡ ವ್ಯಕ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಷ್ಟು ಕಾಲ ಪ್ರಥಮ ಚಿಕಿತ್ಸೆಯನ್ನು ನೀಡಬಹುದು. ಚಿಕಿತ್ಸೆಯಲ್ಲಿ ಹೆಚ್ಚು ಪರಿಣತರು ದೊರಕಿದಾಗ ಸಂದರ್ಭದ ನಿರ್ವಹಣೆಯನ್ನು ಅಂತಹವರಿಗೆ ವರ್ಗಾಯಿಸಬಹುದು. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಸುರಕ್ಷತೆಯಷ್ಟೇ ಪ್ರಥಮ ಚಿಕಿತ್ಸೆ ನೀಡುವವರ ಕ್ಷೇಮವೂ ಮುಖ್ಯ ಎಂಬುದು ಗಮನದಲ್ಲಿರಬೇಕು.

ಪ್ರಥಮ ಚಿಕಿತ್ಸೆ ನೀಡುವುದು ಯಾವುದೋ ನಿರ್ದಿಷ್ಟ ಸಂದರ್ಭಕ್ಕಷ್ಟೇ ಸೀಮಿತ ಎಂಬುದಿಲ್ಲ. ಅವಘಡಗಳಿಗೆ ಒಳಗಾದ ಯಾರದ್ದೇ ಸುರಕ್ಷತೆ ಅಪಾಯದಲ್ಲಿದೆ ಎಂದಾಗ ಪ್ರಥಮ ಚಿಕಿತ್ಸೆಯನ್ನು ನೀಡಬಹುದು. ಗಂಟಲಿನಲ್ಲಿ ಬಾಹ್ಯವಸ್ತು ಸಿಕ್ಕಿಹಾಕಿಕೊಂಡವರು, ಜಂತುಗಳ ಕಡಿತ, ರಕ್ತಸ್ರಾವ, ಮೂಳೆಮುರಿತ, ಬೆಂಕಿ ಅಪಘಾತ, ವಿದ್ಯುತ್ ಶಾಕ್, ವಿಷಪ್ರಾಶನ, ಅಪಸ್ಮಾರ ಹೀಗೆ ಯಾವುದೇ ಪರಿಸ್ಥಿತಿಯಲ್ಲೂ ಪ್ರಥಮ ಚಿಕಿತ್ಸೆ ಸೂಕ್ತ.

ಪ್ರತಿಯೊಂದು ಮನೆಯಲ್ಲೂ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ವಸ್ತುಗಳ ಪೆಟ್ಟಿಗೆಯೊಂದು ಎಲ್ಲರಿಗೂ ಕಾಣುವ, ಸುಲಭವಾಗಿ ದೊರೆಯುವ ಸ್ಥಳದಲ್ಲಿ ಇರಬೇಕು. ಅದರ ಮೇಲೆ ಎದ್ದು ಕಾಣುವಂತೆ “ಪ್ರಥಮ ಚಿಕಿತ್ಸೆಯ ಪೆಟ್ಟಿಗೆ” ಎಂದು ನಮೂದಾಗಿರಬೇಕು. ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ವಿವರಿಸುವ ಕಿರುಮಾಹಿತಿ, ಗಾಯಗಳ ಮೇಲೆ ಲೇಪಿಸುವ ಮುಲಾಮು, ಗಾಯವನ್ನು ಮುಚ್ಚಬಲ್ಲ ಡ್ರೆಸ್ಸಿಂಗ್ ಪರಿಕರಗಳು, ಚರ್ಮಸ್ನೇಹಿ ಅಂಟಿನ ಪಟ್ಟಿ, ಕೈಗವಸು, ಮುಖಗವಸು, ಸೇಫ್ಟಿಪಿನ್ನುಗಳು, ಹೀರುಗುಣವಿರುವ ಹತ್ತಿ, ಕತ್ತರಿ, ಸಣ್ಣ ಮುಳ್ಳುಗಳನ್ನು ಕೀಳಬಲ್ಲ ಟ್ವೀಜರ್ ಸಲಕರಣೆ, ಬ್ಯಾಂಡ್-ಐಡ್ ಅಂಟಿನ ಪಟ್ಟಿಗಳು, ಮರದ ಐಸ್-ಕ್ರೀಮ್ ಚಮಚೆಗಳು, ನೋವುನಿವಾರಕ ಪ್ಯಾರಾಸಿಟಮಾಲ್ ಗುಳಿಗೆಗಳು, ಓ.ಆರ್.ಎಸ್. ಪುಡಿಯ ಸ್ಯಾಷೆ, ಶುಭ್ರವಾದ ಬಟ್ಟೆಯ ತುಂಡುಗಳು, ಪೆನ್ನು-ಕಾಗದ ಇತ್ಯಾದಿಗಳು ಈ ಪೆಟ್ಟಿಗೆಯಲ್ಲಿ ಇರಬೇಕು. ಇದನ್ನು ಕಾಲಕಾಲಕ್ಕೆ ಪರಿಶೀಲಿಸಿ, ಔಷಧಗಳ ಪ್ರಸ್ತುತತೆಯನ್ನು ಖಚಿತಪಡಿಸಬೇಕು. ಯಾವುದೇ ಅವಘಡದ ನಿರ್ವಹಣೆಗೆ ಸದಾ ಸನ್ನದ್ಧರಾಗಿರುವುದು ಪ್ರಥಮ ಚಿಕಿತ್ಸೆಯ ಮೂಲ ಆಶಯ.  

ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ಯಾರು ಬೇಕಾದರೂ ಕಲಿಯಬಹುದು. ಇದಕ್ಕೆ ಇಂತಿಷ್ಟು ಶಾಲಾ ಶಿಕ್ಷಣ ಇರಬೇಕೆಂದೇನೂ ಇಲ್ಲ. ವಾಸ್ತವದಲ್ಲಿ, ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಪಡೆಯುವುದು ಒಳಿತು. ಶಾಲೆಯ ಪಠ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆಯ ಪಾಠಗಳು ಮತ್ತು ತರಬೇತಿ ಕಡ್ಡಾಯವಾಗಿರುವ ದೇಶಗಳಿವೆ. ಆರೋಗ್ಯ ವ್ಯವಸ್ಥೆ ಅಸಮರ್ಪಕ ಮಟ್ಟದಲ್ಲಿರುವ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಈ ನಿಟ್ಟಿನಲ್ಲಿ ಹೆಚ್ಚು ಆಸ್ಥೆ ವಹಿಸುವ ಅಗತ್ಯವಿದೆ.    

-----------------------

ದಿನಾಂಕ 21/5/2024 ರ ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/first-aid-the-first-lesson-in-first-aid-what-are-those-five-points-2813073



 

ವೈದ್ಯಕೀಯದಲ್ಲಿ ದೂರಸಂಪರ್ಕ – ಭಾರತದ ಉದಾಹರಣೆ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಜೀವನದ ಪ್ರಾಥಮಿಕ ಅಗತ್ಯಗಳಲ್ಲಿ ಆರೋಗ್ಯ ರಕ್ಷಣೆಯೂ ಒಂದು. ಅನೇಕ ದೇಶಗಳಲ್ಲಿ ಪ್ರಜೆಗಳ ಆರೋಗ್ಯವನ್ನು ಮೂಲಭೂತ ಹಕ್ಕು ಎಂದು ಭಾವಿಸಿ, ಅವರ ಆರೋಗ್ಯ ರಕ್ಷಣೆಯ ಹೊಣೆಯನ್ನು ಸರ್ಕಾರಗಳು ನಿರ್ವಹಿಸುತ್ತವೆ. ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಅಂತಹ ಅನುಕೂಲ ಇಲ್ಲ. ದಶಕಗಳ ಕಾಲ ನಮ್ಮನ್ನು ಆಳಿದ ಸರ್ಕಾರಗಳು ಪ್ರಜೆಗಳ ಆರೋಗ್ಯ ರಕ್ಷಣೆಯನ್ನು ಎಂದೂ ಆದ್ಯತೆಯೆಂದು ಪರಿಗಣಿಸಲೇ ಇಲ್ಲ. ನಮ್ಮ ದೇಶದ ಬೃಹತ್ ಜನಸಂಖ್ಯೆಗೆ ಹೋಲಿಸಿದರೆ ಜನರ ಆರೋಗ್ಯಕ್ಕೆಂದು ಸರ್ಕಾರಗಳು ಆಯವ್ಯಯದಲ್ಲಿ ನಿಗದಿ ಪಡಿಸುವ ಮೊತ್ತ ತೀರಾ ಅಲ್ಪ. ಇದರಲ್ಲಿ ಬಹುತೇಕ ಅಂಶ ಜನರನ್ನು ತಲುಪುವುದೇ ಇಲ್ಲ ಎಂಬುದು ಅನುಭವದ ಮಾತು. ಅದಕ್ಕೆ ಕಾರಣಗಳು ಏನೇ ಇದ್ದರೂ ಸಾರ್ವಜನಿಕ ಆರೋಗ್ಯ  ಸರ್ಕಾರದ ಅವಗಣನೆಗೆ ಪಾತ್ರವಾಗಿರುವ ಕ್ಷೇತ್ರಗಳಲ್ಲಿ ಒಂದು. ಇಂದಿಗೂ ನಮ್ಮ ದೇಶದ ಆರೋಗ್ಯ ವಲಯ ಖಾಸಗಿಯವರ ಮೇಲೆ ನಿಂತಿದೆ. ನಗರಗಳಲ್ಲಿ ಶೇಕಡಾ 80 ಮಂದಿ ತಮ್ಮ ಆರೋಗ್ಯಕ್ಕೆ ಖಾಸಗಿಯವರ ಮೊರೆ ಹೋಗುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಶೇಕಡಾ 70ರಷ್ಟಿದೆ. ಒಟ್ಟಾರೆ ದೇಶದ ಪ್ರತಿ ನಾಲ್ಕು ಜನರಲ್ಲಿ ಒಬ್ಬರನ್ನು ಕೂಡ ಸರ್ಕಾರಿ ಆರೋಗ್ಯ ವ್ಯವಸ್ಥೆ ತಲುಪುತ್ತಿಲ್ಲ ಎನ್ನುವುದು ಇಂದಿನ ವಾಸ್ತವ.

 

ಸಂಖ್ಯೆಯ ನೆಲೆಗಟ್ಟಿನಿಂದಷ್ಟೇ ಅಲ್ಲದೆ ವ್ಯಾಪ್ತಿಯ ದೃಷ್ಟಿಯಿಂದಲೂ ನಮ್ಮ ದೇಶದ ಆರೋಗ್ಯ ಸೇವೆಗಳು ಅಸಮರ್ಪಕವಾಗಿವೆ. ಆಸ್ಪತ್ರೆಗಳ ಮೇಲೆ ಹಣ ಹೂಡುವ ಖಾಸಗಿ ವಲಯಕ್ಕೆ ಅದು ವ್ಯಾವಹಾರಿಕವಾಗಿ ಕೂಡ ಲಾಭದಾಯಕವಾಗಬೇಕು. ಇಲ್ಲವಾದರೆ ಅವು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸುತ್ತವೆ. ಹೀಗಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ನಗರ ಪ್ರದೇಶಗಳಲ್ಲಿ ಇರುತ್ತವೆ. ರಾಜ್ಯಗಳ ರಾಜಧಾನಿಗಳು ಮತ್ತು ಪ್ರಮುಖ ವಾಣಿಜ್ಯ ನಗರಗಳಲ್ಲಿ ಎಲ್ಲ ರೀತಿಯ ಅನುಕೂಲಗಳು, ತಜ್ಞ ವೈದ್ಯರು, ಸುಸಜ್ಜಿತ ಯಂತ್ರೋಪಕರಣಗಳಿರುವ ಅತ್ಯಂತ ಮೇಲ್ದರ್ಜೆಯ ಆಸ್ಪತ್ರೆಗಳು ಇರುತ್ತವೆ. ಜಿಲ್ಲೆಗಳ ಪ್ರಮುಖ ಶಹರುಗಳಲ್ಲಿ ಎರಡನೆಯ ಸ್ತರದ ಆಸ್ಪತ್ರೆಗಳು ಇರುತ್ತವೆ. ಇದಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಆಸ್ಪತ್ರೆಗೆ ಹಣ ಹೂಡುವುದು ಖಾಸಗಿ ವಲಯಕ್ಕೆ ಲಾಭದಾಯಕ ಎನಿಸಿಕೊಳ್ಳುವುದಿಲ್ಲ. ಈ ಸಮೀಕರಣದಲ್ಲಿ ಅತ್ಯಂತ ಹೆಚ್ಚಿನ ಹೊಡೆತ ಬೀಳುವುದು ಗ್ರಾಮೀಣ ಪ್ರದೇಶಗಳಿಗೆ. ಒಂದೆಡೆ ಸರ್ಕಾರಕ್ಕೆ ಜನರ ಆರೋಗ್ಯದತ್ತ ಗಮನವಿಲ್ಲ. ಮತ್ತೊಂದೆಡೆ ಖಾಸಗಿಯವರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹಣ ಹೂಡುವ ವ್ಯಾವಹಾರಿಕ ಅನುಕೂಲವಿಲ್ಲ. ಇಂತಹ ಜನತೆ ಪ್ರತಿಯೊಂದಕ್ಕೂ ಹತ್ತಿರದ ಶಹರವನ್ನೋ ಅಥವಾ ದೂರದ ಮಹಾನಗರವನ್ನೋ ಆಶ್ರಯಿಸಬೇಕು. ಯಾರಿಗೋ ಹೊಟ್ಟೆನೋವು ಬಂದರೆ ಅದಕ್ಕೆ ಕಾರಣ ಆಮ್ಲದ ಹೆಚ್ಚಳವೇ, ಅಜೀರ್ಣವೇ, ಸೋಂಕೇ, ಮಲಬದ್ಧತೆಯೇ, ಕರುಳಿನ ಬಂಧನವೇ, ಔಷಧಗಳ ಮೂಲಕ ಗುಣವಾಗುವಂತಹದ್ದೇ ಅಥವಾ ಶಸ್ತ್ರಚಿಕಿತ್ಸೆ ಬೇಕಾಗುತ್ತದೆಯೇ ಎನ್ನುವ ಮೂಲಭೂತ ಸಲಹೆಗೂ ನೂರಾರು ಮೈಲಿಗಳ ಪ್ರಯಾಣವನ್ನು ಹತ್ತಾರು ಗಂಟೆಗಳ ಕಾಲ, ನಾಲ್ಕಾರು ವಾಹನಗಳ ಮೂಲಕ ಪ್ರಯಾಣ ಮಾಡಬೇಕಾಗುತ್ತದೆ. ಈ ಸಮಸ್ಯೆ ವೃದ್ಧರನ್ನೋ, ಓಡಾಟ ಕೈಲಾಗದವರನ್ನೋ, ಹಸುಳೆಗಳನ್ನೋ ಕಾಡಿದರೆ ಪರಿಸ್ಥಿತಿ ಮತ್ತೂ ಖೇದನೀಯ. ಉಲ್ಬಣ ಪರಿಸ್ಥಿತಿಯಲ್ಲಿ ಹಣಕಾಸಿನ ಸಂದಿಗ್ಧ ಮತ್ತೊಂದು ಭೀಕರ ಆಯಾಮವನ್ನು ತೋರುತ್ತದೆ. ಒಟ್ಟಿನಲ್ಲಿ ಗ್ರಾಮೀಣ ಜನತೆಗೆ ಆರೋಗ್ಯ ನಿರ್ವಹಣೆ ಸುಲಭದ ಮಾತಲ್ಲ.

 

ಎರಡನೆಯ ಜಾಗತಿಕ ಸಮರದ ನಂತರ ಪಾಶ್ಚಾತ್ಯ ದೇಶಗಳಲ್ಲಿ ದೂರಸಂಪರ್ಕ ಕ್ರಾಂತಿ ಆರಂಭವಾಯಿತು. ದೂರದ ಪ್ರದೇಶಗಳಲ್ಲಿ ಇರುವ ಜನರನ್ನು ತಂತ್ರಜ್ಞಾನ ಬೆಸೆಯಿತು. ಬಾನುಲಿ, ದೂರದರ್ಶನಗಳಂತಹ ಮಾಧ್ಯಮಗಳು ಪ್ರಭಾವಶಾಲಿಯಾದವು. ಆಗಸದಲ್ಲಿ ನೆಲೆ ನಿಂತ ಕೃತಕ ಉಪಗ್ರಹಗಳು ದೇಶ-ವಿದೇಶಗಳನ್ನು ಬೆಸೆಯಲು ನೆರವಾದವು. ವ್ಯೋಮಕಕ್ಷೆಯಲ್ಲಿ ಭೂಮಿಯ ಪರಿಭ್ರಮಣಕ್ಕೆ ಸಂವಾದಿಯಾಗಿ ಚಲಿಸುವ ಉಪಗ್ರಹಗಳು ಇಡೀ ದೇಶದ ಯಾವುದೇ ಭಾಗವನ್ನಾದರೂ ಕೆಲವೇ ಕ್ಷಣಗಳಲ್ಲಿ ಸಂಪರ್ಕಿಸಲು ಸನ್ನದ್ಧವಾದವು. ನಿಧಾನವಾಗಿ ಈ ತಂತ್ರಜ್ಞಾನ ಮೂರನೆಯ ವಿಶ್ವವನ್ನೂ ತಲುಪಿತು. ಕಳೆದ ಶತಮಾನದ ಅಂತ್ಯದ ವೇಳೆಗೆ ದೂರಸಂಪರ್ಕ ಜನರ ದೈನಂದಿನ ಬದುಕಿನ ಭಾಗವಾಗಿತ್ತು. ಈ ಕ್ರಾಂತಿಯನ್ನು ಭಾರತದ ಆರೋಗ್ಯ ವಲಯಕ್ಕೂ ವಿಸ್ತರಿಸಲು ಹಲವಾರು ಸಾಹಸಿಗಳು, ಸರ್ಕಾರಿ ಸಂಸ್ಥೆಗಳು, ಖಾಸಗಿ ವಲಯದ ನೇತಾರರು ಕಾರಣರಾದರು.  

 

ಈ ನಿಟ್ಟಿನಲ್ಲಿ ಮೊದಲು ಕಾರ್ಯಗತವಾದದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ). ಅಮೆರಿಕೆಯ ನಾಸಾ ಸಂಸ್ಥೆಯ ATS-F ಎನ್ನುವ ಉಪಗ್ರಹದ ನೆರವಿನಿಂದ ಭಾರತದ ಸುಮಾರು 2000 ಹಳ್ಳಿಗಳಲ್ಲಿ “ಉಪಗ್ರಹದ ಮೂಲಕ ದೂರದರ್ಶನದಿಂದ ಸೂಚನೆಗಳನ್ನು ನೀಡುವ ಪ್ರಯೋಗ” (SITE) ಎನ್ನುವ ಕಾರ್ಯಕ್ರಮಗಳನ್ನು 1976-78ರಲ್ಲಿ ನಿಯೋಜಿಸಿ, ಹಳ್ಳಿಗಳ ಜನರಿಗೆ ಗ್ರಾಮೀಣಾಭಿವೃದ್ಧಿ, ಆರೋಗ್ಯ, ನೈರ್ಮಲ್ಯ, ಮತ್ತು ವಯಸ್ಕ ಶಿಕ್ಷಣದಂತಹ ಜ್ಞಾನಾಭಿವೃದ್ಧಿ ಮಾಡುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತು. ಅಂದಿನ ಕಾಲಕ್ಕೆ ಇಡೀ ಪ್ರಪಂಚದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಮೀಸಲಾದ ಅತ್ಯಂತ ದೊಡ್ಡ ಪ್ರಯೋಗ ಎಂದು ಇದು ಹೆಸರಾಗಿತ್ತು. ಇದು ಮತ್ತಷ್ಟು ವಿಸ್ತಾರಗೊಂಡು ಸ್ಯಾಟ್-ಕಾಮ್ ಮೂಲಕ ತರಬೇತಿ ಮತ್ತು ಅಭಿವೃದ್ಧಿಗಳ ಸಂವಹನದ ವಾಹಿನಿ (TDCC) ಮೊದಲಾಯಿತು. ಸಾರ್ವಜನಿಕ ಆರೋಗ್ಯ ಸಂವಹನದಲ್ಲಿ ಅಪಾರ ಜನಮನ್ನಣೆ ಪಡೆದ ಇದರ ನೂತನ ಪ್ರಯೋಗಗಳು 1990ರ ದಶಕಕ್ಕೂ ಮುಂದುವರೆದವು. ದೇಶೀಯ ಇನ್-ಸ್ಯಾಟ್ ಉಪಗ್ರಹದ ಉಡಾವಣೆಗಳ ನಂತರ ಈ ಪ್ರಯತ್ನಗಳು ಮತ್ತಷ್ಟು ಗರಿಗೆದರಿದವು. ಈ ಎಲ್ಲ ಸಾಧನೆಗಳಿಂದ ಪ್ರೇರಿತವಾಗಿ 2001ರಲ್ಲಿ ಗ್ರಾಮ್-ಸ್ಯಾಟ್ (ಗ್ರಾಮೀಣ ಉಪಗ್ರಹ) ಎನ್ನುವ ಕಾರ್ಯಕ್ರಮದ ಅಡಿ ವೈದ್ಯಕೀಯ ಸೇವೆಗಳನ್ನು ದೂರಸಂಪರ್ಕದ ಮೂಲಕ ನೀಡುವ ಪರೀಕ್ಷಾರ್ಥ ಪ್ರಯೋಗಗಳು ಆರಂಭವಾದವು. ಆರಂಭದಲ್ಲಿ ಇದು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಇನ್-ಸ್ಯಾಟ್ ಮತ್ತು ಎಜು-ಸ್ಯಾಟ್ ಉಪಗ್ರಹಗಳ ಸಂಯೋಗದಿಂದ ಶುರುವಾಯಿತು. ಈ ಯಶಸ್ವಿ ಪ್ರಯೋಗಗಳು ಮುಂದೆ ಜಮ್ಮು, ಕಾಶ್ಮೀರ, ಲಡಾಖ್, ಈಶಾನ್ಯ ರಾಜ್ಯಗಳು, ಅಂಡಮಾನ್-ನಿಕೋಬಾರ್ ದ್ವೀಪಗಳು ಮೊದಲಾದೆಡೆಗೆ ವಿಸ್ತಾರವಾದವು. ಇದು ಇಂದು ದೇಶದ ಬಹುತೇಕ ಪ್ರದೇಶಗಳಿಗೆ ವ್ಯಾಪಿಸಿದೆ.

 

ವೈದ್ಯಕೀಯ ಕ್ಷೇತ್ರದಲ್ಲಿ ದೂರಸಂಪರ್ಕ ಸೌಲಭ್ಯವನ್ನು ನಾಲ್ಕು ಆಯಾಮಗಳಲ್ಲಿ ಬಳಸಬಹುದು.

1.      ದೂರದ ಹಳ್ಳಿಯ ಆರೋಗ್ಯ ಕೇಂದ್ರ ಮತ್ತು ಮಹಾನಗರದಲ್ಲಿನ ಸುಸಜ್ಜಿತ ಆಸ್ಪತ್ರೆಗಳ ನಡುವೆ ವಿಡಿಯೊ-ಆಡಿಯೊಯುಕ್ತ ನೇರ ಸಂಪರ್ಕ ಕಲ್ಪಿಸುವುದು. ಹಳ್ಳಿಯ ಆರೋಗ್ಯ ಕೇಂದ್ರದಲ್ಲಿನ ವೈದ್ಯರ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರು ರೋಗಿಯ ಪರಿಸ್ಥಿತಿಯ ಬಗ್ಗೆ ಚರ್ಚೆ ಮಾಡುತ್ತಾರೆ. ತಜ್ಞ ವೈದ್ಯರ ನಿರ್ದೇಶನ, ಮಾರ್ಗದರ್ಶನದ ಮೂಲಕ ಹಳ್ಳಿಯ ರೋಗಿಗೆ ಮಹಾನಗರದಲ್ಲಿನ ತಜ್ಞ ವೈದ್ಯರ ಚಿಕಿತ್ಸೆ ಲಭ್ಯವಾಗುತ್ತದೆ. ಇದನ್ನು ವಿಸ್ತರಿಸಿ ಹಳ್ಳಿಯ ಆರೋಗ್ಯ ಕೇಂದ್ರದ ಪ್ರಾಥಮಿಕ ವೈದ್ಯರು, ಆರೋಗ್ಯ ಸಹಾಯಕರು, ಪ್ರಯೋಗಾಲಯ ತಂತ್ರಜ್ಞರು, ವೈದ್ಯಕೀಯ ಕಾರ್ಯಕರ್ತರಿಗೆ ಅವರವರ ವಿಷಯದಲ್ಲಿ ಅವರು ಇರುವಲ್ಲಿಯೇ ಪರಿಣತ ತರಬೇತಿ ನೀಡಬಹುದು. ಇಂತಹವರು ತಮ್ಮ ಕೆಲಸಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡುವಲ್ಲಿ ನೆರವು ನೀಡಬಹುದು.

2.     ದೇಶದ ಅತ್ಯುನ್ನತ ವೈದ್ಯಕೀಯ ಕಾಲೇಜುಗಳ ನುರಿತ ತಜ್ಞ ವೈದ್ಯರು ಸಣ್ಣ ಊರುಗಳ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಪನ್ಯಾಸಗಳನ್ನು, ತರಬೇತಿಯ ಮಾರ್ಗದರ್ಶನವನ್ನು, ಕಾರ್ಯಾಗಾರ ನಡೆಸಲು ಬೇಕಾದ ಸಲಹೆ-ಸೂಚನೆಗಳನ್ನು ನೀಡುವುದು ಮತ್ತು ಅದರ ಮೇಲ್ವಿಚಾರಣೆ ನಡೆಸುವುದು.

3.     ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲದ ಹಳ್ಳಿಗಳಿಗೆ ವಾಹನದ ಮೂಲಕ ವೈದ್ಯರನ್ನೂ, ಅವರ ಸಹಾಯಕ ಸಿಬ್ಬಂದಿಯನ್ನೂ ಕಳಿಸಿ, ಅಲ್ಲಿಂದಲೇ ದೂರಸಂಪರ್ಕದ ಮೂಲಕ ಸಮುದಾಯ ಚಿಕಿತ್ಸೆಯನ್ನು ನಡೆಸುವುದು. ನಗರದ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಇಂತಹ ಹಳ್ಳಿಯ ಜನರ ಪೈಕಿ ಯಾರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ; ಯಾರಿಗೆ ಸರಳ ಚಿಕಿತ್ಸೆಯ ಮೂಲಕ ಅಲ್ಲಿಯೇ ಪರಿಹಾರ ನೀಡಬಹುದು; ಯಾವ ರೀತಿ ಸಮೀಪದ ಶಹರುಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯ – ಮೊದಲಾದ ಸಲಹೆಗಳನ್ನು ನೀಡಿ ಅವರ ಸಮಸ್ಯೆಯನ್ನು ಸರಿಯಾದ ಮಾರ್ಗದಲ್ಲಿ ನಿರ್ವಹಿಸಲು ಅನುಕೂಲವಾಗುತ್ತದೆ.

4.    ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕಷ್ಟಕ್ಕೆ ಒಳಗಾಗಿರುವ ಜನರಿಗೆ ಅಗತ್ಯವಾದ ಆರೋಗ್ಯ ಪರಿಹಾರಗಳನ್ನು ಒದಗಿಸಲು ನೆರವಾಗುವುದು ದೂರಸಂಪರ್ಕದ ಮೂಲಕ ಸಾಧ್ಯ. ಇಂತಹ ಸಮಯದಲ್ಲಿ ಅತ್ಯಂತ ಕಡಿಮೆ ಸಂಪನ್ಮೂಲಗಳು ಲಭ್ಯವಿರುತ್ತವೆ; ಅತ್ಯಂತ ಹೆಚ್ಚಿನ ಮಂದಿ ಕಷ್ಟಕ್ಕೆ ಒಳಗಾಗಿರುತ್ತಾರೆ. ಆಗ ಯಾವ ರೀತಿ ಸಂಪನ್ಮೂಲದ ಆದ್ಯತೆಗಳನ್ನು ನಿರ್ವಹಿಸಬೇಕು; ಅತ್ಯಂತ ಹೆಚ್ಚಿನ ಪರಿಣಾಮಕ್ಕಾಗಿ ಹೇಗೆ ಪರಿಸ್ಥಿತಿಯನ್ನು ಸಂಭಾಳಿಸಬೇಕು; ಹತ್ತಿರದ ಯಾವ ಪ್ರದೇಶದಿಂದ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯ – ಮುಂತಾದ ಯೋಜನೆಗಳು ದೂರಸಂಪರ್ಕದ ಮೂಲಕ ಕಾರ್ಯಗತಗೊಳ್ಳಬಲ್ಲವು.

 

ಸರಳವಾದ ಕಂಪ್ಯೂಟರ್, ಸ್ಪಷ್ಟ ಚಿತ್ರ ನೀಡಬಲ್ಲ ಪರದೆ, ಸರ್ವರ್ ಮತ್ತು ಬ್ರೌಸರ್ ಬಳಸಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಯ ನಡುವೆ ನೇರ ಸಂಪರ್ಕ ಕಲ್ಪಿಸಬಲ್ಲ ವ್ಯವಸ್ಥೆಯಿಂದ ಆರಂಭವಾದ ದೂರಸಂಪರ್ಕ ವೈದ್ಯಕೀಯ ಪ್ರಕ್ರಿಯೆ ಇಂದು ಹತ್ತು-ಹಲವಾರು ದಿಕ್ಕುಗಳಿಗೆ ಹಬ್ಬಿ ವಿಶಾಲವಾಗಿ ವ್ಯಾಪಿಸಿದೆ. ಈಗ ನೂರಾರು ಆಸ್ಪತ್ರೆ, ಆರೋಗ್ಯ ಕೇಂದ್ರಗಳನ್ನು ಏಕಕಾಲಕ್ಕೆ ಬೆಸೆಯಬಲ್ಲ ತಂತ್ರಜ್ಞಾನ ಲಭ್ಯವಿದೆ. ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಹತ್ತಾರು ತಜ್ಞರಿಗೆ ಒಮ್ಮೆಗೇ ತಲುಪಿಸಬಲ್ಲ ಅನುಕೂಲವಿದೆ. ಗಿಗಾಬೈಟ್ ಗಾತ್ರದ ಎಂ.ಆರ್.ಐ ಚಿತ್ರಗಳನ್ನು ಕೆಲ ನಿಮಿಷಗಳಲ್ಲಿ ಸಾವಿರಾರು ಮೈಲುಗಳ ದೂರದಲ್ಲಿರುವ ತಜ್ಞರ ಅಭಿಪ್ರಾಯಕ್ಕೆ ಕಳಿಸಬಹುದಾದ ಶಕ್ತಿಯುತ ಸಂಪರ್ಕವಿದೆ. ರೋಗಿಗಳ ಇದ್ಯಾವುದೇ ವಿವರ ಬೇರೆ ಯಾರ ಕೈಗೂ ಸೇರದಂತೆ ಗೌಪ್ಯತೆಯನ್ನು ನಿರ್ವಹಿಸುವ ಗೂಢಲಿಪಿಯ ಗೋಡೆಗಳ ಸುರಕ್ಷತೆ ಇದೆ. ಸ್ಕ್ಯಾನಿಂಗ್ ಯಂತ್ರಗಳ ಬಳಕೆಯಲ್ಲಿ ಕೆಲಕಾಲ ತರಬೇತಿ ಪಡೆದ ವೈದ್ಯರು ಹಳ್ಳಿಯ ಆರೋಗ್ಯ ಕೇಂದ್ರದಲ್ಲಿನ ಯಂತ್ರವನ್ನು ಬಳಸಿ ರೋಗಿಯ ಸ್ಕ್ಯಾನಿಂಗ್ ಮಾಡಿದರೆ ಅದೇ ಸಮಯಕ್ಕೆ ಆ ಚಿತ್ರಗಳನ್ನು ನೂರಾರು ಮೈಲಿ ದೂರದಿಂದ ತಮ್ಮ ಕಂಪ್ಯೂಟರ್ ಪರದೆಯ ಮೇಲೆ ಸುಸ್ಪಷ್ಟವಾಗಿ ನೋಡುತ್ತಾ ಕಾಯಿಲೆಯನ್ನು ನಿಖರವಾಗಿ ಪತ್ತೆ ಮಾಡಬಲ್ಲ ತಜ್ಞ ವೈದ್ಯರ ಮಾರ್ಗದರ್ಶನ ಪಡೆಯುವ ಅನುಕೂಲವಿದೆ. ಹಲವಾರು ಸರ್ಕಾರೇತರ ಸಂಸ್ಥೆಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳು ಈ ಉದ್ಯಮದಲ್ಲಿ ಹಣ ಹೂಡಿ, ಬಡ ರೋಗಿಗಳಿಗೆ ಉಚಿತವಾಗಿ ನೆರವು ನೀಡುತ್ತಿವೆ. ಹಳ್ಳಿಯ ಮೂಲೆಯಲ್ಲಿರುವ ರೋಗಿಗೆ ದೂರದೇಶದಲ್ಲಿ ಕುಳಿತಿರುವ ತಜ್ಞ ಸರ್ಜನ್ ಒಬ್ಬರು ರೋಬೋಟುಗಳ ನೆರವಿನಿಂದ ಶಸ್ತ್ರಚಿಕಿತ್ಸೆ ಮಾಡಬಲ್ಲ ದಿನಗಳು ಹತ್ತಿರದಲ್ಲಿವೆ. ಒಟ್ಟಿನಲ್ಲಿ ದೇಶ-ವಿದೇಶಗಳ ಗಡಿಯನ್ನು ದಾಟಿ ದೂರಸಂಪರ್ಕ ಸವಲತ್ತುಗಳ ನೆರವಿನಿಂದ ವೈದ್ಯಕೀಯ ಕ್ಷೇತ್ರ ಕ್ರಾಂತಿಯನ್ನು ಸಾಧಿಸಿದೆ. ಇದಿನ್ನೂ ಆರಂಭ ಮಾತ್ರ. ಒಳ್ಳೆಯ ದಿನಗಳು ಭವಿಷ್ಯದಲ್ಲಿ ಬರಲಿವೆ!

------------------

2024ರ ಮೇ ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.



 

ನಾಲಗೆಯ ಗಣಿತ

ಡಾ.ಕಿರಣ್ ವಿ.ಎಸ್.

ವೈದ್ಯರು

 

ನಮ್ಮ ಶರೀರದಲ್ಲಿ ಅತ್ಯಂತ ವೈವಿಧ್ಯಮಯ ತಾಪಮಾನಗಳನ್ನು ಅನುಭವಿಸುವ ಅಂಗ ಯಾವುದು? ಬಿಸಿಲು, ಚಳಿಗಳು ನಮ್ಮ ಚರ್ಮವನ್ನು ನೇರವಾಗಿ ಸೋಕಿ ಸೆಖೆ, ಶೈತ್ಯಗಳ ಅನುಭವ ನೀಡುತ್ತವೆ. ಆದರೆ ಇದಕ್ಕಿಂತ ಹೆಚ್ಚಿನ ಅಂತರದ ತಾಪಮಾನಕ್ಕೆ ಒಳಗಾಗುವುದು ನಮ್ಮ ನಾಲಗೆ. ಸುಡುಸುಡುವ ಕಾಫಿ, ಟೀ, ಕಷಾಯಗಳೋ ಅಥವಾ ಅತಿ ತಣ್ಣಗಿನ ಐಸ್-ಕ್ರೀಂಗಳು ಚರ್ಮದ ಮೇಲೆ ಬಿದ್ದರೆ ಆಗುವ ಅಹಿತಕರ, ಅಪಾಯಕಾರಿಯಾಗಬಲ್ಲ ಪರಿಣಾಮ ನಮಗೆ ತಿಳಿದಿದೆ. ಆದರೆ ಇವುಗಳನ್ನು ನಾಲಗೆ ಆರಾಮವಾಗಿ ಆಸ್ವಾದಿಸುತ್ತದೆ. ನಮ್ಮ ದೇಹದ ಅತ್ಯಂತ ಬಲಿಷ್ಠ ಅಂಗಗಳಲ್ಲಿ ನಾಲಗೆಯೂ ಒಂದು. ಅದರ ಗಣಿತದ ಬಗ್ಗೆ ಒಂದು ನೋಟ.

 

ನಾಲಗೆಯಲ್ಲಿ ಸ್ಥೂಲವಾಗಿ 2 ಭಾಗಗಳಿವೆ: ಬಾಯಿನ ಭಾಗ ಮತ್ತು ಗಂಟಲಿನ ಭಾಗ. ಇದರ ಒಟ್ಟಾರೆ ಉದ್ದ ಸುಮಾರು 10-12 ಸೆಂಟಿಮೀಟರ್ (4-5 ಇಂಚು); ಅಗಲ ಸುಮಾರು 5-7 ಸೆಂಟಿಮೀಟರ್ (2-2.5 ಇಂಚು); ದಪ್ಪ ಸುಮಾರು 1-1.5 ಸೆಂಟಿಮೀಟರ್. ನಾಲಗೆಯ ತೂಕ ಸುಮಾರು 80-100 ಗ್ರಾಂಗಳು. ಬಹುತೇಕ ಮಾಂಸಖಂಡಗಳನ್ನೇ ಹೊಂದಿರುವ ನಾಲಗೆಯಲ್ಲಿ 2 ಬಗೆಯ ಒಟ್ಟು 8 ವಿವಿಧ ಮಾಂಸಖಂಡಗಳನ್ನು ಶರೀರ ಶಾಸ್ತ್ರಜ್ಞರು ಗುರುತಿಸುತ್ತಾರೆ. ಇದರಲ್ಲಿ 4 ನಾಲಗೆಯ ಆಕಾರವನ್ನು ಬದಲಿಸಬಲ್ಲ ಸ್ನಾಯುಗಳು. ಇವು ನಾಲಗೆಯ ಒಳಗೇ ಅಂತರ್ಗತವಾಗಿವೆ. ಈ 4 ಸ್ನಾಯುಗಳಿಗೆ ಯಾವುದೇ ಮೂಳೆಯ ಆಸರೆ ಇಲ್ಲ. ನಾಲಗೆಯ ನಡುವಿನಲ್ಲಿ ಉದ್ದುದ್ದಲಾದ ಒಂದು ಮಧ್ಯಗೆರೆ ಇರುತ್ತದೆ. ಅದರ ಉದ್ದಕ್ಕೂ ನಾಲಗೆಯನ್ನು ಮಡಚಬಹುದು. ನಾಲಗೆಯ ತುದಿಯಿಂದ ಆರಂಭಿಸಿ ಅದನ್ನು ಒಳಗೆ ಸ್ವಲ್ಪ ಸುರುಳಿಯಾಕಾರದಲ್ಲಿ ಮಗಚಬಹುದು. ಉಳಿದ 4 ಸ್ನಾಯುಗಳು ನಾಲಗೆಯನ್ನು ಹೊರಚಾಚಲು, ಒಳಗೆ ಎಳೆದುಕೊಳ್ಳಲು ನೆರವಾಗುತ್ತವೆ. ಇವುಗಳಿಗೆ ಗಂಟಲಿನ ಮೂಳೆಗಳ ಆಸರೆಯಿದೆ. ಹೀಗಾಗಿ ನಾಲಗೆಯ ಚಲನೆ ಸಾಕಷ್ಟು ಸಾಧ್ಯವಾದರೂ, ಅದರ ವ್ಯಾಪ್ತಿಗೆ ಮಿತಿಗಳಿವೆ. 

 

ನಾಲಗೆಯ ಬಾಯಿನ ಭಾಗದ ರಚನೆ ಅದರ ಗಂಟಲಿನ ಭಾಗದ ರಚನೆಗಿಂತಲೂ ಭಿನ್ನ. ಅಂತೆಯೇ, ಮೇಲ್ಭಾಗದ ರಚನೆ ಅದರ ಕೆಳಭಾಗಕ್ಕಿಂತಲೂ ವಿಭಿನ್ನ. ನಾಲಗೆಯ ಮುಂಭಾಗ ತೆಳ್ಳಗೆ, ಕಿರಿದಾಗಿರುತ್ತದೆ. ಇದರ ತುದಿ ಕೆಳ ದವಡೆಯ ಹಲ್ಲುಗಳ ಹಿಂಬದಿಗೆ ಹೊಂದಿಕೊಳ್ಳುತ್ತದೆ. ಹಿಂದಕ್ಕೆ ಹೋದಂತೆ ನಾಲಗೆಯ ದಪ್ಪ, ಅಗಲಗಳು ಹೆಚ್ಚಾಗುತ್ತವೆ. ನಾಲಗೆಯ ಪೋಷಣೆಯನ್ನು ಒದಗಿಸಲು 2 ಮುಖ್ಯ ರಕ್ತನಾಳ ಮತ್ತು 4 ಪರ್ಯಾಯ ರಕ್ತನಾಳಗಳಿವೆ. ಒಂದು ನಿಮಿಷಕ್ಕೆ ಸರಾಸರಿ 30-40 ಎಂಎಲ್ ರಕ್ತ ಸಂಚಾರ ನಾಲಗೆಗೆ ಲಭಿಸುತ್ತದೆ. ಗಾತ್ರದ ಹೋಲಿಕೆಯಲ್ಲಿ ಈ ಪ್ರಮಾಣ ದೇಹದ ಅನೇಕ ಅಂಗಗಳಿಗಿಂತಲೂ ಬಹಳ ಹೆಚ್ಚು. ಹೀಗಾಗಿ ನಾಲಗೆಗೆ ಆಗುವ ಗಾಯಗಳಲ್ಲಿ ರಕ್ತಸ್ರಾವ ಅಧಿಕ. ಅಂತೆಯೇ, ನಾಲಗೆಯ ಗಾಯಗಳು ಬಹಳ ಬೇಗ ಗುಣವಾಗುತ್ತವೆ. ನಾಲಗೆಯ ಸಹಜ ಗುಲಾಬಿ ಬಣ್ಣಕ್ಕೆ ಈ ವಿಫುಲ ರಕ್ತಸಂಚಾರವೂ ಒಂದು ಕಾರಣ.

 

ನಾಲಗೆಗೆ ಅನೇಕ ಕೆಲಸಗಳು. ಇವುಗಳಲ್ಲಿ ಮುಖ್ಯವಾದವು ರುಚಿಯ ಆಸ್ವಾದ, ಆಹಾರವನ್ನು ಅರಗಿಸಲು ಹಲ್ಲು ಮತ್ತು ಅಂಗುಳಿಗೆ ನೆರವಾಗುವಿಕೆ, ಮತ್ತು ಮಾತಿನ ನಿರ್ವಹಣೆ. ರುಚಿಯ ಆಸ್ವಾದಕ್ಕೆ ನಾಲಗೆಗೆ ಪ್ರತ್ಯೇಕ ನರಗಳ ವ್ಯವಸ್ಥೆಯಿದೆ. ಅದನ್ನು ಹೊರತುಪಡಿಸಿ ಸ್ಪರ್ಶ ಸಂವೇದನೆ ಮತ್ತು ಸ್ನಾಯುಗಳ ಒತ್ತಡವನ್ನು ನಿರ್ವಹಿಸಲು ಇತರ ನರಗಳು ನೆರವಾಗುತ್ತವೆ. ಒಟ್ಟಾರೆ ನಾಲಗೆಯ ಎಲ್ಲ ಕೆಲಸಗಳಿಗೆ ಸೇರಿ 6 ವಿವಿಧ ಬಗೆಯ ನರಗಳು ಸಹಕಾರ ನೀಡುತ್ತವೆ. ಪ್ರತಿಯೊಂದು ನರದ ವ್ಯಾಪ್ತಿ, ಕಾರ್ಯಗಳು ವಿಭಿನ್ನ. ಹೀಗಾಗಿ, ನಾಲಗೆಯ ಎಲ್ಲ ಭಾಗಗಳನ್ನೂ ವ್ಯವಸ್ಥಿತವಾಗಿ ರುಚಿ, ಸಂವೇದನೆ ಮತ್ತು ಸ್ನಾಯುಗಳ ಶಕ್ತಿ ಎನ್ನುವ ಮಾದರಿಯಲ್ಲಿ ಪರೀಕ್ಷೆ ಮಾಡಿದರೆ ಸಮಸ್ಯೆಗೆ ಕಾರಣವಾದ ನರ ಯಾವುದು ಎನ್ನುವ ಸಂಗತಿ ನರ ತಜ್ಞರಿಗೆ ಸುಲಭವಾಗಿ ತಿಳಿದುಹೋಗುತ್ತದೆ.

 

ಮಾಂಸಖಂಡಗಳ ಹೊರತಾಗಿ ನಾಲಗೆಯನ್ನು ಆವರಿಸಿರುವ ಲೋಳೆಪದರವಿದೆ. ನಾಲಗೆಯ ಮೇಲ್ಭಾಗದ ಲೋಳೆಪದರ ಸಾಕಷ್ಟು ಕಠಿಣವಾದ ಕೋಶಗಳನ್ನು ಹೊಂದಿದೆ. ಹೀಗಾಗಿ ಇವು ಆಹಾರವನ್ನು ಬಾಯಿಯೊಳಗೆ ಅರಗಿಸುವ ಪ್ರಕ್ರಿಯೆಯಲ್ಲಿ ನೆರವಾಗಬಲ್ಲವು. ಆಹಾರವನ್ನು ಅಂಗುಳಿಗೆ ಒತ್ತಿ ಅದನ್ನು ಮೆತ್ತಗೆ ಮಾಡುವ, ಮುರಿಯುವ, ಅಗಲಿಸುವ ಕೆಲಸಗಳನ್ನು ಮಾಡಲು ನಾಲಗೆಯ ಸ್ನಾಯುಗಳು ಮತ್ತು ಲೋಳೆಪದರ ಮಾಡುತ್ತವೆ. ನಾಲಗೆಯ ಮೇಲೆ ಬೆರಳನ್ನು ಹಾಯಿಸಿದರೆ ಅದು ತರಿತರಿಯಾಗಿ, ಒರಟಾಗಿ ಭಾಸವಾಗುತ್ತದೆ. ಇದಕ್ಕೆ ಕಾರಣ ಪ್ಯಾಪಿಲ್ಲೆ ಎನ್ನುವ ಮುಳ್ಳಿನಂತಹ ರಚನೆಗಳು. ಒಟ್ಟು 4 ಬಗೆಯ ಪ್ಯಾಪಿಲ್ಲೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 3 ಬಗೆಯ ಪ್ಯಾಪಿಲ್ಲೆಗಳ ಮೇಲೆ ರುಚಿ ಮೊಗ್ಗುಗಳಿವೆ. ಓರ್ವ ವ್ಯಕ್ತಿಯಲ್ಲಿ ಪ್ಯಾಪಿಲ್ಲೆಗಳ ವಿನ್ಯಾಸ ಜೀವನವಿಡೀ ಒಂದೇ ಆಗಿರುತ್ತದೆ. ಆದರೆ ಇಂತಹ ವಿನ್ಯಾಸ ಪ್ರತಿಯೊಬ್ಬರಲ್ಲೂ ವಿಭಿನ್ನ. ಕೈಬೆರಳಿನ ಗುರುತುಗಳಂತೆ ನಾಲಗೆಯ ಪ್ಯಾಪಿಲ್ಲೆಗಳ ವಿನ್ಯಾಸದ ಮೂಲಕವೂ ನಿರ್ದಿಷ್ಟ ವ್ಯಕ್ತಿಯನ್ನು ಇನ್ನೂ ಹೆಚ್ಚು ನಿಖರವಾಗಿ ಗುರುತಿಸಲು ಸಾಧ್ಯ. ನಾಲಗೆಯ ಅಡಿಭಾಗದ ಲೋಳೆಪದರ ತೆಳುವಾಗಿ, ನಯವಾಗಿರುತ್ತದೆ. ಇಲ್ಲಿ ರಕ್ತನಾಳಗಳು ಹೆಚ್ಚು. ಹೀಗಾಗಿ, ನಾಲಿಗೆಯ ಅಡಿಯಲ್ಲಿ ಇಟ್ಟುಕೊಳ್ಳಬಲ್ಲ ಔಷಧಗಳು ತಯಾರಾಗಿವೆ. ಇವನ್ನು ನಾಲಿಗೆಯ ಕೆಳಭಾಗದ ವಿಫುಲ ರಕ್ತನಾಳಗಳು ನೇರವಾಗಿ ಹೀರಿಕೊಂಡು ಕೆಲಸ ಮಾಡುತ್ತವೆ. ಹೃದ್ರೋಗಿಗಳಲ್ಲಿ, ಏನೇ ಸೇವಿಸಿದರೂ ವಾಂತಿ ಆಗುವ ರೋಗಿಗಳಲ್ಲಿ ಚುಚ್ಚುಮದ್ದಿನ ಬದಲಿಗೆ ಕೆಲವು ಔಷಧಗಳನ್ನು ನಾಲಗೆಯ ಅಡಿಯಲ್ಲಿ ಇಟ್ಟು ಪರಿಣಾಮ ಬೀರಲು ಸಾಧ್ಯ.  

 

ಸಾಮಾನ್ಯ ಜನರ ನಾಲಗೆಯಲ್ಲಿ ಸುಮಾರು 2000 ದಿಂದ 5000 ರುಚಿ ಮೊಗ್ಗುಗಳಿವೆ. 10000 ಕ್ಕಿಂತಲೂ ಅಧಿಕ ರುಚಿ ಮೊಗ್ಗುಗಳು ಇರುವವರನ್ನು ಸೂಪರ್-ಟೇಸ್ಟರ್ಸ್ ಎಂದು ಕರೆಯುತ್ತಾರೆ. ಇಂತಹವರಿಗೆ ಕೆಲವು ರುಚಿಗಳ ಸಂವೇದನೆ ಸಾಮಾನ್ಯ ಜನರಿಗಿಂತಲೂ ಅಧಿಕ. ಆಹಾರವನ್ನು ಬಾಯಲ್ಲಿ ನಿರ್ವಹಿಸಿದರೂ ಅದರ ರುಚಿಯ ನಿರ್ಧಾರ ಆಗುವುದು ಮಿದುಳಿನ ಮುಂಭಾಗದಲ್ಲಿ. ಒಟ್ಟು 5 ಬಗೆಯ ರುಚಿಗಳನ್ನು ತಜ್ಞರು ಗುರುತಿಸಿದ್ದಾರೆ. ಸಿಹಿ, ಕಹಿ, ಹುಳಿ, ಉಪ್ಪು, ಮತ್ತು ಉಮಾಮಿ ಎನ್ನುವ ರುಚಿಗಳನ್ನು ನಮ್ಮ ನಾಲಗೆ ಅರಿಯಬಲ್ಲದು. ಪ್ರತಿಯೊಂದು ರುಚಿ ಮೊಗ್ಗು ಒಂದು ಬಗೆಯ ರುಚಿಯನ್ನು ಗ್ರಹಿಸಬಲ್ಲದು. ಈ ಮುನ್ನ ಇವುಗಳು ನಾಲಗೆಯ ನಿರ್ದಿಷ್ಟ ಸ್ಥಾನಗಳಲ್ಲಿ ಇರುತ್ತವೆ ಎಂದು ನಂಬಲಾಗಿತ್ತು. ಆದರೆ ಎಲ್ಲ ಬಗೆಯ ರುಚಿ ಮೊಗ್ಗುಗಳೂ ನಾಲಗೆಯ ಎಲ್ಲೆಡೆ ಹರಡಿವೆ ಎಂದು ತಿಳಿದುಬಂದಿದೆ. ಕೆಲ ಬಗೆಯ ರುಚಿ ಮೊಗ್ಗುಗಳು ಕೆಲವೆಡೆ ಸ್ವಲ್ಪ ಸಾಂದ್ರವಾಗಿ ಇರಲು ಸಾಧ್ಯ.

 

ಪ್ರತಿಯೊಂದು ರುಚಿ ಮೊಗ್ಗಿನ ಮೇಲೂ ರುಚಿ ಗ್ರಾಹಿಗಳಿವೆ. ರುಚಿಯನ್ನು ಗ್ರಹಿಸಲು ಆಹಾರವು ಬಾಯಿನ ಲಾಲಾರಸದ ಜೊತೆಗೆ ಬೆರೆಯಬೇಕು. ಒಣಬಾಯಿಗೆ ರುಚಿ ತಿಳಿಯುವುದಿಲ್ಲ. ಆಹಾರದ ರೂಪ, ಗಂಧ, ಉಷ್ಣತೆ, ನಯ/ತರಿ ಸ್ವರೂಪ, ಅಂತಹ ಆಹಾರವನ್ನು ಹಿಂದೆ ಸೇವಿಸಿದ್ದರ ನೆನಪು – ಇವೆಲ್ಲವೂ ಸೇರಿ ಮಿದುಳಿನಲ್ಲಿ ರುಚಿಯ ಅನುಭವ ಕೊಡುತ್ತವೆ. ಉಮಾಮಿ ಎನ್ನುವ ಪ್ರತ್ಯೇಕ ರುಚಿಯನ್ನು 1985ರಲ್ಲಿ ವಿಜ್ಞಾನಿಗಳು ಅನುಮೋದಿಸಿದರು. ಚೀನಿ ಖಾದ್ಯಗಳಲ್ಲಿ ಹೆಚ್ಚಾಗಿ ಬಳಸುವ ಅಜಿನೊಮೊಟೊ ಎಂಬ ಹೆಸರಿನಿಂದ ಖ್ಯಾತವಾದ ಮೋನೋಸೋಡಿಯಂ ಗ್ಲುಟಮೇಟ್ ಎನ್ನುವ ರಾಸಾಯನಿಕ ಬೇರೆಯೇ ರುಚಿ ಸಂವೇದನೆಯನ್ನು ನೀಡುತ್ತದೆ ಎನ್ನುವ ಪ್ರಶ್ನೆ ಬಹುಕಾಲ ಜಿಜ್ಞಾಸೆಗೆ ಕಾರಣವಾಗಿತ್ತು. ಉಮಾಮಿ ರುಚಿ ಇದನ್ನು ಪುಷ್ಟೀಕರಿಸಿತು. ಟೊಮ್ಯಾಟೋ, ಕೆಲ ಅಣಬೆಗಳು, ಕೆಲ ಜಾತಿಯ ಒಣಗಿದ ಮೀನು, ಮೊದಲಾದುವು ಈ ರುಚಿಯ ಸಹಜ ಮೂಲಗಳಾಗಿವೆ. ಸಿಹಿ ರುಚಿಗೆ ಒಂದು ಬಗೆಯ ಗ್ರಾಹಿ ಇದ್ದರೆ, ಉಪ್ಪಿಗೆ 3 ಬಗೆಗಳು, ಹುಳಿಗೆ ಒಂದು ಬಗೆ, ಉಮಾಮಿಗೆ 3 ಇವೆ. ಕಹಿ ರುಚಿಗಾಗಿ 25 ಬಗೆಯ ಗ್ರಾಹಿಗಳಿವೆ. ನಮ್ಮ ದೇಹವನ್ನು ಯಾವುದೇ ಬಗೆಯ ವಿಷಕಾರಿ ಆಹಾರದಿಂದ ಕಾಪಾಡಲು ನಿಸರ್ಗ ಕಹಿ ರುಚಿಯನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತದೆ ಎಂದು ವಿಜ್ಞಾನಿಗಳ ಅಭಿಮತ. ಹೀಗಾಗಿ, ಕಹಿ ರುಚಿಯನ್ನು ಪತ್ತೆ ಮಾಡುವ ವಿಧಾನ ಬಲಿಷ್ಠವಾಗಿ ವಿಕಾಸವಾಗಿದೆ.  

 

ಮಾತಿನ ಉತ್ಪತ್ತಿಯಲ್ಲಿ ನಾಲಗೆಯ ಪಾತ್ರ ದೊಡ್ಡದು. ಗಂಟಲಿನ ಧ್ವನಿಪೆಟ್ಟಿಗೆಯ ಮೂಲಕ ಹೊರಡುವ ಗಾಳಿ ನಾಲಗೆಯ, ಹಲ್ಲುಗಳ, ಮತ್ತು ತುಟಿಗಳ ವಿವಿಧ ಸ್ಥಾನಗಳನ್ನು ಹಾಯ್ದು ಭಾಷೆಯ ಸ್ವರೂಪ ಪಡೆಯುತ್ತದೆ. ಪ್ರತಿಯೊಂದು ಸ್ವರಾಕ್ಷರ ಮತ್ತು ಆಯಾ ವರ್ಗದ ವ್ಯಂಜನಾಕ್ಷರದ ಉಚ್ಛಾರಕ್ಕೆ ನಾಲಗೆಯ ಸ್ಥಾನ ತುಸು ಬದಲಾಗುತ್ತದೆ. ಜಗತ್ತಿನ ಪ್ರತಿಯೊಂದು ಭಾಷೆಯ ಕಲಿಕೆಗೂ ನಾಲಗೆಯ ಸರಿಯಾದ ಸ್ಥಾನ ನಿರ್ದೇಶನ ಮತ್ತು ವಾಯುಸಂಚಾರದ ನಿಯಂತ್ರಣ ಅತ್ಯಗತ್ಯ. ಭಾಷಾ ವಿಜ್ಞಾನ ಮಾನವರ ಅಗಾಧ ಪ್ರಗತಿಗೆ ಬಹು ಮುಖ್ಯ ಕಾರಣ.

 

ನಾಲಗೆಯ ಗಣಿತ ರುಚಿಕಟ್ಟಾದ ಅಚ್ಚರಿಯುತ ಮಾಹಿತಿಗಳ ಆಗರ! ಇದು ಆಸ್ವಾದಿಸಿದಷ್ಟೂ ಚೇತೋಹಾರಿ.  

-------------------------

2024ರ ಮೇ ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 


ರೋಗಗಳು ಎಷ್ಟೇ ಬರಲಿ; ಮನಸ್ಸು ಗಟ್ಟಿ ಇರಲಿ 

ಡಾ. ಕಿರಣ್ ವಿ.ಎಸ್.

ವೈದ್ಯರು

 

ಅನೇಕ ಅಂಗಾಂಗಗಳಿರುವ ನಮ್ಮ ದೇಹ ಒಂದು ಸಮಷ್ಟಿ ರಚನೆ. ಹೀಗಾಗಿ, ದೇಹದ ಯಾವುದೇ ಒಂದು ಅಂಗಕ್ಕೆ ಸಮಸ್ಯೆ ಬಂದರೂ ಇಡೀ ದೇಹಕ್ಕೆ ಅಹಿತವಾಗುತ್ತದೆ. ಆ ಸಮಸ್ಯೆಯ ನಿವಾರಣೆಗೆ ಅನೇಕ ಅಂಗಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸ ಮಾಡಿ ಸಹಾಯ ನೀಡುತ್ತವೆ. ಈ ಎಲ್ಲ ಹೊಂದಾಣಿಕೆಯ ಪ್ರಕ್ರಿಯೆಗಳನ್ನೂ ಮಿದುಳು ನಿರ್ವಹಿಸುತ್ತದೆ. ಉದಾಹರಣೆಗೆ, ಕಾಲಿಗೆ ಪೆಟ್ಟಾದಾಗ ಹೃದಯದ ಬಡಿತ ವೇಗವಾಗಿ, ಪೆಟ್ಟಾದ ಜಾಗಕ್ಕೆ ಹೆಚ್ಚು ರಕ್ತಸಂಚಾರ ಆಗುವಂತೆ ಮಾಡಿ, ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ; ರಿಪೇರಿ ಮಾಡಬಲ್ಲ ರಕ್ತಕೋಶಗಳನ್ನು ತಲುಪಿಸುತ್ತದೆ. ಉಸಿರಾಟದ ಗತಿ ಮತ್ತು ಆಳ ಹೆಚ್ಚಾಗಿ, ಶ್ವಾಸಕೋಶಗಳು ಹೆಚ್ಚಿನ ಆಕ್ಸಿಜನ್ ಒದಗಿಸುತ್ತವೆ. ಸುತ್ತಮುತ್ತಲ ಸ್ನಾಯುಗಳು ತಮ್ಮ ಕೆಲಸವನ್ನು ಕಡಿಮೆ ಮಾಡಿ ಪೆಟ್ಟಾದ ಜಾಗ ಹೆಚ್ಚು ಅಲುಗಾಡದಂತೆ ನೋಡಿಕೊಳ್ಳುತ್ತವೆ. ಒಟ್ಟಾರೆ, ಇಡೀ ದೇಹ ಸಮಸ್ಯೆಗೆ ಸ್ಪಂದಿಸುತ್ತದೆ.

 ಆದರೆ ದೇಹಕ್ಕೆ ಹಲವಾರು ದೀರ್ಘಕಾಲಿಕ ಕಾಯಿಲೆಗಳು ಅಡರಿಕೊಂಡಾಗ ಪರಿಣಾಮ ಏನಾಗಬಹುದು? ಮಧುಮೇಹ, ಅಧಿಕ ರಕ್ತದೊತ್ತಡ, ಸಂಧಿವಾತ, ಸ್ನಾಯುಗಳ ಕಂಪನ, ಬೊಜ್ಜು, ಹೃದಯ ದೌರ್ಬಲ್ಯ, ಕಿಡ್ನಿಗಳ ವೈಫಲ್ಯ ಮೊದಲಾದುವು ದೀರ್ಘಕಾಲಿಕ ಕಾಯಿಲೆಗಳು. ಇವುಗಳಲ್ಲಿ ಬಹುತೇಕ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಎನ್ನುವುದು ಇಲ್ಲ. ಔಷಧಗಳು, ಜೀವನಶೈಲಿಯ ಸೂಕ್ತ ಬದಲಾವಣೆಗಳ ಮೂಲಕ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಅವುಗಳೊಡನೆ ಸಹಬಾಳ್ವೆ ಮಾಡಬೇಕಾಗುತ್ತದೆ. ಎಷ್ಟೇ ಶಿಸ್ತಾಗಿ ಬದುಕಿದರೂ ಒಮ್ಮೆಮ್ಮೆ ಅವುಗಳ ನಿಯಂತ್ರಣ ಏರುಪೇರಾಗಿ ಸಮಸ್ಯೆ ಮೂಡುವುದುಂಟು. ಒಂದಕ್ಕಿಂತ ಹೆಚ್ಚಿನ ಇಂತಹ ಸಮಸ್ಯೆಗಳು ಇದ್ದರೆ, ಅವುಗಳ ಪರಸ್ಪರ ಪೂರಕ ನಿಯಂತ್ರಣ ಬಹಳ ತ್ರಾಸದಾಯಕ. ಒಂದು ಕಾಯಿಲೆಯ ನಿಯಂತ್ರಣ ಮತ್ತೊಂದನ್ನು ಉಲ್ಬಣಿಸುವ ಸಮಸ್ಯೆ ಇದ್ದೇ ಇರುತ್ತದೆ. ಉದಾಹರಣೆಗೆ, ಮಧುಮೇಹ ಮತ್ತು ಸಂಧಿವಾತ. ಮಧುಮೇಹದ ನಿಯಂತ್ರಣದಲ್ಲಿ ವ್ಯಾಯಾಮದ ಅಗತ್ಯವನ್ನು ಹೆಚ್ಚಾಗಿ ಹೇಳಬೇಕಿಲ್ಲ. ಬಿರುಸು ನಡಿಗೆ, ಯೋಗಾಸನಗಳು, ಸರಳ ಏರೋಬಿಕ್ ವ್ಯಾಯಾಮಗಳು ಮಧುಮೇಹ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ, ಸಂಧಿವಾತದ ರೋಗಿಗಳಿಗೆ ಇಷ್ಟು ವ್ಯಾಯಾಮ ಸಾಧ್ಯವಾಗುವುದಿಲ್ಲ; ಅವರ ಅಶಕ್ತ ಕೀಲುಗಳು ಆ ಚಲನೆಯನ್ನು ಸಹಿಸಲಾರವು. ಜೊತೆಗೆ, ಸಂಧಿವಾತಕ್ಕೆ ಬಳಸುವ ಹಲವು ಔಷಧಗಳು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಏರಿಸಬಲ್ಲವು. ಇದು ನಿಧಾನವಾಗಿ ಬೊಜ್ಜಿನ ಬೆಳವಣಿಗೆಗೂ ಕಾರಣವಾಗಬಹುದು. ಹೀಗೆ, ಒಂದು ಸಮಸ್ಯೆ ಮತ್ತೊಂದಕ್ಕೆ ದಾರಿ ಮಾಡಿಕೊಡುವುದು ಬಹಳ ಸಾಮಾನ್ಯ.  

 ಇಂತಹ ಸಂದರ್ಭಗಳಲ್ಲಿ ಬಹಳ ಮಂದಿ ರೋಗಿಗಳ ಮಾನಸಿಕ ಸಾಮರ್ಥ್ಯ ಕುಸಿಯುತ್ತದೆ. ತಮ್ಮ ದೇಹ ತಮ್ಮ ನಿಯಂತ್ರಣದಲ್ಲಿ ಇಲ್ಲ ಎಂಬುದು ಆಘಾತ ನೀಡುವ ವಿಷಯ. ದಿನ ಬೆಳಗಾದರೆ ಯಾವ ಹೊಸ ಆರೋಗ್ಯ ಸಮಸ್ಯೆ ಕಾಡುತ್ತದೋ ಎಂಬ ಆತಂಕ. ಯಾವ ಹೊಸ ಔಷಧ ಸೇವಿಸಿದರೆ ಯಾವ ಅಡ್ಡಪರಿಣಾಮವಾಗಿ ಮತ್ಯಾವ ತೊಂದರೆ ಉಲ್ಬಣವಾಗುತ್ತದೋ ಎಂಬ ಭೀತಿ. ಇಷ್ಟು ಉದ್ವೇಗಗಳ ನಡುವೆ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳುವುದು ಸುಲಭದ ಮಾತಲ್ಲ. ಮಾನಸಿಕ ಉದ್ವೇಗ ಭೌತಿಕ ದೇಹದ ಹಲವಾರು ಕೆಲಸಗಳನ್ನು, ಅಂಗಗಳ ನಡುವಿನ ಸಮನ್ವಯವನ್ನು ಕೆಡಿಸಬಲ್ಲದು. ಇದೊಂದು ರೀತಿಯ ವಿಷಮ ಆವರ್ತನ ಚಕ್ರ. ಮನಸ್ಸಿನ ಭೀತಿ ದೈಹಿಕ ಆರೋಗ್ಯದ ಮೇಲೆ ಅಸಹಜ ಪರಿಣಾಮವನ್ನು ಬೀರಿ ಚಿತ್ತಶಾಂತಿಯನ್ನು ಮತ್ತಷ್ಟು ಕಂಗೆಡಿಸುತ್ತದೆ. ಒಮ್ಮೆ ಇದರ ಚಕ್ರವ್ಯೂಹಕ್ಕೆ ಸಿಲುಕಿದರೆ ಹೊರಬರುವುದು ಬಹಳ ಕಠಿಣ. ಮಾನಸಿಕ ಧೃಢತೆಯನ್ನು ಕಳೆದುಕೊಂಡರೆ ಆರೋಗ್ಯದ ಒಟ್ಟಾರೆ ಸುಧಾರಣೆ ಸುಲಭವಲ್ಲ. ಹೀಗಾಗಿ ಮನಸ್ಸನ್ನು ಶಾಂತವಾಗಿ, ಧೃಢವಾಗಿ ಇಟ್ಟುಕೊಳ್ಳುವತ್ತ ಪ್ರಯತ್ನಗಳು ಸದಾ ನಡೆಯುತ್ತಿರಬೇಕು. ಇದಕ್ಕೆ ಕೆಲವು ಸಲಹೆಗಳಿವೆ.

1.      ಆರೋಗ್ಯ ಸಮಸ್ಯೆಗಳು ಎಷ್ಟೇ ಇರಲಿ; ಅವೆಲ್ಲವನ್ನೂ ನಿಮ್ಮ ವಿಶ್ವಾಸಕ್ಕೆ ಪಾತ್ರವಾಗಿರುವ ಒಬ್ಬರು ವೈದ್ಯರ ಸುಪರ್ದಿಯಲ್ಲಿ ಇರಿಸಬೇಕು. ಸಣ್ಣ-ಪುಟ್ಟ ಏರುಪೇರುಗಳನ್ನು ಇಂತಹ ಅನುಭವಿ ವೈದ್ಯರು ಸುಲಭವಾಗಿ ಪರಿಹರಿಸುತ್ತಾರೆ. ಪ್ರತಿಬಾರಿಯೂ ಆಯಾ ಸಮಸ್ಯೆಯ ತಜ್ಞವೈದ್ಯರನ್ನೇ ಕಾಣಬೇಕು ಎಂಬುದಿಲ್ಲ. ಅನೇಕ ಬಾರಿ ಒಂದು ಸಮಸ್ಯೆಯ ತಜ್ಞವೈದ್ಯರಿಗೆ ನಿಮಗೆ ಇರುವ ಮತ್ತೊಂದು ಸಮಸ್ಯೆಯ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರಬಹುದು. ಹೀಗಾಗಿ, ಅವರು ಔಷಧಗಳನ್ನು ಬದಲಾಯಿಸುವ ಮುನ್ನ ಈ ಸಂಗತಿಯನ್ನು ಗಮನಿಸದೆ ಇರಬಹುದು. ಆದರೆ ನೀವು ಸದಾ ಕಾಣುವ ಕುಟುಂಬ ವೈದ್ಯರಿಗೆ ಇವೆಲ್ಲವೂ ತಿಳಿದಿರುತ್ತವೆ. ಅಗತ್ಯ ಬಂದಾಗ ಅವರೇ ಕ್ಲುಪ್ತ ಮಾಹಿತಿಯನ್ನು ಬರೆದು ತಜ್ಞ ವೈದ್ಯರ ಸಲಹೆಗೆ ನಿಮ್ಮನ್ನು ಕಳಿಸುತ್ತಾರೆ. ಇದರಿಂದ “ಏನಾಗಿಹೋಗುವುದೋ” ಎನ್ನುವ ಆತಂಕ ಇರುವುದಿಲ್ಲ.

2.     ದೀರ್ಘಕಾಲಿಕ ಕಾಯಿಲೆಗಳನ್ನು ಒಪ್ಪಿಕೊಳ್ಳಬೇಕು. ಶಾಶ್ವತ ಚಿಕಿತ್ಸೆ ಇಲ್ಲದಿರುವ ಕಾಯಿಲೆಗಳನ್ನು ಯಾವ್ಯಾವುದೋ ಜಾದೂ ಮಾದರಿಯ ಚಿಕಿತ್ಸೆಯಿಂದ ಗುಣಪಡಿಸುವ ಮಾತುಗಳನ್ನು ನಂಬಬಾರದು. ಈ ವಿಷಯದಲ್ಲಿ ತಜ್ಞವೈದ್ಯರ ಮಾತೇ ಅಂತಿಮ. ಕಾಯಿಲೆಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವನ್ನು ನಿಯಂತ್ರಿಸಬೇಕೇ ಹೊರತು, ಎಂತಹದೋ ಅಪಾಯಕಾರಿ ಪ್ರಯೋಗಗಳಿಗೆ ದೇಹವನ್ನು ಒಡ್ಡಬಾರದು.

3.     ಪ್ರಾಣಾಯಾಮ, ಧ್ಯಾನ, ಆಧ್ಯಾತ್ಮ ಚಿಂತನೆ, ಸಮಾಜಕ್ಕೆ ಅಭಿಮುಖವಾದ ಹವ್ಯಾಸಗಳು, ಆರೋಗ್ಯಕರ ಜೀವನಶೈಲಿ, ಕುಟುಂಬ ಸಭ್ಯರೊಡನೆ ಒಳ್ಳೆಯ ಸಂಬಂಧ, ಸಮಾನಮನಸ್ಕ ಮಿತ್ರಬಳಗ, ಮಾನಸೋಲ್ಲಸವಾದ ಹವ್ಯಾಸಗಳು ಮೊದಲಾದುವು ಮನಸ್ಸಿನ ಶಾಂತಿಗೆ, ಧೃಢತೆಗೆ ಕಾರಣವಾಗಿ, ಜೀವನದ ಕಠಿಣ ಆರೋಗ್ಯ ಸಮಸ್ಯೆಗಳನ್ನೂ ಸಹ್ಯವಾಗಿಸಬಲ್ಲವು.

ಜೀವನಪಯಣದಲ್ಲಿ ಅನಾರೋಗ್ಯಗಳು ಅಹಿತಕರ ಸಹ-ಪ್ರಯಾಣಿಕರು! ದೇಹದ ಆರೋಗ್ಯವನ್ನು ಸಾಧ್ಯವಾದಷ್ಟೂ ಸ್ಥಿರವಾಗಿ ಇರಿಸಿಕೊಳ್ಳುವಲ್ಲಿ ನಮ್ಮ ಮನಸ್ಸಿನ ಧೃಢತೆಯ ಪಾತ್ರ ದೊಡ್ಡದು. ಯಾವುದೇ ಕಾಯಿಲೆಯ ನಿರ್ವಹಣೆಯಲ್ಲೂ ಈ ಅಂಶವನ್ನು ಮರೆಯಬಾರದು.

---------------------------

ದಿನಾಂಕ 07/05/2024 ರ ಪ್ರಜಾವಾಣಿಯ ಕ್ಷೇಮಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/multiple-health-issues-and-mental-health-2794354


ಮಂಗಳವಾರ, ಏಪ್ರಿಲ್ 9, 2024

 


ಹೆಸರಿನಲ್ಲೇನಿದೆ – ವೈದ್ಯಕೀಯ ಜಗತ್ತಿನ ಪರ್ಯಾಯ ಇತಿಹಾಸ

ಡಾ. ಕಿರಣ್ ವಿ.ಎಸ್.

ವೈದ್ಯರು

ವೈದ್ಯಕೀಯ ರಂಗದಲ್ಲಿ ಒಂದು ಹಳೆಯ ಜೋಕಿದೆ. ರೋಗಿಯೋರ್ವನಿಗೆ ವೈದ್ಯರು ಹೇಳುತ್ತಾರೆ “ನಿಮಗೆ ಒಳ್ಳೆಯ ಸುದ್ಧಿ ಮತ್ತು ಕೆಟ್ಟ ಸುದ್ಧಿ ಒಂದೇ ಮಾತಿನಲ್ಲಿ ತಿಳಿಸುತ್ತೇನೆ”. ರೋಗಿಗೆ ಅಚ್ಚರಿ. ಒಂದೇ ವಾಕ್ಯದಲ್ಲಿ ಎರಡೂ ಸುದ್ಧಿ ತಿಳಿಸಲು ಹೇಗೆ ಸಾಧ್ಯ? ವೈದ್ಯರು “ಹೊಸದೊಂದು ಕಾಯಿಲೆಗೆ ನಿಮ್ಮ ಹೆಸರನ್ನು ಇಡುತ್ತಿದ್ದೇವೆ” ಎನ್ನುತ್ತಾರೆ!    

ವೈದ್ಯಕೀಯದಲ್ಲಿ ಜೋಡಿ-ನಾಮಪದಗಳಿಗೆ ಬಹಳ ಮಹತ್ವವಿದೆ. ಯಾವುದೋ ಅಂಗ, ಅಂಗಾಂಶ, ಕಾಯಿಲೆ, ಪದ್ದತಿ, ಲೆಕ್ಕಾಚಾರ ಮೊದಲಾದುವು ಒಂದು ನಾಮಪದವಾದರೆ, ಅದಕ್ಕೆ ಸಂಬಂಧಿಸಿದ ಯಾರದ್ದೋ ಹೆಸರು ಅವುಗಳೊಡನೆ ಜೊತೆಗೂಡುವುದು ಮತ್ತೊಂದು ನಾಮಪದ. ಹೀಗೆ, ಆ ಇಡೀ ಹೆಸರು ಜೋಡಿ-ನಾಮಪದವಾಗುತ್ತದೆ. ಉದಾಹರಣೆಗೆ ಅಖಿಲೀಸನ ಹಿಮ್ಮಡಿ, ಶೇಷಾಚಲಂ ರಕ್ತನಾಳ, ಪಾಟ್ ಮೂಳೆ-ಮುರಿತ, ಡೌನ್ ಸಿಂಡ್ರೋಮ್, ಕ್ಯಾಸನೂರು ಕಾಡಿನ ಕಾಯಿಲೆ, ಬಾಂಬೆ ರಕ್ತದ ಗುಂಪು ಮುಂತಾದುವು. ಬಡಪಾಯಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸ್ವಂತ ಹೆಸರನ್ನು ಮರೆತರೂ ಸರಿಯೇ; ಇಂತಹ ನೂರಾರು ಹೆಸರುಗಳನ್ನು ತಪ್ಪದೇ ನೆನಪಿಡಬೇಕಾಗುತ್ತದೆ. ಪರೀಕ್ಷಾ ನಿಮಿತ್ತಂ ಬಹುವಿಧ ನಾಮಧೇಯಂ!

ಈ ಹೆಸರುಗಳು ಎಲ್ಲಿಂದ ಬಂದವು ಎನ್ನುವುದು ಕುತೂಹಲದ ಸಂಗತಿ. ಕೆಲ ಹೆಸರುಗಳು ಗ್ರೀಕ್ ಮಿಥಕಗಳಿಂದ, ಕೆಲವು ರೋಮನ್ ಪುರಾಣಗಳಿಂದ, ಹಲವು ಆಯಾ ಸಂಗತಿಗಳನ್ನು ವಿವರಿಸಿದ ವೈದ್ಯರ ಹೆಸರಿನಿಂದ, ಕೆಲವು ರೋಗಿಗಳ ಆರೈಕೆಯಲ್ಲಿ ನಿರತವಾಗಿರುವಾಗ ಈ ಮುನ್ನ ತಿಳಿಯದ ವಿಶಿಷ್ಟ ಸಂಗತಿಯೊಂದನ್ನು ಗುರುತಿಸಿದ ನರ್ಸ್ಗಳಿಂದ, ಕೆಲವಷ್ಟು ಆಗಷ್ಟೇ ಪತ್ತೆಯಾದ ಕಾಯಿಲೆಯಿಂದ ಬಳಲಿದ ರೋಗಿಗಳಿಂದ, ಹಲವಷ್ಟು ಆಯಾ ಪ್ರದೇಶದ ಹೆಸರಿನಿಂದ, ಅಪರೂಪಕ್ಕೆ ಕಾಯಿಲೆ ಪತ್ತೆಯಾದ ಆಸ್ಪತ್ರೆಯ ಹೆಸರಿನಿಂದ, ಹೀಗೆ ಅವುಗಳ ಸ್ರೋತಗಳು ಹತ್ತು-ಹಲವಾರು.

ಜೋಡಿ-ನಾಮಪದಗಳು ಕೇವಲ ವೈದ್ಯಕೀಯ ರಂಗಕ್ಕೆ ಮಾತ್ರ ಸೀಮಿತವಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಇವುಗಳ ಪಾಲಿವೆ. ಡಾರ್ವಿನ್ನನ ಸಿದ್ಧಾಂತ, ಅವೋಗಾಡ್ರೋ ಸಂಖ್ಯೆ, ರಾಮಾನುಜನ್ ಸಮೀಕರಣ, ಚಂದ್ರಶೇಖರ್ ಮಿತಿ, ರಾಮನ್ ಪರಿಣಾಮ, ಬೂಲಿಯನ್ ಗಣಿತ, ನ್ಯೂಟನ್ ನಿಯಮಗಳು, ಪೈಥಾಗೊರೊಸ್ ಪ್ರಮೇಯ, ಬೋಧಾಯನ ಸೂತ್ರ ಹೀಗೆ ವಿಜ್ಞಾನ ಕ್ಷೇತ್ರದ ಜೋಡಿ-ನಾಮಪದಗಳು ಎಲ್ಲರ ಗಣನೆಗೆ ಬಂದಿರುತ್ತವೆ. ಅರ್ಥಶಾಸ್ತ್ರದಲ್ಲಂತೂ ಇವುಗಳ ಬಳಕೆ ವಿಪರೀತ ಎನಿಸುವಷ್ಟಿದೆ. ಇವೆಲ್ಲವೂ ಬಹುತೇಕ ವ್ಯಕ್ತಿಸೂಚಕ.

ಆದರೂ, ವೈದ್ಯಕೀಯದಲ್ಲಿನ ಜೋಡಿ-ನಾಮಪದಗಳ ಖದರ್ರೇ ಬೇರೆ. ಇವು ಬಹುತೇಕ ನಮ್ಮ ಶರೀರಕ್ಕೆ ಸಂಬಂಧಪಟ್ಟ ಸಂಗತಿಗಳಾದ್ದರಿಂದ ಇವುಗಳಿವೆ ಮಹತ್ವ ಹೆಚ್ಚು. ಅಲ್ಲದೇ, ಇವುಗಳ ಹಿನ್ನೆಲೆ ಬಹಳ ರಸವತ್ತಾದುವು. ಕೆಲವೊಮ್ಮೆ ಕಾಯಿಲೆಯ ಒಣ ವಿವರಗಳಿಗಿಂತಲೂ ಅವುಗಳ ಹೆಸರಿನ ಹಿಂದಿರುವ ಕತೆಗಳೇ ಹೆಚ್ಚು ರೋಚಕ. ಆದರೆ, ಈ ರೀತಿ ಹೆಸರುಗಳ ಆಧಾರದ ಮೇಲೆ ಸಮಸ್ಯೆಗಳನ್ನು ಗುರುತಿಸುವ ವಿಧಾನ ಆಧುನಿಕ ಯುಗದಲ್ಲಿ ವೈಜ್ಞಾನಿಕವಲ್ಲ. ಹೀಗಾಗಿ, ಇಂತಹ ಜೋಡಿ-ನಾಮಪದಗಳನ್ನು ಕಡೆಗಣಿಸಿ, ಅವುಗಳ ಬದಲಿಗೆ ವೈಜ್ಞಾನಿಕ ಆಧಾರದ ಮೇಲೆ ಬೇರೊಂದು ಹೆಸರನ್ನು ಬಳಸುವ ವಿಧಾನ ಈಗಾಗಲೇ ಚಾಲ್ತಿಯಲ್ಲಿದೆ. ಇಷ್ಟಾದರೂ, ಹಳೆಯ ಗೆಳತಿಯ ನೆನಪಿನಂತೆ, ಜೋಡಿ-ನಾಮಪದಗಳ ಆಕರ್ಷಣೆ ವೈದ್ಯರಿಗೆ ಇನ್ನೂ ಹಸುರಾಗಿದೆ. ಹಿಂದಿನ ಪೀಳಿಗೆಯ ಬಹುತೇಕ ವೈದ್ಯರು ಈಗಲೂ ಹೊಸ ಹೆಸರಿನ ಬದಲಿಗೆ ಜೋಡಿ-ನಾಮಪದವನ್ನೇ ಬಳಸುತ್ತಾರೆ. ಕುತೂಹಲಕ್ಕೆ ಇಂತಹ ಕೆಲವೊಂದರ ನಿಷ್ಪತ್ತಿಯನ್ನು ಅರಿಯುವ ಸಾಹಸ ಮಾಡಬಹುದು.

ಆಕಾಶಕಾಯಗಳ ನಾಮಕರಣದಂತೆಯೇ ಶರೀರ ಭಾಗಗಳ ಅಥವಾ ಕಾಯಿಲೆಗಳ ಹೆಸರಿಸುವಿಕೆಯಲ್ಲಿ ಗ್ರೀಕ್ ಮಿಥಕಗಳ ದರ್ಬಾರು ಹೆಚ್ಚು. ನಮ್ಮ ಆಧುನಿಕ ವೈದ್ಯಕೀಯ ಶಿಕ್ಷಣ ವ್ಯವಸ್ಥೆ ಯೂರೋಪ್ ಮೂಲದ್ದು. ಹೀಗಾಗಿ, ಯಾವ್ಯಾವುದನ್ನು ಯಾವ್ಯಾವ ಹೆಸರಿನಿಂದ ಯೂರೋಪಿಯನ್ನರು ಗುರುತಿಸುತ್ತಿದ್ದರೋ, ಅದರ ತಲೆ-ಬುಡ ತಿಳಿಯದಿದ್ದರೂ ಅದೇ ಹೆಸರುಗಳನ್ನು ಬಳಸುವ ಪರಿಪಾಠ ನಮ್ಮದಾಯಿತು. ಈ ಬಹುತೇಕ ಹೆಸರುಗಳ ಮೂಲ ತಿಳಿಯದವರೂ ಇವುಗಳ ಪ್ರಾಯೋಗಿಕ ಬಳಕೆಯಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಗ್ರೀಕ್ ಮೂಲದ ಇಂತಹ ಕೆಲ ಹೆಸರುಗಳನ್ನು ನೋಡಬಹುದು:

ಅಖಿಲೀಸನ ಹಿಮ್ಮಡಿ: ಗ್ರೀಕ್ ಮಿಥಕಗಳ ಪರಿಚಯವಿರುವವರಿಗೆ ಅಖಿಲೀಸ್ ಎನ್ನುವ ಮಹಾವೀರನ ಬಗ್ಗೆ ತಿಳಿದಿರುತ್ತದೆ. ಆತ ಥೇಟಿಸ್ ಎಂಬ ಅಮರ ದೇವಿಯ ಮಗ. ಗ್ರೀಕ್ ಮಿಥಕಗಳಲ್ಲಿ ಭೂಮಿಯ ಜೀವಂತ ಲೋಕ ಮತ್ತು ಪಾತಾಳದ ಮರ್ತ್ಯಲೋಕದ ನಡುವೆ ಸ್ಟಿಕ್ಸ್ ಎನ್ನುವ ನದಿ ಹರಿಯುತ್ತದೆ. (ನಮ್ಮ ಪುರಾಣದಲ್ಲೂ ವೈತರಣಿ ಎನ್ನುವ ಇಂತಹ ನದಿಯಿದೆ). ಸ್ಟಿಕ್ಸ್ ನದಿಯಲ್ಲಿ ಮಿಂದವರಿಗೆ ಅಮರತ್ವ ಲಭಿಸುತ್ತದೆ ಎನ್ನುವ ಪ್ರತೀತಿ. ತನ್ನ ಮಗನೂ ಅಮರನಾಗಬೇಕೆಂದು ಥೇಟಿಸ್ ದೇವಿ ಅಖಿಲೀಸ್ ಇನ್ನೂ ಶಿಶುವಾಗಿದ್ದಾಗಲೇ ಆತನ ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವನ್ನು (tendon) ಹಿಡಿದು, ಆತನ ಇಡೀ ಶರೀರವನ್ನು ಸ್ಟಿಕ್ಸ್ ನದಿಯಲ್ಲಿ ಮುಳುಗಿಸುತ್ತಾಳೆ. (ಪ್ರಾಯಶಃ ಶಿಶು ಅಖಿಲೀಸನಿಗೆ ಕೈಗೆ ಸಿಗುವಷ್ಟು ತಲೆಗೂದಲು ಇರಲಿಲ್ಲ ಅನಿಸುತ್ತದೆ) ಆಕೆ ಹಿಡಿದಿದ್ದಷ್ಟು ದೇಹ ಭಾಗ ಹೊರತುಪಡಿಸಿ, ಅಖಿಲೀಸ್ ವಜ್ರಕಾಯನಾಗುತ್ತಾನೆ; ತನ್ನ ವಿಶಿಷ್ಟ ಸಾಮರ್ಥ್ಯದ ಕಾರಣದಿಂದ ಮಹಾವೀರನಾಗುತ್ತಾನೆ. ಟ್ರೋಜನ್ ಕದನದ ವೇಳೆ ಅಖಿಲೀಸನ ಶೌರ್ಯಕ್ಕೆ ಟ್ರಾಯ್ ತತ್ತರಿಸುತ್ತದೆ. ಕಡೆಗೆ ಬಾಣವೊಂದು ಅಕಸ್ಮಾತ್ತಾಗಿ ಅಖಿಲೀಸನ ಹಿಮ್ಮಡಿಗೆ ಇಳಿದಾಗ ಆತ ಮರಣಿಸುತ್ತಾನೆ. ಹಿಮ್ಮಡಿಯ ಮೇಲಿನ ಸ್ನಾಯುರಜ್ಜುವಿಗೆ ಅಖಿಲೀಸನ ಹೆಸರಿದೆ. ಈ ಹೆಸರು ಜನಪ್ರಿಯ ಸಾಹಿತ್ಯದಲ್ಲಿ ರೂಪಕವಾಗಿಯೂ ಬಳಕೆಯಾಗುತ್ತದೆ. ಯಾರದ್ದಾದರೂ ನಿಶ್ಚಿತ ದೌರ್ಬಲ್ಯವನ್ನು ಅವರ “ಅಖಿಲೀಸನ ಹಿಮ್ಮಡಿ” ಎಂದು ಕರೆಯುವ ಪದ್ಧತಿಯಿದೆ. ಗ್ರೀಸಿನ ಒಲಿಂಪಸ್ ಬೆಟ್ಟದ ಮೇಲೆ ವಾಸವಿರುವ ಗ್ರೀಕ್ ದೇವತೆಗಳು ಆಗಾಗ ಬೆಟ್ಟ ಹತ್ತಿಳಿದು ತಮ್ಮ ಹಿಮ್ಮಡಿಯನ್ನು ನೋಯಿಸಿಕೊಂಡಾರು. ಆಗ ಅವರುಗಳು “ಈ ಬೆಟ್ಟವೇ ನಮ್ಮ ಪಾಲಿಗೆ ಅಖಿಲೀಸನ ಹಿಮ್ಮಡಿ” ಎಂದು ಶ್ಲೇಷಾರ್ಥದಲ್ಲಿ ಕೊರಗಬಹುದು!

ಅಟ್ಲಾಸ್: ಗ್ರೀಕ್ ಮಿಥಕಗಳಲ್ಲಿ ಬೃಹದ್ದೇಹಿ ಟೈಟನ್ನರ ಮತ್ತು ದೇವರುಗಳ ಸಂಘರ್ಷದ ಕತೆಯಿದೆ. ಈ ಮಹಾಕದನದಲ್ಲಿ ದೇವರುಗಳು ಗೆದ್ದು ಟೈಟನ್ನರು ಸೋಲುವಂತಾಗುತ್ತದೆ. ಸೋತ ಟೈಟನ್ನರನ್ನು ದೇವರುಗಳು ಕ್ರೂರವಾಗಿ ಶಿಕ್ಷಿಸುತ್ತಾರೆ. ಇಂತಹ ಟೈಟನ್ನರಲ್ಲಿ ಅಟ್ಲಾಸ್ ಒಬ್ಬ. ಆತನಿಗೆ ಆಕಾಶವನ್ನು ಬೀಳದಂತೆ ತನ್ನ ಬೆನ್ನಿನ ಮೇಲೆ ಹಿಡಿದು ನಿಂತಿರುವ ನಿರಂತರ ಕೆಲಸ ನೀಡಲಾಗುತ್ತದೆ. ಮಾನವ ಶರೀರದಲ್ಲಿ ತಲೆಬುರುಡೆಯಿಂದ ನರವ್ಯೂಹ ಬೆನ್ನುಮೂಳೆಗೆ ಇಳಿಯುತ್ತದೆ. ಬೆನ್ನುಮೂಳೆ ಮೂಲತಃ 33 ಮೂಳೆಗಳ ಘಟಕ. ಇದರಲ್ಲಿ ಅತ್ಯಂತ ಮೇಲಿನ ಮೂಳೆ ತಲೆಬುರುಡೆಯನ್ನು ಹಿಡಿದು ನಿಂತಿರುವಂತೆ ಕಾಣುತ್ತದೆ. ಈ ಮೂಳೆಗೆ ಅಟ್ಲಾಸ್ ಎನ್ನುವ ಹೆಸರಿದೆ. ನಾವು “ಇಲ್ಲ; ಆಗುವುದಿಲ್ಲ” ಎಂದು ಸೂಚಿಸಲು ತಲೆಯನ್ನು ಎಡ-ಬಲಗಳತ್ತ ಆಡಿಸುತ್ತೇವಷ್ಟೆ? ಆ ಚಲನೆಗೆ ಕಾರಣ ಈ ಮೂಳೆ. ತನ್ನ ಶಿಕ್ಷೆ ಏನೆಂದು ತಿಳಿದಾಗ ಅಟ್ಲಾಸ್ ಮಹಾಶಯ ತನ್ನ ತಲೆಯನ್ನು ಎಡ-ಬಲಗಳಿಗೆ ಆಡಿಸಿದ್ದರೆ ಈ ಹೆಸರಿನ ಭಾರ ಹೊರುವ ದುರವಸ್ಥೆ ಆತನಿಗೆ ಬರುತ್ತಿರಲಿಲ್ಲವೋ ಏನೋ! 

ಐರಿಸ್: ಕಣ್ಣಿನ ಮಧ್ಯದಲ್ಲಿರುವ ಗಾಢವರ್ಣದ ವೃತ್ತಾಕಾರ ಭಾಗವನ್ನು ಐರಿಸ್ ಎನ್ನುತ್ತಾರೆ. ಇದು ಪ್ರತಿಯೊಬ್ಬರಲ್ಲೂ ಬೇರೆ ಬೇರೆ ವರ್ಣದ ಛಾಯೆ ಹೊಂದಿರುತ್ತದೆ. ಐರಿಸ್ ಎನ್ನುವುದು ಗ್ರೀಕರ ಮಳೆಬಿಲ್ಲಿನ ದೇವತೆಯ ಹೆಸರು. ಗ್ರೀಕ್ ದೇವರುಗಳು ಒಲಿಂಪಸ್ ಎನ್ನುವ ಆಗಸದ ಪರ್ವತದ ಮೇಲೆ ವಾಸವಾಗಿರುತ್ತಾರೆ ಎನ್ನುವ ಪ್ರತೀತಿಯಿದೆ. ಐರಿಸ್ ದೇವಿ ದೇವರುಗಳ ಸಂದೇಶವಾಹಕಿಯಾಗಿ, ಮಳೆಬಿಲ್ಲನ್ನು ಸೃಜಿಸಿ, ಆಗಸದಿಂದ ಭೂಮಿಗೆ ಇಳಿಯುತ್ತಾಳೆ ಎನ್ನುವ ರಮ್ಯ ಕತೆ. ಅಂತೆಯೇ ವಾಪಸ್ ಹೋಗುವಾಗ ತನ್ನ ಹೂಜಿಯಲ್ಲಿ ಸಮುದ್ರದ ನೀರನ್ನು ಹೊತ್ತು ಮೋಡಗಳ ಮೇಲೆ ಸಿಂಪಡಿಸಿ ಮಳೆಗೆ ಕಾರಣಳಾಗುತ್ತಾಳೆ ಎನ್ನುವ ಕತೆಯೂ ಇದೆ. ಮಳೆಬಿಲ್ಲಿನ ಏಳು ಬಣ್ಣಗಳು ಆಕೆಯ ದಿರಿಸು. ಕಣ್ಣಿನ ಪಾಪೆಯ ಸುತ್ತಲಿನ ಐರಿಸ್ ಹಲವಾರು ಬಣ್ಣಗಳಲ್ಲಿ ಇರುತ್ತದೆ ಎನ್ನುವ ಕಾರಣಕ್ಕೆ ಅದಕ್ಕೆ ಆ ಹೆಸರು.

ನಾರ್ಸಿಸಿಸಮ್: ಮನೋವಿಜ್ಞಾನದಲ್ಲಿ ಆತ್ಮರತಿಯಿಂದ ಬಳಲುವವರಿಗೆ ಈ ಹೆಸರು. ಗ್ರೀಕ್ ಮಿಥಕಗಳಲ್ಲಿ ನಾರ್ಸಿಸಸ್ ಎಂಬಾತನ ಪ್ರಸ್ತಾಪವಿದೆ. ಆತ ಬಹಳ ಸುಂದರ ವ್ಯಕ್ತಿ. ಆತನ ಪ್ರೇಮಕ್ಕಾಗಿ ಹಂಬಲಿಸುವ ಹೆಂಗಳೆಯರು ಎಷ್ಟೋ ಮಂದಿ. ಆದರೆ, ಆತ ಯಾರನ್ನೂ ಪುರಸ್ಕರಿಸಲಿಲ್ಲ. ಒಮ್ಮೆ ನಿರ್ಮಲವಾದ ನೀರಿನ ಕೊಳವೊಂದರಲ್ಲಿ ತನ್ನ ಮುಖದ ಪ್ರತಿಬಿಂಬವನ್ನು ಕಂಡ ಆತ ತನ್ನ ಬಗ್ಗೆ ತಾನೇ ಮೋಹಗೊಂಡು, ಆ ಪ್ರತಿಬಿಂಬವನ್ನೇ ದಿಟ್ಟಿಸುತ್ತಾ ಇದ್ದು ಬಿಟ್ಟ. ಅದು ಯಾವ ಗೀಳಿನ ಸ್ವರೂಪ ಪಡೆಯಿತೆಂದರೆ, ಆ ಪ್ರತಿಬಿಂಬದಿಂದ ಆತನ ದೃಷ್ಟಿ ದೂರಾಗಲೇ ಇಲ್ಲ. ಹೀಗೆ ತನ್ನದೇ ಬಿಂಬವನ್ನು ನೋಡುತ್ತಾ, ಉಳಿದ ಪ್ರಪಂಚವನ್ನು ಮರೆತು ಕೊನೆಗೆ ಕಡೆಯುಸಿರೆಳೆದ. ತಮ್ಮ ಗುಣಲಕ್ಷಣಗಳ ಬಗ್ಗೆ ಅಂಧಾಭಿಮಾನವಿರುವವರ ಬಗ್ಗೆ ಈ ಹೆಸರು ಬಳಕೆಯಾಗುತ್ತದೆ. ಇಂತಹ ಲಕ್ಷಣದ ಲಕ್ಷಾಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ!

ಆಹಾರಕ್ಕೂ ಕಾಯಿಲೆಗಳಿಗೂ ಇರುವ ಸಂಬಂಧವನ್ನು ಎಲ್ಲ ಆರೋಗ್ಯ ಪದ್ಧತಿಗಳೂ ವಿವರಿಸುತ್ತವೆ. ಆದರೆ, ಕಾಯಿಲೆಗಳಿಗೆ, ಶರೀರದ ಅಸಹಜ ಸ್ಥಿತಿಗಳಿಗೂ ಆಹಾರ ವಸ್ತುಗಳ ಹೆಸರಿಡುವ ವಿಧಾನ ಹೇಗೋ ಬೆಳೆದುಬಿಟ್ಟಿದೆ. ಇದು ಕೂಡ ಬಹುತೇಕ ಯೂರೋಪ್ ಮೂಲದ್ದೇ ಆದರೂ, ಅಪರೂಪಕ್ಕೆ ಕೆಲವೊಂದು ದೇಸೀ ಮೂಲದ್ದೂ ಇರಬಹುದು. ಕಾಯಿಲೆಗಳ ಹೆಸರುಗಳನ್ನು ಆಹಾರ ವಸ್ತುಗಳಿಂದ ಗುರುತಿಸಿದರೆ ಆಯಾ ಆಹಾರಗಳನ್ನು ಕಂಡಾಗಲೆಲ್ಲ ಈ ಸಂಬಂಧ ನೆನಪಾಗಿ ಬಳಸಲು ಮುಜುಗರ ಎನಿಸಬಹುದು. ಪ್ರಾಯಶಃ ಇಂತಹ ಹೆಸರುಗಳನ್ನು ಮೊದಲು ಸೂಚಿಸಿದವರಿಗೆ ಈ ದ್ವಂದ್ವದ ಅಂದಾಜು ಇರಲಿಕ್ಕಿಲ್ಲ. ಉದಾಹರಣೆಗೆ, ಇಂಪೆಟಿಗೋ ಎನ್ನುವ ಚರ್ಮದ ಕಾಯಿಲೆಯಲ್ಲಿ ವ್ರಣಗಳು ಮಾಯುವಾಗ ಅದರ ಮೇಲ್ಪದರ ಹಳದಿಮಿಶ್ರಿತ ಕಂದು ಬಣ್ಣ ತಳೆಯುತ್ತದೆ. ಇದನ್ನು ಜೇನುತುಪ್ಪದ ಬಣ್ಣಕ್ಕೆ ಹೋಲಿಸಿ “ಹನಿ ಕಲರ್ಡ್ ಕ್ರಸ್ಟ್” ಎನ್ನುತ್ತಾರೆ. ಜೇನುಹುಳುಗಳು ನಮಗಿಂತ ಬುದ್ಧಿಶಾಲಿ ಎನ್ನಲು ಈ ಹೆಸರು ಒಂದು ನಿದರ್ಶನ!

ಒಂದು ಬಗೆಯ ಮೇದಸ್ಸಿನ ಆಮ್ಲ ಶರೀರದಲ್ಲಿ ಜೀರ್ಣವಾಗಲು ಅಗತ್ಯವಾದ ಕಿಣ್ವದ ಅನುಪಸ್ಥಿತಿಯಲ್ಲಿ ರೋಗಿಯ ಮೂತ್ರದ ವಾಸನೆ ಸುಟ್ಟ ಸಕ್ಕರೆಯ ಹರಳಿನ ರೀತಿಯಲ್ಲಿರುತ್ತದೆ. ಇದನ್ನು “ಮೇಪಲ್ ಸಿರಪ್ ಯೂರಿನ್ ಡಿಸೀಜ್” ಎನ್ನುತ್ತಾರೆ. ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳು ಈ ಹೆಸರನ್ನು ಬಳಸುತ್ತಾರಾದರೂ, ಇದರ ಹಿನ್ನೆಲೆ ತಿಳಿದವರು ತೀರಾ ಕಡಿಮೆ ಮಂದಿ. ಸಕ್ಕರೆಯ ಅವಿಷ್ಕಾರಕ್ಕೂ ಮುನ್ನ ಸಿಹಿಯ ಸ್ವಾದಕ್ಕೆ ಬಳಕೆ ಆಗುತ್ತಿದ್ದವು ಜೇನುತುಪ್ಪ ಮತ್ತು ಕೆಲವು ಮರಗಳ ಮೂಲದಿಂದ ಪಡೆದ ರಸಗಳು. ಮೇಪಲ್ ಎಂಬುದು ಇಂತಹ ಒಂದು ಮರ. ಸಿಹಿಯಾದ ರಸವನ್ನು ಸ್ರವಿಸುವ ಮೇಪಲ್ ಮರದ ಮೂಲ ಕೆನಡಾ ದೇಶ. ಕೆನಡಾದ ರಾಷ್ಟ್ರಧ್ವಜದ ಮೇಲಿರುವ ಎಲೆ ಮೇಪಲ್ ಮರದ್ದು. ಯೂರೋಪಿಯನ್ನರು ಅಮೆರಿಕಾ ಖಂಡಕ್ಕೆ ಲಗ್ಗೆಯಿಡುವ ಎಷ್ಟೋ ಶತಮಾನಗಳ ಮುನ್ನವೇ ಅಲ್ಲಿನ ಮೂಲನಿವಾಸಿಗಳು ಮೇಪಲ್ ಮರದ ಸಿಹಿಯಾದ ರಸವನ್ನು ಪಡೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಮೇಪಲ್ ಸಿರಪ್ ಯೂರಿನ್ ಡಿಸೀಜ್ ರೋಗಿಗಳ ಮೂತ್ರದ ವಾಸನೆ ಈ ಮೇಪಲ್ ಸಿರಪ್ ವಾಸನೆಯನ್ನು ಹೋಲುತ್ತದೆ ಎಂದು ಈ ಹೆಸರು. ಜೀವನದಲ್ಲಿ ಮೇಪಲ್ ಸಿರಪ್ ಅನ್ನು ಎಂದೂ ಕಂಡಿಲ್ಲದ ಏಷ್ಯಾ, ಆಫ್ರಿಕನ್ ಖಂಡಗಳ ವೈದ್ಯಕೀಯ ವಿದ್ಯಾರ್ಥಿಗಳೂ ಇದೇ ಹೆಸರನ್ನು ಬಳಸುವುದು ವಿಪರ್ಯಾಸ. ಆದರೆ ಈ ಕಾಯಿಲೆ ತೀರಾ ಅಪರೂಪವಾದ್ದರಿಂದ ಹೆಚ್ಚು ಮಂದಿ ವೈದ್ಯರು ತಮ್ಮ ಜೀವನದಲ್ಲಿ ಇಂತಹ ಒಬ್ಬ ರೋಗಿಯನ್ನೂ ಕಂಡಿರುವುದಿಲ್ಲ. ಹೀಗಾಗಿ, “ತಿಳಿದಿಲ್ಲದ ಮೇಪಲ್ ಸಿರಪ್ ಗೆ ಕಂಡಿಲ್ಲದ ರೋಗಿಯ ಸಾಕ್ಷಿ” ಎಂದು ಗಾದೆ ಮಾಡಬಹುದು!

ಅಮೀಬಾ ಎಂಬ ಒಂದು ಬಗೆಯ ಏಕಕೋಶ ಪರಾವಲಂಬಿ ಜೀವಿಯಿಂದಾಗುವ ಸೋಂಕಿನಿಂದ ಯಕೃತ್ತಿನಲ್ಲಿ ಕೀವು ಉಂಟಾಗುತ್ತದೆ. ಈ ಕೀವನ್ನು ಯೂರೋಪಿಯನ್ ರೋಗಶಾಸ್ತ್ರಜ್ಞರು “ಆಂಕವಿ ಸಾಸ್ ಪಸ್” ಎಂದು ಕರೆಯುತ್ತಾರೆ. ಇಂಗ್ಲೀಷ್ ಭಾಷೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಎಲ್ಲರೂ ಇದನ್ನು ಅದೇ ಹೆಸರಿನಿಂದ ಕರೆಯುತ್ತಾರೆ. ಇಂಗ್ಲೀಷ್ ಮೂಲದವರಲ್ಲದ ವಿದ್ಯಾರ್ಥಿಗಳಿಗೆ ಈ ಹೆಸರಿನ ಹಿನ್ನೆಲೆ ತಿಳಿದಿರುವ ಸಾಧ್ಯತೆ ಇಲ್ಲ. ಈ ಹೆಸರಿನ ಬಳಕೆ ಆರಂಭವಾದದ್ದು ಸುಮಾರು 17ನೆಯ ಶತಮಾನದ ವೇಳೆಗೆ. ಆಗ ಆಂಕವಿ ಸಾಸ್ ಎನ್ನುವುದು ಯೂರೋಪಿನ ಆಹಾರದಲ್ಲಿ ಸಾಕಷ್ಟು ಬಳಕೆಯಲ್ಲಿತ್ತು. ಈಗ ಅದರ ಉಪಯೋಗ ತೀರಾ ಕಡಿಮೆ. ಅಂತರ್ಜಾಲದ ವ್ಯಾಪಕ ಬಳಕೆಗೆ ಮುನ್ನ ಬಹುತೇಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಂಕವಿ ಸಾಸ್ ಎಂದರೇನು, ಅದು ಹೇಗಿರುತ್ತದೆ ಎನ್ನುವುದು ತಿಳಿದಿರಲಿಲ್ಲ. ಈಗಲೂ ಅನೇಕರು ಆಂಕವಿ ಎನ್ನುವುದು ಒಂದು ಹಣ್ಣು ಅಥವಾ ತರಕಾರಿ ಇರಬಹುದು ಎಂದೇ ನಂಬಿದ್ದಾರೆ. ಆದರೆ ಆಂಕವಿ ಎನ್ನುವುದು ಸಮುದ್ರಗಳಲ್ಲಿ ಕಾಣುವ ಮೀನಿನ ಒಂದು ಪ್ರಭೇದ. ಇದನ್ನು ಅರೆದು ನುಣ್ಣನೆ ಪೇಸ್ಟ್ ಮಾಡಬಹುದು. ಅದು ಬಿಳಿಯ ಬಣ್ಣದ್ದು. ಆದರೆ, ಆಂಕವಿ ಮೀನನ್ನು ಅರೆದು, ಅದಕ್ಕೆ ಕೆಲವೊಂದು ಮಸಾಲೆಯುಕ್ತ ಪದಾರ್ಥಗಳನ್ನು ಸೇರಿಸಿ ಮಾಡುವ ದ್ರವರೂಪದ ಸಾಸ್ ಕಂದು ಬಣ್ಣದ್ದು. ತಮಾಷೆಯೆಂದರೆ, ಅಮೀಬಾ ಮೂಲದ ಯಕೃತ್ತಿನ ಸೋಂಕಿನ ಬಹುತೇಕ ರೋಗಿಗಳ ಕೀವು ಆಂಕವಿ ಸಾಸ್ ಮಾದರಿಯಲ್ಲಿ ಇರುವುದೇ ಇಲ್ಲ. ಆದರೆ, ಆ ಕೀವು ಹೇಗೇ ಇದ್ದರೂ ಅದನ್ನು “ಆಂಕವಿ ಸಾಸ್ ಪಸ್” ಎಂದೇ ಕರೆಯುತ್ತಾರೆ. ಏಕೆಂದರೆ, ಆಂಕವಿ ಸಾಸ್ ಹೇಗಿರುತ್ತದೆ ಎನ್ನುವುದೇ ಯಾರಿಗೂ ತಿಳಿದಿಲ್ಲವಲ್ಲ! ಇದೊಂದು ರೀತಿ ಹುಟ್ಟುಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ. ಜೋಡಿ-ನಾಮಪದಗಳ ವಿರೋಧಿಗಳಿಗೆ ಈ ವಿಷಯ ಅಚ್ಚುಮೆಚ್ಚು.

ಹೃದಯದ ಮಾಂಸಖಂಡಗಳ ದೌರ್ಬಲ್ಯದಿಂದ ಹೃದಯ ವೈಫಲ್ಯ ಉಂಟಾಗುತ್ತದೆ. ಆಗ ರಕ್ತಸಂಚಾರದಲ್ಲಿ ಏರುಪೇರಾಗಿ ಯಕೃತ್ತಿನಲ್ಲಿ ರಕ್ತ ನಿಂತು ಶೇಖರವಾಗುತ್ತದೆ. ಇದರಿಂದ ಯಕೃತ್ತಿನ ರಕ್ತನಾಳಗಳು ಹಿಗ್ಗಿ, ಜೀವಕೋಶಗಳು ಉಬ್ಬುತ್ತವೆ. ಇದನ್ನು ಹಿಂದಿನ ಕಾಲದಲ್ಲಿ “ನಟ್ಮೆಗ್ ಲಿವರ್” ಎಂದು ಗುರುತಿಸುತ್ತಿದ್ದರು. ಆಧುನಿಕ ವೈದ್ಯ ಬೆಳೆಯುವ ಮುನ್ನ ನಟ್ಮೆಗ್ (ಕನ್ನಡದಲ್ಲಿ ಜಾಯಿಕಾಯಿ ಅಥವಾ ಜಾಕಾಯಿ) ತನ್ನ ಔಷಧ ಗುಣಗಳಿಗೆ ಜಗತ್ತಿನಾದ್ಯಂತ ಪ್ರಸಿದ್ಧವಾಗಿತ್ತು. ಆಗಿನ ವೈದ್ಯರು ಜಾಕಾಯನ್ನು ತೇಯ್ದು, ಅದರ ಗಂಧವನ್ನು ಔಷಧಗಳಲ್ಲಿ ಬಳಸುತ್ತಿದ್ದರು. ಹೀಗೆ ತೇಯ್ದ ಅರ್ಧ ಜಾಕಾಯಿಯ ಭಾಗ ಉಬ್ಬಿದ ಜೀವಕೋಶಗಳ ಯಕೃತ್ತಿನಂತೆ ಕಾಣುತ್ತಿತ್ತು ಎಂಬ ಕಾರಣಕ್ಕೆ ಯೂರೋಪಿನ ವೈದ್ಯರು ಅದನ್ನು ನಟ್ಮೆಗ್ ಲಿವರ್ ಎಂದು ಹೆಸರಿಸಿದರು. ಈಗಿನ ಕಾಲದಲ್ಲಿ ಜಾಕಾಯಿಯ ಬಗ್ಗೆ ಬಲ್ಲವರು ತೀರಾ ಕಡಿಮೆ. ಕೆಲವೊಂದು ಸಾಂಪ್ರದಾಯಿಕ ಹಿಂದೂಗಳಿಗೆ ಮತ್ತು ಪಾಕಶಾಸ್ತ್ರ ನಿಪುಣರಿಗೆ ಜಾಕಾಯಿಯ ಬಗ್ಗೆ ತಿಳಿದಿರಬಹುದು. ಆದರೆ ಜಗತ್ತಿನ ಎಲ್ಲೆಡೆ ಈ ಕಾಯಿಲೆಯನ್ನು ಈಗಲೂ ನಟ್ಮಗ್ ಲಿವರ್ ಎಂದೇ ಕರೆಯುತ್ತಾರೆ. ಉಳಿದ ಹೆಸರುಗಳಿಗೆ ವ್ಯತಿರಿಕ್ತವಾಗಿ ಈ ಬಗ್ಗೆ “ನಿಮಗೆ ತಿಳಿಯದ್ದು ನಮಗೆ ತಿಳಿದಿದೆ” ಎಂದು ನಾವು ಭಾರತೀಯರು ಯೂರೋಪಿಯನ್ನರಿಗೆ, ಅಮೆರಿಕನ್ನರಿಗೆ ಹೇಳಬಹುದು.

ಒಟ್ಟಿನಲ್ಲಿ ಜೋಡಿ-ನಾಮಪದಗಳು ವೈದ್ಯಕೀಯ ಇತಿಹಾಸವನ್ನು ತನ್ನದೇ ಆದ ರೀತಿಯಲ್ಲಿ ಕಟ್ಟಿಕೊಡಬಲ್ಲವು. ಬಹಳಷ್ಟು ಬಾರಿ ಮುಖ್ಯ ಕತೆಗಿಂತ ಉಪಕತೆಗಳೇ ಹೆಚ್ಚು ರೋಚಕ. ಜೋಡಿ-ನಾಮಪದಗಳು ವೈದ್ಯಕೀಯ ಜಗತ್ತಿನ ಇಂತಹ ಕುತೂಹಲಕಾರಿ ಉಪಕತೆಗಳು. ಇವನ್ನು ಬೆದಕಿದಷ್ಟೂ ಬೆರಗು; ಅರಿತಷ್ಟೂ ಸೋಜಿಗ; ಕಲಿತಷ್ಟೂ ಹಸಿವು!

-----------------------

ಏಪ್ರಿಲ್ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ಏಪ್ರಿಲ್ 2024 ರ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/6ab96b3caaca438a79951078399b6ab0ddf34dc5202404.pdf.html?fbclid=IwAR24lr9rq-iSh1ZEKUIznaVpiAv7KR2r0cOZIemeUC6tSY35dn8wKfr5RfU_aem_ARJ3atVJRkr2YSoOG2iKIqbXab00gbsrM4NiJMKG8QlKzJkMwnySDOu0epAjjzxt1QmIre63RaeiTU7vSpTjnHEy