ಭಾನುವಾರ, ಮೇ 8, 2022


 

ಊಟ ಮಾಡುವ ಸರಿಯಾದ ವೇಳೆ ಯಾವುದು?

ಡಾ. ಕಿರಣ್ ವಿ.ಎಸ್.

ವೈದ್ಯರು

“ಊಟಕೆ ಬಾರೋ ತಿಮ್ಮ....ಓಡಿ ಬಂದೇನಮ್ಮ” ಎಂದು ಕೊನೆಯಾಗುವ ಸೋಮಾರಿ ತಿಮ್ಮನ ಕುರಿತಾದ ಪದ್ಯವಿದೆ. ಪ್ರತಿಯೊಂದು ಕೆಲಸಕ್ಕೂ ನೆಪ ಹೇಳುವ ತಿಮ್ಮ ಊಟಕ್ಕೆ ಮಾತ್ರ ಸದಾ ಸಿದ್ಧ ಎನ್ನುವ ತಮಾಷೆ. “ನಾವು ಏನನ್ನು ತಿನ್ನುತ್ತೇವೋ, ಅದೇ ಆಗುತ್ತೇವೆ” ಎನ್ನುವುದರ ಮೇಲೆ ಸಾತ್ವಿಕ, ರಾಜಸಿಕ, ತಾಮಸಿಕ ಆಹಾರಗಳ ಪರಿಕಲ್ಪನೆಯಾಗಿದೆ. ಏನು ತಿನ್ನಬೇಕು, ಏಕೆ ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದು ನಮಗೆ ತಿಳಿದಿದೆ. ಯಾವಾಗ ತಿನ್ನಬೇಕು ಎನ್ನುವ ಪ್ರಶ್ನೆಗೆ ಉತ್ತರಿಸುವುದು ಸುಲಭವಲ್ಲ. “ಹಸಿವಾದಾಗ ತಿನ್ನಬೇಕು” ಎನ್ನುವ ಉತ್ತರ ಅಸ್ಪಷ್ಟ. ಕೆಲವರಿಗೆ ಸದಾ ಬಾಯಾಡಿಸುತ್ತಲೇ ಇರಬೇಕು ಎನ್ನುವ ಚಪಲ. ಅದನ್ನು ಹಸಿವು ಎನ್ನಲಾದೀತೆ ಎನ್ನುವ ಪ್ರಶ್ನೆ ಬರುತ್ತದೆ. ಕ್ಲುಪ್ತ ವೇಳೆಗೆ ಊಟ ಮಾಡುವುದು ವೈಜ್ಞಾನಿಕವೇ ಅಥವಾ ವಿವರಣೆಯಿಲ್ಲದ ನಂಬಿಕೆಯೇ?

ಪ್ರತಿಯೊಂದು ಜೀವಿಯ ಒಡಲಿನಲ್ಲೂ ಒಂದೊಂದು ಜೈವಿಕ ಗಡಿಯಾರವಿದೆ. ಸೂರ್ಯನ ಬೆಳಕಿಗೆ ಸಂವಾದಿಯಾಗಿ ಚಲಿಸುವ ಈ ಜೈವಿಕ ಗಡಿಯಾರದ ರೀತ್ಯಾ ಹಸಿವು, ನಿದ್ರೆ, ಎಚ್ಚರ ಮೊದಲಾದ ದೈನಂದಿನ ಕೆಲಸಗಳು ಜರುಗುತ್ತವೆ. ಶರೀರದಲ್ಲಿ ಚೋದಕಗಳ ಬಿಡುಗಡೆ, ಹೃದಯ ಬಡಿತದ ಲಯ, ಮಿದುಳಿನ ಸಂಕೇತಗಳು ಮುಂತಾದುವು ಈ ಗಡಿಯಾರವನ್ನು ಅವಲಂಬಿಸಿವೆ. ನಮ್ಮ ಸುತ್ತಮುತ್ತಲಿನ ಪ್ರಕೃತಿಯ ಜೊತೆಗೆ ನಮ್ಮ ಶರೀರದ ಕೆಲಸವನ್ನು ಬೆಸೆಯುವ ಕೆಲಸದಲ್ಲಿ ಜೈವಿಕ ಗಡಿಯಾರದ ಪಾತ್ರ ಹಿರಿದು. ಈ ಸಾಮರಸ್ಯಕ್ಕೆ ಅಡೆತಡೆಯಾದಾಗ ಅಸ್ವಸ್ಥತೆಯ ಲಕ್ಷಣಗಳು ಕಾಣಬಹುದು. ದೀರ್ಘಕಾಲ ಬದುಕಿರುವವರಲ್ಲಿರುವ ಸಮಾನ ಅಂಶವೆಂದರೆ, ಅವರ ಶಿಸ್ತುಬದ್ಧ ಜೀವನಶೈಲಿ ಮತ್ತು ಆಹಾರದ ವಿಷಯದಲ್ಲಿ ಅವರ ಶ್ರದ್ಧೆ.

ನಮ್ಮ ಮಿದುಳಿನಲ್ಲಿರುವ ಪೀನಿಯಲ್ ಗ್ರಂಥಿ ಮೆಲಟೋನಿನ್ ಎಂಬ ಚೋದಕವನ್ನು ಸ್ರವಿಸುತ್ತದೆ. ಈ ಚೋದಕದ ಮಟ್ಟ ಕತ್ತಲಿನ ಸಮಯದಲ್ಲಿ ಏರುತ್ತದೆ ಮತ್ತು ನಿದ್ರೆಗೆ ಕಾರಣವಾಗುತ್ತದೆ. ಸೂರ್ಯನ ಬೆಳಕು ಪ್ರಖರವಾಗಿರುವಾಗ ಈ ಚೋದಕದ ಸ್ರವಿಕೆ ಕಡಿಮೆ. ಶರೀರದಲ್ಲಿ ಮೆಲಟೋನಿನ್ ಏರು ಮಟ್ಟದಲ್ಲಿ ಇರುವಾಗ ಆಹಾರ ಸೇವಿಸಿದರೆ ಕೊಬ್ಬಿನ ಶೇಖರಣೆ ಹೆಚ್ಚುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಒಂದೇ ರೀತಿಯ ಆಹಾರವನ್ನು ಸಂಜೆಯ ವೇಳೆ ಸೇವಿಸಿದರಿಗೆ ಹೋಲಿಸಿದರೆ, ತಡರಾತ್ರಿ ಸೇವಿಸಿದವರ ಶರೀರದಲ್ಲಿ ಕೊಬ್ಬಿನ ಅಂಶ ಅಧಿಕವಾಗಿತ್ತು. ಮಧುಮೇಹಿಗಳಲ್ಲಿ ಕೂಡ ರಾತ್ರಿ ತಡವಾಗಿ ಆಹಾರ ಸೇವಿಸಿದವರ ರಕ್ತದ ಗ್ಲುಕೋಸ್ ಮಟ್ಟ ಹದ ತಪ್ಪಿತ್ತು ಮತ್ತು ಹೆಚ್ಚು ಇನ್ಸುಲಿನ್ ಅಗತ್ಯ ಕಂಡಿತ್ತು.

ಆಹಾರದ ಜೀರ್ಣಕ್ರಿಯೆಗೆ ಬೇಕಾದ ಬಹಳಷ್ಟು ಚೋದಕಗಳು ಜೈವಿಕ ಗಡಿಯಾರವನ್ನು ಅವಲಂಬಿಸುವುದರಿಂದ ಆಹಾರ ಪದ್ದತಿ ಅದಕ್ಕೆ ಅನುಗುಣವಾಗಿರುವುದು ಸೂಕ್ತ. ದಿನದ ಆರಂಭದಲ್ಲಿ ಆಹಾರದ ಪ್ರಮಾಣ ಹೆಚ್ಚಾಗಿದ್ದರೆ ಶರೀರ ಅದನ್ನು ಸರಾಗವಾಗಿ ನಿರ್ವಹಿಸುತ್ತದೆ. ಅಂತೆಯೇ, ಹೊತ್ತು ಮುಳುಗಿದ ನಂತರ ಮಿತವಾದ ಆಹಾರ ಸೇವನೆ ಆರೋಗ್ಯಕ್ಕೆ ಒಳಿತು. ಕೆಲಸದ ಒತ್ತಡದಲ್ಲಿ ಮುಂಜಾನೆಯ ತಿಂಡಿಯನ್ನು ತಿನ್ನದೇ, ಮಧ್ಯಾಹ್ನ ಅರೆಹೊಟ್ಟೆ ತಿಂದು, ಇಡೀ ದಿನಕ್ಕೆ ಬೇಕಾದದ್ದನ್ನು ತಡರಾತ್ರಿ ಆರಾಮವಾಗಿ ತಿನ್ನುವವರಲ್ಲಿ ಮಧುಮೇಹ, ಬೊಜ್ಜು, ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಗಳು ಅಧಿಕ ಎಂದು ಹಲವಾರು ಅಧ್ಯಯನಗಳು ತೋರಿವೆ. ಇದಕ್ಕೆ ಪ್ರತಿಕೂಲವಾಗಿ, ಮುಂಜಾನೆಯ ತಿಂಡಿಯನ್ನು ತಪ್ಪಿಸದೇ, ಮಧ್ಯಾಹ್ನದ ಊಟವನ್ನು ಸರಿಯಾದ ವೇಳೆಗೆ ಸೇವಿಸಿ, ರಾತ್ರಿ ಮಿತಾಹಾರ ತಿಂದು ಬೇಗನೆ ಮಲಗುವವರಲ್ಲಿ ಕಾಯಿಲೆಗಳ ಸಾಧ್ಯತೆಗಳು ಗಣನೀಯವಾಗಿ ಕಡಿಮೆ ಇರುತ್ತವೆ. ಹೀಗಾಗಿ, “ಬೆಳಗ್ಗಿನ ತಿಂಡಿಯನ್ನು ಮಹಾರಾಜನಂತೆಯೂ, ಮಧ್ಯಾಹ್ನದ ಊಟವನ್ನು ರಾಜಕುಮಾರನಂತೆಯೂ, ರಾತ್ರಿಯ ಆಹಾರವನ್ನು ಭಿಕಾರಿಯಂತೆಯೂ ಸೇವಿಸಬೇಕು” ಎನ್ನುವ ಆಂಗ್ಲ ನುಡಿಗಟ್ಟು ವೈಜ್ಞಾನಿಕವಾಗಿ ದೃಢಪಟ್ಟಿದೆ.

ಜೈವಿಕ ಗಡಿಯಾರದ ಜೊತೆ ಜೀರ್ಣಾಂಗದ ಚೋದಕಗಳ ಹೊಂದಾಣಿಕೆಯಿದೆ. ಈ ಚೋದಕಗಳ ಜೊತೆ ನಮ್ಮ ಊಟದ ಸಮಯದ ಹೊಂದಾಣಿಕೆ ಇರಬೇಕು. ಈ ಲೆಕ್ಕದಲ್ಲಿ ಪ್ರತಿದಿನವೂ ಕ್ಲುಪ್ತ ಸಮಯದಲ್ಲಿ ಆಹಾರ ಸೇವಿಸುವ ಪದ್ದತಿ ಜೈವಿಕ ಗಡಿಯಾರವನ್ನು ಸುಸ್ಥಿತಿಯಲ್ಲಿ ಇಡುತ್ತದೆ. ಒಂದೊಂದು ದಿನ ಒಂದೊಂದು ಹೊತ್ತಿಗೆ ಆಹಾರ ಸೇವನೆ ಮಾಡುವುದರಿಂದ ಜೈವಿಕ ಗಡಿಯಾರ ಗಲಿಬಿಲಿಗೊಳ್ಳುತ್ತದೆ. ಈ ಗಡಿಯಾರದ ಚಲನೆಯ ಮೇಲೆ ಹಲವಾರು ಪ್ರಕ್ರಿಯಗಳು ನಿಂತಿವೆ. ಅವೆಲ್ಲವೂ ಏರುಪೇರಾಗುತ್ತವೆ. ಇದರ ಒಟ್ಟಾರೆ ಪರಿಣಾಮ ಆರೋಗ್ಯದ ಮೇಲೆಯೇ ಆಗುತ್ತದೆ. ಒಂದು ಅಧ್ಯಯನದಲ್ಲಿ ಮೊಬೈಲ್ ಆಪ್ ಗಳನ್ನು ಬಳಸಿ, ಆಹಾರ ಸೇವನೆಯ ಸಮಯದ ಜೊತೆಗೆ ಆರೋಗ್ಯದ ಸೂಚಕಗಳನ್ನು ತಾಳೆ ನೋಡಲಾಗಿದೆ. ಇದರ ಪ್ರಕಾರ ಆಹಾರ ಸೇವನೆಯ ಸಮಯಪಾಲನೆ ದೀರ್ಘಕಾಲಿಕ ಅವಧಿಯಲ್ಲಿ ರೋಗಗಳ ನಿಯಂತ್ರಣದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿದುಬಂದಿದೆ.

ಪ್ರಸ್ತುತ ಅಧ್ಯಯನಗಳ ಪ್ರಕಾರ ಆಹಾರ ಸೇವನೆಯ ವಿಷಯಗಳಲ್ಲಿ ಕೆಲವು ನಿಯಮಗಳನ್ನು ಪಾಲಿಸಬಹುದು. ರಾತ್ರಿಯ ಊಟ ಮತ್ತು ಬೆಳಗ್ಗಿನ ತಿಂಡಿಯ ನಡುವೆ ಹನ್ನೆರಡು ಗಂಟೆಗಳ ಅಂತರ ಒಳಿತು. ಮುಂಜಾನೆ ಹೆಚ್ಚು ಆಹಾರ ಸೇವಿಸಿ, ರಾತ್ರಿ ಮಿತಾಹಾರ ಪದ್ಧತಿ ಇಟ್ಟುಕೊಳ್ಳುವುದು ಸೂಕ್ತ. ಮನಸ್ಸಿಗೆ ಬಂದಾಗಲೆಲ್ಲಾ ಏನನ್ನಾದರೂ ತಿನ್ನುತ್ತಲೇ ಇರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಸೂರ್ಯಾಸ್ತ ಮತ್ತು ಸೂರ್ಯೋದಯದ ನಡುವೆ ಹೆಚ್ಚು ಆಹಾರ ಸೇವಿಸದಿರುವುದು ಆರೋಗ್ಯಕರ.

ಬೆಳಗ್ಗಿನ ತಿಂಡಿಯನ್ನು ಏಳರಿಂದ ಎಂಟು ಗಂಟೆಯ ಸುಮಾರಿಗೆ, ಮಧ್ಯಾಹ್ನದ ಊಟವನ್ನು ಒಂದರಿಂದ ಎರಡು ಗಂಟೆಯ ವೇಳೆಗೆ ಮತ್ತು ರಾತ್ರಿ ಮಿತಾಹಾರ ಭೋಜನವನ್ನು ಏಳರಿಂದ ಎಂಟು ಗಂಟೆಯ ನಡುವೆ ಸೇವಿಸುವ ಪದ್ದತಿ ಒಟ್ಟಾರೆ ಆರೋಗ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಬಾಯಿಚಪಲಕ್ಕೆ ಕಡಿವಾಣ ಹಾಕುವುದು, ನಡುನಡುವೆ ಉಪವಾಸ ಮಾಡುವುದು, ಸಾಕಷ್ಟು ನೀರಿನ ಸೇವನೆ, ವ್ಯಾಯಾಮ, ಒಳ್ಳೆಯ ನಿದ್ರೆ – ಇವುಗಳು ಆರೋಗ್ಯ ಸಂರಕ್ಷಣೆಯಲ್ಲಿ, ಅನಾರೋಗ್ಯದ ನಿರ್ವಹಣೆಯಲ್ಲಿ, ಅನೇಕ ಕಾಯಿಲೆಗಳ ನಿಯಂತ್ರಣದಲ್ಲಿ ಬಹಳ ಪ್ರಭಾವಶಾಲಿ ಪರಿಣಾಮಗಳನ್ನು ತೋರಿವೆ. ಆಹಾರದಲ್ಲಿನ ಶಿಸ್ತು ಕೇವಲ ಕ್ಯಾಲೊರಿ ಗಣನೆಗೆ ಮಾತ್ರ ಸೀಮಿತವಾಗದೇ, ಆಹಾರ ಸೇವನೆಯ ಸಮಯಕ್ಕೂ ವಿಸ್ತರಿಸಿದರೆ ಮತ್ತಷ್ಟು ಒಳ್ಳೆಯ ಫಲಿತಾಂಶ ಲಭಿಸುತ್ತದೆ. ದೀರ್ಘಕಾಲಿಕ ಆರೋಗ್ಯ ನಿರ್ವಹಣೆಯಲ್ಲಿ ಆಹಾರ ಸೇವನೆಯ ಸಮಯದ ಅಗತ್ಯವನ್ನು ವೈಜ್ಞಾನಿಕ ಅಧ್ಯಯನಗಳು ತೋರಿವೆ. ನಮ್ಮ ಪೂರ್ವಿಕರು ಬೆಳೆಸಿಕೊಂಡು ಬಂದಿದ್ದ ಆರೋಗ್ಯ ಸೇವನೆಯ ನಿಯಮಗಳು ಸಮ್ಯಕ್ಕಾದವು ಎಂದು ಇಂದಿನ ವಿಜ್ಞಾನ ದೃಢಪಡಿಸಿದೆ.

-----------------------

  ಮೇ 2002 ರ ಸೂತ್ರ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ


ಮಂಗಳವಾರ, ಮೇ 3, 2022

 

ಆರೋಗ್ಯ ರಕ್ಷಣೆಯಲ್ಲಿ ವೈಯಕ್ತಿಕ ಶಿಸ್ತಿನ ಪಾತ್ರ

ಡಾ. ಕಿರಣ್ ವಿ.ಎಸ್.

ವೈದ್ಯರು

ಯಶಸ್ವಿ ವ್ಯಕ್ತಿಗಳ ಸಾಧನೆಯ ಹಿಂದಿನ ಮರ್ಮಗಳನ್ನು ಅರಿಯಲು ಹಲವಾರು ಅಧ್ಯಯನಗಳು ನಡೆದಿವೆ. ಜಾಣತನ, ಓದು, ಹಣ, ಚಾಲಾಕಿತನ, ಮೋಸಗೊಳಿಸುವ ಕಲೆಗಾರಿಕೆ, ನಯವಾದ ಮಾತುಗಾರಿಕೆ ಮೊದಲಾದವು ಜೀವನದಲ್ಲಿ ಸಫಲತೆಯನ್ನು ನೀಡಬಹುದೆಂದು ಹಲವರ ನಂಬಿಕೆ. ಆದರೆ ವೈಜ್ಞಾನಿಕ ಅಧ್ಯಯನಗಳು, “ಮಾಡುವ ಕೆಲಸದ ಬಗ್ಗೆ ನಿಷ್ಠೆ, ಅದನ್ನು ಸಾಧಿಸುವ ಛಲ, ಮತ್ತು ಶಿಸ್ತುಬದ್ಧ ನಡವಳಿಕೆ” ಯಶಸ್ಸಿನ ಮೂಲಕಾರಣಗಳು ಎಂದು ತೋರಿವೆ. ಈ ಮಾತನ್ನು ಆರೋಗ್ಯ ರಕ್ಷಣೆಯ ವಿಷಯದಲ್ಲೂ ಹೇಳಬಹುದು. ಜೀವನವಿಡೀ ಒಳ್ಳೆಯ ಆರೋಗ್ಯಕ್ಕಿಂತ ಹೆಚ್ಚಿನ ಸಾಫಲ್ಯ ಬೇರೇನೂ ಇರಲಿಕ್ಕಿಲ್ಲ.   

ವಿಶ್ವ ಆರೋಗ್ಯ ಸಂಸ್ಥೆ “ಆರೋಗ್ಯವೆಂಬುದು ಸಂಪೂರ್ಣ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಯೋಗಕ್ಷೇಮದ ಸ್ಥಿತಿ; ಅದು ಕೇವಲ ಕಾಯಿಲೆಯ ಅಥವಾ ಶರೀರ ದೌರ್ಬಲ್ಯದ ಅನುಪಸ್ಥಿತಿ ಅಲ್ಲ” ಎಂದು ವ್ಯಾಖ್ಯಾನ ಮಾಡಿದೆ. ಅಂದರೆ, ಕೇವಲ ಕಾಯಿಲೆ ಬಾರದಂತೆ ಎಚ್ಚರಿಕೆ ತೆಗೆದುಕೊಳ್ಳುವುದು ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿಧಾನವಲ್ಲ. ಆರೋಗ್ಯ ರಕ್ಷಣೆ ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿ.

ಶಿಸ್ತಿನ ಬಗ್ಗೆ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಶಿಸ್ತು ಎಂದರೆ ತಾನು ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸುವುದು; ಕೆಲಸದ ಆವಶ್ಯಕತೆಗಳು, ಜವಾಬ್ದಾರಿಗಳನ್ನು ಅರಿತುಕೊಳ್ಳುವುದು; ಆ ಕೆಲಸದಲ್ಲಿನ ಒತ್ತಡವನ್ನು ನಿರ್ವಹಿಸುವುದು; ಕೆಲಸಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿ, ಅರ್ಥ ಮಾಡಿಕೊಳ್ಳುವುದು; ಕೆಲಸದ ಪ್ರತಿ ನಮ್ಮ ನಿರ್ವಹಣೆಯ ಬಗ್ಗೆ ಪ್ರಾಮಾಣಿಕ ವಿಶ್ಲೇಷಣೆ ನಡೆಸುವುದು; ಈ ಪ್ರಕ್ರಿಯೆಯಲ್ಲಿನ ಅಡೆತಡೆಗಳನ್ನು ನಿವಾರಿಸಿಕೊಳ್ಳುವ ಮಾರ್ಗೋಪಾಯಗಳನ್ನು ಪತ್ತೆ ಮಾಡುವುದು; ವ್ಯವಸ್ಥಿತ ಕಾರ್ಯನಿರ್ವಹಣೆಯನ್ನು ಮೈಗೂಡಿಸಿಕೊಳ್ಳುವುದು; ಧನಾತ್ಮಕ ಚಿಂತನೆ; ಕೋಪ, ಆವೇಶಗಳ ಮೇಲೆ ಹಿಡಿತ ಸಾಧಿಸುವುದು; ಸೋಲುಗಳನ್ನು ಒಪ್ಪಿ, ಅದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು, ಮುಂತಾದುವು ವೈಯಕ್ತಿಕ ಶಿಸ್ತಿನ ಭಾಗಗಳು. ಆರೋಗ್ಯ ರಕ್ಷಣೆಯ ಸಾಫಲ್ಯದಲ್ಲಿ ಈ ಎಲ್ಲ ಅಂಶಗಳೂ ಸೇರಿವೆ.

ವಿದ್ಯೆಗೂ, ಶಿಸ್ತಿಗೂ ನೇರ ಸಂಬಂಧವಿಲ್ಲ. ಆದರೆ, ಶಿಸ್ತನ್ನು ಮೈಗೂಡಿಸುವಲ್ಲಿ ಶಿಕ್ಷಣ ನೆರವಾಗುತ್ತದೆ. ಗಮ್ಯವನ್ನು ಅರಿತವರ ಹೆಜ್ಜೆಗಳು ಧೃಢವಾಗಿರುತ್ತವೆ; ಸಫಲತೆ ಹೆಚ್ಚಾಗಿರುತ್ತದೆ. ಇತರ ದೈನಂದಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸದೆ, ಪ್ರತಿಯೊಂದು ಕೆಲಸಕ್ಕೂ ಅಗತ್ಯ ಕಾಲವನ್ನು ನೀಡುವ ಪ್ರಕ್ರಿಯೆಯಲ್ಲಿ ಶಿಸ್ತಿನ ಪಾತ್ರವಿದೆ. ಆರೋಗ್ಯದ ವಿಷಯಗಳಲ್ಲಿ ನೆಪಗಳನ್ನು ಹುಡುಕುವುದು ಬಹಳ ಸುಲಭ. ನೆಪಗಳ ಪ್ರಲೋಭನೆಯನ್ನು ಹತ್ತಿಕ್ಕುವುದಕ್ಕೆ ಶಿಸ್ತು ಮುಖ್ಯ. ಇದರ ಅಗತ್ಯವನ್ನು ಎಲ್ಲರೂ ಮನಗಾಣಬೇಕು. ಆರಂಭದಲ್ಲಿ ಕಷ್ಟವೆನಿಸಿದರೂ, ಶಿಸ್ತಿನ ಪ್ರತ್ಯಕ್ಷ ಮತ್ತು ಪರೋಕ್ಷ ಲಾಭಗಳು ಕಾಲಕ್ರಮೇಣ ಅನುಭವಕ್ಕೆ ಬರುತ್ತವೆ.

ವ್ಯಾಯಾಮ, ಊಟ, ನಿದ್ರೆ, ವಿಶ್ರಾಂತಿ, ಧ್ಯಾನ, ಧನಾತ್ಮಕ ಚಿಂತನೆ, ಒಳ್ಳೆಯ ಆಲೋಚನೆಗಳು, ವಯಸ್ಸಿಗೆ ಅನುಗುಣವಾದ ನಿಯಮಿತ ಆರೋಗ್ಯ ತಪಾಸಣೆಗಳು, ಮನೆಯಲ್ಲಿ ಮತ್ತು ವೃತ್ತಿ ಕ್ಷೇತ್ರದಲ್ಲಿ ಮಧುರ ಬಾಂಧವ್ಯಗಳು, ಸ್ವಚ್ಚತೆ, ಮುಂತಾದುವು ಆರೋಗ್ಯ ರಕ್ಷಣೆಗೆ ಪೂರಕ. ಇವುಗಳನ್ನು ಕ್ಲುಪ್ತ ಕಾಲಕ್ಕೆ ನಿಯಮಿತವಾಗಿ ಅಭ್ಯಾಸ ಮಾಡುವುದು ಆರೋಗ್ಯ ಪಾಲನೆಯ ಆವಶ್ಯಕ ಅಂಗ. ನಿಯಮಿತ ಆಚರಣೆಯನ್ನು ಸಾಧಿಸಲು ಶಿಸ್ತಿನ ಪದ್ಧತಿ ಮುಖ್ಯ. ಇದನ್ನು ಪ್ರಾಯೋಗಿಕವಾಗಿ ಆಚರಿಸಲು ಕೆಲವು ದಾರಿಗಳಿವೆ:

ನಿಯಮಿತ ದೈನಂದಿನ ಆಚರಣೆ: ಪ್ರತಿಯೊಬ್ಬರಿಗೂ ದಿನದಲ್ಲಿ ಇಪ್ಪತ್ತ ನಾಲ್ಕು ಗಂಟೆಗಳ ಕಾಲಾವಧಿಯೇ ಇರುತ್ತದೆ. ಶಿಸ್ತಿನ ಪಾಲನೆ ಮಾಡುವವರು ಈ ಅವಧಿಯಲ್ಲಿ ಹೆಚ್ಚು ಸಾಧಿಸಬಲ್ಲರು. ಉಳಿದವರಿಗೆ ಸಮಯವಿಲ್ಲ ಎನ್ನುವ ನೆಪ ಮಾತ್ರ ದೊರೆಯುತ್ತದೆ. ಪ್ರತಿನಿತ್ಯವೂ ಆಯಾ ಕಾಲಕ್ಕೆ ಮಾಡಬೇಕಾದ ಕೆಲಸಗಳನ್ನು ಪದ್ದತಿಯಂತೆ ಮಾಡುತ್ತಾ ಹೋದರೆ ಕಾಲಕ್ರಮೇಣ ಅದೊಂದು ಪರಿಪಾಠವಾಗುತ್ತದೆ. ಇದನ್ನು ಆರಂಭಿಸಿ, ಕೆಲಕಾಲ ತಪ್ಪದೇ ನಡೆಸಿಕೊಂಡು ಹೋದರೆ, ಆನಂತರ ಅದು ತಂತಾನೇ ಜರುಗುತ್ತದೆ.

ಆರೋಗ್ಯ ರಕ್ಷಣೆಯ ಮಹತ್ವ: ನಮ್ಮ ಅಧೀನದಲ್ಲಿರುವ ವಸ್ತುವಿನ ಮಹತ್ವ ನಮಗೆ ತಿಳಿದಿರುವುದಿಲ್ಲ. ಬಹಳ ವೇಳೆ ಅದನ್ನು ಕಳೆದುಕೊಂಡಾಗಲೇ ಅದರ ಮೌಲ್ಯ ತಿಳಿಯುತ್ತದೆ. ಆರೋಗ್ಯದ ವಿಷಯದಲ್ಲಿ ಈ ಮಾತು ಜಾಗತಿಕ ಸತ್ಯ. ನಮ್ಮ ಆರೋಗ್ಯ ಅಮೂಲ್ಯವೆಂದೂ, ಅದನ್ನು ಒಳ್ಳೆಯ ರೀತಿಯಲ್ಲಿ ಕಾಪಾಡಿಕೊಳ್ಳುವುದು ಅತ್ಯಂತ ಮಹತ್ವಪೂರ್ಣ ಸಂಗತಿಯೆಂದೂ ನಮಗೆ ತಿಳಿದಿರಬೇಕು. ಶಿಸ್ತಿನ ಆಚರಣೆ ಈ ಸಂಗತಿಯನ್ನು ಬೇರೂರಿಸುತ್ತದೆ.

ನಿಯಮಿತ ಆಚರಣೆಯ ಲಾಭಗಳು: ಆರೋಗ್ಯದಲ್ಲಿ ದೈಹಿಕ, ಮಾನಸಿಕ, ಮತ್ತು ಸಾಮಾಜಿಕ ಅಂಗಗಳಿವೆ. ಸಾಂಕ್ರಾಮಿಕ ರೋಗಿಗಳು ಇಡೀ ಸಮಾಜಕ್ಕೆ ಯಾವ ರೀತಿ ಅಪಾಯ ಉಂಟುಮಾಡಬಲ್ಲರೆಂಬುದನ್ನು ಈಚಿನ ನಮ್ಮ ಕಾಲದ ಜಾಗತಿಕ ಪಿಡುಗೊಂದು ನಮಗೆ ಮನಗಾಣಿಸಿದೆ. ಹೀಗಾಗಿ, ಇಡೀ ಸಮಾಜದ ಆರೋಗ್ಯವೂ ಪ್ರತಿಯೊಬ್ಬರ ವೈಯಕ್ತಿಕ ಹೊಣೆಗಾರಿಕೆ ಎಂಬ ಅರಿವು ಇರಬೇಕು. ಈ ದೃಷ್ಟಿಕೋನ ಶಿಸ್ತು, ಸಂಯಮಗಳ ನಿಯಮಿತ ಆಚರಣೆಯಿಂದ ಮಾತ್ರವೇ ಲಭಿಸುತ್ತದೆ.

ಯುಕ್ತಾಯುಕ್ತ ವಿವೇಚನೆ: ಶಿಸ್ತುಬದ್ಧ ಜೀವನದ ಒಂದು ದೊಡ್ಡ ಲಾಭವೆಂದರೆ ಸರಿ-ತಪ್ಪಗಳ ಬಗ್ಗೆ ಸರಿಯಾದ ಅರಿವು. ಆಧುನಿಕ ಕಾಲದಲ್ಲಿ ಹಲವಾರು ಪ್ರಲೋಭನೆಗಳು ನಮ್ಮ ಬದುಕಿನೊಡನೆ ಹಾಸುಹೊಕ್ಕಾಗಿವೆ. ಇವುಗಳನ್ನು ಹತ್ತಿಕ್ಕುವುದು ಸುಲಭವಲ್ಲ. ಅಧ್ಯಯನಗಳ ರೀತ್ಯಾ ಶಿಸ್ತಿನ ಪಾಲಕರಿಗೆ ಇಂತಹ ವಿವೇಚನೆಯ ವಿಶ್ಲೇಷಣೆ ಇತರರಿಗಿಂತ ಸುಲಭ. ತಮ್ಮ ದಿನಚರಿಯಲ್ಲಿ ಬೇರೊಂದು ಹವ್ಯಾಸವನ್ನು ರೂಡಿಸಿಕೊಳ್ಳುವಾಗ, ಅದರ ಗುಣಾವಗುಣಗಳನ್ನು ಪರಿಶೀಲಿಸುವ ಸ್ವಭಾವ ಶಿಸ್ತಿನ ಜನರಲ್ಲಿ ಸಹಜವಾಗಿ ಕಾಣುತ್ತದೆ. ಇದರಿಂದ ಯೋಗ್ಯ-ಅಯೋಗ್ಯಗಳ ನಡುವಿನ ನಿರ್ಧಾರ ಸುಲಭವಾಗುತ್ತದೆ.

ಆರೋಗ್ಯ ರಕ್ಷಣೆಯಲ್ಲಿ ಶಿಸ್ತಿನ ಲಾಭಗಳು ಹಲವಾರು. ಜೀವನ ನಿಂತ ನೀರಾಗಬಾರದು. ಅದು ಪ್ರಗತಿ ಹೊಂದಲು ಹಿಂದಿನ ಮಟ್ಟವನ್ನು ಕಾಲಾನುಸಾರ ಮೀರಬೇಕು. ಇದು ಒಂದೇ ಏಟಿಗೆ ಆಗುವಂಥದ್ದಲ್ಲ. ಕಾಲಕ್ರಮೇಣ ಕೊಂಚ-ಕೊಂಚ ಪ್ರಗತಿಯನ್ನು ಸಾಧಿಸುತ್ತಾ, ಮೇಲೇರಬೇಕಾಗುತ್ತದೆ. ನಿಯಮಿತ ಆಚರಣೆಗಳಿಂದ ಆಯಾ ಕೆಲಸದಲ್ಲಿ ನಮ್ಮ ಪ್ರಾವೀಣ್ಯ ವೃದ್ಧಿಸುತ್ತದೆ. ಇದು ಶಿಸ್ತುಬದ್ಧ ಪದ್ದತಿಗಳಿಂದ ಮಾತ್ರ ಸಾಧ್ಯ. ಶಿಸ್ತಿನ ಆಚರಣೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಆರೋಗ್ಯ ನಿರ್ವಹಣೆಗೆ ಪೂರಕ.

ಆರೋಗ್ಯ ರಕ್ಷಣೆ ನಾವು ಜೀವನವಿಡೀ ಪಾಲಿಸಬೇಕಾದ ಕರ್ತವ್ಯ. ಇದಕ್ಕೆ ನಾವೇ ಸರಿಯಾದ ಚೌಕಟ್ಟನ್ನು ನಿರ್ಮಿಸಬೇಕು. ಈ ಪ್ರಕ್ರಿಯೆಯಲ್ಲಿ ಶಿಸ್ತಿನ ಪಾತ್ರ ಮಹತ್ವದ್ದು.

-------------------------

5/ಏಪ್ರಿಲ್/2022 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/self-discipline-to-improve-your-health-925353.html

 


ಮಾನಸಿಕ ಸ್ವಾಸ್ಥ್ಯಕ್ಕೆ ಹತ್ತು ಸೂತ್ರಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

ಮಾನಸಿಕ ಸ್ವಾಸ್ಥ್ಯದ ಅರಿವು ಹೆಚ್ಚುವುದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಮುಖ್ಯ. ದೇಹದ ಆರೋಗ್ಯದಷ್ಟೇ ಮನಸ್ಸಿನ ಆರೋಗ್ಯವೂ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಒಂದು ಭಾಗವಾದರೆ, ಉತ್ತಮ ಮಾನಸಿಕ ಆರೋಗ್ಯವನ್ನು ಪ್ರಚೋದಿಸಿ, ಕಾಯಿಲೆಗಳನ್ನು ತಡೆಗಟ್ಟುವುದು ಮತ್ತೊಂದು ಆಯಾಮ. ಶರೀರಕ್ಕೆ ಅನಾರೋಗ್ಯ ಕಾಡಿದಾಗ ರೋಗಿಯ ರಕ್ತದಲ್ಲಿ, ಅಂಗಾಂಗಗಳಲ್ಲಿ ಕೆಲವು ನಿಶ್ಚಿತ ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ಭೌತಿಕ ಅನಾರೋಗ್ಯವನ್ನು ಪತ್ತೆ ಮಾಡಬಹುದು. ಇದಕ್ಕೆ ಜಾಗತಿಕವಾಗಿ ಅನುಸರಿಸಬಹುದಾದ ನಿರ್ದೇಶನಗಳಿವೆ. ಆದರೆ, ಮಾನಸಿಕ ಅಸ್ವಸ್ಥತೆ ವಿಭಿನ್ನ; ಅದರಲ್ಲಿ ಪ್ರಯೋಗಾಲಯದ ಪರೀಕ್ಷೆಗಳಿಗೆ ಹೆಚ್ಚು ಆಸ್ಪದವಿಲ್ಲ. ಜೊತೆಗೆ, ಆಯಾ ಭೌಗೋಳಿಕ ಕ್ಷೇತ್ರಗಳಿಗೆ ಅನುಸಾರವಾಗಿ ಬದಲಾಗುವ ಸಾಂಸ್ಕೃತಿಕ ಆಚರಣೆಗಳು, ರೀತಿ-ರಿವಾಜುಗಳು, ವೈಯಕ್ತಿಕ ನಂಬಿಕೆಗಳು ಮುಂತಾದವುಗಳ ಬಲವಾದ ಪ್ರಭಾವ ಉಳ್ಳ ಕಾರಣದಿಂದ ಮಾನಸಿಕ ಅನಾರೋಗ್ಯದ ಪತ್ತೆಗೆ ವಿಶಿಷ್ಟ ವಿಧಾನಗಳನ್ನು ಅನುಸರಿಸಬೇಕು. ಮಾನಸಿಕ ಆರೋಗ್ಯವನ್ನು ಸಫಲವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಕೆಲವು ವಿಷಯಗಳನ್ನು ಪರಿಗಣಿಸಬಹುದು.

1.      ದೇಹದ ಆರೋಗ್ಯದ ಬಗ್ಗೆ ಆಸ್ಥೆ ವಹಿಸುವಷ್ಟು ಮಾನಸಿಕ ಆರೋಗ್ಯದ ಬಗ್ಗೆ ಜನರ ಅರಿವಿಲ್ಲ. ಯಾವುದೇ ರೋಗದ ಬಗ್ಗೆ ತಿಳುವಳಿಕೆ ಮೂಡಲು ಮೊದಲು ಅದರ ಕಾಯಿಲೆಯ ಲಕ್ಷಣಗಳು ತಿಳಿಯಬೇಕು. ಇಲ್ಲವಾದರೆ, ಚಿಕಿತ್ಸೆ ಪಡೆಯಬೇಕೆಂದಾಗಲೀ, ಪಡೆಯುವ ದಾರಿಯಾಗಲೀ ತಿಳಿಯುವುದಿಲ್ಲ. ಹೀಗಾಗಿ ಮಾನಸಿಕ ಸ್ವಾಸ್ಥ್ಯದ ಕುರಿತಾಗಿ ಜನಜಾಗೃತಿ ಮೂಡಬೇಕು.

2.     ಮಾನಸಿಕ ಅಸ್ವಸ್ಥತೆ ಎನ್ನುವುದು ವಾಸ್ತವ. ಇದರ ಬಗ್ಗೆ ಯಾವುದೇ ನಿರಾಕರಣೆ ಅಥವಾ ಸಂಕೋಚ ಬೇಕಿಲ್ಲ; ಚಿಕಿತ್ಸೆ ಪಡೆಯಲು ಮುಜುಗರ ಪಡಬೇಕಿಲ್ಲ. ದೈಹಿಕ ಕಾಯಿಲೆಗೆ ಯಾವ ರೀತಿ ವೈದ್ಯರನ್ನು ಸಂಪರ್ಕಿಸುತ್ತೇವೆಯೋ, ಮಾನಸಿಕ ಚಿಕಿತ್ಸೆಗೂ ಅಂತೆಯೇ ನಿಸ್ಸಂಕೋಚವಾಗಿ ವೈದ್ಯರನ್ನು ಕಾಣುವಂತಹ ಸಾಮಾಜಿಕ ಪರಿಸ್ಥಿತಿ ನಿರ್ಮಾಣವಾಗಬೇಕು.

3.     ಸರಿ-ತಪ್ಪುಗಳ ಜಿಜ್ಞಾಸೆ, ಆತ್ಮವಿಶ್ವಾಸ, ವಿವೇಚನೆ, ಸ್ವಸಾಮರ್ಥ್ಯದ ಮೇಲಿನ ನಂಬಿಕೆ ಇವುಗಳು ಮಾನಸಿಕ ಸ್ವಾಸ್ಥ್ಯಕ್ಕೆ ಪೂರಕ. ಇವುಗಳನ್ನು ಬೆಳೆಸುವ ಕೌಟುಂಬಿಕ ಮತ್ತು ಸಾಮಾಜಿಕ ವಾತಾವರಣ ನಿರ್ಮಾಣವಾಗಬೇಕು.

4.    ಒಳ್ಳೆಯ ಶೈಕ್ಷಣಿಕ ಮತ್ತು ಮಾಡಬೇಕಾದ ಉದ್ಯೋಗದ ಬಗೆಗಿನ ತರಬೇತಿಗಳು ಮುಖ್ಯ. ಮಾಡುವ ಉದ್ಯೋಗದ ಬಗ್ಗೆ ನಿಖರ ಜ್ಞಾನ, ಕೆಲಸದ ಬಗ್ಗೆ ಶ್ರದ್ಧೆ, ಸಹೋದ್ಯೋಗಿಗಳ ಜೊತೆಯಲ್ಲಿ ಒಳ್ಳೆಯ ವರ್ತನೆ, ವೃತ್ತಿಪರ ಮಾಹಿತಿಗಳು ಮಾನಸಿಕ ಸ್ವಾಸ್ಥ್ಯದ ರಕ್ಷಣೆಗೆ ಇಂಬು ನೀಡುತ್ತವೆ. ಶಾಲೆಯ ದಿನಗಳಿಂದಲೇ ಈ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಮಾನಸಿಕ ಆರೋಗ್ಯ ಪಠ್ಯದ ವಿಷಯವಾಗಬೇಕು.

5.     ಭಾವನೆಗಳ ಮೇಲೆ ಹತೋಟಿ ಇರಬೇಕು. ಮಾನವ ಸಂಘಜೀವಿ. ವೈಯಕ್ತಿಕ ಭಾವನೆಗಳು ಸಾಂಘಿಕ ಸ್ವಾಸ್ಥ್ಯಕ್ಕೆ ಪೂರಕವಾಗಿರಬೇಕು. ಜೊತೆಗೆ, ಮತ್ತೊಬ್ಬರ ವರ್ತನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಯಬೇಕು. ಒಳ್ಳೆಯ ವಿಷಯಗಳನ್ನು ಹಂಚುವುದು, ಅಪಾಯಗಳನ್ನು ಗ್ರಹಿಸಿ ಇತರರಿಗೆ ಎಚ್ಚರಿಕೆ ನೀಡುವುದು – ಇವು ಉತ್ತಮ ಮಾನಸಿಕ ಆರೋಗ್ಯದ ಸೂಚಕಗಳು.  

6.     ಪ್ರತಿದಿನವೂ ಹಲವಾರು ಸಣ್ಣಪುಟ್ಟ ಸಮಸ್ಯೆಗಳನ್ನು ಪ್ರತಿಯೊಬ್ಬರೂ ಎದುರಿಸುತ್ತಿರುತ್ತೇವೆ. ಇದನ್ನು ಯಾವ ರೀತಿ ನಿರ್ವಹಿಸುತ್ತೇವೆಂಬುದು ನಮ್ಮ ಮಾನಸಿಕ ಪಕ್ವತೆಗೆ ಕಿರುಗಿಂಡಿ. ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ಅವಕ್ಕೆ ಪ್ರಾಯೋಗಿಕ ಪರಿಹಾರಗಳನ್ನು ಹುಡುಕಿಕೊಳ್ಳುವುದು; ಇಂತಹ ಪರಿಹಾರಗಳನ್ನು ಸಮರ್ಥವಾಗಿ ನೀಡಬಲ್ಲ ಆತ್ಮೀಯರೊಡನೆ ಚರ್ಚಿಸುವುದು; ದೊಡ್ಡ ಸಮಸ್ಯೆಗಳನ್ನು ಒಂದು ತಂಡವಾಗಿ ಪರಿಹರಿಸುವುದು – ಇವೆಲ್ಲವೂ ಮಾನಸಿಕ ಆರೋಗ್ಯಕ್ಕೆ ಪೂರಕ. ಸಂತಸದ ಸಮಯದಲ್ಲಿ ಮಾನಸಿಕ ಗಟ್ಟಿತನ ಹೆಚ್ಚಾಗಿ ಅಗತ್ಯವಿಲ್ಲ. ಆದರೆ, ಗಡುಸಿನ ಅಗತ್ಯ ಕ್ಲಿಷ್ಟಕರ ಪರಿಸ್ಥಿತಿಗಳಲ್ಲಿ ಇರುತ್ತದೆ. ಸಮಸ್ಯೆಗಳಿಂದ ದೂರ ಓಡುವವರು ಮಾನಸಿಕ ಕಾಯಿಲೆಗಳಿಗೆ ಹೆಚ್ಚಾಗಿ ಗುರಿಯಾಗುತ್ತಾರೆ.

7.     ಸಾಮಾಜಿಕ ಮತ್ತು ಸಾಂಘಿಕ ಕೌಶಲಗಳು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿ. ಪರಿಚಿತ ಮತ್ತು ಅಪರಿಚಿತ ಜನರೊಡನೆ ವ್ಯವಹರಿಸುವ ಚಾತುರ್ಯ, ವಿವಿಧ ವಯೋಮಾನದವರೊಡನೆ ಬೆರೆಯುವಾಗ ಇರಬೇಕಾದ ಎಚ್ಚರ, ಸಂಬಂಧಗಳನ್ನು ನಿರ್ವಹಿಸುವ ವಿಧಾನಗಳು, ತಂಡದ ಭಾಗವಾಗಿ ಮಾಡಬೇಕಾದ ಕರ್ತವ್ಯಗಳು, ನಾಯಕತ್ವದ ಗುಣ, ಸಹಕಾರದ ಮನೋಧರ್ಮ ಮೊದಲಾದುವು ನಮ್ಮ ಮಾನಸಿಕ ಭಾವನೆಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಲು ನೆರವಾಗುತ್ತವೆ.  

8.     ದೈಹಿಕ ಸ್ವಾಸ್ಥ್ಯಕ್ಕೂ ಮಾನಸಿಕ ಆರೋಗ್ಯಕ್ಕೂ ಬಲವಾದ ನಂಟಿದೆ; ಒಂದನ್ನೊಂದು ಪರಸ್ಪರ ಉತ್ತೇಜಿಸುತ್ತವೆ. ದೀರ್ಘಕಾಲಿಕ ಕಾಯಿಲೆಗಳಿಂದ ಬಳಲುವವರಲ್ಲಿ ಮಾನಸಿಕ ಸಂತುಲನ ಬಿಗಡಾಯಿಸುತ್ತದೆ. ಅಂತೆಯೇ, ಮಾನಸಿಕ ರೋಗಿಗಳಲ್ಲಿ ಹಲವಾರು ದೈಹಿಕ ಸಮಸ್ಯೆಗಳು ಕಾಣುತ್ತವೆ. ಹೀಗಾಗಿ, ಸರಿಯಾದ ಆಹಾರ, ವ್ಯಾಯಾಮ, ಶಿಸ್ತುಗಳ ಮೂಲಕ ದೈಹಿಕ ಆರೋಗ್ಯವನ್ನು ಕಾಪಡಿಕೊಂಡವರಲ್ಲಿ ಮಾನಸಿಕ ಅನಾರೋಗ್ಯಗಳ ಸಾಧ್ಯತೆ ಕಡಿಮೆಯಾಗುತ್ತದೆ.

9.     ಆಧ್ಯಾತ್ಮ ಮತ್ತು ಪಾರಲೌಕಿಕ ಚಿಂತನೆಗಳು ಮನಸ್ಸಿನ ಉದ್ವೇಗಗಳನ್ನು ಹದುಬಸ್ತಿನಲ್ಲಿ ಇಡಲು ಸಹಕಾರಿ ಎಂದು ಅಧ್ಯಯನಗಳು ತಿಳಿಸಿವೆ. ನಮ್ಮ ಜೀವನದ ಅರ್ಥ, ಉದ್ದೇಶಗಳನ್ನು ಅರಿಯುವ ಪ್ರಯತ್ನಗಳು ಒಂದು ದೊಡ್ಡ ವ್ಯವಸ್ಥೆಯಲ್ಲಿ ನಮ್ಮ ಪಾತ್ರವನ್ನು ನಿರ್ದೇಶಿಸಲು ನೆರವಾಗುತ್ತವೆ. ಈ ರೀತಿಯ ಚಿಂತನೆ ಕೇವಲ ಆಸ್ತಿಕರಿಕೆ ಮಾತ್ರವಲ್ಲದೇ, ಇತರರಿಗೂ ನೆರವಾಗುತ್ತವೆ.

10.   ಜೀವನದ ಗುಣಮಟ್ಟವೆನ್ನುವುದು ಕೇವಲ ಹಣಕ್ಕೆ ಸಂಬಂಧಿಸಿದ ವಿಷಯವಲ್ಲ. ದೈಹಿಕ ಮತ್ತು ಮಾನಸಿಕ ಆರೋಗ್ಯ, ಸಂತಸ, ವೈಯಕ್ತಿಕ ಸಾಧನೆ, ಸಮಾಧಾನ, ಜೀವನಪ್ರೀತಿಗಳು ಬದುಕಿನ ಗುಣಮಟ್ಟವನ್ನು ವೃದ್ಧಿಸುತ್ತವೆ. ಯಾವ ರೀತಿ ದೈಹಿಕ ಆರೋಗ್ಯ ಎನ್ನುವುದು ಕೇವಲ ಕಾಯಿಲೆಯ ಅನುಪಸ್ಥಿತಿಯಲ್ಲ ಎನ್ನುವ ಮಾತಿದೆಯೋ, ಅಂತೆಯೇ ಮಾನಸಿಕ ಆರೋಗ್ಯ ಎನ್ನುವುದು ಮಾನಸಿಕ ಕಾಯಿಲೆ ಇಲ್ಲದ ಸ್ಥಿತಿಯಲ್ಲ. ಬದಲಿಗೆ, ಅದು ಸ್ವಸಾಮರ್ಥ್ಯ ಮೂಲದ ಸಾಧನೆ, ಜೀವನದ ಹಲವಾರು ಪ್ರಾಕಾರಗಳ ಸಂತಸಗಳನ್ನು ಅನುಭವಿಸುವ ಮನೋವೃತ್ತಿ, ಸಫಲ ಸಾಮಾಜಿಕ ಸಂಬಂಧಗಳು, ಕಾಲಕ್ಷೇಪಗಳು, ನೆಮ್ಮದಿ ನೀಡುವ ಆರೋಗ್ಯಕರ ಹವ್ಯಾಸಗಳು, ಬಿಡುವಿನ ವೇಳೆಯನ್ನು ಫಲಪ್ರದವಾಗಿ ಕಳೆಯುವ ವಿಧಾನಗಳು ಮಾನಸಿಕ ಸ್ವಾಸ್ಥ್ಯದ ಸೂಚ್ಯಂಕಗಳು.

ಮಾನಸಿಕ ಆರೋಗ್ಯದ ಪ್ರಮುಖ ಲಕ್ಷಣಗಳೆಂದರೆ, ವ್ಯಕ್ತಿ ತನ್ನ ಸಾಮರ್ಥ್ಯವನ್ನು ಗುರುತಿಸಿ, ಅದಕ್ಕೆ ಪೂರಕವಾಗಿ ನಡೆದುಕೊಳ್ಳುವುದು; ದಿನನಿತ್ಯದ ಜಂಜಾಟಗಳನ್ನು ಸಮರ್ಥವಾಗಿ ನಿರ್ವಹಿಸುವುದು; ತನಗೆ ಮತ್ತು ಸಮಾಜಕ್ಕೆ ಲಾಭದಾಯಕವಾಗುವ ವೃತ್ತಿಯಲ್ಲಿ, ಕೆಲಸಗಳಲ್ಲಿ ತೊಡಗಿಕೊಳ್ಳುವುದು; ಸಮಾಜದ ಏಳಿಗೆಗೆ ತನ್ನ ಕೈಲಾದ ಸಹಕಾರ ನೀಡುವುದು. ಈ ನಿಟ್ಟಿನಲ್ಲಿ ಲೋಪಗಳು ಕಂಡರೆ ಮಾನಸಿಕ ಸ್ವಾಸ್ಥ್ಯ ಏರುಪೇರಾಗಿದೆಯೆಂದು ಭಾವಿಸಬಹುದು. ಸಮಾಜದ ಪ್ರತಿಯೊಬ್ಬರ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು ಒಳ್ಳೆಯ ಸಮಾಜ ನಿರ್ಮಾಣದ ಹಾದಿಯಲ್ಲಿ ಮಹತ್ವದ ಹೆಜ್ಜೆ. ಇದನ್ನು ಶಾಲೆಯ ವಯಸ್ಸಿನಿಂದಲೇ ಆರಂಭಿಸಬೇಕು. ಮಾನಸಿಕ ಸ್ವಾಸ್ಥ್ಯದ ಬಗೆಗಿನ ಅಜ್ಞಾನ ಅದನ್ನು ಸಾಧಿಸುವ ಹಾದಿಯಲ್ಲಿ ತೊಡಕಾಗಬಾರದು.

--------------------------

26/4/2022 ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/ten-rules-for-mental-stability-in-daily-life-931478.html

 

ಕುತೂಹಲಿ ವಿಜ್ಞಾನ ಪತ್ರಿಕೆ ಭಾರತೀಯ ವಿಜ್ಞಾನ್ ಪ್ರಸಾರ್ ಕೊಡುಗೆ. ಇದರ ಸಾರಥ್ಯ ವಹಿಸಿರುವ ಶ್ರೀಯುತ Kollegala Sharma ರವರು ಈ ಬಾರಿಯ ಏಪ್ರಿಲ್ 2022 ಸಂಚಿಕೆಯನ್ನು ಹಾಸ್ಯಕಾಗಿ ಮೀಸಲಿಟ್ಟಿದ್ದಾರೆ. ವಿಜ್ಞಾನ ಪತ್ರಿಕೆಯೊಂದು ಹಾಸ್ಯಕಾಗಿ ವಿಶೇಷ ಸಂಚಿಕೆ ಮಾಡಿರುವ ಉದಾಹರಣೆಗಳು ತೀರಾ ಅಪರೂಪ. ಅವರ ಸಲಹೆಯ ಮೇರೆಗೆ "ವೈದ್ಯಕೀಯದಲ್ಲಿ ಹಾಸ್ಯ" ಕುರಿತಾಗಿ ವೈಯಕ್ತಿಕ ಅನುಭವದ ಕೆಲವು ಪ್ರಸಂಗಗಳನ್ನು ಹಂಚಿಕೊಂಡಿದ್ದೇನೆ.

ವೈದ್ಯಕೀಯ ವೃತ್ತಿಯಲ್ಲಿ ಸಹಜ ಹಾಸ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

ಪ್ರಾಯಶಃ ಬೇರೆ ಯಾವುದೇ ವೃತ್ತಿಯಲ್ಲೂ ಕಾಣದಷ್ಟು ವೈವಿಧ್ಯಮಯ ಜನರ ಸಂಪರ್ಕ ದೊರೆಯುವುದು ವೈದ್ಯಕೀಯ ವೃತ್ತಿಯಲ್ಲೇ. ಒಂದೆಡೆ ತನಗೆ ಇರುವ ಆರೋಗ್ಯ ಸಮಸ್ಯೆಗಳನ್ನೆಲ್ಲಾ ಕೂಲಂಕಷವಾಗಿ ಗೂಗಲ್ ಮಾಡಿ ಸೋಸುವವರಾದರೆ, ಮತ್ತೊಂದೆಡೆ ಚರ್ಮದ ಒಳಗೆ ಅಂಗಾಂಗಗಳಿರುತ್ತವೆ ಎಂದಾಗ “ಹೌದಾ” ಎಂದು ಅಚ್ಚರಿಯಿಂದ ಕಣ್ಣರಳಿಸುವ ಮುಗ್ಧರು. ವೈದ್ಯಕೀಯ ಕ್ಷೇತ್ರದಲ್ಲಿ ಹಾಸ್ಯ ಉಕ್ಕುವುದು ಈ ವಿರೋಧಾಭಾಸಗಳಿಂದಲೇ. ಅನುಭವಕ್ಕೆ ನಿಲುಕಿದ ಕೆಲವು ಪ್ರಸಂಗಗಳು:

1.      ಹುಡುಗನೊಬ್ಬನ ಸಿಜೇರಿಯನ್

ಗರ್ಭಿಣಿಯ ಹೆರಿಗೆ ಒಂದು ನೈಸರ್ಗಿಕ, ಸಹಜ ವಿಧಾನ. ಆದರೆ, ಈ ಪ್ರಕ್ರಿಯೆಯಲ್ಲಿ ಅಡೆತಡೆ ಉಂಟಾದರೆ, ಅಥವಾ ಸಹಜ ಹೆರಿಗೆಗೆ ಬೇರೆ ಯಾವುದಾದರೂ ಸಮಸ್ಯೆ ಇದ್ದರೆ, ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಕೋಶದಿಂದ ಮಗುವಿನ ಹೆರಿಗೆ ಮಾಡಿಸಲಾಗುತ್ತದೆ. ಬಹಳ ಕಾಲದಿಂದಲೂ ಇದನ್ನು ಸಿಜೇರಿಯನ್ ಹೆರಿಗೆ ಎಂದು ಕರೆಯುತ್ತಾರೆ. ರೋಮಿನ ಚಕ್ರವರ್ತಿಯಾಗಿದ್ದ ಜೂಲಿಯಸ್ ಸೀಜರ್ ಇಂತಹ ಶಸ್ತ್ರಚಿಕಿತ್ಸೆಯ ಮೂಲಕವೇ ಜನಿಸಿದ ಎಂದು ಪ್ರತೀತಿ. ಅದಕ್ಕೇ ಆ ಹೆಸರು.

ಒಮ್ಮೆ ಆಸ್ಪತ್ರೆಯಿಂದ ಹೊರಬರುತ್ತಿದ್ದಾಗ “ಸಾ... ಸಾ... ಎನ್ನುವ ದನಿ ಹಿಂಬಾಲಿಸಿತು. ತಿರುಗಿ ನೋಡಿದರೆ ಇಬ್ಬರು ನಡುವಯಸ್ಕ ವ್ಯಕ್ತಿಗಳು ನನ್ನೆಡೆಗೆ ಓಡಿಬರುತ್ತಿದ್ದರು. “ಸಾ... ನಮ್ಮ ಮಗೂಗೆ ಇನ್ನೂ ಸಿಜೇರಿಯನ್ ಮಾಡಿಲ್ಲ. ಸ್ವಲ್ಪ ನೋಡ್ತೀರಾ?” ಎಂದರು. ಯಾವ ಗರ್ಭಿಣಿಯ ಬಗ್ಗೆ ಹೇಳುತ್ತಿದ್ದಾರೆ ಎಂದು ನೆನಪಾಗಲಿಲ್ಲ. “ಬಸುರಿ ವಾರ್ಡಿನಲ್ಲಿ ಕೇಳಿ” ಎಂದೆ. ಅವರು ಅಚ್ಚರಿಯಿಂದ, “ಬಸುರಿ ವಾರ್ಡಿನಲ್ಲಿ ಅಲ್ಲ ಸಾ. ನಮ್ಮ ಮಗಾ ಇರೋದು ಮೂರನೇ ಮಹಡಿಯಲ್ಲಿ” ಎಂದರು. ಅದು ಸಾಮಾನ್ಯ ಶಸ್ತ್ರಚಿಕಿತ್ಸೆಯ ರೋಗಿಗಳ ವಾರ್ಡ್. ಅಲ್ಲೇಕೆ ಬಸುರಿಯನ್ನು ದಾಖಲಿಸಿದರು ಎಂದು ಆಲೋಚಿಸುತ್ತಾ, “ಹೆಸರೇನು?” ಎಂದೆ. “ಮಾದೇಸ” ಎಂದರು. “ನಿನ್ನ ಹೆಸರಲ್ಲಪ್ಪಾ; ಬಸುರಿಯ ಹೆಸರೇನು?” ಎಂದೆ. “ಬಸುರಿ ಅಲ್ಲ ಸಾ. ನಮ್ಮ ಮಗಾ ಮಾದೇಸಾ. ಹದಿನಾರು ವರ್ಷದೋನು” ಎಂದರು.

ನನಗೆ ಪೀಕಲಾಟ. ಹದಿನಾರು ವರ್ಷದ ಹುಡುಗನನ್ನು ಸಿಜೇರಿಯನ್ ಶಸ್ತ್ರಚಿಕಿತ್ಸೆ ಮಾಡಲು ಸಾಮಾನ್ಯ ಶಸ್ತ್ರಚಿಕಿತ್ಸೆಯ ರೋಗಿಗಳ ವಾರ್ಡಿಗೆ ಯಾರು ಸೇರಿಸಿದರು? ದಾಖಲಾತಿ ಮಾಡುವಾಗ ಗುಮಾಸ್ತರಿಂದ ಏನಾದರೂ ತಪ್ಪಾಯಿತೇ? ಇದು ನಾಲ್ಕು ಜನರಿಗೆ ತಿಳಿದರೆ ಆಸ್ಪತ್ರೆಗೆ ಕೆಟ್ಟ ಹೆಸರಲ್ಲವೇ? ತಲೆ ಕೆರೆದುಕೊಂಡು ಹೇಳಿದೆ, “ನೀವು ಇಲ್ಲೇ ಇರಿ. ನಾನು ವಿಚಾರಿಸಿ ಬರುತ್ತೇನೆ”. ಅವರು ತಲೆಯಾಡಿಸಿದರು.

ಮತ್ತೆ ಕಾಲೆಳೆದುಕೊಂಡು ಮೂರು ಮಹಡಿ ಹತ್ತಿದ್ದಾಯಿತು. ರೋಗಿ ಮಾದೇಶ ಅಲ್ಲಿಯೇ ಇದ್ದ. ಆತನ ದಾಖಲಾತಿ ನೋಡಿದೆ. ಆತನಿಗೆ ಹೊಟ್ಟೆಯಲ್ಲಿ ಗೆಡ್ಡೆ ಇತ್ತು. ಅದರ ಸಲುವಾಗಿ ಶಸ್ತ್ರಚಿಕಿತ್ಸೆಯ ವಾರ್ಡಿಗೆ ದಾಖಲಾಗಿದ್ದ. ನಿರಾಳದ ನಿಟ್ಟುಸಿರು ಬಿಡುವಂತಾಯಿತು. ಆ ವೇಳೆಗೆ ಪರಿಚಿತ ಹಿರಿಯ ವೈದ್ಯರೊಬ್ಬರು ಬಂದರು. “ಏನಿಲ್ಲಿ?” ಎಂದು ಕುಶಲ ವಿಚಾರಿಸಿದರು. ನಡೆದುದ್ದನ್ನೆಲ್ಲಾ ಅವರಿಗೆ ಹೇಳಿದೆ. ಅವರು ನಕ್ಕು ಹೇಳಿದರು “ಹಲವಾರು ಹಳ್ಳಿ ಮಂದಿ ಯಾವುದೇ ಶಸ್ತ್ರಚಿಕಿತ್ಸೆಯನ್ನೂ ಸಿಜೇರಿಯನ್ ಎಂದೇ ಕರೆಯುತ್ತಾರೆ. ಅವರಿಗೆ ತಿಳಿದಿರುವ ಶಸ್ತ್ರಚಿಕಿತ್ಸೆಯ ಹೆಸರು ಅದೊಂದೇ. ಮಿದುಳಿನದ್ದಾಗಲೀ, ಹೃದಯದ್ದಾಗಲೀ, ಕಾಲಿನದ್ದಾಗಲೀ – ಶಸ್ತ್ರಚಿಕಿತ್ಸೆ ಎಂದರೆ ಅವರ ಪಾಲಿಗೆ ಅದು ಸಿಜೇರಿಯನ್. ಲ್ಯಾಪ್ರಾಟಮಿ, ವ್ಯಾಲ್ವೋಟಮಿ, ಇಂಪ್ಲ್ಯಾಂಟ್ ಮೊದಲಾದ ಕಷ್ಟಕರ ಹೆಸರುಗಳಿಗಿಂತಲೂ ಸಿಜೇರಿಯನ್ ಎನ್ನುವುದು ಅವರಿಗೆ ಸರಾಗ. ಜೊತೆಗೆ, ತಮ್ಮದಲ್ಲದ ಪದವನ್ನು ಹೇಳಲು ಅವರಿಗೆ ಬಹಳ ಹೆಮ್ಮೆ ಅನಿಸುತ್ತದೆ. ಅವರ ಜೊತೆಯಲ್ಲಿರುವವರೂ ಇಂಗ್ಲೀಷ್ ಹೆಸರು ಕೇಳಿ ಪ್ರಭಾವಿತರಾಗುತ್ತಾರೆ. ಅವರ ಮಾತಿನ ಅರ್ಥ ಶಸ್ತ್ರಚಿಕಿತ್ಸೆ ಎಂದೇ. ನೀವು ತಲೆ ಕೆಡಿಸಿಕೊಳ್ಳಬೇಡಿ” ಎಂದರು.

ನನಗೆ ಜ್ಞಾನೋದಯವಾಯಿತು! ಕೆಳಗಿಳಿದು ಹೋಗಿ ಅವರ ಬಳಿ, “ಮಾದೇಶನಿಗೆ ನಾಳೆ ಸಿಜೇರಿಯನ್ ಮಾಡುತ್ತಿದ್ದಾರೆ. ಎಲ್ಲಾ ಸರಿಹೋಗುತ್ತದೆ. ನೀವು ಚಿಂತಿಸಬೇಡಿ” ಎಂದೆ. ಅವರು ಖುಷಿಯಾಗಿ ಕೈಮುಗಿದು ನಿರ್ಗಮಿಸಿದರು. ಹೊಸ ಭಾಷೆ ಕಲಿತ ಸಂತಸದಲ್ಲಿ ನಾನೂ ಹೊರಟೆ! 

2.     ಅವಳು ಕೂಡ ನಾನೇ

ದಿನ ತುಂಬಿದ ಬಸುರಿ. ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತವಾದ ಪರಿಣಾಮ ಕಡೆಯ ಘಳಿಗೆಯಲ್ಲಿ ಆಸ್ಪತ್ರೆ ತಲುಪಿದ್ದಾರೆ. ಆಕೆಗೆ ಹೆರಿಗೆ ನೋವು. ಇನ್ನೂ ಆಸ್ಪತ್ರೆ ತಲುಪುವ ಮುನ್ನವೇ ಆಕೆಗೆ ನೋವು ತೀವ್ರವಾಗಿದೆ. ಆಕೆ ಹೆರಿಗೆ ವಾರ್ಡ್ ತಲುಪುವುದು ತಡವಾದೀತು ಎಂದು ಆಸ್ಪತ್ರೆಯ ಆಗಮನದ ಲಾಬಿಯಲ್ಲೇ ನಾಲ್ಕೂ ಬದಿಗಳಲ್ಲಿ ತೆರೆಗಳನ್ನು ಹಾಕಿ ತಾತ್ಕಾಲಿಕ ಚಿಕಿತ್ಸೆಯ ಕೋಣೆಯೊಂದರಂತೆ ವ್ಯವಸ್ಥೆ ಮಾಡಿ, ಸುತ್ತಮುತ್ತಲ ವಿಕ್ಷಿಪ್ತ ಆಸಕ್ತಿಯ ಜನರನ್ನು ಸೆಕ್ಯುರಿಟಿಯ ಸಹಾಯದಿಂದ ದೂರಮಾಡುತ್ತಾ, ಸ್ತ್ರೀ ವೈದ್ಯರನ್ನು ತುರ್ತಾಗಿ ಕರೆದು, ಹೆರಿಗೆ ಮಾಡಿಸಿದ್ದಾರೆ. ಸಹಜವಾಗಿ ಹೆರಿಗೆಯಾಗಿದೆ. ಹೆರಿಗೆಯ ನಂತರ ಆಕೆ ಕ್ಷೇಮವಾಗಿದ್ದಾರೆಯೇ ಎಂದು ಪರೀಕ್ಷೆ ಮಾಡುತ್ತಿದ್ದೆ. ಆಕೆಯೋ, ಈ ವಿಷಮ ಪರಿಸ್ಥಿತಿ ತಂದ ನಾಚಿಕೆಯನ್ನು ಸಹಿಸಲಾಗದೇ ಜೋರಾಗಿ ಅಳುತ್ತಿದ್ದಾರೆ. ಸುಮ್ಮನೆ ಇರಲೊಲ್ಲರು.

ಅವರನ್ನು ಸಮಾಧಾನ ಪಡಿಸಲು ನಾನೆಂದೆ “ಈ ರೀತಿ ಎಷ್ಟೋ ಜನಕ್ಕೆ ಆಗುತ್ತದೆ ಕಣಮ್ಮಾ. ನೀವು ಭಾಗ್ಯವಂತೆ. ಕನಿಷ್ಠ ಆಸ್ಪತ್ರೆಯ ಒಳಭಾಗದಲ್ಲಿ ಕ್ಷೇಮವಾಗಿ ಹೆರಿಗೆ ಮಾಡಿಸಿಕೊಂಡಿದ್ದೀರಿ. ಎರಡು-ಮೂರು ವರ್ಷಗಳ ಹಿಂದೆ ಒಬ್ಬರು ಬಂದಿದ್ದರು. ಅವರಿಗೆ ಆಂಬ್ಯುಲೆನ್ಸ್ ಒಳಗೇ ಹೆರಿಗೆ ನೋವು ಬಂದಿತ್ತು. ಆಸ್ಪತ್ರೆಯ ಒಳಗೂ ಬರಲಾಗಲಿಲ್ಲ. ಕಡೆಗೆ ಆಸ್ಪತ್ರೆಯ ವೈದ್ಯರು ಆಗಮನ ದ್ವಾರದ ಮುಂಭಾಗದಲ್ಲಿ ನಿಲ್ಲಿಸಿದ ಆಂಬ್ಯುಲೆನ್ಸ್ ಒಳಗೇ ಹೋಗಿ ಅವರ ಹೆರಿಗೆ ಮಾಡಿಸಿದರು. ಯಾರಿಗಾದರೂ ಅದಕ್ಕಿಂತಲೂ ಪೇಚಿನ ವಿಷಯ ಇದ್ದೀತೇ? ಅವರಿಗೆ ಲೆಕ್ಕ ಹಾಕಿದರೆ ನೀವು ಪುಣ್ಯ ಮಾಡಿದ್ದೀರಿ.”

ಆಕೆಗೆ ಸಮಾಧಾನ ಆಗುತ್ತದೆ ಎಂದು ಭಾವಿಸಿ ಹೇಳಿದ ಈ ಮಾತುಗಳನ್ನು ಕೇಳಿ ಆಕೆ ಇನ್ನೂ ಜೋರಾಗಿ ಅಳಲು ಆರಂಭಿಸಿದರು. ಆ ತಾರಕ ಗೋಳಿನ ನಡುವೆ ಅವರ ಅಸ್ಪಷ್ಟ ಮಾತುಗಳು ಕೇಳಿದವು “ಅದೂ ನಾನೇ.....”!   

3.     ಬಾಯಿಗೆ ಬೆರಳು

ವ್ಯಾಸಂಗದ ತರಬೇತಿಯ ವೇಳೆ ಮಕ್ಕಳ ವೈದ್ಯ ತಜ್ಞರೊಬ್ಬರಿದ್ದರು. ಬಹಳ ಬುದ್ಧಿವಂತರಾದರೂ ಶೀಘ್ರಕೋಪಿ, ಖಡಕ್ ಸ್ವಭಾವದವರು. ಮಕ್ಕಳ ವೈದ್ಯರಿಗೆ ವಿಪರೀತ ತಾಳ್ಮೆ ಬೇಕು. ಆದರೆ, ಇವರಿಗೆ ಅದೊಂದು ಬಿಟ್ಟು ಬೇರೆಲ್ಲವೂ ಇತ್ತು. ಅವರ ತರಗತಿಗಳಲ್ಲಿ ಕಮಕ್ ಕಿಮಕ್ ಎನ್ನುವಂತಿಲ್ಲ.

ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅವರು ಒಮ್ಮೆ ಸಣ್ಣ ಮಕ್ಕಳನ್ನು ಪರೀಕ್ಷೆ ಮಾಡುವ ವಿಧಾನವನ್ನು ನಮಗೆ ಪ್ರಾತ್ಯಕ್ಷಿಕವಾಗಿ ಕಲಿಸುತ್ತಿದ್ದರು. ಮಗು ಜೋರಾಗಿ ಅಳುತ್ತಿದ್ದರೆ ಅದರ ಹೃದಯದ ಬಡಿತ, ಶ್ವಾಸದ ಸದ್ದುಗಳನ್ನು ಕೇಳಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ, ಅಳುವನ್ನು ನಿಲ್ಲಿಸಲು ನಾನಾ ತಂತ್ರಗಾರಿಗೆ ಮಾಡಬೇಕಾಗುತ್ತದೆ. ಮಗುವಿನ ಗಮನವನ್ನು ಸೆಳೆಯುವ ಸದ್ದುಗಳು, ಚೇಷ್ಟೆಗಳು, ಮಾತುಗಳನ್ನು ಬಳಸಬೇಕಾಗುತ್ತದೆ. ಇದನ್ನೆಲ್ಲಾ ಹೇಳಿಕೊಡುತ್ತಿದ್ದ ಅವರು ಅಳುವ ಮಗುವನ್ನು ಸಮಾಧಾನಗೊಳಿಸಲು ಮಗುವಿನ ತಾಯಿಗೆ “ಬಾಯಿಗೆ ಬೆರಳು ಕೊಡಮ್ಮಾ” ಎಂದು ಹೇಳಿ ತಮ್ಮ ಸ್ಟೆಥೋಸ್ಕೋಪ್ ಕಿವಿಗೆ ಹಾಕಿಕೊಂಡು ಮಗುವಿನ ಹೃದಯದ ಬಡಿತ ಆಲಿಸಲು ಸನ್ನದ್ಧರಾದರು. ಹತ್ತಾರು ಸೆಕೆಂಡುಗಳ ನಂತರವೂ ಮಗು ಅಳುತ್ತಲೇ ಇತ್ತು. ನಾವುಗಳು ಸಣ್ಣನೆ ನಗುತ್ತಿದ್ದೆವು. ಕೋಪಗೊಂಡ ಅವರು “ಬಾಯಿಗೆ ಬೆರಳು ಕೊಡಲು ಹೇಳಿದೆನಲ್ಲಾ?” ಎಂದು ಜೋರು ಮಾಡಿ ಮಗುವಿನ ತಾಯಿಯ ಕಡೆ ನೋಡಿದರು. ಆ ಮಹಾತಾಯಿ ತನ್ನ ಬೆರಳನ್ನು ತನ್ನ ಬಾಯಲ್ಲಿ ಇಟ್ಟುಕೊಂಡು ನಿಂತಿದ್ದರು! ಆಕೆಗೆ ಹೇಳಬೇಕೆನಿಸಿದರೂ, ಆ ವೈದ್ಯರ ಕೋಪದ ಅರಿವಿದ್ದ ನಾವುಗಳು ನಮ್ಮಲ್ಲೇ ನಗುತ್ತಾ ಗಪ್-ಚುಪ್ ಆಗಿದ್ದೆವು.

ಅಸಹನೆಗೊಂಡ ನಮ್ಮ ತಜ್ಞ ವೈದ್ಯರು ಆಕೆಯನ್ನು ಆಕ್ಷೇಪಿಸುತ್ತಾ, “ನಿನ್ನ ಬಾಯಿಗಲ್ಲ; ಸರಿಯಾಗಿ ಬಾಯಿಗೆ ಬೆರಳು ಕೊಡು” ಎಂದು ಮಗುವಿನತ್ತ ತೋರಿದರು. ಆದರೆ, ಈಗಾಗಲೇ ವೈದ್ಯರ ಕೋಪದಿಂದ ದಿಗಿಲು ಬಿದ್ದಿದ್ದ ಆಕೆ ತನ್ನ ಬಾಯಿಂದ ಬೆರಳು ತೆಗೆದು ಸೀದಾ ನಮ್ಮ ವೈದ್ಯರ ಬಾಯಿಗೇ ಇಡಲು ಹೋದರು! ಈ ಏಕಾಏಕಿ ಅನಿರೀಕ್ಷಿತ ಬೆಳವಣಿಗೆಯಿಂದ ಅಪ್ರತಿಭರಾದ ತಜ್ಞ ವೈದ್ಯರು ಸೀದಾ ಹಿಂದಕ್ಕೆ ಜಿಗಿದು ಅಂತಿಮ ಕ್ಷಣದಲ್ಲಿ ತಪ್ಪಿಸಿಕೊಂಡರು! ಅಲ್ಲಿಯವರೆಗೆ ನಗುವನ್ನು ಬಿಗಿ ಹಿಡಿದಿದ್ದ ನಾವುಗಳು ಜೋರಾಗಿ ನಗುವಂತಾಯಿತು. ಗೊಂದಲಕ್ಕೆ ಬಿದ್ದ ಮಗುವಿನ ತಾಯಿ ತಾನೂ ಪೆಚ್ಚಾಗಿ ನಕ್ಕಳು. ಘಟನೆಯ ಸರಣಿ ಎಷ್ಟು ಬಲವಾಗಿತ್ತೆಂದರೆ, ಆ ಶೀಘ್ರ ಕೋಪಿ ವೈದ್ಯರೂ ಜೋರಾಗಿ ನಕ್ಕುಬಿಟ್ಟರು! ಅಂದಿನ ತರಗತಿ ಅಲ್ಲಿಗೇ ಬರಖಾಸ್ತಾಯಿತು!

4.    ಈವತ್ತೇ

ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಯ ದಾಖಲಾತಿ ವಿಭಾಗದಲ್ಲಿ ನಿಂತಿದ್ದರು. ತಮ್ಮ ಸರದಿ ಬಂದಾಗ “ಹೆರಿಗೆ ವಾರ್ಡಿನಲ್ಲಿ ಅಡ್ಮಿಟ್ ಆಗಬೇಕು” ಎಂದರು. ಆದರೆ, ತಕ್ಷಣಕ್ಕೆ ಹೆರಿಗೆ ಆಗುವ ಯಾವ ಲಕ್ಷಣಗಳೂ ಅವರಿಗೆ ಇರಲಿಲ್ಲ. ಹೆರಿಗೆ ನೋವು, ಗರ್ಭಸ್ಥ ಮಗುವಿನ ಚಲನೆ, ಇತ್ಯಾದಿ ಪ್ರಶ್ನೆಗಳನ್ನೆಲ್ಲಾ ತಾಳ್ಮೆಯಿಂದ ಕೇಳಿದ್ದಾಯಿತು. ಅಡ್ಮಿಟ್ ಮಾಡುವಂಥ ಪ್ರಮೇಯವೇನೂ ಅವರಿಗೆ ಇರಲಿಲ್ಲ. ಕಡೆಗೆ, “ನೀವು ಏತಕ್ಕಾಗಿ ಅಡ್ಮಿಟ್ ಆಗುತ್ತಿದ್ದೀರಿ?” ಎಂದಾಗ ಆಕೆ “ಡಾಕ್ಟರು ಈ ದಿನ ನನಗೆ ಹೆರಿಗೆ ಆಗುತ್ತದೆ ಎಂದು ಚೀಟಿಯಲ್ಲಿ ಬರೆದುಕೊಟ್ಟಿದ್ದಾರೆ. ಅದಕ್ಕೇ ಬಂದು ಹೆರಿಗೆ ಮಾಡಿಸಿಕೊಂಡು ಮಗು ತೆಗೆದುಕೊಂಡು ಹೋಗಲು ಬಂದಿದ್ದೇನೆ” ಎಂದರು! ಬಸುರಿಯ ಅಂತಿಮ ಋತುಸ್ರಾವ ದಿನದ ಲೆಕ್ಕಾಚಾರದಲ್ಲಿ ಹೆರಿಗೆ ಆಗಬಹುದಾದ ಒಂದು ಅಂದಾಜು ತಾರೀಖನ್ನು ವೈದ್ಯರು ನೀಡುತ್ತಾರೆ. ಆ ದಿನಾಂಕವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಆಕೆ ಆನ್ಲೈನ್ ಡೆಲಿವರಿ ಮಾದರಿಯಲ್ಲಿ ನಿಖರವಾಗಿ ಅದೇ ದಿನ ಹೆರಿಗೆ ಮಾಡಿಸುತ್ತಾರೆ ಎಂದು ನಂಬಿದ್ದರು. ಕಡೆಗೆ ಸಮಾಧಾನಪಡಿಸಿ ಅವರನ್ನು ಕಳಿಸಿದ್ದಾಯಿತು. ನಾಲ್ಕು ದಿನಗಳ ನಂತರ ಅವರಿಗೆ ಪ್ರಸವವಾಯಿತು. ಹೆರಿಗೆಗೆ ತಪ್ಪು ತಾರೀಖು ಕೊಟ್ಟರೆಂದು ವೈದ್ಯರ ಮೇಲೆ ಅವರು ಆಸ್ಪತ್ರೆಯಲ್ಲಿ ಎಲ್ಲರಿಗೂ ಶಿಕಾಯತು ಮಾಡಿದರು!

--------------------------

ಮೂಲ ಲೇಖನ ಇರುವ ಕುತೂಹಲಿ ಏಪ್ರಿಲ್ 2022 ಸಂಚಿಕೆಯ ಕೊಂಡಿ: https://bit.ly/3NBw9eh


 

ಆನಂದದ ಮೂಲವೇನು? ವೈಜ್ಞಾನಿಕ ಜಿಜ್ಞಾಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

“ಸದಾ ಸಂತಸದಿಂದ ಇರುವಂತಾಗಲಿ” ಎಂದು ಹಿರಿಯರು ಹರಸುತ್ತಾರೆ. ಆನಂದ ಎಂದರೇನು? ಅದು ಹೇಗೆ ಸಿಗುತ್ತದೆ? ಎಂಬುದು ಮಾತ್ರ ಮಹಾಭಾರತದ ಯಕ್ಷಪ್ರಶ್ನೆಗಳಿಗಿಂತಲೂ ಕಠಿಣ. ಸಂತೋಷವನ್ನು ಅವ್ಯಕ್ತ ರೂಪದಲ್ಲಿ ಮಾತ್ರ ವಿವರಿಸಬಹುದು ಎಂದು ದಾರ್ಶನಿಕರು ಹೇಳಿಯಾರು. ಆದರೆ, ಈ ಸಂಕೀರ್ಣ ವಿವರಣೆ ಸಾಮಾನ್ಯ ಜನರ ಉತ್ಸುಕತೆಯನ್ನು ತಣಿಸಲಾರದು. ವಿಜ್ಞಾನ ಈ ನಿಟ್ಟಿನಲ್ಲಿ ಏನನ್ನು ಹೇಳುತ್ತದೆ?

ಪ್ರಪಂಚದ ಅತ್ಯಂತ ದೀರ್ಘಾವಧಿ ಅಧ್ಯಯನಗಳಲ್ಲಿ ಒಂದಾದ ಹಾವರ್ಡ್ ವಿಶ್ವವಿದ್ಯಾಲಯದ “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಈ ಸಂಗತಿಯನ್ನು ಪರಿಷ್ಕರಿಸಿದೆ. 1938 ರಲ್ಲಿ ಆರಂಭವಾಗಿ, ಈಗ ಎರಡನೆಯ ಹಂತಕ್ಕೆ ದಾಪುಗಾಲಿಟ್ಟಿರುವ ಈ ಅಧ್ಯಯನದ ಉತ್ತರ ಏನೆಂದು ತಿಳಿಯುವ ಮುನ್ನ, ಅದರ ಸ್ವರೂಪ, ರೂಪು-ರೇಷೆಗಳನ್ನು ತಿಳಿಯಬೇಕು.

1938ನೆಯ ಇಸವಿಯಲ್ಲಿ ಜಗತ್ತು ದ್ವಿತೀಯ ಮಹಾಯುದ್ಧದ ಹೊಸಿಲಿನಲ್ಲಿದ್ದಾಗ ಆರ್ಲಿ ಬೊಕ್ ಎಂಬ ವೈದ್ಯರೊಬ್ಬರು “ವೈದ್ಯಕೀಯ ಅಧ್ಯಯನ ಎಂದರೆ ಸದಾ ರೋಗಗಳದ್ದೇ ಏಕಾಗಬೇಕು? ಸಾಮಾನ್ಯ ಜನರ, ಜೀವನದಲ್ಲಿ ಸಾಫಲ್ಯ ಗಳಿಸಿದ ಯಶಸ್ವಿ ಮಂದಿಯ ಬಗ್ಗೆ ಏಕೆ ಮಾಡಬಾರದು?” ಎಂದು ಚಿಂತಿಸಿದರು. ಇದಕ್ಕೆ ಇಂಬು ನೀಡಿದ್ದು ಆ ಕಾಲದ ಸೂಪರ್ ಮಾರ್ಕೆಟ್ ಸರಣಿಗಳ ಮಾಲೀಕರಾಗಿದ್ದ ಗ್ರಾಂಟ್ ಅವರು. ಅವರು ನೀಡಿದ ದೇಣಿಗೆಯಿಂದ “ಒಳ್ಳೆಯ ಜೀವನ ಎಂದರೇನು? ಸಾಫಲ್ಯದ ಮಾನದಂಡ ಯಾವುದು?” ಎನ್ನುವ ಬಗ್ಗೆ ಈ ಅಧ್ಯಯನ ಆರಂಭವಾಯಿತು.

1939-44 ರ ಅವಧಿಯಲ್ಲಿ ಅಮೆರಿಕೆಯ ಹಾವರ್ಡ್ ವಿಶ್ವವಿದ್ಯಾಲಯದ ಎರಡನೆಯ ವರ್ಷದಲ್ಲಿ ಓದುತ್ತಿದ್ದ 248 ವಿದ್ಯಾರ್ಥಿಗಳನ್ನು ಅಧ್ಯಯನ ಪರಿಗಣಿಸಿತು. ಆಗಿನ್ನೂ ಸ್ತ್ರೀಯರಿಗೆ ವಿಶ್ವವಿದ್ಯಾಲಯದ ವ್ಯಾಸಂಗಕ್ಕೆ ಅನುಮತಿ ಇರಲಿಲ್ಲ! ಹೀಗಾಗಿ, ಈ ಅಧ್ಯಯನದಲ್ಲಿ ಕೇವಲ ಪುರುಷರೇ ಇದ್ದರು. ಇದಕ್ಕೆ ಸಂವಾದಿಯಾಗಿ ಶೆಲ್ಡನ್ ಗ್ಲುಎಕ್ ಎಂಬ ಪೋಲೆಂಡ್ ಸಂಜಾತ ಅಮೆರಿಕನ್ ಅಪರಾಧ ತಜ್ಞ 1940 ರಿಂದ ಹತ್ತು ವರ್ಷಗಳ ಕಾಲ ಬೊಸ್ಟನ್ ನಗರದ ಆಸುಪಾಸಿನಲ್ಲಿದ್ದ 456 ಮಂದಿ ಅವಿದ್ಯಾವಂತ ಬಡಯುವಕರನ್ನು ಅಧ್ಯಯನ ನಡೆಸಿದರು. ಇವೆರಡನ್ನೂ ವಿಶ್ವವಿದ್ಯಾಲಯವೇ ಮುಂದುವರೆಸಿ, “ಗ್ರಾಂಟ್-ಗ್ಲುಎಕ್ ಅಧ್ಯಯನ” ಎಂಬ ಹೆಸರನ್ನು ನೀಡಿತು. ಮುಂದೆ ಇದು “ವಯಸ್ಕರ ಅಭಿವೃದ್ಧಿಯ ಅಧ್ಯಯನ” ಎನ್ನುವ ಅಧಿಕೃತ ಹೆಸರನ್ನು ಪಡೆಯಿತು.

ಈ ಅಧ್ಯಯನದಲ್ಲಿ ನೊಂದಾಯಿಸಿಕೊಂಡವರನ್ನು ಕನಿಷ್ಠ ಎರಡು ವರ್ಷಕ್ಕೆ ಒಮ್ಮೆಯಾದರೂ ನಿಶ್ಚಿತ ಪ್ರಶ್ನಾವಳಿಯ ಮೂಲಕ ಸಂದರ್ಶಿಸಲಾಗುತ್ತಿತ್ತು. ಕೆಲವೊಮ್ಮೆ ಇದರಲ್ಲಿ ಭಾಗವಹಿಸಿದವರ ವೈದ್ಯರಿಂದ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಹಲವರನ್ನು ಅವರು ಇರುವಲ್ಲಿಗೇ ಹೋಗಿ ಭೇಟಿ ಮಾಡಿ, ಪ್ರಶ್ನೋತ್ತರ ನಡೆಸುತ್ತಿದ್ದರು. ಅಧ್ಯಯನದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರ ದೈಹಿಕ ಮತ್ತು ಮಾನಸಿಕ ಆರೋಗ್ಯ; ಅವರ ವೃತ್ತಿಯ ಬಗ್ಗೆ ಅಭಿಪ್ರಾಯಗಳು; ನಿವೃತ್ತಿಯ ನಂತರದ ಅನುಭವಗಳು; ಮದುವೆ ಮತ್ತು ಸಂಗಾತಿಯ ಬಗ್ಗೆ ಅಭಿಮತಇಂತಹ ಮಾಹಿತಿಗಳನ್ನು ಪಡೆಯುತ್ತಿದ್ದರು. ಅಧ್ಯಯನದ ಮೂಲ ಉದ್ದೇಶ “ಜೀವನವನ್ನು ಒಳಿತಾಗಿಸಲು ಬೇಕಾದದ್ದೇನು?” ಎಂಬ ಪ್ರಶ್ನೆಗೆ ಉತ್ತರ.

ಇದು ಅತ್ಯಂತ ಸರಳ ಪ್ರಶ್ನೆಯಾದರೂ, ಉತ್ತರಗಳು ಮಾತ್ರ ಸಂಕೀರ್ಣ. ವ್ಯಾಸಂಗ ಮುಗಿಸಿದ ನಂತರ ಯುದ್ಧ, ಮದುವೆ, ಮಕ್ಕಳು, ವೃತ್ತಿ, ಕೌಟುಂಬಿಕ ಜವಾಬ್ದಾರಿಗಳು, ಜೀವನದ ಸಮಸ್ಯೆಗಳು, ಆರೋಗ್ಯ, ವೃದ್ಧಾಪ್ಯ – ಹೀಗೆ ಹಲವಾರು ಹಂತಗಳನ್ನು ದಾಟಿ, ಮಾಗಿರುವವರ ಅನುಭವಗಳ ಸಾರವನ್ನು ಉತ್ತರಗಳನ್ನಾಗಿ ಪಡೆದು, ಅಧ್ಯಯನ ಮಾಡಲಾಯಿತು. ವಿದ್ಯಾರ್ಥಿ ದೆಸೆಯಲ್ಲಿ ಈ ಅಧ್ಯಯನದಲ್ಲಿ ಭಾಗಿಯಾದವರಲ್ಲಿ ನಾಲ್ವರು ಶಾಸಕರಾದರು; ಒಬ್ಬರು ಪ್ರಸಿದ್ಧ ಲೇಖಕರಾದರು; ಒಬ್ಬರು ಅಮೆರಿಕೆಯ ಅಧ್ಯಕ್ಷರಾದರು! ಇಡೀ ಅಧ್ಯಯನದ ಒಟ್ಟಾರೆ ಅನುಭವಗಳು ಅತ್ಯಂತ ವೈವಿಧ್ಯಮಯವಾಗಿದ್ದವು. ಅಧ್ಯಯನದ ಫಲಶ್ರುತಿ ಹೀಗಿತ್ತು:

1. ಜೀವನ ನಿಂತ ನೀರಲ್ಲ; ಅದು ಹರಿಯುವ ಹೊಳೆ. ನಮ್ಮ ನಿರ್ಧಾರಗಳು ಇಂದಿನ ಪರಿಸ್ಥಿತಿಗೆ ಸೀಮಿತವಾಗಬಾರದು. ಮುಂದಾಲೋಚನೆಯಿಂದ ಕೈಗೊಂಡ ನಿರ್ಧಾರಗಳು ನಮ್ಮ ನಾಳೆಗಳನ್ನು ಕಾಯ್ದು; ನಮ್ಮ ವರ್ತಮಾನವನ್ನು ಸುಖಿಯಾಗಿಸುತ್ತವೆ.

2. ಮದ್ಯಪಾನಕ್ಕೆ ತೀವ್ರವಾದ ನಾಶಕ ಶಕ್ತಿಯಿದೆ. ಕುಟುಂಬ ಒಡೆಯುವುದು, ಮಾನಸಿಕ ಖಿನ್ನತೆ, ಹತಾಶೆ, ಅನಾರೋಗ್ಯಗಳು ಮದ್ಯಪಾನಿಗಳಲ್ಲಿ ಹೆಚ್ಚು. ಇದರೊಂದಿಗೆ ಧೂಮಪಾನವೂ ಸೇರಿದರೆ, ಅದು ಆರೋಗ್ಯದ ಮೇಲೆ ಅತೀವ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ.

3. ದೀರ್ಘಕಾಲಿಕ ಅವಧಿಯಲ್ಲಿ ಹೆಚ್ಚು ಆದಾಯ ಮತ್ತು ವೃತ್ತಿ ಸಾಫಲ್ಯವನ್ನು ತಂದುಕೊಡುವುದು ವಿದ್ಯೆಯಾಗಲೀ, ಬುದ್ಧಿಯಾಗಲೀ, ಜಾಣತನವಾಗಲಿ ಅಲ್ಲ – ಬದಲಿಗೆ ನಾವು ನಮ್ಮ ವೃತ್ತಿನಿರತ ಸಂಬಂಧಗಳನ್ನು ಎಷ್ಟು ಪ್ರಾಮಾಣಿಕವಾಗಿ ನಿರ್ವಹಿಸುತ್ತೇವೆ ಎಂಬುದು. ವೃತ್ತಿ ಆರಂಭಿಸಿದ ಕಾಲದಲ್ಲಿ ಜಾಣತನ ಕೆಲಸ ಮಾಡಬಹುದು. ಆದರೆ, ಅದು ಒಂದು ಹಂತಕ್ಕಿಂತ ಮುಂದುವರೆಯಲಾರದು.

4. ಚಿಕ್ಕಂದಿನಲ್ಲಿ ಕುಟುಂಬದ ಸದಸ್ಯರ ಜೊತೆಯಲ್ಲಿ ಪ್ರೀತಿ-ವಾತ್ಸಲ್ಯಗಳ ನಡುವೆ ಬೆಳೆದ ಮಕ್ಕಳು ದೊಡ್ಡವರಾದ ನಂತರ ತಾವು ಮಾಡುವ ಯಾವುದೇ ಕೆಲಸದಲ್ಲೂ ಹೆಚ್ಚು ಸಫಲರಾಗುತ್ತಾರೆ. ಇದರಿಂದ ವಂಚಿತರಾದವರಲ್ಲಿ ವಯಸ್ಸಾದ ನಂತರ ಮರೆವಿನ ಕಾಯಿಲೆ ಕಾಣುವ ಸಾಧ್ಯತೆ ಹೆಚ್ಚು.

5.  ಜೀವನದ ಕಷ್ಟಗಳಿಗೆ ಮನಸ್ಸನ್ನು ಒಗ್ಗಿಸಿಕೊಂಡು, ತಮ್ಮ ಮಾನಸಿಕ ಆರೋಗ್ಯವನ್ನು ಸ್ಥಿಮಿತದಲ್ಲಿರಿಸಿ, ಸಂಕಟಗಳಿಂದ ಹೊರಬರುವ ಮನಸ್ಥಿತಿ ಬೆಳೆಸಿಕೊಂಡವರು ವೃದ್ಧಾಪ್ಯದಲ್ಲಿ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ತಮ್ಮ ಕಷ್ಟಗಳಿಗೆ ಇತರರನ್ನು ಹೊಣೆ ಮಾಡುವವರು, ಕಷ್ಟಗಳು ಬಂದಾಗ ಸದಾ ಇತರರ ಆಸರೆ ಬಯಸುವವರು ವಯಸ್ಸಾದ ನಂತರ ಹೆಚ್ಚು ಕಾಯಿಲೆಗಳಿಗೆ ಈಡಾಗುವ ಸಾಧ್ಯತೆಗಳು ಅಧಿಕ.

6. ಸಂತಸದ ಮೂಲ ಸ್ರೋತ ನಾವು ಜೀವನದಲ್ಲಿ ಸಂಬಂಧಗಳನ್ನು ಸಲಹುವ ರೀತಿ. ತಮ್ಮವರೊಡನೆ ಆತ್ಮೀಯ ಸಂಬಂಧ ಹೊಂದುವುದು ಜೀವನದಲ್ಲಿ ದೀರ್ಘಕಾಲಿಕ ಆನಂದ ಹೊಂದುವ ಪ್ರಮುಖ ವಿಧಾನ. ಸಾಮಾಜಿಕ ಸ್ತರ, ಸಂಪತ್ತು, ಕೀರ್ತಿ, ಜಾಣ್ಮೆ, ಜೀನ್ಗಳ ಪ್ರಭಾವಗಳಿಗಿಂತಲೂ ಸಂಬಂಧಗಳ ಮಹತ್ವ ಹೆಚ್ಚೆಂದು ಈ ಅಧ್ಯಯನ ನಿರೂಪಿಸಿದೆ. ಒಂಟಿತನ, ಜಗಳಗಂಟ ಸ್ವಭಾವಗಳು ವೃದ್ಧಾಪ್ಯದಲ್ಲಿ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತವೆ.

ಈ ಅಧ್ಯಯನದ ಮುಂದಿನ ಭಾಗ ಈಗ ಚಾಲ್ತಿಯಲ್ಲಿದೆ. ಹಿಂದಿನ ಅಧ್ಯಯನದಲ್ಲಿದ್ದವರ ಮಕ್ಕಳು ಈ ಎರಡನೆಯ ಅಧ್ಯಯನದಲ್ಲಿ ಭಾಗಿಯಾಗುತ್ತಿದ್ದಾರೆ. ಈಗಾಗಲೇ 1300 ಕ್ಕಿಂತಲೂ ಹೆಚ್ಚು ಮಂದಿ ಇದಕ್ಕೆ ನೊಂದಾಯಿಸಿಕೊಂಡಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ಕಠೋಪನಿಷತ್ತಿನಲ್ಲಿ ಶಾಂತಿ ಮಂತ್ರವನ್ನು ಹೀಗೆ ಬೋಧಿಸಿದರು: ಓಂ ಹ ನಾ'ವವತು ಹ ನೌ' ಭುನಕ್ತು  ವೀರ್ಯಂ' ಕರವಾವಹೈ ತೇಜಸ್ವಿನಾವಧೀ'ತಮಸ್ತು ಮಾ ವಿ'ದ್ವಿಷಾವಹೈ'' ||

ಇದನ್ನೇ ಜಗತ್ತಿನ ಅತ್ಯಂತ ದೀರ್ಘಕಾಲಿಕ ವೈಜ್ಞಾನಿಕ ಅಧ್ಯಯನವೊಂದು ಮತ್ತೊಮ್ಮೆ ಹೇಳುತ್ತಿದೆ.

------------------------

ಏಪ್ರಿಲ್ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ 

 

ಮಕ್ಕಳಲ್ಲಿ ಹೃದ್ರೋಗ – ಆತಂಕ ಬೇಕಿಲ್ಲ

ಡಾ. ಕಿರಣ್ ವಿ.ಎಸ್.

ವೈದ್ಯರು

ಒಂದೂವರೆ ತಿಂಗಳ ಕುಶಾಲ ಮನೆಯೆಲ್ಲರ ಕಣ್ಣ ಬಿಂದು. ಸಹಜ ಹೆರಿಗೆಯಿಂದ ಸುಖಪ್ರಸವವಾಗಿ, ಆರೋಗ್ಯವಾಗಿ ಜನಿಸಿದ ಚಟುವಟಿಕೆಯ ಕೂಸು. ಒಂದೂವರೆ ತಿಂಗಳ ಲಸಿಕೆ ಕೊಡಿಸಲು ಹೋದಾಗ ಮಕ್ಕಳ ವೈದ್ಯರು ಪರೀಕ್ಷೆ ಮಾಡಿ “ಮಗುವಿನ ಹೃದಯದಲ್ಲಿ ಮರ್ಮರ್ ಸದ್ದು ಕೇಳುತ್ತಿದೆ. ಅವನಿಗೆ ಹೃದಯ ಪರೀಕ್ಷೆ ಮಾಡಬೇಕು” ಎಂದು ಹೇಳಿ, ದೊಡ್ಡಾಸ್ಪತ್ರೆಗೆ ಬರೆದುಕೊಟ್ಟಿದ್ದಾರೆ. ಅವನ ತಾಯಿ ದೇವಕಿಗೆ ಅಂದಿನಿಂದ ಒಂದೇ ಅಳು. ಮನೆಮಂದಿಯೆಲ್ಲಾ ದಿಗಿಲು ಬಿದ್ದಿದ್ದಾರೆ.

“ಹೃದ್ರೋಗ ಮಕ್ಕಳಿಗೂ ಬರುವುದುಂಟೇ?” ಎಂದು ಕೆಲವರಿಗೆ ಅಚ್ಚರಿ ಆಗಬಹುದು. ಮಕ್ಕಳಲ್ಲಿ ಕಾಣುವ ಹೃದಯದ ಸಮಸ್ಯೆಗಳು ಹಿರಿಯರ ಹೃದ್ರೋಗಗಳಿಗಿಂತ ಸಂಪೂರ್ಣ ಭಿನ್ನ. ವಯಸ್ಸಾದವರಲ್ಲಿ ಬಹುಮಟ್ಟಿಗೆ ಕಾಣುವುದು ಹೃದಯಕ್ಕೆ ರಕ್ತ ಪೂರೈಸುವ ಧಮನಿಗಳ ಅಡೆತಡೆ. ಆದರೆ, ಹೃದಯದ ರಚನೆಯಲ್ಲಿ ಆಗುವ ಜನ್ಮಜಾತ ದೋಷಗಳು ಎಳೆಯ ವಯಸ್ಸಿನಲ್ಲೇ ಗೋಚರವಾಗುತ್ತವೆ. ಹೃದಯ ಸರಳವಾದರೂ ಸಂಕೀರ್ಣ ಅಂಗ. ಶರೀರದ ಅಶುದ್ಧ ರಕ್ತ ಅಪಧಮನಿಗಳ ಮೂಲಕ ಹೃದಯದ ಬಲಭಾಗವನ್ನು ಸೇರಿ, ಅಲ್ಲಿಂದ ಶ್ವಾಸಕೋಶಗಳನ್ನು ತಲುಪುತ್ತದೆ. ಅಲ್ಲಿ ಉಸಿರಾಟದ ಆಕ್ಸಿಜನ್ ಬೆರೆತು ರಕ್ತ ಶುದ್ಧವಾಗುತ್ತದೆ. ಈ ಆಕ್ಸಿಜನ್-ಯುಕ್ತ ಶುದ್ಧ ರಕ್ತ ಹೃದಯದ ಎಡಭಾಗವನ್ನು ಸೇರಿ, ಅಭಿಧಮನಿಗಳ ಮೂಲಕ ಇಡೀ ಶರೀರಕ್ಕೆ ಸರಬರಾಜಾಗುತ್ತದೆ. ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸಲು ಹೃದಯದ ಎಡ ಮತ್ತು ಬಲಭಾಗಗಳ ನಡುವೆ ಎರಡು ಗೋಡೆಗಳು ಇರುತ್ತವೆ. ರಕ್ತದ ಏಕಮುಖ ಸಂಚಾರವನ್ನು ನಿಯಂತ್ರಿಸಲು ಹೃದಯದಲ್ಲಿ ಸ್ವಯಂಚಾಲಿತ ಬಾಗಿಲಿನಂತಹ, ನಿಶ್ಚಿತ ಸಮಯಕ್ಕೆ ಸರಿಯಾಗಿ ತೆರೆದು, ಮುಚ್ಚಿಕೊಳ್ಳುವ ನಾಲ್ಕು ಕವಾಟಗಳು ಇರುತ್ತವೆ. ಶ್ವಾಸಕೋಶಗಳಿಗೆ ಮತ್ತು ಶರೀರಕ್ಕೆ ರಕ್ತ ಒಯ್ಯುವ ಸಲುವಾಗಿ ಬೇರೆಬೇರೆ ಧಮನಿಗಳು ಇರುತ್ತವೆ. ಹೀಗೆ, ಒಂದೇ ಹೃದಯದಲ್ಲಿ ಇದ್ದರೂ, ಅಶುದ್ಧ ಮತ್ತು ಶುದ್ಧ ರಕ್ತಗಳು ಪರಸ್ಪರ ಸಂಪರ್ಕಕ್ಕೆ ಬಾರದಂತೆ ವ್ಯವಸ್ಥೆ ಇರುತ್ತದೆ.

ಅಶುದ್ಧ ಮತ್ತು ಶುದ್ಧ ರಕ್ತಗಳನ್ನು ಪ್ರತ್ಯೇಕಿಸುವ ಗೋಡೆಗಳಲ್ಲಿ ರಂಧ್ರವಿದ್ದರೆ ಅವು ಒಂದರ ಜೊತೆಗೊಂದು ಬೆರೆಯುತ್ತವೆ. ಈ ರೀತಿಯ ರಂಧ್ರಗಳು ಹುಟ್ಟಿನಿಂದಲೇ ಬರುವುದರಿಂದ, ಎಳೆಯ ವಯಸ್ಸಿನಲ್ಲೇ ಪತ್ತೆಯಾಗುತ್ತವೆ. ಹೃದಯದ ನಾಲ್ಕು ಕವಾಟಗಳ ಪೈಕಿ ಯಾವುದೋ ಒಂದು ಕವಾಟದ ರಚನೆಯಲ್ಲಿ ದೋಷವಿದ್ದರೆ, ಅದು ಸರಿಯಾಗಿ ಮುಚ್ಚದೆಯೋ, ತೆರೆಯದೆಯೋ ಇರಬಹುದು. ಆಗಲೂ ರಕ್ತ ಸಂಚಾರದಲ್ಲಿ ತಡೆಯಾಗುತ್ತದೆ. ರಕ್ತ ಒಯ್ಯುವ ರಕ್ತನಾಳಗಳಲ್ಲಿ ಏನಾದರೂ ಸಮಸ್ಯೆ ಇದ್ದರೂ, ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ರಕ್ತ ಪೂರೈಕೆಯ ಸಂಪೂರ್ಣ ಜವಾಬ್ದಾರಿ ಹೃದಯದ್ದೇ ಆದ್ದರಿಂದ, ಇಡೀ ರಕ್ತ ಸಂಚಾರ ವ್ಯವಸ್ಥೆಯಲ್ಲಿ ಎಲ್ಲೇ ತೊಂದರೆಯಾದರೂ, ಅದರ ಪ್ರತ್ಯಕ್ಷ ಯಾ ಪರೋಕ್ಷ ಪರಿಣಾಮ ಹೃದಯದ ಮೇಲೆಯೇ ಆಗುತ್ತದೆ.

ಹೃದಯದ ಸಮಸ್ಯೆ ಸಣ್ಣ ಮಟ್ಟದಲ್ಲಿದ್ದರೆ ಶರೀರಕ್ಕೆ ಯಾವುದೇ ಹಾನಿಯಾಗದೇ ಇರಬಹುದು. ಅಂತಹ ಮಕ್ಕಳು ಇತರ ಮಕ್ಕಳಂತೆ ಆರಾಮವಾಗಿ, ಚಟುವಟಿಕೆಯಿಂದಲೇ ಇರುತ್ತಾರೆ. ಬೇರೆ ಯಾವುದೋ ಕಾರಣಕ್ಕೆ ವೈದ್ಯರ ಬಳಿ ಒಯ್ದಾಗ, ಅಂತಹ ಮಕ್ಕಳ ಹೃದಯವನ್ನು ಪರೀಕ್ಷಿಸುವ ವೈದ್ಯರಿಗೆ ವಿಭಿನ್ನ ಸದ್ದು ಕೇಳುತ್ತದೆ. ಹೃದಯದ ರಂಧ್ರ ಯಾ ದೋಷಪೂರ್ಣ ಕವಾಟದ ಮೂಲಕ ಹರಿಯುವ ರಕ್ತ ಮರ್ಮರ್ ಸದ್ದನ್ನೋ, ಅಥವಾ ಕ್ಲಿಕ್ ಸದ್ದನ್ನೋ ಮಾಡುತ್ತದೆ. ಅನುಭವಿ ವೈದ್ಯರು ಇಂತಹ ಸದ್ದನ್ನು ಖಚಿತವಾಗಿ ಗ್ರಹಿಸಬಲ್ಲರು. ಆದರೆ, ಪ್ರತಿಯೊಂದು ವಿಭಿನ್ನ ಸದ್ದಿಗೂ ಹೃದಯದ ಆಂತರಿಕ ದೋಷವೇ ಕಾರಣ ಎನ್ನಲಾಗದು. ಕೆಲವೊಮ್ಮೆ ಸಾಮಾನ್ಯ ಮಕ್ಕಳಲ್ಲೂ ಮರ್ಮರ್ ಸದ್ದು ಕೇಳಿಸುತ್ತದೆ. ಹೀಗಾಗಿ, ಹೃದಯದ ಸದ್ದು ವಿಭಿನ್ನವಾಗಿದ್ದರೆ, ವೈದ್ಯರು ಮಕ್ಕಳ ಹೃದಯದ ತಪಾಸಣೆ ಮಾಡಿಸುತ್ತಾರೆ.

ಹೃದಯದ ಜನ್ಮಜಾತ ಸಮಸ್ಯೆ ತೀವ್ರವಾಗಿದ್ದರೆ, ಅಂತಹ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ, ಚರ್ಮ ಮತ್ತು ಲೋಳೆಪದರ ನೀಲಿಗಟ್ಟುವುದು, ಪದೇಪದೇ ಕಾಯಿಲೆ ಬೀಳುವುದು, ತೂಕ ಸರಿಯಾಗಿ ಏರದಿರುವುದು, ಹಾಲೂಡಿಸುವಾಗ ಮಗು ವಿಪರೀತ ಬೆವರುವುದು, ಬಿಟ್ಟು-ಬಿಟ್ಟು ಹಾಲು ಕುಡಿಯುವುದು, ಸರಿಯಾಗಿ ನಿದ್ರಿಸದಿರುವುದು ಮೊದಲಾದ ಗಂಭೀರ ಸಮಸ್ಯೆಗಳು ಕಾಣುತ್ತವೆ. ಶಿಶುವೈದ್ಯ ತಜ್ಞರ ಸಲಹೆ ಪಡೆದು, ಇಂತಹ ಮಕ್ಕಳನ್ನು ಸಾಧ್ಯವಾದಷ್ಟೂ ಬೇಗ ಮಕ್ಕಳ ಹೃದ್ರೋಗ ತಜ್ಞರಿಗೆ ತೋರಿಸಬೇಕು.

ಮಕ್ಕಳ ಜನ್ಮಜಾತ ಹೃದ್ರೊಗ ಸಮಸ್ಯೆಗಳು ಹಲವಾರು ಬಗೆಯವು. ಸರಳವಾದ ಸಣ್ಣ ರಂಧ್ರದಿಂದ ಹಿಡಿದು, ರಕ್ತನಾಳಗಳ ಅದಲಿ-ಬದಲಿ, ಹೃದಯದ ಒಂದು ಕೋಣೆಯೇ ಬೆಳವಣಿಗೆ ಆಗದಿರುವುದು, ಕವಾಟಗಳ ಅನುಪಸ್ಥಿತಿಯಂತಹ ಸಂಕೀರ್ಣ ಸಮಸ್ಯೆಗಳು ಇರುತ್ತವೆ. ಪ್ರತಿಯೊಂದಕ್ಕೂ ಚಿಕಿತ್ಸೆ ಭಿನ್ನವಾಗಿರುತ್ತದೆ. “ಒಂದು ಶಿಶುವಿನ ಹೃದಯದಂತೆ ಮತ್ತೊಂದು ಇರುವುದಿಲ್ಲ” ಎಂದು ಮಕ್ಕಳ ಹೃದ್ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.

ಪ್ರಸ್ತುತ ವೈದ್ಯಕೀಯ ವಿಜ್ಞಾನ ಬಹಳ ಪ್ರಗತಿ ಸಾಧಿಸಿದೆ. ಜನ್ಮಜಾತ ಹೃದ್ರೋಗ ಸಮಸ್ಯೆಗಳಿಗೆ ಈಗ ನಿರ್ದಿಷ್ಟ ಚಿಕಿತ್ಸೆಗಳಿವೆ. ಗರ್ಭಸ್ಥ ಭ್ರೂಣದ ಹಂತದಲ್ಲಿಯೇ ಹೃದ್ರೋಗವನ್ನು ನಿರ್ದಿಷ್ಟವಾಗಿ ಪತ್ತೆ ಮಾಡಬಲ್ಲ ತಂತ್ರಜ್ಞಾನವಿದೆ. ಸರಿಯಾದ ವೇಳೆಗೆ ವೈದ್ಯಕೀಯ ನೆರವು ಪಡೆದರೆ ಯಾವುದೇ ಜನ್ಮಜಾತ ಹೃದ್ರೋಗವನ್ನಾದರೂ ಸುಧಾರಿಸಬಲ್ಲ ಚಿಕಿತ್ಸೆಗಳಿವೆ. ಈಗಷ್ಟೇ ಜನಿಸಿದ ಮಗುವಿನ ಹೃದಯಕ್ಕೂ ಶಸ್ತ್ರಚಿಕಿತ್ಸೆ ಮಾಡಿ, ಸಮಸ್ಯೆಯನ್ನು ನಿಗ್ರಹಿಸಬಲ್ಲ ತೀವ್ರ ನಿಗಾ ಘಟಕಗಳಿವೆ. ಈ ನಿಟ್ಟಿನಲ್ಲಿ ಜಗತ್ತಿನ ಯಾವುದೇ ಮುಂದುವರೆದ ದೇಶಕ್ಕೆ ಸಮನಾಗಿ ನಿಲ್ಲುವಷ್ಟು ತಾಂತ್ರಿಕತೆ ಭಾರತದಲ್ಲೇ, ಅದೂ ಬೆಂಗಳೂರಿನ ಆಸ್ಪತ್ರೆಗಳಲ್ಲಿಯೇ ಲಭ್ಯವಿದೆ. ದೇಶ-ವಿದೇಶಗಳ ಶಿಶುಗಳು ಈಗ ಹೃದಯ ಚಿಕಿತ್ಸೆಗಾಗಿ ಬೆಂಗಳೂರನ್ನು ಎಡತಾಕುತ್ತಿದ್ದಾರೆ. ಮಕ್ಕಳ ಹೃದ್ರೋಗ ಈಗ ಪೋಷಕರಿಗೆ ಆತಂಕದ ವಿಷಯವಾಗಬೇಕಿಲ್ಲ.

----------------------

22 ಮಾರ್ಚ್ 2022 ಪ್ರಜಾವಾಣಿ ದಿನಪತ್ರಿಕೆಯ "ಕ್ಷೇಮ-ಕುಶಲ" ವಿಭಾಗದಲ್ಲಿ ಪ್ರಕಟವಾದ ಲೇಖನ 

ಕೊಂಡಿ: https://www.prajavani.net/health/children-heart-matter-health-care-921360.html 

 


ಮಕ್ಕಳಲ್ಲಿ ಮಧುಮೇಹ - ಪೋಷಕರು ಏನು ಮಾಡಬೇಕು? 

ಡಾ. ಪವಿತ್ರಾ ನಾಗರಾಜ್ 

ಮಕ್ಕಳ ಮಧುಮೇಹ ತಜ್ಞರು 


ಹರೀಶನಿಗೆ ಈಗ ಹದಿನೈದು ವರ್ಷ ವಯಸ್ಸು. ಈಚೀಚೆಗೆ ಅವನ ಕತ್ತಿನ ಹಿಂಬಾಗ ಕಪ್ಪಾಗುತ್ತಿದೆ. ಸ್ವಲ್ಪ ದೂರ ನಡೆದರೆ ಏದುಸಿರು, ಆಯಾಸ, ಮತ್ತು ಎದೆ ಬಡಿತದ ಅನುಭವವಾಗುತ್ತದೆ. “ಈಗೀಗ ಬಹಳ ಸಾರಿ ಟಾಯ್ಲೆಟ್ ಮಾಡುತ್ತಾನೆ. ರಾತ್ರಿಯಲ್ಲೂ ನಿದ್ರೆಯಿಂದ ಎದ್ದು, ಮೂತ್ರ ವಿಸರ್ಜನೆ ಮಾಡಿ, ನೀರು ಕುಡಿಯುತ್ತಾನೆ. ರಾತ್ರಿ ತುಂಬಿ ಇಟ್ಟಿದ್ದ ಇಡೀ ಬಾಟಲಿ ನೀರನ್ನು ಬೆಳಗ್ಗಿನ ವೇಳೆಗೆ ಕುಡಿದಿರುತ್ತಾನೆ” ಎಂದು ಅವನ ತಾಯಿಯ ಅಳಲು. 

ಹರೀಶ ಧಡೂತಿ ಹುಡುಗ. ಅವನ ತೂಕ ಬರೋಬ್ಬರಿ 97 ಕೆ.ಜಿ. ಐದು ಅಡಿ ಆರು ಇಂಚು ಎತ್ತರ. ತೂಕ ಮತ್ತು ಎತ್ತರಗಳ ಅನುಪಾತ ನೋಡುವ ಬಿ.ಎಂ.. ಎಂಬ ಮಾಪನ 36 ಇತ್ತು. (ಸಾಮಾನ್ಯ ಬಿ.ಎಂ.ಐ 18 ರಿಂದ 25) ಅವನ ತಾಯಿ ತಿಳಿಸಿದಂತೆ ಅವನ ಕತ್ತಿನ ಹಿಂಭಾಗ ಕಪ್ಪು ಬಣ್ಣದಲ್ಲಿತ್ತು; ಹೊಟ್ಟೆಯ ಮೇಲೆ ಚರ್ಮ ಹಿಗ್ಗಿದ ಪಟ್ಟೆಯ ಗುರುತುಗಳಿದ್ದವು.

ಹರೀಶನ ದಿನಚರಿ ಯಾವುದೇ ಸಾಮಾನ್ಯ ಮಗುವಿನದ್ದೇ. ಅವನು ಮುಂಜಾನೆ 9:00 ಗಂಟೆಗೆ ಶಾಲೆಗೆ ಹೋಗುತ್ತಾನೆ. ರಾತ್ರಿ ಕಂಪ್ಯೂಟರ್ ಆಟ ಆಡುವುದರಿಂದ ಮುಂಜಾನೆ ತಡವಾಗಿ ಏಳುತ್ತಾನೆ. ಬೆಳಗ್ಗಿನ ತಿಂಡಿಗೆ ಆತುರಾತುರ. “ಹೋಗ್ತಾ ದಾರೀಲಿ ಏನಾದರೂ ತಿನ್ನು” ಎಂದು ಅವನ ತಾಯಿ ಹಣ ನೀಡುತ್ತಾರೆ. ಮನೆಯ ಪಕ್ಕದ ಬೇಕರಿಯಲ್ಲಿ ಪಫ್, ಕೇಕ್, ಟೋಶ್ಟ್ – ಇಂಥದ್ದೇನಾದರೂ ಖರೀದಿಸಿ, ದಾರಿಯುದ್ದಕ್ಕೂ ತಿನ್ನುತ್ತಾ ಹೋಗುತ್ತಾನೆ. ಮಧ್ಯಾಹ್ನ ಶಾಲೆಯ ಕೆಫೆಟೀರಿಯಾದಲ್ಲಿ ದೊರೆಯುವ ಬರ್ಗರ್, ಪೈ, ಮಫಿನ್ ತಿನ್ನುತ್ತಾನೆ. ಶಾಲೆಯಿಂದ ಮರಳಿ ಬರುವಾಗ ಸ್ನೇಹಿತರೊಡನೆ ದಾರಿಯಲ್ಲಿ ಇರುವ ಮಿರ್ಚಿ-ಬಜ್ಜಿ ಅಂಗಡಿಯಲ್ಲಿ ದಿನವೂ ಯಾವುದೋ ಒಂದು ಸಿಹಿತಿಂಡಿ ಮತ್ತು ಸಮೋಸ, ಬಜ್ಜಿ ತಿನ್ನುತ್ತಾನೆ. ಮನೆಗೆ ಬರುವ ವೇಳೆಗೆ ಹೋಂವರ್ಕ್ ಕಾತರ. ಅದನ್ನು ಆತುರಾತುರವಾಗಿ ಮಾಡಿ, ಟ್ಯೂಶನ್ ಗೆ ಹೋಗುತ್ತಾನೆ. ಮತ್ತೆ ಬರುವುದು ರಾತ್ರಿ 9 ಗಂಟೆಗೆ. ಅಮ್ಮ ಮಾಡಿದ ಅಡುಗೆ ಬೇಡ ಎಂದು ನಿತ್ಯವೂ ಗಲಾಟೆ. ಬೆಳಗ್ಗಿನಿಂದ ಮಗು ಏನೂ ಸರಿಯಾಗಿ ತಿಂದಿಲ್ಲವೆಂದು ಅಮ್ಮ ರಾತ್ರಿ ಅವನು ಕೇಳಿದ ನೂಡಲ್ಸ್ ಮೊದಲಾದ ತಿಂಡಿ ಮಾಡಿಕೊಡುತ್ತಾರೆ. ಅದನ್ನು ತಿಂದು ರಾತ್ರಿ ಹನ್ನೆರಡು ಗಂಟೆವರೆಗೆ ಕಂಪ್ಯೂಟರ್ ಆಟ ಆಡುತ್ತಾನೆ. “ಆ ಆಟದಲ್ಲಿ ನನ್ನ ಮಗ ಬಹಳ ಪ್ರವೀಣ” ಎಂದು ಅವನ ಅಮ್ಮನಿಗೆ ಹೆಮ್ಮೆ. ರಜೆಯ ದಿನ ಇಡೀ ಕುಟುಂಬ ಸ್ವಿಗ್ಗಿಯಿಂದ ಏನಾದರೂ ತರಿಸಿಯೋ, ಇಲ್ಲವೇ ಹರೀಶನಿಗೆ ಇಷ್ಟವಾದ ಹೋಟಲಿಗೆ ಹೋಗಿಯೋ ತಿನ್ನುತ್ತಾರೆ. ಇದು ಹರೀಶನ ದಿನಚರಿ.

ಹರೀಶನಿಗೆ ಏನಾಗಿರಬಹುದು? ಇದು ಮಧುಮೇಹದ ಲಕ್ಷಣಗಳೇ? ಸಿಹಿಯನ್ನು ಸೇವಿಸಿದರೆ ಮಧುಮೇಹ ಉಂಟಾಗಬಹುದೇ? ಇದರ ಬಗ್ಗೆ ಒಂದು ನೋಟ.

ಮಧುಮೇಹ

ಸಿಹಿ ಎಂದರೆ ಮಿಠಾಯಿ; ಸಿಹಿ ಎಂದರೆ ಆಕರ್ಷಣೆ. ಪ್ರಪಂಚದಾದ್ಯಂತ ಸಕ್ಕರೆಗೆ ವಿವಿಧ ಹೆಸರುಗಳಿದ್ದರೂ ಅದಕ್ಕೆ ಮೂಲ ಸಂಸ್ಕೃತದ  “ಶರ್ಕರ” ಎಂಬ ಪದ. ಹಲವಾರು ವಿಧದ ಸಕ್ಕರೆಯ ಬಹಳಷ್ಟು ಅಣುಗಳು ಒಟ್ಟಿಗೆ ಸೇರಿ ವಿವಿಧ ಪಿಷ್ಟಗಳು ಅಂದರೆ ಕಾರ್ಬೊಹೈಡ್ರೇಟ್‍ಗಳು ಉತ್ಪತ್ತಿಯಾಗುತ್ತವೆ. ಈ ಪಿಷ್ಟಗಳು ಜೀವಕೋಶಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಧಿಕ ಪ್ರಮಾಣದಲ್ಲಿ ಸೇವಿಸಿದ ಸಕ್ಕರೆಯೂ ಜಿಡ್ಡಿನಂತೆ ಶರೀರದಲ್ಲಿ ಕೊಬ್ಬನ್ನು ತುಂಬುತ್ತದೆ; ಮತ್ತು ನಾನಾ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲಿ ಒಂದು ಮಧುಮೇಹ.

ಮಧುಮೇಹ

ಮಧು ಎಂದರೆ ‘ಜೇನು’; ಮೇಹ ಎಂದರೆ ‘ಮೂತ್ರ’. ಮಧುಮೇಹ ಎಂದರೆ “ಜೇನಿನ ಮೂತ್ರ” ಅಥವಾ “ಸಿಹಿ ಮೂತ್ರ”. ಮಧುಮೇಹ ಅಥವಾ ಡಯಾಬಿಟಿಸ್ ಮೆಲಿಟಸ್ ಎಂದರೆ ಮಾನವನ ರಕ್ತದಲ್ಲಿ ಗ್ಲೂಕೋಸ್ (ಸರಳ ಸಕ್ಕರೆ) ಅಂಶವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿರುವುದು. ಮಧುಮೇಹ ಸಮಸ್ಯೆ ಇರುವರಿಗೆ ಅವರ ದೇಹದಲ್ಲಿ ಇನ್ಸುಲಿನ್ ಎಂಬ ರಸದೂತ ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿ ಆಗುವುದಿಲ್ಲ; ಅಥವಾ ಶರೀರದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಸಮರ್ಪಕವಾಗಿ ಬಳಕೆ ಆಗುವುದಿಲ್ಲ. ಇದು ರೋಗಿಯ ರಕ್ತದಲ್ಲಿ ಗ್ಲೂಕೋಸ್ ಶೇಖರಣೆಯನ್ನು ಹೆಚ್ಚಿಸುತ್ತದೆ. ಇದು ಅನೇಕ ಸಮಸ್ಯೆಗಳಿಗೆ ರಹದಾರಿಯಾಗುತ್ತದೆ.

ನಾವು ಮಧುಮೇಹದ ಬಗ್ಗೆ ಏಕೆ ತಿಳಿದುಕೊಳ್ಳಬೇಕು?

ಭಾರತ ದೇಶ ಮಧುಮೇಹದ ಜಾಗತಿಕ ರಾಜಧಾನಿ ಎಂದು ಹೆಸರಾಗುತ್ತಿದೆ. ಸಾಂಪ್ರದಾಯಕವಾಗಿ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುವ Type 2 ಮಧುಮೇಹ ಇತ್ತೀಚಿನ ದಿನಗಳಲ್ಲಿ 10 ವರ್ಷದ ಮಕ್ಕಳಲ್ಲಿ ಸಹ ಕಂಡು ಬರುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕ ಕಾರಣಗಳಿಂದ ಮಕ್ಕಳು ಅತಿಯಾಗಿ ಬಳಸುತ್ತಿರುವ ಮೊಬೈಲ್, ಟ್ಯಾಬ್ಲೆಟ್ ನಂತಹ ಎಲೆಕ್ಟ್ರಾನಿಕ್ ಉಪಕರಣಗಳು ಅವರನ್ನು ಹೊರಾಂಗಣ ಆಟಗಳಿಂದ ದೂರ ಮಾಡಿವೆ. ಇದು ಬೊಜ್ಜು ಬೆಳೆಯಲು ಕಾರಣವಾಗುತ್ತಿದೆ. ಅತಿಯಾದ ತೂಕ, ಬೊಜ್ಜು ಮಕ್ಕಳಲ್ಲಿ ಮಧುಮೇಹಕ್ಕೆ ದಾರಿಯಾಗುತ್ತದೆ. ಹೀಗಾಗಿ ಮಕ್ಕಳು ಮಧುಮೇಹ, ಅದರ ತೀವ್ರತೆ, ಮತ್ತು ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿದು, ಅದನ್ನು ತಡೆಗಟ್ಟುವುದು ಅವರ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.

ದೇಹದಲ್ಲಿ ಗ್ಲೂಕೋಸ್‍ನ ಸಹಜ ಬಳಕೆ

                                                ಬೆಳವಣಿಗೆ ಮತ್ತು ದೃಢಕಾಯರಾಗಿರಲು ಶಕ್ತಿಯ ಅಗತ್ಯವಿದೆ

 

                                                ನಾವು ತಿನ್ನುವ ಆಹಾರದಿಂದ ಶರೀರಕ್ಕೆ ಶಕ್ತಿ ದೊರೆಯುತ್ತದೆ

 

                                                ನಾವು ಸೇವಿಸುವ ಆಹಾರಗಳು ಗ್ಲೂಕೋಸ್ ಆಗಿ ವಿಭಜನೆ ಆಗುತ್ತದೆ

 

ಗ್ಲೂಕೋಸ್ ನಮ್ಮ ದೇಹದ ಕೋಶವನ್ನು ಪ್ರವೇಶಿಸಿ, ಶಕ್ತಿಯಾಗಿ ಬದಲಾಗುತ್ತದೆ.

ಈ ಪ್ರಕ್ರಿಯೆಯಲ್ಲಿ ಅಂತಿಮ ಹೆಜ್ಜೆಯಾದ ಕೋಶದೊಳಗೆ ಗ್ಲೂಕೋಸ್ ಪ್ರವೇಶಿಸುವ ದ್ವಾರವನ್ನು ತೆರೆಯುವುದು ಮೇದೋಜೀರಕ ಗ್ರಂಥಿಯು ಉತ್ಪತ್ತಿ ಮಾಡುವ ಇನ್ಸುಲಿನ್ ಎಂಬ ರಸದೂತ. ಕೋಶಗಳನ್ನು ಪ್ರವೇಶಿಸಿಗ್ಲೂಕೋಸ್ ಅದರ ಬಳಕೆಗೆ ಒದಗುತ್ತದೆ. ಶರೀರದ ಒಳಗೆ ಸೇರಿದ ಆಹಾರ ಇನ್ಸುಲಿನ್ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದ ಗ್ಲೂಕೋಸ್ ಕೋಶಗಳ ಒಳಗೆ ಸೇರುತ್ತದೆ. ಅಹಾರ ಸೇವನೆ ಇಲ್ಲದಿರುವ ಸಮಯದಲ್ಲಿ ಕಡಿಮೆ ಇನ್ಸುಲಿನ್ ಉತ್ಪಾನೆಯಾಗಿ ಕಡಿಮೆಯಾಗಿ, ರಕ್ತದ ಗ್ಲೂಕೋಸನ್ನು ಸಹಜ ಪ್ರಮಾಣದಲ್ಲಿ ಕಾಯ್ದುಕೊಳ್ಳಲು ಸಹಕರಿಸುತ್ತದೆ.

ಮಧುಮೇಹದ ಇತಿಹಾಸ :

ಮಧುಮೇಹ ಅಥವಾ “ಡಯಾಬಿಟಿಸ್” ಎಂದರೆ “ಮುಖಾಂತರ ಹೋಗುವುದು”. ಈ ಪದವನ್ನು ಮೊದಲು ಶಕಪೂರ್ವ 230ನೆಯ ಸುಮಾರಿಗೆ ಪ್ರಾಚೀನ ಗ್ರೀಸಿನ ಮೆಮ್‍ಫಿಸ್‍ ನಗರದ ಅಪೊಲೊನಿಮಸ್ ಬಳಸಿದರು ಎನ್ನಲಾಗಿದೆ. ಮಧುಮೇಹದಲ್ಲಿ ಎರಡು ಬಗೆಗಳಿವೆ ಎಂದು ತಿಳಿಸಿಕೊಟ್ಟವರು ಆಯುರ್ವೇದಾಚಾರ್ಯರಾದ ಸುಶ್ರುತ ಮತ್ತು ಚರಕರು. ಮಧುಮೇಹದ ಚಿಕಿತ್ಸೆಗೆ ಬೇಕಾಗುವ ಇನ್ಸುಲಿನ್ ಎಂಬ ಜೀವರಕ್ಷಕ ಹಾರ್ಮೋನನ್ನು 1921-1922 ರಲ್ಲಿ ಅನ್ವೇಷಿಸಿದರು ಫೆಡ್ರಿಕ್ ಬಾಂಟಿಂಗ್ ಮತ್ತು ಚಾರ್ಲಸ್ ಬೆಸ್ಟ್ ಎಂಬ ವೈದ್ಯರು. 1922 ರಿಂದ ಇಂದಿನ ದಿನದವರೆಗೆ ಇನ್ಸುಲಿನ್ ಕುರಿತು ಸಾಕಷ್ಟು ಸಂಶೋಧನೆಗಳು ಜಗತ್ತಿನಾದ್ಯಂತ ನಡೆಯುತ್ತಿದೆ.

ಮಧುಮೇಹದಲ್ಲಿ ಎಷ್ಟು ವಿಧಗಳಿವೆ?

1) Type 1 ಡಯಾಬಿಟಿಸ್: ಇದನ್ನು ಮೊದಲು ಇನ್ಸುಲಿನ್ ಅವಲಂಬಿತ ಮಧುಮೇಹ (IDDM) ಅಥವಾ Juvenile Onset ಡಯಾಬಿಟಿಸ್ ಎಂದು ಕರೆಯಲಾಗಿತ್ತು.

2) Type 2 ಡಯಾಬಿಟಿಸ್: ನಾನ್-ಇನ್ಸುಲಿನ್ ಅವಲಂಬಿತ ಡಯಾಬಿಟಿಸ್ (NIDDM) ಎಂದು ಕರೆಯಲಾಗಿದೆ.

3) ಗರ್ಭಾವಸ್ಥೆಯ ಮಧುಮೇಹ: ಗರ್ಭ ಧರಿಸಿರುವ ಸಮಯದಲ್ಲಿ ಮಾತ್ರ ಕಾಣುವ ಮಧುಮೇಹ.

4) ನಿರ್ದಿಷ್ಟ ಕಾರಣಗಳಿಂದ ಕಾಣುವ ಮಧುಮೇಹ: ಶಸ್ತ್ರಚಿಕಿತ್ಸೆ, ಔಷಧಿಗಳು, ಅಪೌಷ್ಟಿಕತೆ, ಸೋಂಕು ಮತ್ತಿತರ ನಿರ್ದಿಷ್ಟ ಕಾರಣಗಳಿಂದಗುವ ಮಧುಮೇಹ.

ಮಧುಮೇಹದ ಲಕ್ಷಣಗಳು

1. ಅತಿಯಾದ ನೀರಡಿಕೆ

2. ಪದೇ ಪದೇ ಮೂತ್ರ ವಿಸರ್ಜನೆ

3. ಅತಿಯಾದ ದೇಹದ ತೂಕ / ಬೊಜ್ಜು

4. ಸೋಮಾರಿತನ / ಮಂಪರು

5. ಹೆಚ್ಚು ಬೆವರುವುದು

6. ಇನ್ಸುಲಿನ್ ನಿರೋಧತೆ (Resistance): ಅಂದರೆ ಅತಿಯಾಗಿ ಇನ್ಸುಲಿನ್ ಉತ್ಪಾದನೆ ಆಗುವ ವೇಳೆಯಲ್ಲಿ ಕಾಣುವ ಲಕ್ಷಣಗಳು:

                ಅ) ಅಕಾಂತೋಸಿಸ್ ನೈಗ್ರಿಕಾನ್ಸ್: ಕತ್ತಿನ ಹಿಂಭಾಗ, ತೋಳಿನ ಕೆಳಗೆ, ತೊಡೆಯ ಹತ್ತಿರ ಕಪ್ಪಾಗುವುದು.

                ಆ) ಮುಖದಲ್ಲಿಮೊಡವೆಗಳು

                ಇ) ಹುಡುಗಿಯರಲ್ಲಿ:

                                1) ಋತುಸ್ರಾವ ಕಡಿಮೆ ಅಥವಾ ಹೆಚ್ಚು ಆಗುವುದು (ಪಿಸಿಒಎಸ್)

                                2) ಮುಖದಲ್ಲಿ ಹೆಚ್ಚು ಕೂದಲು ಕಾಣಿಸಿಕೊಳ್ಳುವುದು 

ಮಧುಮೇಹವನ್ನು ಹೇಗೆ ಪತ್ತೆ ಮಾಡಲಾಗುತ್ತದೆ?

                ಸಣ್ಣ ಪಟ್ಟಿಯಾಕಾರದ ಒಂದು ತುದಿಯಲ್ಲಿ ವಿಶಿಷ್ಟ ರಾಸಾಯನಿಕಗಳನ್ನು ಬಳಸಿ ತಯಾರಿಸಿದ ಡಿಪ್‍ಸ್ಟಿಕ್ ಎಂಬ ಸರಳ ಪಟ್ಟಿಯ ನೆರವಿನಿಂದ ಮಾಡುವ ಪರೀಕ್ಷೆ ಮೂತ್ರದಲ್ಲಿ ಗ್ಲೂಕೋಸನ್ನು ಗುರುತಿಸಲ್ಲದು. ಆದರೆ, ಇದು ಅಂತಿಮವಲ್ಲ. ಮೂತ್ರದಲ್ಲಿ ಗ್ಲೂಕೋಸ್ ಅಂಶ ಕಂಡುಬಂದರೆ, ಅದು ಮಧುಮೇಹ ಪತ್ತೆಗೆ ಇನ್ನೂ ಹೆಚ್ಚಿನ ಪರೀಕ್ಷೆಗಳು ಬೇಕೆಂಬುದನ್ನು ಸೂಚಿಸುತ್ತದೆ. ಆ ಹಂತದಲ್ಲಿ ನಾಲ್ಕು ಬಗೆಯ ಸರಳ ಪರೀಕ್ಷೆಗಳನ್ನು ಮಾಡಬೇಕು.

1)  ರಾಂಡಮ್ ಪ್ಲಾಸ್ಮಾ ಗ್ಲೂಕೋಸ್: ಊಟದ ಸಮಯ ಲೆಕ್ಕಿಸದೆ, ಯಾವುದೇ ಸಮಯದಲ್ಲಾದರೂ ಮಾಡುವ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಪರೀಕ್ಷೆ.

2)  ಫಾಸ್ಟಿಂಗ್ ಪ್ಲಾಸ್ಮಾ ಗ್ಲೂಕೋಸ್: ಕನಿಷ್ಟ ಎಂಟು ಗಂಟೆಯ ಕಾಲ/ಸಮಯ ಉಪವಾಸದ ನಂತರ ಖಾಲಿ ಹೊಟ್ಟೆಯಲ್ಲಿ ಮಾಡುವ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಪರೀಕ್ಷೆ.

3)   ಓರಲ್ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್: 75 ಗ್ರಾಂ ಗ್ಲೂಕೋಸನ್ನು ಸೇವಿಸಿ, ಎರಡು ಗಂಟೆಯ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟದ ಪರೀಕ್ಷೆಯನ್ನು ಮಾಡುವುದು.

4)   HbA1C: ರಕ್ತದಲ್ಲಿನ ಕೆಂಪು ರಕ್ತಕಣಗಳು ಸುಮಾರು 120 ದಿನ ಜೀವಂತ ಇರುತ್ತವೆ. ಇದರೊಳಗಿನ ಹೀಮೊಗ್ಲೋಬಿನ್ ಎಂಬ ಪ್ರೋಟೀನ್ ಗೆ ಅಂಟಿಕೊಂಡಿರುವ ಗ್ಲೂಕೋಸ್ ಅಂಶವನ್ನು ಅಳೆದರೆ, ಅದು ಹಿಂದಿನ ಸುಮಾರು ಮೂರ್ನಾಲ್ಕು ತಿಂಗಳ ಕಾಲ ರಕ್ತದಲ್ಲಿ ಇದ್ದ ಸರಾಸರಿ ಗ್ಲೂಕೋಸ್ ಅಂಶದ ಅಂದಾಜು ನೀಡುತ್ತದೆ. ದೀರ್ಘಕಾಲಿಕ ಗ್ಲೂಕೋಸ್ ನಿಯಂತ್ರಣದ ಮಾಪನದಲ್ಲಿ, ಅಥವಾ ಸಾಮಾನ್ಯ ರಕ್ತ ಪರೀಕ್ಷೆಯ ಆಜೂಬಾಜು ದಿನಗಳಲ್ಲಿ ಮಾತ್ರ ಆಹಾರ ಸೇವನೆಯನ್ನು ಮಿತಿಗೊಳಿಸಿ ವೈದ್ಯರಿಗೆ ಟೋಪಿ ಹಾಕುವ ಚಾಲಾಕಿ ಜನರಲ್ಲಿ ಈ ಪರೀಕ್ಷೆ ಸೂಕ್ತ. 

              ಮಧುಮೇಹದಿಂದಾಗುವ ದುಷ್ಪರಿಣಾಮಗಳ ಪರೀಕ್ಷೆ:

                ಥೈರಾಯಿಡ್ ಗ್ರಂಥಿಯ ಪರೀಕ್ಷೆ                      

ಯಕೃತ್ ಪರೀಕ್ಷೆ  

                ಮೂತ್ರಪಿಂಡ ಪರೀಕ್ಷೆ          

ಕೊಬ್ಬಿನ ಪರೀಕ್ಷೆ                      

6) ಹೊಟ್ಟೆಯ ಸ್ಕ್ಯಾನ್       :         ಪಿಸಿಒಎಸ್ 

                                                                                ಕೊಬ್ಬಿನ ಪಿತ್ತಜನಕ 

7) ಕಣ್ಣಿನ ಪರೀಕ್ಷೆ

8) ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಫಿ ಪರೀಕ್ಷೆ 

ಮಧುಮೇಹದ ಚಿಕಿತ್ಸೆ

1) ಇನ್ಸುಲಿನ್ ಚಿಕಿತ್ಸೆ: Type 1 ಡಯಾಬಿಟಿಸ್ ಮಕ್ಕಳಿಗೆ ಜೀವನ ಪರ್ಯಂತ ಇನ್ಸುಲಿನ್ ನೀಡುವ ಅಗತ್ಯವಿರುತ್ತದೆ. ಆದರೆ Type 2 ಮಧುಮೇಹದಲ್ಲಿ ಇನ್ಸುಲಿನ್ನಿನ ಅಶ್ಯಕತೆ ಬಹುಮಟ್ಟಿಗೆ ಇರುವುದಿಲ್ಲ. ಇದ್ದರೂ, ಅತೀ ಕಡಿಮೆ ಪ್ರಮಾಣದಲ್ಲಿ ಮಾತ್ರ ಬೇಕಾಗುತ್ತದೆ.

2) ಆಹಾರ ಯೋಜನೆ: ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆಯನ್ನು ಸರಿಯಾಗಿ ಯೋಜಿಸಿ, ಅನುಸರಿಸಬೇಕು. ಕಡಿಮೆ ಸಕ್ಕರೆ ಮತ್ತು ಕಡಿಮೆ ಕೊಬ್ಬಿನ ಅಂಶಗಳನ್ನು / ಆಹಾರವನ್ನು ಮತ್ತು ಹೆಚ್ಚಿನ ನಾರಿನ ಅಂಶಗಳ ಆಹಾರವನ್ನು ಸವಿಯಬೇಕು.   ಶರ್ಕರ ಪಿಷ್ಟಗಳು (ಕಾರ್ಬೋ ಹೈಡ್ರೇಟ್), ಸಸಾರಜನಕ (ಪ್ರೋಟಿನ್) ಮತ್ತು ಮೇಸ್ಸುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬೇಕು

3) ದೈಹಿಕ ಚಟುವಟಿಕೆ: ವ್ಯಾಯಾಮ, ಬೆವರು ತನಕ ನಡೆಯುವುದು, ಹೆಚ್ಚಿನ ದೈಹಿಕ ಕ್ಷಮತೆಯುಳ್ಳ ಕಾರ್ಯಗಳನ್ನು ಕನಿಷ್ಟ 30 ನಿಮಿಷದವರೆಗೆ ದಿನನಿತ್ಯವೂ ಮಾಡಬೇಕು.

4) ರಕ್ತದಲ್ಲಿ ಗ್ಲೂಕೋಸನ್ನು ಕಡಿಮೆ ಮಾಡುವ ಔಷಧಗಳು: ಉದಾಹರಣೆಗೆ - ಮೆಟ್‍ಫಾರ್ಮಿನ್

ಮಧುಮೇಹದಿಂದಾಗುವ ತೊಡಕುಗಳು: ದೀರ್ಘಾವಧಿಯಲ್ಲಿ, ರಕ್ತದಲ್ಲಿ ಗ್ಲೂಕೋಸ್‍ನ ಮಟ್ಟ ಹೆಚ್ಚಿದರೆ ರಕ್ತನಾಳಗಳು ಹಾನಿಗೊಳಗಾಗಬಹುದು. ಅದರಿಂದ ಹೃದಯಾಘಾತ, ಲಕ್ವ ಹೊಡೆಯಬಹುದು.

1. ಲಕ್ವ

2. ಹೃದಯಾಘಾತ

3. ಕುರುಡುತನ

4. ಕೈ ಮತ್ತು ಕಾಲಿನ (ಪಾದದ) ಬೆರಳುಗಳನ್ನು ಕಳೆದುಕೊಳ್ಳುವುದು

5. ಮೂತ್ರಪಿಂಡಗಳ ದೌರ್ಬಲ್ಯ: ನೆಪ್ರೋಪತಿ

1) ಕಣ್ಣು: ಪೊರೆಯ ಸಾಧ್ಯತೆ ಮತ್ತು ರೆಟೆನೋಪತಿಯಿಂದ ಕುರುಡುತನ.

2) ಕೈ ಮತ್ತು ಪಾದಗಳು ಜೋಮು ಹಿಡಿಯುವುದು, ಚಲನಶೀಲತೆ ಸಂವೇದನೆ ಇಲ್ಲದಂತಾಗುವುದು, ಬೆರಳುಗಳು ಕಳೆದುಕೊಳ್ಳುವುದು (ಗ್ಯಾಂಗ್ರೀನ್)

3)  ಸಂವೇದನೆ ಕಳೆದುಕೊಳ್ಳುವುದು - ನರದೌರ್ಬಲ್ಯ

4) ಅತಿ ರಕ್ತದೊತ್ತಡ (ಹೈ ಬಿ ಪಿ)

5) ರಕ್ತದಲ್ಲಿನ ಕೊಲೆಸ್ಟ್ರಾಲ್ ಏರುಪೇರು

6) ಮೂತ್ರಜನಕಾಂಗಗಳ ಮತ್ತು ಮೂತ್ರಚೀಲ ವೈಫಲ್ಯ

7) ಹೃದ್ರೋಗಗಳು ಮತ್ತು ರಕ್ತ ಒಯ್ಯುವ ಧಮನಿಗಳ ವ್ಯಾಧಿ

8) ಲೈಂಗಿಕ ಕ್ರಿಯಾಲೋಪ

9) ಚರ್ಮವ್ಯಾಧಿಗಳು ಮತ್ತು ಸೋಂಕುಗಳು

10) ಕೀಲುಗಳ ನೋವು

11) ಜೀರ್ಣಾಂಗಗಳ ಕಾರ್ಯದೌರ್ಬಲ್ಯ

  

ಮಧುಮೇಹವನ್ನು ತಡೆಗಟ್ಟುವುದು

ಆರೋಗ್ಯಕರ                                             ದೈಹಿಕವಾಗಿ

ಆಹಾರವನ್ನು                                             ಚಟುವಟಿಕೆಯಿಂದಿರಿ

ಆಯ್ದುಕೊಳ್ಳಿ

                                                  ಪದೇ ಪದೇ ರಕ್ತದ

                                                ಗ್ಲೂಕೋಸ್ ಪರೀಕ್ಷಿಸುತ್ತಿರಿ

 

1) ದಿನನಿತ್ಯವೂ ಕನಿಷ್ಟ 30 ನಿಮಿಷ ದೈಹಿಕ ಚಟುವಟಿಕೆಯಲ್ಲಿ ತಲ್ಲೀನರಾಗುವುದು. ವ್ಯಾಯಾಮ ಅಥವಾ ವೇಗವಾಗಿ ಬೆವರು ಬರುವಂತೆ 30 ನಿಮಿಷ ನಡೆಯುವುದು.

2) ಆರೋಗ್ಯಕರ, ಪೌಷ್ಟಿಕ ಆಹಾರವನ್ನು ಸೇವಿಸಿವುದು. ಕೊಬ್ಬಿನ ಅಂಶವನ್ನು ಕಡಿಮೆ ಮಾಡುವುದು ಮತ್ತು ನಾರಿನ ಅಂಶವನ್ನು ಆಹಾರದಲ್ಲಿ ಹೆಚ್ಚಿಸುವುದು.

3) ಸ್ಕ್ರೀನ್ ಟೈಮ್: ಅಂದರೆ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳನ್ನು ದಿನವಹಿ ಎರಡು ಗಂಟೆಗಳಿಗಿಂತ ಕಡಿಮೆ ಬಳಸುವುದು; ಅದನ್ನು ವೀಕ್ಷಿಸುತ್ತ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಕು.

-------------------------------------- 

ಮಕ್ಕಳ ಎಂಡೋಕ್ರೈನಾಲಜಿ ತಜ್ಞರಾದ ಡಾ. ಪವಿತ್ರಾ ನಾಗರಾಜ್ ಅವರು ಬರೆದಿರುವ "ಮಕ್ಕಳಲ್ಲಿ ಮಧುಮೇಹ" ಕುರಿತಾದ ಲೇಖನ - ಮಾರ್ಚ್ 2022 ರ "ಸೂತ್ರ" ವಿಜ್ಞಾನ ಮಾಸಪತ್ರಿಕೆಯಲ್ಲಿ.