ಬುಧವಾರ, ನವೆಂಬರ್ 9, 2022

ಅಧಿಕ ರಕ್ತದೊತ್ತಡಕ್ಕೆ ವ್ಯಾಯಮವೂ ಚಿಕಿತ್ಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಅಧಿಕ ರಕ್ತದೊತ್ತಡ ಜಗದ್ವ್ಯಾಪಿ ಸಮಸ್ಯೆ. ಕೆಲ ದಶಕಗಳ ಹಿಂದೆ ಬಹುತೇಕ ಹಿರಿಯ ನಾಗರಿಕರಲ್ಲಿ ಮಾತ್ರ ಕಾಣುತ್ತಿದ್ದ ಅಧಿಕ ರಕ್ತದೊತ್ತಡದ ಸಮಸ್ಯೆ ಈಗ ಮೂವತ್ತರ ಹರೆಯದವರನ್ನೂ ಕಾಡುತ್ತಿದೆ. ಜೀವನಶೈಲಿಯ ಬದಲಾವಣೆಗಳು, ಅನಿಯಂತ್ರಿತ ಆಹಾರ ಪದ್ಧತಿ, ಬೊಜ್ಜು, ವೃತ್ತಿಯ ಅಭಧ್ರತೆ, ಮಾನಸಿಕ ಜಂಜಾಟಗಳು, ಹದಗೆಡುತ್ತಿರುವ ಕೌಟುಂಬಿಕ ಸಂಬಂಧಗಳು ಮೊದಲಾದ ಸಂಗತಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿವೆ. ಅದರಲ್ಲಿ ಅಧಿಕ ರಕ್ತದೊತ್ತಡವೂ ಒಂದು.

ಅಧಿಕ ರಕ್ತದೊತ್ತಡ ಎಂದರೇನು?

ಇಡೀ ಶರೀರದ ಅಂಗಗಳಿಗೆ ರಕ್ತವನ್ನು ತಲುಪಿಸುವುದು ಹೃದಯದ ಹೊಣೆ. ರಕ್ತದ ಸರಬರಾಜು ಸರಾಗವಾಗಿ ಆಗಬೇಕೆಂದರೆ ಅದನ್ನು ಒಂದು ನಿರ್ದಿಷ್ಟ ಒತ್ತಡದಲ್ಲಿ ಹೃದಯ ಪಂಪ್ ಮಾಡಬೇಕು. ಹೀಗಾಗಿ, ಸಹಜ ಮಟ್ಟದ ರಕ್ತದೊತ್ತಡ ಎಲ್ಲರಲ್ಲೂ ಇರುತ್ತದೆ.ಈ ರಕ್ತದೊತ್ತಡ ಹೆಚ್ಚಲು ಅನೇಕ ಕಾರಣಗಳಿವೆ: ರಕ್ತನಾಳಗಳು ಪೆಡಸುಗಟ್ಟುವಿಕೆ, ಯಾವುದೋ ಒಂದು ಅಂಗದ ರಕ್ತನಾಳಗಳು ಕಿರಿದಾಗಿ, ಅದಕ್ಕೆ ಸಾಕಷ್ಟು ಪ್ರಮಾಣದ ರಕ್ತ ಹರಿಯಲು ಆಗುವ ಅಡ್ಡಿ, ಶರೀರದ ಚೋದಕಗಳಲ್ಲಿನ ವ್ಯತ್ಯಾಸ ಮೊದಲಾದುವು. ಯಾವುದೇ ಕಾರಣದಿಂದ ಒಂದು ಅಂಗಕ್ಕೆ ರಕ್ತದ ಸರಬರಾಜು ಕಡಿಮೆಯಾದರೆ ಆ ಅಂಗ ಮಿದುಳಿಗೆ ಸೂಚನೆ ಕಳಿಸುತ್ತದೆ. ಕೂಡಲೇ ಮಿದುಳು ಹೃದಯಕ್ಕೆ ಸಂಕೇತಗಳನ್ನು ಕಳಿಸಿ, ಹೆಚ್ಚು ರಕ್ತವನ್ನು ಒತ್ತುವಂತೆ ತಿಳಿಸುತ್ತದೆ. ಆಗ ಹೃದಯದ ಸ್ನಾಯುಗಳು ಹೆಚ್ಚು ಕೆಲಸ ಮಾಡಿ ಅಧಿಕ ಒತ್ತಡವನ್ನು ನಿರ್ಮಿಸುತ್ತವೆ. ಈ ಒತ್ತಡ ಇತರ ರಕ್ತನಾಳಗಳಿಗೂ ಹರಿಯುತ್ತದೆ. ಈ ಮೂಲಕ ಇತರ ಅಂಗಗಳು ಅಗತ್ಯಕ್ಕಿಂತ ಹೆಚ್ಚು ರಕ್ತವನ್ನು ಅಧಿಕ ಒತ್ತಡದಲ್ಲಿ ಪಡೆಯುತ್ತವೆ. ಅವುಗಳ ಕೆಲಸದಲ್ಲೂ ವ್ಯತ್ಯಾಸ ಬರುತ್ತದೆ. ಅಧಿಕ ರಕ್ತದೊತ್ತಡ ತಂತಾನೇ ಒಂದು ಕಾಯಿಲೆಯಲ್ಲ; ಬದಲಿಗೆ ಶರೀರದಲ್ಲಿ ಆಗುತ್ತಿರುವ ವ್ಯತ್ಯಾಸಗಳ ಸೂಚಕ.

ವ್ಯಾಯಮದ ಮಹತ್ವ

ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ ವ್ಯಾಯಾಮ ಸಹಕಾರಿ. ನಿಯಮಿತ ವ್ಯಾಯಾಮದಿಂದ ಶರೀರದ ಮಾಂಸಖಂಡಗಳ ಬಿಗುವು ಸಡಿಲಗೊಳ್ಳುತ್ತದೆ; ರಕ್ತನಾಳಗಳ ಮೇಲಿನ ಒತ್ತಡ ಕಳೆದು ರಕ್ತಸಂಚಾರ ಸರಾಗವಾಗುತ್ತದೆ; ಹೃದಯದ ಸ್ನಾಯುಗಳು ಶಕ್ತಿಯುತವಾಗಿ, ಹೆಚ್ಚಿನ ಕಾರ್ಯಕ್ಷಮತೆ ಲಭಿಸುತ್ತದೆ; . ರಕ್ತವನ್ನು ಒತ್ತುವ ಸಾಮರ್ಥ್ಯ ವೃದ್ಧಿಸುತ್ತದೆ. ವ್ಯಾಯಮ ಎರಡು ಬದಿಗಳಿಂದಲೂ ಆರೋಗ್ಯಕಾರಿ. ರಕ್ತದೊತ್ತಡ ಸಹಜ ಸ್ಥಿತಿಯಲ್ಲಿದ್ದರೆ ನಿಯಮಿತ ವ್ಯಾಯಾಮ ಅದನ್ನು ಹಾಗೆಯೇ ಉಳಿಸಿ, ಅಧಿಕವಾಗದಂತೆ ಸಹಕರಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ನಿಯಮಿತ ವ್ಯಾಯಾಮದಿಂದ ಅದನ್ನು ನಿಯಂತ್ರಣದಲ್ಲಿ ಇಡಬಹುದು. ಇದರಿಂದ ಔಷಧಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ದೇಹತೂಕದ ನಿರ್ವಹಣೆಯಲ್ಲಿ ವ್ಯಾಯಾಮದ ಪಾತ್ರ ಮಹತ್ವದ್ದು. ಬೊಜ್ಜಿಗೂ ಅಧಿಕ ರಕ್ತದೊತ್ತಡಕ್ಕೂ ನೇರ ಸಂಬಂಧವಿದೆ. ನಿಯಮಿತ ವ್ಯಾಯಮದಿಂದ ಶರೀರದ ತೂಕ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ಬೊಜ್ಜನ್ನು ನಿಯಂತ್ರಿಸುವ ಪಾತ್ರ ಹಿರಿದು. ಇಂತಹವರಲ್ಲಿ ದೇಹದ ತೂಕ ಸುಮಾರು ಐದು ಪ್ರತಿಶತ ಕಡಿಮೆಯಾದರೂ ಹೃದಯದ ಕಾರ್ಯಕ್ಷಮತೆ ಸುಮಾರು ಪ್ರತಿಶತ ಹತ್ತರವರೆಗೆ ಸುಧಾರಿಸಬಲ್ಲದು. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಮಧುಮೇಹ, ನಿದ್ರಾಹೀನತೆ, ಖಿನ್ನತೆ, ಮುಂತಾದ ಕೆಲವು ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳನ್ನು ವ್ಯಾಯಾಮ ನಿಯಂತ್ರಿಸಬಲ್ಲದು.

ಎಂತಹ ವ್ಯಾಯಾಮಗಳು ಸಹಕಾರಿ?

ಶರೀರಕ್ಕೆ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸುವ ವ್ಯಾಯಮಗಳನ್ನು ಮಾಡುವುದು ಸೂಕ್ತ. ಆರಂಭದಲ್ಲಿ ನಿಧಾನಗತಿಯಿಂದಲೇ ವ್ಯಾಯಾಮ ಸಾಗಬೇಕು. ಕಾಲಕ್ರಮೇಣ ನಮ್ಮ ಶರೀರಕ್ಕೆ ಒಗ್ಗುವಂತಹ ಸುರಕ್ಷಿತ ಗತಿಯಲ್ಲಿ ಪ್ರಯತ್ನವನ್ನು ಏರಿಸುತ್ತಾ ಹೋಗಬಹುದು. ಆರೋಗ್ಯವರ್ಧನೆಗಾಗಿ ಮಾಡುವ ವ್ಯಾಯಾಮದ ಪ್ರಕ್ರಿಯೆಯಲ್ಲಿ ಮುಖ್ಯವಾದದ್ದು ಎಷ್ಟು ನಿಯಮಿತವಾಗಿ, ರೂಢಿ ತಪ್ಪದಂತೆ, ನಿಧಾನವಾಗಿ ಪ್ರಮಾಣವನ್ನು ವೃದ್ಧಿಸುತ್ತಾ ಮಾಡುತ್ತೇವೆ ಎಂಬುದು. ಸರಳವಾದ ದೀರ್ಘ ಶ್ವಾಸದೊಡನೆ ಮಾಡುವ ಚುರುಕು ನಡಿಗೆ; ನುರಿತ ಯೋಗಪಟುಗಳಿಂದ ವೈಯಕ್ತಿಕವಾಗಿ ಕಲಿತ ನಂತರ ಮಾಡುವ ಯೋಗ ಮತ್ತು ಪ್ರಾಣಾಯಾಮ; ಆರಾಮದಾಯಕ ಈಜು; ಸರಾಗವಾದ ಬೈಸಿಕಲ್ ಸವಾರಿ; ಶ್ಲೋಕೋಚ್ಚಾರದ ಅವಧಿಗೆ ಅನುಸಾರವಾಗಿ ಮಾಡುವ ಸೂರ್ಯ ನಮಸ್ಕಾರ; ಗುರುಗಳಿಂದ ಸಾಕಷ್ಟು ಅವಧಿಗೆ ಕಲಿತ ನಂತರ ಮಾಡುವ ಶಾಸ್ತ್ರೀಯ ನೃತ್ಯದ ಅಭ್ಯಾಸ, ಸಪ್ರಮಾಣವಾಗಿ ಮಾಡುವ ತೋಟದ ಕೆಲಸ – ಇಂತಹ ಯಾವುದಾದರೂ ಆಗಬಹುದು. ಅಭ್ಯಾಸವಿರುವ ವಿವಿಧ ಬಗೆಯ ವ್ಯಾಯಾಮ ಶೈಲಿಗಳನ್ನು ಆಗಾಗ್ಗೆ ಬದಲಿಸುತ್ತಾ ವೈವಿಧ್ಯಗಳನ್ನು ರೂಢಿಸಿಕೊಳ್ಳಬಹುದು. ವ್ಯಾಯಾಮದ ಮುನ್ನ ಸ್ನಾಯುಗಳನ್ನು ಕ್ರಮವಾಗಿ ಹಿಗ್ಗಿಸುವ ಚರ್ಯೆಗಳು; ವ್ಯಾಯಾಮದ ನಂತರ ಶರೀರಕ್ಕೆ ಒಂದು ಕ್ರಮದಲ್ಲಿ ನೀಡಬೇಕಾದ ವಿಶ್ರಾಂತಿ ಬಹಳ ಮುಖ್ಯ. ಯಾವುದೇ ವ್ಯಾಯಾಮವನ್ನೂ ಏಕಾಏಕಿ ಮಾಡಲೂಬಾರದು; ನಿಲ್ಲಿಸಲೂಬಾರದು. ಆಗ ಮಾತ್ರ ಅದು ಆರೋಗ್ಯಕ್ಕೆ ಪೂರಕವಾಗುತ್ತದೆ. ಇಲ್ಲವಾದರೆ ವ್ಯಾಯಾಮವೇ ಸಮಸ್ಯೆಯಾದೀತು.

ವ್ಯಾಯಾಮದ ವೇಳೆ ಶರೀರಕ್ಕೆ ಹೆಚ್ಚಿನ ಆಕ್ಸಿಜನ್ ಅಗತ್ಯವಿದೆ. ಆದ್ದರಿಂದ ಉಸಿರುಗಟ್ಟಿ ಮಾಡುವ ಯಾವುದೇ ವ್ಯಾಯಾಮವೂ ಶರೀರಕ್ಕೆ ಸೂಕ್ತವಲ್ಲ. ವ್ಯಾಯಾಮದ ಜೊತೆಗೆ ಸರಿಯಾದ ರೀತಿಯಲ್ಲಿ ಉಸಿರಾಡುವುದು ಕೂಡ ಒಳ್ಳೆಯ ವ್ಯಾಯಾಮದ ಭಾಗವೇ ಆಗಿರುತ್ತದೆ. ಈ ಕಲೆಗಾರಿಕೆಯನ್ನು ಪ್ರತಿಯೊಂದು ವ್ಯಾಯಾಮದ ಜೊತೆಗೂ ಪ್ರಜ್ಞಾಪೂರ್ವಕವಾಗಿ ರೂಡಿಸಿಕೊಳ್ಳಬೇಕು. ಉದಾಹರಣೆಗೆ, ಯೋಗಾಭ್ಯಾಸ ಮಾಡುವಾಗ ನುರಿತ ತರಬೇತುದಾರರು ಯಾವ ಹಂತದಲ್ಲಿ ಉಸಿರು ಸೆಳೆದುಕೊಳ್ಳಬೇಕು, ಯಾವಾಗ ನಿಶ್ವಾಸ ಮಾಡಬೇಕು ಎಂಬುದನ್ನೂ ಹೇಳಿಕೊಡುತ್ತಾರೆ. ಇದನ್ನು ಸರಿಯಾಗಿ ಕಲಿಯುವುದೂ ಯೋಗಾಸನ ಮಾಡುವವರಿಗೆ ಬಹಳ ಮುಖ್ಯ. ಅಂತೆಯೇ, ವೇಗವಾದ ನಡಿಗೆಯ ವೇಳೆ ಮಾತನಾಡಬಾರದು; ಬದಲಿಗೆ ಉಸಿರನ್ನು ಸಾಧ್ಯವಾದಷ್ಟೂ ಬಿಟ್ಟು, ಅಷ್ಟೇ ದೀರ್ಘವಾಗಿ ಸೆಳೆದುಕೊಳ್ಳುವ ವಿಧಾನವನ್ನು ರೂಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ಇದು ಫಲಕಾರಿ.

ಯಾವ ರೀತಿಯ ವ್ಯಾಯಮಗಳನ್ನು ಮಾಡಬಾರದು?

ಕೆಲವು ತೀವ್ರಗತಿಯ ವ್ಯಾಯಾಮಗಳು ದೇಹದ ಆಕ್ಸಿಜನ್ ಅಗತ್ಯವನ್ನು, ರಕ್ತದೊತ್ತಡವನ್ನು ಏಕಾಏಕಿ ಹೆಚ್ಚಿಸುತ್ತವೆ. ಉದಾಹರಣೆಗೆ, ಅಧಿಕ ತೂಕಗಳನ್ನು ಎತ್ತುವ ವ್ಯಾಯಾಮ, ವೇಗವಾದ ಓಟ, ಸ್ಕ್ವಾಶ್ ನಂತಹ ಹೆಚ್ಚಿನ ಬಲ ಮತ್ತು ವೇಗವನ್ನು ಬೇಡುವ ಕ್ರೀಡೆಗಳು, ಒಂದೇ ಸಮನೆ ದೋಣಿ ಹುಟ್ಟು ಹಾಕುವ ಕಯಾಕ್ ನಂತಹ ಚಟುವಟಿಕೆಗಳು, ನೀರಿನಾಳಕ್ಕೆ ಜಿಗಿಯುವ ಕ್ರಿಯೆ, ಜಿಮ್ ಗಳಲ್ಲಿ ಮಾಡುವ ತೀವ್ರ ದೇಹದಣಿವು ಮೊದಲಾದವು ನಾವು ಸೆಳೆದುಕೊಳ್ಳಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚಿನ ಆಕ್ಸಿಜನ್ ಬೇಡುತ್ತವೆ. ಇವು ಚೆನ್ನಾಗಿ ತರಬೇತಾದ ಕ್ರೀಡಾಪಟುಗಳು, ಕಸರತ್ತು ಮಾಡುವವರು ಮಾಡುವಂತಹ ವ್ಯಾಯಾಮಗಳು. ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ವ್ಯಾಯಾಮ ಮಾಡವವರು ಇಂತಹ ತೀವ್ರಗತಿಯ ಶರೀರ ದಂಡನೆ ಮಾಡಬಾರದು.

ಒಂದು ಮುಖ್ಯವಾದ ಎಚ್ಚರಿಕೆ

ವ್ಯಾಯಾಮ ಆರಂಭಿಸಿದೆವು ಎನ್ನುವ ಒಂದೇ ಹಿನ್ನೆಲೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಸೇವಿಸುತ್ತಿರುವ ಔಷಧಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಅಧಿಕ ರಕ್ತದೊತ್ತಡ ಕಾಡಿದಾಗ ವ್ಯಾಯಾಮ ಆರಂಭಿಸುವವರು ಅಥವಾ ಈಗಾಗಲೇ ವ್ಯಾಯಾಮ ಮಾಡುತ್ತಿರುವವರು ತಮ್ಮ ವ್ಯಾಯಾಮ ವಿಧಾನಗಳ ಬಗ್ಗೆ ವೈದ್ಯರಲ್ಲಿ ಚರ್ಚೆ ಮಾಡಿ ಮುಂದುವರೆಯಬೇಕು. ದೀರ್ಘಕಾಲಿಕ ನಿಯಮಿತ ವ್ಯಾಯಾಮದಿಂದ ಔಷಧಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು. ಆದರೆ, ಔಷಧದ ಪ್ರಮಾಣವನ್ನು ವೈದ್ಯರ ಸಲಹೆಯಿಲ್ಲದೇ ತಗ್ಗಿಸಬಾರದು.

ನಿಯಮಿತ ವ್ಯಾಯಾಮವೆಂಬುದು ಆಯ್ಕೆಯಲ್ಲ; ಶರೀರದ ನಿರ್ವಹಣೆಯ ಕಡ್ಡಾಯ ಅಂಶ. “ಎಂತಹ ವ್ಯಾಯಾಮ ಮಾಡಬೇಕು” ಎಂಬುದು ಮಾತ್ರ ವೈಯಕ್ತಿಕ ಆಯ್ಕೆ. ಇದನ್ನು ವೈಜ್ಞಾನಿಕವಾಗಿ ಅನುಸರಿಸಿದರೆ ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ, ಅಧಿಕ ರಕ್ತದೊತ್ತಡದ ಕಾರಣವಾಗಿ ಸಂಭವಿಸಬಹುದಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿಯಾಗುತ್ತದೆ. ಆರೋಗ್ಯವೆಂಬುದು ಚಟುವಟಿಕೆಯ ದೇಹದಲ್ಲಿರುತ್ತದೆ; ಅನಗತ್ಯ ಆರಾಮದಲ್ಲಿ ಇರುವುದಿಲ್ಲ. ನಿಯಮಿತ ವ್ಯಾಯಾಮ ಹೃದಯಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ಒಂದು.   

-----------------------

8/11/2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನದ ಕೊಂಡಿ: https://www.prajavani.net/health/to-control-bp-adopt-excise-986590.html

 

 

 


ಹೃದಯದ ಆರೈಕೆ - ಹಾರೈಕೆ 

ಡಾ. ಕಿರಣ್ ವಿ. ಎಸ್. 

ವೈದ್ಯರು 

ಯಾರಿಗಾದರೂ ಹೃದಯಾಘಾತವಾಯಿತು ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಏಳುವ ಮೊದಲ ಪ್ರಶ್ನೆ “ಎಷ್ಟು ವಯಸ್ಸಾಗಿತ್ತು?” ಎನ್ನುವುದು. ಒಂದೆರಡು ದಶಕಗಳ ಮುನ್ನ ಹೃದಯಾಘಾತ ಎನ್ನುವುದು ವೃದ್ಧಾಪ್ಯದಲ್ಲಿ ಕಾಣುವ ಸಮಸ್ಯೆ ಎನ್ನುವ ಭಾವವೇ ಇತ್ತು. ಆದರೆ ಈಚೆಗೆ ಮೂವತ್ತರ ಹರೆಯದಲ್ಲೂ ಹೃದಯಾಘಾತ ಆಗುತ್ತಿರುವ ಪ್ರಸಂಗಗಳು ಸಾಮಾನ್ಯ ಎಂದಾಗಿವೆ. ಇಂತಹ ವಯಸ್ಸಿನಲ್ಲಿ ತೀರಾ ಅಪರೂಪ ಎನ್ನುವಂತಿದ್ದ ಹೃದಯಾಘಾತ ಈಗ ಹೆಚ್ಚುತ್ತಿರುವ ಕಾರಣಗಳೇನು? ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಹೃದಯಾಘಾತ ಏಕಾಗುತ್ತಿದೆ? ಇದರಿಂದ ಕಾಪಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗಳ ವಿಶ್ಲೇಷಣೆ, ವಿವೇಚನೆಯತ್ತ ಒಂದು ಪ್ರಯತ್ನ.

ಹೃದಯಾಘಾತ ಎಂದರೇನು ಎಂದು ಅರಿಯುವ ಮುನ್ನ ಹೃದಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು. ಮಾನವ ದೇಹದಲ್ಲಿ ಒಟ್ಟು 78 ವಿವಿಧ ಅಂಗಗಳಿವೆ. ಇವುಗಳಲ್ಲಿ ಮಿದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳೆಂಬ ಐದು ಅಂಗಗಳು ಪ್ರಮುಖವಾದುವು. ಪ್ರಮುಖವೇಕೆಂದರೆ, ಈ ಐದೂ ಅಂಗಗಳ ಪೈಕಿ ಯಾವುದಾದರೂ ಒಂದು ಕೆಲ ನಿಮಿಷಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾದರೆ ಜೀವನ ಅಲ್ಲಿಗೆ ಮುಗಿಯುತ್ತದೆ. ಉಳಿದ ಅಂಗಗಳು ಹಾಗಲ್ಲ. ಉದಾಹರಣೆಗೆ ಕಣ್ಣು ಕಾಣದೆ ಹೋದರೆ, ರುಚಿ ತಿಳಿಯದೆ ಹೋದರೆ ಬದುಕು ಕಷ್ಟವಾಗಬಹುದೇ ಹೊರತು, ಪ್ರಾಣಕ್ಕೆ ನೇರವಾಗಿ ಅಪಾಯವಿಲ್ಲ.

ಹೃದಯ ಅತ್ಯಂತ ಸರಳವಾದ ಅಂಗ. ಇತರ ಪ್ರಮುಖ ಅಂಗಗಳು ಕೆಲಸ ಮಾಡಲು ಕ್ಲಿಷ್ಟಕರ ರಾಸಾಯನಿಕ ಪ್ರಕ್ರಿಯೆಗಳ ಅಗತ್ಯವಿದೆ. ಆದರೆ ಹೃದಯ ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಇತರ ಪ್ರಮುಖ ಅಂಗಗಳನ್ನು ನೂರಾರು ಪರಸ್ಪರ ಅವಲಂಬಿತ ಬಿಡಿಭಾಗಗಳಿಂದ ಕೂಡಿದ ಸಂಕೀರ್ಣವಾದ ವಾಹನಕ್ಕೆ ಹೋಲಿಸುವುದಾದರೆ, ಹೃದಯ ಒಂದು ಮೋಟಾರು, ಒಂದು ಬ್ಯಾಟರಿ ಸಂಪರ್ಕದ ಮೂಲಕ ನಿರಂತರವಾಗಿ ಕೆಲಸ ಮಾಡುವ ಎಲೆಕ್ಟ್ರಿಕ್ ಕಾರು ಎನ್ನಬಹುದು. ಹೃದಯವೆಂಬ ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ.

ಹೃದಯದ ಕೆಲಸ ಅತ್ಯಂತ ಮಹತ್ವದ್ದು ಎನ್ನುವ ಕಾರಣಕ್ಕೆ ಪ್ರಾಯಶಃ ನಿಸರ್ಗ ಅದರ ರಚನೆಯನ್ನು ಬಹಳ ಸರಳವಾಗಿಟ್ಟಿದೆ. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಇದರ ಜೊತೆಗೆ ಶರೀರ ಉತ್ಪಾದಿಸುವ ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕಲು ಆಯಾ ಅಂಗಗಳಿಗೆ ಸಹಾಯಕವಾಗುವ ಹೊಣೆಯೂ ಹೃದಯದ್ದೇ.

ಒಂದು ರೀತಿಯಲ್ಲಿ ಹೃದಯ ರಕ್ತವನ್ನು ಹಾಸಿ ಹೊದ್ದಿದ್ದರೂ, ಅದನ್ನು ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ನೇರವಾಗಿ ಬಳಸಿಕೊಳ್ಳುವಂತಿಲ್ಲ. ಆಕ್ಸಿಜನ್ ಮತ್ತು ಪೋಷಕಾಂಶಗಳ ಅಗತ್ಯಗಳನ್ನು ಹೃದಯಕ್ಕೆ ಪೂರೈಸಲು ಬೇಕಾಗುವ ರಕ್ತವನ್ನು ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು. ಇಂತಹ ಮೂರು ಮುಖ್ಯ ಕರೊನರಿ ರಕ್ತನಾಳಗಳ ಪೈಕಿ ಪ್ರತಿಯೊಂದೂ ಹಲವಾರು ಬಾರಿ ಕವಲೊಡೆದು ಹೃದಯದ ನಿರ್ಧಾರಿತ ಭಾಗಗಳಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತವೆ. ಹೃದಯದ ರಕ್ತಸಂಚಾರಕ್ಕೆ ಏಕೈಕ ಆಧಾರವಾಗಿರುವ ಮೂರು ಕರೊನರಿ ರಕ್ತನಾಳಗಳ ಪೈಕಿ ಕನಿಷ್ಠ ಒಂದು ರಕ್ತನಾಳದ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ ಹೃದಯದ ಆಯಾ ನಿರ್ದಿಷ್ಟ ಸ್ನಾಯುಗಳಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಮತ್ತು ಪೋಷಕಾಂಶಗಳ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಆಯಾ ಮಾಂಸಖಂಡಗಳ ಭಾಗಗಳು ನಿತ್ರಾಣವಾಗಿ, ಸ್ನಾಯುಕೋಶಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಗಣನೀಯ ಪ್ರಮಾಣ ತಲುಪಿದರೆ ಹೃದಯದ ಕಾರ್ಯಕ್ಷಮತೆ ಶೀಘ್ರವಾಗಿ ಇಳಿದುಹೋಗುತ್ತದೆ; ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಈ ಪ್ರಕ್ರಿಯೆಗೆ ತೀವ್ರ ಹೃದಯಾಘಾತ ಎಂದು ಹೆಸರು. ಈ ಆಘಾತ ಸಹಿಸಲಾಗದೆ ಹೃದಯ ಹಠಾತ್ತಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಕೆಲಹೊತ್ತಿನಲ್ಲಿ ಮರಣ ಸಂಭವಿಸುತ್ತದೆ. ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಈ ರಕ್ತನಾಳಗಳು ಎಷ್ಟು ಪ್ರತಿಶತ ಕಟ್ಟಿಕೊಂಡಿವೆ; ವ್ಯಕ್ತಿ ಭೌತಿಕವಾಗಿ ಎಷ್ಟು ಸಕ್ರಿಯರಾಗಿದ್ದಾರೆ ಎನ್ನುವುದರ ಮೇಲೆ ಹೃದಯದ ಕಾರ್ಯಕ್ಷಮತೆಯ ನಿರ್ಧಾರವಾಗುತ್ತದೆ.

ಆದರೆ ಹೃದಯದ ರಕ್ತನಾಳಗಳು ಏಕೆ ಕಟ್ಟಿಕೊಳ್ಳುತ್ತವೆ? ಬಹುಮಟ್ಟಿಗೆ ಇದಕ್ಕೆ ಕಾರಣ ರಕ್ತನಾಳಗಳ ಒಳಭಾಗದಲ್ಲಿ ಆಗುವ ಕೊಬ್ಬಿನ ಅಂಶದ ಶೇಖರಣೆ. ರಕ್ತನಾಳಗಳ ಒಳಭಾಗದ ಅಲ್ಲಲ್ಲಿ ಇಂತಹ ಕೊಬ್ಬಿನ ಪದರಗಳು ಬೆಳೆದರೆ ರಕ್ತದ ಸರಾಗ ಹರಿಕೆಗೆ ತಡೆಯುಂಟಾಗುತ್ತದೆ. ಇದೊಂದು ರೀತಿ ಅವೈಜ್ಞಾನಿಕ ರಸ್ತೆಯುಬ್ಬು ಇದ್ದಂತೆ. ಇದರಿಂದ ಹೃದಯದ ಸ್ನಾಯುಗಳಿಗೆ ಹರಿಯಬೇಕಾದ ರಕ್ತದ ಪ್ರಮಾಣ ಮತ್ತು ವೇಗ – ಎರಡಕ್ಕೂ ಮಿತಿ ವಿಧಿಸಿದಂತಾಗುತ್ತದೆ. ಹೀಗೆ ಕೊಬ್ಬಿನ ಶೇಖರಣೆಯಾಗಲು ನಿರ್ದಿಷ್ಟ ಕಾರಣವಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ, ಮದ್ಯಪಾನ, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಾಗಿರುವುದು, ಬೊಜ್ಜು, ಮಾನಸಿಕ ಒತ್ತಡ, ಭೌತಿಕ ಚಟುವಟಿಕೆಯಿಲ್ಲದ ಸೋಮಾರಿ ಜೀವನಶೈಲಿ, ವ್ಯಾಯಾಮವಿಲ್ಲದ ದಿನಚರಿ, ಅನಾರೋಗ್ಯಕರ ಆಹಾರ, ನಿದ್ರಾಹೀನತೆ, ಮಾಲಿನ್ಯದ ವಾತಾವರಣ, ಅಶಿಸ್ತಿನ ಬದುಕು, ವಂಶವಾಹಿಯಲ್ಲಿ ಹರಿಯುವ ದೋಷಯುಕ್ತ ಜೀನ್ಗಳು ಕರೊನರಿ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಕೆಲವು ಕಾರಣಗಳು. ಇವಲ್ಲದೆ, ನಮಗೆ ಈವರೆಗೆ ತಿಳಿಯದ ಕಾರಣಗಳೂ ಸಾಕಷ್ಟು ಇರಬಹುದು.

ತನ್ನ ಕೆಲಸಕ್ಕೆ ಬೇಕಾದ ರಕ್ತದ ಕೊರತೆಯುಂಟಾದಾಗ ಹೃದಯದ ಸಾಮರ್ಥ್ಯ ಕುಗ್ಗುತ್ತದೆ. ಆದರೆ, ಇಡೀ ದೇಹಕ್ಕೆ ರಕ್ತ ಪೂರೈಸುವ ಹೊಣೆಗಾರಿಕೆ ಹೃದಯದ್ದೇ ಅಲ್ಲವೇ? ಹೀಗಾಗಿ, ತಮಗೆ ತಲುಪಬೇಕಾದ ರಕ್ತದ ಪ್ರಮಾಣ ಇಳಿಮುಖವಾದರೆ ಆಯಾ ಅಂಗಗಳು ಹೃದಯಕ್ಕೆ ಸೂಚನೆ ತಲುಪಿಸಿ, ಮಿದುಳಿಗೆ ದೂರು ನೀಡುತ್ತವೆ. ಇದರಿಂದ ಮತ್ತಷ್ಟು ಒತ್ತಡಕ್ಕೆ ಸಿಲುಕಿದ ಹೃದಯ, ತನ್ನ ಶಕ್ತಿಯನ್ನು ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತದೆ. ಹೀಗೆ ಮಾಡಿದಾಗ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಎದೆನೋವು, ಅನುಭವಕ್ಕೆ ಬರುವಷ್ಟು ಎದೆಬಡಿತ, ಸುಸ್ತು, ಏರುಗತಿಯ ಉಸಿರಾಟ, ಸಣ್ಣ ಕೆಲಸಕ್ಕೂ ಬೆವರುವುದು, ಈ ಮೊದಲು ಆರಾಮವಾಗಿ ಮಾಡುತ್ತಿದ್ದಷ್ಟು ಕೆಲಸ ಮಾಡಲು ಸಾಧ್ಯವಾಗದಿರುವುದು, ತಲೆಸುತ್ತು, ಪ್ರಜ್ಞೆ ಕಳೆದುಕೊಳ್ಳುವುದು, ಮೊದಲಾದ ಅನುಭವಗಳಾಗಬಹುದು. ವಿಶ್ರಾಂತ ಸ್ಥಿತಿಯಲ್ಲಿ ಶರೀರಕ್ಕೆ ರಕ್ತದ ಅಗತ್ಯ ಕಡಿಮೆ. ಆದರೆ ವ್ಯಾಯಾಮ ಮಾಡಿದರೆ, ಶ್ರಮದಾಯಕ ಕೆಲಸ ಮಾಡಿದರೆ, ಭಾರ ಹೊತ್ತು ನಡೆದರೆ ಶರೀರಕ್ಕೆ ಆಕ್ಸಿಜನ್ ಮತ್ತು ಪೋಷಕಾಂಶಗಳ ಅಗತ್ಯ ಹೆಚ್ಚುತ್ತದೆ. ಈ ಹೆಚ್ಚುವರಿ ಅಗತ್ಯಗಳನ್ನು ಈಗಾಗಲೇ ಸುಸ್ತಾಗಿರುವ ಹೃದಯ ಪೂರೈಸಲಾರದು. ಹೀಗಾಗಿ, ಹೃದಯ ದೌರ್ಬಲ್ಯ ಇರುವವರು ಯಾವುದಾದರೂ ಶ್ರಮದ ಕೆಲಸ ಮಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗುತ್ತಾರೆ.

ಕಳೆದ ಎರಡು-ಮೂರು ದಶಕಗಳಲ್ಲಿ ಜಾಗತಿಕ ಪ್ರಗತಿ ವಿಪರೀತ ವೇಗೋತ್ಕರ್ಷ ಪಡೆದುಕೊಂಡಿದೆ. ಇದರಿಂದ ಜನಸಾಮಾನ್ಯರ ಜೀವನಶೈಲಿ ಅನೂಹ್ಯ ಬದಲಾವಣೆಗಳನ್ನು ಕಂಡಿದೆ. ಪ್ರಗತಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಬಹುತೇಕ ಎಲ್ಲ ವಯಸ್ಸಿನವರಿಗೂ ಅಗತ್ಯವಾಗಿದೆ. ಯುವಜನತೆಗೆ, ಮಧ್ಯವಯಸ್ಕರಿಗೆ ಇದು ಬದುಕಿನ ಭಾಗವೇ ಆಗಿಹೋಗಿದೆ. ಉದ್ಯೋಗದಲ್ಲಿನ ಮಾನಸಿಕ ಒತ್ತಡ, ಅದನ್ನು ಸಹಿಸಲು ಅನಾರೋಗ್ಯಕರ ಚಟಗಳಿಗೆ ಮೊರೆ ಹೋಗುವ ಜೀವನಶೈಲಿ, ಬದುಕಿನಲ್ಲಿ ಆದ್ಯತೆಗಳು ಬದಲಾದಂತೆ ಕಡಿಮೆಯಾಗುತ್ತಿರುವ ಕೌಟುಂಬಿಕ ಭದ್ರತೆ, ವೈಯಕ್ತಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಬೀಸುಬೀಡಾದ ಆಹಾರ ಸೇವನೆ, ಸಾಮಾಜಿಕ ಬಾಂಧವ್ಯಗಳ ನಿರ್ವಹಣೆಯ ಹೆಸರಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ಚಟ. ಮೊದಲಾದುವು ಹೃದಯ ಮತ್ತು ಉಳಿದ ಅಂಗಗಳ ಮೇಲೆ ಹರಿಸುತ್ತಿರುವ ಒತ್ತಡ ಅನೇಕ ಬಾರಿ ಒಂದು ನಿರ್ಣಾಯಕ ಹಂತವನ್ನು ತಲುಪುತ್ತದೆ. ಮಹಾಭಾರತದ ಯಕ್ಷಪ್ರಶ್ನೆಯಲ್ಲಿನ ಕೊನೆಯ ಪ್ರಶ್ನೆಯ ಉತ್ತರದಂತೆ ಎಲ್ಲರಿಗೂ ಏನೇನೋ ಆಗುತ್ತಿದ್ದರೂ ನನಗೇನೂ ಆಗುವುದಿಲ್ಲ” ಎನ್ನುವ ಮನೋಭಾವದ ಮಂದಿ, ಅಂತಹುದೇ ಪರಿಣಾಮ ತಮಗೆ ಆಗುವವರೆಗೆ ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವುದು ನಮ್ಮ ಕಾಲದ ಬಹುದೊಡ್ಡ ವಿಪರ್ಯಾಸ.

ಹೃದಯದ ಆರೋಗ್ಯಕ್ಕೆ ಎರವಾಗುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಡೆಗಟ್ಟಬಹುದಾದ ಅಂಶಗಳೇ ಹೆಚ್ಚಾಗಿ ಇರುವುದು ಆಶಾದಾಯಕ ಸಂಗತಿ. ಅದನ್ನು ಪಾಲಿಸಬಲ್ಲ ಮನಸ್ಥಿತಿಯ ಕೊರತೆಯೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ತಂಬಾಕು, ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರುವುದು; ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು; ದೈನಂದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಪಾಲನೆ; ಆಹಾರ ಸೇವನೆಯಲ್ಲಿ ಶಿಸ್ತು; ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ ನಿದ್ರೆ; ಹಣ ಮತ್ತು ಆರೋಗ್ಯದ ನಿರ್ವಹಣೆಯನ್ನು ತೂಗಬಲ್ಲ ಉದ್ಯೋಗದ ಆಯ್ಕೆ; ಕೌಟುಂಬಿಕ ಸಂಬಂಧಗಳ ಆರೋಗ್ಯಕರ ಪೋಷಣೆ; ಮನಸ್ಸಿನ ದುಗುಡಗಳನ್ನು ಚರ್ಚಿಸಿ, ದಾರಿ ಕಾಣಿಸಬಲ್ಲ ಸ್ನೇಹಿತರ, ಬಂಧುಗಳ ಆಪ್ತವಲಯದ ನಿರ್ಮಾಣ; ವೈಯಕ್ತಿಕ ಆರೋಗ್ಯದ ನಿರ್ವಹಣೆಗೆ ನಿಯಮಿತ ವೈದ್ಯರೊಬ್ಬರ ಸಲಹೆಗಳು; ಮಾನಸಿಕ ನೆಮ್ಮದಿಗೆ ಬೇಕಾದ ಜೀವನಶೈಲಿ, ಮೊದಲಾದುವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರ ಆವಶ್ಯಕತೆಗಳಾಗಬೇಕು. ಮೂವತ್ತರ ಹರೆಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿ, ದಿಕ್ಕು ತಪ್ಪುತ್ತಿರುವ ಬದುಕನ್ನು ಸರಿಯಾದ ಹಾದಿಯಲ್ಲಿ ತಿರುಗಿಸಬಲ್ಲ ಮಾರ್ಗದರ್ಶಿಯಾಗಬೇಕು. “ಪ್ರತಿಯೊಂದು ಸಾವು ಮಹತ್ವದ ಕಲಿಕೆಯೊಂದನ್ನು ನೀಡದಿದ್ದರೆ ನಿಮ್ಮ ತರಬೇತಿ ಅಪೂರ್ಣ” ಎನ್ನುವುದು ಈಗ ಕೇವಲ ವೈದ್ಯವ್ಯಾಸಂಗದ ಮಾತಾಗಿ ಉಳಿದಿಲ್ಲ. ಅದು ಪ್ರತಿಯೊಬ್ಬರಿಗೂ ಅನ್ವಯವಾಗಬೇಕಿದೆ.   

------------------

ದಿನಾಂಕ 6/11/2022 ರ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುರವಣಿಯ ಅಗ್ರ ಲೇಖನ 

 


ಶ್ವಾಸಕೋಶಗಳ ಗಣಿತ

ನಾವು ಸುಮಾರು ಮೂರು-ನಾಲ್ಕು ಸೆಕೆಂಡಿಗೆ ಒಮ್ಮೆ ಶ್ವಾಸ ಎಳೆಯುತ್ತೇವೆ. ಪ್ರತಿಯೊಂದು ಶ್ವಾಸದಲ್ಲಿ ಸುಮಾರು ಅರ್ಧ ಲೀಟರ್ ಗಾಳಿಯನ್ನು ಸೆಳೆದುಕೊಳ್ಳುತ್ತೇವೆ. ಅಂದರೆ, ಸರಿಸುಮಾರು ನಿಮಿಷಕ್ಕೆ ಎಂಟು ಲೀಟರ್; ದಿನವೊಂದಕ್ಕೆ ಸುಮಾರು ಹನ್ನೊಂದು ಸಾವಿರ ಲೀಟರ್; ವರ್ಷಕ್ಕೆ ನಲವತ್ತೆರಡು ಲಕ್ಷ ಲೀಟರ್ ಗಾಳಿ. ಒಂದು ಜೀವಿತ ಕಾಲದಲ್ಲಿ ಓರ್ವ ವ್ಯಕ್ತಿ 30 ಕೋಟಿ ಲೀಟರ್ ಗಾಳಿಯನ್ನು ಉಸಿರಾಡುತ್ತಾನೆ!

ಮೂಗಿನ ಹೊಳ್ಳೆಗಳಿಂದ ಆರಂಭವಾಗುವ ಶ್ವಾಸಮಾರ್ಗ ಕೊನೆಯಾಗುವುದು ಶ್ವಾಸಕೋಶಗಳ ಅಂತಿಮ ಹಂತದ ಬಲೂನಿನಂತಹ ಶ್ವಾಸಚೀಲಗಳಲ್ಲಿ. Alveolus ಎಂಬ ಹೆಸರಿನ ಈ ಶ್ವಾಸಚೀಲಗಳು ಎರಡೂ ಶ್ವಾಸಕೋಶಗಳನ್ನು ಸೇರಿ ಸುಮಾರು 60 ಕೋಟಿ ಇವೆ. ಇವುಗಳನ್ನು ಒಂದೊಂದಾಗಿ ಬಿಚ್ಚಿ, ಮಟ್ಟಸವಾಗಿ ನೆಲದ ಮೇಲೆ ಹರಡಿದರೆ ಸುಮಾರು 600 ಚದರಡಿ ವ್ಯಾಪಿಸಿಕೊಳ್ಳುತ್ತವೆ. ಅಂದರೆ 20 x 30 ಅಳತೆಯ ನಿವೇಶನದಷ್ಟು ವಿಸ್ತೀರ್ಣ! ಇಷ್ಟಾದರೂ ಶ್ವಾಸಕೋಶದ ತೂಕ ಸುಮಾರು ಅರ್ಧ ಕಿಲೋಗ್ರಾಂ. ಶರೀರದ ಎಲ್ಲಾ ಅಂಗಗಳ ಪೈಕಿ ನೀರಿನಲ್ಲಿ ತೇಲಬಲ್ಲ ಒಂದೇ ಒಂದು ಅಂಗವೆಂದರೆ ಶ್ವಾಸಕೋಶಗಳು. ನಾವು ಸಾಧ್ಯವಾದಷ್ಟೂ ದೀರ್ಘವಾಗಿ ಉಸಿರನ್ನು ಹೊರಗೆ ಬಿಟ್ಟು ಎದೆಯನ್ನು ಖಾಲಿ ಮಾಡಿದಾಗಲೂ ಶ್ವಾಸಕೋಶಗಳಲ್ಲಿ ಸುಮಾರು ಒಂದು ಲೀಟರ್ ನಷ್ಟು ಗಾಳಿ ಹಾಗೆಯೇ ಉಳಿದಿರುತ್ತದೆ.

ವಿಶ್ರಾಂತಿ ಸಮಯದ ಸಾಮಾನ್ಯ ಉಸಿರಾಟದ ವೇಳೆ ಶರೀರಕ್ಕೆ ಹೆಚ್ಚಿನ ಆಕ್ಸಿಜನ್ ಬೇಕಿಲ್ಲ. ಆ ಸಮಯಯಲ್ಲಿ ಶ್ವಾಸಕೋಶಗಳು ಭಾಗಶಃ ಕೆಲಸ ಮಾಡಿದರೂ ಸಾಕು. ಆದರೆ ವ್ಯಾಯಾಮದ ವೇಳೆ ಶರೀರಕ್ಕೆ ಬೇಕಾಗುವ ಅಧಿಕ ಆಕ್ಸಿಜನ್ ಪೂರೈಸಲು ಉಸಿರಾಟದ ವೇಗ ಮತ್ತು ಶ್ವಾಸಕೋಶಗಳ ಸಾಮರ್ಥ್ಯ – ಎರಡೂ ಹೆಚ್ಚುತ್ತವೆ. ಅಂತಹ ಪ್ರತೀ ನಿಮಿಷವೂ ಸಾಮಾನ್ಯ ಮಟ್ಟಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಪ್ರತಿದಿನವೂ ಒಂದೆರಡು ಗಂಟೆಗಳ ಕಾಲ ನಿರಂತರವಾಗಿ ತಿಂಗಳುಗಟ್ಟಲೇ ವ್ಯಾಯಾಮ ಮಾಡಿದಷ್ಟೂ ಶ್ವಾಸಕೋಶಗಳ ಸಾಮರ್ಥ್ಯ ಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ವರ್ಷಗಳ ಕಾಲ ವ್ಯಾಯಾಮ ಮಾಡುತ್ತಾ ಚೆನ್ನಾಗಿ ಪಳಗಿದ ಕ್ರೀಡಾಪಟುಗಳಲ್ಲಿ ಒಂದು ಸೀಮಿತ ಅವಧಿಯ ಲೆಕ್ಕಾಚಾರ ಪರಿಗಣಿಸಿದರೆ ಸಾಮಾನ್ಯ ಮನುಷ್ಯನ ಉಸಿರಾಟಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಗಾಳಿಯನ್ನು ಉಸಿರಾಡಬಲ್ಲ ಸಾಮರ್ಥ್ಯ ಲಭಿಸಿರುತ್ತದೆ. ಜೀವವಿಕಾಸದ ಹಾದಿಯಲ್ಲಿ ನಿಸರ್ಗ ಮನುಷ್ಯ ಶರೀರವನ್ನು ಬೇಟೆಯಾಡಿ ಬದುಕಲು ಸೃಷ್ಟಿಸಿದೆ. ಆದರೆ, ನಮ್ಮ ಮಿದುಳಿನ ಸಾಮರ್ಥ್ಯದಿಂದ ಲಭಿಸಿದ ತಾಂತ್ರಿಕ ಪ್ರಗತಿ ನಮ್ಮ ಬದುಕಿನ ವಿಧಾನವನ್ನು ಬದಲಿಸಿದೆ. ಈಗ ನಮಗೆ ಬದುಕಲು ಬೇಟೆಯ ಅಗತ್ಯವಿಲ್ಲ. ಹೀಗಾಗಿ, ಆಗಾಗ ನಮ್ಮನ್ನು ಅಟ್ಟಿಕೊಂಡು ಬರಬಹುದಾದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡಬೇಕಿಲ್ಲ. ಆದರೆ, ನಿಸರ್ಗಕ್ಕೆ ನಾವು ಈ ರೀತಿ ಪ್ರಗತಿ ಹೊಂದಿರುವ ವಿಷಯ ತಿಳಿದೇ ಇಲ್ಲ! ಹೀಗಾಗಿ, ಅದು ದೊಡ್ಡ ಸಾಮರ್ಥ್ಯದ ಶ್ವಾಸಕೋಶಗಳನ್ನು ಈಗಲೂ ನಮಗೆ ನೀಡುತ್ತಲೇ ಬಂದಿದೆ. ಇದರ ಲಾಭವೆಂದರೆ, ಅತ್ಯಂತ ಉನ್ನತ ಮಟ್ಟದ ಕ್ರೀಡಾಪಟುಗಳು ತಮ್ಮ ಅಸಾಮಾನ್ಯ ಸಾಮರ್ಥ್ಯದಿಂದ ಕ್ರೀಡೆಗಳನ್ನು ಹೆಚ್ಚು ಸ್ಪರ್ಧಾತ್ಮಕ ಮಾಡಿದ್ದಾರೆ.

ಎದೆಗೂಡಿನಲ್ಲಿ ಹೃದಯ ಮಧ್ಯಕ್ಕಿಂತ ಕೊಂಚ ಎಡಕ್ಕೆ ಬಾಗಿರುತ್ತದೆ. ಅದರ ಎರಡೂ ಬದಿ ಶ್ವಾಸಕೋಶಗಳಿವೆ. ಬಲಗಡೆಯ ಶ್ವಾಸಕೋಶ ಸ್ವಲ್ಪ ದೊಡ್ಡದು; ಅದರಲ್ಲಿ ಮೂರು ಭಾಗಗಳಿವೆ. ಒಟ್ಟಾರೆ ಕೆಲಸದ ಶೇಕಡಾ 55 ಅದರ ಜವಾಬ್ದಾರಿ. ಉಳಿದಾದ್ದನ್ನು ಮಾಡುವುದು ಎಡಗಡೆಯ ಶ್ವಾಸಕೋಶ. ಅದರಲ್ಲಿ ಎರಡೇ ಭಾಗಗಳು. ಶೇಕಡಾವಾರು ಲೆಕ್ಕಾಚಾರ ಬಿಟ್ಟರೆ ಕರ್ತವ್ಯದ ದೃಷ್ಟಿಯಿಂದ ಎರಡೂ ಒಂದೇ. ಒಂದು ವೇಳೆ ಯಾವುದೇ ಕಾರಣದಿಂದ ಒಂದು ಶ್ವಾಸಕೋಶವನ್ನು ತೆಗೆದುಹಾಕಿದರೂ, ಉಳಿದ ಒಂದರಲ್ಲಿ ಸಾಮಾನ್ಯ ಜೀವನ ನಡೆಸಲು ಕಷ್ಟವಾಗುವುದಿಲ್ಲ. ಆದರೆ, ಅಂತಹವರಿಗೆ ಭೌತಿಕ ಶ್ರಮದ ಕೆಲಸ ಸಾಧ್ಯವಾಗುವುದಿಲ್ಲ.

ವಾತಾವರಣದ ಗಾಳಿಯಲ್ಲಿ ನೀರಿನ ಅಂಶ ಕಡಿಮೆ. ಆದರೆ, ಶ್ವಾಸಕೋಶಕ್ಕೆ ತಲುಪುವ ಗಾಳಿ ಇಷ್ಟು ಒಣದಾಗಿ ಇರುವಂತಿಲ್ಲ. ಒಣಗಾಳಿ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ, ಉಸಿರಾಡುವ ಗಾಳಿ ಶ್ವಾಸಕೋಶಗಳಿಗೆ ತಲುಪುವ ಮುನ್ನ ಶ್ವಾಸಮಾರ್ಗದಲ್ಲಿ ಚೆನ್ನಾಗಿ ತೇವವನ್ನು ಸಂಗ್ರಹಿಸುತ್ತದೆ. ನಮ್ಮ ನಿಶ್ವಾಸದಲ್ಲಿ ತೇವದ ಗಾಳಿಯೇ ಹೊರಬರುತ್ತದೆ. ಈ ರೀತಿ, ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ನೀರು ಉಸಿರಾಟದ ಮೂಲಕ ಶರೀರದಿಂದ ಹೊರಹೋಗುತ್ತದೆ. ಗಾಜಿನ ಮೇಲೆ ನಾವು ಉಸಿರು ಬಿಟ್ಟಾಗ ಕಾಣುವ ತೆಳುವಾದ ತೇವದ ಪದರಕ್ಕೆ ಈ ನೀರೇ ಕಾರಣ. ಕೃತಕ ಉಸಿರಾಟದ ವೇಳೆ ಕೊಳವೆಗಳಿಂದ ಶ್ವಾಸಕೋಶದ ತೀರಾ ಸಮೀಪಕ್ಕೆ ಗಾಳಿಯನ್ನು ತಲುಪಿಸುತ್ತಾರೆ. ಇಂತಹ ಗಾಳಿಯನ್ನು ತೇವಗೊಳಿಸುವುದಕ್ಕೆ ಕೃತಕ ಉಸಿರಾಟದ ಯಂತ್ರದಲ್ಲಿ ನೀರಿನ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಈ ನೀರಿನ ಅಂಶವನ್ನು ಸಂಗ್ರಹಿಸಿಯೇ ಗಾಳಿ ಯಂತ್ರದಿಂದ ಶರೀರಕ್ಕೆ ಹೋಗಬೇಕು. ಅದೇ ರೀತಿ, ಹೆಚ್ಚಿನ ಪ್ರಮಾಣದಲ್ಲಿ ಶರೀರಕ್ಕೆ ಆಕ್ಸಿಜನ್ ನೀಡುವಾಗಲೂ ನೀರಿನ ಅಂಶವನ್ನು ಸೇರಿಸಿಕೊಳ್ಳುವ humidifier ಎಂಬ, ಗಾಳಿಯನ್ನು ಆರ್ದ್ರಗೊಳಿಸುವ ಸಾಧನದ ಮೂಲವೇ ಹಾಯಿಸಬೇಕು.

ಸರಳ ಉಸಿರಾಟದಲ್ಲಿ ಶೇಕಡಾ 40 ಸಮಯ ಉಸಿರನ್ನು ಎಳೆದುಕೊಳ್ಳುವ ಉಚ್ವಾಸ ಕ್ರಿಯೆಯಾದರೆ, ಶೇಕಡಾ 60 ಉಸಿರನ್ನು ಬಿಡುವ ನಿಶ್ವಾಸ ಕ್ರಿಯೆ. ಆದರೆ, ನಿಶ್ವಾಸಕ್ಕೆ ಹಲವಾರು ರೂಪಗಳಿವೆ. ನಾವು ಮಾತನಾಡುವುದು, ಸಿಳ್ಳೆ ಹಾಕುವುದು, ಬಾಯಿಂದ ವಿಧವಿಧವಾದ ಸದ್ದುಗಳನ್ನು ಹೊರಡಿಸುವುದು ಎಲ್ಲವೂ ನಿಶ್ವಾಸದಲ್ಲಿಯೇ. ನಿಶ್ವಾಸದ ಗಾಳಿ ಗಂಟಲಿನ ಭಾಗದ ಧ್ವನಿಪೆಟ್ಟಿಗೆಯನ್ನು ಹಾದು ಬರುವಾಗ, ಅದರಲ್ಲಿನ ಸ್ನಾಯುಗಳ ಸಂಕೋಚನ-ವಿಕೋಚನ ನಿಯಂತ್ರಣದಿಂದ ಧ್ವನಿ ಹೊರಡುತ್ತದೆ. ಇಂತಹ ಧ್ವನಿ ಹೊರಡಿಸುವಿಕೆ ಪ್ರಕ್ರಿಯೆ ಶ್ವಾಸಕೋಶ ಉಳ್ಳ ಜೀವಿಗಳಲ್ಲಿ ಕಾಣುತ್ತದೆ. ಆ ಧ್ವನಿಯನ್ನು ಬಾಯಿ ಮತ್ತು ಮೂಗುಗಳ ಸಹಾಯದಿಂದ ಭಾಷೆಯನ್ನಾಗಿ ಪರಿವರ್ತಿಸಿದ್ದು ಮಾನವ ಮಿದುಳಿನ ಸಾಧನೆಗಳಲ್ಲಿ ಒಂದು. ನಾವು ಮಾತನಾಡುವಾಗ ಸರಿಸುಮಾರು ಶೇಕಡಾ 10 ಸಮಯ ಉಚ್ವಾಸವಾದರೆ, ಉಳಿದ ಶೇಕಡಾ 90 ನಿಶ್ವಾಸ! ಅಂದರೆ, ನಾವು ನಿಶ್ಶಬ್ದವಾಗಿ ಇರುವುದಕ್ಕಿಂತ ಮಾತನಾಡುವಾಗ ನಮ್ಮ ಉಸಿರಾಟದ ವೇಗ ಮತ್ತು ದೇಹಕ್ಕೆ ಲಭಿಸುವ ಆಕ್ಸಿಜನ್ ಪ್ರಮಾಣ ಕಡಿಮೆ ಎಂದಾಯಿತು. ಅದಕ್ಕೇ ನಮ್ಮ ಹಿರಿಯರು “ಮಾತುಗಾರನಿಗೆ ಆಯಸ್ಸು ಕಡಿಮೆ” ಎಂದು ಹೇಳಿದ್ದಾರೆ. ಯಾವುದೇ ಸಫಲ ವಾಗ್ಮಿಗೆ, ಹಾಡುಗಾರರಿಗೆ ಉಸಿರಿನ ನಿಯಂತ್ರಣ ಬಹಳ ಮುಖ್ಯ. ಅಂತಹವರು ತಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಅತೀವ ಜತನದಿಂದ ಕಾಯ್ದುಕೊಳ್ಳಬೇಕು. ಶ್ವಾಸಕೋಶಗಳಿಗೆ ಹಾನಿಯಾಗುವ ಸಿಗರೇಟು ಸೇವನೆಯಂತಹ ಯಾವುದೇ ಚಟವೂ ಅವರಲ್ಲಿ ಇರಬಾರದು.

ಶ್ವಾಸಕೋಶಗಳಷ್ಟೇ ಮುಖ್ಯವಾದದ್ದು ಶ್ವಾಸಮಾರ್ಗಗಳು. ಮೂಗಿನಿಂದ ಮುಂದುವರೆದ ಪ್ರಮುಖ ಶ್ವಾಸನಾಳ ಎದೆಯ ಭಾಗದಲ್ಲಿ ಎರಡು ಕವಾಲಾಗಿ ಒಡೆದು ಅತ್ತಿತ್ತಲಾಗಿ ಎರಡೂ ಶ್ವಾಸಕೋಶಗಳನ್ನು ಸೇರಿ ಮತ್ತೆ ಮತ್ತೆ ಕವಲುಗಳಾಗಿ ಒಡೆಯುತ್ತಲೇ ಹೋಗುತ್ತದೆ. ಹೀಗೆ, ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಮುಂದುವರೆದು, ಒಟ್ಟು 23 ಬಾರಿ ಕವಲು ಒಡೆಯುತ್ತಾ ಕಡೆಗೆ Alveolus ಎಂಬ ಶ್ವಾಸಚೀಲಗಳಲ್ಲಿ ಕೊನೆಗೊಳ್ಳುತ್ತದೆ. ಈ ಇಡೀ ಶ್ವಾಸಮಾರ್ಗವನ್ನು ಸರಳರೇಖೆಯಲ್ಲಿ ಪೇರಿಸುತ್ತಾ ಹೋದರೆ ಬೆಂಗಳೂರಿನಿಂದ ಕಾಶ್ಮೀರವನ್ನು ತಲುಪಬಹುದು!

ದಿನವೊಂದಕ್ಕೆ ಸುಮಾರು 7000 ಲೀಟರ್ ರಕ್ತಕ್ಕೆ ಆಕ್ಸಿಜನ್ ಹರಿಸಿ, ಇಡೀ ದೇಹದ ಬಳಕೆಗೆ ಆಕ್ಸಿಜನ್ ಪೂರೈಸಿ, ಕಾರ್ಬನ್ ಡೈ ಆಕ್ಸೈಡ್ ತೆಗೆದುಹಾಕುವ ಶ್ವಾಸಕೋಶಗಳು ತಮ್ಮ ಸ್ವಂತ ಕೆಲಸದ ಸಲುವಾಗಿ ದೇಹದ ಶೇಕಡಾ 9 ರಷ್ಟು ರಕ್ತವನ್ನು ಮಾತ್ರ ಬಳಸುತ್ತವೆ. ಇದಕ್ಕಾಗಿ ಬೇರೆಯೇ ರಕ್ತನಾಳಗಳು ಬಳಕೆಯಾಗುತ್ತವೆ.

ಶ್ವಾಸಕೋಶಗಳ ಉಸಿರಾಟದ ಗಾಳಿಯ ಪ್ರಮಾಣದ ಸಾಮರ್ಥ್ಯ ಪತ್ತೆ ಮಾಡಲು ಯಂತ್ರಗಳಿವೆ. ಶ್ವಾಸಮಾರ್ಗಗಳ ಮತ್ತು ಶ್ವಾಸಕೋಶಗಳ ಸಮಸ್ಯೆಗಳಲ್ಲಿ ಈ ಯಂತ್ರವನ್ನು ಬಳಸಿ ವಾಯುಮಾರ್ಗದ ಯಾವ ಹಂತದಲ್ಲಿ ಅಡಚಣೆ ಇದೆ ಎಂಬುದನ್ನು ಇದರಿಂದ ತಿಳಿಯಬಹುದು. ಈ ಮಾಹಿತಿ ಚಿಕಿತ್ಸೆಗೆ ಬಹಳ ಪ್ರಯೋಜನಕಾರಿ. ಅಂತೆಯೇ, ವ್ಯಕ್ತಿಯೋರ್ವ ನಿಂತಾಗ, ಕುಳಿತಾಗ, ಅಂಗಾತ ಮಲಗಿದಾಗ, ಬೋರಲಾಗಿ ಮಲಗಿದಾಗ ಆತನ ಶ್ವಾಸಕೋಶಗಳ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂದು ಅರಿಯಲೂ ಈ ಯಂತ್ರ ಸಹಾಯಕ.

ಗಾಳಿ ನಮ್ಮ ಬದುಕಿನ ಆಧಾರ; ಜೀವಂತತೆಯ ಸಂಕೇತ. ಗಾಳಿಯನ್ನೇ ಪ್ರಾಣ ಎಂದು ಹಿರಿಯರು ಕರೆದದ್ದು ಆ ಕಾರಣಕ್ಕೇ. ಇಂತಹ ಪ್ರಾಣವಾಯುವನ್ನು ರಕ್ತಕ್ಕೆ ಸೇರಿಸುವ ಏಕೈಕ ಮಾಧ್ಯಮ ಶ್ವಾಸಕೋಶಗಳು. ಅವುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದು ಬಹಡುಕಿನ ದೃಷ್ಟಿಯಿಂದ ಬಹಳ ಮಹತ್ವ. ಅನೇಕಾನೇಕ ಕಾರಣಗಳಿಂದ ನಾವು ಉಸಿರಾಡುತ್ತಿರುವ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿದೆ. ಒಂದೆಡೆ ಅದನ್ನು ಉತ್ತಮಗೊಳಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಹೆಗಲಿಗಿದೆ. ಇದರ ಮೇಲೆ ಧೂಮಪಾನದಂತಹ ದುಶ್ಚಟಗಳನ್ನು ರೂಢಿಸಿಕೊಂಡರೆ ನಮ್ಮ ಅನಾರೋಗ್ಯಕ್ಕೆ ನಾವೇ ಆಹ್ವಾನ ನೀಡಿದಂತೆ ಆಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.

ಶ್ವಾಸಕೋಶಗಳ ಗಣಿತ ಬೆರಗಿನದ್ದು. ಬಹುತೇಕ ನಮ್ಮ ಅರಿವಿಗೆ ಬಾರದೇ ನಡೆದುಹೋಗುವ ಉಸಿರಾಟದ ಹಿಂದೆ ಇಷ್ಟೆಲ್ಲಾ ಗಣಿತವನ್ನು ನಿಸರ್ಗ ಸಂಯೋಜಿಸಿದೆ ಎಂದಾಗ, ಪ್ರಕೃತಿಯ ಭಾಷೆ ಗಣಿತವೇ ಎಂದು ಮತ್ತೊಮ್ಮೆ ಸಾಧಿಸಿದಂತಾಯಿತು!

-----------

ನವೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ನವೆಂಬರ್ 2022 ಸಂಚಿಕೆಯನ್ನು ಉಚಿತವಾಗಿ ಓದುವ ಕೊಂಡಿ: https://www.flipbookpdf.net/web/site/f40cf78bd505f565f68fe5ddd4844d47dfdfd669202211.pdf.html?fbclid=IwAR1luBTF0SJ-2rSczbmVGdOoyOD1z5ghpRX-TCT1Vx7nytwsSUM6rsRFQpQ 

 


ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ....

ಡಾ. ಕಿರಣ್ ವಿ.ಎಸ್.

ವೈದ್ಯರು

ರಾಬರ್ಟ್ ಫ್ರಾಸ್ಟ್ ಕವಿಯ The Road Not Taken ಎನ್ನುವ ಪ್ರಸಿದ್ಧ ಕವಿತೆಯೊಂದಿದೆ. ಕಾಡಿನ ಹಾದಿಯಲ್ಲಿ ನಡೆಯುವಾಗ ಕವಿಗೆ ಎರಡು ಪಥಗಳು ಎದುರಾದವು. ಒಂದರಲ್ಲಿ ಈ ಮುನ್ನ ಸಾಕಷ್ಟು ಜನರು ನಡೆದಂತಿತ್ತು. ಮತ್ತೊಂದರಲ್ಲಿ ಹೆಚ್ಚು ಮಂದಿ ಕ್ರಮಿಸಿದಂತಿರಲಿಲ್ಲ. ಈ ಎರಡು ದಾರಿಗಳ ಪಯಣದ ನಡುವಿನ ಜಿಜ್ಞಾಸೆಯ ಈ ಕವಿತೆ, ಜೀವನದಲ್ಲಿ ಎರಡು ಆಯ್ಕೆಗಳ ನಡುವೆ ಒಂದನ್ನು ಆಯ್ದುಕೊಂಡದ್ದರ ಅನ್ಯಾರ್ಥದ ಸಂಕೇತವಾಗಿ ಬಳಕೆಯಾಗುತ್ತದೆ. ಆಯ್ಕೆಯ ನಿರ್ಧಾರದಲ್ಲಿ ಅನೇಕ ಸಂಗತಿಗಳು ಪ್ರಭಾವಿಸುತ್ತವೆ. ಭೂತಕಾಲದ ನೆನೆಗುದಿಗಳು, ಆ ಹಾದಿ ಕ್ರಮಿಸಿದ ಮತ್ತೊಬ್ಬರ ಅನುಭವಗಳು, ಭವಿಷ್ಯದ ಆಲೋಚನೆಗಳು, ಆಯಾ ಸಂದರ್ಭದ ಒತ್ತಡಗಳು ಹೀಗೆ ಹಲವಾರು ಪರಿಮಾಣಗಳನ್ನು ಅಳೆದು, ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆಯ್ಕೆಯ ನಂತರದ ಪರಿಣಾಮಗಳು ನಮ್ಮದೇ ನಿರ್ಧಾರದ ಫಲಶ್ರುತಿಗಳು. ಈ ಇಡೀ ಆಯ್ಕೆ ಪ್ರಕ್ರಿಯೆ ನಡೆಯುವುದು ನಮ್ಮ ಮಿದುಳಿನಲ್ಲಿ. ಇದರಲ್ಲಿ ಪ್ರಮುಖ ಪಾತ್ರ ವಹಿಸುವುದು ಆಯ್ಕೆ ಮಾಡುವಲ್ಲಿ ನಮಗಿರುವ ಮುಕ್ತ ಸ್ವಾತಂತ್ರ್ಯ. ಯಾರೂ ನಮ್ಮ ಕತ್ತು ಹಿಡಿದು “ಹೀಗೆಯೇ ನಡೆಯಬೇಕು” ಎಂದು ಒತ್ತಾಯ ಮಾಡುವುದಿಲ್ಲ. ಆಲೋಚನೆ ನಮ್ಮದು; ನಿರ್ಧಾರ ನಮ್ಮದು; ನಿರ್ಧಾರದ ನಂತರದ ಪರಿಣಾಮಗಳೂ ನಮ್ಮವು.

ರೊಬೊಟ್ ಯಂತ್ರಗಳ ಬಗ್ಗೆ ತಿಳಿದಿರುತ್ತೇವೆ. 1980ರ ದಶಕದಲ್ಲಿ ಬೆಂಗಳೂರಿನಲ್ಲಿ ದೂರದರ್ಶನ ಪ್ರಸಾರ ಆರಂಭವಾದ ಹೊಸದರಲ್ಲಿ ಜಪಾನಿನ “ಜಾನಿ ಸೊಕ್ಕೊ ಅಂಡ್ ಹಿಸ್ ಫ್ಲೈಯಿಂಗ್ ರೊಬೊಟ್” ಎನ್ನುವ ಧಾರಾವಾಹಿ ಮಕ್ಕಳನ್ನು ಬಹಳ ರಂಜಿಸುತ್ತಿತ್ತು. ಮಾನವಾಕೃತಿಯ ಬೃಹತ್ ರೊಬೊಟ್ ಮತ್ತು ಅದನ್ನು ನಿಯಂತ್ರಿಸುವ ಬಾಲಕನೊಬ್ಬನ ಕತೆ. ರೊಬೊಟ್ ಬಗ್ಗೆ ಚಿತ್ರವಿಚಿತ್ರ ಕಲ್ಪನೆಗಳನ್ನು ಮೂಡಿಸಿದ ಕಾಲವದು. ಆನಂತರ ಮಾನವನಂತೆಯೇ ಕಾಣುವ ರೊಬೊಟ್ ಯಂತ್ರಗಳ ಕತೆಯನ್ನು ಹೊಂದಿದ್ದ ಟರ್ಮಿನೇಟರ್ ಚಲನಚಿತ್ರ ಸರಣಿ ಬಂದಿತು. ಭವಿಷ್ಯದಲ್ಲಿ ನಮ್ಮ ಜೀವನ ಮತ್ತು ಯಂತ್ರಗಳ ಸಾಂಗತ್ಯ ಯಾವ ರೀತಿಯಲ್ಲಿ ಹಾಸುಹೊಕ್ಕಾಗಬಹುದು ಎಂದು ಜನರಿಗೆ ಅಂದಾಜು ನೀಡುವ ರೀತಿಯಲ್ಲಿ ಆ ಸರಣಿ ಬಹಳ ಜನಪ್ರಿಯವಾಯಿತು. ಅದ್ಭುತ-ರಮ್ಯ ಪರಿಕಲ್ಪನೆಗಳನ್ನು ಲೇಖಕರು ಇಂದಿಗೂ ಯಂತ್ರ-ಮಾನವರ ಸುತ್ತಲೂ ಹೆಣೆಯತ್ತಲೇ ಬಂದಿದ್ದಾರೆ. ಇದು ಸಾಧ್ಯವಾಗಬಲ್ಲ ವಾಸ್ತವ ಹೇಗಿದೆ? ಸಾಧ್ಯವಾದರೂ, ಯಾವುದೇ ಎರಡು ಆಯ್ಕೆಗಳ ನಡುವೆ ಮಾಡಬೇಕಾದ ನಿರ್ಧಾರವನ್ನು ಮಿದುಳಿಲ್ಲದ ಯಂತ್ರಗಳು ಹೇಗೆ ಮಾಡಬಲ್ಲವು?  

2002 ನೆಯ ಇಸವಿಯಲ್ಲಿ ಒಂದು ವೈಜ್ಞಾನಿಕ ಸಂಚಲನ ನಡೆಯಿತು. ಅಮೆರಿಕೆಯ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕ ಡಾ. ಸಂಜೀವ್ ತಳವಾರ್ ಅವರು ಇಲಿಗಳ ಮಿದುಳಿನ ಮೇಲೆ ಒಂದು ಕುತೂಹಲಕಾರಿ ಪ್ರಯೋಗವನ್ನು ಮಾಡಿದರು. ವಿದ್ಯುತ್ ತರಂಗಗಳ ಮೂಲಕ ವಿದ್ಯುದಾವೇಶ ನೀಡಬಲ್ಲ ಮೂರು ಪುಟ್ಟ ಎಲೆಕ್ಟ್ರೋಡ್ ಗಳನ್ನು ಇಲಿಗಳ ಮಿದುಳಿನ ನಿರ್ದಿಷ್ಟ ಭಾಗಗಳಿಗೆ ಜೋಡಿಸಿದ್ದರು. ಅವುಗಳನ್ನು ತಂತಿಗಳ ಮೂಲಕ ಒಂದು ಬ್ಯಾಟರಿಯುಕ್ತ ನಿಯಂತ್ರಣ ಘಟಕಕ್ಕೆ ಬೆಸೆದು, ಆ ಘಟಕವನ್ನು ಇಲಿಯ ಬೆನ್ನಿಗೆ ಜೋಡಿಸಿದ್ದರು. ಘಟಕದ ಬ್ಯಾಟರಿ ನೀಡುವ ವಿದ್ಯುದಾವೇಶವನ್ನು ನಿಯಂತ್ರಿಸಬಲ್ಲ ರಿಮೋಟ್ ಸಂಪರ್ಕವಿತ್ತು. ಸುಮಾರು 500 ಮೀಟರ್ ದೂರದಿಂದಲೂ ಅವುಗಳನ್ನು ನಿಯಂತ್ರಿಸಬಹುದಿತ್ತು. ರಿಮೋಟ್ ಗುಂಡಿಗಳನ್ನು ಒತ್ತಿ ಇಲಿಗಳ ಮಿದುಳಿನ ನಿರ್ದಿಷ್ಟ ಭಾಗಗಳನ್ನು ಪ್ರಚೋದಿಸಬಲ್ಲ ವ್ಯವಸ್ಥೆಯನ್ನು ಮಾಡಿದ್ದರು. ಮೂರು ಎಲೆಕ್ಟ್ರೋಡ್ ಗಳ ಪೈಕಿ ಒಂದು ಬಲಭಾಗದ ಮೀಸೆಯ ಸ್ಥಾನವನ್ನು ಪ್ರಚೋದಿಸುತ್ತಿತ್ತು. ಮತ್ತೊಂದು ಎಡಭಾಗದ ಮೀಸೆಯ ಸ್ಥಾನವನ್ನು ನಿರ್ದೇಶಿಸುತ್ತಿತ್ತು. ಮೂರನೆಯದು ಮಿದುಳಿನಲ್ಲಿ ಸಂತಸದ ಭಾವವನ್ನು ಪ್ರಚೋದಿಸುವ ಎಡೆಯಲ್ಲಿತ್ತು. ಬಲಭಾಗದ ಎಲೆಕ್ಟ್ರೋಡ್ ಪ್ರಚೋದಿಸಿದಾಗ ಇಲಿಗಳು ಬಲಗಡೆಗೆ ತಿರುಗಿದರೆ ಕೂಡಲೇ ಸಂತಸ ನೀಡುವ ಗುಂಡಿಯನ್ನು ಒತ್ತುತ್ತಿದ್ದರು. ಇಲಿಗಳು ಹಾಗೆ ಮಾಡದೇ ಎಡಗಡೆಗೆ ತಿರುಗಿದರೆ ಸಂತಸದ ಗುಂಡಿಯನ್ನು ಒತ್ತುತ್ತಿರಲಿಲ್ಲ. ಅದೇ ರೀತಿಯಲ್ಲಿ ಎಡಭಾಗದ ಎಲೆಕ್ಟ್ರೋಡ್ ಅನ್ನೂ ನಿಯಂತ್ರಿಸುತ್ತಿದ್ದರು. ಅಂದರೆ, ಸಂಶೋಧಕರು ಯಾವ ಭಾಗದ ಗುಂಡಿ ಒತ್ತಿದಾಗ ಇಲಿಗಳು ಅದೇ ದಿಕ್ಕಿಗೆ ತಿರುಗಿದರೆ ಮಾತ್ರ ಅದರ ಮಿದುಳಿನಲ್ಲಿ ಸಂತಸ ಉಂಟಾಗುತ್ತಿತ್ತು. ವಿರುದ್ಧ ದಿಕ್ಕಿನಲ್ಲಿ ತಿರುಗಿದರೆ ಏನೂ ಆಗುತ್ತಿರಲಿಲ್ಲ. ಬಹಳ ಬೇಗ ಇಲಿಗಳು ಸಂತಸ ಪಡೆಯುವ ವಿಧಾನವನ್ನು ಗ್ರಹಿಸಿದವು. ಯಾವೆಡೆಗೆ ಪ್ರಚೋದನೆ ಬರುತ್ತದೋ, ಅದರ ದಿಕ್ಕಿಗೆ ತಿರುಗುವುದನ್ನು ಚಾಚೂ ತಪ್ಪದೆ ಪಾಲಿಸಿದವು. “ಆಜ್ಞಾನುವರ್ತಿಯಾದ ಇಲಿಗಳು ತಮ್ಮ ಮಿದುಳಿನಲ್ಲಿ ಉಂಟಾಗುತ್ತಿದ್ದ ಸಂತಸದ ಭಾವವನ್ನು ಅನುಭವಿಸುತ್ತಾ ನಿರ್ವಾಣ ಸ್ಥಿತಿ ತಲುಪುತ್ತಿದ್ದವು” ಎಂದು ಡಾ. ಸಂಜೀವ್ ತಳವಾರ್ ಅವರ ಅಭಿಪ್ರಾಯ.

ಮಿದುಳಿನ ವರ್ತನೆಯನ್ನು, ನಿರ್ಧಾರ ತೆಗೆದುಕೊಳ್ಳುವ ಕ್ಷಮತೆಯನ್ನು ಬಾಹ್ಯ ಶಕ್ತಿಯೊಂದರ ಮೂಲಕ ನಿಯಂತ್ರಿಸಬಹುದು ಎಂದಾದರೆ, ನಮ್ಮ ಆಯ್ಕೆಯ ಸ್ವಾತಂತ್ರ್ಯವನ್ನು ಮತ್ತೊಬ್ಬರು ಕಸಿದುಕೊಂಡರು ಎಂದೇ ಅಲ್ಲವೇ? ಡಾ. ತಳವಾರರ ಈ ಪ್ರಯೋಗಕ್ಕೆ ಕೆಲವು ನಿಟ್ಟಿನಿಂದ ಖಂಡನೆ ಬಂದರೂ, ಇದರ ಒಟ್ಟಾರೆ ಮಹತ್ವವನ್ನು ವಿಜ್ಞಾನ ಪ್ರಪಂಚ ಗ್ರಹಿಸಿತು. ಭೂಕಂಪವೇ ಮೊದಲಾದ ಅವಘಡಗಳ ವೇಳೆ ಬೃಹತ್ ಕಟ್ಟಡಗಳು ಕುಸಿದು ನೆಲಸಮವಾದಾಗ ಅವುಗಳ ಅಡಿಯಲ್ಲಿ ಹಲವಾರು ಮಂದಿ ಸಿಲುಕಿರುತ್ತಾರೆ. ಅವರನ್ನು ಪತ್ತೆ ಮಾಡುವುದು ಹೇಗೆ? ದೊಡ್ಡ ಯಂತ್ರಗಳ ನೆರವಿನಿಂದ ಅವಶೇಷಗಳನ್ನು ತೆರವು ಮಾಡಿದ ಹೊರತು ಇದು ತಿಳಿಯುವುದಿಲ್ಲ. ಅವಶೇಷಗಳ ಯಾವ ಭಾಗದಲ್ಲಿ ಜನರು ಸಿಲುಕಿದ್ದಾರೆ ಎಂದು ತಿಳಿದರೆ ಆಗ ಆ ಸ್ಥಾನವನ್ನು ಮೊದಲ ಆದ್ಯತೆಯಾಗಿ ತೆರವು ಮಾಡಬಹುದು. ಇಂತಹ ಆಯಕಟ್ಟಿನ ಸ್ಥಳಗಳನ್ನು ರೊಬೊಟ್ ಇಲಿಗಳು ತಲುಪಬಲ್ಲವು. ಇಂತಹ ಇಲಿಗಳ ಹಣೆಗೆ ಸಣ್ಣ ಟಾರ್ಚ್ ಮತ್ತು ಕ್ಯಾಮೆರಾ ಅಳವಡಿಸಿದರೆ, ನಮಗೆ ಬೇಕಾದ ದಿಕ್ಕುಗಳಲ್ಲಿ ಅವುಗಳನ್ನು ಸಂಚರಿಸುವಂತೆ ಮಾಡುತ್ತಾ, ಯಾವುದೇ ಕ್ಷಣದಲ್ಲಿ ಅವುಗಳ ನಿರ್ದಿಷ್ಟ ಸ್ಥಾನವನ್ನು ಗ್ರಹಿಸಿ, ಅವಶೇಷಗಳ ಯಾವ ಭಾಗದಲ್ಲಿ ಏನಿದೆ ಎಂಬುದನ್ನು ಕೆಲವೇ ನಿಮಿಷಗಳಲ್ಲಿ ತಿಳಿಯಬಹುದು. ಇದರಿಂದ ಹಲವಾರು ಪ್ರಾಣಗಳನ್ನು ಉಳಿಸುವಂತಾಗುತ್ತದೆ. ಇದೊಂದು ಉದಾಹರಣೆ ಮಾತ್ರ. ಇಂತಹ ನೂರಾರು ಸಾಧ್ಯತೆಗಳಿವೆ.

ಡಾ. ತಳವಾರರ ಈ ಪ್ರಯೋಗ ಮಿದುಳು ಮತ್ತು ಯಂತ್ರಗಳನ್ನು ಒಂದೆಡೆಗೆ ಸಂಯೋಜಿಸುವ ಕುತೂಹಲಕಾರಿ ವಿನ್ಯಾಸಗಳಿಗೆ ನಾಂದಿಯಾಯಿತು. ಮಿದುಳಿನ ಇಂಪ್ಲ್ಯಾಂಟ್ (implant) ಪ್ರಯೋಗಗಳು ಮೊದಲಾದವು. ಒಂದೆಡೆ ಪ್ರಾಣಿ ಹಕ್ಕುಗಳ ಪ್ರವರ್ತಕರು ತಮ್ಮ ವಿರೋಧವನ್ನು ಕೂಗಾಡುತ್ತಿದ್ದರೆ, ಮತ್ತೊಂದೆಡೆ ವಿಜ್ಞಾನಿಗಳು ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಶೋಧನಾ ನಿಯಮಗಳ ರೀತ್ಯಾ ಪ್ರಯೋಗಗಳನ್ನು ಆರಂಭಿಸಿದರು. ಮಿದುಳಿನ ನರಮಂಡಲಕ್ಕೆ ಎಲೆಕ್ಟ್ರಾನಿಕ್ ಚಿಪ್ ಕೂರಿಸುವುದು ಸುಲಭದ ಮಾತಲ್ಲ. ತೀರಾ ಸಂಕೀರ್ಣ ಅಂಗವಾದ ಮಿದುಳಿನಲ್ಲಿ ಚಿಪ್ ಕೂರಿಸುವ ಸ್ಥಾನದಲ್ಲಿ ಒಂದು ಮಿಲಿಮೀಟರ್ ವ್ಯತ್ಯಾಸವಾದರೂ ಪರಿಣಾಮಗಳು ಬೇರೆಯೇ ಆಗುತ್ತವೆ. ಹೀಗಾಗಿ, ಇಂತಹ ಪ್ರಯೋಗಗಳಿಗೆ ಮುನ್ನ ಅತ್ಯಂತ ಸೂಕ್ಷ್ಮ ಗಾತ್ರದ ಚಿಪ್ ಅಭಿವೃದ್ಧಿಯಾಗಬೇಕು. ಅಲ್ಲದೇ, ಒಮ್ಮೆ ಮಿದುಳಿನಲ್ಲಿ ಚಿಪ್ ಕೂರಿಸಿದ ಕೂಡಲೇ ಮಿದುಳಿಗೆ “ಇದ್ಯಾವುದೋ ಬಾಹ್ಯ ವಸ್ತು” ಎಂದು ತಿಳಿದುಹೋಗುತ್ತದೆ. ಕೂಡಲೇ ಅದು ಬಾಹ್ಯ ವಸ್ತುವನ್ನು ನರಗಳಿಂದ ಪ್ರತ್ಯೇಕಿಸುವ ಗ್ಲಯಲ್ ಕೋಶಗಳನ್ನು ಒಗ್ಗೂಡಿಸಿ, ಎರಡರ ನಡುವೆ ಸಂಪರ್ಕವನ್ನು ಇಲ್ಲದಂತಾಗಿಸುತ್ತದೆ. ಈ ಸವಾಲನ್ನೂ ವಿಜ್ಞಾನಿಗಳು ಮೀರಬೇಕು. ಜರ್ಮನಿಯ ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿ ಚಿಪ್ ಗಳನ್ನೇ ತಟ್ಟೆಗಳಂತೆ ಬಳಸಿ, ಅವುಗಳ ಮೇಲೆ ನರಕೋಶಗಳನ್ನು ಬೆಳೆಸುವ ಸಾಹಸ ಮಾಡಿ, ಬಹುಮಟ್ಟಿಗೆ ಸಫಲರಾದರು. ಇಂತಹ ನರಕೋಶಗಳನ್ನು ಮಿದುಳಿಗೆ ಜೋಡಿಸಿದಾಗ, ಅವುಗಳ ಒಂದು ತುದಿಯಲ್ಲಿ ಚಿಪ್ ಇದ್ದರೆ, ಮತ್ತೊಂದು ತುದಿ ಮಿದುಳಿನ ಸಹಜ ನರಕೋಶಗಳ ಸಂಪರ್ಕದಲ್ಲಿರುತ್ತದೆ. ಪ್ರಕೃತಿ ಒಡ್ಡಿದ ಒಂದು ಮಿತಿಯನ್ನು ಈ ಮೂಲಕ ಮೀರಿದಂತಾಯಿತು.

ಇಡೀ ದೇಹದ ಚಲನೆಯನ್ನು ನಿಯಂತ್ರಿಸುವುದು ಮಿದುಳು. ಪಾರ್ಶ್ವವಾಯುವಿನಂತಹ ಸಂದರ್ಭಗಳಲ್ಲಿ ಮಿದುಳಿನ ಒಂದು ಭಾಗ ನಿಷ್ಕ್ರಿಯವಾಗಿ, ಆ ಭಾಗ ನಿಯಂತ್ರಿಸುವ ದೇಹದ ಚಲನೆ ಇಲ್ಲವಾಗಿ, ಮಾಂಸಖಂಡಗಳು ಸೆಟೆದುಕೊಳ್ಳುತ್ತವೆ. ಇಲ್ಲಿ ಮಾಂಸಖಂಡಗಳು ಸುಸ್ಥಿತಿಲ್ಲಿದ್ದರೂ, ಅದನ್ನು ನಿಯಂತ್ರಿಸುವ ಕೇಂದ್ರದಲ್ಲಿನ ಸಮಸ್ಯೆಯಿಂದ ಮಾಂಸಖಂಡಗಳು ತೊಂದರೆ ಅನುಭವಿಸಬೇಕಾಗುತ್ತದೆ. ಇದೊಂದು ರೀತಿ ರಿಮೋಟ್ ಕೆಟ್ಟುಹೋದಾಗ ಟಿವಿ ನೋಡಲು ಸಾಧ್ಯವಾಗದಂತಹ ಪರಿಸ್ಥಿತಿ. ಆಗ ರಿಮೋಟ್ ಅನ್ನು ರಿಪೇರಿ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಪ್ರತಿ ಬಾರಿ ಟಿವಿ ಬಳಿ ಹೋಗಿ ವಾಹಿನಿಗಳನ್ನು, ಸದ್ದನ್ನು, ಇತರ ಅಂಶಗಳನ್ನು ನಿಯಂತ್ರಿಸಬೇಕು. ಸದ್ಯಕ್ಕೆ ಪಾರ್ಶ್ವವಾಯುವಿನಲ್ಲಿ ಮಿದುಳೆಂಬ ರಿಮೋಟ್ ಅನ್ನು ಸರಿಪಡಿಸಲು ಹೆಚ್ಚಿನ ಮಾರ್ಗಗಳಿಲ್ಲದಿರುವುದರಿಂದ, ಮಾಂಸಖಂಡಗಳಿಗೇ ಫಿಸಿಯೋಥೆರಪಿಯಂತಹ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಒಂದು ವೇಳೆ ನಿಷ್ಕ್ರಿಯವಾಗಿರುವ ಮಿದುಳಿನ ಭಾಗಕ್ಕೆ ಚಿಪ್ ಅಳವಡಿಸಿ ಅದನ್ನು ಮತ್ತೆ ಕಾರ್ಯರೂಪಕ್ಕೆ ತಂದರೆ? ಆಗ ಪಾರ್ಶ್ವವಾಯುವನ್ನು ಗುಣಪಡಿಸಿದಂತಾಯಿತು. ಅಂತೆಯೇ ಕೆಲವೊಮ್ಮೆ ಮಿದುಳಿನ ಕೇಂದ್ರ ಸರಿಯಾದ ಸ್ಥಿತಿಯಲ್ಲಿದ್ದರೂ ಮಾಂಸಖಂಡಗಳ ಆಂತರಿಕ ದೌರ್ಬಲ್ಯದಿಂದ ಚಲನೆ ಸಾಧ್ಯವಾಗದೇ ಇರಬಹುದು. ಆಗ ಆಯಾ ಮಾಂಸಖಂಡಗಳ ಗುಂಪಿಗೆ ಕೃತಕ ಚಲನೆಯ ಉಪಕರಣಗಳನ್ನು ಜೋಡಿಸಿ, ಅವುಗಳ ನಿಯಂತ್ರಣವನ್ನು ಮಿದುಳಿಗೆ ನೀಡಬಹುದು. ಇದರಿಂದ ಸಹಜ ಚಲನೆಯನ್ನು ಅನುಕರಿಸಿದಂತಾಗುತ್ತದೆ.

ಮಿದುಳಿಗಿಂತ ದೊಡ್ಡ ಸೂಪರ್ ಕಂಪ್ಯೂಟರ್ ಇಲ್ಲ ಎಂದು ಈಗಲೂ ಭಾವಿಸಲಾಗಿದೆ. 1950 ನೆಯ ಇಸವಿಯಲ್ಲಿ ಪ್ರಸಿದ್ಧ ವಿಜ್ಞಾನಿ ಆಲನ್ ಟ್ಯುರಿಂಗ್ ಅವರು “ಕಂಪ್ಯೂಟರುಗಳ ಸಾಮರ್ಥ್ಯ ಹೆಚ್ಚುತ್ತಾ ಹೋದರೆ ಅವು ಸುಮಾರು 2000 ಇಸವಿಯ ವೇಳೆಗೆ ಮಾನವ ಮಿದುಳಿನ ಮಟ್ಟಕ್ಕೆ ಏರಬಲ್ಲವು” ಎಂದು ಗಣಿಸಿದ್ದರು. ಈ ಭವಿಷ್ಯವಾಣಿಯನ್ನು ನಿಜವಾಗಿಸಲು ಕಂಪ್ಯೂಟರ್ ತಜ್ಞರು ಅನವರತ ದುಡಿದಿದ್ದಾರೆಯಾದರೂ ಇಂದಿಗೂ ವಾಸ್ತವ ಆ ಮಟ್ಟಕ್ಕೆ ಏರಿಲ್ಲ. ಮಿದುಳಿನ ಒಂದು ನರಕೋಶಕ್ಕೆ ಸರಿಯಾಗಿ ಒಂದು ಕಂಪ್ಯೂಟರ್ ಚಿಪ್ ಅನ್ನು ಜೋಡಿಸಿದರೆ, ಅದರ ಸಾಮರ್ಥ್ಯ ಸರಿದೂಗಬಲ್ಲದು ಎಂದು ಗಣಿಸಿದ್ದ ಸಿದ್ಧಾಂತ ಫಲ ನೀಡಲಿಲ್ಲ. ಗಣನೆಯ ಸಾಮರ್ಥ್ಯ ಹೆಚ್ಚಿತಾದರೂ, ಅನೇಕ ಆಯಾಮಗಳನ್ನು ಲೆಕ್ಕ ಹಾಕಿ, ತರ್ಕ ಮಾಡಿ, ಸ್ವತಂತ್ರ ನಿರ್ಧಾರಗಳ ಚಿಂತನೆಯನ್ನು ರೂಡಿಸಿಕೊಳ್ಳುವಂತೆ ಕಂಪ್ಯೂಟರ್ ಅನ್ನು ಸಿದ್ಧಗೊಳಿಸಲು ಈವರೆಗೆ ಆಗಿಲ್ಲ. ಮಾನವ ಮಿದುಳೆಂದರೆ ಕೇವಲ ತಾರ್ಕಿಕ ಆಲೋಚನೆಗಳು ಮಾತ್ರವಲ್ಲ; ಅದರಲ್ಲಿ ಭಾವನಾತ್ಮಕ ಸಂಗತಿಗಳೂ ಇವೆ. ಈ ಆಯಾಮವನ್ನು ಸ್ಪರ್ಶಿಸಲು ಕಂಪ್ಯೂಟರಿಗೆ ಸಾಧ್ಯವಾಗುವುದು ಹೇಗೆ?

ಮಾನವ ಮಿದುಳು ಕೇವಲ ನರಕೋಶಗಳ ಲೆಕ್ಕಾಚಾರವಲ್ಲ. ಬದಲಿಗೆ, ಒಂದು ನರಕೋಶ ಮತ್ತೊಂದರ ಜೊತೆಗೆ ಹೇಗೆ ಸಂಪರ್ಕ ಕೂಡಿಸಿಕೊಳ್ಳುತ್ತದೆ ಎನ್ನುವ ಪ್ರಕ್ರಿಯೆ. ಈ ಸಂಪರ್ಕಗಳು ನಿರಂತರವಾಗಿ ಆಗುತ್ತಲೇ ಇರುತ್ತವೆ. ಕೆಲವು ಸಂಪರ್ಕಗಳು ಕೆಲಕ್ಷಣಗಳ ಕಾಲ ಮಾತ್ರ ಇದ್ದರೆ, ಇನ್ನು ಕೆಲವು ವರ್ಷಾನುಗಟ್ಟಲೇ ಉಳಿಯುತ್ತವೆ. ಇಂತಹ ಕ್ರಿಯಾತ್ಮಕ ಸಂಪರ್ಕಗಳು ಮಿದುಳಿಗೆ ಅಗಾಧ ಸಾಮರ್ಥ್ಯವನ್ನು ತಂದುಕೊಡುತ್ತವೆ. ಈ ಮಟ್ಟದ ನಿರಂತರ ಸಂಪರ್ಕಗಳನ್ನು ಸಾಧಿಸುವ ಕ್ರಿಯಾತ್ಮಕ ಸಾಮರ್ಥ್ಯ ಕಂಪ್ಯೂಟರಿಗೆ ಸದ್ಯಕ್ಕೆ ಇಲ್ಲ. ಇದು ಕಾರ್ಯಗತವಾಗಲು ಇನ್ನಷ್ಟು ಕಾಲ ಹಿಡಿಯಬಹುದು. ಕ್ವಾಂಟಮ್ ಕಂಪ್ಯೂಟರ್ ಬೆಳವಣಿಗೆ ಇದನ್ನು ಸಾಧಿಸಬಹುದು ಎನ್ನಲಾಗುತ್ತಿದೆ.

ಈ ಸಮಸ್ಯೆಯನ್ನು ಮತ್ತೊಂದು ದಿಕ್ಕಿನಿಂದ ತಲುಪಲು ಸಾಧ್ಯವೇ? ಅಂದರೆ, ಕೋಟ್ಯಂತರ ಚಿಪ್ ಗಳನ್ನು ಮೊದಲು ಒಗ್ಗೂಡಿಸಿ, ನಂತರ ಅವುಗಳಿಗೆ ಪರಸ್ಪರ ಕ್ರಿಯಾತ್ಮಕ ಸಂಪರ್ಕ ಕಲ್ಪಿಸುವ ಸದ್ಯದ ಮಾದರಿಯ ಬದಲಿಗೆ, ಮೊದಲ ಹೆಜ್ಜೆಯಲ್ಲಿ ಕೆಲವೇ ಚಿಪ್ ಗಳನ್ನು ಒಗ್ಗೂಡಿಸಿ, ಅವುಗಳು ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಸಂಪರ್ಕ ಸಾಧಿಸುವಂತೆ ನಿರ್ಮಿಸಿ, ನಂತರ ನಿಧಾನವಾಗಿ ಚಿಪ್ ಗಳ ಸಂಖ್ಯೆಯನ್ನು ಏರಿಸುತ್ತಾ ಹೋದರೆ? ಜೀವವಿಕಾಸದ ಪ್ರಕ್ರಿಯೆಯಲ್ಲಿ ಮಿದುಳಿನ ಬೆಳವಣಿಗೆಯಾದದ್ದೂ ಹೀಗೆಯೇ ಇರಬಹುದಲ್ಲವೇ? ಅಮೆರಿಕೆಯ ಪೆನ್ಸಿಲ್ವೆನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಈ ಹಾದಿಯಲ್ಲಿ ಪಯಣಿಸುತ್ತಿದ್ದಾರೆ. ಅವರ ಮೊದಲ ಪ್ರಯತ್ನ ಕೃತಕ ಕಣ್ಣನ್ನು ತಯಾರಿಸಿ, ದೃಷ್ಟಿಯನ್ನು ಸಾಧಿಸುವುದು. ನಮ್ಮ ಕಣ್ಣು ಬೆಳಕನ್ನು, ಬಣ್ಣಗಳನ್ನು ಗ್ರಹಿಸಲು ವಿಶಿಷ್ಟ ಕೋಶಗಳನ್ನು ಕಣ್ಣಿನ ಹಿಂಬದಿಯ ರೆಟಿನಾ ಎಂಬ ಪರದೆಯ ಜೊತೆಗೆ ನಿರ್ಮಿಸಿಕೊಂಡಿದೆ. ರೆಟಿನಾದ ಹಿಂಬದಿಯಲ್ಲಿ ಸಮನ್ವಯಗೊಂಡಿರುವ ಸೂಕ್ಷ್ಮ ನರತಂತುಗಳ ಪ್ರಚೋದನೆಯಿಂದ ಮಿದುಳಿಗೆ ಸಂಕೇತಗಳು ರವಾನೆ ಆಗುತ್ತವೆ. ಮಿದುಳಿನಲ್ಲಿ ಈ ಸಂಕೇತಗಳ ವಿಶ್ಲೇಷಣೆಯಾಗಿ, ನಮ್ಮೆದುರಿನ ದೃಶ್ಯದ ಪುನರ್ನಿರ್ಮಾಣವಾಗುತ್ತದೆ. ವಿಜ್ಞಾನಿಗಳು ಕಣ್ಣಿನ ವಿಶಿಷ್ಟ ಕೋಶಗಳಿಗೆ ಬದಲಾಗಿ ಸುಮಾರು 8000 ಚಿಪ್ ಗಳನ್ನು ಬಳಸಿ, ಅವಕ್ಕೆ ಸುಮಾರು 4000 ಆಂತರಿಕ ಸಂಪರ್ಕಗಳನ್ನು ನಿರ್ಮಿಸಿ, ಕೃತಕ ರೆಟಿನಾ ತಯಾರಿಸಿದ್ದಾರೆ. ಇದರಿಂದ ಬರುವ ಮಾಹಿತಿಯನ್ನು ವಿಶ್ಲೇಷಿಸಲು ಸಾಮಾನ್ಯ ಸಾಮರ್ಥ್ಯದ ಕಂಪ್ಯೂಟರ್ ಬಳಸಿದ್ದಾರೆ. ಈ ಪ್ರಯೋಗ ಬಹಳ ಮಹತ್ವದ ಫಲಿತಾಂಶಗಳನ್ನು ನೀಡಿದೆ. ಕಾಲಕ್ರಮೇಣ ಕೃತಕ ರೆಟಿನಾದ ಚಿಪ್ ಸಾಮರ್ಥ್ಯವನ್ನು ವೃದ್ಧಿಸುತ್ತಾ, ಅದರ ಮಾಹಿತಿಯನ್ನು ವಿಶ್ಲೇಷಿಸುವ ಕಂಪ್ಯೂಟರಿನ ಗಾತ್ರವನ್ನು ತಗ್ಗಿಸುತ್ತಾ ಹೋದಂತೆ, ಒಂದು ದಿನ ನೈಜ ಕಣ್ಣಿನ ಗಾತ್ರ ಮತ್ತು ಸಾಮರ್ಥ್ಯಗಳನ್ನು ಸರಿದೂಗಬಲ್ಲ ಕೃತಕ ಕಣ್ಣಿನ ಆವಿಷ್ಕಾರ ಮಾಡಿದಂತಾಗುತ್ತದೆ. ಇದೇ ಮಾದರಿಯನ್ನು ಮಿದುಳಿನ ಮತ್ತಷ್ಟು ಪ್ರದೇಶಗಳಿಗೆ ಅನ್ವಯಿಸಬಹುದು ಎಂಬ ಮಹತ್ವಾಕಾಂಕ್ಷೆ ವಿಜ್ಞಾನಿಗಳದ್ದು. ಇದು ಸುಲಭದ ಕೆಲಸವೇನೂ ಅಲ್ಲ. ಆದರೆ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನು ಇಡಲಾಗಿದೆ ಎಂಬುದು ಮಹತ್ವದ ಸಂಗತಿ.

ಆಲನ್ ಟ್ಯುರಿಂಗ್ ಅವರ ಜೊತೆಗಾರದ ಇರ್ವಿಂಗ್ ಗುಡ್ ಎಂಬ ಗಣಿತಜ್ಞ 1965 ರಲ್ಲಿ ಭವಿಷ್ಯದಲ್ಲಿ ಯಂತ್ರಗಳು ಮಾನವ ಮಿದುಳಿನ ಸಾಮರ್ಥ್ಯವನ್ನು ಮೀರುವ ಸಾಧ್ಯತೆಯನ್ನು ಗಣಿಸಿದ್ದರು. ಅದಕ್ಕೂ ಮೊದಲೇ ವಾನ್ ನ್ಯೂಮನ್ ಎಂಬ ಪ್ರಸಿದ್ಧ ಗಣಿತಜ್ಞರು ಆ ಹಂತಕ್ಕೆ “ಸಿಂಗ್ಯುಲಾರಿಟಿ” ಎನ್ನುವ ಹೆಸರನ್ನೂ ನೀಡಿದ್ದರು. ಇದು 2045 ನೆಯ ಇಸವಿಯ ಸುಮಾರಿಗೆ ಸಾಧ್ಯವಾಗಬಹುದೆಂಬ ಅಂದಾಜಿದೆ. ಪ್ರಾಯಶಃ ನಮ್ಮ ಜೀವನಕಾಲದಲ್ಲಿ ಒಂದು ವೈಜ್ಞಾನಿಕ ಮಹಾಕ್ರಾಂತಿಗೆ ನಾವು ಸಾಕ್ಷಿಯಾಗಲಿದ್ದೇವೆ.

-------------------

ವಿಸ್ತಾರ ಜಾಲತಾಣದಲ್ಲಿ 2/11/2022 ರಂದು ಪ್ರಕಟವಾದ ಲೇಖನ. ಕೊಂಡಿ: https://vistaranews.com/attribute-136437/2022/11/02/vaidya-darpana-column-by-kiran-vs-robot-mouse-singularity-etc/

 ಮಾತನಾಡುವ ಮುನ್ನ...

ಡಾ. ಕಿರಣ್ ವಿ.ಎಸ್.

ವೈದ್ಯರು

“ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು” ಎನ್ನುವ ಗಾದೆಯನ್ನು ಕೇಳಿರುತ್ತೇವೆ. ಒಡೆದಿರುವ ಅಸಲಿ ಮುತ್ತನ್ನು ಹೆಚ್ಚು ಮಂದಿ ಕಂಡಿರಲಾರರು. ಆದರೆ ತಪ್ಪು ಮಾತಿನ ಪರಿಣಾಮವನ್ನು ಜೀವನದಲ್ಲಿ ಎಂದಾದರೂ ಅನುಭವಿಸಿಯೇ ಇರುತ್ತೇವೆ. “ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ” ಎನ್ನುವ ನಾಣ್ಣುಡಿ ಜಾಣರ ಜೀವನಕ್ರಮದ ಸಂಕೇತ. ಯಾವುದೇ ಸಂದರ್ಭದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದರಿಂದ ಹಿಡಿದು, ವೈಯಕ್ತಿಕ ಮತ್ತು ವ್ಯಾವಹಾರಿಕ ಸಂಬಂಧಗಳ ನಿರ್ವಹಣೆಯವರೆಗೆ ಮಾತಿನ ಸೂಕ್ಷ್ಮತೆಯನ್ನು ಅರಿತವರು ಗೆಲ್ಲುತ್ತಾರೆ. ಪ್ರಶ್ನೆ ಎದುರಾದಾಗ ಕೆಲಕ್ಷಣಗಳ ಕಾಲ ಯೋಚಿಸಿ ಉತ್ತರಿಸುವ ತಂತ್ರಗಾರಿಕೆಯನ್ನು ಸಂದರ್ಶನಗಳನ್ನು ಎದುರಿಸುವ ಕಲೆಗಾರಿಕೆ ಕಲಿಸುವವರು ಸೂಚಿಸುತ್ತಾರೆ. ಕೆಲವು ಪ್ರಜ್ಞಾಪೂರ್ವಕ ವಿಧಾನಗಳಿಂದ ಸಮಂಜಸವಾಗಿ ಮಾತನಾಡುವ ಕಲೆಯನ್ನು ರೂಡಿಸಿಕೊಳ್ಳಬಹುದು.

ಐದು ಮುಖ್ಯ ಅಂಶಗಳನ್ನು ಮಾತಿನಲ್ಲಿ ಅಂತರ್ಗತಗೊಳಿಸುವ ಅಗತ್ಯವಿದೆ. ಮಾತು ಸತ್ಯವಾಗಿರಬೇಕು; ಮತ್ತೊಬ್ಬರಿಗೆ ಸಹಾಯಕವಾಗಿರಬೇಕು; ಸ್ಪೂರ್ತಿ ನೀಡುವಂತಿರಬೇಕು; ಆ ಸಂದರ್ಭಕ್ಕೆ ಅಗತ್ಯವೆನಿಸುವಂತಿರಬೇಕು; ಮಾತಿನಲ್ಲಿ ಸಹೃದಯತೆಯಿರಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಬಾರದು ಎನ್ನುವ ಸಲಹೆಯ ಜೊತೆಗೆ ಪ್ರಿಯವಾದ ಅಸತ್ಯವನ್ನೂ ಹೇಳಬಾರದೆಂಬ ಎಚ್ಚರಿಕೆಯನ್ನು ಗಮನಿಸಬೇಕು. ಯಾವುದಾದರೂ ಸಂದರ್ಭದಲ್ಲಿ ಸತ್ಯವನ್ನು ಹೇಳುವುದು ಕಠಿಣ ಎನಿಸಿದಾಗ ಅಸತ್ಯವನ್ನು ನುಡಿಯುವುದಕ್ಕಿಂತ ಸುಮ್ಮನಿರುವುದು ಲೇಸು.

ನಮ್ಮ ಮಾತು ಇತರಿಗೆಗೆ ಸಹಾಯಕವಾಗಬಹುದು ಎನಿಸಿದಾಗ ಅದನ್ನು ನುಡಿಯುವುದು ಸೂಕ್ತ. ಅದೇ ರೀತಿ, ನಮ್ಮ ಮಾತುಗಳಿಂದ ಮತ್ತೊಬ್ಬರಿಗೆ ನೋವಾಗುವುದಾದರೆ, ಅಂತಹ ಮಾತನ್ನು ಆ ಸಂದರ್ಭದಲ್ಲಿ ಆಡಬೇಕೇ ಎಂದು ಚೆನ್ನಾಗಿ ಆಲೋಚಿಸಬೇಕು. ಕೆಲವು ಮಾತುಗಳು ಸಂಬಂಧಗಳನ್ನು ಕೆಡಿಸಬಹುದು. ಅಂತಹ ಮಾತುಗಳನ್ನು ನುಡಿಯುವ ಮುನ್ನ ಪರಿಣಾಮಗಳ ಬಗ್ಗೆ ಸ್ಪಷ್ಟತೆ ಇರಬೇಕು. ಒಮ್ಮೆ ಆಡಿದ ಮಾತನ್ನು ಹಿಂಪಡೆಯಲಾಗದು. ಹೀಗಾಗಿ, ಕಠಿಣ ಮಾತುಗಳನ್ನು ನುಡಿಯುವ ಮುನ್ನ ಆ ಮಾತನ್ನಾಡುವ ಮತ್ತು ಸುಮ್ಮನಿರುವ ಆಯ್ಕೆಗಳ ನಡುವಿನ ಯುಕ್ತಾಯುಕ್ತ ವಿವೇಚನೆ ಇರಬೇಕಾಗುತ್ತದೆ. ತೀರಾ ಹತ್ತಿರದ ಸಂಬಂಧದಲ್ಲಿ ವಿಮರ್ಶೆ ಅಗತ್ಯವಾದರೆ, ಅದನ್ನು ಏಕಾಂತದಲ್ಲಿ ಸೂಚ್ಯವಾಗಿ ಹೇಳುವುದು ಉತ್ತಮ ವಿಧಾನ. ಯಾವ ಕಾರಣಕ್ಕೂ ನಾಲ್ಕು ಜನರ ಮಧ್ಯೆ ನಿಷ್ಠುರ ವಿಮರ್ಶೆ ಸಲ್ಲದು. “ಹೊಗಳುವುದು ಎಲ್ಲರ ಮುಂದೆ; ಖಂಡಿಸುವುದು ಖಾಸಗಿಯಾಗಿ” ಎನ್ನುವ ಮಂತ್ರ ಪಾಲಿಸಲು ಅರ್ಹವಾದದ್ದು.

ನಮ್ಮ ಪರಿಚಿತರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಾಗ ನಿರ್ವಂಚನೆಯಿಂದ ಪ್ರಶಂಸಿಸುವುದು ಸರಿಯಾದ ಮಾರ್ಗ. ನಾವು ಬಾಳುವ ಈ ಜಗತ್ತು ಒಳ್ಳೆಯದಾಗಿರಬೇಕೆಂದರೆ ಸಮಷ್ಟಿಯ ಒಳಿತು ಬೆಳೆಯುವುದು ಮುಖ್ಯ. ಋಜುತ್ವದ ಅಭಿವೃದ್ಧಿಗೆ ಪ್ರಾಮಾಣಿಕ ಮೆಚ್ಚುಗೆಗಿಂತ ಪ್ರಬಲ ಸಾಧನವಿಲ್ಲ. ನಮ್ಮ ಮಾತುಗಳು ಅವರನ್ನು ಮತ್ತಷ್ಟು ಒಳಿತು ಮಾಡಲು ಪೂರಕವಾಗುವಂತೆ ಇರಬೇಕು. ಸಿನಿಕತೆಯ ಮಾತುಗಳಿಗೆ ಆಸ್ಪದ ಇರಬಾರದು. ಒಳ್ಳೆಯದನ್ನು ತುಚ್ಛೀಕರಿಸುವವರ ಬಗ್ಗೆ ಯಾರಿಗೂ ಗೌರವ ಮೂಡುವುದಿಲ್ಲ. ಕೆಲವರು ಒಳಿತನ್ನು ಮಾಡುವ ಭರದಲ್ಲಿ ತಾವೇ ಅಪಾಯಕ್ಕೆ ಈಡಾಗಬಲ್ಲರು. ಅಂತಹ ಸಂದರ್ಭದಲ್ಲಿ ಮಾತ್ರ ವೈಯಕ್ತಿಕವಾಗಿ ಅವರಿಗೆ ಅಪಾಯಗಳ ಸಾಧ್ಯತೆಯ ಬಗ್ಗೆ ತಿಳಿಸಬೇಕು.

ಮುತ್ಸದ್ದಿ ಯಾರು ಎನ್ನುವ ಪ್ರಶ್ನೆಗೆ ಒಂದು ಚಂದದ ಉತ್ತರವಿದೆ. “ನರಕಕ್ಕೆ ಹೋಗು” ಎನ್ನುವ ಮಾತನ್ನು ಯಾರಿಗಾದರೂ ಹೇಳುವಾಗ ಆ ವ್ಯಕ್ತಿಗೆ “ನಾನು ಅಲ್ಲಿಗೆ ಹೋದರೆ ಚೆನ್ನ” ಎಂದು ಕಾತರಿಸುವಷ್ಟು ಚೆನ್ನಾಗಿ ಹೇಳಬಲ್ಲವನು ಮುತ್ಸದ್ದಿ! ಅಂದರೆ, ಆಡುವ ಮಾತನ್ನು ಅನೇಕ ಬಗೆಗಳಲ್ಲಿ ನುಡಿಯಬಹುದು. ವಿಮರ್ಶಾತ್ಮಕ ಸಲಹೆಗಳನ್ನು ನೀಡುವಾಗ ಅದನ್ನು ಹೇಳುವ ವಿಧಾನವೂ ಮುಖ್ಯ. ಈ ಕಲೆಗಾರಿಕೆ ಅಷ್ಟು ಸುಲಭವಲ್ಲವಾದರೂ, ಸಾಕಷ್ಟು ಪ್ರಯತ್ನದಿಂದ ಇದನ್ನು ಸಾಧಿಸಬಹುದು. ಸಲಹೆಗಳಿಗೆ ಪ್ರತಿಯೊಬ್ಬರೂ ವಿಭಿನ್ನವಾಗಿ ಸ್ಪಂದಿಸುತ್ತಾರೆ. ಆದ್ದರಿಂದ ಮಾನವ ಸ್ವಭಾವವನ್ನು ಆಳವಾಗಿ ಅರಿತರೆ ಯಾರಿಗೆ ಯಾವ ವಿಧಾನದಲ್ಲಿ ಸಲಹೆಗಳನ್ನು ನೀಡುವುದು ಸಾಧ್ಯ ಎಂದು ಅರಿಯಬಹುದು.

ಒಳ್ಳೆಯ ಮಾತುಗಾರರಾಗಬೇಕೆಂದರೆ ಮೊದಲು ಒಳ್ಳೆಯ ಕೇಳುಗರಾಗಬೇಕು. ಮತ್ತೊಬ್ಬರ ಮಾತಿನ ಮೇಲೆ ನೈಜ ಆಸಕ್ತಿ ತೋರಬೇಕು. ಇದರಿಂದ ಅವರ ಚಿಂತನೆಗಳನ್ನು ಸರಿಯಾಗಿ ಅರಿಯಲು ಸಾಧ್ಯವಾಗುತ್ತದೆ; ಸಮಂಜಸವಾಗಿ ಉತ್ತರಿಸಲು ನೆರವಾಗುತ್ತದೆ. ಮತ್ತೊಬ್ಬರು ಮಾತನಾಡುವಾಗ ಪ್ರತ್ಯುತ್ತರವನ್ನು ನೀಡಲು ಹೊರಟರೆ ನಮ್ಮ ಗಮನ ಅವರ ಮಾತಿನಿಂದ ದೂರ ಸರಿಯುತ್ತದೆ. ಆಗ ಸರಿಯಾದ ಪ್ರತಿಕ್ರಿಯೆ ನೀಡಲಾಗದು. ಎದುರು ವ್ಯಕ್ತಿಯ ಮಾತು ಮುಗಿದ ಕೆಲಕ್ಷಣಗಳ ನಂತರ ಪ್ರತ್ಯುತ್ತರ ನೀಡುವುದು ಸರಿಯಾದ ವಿಧಾನ. ಈ ಕೆಲಕ್ಷಣಗಳಲ್ಲಿ ನಮ್ಮ ಮಾತುಗಳು ಸ್ಪಷ್ಟ ರೂಪ ಪಡೆಯಬಲ್ಲವು. ಒಂದು ವೇಳೆ ನಮ್ಮ ಆಲೋಚನೆಗಳನ್ನು ಕ್ರೋಡೀಕರಿಸಲು ಕೆಲಕ್ಷಣಗಳಿಗಿಂತಲೂ ಹೆಚ್ಚು ಸಮಯ ಬೇಕೆನಿಸಿದರೆ “ನನಗೆ ಉತ್ತರಿಸಲು ಒಂದು ನಿಮಿಷ ಬೇಕು” ಎಂದು ಕೇಳಬಹುದು. ಇದರಿಂದ ಒತ್ತಡ ಕಡಿಮೆಯಾಗಿ ಆಲೋಚನೆಗಳು ತಿಳಿಯಾಗುತ್ತವೆ. 

ಕೆಲವೊಮ್ಮೆ ಉತ್ತರಿಸುವ ಧಾವಂತದಲ್ಲಿ ಎದುರು ವ್ಯಕ್ತಿಯ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾತನಾಡಿ ಪೇಚಾಡುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಉತ್ತರಿಸುವ ಮೊದಲು ಎದುರು ವ್ಯಕ್ತಿಯ ಮಾತನ್ನು ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳುವುದು ಉಚಿತ. “ಅಂದರೆ ನಿಮ್ಮ ಅಭಿಪ್ರಾಯ ಹೀಗೆಂದೇ?” ಎಂದೋ, ಅಥವಾ “ನೀವು ಹೇಳಿದ ಈ ಮಾತನ್ನು ಸ್ವಲ್ಪ ವಿವರಿಸಬಹುದೇ?” ಎಂದೋ ಕೇಳಿದರೆ, ಇಡೀ ಮಾತು ಮತ್ತೊಮ್ಮೆ ಬರುವಂತಾಗುತ್ತದೆ. ಇದರಿಂದ ಮಾತಿನ ಅರ್ಥ ಸ್ಪಷ್ಟವಾಗಿ, ಉತ್ತರಿಸಲು ನೆರವಾಗುತ್ತದೆ. ಒಟ್ಟಿನಲ್ಲಿ, ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳದೆ ಉತ್ತರಿಸುವುದು ಸರಿಯಾದ ವಿಧಾನವಲ್ಲ.

ಸಂದರ್ಶನದಂತಹ ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಆಗ ಮಾತಿನಲ್ಲಿ ತಪ್ಪುಗಳಾಗಬಹುದು. ಇಂತಹುದೇ ಸಾಧ್ಯತೆಗಳು ವಾಗ್ವಾದಗಳ ವೇಳೆಯೂ ಅಗಬಹುದು. ಈ ರೀತಿಯ ಸಂದರ್ಭಗಳಲ್ಲಿ ನಮಗೇ ಅರಿವಿಲ್ಲದಂತೆ ಉಸಿರುಗಟ್ಟುವುದು ಸಹಜ ಪ್ರಕ್ರಿಯೆ. ಇದನ್ನು ಪ್ರಯತ್ನಪೂರ್ವಕವಾಗಿ ಬದಲಾಯಿಸಬಹುದು. ಎದುರು ವ್ಯಕ್ತಿಯ ಮಾತಿನ ವೇಳೆ ನಿಧಾನವಾಗಿ, ದೀರ್ಘ ಶ್ವಾಸ ತೆಗೆದುಕೊಳ್ಳುವುದರಿಂದ ಗಮನ ಹೆಚ್ಚುತ್ತದೆ; ಆಲೋಚನೆಗಳನ್ನು ಒಟ್ಟುಗೂಡಿಸಲು ನೆರವಾಗುತ್ತದೆ. ಸಂಭಾಷಣೆಯ ವಿಷಯ ಗಂಭೀರವಾದಷ್ಟೂ ಎದುರು ವ್ಯಕ್ತಿಯ ಮಾತಿನ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅಗತ್ಯ. ಹೀಗಾಗಿ, ನಮ್ಮ ಮಾತಿನ ಮುನ್ನ ಸಂಭಾಷಣೆಯ ವಿವರಗಳನ್ನು ಗ್ರಹಿಸುವುದು ಕಡ್ಡಾಯ.

ಸಂಭಾಷಣೆಯ ವೇಳೆ ದೇಹದ ಆಂಗಿಕ ಭಾಷೆಯೂ ಮುಖ್ಯವಾಗುತ್ತದೆ. ಆಂಗಿಕ ಭಾಷೆ ಸಾರ್ವತ್ರಿಕ. ಎದುರು ವ್ಯಕ್ತಿ ದೇಹಭಾಷೆಯ ವಿವರಗಳನ್ನು ಅರಿಯದಿದ್ದರೂ, ಅದನ್ನು ಪರೋಕ್ಷವಾಗಿ ಗ್ರಹಿಸಬಲ್ಲರು. ಮಾತನಾಡುತ್ತಿರುವ ವ್ಯಕ್ತಿಯೆಡೆಗೆ ನೋಡುವುದು; ಕೈಗಳನ್ನು ಕಟ್ಟಿಕೊಳ್ಳದೆ ಬದಿಯಲ್ಲಿ ಸಡಿಲ ಬಿಡುವುದು; ಹುಬ್ಬುಗಳನ್ನು ಗಂಟಿಡದೆ ತಟಸ್ಥವಾಗಿಡುವುದು; ಮುಖದಲ್ಲಿ ಸಹಜ ಕಿರುನಗೆಯಿರುವುದು ಮೊದಲಾದುವು ಆಸಕ್ತ ಆಂಗಿಕ ಭಾಷೆಯ ಲಕ್ಷಣಗಳು.

ಮಾತನಾಡುವಾಗ ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಂಶಗಳನ್ನು ಬೆರೆಸಬಾರದು. ಹಲವಾರು ಅಂಶಗಳನ್ನು ಒಟ್ಟೊಟ್ಟಿಗೆ ಹೇಳಿದರೆ ಗೊಂದಲವಾಗುತ್ತದೆ. ಸರಣಿ ಮಾತುಗಾರಿಕೆಯ ವೇಳೆ ಒಂದು ಅಂಶವನ್ನು ಸ್ಪಷ್ಟಪಡಿಸಿದ ನಂತರವೇ ಮತ್ತೊಂದು ಅಂಶಕ್ಕೆ ಹೋಗುವುದು ಸೂಕ್ತ. ಎರಡು ಅಂಶಗಳ ಮಾತಿನ ನಡುವೆ ಕೆಲಕ್ಷಣಗಳ ಅಂತರವಿರಬೇಕು. ಆಗ ಮೊದಲ ಅಂಶದ ವಿಷಯವಾಗಿ ಪ್ರಶ್ನೆಗಳಿದ್ದರೆ ಅವುಗಳನ್ನು ವಿವರಿಸಲು ಕಾಲಾವಕಾಶವಾಗುತ್ತದೆ. ಇದರಿಂದ ಒಂದೇ ವಿಷಯವನ್ನು ಮತ್ತೆ ಮತ್ತೆ ಆಡುವ ಪ್ರಸಂಗ ಬರುವುದಿಲ್ಲ; ನಿರ್ಧಾರಗಳು ವೇಗವಾಗಿ ಆಗಬಲ್ಲವು. ಮುಖ್ಯವಾದ ಸಂಭಾಷಣೆಯ ಕೊನೆಯಲ್ಲಿ ಮಾತಿನ ಸಾರಾಂಶವನ್ನು ಸಂಗ್ರಹವಾಗಿ ಒಂದು ಸಣ್ಣ ವಾಕ್ಯದಲ್ಲಿ ಹೇಳುವುದರಿಂದ ಮಾತಿಗೆ ಒಂದು ತಾರ್ಕಿಕ ಅಂತ್ಯ ನೀಡಿದಂತಾಗುತ್ತದೆ.

ಮಾತು ನಮ್ಮ ಭಾವನೆಗಳ ಪ್ರತಿಬಿಂಬ. ಇದನ್ನು ಸಮರ್ಥವಾಗಿ ನಿಭಾಯಿಸುವುದು ಜೀವನದ ಆವಶ್ಯಕತೆಗಳಲ್ಲಿ ಒಂದು. ಮಾತುಗಳ ಶಕ್ತಿ ಅಪರಿಮಿತ. ಹೀಗಾಗಿ, ಅದನ್ನು ತೂಗಿ ಆಡುವುದು ಮುಖ್ಯವಾಗುತ್ತದೆ. ಮಾತನಾಡುವ ಮುನ್ನ ಆಡಬೇಕಾದ ಮಾತಿನ ಮಹತ್ವವನ್ನು ಅರಿಯಲೇಬೇಕು.

-----------------------------

1/11/2022 ರ ಪ್ರಜಾವಾಣಿಯಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/how-to-talk-kannada-article-984613.html


ಕೋವಿಡೋತ್ತರ ಕಾಲದಲ್ಲಿ ಹೃದಯದ ಆರೈಕೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ “ಜಗತ್ತಿನ ಓಟಕ್ಕೆ ವೈ-2-ಕೆ ಎನ್ನುವ ಸಮಸ್ಯೆ ಎಲ್ಲಿ ತಡೆಗೋಡೆಯಾಗುತ್ತದೆಯೋ” ಎನ್ನುವ ಅನುಮಾನ ಕಾಡಿತ್ತು. ಆದರೆ, ಅದು ಸಮಸ್ಯೆಯೇ ಅಲ್ಲವೆಂಬಂತೆ ಪರಿಹಾರವಾದಾಗ ಮಾನವನ ಪ್ರಗತಿಯ ವೇಗಕ್ಕೆ ಬ್ರೇಕ್ ಹಾಕಬಲ್ಲ ಶಕ್ತಿ ಯಾವುದೂ ಇಲ್ಲ ಎನ್ನುವ ಹುಂಬತನ ಆವರಿಸಿತು. ಮನುಷ್ಯನ ಈ “ಹ್ಯುಬ್ರಿಸ್” ಅನ್ನು ನಾಶ ಮಾಡಿದ್ದು ಒಂದು ಯಃಕಶ್ಚಿತ್ ವೈರಸ್. ಜೀವಜಗತ್ತಿನ ಅತ್ಯಂತ ಪ್ರಾಥಮಿಕ ಅಂಶವಾದ, “ಅತ್ತ ಜೀವವೂ ಅಲ್ಲ; ಇತ್ತ ನಿರ್ಜೀವವೂ ಅಲ್ಲ” ಎನ್ನುವ ಗೋಡೆಯ ಮೇಲೆ ಕೂತಿರುವ, ಜೀವಂತ ಕೋಶಗಳ ನೆರವಿಲ್ಲದೆ ಏನನ್ನೂ ಮಾಡಲಾಗದ ಒಂದು ಕ್ಷುಲ್ಲಕ ವೈರಸ್ ಜಗತ್ತಿನ ಪ್ರಗತಿಯ ನಾಗಾಲೋಟಕ್ಕೆ ಕಡಿವಾಣ ಬಿಗಿದು, ಎಲ್ಲರ ಎದೆಯಲ್ಲಿ ಅಳುಕು ಮೂಡಿಸಿ, ಪ್ರಪಂಚವನ್ನು ಸ್ತಬ್ಧಗೊಳಿಸಿದ್ದು ನಮ್ಮ ಕಾಲಘಟ್ಟದ ಅಚ್ಚರಿಗಳಲ್ಲಿ ಒಂದು. ನಮ್ಮ ಹಿರಿಯರು ಅವರ ಕಾಲದ ಇನ್ಫ್ಲುಎನ್ಝಾ ಎಂಬ ಮಹಾಮಾರಿಯ ಬಗ್ಗೆ ನಮಗೆ ಹೇಳಿದ್ದರು. ನಾವು ಕೋವಿಡ್-19 ಎನ್ನುವ ಜಾಗತಿಕ ವಿಪತ್ತಿನ ಬಗ್ಗೆ ನಮ್ಮ ಮುಂದಿನ ತಲೆಮಾರಿಗೆ ಹೇಳುವಂತಾದೆವು.

ಆರಂಭದಲ್ಲಿ ಶ್ವಾಸನಾಳಗಳ ಲಘು ಕಾಯಿಲೆ ಎಂದು ಭಾವಿಸಲಾಗಿದ್ದ ಕೋವಿಡ್-19, ಕೆಲದಿನಗಳಲ್ಲೇ ಶ್ವಾಸಕೋಶಗಳನ್ನು ಕಾಡುವ ನ್ಯುಮೋನಿಯಾ ಎಂದು ತಿಳಿದುಬಂದಿತು. ಕಾಲಕ್ರಮೇಣ ಅದರ ಪರಿಣಾಮಗಳು ಬೆಳಕಿಗೆ ಬರುತ್ತಿದ್ದಂತೆ, ಕೋವಿಡ್-19 ಲೋಳೆಪದರ, ಹೃದಯ, ಮೂತ್ರಪಿಂಡ ಮೊದಲಾಗಿ ದೇಹದ ಅನೇಕ ಅಂಗಗಳನ್ನು ಕಾಡಬಲ್ಲದು ಎಂದು ಅರಿವಾಯಿತು. ಆಯಾ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇರೆಗೆ ಕೋವಿಡ್-19 ಕಾಯಿಲೆಯ ವ್ಯಾಪ್ತಿ ನಿರ್ಧಾರವಾಗುತ್ತದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ಒಂದೇ ಕಾಯಿಲೆ ಇಬ್ಬರು ವಿಭಿನ್ನ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುತ್ತದೆ ಎಂಬುದು ಹೆಚ್ಚಿನ ಆತಂಕಕ್ಕೆ ಕಾರಣವಾಯಿತು. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮೊದಲಾದುವು ಕೋವಿಡ್-19 ರೋಗಿಗಳ ಅಪಾಯದ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಇಷ್ಟಾಗಿಯೂ, ಕೋವಿಡ್-19 ಕಾಯಿಲೆಯ ಕಾರಣದಿಂದ ಸಾವನ್ನಪ್ಪುವವರ ಪ್ರತಿಶತ ಪ್ರಮಾಣ ಅಲ್ಪವೇ ಇತ್ತು. ಒಮ್ಮೆ ಈ ಕಾಯಿಲೆ ಮೇಲ್ನೋಟಕ್ಕೆ ಗುಣವಾದ ನಂತರ ಮಾಜಿರೋಗಿಗಳ ಮೇಲೆ ಆಗಬಹುದಾದ ದೀರ್ಘಕಾಲಿಕ ಪರಿಣಾಮಗಳೇನು ಎಂಬುದು ಯಾರಿಗೂ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ವೈದ್ಯಕೀಯ ಸಂಶೋಧಕರು, ವೈದ್ಯವಿಜ್ಞಾನಿಗಳು ನಿರಂತರವಾಗಿ ಕೋವಿಡ್-19 ರೋಗಿಗಳ ಬೆನ್ನು ಹತ್ತಿಯೇ ಇದ್ದರು.

ಕೋವಿಡ್-19 ಹೃದಯದ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವ ಮುನ್ನ ಹೃದಯದ ರಚನೆಯ ಬಗ್ಗೆ ಅರಿಯಬೇಕು. ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ. ಅದು ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ. ರಚನೆಯ ದೃಷ್ಟಿಯಿಂದಲೂ ಹೃದಯ ಬಹಳ ಸರಳ. ರಕ್ತ ಸಂಗ್ರಹಿಸುವ ಎರಡು ಕಕ್ಷೆಗಳು, ರಕ್ತವನ್ನು ಮುಂದಕ್ಕೆ ದೂಡುವ ಎರಡು ಪಂಪ್ಗಳು, ಈ ಕಕ್ಷೆಗಳನ್ನು ಮತ್ತು ಪಂಪ್ಗಳನ್ನು ಪ್ರತ್ಯೇಕವಾಗಿಸುವ ಎರಡು ಗೋಡೆಗಳು, ರಕ್ತಸಂಚಾರವನ್ನು ಏಕಮುಖವಾಗಿ ನಿರ್ವಹಿಸುವ ನಾಲ್ಕು ಕವಾಟಗಳು – ಇವು ಹೃದಯದ ಪ್ರಮುಖ ಭಾಗಗಳು. ಹೃದಯದ ಬಲಭಾಗದ ಪಂಪ್ ತನ್ನ ಪಕ್ಕದಲ್ಲೇ ಇರುವ ಶ್ವಾಸಕೋಶಗಳಿಗೆ ರಕ್ತ ಹರಿಸಿದರೆ, ಎಡಭಾಗದ ಪಂಪ್ ತಲೆಯ ಶಿಖರದಿಂದ ಕಾಲಿನ ತುದಿಯವರೆಗೆ ಎಲ್ಲೆಡೆ ರಕ್ತವನ್ನು ತಲುಪಿಸುತ್ತದೆ. ಹೀಗಾಗಿ, ಹೃದಯದ ಬಲಭಾಗದ ಪಂಪ್ಗಿಂತ ಎಡಭಾಗದ ಪಂಪ್ ಸುಮಾರು ಐದಾರು ಪಟ್ಟು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿದೆ. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಪ್ರಮುಖ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಹೀಗೆ, ಹೃದಯದ್ದು ಗ್ರಾಹಕರಿಂದ ಹಣ ಸಂಗ್ರಹಿಸಿ ಇತರ ಗ್ರಾಹಕರಿಗೆ ನೀಡುವ ಬ್ಯಾಂಕಿನ ಕ್ಯಾಶಿಯರ್ ಕೆಲಸ.

ಬ್ಯಾಂಕಿನ ಕ್ಯಾಶಿಯರ್ ದಿನವೂ ಲಕ್ಷಗಟ್ಟಲೇ ಹಣವನ್ನು ನಿರ್ವಹಿಸುತ್ತಿದ್ದರೂ ಅವರ ವೈಯಕ್ತಿಕ ಅಗತ್ಯಗಳಿಗೆ ಅದನ್ನು ಬಳಸುವಂತಿಲ್ಲ. ಬದಲಿಗೆ ಕ್ಯಾಶಿಯರ್ ತಮ್ಮ ಕೆಲಸಕ್ಕೆ ಸಂಬಳ ಪಡೆಯುತ್ತಾರೆ. ಹೀಗೆಯೇ, ಹೃದಯ ಇಡೀ ಶರೀರದ ಆಕ್ಸಿಜನ್ ಅಗತ್ಯ ಪೂರೈಸುವ ರಕ್ತವನ್ನು ಸರಬರಾಜು ಮಾಡಿದರೂ, ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ. ಅದಕ್ಕೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು.

ಕೋವಿಡ್-19 ವೈರಸ್ ಹೃದಯದ ಯಾವುದೇ ಭಾಗವನ್ನಾದರೂ ಅಕ್ರಮಿಸಬಲ್ಲದಾದರೂ ಅದು ಮುಖ್ಯವಾಗಿ ಘಾಸಿ ಮಾಡುವುದು ಹೃದಯದ ಮಾಂಸಖಂಡ ಮತ್ತು ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು. ಕೋವಿಡ್-19 ಮೂಲದಿಂದ ಶರೀರದಲ್ಲಿ ಉತ್ಪತ್ತಿಯಾಗುವ ಹಲವಾರು ಉರಿಯೂತಕಾರಕ ರಾಸಾಯನಿಕಗಳು ಈ ಘಾಸಿಗೆ ಕಾರಣ. ಇದಲ್ಲದೆ, ಕೋವಿಡ್-19 ವೈರಸ್ ನೇರವಾಗಿ ಹೃದಯದ ಮಾಂಸಖಂಡಗಳ ಮೇಲೆ ಧಾಳಿ ಮಾಡಬಲ್ಲದು. ಈ ಧಾಳಿಯಿಂದ ಹೃದಯದ ಮಾಂಸಖಂಡಗಳ ಕ್ಷಮತೆ ಕುಗ್ಗುತ್ತದೆ. ಈ ಮಾಂಸಖಂಡಗಳ ಒತ್ತುವಿಕೆ ಕಡಿಮೆಯಾದಾಗ ಹೃದಯ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ವಿಫಲವಾಗುತ್ತದೆ. ಈ ಸ್ಥಿತಿಯನ್ನು ಹೃದಯ ವೈಫಲ್ಯ (heart failure) ಎನ್ನಬಹುದು. ಕೆಲವೊಮ್ಮೆ ಅದರ ಕೆಲಸ ಹಠಾತ್ತಾಗಿ ನಿಂತು ಹೃದಯ ಸ್ತಂಭನ (cardiac arrest) ಸಂಭವಿಸಬಹುದು.

ಕೋವಿಡ್-19 ಕಾರಣದಿಂದ ಹೃದಯಕ್ಕೆ ರಕ್ತ ಪೂರೈಸುವ ಕರೋನರಿ ರಕ್ತನಾಳಗಳು ಕೂಡ ತೊಂದರೆಗೆ ಒಳಗಾಗುತ್ತವೆ. ಈ ರಕ್ತನಾಳಗಳು ಅಗತ್ಯ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಹೃದಯಕ್ಕೆ ತಲುಪಿಸುವ ಏಕೈಕ ಮಾರ್ಗ. ಯಾವುದೇ ಕಾರಣದಿಂದ ಈ ರಕ್ತನಾಳಗಳ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ, ಆಗ ಹೃದಯದ ಸ್ನಾಯುಗಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಸ್ನಾಯುಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಒಂದು ಹಂತ ತಲುಪಿದಾಗ ಹೃದಯದ ಕಾರ್ಯಕ್ಷಮತೆ ಹಠಾತ್ತಾಗಿ ಇಳಿದುಹೋಗುತ್ತದೆ. ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ; ಎಲ್ಲಾ ಅಂಗಗಳೂ ಘಾಸಿಗೊಳ್ಳುತ್ತವೆ. ಈ ಪ್ರಕ್ರಿಯೆಗೆ ಹೃದಯಾಘಾತ ಎಂದು ಹೆಸರು. ಹೃದಯದ ಎಡಭಾಗಕ್ಕೆ ರಕ್ತ ಪೂರೈಸುವ ಕರೊನರಿ ರಕ್ತನಾಳ ಸಂಪೂರ್ಣವಾಗಿ ಕಟ್ಟಿಕೊಂಡರೆ ಹೃದಯಾಘಾತದ ಪ್ರಕ್ರಿಯೆ ವೇಗವಾಗಿ ಆಗುತ್ತದೆ. ಹೀಗೆ ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಇದನ್ನು ತೀವ್ರ ಹೃದಯಾಘಾತ ಎನ್ನಬಹುದು. ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕ್ರಮೇಣವಾಗಿ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಕೋವಿಡ್-19 ಆಘಾತಕ್ಕೆ ಒಳಗಾದ ವ್ಯಕ್ತಿಯಲ್ಲಿ ಕರೊನರಿ ರಕ್ತನಾಳಗಳ ಒಳಗಿನ ಲೋಳೆಪದರಗಳು ಹಾನಿಗೊಂಡು ರಕ್ತಸಂಚಾರಕ್ಕೆ ಅಡ್ಡಿಯಾಗಬಹುದು. ಈ ಸಂದರ್ಭಗಳಲ್ಲಿ ಮೇಲೆ ತಿಳಿಸಿದ ಎರಡೂ ಬಗೆಯ ಹೃದಯಾಘಾತ ಸಂಭವಿಸಬಹುದು. ಕೋವಿಡ್-19 ರೋಗಿಗೆ ಈ ಮೊದಲೇ ಹೃದಯದ ಸಮಸ್ಯೆಗಳು ಇದ್ದರೆ ಅಪಾಯ ಮತ್ತೂ ಹೆಚ್ಚು.  

“ದ್ರವರೂಪದ ಅಂಗಾಂಶ” ಎನ್ನಲಾಗುವ ರಕ್ತ ದೇಹದ ರಕ್ತನಾಳಗಳ ಒಳಗೆ ಸರಾಗವಾಗಿ ಹರಿಯುತ್ತದೆ. ಆದರೆ, ಯಾವುದೇ ರಕ್ತನಾಳಕ್ಕೆ ಘಾಸಿಯಾಗಿ, ರಕ್ತ ಹೊರಚಿಮ್ಮಿದ ಕ್ಷಣವೇ ಅದು ಹೆಪ್ಪಾಗುವಂತಹ ವ್ಯವಸ್ಥೆ ಶರೀರದಲ್ಲಿದೆ. ಈ ರೀತಿ ರಕ್ತ ಹೆಪ್ಪಾಗುವುದರಿಂದ ರಕ್ತನಾಳಗಳಿಗೆ ಆದ ಗಾಯಕ್ಕೆ ಪಟ್ಟಿ ಕಟ್ಟಿದಂತಾಗಿ, ರಕ್ತಸ್ರಾವ ಕಡಿಮೆಯಾಗುತ್ತದೆ. ಹೀಗೆ ಶರೀರ ತನ್ನ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ಜೀವನಾಧಾರವಾದ ರಕ್ತವನ್ನು ಹೆಚ್ಚು ಕಳೆದುಕೊಳ್ಳದಂತೆ ಕಾಪಾಡುತ್ತದೆ. ಆದರೆ, ಕೋವಿಡ್-19 ಕಾಯಿಲೆಯಲ್ಲಿ ರಕ್ತನಾಳಗಳ ಒಳಗಿನ ಲೋಳೆಪದರದಲ್ಲಿ ಸಮಸ್ಯೆಯಾಗಿ, ಯಾವುದೇ ರೀತಿಯ ಬಾಹ್ಯ ಕಾರಣವಿಲ್ಲದಿದ್ದರೂ ಅವುಗಳ ಒಳಗೆ ಹರಿಯುತ್ತಿರುವ ರಕ್ತ ತಂತಾನೇ ಹೆಪ್ಪುಗಟ್ಟುವಂತಾಗುತ್ತದೆ. ಇದರಿಂದ ಶರೀರದಲ್ಲಿ ಸರಾಗವಾಗಿ ಹರಿಯುವ ರಕ್ತಕ್ಕೆ ತಡೆಗೋಡೆ ಕಟ್ಟಿದಂತಾಗಿ, ರಕ್ತಸಂಚಾರ ಕಡಿಮೆಯಾಗುತ್ತಾ, ಕಡೆಗೆ ಸ್ಥಗಿತವಾಗುತ್ತದೆ. ಇದು ಯಾವುದೇ ಅಂಗದಲ್ಲಿ ಸಂಭವಿಸಿದರೂ ಬಹಳ ಅಪಾಯಕಾರಿ. ಒಂದು ವೇಳೆ ಈ ಪ್ರಕ್ರಿಯೆ ಕರೊನರಿ ರಕ್ತನಾಳಗಳಲ್ಲಿ ನಡೆದರೆ ಹೃದಯಾಘಾತವಾಗುತ್ತದೆ.

ಕೋವಿಡ್-19 ರೋಗಿಗಳಲ್ಲಿ ಹೃದಯದ ತೊಂದರೆ ಕೇವಲ ವೈರಸ್ ನೇರ ಧಾಳಿ ಅಥವಾ ಉರಿಯೂತದ ಮೂಲಕವೇ ಆಗಬೇಕೆಂದಿಲ್ಲ. ಕೆಲವೊಮ್ಮೆ ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಅಡ್ಡಪರಿಣಾಮಗಳು ಹೃದಯವನ್ನು ಕಾಡಬಹುದು. ಕೋವಿಡ್-19 ಕಾರಣದಿಂದ ಇತರ ಅಂಗಾಂಗಳು ಬಳಲಿದಾಗ, ಹೃದಯದ ಕೆಲಸಕ್ಕೆ ಅವುಗಳ ಬೆಂಬಲ ಕಡಿಮೆಯಾಗಿ, ಹೃದಯದ ಕಾರ್ಯಕ್ಷಮತೆ ಕ್ಷೀಣಿಸಬಹುದು. ಕೋವಿಡ್-19 ಮೂತ್ರಪಿಂಡಗಳನ್ನು ಘಾಸಿ ಮಾಡಿದಾಗ ಶರೀರದ ಲವಣಗಳ ಮಟ್ಟದಲ್ಲಿ ತೀವ್ರ ಬದಲಾವಣೆಗಳಾಗಿ, ಅದರಿಂದ ಹೃದಯದ ಲಯ ಏರುಪೇರಾಗಬಹುದು. ಹೀಗೆ, ಪರೋಕ್ಷ ರೀತಿಯಲ್ಲೂ ಕೋವಿಡ್-19 ಹೃದಯದ ಆರೋಗ್ಯದ ಮೇಲೆ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಹೀಗೆ, ಒಟ್ಟಾರೆ ಲೆಕ್ಕಾಚಾರದಲ್ಲಿ ಕೋವಿಡ್-19 ಪೀಡಿತರಾಗಿ ಆಸ್ಪತ್ರೆಯಲ್ಲಿ ದಾಖಲಾದ ನೂರು ರೋಗಿಗಳ ಪೈಕಿ 12 ಮಂದಿಗೆ ಹೃದಯದ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಈ ಹಿಂದೆ ಹೃದಯದ ಕಾಯಿಲೆ ಇಲ್ಲದವರಲ್ಲಿ ಉಂಟಾದ ಹೊಸ ಸಮಸ್ಯೆ ಇದ್ದಿರಬಹುದು; ಅಥವಾ ಈ ಮೊದಲೇ ಹೃದಯದ ಕಾಯಿಲೆಗಳಿದ್ದವರಲ್ಲಿ ತೀವ್ರಗೊಂಡ ಸಮಸ್ಯೆ ಆಗಿದ್ದಿರಬಹುದು. ಕೋವಿಡ್-19 ಕಾಯಿಲೆ ಲಘು ಪ್ರಮಾಣದಲ್ಲಿ ಆಗಿ, ಆಸ್ಪತ್ರೆ ಸೇರುವ ಅಗತ್ಯ ಇಲ್ಲದವರಲ್ಲಿ ಎಷ್ಟು ಮಂದಿಗೆ ಹೃದಯದ ಸಮಸ್ಯೆ ಆಗಿದ್ದಿರಬಹುದೆಂದು ಅಂದಾಜು ಮಾಡಬಹುದಾದ ಸಾಧ್ಯತೆ ಇಲ್ಲ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದ ಕೋವಿಡ್-19 ರೋಗಿಗಳಲ್ಲಿ ಮರಣದ ಪ್ರಮಾಣ ಪ್ರತಿಶತ 2 ರಿಂದ 3 ಆಗಿದ್ದರೆ, ಕೋವಿಡ್-19 ಕಾರಣದಿಂದ ಹೃದಯದ ಸಮಸ್ಯೆ ಉಂಟಾದವರಲ್ಲಿ ಮರಣದ ಪ್ರಮಾಣ ಸುಮಾರು 10-11 ಪ್ರತಿಶತ. ಕೋವಿಡ್-19 ರಿಂದ ಹೃದಯಕ್ಕೆ ಆಗುವ ಹಾನಿಯಿಂದ ಶರೀರದ ಎಲ್ಲ ಅಂಗಗಳಲ್ಲೂ ರಕ್ತಸಂಚಾರಕ್ಕೆ ಅಡ್ಡಿಯಾಗಿ, ಕಾಲಾನುಸಾರ ಇತರ ಅಂಗಗಳಿಗೂ ಘಾಸಿಯಾಗುತ್ತದೆ. ಇಂತಹ ಯಾವುದೇ ಅಂಗದ ಕಾರ್ಯವೈಫಲ್ಯದಿಂದ ಸಾವುಂಟಾದರೂ ಅದಕ್ಕೆ ಮೂಲ ಕಾರಣ ಕೋವಿಡ್-19 ಮತ್ತು ಅದರಿಂದ ಉಂಟಾದ ಹೃದಯದ ಕಾಯಿಲೆ ಎಂದೇ ದಾಖಲಾಗುತ್ತದೆ.

ಕೋವಿಡ್-19 ಕಾಯಿಲೆ ತೀವ್ರವಾಗಿದ್ದಾಗ ಕಾಣಿಸಿಕೊಳ್ಳುವ ಹೃದಯ ಸಂಬಂಧಿ ಸಮಸ್ಯೆಗಳ ಚಿಕಿತ್ಸೆ ಅದೇ ಕಾಲಕ್ಕೆ ನಡೆದುಹೋಗುತ್ತದೆ. ಆದರೆ, ಕೋವಿಡ್-19 ಕಾಯಿಲೆ ಲಘು ಪ್ರಮಾಣದಲ್ಲಿ ಇದ್ದವರಿಗೆ, ಅಥವಾ ಕಾಯಿಲೆಯ ಚಿಕಿತ್ಸೆ ಪಡೆದು ಗುಣವಾದವರ ಪೈಕಿ ಹೃದಯದ ಕತೆಯೇನು? ಇದೊಂದು ಕ್ಲಿಷ್ಟಕರ ಸಮಸ್ಯೆ. ಕೋವಿಡ್-19 ಉಳ್ಳವರಲ್ಲಿ ಹೃದಯದ ಸಮಸ್ಯೆ ಇದೆಯೋ ಇಲ್ಲವೋ ಎಂದು ತಿಳಿಯಲು ರಕ್ತದ ಕೆಲವು ಪರೀಕ್ಷೆಗಳು, ಇಸಿಜಿ ನಕ್ಷೆ, ಹೃದಯದ ಸ್ಕ್ಯಾನಿಂಗ್ ಮೊದಲಾದ ಪರೀಕ್ಷೆಗಳು ಸಹಾಯಕ. ಅದರೆ ಇವೆಲ್ಲವೂ ಕೋವಿಡ್-19 ರಿಂದ ಹೃದಯದ ಅನಾರೋಗ್ಯ ಒಂದು ಹಂತಕ್ಕೆ ಬಂದ ಮೇಲೆ ಕಾಣುವ ಚಿಹ್ನೆಗಳು. ಒಂದು ವೇಳೆ ಆರಂಭದಲ್ಲಿ ಪತ್ತೆಯಾಗಬಲ್ಲ ಹಂತಕ್ಕಿಂತ ಕಡಿಮೆ ಇದ್ದು, ಕಾಲಕ್ರಮೇಣ ನಿಧಾನವಾಗಿ ಏರುಗತಿಗೆ ಹೋದರೆ? ಒಂದು ಉದಾಹರಣೆಯನ್ನು ನೋಡೋಣ: ಕೋವಿಡ್-19 ಕಾಯಿಲೆ ಹೃದಯದ ಸಮಸ್ಯೆಯ ಕಿಡಿ ಹಚ್ಚಿದೆ; ಆದರೆ ಆ ಕಿಡಿ ಇನ್ನೂ ಬೆಂಕಿಯ ಸ್ವರೂಪ ಪಡೆದಿಲ್ಲ. ಬೆಂಕಿಯನ್ನು ಪತ್ತೆ ಹಚ್ಚುವ ಪರೀಕ್ಷೆಗಳಿಗೆ ಈ ಕಿಡಿಯನ್ನು ಗುರುತಿಸುವ ಸಾಮರ್ಥ್ಯವಿಲ್ಲ. ಕೋವಿಡ್-19 ಚಿಕಿತ್ಸೆಯ ನಂತರವೂ ಈ ಕಿಡಿ ಸಂಪೂರ್ಣವಾಗಿ ಆರಿಲ್ಲ. ಇದು ಕಾಲಕ್ರಮೇಣ ಬೆಳೆಯುತ್ತಾ ಒಂದು ದಿನ ಬೆಂಕಿಯ ಸ್ವರೂಪ ಪಡೆದುಕೊಳ್ಳುತ್ತದೆ. ಆಗ “ಈ ಬೆಂಕಿಗೆ ಕೋವಿಡ್-19 ಕಾಯಿಲೆ ಕಾರಣ” ಎಂದು ಹೇಳಬಹುದೇ? ಎಷ್ಟು ರೋಗಿಗಳಲ್ಲಿ ಈ ಕಿಡಿ ಉಳಿದಿರಬಹುದು? ಅದನ್ನು ಪತ್ತೆ ಮಾಡುವುದು ಶಕ್ಯವೇ? ಯಾರಲ್ಲಿ ದೀರ್ಘಕಾಲಿಕ ಹೃದಯದ ಸಮಸ್ಯೆ ಉಂಟಾಗಬಹುದೆಂದು ನಿರ್ಧರಿಸುವುದು ಹೇಗೆ? ಇದು ತಜ್ಞರನ್ನು ಕಾಡುತ್ತಿರುವ ಸಮಸ್ಯೆ.

“ಕೋವಿಡ್-19 ಕಾಯಿಲೆಯನ್ನು ಗೆದ್ದೆವೆಂದು ಬೀಗುವುದು ಬೇಡ” ಎಂದು ಸಂಶೋಧಕರ ಅಭಿಮತ. ಕೋವಿಡ್-19 ಯಾವುದೇ ಪ್ರಮಾಣದಲ್ಲಿ ಬಂದಿದ್ದರೂ ಅಂತಹ ರೋಗಿಗಳು ತಮ್ಮ ಹೃದಯದ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಲಹೆ ಮಾಡಲಾಗಿದೆ. ಕೋವಿಡ್-19 ಕಾಯಿಲೆಯ ವೇಳೆ ಹೊಸದಾಗಿ ಹೃದಯ ಸಮಸ್ಯೆ ಕಾಣಿಸಿಕೊಂಡವರು ಹೃದಯ-ಸಂಬಂಧಿ ಔಷಧಗಳನ್ನು ದೀರ್ಘಕಾಲಿಕವಾಗಿ ತೆಗೆದುಕೊಳ್ಳುವುದು; ಈ ಹಿಂದೆಯೇ ಹೃದಯದ ಸಮಸ್ಯೆ ಇದ್ದವರಲ್ಲಿ ಕೋವಿಡ್-19 ಕಾಯಿಲೆ ಬಂದು ಗುಣವಾದವರು ಸಾಮಾನ್ಯಕ್ಕಿಂತ ಹೆಚ್ಚಿನ ನಿಗಾ ವಹಿಸುವುದು, ಕಾಲಕಾಲಕ್ಕೆ ಪರೀಕ್ಷೆಗಳನ್ನು ಮಾಡಿಸುವುದು ಸೂಕ್ತ ಎನ್ನುವ ಮಾರ್ಗಸೂಚಿಗಳಿವೆ. ಕೋವಿಡ್-19 ಕಾಯಿಲೆಯಿಂದ ಗುಣವಾದ ಯಾರೊಬ್ಬರೂ ಹೃದಯಕ್ಕೆ ಒತ್ತಡ ನೀಡುವಂತಹ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ಮುನ್ನ, ಅಥವಾ ತೀವ್ರ ಮಟ್ಟದ ವ್ಯಾಯಾಮಗಳನ್ನು ಮಾಡುವ ಮುನ್ನ ಹೃದ್ರೋಗ ತಜ್ಞರನ್ನು ಕಂಡು, ಅಗತ್ಯ ಪರೀಕ್ಷೆಗಳನ್ನು ಮಾಡಿಸಿ, ಸಲಹೆ ಪಡೆಯುವುದು ಉತ್ತಮ.

ಇನ್ನೆಷ್ಟು ಕಾಲ ಕೋವಿಡ್-19 ಕಾಯಿಲೆಯ ಪರಿಣಾಮಗಳಿಗೆ ರೋಗಿಗಳು ಹೆದರಬೇಕಾಗುತ್ತದೆ? ಇದಕ್ಕೆ ತಜ್ಞರ ಬಳಿ ಸದ್ಯಕ್ಕೆ ಉತ್ತರವಿಲ್ಲ. ಕೋವಿಡ್-19 ಅನುಭವಿಸಿ ಕೆಲ ತಿಂಗಳು ಕಳೆದರೂ ಸರಾಗವಾಗಿ ಉಸಿರಾಡಲಾಗದ, ಸಣ್ಣಪುಟ್ಟ ಶ್ರಮದ ಕೆಲಸಗಳನ್ನು ಮಾಡಲಾಗದ, ಎದೆಯಲ್ಲಿ ಹಿಡಿದಂತಾಗುವ ಅನುಭವದ, ಎದೆಬಡಿತ ವಿನಾಕಾರಣ ಹೆಚ್ಚಾಗುವುದನ್ನು ಗ್ರಹಿಸಿರುವ ಬಹಳಷ್ಟು ಮಂದಿ ಇದ್ದಾರೆ. ಈ ಕಾಯಿಲೆಯ ಗುಣಲಕ್ಷಣಗಳ ಬಗ್ಗೆ ಯಾವುದೇ ಪೂರ್ವಭಾವಿ ಅರಿವಿಲ್ಲದ ವೈದ್ಯಕೀಯ ಲೋಕ ಪಕ್ಕಾ ಉತ್ತರಗಳನ್ನು ನೀಡುವ ಸ್ಥಿತಿಯಲ್ಲಿಲ್ಲ. ಕೋವಿಡ್-ಪೂರ್ವ ಕಾಲಕ್ಕಿಂತ ಕೋವಿಡೋತ್ತರ ಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಏರಿವೆ ಎಂಬ ಅಂಕಿ-ಅಂಶಗಳು ಮಾತ್ರ ನಮ್ಮಲ್ಲಿವೆ. ಆದರೆ ಅದಕ್ಕೆ ಕೋವಿಡ್-19 ಪ್ರತ್ಯಕ್ಷ ಯಾ ಪರೋಕ್ಷ ಕಾರಣವೇ ಎಂಬುದು ಕರಾರುವಾಕ್ಕಾಗಿ ತಿಳಿದಿಲ್ಲ. ಜೊತೆಗೆ ಇಂತಹ ನಾಜೂಕಾದ ಸಂಶೋಧನೆಗಳನ್ನು ನಿಖರವಾಗಿ ಮಾಡಬಲ್ಲ ಅನುಕೂಲಗಳು ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇಲ್ಲ. ಆದರೆ, ಕೋವಿಡ್-19 ಅತಿ ಹೆಚ್ಚು ಬಾಧಿಸಿರುವುದು ಇಂತಹ ದೇಶಗಳನ್ನೇ. ಯಾವುದೋ ದೇಶದಲ್ಲಿ ಮಾಡಿದ ಅಧ್ಯಯನದ ಫಲಿತಾಂಶಗಳನ್ನು ಮತ್ತೊಂದು ದೇಶವು ಯಥಾವತ್ತಾಗಿ ಅನುಸರಿಸುವುದು ಪ್ರಾಯೋಗಿಕವಲ್ಲ. ಹೀಗಾಗಿ, ಕೋವಿಡ್-19 ಕಾಯಿಲೆಯಿಂದ ಬಳಲಿದ್ದ ರೋಗಿಗಳು ತಮ್ಮ ಎಚ್ಚರದಲ್ಲಿ ಇರುವುದು ಒಳಿತು. ಲಘುವಾದ ವ್ಯಾಯಾಮ, ಆರೋಗ್ಯಕರ ಆಹಾರ, ಸಾಕಷ್ಟು ನಿದ್ರೆ, ವಿಶ್ರಾಂತಿ, ಪ್ರಾಣಾಯಾಮ, ಸೂಕ್ತ ಪ್ರಮಾಣದ ದ್ರವಾಹಾರ ಬಳಕೆ, ಆರೋಗ್ಯದಲ್ಲಿ ಯಾವುದೇ ಅನಿರೀಕ್ಷಿತ ಬದಲಾವಣೆ ಕಂಡಾಗ ವೈದ್ಯರನ್ನು ಕಾಣುವುದು, ಪ್ರಶಾಂತ ಮನಸ್ಥಿತಿ – ಈ ಮೊದಲಾದ ಜೀವನಶೈಲಿಯ ಮಾರ್ಪಾಡುಗಳು ಉತ್ತಮ ಆರೋಗ್ಯಕ್ಕೆ ಇಂಬು ನೀಡಲು ಸಹಕಾರಿ. ಈ ನಿಟ್ಟಿನಲ್ಲಿ ಅನಗತ್ಯ ಆತಂಕದ ಬೇಡ; ಆದರೆ ಭರವಸೆಯ ಸನ್ನದ್ಧತೆ ಇರಲಿ.   

---------------------------

ಅಕ್ಟೋಬರ್ 2022ರ ಚಿಂತನಶೀಲ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 

 ಔಷಧ ಸೇವನೆಯ ಶಿಸ್ತು – ಏಕೆ ಮತ್ತು ಹೇಗೆ?

ಡಾ. ಕಿರಣ್ ವಿ.ಎಸ್.

ವೈದ್ಯರು

“ಜೀವನದಲ್ಲಿ ಇದುವರೆಗೆ ಒಂದು ಮಾತ್ರೆಯನ್ನೂ ನುಂಗಿಲ್ಲ” ಎಂದು ಹೆಮ್ಮೆಯಿಂದ ಹೇಳುತ್ತಿದ್ದ ಹಿರಿಯರಿದ್ದರು. ಇಂದಿನ ಕಾಲದಲ್ಲಿ ಈ ಮಾತನ್ನು ಹೇಳಬಲ್ಲವರು ತೀರಾ ವಿರಳ. ಔಷಧ ಸೇವನೆ ನಮ್ಮ ಆಧುನಿಕ ಜೀವನದ ಭಾಗವೇ ಆಗಿಹೋಗಿದೆ. ದೈನಂದಿನ ಬದುಕಿನಲ್ಲಿ ಶಿಸ್ತಿನ ಅಗತ್ಯವೆಷ್ಟಿದೆಯೋ, ಅದೇ ರೀತಿಯ ಶಿಸ್ತು ಔಷಧ ಸೇವನೆಯಲ್ಲೂ ಇರುತ್ತದೆ. ತಪ್ಪು ಔಷಧ ಸೇವನೆಯಿಂದ ಕಾಯಿಲೆ ಹೇಗೆ ಗುಣವಾಗುವುದಿಲ್ಲವೋ, ಅಂತೆಯೇ ಔಷಧವನ್ನು ತಪ್ಪಾಗಿ ಸೇವಿಸಿದರೂ ವ್ಯಾಧಿ ನಿವಾರಣೆ ಆಗುವುದಿಲ್ಲ. ಯಾವುದೇ ಔಷಧ ತೆಗೆದುಕೊಳ್ಳುವಾಗ ಅದರ ಪರಿಣಾಮ ಸರಿಯಾಗಿ ಆಗಬೇಕೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.

1.      ಔಷಧವನ್ನು ಏಕೆ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿದಿರಬೇಕು. ಬಹಳ ಮಂದಿ ಔಷಧದ ಪರಿಣಾಮಗಳ ಬಗ್ಗೆ ತಪ್ಪು ಕಲ್ಪನೆ ಹೊಂದಿರುತ್ತಾರೆ. ಪ್ರತಿಯೊಂದು ಔಷಧಕ್ಕೂ ಬೇರೆ ರೀತಿಯ ಪರಿಣಾಮಗಳಿವೆ. ಮದ್ದಿನ ಮಿತಿಯನ್ನು ತಿಳಿದಿರಬೇಕು. ಸೋಂಕು ಉಂಟಾದಾಗ ಜ್ವರ ಬಂದಿರುತ್ತದೆ. ಸೋಂಕು ನಿವಾರಕ ಆಂಟಿಬಯೊಟಿಕ್ ಔಷಧಗಳು ಜ್ವರವನ್ನು ತಗ್ಗಿಸುವುದಿಲ್ಲ. ಆದರೆ, ಅವುಗಳು ಸೋಂಕನ್ನು ನಿಯಂತ್ರಿಸುತ್ತಿದ್ದಂತೆ ಜ್ವರ ತಾನಾಗಿಯೇ ಕಡಿಮೆಯಾಗುತ್ತದೆ. ಹೀಗಾಗಿ, ಆರಂಭದಲ್ಲಿ ಆಂಟಿಬಯೊಟಿಕ್ ಔಷಧಗಳ ಜೊತೆಯಲ್ಲಿ ಜ್ವರವನ್ನು ತಗ್ಗಿಸುವ ಮದ್ದು ಕೂಡ ಬೇಕಾಗುತ್ತದೆ. ಬಹಳ ಮಂದಿ ಆಂಟಿಬಯೊಟಿಕ್ ಔಷಧಗಳು ಜ್ವರವನ್ನೂ ತಗ್ಗಿಸುತ್ತವೆ ಎಂದು ಭ್ರಮಿಸುತ್ತಾರೆ.

2.     ಯಾವ ಔಷಧವನ್ನು ಯಾವಾಗ ಮತ್ತು ಎಷ್ಟು ಬಾರಿ ಸೇವಿಸಬೇಕು ಎನ್ನುವುದು ಮುಖ್ಯ. ಮಾತ್ರೆ ಅಥವಾ ಕ್ಯಾಪ್ಸುಲ್ ಮಾದರಿಯ ಔಷಧವನ್ನು ಸೇವಿಸಿದ ನಂತರ ಅದು ಜೀರ್ಣವಾಗಿ ರಕ್ತದೊಳಗೆ ಸೇರುತ್ತದೆ. ಇದಕ್ಕೆ ಕೆಲ ಕಾಲ ಹಿಡಿಯಬಹುದು. ಆನಂತರ ಅದು ರಕ್ತನಾಳಗಳ ಮೂಲಕ ಶರೀರದ ಎಲ್ಲೆಡೆ ವ್ಯಾಪಿಸುತ್ತದೆ. ಚುಚ್ಚುಮದ್ದಿನ ಮೂಲಕ ನೀಡಿದ ಔಷಧ ಶೀಘ್ರವಾಗಿ ರಕ್ತದೊಳಗೆ ಸೇರುವುದರಿಂದ ಅವುಗಳ ಪರಿಣಾಮ ಶೀಘ್ರವಾಗಿ ಆಗುತ್ತದೆ. ಶರೀರವನ್ನು ಸೇರಿದ ಯಾವುದೇ ಔಷಧವೂ ಬಹುಮಟ್ಟಿಗೆ ಯಕೃತ್ ಮತ್ತು ಮೂತ್ರಪಿಂಡಗಳ ನೆರವಿನಿಂದ ವಿಸರ್ಜಿಸಲ್ಪಡುತ್ತದೆ. ಅಂದರೆ, ರಕ್ತದಲ್ಲಿ ಸೇರುವ ಮತ್ತು ಶರೀರದಿಂದ ಹೊರಹೋಗುವ ಅವಧಿಯ ನಡುವೆ ಮಾತ್ರ ಅದರ ಪರಿಣಾಮ ಉಳಿಯುತ್ತದೆ. ಹೀಗಾಗಿ, ಪ್ರತಿಯೊಂದು ಔಷಧವೂ ಒಂದು ನಿರ್ದಿಷ್ಟ ಕಾಲಾವಧಿಗೆ ಮಾತ್ರ ಕೆಲಸ ಮಾಡುತ್ತದೆ. ಆ ಅವಧಿಯ ನಂತರ ಔಷಧದ ಪರಿಣಾಮ ಇಲ್ಲವಾಗುತ್ತದೆ. ಕೆಲ ಸೆಕೆಂಡುಗಳ ಕಾಲದಿಂದ ಹಿಡಿದು ದಿನಗಟ್ಟಲೆ ಕೆಲಸ ಮಾಡಬಲ್ಲ ಔಷಧಗಳಿವೆ. ಒಂದು ವೇಳೆ ಔಷಧವೊಂದು 8 ಗಂಟೆಗಳ ಕಾಲ ಕೆಲಸ ಮಾಡಬಲ್ಲದು ಎಂದಾದರೆ, ಅದನ್ನು ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಾತ್ರ ರಕ್ತದಲ್ಲಿ ಮದ್ದಿನ ಪ್ರಮಾಣ ಪರಿಣಾಮಕಾರಿ ಮಟ್ಟದಲ್ಲಿ ಉಳಿಯಬಲ್ಲದು. ಅದಕ್ಕಿಂತ ಕಡಿಮೆಯಾದರೆ ಅದರ ಪರಿಣಾಮ ಕುಂಠಿತವಾಗುತ್ತದೆ. ಆದ್ದರಿಂದ, ವೈದ್ಯರು ಔಷಧವನ್ನು ದಿನಕ್ಕೆ ಎಷ್ಟು ಬಾರಿ ಸೂಚಿಸುತ್ತಾರೋ ಅಷ್ಟು ಬಾರಿ ಸೇವಿಸಬೇಕು. ಕಡಿಮೆಯಾದರೆ ಪ್ರಯೋಜನವಾಗಲಾರದು.

3.     ಕೆಲವು ಕಾಯಿಲೆಗಳಿಗೆ ಚಿಕಿತ್ಸೆಯಿದೆ; ಕೆಲವನ್ನು ನಿಯಂತ್ರಣದಲ್ಲಿ ಇರಿಸಲು ಮಾತ್ರ ಸಾಧ್ಯ. ಉದಾಹರಣೆಗೆ, ಶರೀರದಲ್ಲಿ ಸೋಂಕು ಉಂಟಾದಾಗ ಕೆಲದಿನಗಳ ಕಾಲ ಆಂಟಿಬಯೊಟಿಕ್ ಔಷಧಗಳನ್ನು ಸೇವಿಸಿದರೆ ಸೋಂಕುಕಾರಕ ಬ್ಯಾಕ್ಟೀರಿಯಾ ನಿವಾರಣೆಯಾಗಿ, ಮತ್ತಷ್ಟು ಔಷಧದ ಅಗತ್ಯ ಇಲ್ಲವಾಗುತ್ತದೆ. ಆದರೆ ಮಧುಮೇಹದ ಸಂಗತಿ ವಿಭಿನ್ನ. ಶರೀರದಲ್ಲಿ ಸಾಮಾನ್ಯವಾಗಿ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಚೋದಕ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುತ್ತದೆ. ಒಂದು ವೇಳೆ ಈ ಚೋದಕದ ಉತ್ಪಾದನೆ ದೇಹದಲ್ಲಿ ಕಡಿಮೆಯಾದರೆ ರಕ್ತದಲ್ಲಿನ ಸಕ್ಕರೆಯ ಅಂಶದಲ್ಲಿ ಏರಿಕೆಯಾಗುತ್ತದೆ. ಈ ಸ್ಥಿತಿಯನ್ನು ಮಧುಮೇಹ ಎನ್ನುತ್ತಾರೆ. ಇದಕ್ಕೆ ಇನ್ಸುಲಿನ್ ಚೋದಕದ ಉತ್ಪಾದನೆಯನ್ನು ಏರಿಸಬಲ್ಲ ಔಷಧ ಸೇವಿಸಬೇಕು ಇಲ್ಲವೇ ಕೃತಕ ಇನ್ಸುಲಿನ್ ಚುಚ್ಚುಮದ್ದನ್ನು ತೆಗೆದುಕೊಳ್ಳಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇಡಲು ಸಾಧ್ಯ. ಇದು ಔಷಧದ ಮೂಲಕ ಗುಣವಾಗಬಲ್ಲ ಸ್ಥಿತಿಯಲ್ಲ. ಆದರೆ, ಜೀವನವಿಡೀ ಸಮಯಾನುಸಾರ ತೆಗೆದುಕೊಳ್ಳುವ ಔಷಧಗಳ ಮೂಲಕ ಇದನ್ನು ನಿಯಂತ್ರಿಸಬಹುದು. ಯಾವ ಪರಿಸ್ಥಿತಿಗೆ ಎಷ್ಟು ಕಾಲದ ಚಿಕಿತ್ಸೆ ಬೇಕಾಗುತ್ತದೆ ಎಂಬುದನ್ನು ವೈದ್ಯರು ಸೂಚಿಸುತ್ತಾರೆ. ಅಂತಹ ಸೂಚನೆಯನ್ನು ಮೀರಿದರೆ ಅಪಾಯವಾಗಬಹುದು.

4.    ಸೇವಿಸುವ ಔಷಧಗಳು ಜೀರ್ಣವಾಗಿ ರಕ್ತವನ್ನು ಸೇರುತ್ತವೆ. ಅವು ಎಷ್ಟು ಸಮರ್ಥವಾಗಿ ಜೀರ್ಣವಾಗುತ್ತವೆ ಎನ್ನುವುದರ ಮೇಲೆ ರಕ್ತದಲ್ಲಿ ಅವುಗಳ ಪ್ರಮಾಣ, ದೇಹದೊಳಗೆ ಅವುಗಳ ಪರಿಣಾಮ ನಿರ್ಧಾರವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಕೆಲ ಔಷಧಗಳು ಖಾಲಿ ಹೊಟ್ಟೆಯಲ್ಲಿ ಚೆನ್ನಾಗಿ ಅರಗುತ್ತವೆ. ಹಲವು ನಾವು ಸೇವಿಸುವ ಆಹಾರದ ಜೊತೆ ಸೇರಿ ರಕ್ತವನ್ನು ಸೇರುತ್ತವೆ. ಕೆಲವು ಔಷಧಗಳು ನಿರ್ದಿಷ್ಟ ಆಹಾರಗಳ ಜೊತೆಗೆ ಸೇರಿದರೆ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತವೆ. ಈ ಎಲ್ಲ ಕಾರಣಗಳಿಂದ ಕೆಲವು ಔಷಧಗಳ ಸೇವನೆಯ ವೇಳೆ ನಿರ್ದಿಷ್ಟ ಪಥ್ಯವನ್ನು ಅನುಸರಿಸಬೇಕು. ಯಾವ ಔಷಧವನ್ನು ಹೇಗೆ ಸೇವಿಸಬೇಕು ಎನ್ನುವುದನ್ನು ವೈದ್ಯರು ಸೂಚಿಸುತ್ತಾರೆ. ಔಷಧದಿಂದ ಒಳ್ಳೆಯ ಪರಿಣಾಮ ಅಪೇಕ್ಷಿಸುವವರು ಈ ಸೂಚನೆಗಳನ್ನು ಪಾಲಿಸಲೇಬೇಕು.

5.     ಎರಡು ವಿಭಿನ್ನ ಔಷಧಗಳ ಪರಿಣಾಮಗಳು ಪರಸ್ಪರ ವಿರೋಧಿಯಾಗಿರಬಹುದು. ಅಥವಾ, ಒಂದು ಔಷಧದ ಪರಿಣಾಮಗಳನ್ನು ಮತ್ತೊಂದು ಔಷಧ ಹೆಚ್ಚಾಗಿಸಬಹುದು. ಹೀಗಾಗಿ, ವೈದ್ಯರ ಬಳಿ ಹೋದಾಗ ದಿನವಹಿ ಸೇವಿಸುವ ಅಥವಾ ದೀರ್ಘಕಾಲಿಕವಾಗಿ ಸೇವಿಸುತ್ತಿರುವ ಔಷಧಗಳ ಬಗ್ಗೆ ಅವರಿಗೆ ಮಾಹಿತಿ ನೀಡಬೇಕು. ಇದರಿಂದ ಒಂದಕ್ಕೊಂದು ಪೂರಕವಾಗಿರುವ ಔಷಧಗಳನ್ನು ನಿರ್ಧರಿಸುವುದು ಸಾಧ್ಯವಾಗುತ್ತದೆ. ಹೆಚ್ಚು ಔಷಧಗಳನ್ನು ಸೇವಿಸಿದಷ್ಟೂ ಇಂತಹ ಅವಲಂಬಿತ ಪರಿಣಾಮಗಳ ಸಾಧ್ಯತೆ ಹೆಚ್ಚು. ಆದ್ದರಿಂದ ದೀರ್ಘಕಾಲಿಕ ಔಷಧಗಳನ್ನು ತೆಗೆದುಕೊಳ್ಳುವವರು ಆಯಾ ಔಷಧಗಳ ಜೊತೆಯಲ್ಲಿ ಅಪಾಯಕಾರಿಯಾಗಿ ವರ್ತಿಸಬಲ್ಲ ಇತರ ಔಷಧಗಳ ಬಗ್ಗೆ ತಿಳಿದುಕೊಂಡಿರುವುದು ಒಳಿತು. ಯಾವುದೇ ಅನುಮಾನವಿರುವಾಗ ತಮ್ಮ ವೈದ್ಯರ ಜೊತೆಗೆ ಈ ಸಾಧ್ಯತೆಗಳನ್ನು ಚರ್ಚಿಸುವುದು ಸೂಕ್ತ.

6.     ಪ್ರತಿಯೊಂದು ಕಾಯಿಲೆಯಂತೆ ಪ್ರತಿಯೊಬ್ಬ ರೋಗಿಯೂ ವಿಭಿನ್ನ. ಯಾವುದೇ ಔಷಧಕ್ಕೆ ಓರ್ವ ವ್ಯಕ್ತಿ ಸ್ಪಂದಿಸುವಂತೆ ಮತ್ತೊಬ್ಬರು ಸ್ಪಂದಿಸಲಾರರು. ಕೆಲವು ಔಷಧಗಳು ಕೆಲವರಲ್ಲಿ ತೀವ್ರವಾದ ಅಡ್ಡಪರಿಣಾಮಗಳನ್ನು ಬೀರಬಲ್ಲವು. ಅಪರೂಪವಾದರೂ, ಪೆನಿಸಿಲಿನ್ ಚುಚ್ಚುಮದ್ದಿನಿಂದ ಮರಣ ಹೊಂದಿದವರಿದ್ದಾರೆ. ಹೀಗಾಗಿ, ಯಾರಿಗೋ, ಯಾವುದೋ ಕಾಯಿಲೆಗೆ ಕೊಟ್ಟ ಚಿಕಿತ್ಸೆಯನ್ನು ಮತ್ತೊಬ್ಬರು ಕಣ್ಣು ಮುಚ್ಚಿ ತೆಗೆದುಕೊಳ್ಳಬಾರದು. ಇದೇ ರೀತಿ, ಹಿಂದೆಂದೋ ಯಾವುದೋ ಜಾಡ್ಯಕ್ಕೆ ಕೊಟ್ಟ ಔಷಧವನ್ನು ಇಂದಿನ ಜಡ್ಡಿಗೆ ಪುನರಾವರ್ತಿಸಬಾರದು. ಇವೆಲ್ಲವೂ ಬಹಳ ಅಪಾಯಕಾರಿ ನಡೆಗಳು. ಯಾವುದೇ ಕಾಯಿಲೆಗೂ ವೈದ್ಯರ ಸಲಹೆ ಪಡೆದು, ಸೂಕ್ತವಾದ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಔಷಧಗಳು ಅಪಾಯಕಾರಿ ರಾಸಾಯನಿಕಗಳು. ಅವುಗಳನ್ನು ಬಹಳ ಮುತುವರ್ಜಿಯಿಂದ ಬಳಸಬೇಕು. ಮದ್ದಿನ ಜೊತೆಗೆ ಬೇಕಾಬಿಟ್ಟಿ ವರ್ತಿಸಿದರೆ, ಅದು ಜೀವಕ್ಕೇ ಎರವಾಗಬಹುದು.

7.     ಮನೆಯಲ್ಲಿರುವ ಔಷಧಗಳನ್ನು ಜೋಪಾನವಾಗಿ ಸಂರಕ್ಷಿಸುವುದು ಮುಖ್ಯ. ಕೆಲವು ಔಷಧಗಳನ್ನು ಕಡಿಮೆ  ತಾಪಮಾನದಲ್ಲಿ ರಕ್ಷಿಸಬೇಕು. ಕೆಲವನ್ನು ಬೆಳಕು ತಾಕದಂತಹ ಬಣ್ಣದ ಗಾಜಿನ ಶೀಷೆಯಲ್ಲಿ ಇಡಬೇಕು. ಅತ್ಯಂತ ಮುಖ್ಯವಾಗಿ, ಮನೆಯಲ್ಲಿನ ಯಾವುದೇ ಔಷಧಗಳನ್ನೂ ಮಕ್ಕಳ ಕೈಗೆ ಸಿಗುವಂತೆ ಇಡಬಾರದು. ಮಕ್ಕಳ ದೇಹ ಚಿಕ್ಕದು. ದೊಡ್ಡವರು ಸಾಮಾನ್ಯವಾಗಿ ಸೇವಿಸುವ ಔಷಧದ ಪ್ರಮಾಣ ಮಕ್ಕಳ ಪಾಲಿಗೆ ಅಪಾಯಕಾರಿಯಾಗುವ ಸಾಧ್ಯತೆಗಳಿವೆ. ಹೀಗೆ ಆಕಸ್ಮಿಕವಾಗಿ ಔಷಧ ಸೇವನೆ ಮಾಡಿದ ಮಕ್ಕಳು ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುವುದು ಕಂಡುಬಂದಿದೆ. ಈ ವಿಷಯದಲ್ಲಿ ಕಟ್ಟೆಚ್ಚರ ಇರಬೇಕು.

ಇಪ್ಪತ್ತನೆಯ ಶತಮಾನದಲ್ಲಿ ಮನುಷ್ಯನ ಸರಾಸರಿ ಆಯಸ್ಸು ಗಣನೀಯವಾಗಿ ಬೆಳೆದಿದ್ದರಲ್ಲಿ ಔಷಧಗಳ ಪಾತ್ರ ಮಹತ್ವದ್ದು. ಔಷಧಗಳು ಅತ್ಯಂತ ಹೆಚ್ಚು ಶಿಸ್ತನ್ನು ಬೇಡುವ ಮಿತ್ರರು. ಅವುಗಳನ್ನು ಸುಲಭವಾಗಿ ಪರಿಗಣಿಸಲಾಗದು; ಅವುಗಳ ಜೊತೆಗೆ ಇಷ್ಟ ಬಂದಂತೆ ವ್ಯವಹರಿಸಲಾಗದು. ಪ್ರತಿಯೊಂದು ಮದ್ದಿನ ಗುಣಾವಗುಣಗಳ ಜೊತೆಗೆ ಎಷ್ಟು ಸೂಕ್ತವಾಗಿ ವರ್ತಿಸುತ್ತೇವೋ, ಅದು ನಮ್ಮನ್ನು ಅಷ್ಟೇ ಪರಿಣಾಮಕಾರಿಯಾಗಿ ಕಾಯುತ್ತದೆ; ಹದ ತಪ್ಪಿದರೆ ಅಪಾಯಕಾರಿಯಾಗುತ್ತದೆ.

------------------

ದಿನಾಂಕ 11-10-2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/importance-of-discipline-taking-medicines-certain-methods-to-follow-while-taking-tablet-979017.html

ಬುಧವಾರ, ಅಕ್ಟೋಬರ್ 5, 2022


 ಹೃದಯದ ಗಣಿತ

ಗರ್ಭಸ್ಥ ಭ್ರೂಣದಲ್ಲಿ ಕೆಲಸ ಮಾಡಲು ಆರಂಭಿಸುವ ಮೊಟ್ಟ ಮೊದಲ ಅಂಗ ಹೃದಯ. ಅಂತೆಯೇ, ಮರಣದ ವೇಳೆ ಶರೀರದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವ ಕಡೆಯ ಅಂಗವೂ ಹೃದಯವೇ. ನಮ್ಮ ಮುಷ್ಟಿಯ ಗಾತ್ರದ ಹೃದಯ ದೇಹದ ಅಚ್ಚರಿಗಳಲ್ಲಿ ಒಂದು. ದಿನಕ್ಕೆ ಕನಿಷ್ಟ ಒಂದು ಲಕ್ಷದಂತೆ 70 ವರ್ಷದ ಜೀವನದಲ್ಲಿ 250 ಕೋಟಿ ಬಾರಿ ಒಂದೇ ಸಮನೆ, ಕ್ಷಣಮಾತ್ರವೂ ಪುರುಸೊತ್ತು ಇಲ್ಲದಂತೆ ಬಡಿಯುವ ಹೃದಯಕ್ಕೆ ಸಮಾನವಾದ ಯಂತ್ರವನ್ನು ಮಾನವ ಈವರೆಗೆ ಸೃಷ್ಟಿಸಿಲ್ಲ! ತಲೆಯಿಂದ ಕಾಲಿನವರೆಗೆ ಇರುವ ಬಹುತೇಕ ಜೀವಕೋಶಗಳಿಗೆ ಪೋಷಕಾಂಶ ಸರಬರಾಜು ಮಾಡುವುದು ಹೃದಯವೇ. ಇದಕ್ಕೆ ವಿಸ್ತಾರವಾದ ರಕ್ತನಾಳಗಳ ಜಾಲವನ್ನು ದೇಹದಾದ್ಯಂತ ಪಸರಿಸಿದೆ. ಶರೀರದ ಯಾವುದೇ ರಕ್ತನಾಳವನ್ನು ಹಿಡಿದು ಹೊರಟರೂ ಅದು ಕಡೆಗೆ ಹೃದಯವನ್ನೇ ಮುಟ್ಟುತ್ತದೆ. ಹೀಗೆ ಹೃದಯದಿಂದ ಹೊರಟ ರಕ್ತನಾಳಗಳನ್ನು ನೇರವಾಗಿ ಒಂದೇ ರೇಖೆಯುದ್ದಕ್ಕೂ ಹಾಸಿದರೆ, ಅದು ಭೂಮಿಯ ಸಮಭಾಜಕವೃತ್ತವನ್ನು ಒಂದೂವರೆ ಸಾರಿ ಸುತ್ತುಹಾಕುತ್ತದೆ!

ಹೃದಯದ ತೂಕ ಸುಮಾರು ಕಾಲು ಕೆಜಿ. ಅದರಲ್ಲಿ ಬಹುಪಾಲು ವಿಶಿಷ್ಟ ಮಾಂಸಖಂಡ. ವಿಶಿಷ್ಟ ಏಕೆಂದರೆ, ಇದು ಸ್ವಯಂಚಾಲಿತ. ಈ ಮಾಂಸಖಂಡ ಕೆಲಸ ಮಾಡಲು ಮಿದುಳಿನಿಂದ ನಿರ್ದೇಶನಗಳು ಬೇಕಿಲ್ಲ. “ಮಿದುಳು ಕೆಲಸ ಮಾಡದಿದ್ದರೂ ಗುಂಡಿಗೆ ಕೆಲಸ ಮಾಡುತ್ತದೆ” ಎಂದು ಕೆಲವರನ್ನು ಲೇವಡಿ ಮಾಡಲು ಹೇಳಿದರೂ, ಆ ಮಾತು ಎಲ್ಲರಲ್ಲೂ ಸತ್ಯವೇ! ಹೃದಯದ ಮಾಂಸಖಂಡ ಒಂದು ಬಾರಿ ಒತ್ತಿದರೆ ಸುಮಾರು 70 ಮಿಲಿಲೀಟರ್ ರಕ್ತ ದೇಹದೊಳಗೆ ಪ್ರವಹಿಸುತ್ತದೆ. ಅಂದರೆ, ನಿಮಿಷಕ್ಕೆ ಐದು ಲೀಟರ್; ಗಂಟೆಗೆ ಮೂರುನೂರು ಲೀಟರ್; ದಿನಕ್ಕೆ ಸುಮಾರು 7000 ಲೀಟರ್ ರಕ್ತವನ್ನು ಹೃದಯ ಶರೀರದ ಸಲುವಾಗಿ ಪಂಪ್ ಮಾಡುತ್ತದೆ. ಒಂದು ಜೀವನ ಕಾಲದಲ್ಲಿ ಹೃದಯ ಪಂಪ್ ಮಾಡುವ ರಕ್ತದ ಪ್ರಮಾಣ ಸುಮಾರು ಇಪ್ಪತ್ತು ಕೋಟಿ ಲೀಟರ್! ಒತ್ತಡ ನಿರ್ಮಿಸುವ ಬಲದಲ್ಲಿ ಲೆಕ್ಕ ಹಾಕಿದರೆ, ಪ್ರತೀ ದಿನ ಹೃದಯ ಉತ್ಪಾದಿಸುವ ನೂಕುಬಲದಿಂದ ಒಂದು ಖಾಲಿ ಬಸ್ ಅನ್ನು ಸಪಾಟಾದ ರಸ್ತೆಯಲ್ಲಿ ಸುಮಾರು ಮೂವತ್ತೈದು ಕಿಲೋಮೀಟರ್ ದೂರಕ್ಕೆ ತಳ್ಳಬಹುದು! ಅಂದರೆ, ಒಂದು ಜೀವಿತಾವಧಿಯಲ್ಲಿ ಹೃದಯ ಒತ್ತುವ ಒಟ್ಟು ಶಕ್ತಿಯಿಂದ ಆ ಬಸ್ ಅನ್ನು ಚಂದ್ರನ ಬಳಿ ತಲುಪಿಸಿ, ಚಂದ್ರಮಂಡಲಕ್ಕೆ ಒಂದು ಪ್ರದಕ್ಷಿಣೆ ಹಾಕಿಸಿ, ವಾಪಸ್ ಭೂಮಿಗೆ ತರಬಹುದಾದಷ್ಟು ತಾಕತ್ತು!

ಹೋಲಿ ಹಬ್ಬದ ಸಮಯದಲ್ಲಿ ಪಿಚಕಾರಿ ಬಳಸಿದ ಅನುಭವ ನೆನಪಿಸಿಕೊಳ್ಳಿ. ಬಣ್ಣದ ನೀರು ತುಂಬಿದ ಪಿಚಕಾರಿಯನ್ನು ಮೆಲ್ಲಗೆ ಒತ್ತಿದರೆ ನೀರು ಅಲ್ಲೇ ಒಂದಷ್ಟು ದೂರದಲ್ಲಿ ಬೀಳುತ್ತದೆ. ಅದೇ, ಬಲವಾಗಿ ಒತ್ತಿದರೆ ನೀರು ಸುಮಾರು ಅಂತರದವರೆಗೆ ಗಾಳಿಯಲ್ಲಿ ಹಾರಿ ದೂರ ನಿಂತವರನ್ನೂ ತೋಯಿಸುತ್ತದೆ. ಅಂದರೆ, ಪಂಪ್ ಮಾಡುವ ಒತ್ತಡ ಹೆಚ್ಚಿದಷ್ಟೂ ಅದರ ಸಾಮರ್ಥ್ಯ ಅಧಿಕವಾಗುತ್ತದೆ ಎಂದಾಯಿತು. ಈಗ ತಲೆಯಿಂದ ಕಾಲಿನವರೆಗೆ ಹಬ್ಬಿರುವ ಜೀವಕೋಶಗಳಿಗೆ ಪೋಷಕಾಂಶಗಳನ್ನು ಹೃದಯವೇ ರಕ್ತದ ಮೂಲಕ ತಲುಪಿಸಬೇಕು ಎಂದರೆ, ಅದು ಸಾಕಷ್ಟು ಒತ್ತಡದಿಂದ ರಕ್ತವನ್ನು ಧಮನಿಗಳಲ್ಲಿ ತಳ್ಳಬೇಕು. ಈ ಒತ್ತಡವನ್ನೇ “ರಕ್ತದೊತ್ತಡ” ಅಥವಾ ಬ್ಲಡ್ ಪ್ರೆಶರ್ ಎನ್ನಲಾಗುತ್ತದೆ. ಹೀಗೆ ತಳ್ಳಿದ ರಕ್ತವನ್ನು ಮತ್ತಷ್ಟು ಮುಂದೆ ಸಂಚರಿಸುವಂತೆ ಮಾಡಲು ರಕ್ತನಾಳಗಳಲ್ಲೂ ತೆಳುವಾದ ಮಾಂಸಪಟ್ಟಿಗಳು ಇರುತ್ತವೆ. ಇಂತಹ ರಕ್ತನಾಳಗಳು ತಮ್ಮೊಳಗೆ ಹರಿಯುವ ರಕ್ತದ ಒತ್ತಡ ಶೂನ್ಯಕ್ಕೆ ಇಳಿಯದಂತೆ ನೋಡಿಕೊಂಡು, ಅದು ಅಂತೆಯೇ ಮುಂದೆ ಮುಂದೆ ಹರಿಯುತ್ತಲೇ ಇರುವಂತೆ ಹೃದಯಕ್ಕೆ ಕೆಲಸಕ್ಕೆ ಸಾಥ್ ನೀಡುತ್ತವೆ. ಹೃದಯ ಒತ್ತಿದಾಗ ಇಂತಹ ರಕ್ತನಾಳಗಳಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಒತ್ತಿದ ನಂತರ ಮುಂದಿನ ಆವೃತ್ತಿಗೆ ರಕ್ತವನ್ನು ಹೃದಯ ಸಂಗ್ರಹಿಸುವಾಗ ರಕ್ತನಾಳಗಳ ಒತ್ತಡ ಕಡಿಮೆ ಆಗುತ್ತದೆ. ಹೀಗೆ, ರಕ್ತನಾಳಗಳಲ್ಲಿ ಮೇಲ್ಮಟ್ಟದ ಒತ್ತಡ ಹೃದಯದ ಕಾರಣದಿಂದ ಆದರೆ, ಕೆಳಮಟ್ಟದ ಒತ್ತಡ ರಕ್ತನಾಳಗಳ ಮಾಂಸಪಟ್ಟಿಗಳಿಂದ ಆಗುತ್ತದೆ. ಈ ಎರಡು ಸಂಖ್ಯೆಗಳೇ ನಾವು ರಕ್ತದ ಒತ್ತಡವನ್ನು ನಿರ್ದೇಶಿಸುವ ಸಿಸ್ಟೊಲ್ ಮತ್ತು ಡಯಸ್ಟೊಲ್ ಅಂಕಿಗಳು. ರಕ್ತದ ಒತ್ತಡ 120/80 ಎಂದರೆ, ಹೃದಯ ಒತ್ತುವಾಗ 120 ಅಂಶಗಳ ಒತ್ತಡ; ಹೃದಯ ರಕ್ತವನ್ನು ಶೇಖರಿಸುವಾಗ ರಕ್ತನಾಳಗಳ ಸಹಾಯಕ ಒತ್ತಡ 80 ಅಂಶಗಳು ಎಂದು ಅರ್ಥ. ಇದರ ಮಾಪನ ಆಗುವುದು ಪಾದರಸದ ಒತ್ತಡದ ಲೆಕ್ಕಾಚಾರದಲ್ಲಿ. ಒಂದು ಉದ್ದನೆಯ ಗಾಜಿನ ಕೊಳವೆಯಲ್ಲಿ ಸ್ವಲ್ಪ ಪಾದರಸವನ್ನು ಇಟ್ಟರೆ, ಹೃದಯದ ಪ್ರತಿಯೊಂದು ಸಂಕೋಚನ ಆ ಪಾದರಸದ ಮಟ್ಟವನ್ನು ಸುಮಾರು 120 ಮಿಲಿಮೀಟರ್ ನಷ್ಟು ಎತ್ತರಕ್ಕೆ ದೂಡಬಲ್ಲದು. ಪಾದರಸ ನೀರಿಗಿಂತ ಸುಮಾರು 13 ಪಟ್ಟು ಹೆಚ್ಚು ಭಾರ. ಅಂದರೆ, ಪಾದರಸದ ಬದಲಿಗೆ ಕೊಳವೆಯಲ್ಲಿ ನೀರನ್ನು ತುಂಬಿದರೆ, ಹೃದಯ ಒಮ್ಮೆ ಒತ್ತಿದಾಗ ಆ ನೀರು ಸುಮಾರು ಒಂದೂವರೆ ಮೀಟರ್ ಎತ್ತರಕ್ಕೆ ಚಿಮ್ಮಬಲ್ಲದು! ರಕ್ತದ ಶೇಕಡಾ 90 ಕ್ಕಿಂತ ಅಧಿಕ ಭಾಗ ನೀರಿನ ಅಂಶವೇ ಆಗಿರುವುದರಿಂದ, ರಕ್ತವೂ ಸುಮಾರು ಇಷ್ಟೇ ಎತ್ತರಕ್ಕೆ ಚಿಮ್ಮುತ್ತದೆ.

ಶರೀರದ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾದರೆ, ಅವು ಹೃದಯಕ್ಕೆ ಸಂದೇಶ ಕಳಿಸಿ, ಮಿದುಳಿಗೆ ದೂರು ನೀಡುತ್ತವೆ. ಇದರಿಂದ ಹೃದಯ ತನ್ನ ಗತಿಯನ್ನು ಏರಿಸಿಕೊಂಡು, ಪ್ರತೀ ನಿಮಿಷಕ್ಕೆ ಹೆಚ್ಚು ಬಾರಿ ಬಡಿಯಲು ಆರಂಭಿಸುತ್ತದೆ. ಅಲ್ಲದೇ, ತನ್ನ ಸ್ನಾಯುಗಳ ಒತ್ತಡದ ಬಲವನ್ನೂ ಹಿಗ್ಗಿಸುತ್ತದೆ. ಹೀಗೆ, ಅಂಗಾಂಗಗಳಿಗೆ ಹೆಚ್ಚಿನ ರಕ್ತದ ಪೂರೈಕೆ ಆಗುತ್ತದೆ. ಈ ರೀತಿಯಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೃದಯಕ್ಕಿದೆ. ಚೆನ್ನಾಗಿ ತರಬೇತಿಗೊಂಡ ಕ್ರೀಡಾಪಟುಗಳಲ್ಲಿ ಈ ಸಾಮರ್ಥ್ಯ ಇನ್ನೂ ಹೆಚ್ಚಾಗಬಹುದು. ವ್ಯಾಯಾಮ, ಆತಂಕ, ಜ್ವರದಂತಹ ಸಂದರ್ಭಗಳಲ್ಲಿ ಶರೀರಕ್ಕೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವಿದೆ. ಹೀಗಾಗಿ, ಅಂತಹ ಸಂದರ್ಭಗಳಲ್ಲಿ ಹೃದಯದ ಬಡಿತ ಏರುತ್ತದೆ. ಗರ್ಭಿಣಿಯರಲ್ಲಿ ಅವರ ದೇಹದ ಅಗತ್ಯಗಳ ಜೊತೆಗೆ ಭ್ರೂಣದ ರಕ್ತಸಂಚಾರ ಕೂಡ ಆಗಬೇಕಾದ್ದರಿಂದ ಹೃದಯ ಹೆಚ್ಚು ಕಾರ್ಯಶೀಲವಾಗಿರುತ್ತದೆ. ಹೀಗಾಗಿ, ಹೃದಯದ ಕಾಯಿಲೆ, ದೌರ್ಬಲ್ಯ ಇರುವ ಸ್ತ್ರೀಯರಲ್ಲಿ ಗರ್ಭಧಾರಣೆ ಅಪಾಯಕಾರಿ ಆಗಬಹುದು.

ಹೃದಯದಲ್ಲಿ ನಾಲ್ಕು ಕವಾಟಗಳಿವೆ. ಎರಡು ಕವಾಟಗಳು ಹೃದಯದ ಕೋಣೆಗಳ ನಡುವೆ ಇದ್ದರೆ, ಉಳಿದೆರಡು ಹೃದಯದ ಪಂಪ್ ಮತ್ತು ಅದರಿಂದ ಹೊರಗೆ ಹೋಗುವ ರಕ್ತನಾಳಗಳ ನಡುವೆ ಇರುತ್ತವೆ. ರಕ್ತ ಸಂಚಾರಕ್ಕೆ ಅನುಗುಣವಾಗಿ ಈ ಕವಾಟಗಳು ಮುಚ್ಚಿ-ತೆರೆದು ಕೆಲಸ ಮಾಡುತ್ತವೆ. ಅನುಕ್ರಮವಾಗಿ ಕೋಣೆಗಳ ನಡುವಿನ ಕವಾಟಗಳು ತೆರೆದಿದ್ದಾಗ ರಕ್ತನಾಳಗಳ ಕವಾಟಗಳು ಮುಚ್ಚಿರುತ್ತವೆ. ಕವಾಟಗಳು ತೆರೆಯುವಾಗ ಆಗುವ ಸದ್ದು ಕೇಳಿಸುವುದಿಲ್ಲ. ಆದರೆ, ಕವಾಟಗಳು ಮುಚ್ಚುವಾಗ ಸದ್ದಾಗುತ್ತವೆ. ಹೀಗೆ, ಎರಡೂ ಬಗೆಯ ಕವಾಟಗಳು ಒಂದರ ಹಿಂದೊಂದು ಮುಚ್ಚುವಾಗ ಹೃದಯದ ‘ಲಬ್-ಡಬ್’ ಬಡಿತ ಆಗುತ್ತದೆ. ಈ ಕವಾಟಗಳ ಕೆಲಸದಲ್ಲಿ ಏರುಪೇರಾದಾಗ ಬಡಿತದ ಸದ್ದು ಬದಲಾಗುತ್ತದೆ. ಕೆಲವೊಮ್ಮೆ ರಕ್ತ ಹೃದಯದೊಳಗೆ ವಿರುದ್ಧ ದಿಕ್ಕಿನಲ್ಲೂ ಪ್ರವಹಿಸಬಹುದು. ಅನುಭವಿ ವೈದ್ಯರು ಸ್ಟೆಥೊಸ್ಕೋಪ್ ಮೂಲಕ ಈ ಬಡಿತದ ವಿನ್ಯಾಸಗಳನ್ನು ಕೇಳಿ, ಹೃದಯದ ಕಾರ್ಯದ ಬಗ್ಗೆ ಸಾಕಷ್ಟು ವಿವರಗಳನ್ನು ಪಡೆಯಬಲ್ಲರು. 

ಇಡೀ ಶರೀರಕ್ಕೆ ರಕ್ತ ಸರಬರಾಜು ಮಾಡುವ ಹೃದಯ, ಆ ರಕ್ತವನ್ನು ತನಗಾಗಿ ಬಳಸಿಕೊಳ್ಳಲು ಮಾತ್ರ ಕಂಜೂಸು ಮಾಡುತ್ತದೆ! ಇಡೀ ಶರೀರದ ರಕ್ತಸಂಚಯದ ಶೇಕಡಾ 5 ಮಾತ್ರ ಹೃದಯಕ್ಕೆ ಲಭ್ಯವಾಗುತ್ತದೆ. ಅದನ್ನು ಪಡೆಯಲು ಕೆಲವು ವಿಶಿಷ್ಟ ರಕ್ತನಾಳಗಳನ್ನು ಹೃದಯ ನಿರ್ಮಿಸಿಕೊಂಡಿದೆ. ಈ ರಕ್ತನಾಳಗಳ ಆಂತರಿಕ ವ್ಯಾಸ ಯಾವುದೇ ಕಾರಣಕ್ಕೂ ಕಿರಿದಾದರೆ, ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಆಗುತ್ತದೆ.

ಕೆಲವು ರೋಗಿಗಳಲ್ಲಿ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದರೂ ಹೃದಯ ಇನ್ನೂ ಚುರುಕಾಗಿಯೇ ಇರುತ್ತದೆ. ಅಂತಹವರ ಶ್ವಾಸಕ್ರಿಯೆಯನ್ನು ಕೃತಕವಾಗಿ ವೆಂಟಿಲೇಟರ್ ಮೂಲಕ ಮುಂದುವರೆಸುತ್ತಾ ಹೃದಯದ ಸ್ವಸ್ಥತೆಯನ್ನು ಕಾಪಾಡಬಹುದು. ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದ ವ್ಯಕ್ತಿ ಹೆಚ್ಚು ಕಾಲ ಜೀವಂತವಿರಲು ಸಾಧ್ಯವಿಲ್ಲ. ಇನ್ನು ಕೆಲವು ರೋಗಿಗಳಲ್ಲಿ ಶರೀರದ ಇತರ ಭಾಗಗಳು ಕೆಲಸ ಮಾಡುತ್ತಿದ್ದರೂ, ಹೃದಯ ಮಾತ್ರ ದುರ್ಬಲವಾಗಿರಬಹುದು. ಇಂತಹ ಸಂದರ್ಭದಲ್ಲಿ ಇನ್ನೂ ಕೆಲಸ ಮಾಡುತ್ತಿರುವ ಮೊದಲ ರೋಗಿಯ ಹೃದಯವನ್ನು ಎರಡನೆಯ ರೋಗಿಗೆ ಕಸಿ ಮಾಡಬಹುದು. ಮೊದಲ ರೋಗಿಯ ಶರೀರದಿಂದ ತೆಗೆದ ಹೃದಯವನ್ನು ಸುಮಾರು 5-ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕೆಲವು ಪೋಷಕಾಂಶಗಳನ್ನು ನೀಡುತ್ತಾ ಸುಮಾರು 4 ಗಂಟೆಗಳ ಕಾಲ ಸ್ವಸ್ಥವಾಗಿ ಇಡಬಹದು. ಇಷ್ಟು ಕಾಲದಲ್ಲಿ ಅದನ್ನು ಎರಡನೆಯ ರೋಗಿಯ ಶರೀರದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಸೇರಿಸಬೇಕಾಗುತ್ತದೆ.

ಹೃದಯದ ಗಣಿತ ಸೋಜಿಗವಷ್ಟೇ ಅಲ್ಲ; ವೈದ್ಯರ ಪಾಲಿಗೆ ಅತ್ಯಂತ ಆವಶ್ಯಕ ಕೂಡ. ಗಣಿತದ ನೆರವಿಲ್ಲದೆ ಹೃದಯದ ರಕ್ಷಣೆ ಪೂರ್ಣವಾಗದು.

--------------------

 ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಅಕ್ಟೋಬರ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.flipbookpdf.net/web/site/4b084c0e80bb2d5098c65789ba482437c2bbe711202210.pdf.html?fbclid=IwAR1LMnUDHpFKlzjAe6xr7W5dSgf5vAuGOliZnMGY6D-6UT8CGWZF0FvntZc