ಬುಧವಾರ, ನವೆಂಬರ್ 9, 2022

ಅಧಿಕ ರಕ್ತದೊತ್ತಡಕ್ಕೆ ವ್ಯಾಯಮವೂ ಚಿಕಿತ್ಸೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಅಧಿಕ ರಕ್ತದೊತ್ತಡ ಜಗದ್ವ್ಯಾಪಿ ಸಮಸ್ಯೆ. ಕೆಲ ದಶಕಗಳ ಹಿಂದೆ ಬಹುತೇಕ ಹಿರಿಯ ನಾಗರಿಕರಲ್ಲಿ ಮಾತ್ರ ಕಾಣುತ್ತಿದ್ದ ಅಧಿಕ ರಕ್ತದೊತ್ತಡದ ಸಮಸ್ಯೆ ಈಗ ಮೂವತ್ತರ ಹರೆಯದವರನ್ನೂ ಕಾಡುತ್ತಿದೆ. ಜೀವನಶೈಲಿಯ ಬದಲಾವಣೆಗಳು, ಅನಿಯಂತ್ರಿತ ಆಹಾರ ಪದ್ಧತಿ, ಬೊಜ್ಜು, ವೃತ್ತಿಯ ಅಭಧ್ರತೆ, ಮಾನಸಿಕ ಜಂಜಾಟಗಳು, ಹದಗೆಡುತ್ತಿರುವ ಕೌಟುಂಬಿಕ ಸಂಬಂಧಗಳು ಮೊದಲಾದ ಸಂಗತಿಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿವೆ. ಅದರಲ್ಲಿ ಅಧಿಕ ರಕ್ತದೊತ್ತಡವೂ ಒಂದು.

ಅಧಿಕ ರಕ್ತದೊತ್ತಡ ಎಂದರೇನು?

ಇಡೀ ಶರೀರದ ಅಂಗಗಳಿಗೆ ರಕ್ತವನ್ನು ತಲುಪಿಸುವುದು ಹೃದಯದ ಹೊಣೆ. ರಕ್ತದ ಸರಬರಾಜು ಸರಾಗವಾಗಿ ಆಗಬೇಕೆಂದರೆ ಅದನ್ನು ಒಂದು ನಿರ್ದಿಷ್ಟ ಒತ್ತಡದಲ್ಲಿ ಹೃದಯ ಪಂಪ್ ಮಾಡಬೇಕು. ಹೀಗಾಗಿ, ಸಹಜ ಮಟ್ಟದ ರಕ್ತದೊತ್ತಡ ಎಲ್ಲರಲ್ಲೂ ಇರುತ್ತದೆ.ಈ ರಕ್ತದೊತ್ತಡ ಹೆಚ್ಚಲು ಅನೇಕ ಕಾರಣಗಳಿವೆ: ರಕ್ತನಾಳಗಳು ಪೆಡಸುಗಟ್ಟುವಿಕೆ, ಯಾವುದೋ ಒಂದು ಅಂಗದ ರಕ್ತನಾಳಗಳು ಕಿರಿದಾಗಿ, ಅದಕ್ಕೆ ಸಾಕಷ್ಟು ಪ್ರಮಾಣದ ರಕ್ತ ಹರಿಯಲು ಆಗುವ ಅಡ್ಡಿ, ಶರೀರದ ಚೋದಕಗಳಲ್ಲಿನ ವ್ಯತ್ಯಾಸ ಮೊದಲಾದುವು. ಯಾವುದೇ ಕಾರಣದಿಂದ ಒಂದು ಅಂಗಕ್ಕೆ ರಕ್ತದ ಸರಬರಾಜು ಕಡಿಮೆಯಾದರೆ ಆ ಅಂಗ ಮಿದುಳಿಗೆ ಸೂಚನೆ ಕಳಿಸುತ್ತದೆ. ಕೂಡಲೇ ಮಿದುಳು ಹೃದಯಕ್ಕೆ ಸಂಕೇತಗಳನ್ನು ಕಳಿಸಿ, ಹೆಚ್ಚು ರಕ್ತವನ್ನು ಒತ್ತುವಂತೆ ತಿಳಿಸುತ್ತದೆ. ಆಗ ಹೃದಯದ ಸ್ನಾಯುಗಳು ಹೆಚ್ಚು ಕೆಲಸ ಮಾಡಿ ಅಧಿಕ ಒತ್ತಡವನ್ನು ನಿರ್ಮಿಸುತ್ತವೆ. ಈ ಒತ್ತಡ ಇತರ ರಕ್ತನಾಳಗಳಿಗೂ ಹರಿಯುತ್ತದೆ. ಈ ಮೂಲಕ ಇತರ ಅಂಗಗಳು ಅಗತ್ಯಕ್ಕಿಂತ ಹೆಚ್ಚು ರಕ್ತವನ್ನು ಅಧಿಕ ಒತ್ತಡದಲ್ಲಿ ಪಡೆಯುತ್ತವೆ. ಅವುಗಳ ಕೆಲಸದಲ್ಲೂ ವ್ಯತ್ಯಾಸ ಬರುತ್ತದೆ. ಅಧಿಕ ರಕ್ತದೊತ್ತಡ ತಂತಾನೇ ಒಂದು ಕಾಯಿಲೆಯಲ್ಲ; ಬದಲಿಗೆ ಶರೀರದಲ್ಲಿ ಆಗುತ್ತಿರುವ ವ್ಯತ್ಯಾಸಗಳ ಸೂಚಕ.

ವ್ಯಾಯಮದ ಮಹತ್ವ

ಮೂಳೆಗಳ, ಕೀಲುಗಳ, ಸ್ನಾಯುಗಳ ಸರಾಗ ಚಲನೆಗೆ ವ್ಯಾಯಾಮ ಸಹಕಾರಿ. ನಿಯಮಿತ ವ್ಯಾಯಾಮದಿಂದ ಶರೀರದ ಮಾಂಸಖಂಡಗಳ ಬಿಗುವು ಸಡಿಲಗೊಳ್ಳುತ್ತದೆ; ರಕ್ತನಾಳಗಳ ಮೇಲಿನ ಒತ್ತಡ ಕಳೆದು ರಕ್ತಸಂಚಾರ ಸರಾಗವಾಗುತ್ತದೆ; ಹೃದಯದ ಸ್ನಾಯುಗಳು ಶಕ್ತಿಯುತವಾಗಿ, ಹೆಚ್ಚಿನ ಕಾರ್ಯಕ್ಷಮತೆ ಲಭಿಸುತ್ತದೆ; . ರಕ್ತವನ್ನು ಒತ್ತುವ ಸಾಮರ್ಥ್ಯ ವೃದ್ಧಿಸುತ್ತದೆ. ವ್ಯಾಯಮ ಎರಡು ಬದಿಗಳಿಂದಲೂ ಆರೋಗ್ಯಕಾರಿ. ರಕ್ತದೊತ್ತಡ ಸಹಜ ಸ್ಥಿತಿಯಲ್ಲಿದ್ದರೆ ನಿಯಮಿತ ವ್ಯಾಯಾಮ ಅದನ್ನು ಹಾಗೆಯೇ ಉಳಿಸಿ, ಅಧಿಕವಾಗದಂತೆ ಸಹಕರಿಸುತ್ತದೆ. ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು ನಿಯಮಿತ ವ್ಯಾಯಾಮದಿಂದ ಅದನ್ನು ನಿಯಂತ್ರಣದಲ್ಲಿ ಇಡಬಹುದು. ಇದರಿಂದ ಔಷಧಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ.

ದೇಹತೂಕದ ನಿರ್ವಹಣೆಯಲ್ಲಿ ವ್ಯಾಯಾಮದ ಪಾತ್ರ ಮಹತ್ವದ್ದು. ಬೊಜ್ಜಿಗೂ ಅಧಿಕ ರಕ್ತದೊತ್ತಡಕ್ಕೂ ನೇರ ಸಂಬಂಧವಿದೆ. ನಿಯಮಿತ ವ್ಯಾಯಮದಿಂದ ಶರೀರದ ತೂಕ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ಬೊಜ್ಜನ್ನು ನಿಯಂತ್ರಿಸುವ ಪಾತ್ರ ಹಿರಿದು. ಇಂತಹವರಲ್ಲಿ ದೇಹದ ತೂಕ ಸುಮಾರು ಐದು ಪ್ರತಿಶತ ಕಡಿಮೆಯಾದರೂ ಹೃದಯದ ಕಾರ್ಯಕ್ಷಮತೆ ಸುಮಾರು ಪ್ರತಿಶತ ಹತ್ತರವರೆಗೆ ಸುಧಾರಿಸಬಲ್ಲದು. ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಮಧುಮೇಹ, ನಿದ್ರಾಹೀನತೆ, ಖಿನ್ನತೆ, ಮುಂತಾದ ಕೆಲವು ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣಗಳನ್ನು ವ್ಯಾಯಾಮ ನಿಯಂತ್ರಿಸಬಲ್ಲದು.

ಎಂತಹ ವ್ಯಾಯಾಮಗಳು ಸಹಕಾರಿ?

ಶರೀರಕ್ಕೆ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸುವ ವ್ಯಾಯಮಗಳನ್ನು ಮಾಡುವುದು ಸೂಕ್ತ. ಆರಂಭದಲ್ಲಿ ನಿಧಾನಗತಿಯಿಂದಲೇ ವ್ಯಾಯಾಮ ಸಾಗಬೇಕು. ಕಾಲಕ್ರಮೇಣ ನಮ್ಮ ಶರೀರಕ್ಕೆ ಒಗ್ಗುವಂತಹ ಸುರಕ್ಷಿತ ಗತಿಯಲ್ಲಿ ಪ್ರಯತ್ನವನ್ನು ಏರಿಸುತ್ತಾ ಹೋಗಬಹುದು. ಆರೋಗ್ಯವರ್ಧನೆಗಾಗಿ ಮಾಡುವ ವ್ಯಾಯಾಮದ ಪ್ರಕ್ರಿಯೆಯಲ್ಲಿ ಮುಖ್ಯವಾದದ್ದು ಎಷ್ಟು ನಿಯಮಿತವಾಗಿ, ರೂಢಿ ತಪ್ಪದಂತೆ, ನಿಧಾನವಾಗಿ ಪ್ರಮಾಣವನ್ನು ವೃದ್ಧಿಸುತ್ತಾ ಮಾಡುತ್ತೇವೆ ಎಂಬುದು. ಸರಳವಾದ ದೀರ್ಘ ಶ್ವಾಸದೊಡನೆ ಮಾಡುವ ಚುರುಕು ನಡಿಗೆ; ನುರಿತ ಯೋಗಪಟುಗಳಿಂದ ವೈಯಕ್ತಿಕವಾಗಿ ಕಲಿತ ನಂತರ ಮಾಡುವ ಯೋಗ ಮತ್ತು ಪ್ರಾಣಾಯಾಮ; ಆರಾಮದಾಯಕ ಈಜು; ಸರಾಗವಾದ ಬೈಸಿಕಲ್ ಸವಾರಿ; ಶ್ಲೋಕೋಚ್ಚಾರದ ಅವಧಿಗೆ ಅನುಸಾರವಾಗಿ ಮಾಡುವ ಸೂರ್ಯ ನಮಸ್ಕಾರ; ಗುರುಗಳಿಂದ ಸಾಕಷ್ಟು ಅವಧಿಗೆ ಕಲಿತ ನಂತರ ಮಾಡುವ ಶಾಸ್ತ್ರೀಯ ನೃತ್ಯದ ಅಭ್ಯಾಸ, ಸಪ್ರಮಾಣವಾಗಿ ಮಾಡುವ ತೋಟದ ಕೆಲಸ – ಇಂತಹ ಯಾವುದಾದರೂ ಆಗಬಹುದು. ಅಭ್ಯಾಸವಿರುವ ವಿವಿಧ ಬಗೆಯ ವ್ಯಾಯಾಮ ಶೈಲಿಗಳನ್ನು ಆಗಾಗ್ಗೆ ಬದಲಿಸುತ್ತಾ ವೈವಿಧ್ಯಗಳನ್ನು ರೂಢಿಸಿಕೊಳ್ಳಬಹುದು. ವ್ಯಾಯಾಮದ ಮುನ್ನ ಸ್ನಾಯುಗಳನ್ನು ಕ್ರಮವಾಗಿ ಹಿಗ್ಗಿಸುವ ಚರ್ಯೆಗಳು; ವ್ಯಾಯಾಮದ ನಂತರ ಶರೀರಕ್ಕೆ ಒಂದು ಕ್ರಮದಲ್ಲಿ ನೀಡಬೇಕಾದ ವಿಶ್ರಾಂತಿ ಬಹಳ ಮುಖ್ಯ. ಯಾವುದೇ ವ್ಯಾಯಾಮವನ್ನೂ ಏಕಾಏಕಿ ಮಾಡಲೂಬಾರದು; ನಿಲ್ಲಿಸಲೂಬಾರದು. ಆಗ ಮಾತ್ರ ಅದು ಆರೋಗ್ಯಕ್ಕೆ ಪೂರಕವಾಗುತ್ತದೆ. ಇಲ್ಲವಾದರೆ ವ್ಯಾಯಾಮವೇ ಸಮಸ್ಯೆಯಾದೀತು.

ವ್ಯಾಯಾಮದ ವೇಳೆ ಶರೀರಕ್ಕೆ ಹೆಚ್ಚಿನ ಆಕ್ಸಿಜನ್ ಅಗತ್ಯವಿದೆ. ಆದ್ದರಿಂದ ಉಸಿರುಗಟ್ಟಿ ಮಾಡುವ ಯಾವುದೇ ವ್ಯಾಯಾಮವೂ ಶರೀರಕ್ಕೆ ಸೂಕ್ತವಲ್ಲ. ವ್ಯಾಯಾಮದ ಜೊತೆಗೆ ಸರಿಯಾದ ರೀತಿಯಲ್ಲಿ ಉಸಿರಾಡುವುದು ಕೂಡ ಒಳ್ಳೆಯ ವ್ಯಾಯಾಮದ ಭಾಗವೇ ಆಗಿರುತ್ತದೆ. ಈ ಕಲೆಗಾರಿಕೆಯನ್ನು ಪ್ರತಿಯೊಂದು ವ್ಯಾಯಾಮದ ಜೊತೆಗೂ ಪ್ರಜ್ಞಾಪೂರ್ವಕವಾಗಿ ರೂಡಿಸಿಕೊಳ್ಳಬೇಕು. ಉದಾಹರಣೆಗೆ, ಯೋಗಾಭ್ಯಾಸ ಮಾಡುವಾಗ ನುರಿತ ತರಬೇತುದಾರರು ಯಾವ ಹಂತದಲ್ಲಿ ಉಸಿರು ಸೆಳೆದುಕೊಳ್ಳಬೇಕು, ಯಾವಾಗ ನಿಶ್ವಾಸ ಮಾಡಬೇಕು ಎಂಬುದನ್ನೂ ಹೇಳಿಕೊಡುತ್ತಾರೆ. ಇದನ್ನು ಸರಿಯಾಗಿ ಕಲಿಯುವುದೂ ಯೋಗಾಸನ ಮಾಡುವವರಿಗೆ ಬಹಳ ಮುಖ್ಯ. ಅಂತೆಯೇ, ವೇಗವಾದ ನಡಿಗೆಯ ವೇಳೆ ಮಾತನಾಡಬಾರದು; ಬದಲಿಗೆ ಉಸಿರನ್ನು ಸಾಧ್ಯವಾದಷ್ಟೂ ಬಿಟ್ಟು, ಅಷ್ಟೇ ದೀರ್ಘವಾಗಿ ಸೆಳೆದುಕೊಳ್ಳುವ ವಿಧಾನವನ್ನು ರೂಡಿಸಿಕೊಳ್ಳಬೇಕು. ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ ಇದು ಫಲಕಾರಿ.

ಯಾವ ರೀತಿಯ ವ್ಯಾಯಮಗಳನ್ನು ಮಾಡಬಾರದು?

ಕೆಲವು ತೀವ್ರಗತಿಯ ವ್ಯಾಯಾಮಗಳು ದೇಹದ ಆಕ್ಸಿಜನ್ ಅಗತ್ಯವನ್ನು, ರಕ್ತದೊತ್ತಡವನ್ನು ಏಕಾಏಕಿ ಹೆಚ್ಚಿಸುತ್ತವೆ. ಉದಾಹರಣೆಗೆ, ಅಧಿಕ ತೂಕಗಳನ್ನು ಎತ್ತುವ ವ್ಯಾಯಾಮ, ವೇಗವಾದ ಓಟ, ಸ್ಕ್ವಾಶ್ ನಂತಹ ಹೆಚ್ಚಿನ ಬಲ ಮತ್ತು ವೇಗವನ್ನು ಬೇಡುವ ಕ್ರೀಡೆಗಳು, ಒಂದೇ ಸಮನೆ ದೋಣಿ ಹುಟ್ಟು ಹಾಕುವ ಕಯಾಕ್ ನಂತಹ ಚಟುವಟಿಕೆಗಳು, ನೀರಿನಾಳಕ್ಕೆ ಜಿಗಿಯುವ ಕ್ರಿಯೆ, ಜಿಮ್ ಗಳಲ್ಲಿ ಮಾಡುವ ತೀವ್ರ ದೇಹದಣಿವು ಮೊದಲಾದವು ನಾವು ಸೆಳೆದುಕೊಳ್ಳಲು ಸಾಧ್ಯವಾಗುವುದಕ್ಕಿಂತಲೂ ಹೆಚ್ಚಿನ ಆಕ್ಸಿಜನ್ ಬೇಡುತ್ತವೆ. ಇವು ಚೆನ್ನಾಗಿ ತರಬೇತಾದ ಕ್ರೀಡಾಪಟುಗಳು, ಕಸರತ್ತು ಮಾಡುವವರು ಮಾಡುವಂತಹ ವ್ಯಾಯಾಮಗಳು. ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ವ್ಯಾಯಾಮ ಮಾಡವವರು ಇಂತಹ ತೀವ್ರಗತಿಯ ಶರೀರ ದಂಡನೆ ಮಾಡಬಾರದು.

ಒಂದು ಮುಖ್ಯವಾದ ಎಚ್ಚರಿಕೆ

ವ್ಯಾಯಾಮ ಆರಂಭಿಸಿದೆವು ಎನ್ನುವ ಒಂದೇ ಹಿನ್ನೆಲೆಯಲ್ಲಿ ಅಧಿಕ ರಕ್ತದೊತ್ತಡಕ್ಕೆ ಸೇವಿಸುತ್ತಿರುವ ಔಷಧಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಅಧಿಕ ರಕ್ತದೊತ್ತಡ ಕಾಡಿದಾಗ ವ್ಯಾಯಾಮ ಆರಂಭಿಸುವವರು ಅಥವಾ ಈಗಾಗಲೇ ವ್ಯಾಯಾಮ ಮಾಡುತ್ತಿರುವವರು ತಮ್ಮ ವ್ಯಾಯಾಮ ವಿಧಾನಗಳ ಬಗ್ಗೆ ವೈದ್ಯರಲ್ಲಿ ಚರ್ಚೆ ಮಾಡಿ ಮುಂದುವರೆಯಬೇಕು. ದೀರ್ಘಕಾಲಿಕ ನಿಯಮಿತ ವ್ಯಾಯಾಮದಿಂದ ಔಷಧಗಳ ಮೇಲಿನ ಅವಲಂಬನೆ ಕಡಿಮೆಯಾಗಬಹುದು. ಆದರೆ, ಔಷಧದ ಪ್ರಮಾಣವನ್ನು ವೈದ್ಯರ ಸಲಹೆಯಿಲ್ಲದೇ ತಗ್ಗಿಸಬಾರದು.

ನಿಯಮಿತ ವ್ಯಾಯಾಮವೆಂಬುದು ಆಯ್ಕೆಯಲ್ಲ; ಶರೀರದ ನಿರ್ವಹಣೆಯ ಕಡ್ಡಾಯ ಅಂಶ. “ಎಂತಹ ವ್ಯಾಯಾಮ ಮಾಡಬೇಕು” ಎಂಬುದು ಮಾತ್ರ ವೈಯಕ್ತಿಕ ಆಯ್ಕೆ. ಇದನ್ನು ವೈಜ್ಞಾನಿಕವಾಗಿ ಅನುಸರಿಸಿದರೆ ಅಧಿಕ ರಕ್ತದೊತ್ತಡದ ನಿರ್ವಹಣೆಯಲ್ಲಿ, ಅಧಿಕ ರಕ್ತದೊತ್ತಡದ ಕಾರಣವಾಗಿ ಸಂಭವಿಸಬಹುದಾದ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಬಹಳ ಸಹಕಾರಿಯಾಗುತ್ತದೆ. ಆರೋಗ್ಯವೆಂಬುದು ಚಟುವಟಿಕೆಯ ದೇಹದಲ್ಲಿರುತ್ತದೆ; ಅನಗತ್ಯ ಆರಾಮದಲ್ಲಿ ಇರುವುದಿಲ್ಲ. ನಿಯಮಿತ ವ್ಯಾಯಾಮ ಹೃದಯಕ್ಕೆ ನೀಡಬಹುದಾದ ಮಹತ್ವದ ಕೊಡುಗೆಗಳಲ್ಲಿ ಒಂದು.   

-----------------------

8/11/2022 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನದ ಕೊಂಡಿ: https://www.prajavani.net/health/to-control-bp-adopt-excise-986590.html

 

 

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ