ಬುಧವಾರ, ನವೆಂಬರ್ 9, 2022

 


ಶ್ವಾಸಕೋಶಗಳ ಗಣಿತ

ನಾವು ಸುಮಾರು ಮೂರು-ನಾಲ್ಕು ಸೆಕೆಂಡಿಗೆ ಒಮ್ಮೆ ಶ್ವಾಸ ಎಳೆಯುತ್ತೇವೆ. ಪ್ರತಿಯೊಂದು ಶ್ವಾಸದಲ್ಲಿ ಸುಮಾರು ಅರ್ಧ ಲೀಟರ್ ಗಾಳಿಯನ್ನು ಸೆಳೆದುಕೊಳ್ಳುತ್ತೇವೆ. ಅಂದರೆ, ಸರಿಸುಮಾರು ನಿಮಿಷಕ್ಕೆ ಎಂಟು ಲೀಟರ್; ದಿನವೊಂದಕ್ಕೆ ಸುಮಾರು ಹನ್ನೊಂದು ಸಾವಿರ ಲೀಟರ್; ವರ್ಷಕ್ಕೆ ನಲವತ್ತೆರಡು ಲಕ್ಷ ಲೀಟರ್ ಗಾಳಿ. ಒಂದು ಜೀವಿತ ಕಾಲದಲ್ಲಿ ಓರ್ವ ವ್ಯಕ್ತಿ 30 ಕೋಟಿ ಲೀಟರ್ ಗಾಳಿಯನ್ನು ಉಸಿರಾಡುತ್ತಾನೆ!

ಮೂಗಿನ ಹೊಳ್ಳೆಗಳಿಂದ ಆರಂಭವಾಗುವ ಶ್ವಾಸಮಾರ್ಗ ಕೊನೆಯಾಗುವುದು ಶ್ವಾಸಕೋಶಗಳ ಅಂತಿಮ ಹಂತದ ಬಲೂನಿನಂತಹ ಶ್ವಾಸಚೀಲಗಳಲ್ಲಿ. Alveolus ಎಂಬ ಹೆಸರಿನ ಈ ಶ್ವಾಸಚೀಲಗಳು ಎರಡೂ ಶ್ವಾಸಕೋಶಗಳನ್ನು ಸೇರಿ ಸುಮಾರು 60 ಕೋಟಿ ಇವೆ. ಇವುಗಳನ್ನು ಒಂದೊಂದಾಗಿ ಬಿಚ್ಚಿ, ಮಟ್ಟಸವಾಗಿ ನೆಲದ ಮೇಲೆ ಹರಡಿದರೆ ಸುಮಾರು 600 ಚದರಡಿ ವ್ಯಾಪಿಸಿಕೊಳ್ಳುತ್ತವೆ. ಅಂದರೆ 20 x 30 ಅಳತೆಯ ನಿವೇಶನದಷ್ಟು ವಿಸ್ತೀರ್ಣ! ಇಷ್ಟಾದರೂ ಶ್ವಾಸಕೋಶದ ತೂಕ ಸುಮಾರು ಅರ್ಧ ಕಿಲೋಗ್ರಾಂ. ಶರೀರದ ಎಲ್ಲಾ ಅಂಗಗಳ ಪೈಕಿ ನೀರಿನಲ್ಲಿ ತೇಲಬಲ್ಲ ಒಂದೇ ಒಂದು ಅಂಗವೆಂದರೆ ಶ್ವಾಸಕೋಶಗಳು. ನಾವು ಸಾಧ್ಯವಾದಷ್ಟೂ ದೀರ್ಘವಾಗಿ ಉಸಿರನ್ನು ಹೊರಗೆ ಬಿಟ್ಟು ಎದೆಯನ್ನು ಖಾಲಿ ಮಾಡಿದಾಗಲೂ ಶ್ವಾಸಕೋಶಗಳಲ್ಲಿ ಸುಮಾರು ಒಂದು ಲೀಟರ್ ನಷ್ಟು ಗಾಳಿ ಹಾಗೆಯೇ ಉಳಿದಿರುತ್ತದೆ.

ವಿಶ್ರಾಂತಿ ಸಮಯದ ಸಾಮಾನ್ಯ ಉಸಿರಾಟದ ವೇಳೆ ಶರೀರಕ್ಕೆ ಹೆಚ್ಚಿನ ಆಕ್ಸಿಜನ್ ಬೇಕಿಲ್ಲ. ಆ ಸಮಯಯಲ್ಲಿ ಶ್ವಾಸಕೋಶಗಳು ಭಾಗಶಃ ಕೆಲಸ ಮಾಡಿದರೂ ಸಾಕು. ಆದರೆ ವ್ಯಾಯಾಮದ ವೇಳೆ ಶರೀರಕ್ಕೆ ಬೇಕಾಗುವ ಅಧಿಕ ಆಕ್ಸಿಜನ್ ಪೂರೈಸಲು ಉಸಿರಾಟದ ವೇಗ ಮತ್ತು ಶ್ವಾಸಕೋಶಗಳ ಸಾಮರ್ಥ್ಯ – ಎರಡೂ ಹೆಚ್ಚುತ್ತವೆ. ಅಂತಹ ಪ್ರತೀ ನಿಮಿಷವೂ ಸಾಮಾನ್ಯ ಮಟ್ಟಕ್ಕಿಂತ ನಾಲ್ಕೈದು ಪಟ್ಟು ಹೆಚ್ಚಿನ ಗಾಳಿಯನ್ನು ಉಸಿರಾಡಬೇಕಾಗುತ್ತದೆ. ಪ್ರತಿದಿನವೂ ಒಂದೆರಡು ಗಂಟೆಗಳ ಕಾಲ ನಿರಂತರವಾಗಿ ತಿಂಗಳುಗಟ್ಟಲೇ ವ್ಯಾಯಾಮ ಮಾಡಿದಷ್ಟೂ ಶ್ವಾಸಕೋಶಗಳ ಸಾಮರ್ಥ್ಯ ಕ್ರಮೇಣ ಹೆಚ್ಚುತ್ತಲೇ ಹೋಗುತ್ತದೆ. ವರ್ಷಗಳ ಕಾಲ ವ್ಯಾಯಾಮ ಮಾಡುತ್ತಾ ಚೆನ್ನಾಗಿ ಪಳಗಿದ ಕ್ರೀಡಾಪಟುಗಳಲ್ಲಿ ಒಂದು ಸೀಮಿತ ಅವಧಿಯ ಲೆಕ್ಕಾಚಾರ ಪರಿಗಣಿಸಿದರೆ ಸಾಮಾನ್ಯ ಮನುಷ್ಯನ ಉಸಿರಾಟಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಗಾಳಿಯನ್ನು ಉಸಿರಾಡಬಲ್ಲ ಸಾಮರ್ಥ್ಯ ಲಭಿಸಿರುತ್ತದೆ. ಜೀವವಿಕಾಸದ ಹಾದಿಯಲ್ಲಿ ನಿಸರ್ಗ ಮನುಷ್ಯ ಶರೀರವನ್ನು ಬೇಟೆಯಾಡಿ ಬದುಕಲು ಸೃಷ್ಟಿಸಿದೆ. ಆದರೆ, ನಮ್ಮ ಮಿದುಳಿನ ಸಾಮರ್ಥ್ಯದಿಂದ ಲಭಿಸಿದ ತಾಂತ್ರಿಕ ಪ್ರಗತಿ ನಮ್ಮ ಬದುಕಿನ ವಿಧಾನವನ್ನು ಬದಲಿಸಿದೆ. ಈಗ ನಮಗೆ ಬದುಕಲು ಬೇಟೆಯ ಅಗತ್ಯವಿಲ್ಲ. ಹೀಗಾಗಿ, ಆಗಾಗ ನಮ್ಮನ್ನು ಅಟ್ಟಿಕೊಂಡು ಬರಬಹುದಾದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಓಡಬೇಕಿಲ್ಲ. ಆದರೆ, ನಿಸರ್ಗಕ್ಕೆ ನಾವು ಈ ರೀತಿ ಪ್ರಗತಿ ಹೊಂದಿರುವ ವಿಷಯ ತಿಳಿದೇ ಇಲ್ಲ! ಹೀಗಾಗಿ, ಅದು ದೊಡ್ಡ ಸಾಮರ್ಥ್ಯದ ಶ್ವಾಸಕೋಶಗಳನ್ನು ಈಗಲೂ ನಮಗೆ ನೀಡುತ್ತಲೇ ಬಂದಿದೆ. ಇದರ ಲಾಭವೆಂದರೆ, ಅತ್ಯಂತ ಉನ್ನತ ಮಟ್ಟದ ಕ್ರೀಡಾಪಟುಗಳು ತಮ್ಮ ಅಸಾಮಾನ್ಯ ಸಾಮರ್ಥ್ಯದಿಂದ ಕ್ರೀಡೆಗಳನ್ನು ಹೆಚ್ಚು ಸ್ಪರ್ಧಾತ್ಮಕ ಮಾಡಿದ್ದಾರೆ.

ಎದೆಗೂಡಿನಲ್ಲಿ ಹೃದಯ ಮಧ್ಯಕ್ಕಿಂತ ಕೊಂಚ ಎಡಕ್ಕೆ ಬಾಗಿರುತ್ತದೆ. ಅದರ ಎರಡೂ ಬದಿ ಶ್ವಾಸಕೋಶಗಳಿವೆ. ಬಲಗಡೆಯ ಶ್ವಾಸಕೋಶ ಸ್ವಲ್ಪ ದೊಡ್ಡದು; ಅದರಲ್ಲಿ ಮೂರು ಭಾಗಗಳಿವೆ. ಒಟ್ಟಾರೆ ಕೆಲಸದ ಶೇಕಡಾ 55 ಅದರ ಜವಾಬ್ದಾರಿ. ಉಳಿದಾದ್ದನ್ನು ಮಾಡುವುದು ಎಡಗಡೆಯ ಶ್ವಾಸಕೋಶ. ಅದರಲ್ಲಿ ಎರಡೇ ಭಾಗಗಳು. ಶೇಕಡಾವಾರು ಲೆಕ್ಕಾಚಾರ ಬಿಟ್ಟರೆ ಕರ್ತವ್ಯದ ದೃಷ್ಟಿಯಿಂದ ಎರಡೂ ಒಂದೇ. ಒಂದು ವೇಳೆ ಯಾವುದೇ ಕಾರಣದಿಂದ ಒಂದು ಶ್ವಾಸಕೋಶವನ್ನು ತೆಗೆದುಹಾಕಿದರೂ, ಉಳಿದ ಒಂದರಲ್ಲಿ ಸಾಮಾನ್ಯ ಜೀವನ ನಡೆಸಲು ಕಷ್ಟವಾಗುವುದಿಲ್ಲ. ಆದರೆ, ಅಂತಹವರಿಗೆ ಭೌತಿಕ ಶ್ರಮದ ಕೆಲಸ ಸಾಧ್ಯವಾಗುವುದಿಲ್ಲ.

ವಾತಾವರಣದ ಗಾಳಿಯಲ್ಲಿ ನೀರಿನ ಅಂಶ ಕಡಿಮೆ. ಆದರೆ, ಶ್ವಾಸಕೋಶಕ್ಕೆ ತಲುಪುವ ಗಾಳಿ ಇಷ್ಟು ಒಣದಾಗಿ ಇರುವಂತಿಲ್ಲ. ಒಣಗಾಳಿ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಹೀಗಾಗಿ, ಉಸಿರಾಡುವ ಗಾಳಿ ಶ್ವಾಸಕೋಶಗಳಿಗೆ ತಲುಪುವ ಮುನ್ನ ಶ್ವಾಸಮಾರ್ಗದಲ್ಲಿ ಚೆನ್ನಾಗಿ ತೇವವನ್ನು ಸಂಗ್ರಹಿಸುತ್ತದೆ. ನಮ್ಮ ನಿಶ್ವಾಸದಲ್ಲಿ ತೇವದ ಗಾಳಿಯೇ ಹೊರಬರುತ್ತದೆ. ಈ ರೀತಿ, ದಿನವೊಂದಕ್ಕೆ ಸುಮಾರು ಅರ್ಧ ಲೀಟರ್ ನೀರು ಉಸಿರಾಟದ ಮೂಲಕ ಶರೀರದಿಂದ ಹೊರಹೋಗುತ್ತದೆ. ಗಾಜಿನ ಮೇಲೆ ನಾವು ಉಸಿರು ಬಿಟ್ಟಾಗ ಕಾಣುವ ತೆಳುವಾದ ತೇವದ ಪದರಕ್ಕೆ ಈ ನೀರೇ ಕಾರಣ. ಕೃತಕ ಉಸಿರಾಟದ ವೇಳೆ ಕೊಳವೆಗಳಿಂದ ಶ್ವಾಸಕೋಶದ ತೀರಾ ಸಮೀಪಕ್ಕೆ ಗಾಳಿಯನ್ನು ತಲುಪಿಸುತ್ತಾರೆ. ಇಂತಹ ಗಾಳಿಯನ್ನು ತೇವಗೊಳಿಸುವುದಕ್ಕೆ ಕೃತಕ ಉಸಿರಾಟದ ಯಂತ್ರದಲ್ಲಿ ನೀರಿನ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಈ ನೀರಿನ ಅಂಶವನ್ನು ಸಂಗ್ರಹಿಸಿಯೇ ಗಾಳಿ ಯಂತ್ರದಿಂದ ಶರೀರಕ್ಕೆ ಹೋಗಬೇಕು. ಅದೇ ರೀತಿ, ಹೆಚ್ಚಿನ ಪ್ರಮಾಣದಲ್ಲಿ ಶರೀರಕ್ಕೆ ಆಕ್ಸಿಜನ್ ನೀಡುವಾಗಲೂ ನೀರಿನ ಅಂಶವನ್ನು ಸೇರಿಸಿಕೊಳ್ಳುವ humidifier ಎಂಬ, ಗಾಳಿಯನ್ನು ಆರ್ದ್ರಗೊಳಿಸುವ ಸಾಧನದ ಮೂಲವೇ ಹಾಯಿಸಬೇಕು.

ಸರಳ ಉಸಿರಾಟದಲ್ಲಿ ಶೇಕಡಾ 40 ಸಮಯ ಉಸಿರನ್ನು ಎಳೆದುಕೊಳ್ಳುವ ಉಚ್ವಾಸ ಕ್ರಿಯೆಯಾದರೆ, ಶೇಕಡಾ 60 ಉಸಿರನ್ನು ಬಿಡುವ ನಿಶ್ವಾಸ ಕ್ರಿಯೆ. ಆದರೆ, ನಿಶ್ವಾಸಕ್ಕೆ ಹಲವಾರು ರೂಪಗಳಿವೆ. ನಾವು ಮಾತನಾಡುವುದು, ಸಿಳ್ಳೆ ಹಾಕುವುದು, ಬಾಯಿಂದ ವಿಧವಿಧವಾದ ಸದ್ದುಗಳನ್ನು ಹೊರಡಿಸುವುದು ಎಲ್ಲವೂ ನಿಶ್ವಾಸದಲ್ಲಿಯೇ. ನಿಶ್ವಾಸದ ಗಾಳಿ ಗಂಟಲಿನ ಭಾಗದ ಧ್ವನಿಪೆಟ್ಟಿಗೆಯನ್ನು ಹಾದು ಬರುವಾಗ, ಅದರಲ್ಲಿನ ಸ್ನಾಯುಗಳ ಸಂಕೋಚನ-ವಿಕೋಚನ ನಿಯಂತ್ರಣದಿಂದ ಧ್ವನಿ ಹೊರಡುತ್ತದೆ. ಇಂತಹ ಧ್ವನಿ ಹೊರಡಿಸುವಿಕೆ ಪ್ರಕ್ರಿಯೆ ಶ್ವಾಸಕೋಶ ಉಳ್ಳ ಜೀವಿಗಳಲ್ಲಿ ಕಾಣುತ್ತದೆ. ಆ ಧ್ವನಿಯನ್ನು ಬಾಯಿ ಮತ್ತು ಮೂಗುಗಳ ಸಹಾಯದಿಂದ ಭಾಷೆಯನ್ನಾಗಿ ಪರಿವರ್ತಿಸಿದ್ದು ಮಾನವ ಮಿದುಳಿನ ಸಾಧನೆಗಳಲ್ಲಿ ಒಂದು. ನಾವು ಮಾತನಾಡುವಾಗ ಸರಿಸುಮಾರು ಶೇಕಡಾ 10 ಸಮಯ ಉಚ್ವಾಸವಾದರೆ, ಉಳಿದ ಶೇಕಡಾ 90 ನಿಶ್ವಾಸ! ಅಂದರೆ, ನಾವು ನಿಶ್ಶಬ್ದವಾಗಿ ಇರುವುದಕ್ಕಿಂತ ಮಾತನಾಡುವಾಗ ನಮ್ಮ ಉಸಿರಾಟದ ವೇಗ ಮತ್ತು ದೇಹಕ್ಕೆ ಲಭಿಸುವ ಆಕ್ಸಿಜನ್ ಪ್ರಮಾಣ ಕಡಿಮೆ ಎಂದಾಯಿತು. ಅದಕ್ಕೇ ನಮ್ಮ ಹಿರಿಯರು “ಮಾತುಗಾರನಿಗೆ ಆಯಸ್ಸು ಕಡಿಮೆ” ಎಂದು ಹೇಳಿದ್ದಾರೆ. ಯಾವುದೇ ಸಫಲ ವಾಗ್ಮಿಗೆ, ಹಾಡುಗಾರರಿಗೆ ಉಸಿರಿನ ನಿಯಂತ್ರಣ ಬಹಳ ಮುಖ್ಯ. ಅಂತಹವರು ತಮ್ಮ ಶ್ವಾಸಕೋಶಗಳ ಆರೋಗ್ಯವನ್ನು ಅತೀವ ಜತನದಿಂದ ಕಾಯ್ದುಕೊಳ್ಳಬೇಕು. ಶ್ವಾಸಕೋಶಗಳಿಗೆ ಹಾನಿಯಾಗುವ ಸಿಗರೇಟು ಸೇವನೆಯಂತಹ ಯಾವುದೇ ಚಟವೂ ಅವರಲ್ಲಿ ಇರಬಾರದು.

ಶ್ವಾಸಕೋಶಗಳಷ್ಟೇ ಮುಖ್ಯವಾದದ್ದು ಶ್ವಾಸಮಾರ್ಗಗಳು. ಮೂಗಿನಿಂದ ಮುಂದುವರೆದ ಪ್ರಮುಖ ಶ್ವಾಸನಾಳ ಎದೆಯ ಭಾಗದಲ್ಲಿ ಎರಡು ಕವಾಲಾಗಿ ಒಡೆದು ಅತ್ತಿತ್ತಲಾಗಿ ಎರಡೂ ಶ್ವಾಸಕೋಶಗಳನ್ನು ಸೇರಿ ಮತ್ತೆ ಮತ್ತೆ ಕವಲುಗಳಾಗಿ ಒಡೆಯುತ್ತಲೇ ಹೋಗುತ್ತದೆ. ಹೀಗೆ, ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ, ಎಂಟು ಹದಿನಾರಾಗಿ ಮುಂದುವರೆದು, ಒಟ್ಟು 23 ಬಾರಿ ಕವಲು ಒಡೆಯುತ್ತಾ ಕಡೆಗೆ Alveolus ಎಂಬ ಶ್ವಾಸಚೀಲಗಳಲ್ಲಿ ಕೊನೆಗೊಳ್ಳುತ್ತದೆ. ಈ ಇಡೀ ಶ್ವಾಸಮಾರ್ಗವನ್ನು ಸರಳರೇಖೆಯಲ್ಲಿ ಪೇರಿಸುತ್ತಾ ಹೋದರೆ ಬೆಂಗಳೂರಿನಿಂದ ಕಾಶ್ಮೀರವನ್ನು ತಲುಪಬಹುದು!

ದಿನವೊಂದಕ್ಕೆ ಸುಮಾರು 7000 ಲೀಟರ್ ರಕ್ತಕ್ಕೆ ಆಕ್ಸಿಜನ್ ಹರಿಸಿ, ಇಡೀ ದೇಹದ ಬಳಕೆಗೆ ಆಕ್ಸಿಜನ್ ಪೂರೈಸಿ, ಕಾರ್ಬನ್ ಡೈ ಆಕ್ಸೈಡ್ ತೆಗೆದುಹಾಕುವ ಶ್ವಾಸಕೋಶಗಳು ತಮ್ಮ ಸ್ವಂತ ಕೆಲಸದ ಸಲುವಾಗಿ ದೇಹದ ಶೇಕಡಾ 9 ರಷ್ಟು ರಕ್ತವನ್ನು ಮಾತ್ರ ಬಳಸುತ್ತವೆ. ಇದಕ್ಕಾಗಿ ಬೇರೆಯೇ ರಕ್ತನಾಳಗಳು ಬಳಕೆಯಾಗುತ್ತವೆ.

ಶ್ವಾಸಕೋಶಗಳ ಉಸಿರಾಟದ ಗಾಳಿಯ ಪ್ರಮಾಣದ ಸಾಮರ್ಥ್ಯ ಪತ್ತೆ ಮಾಡಲು ಯಂತ್ರಗಳಿವೆ. ಶ್ವಾಸಮಾರ್ಗಗಳ ಮತ್ತು ಶ್ವಾಸಕೋಶಗಳ ಸಮಸ್ಯೆಗಳಲ್ಲಿ ಈ ಯಂತ್ರವನ್ನು ಬಳಸಿ ವಾಯುಮಾರ್ಗದ ಯಾವ ಹಂತದಲ್ಲಿ ಅಡಚಣೆ ಇದೆ ಎಂಬುದನ್ನು ಇದರಿಂದ ತಿಳಿಯಬಹುದು. ಈ ಮಾಹಿತಿ ಚಿಕಿತ್ಸೆಗೆ ಬಹಳ ಪ್ರಯೋಜನಕಾರಿ. ಅಂತೆಯೇ, ವ್ಯಕ್ತಿಯೋರ್ವ ನಿಂತಾಗ, ಕುಳಿತಾಗ, ಅಂಗಾತ ಮಲಗಿದಾಗ, ಬೋರಲಾಗಿ ಮಲಗಿದಾಗ ಆತನ ಶ್ವಾಸಕೋಶಗಳ ಸಾಮರ್ಥ್ಯ ಹೇಗೆ ಬದಲಾಗುತ್ತದೆ ಎಂದು ಅರಿಯಲೂ ಈ ಯಂತ್ರ ಸಹಾಯಕ.

ಗಾಳಿ ನಮ್ಮ ಬದುಕಿನ ಆಧಾರ; ಜೀವಂತತೆಯ ಸಂಕೇತ. ಗಾಳಿಯನ್ನೇ ಪ್ರಾಣ ಎಂದು ಹಿರಿಯರು ಕರೆದದ್ದು ಆ ಕಾರಣಕ್ಕೇ. ಇಂತಹ ಪ್ರಾಣವಾಯುವನ್ನು ರಕ್ತಕ್ಕೆ ಸೇರಿಸುವ ಏಕೈಕ ಮಾಧ್ಯಮ ಶ್ವಾಸಕೋಶಗಳು. ಅವುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳುವುದು ಬಹಡುಕಿನ ದೃಷ್ಟಿಯಿಂದ ಬಹಳ ಮಹತ್ವ. ಅನೇಕಾನೇಕ ಕಾರಣಗಳಿಂದ ನಾವು ಉಸಿರಾಡುತ್ತಿರುವ ಗಾಳಿಯ ಗುಣಮಟ್ಟ ಕ್ಷೀಣಿಸುತ್ತಿದೆ. ಒಂದೆಡೆ ಅದನ್ನು ಉತ್ತಮಗೊಳಿಸುವ ಸಾಮಾಜಿಕ ಜವಾಬ್ದಾರಿ ನಮ್ಮೆಲ್ಲರ ಹೆಗಲಿಗಿದೆ. ಇದರ ಮೇಲೆ ಧೂಮಪಾನದಂತಹ ದುಶ್ಚಟಗಳನ್ನು ರೂಢಿಸಿಕೊಂಡರೆ ನಮ್ಮ ಅನಾರೋಗ್ಯಕ್ಕೆ ನಾವೇ ಆಹ್ವಾನ ನೀಡಿದಂತೆ ಆಗುತ್ತದೆ. ಇದರ ಬಗ್ಗೆ ಎಚ್ಚರ ವಹಿಸುವುದು ಅತ್ಯಗತ್ಯ.

ಶ್ವಾಸಕೋಶಗಳ ಗಣಿತ ಬೆರಗಿನದ್ದು. ಬಹುತೇಕ ನಮ್ಮ ಅರಿವಿಗೆ ಬಾರದೇ ನಡೆದುಹೋಗುವ ಉಸಿರಾಟದ ಹಿಂದೆ ಇಷ್ಟೆಲ್ಲಾ ಗಣಿತವನ್ನು ನಿಸರ್ಗ ಸಂಯೋಜಿಸಿದೆ ಎಂದಾಗ, ಪ್ರಕೃತಿಯ ಭಾಷೆ ಗಣಿತವೇ ಎಂದು ಮತ್ತೊಮ್ಮೆ ಸಾಧಿಸಿದಂತಾಯಿತು!

-----------

ನವೆಂಬರ್ 2022 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಕುತೂಹಲಿಯ ನವೆಂಬರ್ 2022 ಸಂಚಿಕೆಯನ್ನು ಉಚಿತವಾಗಿ ಓದುವ ಕೊಂಡಿ: https://www.flipbookpdf.net/web/site/f40cf78bd505f565f68fe5ddd4844d47dfdfd669202211.pdf.html?fbclid=IwAR1luBTF0SJ-2rSczbmVGdOoyOD1z5ghpRX-TCT1Vx7nytwsSUM6rsRFQpQ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ