ಬುಧವಾರ, ಅಕ್ಟೋಬರ್ 5, 2022


 ಹೃದಯದ ಗಣಿತ

ಗರ್ಭಸ್ಥ ಭ್ರೂಣದಲ್ಲಿ ಕೆಲಸ ಮಾಡಲು ಆರಂಭಿಸುವ ಮೊಟ್ಟ ಮೊದಲ ಅಂಗ ಹೃದಯ. ಅಂತೆಯೇ, ಮರಣದ ವೇಳೆ ಶರೀರದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸುವ ಕಡೆಯ ಅಂಗವೂ ಹೃದಯವೇ. ನಮ್ಮ ಮುಷ್ಟಿಯ ಗಾತ್ರದ ಹೃದಯ ದೇಹದ ಅಚ್ಚರಿಗಳಲ್ಲಿ ಒಂದು. ದಿನಕ್ಕೆ ಕನಿಷ್ಟ ಒಂದು ಲಕ್ಷದಂತೆ 70 ವರ್ಷದ ಜೀವನದಲ್ಲಿ 250 ಕೋಟಿ ಬಾರಿ ಒಂದೇ ಸಮನೆ, ಕ್ಷಣಮಾತ್ರವೂ ಪುರುಸೊತ್ತು ಇಲ್ಲದಂತೆ ಬಡಿಯುವ ಹೃದಯಕ್ಕೆ ಸಮಾನವಾದ ಯಂತ್ರವನ್ನು ಮಾನವ ಈವರೆಗೆ ಸೃಷ್ಟಿಸಿಲ್ಲ! ತಲೆಯಿಂದ ಕಾಲಿನವರೆಗೆ ಇರುವ ಬಹುತೇಕ ಜೀವಕೋಶಗಳಿಗೆ ಪೋಷಕಾಂಶ ಸರಬರಾಜು ಮಾಡುವುದು ಹೃದಯವೇ. ಇದಕ್ಕೆ ವಿಸ್ತಾರವಾದ ರಕ್ತನಾಳಗಳ ಜಾಲವನ್ನು ದೇಹದಾದ್ಯಂತ ಪಸರಿಸಿದೆ. ಶರೀರದ ಯಾವುದೇ ರಕ್ತನಾಳವನ್ನು ಹಿಡಿದು ಹೊರಟರೂ ಅದು ಕಡೆಗೆ ಹೃದಯವನ್ನೇ ಮುಟ್ಟುತ್ತದೆ. ಹೀಗೆ ಹೃದಯದಿಂದ ಹೊರಟ ರಕ್ತನಾಳಗಳನ್ನು ನೇರವಾಗಿ ಒಂದೇ ರೇಖೆಯುದ್ದಕ್ಕೂ ಹಾಸಿದರೆ, ಅದು ಭೂಮಿಯ ಸಮಭಾಜಕವೃತ್ತವನ್ನು ಒಂದೂವರೆ ಸಾರಿ ಸುತ್ತುಹಾಕುತ್ತದೆ!

ಹೃದಯದ ತೂಕ ಸುಮಾರು ಕಾಲು ಕೆಜಿ. ಅದರಲ್ಲಿ ಬಹುಪಾಲು ವಿಶಿಷ್ಟ ಮಾಂಸಖಂಡ. ವಿಶಿಷ್ಟ ಏಕೆಂದರೆ, ಇದು ಸ್ವಯಂಚಾಲಿತ. ಈ ಮಾಂಸಖಂಡ ಕೆಲಸ ಮಾಡಲು ಮಿದುಳಿನಿಂದ ನಿರ್ದೇಶನಗಳು ಬೇಕಿಲ್ಲ. “ಮಿದುಳು ಕೆಲಸ ಮಾಡದಿದ್ದರೂ ಗುಂಡಿಗೆ ಕೆಲಸ ಮಾಡುತ್ತದೆ” ಎಂದು ಕೆಲವರನ್ನು ಲೇವಡಿ ಮಾಡಲು ಹೇಳಿದರೂ, ಆ ಮಾತು ಎಲ್ಲರಲ್ಲೂ ಸತ್ಯವೇ! ಹೃದಯದ ಮಾಂಸಖಂಡ ಒಂದು ಬಾರಿ ಒತ್ತಿದರೆ ಸುಮಾರು 70 ಮಿಲಿಲೀಟರ್ ರಕ್ತ ದೇಹದೊಳಗೆ ಪ್ರವಹಿಸುತ್ತದೆ. ಅಂದರೆ, ನಿಮಿಷಕ್ಕೆ ಐದು ಲೀಟರ್; ಗಂಟೆಗೆ ಮೂರುನೂರು ಲೀಟರ್; ದಿನಕ್ಕೆ ಸುಮಾರು 7000 ಲೀಟರ್ ರಕ್ತವನ್ನು ಹೃದಯ ಶರೀರದ ಸಲುವಾಗಿ ಪಂಪ್ ಮಾಡುತ್ತದೆ. ಒಂದು ಜೀವನ ಕಾಲದಲ್ಲಿ ಹೃದಯ ಪಂಪ್ ಮಾಡುವ ರಕ್ತದ ಪ್ರಮಾಣ ಸುಮಾರು ಇಪ್ಪತ್ತು ಕೋಟಿ ಲೀಟರ್! ಒತ್ತಡ ನಿರ್ಮಿಸುವ ಬಲದಲ್ಲಿ ಲೆಕ್ಕ ಹಾಕಿದರೆ, ಪ್ರತೀ ದಿನ ಹೃದಯ ಉತ್ಪಾದಿಸುವ ನೂಕುಬಲದಿಂದ ಒಂದು ಖಾಲಿ ಬಸ್ ಅನ್ನು ಸಪಾಟಾದ ರಸ್ತೆಯಲ್ಲಿ ಸುಮಾರು ಮೂವತ್ತೈದು ಕಿಲೋಮೀಟರ್ ದೂರಕ್ಕೆ ತಳ್ಳಬಹುದು! ಅಂದರೆ, ಒಂದು ಜೀವಿತಾವಧಿಯಲ್ಲಿ ಹೃದಯ ಒತ್ತುವ ಒಟ್ಟು ಶಕ್ತಿಯಿಂದ ಆ ಬಸ್ ಅನ್ನು ಚಂದ್ರನ ಬಳಿ ತಲುಪಿಸಿ, ಚಂದ್ರಮಂಡಲಕ್ಕೆ ಒಂದು ಪ್ರದಕ್ಷಿಣೆ ಹಾಕಿಸಿ, ವಾಪಸ್ ಭೂಮಿಗೆ ತರಬಹುದಾದಷ್ಟು ತಾಕತ್ತು!

ಹೋಲಿ ಹಬ್ಬದ ಸಮಯದಲ್ಲಿ ಪಿಚಕಾರಿ ಬಳಸಿದ ಅನುಭವ ನೆನಪಿಸಿಕೊಳ್ಳಿ. ಬಣ್ಣದ ನೀರು ತುಂಬಿದ ಪಿಚಕಾರಿಯನ್ನು ಮೆಲ್ಲಗೆ ಒತ್ತಿದರೆ ನೀರು ಅಲ್ಲೇ ಒಂದಷ್ಟು ದೂರದಲ್ಲಿ ಬೀಳುತ್ತದೆ. ಅದೇ, ಬಲವಾಗಿ ಒತ್ತಿದರೆ ನೀರು ಸುಮಾರು ಅಂತರದವರೆಗೆ ಗಾಳಿಯಲ್ಲಿ ಹಾರಿ ದೂರ ನಿಂತವರನ್ನೂ ತೋಯಿಸುತ್ತದೆ. ಅಂದರೆ, ಪಂಪ್ ಮಾಡುವ ಒತ್ತಡ ಹೆಚ್ಚಿದಷ್ಟೂ ಅದರ ಸಾಮರ್ಥ್ಯ ಅಧಿಕವಾಗುತ್ತದೆ ಎಂದಾಯಿತು. ಈಗ ತಲೆಯಿಂದ ಕಾಲಿನವರೆಗೆ ಹಬ್ಬಿರುವ ಜೀವಕೋಶಗಳಿಗೆ ಪೋಷಕಾಂಶಗಳನ್ನು ಹೃದಯವೇ ರಕ್ತದ ಮೂಲಕ ತಲುಪಿಸಬೇಕು ಎಂದರೆ, ಅದು ಸಾಕಷ್ಟು ಒತ್ತಡದಿಂದ ರಕ್ತವನ್ನು ಧಮನಿಗಳಲ್ಲಿ ತಳ್ಳಬೇಕು. ಈ ಒತ್ತಡವನ್ನೇ “ರಕ್ತದೊತ್ತಡ” ಅಥವಾ ಬ್ಲಡ್ ಪ್ರೆಶರ್ ಎನ್ನಲಾಗುತ್ತದೆ. ಹೀಗೆ ತಳ್ಳಿದ ರಕ್ತವನ್ನು ಮತ್ತಷ್ಟು ಮುಂದೆ ಸಂಚರಿಸುವಂತೆ ಮಾಡಲು ರಕ್ತನಾಳಗಳಲ್ಲೂ ತೆಳುವಾದ ಮಾಂಸಪಟ್ಟಿಗಳು ಇರುತ್ತವೆ. ಇಂತಹ ರಕ್ತನಾಳಗಳು ತಮ್ಮೊಳಗೆ ಹರಿಯುವ ರಕ್ತದ ಒತ್ತಡ ಶೂನ್ಯಕ್ಕೆ ಇಳಿಯದಂತೆ ನೋಡಿಕೊಂಡು, ಅದು ಅಂತೆಯೇ ಮುಂದೆ ಮುಂದೆ ಹರಿಯುತ್ತಲೇ ಇರುವಂತೆ ಹೃದಯಕ್ಕೆ ಕೆಲಸಕ್ಕೆ ಸಾಥ್ ನೀಡುತ್ತವೆ. ಹೃದಯ ಒತ್ತಿದಾಗ ಇಂತಹ ರಕ್ತನಾಳಗಳಲ್ಲಿ ಹೆಚ್ಚಿನ ಒತ್ತಡ ಇರುತ್ತದೆ. ಒತ್ತಿದ ನಂತರ ಮುಂದಿನ ಆವೃತ್ತಿಗೆ ರಕ್ತವನ್ನು ಹೃದಯ ಸಂಗ್ರಹಿಸುವಾಗ ರಕ್ತನಾಳಗಳ ಒತ್ತಡ ಕಡಿಮೆ ಆಗುತ್ತದೆ. ಹೀಗೆ, ರಕ್ತನಾಳಗಳಲ್ಲಿ ಮೇಲ್ಮಟ್ಟದ ಒತ್ತಡ ಹೃದಯದ ಕಾರಣದಿಂದ ಆದರೆ, ಕೆಳಮಟ್ಟದ ಒತ್ತಡ ರಕ್ತನಾಳಗಳ ಮಾಂಸಪಟ್ಟಿಗಳಿಂದ ಆಗುತ್ತದೆ. ಈ ಎರಡು ಸಂಖ್ಯೆಗಳೇ ನಾವು ರಕ್ತದ ಒತ್ತಡವನ್ನು ನಿರ್ದೇಶಿಸುವ ಸಿಸ್ಟೊಲ್ ಮತ್ತು ಡಯಸ್ಟೊಲ್ ಅಂಕಿಗಳು. ರಕ್ತದ ಒತ್ತಡ 120/80 ಎಂದರೆ, ಹೃದಯ ಒತ್ತುವಾಗ 120 ಅಂಶಗಳ ಒತ್ತಡ; ಹೃದಯ ರಕ್ತವನ್ನು ಶೇಖರಿಸುವಾಗ ರಕ್ತನಾಳಗಳ ಸಹಾಯಕ ಒತ್ತಡ 80 ಅಂಶಗಳು ಎಂದು ಅರ್ಥ. ಇದರ ಮಾಪನ ಆಗುವುದು ಪಾದರಸದ ಒತ್ತಡದ ಲೆಕ್ಕಾಚಾರದಲ್ಲಿ. ಒಂದು ಉದ್ದನೆಯ ಗಾಜಿನ ಕೊಳವೆಯಲ್ಲಿ ಸ್ವಲ್ಪ ಪಾದರಸವನ್ನು ಇಟ್ಟರೆ, ಹೃದಯದ ಪ್ರತಿಯೊಂದು ಸಂಕೋಚನ ಆ ಪಾದರಸದ ಮಟ್ಟವನ್ನು ಸುಮಾರು 120 ಮಿಲಿಮೀಟರ್ ನಷ್ಟು ಎತ್ತರಕ್ಕೆ ದೂಡಬಲ್ಲದು. ಪಾದರಸ ನೀರಿಗಿಂತ ಸುಮಾರು 13 ಪಟ್ಟು ಹೆಚ್ಚು ಭಾರ. ಅಂದರೆ, ಪಾದರಸದ ಬದಲಿಗೆ ಕೊಳವೆಯಲ್ಲಿ ನೀರನ್ನು ತುಂಬಿದರೆ, ಹೃದಯ ಒಮ್ಮೆ ಒತ್ತಿದಾಗ ಆ ನೀರು ಸುಮಾರು ಒಂದೂವರೆ ಮೀಟರ್ ಎತ್ತರಕ್ಕೆ ಚಿಮ್ಮಬಲ್ಲದು! ರಕ್ತದ ಶೇಕಡಾ 90 ಕ್ಕಿಂತ ಅಧಿಕ ಭಾಗ ನೀರಿನ ಅಂಶವೇ ಆಗಿರುವುದರಿಂದ, ರಕ್ತವೂ ಸುಮಾರು ಇಷ್ಟೇ ಎತ್ತರಕ್ಕೆ ಚಿಮ್ಮುತ್ತದೆ.

ಶರೀರದ ಅಂಗಗಳಿಗೆ ರಕ್ತದ ಹರಿವು ಕಡಿಮೆಯಾದರೆ, ಅವು ಹೃದಯಕ್ಕೆ ಸಂದೇಶ ಕಳಿಸಿ, ಮಿದುಳಿಗೆ ದೂರು ನೀಡುತ್ತವೆ. ಇದರಿಂದ ಹೃದಯ ತನ್ನ ಗತಿಯನ್ನು ಏರಿಸಿಕೊಂಡು, ಪ್ರತೀ ನಿಮಿಷಕ್ಕೆ ಹೆಚ್ಚು ಬಾರಿ ಬಡಿಯಲು ಆರಂಭಿಸುತ್ತದೆ. ಅಲ್ಲದೇ, ತನ್ನ ಸ್ನಾಯುಗಳ ಒತ್ತಡದ ಬಲವನ್ನೂ ಹಿಗ್ಗಿಸುತ್ತದೆ. ಹೀಗೆ, ಅಂಗಾಂಗಗಳಿಗೆ ಹೆಚ್ಚಿನ ರಕ್ತದ ಪೂರೈಕೆ ಆಗುತ್ತದೆ. ಈ ರೀತಿಯಲ್ಲಿ ಸಾಮಾನ್ಯಕ್ಕಿಂತ ಮೂರು ಪಟ್ಟು ಹೆಚ್ಚು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಹೃದಯಕ್ಕಿದೆ. ಚೆನ್ನಾಗಿ ತರಬೇತಿಗೊಂಡ ಕ್ರೀಡಾಪಟುಗಳಲ್ಲಿ ಈ ಸಾಮರ್ಥ್ಯ ಇನ್ನೂ ಹೆಚ್ಚಾಗಬಹುದು. ವ್ಯಾಯಾಮ, ಆತಂಕ, ಜ್ವರದಂತಹ ಸಂದರ್ಭಗಳಲ್ಲಿ ಶರೀರಕ್ಕೆ ಹೆಚ್ಚಿನ ರಕ್ತ ಪೂರೈಕೆಯ ಅಗತ್ಯವಿದೆ. ಹೀಗಾಗಿ, ಅಂತಹ ಸಂದರ್ಭಗಳಲ್ಲಿ ಹೃದಯದ ಬಡಿತ ಏರುತ್ತದೆ. ಗರ್ಭಿಣಿಯರಲ್ಲಿ ಅವರ ದೇಹದ ಅಗತ್ಯಗಳ ಜೊತೆಗೆ ಭ್ರೂಣದ ರಕ್ತಸಂಚಾರ ಕೂಡ ಆಗಬೇಕಾದ್ದರಿಂದ ಹೃದಯ ಹೆಚ್ಚು ಕಾರ್ಯಶೀಲವಾಗಿರುತ್ತದೆ. ಹೀಗಾಗಿ, ಹೃದಯದ ಕಾಯಿಲೆ, ದೌರ್ಬಲ್ಯ ಇರುವ ಸ್ತ್ರೀಯರಲ್ಲಿ ಗರ್ಭಧಾರಣೆ ಅಪಾಯಕಾರಿ ಆಗಬಹುದು.

ಹೃದಯದಲ್ಲಿ ನಾಲ್ಕು ಕವಾಟಗಳಿವೆ. ಎರಡು ಕವಾಟಗಳು ಹೃದಯದ ಕೋಣೆಗಳ ನಡುವೆ ಇದ್ದರೆ, ಉಳಿದೆರಡು ಹೃದಯದ ಪಂಪ್ ಮತ್ತು ಅದರಿಂದ ಹೊರಗೆ ಹೋಗುವ ರಕ್ತನಾಳಗಳ ನಡುವೆ ಇರುತ್ತವೆ. ರಕ್ತ ಸಂಚಾರಕ್ಕೆ ಅನುಗುಣವಾಗಿ ಈ ಕವಾಟಗಳು ಮುಚ್ಚಿ-ತೆರೆದು ಕೆಲಸ ಮಾಡುತ್ತವೆ. ಅನುಕ್ರಮವಾಗಿ ಕೋಣೆಗಳ ನಡುವಿನ ಕವಾಟಗಳು ತೆರೆದಿದ್ದಾಗ ರಕ್ತನಾಳಗಳ ಕವಾಟಗಳು ಮುಚ್ಚಿರುತ್ತವೆ. ಕವಾಟಗಳು ತೆರೆಯುವಾಗ ಆಗುವ ಸದ್ದು ಕೇಳಿಸುವುದಿಲ್ಲ. ಆದರೆ, ಕವಾಟಗಳು ಮುಚ್ಚುವಾಗ ಸದ್ದಾಗುತ್ತವೆ. ಹೀಗೆ, ಎರಡೂ ಬಗೆಯ ಕವಾಟಗಳು ಒಂದರ ಹಿಂದೊಂದು ಮುಚ್ಚುವಾಗ ಹೃದಯದ ‘ಲಬ್-ಡಬ್’ ಬಡಿತ ಆಗುತ್ತದೆ. ಈ ಕವಾಟಗಳ ಕೆಲಸದಲ್ಲಿ ಏರುಪೇರಾದಾಗ ಬಡಿತದ ಸದ್ದು ಬದಲಾಗುತ್ತದೆ. ಕೆಲವೊಮ್ಮೆ ರಕ್ತ ಹೃದಯದೊಳಗೆ ವಿರುದ್ಧ ದಿಕ್ಕಿನಲ್ಲೂ ಪ್ರವಹಿಸಬಹುದು. ಅನುಭವಿ ವೈದ್ಯರು ಸ್ಟೆಥೊಸ್ಕೋಪ್ ಮೂಲಕ ಈ ಬಡಿತದ ವಿನ್ಯಾಸಗಳನ್ನು ಕೇಳಿ, ಹೃದಯದ ಕಾರ್ಯದ ಬಗ್ಗೆ ಸಾಕಷ್ಟು ವಿವರಗಳನ್ನು ಪಡೆಯಬಲ್ಲರು. 

ಇಡೀ ಶರೀರಕ್ಕೆ ರಕ್ತ ಸರಬರಾಜು ಮಾಡುವ ಹೃದಯ, ಆ ರಕ್ತವನ್ನು ತನಗಾಗಿ ಬಳಸಿಕೊಳ್ಳಲು ಮಾತ್ರ ಕಂಜೂಸು ಮಾಡುತ್ತದೆ! ಇಡೀ ಶರೀರದ ರಕ್ತಸಂಚಯದ ಶೇಕಡಾ 5 ಮಾತ್ರ ಹೃದಯಕ್ಕೆ ಲಭ್ಯವಾಗುತ್ತದೆ. ಅದನ್ನು ಪಡೆಯಲು ಕೆಲವು ವಿಶಿಷ್ಟ ರಕ್ತನಾಳಗಳನ್ನು ಹೃದಯ ನಿರ್ಮಿಸಿಕೊಂಡಿದೆ. ಈ ರಕ್ತನಾಳಗಳ ಆಂತರಿಕ ವ್ಯಾಸ ಯಾವುದೇ ಕಾರಣಕ್ಕೂ ಕಿರಿದಾದರೆ, ರಕ್ತಸಂಚಾರಕ್ಕೆ ಅಡ್ಡಿಯುಂಟಾಗಿ ಹೃದಯಾಘಾತ ಆಗುತ್ತದೆ.

ಕೆಲವು ರೋಗಿಗಳಲ್ಲಿ ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದರೂ ಹೃದಯ ಇನ್ನೂ ಚುರುಕಾಗಿಯೇ ಇರುತ್ತದೆ. ಅಂತಹವರ ಶ್ವಾಸಕ್ರಿಯೆಯನ್ನು ಕೃತಕವಾಗಿ ವೆಂಟಿಲೇಟರ್ ಮೂಲಕ ಮುಂದುವರೆಸುತ್ತಾ ಹೃದಯದ ಸ್ವಸ್ಥತೆಯನ್ನು ಕಾಪಾಡಬಹುದು. ಮಿದುಳು ಕೆಲಸ ಮಾಡುವುದನ್ನು ನಿಲ್ಲಿಸಿದ ವ್ಯಕ್ತಿ ಹೆಚ್ಚು ಕಾಲ ಜೀವಂತವಿರಲು ಸಾಧ್ಯವಿಲ್ಲ. ಇನ್ನು ಕೆಲವು ರೋಗಿಗಳಲ್ಲಿ ಶರೀರದ ಇತರ ಭಾಗಗಳು ಕೆಲಸ ಮಾಡುತ್ತಿದ್ದರೂ, ಹೃದಯ ಮಾತ್ರ ದುರ್ಬಲವಾಗಿರಬಹುದು. ಇಂತಹ ಸಂದರ್ಭದಲ್ಲಿ ಇನ್ನೂ ಕೆಲಸ ಮಾಡುತ್ತಿರುವ ಮೊದಲ ರೋಗಿಯ ಹೃದಯವನ್ನು ಎರಡನೆಯ ರೋಗಿಗೆ ಕಸಿ ಮಾಡಬಹುದು. ಮೊದಲ ರೋಗಿಯ ಶರೀರದಿಂದ ತೆಗೆದ ಹೃದಯವನ್ನು ಸುಮಾರು 5-ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕೆಲವು ಪೋಷಕಾಂಶಗಳನ್ನು ನೀಡುತ್ತಾ ಸುಮಾರು 4 ಗಂಟೆಗಳ ಕಾಲ ಸ್ವಸ್ಥವಾಗಿ ಇಡಬಹದು. ಇಷ್ಟು ಕಾಲದಲ್ಲಿ ಅದನ್ನು ಎರಡನೆಯ ರೋಗಿಯ ಶರೀರದಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಸೇರಿಸಬೇಕಾಗುತ್ತದೆ.

ಹೃದಯದ ಗಣಿತ ಸೋಜಿಗವಷ್ಟೇ ಅಲ್ಲ; ವೈದ್ಯರ ಪಾಲಿಗೆ ಅತ್ಯಂತ ಆವಶ್ಯಕ ಕೂಡ. ಗಣಿತದ ನೆರವಿಲ್ಲದೆ ಹೃದಯದ ರಕ್ಷಣೆ ಪೂರ್ಣವಾಗದು.

--------------------

 ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಅಕ್ಟೋಬರ್ 2022ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.flipbookpdf.net/web/site/4b084c0e80bb2d5098c65789ba482437c2bbe711202210.pdf.html?fbclid=IwAR1LMnUDHpFKlzjAe6xr7W5dSgf5vAuGOliZnMGY6D-6UT8CGWZF0FvntZc

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ