ಬುಧವಾರ, ನವೆಂಬರ್ 9, 2022

 ಮಾತನಾಡುವ ಮುನ್ನ...

ಡಾ. ಕಿರಣ್ ವಿ.ಎಸ್.

ವೈದ್ಯರು

“ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು” ಎನ್ನುವ ಗಾದೆಯನ್ನು ಕೇಳಿರುತ್ತೇವೆ. ಒಡೆದಿರುವ ಅಸಲಿ ಮುತ್ತನ್ನು ಹೆಚ್ಚು ಮಂದಿ ಕಂಡಿರಲಾರರು. ಆದರೆ ತಪ್ಪು ಮಾತಿನ ಪರಿಣಾಮವನ್ನು ಜೀವನದಲ್ಲಿ ಎಂದಾದರೂ ಅನುಭವಿಸಿಯೇ ಇರುತ್ತೇವೆ. “ಮಾತು ಬಲ್ಲವನಿಗೆ ಜಗಳವಿಲ್ಲ; ಊಟ ಬಲ್ಲವನಿಗೆ ರೋಗವಿಲ್ಲ” ಎನ್ನುವ ನಾಣ್ಣುಡಿ ಜಾಣರ ಜೀವನಕ್ರಮದ ಸಂಕೇತ. ಯಾವುದೇ ಸಂದರ್ಭದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸುವುದರಿಂದ ಹಿಡಿದು, ವೈಯಕ್ತಿಕ ಮತ್ತು ವ್ಯಾವಹಾರಿಕ ಸಂಬಂಧಗಳ ನಿರ್ವಹಣೆಯವರೆಗೆ ಮಾತಿನ ಸೂಕ್ಷ್ಮತೆಯನ್ನು ಅರಿತವರು ಗೆಲ್ಲುತ್ತಾರೆ. ಪ್ರಶ್ನೆ ಎದುರಾದಾಗ ಕೆಲಕ್ಷಣಗಳ ಕಾಲ ಯೋಚಿಸಿ ಉತ್ತರಿಸುವ ತಂತ್ರಗಾರಿಕೆಯನ್ನು ಸಂದರ್ಶನಗಳನ್ನು ಎದುರಿಸುವ ಕಲೆಗಾರಿಕೆ ಕಲಿಸುವವರು ಸೂಚಿಸುತ್ತಾರೆ. ಕೆಲವು ಪ್ರಜ್ಞಾಪೂರ್ವಕ ವಿಧಾನಗಳಿಂದ ಸಮಂಜಸವಾಗಿ ಮಾತನಾಡುವ ಕಲೆಯನ್ನು ರೂಡಿಸಿಕೊಳ್ಳಬಹುದು.

ಐದು ಮುಖ್ಯ ಅಂಶಗಳನ್ನು ಮಾತಿನಲ್ಲಿ ಅಂತರ್ಗತಗೊಳಿಸುವ ಅಗತ್ಯವಿದೆ. ಮಾತು ಸತ್ಯವಾಗಿರಬೇಕು; ಮತ್ತೊಬ್ಬರಿಗೆ ಸಹಾಯಕವಾಗಿರಬೇಕು; ಸ್ಪೂರ್ತಿ ನೀಡುವಂತಿರಬೇಕು; ಆ ಸಂದರ್ಭಕ್ಕೆ ಅಗತ್ಯವೆನಿಸುವಂತಿರಬೇಕು; ಮಾತಿನಲ್ಲಿ ಸಹೃದಯತೆಯಿರಬೇಕು. ಅಪ್ರಿಯವಾದ ಸತ್ಯವನ್ನು ನುಡಿಯಬಾರದು ಎನ್ನುವ ಸಲಹೆಯ ಜೊತೆಗೆ ಪ್ರಿಯವಾದ ಅಸತ್ಯವನ್ನೂ ಹೇಳಬಾರದೆಂಬ ಎಚ್ಚರಿಕೆಯನ್ನು ಗಮನಿಸಬೇಕು. ಯಾವುದಾದರೂ ಸಂದರ್ಭದಲ್ಲಿ ಸತ್ಯವನ್ನು ಹೇಳುವುದು ಕಠಿಣ ಎನಿಸಿದಾಗ ಅಸತ್ಯವನ್ನು ನುಡಿಯುವುದಕ್ಕಿಂತ ಸುಮ್ಮನಿರುವುದು ಲೇಸು.

ನಮ್ಮ ಮಾತು ಇತರಿಗೆಗೆ ಸಹಾಯಕವಾಗಬಹುದು ಎನಿಸಿದಾಗ ಅದನ್ನು ನುಡಿಯುವುದು ಸೂಕ್ತ. ಅದೇ ರೀತಿ, ನಮ್ಮ ಮಾತುಗಳಿಂದ ಮತ್ತೊಬ್ಬರಿಗೆ ನೋವಾಗುವುದಾದರೆ, ಅಂತಹ ಮಾತನ್ನು ಆ ಸಂದರ್ಭದಲ್ಲಿ ಆಡಬೇಕೇ ಎಂದು ಚೆನ್ನಾಗಿ ಆಲೋಚಿಸಬೇಕು. ಕೆಲವು ಮಾತುಗಳು ಸಂಬಂಧಗಳನ್ನು ಕೆಡಿಸಬಹುದು. ಅಂತಹ ಮಾತುಗಳನ್ನು ನುಡಿಯುವ ಮುನ್ನ ಪರಿಣಾಮಗಳ ಬಗ್ಗೆ ಸ್ಪಷ್ಟತೆ ಇರಬೇಕು. ಒಮ್ಮೆ ಆಡಿದ ಮಾತನ್ನು ಹಿಂಪಡೆಯಲಾಗದು. ಹೀಗಾಗಿ, ಕಠಿಣ ಮಾತುಗಳನ್ನು ನುಡಿಯುವ ಮುನ್ನ ಆ ಮಾತನ್ನಾಡುವ ಮತ್ತು ಸುಮ್ಮನಿರುವ ಆಯ್ಕೆಗಳ ನಡುವಿನ ಯುಕ್ತಾಯುಕ್ತ ವಿವೇಚನೆ ಇರಬೇಕಾಗುತ್ತದೆ. ತೀರಾ ಹತ್ತಿರದ ಸಂಬಂಧದಲ್ಲಿ ವಿಮರ್ಶೆ ಅಗತ್ಯವಾದರೆ, ಅದನ್ನು ಏಕಾಂತದಲ್ಲಿ ಸೂಚ್ಯವಾಗಿ ಹೇಳುವುದು ಉತ್ತಮ ವಿಧಾನ. ಯಾವ ಕಾರಣಕ್ಕೂ ನಾಲ್ಕು ಜನರ ಮಧ್ಯೆ ನಿಷ್ಠುರ ವಿಮರ್ಶೆ ಸಲ್ಲದು. “ಹೊಗಳುವುದು ಎಲ್ಲರ ಮುಂದೆ; ಖಂಡಿಸುವುದು ಖಾಸಗಿಯಾಗಿ” ಎನ್ನುವ ಮಂತ್ರ ಪಾಲಿಸಲು ಅರ್ಹವಾದದ್ದು.

ನಮ್ಮ ಪರಿಚಿತರು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಾಗ ನಿರ್ವಂಚನೆಯಿಂದ ಪ್ರಶಂಸಿಸುವುದು ಸರಿಯಾದ ಮಾರ್ಗ. ನಾವು ಬಾಳುವ ಈ ಜಗತ್ತು ಒಳ್ಳೆಯದಾಗಿರಬೇಕೆಂದರೆ ಸಮಷ್ಟಿಯ ಒಳಿತು ಬೆಳೆಯುವುದು ಮುಖ್ಯ. ಋಜುತ್ವದ ಅಭಿವೃದ್ಧಿಗೆ ಪ್ರಾಮಾಣಿಕ ಮೆಚ್ಚುಗೆಗಿಂತ ಪ್ರಬಲ ಸಾಧನವಿಲ್ಲ. ನಮ್ಮ ಮಾತುಗಳು ಅವರನ್ನು ಮತ್ತಷ್ಟು ಒಳಿತು ಮಾಡಲು ಪೂರಕವಾಗುವಂತೆ ಇರಬೇಕು. ಸಿನಿಕತೆಯ ಮಾತುಗಳಿಗೆ ಆಸ್ಪದ ಇರಬಾರದು. ಒಳ್ಳೆಯದನ್ನು ತುಚ್ಛೀಕರಿಸುವವರ ಬಗ್ಗೆ ಯಾರಿಗೂ ಗೌರವ ಮೂಡುವುದಿಲ್ಲ. ಕೆಲವರು ಒಳಿತನ್ನು ಮಾಡುವ ಭರದಲ್ಲಿ ತಾವೇ ಅಪಾಯಕ್ಕೆ ಈಡಾಗಬಲ್ಲರು. ಅಂತಹ ಸಂದರ್ಭದಲ್ಲಿ ಮಾತ್ರ ವೈಯಕ್ತಿಕವಾಗಿ ಅವರಿಗೆ ಅಪಾಯಗಳ ಸಾಧ್ಯತೆಯ ಬಗ್ಗೆ ತಿಳಿಸಬೇಕು.

ಮುತ್ಸದ್ದಿ ಯಾರು ಎನ್ನುವ ಪ್ರಶ್ನೆಗೆ ಒಂದು ಚಂದದ ಉತ್ತರವಿದೆ. “ನರಕಕ್ಕೆ ಹೋಗು” ಎನ್ನುವ ಮಾತನ್ನು ಯಾರಿಗಾದರೂ ಹೇಳುವಾಗ ಆ ವ್ಯಕ್ತಿಗೆ “ನಾನು ಅಲ್ಲಿಗೆ ಹೋದರೆ ಚೆನ್ನ” ಎಂದು ಕಾತರಿಸುವಷ್ಟು ಚೆನ್ನಾಗಿ ಹೇಳಬಲ್ಲವನು ಮುತ್ಸದ್ದಿ! ಅಂದರೆ, ಆಡುವ ಮಾತನ್ನು ಅನೇಕ ಬಗೆಗಳಲ್ಲಿ ನುಡಿಯಬಹುದು. ವಿಮರ್ಶಾತ್ಮಕ ಸಲಹೆಗಳನ್ನು ನೀಡುವಾಗ ಅದನ್ನು ಹೇಳುವ ವಿಧಾನವೂ ಮುಖ್ಯ. ಈ ಕಲೆಗಾರಿಕೆ ಅಷ್ಟು ಸುಲಭವಲ್ಲವಾದರೂ, ಸಾಕಷ್ಟು ಪ್ರಯತ್ನದಿಂದ ಇದನ್ನು ಸಾಧಿಸಬಹುದು. ಸಲಹೆಗಳಿಗೆ ಪ್ರತಿಯೊಬ್ಬರೂ ವಿಭಿನ್ನವಾಗಿ ಸ್ಪಂದಿಸುತ್ತಾರೆ. ಆದ್ದರಿಂದ ಮಾನವ ಸ್ವಭಾವವನ್ನು ಆಳವಾಗಿ ಅರಿತರೆ ಯಾರಿಗೆ ಯಾವ ವಿಧಾನದಲ್ಲಿ ಸಲಹೆಗಳನ್ನು ನೀಡುವುದು ಸಾಧ್ಯ ಎಂದು ಅರಿಯಬಹುದು.

ಒಳ್ಳೆಯ ಮಾತುಗಾರರಾಗಬೇಕೆಂದರೆ ಮೊದಲು ಒಳ್ಳೆಯ ಕೇಳುಗರಾಗಬೇಕು. ಮತ್ತೊಬ್ಬರ ಮಾತಿನ ಮೇಲೆ ನೈಜ ಆಸಕ್ತಿ ತೋರಬೇಕು. ಇದರಿಂದ ಅವರ ಚಿಂತನೆಗಳನ್ನು ಸರಿಯಾಗಿ ಅರಿಯಲು ಸಾಧ್ಯವಾಗುತ್ತದೆ; ಸಮಂಜಸವಾಗಿ ಉತ್ತರಿಸಲು ನೆರವಾಗುತ್ತದೆ. ಮತ್ತೊಬ್ಬರು ಮಾತನಾಡುವಾಗ ಪ್ರತ್ಯುತ್ತರವನ್ನು ನೀಡಲು ಹೊರಟರೆ ನಮ್ಮ ಗಮನ ಅವರ ಮಾತಿನಿಂದ ದೂರ ಸರಿಯುತ್ತದೆ. ಆಗ ಸರಿಯಾದ ಪ್ರತಿಕ್ರಿಯೆ ನೀಡಲಾಗದು. ಎದುರು ವ್ಯಕ್ತಿಯ ಮಾತು ಮುಗಿದ ಕೆಲಕ್ಷಣಗಳ ನಂತರ ಪ್ರತ್ಯುತ್ತರ ನೀಡುವುದು ಸರಿಯಾದ ವಿಧಾನ. ಈ ಕೆಲಕ್ಷಣಗಳಲ್ಲಿ ನಮ್ಮ ಮಾತುಗಳು ಸ್ಪಷ್ಟ ರೂಪ ಪಡೆಯಬಲ್ಲವು. ಒಂದು ವೇಳೆ ನಮ್ಮ ಆಲೋಚನೆಗಳನ್ನು ಕ್ರೋಡೀಕರಿಸಲು ಕೆಲಕ್ಷಣಗಳಿಗಿಂತಲೂ ಹೆಚ್ಚು ಸಮಯ ಬೇಕೆನಿಸಿದರೆ “ನನಗೆ ಉತ್ತರಿಸಲು ಒಂದು ನಿಮಿಷ ಬೇಕು” ಎಂದು ಕೇಳಬಹುದು. ಇದರಿಂದ ಒತ್ತಡ ಕಡಿಮೆಯಾಗಿ ಆಲೋಚನೆಗಳು ತಿಳಿಯಾಗುತ್ತವೆ. 

ಕೆಲವೊಮ್ಮೆ ಉತ್ತರಿಸುವ ಧಾವಂತದಲ್ಲಿ ಎದುರು ವ್ಯಕ್ತಿಯ ಮಾತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಮಾತನಾಡಿ ಪೇಚಾಡುವಂತಾಗುತ್ತದೆ. ಇಂತಹ ಸಂದರ್ಭದಲ್ಲಿ ಉತ್ತರಿಸುವ ಮೊದಲು ಎದುರು ವ್ಯಕ್ತಿಯ ಮಾತನ್ನು ಮತ್ತೊಮ್ಮೆ ಸ್ಪಷ್ಟಪಡಿಸಿಕೊಳ್ಳುವುದು ಉಚಿತ. “ಅಂದರೆ ನಿಮ್ಮ ಅಭಿಪ್ರಾಯ ಹೀಗೆಂದೇ?” ಎಂದೋ, ಅಥವಾ “ನೀವು ಹೇಳಿದ ಈ ಮಾತನ್ನು ಸ್ವಲ್ಪ ವಿವರಿಸಬಹುದೇ?” ಎಂದೋ ಕೇಳಿದರೆ, ಇಡೀ ಮಾತು ಮತ್ತೊಮ್ಮೆ ಬರುವಂತಾಗುತ್ತದೆ. ಇದರಿಂದ ಮಾತಿನ ಅರ್ಥ ಸ್ಪಷ್ಟವಾಗಿ, ಉತ್ತರಿಸಲು ನೆರವಾಗುತ್ತದೆ. ಒಟ್ಟಿನಲ್ಲಿ, ಪ್ರಶ್ನೆಯನ್ನು ಅರ್ಥ ಮಾಡಿಕೊಳ್ಳದೆ ಉತ್ತರಿಸುವುದು ಸರಿಯಾದ ವಿಧಾನವಲ್ಲ.

ಸಂದರ್ಶನದಂತಹ ಸಂದರ್ಭಗಳಲ್ಲಿ ಮಾನಸಿಕ ಒತ್ತಡ ಹೆಚ್ಚಿರುತ್ತದೆ. ಆಗ ಮಾತಿನಲ್ಲಿ ತಪ್ಪುಗಳಾಗಬಹುದು. ಇಂತಹುದೇ ಸಾಧ್ಯತೆಗಳು ವಾಗ್ವಾದಗಳ ವೇಳೆಯೂ ಅಗಬಹುದು. ಈ ರೀತಿಯ ಸಂದರ್ಭಗಳಲ್ಲಿ ನಮಗೇ ಅರಿವಿಲ್ಲದಂತೆ ಉಸಿರುಗಟ್ಟುವುದು ಸಹಜ ಪ್ರಕ್ರಿಯೆ. ಇದನ್ನು ಪ್ರಯತ್ನಪೂರ್ವಕವಾಗಿ ಬದಲಾಯಿಸಬಹುದು. ಎದುರು ವ್ಯಕ್ತಿಯ ಮಾತಿನ ವೇಳೆ ನಿಧಾನವಾಗಿ, ದೀರ್ಘ ಶ್ವಾಸ ತೆಗೆದುಕೊಳ್ಳುವುದರಿಂದ ಗಮನ ಹೆಚ್ಚುತ್ತದೆ; ಆಲೋಚನೆಗಳನ್ನು ಒಟ್ಟುಗೂಡಿಸಲು ನೆರವಾಗುತ್ತದೆ. ಸಂಭಾಷಣೆಯ ವಿಷಯ ಗಂಭೀರವಾದಷ್ಟೂ ಎದುರು ವ್ಯಕ್ತಿಯ ಮಾತಿನ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಅಗತ್ಯ. ಹೀಗಾಗಿ, ನಮ್ಮ ಮಾತಿನ ಮುನ್ನ ಸಂಭಾಷಣೆಯ ವಿವರಗಳನ್ನು ಗ್ರಹಿಸುವುದು ಕಡ್ಡಾಯ.

ಸಂಭಾಷಣೆಯ ವೇಳೆ ದೇಹದ ಆಂಗಿಕ ಭಾಷೆಯೂ ಮುಖ್ಯವಾಗುತ್ತದೆ. ಆಂಗಿಕ ಭಾಷೆ ಸಾರ್ವತ್ರಿಕ. ಎದುರು ವ್ಯಕ್ತಿ ದೇಹಭಾಷೆಯ ವಿವರಗಳನ್ನು ಅರಿಯದಿದ್ದರೂ, ಅದನ್ನು ಪರೋಕ್ಷವಾಗಿ ಗ್ರಹಿಸಬಲ್ಲರು. ಮಾತನಾಡುತ್ತಿರುವ ವ್ಯಕ್ತಿಯೆಡೆಗೆ ನೋಡುವುದು; ಕೈಗಳನ್ನು ಕಟ್ಟಿಕೊಳ್ಳದೆ ಬದಿಯಲ್ಲಿ ಸಡಿಲ ಬಿಡುವುದು; ಹುಬ್ಬುಗಳನ್ನು ಗಂಟಿಡದೆ ತಟಸ್ಥವಾಗಿಡುವುದು; ಮುಖದಲ್ಲಿ ಸಹಜ ಕಿರುನಗೆಯಿರುವುದು ಮೊದಲಾದುವು ಆಸಕ್ತ ಆಂಗಿಕ ಭಾಷೆಯ ಲಕ್ಷಣಗಳು.

ಮಾತನಾಡುವಾಗ ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಂಶಗಳನ್ನು ಬೆರೆಸಬಾರದು. ಹಲವಾರು ಅಂಶಗಳನ್ನು ಒಟ್ಟೊಟ್ಟಿಗೆ ಹೇಳಿದರೆ ಗೊಂದಲವಾಗುತ್ತದೆ. ಸರಣಿ ಮಾತುಗಾರಿಕೆಯ ವೇಳೆ ಒಂದು ಅಂಶವನ್ನು ಸ್ಪಷ್ಟಪಡಿಸಿದ ನಂತರವೇ ಮತ್ತೊಂದು ಅಂಶಕ್ಕೆ ಹೋಗುವುದು ಸೂಕ್ತ. ಎರಡು ಅಂಶಗಳ ಮಾತಿನ ನಡುವೆ ಕೆಲಕ್ಷಣಗಳ ಅಂತರವಿರಬೇಕು. ಆಗ ಮೊದಲ ಅಂಶದ ವಿಷಯವಾಗಿ ಪ್ರಶ್ನೆಗಳಿದ್ದರೆ ಅವುಗಳನ್ನು ವಿವರಿಸಲು ಕಾಲಾವಕಾಶವಾಗುತ್ತದೆ. ಇದರಿಂದ ಒಂದೇ ವಿಷಯವನ್ನು ಮತ್ತೆ ಮತ್ತೆ ಆಡುವ ಪ್ರಸಂಗ ಬರುವುದಿಲ್ಲ; ನಿರ್ಧಾರಗಳು ವೇಗವಾಗಿ ಆಗಬಲ್ಲವು. ಮುಖ್ಯವಾದ ಸಂಭಾಷಣೆಯ ಕೊನೆಯಲ್ಲಿ ಮಾತಿನ ಸಾರಾಂಶವನ್ನು ಸಂಗ್ರಹವಾಗಿ ಒಂದು ಸಣ್ಣ ವಾಕ್ಯದಲ್ಲಿ ಹೇಳುವುದರಿಂದ ಮಾತಿಗೆ ಒಂದು ತಾರ್ಕಿಕ ಅಂತ್ಯ ನೀಡಿದಂತಾಗುತ್ತದೆ.

ಮಾತು ನಮ್ಮ ಭಾವನೆಗಳ ಪ್ರತಿಬಿಂಬ. ಇದನ್ನು ಸಮರ್ಥವಾಗಿ ನಿಭಾಯಿಸುವುದು ಜೀವನದ ಆವಶ್ಯಕತೆಗಳಲ್ಲಿ ಒಂದು. ಮಾತುಗಳ ಶಕ್ತಿ ಅಪರಿಮಿತ. ಹೀಗಾಗಿ, ಅದನ್ನು ತೂಗಿ ಆಡುವುದು ಮುಖ್ಯವಾಗುತ್ತದೆ. ಮಾತನಾಡುವ ಮುನ್ನ ಆಡಬೇಕಾದ ಮಾತಿನ ಮಹತ್ವವನ್ನು ಅರಿಯಲೇಬೇಕು.

-----------------------------

1/11/2022 ರ ಪ್ರಜಾವಾಣಿಯಲ್ಲಿ ಪ್ರಕಟವಾದ ಮೂಲ ಲೇಖನದ ಕೊಂಡಿ: https://www.prajavani.net/health/how-to-talk-kannada-article-984613.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ