ಬುಧವಾರ, ನವೆಂಬರ್ 9, 2022


ಹೃದಯದ ಆರೈಕೆ - ಹಾರೈಕೆ 

ಡಾ. ಕಿರಣ್ ವಿ. ಎಸ್. 

ವೈದ್ಯರು 

ಯಾರಿಗಾದರೂ ಹೃದಯಾಘಾತವಾಯಿತು ಎನ್ನುವ ಮಾತು ಕಿವಿಗೆ ಬಿದ್ದ ಕೂಡಲೇ ಏಳುವ ಮೊದಲ ಪ್ರಶ್ನೆ “ಎಷ್ಟು ವಯಸ್ಸಾಗಿತ್ತು?” ಎನ್ನುವುದು. ಒಂದೆರಡು ದಶಕಗಳ ಮುನ್ನ ಹೃದಯಾಘಾತ ಎನ್ನುವುದು ವೃದ್ಧಾಪ್ಯದಲ್ಲಿ ಕಾಣುವ ಸಮಸ್ಯೆ ಎನ್ನುವ ಭಾವವೇ ಇತ್ತು. ಆದರೆ ಈಚೆಗೆ ಮೂವತ್ತರ ಹರೆಯದಲ್ಲೂ ಹೃದಯಾಘಾತ ಆಗುತ್ತಿರುವ ಪ್ರಸಂಗಗಳು ಸಾಮಾನ್ಯ ಎಂದಾಗಿವೆ. ಇಂತಹ ವಯಸ್ಸಿನಲ್ಲಿ ತೀರಾ ಅಪರೂಪ ಎನ್ನುವಂತಿದ್ದ ಹೃದಯಾಘಾತ ಈಗ ಹೆಚ್ಚುತ್ತಿರುವ ಕಾರಣಗಳೇನು? ಬಾಳಿ ಬದುಕಬೇಕಾದ ವಯಸ್ಸಿನಲ್ಲಿ ಹೃದಯಾಘಾತ ಏಕಾಗುತ್ತಿದೆ? ಇದರಿಂದ ಕಾಪಾಡಿಕೊಳ್ಳುವುದು ಹೇಗೆ? ಈ ಪ್ರಶ್ನೆಗಳ ವಿಶ್ಲೇಷಣೆ, ವಿವೇಚನೆಯತ್ತ ಒಂದು ಪ್ರಯತ್ನ.

ಹೃದಯಾಘಾತ ಎಂದರೇನು ಎಂದು ಅರಿಯುವ ಮುನ್ನ ಹೃದಯದ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು. ಮಾನವ ದೇಹದಲ್ಲಿ ಒಟ್ಟು 78 ವಿವಿಧ ಅಂಗಗಳಿವೆ. ಇವುಗಳಲ್ಲಿ ಮಿದುಳು, ಹೃದಯ, ಶ್ವಾಸಕೋಶಗಳು, ಯಕೃತ್, ಮತ್ತು ಮೂತ್ರಪಿಂಡಗಳೆಂಬ ಐದು ಅಂಗಗಳು ಪ್ರಮುಖವಾದುವು. ಪ್ರಮುಖವೇಕೆಂದರೆ, ಈ ಐದೂ ಅಂಗಗಳ ಪೈಕಿ ಯಾವುದಾದರೂ ಒಂದು ಕೆಲ ನಿಮಿಷಗಳ ಕಾಲ ಸಂಪೂರ್ಣವಾಗಿ ಸ್ತಬ್ಧವಾದರೆ ಜೀವನ ಅಲ್ಲಿಗೆ ಮುಗಿಯುತ್ತದೆ. ಉಳಿದ ಅಂಗಗಳು ಹಾಗಲ್ಲ. ಉದಾಹರಣೆಗೆ ಕಣ್ಣು ಕಾಣದೆ ಹೋದರೆ, ರುಚಿ ತಿಳಿಯದೆ ಹೋದರೆ ಬದುಕು ಕಷ್ಟವಾಗಬಹುದೇ ಹೊರತು, ಪ್ರಾಣಕ್ಕೆ ನೇರವಾಗಿ ಅಪಾಯವಿಲ್ಲ.

ಹೃದಯ ಅತ್ಯಂತ ಸರಳವಾದ ಅಂಗ. ಇತರ ಪ್ರಮುಖ ಅಂಗಗಳು ಕೆಲಸ ಮಾಡಲು ಕ್ಲಿಷ್ಟಕರ ರಾಸಾಯನಿಕ ಪ್ರಕ್ರಿಯೆಗಳ ಅಗತ್ಯವಿದೆ. ಆದರೆ ಹೃದಯ ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಇತರ ಪ್ರಮುಖ ಅಂಗಗಳನ್ನು ನೂರಾರು ಪರಸ್ಪರ ಅವಲಂಬಿತ ಬಿಡಿಭಾಗಗಳಿಂದ ಕೂಡಿದ ಸಂಕೀರ್ಣವಾದ ವಾಹನಕ್ಕೆ ಹೋಲಿಸುವುದಾದರೆ, ಹೃದಯ ಒಂದು ಮೋಟಾರು, ಒಂದು ಬ್ಯಾಟರಿ ಸಂಪರ್ಕದ ಮೂಲಕ ನಿರಂತರವಾಗಿ ಕೆಲಸ ಮಾಡುವ ಎಲೆಕ್ಟ್ರಿಕ್ ಕಾರು ಎನ್ನಬಹುದು. ಹೃದಯವೆಂಬ ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ.

ಹೃದಯದ ಕೆಲಸ ಅತ್ಯಂತ ಮಹತ್ವದ್ದು ಎನ್ನುವ ಕಾರಣಕ್ಕೆ ಪ್ರಾಯಶಃ ನಿಸರ್ಗ ಅದರ ರಚನೆಯನ್ನು ಬಹಳ ಸರಳವಾಗಿಟ್ಟಿದೆ. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಇದರ ಜೊತೆಗೆ ಶರೀರ ಉತ್ಪಾದಿಸುವ ತ್ಯಾಜ್ಯ ವಸ್ತುಗಳನ್ನು ದೇಹದಿಂದ ಹೊರಹಾಕಲು ಆಯಾ ಅಂಗಗಳಿಗೆ ಸಹಾಯಕವಾಗುವ ಹೊಣೆಯೂ ಹೃದಯದ್ದೇ.

ಒಂದು ರೀತಿಯಲ್ಲಿ ಹೃದಯ ರಕ್ತವನ್ನು ಹಾಸಿ ಹೊದ್ದಿದ್ದರೂ, ಅದನ್ನು ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ನೇರವಾಗಿ ಬಳಸಿಕೊಳ್ಳುವಂತಿಲ್ಲ. ಆಕ್ಸಿಜನ್ ಮತ್ತು ಪೋಷಕಾಂಶಗಳ ಅಗತ್ಯಗಳನ್ನು ಹೃದಯಕ್ಕೆ ಪೂರೈಸಲು ಬೇಕಾಗುವ ರಕ್ತವನ್ನು ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು. ಇಂತಹ ಮೂರು ಮುಖ್ಯ ಕರೊನರಿ ರಕ್ತನಾಳಗಳ ಪೈಕಿ ಪ್ರತಿಯೊಂದೂ ಹಲವಾರು ಬಾರಿ ಕವಲೊಡೆದು ಹೃದಯದ ನಿರ್ಧಾರಿತ ಭಾಗಗಳಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತವೆ. ಹೃದಯದ ರಕ್ತಸಂಚಾರಕ್ಕೆ ಏಕೈಕ ಆಧಾರವಾಗಿರುವ ಮೂರು ಕರೊನರಿ ರಕ್ತನಾಳಗಳ ಪೈಕಿ ಕನಿಷ್ಠ ಒಂದು ರಕ್ತನಾಳದ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ ಹೃದಯದ ಆಯಾ ನಿರ್ದಿಷ್ಟ ಸ್ನಾಯುಗಳಿಗೆ ಆಕ್ಸಿಜನ್ ಮತ್ತು ಪೋಷಕಾಂಶಗಳ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಮತ್ತು ಪೋಷಕಾಂಶಗಳ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಆಯಾ ಮಾಂಸಖಂಡಗಳ ಭಾಗಗಳು ನಿತ್ರಾಣವಾಗಿ, ಸ್ನಾಯುಕೋಶಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಗಣನೀಯ ಪ್ರಮಾಣ ತಲುಪಿದರೆ ಹೃದಯದ ಕಾರ್ಯಕ್ಷಮತೆ ಶೀಘ್ರವಾಗಿ ಇಳಿದುಹೋಗುತ್ತದೆ; ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ. ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಈ ಪ್ರಕ್ರಿಯೆಗೆ ತೀವ್ರ ಹೃದಯಾಘಾತ ಎಂದು ಹೆಸರು. ಈ ಆಘಾತ ಸಹಿಸಲಾಗದೆ ಹೃದಯ ಹಠಾತ್ತಾಗಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಕೆಲಹೊತ್ತಿನಲ್ಲಿ ಮರಣ ಸಂಭವಿಸುತ್ತದೆ. ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಈ ರಕ್ತನಾಳಗಳು ಎಷ್ಟು ಪ್ರತಿಶತ ಕಟ್ಟಿಕೊಂಡಿವೆ; ವ್ಯಕ್ತಿ ಭೌತಿಕವಾಗಿ ಎಷ್ಟು ಸಕ್ರಿಯರಾಗಿದ್ದಾರೆ ಎನ್ನುವುದರ ಮೇಲೆ ಹೃದಯದ ಕಾರ್ಯಕ್ಷಮತೆಯ ನಿರ್ಧಾರವಾಗುತ್ತದೆ.

ಆದರೆ ಹೃದಯದ ರಕ್ತನಾಳಗಳು ಏಕೆ ಕಟ್ಟಿಕೊಳ್ಳುತ್ತವೆ? ಬಹುಮಟ್ಟಿಗೆ ಇದಕ್ಕೆ ಕಾರಣ ರಕ್ತನಾಳಗಳ ಒಳಭಾಗದಲ್ಲಿ ಆಗುವ ಕೊಬ್ಬಿನ ಅಂಶದ ಶೇಖರಣೆ. ರಕ್ತನಾಳಗಳ ಒಳಭಾಗದ ಅಲ್ಲಲ್ಲಿ ಇಂತಹ ಕೊಬ್ಬಿನ ಪದರಗಳು ಬೆಳೆದರೆ ರಕ್ತದ ಸರಾಗ ಹರಿಕೆಗೆ ತಡೆಯುಂಟಾಗುತ್ತದೆ. ಇದೊಂದು ರೀತಿ ಅವೈಜ್ಞಾನಿಕ ರಸ್ತೆಯುಬ್ಬು ಇದ್ದಂತೆ. ಇದರಿಂದ ಹೃದಯದ ಸ್ನಾಯುಗಳಿಗೆ ಹರಿಯಬೇಕಾದ ರಕ್ತದ ಪ್ರಮಾಣ ಮತ್ತು ವೇಗ – ಎರಡಕ್ಕೂ ಮಿತಿ ವಿಧಿಸಿದಂತಾಗುತ್ತದೆ. ಹೀಗೆ ಕೊಬ್ಬಿನ ಶೇಖರಣೆಯಾಗಲು ನಿರ್ದಿಷ್ಟ ಕಾರಣವಿಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ, ತಂಬಾಕು ಸೇವನೆ, ಮದ್ಯಪಾನ, ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಅಧಿಕವಾಗಿರುವುದು, ಬೊಜ್ಜು, ಮಾನಸಿಕ ಒತ್ತಡ, ಭೌತಿಕ ಚಟುವಟಿಕೆಯಿಲ್ಲದ ಸೋಮಾರಿ ಜೀವನಶೈಲಿ, ವ್ಯಾಯಾಮವಿಲ್ಲದ ದಿನಚರಿ, ಅನಾರೋಗ್ಯಕರ ಆಹಾರ, ನಿದ್ರಾಹೀನತೆ, ಮಾಲಿನ್ಯದ ವಾತಾವರಣ, ಅಶಿಸ್ತಿನ ಬದುಕು, ವಂಶವಾಹಿಯಲ್ಲಿ ಹರಿಯುವ ದೋಷಯುಕ್ತ ಜೀನ್ಗಳು ಕರೊನರಿ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗಲು ಕೆಲವು ಕಾರಣಗಳು. ಇವಲ್ಲದೆ, ನಮಗೆ ಈವರೆಗೆ ತಿಳಿಯದ ಕಾರಣಗಳೂ ಸಾಕಷ್ಟು ಇರಬಹುದು.

ತನ್ನ ಕೆಲಸಕ್ಕೆ ಬೇಕಾದ ರಕ್ತದ ಕೊರತೆಯುಂಟಾದಾಗ ಹೃದಯದ ಸಾಮರ್ಥ್ಯ ಕುಗ್ಗುತ್ತದೆ. ಆದರೆ, ಇಡೀ ದೇಹಕ್ಕೆ ರಕ್ತ ಪೂರೈಸುವ ಹೊಣೆಗಾರಿಕೆ ಹೃದಯದ್ದೇ ಅಲ್ಲವೇ? ಹೀಗಾಗಿ, ತಮಗೆ ತಲುಪಬೇಕಾದ ರಕ್ತದ ಪ್ರಮಾಣ ಇಳಿಮುಖವಾದರೆ ಆಯಾ ಅಂಗಗಳು ಹೃದಯಕ್ಕೆ ಸೂಚನೆ ತಲುಪಿಸಿ, ಮಿದುಳಿಗೆ ದೂರು ನೀಡುತ್ತವೆ. ಇದರಿಂದ ಮತ್ತಷ್ಟು ಒತ್ತಡಕ್ಕೆ ಸಿಲುಕಿದ ಹೃದಯ, ತನ್ನ ಶಕ್ತಿಯನ್ನು ಮೀರಿ ಕೆಲಸ ಮಾಡಲು ಪ್ರಯತ್ನಿಸುತ್ತದೆ. ಹೀಗೆ ಮಾಡಿದಾಗ ದೇಹದಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಎದೆನೋವು, ಅನುಭವಕ್ಕೆ ಬರುವಷ್ಟು ಎದೆಬಡಿತ, ಸುಸ್ತು, ಏರುಗತಿಯ ಉಸಿರಾಟ, ಸಣ್ಣ ಕೆಲಸಕ್ಕೂ ಬೆವರುವುದು, ಈ ಮೊದಲು ಆರಾಮವಾಗಿ ಮಾಡುತ್ತಿದ್ದಷ್ಟು ಕೆಲಸ ಮಾಡಲು ಸಾಧ್ಯವಾಗದಿರುವುದು, ತಲೆಸುತ್ತು, ಪ್ರಜ್ಞೆ ಕಳೆದುಕೊಳ್ಳುವುದು, ಮೊದಲಾದ ಅನುಭವಗಳಾಗಬಹುದು. ವಿಶ್ರಾಂತ ಸ್ಥಿತಿಯಲ್ಲಿ ಶರೀರಕ್ಕೆ ರಕ್ತದ ಅಗತ್ಯ ಕಡಿಮೆ. ಆದರೆ ವ್ಯಾಯಾಮ ಮಾಡಿದರೆ, ಶ್ರಮದಾಯಕ ಕೆಲಸ ಮಾಡಿದರೆ, ಭಾರ ಹೊತ್ತು ನಡೆದರೆ ಶರೀರಕ್ಕೆ ಆಕ್ಸಿಜನ್ ಮತ್ತು ಪೋಷಕಾಂಶಗಳ ಅಗತ್ಯ ಹೆಚ್ಚುತ್ತದೆ. ಈ ಹೆಚ್ಚುವರಿ ಅಗತ್ಯಗಳನ್ನು ಈಗಾಗಲೇ ಸುಸ್ತಾಗಿರುವ ಹೃದಯ ಪೂರೈಸಲಾರದು. ಹೀಗಾಗಿ, ಹೃದಯ ದೌರ್ಬಲ್ಯ ಇರುವವರು ಯಾವುದಾದರೂ ಶ್ರಮದ ಕೆಲಸ ಮಾಡುವಾಗಲೇ ಹೃದಯಾಘಾತಕ್ಕೆ ತುತ್ತಾಗುತ್ತಾರೆ.

ಕಳೆದ ಎರಡು-ಮೂರು ದಶಕಗಳಲ್ಲಿ ಜಾಗತಿಕ ಪ್ರಗತಿ ವಿಪರೀತ ವೇಗೋತ್ಕರ್ಷ ಪಡೆದುಕೊಂಡಿದೆ. ಇದರಿಂದ ಜನಸಾಮಾನ್ಯರ ಜೀವನಶೈಲಿ ಅನೂಹ್ಯ ಬದಲಾವಣೆಗಳನ್ನು ಕಂಡಿದೆ. ಪ್ರಗತಿಯ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಬಹುತೇಕ ಎಲ್ಲ ವಯಸ್ಸಿನವರಿಗೂ ಅಗತ್ಯವಾಗಿದೆ. ಯುವಜನತೆಗೆ, ಮಧ್ಯವಯಸ್ಕರಿಗೆ ಇದು ಬದುಕಿನ ಭಾಗವೇ ಆಗಿಹೋಗಿದೆ. ಉದ್ಯೋಗದಲ್ಲಿನ ಮಾನಸಿಕ ಒತ್ತಡ, ಅದನ್ನು ಸಹಿಸಲು ಅನಾರೋಗ್ಯಕರ ಚಟಗಳಿಗೆ ಮೊರೆ ಹೋಗುವ ಜೀವನಶೈಲಿ, ಬದುಕಿನಲ್ಲಿ ಆದ್ಯತೆಗಳು ಬದಲಾದಂತೆ ಕಡಿಮೆಯಾಗುತ್ತಿರುವ ಕೌಟುಂಬಿಕ ಭದ್ರತೆ, ವೈಯಕ್ತಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ, ಬೀಸುಬೀಡಾದ ಆಹಾರ ಸೇವನೆ, ಸಾಮಾಜಿಕ ಬಾಂಧವ್ಯಗಳ ನಿರ್ವಹಣೆಯ ಹೆಸರಿನಲ್ಲಿ ಮದ್ಯಪಾನ, ಮಾದಕ ವಸ್ತುಗಳ ಚಟ. ಮೊದಲಾದುವು ಹೃದಯ ಮತ್ತು ಉಳಿದ ಅಂಗಗಳ ಮೇಲೆ ಹರಿಸುತ್ತಿರುವ ಒತ್ತಡ ಅನೇಕ ಬಾರಿ ಒಂದು ನಿರ್ಣಾಯಕ ಹಂತವನ್ನು ತಲುಪುತ್ತದೆ. ಮಹಾಭಾರತದ ಯಕ್ಷಪ್ರಶ್ನೆಯಲ್ಲಿನ ಕೊನೆಯ ಪ್ರಶ್ನೆಯ ಉತ್ತರದಂತೆ ಎಲ್ಲರಿಗೂ ಏನೇನೋ ಆಗುತ್ತಿದ್ದರೂ ನನಗೇನೂ ಆಗುವುದಿಲ್ಲ” ಎನ್ನುವ ಮನೋಭಾವದ ಮಂದಿ, ಅಂತಹುದೇ ಪರಿಣಾಮ ತಮಗೆ ಆಗುವವರೆಗೆ ಎಚ್ಚೆತ್ತುಕೊಳ್ಳುವುದಿಲ್ಲ ಎನ್ನುವುದು ನಮ್ಮ ಕಾಲದ ಬಹುದೊಡ್ಡ ವಿಪರ್ಯಾಸ.

ಹೃದಯದ ಆರೋಗ್ಯಕ್ಕೆ ಎರವಾಗುತ್ತಿರುವ ಸಮಸ್ಯೆಗಳ ಪಟ್ಟಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ತಡೆಗಟ್ಟಬಹುದಾದ ಅಂಶಗಳೇ ಹೆಚ್ಚಾಗಿ ಇರುವುದು ಆಶಾದಾಯಕ ಸಂಗತಿ. ಅದನ್ನು ಪಾಲಿಸಬಲ್ಲ ಮನಸ್ಥಿತಿಯ ಕೊರತೆಯೇ ಸದ್ಯಕ್ಕೆ ಪ್ರಮುಖ ಸಮಸ್ಯೆ. ತಂಬಾಕು, ಮದ್ಯಪಾನ, ಮಾದಕ ವಸ್ತುಗಳಿಂದ ದೂರವಿರುವುದು; ಮಧುಮೇಹ, ಅಧಿಕ ರಕ್ತದೊತ್ತಡಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು; ದೈನಂದಿನ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಪಾಲನೆ; ಆಹಾರ ಸೇವನೆಯಲ್ಲಿ ಶಿಸ್ತು; ದಿನಕ್ಕೆ ಏಳು ಗಂಟೆಗಳಿಗಿಂತ ಕಡಿಮೆಯಿಲ್ಲದಂತೆ ನಿದ್ರೆ; ಹಣ ಮತ್ತು ಆರೋಗ್ಯದ ನಿರ್ವಹಣೆಯನ್ನು ತೂಗಬಲ್ಲ ಉದ್ಯೋಗದ ಆಯ್ಕೆ; ಕೌಟುಂಬಿಕ ಸಂಬಂಧಗಳ ಆರೋಗ್ಯಕರ ಪೋಷಣೆ; ಮನಸ್ಸಿನ ದುಗುಡಗಳನ್ನು ಚರ್ಚಿಸಿ, ದಾರಿ ಕಾಣಿಸಬಲ್ಲ ಸ್ನೇಹಿತರ, ಬಂಧುಗಳ ಆಪ್ತವಲಯದ ನಿರ್ಮಾಣ; ವೈಯಕ್ತಿಕ ಆರೋಗ್ಯದ ನಿರ್ವಹಣೆಗೆ ನಿಯಮಿತ ವೈದ್ಯರೊಬ್ಬರ ಸಲಹೆಗಳು; ಮಾನಸಿಕ ನೆಮ್ಮದಿಗೆ ಬೇಕಾದ ಜೀವನಶೈಲಿ, ಮೊದಲಾದುವು ವಯಸ್ಸಿನ ಅಂತರವಿಲ್ಲದೆ ಪ್ರತಿಯೊಬ್ಬರ ಆವಶ್ಯಕತೆಗಳಾಗಬೇಕು. ಮೂವತ್ತರ ಹರೆಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳು ಎಚ್ಚರಿಕೆಯ ಗಂಟೆಗಳಾಗಿ, ದಿಕ್ಕು ತಪ್ಪುತ್ತಿರುವ ಬದುಕನ್ನು ಸರಿಯಾದ ಹಾದಿಯಲ್ಲಿ ತಿರುಗಿಸಬಲ್ಲ ಮಾರ್ಗದರ್ಶಿಯಾಗಬೇಕು. “ಪ್ರತಿಯೊಂದು ಸಾವು ಮಹತ್ವದ ಕಲಿಕೆಯೊಂದನ್ನು ನೀಡದಿದ್ದರೆ ನಿಮ್ಮ ತರಬೇತಿ ಅಪೂರ್ಣ” ಎನ್ನುವುದು ಈಗ ಕೇವಲ ವೈದ್ಯವ್ಯಾಸಂಗದ ಮಾತಾಗಿ ಉಳಿದಿಲ್ಲ. ಅದು ಪ್ರತಿಯೊಬ್ಬರಿಗೂ ಅನ್ವಯವಾಗಬೇಕಿದೆ.   

------------------

ದಿನಾಂಕ 6/11/2022 ರ ಉದಯವಾಣಿ ದಿನಪತ್ರಿಕೆಯ ಸಾಪ್ತಾಹಿಕ ಸಂಪದ ಪುರವಣಿಯ ಅಗ್ರ ಲೇಖನ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ