ಬುಧವಾರ, ನವೆಂಬರ್ 9, 2022


ಕೋವಿಡೋತ್ತರ ಕಾಲದಲ್ಲಿ ಹೃದಯದ ಆರೈಕೆ

ಡಾ. ಕಿರಣ್ ವಿ.ಎಸ್.

ವೈದ್ಯರು

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ “ಜಗತ್ತಿನ ಓಟಕ್ಕೆ ವೈ-2-ಕೆ ಎನ್ನುವ ಸಮಸ್ಯೆ ಎಲ್ಲಿ ತಡೆಗೋಡೆಯಾಗುತ್ತದೆಯೋ” ಎನ್ನುವ ಅನುಮಾನ ಕಾಡಿತ್ತು. ಆದರೆ, ಅದು ಸಮಸ್ಯೆಯೇ ಅಲ್ಲವೆಂಬಂತೆ ಪರಿಹಾರವಾದಾಗ ಮಾನವನ ಪ್ರಗತಿಯ ವೇಗಕ್ಕೆ ಬ್ರೇಕ್ ಹಾಕಬಲ್ಲ ಶಕ್ತಿ ಯಾವುದೂ ಇಲ್ಲ ಎನ್ನುವ ಹುಂಬತನ ಆವರಿಸಿತು. ಮನುಷ್ಯನ ಈ “ಹ್ಯುಬ್ರಿಸ್” ಅನ್ನು ನಾಶ ಮಾಡಿದ್ದು ಒಂದು ಯಃಕಶ್ಚಿತ್ ವೈರಸ್. ಜೀವಜಗತ್ತಿನ ಅತ್ಯಂತ ಪ್ರಾಥಮಿಕ ಅಂಶವಾದ, “ಅತ್ತ ಜೀವವೂ ಅಲ್ಲ; ಇತ್ತ ನಿರ್ಜೀವವೂ ಅಲ್ಲ” ಎನ್ನುವ ಗೋಡೆಯ ಮೇಲೆ ಕೂತಿರುವ, ಜೀವಂತ ಕೋಶಗಳ ನೆರವಿಲ್ಲದೆ ಏನನ್ನೂ ಮಾಡಲಾಗದ ಒಂದು ಕ್ಷುಲ್ಲಕ ವೈರಸ್ ಜಗತ್ತಿನ ಪ್ರಗತಿಯ ನಾಗಾಲೋಟಕ್ಕೆ ಕಡಿವಾಣ ಬಿಗಿದು, ಎಲ್ಲರ ಎದೆಯಲ್ಲಿ ಅಳುಕು ಮೂಡಿಸಿ, ಪ್ರಪಂಚವನ್ನು ಸ್ತಬ್ಧಗೊಳಿಸಿದ್ದು ನಮ್ಮ ಕಾಲಘಟ್ಟದ ಅಚ್ಚರಿಗಳಲ್ಲಿ ಒಂದು. ನಮ್ಮ ಹಿರಿಯರು ಅವರ ಕಾಲದ ಇನ್ಫ್ಲುಎನ್ಝಾ ಎಂಬ ಮಹಾಮಾರಿಯ ಬಗ್ಗೆ ನಮಗೆ ಹೇಳಿದ್ದರು. ನಾವು ಕೋವಿಡ್-19 ಎನ್ನುವ ಜಾಗತಿಕ ವಿಪತ್ತಿನ ಬಗ್ಗೆ ನಮ್ಮ ಮುಂದಿನ ತಲೆಮಾರಿಗೆ ಹೇಳುವಂತಾದೆವು.

ಆರಂಭದಲ್ಲಿ ಶ್ವಾಸನಾಳಗಳ ಲಘು ಕಾಯಿಲೆ ಎಂದು ಭಾವಿಸಲಾಗಿದ್ದ ಕೋವಿಡ್-19, ಕೆಲದಿನಗಳಲ್ಲೇ ಶ್ವಾಸಕೋಶಗಳನ್ನು ಕಾಡುವ ನ್ಯುಮೋನಿಯಾ ಎಂದು ತಿಳಿದುಬಂದಿತು. ಕಾಲಕ್ರಮೇಣ ಅದರ ಪರಿಣಾಮಗಳು ಬೆಳಕಿಗೆ ಬರುತ್ತಿದ್ದಂತೆ, ಕೋವಿಡ್-19 ಲೋಳೆಪದರ, ಹೃದಯ, ಮೂತ್ರಪಿಂಡ ಮೊದಲಾಗಿ ದೇಹದ ಅನೇಕ ಅಂಗಗಳನ್ನು ಕಾಡಬಲ್ಲದು ಎಂದು ಅರಿವಾಯಿತು. ಆಯಾ ವ್ಯಕ್ತಿಯ ರೋಗ ನಿರೋಧಕ ಶಕ್ತಿಯ ಮೇರೆಗೆ ಕೋವಿಡ್-19 ಕಾಯಿಲೆಯ ವ್ಯಾಪ್ತಿ ನಿರ್ಧಾರವಾಗುತ್ತದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ಒಂದೇ ಕಾಯಿಲೆ ಇಬ್ಬರು ವಿಭಿನ್ನ ವ್ಯಕ್ತಿಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಪ್ರಕಟವಾಗುತ್ತದೆ ಎಂಬುದು ಹೆಚ್ಚಿನ ಆತಂಕಕ್ಕೆ ಕಾರಣವಾಯಿತು. ಮಧುಮೇಹ, ಅಧಿಕ ರಕ್ತದೊತ್ತಡ, ಬೊಜ್ಜು ಮೊದಲಾದುವು ಕೋವಿಡ್-19 ರೋಗಿಗಳ ಅಪಾಯದ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ. ಇಷ್ಟಾಗಿಯೂ, ಕೋವಿಡ್-19 ಕಾಯಿಲೆಯ ಕಾರಣದಿಂದ ಸಾವನ್ನಪ್ಪುವವರ ಪ್ರತಿಶತ ಪ್ರಮಾಣ ಅಲ್ಪವೇ ಇತ್ತು. ಒಮ್ಮೆ ಈ ಕಾಯಿಲೆ ಮೇಲ್ನೋಟಕ್ಕೆ ಗುಣವಾದ ನಂತರ ಮಾಜಿರೋಗಿಗಳ ಮೇಲೆ ಆಗಬಹುದಾದ ದೀರ್ಘಕಾಲಿಕ ಪರಿಣಾಮಗಳೇನು ಎಂಬುದು ಯಾರಿಗೂ ತಿಳಿಯುವ ಸಾಧ್ಯತೆಯೇ ಇರಲಿಲ್ಲ. ಹೀಗಾಗಿ, ವೈದ್ಯಕೀಯ ಸಂಶೋಧಕರು, ವೈದ್ಯವಿಜ್ಞಾನಿಗಳು ನಿರಂತರವಾಗಿ ಕೋವಿಡ್-19 ರೋಗಿಗಳ ಬೆನ್ನು ಹತ್ತಿಯೇ ಇದ್ದರು.

ಕೋವಿಡ್-19 ಹೃದಯದ ಮೇಲೆ ಯಾವ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿಯುವ ಮುನ್ನ ಹೃದಯದ ರಚನೆಯ ಬಗ್ಗೆ ಅರಿಯಬೇಕು. ಶರೀರದಲ್ಲಿನ ಪ್ರಮುಖ ಅಂಗಗಳ ಪೈಕಿ ಅತ್ಯಂತ ಸರಳ ಅಂಗ ಹೃದಯ. ಅದು ಮುಖ್ಯವಾಗಿ ಕೆಲಸ ಮಾಡುವುದು ಯಾಂತ್ರಿಕ ಪಂಪ್ ಮಾದರಿಯಲ್ಲಿ. ಪಂಪ್ ಕೆಲಸ ಮಾಡಲು ಬೇಕಾದ ವಿದ್ಯುತ್ ಪೂರೈಕೆ ಕೂಡ ಹೃದಯದಲ್ಲೇ ಆಗುತ್ತದೆ. ರಚನೆಯ ದೃಷ್ಟಿಯಿಂದಲೂ ಹೃದಯ ಬಹಳ ಸರಳ. ರಕ್ತ ಸಂಗ್ರಹಿಸುವ ಎರಡು ಕಕ್ಷೆಗಳು, ರಕ್ತವನ್ನು ಮುಂದಕ್ಕೆ ದೂಡುವ ಎರಡು ಪಂಪ್ಗಳು, ಈ ಕಕ್ಷೆಗಳನ್ನು ಮತ್ತು ಪಂಪ್ಗಳನ್ನು ಪ್ರತ್ಯೇಕವಾಗಿಸುವ ಎರಡು ಗೋಡೆಗಳು, ರಕ್ತಸಂಚಾರವನ್ನು ಏಕಮುಖವಾಗಿ ನಿರ್ವಹಿಸುವ ನಾಲ್ಕು ಕವಾಟಗಳು – ಇವು ಹೃದಯದ ಪ್ರಮುಖ ಭಾಗಗಳು. ಹೃದಯದ ಬಲಭಾಗದ ಪಂಪ್ ತನ್ನ ಪಕ್ಕದಲ್ಲೇ ಇರುವ ಶ್ವಾಸಕೋಶಗಳಿಗೆ ರಕ್ತ ಹರಿಸಿದರೆ, ಎಡಭಾಗದ ಪಂಪ್ ತಲೆಯ ಶಿಖರದಿಂದ ಕಾಲಿನ ತುದಿಯವರೆಗೆ ಎಲ್ಲೆಡೆ ರಕ್ತವನ್ನು ತಲುಪಿಸುತ್ತದೆ. ಹೀಗಾಗಿ, ಹೃದಯದ ಬಲಭಾಗದ ಪಂಪ್ಗಿಂತ ಎಡಭಾಗದ ಪಂಪ್ ಸುಮಾರು ಐದಾರು ಪಟ್ಟು ಬಲಿಷ್ಠವಾದ ಸ್ನಾಯುಗಳನ್ನು ಹೊಂದಿದೆ. ನಮ್ಮ ಶರೀರದ ಬಹುತೇಕ ಜೀವಕೋಶಗಳ ಕೆಲಸಕ್ಕೆ ಅಗತ್ಯವಾದ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಪೂರೈಸುವ ಪ್ರಮುಖ ಕ್ರಿಯೆಯನ್ನು ನಿರ್ವಹಿಸುವುದು ಹೃದಯ. ಅಂತೆಯೇ, ಜೀವಕೋಶಗಳು ಸೆಳೆದುಕೊಂಡ ಪೋಷಕಾಂಶ ಮತ್ತು ಆಕ್ಸಿಜನ್ ಅನ್ನು ರಕ್ತದಲ್ಲಿ ಮರುಪೂರಣ ಮಾಡಲು ನೆರವಾಗುವುದೂ ಹೃದಯವೇ. ಹೀಗೆ, ಹೃದಯದ್ದು ಗ್ರಾಹಕರಿಂದ ಹಣ ಸಂಗ್ರಹಿಸಿ ಇತರ ಗ್ರಾಹಕರಿಗೆ ನೀಡುವ ಬ್ಯಾಂಕಿನ ಕ್ಯಾಶಿಯರ್ ಕೆಲಸ.

ಬ್ಯಾಂಕಿನ ಕ್ಯಾಶಿಯರ್ ದಿನವೂ ಲಕ್ಷಗಟ್ಟಲೇ ಹಣವನ್ನು ನಿರ್ವಹಿಸುತ್ತಿದ್ದರೂ ಅವರ ವೈಯಕ್ತಿಕ ಅಗತ್ಯಗಳಿಗೆ ಅದನ್ನು ಬಳಸುವಂತಿಲ್ಲ. ಬದಲಿಗೆ ಕ್ಯಾಶಿಯರ್ ತಮ್ಮ ಕೆಲಸಕ್ಕೆ ಸಂಬಳ ಪಡೆಯುತ್ತಾರೆ. ಹೀಗೆಯೇ, ಹೃದಯ ಇಡೀ ಶರೀರದ ಆಕ್ಸಿಜನ್ ಅಗತ್ಯ ಪೂರೈಸುವ ರಕ್ತವನ್ನು ಸರಬರಾಜು ಮಾಡಿದರೂ, ತನ್ನ ಸ್ವಂತ ಕೆಲಸಗಳ ನಿರ್ವಹಣೆಗೆ ಅದನ್ನು ಬಳಸಿಕೊಳ್ಳುವಂತಿಲ್ಲ. ಅದಕ್ಕೆ ಹೃದಯಕ್ಕೆ ರಕ್ತ ಸರಬರಾಜು ಮಾಡುವ ಪ್ರತ್ಯೇಕ ರಕ್ತನಾಳಗಳಿವೆ. ಹೃದಯದ ಮೇಲ್ಭಾಗದಿಂದ ಆರಂಭಿಸಿ ವ್ಯಾಪಿಸುವ, ಹೃದಯದ ಮೇಲಿಟ್ಟ ಕಿರೀಟದಂತೆ ಕಾಣುವ ಈ ರಕ್ತನಾಳಗಳಿಗೆ ಕರೊನರಿ ರಕ್ತನಾಳಗಳು ಎಂದು ಹೆಸರು.

ಕೋವಿಡ್-19 ವೈರಸ್ ಹೃದಯದ ಯಾವುದೇ ಭಾಗವನ್ನಾದರೂ ಅಕ್ರಮಿಸಬಲ್ಲದಾದರೂ ಅದು ಮುಖ್ಯವಾಗಿ ಘಾಸಿ ಮಾಡುವುದು ಹೃದಯದ ಮಾಂಸಖಂಡ ಮತ್ತು ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳನ್ನು. ಕೋವಿಡ್-19 ಮೂಲದಿಂದ ಶರೀರದಲ್ಲಿ ಉತ್ಪತ್ತಿಯಾಗುವ ಹಲವಾರು ಉರಿಯೂತಕಾರಕ ರಾಸಾಯನಿಕಗಳು ಈ ಘಾಸಿಗೆ ಕಾರಣ. ಇದಲ್ಲದೆ, ಕೋವಿಡ್-19 ವೈರಸ್ ನೇರವಾಗಿ ಹೃದಯದ ಮಾಂಸಖಂಡಗಳ ಮೇಲೆ ಧಾಳಿ ಮಾಡಬಲ್ಲದು. ಈ ಧಾಳಿಯಿಂದ ಹೃದಯದ ಮಾಂಸಖಂಡಗಳ ಕ್ಷಮತೆ ಕುಗ್ಗುತ್ತದೆ. ಈ ಮಾಂಸಖಂಡಗಳ ಒತ್ತುವಿಕೆ ಕಡಿಮೆಯಾದಾಗ ಹೃದಯ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಪೂರೈಸಲು ವಿಫಲವಾಗುತ್ತದೆ. ಈ ಸ್ಥಿತಿಯನ್ನು ಹೃದಯ ವೈಫಲ್ಯ (heart failure) ಎನ್ನಬಹುದು. ಕೆಲವೊಮ್ಮೆ ಅದರ ಕೆಲಸ ಹಠಾತ್ತಾಗಿ ನಿಂತು ಹೃದಯ ಸ್ತಂಭನ (cardiac arrest) ಸಂಭವಿಸಬಹುದು.

ಕೋವಿಡ್-19 ಕಾರಣದಿಂದ ಹೃದಯಕ್ಕೆ ರಕ್ತ ಪೂರೈಸುವ ಕರೋನರಿ ರಕ್ತನಾಳಗಳು ಕೂಡ ತೊಂದರೆಗೆ ಒಳಗಾಗುತ್ತವೆ. ಈ ರಕ್ತನಾಳಗಳು ಅಗತ್ಯ ಆಕ್ಸಿಜನ್ ಮತ್ತು ಪೋಷಕಾಂಶಗಳನ್ನು ರಕ್ತದ ಮೂಲಕ ಹೃದಯಕ್ಕೆ ತಲುಪಿಸುವ ಏಕೈಕ ಮಾರ್ಗ. ಯಾವುದೇ ಕಾರಣದಿಂದ ಈ ರಕ್ತನಾಳಗಳ ಒಳಭಾಗ ಪೂರ್ತಿಯಾಗಿ ಕಟ್ಟಿಕೊಂಡು ರಕ್ತಸಂಚಾರ ಸಾಧ್ಯವಿಲ್ಲದಂತಾದರೆ, ಆಗ ಹೃದಯದ ಸ್ನಾಯುಗಳಿಗೆ ಆಕ್ಸಿಜನ್ ಸರಬರಾಜು ನಿಂತುಹೋಗುತ್ತದೆ. ಒಂದು ಕ್ಷಣವೂ ಬಿಡುವಿಲ್ಲದಂತೆ ಕೆಲಸ ಮಾಡುವ ಹೃದಯಕ್ಕೆ ನಿರಂತರವಾಗಿ ಆಕ್ಸಿಜನ್ ಸರಬರಾಜು ಆಗುತ್ತಲೇ ಇರಬೇಕು. ಇದು ಕೆಲವು ನಿಮಿಷಗಳ ಕಾಲ ಸಂಪೂರ್ಣವಾಗಿ ನಿಂತುಹೋದರೆ ಹೃದಯದ ಸ್ನಾಯುಗಳು ಇಂಚಿಂಚಾಗಿ ಮರಣಿಸುತ್ತವೆ. ಇದು ಒಂದು ಹಂತ ತಲುಪಿದಾಗ ಹೃದಯದ ಕಾರ್ಯಕ್ಷಮತೆ ಹಠಾತ್ತಾಗಿ ಇಳಿದುಹೋಗುತ್ತದೆ. ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ತೀವ್ರವಾಗಿ ಕುಂದುತ್ತದೆ. ಆಗ ಶರೀರದ ಯಾವ ಅಂಗಕ್ಕೂ ರಕ್ತದ ಸರಬರಾಜು ಸರಿಯಾಗಿ ಆಗುವುದಿಲ್ಲ; ಎಲ್ಲಾ ಅಂಗಗಳೂ ಘಾಸಿಗೊಳ್ಳುತ್ತವೆ. ಈ ಪ್ರಕ್ರಿಯೆಗೆ ಹೃದಯಾಘಾತ ಎಂದು ಹೆಸರು. ಹೃದಯದ ಎಡಭಾಗಕ್ಕೆ ರಕ್ತ ಪೂರೈಸುವ ಕರೊನರಿ ರಕ್ತನಾಳ ಸಂಪೂರ್ಣವಾಗಿ ಕಟ್ಟಿಕೊಂಡರೆ ಹೃದಯಾಘಾತದ ಪ್ರಕ್ರಿಯೆ ವೇಗವಾಗಿ ಆಗುತ್ತದೆ. ಹೀಗೆ ಕೆಲವೇ ನಿಮಿಷಗಳಲ್ಲಿ ಶರೀರವನ್ನು ಸ್ತಬ್ಧಗೊಳಿಸಬಲ್ಲ ಇದನ್ನು ತೀವ್ರ ಹೃದಯಾಘಾತ ಎನ್ನಬಹುದು. ಇದಕ್ಕೆ ಪ್ರತಿಯಾಗಿ, ಕರೊನರಿ ರಕ್ತನಾಳಗಳು ಭಾಗಶಃ ಕಟ್ಟಿಕೊಂಡರೆ, ಆಗ ರಕ್ತಸಂಚಾರ ಕ್ರಮೇಣವಾಗಿ ಕಡಿಮೆ ಆಗುತ್ತದೆ; ಹೃದಯಾಘಾತದ ಪ್ರಕ್ರಿಯೆಗೆ ದಿನಗಳಿಂದ ವಾರಗಳ ಕಾಲ ಹಿಡಿಯುತ್ತದೆ. ಕೋವಿಡ್-19 ಆಘಾತಕ್ಕೆ ಒಳಗಾದ ವ್ಯಕ್ತಿಯಲ್ಲಿ ಕರೊನರಿ ರಕ್ತನಾಳಗಳ ಒಳಗಿನ ಲೋಳೆಪದರಗಳು ಹಾನಿಗೊಂಡು ರಕ್ತಸಂಚಾರಕ್ಕೆ ಅಡ್ಡಿಯಾಗಬಹುದು. ಈ ಸಂದರ್ಭಗಳಲ್ಲಿ ಮೇಲೆ ತಿಳಿಸಿದ ಎರಡೂ ಬಗೆಯ ಹೃದಯಾಘಾತ ಸಂಭವಿಸಬಹುದು. ಕೋವಿಡ್-19 ರೋಗಿಗೆ ಈ ಮೊದಲೇ ಹೃದಯದ ಸಮಸ್ಯೆಗಳು ಇದ್ದರೆ ಅಪಾಯ ಮತ್ತೂ ಹೆಚ್ಚು.  

“ದ್ರವರೂಪದ ಅಂಗಾಂಶ” ಎನ್ನಲಾಗುವ ರಕ್ತ ದೇಹದ ರಕ್ತನಾಳಗಳ ಒಳಗೆ ಸರಾಗವಾಗಿ ಹರಿಯುತ್ತದೆ. ಆದರೆ, ಯಾವುದೇ ರಕ್ತನಾಳಕ್ಕೆ ಘಾಸಿಯಾಗಿ, ರಕ್ತ ಹೊರಚಿಮ್ಮಿದ ಕ್ಷಣವೇ ಅದು ಹೆಪ್ಪಾಗುವಂತಹ ವ್ಯವಸ್ಥೆ ಶರೀರದಲ್ಲಿದೆ. ಈ ರೀತಿ ರಕ್ತ ಹೆಪ್ಪಾಗುವುದರಿಂದ ರಕ್ತನಾಳಗಳಿಗೆ ಆದ ಗಾಯಕ್ಕೆ ಪಟ್ಟಿ ಕಟ್ಟಿದಂತಾಗಿ, ರಕ್ತಸ್ರಾವ ಕಡಿಮೆಯಾಗುತ್ತದೆ. ಹೀಗೆ ಶರೀರ ತನ್ನ ಅಸ್ತಿತ್ವದಲ್ಲಿ ಪ್ರಮುಖ ಪಾತ್ರ ವಹಿಸುವ ಜೀವನಾಧಾರವಾದ ರಕ್ತವನ್ನು ಹೆಚ್ಚು ಕಳೆದುಕೊಳ್ಳದಂತೆ ಕಾಪಾಡುತ್ತದೆ. ಆದರೆ, ಕೋವಿಡ್-19 ಕಾಯಿಲೆಯಲ್ಲಿ ರಕ್ತನಾಳಗಳ ಒಳಗಿನ ಲೋಳೆಪದರದಲ್ಲಿ ಸಮಸ್ಯೆಯಾಗಿ, ಯಾವುದೇ ರೀತಿಯ ಬಾಹ್ಯ ಕಾರಣವಿಲ್ಲದಿದ್ದರೂ ಅವುಗಳ ಒಳಗೆ ಹರಿಯುತ್ತಿರುವ ರಕ್ತ ತಂತಾನೇ ಹೆಪ್ಪುಗಟ್ಟುವಂತಾಗುತ್ತದೆ. ಇದರಿಂದ ಶರೀರದಲ್ಲಿ ಸರಾಗವಾಗಿ ಹರಿಯುವ ರಕ್ತಕ್ಕೆ ತಡೆಗೋಡೆ ಕಟ್ಟಿದಂತಾಗಿ, ರಕ್ತಸಂಚಾರ ಕಡಿಮೆಯಾಗುತ್ತಾ, ಕಡೆಗೆ ಸ್ಥಗಿತವಾಗುತ್ತದೆ. ಇದು ಯಾವುದೇ ಅಂಗದಲ್ಲಿ ಸಂಭವಿಸಿದರೂ ಬಹಳ ಅಪಾಯಕಾರಿ. ಒಂದು ವೇಳೆ ಈ ಪ್ರಕ್ರಿಯೆ ಕರೊನರಿ ರಕ್ತನಾಳಗಳಲ್ಲಿ ನಡೆದರೆ ಹೃದಯಾಘಾತವಾಗುತ್ತದೆ.

ಕೋವಿಡ್-19 ರೋಗಿಗಳಲ್ಲಿ ಹೃದಯದ ತೊಂದರೆ ಕೇವಲ ವೈರಸ್ ನೇರ ಧಾಳಿ ಅಥವಾ ಉರಿಯೂತದ ಮೂಲಕವೇ ಆಗಬೇಕೆಂದಿಲ್ಲ. ಕೆಲವೊಮ್ಮೆ ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಅಡ್ಡಪರಿಣಾಮಗಳು ಹೃದಯವನ್ನು ಕಾಡಬಹುದು. ಕೋವಿಡ್-19 ಕಾರಣದಿಂದ ಇತರ ಅಂಗಾಂಗಳು ಬಳಲಿದಾಗ, ಹೃದಯದ ಕೆಲಸಕ್ಕೆ ಅವುಗಳ ಬೆಂಬಲ ಕಡಿಮೆಯಾಗಿ, ಹೃದಯದ ಕಾರ್ಯಕ್ಷಮತೆ ಕ್ಷೀಣಿಸಬಹುದು. ಕೋವಿಡ್-19 ಮೂತ್ರಪಿಂಡಗಳನ್ನು ಘಾಸಿ ಮಾಡಿದಾಗ ಶರೀರದ ಲವಣಗಳ ಮಟ್ಟದಲ್ಲಿ ತೀವ್ರ ಬದಲಾವಣೆಗಳಾಗಿ, ಅದರಿಂದ ಹೃದಯದ ಲಯ ಏರುಪೇರಾಗಬಹುದು. ಹೀಗೆ, ಪರೋಕ್ಷ ರೀತಿಯಲ್ಲೂ ಕೋವಿಡ್-19 ಹೃದಯದ ಆರೋಗ್ಯದ ಮೇಲೆ ಪರಿಣಾಮಗಳನ್ನು ಉಂಟು ಮಾಡುತ್ತದೆ.

ಹೀಗೆ, ಒಟ್ಟಾರೆ ಲೆಕ್ಕಾಚಾರದಲ್ಲಿ ಕೋವಿಡ್-19 ಪೀಡಿತರಾಗಿ ಆಸ್ಪತ್ರೆಯಲ್ಲಿ ದಾಖಲಾದ ನೂರು ರೋಗಿಗಳ ಪೈಕಿ 12 ಮಂದಿಗೆ ಹೃದಯದ ಸಮಸ್ಯೆ ಉಂಟಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದು ಈ ಹಿಂದೆ ಹೃದಯದ ಕಾಯಿಲೆ ಇಲ್ಲದವರಲ್ಲಿ ಉಂಟಾದ ಹೊಸ ಸಮಸ್ಯೆ ಇದ್ದಿರಬಹುದು; ಅಥವಾ ಈ ಮೊದಲೇ ಹೃದಯದ ಕಾಯಿಲೆಗಳಿದ್ದವರಲ್ಲಿ ತೀವ್ರಗೊಂಡ ಸಮಸ್ಯೆ ಆಗಿದ್ದಿರಬಹುದು. ಕೋವಿಡ್-19 ಕಾಯಿಲೆ ಲಘು ಪ್ರಮಾಣದಲ್ಲಿ ಆಗಿ, ಆಸ್ಪತ್ರೆ ಸೇರುವ ಅಗತ್ಯ ಇಲ್ಲದವರಲ್ಲಿ ಎಷ್ಟು ಮಂದಿಗೆ ಹೃದಯದ ಸಮಸ್ಯೆ ಆಗಿದ್ದಿರಬಹುದೆಂದು ಅಂದಾಜು ಮಾಡಬಹುದಾದ ಸಾಧ್ಯತೆ ಇಲ್ಲ. ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದ ಕೋವಿಡ್-19 ರೋಗಿಗಳಲ್ಲಿ ಮರಣದ ಪ್ರಮಾಣ ಪ್ರತಿಶತ 2 ರಿಂದ 3 ಆಗಿದ್ದರೆ, ಕೋವಿಡ್-19 ಕಾರಣದಿಂದ ಹೃದಯದ ಸಮಸ್ಯೆ ಉಂಟಾದವರಲ್ಲಿ ಮರಣದ ಪ್ರಮಾಣ ಸುಮಾರು 10-11 ಪ್ರತಿಶತ. ಕೋವಿಡ್-19 ರಿಂದ ಹೃದಯಕ್ಕೆ ಆಗುವ ಹಾನಿಯಿಂದ ಶರೀರದ ಎಲ್ಲ ಅಂಗಗಳಲ್ಲೂ ರಕ್ತಸಂಚಾರಕ್ಕೆ ಅಡ್ಡಿಯಾಗಿ, ಕಾಲಾನುಸಾರ ಇತರ ಅಂಗಗಳಿಗೂ ಘಾಸಿಯಾಗುತ್ತದೆ. ಇಂತಹ ಯಾವುದೇ ಅಂಗದ ಕಾರ್ಯವೈಫಲ್ಯದಿಂದ ಸಾವುಂಟಾದರೂ ಅದಕ್ಕೆ ಮೂಲ ಕಾರಣ ಕೋವಿಡ್-19 ಮತ್ತು ಅದರಿಂದ ಉಂಟಾದ ಹೃದಯದ ಕಾಯಿಲೆ ಎಂದೇ ದಾಖಲಾಗುತ್ತದೆ.

ಕೋವಿಡ್-19 ಕಾಯಿಲೆ ತೀವ್ರವಾಗಿದ್ದಾಗ ಕಾಣಿಸಿಕೊಳ್ಳುವ ಹೃದಯ ಸಂಬಂಧಿ ಸಮಸ್ಯೆಗಳ ಚಿಕಿತ್ಸೆ ಅದೇ ಕಾಲಕ್ಕೆ ನಡೆದುಹೋಗುತ್ತದೆ. ಆದರೆ, ಕೋವಿಡ್-19 ಕಾಯಿಲೆ ಲಘು ಪ್ರಮಾಣದಲ್ಲಿ ಇದ್ದವರಿಗೆ, ಅಥವಾ ಕಾಯಿಲೆಯ ಚಿಕಿತ್ಸೆ ಪಡೆದು ಗುಣವಾದವರ ಪೈಕಿ ಹೃದಯದ ಕತೆಯೇನು? ಇದೊಂದು ಕ್ಲಿಷ್ಟಕರ ಸಮಸ್ಯೆ. ಕೋವಿಡ್-19 ಉಳ್ಳವರಲ್ಲಿ ಹೃದಯದ ಸಮಸ್ಯೆ ಇದೆಯೋ ಇಲ್ಲವೋ ಎಂದು ತಿಳಿಯಲು ರಕ್ತದ ಕೆಲವು ಪರೀಕ್ಷೆಗಳು, ಇಸಿಜಿ ನಕ್ಷೆ, ಹೃದಯದ ಸ್ಕ್ಯಾನಿಂಗ್ ಮೊದಲಾದ ಪರೀಕ್ಷೆಗಳು ಸಹಾಯಕ. ಅದರೆ ಇವೆಲ್ಲವೂ ಕೋವಿಡ್-19 ರಿಂದ ಹೃದಯದ ಅನಾರೋಗ್ಯ ಒಂದು ಹಂತಕ್ಕೆ ಬಂದ ಮೇಲೆ ಕಾಣುವ ಚಿಹ್ನೆಗಳು. ಒಂದು ವೇಳೆ ಆರಂಭದಲ್ಲಿ ಪತ್ತೆಯಾಗಬಲ್ಲ ಹಂತಕ್ಕಿಂತ ಕಡಿಮೆ ಇದ್ದು, ಕಾಲಕ್ರಮೇಣ ನಿಧಾನವಾಗಿ ಏರುಗತಿಗೆ ಹೋದರೆ? ಒಂದು ಉದಾಹರಣೆಯನ್ನು ನೋಡೋಣ: ಕೋವಿಡ್-19 ಕಾಯಿಲೆ ಹೃದಯದ ಸಮಸ್ಯೆಯ ಕಿಡಿ ಹಚ್ಚಿದೆ; ಆದರೆ ಆ ಕಿಡಿ ಇನ್ನೂ ಬೆಂಕಿಯ ಸ್ವರೂಪ ಪಡೆದಿಲ್ಲ. ಬೆಂಕಿಯನ್ನು ಪತ್ತೆ ಹಚ್ಚುವ ಪರೀಕ್ಷೆಗಳಿಗೆ ಈ ಕಿಡಿಯನ್ನು ಗುರುತಿಸುವ ಸಾಮರ್ಥ್ಯವಿಲ್ಲ. ಕೋವಿಡ್-19 ಚಿಕಿತ್ಸೆಯ ನಂತರವೂ ಈ ಕಿಡಿ ಸಂಪೂರ್ಣವಾಗಿ ಆರಿಲ್ಲ. ಇದು ಕಾಲಕ್ರಮೇಣ ಬೆಳೆಯುತ್ತಾ ಒಂದು ದಿನ ಬೆಂಕಿಯ ಸ್ವರೂಪ ಪಡೆದುಕೊಳ್ಳುತ್ತದೆ. ಆಗ “ಈ ಬೆಂಕಿಗೆ ಕೋವಿಡ್-19 ಕಾಯಿಲೆ ಕಾರಣ” ಎಂದು ಹೇಳಬಹುದೇ? ಎಷ್ಟು ರೋಗಿಗಳಲ್ಲಿ ಈ ಕಿಡಿ ಉಳಿದಿರಬಹುದು? ಅದನ್ನು ಪತ್ತೆ ಮಾಡುವುದು ಶಕ್ಯವೇ? ಯಾರಲ್ಲಿ ದೀರ್ಘಕಾಲಿಕ ಹೃದಯದ ಸಮಸ್ಯೆ ಉಂಟಾಗಬಹುದೆಂದು ನಿರ್ಧರಿಸುವುದು ಹೇಗೆ? ಇದು ತಜ್ಞರನ್ನು ಕಾಡುತ್ತಿರುವ ಸಮಸ್ಯೆ.

“ಕೋವಿಡ್-19 ಕಾಯಿಲೆಯನ್ನು ಗೆದ್ದೆವೆಂದು ಬೀಗುವುದು ಬೇಡ” ಎಂದು ಸಂಶೋಧಕರ ಅಭಿಮತ. ಕೋವಿಡ್-19 ಯಾವುದೇ ಪ್ರಮಾಣದಲ್ಲಿ ಬಂದಿದ್ದರೂ ಅಂತಹ ರೋಗಿಗಳು ತಮ್ಮ ಹೃದಯದ ಬಗ್ಗೆ ವಿಶೇಷ ನಿಗಾ ವಹಿಸುವಂತೆ ಸಲಹೆ ಮಾಡಲಾಗಿದೆ. ಕೋವಿಡ್-19 ಕಾಯಿಲೆಯ ವೇಳೆ ಹೊಸದಾಗಿ ಹೃದಯ ಸಮಸ್ಯೆ ಕಾಣಿಸಿಕೊಂಡವರು ಹೃದಯ-ಸಂಬಂಧಿ ಔಷಧಗಳನ್ನು ದೀರ್ಘಕಾಲಿಕವಾಗಿ ತೆಗೆದುಕೊಳ್ಳುವುದು; ಈ ಹಿಂದೆಯೇ ಹೃದಯದ ಸಮಸ್ಯೆ ಇದ್ದವರಲ್ಲಿ ಕೋವಿಡ್-19 ಕಾಯಿಲೆ ಬಂದು ಗುಣವಾದವರು ಸಾಮಾನ್ಯಕ್ಕಿಂತ ಹೆಚ್ಚಿನ ನಿಗಾ ವಹಿಸುವುದು, ಕಾಲಕಾಲಕ್ಕೆ ಪರೀಕ್ಷೆಗಳನ್ನು ಮಾಡಿಸುವುದು ಸೂಕ್ತ ಎನ್ನುವ ಮಾರ್ಗಸೂಚಿಗಳಿವೆ. ಕೋವಿಡ್-19 ಕಾಯಿಲೆಯಿಂದ ಗುಣವಾದ ಯಾರೊಬ್ಬರೂ ಹೃದಯಕ್ಕೆ ಒತ್ತಡ ನೀಡುವಂತಹ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ಮುನ್ನ, ಅಥವಾ ತೀವ್ರ ಮಟ್ಟದ ವ್ಯಾಯಾಮಗಳನ್ನು ಮಾಡುವ ಮುನ್ನ ಹೃದ್ರೋಗ ತಜ್ಞರನ್ನು ಕಂಡು, ಅಗತ್ಯ ಪರೀಕ್ಷೆಗಳನ್ನು ಮಾಡಿಸಿ, ಸಲಹೆ ಪಡೆಯುವುದು ಉತ್ತಮ.

ಇನ್ನೆಷ್ಟು ಕಾಲ ಕೋವಿಡ್-19 ಕಾಯಿಲೆಯ ಪರಿಣಾಮಗಳಿಗೆ ರೋಗಿಗಳು ಹೆದರಬೇಕಾಗುತ್ತದೆ? ಇದಕ್ಕೆ ತಜ್ಞರ ಬಳಿ ಸದ್ಯಕ್ಕೆ ಉತ್ತರವಿಲ್ಲ. ಕೋವಿಡ್-19 ಅನುಭವಿಸಿ ಕೆಲ ತಿಂಗಳು ಕಳೆದರೂ ಸರಾಗವಾಗಿ ಉಸಿರಾಡಲಾಗದ, ಸಣ್ಣಪುಟ್ಟ ಶ್ರಮದ ಕೆಲಸಗಳನ್ನು ಮಾಡಲಾಗದ, ಎದೆಯಲ್ಲಿ ಹಿಡಿದಂತಾಗುವ ಅನುಭವದ, ಎದೆಬಡಿತ ವಿನಾಕಾರಣ ಹೆಚ್ಚಾಗುವುದನ್ನು ಗ್ರಹಿಸಿರುವ ಬಹಳಷ್ಟು ಮಂದಿ ಇದ್ದಾರೆ. ಈ ಕಾಯಿಲೆಯ ಗುಣಲಕ್ಷಣಗಳ ಬಗ್ಗೆ ಯಾವುದೇ ಪೂರ್ವಭಾವಿ ಅರಿವಿಲ್ಲದ ವೈದ್ಯಕೀಯ ಲೋಕ ಪಕ್ಕಾ ಉತ್ತರಗಳನ್ನು ನೀಡುವ ಸ್ಥಿತಿಯಲ್ಲಿಲ್ಲ. ಕೋವಿಡ್-ಪೂರ್ವ ಕಾಲಕ್ಕಿಂತ ಕೋವಿಡೋತ್ತರ ಕಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಏರಿವೆ ಎಂಬ ಅಂಕಿ-ಅಂಶಗಳು ಮಾತ್ರ ನಮ್ಮಲ್ಲಿವೆ. ಆದರೆ ಅದಕ್ಕೆ ಕೋವಿಡ್-19 ಪ್ರತ್ಯಕ್ಷ ಯಾ ಪರೋಕ್ಷ ಕಾರಣವೇ ಎಂಬುದು ಕರಾರುವಾಕ್ಕಾಗಿ ತಿಳಿದಿಲ್ಲ. ಜೊತೆಗೆ ಇಂತಹ ನಾಜೂಕಾದ ಸಂಶೋಧನೆಗಳನ್ನು ನಿಖರವಾಗಿ ಮಾಡಬಲ್ಲ ಅನುಕೂಲಗಳು ಬಹುತೇಕ ಅಭಿವೃದ್ಧಿಶೀಲ ದೇಶಗಳಲ್ಲಿ ಇಲ್ಲ. ಆದರೆ, ಕೋವಿಡ್-19 ಅತಿ ಹೆಚ್ಚು ಬಾಧಿಸಿರುವುದು ಇಂತಹ ದೇಶಗಳನ್ನೇ. ಯಾವುದೋ ದೇಶದಲ್ಲಿ ಮಾಡಿದ ಅಧ್ಯಯನದ ಫಲಿತಾಂಶಗಳನ್ನು ಮತ್ತೊಂದು ದೇಶವು ಯಥಾವತ್ತಾಗಿ ಅನುಸರಿಸುವುದು ಪ್ರಾಯೋಗಿಕವಲ್ಲ. ಹೀಗಾಗಿ, ಕೋವಿಡ್-19 ಕಾಯಿಲೆಯಿಂದ ಬಳಲಿದ್ದ ರೋಗಿಗಳು ತಮ್ಮ ಎಚ್ಚರದಲ್ಲಿ ಇರುವುದು ಒಳಿತು. ಲಘುವಾದ ವ್ಯಾಯಾಮ, ಆರೋಗ್ಯಕರ ಆಹಾರ, ಸಾಕಷ್ಟು ನಿದ್ರೆ, ವಿಶ್ರಾಂತಿ, ಪ್ರಾಣಾಯಾಮ, ಸೂಕ್ತ ಪ್ರಮಾಣದ ದ್ರವಾಹಾರ ಬಳಕೆ, ಆರೋಗ್ಯದಲ್ಲಿ ಯಾವುದೇ ಅನಿರೀಕ್ಷಿತ ಬದಲಾವಣೆ ಕಂಡಾಗ ವೈದ್ಯರನ್ನು ಕಾಣುವುದು, ಪ್ರಶಾಂತ ಮನಸ್ಥಿತಿ – ಈ ಮೊದಲಾದ ಜೀವನಶೈಲಿಯ ಮಾರ್ಪಾಡುಗಳು ಉತ್ತಮ ಆರೋಗ್ಯಕ್ಕೆ ಇಂಬು ನೀಡಲು ಸಹಕಾರಿ. ಈ ನಿಟ್ಟಿನಲ್ಲಿ ಅನಗತ್ಯ ಆತಂಕದ ಬೇಡ; ಆದರೆ ಭರವಸೆಯ ಸನ್ನದ್ಧತೆ ಇರಲಿ.   

---------------------------

ಅಕ್ಟೋಬರ್ 2022ರ ಚಿಂತನಶೀಲ ಸಮಾಜಮುಖಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ