ಮಂಗಳವಾರ, ಏಪ್ರಿಲ್ 9, 2024

 


ಹೃದ್ರೋಗ ನಿರ್ವಹಣೆ ಮತ್ತು ಆಹಾರ ಪದ್ಧತಿ

 ಡಾ. ಕಿರಣ್ ವಿ.ಎಸ್.

ವೈದ್ಯರು

 ಹೃದಯದ ಮಿಡಿತ ಜೀವಂತಿಕೆಯ ಸಂಕೇತ. ಭ್ರೂಣಾವಸ್ಥೆಯಲ್ಲಿ ಆರಂಭವಾಗುವ ಹೃದಯದ ಕೆಲಸ ನಮ್ಮ ಜೀವನ ಕೊನೆಗೊಳ್ಳುವವರೆಗೆ ಸಾಗುತ್ತಲೇ ಇರುತ್ತದೆ. ಶರೀರದ ಇತರ ಭಾಗಗಳಂತೆ ಅನಾರೋಗ್ಯಗಳು ಹೃದಯವನ್ನೂ ಕಾಡುತ್ತವೆ. ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯದ ವೈಫಲ್ಯ, ಹೃದಯ ಮಿಡಿತದ ಲಯಬದ್ಧತೆಯಲ್ಲಿ ಏರುಪೇರು - ಹೀಗೆ ಹೃದಯ ಸಂಬಂಧಿ ಕಾಯಿಲೆಗಳಿವೆ. ಇವುಗಳ ನಿರ್ವಹಣೆಯಲ್ಲಿ ಔಷಧಗಳು ಮತ್ತು ಜೀವನಶೈಲಿ ಎಷ್ಟು ಮುಖ್ಯವೋ, ಆಹಾರ ಕೂಡ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೃದ್ರೋಗಗಳನ್ನು ತಡೆಗಟ್ಟುವಲ್ಲಿ ಮತ್ತು ಅವು ಮತ್ತೆ ಮರುಕಳಿಸದಂತೆ ನಿಭಾಯಿಸುವಲ್ಲಿ ಆಹಾರ ಸೇವನೆಯ ಶಿಸ್ತು ಪರಿಣಾಮಕಾರಿ.

 ಆಹಾರ ಸೇವನೆಯ ಮೊದಲ ನಿಯಮ ಶರೀರದ ತೂಕವನ್ನು ಆರೋಗ್ಯಕರ ಮಿತಿಯಲ್ಲಿ ಇಟ್ಟುಕೊಳ್ಳುವುದು. ಶರೀರದ ತೂಕ ಅಧಿಕವಾದಷ್ಟೂ ರಕ್ತ ಪೂರೈಕೆಯ ಅಗತ್ಯ ಹೆಚ್ಚುತ್ತದೆ. ಈ ಹೊಣೆ ನಿರ್ವಹಿಸುವುದು ಹೃದಯ. ಹೀಗಾಗಿ, ಬೊಜ್ಜು ಹೃದಯದ ಮೇಲೆ ನೇರವಾಗಿ ಒತ್ತಡ ಬೀರುತ್ತದೆ. ಬೇರೆ ಯಾವುದೇ ಶ್ರಮದ ಕೆಲಸ ಮಾಡದಿದ್ದರೂ, ಕೇವಲ ದೇಹದ ತೂಕ ಹೆಚ್ಚಾಗಿದ್ದರೆ, ಹೃದಯಕ್ಕೆ ಶ್ರಮದಾಯಕ ಕೆಲಸ ಮಾಡಿದಷ್ಟೇ ಅನುಭವವಾಗುತ್ತದೆ. ಹೀಗಾಗಿ, ಹೃದ್ರೋಗಿಗಳು ಶರೀರದ ಅಗತ್ಯಕ್ಕೆ ಬೇಕಾದಷ್ಟು ಆಹಾರವನ್ನು ಮಾತ್ರ ಸೇವಿಸುವುದು ಸೂಕ್ತ. ಅನಗತ್ಯ ಕ್ಯಾಲರಿಗಳಿಂದ ದೂರವಿರುವುದು ಹೃದಯದ ಚೇತರಿಕೆಗೆ ಸಹಕಾರಿ. ಈ ನಿಟ್ಟಿನಲ್ಲಿ ಆಹಾರ ತಜ್ಞರು ನೆರವಾಗುತ್ತಾರೆ. ಹೃದಯ ಚಿಕಿತ್ಸೆ ನೀಡಬಲ್ಲ ಪ್ರತಿಯೊಂದು ಆಸ್ಪತ್ರೆಯಲ್ಲೂ ಆಹಾರ ತಜ್ಞರ ಉಪಸ್ಥಿತಿ ಇರುತ್ತದೆ.

 ಹಣ್ಣು ಮತ್ತು ತರಕಾರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದು ಹೃದಯ-ಸ್ನೇಹಿ ಪದ್ಧತಿ. ತೀರಾ ಕೆಲವನ್ನು ಹೊರತುಪಡಿಸಿ ಹೃದ್ರೋಗಿಗಳಿಗೆ ವೈವಿಧ್ಯಮಯ ಸಸ್ಯಜನ್ಯ ಆಹಾರಗಳ ಆಯ್ಕೆಯಿದೆ. ಬಿಳಿಯ ಬಣ್ಣದವುಗಳಿಗಿಂತಲೂ ಗಾಢ ಬಣ್ಣದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಹಣ್ಣಿನ ರಸಕ್ಕಿಂತಲೂ ಇಡೀ ಹಣ್ಣುಗಳು ಆರೋಗ್ಯಕರ. ಸಾಧ್ಯವಾದಷ್ಟೂ ಸಕ್ಕರೆ ಅಥವಾ ಉಪ್ಪನ್ನು ಬೆರೆಸದೆ ಹಣ್ಣು, ತರಕಾರಿಗಳನ್ನು ಸೇವಿಸುವುದು ಉತ್ತಮ. "ರುಚಿಗೆ ತಕ್ಕಷ್ಟು ಉಪ್ಪು" ಎನ್ನುವ ಬದಲಿಗೆ "ಆರೋಗ್ಯಕ್ಕೆ ತಕ್ಕಷ್ಟು ಉಪ್ಪು" ಎನ್ನುವುದು ಸರಿ!

 ಆಹಾರ ಧಾನ್ಯಗಳ ವಿಷಯದಲ್ಲೂ  ಸಂಸ್ಕರಿತ ಧಾನ್ಯಗಳಿಗಿಂತಲೂ ಇಡೀ ಧಾನ್ಯಗಳು ಉಪಯುಕ್ತ. ಸಮಗ್ರ ಧಾನ್ಯಗಳಲ್ಲಿ ನಾರಿನ ಅಂಶ, ವಿಟಮಿನ್'ಗಳು, ಪಿಷ್ಠದ ಗುಣಮಟ್ಟ ಅಧಿಕವಾಗಿರುತ್ತದೆ. ಇದರಿಂದ ಹೃದ್ರೋಗ, ಪಾರ್ಶ್ವವಾಯು, ಮಧುಮೇಹ, ಬೊಜ್ಜು, ಮಲಬದ್ಧತೆ ಕಡಿಮೆಯಾಗುತ್ತದೆ. ಕರುಳಿನ ಆರೋಗ್ಯ ಸುಧಾರಿಸುತ್ತದೆ. ಅಂತೆಯೇ, ಒಳ್ಳೆಯ ಗುಣಮಟ್ಟದ ಪ್ರೋಟೀನ್ ಇರುವ ಬೇಳೆಕಾಳುಗಳು ಕೂಡ ಹೃದಯದ ಆರೋಗ್ಯಕ್ಕೆ ಸಹಾಯಕಾರಿ. ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಯ ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ಸಸ್ಯಜನ್ಯ ಪ್ರೋಟೀನ್ ಸೇವನೆ ಮಾಂಸಜನ್ಯ ಪ್ರೋಟೀನ್'ಗಿಂತಲೂ ಉತ್ತಮ ಎಂದು ಸಂಶೋಧನೆಗಳಿಂದ ಧೃಢಪಟ್ಟಿದೆ. ಪ್ರಾಣಿಜನ್ಯ ಪ್ರೋಟೀನ್ ಆಯ್ಕೆಗಳಲ್ಲಿ ಮೀನು ಮತ್ತು ಸಮುದ್ರಜೀವಿಗಳು ಹೃದಯದ ಆರೋಗ್ಯಕ್ಕೆ ಒಳಿತು. ಎಣ್ಣೆಯಲ್ಲಿ ಕರಿದ ಮತ್ತು ಸಂಸ್ಕರಿತ ಮಾಂಸವನ್ನು ಹೃದ್ರೋಗಿಗಳು ದೂರವಿಡಬೇಕೆಂದು ತಜ್ಞರ ಅಭಿಮತ. ಕಡಿಮೆ ಜಿಡ್ಡಿನ ಅಂಶದ ಡೇರಿ ಪದಾರ್ಥಗಳು ತೂಕದ ನಿರ್ವಹಣೆಯಲ್ಲೂ ಸಹಕಾರಿ. ಇವು ರಕ್ತದಲ್ಲಿ ಅಪಾಯಕಾರಿ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸಿ, ಹೃದ್ರೋಗದ ಸಾಧ್ಯತೆಗಳನ್ನು ಇಳಿಸುತ್ತವೆ. ಸಕ್ಕರೆ ಮತ್ತು ಉಪ್ಪುಯುಕ್ತ ಡೇರಿ ಪದಾರ್ಥಗಳ ಬದಲಿಗೆ ಇಂತಹ ಯಾವುದೇ ಬೆರಕೆ ಇಲ್ಲದವುಗಳ ಬಳಕೆ ಉತ್ತಮ. ಸಂಸ್ಕರಿತ ಜಿಡ್ಡು ಅಥವಾ ಬೆಣ್ಣೆಯ ಬದಲಿಗೆ ಸಸ್ಯಜನ್ಯ ಎಣ್ಣೆಯ ಬಳಕೆ ಹೃದಯಕ್ಕೆ ಕ್ಷೇಮಕರ ಎಂದು ಅಧ್ಯಯನಗಳು ತಿಳಿಸಿವೆ.

 ಅಧಿಕ ಸಕ್ಕರೆಯ ಬಳಕೆ ಹೃದ್ರೋಗಕ್ಕೆ ನೇರ ದಾರಿ. ಸಕ್ಕರೆ ಎಂದರೆ ಕೇವಲ ಹರಳು ಸಕ್ಕರೆ ಎಂದಷ್ಟೇ ಅಲ್ಲ. ಮೂಲತಃ ಗ್ಲೂಕೋಸ್, ಫ್ರಕ್ಟೋಸ್ ಮೊದಲಾದ ಸರಳ ಸಕ್ಕರೆಯ ಅಂಶವಿರುವ ಯಾವುದೇ ಪದಾರ್ಥವೂ ಸಕ್ಕರೆಯ ಲೆಕ್ಕಕ್ಕೇ ಬರುತ್ತದೆ. ಬೆಲ್ಲ, ಜೇನು, ಮೇಪಲ್ ಸಿರಪ್, ಕಾರ್ನ್ ಸಿರಪ್ ಮೊದಲಾದ ಯಾವುದೇ ಸಿಹಿಕಾರಿ ವಸ್ತುವನ್ನೂ ಸಕ್ಕರೆ ಎಂದೇ ಪರಿಗಣಿಸಬೇಕು. ಆಹಾರದಲ್ಲಿ ಸರಳ ಸಕ್ಕರೆ ಹೆಚ್ಚಾದಷ್ಟೂ ಕಾಯಿಲೆರಹಿತ ಜೀವಿತಾವಧಿ ಕಡಿಮೆಯಾಗುತ್ತದೆ. ಸಕ್ಕರೆಯ ಬದಲಿಗೆ ಕಡಿಮೆ ಕ್ಯಾಲರಿಯುಕ್ತ ಸಿಹಿಕಾರಿ ರಾಸಾಯನಿಕ ಬಳಕೆಯ ಪ್ರತಿಪಾದನೆಯಿದೆ. ಆದರೆ ಇಂತಹ ರಾಸಾಯನಿಕಗಳು ಮಿದುಳಿನ, ಕರುಳಿನ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ತಜ್ಞರು ಸಂಶಯಿಸಿದ್ದಾರೆ. ಅಧಿಕ ಉಪ್ಪಿನ ಬಳಕೆ ಮತ್ತು ಅಧಿಕ ರಕ್ತದೊತ್ತಡಗಳ ಸಂಬಂಧ ಈಗಾಗಲೇ ಸ್ಥಿರವಾಗಿದೆ. ನಲವತ್ತರ ವಯಸ್ಸಿನ ನಂತರ ಉಪ್ಪಿನ ಬಳಕೆಯನ್ನು ಕಡಿತಗೊಳಿಸುತ್ತಾ ಹೋಗುವುದು ಅಧಿಕ ರಕ್ತದೊತ್ತಡದ ಸಮಸ್ಯೆ ಇಲ್ಲದವರಿಗೂ ಉಪಯುಕ್ತ. 

 ಯಾವುದೇ ವಯಸ್ಸಿನಲ್ಲೂ ಮದ್ಯಪಾನ ಹೃದ್ರೋಗಕ್ಕೆ ದಾರಿ ಮಾಡಬಲ್ಲದು. ಸಣ್ಣ ವಯಸ್ಸಿನಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗುವ ಬಹುತೇಕ ಮಂದಿ ಸಾಮಾಜಿಕ ಯಾ ವೈಯಕ್ತಿಕ ಕಾರಣಗಳಿಗಾಗಿ ಕೆಲಕಾಲವಾದರೂ ಮದ್ಯಸೇವನೆ ಮಾಡಿರುತ್ತಾರೆ ಎಂದು ಸಂಶೋಧನೆಗಳು ತಿಳಿಸಿವೆ. ಇದರ ಕಾಲಾವಧಿ ಮತ್ತು ಪ್ರಮಾಣ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರಬಹುದು. ಹೃದಯ ಮತ್ತು ಮಿದುಳು ಸಂಬಂಧಿ ದೀರ್ಘಾವಧಿ ಕಾಯಿಲೆಗಳಿಗೆ ಮದ್ಯಪಾನ ಕಾರಣವಾಗುತ್ತದೆ. ಮಿತವಾದ ಮದ್ಯಪಾನ ಒಳಿತು ಎಂದು ಹಲವರು ಪ್ರತಿಪಾದಿಸಿದರೂ ಇದಕ್ಕೆ ಪುಷ್ಠಿ ನೀಡುವ ಗಟ್ಟಿಯಾದ ವೈಜ್ಞಾನಿಕ ಆಧಾರ ಇಲ್ಲ.

 ಆಹಾರ ನಮ್ಮ ಜೀವನ ಸಂಗಾತಿಯಷ್ಟೇ ಅಲ್ಲ; ಉತ್ತಮ ಆರೋಗ್ಯವನ್ನು ಪ್ರಸಾದಿಸುವ ಸಂಜೀವಿನಿ ಕೂಡ. ಹೃದಯ, ಮಿದುಳು ಸೇರಿದಂತೆ ಹಲವಾರು ಅಂಗಗಳ ದೀರ್ಘಕಾಲಿಕ ಕಾಯಿಲೆಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಆರೋಗ್ಯಕರ ಆಹಾರ ರಹದಾರಿ.  

-----------------------

ದಿನಾಂಕ 14/11/2023 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/diet-plan-for-heart-patients-2561725

 


ಮೂಳೆಗಳ ಗಣಿತ

ಡಾ. ಕಿರಣ್ ವಿ,.ಎಸ್.

ವೈದ್ಯರು

ಸಿಮೆಂಟ್ ಕಾಂಕ್ರೀಟಿನಲ್ಲಿ ಉಕ್ಕು ಇರುವಂತೆ ಶರೀರದಲ್ಲಿ ಮೂಳೆಗಳು ಇರುತ್ತವೆ ಎಂದು ಕೆಲವರು ಬಣ್ಣಿಸುತ್ತಾರೆ. ಅದರ ವಿಲೋಮ ರೂಪಾಂತರ ಸರಿ – ಶರೀರದಲ್ಲಿ ಮೂಳೆಗಳಂತೆ ಕಾಂಕ್ರೀಟಿನಲ್ಲಿ ಉಕ್ಕು! ಮೂಳೆಗಳು ನಮ್ಮ ದೇಹದ ಯಾಂತ್ರಿಕ ಆಧಾರ. ಮೂಳೆಗಳ ಬೆಂಬಲದಿಂದಲೇ ಶರೀರದ ಚಲನೆಗೆ ಕಾರಣವಾದ ಅಂಗಾಂಶಗಳು ರೂಪುಗೊಂಡಿವೆ. ಅಂದರೆ, ಶರೀರದ ಚಲನೆಗೆ ಕಾರಣವಾದ ಯಾವುದೇ ಭಾಗವನ್ನು ಪರಿಗಣಿಸಿದರೂ ಅದರ ಆಂತರ್ಯದಲ್ಲಿ ಮೂಳೆ ಇರುತ್ತದೆ. ಅದರ ಮೇಲೆ ಮಾಂಸಖಂಡಗಳು, ಸ್ನಾಯುರಜ್ಜುಗಳು, ರಕ್ತನಾಳಗಳು, ಕೊಬ್ಬಿನ ಪದರ, ನರಗಳು, ಚರ್ಮದ ಹೊದಿಕೆ ಇರುತ್ತವೆ. ಇವೆಲ್ಲವನ್ನೂ ಸಮಗ್ರವಾಗಿ ಹಿಡಿದಿಡುವ ಮೂಲಾಧಾರ ಮೂಳೆಗಳು.

ಸಣ್ಣವು, ದೊಡ್ಡವು ಎಲ್ಲ ಸೇರಿ ಶರೀರದಲ್ಲಿ 206 ಮೂಳೆಗಳಿವೆ. ಇವುಗಳ ಪೈಕಿ ದೇಹದ ಮಧ್ಯಭಾಗದಲ್ಲಿನ ಮೂಳೆಗಳು ಒಂಟಿಯಾದರೆ, ಅದಕ್ಕೆ ಪ್ರತ್ಯಕ್ಷ ಯಾ ಪರೋಕ್ಷವಾಗಿ ತಗುಲಿಕೊಂಡಿರುವ ಮೂಳೆಗಳು ಜಂಟಿ. ಇದರ ಅರ್ಥ, ತಲೆಬುರುಡೆಯ ಕೆಲ ಮೂಳೆಗಳು, ಬೆನ್ನು ಮೂಳೆಯ ಭಾಗಗಳು ಒಂದೊಂದೇ ಇರುತ್ತವೆ. ಆದರೆ ಕೈಗಳ, ಕಾಲುಗಳ, ಸೊಂಟದ, ಪಕ್ಕೆಗಳ ಮೂಳೆಗಳು ಎಡ ಮತ್ತು ಬಲಕ್ಕೆ ತಲಾ ಒಂದೊಂದರಂತೆ ಜಂಟಿ.

ನವಜಾತ ಶಿಶುವಿನ ಶರೀರದಲ್ಲಿ ಸುಮಾರು 270 ಮೂಳೆಗಳಿರುತ್ತವೆ. ಅವುಗಳಲ್ಲಿ ಕೆಲವು ಬೆಸೆದುಕೊಂಡು ಅಂತಿಮವಾಗಿ ಈ ಸಂಖ್ಯೆ 206ಕ್ಕೆ ಇಳಿಯುತ್ತದೆ. ತಲೆಬುರುಡೆಯಲ್ಲಿ 28 (ಇವುಗಳಲ್ಲಿ ಧ್ವನಿಗ್ರಹಣಕ್ಕೆ ಕಾರಣವಾದ, ಕಿವಿಗಳೊಳಗಿನ ತಲಾ ಮೂರು ಸೂಕ್ಷ್ಮ ಮೂಳೆಗಳು ಸೇರಿವೆ), ಬೆನ್ನುಮೂಳೆಯಲ್ಲಿ 26, ಹನ್ನೆರಡು ಜೋಡಿ ಎದೆಯ ಪಕ್ಕೆಲುಬುಗಳು ಮತ್ತು ಅವನ್ನು ಎದೆಭಾಗದಲ್ಲಿ ಬೆಸೆಯುವ ಸ್ಟರ್ನಮ್ ಎಂಬ ಮೂಳೆ, ಗಂಟಲ ಪ್ರದೇಶದ ಹಯಾಯ್ಡ್ ಎನ್ನುವ ಮೂಳೆ ಸೇರಿ 80 ಆಗುತ್ತವೆ. ಪ್ರತಿಯೊಂದು ಕೈಯಲ್ಲಿ 32 ಮೂಳೆಗಳಿವೆ. ಈ 32ರ ಪೈಕಿ ಮಣಿಕಟ್ಟು, ಹಸ್ತ ಮತ್ತು ಬೆರಳುಗಳಲ್ಲೇ 27 ಮೂಳೆಗಳಿವೆ. ಸೊಂಟದಲ್ಲಿ ಎರಡು ಅರೆ-ಕುಂಭಾಕಾರದ ಮೂಳೆಗಳಿವೆ. ಪ್ರತಿಯೊಂದು ಕಾಲಿನಲ್ಲಿಯೂ 30 ಮೂಳೆಗಳಿರುತ್ತವೆ. ಇವುಗಳ ಪೈಕಿ ಕಾಲಿನ ಮಣಿಕಟ್ಟು ಮತ್ತು ಪಾದಗಳಲ್ಲೇ ತಲಾ 26 ಇರುತ್ತವೆ. ಹೀಗೆ, ಎರಡೂ ಬದಿಯ ಜೋಡಿ ಮೂಳೆಗಳ ಒಟ್ಟು ಸಂಖ್ಯೆ 126. ಈ ಎಲ್ಲವುಗಳಲ್ಲಿ ಕೇವಲ ಹಯಾಯ್ಡ್ ಮೂಳೆಗೆ ಬೇರೆ ಯಾವುದೇ ಮೂಳೆಯ ಸಂಪರ್ಕ ಇಲ್ಲ. ಉಳಿದೆಲ್ಲ ಮೂಳೆಗಳೂ ಕನಿಷ್ಠ ಮತ್ತೊಂದು ಮೂಳೆಯ ಸಂಪರ್ಕದಲ್ಲಿರುತ್ತವೆ. ತಲೆಬುರುಡೆಯ 28 ಮೂಳೆಗಳ ಪೈಕಿ ಕೇವಲ ದವಡೆಯ ಮೂಳೆಗೆ ಮಾತ್ರ ಚಲನೆಯಿದೆ. ತಲೆಯ ಇತರ ಮೂಳೆಗಳೆಲ್ಲವೂ ಸ್ಥಿರ. ತೊಡೆಗಳ ಭಾಗದಲ್ಲಿರುವ ಫೀಮರ್ ಎನ್ನುವುದು ಶರೀರದ ಅತ್ಯಂತ ಉದ್ದದ ಮೂಳೆಯಾದರೆ, ಕಿವಿಯೊಳಗಿನ ಸ್ಟೇಪಿಸ್ ಎನ್ನುವ ಸೂಕ್ಷ್ಮ ಮೂಳೆ ಅತ್ಯಂತ ಕಿರಿದಾದದ್ದು. ಎಲ್ಲ 206 ಮೂಳೆಗಳ ಒಟ್ಟು ತೂಕ ಸುಮಾರು 11 ಕಿಲೋಗ್ರಾಂ. ಇದು ಶರೀರದ ಒಟ್ಟು ತೂಕದ ಶೇಕಡಾ 15. ಶರೀರದಲ್ಲಿನ ರಕ್ತದ ಪೈಕಿ ಶೇಕಡಾ 10 ಭಾಗ ಮೂಳೆಗಳ ನಿರ್ವಹಣೆಗೆ ಮೀಸಲಾಗಿದೆ.

ರಚನೆಯ ಆಧಾರದ ಮೇಲೆ ಮೂಳೆಗಳಲ್ಲಿ 5 ವಿಧಗಳಿವೆ. ಉದ್ದನೆಯ ಮೂಳೆಗಳು ತಮ್ಮ ಅಗಲಕ್ಕಿಂತ ಹೆಚ್ಚು ಉದ್ದವಾಗಿದ್ದು, ಕೊಳವೆಯ ಆಕಾರದಲ್ಲಿರುತ್ತವೆ. ಇವು ಹೆಚ್ಚಾಗಿ ಕೈ ಮತ್ತು ಕಾಲುಗಳಲ್ಲಿ ಕಾಣುತ್ತವೆ. ಸಣ್ಣದಾದ ಮೂಳೆಗಳು ಚಿಕ್ಕ ಘನಾಕೃತಿಯಲ್ಲಿರುತ್ತವೆ. ಇವುಗಳ ಹೊರ ಕವಚ ಹೆಚ್ಚು ಗಟ್ಟಿಯಿಲ್ಲ. ಇವು ಕೈಗಳ ಮಣಿಕಟ್ಟು ಮತ್ತು ಪಾದಗಳ ಕೋನದಲ್ಲಿ ಕಾಣುತ್ತವೆ. ಸಪಾಟು ಮೂಳೆಗಳು ತೆಳುವಾಗಿ, ಮಟ್ಟಸವಾಗಿಯೋ ಇಲ್ಲವೇ ಅರೆಚಂದ್ರಾಕೃತಿಯಲ್ಲಿರುತ್ತವೆ. ತಲೆಬುರುಡೆಯ ಬಹುತೇಕ ಮೂಳೆಗಳು, ಎದೆಯ ಮಧ್ಯದ ಮೂಳೆ ಈ ರೀತಿಯದ್ದು. ಸ್ನಾಯುರಜ್ಜುಗಳ ಒಳಗೆ ಮೂಳೆಗಳ ರಚನೆ ಆಗಿರುತ್ತವೆ. ಮಂಡಿ ಚಿಪ್ಪು ಇದಕ್ಕೆ ಉದಾಹರಣೆ. ಇಂತಹ ಯಾವುದೇ ಸ್ಥಿರ ಆಕಾರ ಇಲ್ಲದ ಮೂಳೆಗಳನ್ನು ಇತರೆ ವರ್ಗಕ್ಕೆ ಸೇರಿಸಬಹುದು. ಬೆನ್ನು ಮೂಳೆ, ಸೊಂಟದ ಮೂಳೆ, ತಲೆಬುರುಡೆಯ ಕೆಲ ಮೂಳೆಗಳು ಈ ವರ್ಗದವು.

ಇಡೀ ಮೂಳೆ ಗಟ್ಟಿಯಾಗಿಯೇ ಇರಬೇಕೆಂದೇನಿಲ್ಲ. ಬಹುತೇಕ ಮೂಳೆಗಳ ತುದಿಭಾಗಗಳಲ್ಲಿ ಸ್ಪಾಂಜಿನಲ್ಲಿರುವಂತೆ ರಂಧ್ರಗಳಿರುತ್ತವೆ. ಇವು ಮೂಳೆಗಳ ವಿಸ್ತೀರ್ಣವನ್ನು ಹೆಚ್ಚಿಸುವುದಲ್ಲದೆ ರಕ್ತನಾಳಗಳ ಪರಿಚಲನೆಗೆ, ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತವೆ. ಮೂಳೆಗಳ ಹೊರಭಾಗ ಗಟ್ಟಿಯಾಗಿದ್ದರೂ, ಅದರ ಒಳಭಾಗದಲ್ಲಿ ಮೆದುವಾದ ಎಲುಬಿನ ನೆಣ ಇರುತ್ತದೆ. ಬಹುತೇಕ ರಕ್ತಕೋಶಗಳ ಉತ್ಪತ್ತಿ ಆಗುವುದು ಈ ನೆಣದಲ್ಲಿಯೇ. ಮೂಳೆಯ ಶೇಕಡಾ 70 ಭಾಗ ಖನಿಜಯುಕ್ತ ಗಟ್ಟಿ ಪದಾರ್ಥವಾದರೆ, ಪ್ರತಿಶತ 30 ಮೆದುವಾದ ಭಾಗ.

ಮೂಳೆಗಳಿಗೆ ಒಟ್ಟು 6 ಕರ್ತವ್ಯಗಳಿವೆ. ಶರೀರದ ಅಂಗಗಳಿಗೆ ಆಸರೆ ನೀಡುವುದು; ಚಲನೆಗೆ ಬೆಂಬಲಿಸುವುದು; ಮಿದುಳು, ಹೃದಯ, ಶ್ವಾಸಕೋಶಗಳಂಥ ಕೆಲವು ಮುಖ್ಯ ಅಂಗಗಳನ್ನು ಸುತ್ತುವರೆದು ಕಾಪಾಡುವುದು; ರಕ್ತಕಣಗಳನ್ನು ಉತ್ಪಾದಿಸುವುದು; ಶರೀರಕ್ಕೆ ಅಗತ್ಯವಾದ ಹಲವು ಖನಿಜಗಳನ್ನು ಶೇಖರಿಸಿ, ಅಗತ್ಯವಾದಾಗ ಬಿಡುಗಡೆಗೊಳಿಸುವುದು; ಮತ್ತು ಚೋದಕವನ್ನು ಉತ್ಪಾದಿಸಿ, ಮತ್ತಷ್ಟು ಚೋದಕಗಳ ಕೆಲಸದಲ್ಲಿ ಸಹಕರಿಸುವುದು.  

ಬಹುತೇಕ ಮೂಳೆಗಳು ಪುರುಷರಲ್ಲಿ ಹೆಚ್ಚು ಬಲವಾಗಿರುತ್ತವೆ. ಭೌತಿಕ ಕೆಲಸಗಳ ಹಿನ್ನೆಲೆ ಮತ್ತು ಅವಕ್ಕೆ ಸಂಬಂಧಿಸಿದ ಹಾರ್ಮೋನುಗಳ ಪ್ರಭಾವದಿಂದ ಇಂತಹ ಕೆಲವು ಬದಲಾವಣೆಗಳಾಗುತ್ತವೆ. ಸೊಂಟದ ಮೂಳೆಗಳು ಸ್ತ್ರೀಯರಲ್ಲಿ ಹೆಚ್ಚು ವಿಶಾಲವಾಗಿರುತ್ತವೆ. ಮಕ್ಕಳನ್ನು ಹಡೆಯುವ ಕಾರಣದಿಂದ ಪ್ರಕೃತಿ ಈ ಬದಲಾವಣೆಯನ್ನು ಅವರ ಶರೀರದಲ್ಲಿ ತಂದಿದೆ. ಮೃತ ದೇಹಗಳ ಮೂಳೆಗಳನ್ನು ಅಧ್ಯಯನ ಮಾಡುವ ವಿಧಿವಿಜ್ಞಾನ ತಜ್ಞರು ಭೌತಿಕ ಪರೀಕ್ಷೆಯಿಂದಲೇ ಅವು ಪುರುಷನದ್ದೋ ಅಥವಾ ಮಹಿಳೆಯದ್ದೋ ಎಂದು ಸಾಕಷ್ಟು ಕರಾರುವಾಕ್ಕಾಗಿ ನಿರ್ಧರಿಸಬಲ್ಲರು.

ಮೂಳೆಗಳಲ್ಲಿ 3 ವಿಧವಾದ ಜೀವಕೋಶಗಳಿವೆ. ಹೊರನೋಟಕ್ಕೆ ಮರದ ತುಂಡಿನಂತೆ ನಿಸ್ಸತ್ವವಾಗಿ ಕಾಣುವ ಮೂಳೆ ಜೀವಂತ ಅಂಗಾಂಶ. ಹೊಸ ಜೀವಕೋಶಗಳು ಉತ್ಪತ್ತಿಯಾಗುತ್ತಾ, ಮೂಳೆಗಳ ನಿರಂತರ ಕೆಲಸಕ್ಕೆ ಸಹಕರಿಸುತ್ತವೆ. ಹಳೆಯ ಜೀವಕೋಶಗಳಲ್ಲಿನ ಸತ್ವಯುತ ಅಂಶಗಳು ಮತ್ತೆ ಪ್ರಯೋಜನಕ್ಕೆ ಬರುವಂತೆ ಅವುಗಳನ್ನು ನಿರ್ವಹಿಸುವ ಕೋಶಗಳು ಕೆಲಸ ಮಾಡುತ್ತವೆ. ಶರೀರದ ನಿರ್ವಹಣೆಯಲ್ಲಿ ಖನಿಜಗಳ ಅಗತ್ಯಗಳಿಗೆ ತಕ್ಕಂತೆ ಈ ಕೆಲಸ ವೇಗವನ್ನು ಪಡೆದುಕೊಳ್ಳುತ್ತದೆ.

ಮೂಳೆಗಳ ರಾಸಾಯನಿಕ ರಚನೆಯಲ್ಲಿ ಕ್ಯಾಲ್ಸಿಯಂ ಖನಿಜದ ಪಾತ್ರವೇ ದೊಡ್ಡದು. ಶರೀರದ ಇತರ ಭಾಗಗಳಲ್ಲಿ ಕಾರ್ಬನ್ನಿನ ಪಾರುಪತ್ಯವಾದರೆ, ಮೂಳೆಗಳಲ್ಲಿ ಕಾರ್ಬನ್ನಿನ ಪಾತ್ರ ಹೆಚ್ಚಿಲ್ಲ. ಕ್ಯಾಲ್ಸಿಯಂ, ರಂಜಕ (ಫಾಸ್ಫರಸ್), ಆಕ್ಸಿಜನ್ ಮತ್ತು ಹೈಡ್ರೋಜನ್’ಗಳಿಂದ ಆದ ಹೈಡ್ರಾಕ್ಸಿ-ಅಪಟೈಟ್ ಎನ್ನುವ ಸಂಯುಕ್ತ ಮೂಳೆಗಳ ಪ್ರಮುಖ ರಾಸಾಯನಿಕ ವಸ್ತು. ಮೆಗ್ನೀಸಿಯಂ, ಸೋಡಿಯಂ, ಮತ್ತು ಪೊಟಾಸಿಯಂ ಎಂಬುವು ಮೂಳೆಗಳಲ್ಲಿ ಕಾಣುವ ಇತರ ಖನಿಜಗಳು. ಆರೋಗ್ಯವಂತ ಮೂಳೆಗಳಲ್ಲಿನ ಕ್ಯಾಲ್ಸಿಯಂ ಮತ್ತು ರಂಜಕದ ಅನುಪಾತ ಸುಮಾರು 1.3 ರಿಂದ 2 ರ ನಡುವೆ ಇರುತ್ತದೆ. ಒಟ್ಟಾರೆ ಕಾರ್ಬನ್-ರಹಿತ ಸಂಯುಕ್ತಗಳು ಮೂಳೆಗಳ ವ್ಯವಸ್ಥೆಯ ಪ್ರತಿಶತ 70 ಆಕ್ರಮಿಸಿದರೆ, ಉಳಿದ 30ರಲ್ಲಿ ಕೋಶಗಳ ನಿರ್ವಹಣೆಗೆ ಸಹಾಯಕವಾಗುವ ಕಾರ್ಬನ್-ಯುಕ್ತ ಸಂಯುಕ್ತಗಳು ಇರುತ್ತವೆ. ಈ ಕಾರ್ಬನ್-ಯುಕ್ತ ಅಂಗಾಂಶಗಳ ಪೈಕಿ ಮುಖ್ಯವಾದದ್ದು ಕೊಲಾಜೆನ್ ಎಂಬ ನಾರಿನ ವಸ್ತು.

ಮೂಳೆಗಳು ಅತ್ಯಂತ ಬಲಶಾಲಿ. ಆದರೂ ಅವೇಕೆ ಮುರಿಯುತ್ತವೆ? ಇದಕ್ಕೆ ಕಾರಣವಿದೆ. ನೇರ ಒತ್ತಡವನ್ನು ಮೂಳೆಗಳು ಬಹಳ ಚೆನ್ನಾಗಿ ಸಹಿಸಬಲ್ಲವು. ಪ್ರಯೋಗಗಳ ಲೆಕ್ಕಾಚಾರದಲ್ಲಿ ಸುಮಾರು ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ ಅಂದಾಜು 1700 ಕಿಲೋಗ್ರಾಂ ಒತ್ತಡವನ್ನು ಸಹಿಸುವ ಶಕ್ತಿ ದೊಡ್ಡ ಮೂಳೆಗಳಿಗಿದೆ. ಇಷ್ಟೇ ಗಾತ್ರದ ಉಕ್ಕು ಸುಮಾರು 2000 ಕಿಲೋಗ್ರಾಂ ಒತ್ತಡ ತಡೆಯಬಲ್ಲದು. ಅಂದರೆ, ಮೂಳೆಗಳ ಶಕ್ತಿ ಉಕ್ಕಿನ ಜೊತೆ ಹೋಲಿಸುವಷ್ಟಿದೆ. ಆದರೆ, ಹಿಗ್ಗಿಸುವ  ವಿಷಯಕ್ಕೆ ಬಂದಾಗ ಮೂಳೆಯ ಶಕ್ತಿ ಕಡಿಮೆಯಾಗುತ್ತದೆ. ಇದರ ಅರ್ಥ, ಮೂಳೆಯ ಎರಡೂ ತುದಿಗಳನ್ನು ಅತ್ತಿತ್ತಲಾಗಿ ಎಳೆದರೆ ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ ಸುಮಾರು 1100 ಕಿಲೋಗ್ರಾಂ ಒತ್ತಡದಲ್ಲಿ ಅದು ಮುರಿಯುತ್ತದೆ. ಇದು ಉಕ್ಕಿನ ಬಲದಲ್ಲಿ ಅರ್ಧಕ್ಕಿಂತಲೂ ಕಡಿಮೆ. ಇದಕ್ಕೆ ಪ್ರತಿಯಾಗಿ ಮೂಳೆಯೊಂದರ ಆಚೀಚಿನ ಎರಡು ಬಿಂದುಗಳನ್ನು ಗುರುತಿಸಿ, ಅವುಗಳ ಮೇಲೆ ವಿರುದ್ಧ ದಿಕ್ಕಿನಲ್ಲಿ ಬಲಪ್ರಯೋಗ ಮಾಡಿದರೆ (shearing stress) ಚದರ ಸೆಂಟಿಮೀಟರ್ ವಿಸ್ತೀರ್ಣಕ್ಕೆ 500 ಕಿಲೋಗ್ರಾಂ ಬಲಪ್ರಯೋಗಕ್ಕೆ ಮುರಿಯುತ್ತದೆ. ಹೀಗಾಗಿ, ಚಲನೆಯಲ್ಲಿರುವ ದೇಹಕ್ಕೆ ವಿರುದ್ಧ ದಿಕ್ಕಿನಿಂದ ಬೀಳುವ ಒತ್ತಡ ಮೂಳೆಗಳ ನಾಜೂಕಿನ ಭಾಗವನ್ನು ಮುರಿಯಬಲ್ಲವು. ಈ ಕಾರಣಕ್ಕೆ ವಾಹನ ಅಪಘಾತಗಳಲ್ಲಿ ಮೂಳೆ ಮುರಿತ ಹೆಚ್ಚು.   

ಮೂಳೆಗಳ ಗಣಿತ ಸ್ಥೂಲವೂ ಹೌದು; ಸೂಕ್ಷ್ಮವೂ ಹೌದು. ಶರೀರದ ಎಂಜಿನೀರಿಂಗ್ ಅಧ್ಯಯನದ ಮೂಲದ್ರವ್ಯ ಮೂಳೆಗಳು. ಭವಿಷ್ಯದಲ್ಲಿ ಕೃತಕ ಅಂಗಗಳ ನಿರ್ಮಾಣ ಪ್ರಕ್ರಿಯೆಗಳಾಗುವಾಗ ಈ ಅಧ್ಯಯನಕ್ಕೆ ಬಹಳ ಮಹತ್ವ ಬರಲಿದೆ.

-----------------------


ನವೆಂಬರ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://bit.ly/47aEDSD

 


ರಸ್ತೆಬದಿಯ ಆಹಾರ ಮತ್ತು ಗಂಟಲು ನೋವು

 ಡಾ. ಕಿರಣ್ ವಿ.ಎಸ್.

ವೈದ್ಯರು

 "ಈಚೆಗೆ ಹೊರಗೆ ಹೋಗಿದ್ದಾಗ ರಸ್ತೆಯ ಬದಿಯಲ್ಲಿ ಪಾನಿಪೂರಿ ತಿಂದೆ. ಅಂದಿನಿಂದ ಗಂಟಲಲ್ಲಿ ಏನೋ ಅಹಿತ. ಎರಡು ದಿನಗಳಿಂದ ಧ್ವನಿ ಬದಲಾಗಿದೆ. ನಿನ್ನೆಯಿಂದ ನುಂಗಲೂ ಕಷ್ಟವಾಗುತ್ತಿದೆ" - ಇದು ಹಲವಾರು ಜನರ ಅನುಭವ. ರುಚಿಯ ಹಿಂದೆ ಬಿದ್ದು ಶುಚಿಯನ್ನು ಅಲಕ್ಷ್ಯ ಮಾಡುವ ಅನೇಕರು ಗಂಟಲಿನ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಕೆಲವೊಮ್ಮೆ ಈ ಸಮಸ್ಯೆ ತೀವ್ರಗೊಂಡು ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವಷ್ಟು ಗಂಭೀರವಾಗುತ್ತದೆ. ಆಹಾರ-ಪಾನೀಯಗಳ ಕಾರಣದಿಂದ ಉಂಟಾಗುವ ಗಂಟಲಿನ ಸಮಸ್ಯೆಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಉಪಯುಕ್ತ.

 ಮಲಿನ ಆಹಾರ ಪದಾರ್ಥಗಳು ಮುಖ್ಯವಾಗಿ ಎರಡು ಬಗೆಗಳಿಂದ ಅನಾರೋಗ್ಯಕ್ಕೆ ಕಾರಣವಾಗಬಹುದು. ಮೊದಲನೆಯದು - ಸೋಂಕುಕಾರಕ ಪರೋಪಜೀವಿಗಳು. ಶುಚಿಯಿಲ್ಲದ ವ್ಯಕ್ತಿಗಳು ತಯಾರಿಸುವ ಆಹಾರ ಪದಾರ್ಥಗಳ ಮೂಲಕ ಸೋಂಕು ಹರಡುವ ಸಾಧ್ಯತೆಗಳು ಅಧಿಕ. ಎರಡನೆಯದು - ಇಂತಹ ಆಹಾರ ಪದಾರ್ಥಗಳಲ್ಲಿ ಇರಬಹುದಾದ ರಾಸಾಯನಿಕ ಮಾಲಿನ್ಯ. ಇವುಗಳ ಪ್ರಭಾವದಿಂದ ಗಂಟಲಿನ ಸೂಕ್ಷ್ಮವಾದ ಲೋಳೆಪದರಕ್ಕೆ ಹಾನಿಯಾಗುತ್ತದೆ. ಆಗ ಗಂಟಲಿನಲ್ಲಿ ಕೆರೆದಂತೆ ಭಾಸವಾಗುತ್ತದೆ. ಬಿಸಿಯಾದ ಅಥವಾ ಖಾರವಾದ ಪದಾರ್ಥಗಳನ್ನು ಸೇವಿಸಿದಾಗ ಉರಿಯ ಅನುಭವವಾಗಬಹುದು. ಇದು ಮುಂದುವರೆದು, ನುಂಗುವಾಗ ಗಂಟಲಿನಲ್ಲಿ ನೋವಾಗುತ್ತದೆ, ಧ್ವನಿ ಬದಲಾಗುತ್ತದೆ. ಇದರ ಜೊತೆಗೆ ಮೂಗು ಸೋರುವಿಕೆ, ಶೀತ, ಕೆಮ್ಮು, ಜ್ವರ, ಚಳಿ, ಮೈ-ಕೈ ನೋವುಗಳು ಕಾಣಬಹುದು.

 ಗಂಟಲಿಗೆ ಹೀಗೆ ಘಾಸಿಯಾದಾಗ ಸೋಂಕುಕಾರಕ ಪರೋಪಜೀವಿಗಳು ಸುಲಭವಾಗಿ ಪ್ರವೇಶ ಗಿಟ್ಟಿಸುತ್ತವೆ. ಇದರಿಂದ ಸೋಂಕು ರಕ್ತಕ್ಕೆ ಸೇರುವ ಸಾಧ್ಯತೆಗಳಿರುತ್ತವೆ. ಶರೀರದ ರಕ್ಷಕ ವ್ಯವಸ್ಥೆ ಚೆನ್ನಾಗಿರುವವರಲ್ಲಿ ಇಂತಹ ಸೋಂಕು ತಾನಾಗಿಯೇ ನಿಗ್ರಹವಾಗುತ್ತದೆ. ಆದರೆ ರಕ್ಷಕ ವ್ಯವಸ್ಥೆ ಕ್ಷೀಣವಾಗಿರುವವರಲ್ಲಿ ಈ ಸೋಂಕು ಸಾಕಷ್ಟು ತೊಂದರೆ ನೀಡುತ್ತದೆ. ಮಧುಮೇಹಿಗಳು, ಸಣ್ಣ ವಯಸ್ಸಿನ ಮಕ್ಕಳು, ಯಾವುದೇ ಕಾರಣಕ್ಕೆ ಸ್ಟೀರಾಯ್ಡ್ ಔಷಧಗಳನ್ನು ಸೇವಿಸುತ್ತಿರುವವರು ಮೊದಲಾದವರಲ್ಲಿ ಗಂಟಲು ಬೇನೆಯನ್ನು ಉಪೇಕ್ಷಿಸುವಂತಿಲ್ಲ. ಅದಕ್ಕೆ ಸಾಧ್ಯವಾದಷ್ಟೂ ಶೀಘ್ರವಾಗಿ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಆರಂಭಿಸಬೇಕಾಗುತ್ತದೆ.

 ಬಹುತೇಕ ಗಂಟಲು ಬೇನೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಬೇಕಾಗುವುದಿಲ್ಲ. ಸಾಕಷ್ಟು ಬಿಸಿನೀರನ್ನು ಕುಡಿಯುವುದು, ಉಪ್ಪು ನೀರಿನಲ್ಲಿ ಗಂಟಲನ್ನು ಮುಕ್ಕಳಿಸುವುದು, ಬೆಚ್ಚಗಿನ ದ್ರವಾಹಾರ ಸೇವನೆ, ಮಾತಿನಿಂದ ವಿಶ್ರಾಂತಿ, ಮಾತನಾಡುವಾಗ ದನಿಯನ್ನು ಏರಿಸದಿರುವುದು, ದೀರ್ಘ ಶ್ವಾಸ, ಮೊದಲಾದುವುಗಳು ಸಹಾಯಕ.  ಧೂಮಪಾನಿಗಳ ಗಂಟಲು ಸಾಮಾನ್ಯ ಜನರಿಗಿಂತ ಒಣದಾಗಿರುತ್ತದೆ. ಇಂತಹವರಲ್ಲಿ ಗಂಟಲು ಬೇನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಇಂತಹವರು ಧೂಮಪಾನವನ್ನು ತ್ಯಜಿಸಲು ಗಂಟಲು ನೋವು ಒಳ್ಳೆಯ ಅವಕಾಶವನ್ನು ನೀಡುತ್ತದೆ.

 ಗಂಟಲು ಬೇನೆಯ ಯಾವ ಹಂತದಲ್ಲಿ ವೈದ್ಯರನ್ನು ಕಾಣಬೇಕು? ಬಹುತೇಕ ಗಂಟಲು ನೋವುಗಳನ್ನು ನಮ್ಮ ದೇಹದ ರಕ್ಷಕ ವ್ಯವಸ್ಥೆಯೇ ಸರಿಪಡಿಸುತ್ತದೆ. ಅದರ ಸಾಮರ್ಥ್ಯವನ್ನು ಮೀರಿದ ಬೇನೆಗಳಿಗೆ ಮಾತ್ರ ವೈದ್ಯಕೀಯ ಸಲಹೆ ಬೇಕಾಗುತ್ತದೆ. ನಲವತ್ತೆಂಟು ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಗಂಟಲಿನಲ್ಲಿ ಅಸೌಖ್ಯ ಎನಿಸಿದರೆ ವೈದ್ಯರನ್ನು ಕಾಣುವುದು ಸೂಕ್ತ. ಇದರ ಜೊತೆಗೆ ಏರುತ್ತಿರುವ ಜ್ವರ, ಧ್ವನಿಯಲ್ಲಿನ ಬದಲಾವಣೆ, ದ್ರವ ಪದಾರ್ಥಗಳನ್ನು ನುಂಗುವುದೂ ಕಷ್ಟವೆನಿಸುವುದು, ನಿದ್ರಿಸುವಾಗ ಜೊಲ್ಲು ಸೋರುವುದು, ಉಸಿರಾಟದ ಸಮಸ್ಯೆ, ಬಾಯನ್ನು ಅಗಲವಾಗಿ ತೆರೆಯಲು ಹಿಂಸೆಯಾಗುವುದು, ಉಗುಳಿನಲ್ಲಿ ರಕ್ತ ಕಾಣುವುದು, ಮುಖ ಅಥವಾ ಗಂಟಲಿನ ಊತ - ಇಂತಹ ಸಂದರ್ಭಗಳಲ್ಲಿ ಸೋಂಕಿನ ತೀವ್ರತೆ ಅಧಿಕವಾಗಿರಬಹುದು. ಇವು ವೈದ್ಯರು ನಿರ್ಧರಿಸಬೇಕಾದ ಸಂದರ್ಭಗಳು. ಯಾವುದೇ ಕಾರಣಕ್ಕೂ ಸ್ವಯಂ-ವೈದ್ಯ ಮಾಡಿಕೊಂಡು ಪರಿಸ್ಥಿತಿಯನ್ನು ಹದಗೆಡಿಸಬಾರದು.

 ಹೊರಗಿನ ಆಹಾರ-ಪಾನೀಯಗಳನ್ನು ಸೇವಿಸಿ ತಂದುಕೊಳ್ಳುವ ಗಂಟಲು ಬೇನೆಯ ಚಿಕಿತ್ಸೆಗಿಂತಲೂ ಅದನ್ನು ಬಾರದಂತೆ ನಿರ್ವಹಿಸುವುದು ಜಾಣತನ. ಮನೆಯಲ್ಲಿ ಕೈ ತೊಳೆಯದೇ ನಾವು ಏನನ್ನೂ ಸೇವಿಸುವುದಿಲ್ಲ. ವೈದ್ಯರು ಯಾವುದಾದರೂ ಔಷಧವನ್ನು ಸೂಚಿಸಿದಾಗ ಅದರ ಅಡ್ಡ-ಪರಿಣಾಮಗಳ ಬಗ್ಗೆ ಪ್ರಶ್ನಿಸುತ್ತೇವೆ. ಮಕ್ಕಳಿಗೆ ಶುಚಿತ್ವದ ಬಗ್ಗೆ ಪಾಠ ಹೇಳುತ್ತೇವೆ. ಇಷ್ಟೆಲ್ಲ ಜಾಗರೂಕವಾಗಿರುವ ನಾವು ರಸ್ತೆ ಬದಿಯ ಅಶುಚಿಕರ ಆಹಾರವನ್ನು ಮುಲಾಜಿಲ್ಲದೆ ಬಾಯಿಗಿಳಿಸುವುದು ಸೋಜಿಗ. ಹತ್ತಾರು ಜನ ಅದನ್ನು ತಿನ್ನುತ್ತಿದ್ದಾರೆಂಬ ನಂಬಿಕೆಯೋ, ರುಚಿಯ ಚಪಲವೋ, ಜೊತೆಯಲ್ಲಿ ಇರುವವರ ಒತ್ತಾಯವೋ, "ಆಗಾಗ ಇಂತಹದ್ದನ್ನು ತಿನ್ನುತ್ತಿದ್ದರೆ ನಮ್ಮ ಇಮ್ಯುನಿಟಿ ಬೆಳೆಯುತ್ತದೆ" ಎನ್ನುವ ಭ್ರಮೆಯೋ, "ಜಗತ್ತಿನಾದ್ಯಂತ ಸ್ಟ್ರೀಟ್-ಫುಡ್ ತಿನ್ನುವವರಿದ್ದಾರೆ" ಎನ್ನುವ ಸಾಂಘಿಕ ಉಡಾಫೆಯ ಮನೋಭಾವವೋ - ಒಟ್ಟಿನಲ್ಲಿ ಏನೋ ಒಂದು ಕತೆಯನ್ನು ನಮಗೆ ನಾವೇ ಹೇಳಿಕೊಂಡು ಕಾಣದ ಅಪಾಯಕ್ಕೆ ಒಡ್ಡಿಕೊಳ್ಳುತ್ತೇವೆ. ಒಂದು ವಯಸ್ಸಿನ ನಂತರ ಇಂತಹ ದೈಹಿಕ, ಮಾನಸಿಕ ಪ್ರಲೋಭನೆಗಳನ್ನು ಹತ್ತಿಕ್ಕುವುದು ಬಹಳ ಮುಖ್ಯ.

 ಮುಂದುವರೆದ ದೇಶಗಳ ಪ್ರವಾಸಿ ತಾಣಗಳಲ್ಲಿ "ಸ್ಟ್ರೀಟ್-ಫುಡ್" ಎನ್ನುವುದು ದೊಡ್ಡ ಪಾತ್ರ ವಹಿಸುತ್ತದೆ ಎನ್ನುವ ಮಾತು ಸತ್ಯ. ಆದರೆ ಅಲ್ಲಿನ ವ್ಯವಸ್ಥೆ ಅದರ ಬಗ್ಗೆ ಬಹಳ ಕಠಿಣ ನಿರ್ಬಂಧಗಳನ್ನು ಹೇರಿ, ಸುರಕ್ಷತೆಯ ಬಗ್ಗೆ ಗಮನ ನೀಡಿರುತ್ತದೆ. ನಮ್ಮ ದೇಶದಲ್ಲಿ ಅಂತಹ ಕಟ್ಟುನಿಟ್ಟನ್ನು ಅಪೇಕ್ಷಿಸುವುದು ಕಷ್ಟ. ನಮ್ಮಲ್ಲಿ ರಸ್ತೆಬದಿಯ ಆಹಾರ ಮಾರಾಟ ಮಾಡುವ ಬಹುತೇಕರಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಹೀಗಾಗಿ, ಅವರ ಬಳಿ ಸುರಕ್ಷತೆಯ ಖಾತ್ರಿ ಇರುವುದಿಲ್ಲ. ಅಲ್ಲಿ ಆಹಾರ ಸೇವಿಸುತ್ತಿರುವ ಹತ್ತಾರು ಅಪರಿಚಿತ ಮಂದಿಗೆ ಮುಂದಿನ ಕೆಲದಿನಗಳಲ್ಲಿ ಯಾವ ಯಾವ ಆರೋಗ್ಯ ಸಮಸ್ಯೆಗಳು ಬಂದವು ಎಂದು ತಿಳಿಯುವುದು ಅಸಾಧ್ಯ. ಹೊರಗೆ ತಿನ್ನುವ ಅನಿವಾರ್ಯ ಪ್ರಸಂಗಗಳಲ್ಲಿ ಶುಚಿಯಾದ ಹೋಟೆಲಿನಲ್ಲಿ ಬಿಸಿಬಿಸಿಯಾದ, ಚೆನ್ನಾಗಿ ಬೇಯಿಸಿದ, ಹಬೆಯಾಡುತ್ತಿರುವ ಆಹಾರ ಸೇವನೆ ಸೂಕ್ತ. ಆಹಾರದ ಗುಣಮಟ್ಟದಲ್ಲಿ ರಾಜಿಯಾಗುವುದು ಆರೋಗ್ಯಕ್ಕೆ ಹಾನಿಕರ.

------------------------

ದಿನಾಂಕ 31/10/2023 ರ ಪ್ರಜಾವಾಣಿ ದಿನಪತ್ರಿಕೆಯ ಕ್ಷೇಮ-ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-tips-for-food-and-throat-infection-2541983    

 

 

ಭಾನುವಾರ, ಅಕ್ಟೋಬರ್ 8, 2023


 ಜಠರದ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

“ಎಲ್ಲ ದಾನಗಳಿಗಿಂತಲೂ ಅನ್ನದಾನವೇ ಶ್ರೇಷ್ಟ. ವಸ್ತು, ವಾಹನ, ಸ್ಥಾನ, ಸಮ್ಮಾನ, ಪ್ರಾಣಿ, ಧನ, ಕನಕ ದಾನಗಳನ್ನು ಪಡೆಯುವ ಯಾಚಕ ‘ಇನ್ನಷ್ಟು ಇದ್ದರೂ ಲೇಸು’ ಎನ್ನುತ್ತಾನೆ. ಇಂತಹುವುಗಳನ್ನು ಎಷ್ಟೇ ನೀಡಿದರೂ ಯಾಚಕನಿಗೆ ದಾನದ ಪ್ರಮಾಣದ ಬಗ್ಗೆ ತೃಪ್ತಿ ಇರುವುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಯಾಚಕನ ಬಾಯಿಂದ ‘ಸಾಕು; ತೃಪ್ತಿಯಾಯಿತು’ ಎನ್ನುವ ಮಾತು ಬರುತ್ತದೆ. ಅದಕ್ಕಿಂತ ಮಿಗಿಲು ಯಾವುದೂ ಇಲ್ಲ” ಎನ್ನುವ ಮಾತುಗಳನ್ನು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ನಮ್ಮ ಬೇಕು-ಬೇಡಗಳನ್ನು ನಿರ್ವಹಿಸುವ ಮಿದುಳಿಗೆ ‘ಸಾಕು’ ಎನ್ನುವ ಸಂಕೇತಗಳನ್ನು ಕಳಿಸುವಲ್ಲಿ ಮೊದಲ ಸ್ಥಾನ ಜಠರದ್ದು. ಜಠರಕ್ಕೆ ಹೊಟ್ಟೆ ಎಂದು ಸಾಮಾನ್ಯರ ಹೆಸರು. ಆದರೆ ಪ್ರತೀತಿಯಲ್ಲಿ ಜಠರ ಮತ್ತು ಕರುಳುಗಳನ್ನು ಹೊಂದಿರುವ ಇಡೀ ಭಾಗವನ್ನೂ ಕೆಲವರು ಹೊಟ್ಟೆ ಎಂದೇ ಗುರುತಿಸುತ್ತಾರೆ. ಈ ಗೊಂದಲದ ನಿವಾರಣೆಗಾಗಿ ಹೊಟ್ಟೆ ಎನ್ನುವ ಪದದ ಬದಲಿಗೆ ಜಠರ ಮತ್ತು ಕರುಳು ಎನ್ನುವ ಪ್ರತ್ಯೇಕ ಪದಗಳನ್ನು ಬಳಸಲಾಗುತ್ತದೆ.  

ಬಾಯಿಂದ ಆರಂಭವಾಗುವ ನಮ್ಮ ಆಹಾರ ವಿಲೇವಾರಿ ಅಂಗಗಳ ಸರಣಿ ಗಂಟಲಕುಳಿ (pharynx), ಅನ್ನನಾಳಗಳ ಮೂಲಕ ಜಠರವನ್ನು ತಲುಪಿ, ಅಲ್ಲಿಂದ ಸಣ್ಣ ಕರುಳು, ದೊಡ್ಡ ಕರುಳಿನ ಮೂಲಕ ಮಲದ್ವಾರವನ್ನು ತಲುಪುತ್ತದೆ. ಈ ಸರಣಿಯ ಮೊದಲ ನಿಲ್ದಾಣ ಜಠರ. ಅನ್ನನಾಳದ ಕೆಳತುದಿಯಿಂದ ಸಣ್ಣ ಕರುಳಿನ ಆರಂಭದವರೆಗೆ ಇದರ ಹರಹು. ಎದೆಯ ಭಾಗವನ್ನು ದೇಹದ ಕೆಳಗಿನ ಭಾಗದಿಂದ ಪ್ರತ್ಯೇಕಿಸುವ ವಪೆ (diaphragm) ಎನ್ನುವ ಮಾಂಸದ ಹಾಳೆಗೆ ಹೊಂದಿಕೊಂಡಂತೆ ಎಡಭಾಗದಲ್ಲಿ ಜಠರದ ಸ್ಥಾನ. ಎಡದಿಂದ ಮೊದಲಾಗಿ, ಶರೀರದ ಮಧ್ಯ ರೇಖೆಯನ್ನು ತುಸುವೇ ದಾಟಿ ಬಲಗಡೆಗೆ ಹೆಜ್ಜೆಯಿಡುವ ಜಠರ ಅಲ್ಲಿಗೆ ಕೊನೆಯಾಗಿ ಸಣ್ಣಕರುಳನ್ನು ಸೇರುತ್ತದೆ. ಮಾವಿನಕಾಯಿಯ ರಚನೆಯಂತೆ ಇಂಗ್ಲೀಷಿನ J ಅಕ್ಷರದ ರೀತಿಯಲ್ಲಿರುವ ಜಠರದ ಆಕಾರವನ್ನು ಉದ್ದುದ್ದವಾಗಿ ಸೀಳಿರುವ ಸಿಹಿಗುಂಬಳದ ತುಂಡಿಗೆ ಹೋಲಿಸಬಹುದು. ಜಠರದ ಅಡಿಭಾಗದ ಬದಿಯ ಉದ್ದ ಸುಮಾರು 30 ಸೆಂಟಿಮೀಟರ್.

ಮಾನವ ದೇಹ ಶಾಸ್ತ್ರಜ್ಞರು ಜಠರವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದಾರೆ. ಅನ್ನನಾಳ ಮುಂದುವರೆದು ಜಠರ ಆರಂಭವಾಗುವ ಭಾಗಕ್ಕೆ ಕಾರ್ಡಿಯಾ ಎಂದು ಹೆಸರು. ವಪೆಯ ಸಂಪರ್ಕಲ್ಲಿರುವ ಜಠರದ ಶಿರೋಭಾಗಕ್ಕೆ ಫಂಡಸ್ ಎನುತ್ತಾರೆ. ಆಹಾರವನ್ನು ಶೇಖರಿಸುವ ಜಠರದ ಬಹುತೇಕ ಮಧ್ಯಭಾಗವನ್ನು ಬಾಡಿ ಎನ್ನಬಹುದು. ಜಠರದ ಅಂತಿಮ ಭಾಗ ಮುಂದುವರೆದು ಸಣ್ಣ ಕರುಳನ್ನು ಸೇರುತ್ತದೆ. ಇದನ್ನು ಪೈಲೋರಸ್ ಎನುತ್ತಾರೆ. ಗ್ರೀಕ್ ಭಾಷೆಯಲ್ಲಿ ಪೈಲೋರಸ್ ಎಂದರೆ ಕಾವಲುಗಾರ. ಈ ಭಾಗದಲ್ಲಿರುವ ಬಲಶಾಲಿ ಮಾಂಸಪಟ್ಟಿಗಳು ಆಹಾರವನ್ನು ಸಣ್ಣಕರುಳಿಗೆ ತಳ್ಳಿ, ಅಲ್ಲಿಂದ ಅದು ಪುನಃ ಜಠರಕ್ಕೆ ವಾಪಸ್ ಬಾರದಂತೆ ಕಾಯುವುದರಿಂದ ಈ ಹೆಸರು. ಜಠರದ ಕಾಯಿಲೆಗಳ ತಜ್ಞರಿಗೆ ಅನಾರೋಗ್ಯ ಜಠರದ ಯಾವ ಪ್ರದೇಶದಲ್ಲಿದೆ ಎಂದು ಗುರುತಿಸುವುದಕ್ಕೆ ಈ ವಿಂಗಡಣೆ ಸಹಕಾರಿ. ಜಠರಕ್ಕೆ ಒಟ್ಟು ಐದು ರಕ್ತನಾಳಗಳು ಶುದ್ಧರಕ್ತವನ್ನು ಪೂರೈಸುತ್ತವೆ.

ಖಾಲಿ ಕೊಳವೆಯಂತಹ ರಚನೆಯ ಜಠರದ ಪ್ರತಿಯೊಂದು ಭಾಗದ ಗೋಡೆಯ ದಪ್ಪವೂ ಭಿನ್ನ. ಈ ಗೋಡೆಯ ಸರಾಸರಿ ದಪ್ಪ ಸುಮಾರು ಐದು ಮಿಲಿಮೀಟರ್. ಜಠರದ ಗೋಡೆಯಲ್ಲಿ ಐದು ಪದರಗಳಿವೆ. ಜಠರದ ಗೋಡೆಯ ಒಳಗಿನ ಭಾಗ ಅತ್ಯಂತ ನಯವಾದ ಲೋಳೆ ಪದರ ಹೊಂದಿದೆ. ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಈ ಲೋಳೆಪದರದ ಕೋಶಗಳಲ್ಲಿ ಸ್ಥಂಭಾಕಾರದ ರಚನೆಗಳಿರುತ್ತವೆ. ಲೋಳೆಪದರದ ಅಡಿಭಾಗದಲ್ಲಿ ಸಹಾಯಕ ಜೀವಕೋಶಗಳು, ಕೆಲವು ನರಗಳು ಇರುತ್ತವೆ. ಇದರ ಅಡಿಯಲ್ಲಿ ಜಠರದ ಬಲಶಾಲಿಯಾದ ಮೂರು ಪದರಗಳ ಮಾಂಸಪಟ್ಟಿಗಳಿವೆ. ಪ್ರತಿಯೊಂದು ಪದರದಲ್ಲೂ ಮಾಂಸಪಟ್ಟಿಗಳ ಎಳೆಗಳು ಬೇರೆ ಬೇರೆ ದಿಕ್ಕಿನಲ್ಲಿ ಹರಡುತ್ತವೆ. ಮೂರೂ ಪದರಗಳು ಒಟ್ಟಿಗೆ ಕೆಲಸ ಮಾಡಿ ಮೇಲಿನಿಂದ ಕೆಳಗಿನ ದಿಕ್ಕಿಗೆ ಸಂಕುಚಿಸಿದಾಗ ವೃತ್ತಾಕಾರವಾದ ಅಲೆಯ ನಿರ್ಮಾಣವಾಗಿ ಆಹಾರ ಕೆಳಗೆ ತಳ್ಳಲ್ಪಡುತ್ತದೆ. ಈ ಅಲೆಯನ್ನು ಪೆರಿಸ್ಟಾಲ್ಸಿಸ್ ಎನ್ನುತ್ತಾರೆ. ಈ ಅಲೆಗೆ ಕಾರಣವಾಗುವ ನರಗಳು ಎರಡನೆಯ ಮತ್ತು ಮೂರನೆಯ ಪದರಗಳ ನಡುವೆ ಇರುತ್ತವೆ. ಇಡೀ ಜೀರ್ಣಾಂಗದಲ್ಲಿ ಮೂರು ಪದರಗಳ ಮಾಂಸಪಟ್ಟಿಗಳು ಇರುವುದು ಜಠರದಲ್ಲಿ ಮಾತ್ರ. ಮಾಂಸಪಟ್ಟಿಗಳ ಅಡಿಭಾಗದಲ್ಲಿ ಎರಡು ನಯವಾದ ಆವರಣಗಳಿವೆ. ಇವು ಜಠರದ ಹೊರಭಾಗ ನಯವಾಗಿ ಇರುವಂತೆ ಕಾಯ್ದು, ಜಠರದ ಆಸುಪಾಸು ಇರುವ ಇತರ ಅಂಗಗಳಿಗೆ ಹಾನಿಯಾಗದಂತೆ ಕಾಪಾಡುತ್ತವೆ.

ನಾವು ಸೇವಿಸುವ ವಿಧವಿಧವಾದ ಆಹಾರವು ಕರುಳಿನಲ್ಲಿ ಜೀರ್ಣವಾಗಲು ಬೇಕಾದ ಪ್ರಮುಖ ತಯಾರಿ ಆಗುವುದು ಜಠರದಲ್ಲೇ. ಏಳು ಬಗೆಯ ಗ್ರಂಥಿಗಳು ಜಠರದಲ್ಲಿ ಸಕ್ರಿಯವಾಗಿವೆ. ಈ ಗ್ರಂಥಿಗಳಲ್ಲಿನ ವಿಶಿಷ್ಟ ಕೋಶಗಳು ಜಠರ ರಸವನ್ನು ಬಿಡುಗಡೆ ಮಾಡುತ್ತವೆ. ಇದರಲ್ಲಿ ಅತಿ ಮುಖ್ಯವಾದದ್ದು ಹೈಡ್ರೊಕ್ಲೋರಿಕ್ ಆಮ್ಲ. ಇದರಿಂದ ಜಠರದಲ್ಲಿ ಆಮ್ಲೀಯ ವಾತಾವರಣ ನಿರ್ಮಾಣವಾಗುತ್ತದೆ. ರಸಾಯನ ಶಾಸ್ತ್ರದ ಅತ್ಯಂತ ತೀಕ್ಷ್ಣ ಆಮ್ಲಗಳಲ್ಲಿ ಒಂದೆಂದು ಹೆಸರಾದ ಹೈಡ್ರೊಕ್ಲೋರಿಕ್ ಆಮ್ಲ ನಮ್ಮ ಆಹಾರದಲ್ಲಿ ಇರಬಹುದಾದ ಹಲವಾರು ರೋಗಕಾರಕ ಸೂಕ್ಷ್ಮಜೀವಿಗಳನ್ನು ನಿರ್ನಾಮ ಮಾಡುತ್ತದೆ. ಜೊತೆಗೆ, ಪ್ರೋಟೀನ್ ಪಚನಗೊಳಿಸುವ ಕಿಣ್ವಗಳನ್ನು ಪ್ರಚೋದಿಸುತ್ತದೆ. ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ ಒಂದು ಕ್ಷೌರದ ಬ್ಲೇಡ್ ಅನ್ನು ಕರಗಿಸಬಲ್ಲದು ಎಂದು ಅಂದಾಜಿದೆ. “ಇಷ್ಟು ತೀಕ್ಷ್ಣ ಆಮ್ಲ ಜಠರವನ್ನೇ ಏಕೆ ಸುಟ್ಟುಹಾಕುವುದಿಲ್ಲ?” ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಜಠರದಲ್ಲಿ ಶ್ಲೇಷ್ಮಯುಕ್ತ ಲೋಳೆಯಂತಹ ವಸ್ತು ಸತತವಾಗಿ ತಯಾರಾಗುತ್ತಲೇ ಇರುತ್ತದೆ. ಇದು ಜಠರದ ಗೋಡೆ ಮತ್ತು ಆಮ್ಲದ ನಡುವೆ ಕವಚದಂತಹ ಪದರವನ್ನು ನಿರ್ಮಾಣ ಮಾಡುತ್ತದೆ. ಇದರಿಂದ ಆಮ್ಲದ ಪ್ರಭಾವ ಜಠರದ ಗೋಡೆಯ ಮೇಲೆ ನೇರವಾಗಿ ಆಗುವುದಿಲ್ಲ. ಸಣ್ಣಕರುಳಿನ ಮತ್ತು ಮೇದೋಜೀರಕ ಗ್ರಂಥಿಗಳು ಕ್ಷಾರಯುಕ್ತ ಬೈಕಾರ್ಬೊನೇಟ್ ಲವಣವನ್ನು ಉತ್ಪತ್ತಿ ಮಾಡುತ್ತವೆ. ಜಠರದಿಂದ ಸಣ್ಣಕರುಳನ್ನು ಸೇರುವ ಆಮ್ಲವನ್ನು ಇದು ತಟಸ್ಥಗೊಳಿಸುತ್ತದೆ.

ಆಮ್ಲದ ಜೊತೆಗೆ ಜಠರ ಮತ್ತಷ್ಟು ಮಹತ್ವದ ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತದೆ. ಶರೀರದ ಡಿ.ಎನ್.ಎ. ನಿರ್ವಹಣೆಯಲ್ಲಿ ಪಾತ್ರ ವಹಿಸುವ ವಿಟಮಿನ್ ಬಿ-12 ದೇಹಕ್ಕೆ ಲಭ್ಯವಾಗಲು ಅತ್ಯಗತ್ಯವಾದ ರಾಸಾಯನಿಕವೊಂದು ಜಠರದಲ್ಲೇ ತಯಾರಾಗುತ್ತದೆ. ಇದು ಲಭ್ಯವಾಗದೇ ಹೋದಲ್ಲಿ ಅಪಾಯಕಾರಿ ರಕ್ತಹೀನತೆ ಎಂಬ ಕಾಯಿಲೆಯಿಂದ ಬಳಲುವಂತಾಗುತ್ತದೆ. ಇದರ ಜೊತೆಗೆ ಪ್ರೋಟೀನ್ ಪಚನಕ್ಕೆ ಕಾರಣವಾಗುವ ಮಹತ್ವದ ಕಿಣ್ವವೊಂದನ್ನು ಜಠರ ತಯಾರಿಸುತ್ತದೆ. ಈ ಎಲ್ಲ ಗ್ರಂಥಿಗಳೂ ಸೇರಿ ದಿನವೊಂದಕ್ಕೆ ಸುಮಾರು ಒಂದೂವರೆ ಲೀಟರ್ ಜಠರ ರಸವನ್ನು ಉತ್ಪತ್ತಿ ಮಾಡುತ್ತವೆ.

ಜಠರ ಮೂಲತಃ ಆಹಾರದ ಸಂಗ್ರಹಾಲಯ. ಪ್ರಾಣಿಗಳಲ್ಲಿ ಇದರ ಅಗತ್ಯವೇನು; ಜಠರವೇ ಇಲ್ಲದೆ ನೇರವಾಗಿ ಕರುಳು ಇರುವ ಪ್ರಾಣಿಗಳೂ ಇಲ್ಲವೇ ಎಂಬ ಪ್ರಶ್ನೆ ಸಹಜ. ಜೀವವಿಕಾಸದಲ್ಲಿ ಬೇಟೆಯಾಡುವ ಹಂತಕ ಪ್ರಾಣಿಗಳು ಪ್ರಬಲವಾದಾಗ, ದುರ್ಬಲ ಪ್ರಾಣಿಗಳಿಗೆ ಆಹಾರ ದಕ್ಕಿದಾಗ ಬೇಗಬೇಗನೆ ತಿಂದು, ಸಾವಕಾಶವಾಗಿ ಜೀರ್ಣಿಸಿಕೊಳ್ಳುವ ಅಗತ್ಯ ಒದಗಿತು. ಆಗ ಬೆಳವಣಿಗೆಯಾದದ್ದು ಜಠರ. ಹೀಗಾಗಿ, ಜಠರದಲ್ಲಿ ಆಹಾರ ಸಂಗ್ರಹಕ್ಕೆ ಸಾಕಷ್ಟು ಜಾಗವಿದೆ. ಜಠರದ ಒಳಭಾಗದಲ್ಲಿ ಲೋಳೆಪದರದ ಮಡಿಕೆಗಳಿವೆ. ಇವುಗಳನ್ನು ರೂಗೇ ಎನ್ನುತ್ತಾರೆ. ಜಠರದಲ್ಲಿ ಆಹಾರ ಸಂಗ್ರಹವಾಗುತ್ತಿದ್ದಂತೆ ಈ ಮಡಿಕೆಗಳು ಸಪಾಟಾಗುತ್ತವೆ ಮತ್ತು ಜಠರದ ಸಂಗ್ರಹ ಸಾಮರ್ಥ್ಯ ಏರುತ್ತದೆ. ಈ ಮಡಿಕೆಗಳನ್ನೆಲ್ಲ ಸಪಾಟಾಗಿಸಿದರೆ ಜಠರದ ಕ್ಷೇತ್ರಫಲ ಸುಮಾರು ಮುಕ್ಕಾಲು ಚದರ ಮೀಟರ್ ಆಗಬಹುದು ಎಂದು ಅಂದಾಜು. ಇಷ್ಟು ಪ್ರದೇಶದಲ್ಲಿ ಸುಮಾರು ನಾಲ್ಕು ಲೀಟರ್ ದ್ರವ ತುಂಬಬಹುದು. ಖಾಲಿ ಜಠರದಲ್ಲಿ ರೂಗೇ ಮಡಿಕೆಗಳು ಒತ್ತೊತ್ತಾಗಿ ಇರುವಾಗ ಅದರ ಅಳತೆ ಸುಮಾರು 75 ಮಿಲಿಲೀಟರ್ ಮಾತ್ರ. ಅಂದರೆ, ಖಾಲಿ ಜಠರಕ್ಕೂ, ಸಂಪೂರ್ಣ ತುಂಬಿದ ಜಠರಕ್ಕೂ ಅಳತೆಯಲ್ಲಿ 50 ಪಟ್ಟು ವ್ಯತ್ಯಾಸ ಇರುತ್ತದೆ ಎಂದಾಯಿತು. ಆದರೆ ಇಷ್ಟು ಪ್ರಮಾಣ ತುಂಬಲು ನಮ್ಮ ಮಿದುಳು ಅವಕಾಶ ನೀಡುವುದಿಲ್ಲ. ಜಠರದ ಹಿಗ್ಗುವಿಕೆ ಒಂದು ಹಂತ ತುಂಬಿದ ಕೂಡಲೇ “ಇಷ್ಟು ಸಾಕು” ಎನುವ ಸಂಕೇತಗಳನ್ನು ಮಿದುಳು ನೀಡುತ್ತದೆ. ಅದಕ್ಕಿಂತ ಹೆಚ್ಚಿಗೆ ತುಂಬಲು ಪ್ರಯತ್ನಿಸಿದರೆ ವಾಂತಿಯ ಮೂಲಕ ಜಠರದಲ್ಲಿನ ಆಹಾರವನ್ನು ಹೊರಹಾಕುತ್ತದೆ. ಆಹಾರದ ವಿಷಯದಲ್ಲಿ ಯಾಚಕನ “ಸಾಕು” ಭಾವನೆಯ ಹಿನ್ನೆಲೆ ಇದೇ.

ಜಠರದಲ್ಲಿ ಕೆಲವೊಂದು ರಾಸಾಯನಿಕ ಚೋದಕಗಳೂ ಬಿಡುಗಡೆಯಾಗುತ್ತವೆ. ಈ ರಾಸಾಯನಿಕಗಳು ಜೀರ್ಣಾಂಗ ವ್ಯವಸ್ಥೆಯ ಮಹತ್ವದ ಅಂಶಗಳನ್ನು ನಿರ್ದೇಶಿಸುತ್ತವೆ. ಇಂತಹ ಐದು ಚೋದಕಗಳು ಈಗ ಪತ್ತೆಯಾಗಿವೆ. ಇವುಗಳ ಸಂಖ್ಯೆ ಇನ್ನೂ ಅಧಿಕ ಎಂದು ವಿಜ್ಞಾನಿಗಳ ಅಭಿಮತ.

ಜಠರ ಕೇವಲ ಆಹಾರ ಸಂಗ್ರಹಾಲಯವಷ್ಟೇ ಅಲ್ಲ, ಅದಕ್ಕಿಂತಲೂ ಮಿಗಿಲು ಎನ್ನುವುದಕ್ಕೆ ಅದರ ಗಣಿತವೇ ಪ್ರಮಾಣ.

--------------------

ಜುಲೈ-ಆಗಸ್ಟ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/df1e3319edb3c0237b741164ec8fcb59c339a71b202310.pdf.html 

 ಹೃದಯಾಘಾತದ ಚಿಕಿತ್ಸೆಯ ನಂತರ....

ಡಾ. ಕಿರಣ್ ವಿ.ಎಸ್.

ವೈದ್ಯರು 

 

ನಮ್ಮನ್ನು ಕಾಡುವ ಕಾಯಿಲೆಗಳನ್ನು ಸ್ಥೂಲವಾಗಿ ಎರಡು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯದು, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಗಳು. ಇದಕ್ಕೆ ಕಾರಣ ರೋಗಾಣುಗಳು. ಈ ರೋಗಾಣುಗಳು ಗಾಳಿ, ನೀರು, ಆಹಾರ, ಸ್ಪರ್ಶ ಮೊದಲಾದ ಮಾಧ್ಯಮಗಳ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ. ಇಂತಹ ರೋಗಾಣುಗಳನ್ನು ಪತ್ತೆ ಮಾಡಿ, ಅವು ನಿಗ್ರಹಕ್ಕೆ ಬರುವಂತಹ ಜೀವಿರೋಧಕ ಔಷಧಗಳನ್ನು ಸರಿಯಾದ ಪ್ರಮಾಣದಲ್ಲಿ ಸಾಕಷ್ಟು ಅವಧಿಗೆ ಸೇವಿಸಿದರೆ ಕಾಯಿಲೆ ಇಲ್ಲವಾಗುತ್ತದೆ. ಇದನ್ನು ಸಂಪೂರ್ಣ ಚಿಕಿತ್ಸೆ ಎನ್ನಬಹುದು.

 

ಎರಡನೆಯದು, ಒಬ್ಬರಿಂದ ಮತ್ತೊಬ್ಬರಿಗೆ ನೇರವಾಗಿ ಹರಡದ ಕಾಯಿಲೆಗಳು. ಉದಾಹರಣೆಗೆ ಮಧುಮೇಹ, ಸಂಧಿವಾತ, ಪಾರ್ಶ್ವವಾಯು, ಕ್ಯಾನ್ಸರ್, ನರಗಳ ದೌರ್ಬಲ್ಯ, ಸ್ನಾಯುಗಳ ಸಮಸ್ಯೆ ಮೊದಲಾದುವು. ಇವು ದೀರ್ಘಕಾಲಿಕ ಕಾಯಿಲೆಗಳು. ಇವುಗಳಿಗೆ ಸಂಪೂರ್ಣ ಚಿಕಿತ್ಸೆ ಎಂಬುದಿಲ್ಲ. ಆದರೆ, ಈ ಕಾಯಿಲೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು, ಜೀವನವನ್ನು ಸರಾಗವಾಗಿ ನಡೆಸುವುದು ಸಾಧ್ಯ. ಇದಕ್ಕಾಗಿ ಜೀವನಶೈಲಿಯ ಬದಲಾವಣೆ, ಆಹಾರದಲ್ಲಿ ಸಂಯಮ, ಶಿಸ್ತಿನ ಬದುಕು, ನಿಯಮಿತ ಔಷಧ ಬಳಕೆ, ಸೂಕ್ತವಾದ ವ್ಯಾಯಾಮ, ಕ್ಲುಪ್ತ ಸಮಯದಲ್ಲಿ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆ ಪಡೆಯುವುದು ಮೊದಲಾದ ದಾರಿಗಳಿವೆ. ಇಂತಹ ಕಾಯಿಲೆಗಳ ಪೈಕಿ ಹೃದ್ರೋಗ ಪ್ರಮುಖವಾದದ್ದು.

 

ಹೃದ್ರೋಗಗಳಲ್ಲಿ ಹಲವಾರು ವಿಧಗಳು ಇವೆಯಾದರೂ ಬಹಳ ಜನರ ಸಮಸ್ಯೆ ಹೃದಯಾಘಾತದ್ದು. ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯಾದಾಗ ರಕ್ತದ ಹರಿವಿಗೆ ಅಡಚಣೆಯಾಗುತ್ತದೆ. ಇದು ಒಂದು ಪ್ರಮಾಣವನ್ನು ಮೀರಿದಾಗ ಹೃದಯದ ಮಾಂಸಖಂಡಗಳಿಗೆ ರಕ್ತದ ಪೂರೈಕೆ ಇಲ್ಲದಂತಾಗಿ, ಅವು ನಶಿಸುತ್ತವೆ. ಇದನ್ನು ಹೃದಯಾಘಾತ ಎನ್ನಬಹುದು. ಇಂತಹ ಸಂದರ್ಭದಲ್ಲಿ ಸಾಧ್ಯವಾದಷ್ಟೂ ಬೇಗ ರಕ್ತನಾಳಗಳಲ್ಲಿ ಇರುವ ಅಡಚಣೆಯನ್ನು ನಿವಾರಿಸಿ, ರಕ್ತದ ಪೂರೈಕೆಯನ್ನು ಸರಾಗವಾಗಿಸಬೇಕು. ಇದಕ್ಕೆ ಹಲವಾರು ದಾರಿಗಳಿವೆ. ಆಂಜಿಯೋಗ್ರಾಂ ಮೂಲಕ ಅಡಚಣೆ ಇರುವ ರಕ್ತನಾಳವನ್ನು ಗುರುತಿಸಿ, ಅದರೊಳಗೆ ತೆಳುವಾದ ನಳಿಕೆಯನ್ನು ತೂರಿಸಿ, ಅಡಚಣೆ ಇರುವ ಭಾಗವನ್ನು ಬಲೂನುಗಳ ಮೂಲಕ ಹಿಗ್ಗಿಸಿ, ಅದು ಪುನಃ ಕುಸಿಯದಂತೆ ಸ್ಟೆಂಟ್ ಎನ್ನುವ ಲೋಹದ ಸುರಳಿಯ ಆಸರೆಯನ್ನು ನೀಡಬೇಕು. ಇದನ್ನು ಆಂಜಿಯೋಪ್ಲಾಸ್ಟಿ ಎನ್ನುತ್ತಾರೆ. ಇದು ಸಾಧ್ಯವಾಗದಿದ್ದರೆ ಹೃದಯದ ಶಸ್ತ್ರಚಿಕಿತ್ಸೆ ಮಾಡಿ, ಅಡಚಣೆ ಇರುವ ರಕ್ತನಾಳದ ಭಾಗವನ್ನು ತೆಗೆದುಹಾಕಿ, ಅದರ ಸ್ಥಾನದಲ್ಲಿ ಬೇರೊಂದು ಆರೋಗ್ಯವಂತ ರಕ್ತನಾಳವನ್ನು ಜೋಡಿಸಬೇಕು. ಇದನ್ನು ಬೈಪಾಸ್ ಶಸ್ತ್ರಚಿಕಿತ್ಸೆ ಎನ್ನಲಾಗುತ್ತದೆ. ಇವೆರಡೂ ಸಾಧ್ಯವಿಲ್ಲದಾಗ ರಕ್ತನಾಳಗಳ ಅಡಚಣೆಯನ್ನು ಕರಗಿಸಬಲ್ಲ ಔಷಧಿಗಳನ್ನು ನೀಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಿಸಿಕೊಳ್ಳಬೇಕು.

 

ಈ ಯಾವುದೇ ಚಿಕಿತ್ಸೆಗಳೂ ಹೃದಯವನ್ನು ಮತ್ತೆ ಕೆಲಸ ಮಾಡುವ ಸ್ಥಿತಿಗೆ ತರಬಲ್ಲವಾದರೂ, ಬಹುತೇಕ ಸಂದರ್ಭಗಳಲ್ಲಿ ನೂರು ಪ್ರತಿಶತ ಆರೋಗ್ಯವಂತ ಹೃದಯವನ್ನು ಮತ್ತೆ ನೀಡಲಾರವು. ಅಲ್ಲದೆ, ಒಂದು ಬಾರಿ ಚಿಕಿತ್ಸೆಯಾದ ನಂತರ ಪುನಃ ಇದೇ ರೀತಿ ಆಗುವುದಿಲ್ಲ ಎಂದೇನೂ ಇಲ್ಲ. ಹೃದಯಕ್ಕೆ ರಕ್ತ ಸರಬರಾಜು ಮಾಡುವ ಮೂರು ಮುಖ್ಯ ರಕ್ತನಾಳಗಳಿವೆ. ಅದರಲ್ಲಿ ಒಂದು ನಾಳಕ್ಕೆ ಘಾಸಿಯಾದರೂ ಹೃದಯಾಘಾತ ಆಗಬಹುದು. ಈ ಮುನ್ನ ಚಿಕಿತ್ಸೆಗೆ ಒಳಪಟ್ಟ ರಕ್ತನಾಳದಲ್ಲೂ ಮತ್ತೆ ಸಮಸ್ಯೆ ಕಾಣಬಹುದು. ಅಥವಾ, ಉಳಿದೆರಡು ರಕ್ತನಾಳಗಳು ತೊಂದರೆಗೆ ಒಳಗಾಗಬಹುದು. ಒಟ್ಟಾರೆ, ಹೃದಯಾಘಾತದ ಚಿಕಿತ್ಸೆಯ ನಂತರ ಹೃದಯವನ್ನು ಮತ್ತಷ್ಟು ಜತನದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ಕೆಲವು ಮಾರ್ಗಗಳನ್ನು ಪರಿಗಣಿಸಬಹುದು.

 

1. ಹೃದಯಾಘಾತದ ಚಿಕಿತ್ಸೆಯ ನಂತರ ಹಲವಾರು ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಬೇಕಾಗುತ್ತದೆ. ಪ್ರಸ್ತುತ ಚಿಕಿತ್ಸೆಯ ಸಾಫಲ್ಯಕ್ಕೆ ಮತ್ತು ಮುಂದಿನ ಅವಘಡವನ್ನು ತಪ್ಪಿಸುವುದಕ್ಕೆ ಈ ಔಷಧಗಳು ಸಹಕಾರಿ. ಯಾವುದೇ ಕಾರಣಕ್ಕೂ ಔಷಧ ಸೇವನೆಯನ್ನು ತಪ್ಪಿಸಬಾರದು. ಇದರಲ್ಲಿ ಯಾವುದೇ ಮಾರ್ಪಾಡನ್ನೂ ಸ್ವತಃ ವೈದ್ಯರೇ ಸೂಚಿಸಬೇಕೇ ಹೊರತು, ರೋಗಿಗಳು ಖುದ್ದಾಗಿ ಮಾಡಬಾರದು.

2. ಹೃದಯಾಘಾತದ ತೀವ್ರತೆಯನ್ನು ಅವಲಂಬಿಸಿ ಅದನ್ನು ಮತ್ತೆ ಚೇತರಿಸಿಕೊಳ್ಳುವಂತೆ ಮಾಡಲು ವ್ಯವಸ್ಥಿತ ವಿಧಾನಗಳಿವೆ. ಎಂತಹ ಮತ್ತು ಎಷ್ಟು ವ್ಯಾಯಾಮ ಬೇಕು; ಮಾನಸಿಕ ಒತ್ತಡದ ನಿರ್ವಹಣೆ; ಆಹಾರದಲ್ಲಿ ಸೂಕ್ತ ಮಾರ್ಪಾಡು; ಜೀವನಶೈಲಿಯ ಬದಲಾವಣೆ; ಕೆಟ್ಟ ಚಟಗಳಿಂದ ದೂರವಿರುವುದು; ಸಮಾನಮನಸ್ಕರ ಒಡನಾಟ; ಮೊದಲಾದ ವಿಷಯಗಳ ಬಗ್ಗೆ ತಜ್ಞರ ಸಲಹೆ ಪಡೆದು ಕಟ್ಟುನಿಟ್ಟಾಗಿ ಪಾಲಿಸಬೇಕು.

3. ವೈದ್ಯರು ಸೂಚಿಸಿದ ವೇಳೆಗೆ ಅವರನ್ನು ಕಂಡು ಅಗತ್ಯವಾದ ಪರೀಕ್ಷೆಗಳನ್ನು ಮಾಡಿಸಿ, ಹೃದಯದ ಸ್ಥಿತಿಗತಿಗಳನ್ನು ಅರಿತುಕೊಳ್ಳಬೇಕು. ಚಿಕಿತ್ಸೆಯ ಸೂಕ್ತ ಮಾರ್ಪಾಡಿಗೆ ಇದು ಬಹಳ ಸಹಕಾರಿ. ಇಂತಹ ಭೇಟಿಗಳನ್ನು ನಿರ್ಲಕ್ಷಿಸಬಾರದು.

4. ಹೃದಯಾಘಾತವನ್ನು ಸೂಚಿಸಬಲ್ಲ ಯಾವುದೇ ಲಕ್ಷಣಗಳು ಕಂಡುಬಂದರೆ, ಅದನ್ನು ಶೀಘ್ರವಾಗಿ ವೈದ್ಯರ ಗಮನಕ್ಕೆ ತರಬೇಕು. ಈ ಮೊದಲಿನ ಅನಾರೋಗ್ಯದ ಅನುಭವವನ್ನು ಮುಂದಿನ ಆರೋಗ್ಯ ನಿರ್ವಹಣೆಯ ಕಲಿಕೆಗೆ ಸೂಕ್ತವಾಗಿ ಬಳಸಿಕೊಳ್ಳಬೇಕು.

5.  ಮತ್ತೊಮ್ಮೆ ಹೃದಯಾಘಾತಕ್ಕೆ ಕಾರಣವಾಗಬಲ್ಲ ಮಧುಮೇಹದಂತಹ ಕಾಯಿಲೆಗಳ ಸಮಗ್ರ ನಿರ್ವಹಣೆ, ಅಧಿಕ ರಕ್ತದೊತ್ತಡದ ನಿಗ್ರಹಗಳಿಗೆ ತಜ್ಞರ ಸಲಹೆ ಪಡೆದು ಸರಿಯಾಗಿ ಪಾಲಿಸಬೇಕು. ಹೃದಯಾಘಾತದ ಚಿಕಿತ್ಸೆಯ ವೇಳೆ ಇವು ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಸಾಮಾನ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಈ ಅನಾರೋಗ್ಯಗಳನ್ನು ತಹಬಂದಿಗೆ ತರಲು ವೈದ್ಯರು ಶ್ರಮಿಸಿರುತ್ತಾರೆ. ಇಂತಹ ವೇಳೆಯಲ್ಲಿ ಮಧುಮೇಹದ ನಿಯಂತ್ರಣಕ್ಕೆ ಈ ಮೊದಲು ತೆಗೆದುಕೊಳ್ಳುತ್ತಿದ್ದ ಔಷಧಗಳ ಪ್ರಮಾಣ ಬದಲಾಗಬಹುದು. ಇದನ್ನು ವೈದ್ಯರ ಬಳಿ ಸರಿಯಾಗಿ ಚರ್ಚಿಸಿ, ಸೂಕ್ತವಾದ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.

6. ಹೃದಯಾಘಾತದ ನಂತರದ ಅವಧಿಯಲ್ಲಿ ದೇಹತೂಕದ ನಿರ್ವಹಣೆ ಕಷ್ಟವಾಗುತ್ತದೆ. ಶರೀರದ ಚಲನೆಯಲ್ಲಿ, ವ್ಯಾಯಾಮದಲ್ಲಿ ಮಿತಿಗಳನ್ನು ವಹಿಸುವುದರಿಂದ, ಕೆಲ ಔಷಧಗಳ ಅಡ್ಡ-ಪರಿಣಾಮಗಳಿಂದ ಬೊಜ್ಜಿನ ಸಾಧ್ಯತೆ ಅಧಿಕವಾಗುತ್ತದೆ. ಶರೀರದ ತೂಕವನ್ನು ಜಾಣತನದಿಂದ ನಿರ್ವಹಿಸುವುದು ಅಗತ್ಯ. ಕ್ಯಾಲರಿಗಳು ಹೆಚ್ಚಾಗದಂತೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಆಹಾರ ತಜ್ಞರು ನೆರವಾಗಬಲ್ಲರು.

 

ಹೃದಯಾಘಾತದ ಚಿಕಿತ್ಸೆ ಒಂದು ಸಮಸ್ಯೆಯ ತಾತ್ಕಾಲಿಕ ಅಂತ್ಯವೂ ಹೌದು; ಮತ್ತೊಂದು ದೀರ್ಘಕಾಲಿಕ ಜವಾಬ್ದಾರಿಯೂ ಹೌದು. ಇದರ ಬಗ್ಗೆ ಅರಿವನ್ನು ಮೂಡಿಸಿಕೊಂಡು, ಸಮಸ್ಯೆ ಮತ್ತೊಮ್ಮೆ ಉಲ್ಬಣಗೊಳ್ಳದಂತೆ ಆರೋಗ್ಯವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ.

--------------

(ದಿನಾಂಕ 03/10/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/health-care-after-heart-attack-doctor-suggestions-2503867) 

 ನಿರ್ಜಲೀಕರಣ - ಕಾರಣಗಳು ಮತ್ತು ಪರಿಹಾರಗಳು

ಡಾ. ಕಿರಣ್ ವಿ.ಎಸ್.

ವೈದ್ಯರು

ನಮ್ಮ ದೇಹದ ಬಹುಭಾಗ ನೀರು. “ಭೂಮಿಯ ಶೇಕಡಾ 66 ನೀರು; ಅಂತೆಯೇ, ದೇಹದ 66 ಪ್ರತಿಶತ ನೀರು” ಎನ್ನುವ ಚಮತ್ಕಾರದ ಮಾತಿದೆ. ಸುಮಾರು 70 ಕಿಲೋಗ್ರಾಂ ತೂಗುವ ವ್ಯಕ್ತಿಯ ಶರೀರದ 40-45 ಕಿಲೋಗ್ರಾಂ ನೀರು ಎಂದು ಅಂದಾಜಿಸಬಹುದು. ಸಣ್ಣ ಮಕ್ಕಳ ದೇಹದಲ್ಲಿ ಈ ನೀರಿನ ಪ್ರತಿಶತ ಪ್ರಮಾಣ ಅಧಿಕ; ವೃದ್ಧರಲ್ಲಿ ಸ್ವಲ್ಪ ಕಡಿಮೆ. ಮೂತ್ರ, ಬೆವರು, ಶ್ವಾಸದ ಆರ್ದ್ರತೆ, ಮತ್ತು ವಾತಾವರಣದ ಉಷ್ಣತೆಗೆ ಚರ್ಮದಿಂದ ಆವಿಯಾಗುವ ನೀರಿನ ಪ್ರಮಾಣವನ್ನು ನಾವು ಶರೀರಕ್ಕೆ ಮತ್ತೆ ನೀಡಬೇಕು. ನಾವು ಸೇವಿಸುವ ದ್ರವದ ಪ್ರಮಾಣ ನಮ್ಮ ದೇಹದಿಂದ ಹೊರ ಹೋಗುವ ನೀರಿನ ಅಂಶಕ್ಕಿಂತ ಕಡಿಮೆಯಾದರೆ ಶರೀರದ ಒಟ್ಟಾರೆ ನೀರಿನ ಮಟ್ಟ ಇಳಿದುಹೋಗುತ್ತದೆ. ಇದನ್ನೇ ನಿರ್ಜಲೀಕರಣ ಎನ್ನಬಹುದು.  

ಏಕಕೋಶ ಜೀವಿಗಳಿಂದ ಮೊದಲಾದ ಜೀವವಿಕಾಸ ಆರಂಭವಾದದ್ದು ಸಮುದ್ರದ ನೀರಿನಲ್ಲಿ. ಈ ಪ್ರಕ್ರಿಯೆ  ಮುಂದುವರೆದಂತೆಲ್ಲ ಬಹುಕೋಶ ಜೀವಿಗಳು ವಿಕಾಸಗೊಂಡವು. ಇದು ಮುಂದುವರೆದು ನೆಲದ ಮೇಲೆ ಬದುಕಬಲ್ಲ ಜೀವಿಗಳು ವಿಕಸನವಾದವು. ಜೀವವಿಕಾಸ ಪ್ರಕ್ರಿಯೆಯನ್ನು ಯಾವುದೇ ದಿಕ್ಕಿನಲ್ಲಿ ಗಮನಿಸಿದರೂ ಜೀವಿಗಳ ಒಡಲಿನಲ್ಲಿ ಸಮುದ್ರದ ವಾತಾವರಣವೇ ಇರುತ್ತದೆ ಎಂದು ತಜ್ಞರ ಅಭಿಮತ. ಹೀಗಾಗಿ, ಸಮುದ್ರದ ನೀರಿನಂತೆಯೇ ನಮ್ಮ ದೇಹವೂ ಹಲವಾರು ಲವಣಗಳಿಗೆ ಮನೆ. ಈ ಉಪ್ಪಿನ ಅಂಶ ದೇಹದ ನೀರಿನಲ್ಲಿ ಕರಗಿ ದ್ರಾವಣದ ರೂಪದಲ್ಲಿರುತ್ತದೆ. ಈ ಲವಣಗಳು ದೇಹದ ಕೆಲಸಗಳಿಗೆ ಅತ್ಯಗತ್ಯ. ಶರೀರದೊಳಗಿನ ನೀರು ಮತ್ತು ಲವಣಗಳ ಅನುಪಾತ ಒಂದು ನಿರ್ದಿಷ್ಟ ಮಟ್ಟವನ್ನು ಕಾಯ್ದುಕೊಳ್ಳಬೇಕು. ನೀರಿನ ಭಾಗ ಹೆಚ್ಚಾದರೆ ಲವಣಗಳ ಸಾಂದ್ರತೆ ಕಡಿಮೆಯಾಗುತ್ತದೆ. ಒಂದು ವೇಳೆ ದೇಹದಲ್ಲಿ ನಿರ್ಜಲೀಕರಣವಾದರೆ ಉಪ್ಪಿನ ಮಟ್ಟ ಏರುತ್ತದೆ. ಈ ಎರಡೂ ಸಂದರ್ಭಗಳಲ್ಲಿ ಶರೀರದ ನಿರ್ವಹಣೆ ಹಳಿ ತಪ್ಪುತ್ತದೆ.

ಶರೀರದ ಚಯಾಪಚಯಗಳಿಂದ ಸದಾ ಕಾಲ ನೀರು ಬಾಷ್ಪವಾಗುತ್ತಲೆ ಇರುತ್ತದೆ. ಈ ನೀರಿನ ಅಂಶ ಒಂದು ಹಂತಕ್ಕಿಂತ ಕಡಿಮೆಯಾದಾಗ ಮಿದುಳು ಅದನ್ನು ದಾಹ ಎಂದು ಗುರುತಿಸುತ್ತದೆ. ನೀರಡಿಕೆ ಎಂಬುದು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿದೆ ಎಂದು ನಮ್ಮ ಮಿದುಳು ನೀಡುವ ಸಂಕೇತ. ಈ ಸೂಚನೆಯನ್ನು ಅವಗಣಿಸಿದರೆ, ಅಥವಾ ನೀರಿನ ಬದಲಿಗೆ ಸಕ್ಕರೆಯುಕ್ತ ಪೇಯಗಳನ್ನು ಸೇವಿಸಿದರೆ, ನೀರಡಿಕೆ ತಾತ್ಕಾಲಿಕವಾಗಿ ಇಂಗುತ್ತದೆ. ಸಕ್ಕರೆಯುಕ್ತ ಪಾನೀಯಗಳು ಮೂತ್ರಪಿಂಡಗಳ ಮೂಲಕ ಹೆಚ್ಚು ನೀರನ್ನು ಸೋಸಿ, ಇನ್ನಷ್ಟು ನೀರನ್ನು ಮೂತ್ರದಲ್ಲಿ ಹೊರಹಾಕುತ್ತವೆ. ಇಂತಹ ಪಾನೀಯಗಳ ಜೊತೆಗೆ ಸೇವಿಸಿದ ನೀರಿಗಿಂತ ಶರೀರ ಹೊರಹಾಕುವ ನೀರಿನ ಅಂಶವೇ ಅಧಿಕ. ಹೀಗಾಗಿ, ದಾಹವಾದಾಗ ಮೊದಲು ಸಾಕಷ್ಟು ನೀರು ಕುಡಿಯುವುದು ಸರಿಯಾದ ಪದ್ದತಿ.

ನಿರ್ಜಲೀಕರಣದ ಲಕ್ಷಣಗಳು ಹಲವಾರು - ದಾಹ, ತಲೆಸುತ್ತಿವಿಕೆ, ಬಾಯಿ ಒಣಗುವುದು, ಸುಸ್ತು, ನಿತ್ರಾಣ, ಮಂಕು ಕವಿಯುವುದು, ಕಣ್ಣು ಕಪ್ಪುಗಟ್ಟುವುದು, ಮೂತ್ರದ ಪ್ರಮಾಣ ಕಡಿಮೆಯಾಗುವುದು, ಮೂತ್ರ ಗಾಢ ಹಳದಿ ಬಣ್ಣಕ್ಕೆ ತಿರುಗುವುದು, ಮೊದಲಾದುವು. ಶರೀರದ ಸಹಜ ನೀರಿನ ಮಟ್ಟದಲ್ಲಿ ಎರಡು ಪ್ರತಿಶತ ಇಳಿಕೆಯಾದರೂ ಈ ಲಕ್ಷಣಗಳು ಕಾಣುತ್ತವೆ. ಮೂರು ಪ್ರತಿಶತ ಕಡಿಮೆಯಾದರೆ ಆಹಾರದ ರುಚಿ ಕಡಿಮೆಯಾಗಿ, ಪ್ರಜ್ಞೆ ತಪ್ಪುವಂತಾಗುತ್ತದೆ. ಇದಕ್ಕಿಂತ ಹೆಚ್ಚಿನ ಅಂಶ ನಷ್ಟವಾದರೆ ಆಸ್ಪತ್ರೆ ಸೇರುವ ಅಗತ್ಯ ಬರಬಹುದು.

ನಿರ್ಜಲೀಕರಣಕ್ಕೆ ಕಾರಣಗಳನ್ನು ಎರಡು ಮುಖ್ಯ ವಿಭಾಗಗಳಾಗಿ ಪರಿಗಣಿಸಬಹುದು: ಅಗತ್ಯಕ್ಕಿಂತ ಕಡಿಮೆ ನೀರಿನ ಸೇವನೆ. ಮತ್ತು ನೀರಿನ ಅಧಿಕ ನಷ್ಟ. ದೇಹದ ಸಹಜ ನೀರಿನ ಮಟ್ಟವನ್ನು ಕಾಯ್ದುಕೊಳ್ಳಲು ವಯಸ್ಕರು ದಿನವೊಂದಕ್ಕೆ ಕನಿಷ್ಠ ಒಂದೂವರೆ ಲೀಟರ್ ನೀರನ್ನು ಕುಡಿಯಬೇಕು. ಹೆಚ್ಚು ಶ್ರಮದ ಕೆಲಸ ಮಾಡುವವರಿಗೆ, ರೋಗಿಗಳಿಗೆ, ಹಾರ್ಮೋನ್ ವ್ಯತ್ಯಯ ಇರುವವರಿಗೆ, ಚಯಾಪಚಯ ಕ್ರಿಯೆಗಳು ಅಧಿಕ ಮಟ್ಟದಲ್ಲಿ ಉಳ್ಳವರಿಗೆ ನೀರಿನ ಅಗತ್ಯ ಹೆಚ್ಚಾಗಿರುತ್ತದೆ. ಕಾಯಿಲೆಯ ವೇಳೆಯಲ್ಲಿ, ಜ್ವರದ ಸಮಯದಲ್ಲಿ ದೇಹದಿಂದ ಅಧಿಕ ಪ್ರಮಾಣದ ನೀರು ಆವಿಯಾಗುತ್ತದೆ. ಬಿಸಿಲುಗಾಲದಲ್ಲಿ, ಸೂರ್ಯನ ಶಾಖ ಹೆಚ್ಚು ಇರುವ ದೇಶಗಳಲ್ಲಿ ಚರ್ಮದಿಂದ ಹೆಚ್ಚಿನ ಪ್ರಮಾಣದ ನೀರು ಇಂಗುತ್ತದೆ. ಅತಿಸಾರ ಭೇದಿ, ವಾಂತಿಯಂತಹ ಕಾಯಿಲೆಗಳ ವೇಳೆ ಅಲ್ಪ ಸಮಯದಲ್ಲಿ ಬಹಳಷ್ಟು ನೀರಿನ ಅಂಶ ಶರೀರದಿಂದ ಹೊರಹೋಗುತ್ತದೆ. ಮಧುಮೇಹಿಗಳಲ್ಲಿ, ಮದ್ಯಪಾನಿಗಳಲ್ಲಿ ಅತಿಮೂತ್ರದ ಮೂಲಕ ನೀರಿನ ಅಂಶ ಕಡಿಮೆಯಾಗುತ್ತದೆ. ಮುಕ್ತವಾಗಿ ಗಾಳಿಯಾಡದ, ಹೆಚ್ಚು ಜನಸಾಂದ್ರತೆಯುಳ್ಳ ಜಿಮ್'ಗಳಲ್ಲಿ ಸಹಜವಾಗಿಯೇ ವಾತಾವರಣದ ಉಷ್ಣತೆ ಹೆಚ್ಚಿರುತ್ತದೆ. ಅಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಶ್ರಮದ ವ್ಯಾಯಾಮ ಮಾಡುವಾಗ ಶರೀರದ ನೀರಿನ ಅಂಶ ಸಹಜಕ್ಕಿಂತಲೂ ವೇಗವಾಗಿ ನಷ್ಟವಾಗುತ್ತದೆ. ಆಗ ತೀವ್ರವಾಗಿ ಅಧಿಕವಾಗುವ ರಕ್ತದಲ್ಲಿನ ಲವಣದ ಅಂಶ ಹೃದಯದ ಬಡಿತವನ್ನು ಏರುಪೇರಾಗಿಸಬಹುದು. ಜಿಮ್'ಗಳಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿದ ನಂತರ ಹಠಾತ್ತಾಗಿ ಹೃದಯದ ಸಮಸ್ಯೆ ಕಾಣುವವರಲ್ಲಿ ಈ ಕಾರಣವೂ ಒಂದು.

ನಿರ್ಜಲೀಕರಣಕ್ಕೆ ಇರುವ ಏಕೈಕ ಚಿಕಿತ್ಸೆ ಶರೀರದ ನೀರಿನ ಅಂಶವನ್ನು ಪುನಃ ಸಾಮಾನ್ಯ ಮಟ್ಟಕ್ಕೆ ತಲುಪಿಸುವುದು. ನೀರಿನ ನಷ್ಟವನ್ನು ನೀರಿನಿಂದಲೇ ತುಂಬಬೇಕು. ಅಲ್ಪ ಪ್ರಮಾಣದ ನಿರ್ಜಲೀಕರಣದ ಚಿಕಿತ್ಸೆಯಲ್ಲಿ ಓ.ಆರ್.ಎಸ್. ದ್ರಾವಣ, ನಿಂಬೆ ಪಾನಕ, ಅಕ್ಕಿಯ ಗಂಜಿ, ಸೂಪ್ ಮೊದಲಾದವು ಸಾಕಾಗುತ್ತವೆ.  ಆದರೆ, ನಿರ್ಜಲೀಕರಣ ತೀವ್ರವಾದಾಗ ರಕ್ತದಲ್ಲಿನ ಉಪ್ಪಿನ ಅಂಶಗಳನ್ನು ಅಳೆದು, ಅದಕ್ಕೆ ಸಂವಾದಿಯಾದ ಲವಣಯುಕ್ತ ನೀರಿನ ಬಳಕೆ ಬೇಕಾಗುತ್ತದೆ.  ಚಿಕಿತ್ಸೆಯ ಪ್ರತಿಯೊಂದು ಹಂತದಲ್ಲೂ ದೇಹದ ನೀರು ಮತ್ತು ಲವಣಗಳ ಅನುಪಾತವನ್ನು ಸರಿಯಾದ ಮಟ್ಟದಲ್ಲಿ ನಿರ್ವಹಿಸುವುದು ಬಹಳ ಮುಖ್ಯ. ಈ ಪ್ರಕ್ರಿಯೆಯಲ್ಲಿ ಅನುಪಾತ ಏರುಪೇರಾದರೆ ಜೀವಕ್ಕೆ ಅಪಾಯವಾಗಬಹುದು. ಲವಣಯುಕ್ತ ನೀರಿನ ಸೇವನೆ ಸಾಧ್ಯವಿಲ್ಲದಿರುವಾಗ ಸೂಕ್ತವಾದ ಸಲೈನ್ ದ್ರಾವಣವನ್ನು ನೇರವಾಗಿ ರಕ್ತನಾಳಕ್ಕೆ ಸೇರಿಸಬೇಕಾಗುತ್ತದೆ.

ಅವಕಾಶ ದೊರೆತಾಗಲೆಲ್ಲ ಸ್ವಲ್ಪ-ಸ್ವಲ್ಪ ನೀರು ಕುಡಿಯುತ್ತಿರುವುದು ಒಳಿತು. ನಮ್ಮ ವಾಸದ ವಾತಾವರಣ ಮತ್ತು ಕೆಲಸದ ಪ್ರಮಾಣಕ್ಕೆ ಅನುಗುಣವಾಗಿ ಅಗತ್ಯವಾದಷ್ಟು ನೀರನ್ನು ಸೇವಿಸುವುದು ಬಹಳ ಮುಖ್ಯ. ನಿರ್ಜಲೀಕರಣ ಅನೇಕ ಕಾಯಿಲೆಗಳಿಗೆ ರಹದಾರಿ. ದೇಹದಲ್ಲಿನ ನೀರಿನ ಅಂಶವನ್ನು ಸರಿಯಾದ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.

-------------------

(ದಿನಾಂಕ 12/9/2023 ರ ಪ್ರಜಾವಾಣಿಯ ಕ್ಷೇಮ ಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/body-needs-water-to-avoid-dehydration-2476139)