ಶನಿವಾರ, ಅಕ್ಟೋಬರ್ 25, 2025

 

ರಕ್ತದ ಗಣಿತ – ಭಾಗ 1 – ಕೋಶಗಳು

ಡಾ. ಕಿರಣ್.ವಿ.ಎಸ್.

ವೈದ್ಯರು

 ಷೇಕ್ಸ್ಪಿಯರ್ ಮಹಾಶಯನ ಎಲ್ಲ ನಾಟಕಗಳಲ್ಲಿ ಇರುವ ಸಾಮಾನ್ಯ ಅಂಶ ಎಂದರೆ “ರಕ್ತ” ಎನ್ನುವ ಪದದ ಬಳಕೆ! ಜಗತ್ತಿನ ಬಹಳಷ್ಟು ಜನರನ್ನು ಭಾವನಾತ್ಮಕವಾಗಿ ಬೆಸೆಯಬಲ್ಲ ಅಂಗಾಂಶ ರಕ್ತ. ಕವಿಗಳು, ಸಾಹಿತಿಗಳು, ವಾಗ್ಮಿಗಳು, ಸಿನೆಮಾದವರು ರಕ್ತದ ಬಗ್ಗೆ ಸಾಕಷ್ಟು ಮನಮುಟ್ಟುವ ಮಾತುಗಳನ್ನು ಹೇಳಿದ್ದಾರೆ; ಜನರ ಅಂತರಂಗವನ್ನು ತಟ್ಟಿದ್ದಾರೆ. ವೈಜ್ಞಾನಿಕ ದೃಷ್ಟಿಯಿಂದಲೂ ರಕ್ತ ಶರೀರದ ಬಹು ಮುಖ್ಯ ಅಂಗಾಂಶ. ಇದರ ಅತಿ ದೊಡ್ಡ ವಿಸ್ಮಯ ಎಂದರೆ, ಇದು ದ್ರವರೂಪದ್ದು. ಶರೀರದಲ್ಲಿ ಇರುವ ಎಲ್ಲ ವಿಶಿಷ್ಟ ದ್ರವಗಳೂ ರಕ್ತದ ಜರಡಿಯಿಂದ ಬಂದಂಥವುಗಳೇ.

ನದಿಗಳು ದೇಶದ ಜೀವನಾಡಿ ಎಂದು ಕೇಳಿದ್ದೇವೆ. ನೀರಿನ ಸ್ರೋತವಾಗಿ, ಕೃಷಿಗೆ ಆಧಾರವಾಗಿ, ಪ್ರಯಾಣಕ್ಕಾಗಿ, ಹಲವಾರು ಸ್ಥಳಗಳನ್ನು ಬೆಸೆಯುವುದಕ್ಕಾಗಿ, ಸಾಮಾನು-ಸರಂಜಾಮುಗಳ ಸಾಗಣೆಗಾಗಿ, ಒಟ್ಟಾರೆ ನಾಗರಿಕ ಜೀವನದ ಆಧಾರಶಕ್ತಿಯಾಗಿ ನದಿಗಳ ಪಾತ್ರವಿದೆ. ಅಂತೆಯೇ ನಮ್ಮ ಶರೀರದಲ್ಲಿ ರಕ್ತವೂ ಕೂಡ. ಇಡೀ ದೇಹದಲ್ಲಿ, ಒಂದು ನಿಗದಿತ ಸ್ಥಳದಲ್ಲಿ ಹೆಚ್ಚು ಚಲನೆ ಇಲ್ಲದೆ ವ್ಯಾಪಿಸಿಕೊಂಡಿರುವ ಎಲ್ಲ ಅಂಗಾಂಗಗಳನ್ನು ಬೆಸೆಯುವುದು ರಕ್ತ; ಅವುಗಳ ಬೇಕು-ಬೇಡಗಳನ್ನು ಪೂರೈಸುವುದು ರಕ್ತ. ಆಯಾ ಅಂಗಗಳ ಸಂದೇಶಗಳನ್ನು ಮಿದುಳಿಗೆ ಒಯ್ಯುವ ಕೆಲಸವನ್ನು ಕೂಡ ರಕ್ತ ಮಾಡುತ್ತದೆ. ನಿರ್ನಾಳ ಗ್ರಂಥಿಗಳ ಹಾರ್ಮೋನ್ ಸ್ರವಿಕೆಗಳ ವಾಹಕವೂ ರಕ್ತ. ಹೀಗೆ ರಕ್ತ ಜೀವದ್ರವ; ರಕ್ತವೇ ಜೀವ.

ಶರೀರದೊಳಗೆ ರಕ್ತದ ಪರಿಚಲನೆ ಅತ್ಯಂತ ವ್ಯವಸ್ಥಿತವಾಗಿ ಆಗುವಂತಹ ಕ್ರಿಯೆ. ಅಸಲಿಗೆ ರಕ್ತ ಎನ್ನುವ ದ್ರವ ಕೇವಲ ರಕ್ತನಾಳಗಳ ಒಳಗೆ ಮಾತ್ರ ಇರುವಂತಹದ್ದು. ಈ ರಕ್ತನಾಳಗಳ ಹರಹು ಅತ್ಯಂತ ವಿಶಾಲ. ಎದೆಗೂಡಿನಲ್ಲಿ ಸುರಕ್ಷಿತವಾಗಿ ಕುಳಿತಿರುವ ಹೃದಯದ ಎಡಭಾಗದಿಂದ ಅಯೋರ್ಟಾ ಎನ್ನುವ ಮಹಾಧಮನಿ ಟಿಸಿಲು ಟಿಸಿಲಾಗಿ ಕವಲೊಡೆಯುತ್ತಾ, ಅತ್ಯಂತ ಸೂಕ್ಷ್ಮರೂಪದ ರಕ್ತನಾಳಗಳ ಮೂಲಕ ಇಡೀ ಶರೀರವನ್ನು ವ್ಯಾಪಿಸುತ್ತದೆ. ರಕ್ತನಾಳಗಳ ನೇರ ಸರಬರಾಜು ಇಲ್ಲದ ದೇಹದ ಭಾಗಗಳೂ ರಕ್ತದಿಂದಲೇ ಪರೋಕ್ಷವಾಗಿ ಸಾರವನ್ನು ಹೀರುತ್ತವೆ. ಹೀಗೆ ರಕ್ತ ಶರೀರದ ಎಲ್ಲ ಅಂಗಗಳನ್ನು ತಲುಪಿದರೂ ಎಲ್ಲಿಯೂ ಮುಕ್ತವಾಗಿ ಚೆಲ್ಲಾಡುವುದಿಲ್ಲ; ಎಲ್ಲೆಡೆಯೂ ರಕ್ತನಾಳಗಳ ಒಳಗೇ ಉಳಿಯುತ್ತದೆ.

ರಕ್ತದಲ್ಲಿ ಮುಖ್ಯವಾಗಿ ಎರಡು ಭಾಗಗಳು – ರಕ್ತದ 45% ಕೋಶಗಳು ಮತ್ತು ಉಳಿದ 55% ದ್ರವರೂಪದಲ್ಲಿನ ಪ್ಲಾಸ್ಮಾ. ಇದರಲ್ಲಿ ಕೋಶದ ಭಾಗವನ್ನು ಪ್ರಸ್ತುತ ಸಂಚಿಕೆಯಲ್ಲಿ ವಿವರಿಸಲಾಗುತ್ತದೆ. ಎರಡನೆಯ ಭಾಗದಲ್ಲಿ ಪ್ಲಾಸ್ಮಾ ಕುರಿತಾದ ವಿವರಣೆ ಬರುತ್ತದೆ.

ರಕ್ತದ ಕೋಶಗಳಲ್ಲಿ ಮೂರು ವಿಧ – ಕೆಂಪು ರಕ್ತಕಣಗಳು, ಬಿಳಿಯ ರಕ್ತಕೋಶಗಳು ಮತ್ತು ಪ್ಲೇಟ್ಲೆಟ್ ಕಣಗಳು. ಇದರಲ್ಲಿ ಅತ್ಯಂತ ವಿಫುಲ ಸಂಖ್ಯೆಯಲ್ಲಿ ಇರುವುದು ಕೆಂಪು ರಕ್ತಕಣಗಳು. ನಮ್ಮ ಶರೀರದಲ್ಲಿ ಇರುವ ಎಲ್ಲ ಕೋಶಗಳ ಪೈಕಿ ಶೇಕಡಾ 80 ಕ್ಕಿಂತಲೂ ಅಧಿಕ ಸಂಖ್ಯೆ ಕೆಂಪು ರಕ್ತಕಣಗಳದ್ದು. ವಯಸ್ಕರ ಶರೀರದಲ್ಲಿ ಕನಿಷ್ಠ 25 ಟ್ರಿಲಿಯನ್ (25 ಲಕ್ಷ-ಕೋಟಿ) ಕೆಂಪು ರಕ್ತಕಣಗಳಿವೆ ಎಂದು ಅಂದಾಜು. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 500-ಕೋಟಿ ಕೆಂಪು ರಕ್ತಕಣಗಳು ಇರುತ್ತವೆ. ಪ್ರತಿಯೊಂದು ಕೆಂಪು ರಕ್ತಕಣದ ವ್ಯಾಸ ಸುಮಾರು 6-8 ಮೈಕ್ರೋಮೀಟರ್. ಅಂದರೆ, ಒಂದು ಮಿಲಿಮೀಟರ್ ಅನ್ನು ಸಾವಿರ ಭಾಗ ಮಾಡಿದರೆ, ಅದರಲ್ಲಿ 6-8 ಭಾಗ. ಕೆಂಪು ರಕ್ತಕಣದ ಆಕಾರ ಎರಡೂ ಬದಿಯ ನಿಮ್ನ ಮಸೂರದ್ದು. ಸರಳವಾಗಿ ಹೇಳುವುದಾದರೆ ಎರಡು ತಟ್ಟೆಗಳನ್ನು ಬೆನ್ನು-ಬೆನ್ನಿಗೆ ಒತ್ತಿ ಹಿಡಿದಂತೆ. ಇದರಿಂದ ಕೆಂಪು ರಕ್ತಕಣಗಳು ಮಗುಚಿ, ಬಳುಕಿ, ಬಾಗಿ ತಮಗಿಂತ ಸಣ್ಣ ವ್ಯಾಸದ ರಕ್ತನಾಳಗಳ ಒಳಗೂ ನುಸುಳುತ್ತವೆ.

ಕೆಂಪು ರಕ್ತಕಣಗಳ ಅತಿ ಮುಖ್ಯ ಅಂಶವೆಂದರೆ, ಅವುಗಳಲ್ಲಿ ಕೋಶಕೇಂದ್ರ ಇಲ್ಲ; ಅವುಗಳು ವಿಭಜಿಸುವುದಿಲ್ಲ. ಕೋಶದ್ರವ್ಯವನ್ನು ಹೊರತುಪಡಿಸಿ, ಸಾಮಾನ್ಯ ಜೀವಕೋಶದಲ್ಲಿರುವ ಬೇರಾವ ಅಂಶಗಳೂ ಕೆಂಪು ರಕ್ತಕಣಗಳಲ್ಲಿ ಇಲ್ಲ. ಒಂದು ಲೆಕ್ಕಕ್ಕೆ, ಅವುಗಳಿಗೆ ಜೀವವೇ ಇಲ್ಲ. ಅವೇನಿದ್ದರೂ ಆಕ್ಸಿಜನ್ ಎನ್ನುವ ಸರಂಜಾಮು ಹೊತ್ತೊಯ್ಯುವ ವಾಹನಗಳು ಇದ್ದಂತೆ. ಅದರೊಳಗೆ ಆಕ್ಸಿಜನ್ ಎನ್ನುವ ಸರಕು ತುಂಬುವುದು ಶ್ವಾಸಕೋಶಗಳು. ಬಂಡಿ ಓಡಿಸುವ ಚಾಲಕ ಹೃದಯದ ಎಡಭಾಗದ ಪಂಪ್. ಆಯಾ ಅಂಗಗಳ ಜೀವಕೋಶಗಳು ಈ ಸರಕಿನ ಗ್ರಾಹಕರು. ತಮ್ಮ ಮನೆಯ ಬಳಿ ಕೆಂಪು ರಕ್ತಕಣ ಎನ್ನುವ ವಾಹನ ಬಂದಾಗ ಆಕ್ಸಿಜನ್ ಎನ್ನುವ ಸರಕನ್ನು ತಮಗೆ ಬೇಕಾದ ಪ್ರಮಾಣದಲ್ಲಿ ಇಳಿಸಿಕೊಳ್ಳುವುದು ಆಯಾ ಅಂಗದ ಕರ್ತವ್ಯ. ಹೀಗೆ ಸರಕು ಇಳಿಸಿಕೊಂಡ ನಂತರ ಖಾಲಿ ಬಂಡಿ ವಾಪಸ್ ಕಳಿಸುವುದು ಹೇಗೆ? ಹಾಗಾಗಿ, ತಮಗೆ ಬೇಡವಾದ ಇಂಗಾಲದ ಡೈ-ಆಕ್ಸೈಡ್ ಎನ್ನುವ ತ್ಯಾಜ್ಯವನ್ನು ಕೆಂಪು ರಕ್ತಕಣವೆಂಬ ವಾಹನಕ್ಕೆ ತುಂಬಿ ಮತ್ತೆ “ರೈಟ್-ರೈಟ್” ಎಂದರೆ ಹೃದಯದ ಬಲಭಾಗದ ಕಡೆಗೆ, ಅಲ್ಲಿಂದ ಶ್ವಾಸಕೋಶಗಳತ್ತ ಮತ್ತೆ ಅವುಗಳ ಪಯಣ ಆರಂಭ. ಕೆಂಪು ರಕ್ತಕಣಗಳ ಬಂಡಿ ಹೀಗೆ ಶ್ವಾಸಕೋಶ ತಲುಪಿದಾಗ ಅದರ ಇಂಗಾಲದ ಡೈ-ಆಕ್ಸೈಡ್ ಅನ್ನು ಇಳಿಸಿಕೊಂಡು, ಅದರೊಳಗೆ ಮತ್ತೆ ಆಕ್ಸಿಜನ್ ಸರಕನ್ನು ತುಂಬುವುದು ಶ್ವಾಸಕೋಶಗಳ ಕೆಲಸ. ಈ ಲೋಡಿಂಗ್-ಅನ್ಲೋಡಿಂಗ್ ಕೆಲಸ ಬದುಕಿನ ಉದ್ದಕ್ಕೂ ನಿರಂತರ ಸಾಗುತ್ತಲೇ ಇರಬೇಕು. ಅದಕ್ಕಾಗಿಯೇ, ಉಸಿರಾಟ ಮತ್ತು ಹೃದಯ ಬಡಿತಗಳಿಗೆ ಜೀವನದ ಉದ್ದಕ್ಕೂ ಪುರುಸೊತ್ತು ಎಂಬುದು ಇಲ್ಲವೇ ಇಲ್ಲ. ಅವುಗಳು ದಣಿದು “ಸಾಕು” ಎಂದರೆ ಜೀವವೂ ಇಲ್ಲ.

ತಮ್ಮನ್ನು ತಾವು ರಿಪೇರಿ ಮಾಡಿಕೊಳ್ಳದ ವಾಹನಗಳು ಎಷ್ಟು ಕಾಲ ಬಾಳಿಕೆ ಬಂದಾವು? ಯಾವುದೇ ಸಮಸ್ಯೆ ಬಾರದಿದ್ದರೆ ಕೆಂಪು ರಕ್ತಕಣ ಎನ್ನುವ ಬಂಡಿ ಸುಮಾರು 120 ದಿನಗಳ ಕಾಲ ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಅದಕ್ಕೆ ವಯಸ್ಸಾಯಿತು; ಬಳುಕುವ, ಬಾಗುವ ಸಾಮರ್ಥ್ಯ ನಶಿಸಿತು; ಆಕ್ಸಿಜನ್ ಹೊರುವ ತ್ರಾಣ ಇಲ್ಲವಾಯಿತು ಎಂದಾಗ ಅದನ್ನು ಗುಲ್ಮದ ಗುಜರಿ ಅಂಗಡಿಗೆ ನುಗ್ಗಿಸಿ, ಮುರಿದು ಹಾಕುವುದು ಒಂದೇ ದಾರಿ. ಹೀಗೆ ಗುಲ್ಮದಲ್ಲಿ ಮುರಿದು ಬೀಳುವ ಕೆಂಪು ರಕ್ತಕಣಗಳ ಸಂಖ್ಯೆ ಒಂದು ಸೆಕೆಂಡಿಗೆ ಸುಮಾರು 20-25 ಲಕ್ಷ. ಅಷ್ಟೇ ಸಂಖ್ಯೆಯ ಹೊಸ ಕೆಂಪು ರಕ್ತಕಣಗಳನ್ನು ನಮ್ಮ ಅಸ್ಥಿಮಜ್ಜೆ ಎನ್ನುವ ಎಲುಬಿನ ನೆಣ ತಯಾರಿಸುತ್ತದೆ. ಹೀಗಾಗಿ, ಶರೀರದಲ್ಲಿನ ಒಟ್ಟಾರೆ ಕೆಂಪು ರಕ್ತಕಣಗಳ ಸಂಖ್ಯೆ ಸ್ಥಿರವಾಗಿ ಉಳಿಯುತ್ತದೆ.

ಕೆಂಪು ರಕ್ತಕಣಗಳ ಒಡಲಿನಲ್ಲಿರುವ, ಅದರ ಕೆಂಪು ಬಣ್ಣಕ್ಕೆ ಕಾರಣವಾದ ಹೀಮೋಗ್ಲೋಬಿನ್ ಎನ್ನುವ ವಿಶಿಷ್ಟ ರಾಸಾಯನಿಕ ವಸ್ತುವೇ ನಮ್ಮ ಶರೀರದ ಆಕ್ಸಿಜನ್ ವಾಹಕ. ಹೀಮೋಗ್ಲೋಬಿನ್ ಎಂಬುದು ರಾಸಾಯನಿಕ ಸಂಯುಕ್ತ: ಹೀಮ್ ಎನ್ನುವ, ಆಕ್ಸಿಜನ್ ಅನ್ನು ತನ್ನೊಳಗೆ ಬಿಗಿದು ಇಡುವ ಅಣುಗಳ ಗುಂಪು ಮತ್ತು ಅದರ ಸುತ್ತ ಗ್ಲೋಬಿನ್ ಎನ್ನುವ ಪ್ರೋಟೀನಿನ ಗೋಡೆ ಸೇರಿದರೆ ಹೀಮೋಗ್ಲೋಬಿನ್. ಹೀಮ್ ರಾಸಾಯನಿಕ ಕೆಲಸ ಮಾಡಲು ಅತ್ಯಗತ್ಯವಾದ ಧಾತು ಕಬ್ಬಿಣ. ಹೀಗಾಗಿ, ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆಯಾದರೆ ಆಕ್ಸಿಜನ್ ಒಯ್ಯುವ ಸಾಮರ್ಥ್ಯವೂ ನಶಿಸಿ, ದೇಹ ನಿತ್ರಾಣಗೊಳ್ಳುತ್ತದೆ. ಒಂದು ಕೆಂಪು ರಕ್ತಕಣದಲ್ಲಿ 27 ಕೋಟಿ ಹೀಮೋಗ್ಲೋಬಿನ್ ಅಣುಗಳಿರುತ್ತವೆ. ಪ್ರತಿಯೊಂದು ಹೀಮೋಗ್ಲೋಬಿನ್ ಅಣುವೂ 4 ಆಕ್ಸಿಜನ್ ಅಣುಗಳನ್ನು ಸಾಗಿಸುತ್ತವೆ. ಹೀಗೆ, ಒಂದು ಕೆಂಪು ರಕ್ತಕಣ ಸುಮಾರು 100 ಕೋಟಿ ಆಕ್ಸಿಜನ್ ಅಣುಗಳನ್ನು ಹೊತ್ತೊಯ್ಯಬಲ್ಲದು. ಅಂದರೆ, ಶರೀರದಲ್ಲಿ ಯಾವುದೇ ಘಳಿಗೆಯಲ್ಲೂ ಸುಮಾರು 12 ಕೋಟಿ ಕೋಟಿ ಕೋಟಿ ಆಕ್ಸಿಜನ್ ಅಣುಗಳಿರುತ್ತವೆ (12 ರ ಮುಂದೆ 21 ಸೊನ್ನೆಗಳು). ಇದೊಂದು ರೀತಿಯಲ್ಲಿ ಊಹೆಗೂ ನಿಲುಕದ ಸಂಖ್ಯೆ!

ಬಿಳಿಯ ರಕ್ತಕಣಗಳ ಸಂಖ್ಯೆ ಸೀಮಿತ. ಅವುಗಳಲ್ಲಿ ಕೋಶಕೇಂದ್ರವಿದೆ. ಇದರಲ್ಲಿ ಮೂರು ಮುಖ್ಯ ಪ್ರಭೇದಗಳು; ಅವುಗಳ ಎಲ್ಲ ಉಪವಿಭಾಗಗಳೂ ಸೇರಿ 50ಕ್ಕೂ ಹೆಚ್ಚು ಬಗೆಯ ಕೋಶಗಳನ್ನು ಗುರುತಿಸಲಾಗಿದೆ. ಒಂದು ಮಿಲಿಲೀಟರ್ ರಕ್ತದಲ್ಲಿ ಸುಮಾರು 40-100 ಲಕ್ಷ ಬಿಳಿಯ ರಕ್ತಕಣಗಳು ಇರುತ್ತವೆ. ಕಾಯಿಲೆಗಳ ವಿರುದ್ಧ ಹೋರಾಡುವುದು ಇವುಗಳ ಮುಖ್ಯ ಕರ್ತವ್ಯ. ಹೀಗಾಗಿ, ಕಾಯಿಲೆಗಳ ವೇಳೆ ಇವುಗಳ ಸಂಖ್ಯೆ ವೃದ್ಧಿಸುತ್ತದೆ. ಹಾಗಾಗಿ, ರಕ್ತದಲ್ಲಿನ ಬಿಳಿಯ ರಕ್ತಕಣಗಳ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಶರೀರದಲ್ಲಿ ಕಾಯಿಲೆ ಇರುವಿಕೆ ತಿಳಿಯುತ್ತದೆ. ಅದರ ಜೊತೆಗೆ ಮಾನಸಿಕ ಒತ್ತಡ, ಕ್ಯಾನ್ಸರ್, ಅಲರ್ಜಿ ಸಮಸ್ಯೆಗಳು, ಔಷಧ ಸೇವನೆ ಮೊದಲಾದ ವೇಳೆ ಬಿಳಿಯ ರಕ್ತಕಣಗಳ ಸಂಖ್ಯೆ ಏರುಪೇರಾಗುತ್ತದೆ.

ಒಡೆದ, ಬಿರುಕು ಬಿಟ್ಟ ರಕ್ತನಾಳಗಳನ್ನು ರಿಪೇರಿ ಮಾಡುವುದು, ರಕ್ತ ಹೆಪ್ಪುಗಟ್ಟುವುದನ್ನು ಪ್ರಚೋದಿಸುವುದು ಪ್ಲೇಟ್ಲೆಟ್ ಕೋಶಗಳ ಮುಖ್ಯ ಕೆಲಸ. ಕೆಂಪು ರಕ್ತಕಣಗಳಂತೆಯೇ ಇವುಗಳಿಗೂ ಕೋಶಕೇಂದ್ರವಿಲ್ಲ; ವಿಭಜನೆಯಿಲ್ಲ. ಹೆಚ್ಚೆಂದರೆ 8-9 ದಿನಗಳ ಕಾಲ ಇವು ಕೆಲಸ ಮಾಡುತ್ತವೆ. ಆದರೆ ಇಷ್ಟು ಅವಧಿಗೆ ಮುನ್ನವೇ ಅವು ಉಪಯೋಗಿಸಲ್ಪಟ್ಟು ಖರ್ಚಾಗಿ ಹೋಗುತ್ತವೆ. ಒಂದು ಮಿಲಿಲೀಟರ್ ರಕ್ತದಲ್ಲಿ 15-45 ಕೋಟಿ ಪ್ಲೇಟ್ಲೆಟ್ ಕೋಶಗಳಿರುತ್ತವೆ. ದಿನವೊಂದಕ್ಕೆ ಶರೀರದಲ್ಲಿ ಸುಮಾರು ಹತ್ತುಸಾವಿರ-ಕೋಟಿ ಪ್ಲೇಟ್ಲೆಟ್ ಗಳು ಉತ್ಪತ್ತಿಯಾಗುತ್ತವೆ.

ರಕ್ತದಿಂದ ಕೋಶಗಳನ್ನು ತೆಗೆದರೆ ಉಳಿಯುವ ನುಸುಹಳದಿ ಬಣ್ಣದ ದ್ರವವನ್ನು ಪ್ಲಾಸ್ಮಾ ಎನ್ನಲಾಗುತ್ತದೆ. ಇದು ರಕ್ತದ ದ್ರವಭಾಗ. ರಕ್ತದ ಶೇಕಡಾ 55 ಭಾಗ ಪ್ಲಾಸ್ಮಾ; ಉಳಿದದ್ದು ಕೋಶಗಳು. ಅಂದರೆ, ಶರೀರದಲ್ಲಿ ಸುಮಾರು 3 ಲೀಟರ್ನಷ್ಟು ಪ್ಲಾಸ್ಮಾ ಇರುತ್ತದೆ. ಶರೀರಕ್ಕೆ ಅಗತ್ಯವಾದ ಹಲವಾರು ಪ್ರೋಟೀನುಗಳು, ಗ್ಲುಕೋಸ್, ಖನಿಜಾಂಶಗಳು, ಹಾರ್ಮೋನುಗಳು, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳು ಇರುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳನ್ನು ಪ್ಲಾಸ್ಮಾದಿಂದ ತೆಗೆದರೆ ಉಳಿಯುವ ದ್ರವಾಂಶವನ್ನು ಸೀರಮ್ ಎನ್ನುತ್ತಾರೆ. ಪ್ಲಾಸ್ಮಾದ ಶೇಕಡಾ 95 ಭಾಗ ನೀರು. ಅದರ ಉಳಿದ ಎಲ್ಲ ಅಂಶಗಳೂ ಸೇರಿ ಶೇಕಡಾ 5. ಹೀಗಾಗಿಯೇ ಪ್ಲಾಸ್ಮಾದ ಸಾಂದ್ರತೆ ಸರಿಸುಮಾರು ನೀರಿನಷ್ಟೇ ಇರುತ್ತದೆ (1.025). ಅನೇಕ ಕಾಯಿಲೆಗಳಲ್ಲಿ ಪ್ಲಾಸ್ಮಾದ ಬಣ್ಣ ಬದಲಾಗಿರುತ್ತದೆ; ಕಾಯಿಲೆಯನ್ನು ಅಂದಾಜಿಸಲು ಇದು ಸಹಕಾರಿ.  

ಶರೀರದಲ್ಲಿನ ದ್ರವವನ್ನು ಎರಡು ಮುಖ್ಯ ಭಾಗಗಳನ್ನಾಗಿ ವಿಂಗಡಿಸಬಹುದು – ಜೀವಕೋಶಗಳ ಒಳಗೆ ಇರುವ ದ್ರವ ಮತ್ತು ಜೀವಕೋಶಗಳ ಹೊರಗೆ ಇರುವ ದ್ರವ. ಈ ಎರಡನೆಯ ಭಾಗವನ್ನು ರಕ್ತನಾಳಗಳ ಒಳಗೆ ಮತ್ತು ಹೊರಗೆ ಇರುವ ದ್ರವಗಳು ಎನ್ನುವ ಮತ್ತೆರಡು ವಿಭಾಗಗಳನ್ನಾಗಿಸಬಹುದು. ಇದರ ಪೈಕಿ ರಕ್ತನಾಳಗಳ ಒಳಗೆ ಇರುವ ಶರೀರದ ದ್ರವಾಂಶ ಪ್ಲಾಸ್ಮಾ. ಶರೀರದ ಇತರ ಭಾಗದಲ್ಲಿ ನೀರಿನ ಅಂಶ ಕಡಿಮೆಯಾದಾಗ ಪ್ಲಾಸ್ಮಾದಿಂದ ಸ್ವಲ್ಪ ಭಾಗ ನೀರಿನ ಅಂಶ ರಕ್ತನಾಳಗಳಿಂದ ಹೊರಗೆ ಹರಿದು, ಸಹಾಯ ಮಾಡಬಲ್ಲದು. ಆದರೆ ಇಂತಹ ಪ್ರಮಾಣಕ್ಕೆ ಮಿತಿ ಇರುತ್ತದೆ.

ಪ್ಲಾಸ್ಮಾದ ಪ್ರೋಟೀನ್ಗಳು ಶರೀರದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಲ್ಬ್ಯುಮಿನ್ ಎನ್ನುವುದು ಇಲ್ಲಿ ಕಾಣುವ ಅತಿ ಹೆಚ್ಚು ಪ್ರಮಾಣದ ಪ್ರೋಟೀನ್. ಒಂದು ಲೀಟರ್ ಪ್ಲಾಸ್ಮಾದಲ್ಲಿ 35-50 ಗ್ರಾಂ ಆಲ್ಬ್ಯುಮಿನ್ ಇರುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿಯಾಗುವ ಆಲ್ಬ್ಯುಮಿನ್ ನೀರಿನಲ್ಲಿ ಕರಗುವಂತಹದ್ದು. ಸುಮಾರು 67 ಕಿಲೋಡಾಲ್ಟನ್ ತೂಕದ ಆಲ್ಬ್ಯುಮಿನ್ನಲ್ಲಿ 585 ಅಮೈನೊ-ಆಮ್ಲಗಳಿವೆ. ಇದು ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಪ್ಲಾಸ್ಮಾ ಸೇರುತ್ತದೆ. ಹಲವಾರು ಹಾರ್ಮೋನುಗಳನ್ನು ಹೊತ್ತೊಯ್ಯುವ ಪ್ರಮುಖ ಜವಾಬ್ದಾರಿ ಇದರದ್ದು. ಇದರ ಜೊತೆಗೆ ಮೇದಸ್ಸಿನ ಆಮ್ಲಗಳು, ಔಷಧಗಳು, ಕ್ಯಾಲ್ಸಿಯಂ, ಬಿಲಿರುಬಿನ್ ಮೊದಲಾದುವುಗಳನ್ನು ಕೂಡ ಹೊತ್ತು, ಅವುಗಳ ಗಮ್ಯಸ್ಥಾನಕ್ಕೆ ತಲುಪಿಸುತ್ತವೆ.

ಪ್ಲಾಸ್ಮಾ ಪ್ರೋಟೀನುಗಳ ಪೈಕಿ ಎರಡನೆಯ ಸ್ಥಾನ ಗ್ಲಾಬ್ಯುಲಿನ್ ಪಂಗಡದ್ದು. ಇವುಗಳ ಪ್ರಮಾಣ ಒಂದು ಲೀಟರ್ ಪ್ಲಾಸ್ಮಾಗೆ 25-35 ಗ್ರಾಂ. ಇವುಗಳಲ್ಲಿ ಮೂರು ಪ್ರಭೇದಗಳಿವೆ. ಮೊದಲನೆಯ ಆಲ್ಫಾ ಪ್ರವರ್ಗ ಯಕೃತ್ತಿನಲ್ಲಿ ಉತ್ಪತ್ತಿಯಾಗಿ, ಶರೀರದಲ್ಲಿ ಖನಿಜಗಳ ಸಾಗಣೆಗೆ ನೆರವಾಗುತ್ತದೆ. ಎರಡನೆಯ ಬೀಟಾ ಪ್ರವರ್ಗ ಮೇದಸ್ಸಿನ ಜೊತೆಗೂಡಿ, ಶರೀರದ ಸ್ಟೀರಾಯ್ಡುಗಳ ಉತ್ಪಾದನೆಗೆ, ಕೋಶಗಳ ಹೊರ ಆವರಣದ ತಯಾರಿಗೆ ಸಹಾಯ ಮಾಡುತ್ತದೆ. ಮೂರನೆಯ ಗ್ಯಾಮಾ ಪ್ರವರ್ಗವನ್ನು ಪ್ರತಿಕಾಯಗಳು ಎಂದೂ ಕರೆಯಲಾಗುತ್ತದೆ. ಇದು ಶರೀರದ ರಕ್ಷಕ ವ್ಯವಸ್ಥೆಯ ಭಾಗವಾಗಿ, ರೋಗಗಳ ವಿರುದ್ಧದ ಹೊಡೆದಾಟದಲ್ಲಿ ಕೆಲಸ ಮಾಡುತ್ತದೆ.

ಪ್ಲಾಸ್ಮಾ ಪ್ರೋಟೀನುಗಳಲ್ಲಿ ಮೂರನೆಯ ಭಾಗ ಯಕೃತ್ತಿನಲ್ಲಿ ತಯಾರಾಗುವ ಫಿಬ್ರಿನೋಜೆನ್ ಎನ್ನುವ ಸಕ್ಕರೆ-ಮಿಶ್ರಿತ ಪ್ರೋಟೀನ್. ಇದು ರಕ್ತ ಹೆಪ್ಪುಗಟ್ಟುವಿಕೆಯ ಪ್ರಮುಖ ಪಾತ್ರಧಾರಿ. ಒಂದು ಲೀಟರ್ ಪ್ಲಾಸ್ಮಾದಲ್ಲಿ ಇದರ ಭಾಗ 1.5-3 ಗ್ರಾಂ. ಇದರ ಜೊತೆಗೆ ಪ್ಲಾಸ್ಮಾದಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ಇತರ ಅಂಶಗಳೂ ಇರುತ್ತವೆ. ಒಟ್ಟು 12 ಬಗೆಯ ಇಂತಹ ಅಂಶಗಳನ್ನು ಗುರುತಿಸಲಾಗಿದೆ. ಇದರ ಜೊತೆಗೆ ಇನ್ನೂ 20 ರಾಸಾಯನಿಕಗಳನ್ನು ರಕ್ತ ಹೆಪ್ಪುಗಟ್ಟಿಸುವ ಮತ್ತು ಅದನ್ನು ಕರಗಿಸುವ ಪ್ರಕ್ರಿಯೆಯ ಸಹಕಾರಿಗಳೆಂದು ಪತ್ತೆ ಮಾಡಲಾಗಿದೆ.

ಒಂದು ಕಾಲದಲ್ಲಿ ರಕ್ತವನ್ನು ದಾನಿಯಿಂದ ಪಡೆದು, ಗುಂಪು ಹೊಂದುವ ರೋಗಿಗೆ ಇಡಿಯಾಗಿ ನೀಡುವುದಿತ್ತು. ಈಗ ಆ ಪದ್ದತಿ ಬಹಳ ಅಪರೂಪ. ಈಗ ದಾನಿಯಿಂದ ಪಡೆದ ರಕ್ತವನ್ನು ಹಲವಾರು ಬಗಗಳಲ್ಲಿ ವಿಂಗಡಣೆ ಮಾಡಬಹುದು. ರಕ್ತಹೀನತೆಯ ರೋಗಿಗಳಿಗೆ ಪ್ಲಾಸ್ಮಾ ಅಗತ್ಯ ಇರುವುದಿಲ್ಲ. ಅಂತಹವರಿಗೆ ಕೇವಲ ಕೆಂಪು ರಕ್ತಕಣಗಳನ್ನು ಮಾತ್ರ ನೀಡಬಹುದು. ಅಂತೆಯೇ, ಸಾಂದ್ರಗೊಳಿಸಿದ ಪ್ಲೇಟ್ಲೆಟ್ ದ್ರವವನ್ನೂ ನೀಡಲು ಸಾಧ್ಯ. ಹೀಗೆ ರಕ್ತಕಣಗಳನ್ನು ವಿಂಗಡಿಸಿದ ನಂತರ ಉಳಿಯುವ ಪ್ಲಾಸ್ಮಾವನ್ನು ಹಲವಾರು ರೋಗಗಳ ಆಂಗಿಕ ಚಿಕಿತ್ಸೆಯಾಗಿ ಬಳಸಬಹುದು. ರಕ್ತದಲ್ಲಿ ದ್ರವಾಂಶ ಕಡಿಮೆಯಾದವರಿಗೆ, ಕಾಯಿಲೆಯ ವೇಳೆ ರಕ್ತದ ಪ್ರೋಟೀನ್ ಕಳೆದುಕೊಂಡವರಿಗೆ, ರಕ್ತವನ್ನು ಹೆಪ್ಪುಗಟ್ಟಿಸುವ ಅಂಶಗಳ ಕೊರತೆ ಇರುವವರಿಗೆ ಪ್ಲಾಸ್ಮಾ ಮರುಪೂರಣ ಮಾಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅತ್ಯಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಲಾಸ್ಮಾ ಉಲ್ಲೇಖವಿದೆ. ದಾನಿಯ ರಕ್ತದಿಂದ ಪ್ರತ್ಯೇಕಿಸಿ ತೆಗೆದ ಪ್ಲಾಸ್ಮಾವನ್ನು ಶೈತ್ಯೀಕರಣಗೊಳಿಸಿ, ಮೈನಸ್ 30 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಕಾದಿಟ್ಟು, ಸುಮಾರು ಒಂದು ವರ್ಷ ಕಾಲದವರೆಗೆ ಬಳಕೆ ಮಾಡಬಹುದು. ಹೀಗೆ ಶೈತ್ಯೀಕರಿಸಿದ ಪ್ಲಾಸ್ಮಾವನ್ನು ಸಾಮಾನ್ಯ ತಾಪಮಾನಕ್ಕೆ ತಂದ ನಂತರ ಕೂಡಲೇ ಬಳಸಬೇಕು; ಮತ್ತೊಮ್ಮೆ ಶೈತ್ಯೀಕರಣ ಮಾಡಲಾಗದು. ರಕ್ತದ ಹೆಪ್ಪುಗಟ್ಟುವಿಕೆಗೆ ಕಾರಣವಾದ ಪ್ರಮುಖ ಅಂಶವೊಂದನ್ನು ಮಾತ್ರ ಪ್ಲಾಸ್ಮಾದಿಂದ ಪ್ರತ್ಯೇಕಿಸಿ, ಅದನ್ನು ಅಗತ್ಯ ರೋಗಿಗಳಿಗೆ ಮರುಪೂರಣ ಮಾಡುವ ವ್ಯವಸ್ಥೆಯೂ ಇದೆ. ರಕ್ತದಾನಿಗಳು ಈಗ ಕೇವಲ ಪ್ಲಾಸ್ಮಾವನ್ನು ಮಾತ್ರ ದಾನ ಮಾಡಲು ಕೂಡ ಸಾಧ್ಯ. ಅಂದರೆ, ದಾನಿಯ ರಕ್ತವನ್ನು ತೆಗೆದು, ಅದರಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ರಕ್ತಕಣಗಳನ್ನು ಪುನಃ ದಾನಿಗೆ ವಾಪಸ್ ನೀಡುವ ವ್ಯವಸ್ಥೆ. ಸಾಮಾನ್ಯ ರಕ್ತದಾನಿಯಿಂದ 300 ಮಿಲಿಲೀಟರ್ ರಕ್ತವನ್ನು ಒಮ್ಮೆಗೆ ಪಡೆಯಲಾಗುತ್ತದೆ. ಆದರೆ, ಕೇವಲ ಪ್ಲಾಸ್ಮಾವನ್ನು ಮಾತ್ರ ನೀಡುವ ದಾನಿಯಿಂದ ಒಂದು ಬಾರಿಗೆ ಸುಮಾರು ಒಂದು ಲೀಟರ್ ಪ್ಲಾಸ್ಮಾವನ್ನು ಪಡೆಯಲು ಸಾಧ್ಯ. ಇದರ ಬದಲಿಗೆ ಅಷ್ಟು ಪ್ರಮಾಣದ ಖನಿಜಯುಕ್ತ ದ್ರವವನ್ನು ದಾನಿಗೆ ಮರುಪೂರಣ ಮಾಡಬಹುದು. ಪ್ಲಾಸ್ಮಾ ದಾನಿಗಳ ಶರೀರದಲ್ಲಿ 24 ತಾಸುಗಳಲ್ಲಿ ಸಹಜ ಪ್ಲಾಸ್ಮಾ ತಯಾರಾಗಿರುತ್ತದೆ. ಸಾಮಾನ್ಯ ರಕ್ತದಾನಿಗೆ ಎರಡು ರಕ್ತದಾನಗಳ ಸುಮಾರು 2-3 ತಿಂಗಳ ಅಂತರ ಇರಬೇಕಾಗುತ್ತದೆ. ಆದರೆ ಕೇವಲ ಪ್ಲಾಸ್ಮಾ ದಾನವನ್ನು ಮಾತ್ರ ಮಾಡುವವರು ಒಂದು ವಾರಕ್ಕೆ ಒಮ್ಮೆಯಂತೆ ಕೂಡ ಮಾಡಲು ಸಾಧ್ಯ.

ಶರೀರದ ರಕ್ಷಕ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳು ಇರುತ್ತವೆ. ಇದರಲ್ಲಿ ಕಾಯಿಲೆಗಳ ಉಲ್ಬಣಕ್ಕೆ ಕಾರಣವಾದ ಕೆಲವು ರಾಸಾಯನಿಕ ಸಂಯುಕ್ತಗಳು ರೋಗಿಯ ಪ್ಲಾಸ್ಮಾದಲ್ಲಿ ಹರಿದಾಡುತ್ತಿರುತ್ತವೆ. ಇಂತಹ ಸಂದರ್ಭಗಳಲ್ಲಿ ರೋಗಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಗೆ ಕಾರಣವಾಗಬಲ್ಲ ಅಂಶಗಳನ್ನು ನಿವಾರಿಸಿ, ಚಿಕಿತ್ಸೆ ನೀಡಬಹುದು. ಇದನ್ನು ಪ್ಲಾಸ್ಮಾಫೆರೆಸಿಸ್ ಎಂದು ಕರೆಯುತ್ತಾರೆ. ರೋಗಿಯ ಪ್ಲಾಸ್ಮಾವನ್ನು ಸೋಸಿ, ಕಾಯಿಲೆಕಾರಕ ಅಂಶಗಳನ್ನು ನಿವಾರಿಸಿ, ಅದನ್ನೇ ಮರುಪೂರಣ ಮಾಡಬಹುದು. ಇಲ್ಲವೇ, ರೋಗಿಯ ರಕ್ತದಲ್ಲಿನ ಎಲ್ಲ ಪ್ಲಾಸ್ಮಾವನ್ನು ಪ್ರತ್ಯೇಕಿಸಿ, ಅದನ್ನು ಹೊರ ಹಾಕಿ, ಅದರ ಬದಲಿಗೆ ದಾನಿಯ ಪ್ಲಾಸ್ಮಾ ನೀಡಿ ಮರುಪೂರಣ ಮಾಡಬಹುದು. ಹಲವಾರು ಕ್ಲಿಷ್ಟಕರ ಕಾಯಿಲೆಗಳ ಚಿಕಿತ್ಸೆಯಲ್ಲಿ ಈ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.

ಪ್ಲಾಸ್ಮಾದ ಮತ್ತೊಂದು ಅಂಶ ಖನಿಜಗಳು. ಇವುಗಳಲ್ಲಿ ಅಯಾನುಗಳ ಮೂಲಕ ವಿದ್ಯುದಾವೇಶವನ್ನು ಹೊಮ್ಮಿಸಬಲ್ಲ ಸೋಡಿಯಂ, ಪೊಟಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ ಮೊದಲಾದ ಖನಿಜಾಂಶಗಳಿರುತ್ತವೆ. ಪ್ರತಿಯೊಂದು ಜೀವಕೋಶದ ಹೊರ ಆವರಣದಲ್ಲಿ ಬಾಗಿಲುಗಳು ಇರುತ್ತವೆ. ಇಂತಹ ಬಾಗಿಲುಗಳನ್ನು ತೆರೆಯುವ ಮತ್ತು ಮುಚ್ಚುವ ಮೂಲಕ ಜೀವಕೋಶಗಳಲ್ಲಿನ ಅಯಾನುಗಳ ಮಟ್ಟ ಅದರ ಹೊರಗಿನ ದ್ರವದ ಮಟ್ಟಕ್ಕಿಂತಲೂ ಭಿನ್ನವಾಗಿರುವಂತೆ ವ್ಯವಸ್ಥೆಯಿದೆ. ಇಂತಹ ವ್ಯತ್ಯಾಸದಿಂದಲೇ ಜೀವಕೋಶಗಳ ವಿದ್ಯುದಾವೇಶವೂ ನಿರ್ಧಾರವಾಗುತ್ತದೆ. ಇಂತಹ ಅಯಾನುಗಳ ಖಜಾನೆಯಂತೆ ಪ್ಲಾಸ್ಮಾ ವರ್ತಿಸುತ್ತದೆ. ಶರೀರದ ಜೀವಕೋಶಗಳ ಅಯಾನುಗಳ ಮಟ್ಟದಲ್ಲಿ ಏರುಪೇರಾದರೆ, ಅದು ಪ್ಲಾಸ್ಮಾದಲ್ಲಿನ ಅಯಾನುಗಳ ಮಟ್ಟವನ್ನು ಬದಲಾಯಿಸುತ್ತದೆ. ಜೀವಕೋಶಗಳ ಒಳಗಿನ ಅಯಾನುಗಳನ್ನು ಲೆಕ್ಕ ಹಾಕುವುದು ಆಚರಣೆಯ ದೃಷ್ಟಿಯಿಂದ ಬಹಳ ಕಷ್ಟ. ಆದರೆ, ಪ್ಲಾಸ್ಮಾದಿಂದ ಸೀರಮ್ ಅನ್ನು ಪಡೆದು, ಅದರಲ್ಲಿ ಅಯಾನುಗಳ ಮಟ್ಟವನ್ನು ಲೆಕ್ಕ ಹಾಕುವುದು ಸುಲಭ. ಹೀಗಾಗಿ, ಶರೀರದ ಅಯಾನುಗಳ ಪರಿಸ್ಥಿತಿಗೆ ಪ್ಲಾಸ್ಮಾ ಕನ್ನಡಿ ಹಿಡಿಯುತ್ತದೆ. ಹಲವಾರು ಕಾಯಿಲೆಗಳ ಪತ್ತೆಗೆ (ಅದರಲ್ಲೂ ಮೂತ್ರಪಿಂಡಗಳ ಸಮಸ್ಯೆಗಳ ನಿರ್ಧಾರಕ್ಕೆ), ಚಿಕಿತ್ಸೆಗಳ ಆಯ್ಕೆಗಳಿಗೆ, ನೀಡುತ್ತಿರುವ ಚಿಕಿತ್ಸೆ ಫಲಕಾರಿ ಆಗುತ್ತಿದೆಯೇ ಇಲ್ಲವೇ ಎಂಬ ಆಲೋಚನೆಗಳಿಗೆ ಸೀರಮ್ ಅಯಾನುಗಳ ಮಟ್ಟವನ್ನು ಪರೀಕ್ಷಿಸುವುದು ಬಹಳ ಸಹಕಾರಿ.

ಶರೀರದ ನಿರ್ನಾಳ ಗ್ರಂಥಿಗಳು ಉತ್ಪಾದಿಸುವ ಹಾರ್ಮೋನುಗಳು ಸೀದಾ ಪ್ಲಾಸ್ಮಾಗೆ ಇಳಿಯುತ್ತವೆ. ಪ್ಲಾಸ್ಮಾದಲ್ಲಿನ ಪ್ರೋಟೀನುಗಳ ಸವಾರಿ ಮಾಡುತ್ತಾ ಹಾರ್ಮೋನುಗಳು ತಮ್ಮ ಗಮ್ಯವನ್ನು ತಲುಪುತ್ತವೆ. ಇದಕ್ಕಾಗಿಯೇ ವಿಶೇಷ ಬಗೆಯ ಪ್ರೋಟೀನುಗಳು ಪ್ಲಾಸ್ಮಾದಲ್ಲಿ ಇವೆ. ಇಂತಹ ಹಾರ್ಮೋನುಗಳ ಮಟ್ಟವನ್ನು ಪ್ಲಾಸ್ಮಾದ ಪರೀಕ್ಷೆಯ ಮೂಲಕ ತಿಳಿದು, ನಿರ್ನಾಳ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂಬುದನ್ನು ನಿರ್ಧರಿಸಬಹುದು. ಸಮಸ್ಯೆ ಇದ್ದರೆ ಆಯಾ ಹಾರ್ಮೋನುಗಳ ಚಿಕಿತ್ಸೆ ನೀಡಿ, ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು. ಮಧುಮೇಹಿಗಳಲ್ಲಿ ರಕ್ತವನ್ನು ಪರೀಕ್ಷಿಸಿ, ಸಕ್ಕರೆಯ ಅಂಶವನ್ನು ತಿಳಿದು, ಅದಕ್ಕೆ ಸರಿಯಾಗಿ ಇನ್ಸುಲಿನ್ ಚಿಕಿತ್ಸೆ ಮಾಡುವ ಮೂಲಕ ಸಮಸ್ಯೆಯನ್ನು ಹತೋಟಿಯಲ್ಲಿ ಇಡುವುದು ಬಹುತೇಕ ಎಲ್ಲರೂ ಅರಿತಿರುವ ಸಂಗತಿ.

ಒಟ್ಟಿನಲ್ಲಿ ರಕ್ತ ಎನ್ನುವುದು ಅಚ್ಚರಿಗಳ ಗಣಿ. ಅದರ ಗಣಿತವನ್ನು ಅರಿಯುವುದು ರಕ್ತವನ್ನು, ತನ್ಮೂಲಕ ಇಡೀ ಶರೀರವನ್ನು ಅರ್ಥ ಮಾಡಿಕೊಳ್ಳುವ ಅತ್ಯುತ್ತಮ ವಿಧಾನ.

-------------------- 

#ಮಾನವ_ದೇಹದ_ಗಣಿತ

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

ಜುಲೈ 2025 ತಿಂಗಳ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಕೊಂಡಿ: https://www.flipbookpdf.net/web/site/96999c7307f2bff9f7a4b91a6e94f256c5281648FBP32051436.pdf.html?fbclid=IwY2xjawNpTpRleHRuA2FlbQIxMABicmlkETFtR0J5YmZnM1p3TXRDQ0g1AR5LO8UER4NEIWi_HQDVjeVYloFEV-UN09lbBjXfUbxECYAPaJFw_0lSZae0RQ_aem_23UKJlhpAMZeN6qxceswYw  

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ