ಶನಿವಾರ, ಅಕ್ಟೋಬರ್ 25, 2025

 


ನಮಗೆ ಅರ್ಥವಾಗದ ವಿಷಯ ಹೆಚ್ಚು ಬೈಗುಳಕ್ಕೆ ಒಳಗಾಗುತ್ತದೆ ಎನ್ನುವ ಮಾತಿದೆ. ವೈದ್ಯಕೀಯ ಕ್ಷೇತ್ರ ಇದಕ್ಕೆ ಹೊರತಲ್ಲ. ಅಸಾಧಾರಣ ಮಟ್ಟದಲ್ಲಿ ಸಂಕೀರ್ಣವಾಗಿ ಬೆಳೆದಿರುವ ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ವಿವರಿಸುವುದು ಮಹಾ ಸಾಹಸದ ಸಂಗತಿ. ಸಾಮಾನ್ಯದವರು ಇದಕ್ಕೆ ಕೈ ಹಾಕುವುದಿಲ್ಲ. ಇಂತಹ ಅಸಾಮಾನ್ಯ ಸಾಹಸಿಗರು ಪ್ರಖ್ಯಾತ ನರರೋಗ ತಜ್ಞರಾದ ಡಾ. Suryanarayana Sharma P M ಅವರು. ಮೊದಲ ಬಾರಿಗೆ ಕನ್ನಡಿಗರಿಗೆ ವೈದ್ಯಕೀಯ ಕ್ಷೇತ್ರದಲ್ಲಿನ ನವನೂತನ ತಂತ್ರಜ್ಞಾನಗಳ ಪರಿಚಯ ಮಾಡಿಸುವ ಅತ್ಯುನ್ನತ ಗುಣಮಟ್ಟದ ಪುಸ್ತಕವನ್ನು ಹೊರತಂದಿದ್ದಾರೆ. ಒಬ್ಬರು ತಜ್ಞವೈದ್ಯರ 5-ನಿಮಿಷದ ಅಪಾಯಿಂಟ್ಮೆಂಟ್ ಪಡೆಯಲು ತತ್ತರಿಸಿ ಹೋಗುವ ಇಂದಿನ ದಿನಗಳಲ್ಲಿ ಅವರು ಇದಕ್ಕಾಗಿ ಹದಿನೇಳು ಮಂದಿ ವೈದ್ಯಕೀಯ ತಜ್ಞರನ್ನು ಒಗ್ಗೂಡಿಸಿದ್ದಾರೆ ಎಂದರೆ ಆ ಸಾಹಸದ ಒಂದು ಝಲಕ್ ಓದುಗರಿಗೆ ದೊರೆಯಬಹುದು!
ಈ ಮಹತ್ತರ ಪ್ರಯತ್ನಕ್ಕೆ ನನ್ನಿಂದ ಮುನ್ನುಡಿ ಬರೆಸಿದ್ದಾರೆ. ಅದ್ಯಾವ ಆಧಾರದ ಮೇಲೆ ನಾನು ಇಂತಹ ಗೌರವಕ್ಕೆ ಭಾಜನನಾದೆನೋ ನನಗೇ ತಿಳಿಯದು! ಅದು ಅವರು ನನ್ನ ಮೇಲಿಟ್ಟ ಪ್ರೀತಿ-ವಿಶ್ವಾಸಗಳ ಸಂಕೇತ ಎಂದು ಮಾತ್ರ ಹೇಳಬಲ್ಲೆ.
ಪುಸ್ತಕದ ಮುನ್ನುಡಿಯನ್ನು ಯಥಾವತ್ತಾಗಿ ಇಲ್ಲಿಡುತ್ತಿದ್ದೇನೆ. ಅದು ಪುಸ್ತಕದ ಕಿರು-ಪರಿಚಯವೂ ಹೌದು. ಸಮಸ್ತ ಕನ್ನಡಿಗರು ಈ ಪುಸ್ತಕವನ್ನು ಓದಿದರೆ ಅರಿವಿನ ವಿಸ್ತಾರಕ್ಕೆ ಅವಕಾಶ ಎನ್ನುವುದರಲ್ಲಿ ಸಂಶಯವೇ ಇಲ್ಲ.
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳು ಕೃತಿಯ ಮುನ್ನುಡಿ:
ಜಗದ್ವಿಖ್ಯಾತ Harrison’s Principles of Internal Medicine ಕೃತಿ ಆರಂಭವಾಗುವುದೇ “Medicine is an ever-changing science” ಎನ್ನುವ ಮಾತುಗಳಿಂದ. ಜಗತ್ತಿನಲ್ಲಿ ಬದಲಾವಣೆಯೊಂದೇ ಶಾಶ್ವತ ಸತ್ಯ. ವೈದ್ಯಕೀಯ ವಿಜ್ಞಾನವು ಇತಿಹಾಸದಲ್ಲಿ ಹಿಂದೆಂದೂ ಆಗಿರದಷ್ಟು ವೇಗವಾಗಿ ಬದಲಾಗುತ್ತಿದೆ. ಒಂದೆಡೆ ತಂತ್ರಜ್ಞಾನಗಳ ವಿಸ್ಮಯಕರ ಪ್ರಗತಿಯಾದರೆ, ಮತ್ತೊಂದೆಡೆ ಅದನ್ನು ಅತ್ಯಂತ ಕ್ಷಿಪ್ರವಾಗಿ ಆಚರಣ-ಯೋಗ್ಯ ಹಾದಿಗಳಿಗೆ ಬದಲಾಯಿಸುವ ವಿಧಾನಗಳ ಅಭಿವೃದ್ಧಿ ಜೊತೆಜೊತೆಗೆ ಸಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಸದ್ಯಕ್ಕಂತೂ ತಂತ್ರಜ್ಞಾನ ಪ್ರಭಾವಿಸದ ವಿಭಾಗ ವೈದ್ಯಕೀಯ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ. ಹೊರ-ರೋಗಿ ವಿಭಾಗದಲ್ಲಿ ನಡೆಯುವ ದೈನಂದಿನ ರೋಗನಿರ್ಣಯಯಿಂದ ಆರಂಭಿಸಿ, ಮಾಹಿತಿ ಸಂರಕ್ಷಣೆ, ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು, ಉನ್ನತ ಮಟ್ಟದ ರೋಗ ನಿರ್ವಹಣೆ, ಅತ್ಯಂತ ನಿಖರ ಶಸ್ತ್ರಚಿಕಿತ್ಸೆಯ ಪದ್ದತಿಗಳು – ಹೀಗೆ ಹೊಸ ತಂತ್ರಜ್ಞಾನಗಳ ಹರಹು ವಿಶಾಲವಾದದ್ದು. ‘ತಂತ್ರಜ್ಞಾನ ಪರ್ವ’ ಎಂದೇ ಕರೆಯಬಹುದಾದ ಇಂದಿನ ದಿನಗಳಲ್ಲಿ, ವೈದ್ಯಕೀಯ ಕ್ಷೇತ್ರವು ಒಂದೆಡೆ ಮಾನವನ ಆಯುಷ್ಯವನ್ನು ಹೆಚ್ಚಿಸುವ, ಮತ್ತೊಂದೆಡೆ ಎಲ್ಲರಿಗೂ ಗುಣಮಟ್ಟದ ಆರೋಗ್ಯವನ್ನು ನೀಡುವ ಪ್ರಯತ್ನಗಳನ್ನು ಜೊತೆಜೊತೆಗೆ ಮಾಡುತ್ತಿದೆ.
ಆದರೆ ನಾಗಾಲೋಟದ ಈ ಪ್ರಗತಿಯನ್ನು ಜನಸಾಮಾನ್ಯರಿಗೆ ವಿವರಿಸುವುದು ಸುಲಭವಲ್ಲ. ವೈದ್ಯಕೀಯದಲ್ಲಿ ತಂತ್ರಜ್ಞಾನದ ವೇಗ ಎಷ್ಟಿದೆಯೆಂದರೆ, ಒಂದು ಕ್ಷೇತ್ರದ ತಜ್ಞ ವೈದ್ಯರು ಮತ್ತೊಂದು ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಲು ಕೆಲವು ಗಂಟೆಗಳೇ ಹಿಡಿಯುತ್ತವೆ! ಹೀಗಿರುವಾಗ ಅದನ್ನು ಸಾಮಾನ್ಯ ಓದುಗರಿಗೆ ಸರಳ ಭಾಷೆಯಲ್ಲಿ ಅರ್ಥವಾಗುವಂತೆ ತಲುಪಿಸುವುದು ತೀರಾ ಸಾಹಸದ ವಿಷಯ. ಇಂತಹ ಸಾಹಸದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ನುರಿತ ಹಲವಾರು ತಜ್ಞರು ಒಗ್ಗೂಡಿ ಸಫಲರಾಗಿದ್ದಾರೆ. ಈ ಪುಸ್ತಕವನ್ನು ರಚಿಸುವ ಉದ್ದೇಶ, ವೈದ್ಯಕೀಯ ತಂತ್ರಜ್ಞಾನಗಳ ಇಂದಿನ ಸ್ಥಿತಿಗತಿಯು ಯಾವ ಎತ್ತರಕ್ಕೆ ತಲುಪಿದೆ ಎಂಬುದನ್ನು ಸರಳವಾಗಿ, ವೈಜ್ಞಾನಿಕವಾಗಿ, ಹಾಗೂ ಸಮಗ್ರವಾಗಿ ಪರಿಚಯಿಸುವುದು. ಹದಿನೇಳು ಅಧ್ಯಾಯಗಳಲ್ಲಿ “ಆಸ್ಪತ್ರೆಗಳ ದೈನಂದಿನ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ” ಯಾವ ರೀತಿ ಆಗುತ್ತಿದೆ ಎನ್ನುವ ಮೂಲಭೂತ ಹಂತದಿಂದ ಹಿಡಿದು, “ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ರೋಬೋಟಿಕ್ ತಂತ್ರಜ್ಞಾನ” ಎನ್ನುವ ಅಸಾಧಾರಣ ಪ್ರಗತಿಯ ವಿವರಣೆಯವರೆಗೆ ಈ ಪುಸ್ತಕ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದೆ. ಆಸ್ಪತ್ರೆಯ ಆಧುನಿಕ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ತಂದಿರುವ ಕ್ರಾಂತಿ; ತುರ್ತು ಚಿಕಿತ್ಸಾ ಘಟಕದಲ್ಲಿ ತಂತ್ರಜ್ಞಾನದ ಬಳಕೆಯಿಂದ ಆಗಿರುವ ಕ್ಷಿಪ್ರ ನಿರ್ವಹಣೆ; ಅಂಗ ಕಸಿಯಂತಹ ನಾಜೂಕು ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನ ತಂದಿರುವ ನಿಖರತೆಯ ಆಯಾಮ; ಈ ಮುನ್ನ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿದ್ದ ಚಿಕಿತ್ಸೆಗಳು ತಂತ್ರಜ್ಞಾನದ ನೆರವಿನಿಂದ ಯಾವ ರೀತಿ ಸುರಕ್ಷಿತವಾಗುತ್ತಿವೆ; ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಗಳನ್ನು ಈಗ ಶರೀರದ ಮೇಲೆ ಒಂದು ಗೆರೆಯೂ ಬೀಳದಂತೆ ಮಾಡುವ ವಿಧಾನಗಳು – ಇವುಗಳನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬಹುದಾದ ಸರಳ ನಿರೂಪಣೆಯಲ್ಲಿ ವಿವರಿಸಿರುವುದು ಈ ಕೃತಿಯ ವೈಶಿಷ್ಟ್ಯ. ಕನ್ನಡದ ಮಟ್ಟಿಗೆ ಇದು ಅನನ್ಯ. ನಮ್ಮ ಭಾಷೆಯಲ್ಲಿ ಈ ರೀತಿಯ ಕೃತಿ ಈವರೆಗೆ ಬಂದಿಲ್ಲ. ಕನ್ನಡದಲ್ಲಿ ಇಂತಹ ಮಾಹಿತಿಗೆ ಇದ್ದ ದೊಡ್ಡ ಕೊರತೆಯನ್ನು ಈ ಕೃತಿ ಸಾಕಷ್ಟು ಸಮರ್ಥವಾಗಿ ತುಂಬಿದೆ.
ಈ ಕೃತಿಯ ಪ್ರತಿಯೊಂದು ಅಧ್ಯಾಯವೂ ವೈದ್ಯಕೀಯ ರಂಗದ ಒಂದು ನಿರ್ದಿಷ್ಟ ಕ್ಷೇತ್ರದಲ್ಲಿ ತಂತ್ರಜ್ಞಾನದ ಅದ್ಭುತ ಬಳಕೆಯಿಂದ ಆದ ಮಹತ್ತರ ಬದಲಾವಣೆಗಳನ್ನು ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ವಿವರಿಸುತ್ತದೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು. ಹೃದಯದ ಕವಾಟಗಳನ್ನು ಬದಲಿಸುವ ಶಸ್ತ್ರಚಿಕಿತ್ಸೆ ಎಂದರೆ ಎಂತಹವರಿಗಾದರೂ ಅಳ್ಳೆದೆಯಾಗಬಹುದು. ಎದೆಗೋಡೆಯ ಮೂಲಕ ಹೃದಯದ ಒಳಗಿಳಿದು, ಹೊಸ ಕವಾಟವನ್ನು ಜೋಡಿಸುವ ಶಸ್ತ್ರಚಿಕಿತ್ಸೆ ಹಲವಾರು ಗಂಟೆಗಳದ್ದು. ಶಸ್ತ್ರಚಿಕಿತ್ಸೆಯ ನಂತರ ಕೆಲವು ದಿನ ಆಸ್ಪತ್ರೆಯಲ್ಲಿ ಚೇತರಿಸಿಕೊಂಡು, ಆಮೇಲೆ ಕೆಲ ವಾರಗಳ ಕಾಲ ವಿಶ್ರಾಂತಿ ಪಡೆಯುವುದನ್ನು ಬಲ್ಲೆವು. ಇದರ ಬದಲಿಗೆ, ಎದೆಯನ್ನು ಮುಟ್ಟದೆಯೇ ಕಾಲಿನ ರಕ್ತನಾಳವೊಂದರಿಂದ ನಳಿಕೆಗಳ ಮೂಲಕ ಹೃದಯವನ್ನು ತಲುಪಿ, ಒಂದು ಗಂಟೆಯ ಅವಧಿಯಲ್ಲಿ ಕವಾಟವನ್ನು ಜೋಡಿಸಿ, ಮರುದಿನ ರೋಗಿ ಮನೆಗೆ ಹಿಂದಿರುಗುವುದು ಈಗ ಸಾಧ್ಯ.
ಒಂದು ಕಾಲದಲ್ಲಿ ಇಂಚುಗಳ ಉದ್ದದಲ್ಲಿ ಹೊಟ್ಟೆಯನ್ನು ಸೀಳಿ, ಹಲವರಿಂದ ರಕ್ತದಾನ ಮಾಡಿಸಿ ರೋಗಿಗೆ ನೀಡಿ, ವಾರಗಟ್ಟಲೆ ರೋಗಿಯನ್ನು ಆಸ್ಪತ್ರೆಯಲ್ಲಿ ಇಟ್ಟು ನಿಗಾ ವಹಿಸುತ್ತಿದ್ದ ಕಠಿಣ ಶಸ್ತ್ರಚಿಕಿತ್ಸೆಗಳು ಈಗ ಉದರದರ್ಶಕ ಯಂತ್ರದ ಮೂಲಕ ಆಗುತ್ತಿವೆ. ಇಂತಹ ರೋಗಿಗಳಿಗೆ ರಕ್ತಪೂರಣದ ಅಗತ್ಯವೇ ಇಲ್ಲದಷ್ಟು ಕಡಿಮೆ ರಕ್ತ ನಷ್ಟವಾಗುತ್ತದೆ. ಎಲ್ಲಿ ಅಗತ್ಯವೋ ಅಲ್ಲಿ ಮಾತ್ರ ಅತ್ಯಂತ ನಿಖರವಾಗಿ ಶಸ್ತ್ರಕ್ರಿಯೆ ಜರುಗುತ್ತದೆ. ಹೆಚ್ಚಿನ ವಿಳಂಬವಿಲ್ಲದೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಸಾಮಾನ್ಯ ಜೀವನ ಸಾಗುತ್ತದೆ.
ಮಂಡಿ ಬದಲಿ ಶಸ್ತ್ರಚಿಕಿತ್ಸೆ ಎಂದರೆ ಅತ್ಯಂತ ಹೆಚ್ಚು ನಿಖರತೆಯನ್ನು ಬಯಸುವ ಪ್ರಕ್ರಿಯೆ. ಇದನ್ನು ಸಾಧಿಸಲು ಈಗ ರೋಬೋಟಿಕ್ ತಂತ್ರಜ್ಞಾನ ಲಭ್ಯವಿದೆ. ಇಂಪ್ಲಾಂಟ್ ಗಳ ಕರಾರುವಾಕ್ ಜೋಡಣೆ ಮತ್ತು ಹೊಂದಾಣಿಕೆಯಿಂದ ಇಂತಹ ಕ್ಲಿಷ್ಟಕರ ಪ್ರಕ್ರಿಯೆಗಳು ಯಾವ ರೀತಿ ಅತ್ಯಂತ ಸುರಕ್ಷಿತವಾಗಿ ಮಾರ್ಪಟ್ಟಿವೆ ಎನ್ನುವ ಅಚ್ಚರಿಗಳನ್ನು ಅರಿಯಲು ಪುಸ್ತಕ ಓದಿಯೇ ರೋಮಾಂಚನಗೊಳ್ಳಬೇಕು.
ಈ ಪುಸ್ತಕ ಯಾರಿಗಾಗಿ? ನಮ್ಮ ಭಾಷೆಯನ್ನು ಓದಬಲ್ಲ ಪ್ರತಿಯೊಬ್ಬರಿಗಾಗಿ ಎನ್ನುವುದು ಉತ್ತರ. ಆರೋಗ್ಯವೆಂಬುದು ನಮ್ಮ ಹಕ್ಕು ಮತ್ತು ಜವಾಬ್ದಾರಿ. ತಮ್ಮ ಮತ್ತು ತಮ್ಮವರ ಆರೋಗ್ಯ ರಕ್ಷಣೆಯ ಕರ್ತವ್ಯ ಹೊತ್ತಿರುವ ಎಲ್ಲರಿಗೂ ಸಹಾಯಕವಾಗುವಂತೆ ಈ ಕೃತಿಯನ್ನು ರಚಿಸಲಾಗಿದೆ. ಮಾಹಿತಿಯ ಗಾಂಭೀರ್ಯವನ್ನು ಕಾಪಾಡಿಕೊಂಡು, ಕ್ಲಿಷ್ಟಕರ ತಾಂತ್ರಿಕ ವಿಷಯಗಳನ್ನು ಅತ್ಯಂತ ಸರಳವಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿರುವುದು ಕೃತಿಯ ವೈಶಿಷ್ಟ್ಯ. ತಂತ್ರಜ್ಞಾನವೆಂದರೆ ರೋಗಿಯನ್ನು ವೈದ್ಯರಿಂದ ದೂರ ಮಾಡುವ ವಿಧಾನವಲ್ಲ; ಬದಲಿಗೆ ಚಿಕಿತ್ಸೆಗೆ ಮಾನವೀಯ ಸಂಸ್ಪರ್ಶವನ್ನು ನೀಡುವ ಆಯಾಮ ಎನ್ನುವುದು ಈ ಕೃತಿಯನ್ನು ಓದಿದವರಿಗೆ ಮನದಟ್ಟಾಗುತ್ತದೆ. ರೋಗಿಯ ಆರೋಗ್ಯವನ್ನು ಕೇಂದ್ರಬಿಂದುವಾಗಿರಿಸಿ, ಅದಕ್ಕೆ ತಂತ್ರಜ್ಞಾನದ ನೆರವಿನಿಂದ ಯೋಗ-ಕ್ಷೇಮಗಳನ್ನು ಅಭಿವೃದ್ಧಿಗೊಳಿಸುವುದು ಪ್ರಸ್ತುತ ವೈದ್ಯಕೀಯ ಕ್ಷೇತ್ರದ ಮೂಲ ಧ್ಯೇಯ.
ಮನುಕುಲದ ಆರೋಗ್ಯಕ್ಕಾಗಿ ತುಡಿಯುವ ತಂತ್ರಜ್ಞಾನಗಳ ಅರಿವಿಗಾಗಿ ಈ ಕೃತಿಯು ಒಂದು ಮಹತ್ವದ ಹೆಜ್ಜೆಯಾಗಲಿ ಎಂದು ಹೃತ್ಪೂರ್ವಕ ಹಾರೈಕೆ.
ಡಾ. ಕಿರಣ್ ವಿ.ಎಸ್.
ವೈದ್ಯರು
--------------------
ವೈದ್ಯಕೀಯ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನಗಳ ಅರಿವಿನ ಯಾತ್ರೆಗೆ ಎಲ್ಲ ಕನ್ನಡಿಗರಿಗೂ ಸ್ವಾಗತ! ಪುಸ್ತಕ ಖರೀದಿಸಲು ಫೋನ್ ಸಂಖ್ಯೆ 7760291482 ಸಂಪರ್ಕಿಸಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ