ಮಂಗಳವಾರ, ಸೆಪ್ಟೆಂಬರ್ 21, 2021

ಕೋವಿಡ್ ಕಾಯಿಲೆಯಿಂದ ಚೇತರಿಸಿಕೊಳ್ಳುವವರ ಮನಸ್ಸಿನಲ್ಲಿ ಹಲವಾರು ಸಂದೇಹಗಳಿರುತ್ತವೆ. ಕೋವಿಡ್ ಕಾಯಿಲೆಯನ್ನು ನಿಭಾಯಿಸಿದಷ್ಟೇ ಜತನದಿಂದ ಕಾಯಿಲೆಯ ನಂತರದ ಸಮಯವನ್ನೂ ಗಮನಿಸಿಕೊಳ್ಳಬೇಕು. ಈ ಬಗೆಗಿನ ವಿವರಗಳನ್ನು ನೀಡುವ ಈ ಲೇಖನ 18/5/2021 ರಂದು ಪ್ರಜಾವಾಣಿಯ ಕ್ಷೇಮ-ಕುಶಲ ಪುರವಣಿಯಲ್ಲಿ ಪ್ರಕಟವಾಗಿತ್ತು. ಈ ವಿಷಯದ ಕುರಿತಾಗಿ ಬರೆಯುವಂತೆ ಸಲಹೆ ನೀಡಿ, ಲೇಖನವನ್ನು ಪ್ರಕಟಿಸಿದ ಶ್ರೀಯುತ Suryaprakash Pandit ಮತ್ತು ಲೇಖನ ಪ್ರಕಟವಾದದ್ದನ್ನು ನನ್ನ ಗಮನಕ್ಕೆ ತಂದ DrDeepa MB ಅವರಿಗೂ ಕೃತಜ್ಞತೆಗಳು.

***ಕೋವಿಡ್ ಗುಣವಾದ ನಂತರ...***
ಪ್ರಸ್ತುತ ಕೋವಿಡ್-19 ಭಾರತದಲ್ಲಿ ಸಾಕಷ್ಟು ವ್ಯಾಪಿಸಿದೆ. ಪ್ರತಿದಿನವೂ ಹೊಸ ಸೋಂಕಿತರು ಬೆಳಕಿಗೆ ಬರುತ್ತಿದ್ದಾರೆ. ಅಂತೆಯೇ ಗುಣಮುಖರಾದವರ ಸಂಖ್ಯೆಯೂ ಗಣನೀಯವಾಗಿ ಏರುತ್ತಿದೆ. ಯಾವುದೇ ವೈರಸ್ ಕಾಯಿಲೆ ಒಂದೇ ಏಟಿಗೆ ಸಂಪೂರ್ಣವಾಗಿ ಗುಣವಾಗುವುದಿಲ್ಲ. ಚಿಕನ್’ಗುನ್ಯಾ ಕಾಯಿಲೆಯಿಂದ ನರಳಿದ ಹಲವಾರು ಮಂದಿ ಸುಮಾರು ತಿಂಗಳುಗಳ ಕಾಲ ಕೀಲುಗಳ ನೋವಿನಿಂದ ಬಳಲಿದ್ದ ಪ್ರಸಂಗಗಳಿವೆ. ಅಂತೆಯೇ, ಕೋವಿಡ್-19 ಗುಣವಾದ ನಂತರವೂ ಶರೀರ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸ್ವಲ್ಪ ಕಾಲ ಹಿಡಿಯುತ್ತದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿಗಾಗಿ ಈ ಲೇಖನ.
ಕೋವಿಡ್-19 ಮೂಲತಃ ಶ್ವಾಸಾಂಗಗಳಿಗೆ ಸಂಬಂಧಪಟ್ಟ ಕಾಯಿಲೆಯಾದ್ದರಿಂದ, ಗುಣವಾದವರಲ್ಲಿ ಉಸಿರಾಟದ ಸಮಸ್ಯೆ ಮುಂದುವರೆಯಬಹುದು. ಇದು ಆತಂಕಕ್ಕೆ ದಾರಿಯಾಗುತ್ತದೆ. ತಲೆಯ ಅಡಿಯಲ್ಲಿ ಎರಡು-ಮೂರು ದಿಂಬುಗಳನ್ನು ಇರಿಸಿ, ಒಂದು ಬದಿಗೆ ಹೊರಳಿ ಮಲಗುವುದು; ಕುರ್ಚಿಯಲ್ಲಿ ಕೂತು, ಮೇಜಿನ ಮೇಲೆ ಕೈಗಳನ್ನು ಇರಿಸಿ ಒಂದು ದಿಂಬಿನ ಮೇಲೆ ತಲೆ ಇರಿಸಿ ವಿಶ್ರಮಿಸುವುದು; ಯಾವುದಾದರೂ ಆಧಾರವನ್ನು ಹಿಡಿದು ನಿಲ್ಲುವುದು; ಬೆನ್ನಿಗೆ ಆಸರೆಯನ್ನಿತ್ತು ನಿಲ್ಲುವುದು; ನಿಧಾನವಾಗಿ ದೀರ್ಘಶ್ವಾಸ ತೆಗೆದುಕೊಳ್ಳುವುದು; ಪ್ರತಿಯೊಂದು ಮೆಟ್ಟಿಲನ್ನು ನಿಧಾನವಾಗಿ ಹತ್ತುವ ಮುನ್ನ ಶ್ವಾಸ ತೆಗೆದುಕೊಳ್ಳುವುದು – ಇಂತಹ ಪ್ರಯತ್ನಗಳಿಂದ ಶ್ವಾಸ ನಿಯಂತ್ರಣ ಸಾಧ್ಯ. ಆತಂಕವೂ ಕಡಿಮೆಯಾಗುತ್ತದೆ.
ನಿಯಮಿತ, ಸುರಕ್ಷಿತ ವ್ಯಾಯಾಮ ಚೇತರಿಕೆಗೆ ಸಹಾಯಕ. ವ್ಯಾಯಾಮಕ್ಕೆ ಮುನ್ನ ಮಾಂಸಖಂಡಗಳನ್ನು ಸಡಿಲಿಸಬೇಕು. ಕುರ್ಚಿಯ ಮೇಲೆ ಕೂತು ಭುಜಗಳನ್ನು ಕಿವಿಯತ್ತ ಎತ್ತುವುದು; ಭುಜಗಳನ್ನು ವೃತ್ತಾಕಾರವಾಗಿ ಚಲಿಸುವುದು; ಮಂಡಿಯನ್ನು ಎತ್ತುವುದು; ಪಾದಗಳನ್ನು ವೃತ್ತಾಕಾರವಾಗಿ ಚಲಿಸುವುದು; ನೆಲದ ಮೇಲೆ ನಿಂತು ಎಡ-ಬಲ ಬದಿಗಳಿಗೆ ಬಾಗುವುದು; ಪಾದಗಳನ್ನು ಮೇಲೆ-ಕೆಳಗೆ ಬಾಗಿಸುವುದು; ನಿಂತಲ್ಲೇ ಮಂಡಿ ಎತ್ತುತ್ತಾ ನಡೆಯುವಂತಹ ಚಲನೆ; ನೆಲಮಟ್ಟದಿಂದ ಮೊದಲ ಮೆಟ್ಟಿಲನ್ನು ಮಾತ್ರ ನಿಧಾನವಾಗಿ ಹತ್ತಿ-ಇಳಿದು ಮಾಡುವದು; ಸಾಧಾರಣ ವೇಗದಿಂದ ಆರಂಭಿಸಿ ಸಾಧ್ಯವಾದಷ್ಟು ವೇಗವಾಗಿ ನಡೆಯುವುದು – ಇವುಗಳು ಆರಂಭಿಕ ವ್ಯಾಯಾಮಗಳಾಗಬೇಕು. ಸಾಮರ್ಥ್ಯವನ್ನು ಅನುಸರಿಸಿ ಮುಂದಿನ ಹಂತದ ವ್ಯಾಯಾಮ ಮಾಡಬಹುದು.
ನಮ್ಮ ಧ್ವನಿ ಹೊರಡುವುದು ಶ್ವಾಸಕೋಶದಿಂದ ಹೊರಬರುವ ಗಾಳಿಯ ಮೂಲಕ. ಹೀಗಾಗಿ, ಚೇತರಿಕೆಯ ಸಮಯದಲ್ಲಿ ಧ್ವನಿ ಬದಲಾಗಬಹುದು; ಕ್ಷೀಣವಾಗಬಹುದು. ಗಂಟಲಿಗೆ ಹೆಚ್ಚು ತ್ರಾಸ ನೀಡದಿರುವುದು ಸೂಕ್ತ. ಅಗತ್ಯವಿದ್ದಾಗ ಮಾತ್ರ ಮಾತನಾಡಬೇಕು; ದನಿಯನ್ನು ಎತ್ತರಿಸಬಾರದು; ಮಾತಿನ ಮಧ್ಯೆ ದೀರ್ಘ ಶ್ವಾಸ ತೆಗೆದುಕೊಳ್ಳುತ್ತಾ ಧ್ವನಿಗೆ ಆರಾಮ ನೀಡಬೇಕು; ಬೆಚ್ಚಗಿನ ನೀರನ್ನು ಸ್ವಲ್ಪಸ್ವಲ್ಪವಾಗಿ ಕುಡಿಯುತ್ತಾ ಗಂಟಲಿನ ಆರ್ದ್ರತೆಯನ್ನು ಕಾಪಾಡಿಕೊಳ್ಳಬೇಕು; ಬೆನ್ನು ಬಾಗದಂತೆ ನೇರವಾಗಿ ಕೂರಬೇಕು; ನಿಧಾನವಾಗಿ, ಆರಾಮವಾಗಿ ತಿನ್ನಬೇಕು.
ಚೇತರಿಕೆಯ ಸಮಯದಲ್ಲಿ ನಮ್ಮ ನೆನಪು, ಗಮನ ಹರಿಸುವಿಕೆ, ಸ್ಪಷ್ಟ ಚಿಂತನೆಗಳಲ್ಲಿ ತೊಂದರೆಯಾಗಬಹುದು. ಇದರಿಂದ ಕುಟುಂಬದ ಇತರ ಸದಸ್ಯರಿಗೆ ಇರುಸುಮುರುಸಾಗಬಹುದು. ಈ ರೀತಿಯ ಸಾಧ್ಯತೆಗಳ ಬಗ್ಗೆ ವೈದ್ಯರಲ್ಲಿ ಚರ್ಚಿಸಬೇಕು. ಇದರ ಪರಿಹಾರದಲ್ಲಿ ವ್ಯಾಯಾಮ ನೆರವಾಗುತ್ತದೆ. ಮೆದುಳಿಗೆ ಕೆಲಸ ಕೊಡುವುದು ಉತ್ತಮ. ಹೊಸದೊಂದು ಹವ್ಯಾಸ; ಒಗಟು ಬಿಡಿಸುವಿಕೆ; ಸಮಸ್ಯಾಪೂರಣ; ಓದುವಿಕೆಗಳು ಸಹಕಾರಿ. ಮಾಡಬೇಕಾದ ಕೆಲಸಗಳ ಪಟ್ಟಿಮಾಡುವಿಕೆ; ಕೆಲಸಗಳನ್ನು ನೆನಪಿಸಲು ಅಲಾರಂ ಗಂಟೆಯ ಬಳಕೆ; ದೊಡ್ಡ ಕೆಲಸವನ್ನು ಸಣ್ಣಸಣ್ಣ ಘಟಕಗಳಲ್ಲಿ ಮಾಡುವಿಕೆ – ಇವೆಲ್ಲವೂ ಉತ್ತಮ ಪರಿಣಾಮ ನೀಡುತ್ತವೆ.
ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ನೆರವಾಗುವುದು ಕುಟುಂಬದ ಪ್ರಮುಖ ಲಕ್ಷಣ. ಕಾಯಿಲೆಯ ನಂತರದ ಕಾಲದಲ್ಲಿ ಅಗತ್ಯಬಿದ್ದಾಗ ನಿಸ್ಸಂಕೋಚವಾಗಿ ಸಹಾಯ ಕೇಳಬೇಕು. ಇದರಲ್ಲಿ ಯಾವುದೇ ಅವಮಾನವಿಲ್ಲ. ಅಕಾರಣವಾಗಿ ಸುಸ್ತಾಗುವ ಕೆಲಸಗಳನ್ನು ಮಾಡಬಾರದು; ಶರೀರದ ಶಕ್ತಿಯನ್ನು ವೃಥಾ ವ್ಯಯ ಮಾಡಬಾರದು; ಕುಳಿತು ಮಾಡಬಹುದಾದ ಕೆಲಸವನ್ನು ನಿಂತು ಮಾಡಬಾರದು; ಕೆಲಸಗಳ ನಡುವೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು; ಮಾಡುವ ಕೆಲಸದ ಪರಿಮಾಣವನ್ನು ಶಕ್ತಿಗೆ ತಕ್ಕಂತೆ ನಿಧಾನವಾಗಿ ವಿಸ್ತರಿಸಬೇಕು.
ಒತ್ತಡ, ಆತಂಕ, ಖಿನ್ನತೆಗಳು ಈ ಹಂತದಲ್ಲಿ ಸಹಜ. ಆಸ್ಪತ್ರೆಯ ಅನುಭವಗಳು, ಸಮೀಪ ಬಂಧುಗಳ ಮರಣ, ಕಿವಿಗೆ ಬೀಳುತ್ತಲೇ ಇರುವ ಕೆಟ್ಟಸುದ್ಧಿಗಳು ಇದನ್ನು ಉಲ್ಬಣಿಸುತ್ತವೆ. ಇದನ್ನು ಹತೋಟಿಯಲ್ಲಿಡುವುದು ಆರೋಗ್ಯದ ದೃಷ್ಟಿಯಿಂದ ಮುಖ್ಯ. ಚೆನ್ನಾಗಿ ಗಾಳಿಯಾಡುವ, ಸದ್ದು-ಬೆಳಕು ಕಡಿಮೆ ಇರುವೆಡೆ ಸಾಕಷ್ಟು ನಿದ್ರೆ ಮಾಡುವಿಕೆ; ಆರೋಗ್ಯಕರ ಸಾತ್ವಿಕ ಆಹಾರ; ಯಾವುದಾದರೂ ನಿಯಮಿತ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಿಕೆ; ಧನಾತ್ಮಕ ಮನಸ್ಥಿತಿಯವರ ಜೊತೆಗಿನ ಮಾತುಕತೆ; ಮನಸ್ಸಿಗೆ ಮುದ ನೀಡುವ ಸಂಗೀತ-ಸಾಹಿತ್ಯ – ಇವುಗಳು ಆತಂಕ-ಖಿನ್ನತೆಗಳ ನಿಗ್ರಹದಲ್ಲಿ ಫಲಕಾರಿ. ಮಾನಸಿಕ ತಜ್ಞರ ಜೊತೆಗಿನ ಚರ್ಚೆಯಿಂದ ಮಾನಸಿಕ ಕ್ಲೇಶ ಕಳೆಯುತ್ತದೆ.
ಯಾವುದೇ ಹಂತದಲ್ಲಿ ಅನಾರೋಗ್ಯ ಲಕ್ಷಣಗಳು ಮರುಕಳಿಸಿದರೆ, ಹೊಸದಾದ ರೋಗಲಕ್ಷಣಗಳು ಕಂಡುಬಂದರೆ, ಯಾವುದೇ ಆರೋಗ್ಯ ಸಮಸ್ಯೆ ನಿಯಂತ್ರಣಕ್ಕೆ ಬಾರದೇ ಹೆಚ್ಚಾಗುತ್ತಿದ್ದರೆ, ನೋವು-ಮಾನಸಿಕ ಕ್ಲೇಶ ಹೆಚ್ಚಾಗುತ್ತಿದ್ದರೆ ಸಾಧ್ಯವಾದಷ್ಟು ಬೇಗ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಈ ಬಗ್ಗೆ ಕುಟುಂಬದ ಇತರ ಸದಸ್ಯರಿಗೆ ಮಾಹಿತಿ ನೀಡುವುದನ್ನು ಮರೆಯಬಾರದು. ಸಾಂಘಿಕ ಪ್ರಯತ್ನದಿಂದ ಈ ಕಾಯಿಲೆಯನ್ನು ಗೆಲ್ಲುವ ಮನಸ್ಥಿತಿ ನಮ್ಮೆಲ್ಲರದ್ದಾಗಲಿ.
-------------------------


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ