ಮಂಗಳವಾರ, ಸೆಪ್ಟೆಂಬರ್ 21, 2021

ಕೋವಿಡ್-19 ಅಲೆಗಳ ಬಗ್ಗೆ ಮಾತಾನಾಡುವವರು ಹೆಚ್ಚು; ಸ್ಪಷ್ಟತೆ ಕಡಿಮೆ! ಆ ಬಗ್ಗೆ ಇ-ಜ್ಞಾನ ಜಾಲತಾಣದಲ್ಲಿ ಪ್ರಕಟವಾದ ನನ್ನ ಲೇಖನ:

**ಕೋವಿಡ್-19 ಅಲೆಗಳು**
“ಎರಡನೆಯ ಅಲೆಯೇ ಹೇಗಿದೆ. ಇನ್ನು ಮೂರನೆಯ ಅಲೆ ಹೇಗೆ ಇರುತ್ತದೋ?” ಎಂದು ಆತಂಕ ಪಡುತ್ತಿರುವವರು ಸಾಕಷ್ಟು ಮಂದಿ. ಆದರೆ, ಅವರಲ್ಲಿ ಬಹುತೇಕರಿಗೆ “ಕೋವಿಡ್-19 ಅಲೆ ಎಂದರೇನು?” ಎಂಬುದೇ ಸ್ಪಷ್ಟವಾಗಿ ತಿಳಿದಿರಲಿಕ್ಕಿಲ್ಲ. ಕೋವಿಡ್ ಅಲೆಗಳ ಬಗ್ಗೆ ಸ್ವಲ್ಪ ಮಾಹಿತಿ ಇಲ್ಲಿದೆ:
ಯಾವುದೇ ಕಾಯಿಲೆಗೆ ನಿಶ್ಚಿತ ಅಲೆಗಳು ಎಂಬುದಿಲ್ಲ. ಒಂದು ಕಾಯಿಲೆಯ ಒಟ್ಟು ರೋಗಿಗಳ ಆಯಾ ದಿನದ ಸಂಖ್ಯೆಯನ್ನು ಒಂದು ನಕ್ಷೆಯ ಮೇಲೆ ನಮೂದಿಸುತ್ತಾ ಹೋದರೆ ಅದು ಒಂದು ಆಕಾರ ಪಡೆಯುತ್ತದೆ. ಅದು ನೇರವಾದ ಗೆರೆ ಇರಬಹುದು; ಇಳಿಮುಖ ಯಾ ಏರುಮುಖ ಗೆರೆ ಆಗಬಹುದು ಇಲ್ಲವೇ ಮಟ್ಟಸವಾದ ಗೆರೆ ಏಕ್-ದಂ ಮೇಲಕ್ಕೆ ಏರಿ, ಅಲ್ಲಿ ಕೆಲಕಾಲ ಸ್ಥಗಿತವಾಗಿ, ಅಲ್ಲಿಂದ ಮುಂದೆ ಇಳಿಮುಖವಾಗಬಹುದು. ಈ ರೀತಿ, ಏರಿ-ನಿಂತು-ಇಳಿಯುವ ನಕ್ಷೆಯನ್ನು “ಅಲೆ” ಎನ್ನಬಹುದು. ಈ ಅಲೆ ಕೇವಲ ಕೋವಿಡ್-19 ಕಾಯಿಲೆಗೆ ಮಾತ್ರ ಸೀಮಿತವಲ್ಲ; ಯಾವುದೇ ಕಾಯಿಲೆಯೂ ಇಂತಹ ಅಲೆಯನ್ನು ನಿರ್ಮಿಸಬಹುದು. ಚಳಿಗಾಲ ಆರಂಭ ಆಗುತ್ತಿದ್ದಂತೆ ಉಸಿರಾಟದ ಕಾಯಿಲೆಗಳು ಉಲ್ಬಣವಾಗುತ್ತವೆ. ಆಗ ಅಂತಹ ರೋಗಿಗಳ ಸಂಖ್ಯೆ ಹಠಾತ್ ಏರುತ್ತದೆ. ಕೆಲದಿನಗಳಲ್ಲಿ ಈ ಸಂಖ್ಯೆ ಒಂದು ಮಟ್ಟಕ್ಕೆ ತಲುಪಿ, ನಂತರ ಇಳಿಯುತ್ತದೆ. ಇದು ಕೂಡ ಒಂದು ಅಲೆಯೇ. ಬೇಸಿಗೆಯ ಆರಂಭದಲ್ಲಿ ನೀರಿನಿಂದ ಹರಡುವ ಅತಿಸಾರದಂತಹ ರೋಗಗಳ ಸಂಖ್ಯೆ ಏರುತ್ತದೆ. ಹೀಗೆ, ಅಲೆ ಎಂಬುದು ಒಂದು ಕಾಲಾವಧಿಯಲ್ಲಿ ರೋಗಿಗಳ ಸಂಖ್ಯೆಯ ಮೇಲೆ ಅವಲಂಬಿತವಾದ ನಕ್ಷೆಯ ಸ್ವರೂಪ.
ಕೋವಿಡ್-19 ಕಾಯಿಲೆಯಲ್ಲೂ ನಾವು ಇದನ್ನೇ ಕಾಣುತ್ತಿದ್ದೇವೆ. ಕಾಯಿಲೆ ಆರಂಭವಾದಾಗ ಅದರ ಗುಣಲಕ್ಷಣಗಳು, ಅದು ಹರಡುವ ಬಗೆ – ಇವುಗಳ ಸ್ಪಷ್ಟತೆ ಇರಲಿಲ್ಲ. ಹೀಗಾಗಿ, ಆ ಹಂತದಲ್ಲಿ ಹಲವಾರು ಮಂದಿ ಕಾಯಿಲೆಗೆ ತುತ್ತಾದರು. ಒಮ್ಮೆ ಇವುಗಳ ಬಗ್ಗೆ ಸಾಕಷ್ಟು ತಿಳುವಳಿಕೆ ಬಂದ ನಂತರ ಕಾಯಿಲೆಯ ವಿರುದ್ಧ ಮುಂಜಾಗ್ರತೆ ವಹಿಸಿ, ಅದರ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ತಂದ ಮೇಲೆ ಕಾಯಿಲೆಯ ಪ್ರಮಾಣ ಕಡಿಮೆಯಾಯಿತು. ರೋಗಿಗಳ ಸಂಖ್ಯೆಯನ್ನು ಕಾಲಾವಧಿಯ ಜೊತೆಗೆ ತುಲನೆ ಮಾಡಿ ತಯಾರಿಸಿದ ನಕ್ಷೆಯಲ್ಲಿ ಕಂಡದ್ದು ಕೋವಿಡ್-19 ಕಾಯಿಲೆಯ ಮೊದಲ ಅಲೆ.
ಒಂದು ಕಾಯಿಲೆ ಸಾಂಕ್ರಾಮಿಕ ಸ್ವರೂಪವನ್ನು ತಳೆಯಬಾರದು ಎಂದರೆ, ಮೂರು ದಾರಿಗಳಿವೆ. ಒಂದು- ಕಾಯಿಲೆ ಬಾರದಂತೆ ತಡೆಯಬಲ್ಲ ಪರಿಣಾಮಕಾರಿ ಲಸಿಕೆ ಇರಬೇಕು ಮತ್ತು ಈ ಲಸಿಕೆ ಎಲ್ಲರಿಗೂ ಬೇಗನೆ ಲಭ್ಯವಾಗಬೇಕು. ಎರಡು – ಕಾಯಿಲೆಯನ್ನು ಶೀಘ್ರವಾಗಿ ಪತ್ತೆಮಾಡಬಲ್ಲ ವ್ಯವಸ್ಥೆಯ ಜೊತೆಗೆ ಪೂರ್ಣವಾಗಿ ಗುಣಪಡಿಸಬಲ್ಲ ಪಕ್ಕಾ ಚಿಕಿತ್ಸೆ ಇರಬೇಕು. ಮೂರು – ಕಾಯಿಲೆಯನ್ನು ಹರಡದಂತೆ ತಡೆಯಬಲ್ಲ ಸಾಂಘಿಕ ಶಿಸ್ತು, ವೈಯಕ್ತಿಕ ಸಂಯಮ ಇರಬೇಕು. ಈ ವರ್ಷದ ಆರಂಭದವರೆಗೆ ಮೊದಲ ದಾರಿ ಲಭ್ಯವಿರಲಿಲ್ಲ. ಎರಡನೆಯ ದಾರಿ ಈಗಲೂ ಪತ್ತೆಯಾಗಿಲ್ಲ. ಮೂರನೆಯ ದಾರಿಗೆ ನಮ್ಮ ಪ್ರಜಾನೀಕ ಆಸ್ಪದ ಕೊಡಲಿಲ್ಲ. ಇದರ ನಡುವೆ ಕೋವಿಡ್-19 ವೈರಸ್ ತನ್ನ ಸಹಜ ಗುಣದಂತೆ ಆಂತರಿಕ ಜೆನೆಟಿಕ್ ಮಾರ್ಪಾಡು ಹೊಂದುತ್ತಾ ಹೋಯಿತು. ಇಂತಹ ಮಾರ್ಪಡಿತ ಪ್ರಬೇಧವೊಂದು ಕಾಯಿಲೆ ತರುವ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿರಲೂಬಹುದು. ಒಂದೆಡೆ ಜನರ ಅಶಿಸ್ತು, ಬೇಕಾಬಿಟ್ಟಿ ವರ್ತನೆ; ಮತ್ತೊಂದೆಡೆ ದೇಶದಲ್ಲಿ ನಡೆದ ಕೆಲವು ವಿದ್ಯಮಾನಗಳ ಕಾರಣದಿಂದ ಜನರ ಅನಗತ್ಯ ಗುಂಪುಗೂಡುವಿಕೆ; ಇನ್ನೊಂದೆಡೆ ವೈರಸ್ ನ ಬದಲಾದ ಸ್ವರೂಪ – ಇವೆಲ್ಲಾ ಸೇರಿ ರೋಗಿಗಳ ಸಂಖ್ಯೆ ಮತ್ತೊಮ್ಮೆ ಹೆಚ್ಚಾಯಿತು. ಕೋವಿಡ್-19 ರೋಗಿಗಳ ಸಂಖ್ಯೆಯನ್ನು ಸೂಚಿಸುವ ನಕ್ಷೆಯ ರೇಖೆ ಆಕಾಶಕ್ಕೆ ಮುಖ ಮಾಡಿತು. ಇದರಿಂದ ಉಂಟಾದ ಫಲಿತವನ್ನು ಎರಡನೆಯ ಅಲೆ ಎಂದು ಹೆಸರಿಸಲಾಯಿತು.
ಹೀಗೆ, ರೋಗಿಗಳ ಸಂಖ್ಯೆ ಅಲೆಯ ಸ್ವರೂಪ ಪಡೆಯುವುದಕ್ಕೆ ಹಲವಾರು ಕಾರಣಗಳು ಇರುತ್ತವೆ. ಇದನ್ನು ಅರಿತು, ಆಯಾ ರೋಗದ ನಿಗ್ರಹಕ್ಕೆ ಬೇಕಾದ ಶಿಸ್ತಿನ ಕ್ರಮಗಳನ್ನು ಪಾಲಿಸಿದರೆ ಮತ್ತೊಂದು ಅಲೆಯಿಂದ ಮುಕ್ತರಾಗಬಹುದು. ಶಿಸ್ತಿನ ಅಗತ್ಯವನ್ನು ಮರೆತು, ತಜ್ಞರ ಸಲಹೆಗಳನ್ನು ಕಡೆಗಣಿಸಿ, ಮನಸೋ ಇಚ್ಛೆ ವ್ಯವಹರಿಸಿದರೆ ಇನ್ನೂ ಹತ್ತಾರು ಅಲೆಗಳನ್ನು ಕಾಣಬಹುದು. ‘ಈ ಅಲೆಗಳು ತಾವಾಗಿಯೇ ಬರುವುದಿಲ್ಲ; ಬಹಳ ಮಟ್ಟಿಗೆ ನಾವಾಗಿಯೇ ತಂದುಕೊಳ್ಳುತ್ತೇವೆ’ ಎನ್ನುವ ಸಾಂಕ್ರಾಮಿಕ ರೋಗತಜ್ಞರ ಮಾತುಗಳು ನೆನಪಿರಬೇಕು. ಮೂರನೆಯ ಅಲೆ ಬಾರದಂತೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿ. ಅನಗತ್ಯವಾಗಿ ಇತರರ ಸಂಪರ್ಕಕ್ಕೆ ಬಾರದಿರುವುದು; ರೋಗ ಹರಡದಂತೆ ಮಾಸ್ಕ್ ಧರಿಸುವುದು; ರೋಗಲಕ್ಷಣಗಳು ಕಂಡ ಕೂಡಲೇ ಸರಿಯಾದ ಪರೀಕ್ಷೆ ಮಾಡಿಸಿ, ಸೂಕ್ತ ಚಿಕಿತ್ಸೆ ಪಡೆಯುವುದು; ಪ್ರತಿಯೊಬ್ಬರೂ ತಪ್ಪದೇ ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದು; ಲಸಿಕೆಯ ನಂತರವೂ ಶಿಸ್ತಿನ ಕ್ರಮಗಳನ್ನು ಮುಂದುವರೆಸುವುದು – ಇವನ್ನೆಲ್ಲಾ ಮಾಡಲೇಬೇಕು. ಇದನ್ನು ಮೀರಿದರೆ ಮತ್ತೊಮ್ಮೆ ಪಶ್ಚಾತ್ತಾಪ ಪಡಬೇಕಾಗುತ್ತದೆ.
---------------
ವಿಶ್ವದ ವಿವಿಧೆಡೆ ಕೋವಿಡ್-19 ಹೊಸ ಪ್ರಕರಣಗಳ ದೈನಂದಿನ ಸಂಖ್ಯೆ ತೋರಿಸುವ ನಕ್ಷೆ
ಚಿತ್ರಕೃಪೆ:
Chris55, CC BY-SA 4.0 <https://creativecommons.org/licenses/by-sa/4.0>, via Wikimedia Commons
ಇ-ಜ್ಞಾನ ಜಾಲತಾಣದಲ್ಲಿನ ಲೇಖನದ ಕೊಂಡಿ: https://www.ejnana.com/variety/what-is-covid-wave


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ