ಮಂಗಳವಾರ, ಸೆಪ್ಟೆಂಬರ್ 21, 2021

 ಮನೆಯಲ್ಲೇ ಕೋವಿಡ್-19 ಪರೀಕ್ಷೆ ಮಾಡುವ ಕಿಟ್ ಹೇಗೆ ಕೆಲಸ ಮಾಡುತ್ತದೆ? ಅದನ್ನು ಹೇಗೆ ಬಳಸಬೇಕು? - ಈ ಮಾಹಿತಿಗಳ ಬಗೆಗಿನ ನನ್ನ ಲೇಖನ ಇಂದಿನ (2/ಜೂನ್/2021) ಪ್ರಜಾವಾಣಿಯ ತಂತ್ರಜ್ಞಾನ ಪುರವಣಿಯಲ್ಲಿ ಪ್ರಕಟವಾಗಿದೆ. ಈ ವಿಷಯವನ್ನು ಬರೆಯಿಸಿದ ಶ್ರೀಯುತ Suryaprakash Pandit ಅವರಿಗೆ ಧನ್ಯವಾದಗಳು.

ಕೋವಿಡ್-19 ಪರೀಕ್ಷೆಯ ಕಿಟ್ – ಯಾರಿಗೆ? ಹೇಗೆ? ಏನು?
ಪುಣೆಯ ಖಾಸಗೀ ಸಂಸ್ಥೆಯೊಂದು ಮನೆಯಲ್ಲೇ ಕೋವಿಡ್-19 ಪತ್ತೆ ಮಾಡಬಹುದಾದ ಕಿಟ್ ತಯಾರಿಸಿದೆ. ಇದೇನೂ ಹೊಸ ತಂತ್ರಜ್ಞಾನವಲ್ಲ. ಗರ್ಭಧಾರಣೆಯನ್ನು ಮನೆಯಲ್ಲೇ ಅರಿಯಬಹುದಾದ ಕಿಟ್ ಬಹಳ ಕಾಲದಿಂದ ಬಳಕೆಯಲ್ಲಿದೆ. ಆಗಾಗ ಪ್ರಯೋಗಾಲಯಕ್ಕೆ ಹೋಗುವ ಕಷ್ಟದ ನಿವಾರಣೆಗಾಗಿ ಕಿಟ್ ಬಳಸಿ ಮನೆಯಲ್ಲೇ ಕೋವಿಡ್-19 ಪತ್ತೆ ಮಾಡುವುದು ಬಹಳ ಅನುಕೂಲ.
ಯಾರಿಗೆ?: ಕೋವಿಡ್-19 ಕಾಯಿಲೆಯ ರೋಗಲಕ್ಷಣಗಳು ಇರುವವರು ಈ ಕಿಟ್ ಬಳಸಿ ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳಬಹುದು. ಕೋವಿಡ್-19 ಕಾಯಿಲೆ ಬಂದಿರುವ ರೋಗಿಯ ಸಂಪರ್ಕದಲ್ಲಿ ಇರುವ ವ್ಯಕ್ತಿಗಳೂ ಕಿಟ್ ಮೂಲಕ ತಮಗೂ ಕಾಯಿಲೆ ಬಂದಿದೆಯೇ ಎಂಬುದನ್ನು ಪತ್ತೆ ಮಾಡಬಹುದು. ಕಾಯಿಲೆಯ ಯಾವುದೇ ಸೂಚನೆ ಇಲ್ಲದವರು ವೃಥಾ ಕುತೂಹಲಕ್ಕಾಗಿ ಈ ಕಿಟ್ ಬಳಸಬಾರದು.
ಹೇಗೆ?: ಕಿಟ್ ಬಳಸುವ ಮುನ್ನ ಅದಕ್ಕೆ ಸಂಬಂಧಿಸಿದ app ಅನ್ನು ಸ್ಮಾರ್ಟ್-ಫೋನಿಗೆ ಇಳಿಸಿಕೊಂಡು, ಪರೀಕ್ಷೆ ಮಾಡಿಸಿಕೊಳ್ಳುವವರ ವಿವರಗಳನ್ನು ನೋಂದಾಯಿಸಬೇಕು. App ವಿವರಗಳು ಕಿಟ್ ಜೊತೆಯಲ್ಲೇ ಇರುತ್ತವೆ. ಕೈಗಳನ್ನು ಸಾಬೂನಿನಿಂದ ಚೆನ್ನಾಗಿ ತೊಳೆದುಕೊಂಡು ಕಿಟ್ ತೆರೆಯಬೇಕು. ಕಿಟ್ ಅನ್ನು ಬಳಸುವ ಸಚಿತ್ರ ವಿವರಗಳು ಅದರ ಜೊತೆಯಲ್ಲಿರುತ್ತವೆ. ಕಿಟ್ ಒಳಗೆ, ಒಂದು ತುದಿಯಲ್ಲಿ ಹತ್ತಿ ಸುತ್ತಿದ ಉದ್ದನೆಯ ಕಡ್ಡಿ, ವಿಶೇಷ ದ್ರಾವಣದ ಸಣ್ಣ ಶೀಷೆ, ಪರೀಕ್ಷೆಯ ಪಟ್ಟಿ, ಮತ್ತು ಪರೀಕ್ಷೆಯ ನಂತರ ಇವನ್ನು ಸುರಕ್ಷಿತವಾಗಿ ಸೇರಿಸಿ, ತ್ಯಾಜ್ಯಕ್ಕೆ ನೀಡುವ ಚೀಲ ಇರುತ್ತವೆ.
ಒಂದು ತುದಿಯಲ್ಲಿ ಹತ್ತಿ ಸುತ್ತಿದ ಉದ್ದನೆಯ ಕಡ್ಡಿಯನ್ನು ಮೊದಲು ಜೋಪಾನವಾಗಿ ತೆಗೆದುಕೊಳ್ಳಬೇಕು. ಯಾವ ಕಾರಣಕ್ಕೂ ಹತ್ತಿಯನ್ನು ಕೈಯಿಂದ ಮುಟ್ಟಬಾರದು. ಹತ್ತಿಯ ತುದಿಯನ್ನು ನಾಜೂಕಾಗಿ ಮೂಗಿನ ಒಂದು ಹೊಳ್ಳೆಯೊಳಗೆ 1.5-2 ಇಂಚು ಆಳಕ್ಕೆ ಸ್ವಲ್ಪ ತಡೆ ಭಾಸವಾಗುವವರೆಗೆ ಏರಿಸಿ, ಕಡ್ಡಿಯನ್ನು ಐದು ಬಾರಿ ವರ್ತುಲವಾಗಿ ತಿರುಗಿಸಬೇಕು. ಕಡ್ಡಿಯನ್ನು ನಾಜೂಕಾಗಿ ಹೊರತೆರೆದು, ಮತ್ತೊಂದು ಹೊಳ್ಳೆಯಲ್ಲಿ ಏರಿಸಿ ಇಡೀ ಪ್ರಕ್ರಿಯೆಯನ್ನು ಮಾಡಬೇಕು. ಹತ್ತಿಯ ಭಾಗವನ್ನು ಕೈಯಿಂದ ಮುಟ್ಟದೆ, ಅದನ್ನು ವಿಶೇಷ ದ್ರಾವಣದ ಸಣ್ಣ ಶೀಷೆಯಲ್ಲಿ ಸೇರಿಸಿ, ಕಡ್ಡಿಯನ್ನು ಹತ್ತಾರು ಬಾರಿ ಸುರಳಿಯಂತೆ ತಿರುವಬೇಕು. ಪರೀಕ್ಷೆ ಮಾಡಿದವರ ಮೂಗಿನಲ್ಲಿ ಇರಬಹುದಾದ ಕೋವಿಡ್-19 ವೈರಸ್ ಈ ದ್ರಾವಣದಲ್ಲಿ ಸೇರಿರುತ್ತದೆ. ಈಗ ದ್ರಾವಣವನ್ನು ಪರೀಕ್ಷೆ-ಪಟ್ಟಿಯಲ್ಲಿ ಸೂಚಿತವಾಗಿರುವ ಸ್ಥಾನದಲ್ಲಿ ಹನಿಹನಿಯಾಗಿ ಹಾಕಬೇಕು. ಹದಿನೈದು ನಿಮಿಷಗಳ ನಂತರ app ಗಂಟೆ ಬಾರಿಸುತ್ತದೆ. ಆಗ ಫಲಿತಾಂಶ ನೋಡಬಹುದು. ಪರೀಕ್ಷೆ-ಪಟ್ಟಿಯ ಫೋಟೋ ತೆಗೆದು app ನಲ್ಲಿ ಸೇರಿಸಬೇಕು. ಪರೀಕ್ಷೆಯ ಫಲಿತಾಂಶವನ್ನು app ತನ್ನಲ್ಲಿ ಸೇರಿಸಿಕೊಂಡು ಗೌಪ್ಯವಾಗಿ ಇಡುತ್ತದೆ. ಪರೀಕ್ಷೆ ಮುಗಿದ ನಂತರ ಕಿಟ್ ನ ಎಲ್ಲಾ ವಸ್ತುಗಳನ್ನೂ ಚೀಲದಲ್ಲಿ ಇಟ್ಟು, ತ್ಯಾಜ್ಯಕ್ಕೆ ಸೇರಿಸಿ, ಮತ್ತೊಮ್ಮೆ ಚೆನ್ನಾಗಿ ಕೈತೊಳೆಯಬೇಕು.
ಏನು?: ಕೋವಿಡ್-19 ವೈರಸ್ ಶ್ವಾಸಮಾರ್ಗದ ಜೀವಕೋಶಗಳನ್ನು ಆಕ್ರಮಿಸುತ್ತದೆ. ವೈರಸ್ಸಿನ ಮೇಲ್ಮೈ ಪ್ರೊಟೀನ್ ಪ್ರತಿಜನಕಗಳನ್ನು ಪತ್ತೆ ಮಾಡಿದರೆ, ಅದರ ಇರುವಿಕೆ ತಿಳಿಯುತ್ತದೆ. ಕೋವಿಡ್-19 ಪರೀಕ್ಷೆಯ ಕಿಟ್ ಇಂತಹ ಪ್ರತಿಜನಕಗಳನ್ನು ಸರಳವಾಗಿ, ಶೀಘ್ರವಾಗಿ ಪತ್ತೆ ಮಾಡುತ್ತದೆ. ನೈಟ್ರೊಸೆಲ್ಲ್ಯುಲೋಸ್ ಪದರದ ಮೇಲೆ ಕೋವಿಡ್-19 ಪ್ರತಿಕಾಯಗಳನ್ನು ಸಮ್ಮಿಶ್ರಗೊಳಿಸಿ ಕಿಟ್ ನ ಪರೀಕ್ಷೆ-ಪಟ್ಟಿಯಲ್ಲಿ ಕೂರಿಸಲಾಗುತ್ತದೆ. ಕೋವಿಡ್-19 ಮಿಶ್ರವಾದರೆ ಪದರದಲ್ಲಿನ ಪ್ರತಿಕಾಯಗಳು ವೈರಸ್ಸಿನ ಪ್ರೊಟೀನ್ ಪ್ರತಿಜನಕಗಳ ಜೊತೆ ಕೂಡಿಕೊಂಡು ಸಂಯುಕ್ತಗಳಾಗುತ್ತವೆ. ಈ ಸಂಯುಕ್ತಗಳ ಜೊತೆ ಬೆಸೆದುಕೊಳ್ಳುವ ಚಿನ್ನದ ನ್ಯಾನೋಕಣಗಳನ್ನು T-ಗುರುತಿನ ಗೆರೆಗೆ ಸೇರಿಸಲಾಗಿದೆ. ಅದರ ಜೊತೆಯಲ್ಲಿ “ಕಿಟ್ ಸರಿಯಾಗಿ ಕೆಲಸ ಮಾಡುತ್ತಿದೆ” ಎಂದು ಸೂಚಿಸುವ C-ಹೆಸರಿನ ಮತ್ತೊಂದು ಗೆರೆ ಇರುತ್ತದೆ. ಪರೀಕ್ಷೆ ಮಾಡಿದವರ ಮೂಗಿನಲ್ಲಿ ಕೋವಿಡ್-19 ವೈರಸ್ ಇದ್ದರೆ, C ಮತ್ತು T ಎರಡೂ ಗೆರೆಗಳೂ ಕಾಣುತ್ತವೆ. ಅದು ಪಾಸಿಟಿವ್ ಫಲಿತಾಂಶ – ಕಾಯಿಲೆ ಪಕ್ಕಾ. C ಗೆರೆ ಮಾತ್ರ ಕಂಡು T ಗೆರೆ ಕಾಣದೇ ಇದ್ದರೆ ನೆಗಟಿವ್ ಫಲಿತಾಂಶ. ಅಂತಹವರಿಗೆ ರೋಗಲಕ್ಷಣಗಳು ಇದ್ದರೆ RT-PCR ಪರೀಕ್ಷೆ ಮಾಡಿಸಬೇಕು. T ಗೆರೆ ಮಾತ್ರ ಕಂಡು, C ಗೆರೆ ಕಾಣದೇ ಇದ್ದರೆ ಕಿಟ್ ಸಮರ್ಪಕವಲ್ಲ; ಮತ್ತೊಂದು ಕಿಟ್ ಬಳಸಬೇಕು.
ಮನೆಯಲ್ಲೇ ಪರೀಕ್ಷಿಸುವ ಅನುಕೂಲ ಇದರ ಅತೀ ದೊಡ್ಡ ಲಾಭ. ಇದು ಕೋವಿಡ್-19 ವೈರಸ್ ಇರುವಿಕೆಯನ್ನು ಮಾತ್ರ ತಿಳಿಸುತ್ತದೆಯೇ ಹೊರಟು, ಕಾಯಿಲೆಯ ತೀವ್ರತೆಯನ್ನಲ್ಲ. ಹೀಗಾಗಿ, ಪಾಸಿಟಿವ್ ಫಲಿತಾಂಶ ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಕಾಯಿಲೆ ಇದ್ದರೂ ನಾನಾ ಕಾರಣಗಳಿಂದ ಫಲಿತಾಂಶ ನೆಗಟಿವ್ ಬರುವ ಸಾಧ್ಯತೆಗಳಿವೆ. ಹೀಗಾಗಿ, ರೋಗಲಕ್ಷಣಗಳು ಇದ್ದವರು ನೆಗಟಿವ್ ಬಂದರೆ ಸಂಭ್ರಮಿಸಬಾರದು.
ಕೋವಿಡ್-19 ವಿರುದ್ಧದ ಸಂಘಟಿತ ಹೋರಾಟದಲ್ಲಿ ಇಂತಹ ಸರಳ ತಂತ್ರಜ್ಞಾನಗಳ ಪಾತ್ರ ಮಹತ್ವದ್ದು. ಸೂಕ್ತವಾಗಿ ಬಳಸಿದರೆ ಇಂತಹ ಕಿಟ್ ಗಳು ಕಾಯಿಲೆಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ.
------------------
ಚಿತ್ರಕೃಪೆ: pixabay
ಪ್ರಜಾವಾಣಿಯ ಲೇಖನದ ಕೊಂಡಿ: https://www.prajavani.net/.../pune-lab-develops-indias...


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ