ಮಂಗಳವಾರ, ಸೆಪ್ಟೆಂಬರ್ 21, 2021

 ಕೋವಿಡ್-19 ಲಸಿಕೆ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಪ್ರಶ್ನೆಗಳಿವೆ. ಜಗತ್ತಿನ ಅತೀ ದೊಡ್ಡ ಲಸಿಕಾಕರಣ ಯೋಜನೆಯನ್ನು ಭಾರತ ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗೆಗಿನ ಪರಿಚಯಾತ್ಮಕ ಲೇಖನ.

ಕೋವಿಡ್ ಲಸಿಕೆಯ ಮಹತ್ವ ಮತ್ತು ಸರ್ಕಾರದ ಪಾತ್ರ
ಸದ್ಯಕ್ಕೆ ಭಾರತ ಕೋವಿಡ್-19 ಲಸಿಕಾಕರಣದ ಮೊದಲ ಎರಡು ಹಂತಗಳನ್ನು ನಿರ್ವಹಿಸುತ್ತಿದೆ. ಆರೋಗ್ಯ ಕಾರ್ಯಕರ್ತರು, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರು, ಖಾಸಗಿ ವೈದ್ಯರು – ಇವರನ್ನೆಲ್ಲಾ ಗುರುತಿಸಿ, ಎರಡು ಸುತ್ತಿನ ಲಸಿಕೆ ನೀಡುವ ಕಾರ್ಯ ಪೂರ್ಣಗೊಂಡಿದೆ. ಪ್ರಸ್ತುತ 60 ವರ್ಷ ವಯಸ್ಸು ದಾಟಿದವರಿಗೆ ಮತ್ತು 45 ವರ್ಷಗಳ ವಯಸ್ಸು ದಾಟಿದ, ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳುಳ್ಳ ವ್ಯಕ್ತಿಗಳಿಗೆ ಲಸಿಕೆ ನೀಡುವ ಪ್ರಕ್ರಿಯೆ ಜರುಗುತ್ತಿದೆ. ಈ ಹಂತದಲ್ಲಿ ಸುಮಾರು ಮೂವತ್ತು ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡುವ ಯೋಜನೆಯಿದೆ. ಒಂದು ವರ್ಷದ ಹಿಂದೆ ಇಡೀ ದೇಶವನ್ನು ಸ್ಥಗಿತಗೊಳಿಸಿದ್ದ ಕಾಯಿಲೆಯೊಂದು ಈಗ ಲಸಿಕೆಗಳ ಸುರಕ್ಷತೆಯ ವ್ಯಾಪ್ತಿಗೆ ಸೇರುತ್ತಿರುವುದು ಧನಾತ್ಮಕ ಸಂಗತಿ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಲಸಿಕಾಕರಣ ಅತ್ಯಂತ ಸಫಲ ಯೋಜನೆಗಳಲ್ಲಿ ಒಂದು. ಸಿಡುಬಿನ ನಿರ್ಮೂಲನೆ, ಪೋಲಿಯೋ ನಿಯಂತ್ರಣ, ಸಾಂಕ್ರಾಮಿಕ ರೋಗಗಳ ತಹಬಂದಿ – ಇವುಗಳ ಸಾಫಲ್ಯ ಲಸಿಕೆಗಳದ್ದು. ಇದರ ಮುಖ್ಯ ಶ್ರೇಯ ಆರೋಗ್ಯ ಕಾರ್ಯಕರ್ತರಿಗೆ ಸಲ್ಲಬೇಕು. ಕೋವಿಡ್-19 ಲಸಿಕೆಗಳ ವಿಷಯದಲ್ಲಿ ಸರ್ಕಾರ ತೋರುತ್ತಿರುವ ಆಸಕ್ತಿ ಗಮನಾರ್ಹ. ಲಸಿಕೆಗಳನ್ನು ನೀಡುವ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 148 ಪುಟಗಳ ವಿಸ್ತೃತ ಪುಸ್ತಕವನ್ನು ಪ್ರಕಟಿಸಿ, ಇಡೀ ಯೋಜನೆಯ ಅಚ್ಚುಕಟ್ಟಾದ ಕಾರ್ಯಸೂಚಿ ಮತ್ತು ನೀಲಿನಕ್ಷೆಗಳನ್ನು ಸ್ಪಷ್ಟಪಡಿಸಿತು. ದಶಕಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೂ ಸರ್ಕಾರದ ಈ ನಡೆ ಅಚ್ಚರಿ ಮೂಡಿಸಿ, ಸಂತಸ ತಂದಿತು! ಕೋವಿಡ್-19 ಕಾಯಿಲೆಯ ಪರಿಚಯದಿಂದ ಆರಂಭಿಸಿ, ಲಸಿಕೆಗಳ ವಿವರಗಳು, ಸರ್ಕಾರ ಕಾಯಿಲೆಯ ನಿಯಂತ್ರಣಕ್ಕೆ ಬಳಸುತ್ತಿರುವ ಮಾರ್ಗಗಳು, ಲಸಿಕೆ ನೀಡಲು ಬಳಸಲಾಗುತ್ತಿರುವ ವಿಧಾನಗಳು, ಲಸಿಕೆಗಳ ನಿರ್ವಹಣೆ, ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿ, ಲಸಿಕೆ ಪಡೆದುಕೊಂಡವರಿಂದ ಪರಿಣಾಮಗಳ ಬಗ್ಗೆ ಮಾಹಿತಿ ಸಂಗ್ರಹಣೆ – ಈ ಎಲ್ಲಾ ವಿವರಗಳನ್ನೂ ಪುಸ್ತಕ ನೀಡಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಲತಾಣದಲ್ಲಿ ಈ ಪುಸ್ತಕದ ಉಚಿತ ಡೌನ್ಲೋಡ್ ಲಭ್ಯವಿದೆ.
ಕೋವಿಡ್-19 ನಮ್ಮ ಕಾಲದ ಜಾಗತಿಕ ವಿಪತ್ತು. ಈ ಹಿಂದಿನ ಯಾವುದೇ ಸಾಂಕ್ರಾಮಿಕ ಕಾಯಿಲೆಗಿಂತ ವೇಗವಾಗಿ ಜಗತ್ತನ್ನು ವ್ಯಾಪಿಸಿದ ಅಪಕೀರ್ತಿ ಇದರದ್ದು. ಕೋವಿಡ್-19 ಜಗತ್ತಿನಲ್ಲಿ ಹರಡಿದ ರೀತಿಯನ್ನು ನೋಡಿದರೆ “ಇಡೀ ಜಗತ್ತು ಒಂದು ಮನೆ” ಎಂದು ನಮ್ಮ ಪ್ರಾಚೀನರು ಪ್ರತಿಪಾದಿಸಿದ್ದು ನೆನಪಾಗುತ್ತದೆ! ಹೀಗಾಗಿ, ಕೋವಿಡ್-19 ಲಸಿಕೆ ಕೂಡ ಒಂದು ದೇಶದ ಸಮಸ್ಯೆಯಲ್ಲ; ಅದು ಇಡೀ ವಿಶ್ವದ ಸಮಸ್ಯೆ. ಈ ನಿಟ್ಟಿನಲ್ಲಿ ಲಸಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಬಲ್ಲ ಸಾಮರ್ಥ್ಯವಿರುವ ದೇಶಗಳ ಹೊಣೆಗಾರಿಕೆ ಹೆಚ್ಚು. ಇದರ ಜೊತೆಗೆ, ಕೋವಿಡ್-19 ನಿಯಂತ್ರಣದಲ್ಲಿ ಲಸಿಕೆ ಕೇವಲ ಒಂದು ಹಂತ ಮಾತ್ರ ಎಂಬುದು ತಿಳಿದಿರಬೇಕು. ಈ ಕಾಯಿಲೆಯ ನಿರ್ಮೂಲನದಲ್ಲಿ ಕ್ರಮಿಸಬೇಕಾದ ದಾರಿ ಇನ್ನೂ ಸಾಕಷ್ಟಿದೆ.
ನಮ್ಮ ದೇಶದಲ್ಲಿ ಸದ್ಯಕ್ಕೆ ಎರಡು ಬಗೆಯ ಲಸಿಕೆಗಳನ್ನು ಬಳಸಲಾಗುತ್ತಿದೆ. ಪುಣೆಯ ಸೀರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ಅಸ್ಟ್ರಾ-ಝೆನಕ ಕಂಪನಿಯ ಸಹಯೋಗದಿಂದ ತಯಾರಾಗಿದೆ. ಹೈದರಾಬಾದಿನ ಭಾರತ್ ಬಯೊಟೆಕ್ ಸಂಸ್ಥೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದಲ್ಲಿ ಕೊವಾಕ್ಸಿನ್ ಎಂಬ ಲಸಿಕೆಯನ್ನು ತಯಾರಿಸಿದೆ. ಈ ಎರಡೂ ಲಸಿಕೆಗಳೂ ಈಗ ಬಳಕೆಯಲ್ಲಿವೆ. ಇವಲ್ಲದೆ, ಭವಿಷ್ಯದಲ್ಲಿ ಇನ್ನಷ್ಟು ಲಸಿಕೆಗಳು ಈ ಕಾರ್ಯಕ್ಕೆ ಅನುಮೋದನೆ ಪಡೆಯಲಿವೆ. ಕೋವಿಡ್-19 ಲಸಿಕೆಗಳ ಬಗೆಗಿನ ವಿವರವಾದ ಲೇಖನ ಜನವರಿ 2021 ರ ಚಿಂತನಶೀಲ ಸಮಾಜಮುಖಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಕೋಟಿಗಟ್ಟಲೆ ಜನರಿಗೆ ಲಸಿಕೆ ನೀಡುವುದು ಸುಲಭದ ಮಾತಲ್ಲ. ಇದನ್ನು ಸಾಧಿಸಲು ಕೇಂದ್ರ ಸರ್ಕಾರ ನಾಲ್ಕು ಸ್ತರಗಳ ರಚನೆಯನ್ನು ಮಾಡಿದೆ. ಮೊದಲನೆಯದು ರಾಷ್ಟ್ರೀಯ ಮಟ್ಟದ ತಜ್ಞರ ಸಮಿತಿ. ಈ ಸಮಿತಿಯ ಮುಖ್ಯಸ್ಥರು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯರು ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು. ಇವರ ಜೊತೆಗೆ ಜೈವಿಕ ತಂತ್ರಜ್ಞಾನ ಇಲಾಖೆ, ಆರೋಗ್ಯ ಸಂಶೋಧನೆಯ ಇಲಾಖೆ, ಔಷಧ ವಿಜ್ಞಾನ ಇಲಾಖೆ, ಮಾಹಿತಿ ತಂತ್ರಜ್ಞಾನ ಸಚಿವಾಲಯಗಳ ಕಾರ್ಯದರ್ಶಿಗಳು, ರಾಷ್ಟ್ರೀಯ ಆರೋಗ್ಯ ನಿರ್ವಹಣೆ ಇಲಾಖೆಯ ಮುಖ್ಯಸ್ಥರು, ದೆಹಲಿಯ ಅಖಿಲ ಭಾರತ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು, ರಾಷ್ಟ್ರೀಯ ಲಸಿಕಾಕರಣ ಯೋಜನೆಯ ಮುಖ್ಯಸ್ಥರು, ಹಣಕಾಸು ಸಚಿವಾಲಯದ ಅಧಿಕಾರಿಗಳು, ಮತ್ತು ಐದು ರಾಜ್ಯಗಳ ಆರೋಗ್ಯ ಸಲಹೆಗಾರರು ಸಮಿತಿಯ ಸದಸ್ಯರಾಗಿದ್ದಾರೆ. ಕೋವಿಡ್-19 ಲಸಿಕೆಗಳ ಪರೀಕ್ಷೆ; ಯಾವ ಲಸಿಕೆಗಳನ್ನು ಬಳಸಬೇಕು; ಲಸಿಕೆಗಳನ್ನು ಹೇಗೆ ಪೂರೈಸಬೇಕು; ಲಸಿಕೆ ಮೊದಲು ಯಾರಿಗೆ ನೀಡಬೇಕು; ಲಸಿಕೆಗಳ ಸುರಕ್ಷತೆಯನ್ನು ಅಳೆಯುವ ವಿಧಾನಗಳು; ಜನಸಾಮಾನ್ಯರಿಗೆ ಮತ್ತು ಮಾಧ್ಯಮಗಳಿಗೆ ನೀಡಬೇಕಾದ ಮಾಹಿತಿ – ಇಂತಹ ಮುಖ್ಯವಾದ ನಿರ್ಧಾರಗಳ ಹೊಣೆಗಾರಿಕೆ ರಾಷ್ಟ್ರೀಯ ಮಟ್ಟದ ತಜ್ಞರ ಸಮಿತಿಯದ್ದು. ಇವರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಸುಮಾರು 23 ವಿವಿಧ ಇಲಾಖೆಗಳು ಸಹಕಾರ ನೀಡುತ್ತಿವೆ. ಇಡೀ ಯೋಜನೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ವಿಶ್ವ ಸಂಸ್ಥೆಯ ಮಕ್ಕಳ ನಿಧಿ, ವಿಶ್ವ ಸಂಸ್ಥೆಯ ಅಭಿವೃದ್ದಿ ಮಂಡಳಿ, ಕೆಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆಗಳು ನೆರವು ನೀಡುತ್ತಿವೆ.
ಎರಡನೆಯ ಹಂತ ರಾಜ್ಯಗಳ ಮಟ್ಟದ್ದು. ಪ್ರತಿಯೊಂದು ರಾಜ್ಯಕ್ಕೂ ಒಂದು ಚಾಲನಾ ಸಮಿತಿ ಇರುತ್ತದೆ. ಇದರ ಹೊಣೆಗಾರಿಕೆ ರಾಜ್ಯದ ಮುಖ್ಯಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳದ್ದು. ಆರೋಗ್ಯ, ಸಾರಿಗೆ, ಶಿಕ್ಷಣ, ಮಾಹಿತಿ-ತಂತ್ರಜ್ಞಾನ ಮೊದಲಾದ ಹಲವಾರು ಇಲಾಖೆಗಳ ಅಧಿಕಾರಿಗಳು ಇದರ ಸದಸ್ಯರು. ದೇಶ-ವಿದೇಶಗಳ ಹಲವಾರು ಸಂಘ-ಸಂಸ್ಥೆಗಳು ಈ ನಿಟ್ಟಿನಲ್ಲಿ ಸಹಯೋಗ ನೀಡಲು ಕೈಜೋಡಿಸಿವೆ. ಯೋಜನೆಯ ಸಿದ್ಧತೆ ಮತ್ತು ಅದನ್ನು ಜಾರಿಗೊಳಿಸುವ ವಿಧಾನಗಳನ್ನು ನಿರ್ಧರಿಸಿ, ಅವನ್ನು ಕಾರ್ಯರೂಪಕ್ಕೆ ಇಳಿಸುವುದು ಈ ಸಮಿತಿಯ ಹೊಣೆಗಾರಿಕೆ. ಇವರಿಗೆ ನೆರವಾಗಲು ರಾಜ್ಯದ ಅಪರ-ಮುಖ್ಯಕಾರ್ಯದರ್ಶಿಗಳ ನೇತೃತ್ವದ ಕಾರ್ಯಕಾರಿ ಸಮಿತಿ ಇರುತ್ತದೆ. ಈ ಕೆಲಸಗಳಿಗೆ ಪೂರಕವಾಗಿ ದಿನದ 24 ಗಂಟೆಗಳೂ ಕೆಲಸ ಮಾಡುವ ಸಹಾಯವಾಣಿ ಉಳ್ಳ ನಿಯಂತ್ರಣ ವಿಭಾಗವನ್ನು ರಚಿಸಲಾಗಿದೆ. ಲಸಿಕೆಗಳ ದಾಸ್ತಾನು, ಪೂರೈಕೆ, ಸರಬರಾಜು. ಮಾಹಿತಿ ಹಂಚಿಕೆ ಮುಂತಾದ ಅಂತಿಮ ಹಂತದ ಕೆಲಸಗಳ ಸುಪರ್ದಿ ಇದರದ್ದೇ. ರಾಜ್ಯದ ಅಗತ್ಯಗಳಿಗೆ ತಕ್ಕಂತೆ ಇತರ ಸದಸ್ಯರನ್ನು ನೇಮಕ ಮಾಡಿಕೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ.
ಮೂರನೆಯ ಹಂತ ಜಿಲ್ಲಾವಾರು ಮಟ್ಟದ್ದು. ಜಿಲ್ಲಾ ಮುಖ್ಯನ್ಯಾಯಾಧೀಶರು, ಲಸಿಕೆ ನೀಡುವ ಯೋಜನೆಯ ಮುಖ್ಯಸ್ಥರು, ಮತ್ತು ಜಿಲ್ಲಾ ವೈದ್ಯಕೀಯ ಅಧಿಕಾರಿಗಳು ಸೇರಿರುವ ಕಾರ್ಯಕಾರಿ ಸಮಿತಿ ಇರುತ್ತದೆ. ಅರ್ಹರನ್ನು ಗುರುತಿಸಿ ಲಸಿಕೆ ನೀಡುವುದು ಇವರ ಹೊಣೆ. ಇವರಿಗೆ ನೆರವಾಗಲು ಮುನಿಸಿಪಲ್ ಮಟ್ಟದ ಕಾರ್ಯಕಾರಿ ಸಮಿತಿ ಮತ್ತು ನಿರ್ವಹಣಾ ಕಚೇರಿಯ ನೆರವನ್ನು ನೀಡಲಾಗಿದೆ. ಯಾವುದೇ ಕಾಲವ್ಯಯವಿಲ್ಲದೆ ಕೆಲಸ ನಡೆಯಲು ಅಗತ್ಯವಾದ ಎಲ್ಲಾ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಅದಕ್ಕೆ ತಕ್ಕಂತೆ ವೈಫಲ್ಯದ ಹೊಣೆಗಾರಿಕೆಯನ್ನೂ ಹೊರಬೇಕಾಗುತ್ತದೆ.
ನಾಲ್ಕನೆಯ ಹಂತ ಬ್ಲಾಕ್ ಮಟ್ಟದ್ದು. ತಹಸೀಲ್ದಾರ್ ಮಟ್ಟದ ಅಧಿಕಾರಿಗಳು ಸ್ಥಳೀಯ ವೈದ್ಯಕೀಯ ಅಧಿಕಾರಿಗಳ ನೆರವಿನಿಂದ ಲಸಿಕೆಗಳ ಅಂತಿಮ ಹೊಣೆ ಹೊರಬೇಕಾಗುತ್ತದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಲಸಿಕೆಯನ್ನು ನೀಡುವ ಹೊಣೆಗಾರಿಕೆ ನೀಡಲಾಗಿದೆ. ಈ ಹಂತದಲ್ಲಿ ಆಗಬಹುದಾದ ಯಾವುದೇ ಅಡೆತಡೆಗಳನ್ನೂ ನಿವಾರಿಸಿಕೊಂಡು ಕೆಲಸ ಮಾಡುವ ಕರ್ತವ್ಯ ಇವರದ್ದು. ಇದಕ್ಕೆ ಸಂಬಂಧಿಸಿದ ಅಗತ್ಯ ಕ್ರಮಗಳನ್ನು ನಿರ್ಧರಿಸುವ ಅಧಿಕಾರ ಇವರಿಗಿದೆ. ತಮ್ಮ ಮೇಲಾಧಿಕಾರಿಗಳ ಸಂಪೂರ್ಣ ಸಹಕಾರ ಒದಗುವಂತೆ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.
ಯೋಜನೆಗಳನ್ನು ರೂಪಿಸುವುದಕ್ಕಿಂತ ಮುಖ್ಯವಾದದ್ದು ಅವನ್ನು ಕಾರ್ಯಗತ ಮಾಡುವುದು. ವೈಯಕ್ತಿಕ ಮಟ್ಟದಲ್ಲಿ ತರಬೇತಿ ನೀಡುವ ಪ್ರಕ್ರಿಯೆ ಕೋವಿಡ್-19ರ ವಿಪತ್ತಿನ ಕಾಲದಲ್ಲಿ ಸುಲಭವಲ್ಲ. ಹೀಗಾಗಿ, ತಂತ್ರಜ್ಞಾನದ ನೆರವನ್ನು ಪಡೆಯಲಾಗಿದೆ. ಎಲ್ಲೆಲ್ಲಿ ಸಾಧ್ಯವೋ, ಅಲ್ಲೆಲ್ಲಾ ಕೆಲವು ಪರಿಣತ ತರಬೇತುದಾರರನ್ನು ರಾಜ್ಯಮಟ್ಟದಲ್ಲಿ ಮತ್ತು ಜಿಲ್ಲಾಮಟ್ಟದಲ್ಲಿ ನಿಯೋಜಿಸಿ, ಲಸಿಕೆಯನ್ನು ಇಲಾಖೆಯಿಂದ ಹೇಗೆ ಪಡೆಯಬೇಕು, ಹೇಗೆ ದಾಸ್ತಾನು ಮಾಡಬೇಕು, ಲಸಿಕೆಯ ಶೀಷೆಯನ್ನು ಹೇಗೆ ತೆರೆಯಬೇಕು, ಲಸಿಕೆಯನ್ನು ಹೇಗೆ ತುಂಬಬೇಕು, ಹೇಗೆ ನೀಡಬೇಕು, ಹೇಗೆ ಅದರ ತ್ಯಾಜ್ಯವನ್ನು ನಿರ್ವಹಿಸಬೇಕು ಎಂಬ ಮಾಹಿತಿಯನ್ನು ಅಂತಿಮ ಹಂತದ ಆರೋಗ್ಯ ಕಾರ್ಯಕರ್ತರಿಗೆ ಪ್ರಾತ್ಯಕ್ಷಿಕವಾಗಿ ವಿವರಿಸಲಾಗುತ್ತಿದೆ. ನೇರ ತರಬೇತಿಯ ಅನುಕೂಲ ಇಲ್ಲದ ಸ್ಥಳಗಳಲ್ಲಿ ಈ ಕೆಲಸವನ್ನು ಅಂತರ್ಜಾಲದ ಮೂಲಕ ಮಾಡಲಾಗುತ್ತಿದೆ. ಕೆಲವೊಮ್ಮೆ ಆರಂಭಿಕ ಹಂತಗಳನ್ನು ಅಂತರ್ಜಾಲದ ಮೂಲಕ ತಿಳಿಸಿ, ಅಂತಿಮ ಹಂತದ ಪ್ರಾಯೋಗಿಕ ಹೆಜ್ಜೆಗಳನ್ನು ವೈಯಕ್ತಿಕ ತರಬೇತಿಯ ಮೂಲಕ ನಿರ್ವಹಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಹೇರಳವಾಗಿ ಲಭ್ಯವಿರುವ ಆರೋಗ್ಯ ಕಾರ್ಯಕರ್ತರನ್ನು, ದಾದಿಯರನ್ನು, ವೈದ್ಯರನ್ನು ಈ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಲಸಿಕೆಗಳನ್ನು ನೀಡುವ ಮುನ್ನ ಸಂಬಂಧಪಟ್ಟ ಆರೋಗ್ಯ ಕಾರ್ಯಕರ್ತರಿಂದ ಇಡೀ ಪ್ರಕ್ರಿಯೆಯನ್ನು ಪರೀಕ್ಷಾರ್ಥವಾಗಿ ಮಾಡಿಸಿ,ಅವರ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತಿದೆ. ಈ ಹಂತದಲ್ಲಿ ತೇರ್ಗಡೆಯಾದ ನಂತರವೇ ನೈಜ ಲಸಿಕಾಕರಣ ನಡೆಯುತ್ತದೆ.
ಫಲಾನುಭವಿಗಳ ಆಯ್ಕೆಗೆ ತಂತ್ರಜ್ಞಾನದ ನೆರವನ್ನು ಪಡೆಯಲಾಗಿದೆ. ಒಂದೆಡೆ ಸರ್ಕಾರಿ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಫಲಾನುಭವಿಗಳ ಪಟ್ಟಿ ತಯಾರಾಗುತ್ತಿದ್ದರೆ, ಮತ್ತೊಂದೆಡೆ ಇದಕ್ಕಾಗಿ Co-Win ಎಂಬ ಪ್ರತ್ಯೇಕ ಜಾಲತಾಣವನ್ನು ಅಭಿವೃದ್ಧಿಪಡಿಸಿ, ಅದರ ಮೂಲಕ ಜನರೇ ವೈಯಕ್ತಿಕವಾಗಿ ಮಾಹಿತಿ ನೀಡುವಂತೆ ಅನುಕೂಲ ಮಾಡಲಾಗಿದೆ. ಈ ದ್ವಿಮುಖ ಯೋಜನೆ ಈಗಾಗಲೇ ಸಾಕಷ್ಟು ಒಳ್ಳೆಯ ಫಲಿತಾಂಶಗಳನ್ನು ನೀಡಿದೆ. ಲಸಿಕೆಗಳ ಬಗ್ಗೆ ಆಸ್ಪತ್ರೆಗಳಲ್ಲಿ, ವೈದ್ಯಕೀಯ ಕೇಂದ್ರಗಳಲ್ಲಿ, ಮಾಧ್ಯಮಗಳಲ್ಲಿ, ಫೋನ್ ಸಂದೇಶಗಳಲ್ಲಿ, ರಿಂಗ್-ಟೋನ್ ಗಳಲ್ಲಿ, ಅಂತರ್ಜಾಲದಲ್ಲಿ ಮಾಹಿತಿ ಪಸರಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ನಿರ್ವಾಹಕರು, ಮಹಿಳಾ ಆರೋಗ್ಯ ಸಮಿತಿಗಳು, ಸ್ವಯಂಸೇವಕರು ಈ ಮಾಹಿತಿಯನ್ನು ಅಂತಿಮ ಹಂತದವರೆಗೆ ಒಯ್ಯುವಲ್ಲಿ ನಿರತರಾಗಿದ್ದಾರೆ.
ಲಸಿಕೆಗಳನ್ನು ನೀಡುವ ಪ್ರಕ್ರಿಯೆಯಲ್ಲಿ ಐದು ಹಂತಗಳ ಕೆಲಸ ನಡೆಯುತ್ತದೆ. ಮೊದಲನೆಯ ಹಂತದಲ್ಲಿ ಅರ್ಹ ಫಲಾನುಭವಿಗಳನ್ನು ಸರ್ಕಾರಿ ದಾಖಲೆಗಳ ನೆರವಿನಿಂದ ಖಚಿತಪಡಿಸಿಕೊಳ್ಳಲಾಗುತ್ತದೆ. ಎರಡನೆಯ ಹಂತದಲ್ಲಿ ಈ ವಿವರಗಳನ್ನು ಸರ್ಕಾರದ ಅಧಿಕೃತ ಜಾಲತಾಣದಲ್ಲಿ ದಾಖಲು ಮಾಡಲಾಗುತ್ತದೆ. ಮೂರನೆಯ ಹಂತದಲ್ಲಿ ಲಸಿಕೆ ಪಡೆಯುವವರ ಆಯಾ ಸಮಯದ ಆರೋಗ್ಯ ವಿವರಗಳನ್ನು ವಿಚಾರಿಸಿ, ಪರಿಶೀಲಿಸಲಾಗುತ್ತದೆ. ಯಾರಾದರೂ ಆ ದಿನ ಯಾವುದೇ ಕಾರಣಕ್ಕೆ ಲಸಿಕೆ ಪಡೆಯಲು ವೈದ್ಯಕೀಯವಾಗಿ ಅರ್ಹರಲ್ಲ ಎನಿಸಿದಾಗ, ಅವರನ್ನು ತಜ್ಞವೈದ್ಯರ ತಪಾಸಣೆಗಾಗಿ ಕಳಿಸಲಾಗುತ್ತದೆ. ನಾಲ್ಕನೆಯ ಹಂತದಲ್ಲಿ ಲಸಿಕೆಯನ್ನು ಅನುಭವಿ ವ್ಯಕ್ತಿಗಳಿಂದ ಕೊಡಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಅನುಕೂಲಗಳು ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ನಿರ್ದೇಶನಗಳಿವೆ. ಐದನೆಯ ಹಂತದಲ್ಲಿ ಲಸಿಕೆ ಪಡೆದವರನ್ನು ಸುಮಾರು ಮೂವತ್ತು ನಿಮಿಷಗಳ ಕಾಲ ಯಾವುದೇ ರೀತಿಯ ಅಡ್ಡಪರಿಣಾಮಗಳಿಗೆ ಗಮನಿಸಲಾಗುತ್ತದೆ. ಯಾವುದೇ ಹಂತದಲ್ಲಿ ಅವಗಢ ಸಂಭವಿಸಿದರೂ ಕೂಡಲೇ ವೈದ್ಯಕೀಯ ನೆರವು ದೊರೆಯುವಂತಹ ಸ್ಥಳಗಳಲ್ಲಿ ಮಾತ್ರ ಲಸಿಕಾಕರಣ ನಡೆಯುತ್ತಿದೆ. ಈ ಇಡೀ ಪ್ರಕ್ರಿಯೆಯ ಉಸ್ತುವಾರಿಯನ್ನು ಗಮನಿಸುವ ಅಧಿಕಾರಿಗಳನ್ನು ನಿಯಮಿಸಲಾಗಿದೆ. ಪ್ರತಿಯೊಂದು ಹಂತದ ಸಂಪನ್ಮೂಲ ವ್ಯಕ್ತಿಗಳಿಗೂ ಸೂಕ್ತವಾದ ತರಬೇತಿಯನ್ನು ನೀಡಲಾಗಿದೆ. ಇಡೀ ಪ್ರಕ್ರಿಯೆಯ ಮೇಲುಸ್ತುವಾರಿಗೆ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ತ್ಯಾಜ್ಯ ನಿರ್ವಹಣೆಗೆ ಒತ್ತು ನೀಡಲಾಗಿದೆ. ಲಸಿಕೆಗಳನ್ನು ನೀಡುವ ಸ್ಥಳಗಳಲ್ಲಿ ಕೋವಿಡ್-19 ಕಾಯಿಲೆಯ ಕುರಿತಾದ, ಲಸಿಕೆಯ ಕುರಿತಾದ ಮಾಹಿತಿಗಳನ್ನು, ಚಿತ್ರಪಟಗಳನ್ನು ಹಲವಾರು ಭಾಷೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಲಸಿಕೆ ಕೇಂದ್ರಗಳ ಸಿಬ್ಬಂದಿಯ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ. ಯಾವುದೇ ಖಾಸಗಿ ಆಸ್ಪತ್ರೆ ಸಾರ್ವಜನಿಕರಿಗೆ ಲಸಿಕೆ ನೀಡುವ ಬಗ್ಗೆ ಆಸ್ಥೆ ತೋರಿದರೆ, ಅವರಿಗೆ ಸೂಕ್ತ ತರಬೇತಿ ನೀಡಿ, ಅವರ ಕೇಂದ್ರದ ಅನುಕೂಲಗಳನ್ನು ಪರೀಕ್ಷಿಸಿ, ಯೋಜನೆಯಲ್ಲಿ ಅವರನ್ನು ಶೀಘ್ರಗತಿಯಲ್ಲಿ ಭಾಗಿಗಳನ್ನಾಗಿ ಮಾಡಿಕೊಳ್ಳಲಾಗುತ್ತಿದೆ. ಲಸಿಕೆಯನ್ನು ಪಡೆದವರ ಫೋನಿಗೆ ಲಸಿಕೆ ಪಡೆದುಕೊಂಡ ಬಗ್ಗೆ ಸಂದೇಶ ಕಳಿಸಲಾಗುತ್ತಿದೆ. ಲಸಿಕೆಯ ಫಲಾನುಭವಿಗಳಿಂದ ಇಡೀ ಪ್ರಕ್ರಿಯೆಯ ಕುರಿತಾದ ಅಭಿಪ್ರಾಯ ಸಂಗ್ರಹ ಆಗುತ್ತಿದೆ. ಈ ಬಗೆಗಿನ ದೂರುಗಳಿಗಾಗಿ 1075 ಎಂಬ ಪ್ರತ್ಯೇಕ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಈ ದೂರುಗಳ ನೆರವಿನಿಂದ ಯಾವುದೇ ಕೇಂದ್ರದಲ್ಲಿ ಆಗಿರಬಹುದಾದ ತೊಂದರೆಗಳನ್ನು ಕೂಡಲೇ ನಿವಾರಿಸುವ ಪ್ರಯತ್ನ ಮಾಡಲಾಗಿದೆ. ಒಟ್ಟಾರೆ, ಇಡೀ ಲಸಿಕಾಕರಣ ಒಂದು ಸಾಮೂಹಿಕ ಜವಾಬ್ದಾರಿಯ ರೂಪವನ್ನು ಪಡೆದಿದೆ.
ಯೋಜನೆ ದೊಡ್ಡದಾದಷ್ಟೂ ದುರ್ವಿನಿಯೋಗದ ಸಾಧ್ಯತೆಯೂ ಹೆಚ್ಚು. ಹೀಗಾಗಿ, ಕೋವಿಡ್-19 ಲಸಿಕೆಯ ದುರ್ಬಳಕೆ ಆಗದಂತೆ ತಡೆಯಲು ಯೋಜನೆಯನ್ನು ರೂಪಿಸಲಾಗಿದೆ. ಕೋವಿಡ್-19 ಲಸಿಕೆಯ ಸರಬರಾಜನ್ನು ಕೇಂದ್ರ ಸರ್ಕಾರ ಖುದ್ದು ವಹಿಸಿಕೊಂಡಿದೆ. ಲಸಿಕೆ ನೀಡಲು ನಿಗದಿಯಾದ ಪ್ರತಿಯೊಂದು ಕೇಂದ್ರವೂ ತನ್ನಲ್ಲಿ ಇರುವ ಲಸಿಕೆಯ ದಾಸ್ತಾನಿನ ವಿವರಗಳನ್ನು ಪ್ರತಿದಿನವೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಯಾವುದೇ ದೋಷಗಳು ಕಂಡುಬಂದರೆ ಯಾರು ಬೇಕಾದರೂ 104 ಫೋನ್ ಸಂಖ್ಯೆಗೆ ದೂರು ನೀಡುವ ಅವಕಾಶವಿದೆ. ಕೋವಿಡ್-19 ಲಸಿಕೆಯ ಯಾವುದೇ ಶೀಷೆಯ ಸ್ಥಿತಿ-ಗತಿಯನ್ನಾದರೂ ಅಂತರ್ಜಾಲದ ಮೂಲಕ ಪತ್ತೆ ಮಾಡಬಲ್ಲ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಲಸಿಕೆ ಕೇಂದ್ರಗಳು ಪ್ರತಿಯೊಂದು ಲಸಿಕೆ ಶೀಷೆಯ ಬಳಕೆಗೆ ಮುನ್ನವೂ ಅದರ ಮಾಹಿತಿಯನ್ನು Co-Win ಜಾಲತಾಣದಲ್ಲಿ ನಮೂದಿಸಬೇಕು. ಆಯಾ ದಿನ ಬಳಕೆಯಾದ ಲಸಿಕೆಯ ಪ್ರಮಾಣ, ಉಳಿದಿರುವ ಲಸಿಕೆಯ ದಾಸ್ತಾನು, ಮರುದಿನಕ್ಕೆ ಬೇಕಾದ ಲಸಿಕೆಯ ಅಂದಾಜು – ಇವನ್ನೆಲ್ಲಾ ದಿನದಿನವೂ ಸಂಬಂಧಿಸಿರುವವರ ಗಮನಕ್ಕೆ ತರಬೇಕಾಗುತ್ತದೆ. ಯಾವುದೇ ಹಂತದಲ್ಲಿ ಏರುಪೇರಾದರೂ ಅಧಿಕಾರಿಗಳ ವಿರುದ್ಧ ನೇರವಾಗಿ ದೂರು ನೀಡುವ ಸೌಲಭ್ಯ ಈ ಕೇಂದ್ರಗಳಿಗೆ ಇದೆ. ಹೀಗೆ, ಅಧಿಕಾರ ಮತ್ತು ಜವಾಬ್ದಾರಿಗಳು ಜೊತೆಜೊತೆಯಾಗಿ ಸಾಗುವಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಪೋಲಿಯೋ ಲಸಿಕಾಕರಣ ನಮ್ಮ ದೇಶದ ಅತೀ ದೊಡ್ಡ ಸಾಫಲ್ಯಗಳಲ್ಲಿ ಒಂದು. ಅದಕ್ಕೆ ಬೇಕಾದ ಲಸಿಕೆಗಳನ್ನು ಒಯ್ಯುವ ತಂಪು-ಪೆಟ್ಟಿಗೆಗಳ ಸವಲತ್ತು ನಮ್ಮ ದೇಶದ ಮೂಲೆ-ಮೂಲೆಗಳಲ್ಲಿ ಈಗಾಗಲೇ ಲಭ್ಯವಿದೆ. ಇದೇ ತಂತ್ರವನ್ನು ಬಳಸಿಕೊಂಡು ಕೋವಿಡ್-19 ಲಸಿಕೆ ನೀಡುವ ಕೆಲಸವನ್ನು ಸಫಲವಾಗಿ ಮಾಡಲಾಗುತ್ತಿದೆ. ಈ ಹಿಂದಿನ ಅನೇಕ ಯೋಜನೆಗಳಲ್ಲೇ ಸ್ಥಾಪಿತವಾಗಿರುವ ಅನುಕೂಲಗಳನ್ನು ಬಳಸಿಕೊಂಡು ಕೋವಿಡ್-19 ಲಸಿಕೆಗಳ ಪರಿಣಾಮಕ್ಕೆ ಬೇಕಾದ ತಾಪಮಾನವನ್ನು ಹಲವಾರು ಹಂತಗಳಲ್ಲಿ ಉಳಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.
ಕೋವಿಡ್-19 ನಮ್ಮನ್ನು ಇನ್ನಿಲ್ಲದಂತೆ ಅಲುಗಿಸಿತ್ತು. ಹೀಗಾಗಿ, ಈ ಕಾಯಿಲೆಯ ನಿಯಂತ್ರಣ ನಮ್ಮ ವಿಶ್ವಾಸವನ್ನು ನೂರು ಪಟ್ಟು ಹೆಚ್ಚಿಸಬೇಕು. ಇದಕ್ಕೆ ಸಮಷ್ಟಿ ಸಹಕಾರ ಅಗತ್ಯ. ಕೋವಿಡ್-19 ಲಸಿಕಾಕರಣ ನಾವು ಈ ಕಾಯಿಲೆಯನ್ನು ಮಣಿಸುವತ್ತ ಇಟ್ಟಿರುವ ಪ್ರಮುಖ ಹೆಜ್ಜೆ. ಇದು ಇಡೀ ಮನುಕುಲದ ಹೆಜ್ಜೆಯಾಗಬೇಕು. ಯಾವುದೇ ರೀತಿಯ ಗಾಳಿಮಾತುಗಳಿಗೆ ಬೆಲೆ ನೀಡುವ ಅಗತ್ಯ ಇಲ್ಲ. ಲಸಿಕೆಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನೂ ಯಾವಾಗ ಬೇಕಾದರೂ ತಜ್ಞರಿಂದ ಪಡೆಯಬಹುದು. ನಮ್ಮೆಲ್ಲರ ಸಂಘಟಿತ ಪ್ರಯತ್ನ ಇಡೀ ಜಗತ್ತನ್ನು ಕೋವಿಡ್-19 ಮುಕ್ತವಾಗಿಸಲಿ.
-----------
(ಏಪ್ರಿಲ್ 2021 ರ “ಚಿಂತನಶೀಲ ಸಮಾಜಮುಖಿ” ಪತ್ರಿಕೆಯಲ್ಲಿ ಪ್ರಕಟವಾದ ಲೇಖನ) ಲೇಖನದ ಕೊಂಡಿ: ಕೋವಿಡ್ ಲಸಿಕೆಯ ಮಹತ್ವ ಸರ್ಕಾರದ ಪಾತ್ರ – samajamukhi 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ