ಮಂಗಳವಾರ, ಸೆಪ್ಟೆಂಬರ್ 21, 2021

 ಅಸೌಖ್ಯಕ್ಕೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವುದರ ಅಪಾಯ ಮತ್ತು ನಿರರ್ಥಕತೆಗಳ ಬಗೆಗಿನ ಒಂದು ಕಿರು ಲೇಖನ - ಏಪ್ರಿಲ್ 2021 ರ "ಕುತೂಹಲಿ" ಸಂಚಿಕೆಯಲ್ಲಿ:

**ಸ್ವಚಿಕಿತ್ಸೆ ಮತ್ತು ಹಳ್ಳಕ್ಕೆ ಬೀಳುವ ಇತರ ವಿಧಾನಗಳು!**
ಡಾ. ಕಿರಣ್ ವಿ.ಎಸ್.
ಕಾರ್ ರಿಪೇರಿ ಬಗ್ಗೆ ಎ.ಎನ್.ಮೂರ್ತಿರಾಯರ ಒಂದು ಚೇತೋಹಾರಿ ಲಲಿತ ಪ್ರಬಂಧವಿದೆ. ಕಾರಿನ ಮಾಲೀಕರಿಗೆ ತಮ್ಮ ಕಾರನ್ನು ರಿಪೇರಿ ಮಾಡುವ ಚಪಲ ಸಹಜವೆಂದೂ, ಆ ಚಪಲವನ್ನು ಪ್ರೋತ್ಸಾಹಿಸಲು ಪುಸ್ತಕಗಳೂ ಲಭ್ಯವೆಂದೂ, ಕೆಲವೊಮ್ಮೆ ಕಾರ್ ಮೆಕ್ಯಾನಿಕ್ ಗಳೇ ಈ ಚಪಲವನ್ನು ಉತ್ತೇಜಿಸುತ್ತಾರೆಂದೂ, ಇದರಿಂದ ಪಾವಲಿಗೆ ತೀರಬೇಕಾದ ಸಮಸ್ಯೆ ರೂಪಾಯಿಗೆ ಏರುತ್ತದೆಂದೂ, ಹೀಗಾಗಿ ತಾವು ಎಂದೂ ತಮ್ಮ ಕಾರನ್ನು ಸ್ವಂತವಾಗಿ ರಿಪೇರಿ ಮಾಡುವ ಆಮಿಷಕ್ಕೆ ಬಲಿಯಾಗಿಲ್ಲವೆಂದೂ ಪ್ರಬಂಧಕಾರರ ವಿವರಣೆ! ದೇಹಯಂತ್ರದ ಕಾಯಿಲೆಗಳಿಗೆ ತಮ್ಮದೇ ಚಿಕಿತ್ಸೆಯನ್ನು ಪಾಲಿಸುವವರಿಗೂ ಇದೇ ತರ್ಕವನ್ನು ವಿಸ್ತರಿಸಬಹುದು!
ಯಾವುದೇ ಸಮಸ್ಯೆಯನ್ನು ಬಗೆಹರಿಸಲು ಹಲವಾರು ದಾರಿಗಳಿವೆ. ಅವುಗಳ ಪೈಕಿ ಅತ್ಯಂತ ವೈಜ್ಞಾನಿಕ ವಿಧಾನವೆಂದರೆ ಸಮಸ್ಯೆಯ ಕಾರಣವನ್ನು ವಿಶ್ಲೇಷಿಸಿ, ಅದರ ಪರಿಣಾಮಗಳನ್ನು ವಿವೇಚಿಸಿ, ಅದಕ್ಕೆ ತಕ್ಕಂತೆ ಪರಿಹಾರಗಳನ್ನು ನಿಯೋಜಿಸುವುದು. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಇದೇ ಪ್ರಕ್ರಿಯೆ ಅನ್ವಯವಾಗುತ್ತದೆ. ಇದನ್ನು ಸಾಧಿಸಲು ಅಧ್ಯಯನ ಮತ್ತು ಅನುಭವ – ಎರಡೂ ಬೇಕು. ಚಿಕಿತ್ಸೆ ನೀಡುವ ಮುನ್ನ ಕಾಯಿಲೆ ಏನೆಂದು ಅರಿಯಬೇಕು. ಇಲ್ಲವಾದರೆ ಕತ್ತಲ ಕೋಣೆಯಲ್ಲಿ ಕಪ್ಪು ಕರಡಿಗೆ ಹುಡುಕುವ ಪರಿಸ್ಥಿತಿ ಆಗುತ್ತದೆ.
ಕಾಯಿಲೆ ಎಂದರೇನು? ಹತ್ತಾರು ಅಂಗಗಳಿರುವ ನಮ್ಮ ಶರೀರದಲ್ಲಿ ಪ್ರತೀಕ್ಷಣವೂ ಸಾವಿರಾರು ಸಂಕೀರ್ಣ ವಿದ್ಯಮಾನಗಳು ಘಟಿಸುತ್ತಲೇ ಇರುತ್ತವೆ. ಬಹುತೇಕ ಅಂಗಗಳು ಒಂದರ ಆಧಾರದ ಮೇಲೆ ಮತ್ತೊಂದು ಕೆಲಸ ಮಾಡುತ್ತವೆ. ಯಾವುದೋ ಅಂಗದ ತಾತ್ಕಾಲಿಕ ಯಾ ದೀರ್ಘಕಾಲಿಕ ವೈಫಲ್ಯ ಅದಕ್ಕೆ ಸಂಬಂಧಿಸಿದ ಮತ್ತೊಂದು ಅಂಗದ ಕೆಲಸಕ್ಕೆ ಅಡ್ಡಿಯಾಗುತ್ತದೆ. ಹೃದಯ ಸಮಸ್ಯೆ ಬಂದಾಗ, ರಕ್ತ ಸರಿಯಾಗಿ ತಲುಪದೆ ಮೆದುಳಿನ ಕೆಲಸ ಏರುಪೇರಾಗಬಹುದು. ಈ ರೀತಿ, ಪರಸ್ಪರ ಸಂಬಂಧವಿರುವ ಹಲವಾರು ಅಂಗಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಲಾಗದೇ ಅನತಿಕಾಲದಲ್ಲೇ ಶರೀರಕ್ಕೆ ಅಸೌಖ್ಯವನ್ನು ತರುತ್ತವೆ. ಈ ಅಸೌಖ್ಯಕ್ಕೆ ಕಾರಣ ರೋಗಕಾರಕ ಕ್ರಿಮಿಗಳು ಆಗಿರಬಹುದು; ಅಂಗಗಳ ಸಹಜ ವೈಫಲ್ಯ ಆಗಿರಬಹುದು; ಆಯಾ ಅಂಗಕ್ಕೆ ರಕ್ತ ಪೂರೈಸುವಲ್ಲಿ ಅಡೆತಡೆ ಆಗಿರಬಹುದು; ಕ್ಯಾನ್ಸರ್ ಗಂತಿಗಳು ಆಗಿರಬಹುದು – ಒಟ್ಟಿನಲ್ಲಿ ಮೇಲ್ನೋಟಕ್ಕೆ ಅಸೌಖ್ಯದ ಚಿಹ್ನೆಗಳು ಕಾಣುತ್ತವೆಯೇ ಹೊರತು, ಮೂಲ ಸಮಸ್ಯೆ ನೇರವಾಗಿ ಕಾಣುವುದು ಅಪರೂಪ. ಕಾಯಿಲೆಯನ್ನು ಗುಣಪಡಿಸಬೇಕೆಂದರೆ ಈ ಚಿಹ್ನೆಗಳನ್ನು ಅಳಿಸಿಹಾಕಿದರೆ ಆಗದು! ಸಮಸ್ಯೆಯ ಮೂಲಕ್ಕೆ ತಲುಪಿ, ಆಗಿರುವ ಘಾಸಿಯನ್ನು ಗುರುತಿಸಿ, ಅದಕ್ಕೆ ಕಾರಣವಾದ ತೊಂದರೆಯನ್ನು ನಿವಾರಿಸಬೇಕು. ಕೆಲವೊಮ್ಮೆ ಹತ್ತು ರೂಪಾಯಿ ಬೆಲೆಯ ಔಷಧ ನೀಡಲು ಸಾವಿರ ರೂಪಾಯಿ ಮೌಲ್ಯದ ಪರೀಕ್ಷೆಗಳನ್ನು ಮಾಡುವುದು ಇದೇ ಕಾರಣಕ್ಕಾಗಿ.
ಈ ಪ್ರಕ್ರಿಯೆಯನ್ನು ಅನುಸರಿಸದೇ ಇರುವ ಯಾವುದೇ ವಿಧಾನವೂ ಅವೈಜ್ಞಾನಿಕವೇ! ಸಮಸ್ಯೆಯ ಮೂಲವನ್ನು ತಿಳಿಯಲು ಪ್ರಯೋಗಾಲಯದ ಪರೀಕ್ಷೆಗಳು ಸದಾ ಕಡ್ಡಾಯವಲ್ಲ. ಬಹುತೇಕ ಕಾಯಿಲೆಗಳಿಗೆ ರೋಗಲಕ್ಷಣಗಳ ವಿಶ್ಲೇಷಣೆ, ಭೌತಿಕ ಪರೀಕ್ಷೆ, ವೈದ್ಯರ ಅನುಭವಗಳು ಸಾಕಾಗುತ್ತವೆ. ಹೊಟ್ಟೆನೋವಿನಿಂದ ಬಳಲುವ ರೋಗಿಯ ಸಮಸ್ಯೆಯನ್ನು ವಿಶ್ಲೇಷಿಸಲು ಹೊಟ್ಟೆನೋವಿನ ಜೊತೆ ಇರುವ ಇತರ ರೋಗಲಕ್ಷಣಗಳು; ಆಹಾರ ಪದ್ದತಿ; ನೀರಿನ ಸೇವನೆ; ಮಲಮೂತ್ರ ವಿಸರ್ಜನೆಯ ವಿವರಗಳು; ಹೊಟ್ಟೆಯ ಯಾವ ಭಾಗದಲ್ಲಿ ನೋವು ಅಧಿಕವಾಗಿದೆ ಎಂಬ ಭೌತಿಕ ಪರೀಕ್ಷೆ – ಇಂತಹ ಕೆಲವು ಅಂಶಗಳಿಂದ ನುರಿತ ವೈದ್ಯರು ಇದು ಆಮ್ಲೀಯ ಹೆಚ್ಚಳವೇ; ಮೂತ್ರಪಿಂಡಗಳ ಸಮಸ್ಯೆಯೇ; ಅಜೀರ್ಣವೇ; ಮಲಬದ್ಧತೆಯೇ; ಅಪೆಂಡಿಕ್ಸ್ ಸೋಂಕೇ ಎಂಬುದನ್ನು ಸಾಕಷ್ಟು ನಿಖರವಾಗಿ ಪತ್ತೆ ಮಾಡಬಲ್ಲರು. ಇನ್ನು ಕೆಲವು ಕಾಯಿಲೆಗಳನ್ನು ಯಾವುದೇ ನಿಶ್ಚಿತ ಚಿಕಿತ್ಸೆ ನೀಡದಿದ್ದರೂ, ಸ್ವಲ್ಪ ವಿಶ್ರಾಂತಿ, ಸರಿಯಾದ ಆಹಾರಗಳಿಂದ ಶರೀರ ತಂತಾನೇ ಗುಣಪಡಿಸಿಕೊಳ್ಳುತ್ತದೆ. ಇವನ್ನು ಮೀರಿದ ಕಾಯಿಲೆಗಳಿಗೆ ನಿಖರವಾದ ಕಾರಣವನ್ನು ಹುಡುಕುವುದು ಕಡ್ಡಾಯ. ಇಂತಹ ಕಾಯಿಲೆಗಳಿಗೆ ಕೇವಲ ರೋಗಲಕ್ಷಣಗಳನ್ನು ಆಧರಿಸಿ ಸ್ವಚಿಕಿತ್ಸೆ ನಡೆಸುವುದು ಅಪಾಯಕಾರಿ. ಕೆಲವೊಮ್ಮೆ ಈ ರೀತಿಯ ಚಿಕಿತ್ಸೆಗಳು ಕಾಯಿಲೆಯ ಕೆಲವು ಮುಖ್ಯ ಲಕ್ಷಣಗಳನ್ನು ನಿವಾರಿಸಿ ಇಡೀ ರೋಗನಿರ್ಣಯ ಪ್ರಕ್ರಿಯೆಯ ದಾರಿ ತಪ್ಪಿಸುತ್ತವೆ. ಬ್ಯಾಕ್ಟೀರಿಯಾ ಸೋಂಕು ಉಂಟಾದಾಗ ವೈದ್ಯರ ಸಲಹೆ ಇಲ್ಲದೆ ಯಾವುದೋ ಜೀವಿರೋಧಕ ಔಷಧವನ್ನು ಅರೆಬರೆ ಪ್ರಮಾಣದಲ್ಲಿ ಕಡಿಮೆ ಅವಧಿಗೆ ಸೇವಿಸಿದಾಗ, ರೋಗಕಾರಕಗಳ ವರ್ತನೆ ಏರುಪೇರಾಗಿ, ಇಡೀ ರೋಗದ ಲಕ್ಷಣಗಳು ಬೇರೆಯೇ ಸ್ವರೂಪ ಪಡೆಯುತ್ತವೆ. ಆಗ ಒಂದು ಪರೀಕ್ಷೆ ಮಾಡುವಲ್ಲಿ ನಾಲ್ಕು ಪರೀಕ್ಷೆಗಳು ಬೇಕಾಗುತ್ತವೆ. “ಪಾವಲಿಗೆ ತೀರಬೇಕಾದ ಸಮಸ್ಯೆ ರೂಪಾಯಿಗೆ ಏರುತ್ತದೆ” ಎಂದು ಮೂರ್ತಿರಾಯರು ಹೇಳುವುದು ಇದನ್ನೇ!
“ಹೊಸ ವೈದ್ಯನಿಗಿಂತ ಹಳೆಯ ರೋಗಿ ಮೇಲು” ಎನ್ನುವ ಗಾದೆ ರೋಗಗಳ ಶೀಘ್ರಪತ್ತೆಗೆ ಕೆಲವೊಮ್ಮೆ ಸಹಾಯಕಾರಿಯಾಗಬಹುದೇ ಹೊರತು, ಸ್ವಚಿಕಿತ್ಸೆಗೆ ಎಂದಿಗೂ ಅಲ್ಲ! ವೈದ್ಯಕೀಯ ವಿಜ್ಞಾನ ದಿನದಿನವೂ ಅಗಾಧ ಪ್ರಗತಿ ಸಾಧಿಸುತ್ತಿದೆ. ಕೆಲವೇ ವರ್ಷಗಳ ಹಿಂದೆ ಇದ್ದ ರೋಗಪತ್ತೆ ತಂತ್ರಜ್ಞಾನ, ಔಷಧಗಳು, ರೋಗಿಯ ಆರೈಕೆಯ ಮಾರ್ಗಸೂಚಿಗಳು ಇಂದು ಸಾಕಷ್ಟು ಬದಲಾಗುವುದು ವೈದ್ಯವಿಜ್ಞಾನದ ನಿಯಮವಾಗಿದೆ. ಹೀಗಾಗಿ, ಹಳೆಯ ರೋಗಿ ಪಡೆದ ಚಿಕಿತ್ಸೆ ವರ್ತಮಾನದಲ್ಲಿ ಅಪ್ರಸ್ತುತವಾಗಬಹುದು. ಸ್ವಚಿಕಿತ್ಸೆಯ ಅತೀ ದೊಡ್ಡ ದೌರ್ಬಲ್ಯ ಮತ್ತು ಅಪಾಯ ಇದೇ. ವೈದ್ಯಕೀಯ ಸೇವೆಗಳು ದುಬಾರಿ ಎಂಬ ಮಾತು ನಿಜ. ಆದರೆ, ಆರೋಗ್ಯಕ್ಕಿಂತ ಹೆಚ್ಚಿನ ಮೌಲ್ಯ ಜೀವನದಲ್ಲಿ ಇನ್ಯಾವುದಕ್ಕೂ ಇಲ್ಲ ಎಂಬ ಮಾತನ್ನು ಮರೆಯಬಾರದು. ಪ್ರತಿಯೊಂದು ಸಮಸ್ಯೆಗೂ ತಜ್ಞ ವೈದ್ಯರ ಬಳಿ ಓಡಬೇಕಿಲ್ಲ. ಪರಿಚಿತ ವಲಯದಲ್ಲಿ ಒಳ್ಳೆಯ ಕುಟುಂಬ-ವೈದ್ಯರನ್ನು ಗುರುತಿಸಿ, ಆರೋಗ್ಯದ ಹೊಣೆಯನ್ನು ಅವರಿಗೆ ಒಪ್ಪಿಸುವುದು ಸೂಕ್ತ. ನೂರಕ್ಕೆ ಎಂಭತ್ತು ಪ್ರತಿಶತ ಕಾಯಿಲೆಗಳನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಅಗತ್ಯ ಬಿದ್ದಾಗ ಸರಿಯಾದ ತಜ್ಞವೈದ್ಯರನ್ನೂ ಅವರೇ ಸೂಚಿಸಬಲ್ಲರು.
ಸ್ವಚಿಕಿತ್ಸೆ ಎಂದಿಗೂ ಸೂಕ್ತವಲ್ಲ. ಅರಿಯದ ರಸ್ತೆಯಲ್ಲಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರುವ ನಾವು, ಅರಿಯದ ಔಷಧವನ್ನು ಮಾತ್ರ ಮುಲಾಜಿಲ್ಲದೆ ನುಂಗುತ್ತೇವೆ! ಇದರಿಂದ ಹಲವಾರು ತೊಂದರೆಗಳಿಗೆ, ಅಂಗವೈಫಲ್ಯಗಳಿಗೆ ಒಳಗಾದವರಿದ್ದಾರೆ. ಅಡ್ಡಪರಿಣಾಮಗಳನ್ನು ಅರಿಯದ ಮಾತ್ರೆಗಳನ್ನು ಸೇವಿಸಿ ಮರಣಿಸಿದವರಿದ್ದಾರೆ. ಆರೋಗ್ಯ ಸಮಸ್ಯೆ ಸಣ್ಣದೋ, ದೊಡ್ಡದೋ ಎಂಬ ಜಿಜ್ಞಾಸೆ ವೈದ್ಯರಿಗಿರಲಿ. ಶರೀರವನ್ನು ಸ್ವಚಿಕಿತ್ಸೆಯ ಅನಗತ್ಯ ಅಪಾಯಗಳಿಗೆ ಒಡ್ಡಿಕೊಳ್ಳದಿರುವುದೇ ಜಾಣತನ.
----------------
"ಕುತೂಹಲಿ" ವಿಜ್ಞಾನ ಪ್ರಸಾರ್‌, ನವದೆಹಲಿ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಆರಂಭಿಸಿರುವ ಕನ್ನಡ ವಿಜ್ಞಾನ ಸಂವಹನ, ವಿಸ್ತರಣೆ, ಪ್ರಚಾರ ಚಳುವಳಿಯ ಅಂಗವಾಗಿ ಪ್ರಕಟವಾಗಲಿರುವ ಮಾಸಿಕ ಸುದ್ದಿಪತ್ರ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳು ಹಾಗೂ ಸುದ್ದಿಗಳನ್ನು ಇದು ಪ್ರಕಟಿಸುತ್ತದೆ. https://www.facebook.com/Kutuhali/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ