ಮಂಗಳವಾರ, ಸೆಪ್ಟೆಂಬರ್ 21, 2021

 “ಬಯೋಮಿಮಿಕ್ರಿ” ಇ-ಪುಸ್ತಕಕ್ಕೆ ಸ್ವಾಗತ.

“ಬಯೋಮಿಮಿಕ್ರಿ” ಎಂಬ ಅನನ್ಯ ಜಾಗತಿಕ ಸಂಚಲನವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಪುಸ್ತಕರೂಪದಲ್ಲಿ ತರುವ ಪ್ರಯತ್ನ.
ಹತ್ತು ಅಧ್ಯಾಯಗಳಲ್ಲಿ, ಸುಮಾರು ಇಪ್ಪತ್ನಾಲ್ಕು ಸಾವಿರ ಪದಗಳಲ್ಲಿ, ನೂರಾರು ಅಪರೂಪದ ಚಿತ್ರಗಳೊಂದಿಗೆ “ಬಯೋಮಿಮಿಕ್ರಿ” ಇ-ಪುಸ್ತಕ ಓದುಗರನ್ನು ಸೇರುತ್ತಿದೆ. ಪುಸ್ತಕದಲ್ಲಿ “ಬಯೋಮಿಮಿಕ್ರಿ” ವಿದ್ಯಮಾನಕ್ಕೆ ಸಂಬಂಧಿಸಿದ ನೂರಕ್ಕೂ ಹೆಚ್ಚು ವಿಡಿಯೋ ಕೊಂಡಿಗಳನ್ನು ಅಲ್ಲಲ್ಲೇ ನೀಡಲಾಗಿದೆ. ಪ್ರತಿಯೊಂದು ಅಧ್ಯಾಯಕ್ಕೆ ಸಂಬಂಧಿಸಿದ ಎಲ್ಲಾ ವಿಡಿಯೋ ಕೊಂಡಿಗಳನ್ನು ಮತ್ತೊಮ್ಮೆ ಆಯಾ ಅಧ್ಯಾಯದ ಕೊನೆಯಲ್ಲಿ ಪಟ್ಟಿ ಮಾಡಲಾಗಿದೆ.
“ಬಯೋಮಿಮಿಕ್ರಿ” ಇ-ಪುಸ್ತಕಕ್ಕೆ ಕೇವಲ ರೂ.49/-ರ ಸಾಂಕೇತಿಕ ದರವನ್ನು ನಿಗದಿ ಮಾಡಲಾಗಿದೆ. ಈ ಪುಸ್ತಕದಿಂದ ಬರುವ ಎಲ್ಲಾ ಮೊತ್ತವೂ ಸಂಚಿ ಸಂಸ್ಥೆಯ ಪುಸ್ತಕಗಳ ಡಿಜಿಟಲೀಕರಣದ ಕೆಲಸಕ್ಕೆ ನೇರವಾಗಿ ಸಂದಾಯವಾಗುತ್ತದೆ. ಸಂಚಿ ಸಂಸ್ಥೆಯ ಕನ್ನಡ ಸಂಚಯ ಜಾಲತಾಣದ ಮೂಲಕ ಕಾಪಿರೈಟ್-ಮುಕ್ತ ಕನ್ನಡ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಸಾವಿರಾರು ಸಂಖ್ಯೆಯಲ್ಲಿ ಉಚಿತವಾಗಿ ಓದಬಹುದು. ಈ ಮೂಲಕ “ಬಯೋಮಿಮಿಕ್ರಿ”ಯ ಪ್ರತಿಯೊಬ್ಬ ಓದುಗರೂ ಮುಕ್ತಜ್ಞಾನದ ಪ್ರಸರಣದಲ್ಲಿ ಭಾಗಿಯಾಗಲಿದ್ದಾರೆ.
“ಬಯೋಮಿಮಿಕ್ರಿ” ಮಾನವ ಮತ್ತು ನಿಸರ್ಗದ ನಡುವಿನ ಸಂಬಂಧದ ಕುತೂಹಲಕಾರಿ ಕಥಾನಕ. ಇದರಲ್ಲಿ ತಾಂತ್ರಿಕ ಪಾರಿಭಾಷಿಕ ಪದಗಳಿಲ್ಲ; ಕ್ಲಿಷ್ಟಕರ ವೈಜ್ಞಾನಿಕ ವಿವರಣೆಗಳಿಲ್ಲ. ನೈಸರ್ಗಿಕ ವಿದ್ಯಮಾನಗಳು ವಿಜ್ಞಾನಿಗಳ ಕಣ್ಣನ್ನು ಅಚ್ಚರಿಯಿಂದ ಬೆಳಗಿದ ನೈಜ ಕಥನಗಳ ಸಂಗ್ರಹ “ಬಯೋಮಿಮಿಕ್ರಿ” ರೂಪದಲ್ಲಿ ಎಲ್ಲರ ಮುಂದಿದೆ. “ಬಯೋಮಿಮಿಕ್ರಿ” ಪುಸ್ತಕವನ್ನು ಓದಲು ಯಾವುದೇ ವಿಜ್ಞಾನದ ಓದಿನ ಹಿನ್ನೆಲೆ ಬೇಕಿಲ್ಲ. ಇಲ್ಲಿನ ಪ್ರತಿಯೊಂದು ಪ್ರಸಂಗವೂ ಒಂದು ಪತ್ತೆದಾರಿ ಕತೆಯಂತೆ ಓದಿಸಿಕೊಳ್ಳುತ್ತದೆ.
“ಬಯೋಮಿಮಿಕ್ರಿ” ಇ-ಪುಸ್ತಕವನ್ನು ಈ ಕೊಂಡಿಗಳಿಂದ ಖರೀದಿಸಬಹುದು:
(ಕಂಪ್ಯೂಟರ್ ನಲ್ಲಿ ನೇರವಾಗಿ ಓದಬಹುದು. ಮೊಬೈಲ್ ನಲ್ಲಿ Google Playbooks App ಮೂಲಕ ಓದಬಹುದು)
ಋತುಮಾನ ತಾಣದಿಂದ: https://estore.ruthumana.com/Item?param=3160
(ಋತುಮಾನ ಜಾಲತಾಣದಿಂದ ಬಯೋಮಿಮಿಕ್ರಿ ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡರೆ, ಅವರ ಉಚಿತ ebook reader App ಅನ್ನೂ ಡೌನ್ಲೋಡ್ ಮಾಡಿಕೊಳ್ಳಬೇಕು)
ಮೈಲ್ಯಾಂಗ್ ಬುಕ್ಸ್ ತಾಣದಿಂದ: https://mylang.in/.../recent.../products/bio-mimicry-inr
(ಮೈಲ್ಯಾಂಗ್ ಬುಕ್ಸ್ ಜಾಲತಾಣದಿಂದ ಬಯೋಮಿಮಿಕ್ರಿ ಪುಸ್ತಕವನ್ನು ಡೌನ್ಲೋಡ್ ಮಾಡಿಕೊಂಡರೆ, ಅವರ ಉಚಿತ ebook reader App ಅನ್ನೂ ಡೌನ್ಲೋಡ್ ಮಾಡಿಕೊಳ್ಳಬೇಕು)
“ಬಯೋಮಿಮಿಕ್ರಿ”ಯ ಬಗ್ಗೆ ಕನ್ನಡದಲ್ಲಿ ಬಂದಿರುವ ಮೊದಲ ಪುಸ್ತಕದ ಓದಿನ ಸಂತಸ ನಿಮ್ಮದಾಗಲಿ! “ಬಯೋಮಿಮಿಕ್ರಿ” ಓದಿದ ನಂತರ ನಿಮ್ಮ ಅಭಿಪ್ರಾಯವನ್ನು ತಪ್ಪದೇ ತಿಳಿಸಿ.
ಅನಂತ ಧನ್ಯವಾದಗಳು
ಕಿರಣ್ ಸೂರ್ಯ



ನಿದ್ರೆ ಮತ್ತು ಆರೋಗ್ಯದ ನಡುವಿನ ಸಂಬಂಧವನ್ನು ನಿರೂಪಿಸುವ ನನ್ನ ಲೇಖನ 14 ಸೆಪ್ಟೆಂಬರ್ ೨೦೨೧ ರ "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಈ ಲೇಖನದ ವಸ್ತುವನ್ನು ಸೂಚಿಸಿ, ಬರೆಯಿಸಿ, ಪ್ರಕಟಿಸಿದ ಶ್ರೀಯುತ ಸೂರ್ಯಪ್ರಕಾಶ ಪಂಡಿತರಿಗೆ ಧನ್ಯವಾದಗಳು.

**ನಿದ್ರೆಯ ಬಗ್ಗೆ ನಿರ್ಲಕ್ಷ್ಯ ಸಲ್ಲದು!**
ಆಯುಸ್ಸಿನ ಸರಿಸುಮಾರು ಮೂರನೆಯ ಒಂದು ಭಾಗವನ್ನು ನಾವು ಕಳೆಯುವುದು ನಿದ್ರೆಯಲ್ಲಿ. ನಮ್ಮ ಜೀವನದ ಬೇರೆ ಯಾವುದೇ ಪ್ರಕ್ರಿಯೆಗಿಂತಲೂ ಅಧಿಕ ಕಾಲವನ್ನು ನಿದ್ರೆ ಆವರಿಸುತ್ತದೆ. ಬಹಳ ಕಾಲದವರೆಗೆ ನಿದ್ರೆಯನ್ನು ‘ಬದುಕಿನ ವಿರಾಮದ ವೇಳೆ’ ಎಂದು ಮಾತ್ರ ಪರಿಗಣಿಸಲಾಗುತ್ತಿತ್ತು. ದೇಹದ ಮತ್ತು ಮನಸ್ಸಿನ ಆರೋಗ್ಯ ನಿದ್ರೆಯ ಸೌಖ್ಯದ ಮೇಲೆ ಅವಲಂಬಿತವಾಗಿವೆ; ನಿದ್ರೆ ಕಡಿಮೆಯಾದಾಗ ಇಡೀ ದಿನ ಕಿರಿಕಿರಿಯ ಮನಸ್ಥಿತಿ ಇರುವುದು ಅನುಭವಕ್ಕೆ ಬಂದಿರುತ್ತದೆ. ‘ಹೀಗೇಕೆ’ ಎನ್ನುವ ಪ್ರಶ್ನೆಯನ್ನು ಬೆಂಬತ್ತಿದಾಗ ನಿದ್ರೆಯ ವಿವಿಧ ಆಯಾಮಗಳು ಬೆಳಕಿಗೆ ಬಂದವು. ವೈದ್ಯಕೀಯ ವಿಜ್ಞಾನ ಬೆಳೆದಂತೆ ನಿದ್ರೆಯನ್ನೂ ಆರೋಗ್ಯದ ದಾಯರೆಗೆ ತರಲಾಯಿತು; ನಿದ್ರೆಯ ಕುರಿತಾದ ಅಧ್ಯಯನಗಳು ಮೊದಲಾದವು. ಪ್ರಸ್ತುತ ನಿದ್ರೆಯ ಕುರಿತಾದ ಪರೀಕ್ಷೆಗಳು, ಚಿಂತನೆಗಳು, ಸಲಹೆಗಳು, ಚಿಕಿತ್ಸೆಗಳು ಲಭ್ಯವಿದೆ.
ನಿದ್ರೆಯ ವೇಳೆ ಮಿದುಳಿನ ವರ್ತನೆಯನ್ನು ವಿಜ್ಞಾನಿಗಳು ಅಳೆದಿದ್ದಾರೆ. ನಿದ್ರೆಯಲ್ಲಿ ಎರಡು ಪ್ರಕಾರಗಳಿವೆ: ಆಳವಾದ ನಿದ್ರೆ ಮತ್ತು ಕನಸುಗಳ ನಿದ್ರೆ. ನಿದ್ರೆಯ ಬಹುಭಾಗ ಆಳವಾದ ನಿದ್ರೆಯದ್ದು. ಈ ವೇಳೆ ಮಿದುಳಿನಲ್ಲಿ ದೊಡ್ಡಗಾತ್ರದ, ನಿಧಾನಗತಿಯ ತರಂಗಗಳು ಕಾಣುತ್ತವೆ; ಸ್ನಾಯುಗಳು ಸಡಿಲವಾಗುತ್ತವೆ; ಉಸಿರಾಟ ಆಳವಾಗಿ, ನಿಧಾನವಾಗಿ ಆಗುತ್ತದೆ; ದಿನವಿಡೀ ದಣಿದಿರುವ ದೇಹ ಮತ್ತು ಮಿದುಳಿಗೆ ಚೈತನ್ಯ ದೊರೆಯುತ್ತದೆ. ಕನಸುಗಳ ನಿದ್ರೆ ಇದಕ್ಕಿಂತ ಭಿನ್ನ. ಇದರಲ್ಲಿ ಮಿದುಳಿನ ಕ್ರಿಯಾಶೀಲತೆ ಹೆಚ್ಚುತ್ತದೆ; ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ; ಉಸಿರಾಟ ಮತ್ತು ಎದೆಬಡಿತದಲ್ಲಿ ಏರುಪೇರಾಗುತ್ತದೆ. ಕನಸುಗಳ ನಿದ್ರೆಯ ಮೂಲೋದ್ದೇಶ ಇನ್ನೂ ಸರಿಯಾಗಿ ತಿಳಿದುಬಂದಿಲ್ಲ. ಆದರೆ, ಆ ವೇಳೆ ಆಗುವ ಶಾರೀರಿಕ ವ್ಯತ್ಯಾಸಗಳ ಅಧ್ಯಯನ ಸಾಕಷ್ಟು ಆಗಿದೆ. ಒಂದು ರಾತ್ರಿಯಲ್ಲಿ ಆಳನಿದ್ರೆ ಮತ್ತು ಕನಸುಗಳ ನಿದ್ರೆಗಳ ನಾಲ್ಕೈದು ಆವರ್ತನಗಳು ಜರುಗುತ್ತವೆ. ನಿದ್ರೆಯಿಂದ ಮಿದುಳಿನ ಕೋಶಗಳ ಕಶ್ಮಲಗಳು, ‘ಜೇಡರಬಲೆ’ಗಳು ತೊಳೆದುಹೋಗುತ್ತವೆ. ನಿದ್ರೆಯ ಪ್ರಮಾಣ ಕಡಿಮೆಯಾದರೆ ಮಿದುಳಿನ ಚೇತರಿಕೆ ಪೂರ್ಣವಾಗುವುದಿಲ್ಲ; ಅದರ ಕಾರ್ಯಕ್ಷಮತೆ ಕುಂಠಿತವಾಗುತ್ತದೆ; ನೆನಪುಗಳ ಮರುಕಳಿಕೆ ಕ್ಷೀಣಿಸುತ್ತದೆ; ಮನಸ್ಸಿನ ವ್ಯಾಪಾರಗಳು ತಹಬಂದಿಗೆ ಬರಲು ಅನಾನುಕೂಲವಾಗುತ್ತದೆ. ಈ ಕಾರಣಕ್ಕೇ ಪರೀಕ್ಷೆಯಂತಹ ಮುಖ್ಯವಾದ ಕೆಲಸಗಳ ಹಿಂದಿನ ದಿನ ನಿದ್ರೆಗೆಡೆವುದು ಸೂಕ್ತವಲ್ಲ. ಕೆಲಸಗಳಲ್ಲಿ ಮುಳುಗಿ, ಕಡಿಮೆ ನಿದ್ರೆ ಮಾಡುವವರಿಗೆ ಇಳಿವಯಸ್ಸಿನಲ್ಲಿ ತೀವ್ರ ಮರೆವಿನಂತಹ ಮಿದುಳಿನ ಸಮಸ್ಯೆಗಳು ಕಾಣುತ್ತವೆ.
ನಮ್ಮ ಮಿದುಳಿನಲ್ಲಿ ಜೈವಿಕ ಗಡಿಯಾರವಿದೆ. ಬೆಳಕಿನ ಪ್ರಮಾಣ ಮತ್ತು ಮಿದುಳಿನ ಪೀನಿಯಲ್ ಗ್ರಂಥಿಯಲ್ಲಿ ಸ್ರವಿಸುವ ಮೆಲಟೋನಿನ್ ಎಂಬ ಚೋದಕದ ಪ್ರಭಾವದಲ್ಲಿ ಚಲಿಸುವ ಈ ಜೈವಿಕ ಗಡಿಯಾರ, ನಿದ್ರೆಯ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದಲ್ಲದೆ, ಶರೀರಕ್ಕೆ ಹಸಿವಿನಂತೆ ನಿದ್ರೆಯ ಸಹಜ ಆವಶ್ಯಕತೆಯೂ ಇರುತ್ತದೆ; ಈ ಅಗತ್ಯ ಒಂದು ಹಂತ ತಲುಪಿದಾಗ ನಿದ್ರೆ ಒತ್ತರಿಸಿಕೊಂಡು ಬರುತ್ತದೆ. ಆ ಸಮಯದಲ್ಲಿ ವಾಹನಚಾಲನೆ, ಯಂತ್ರಚಾಲನೆಯಂತಹ ಜವಾಬ್ದಾರಿಯುತ ಕೆಲಸಗಳನ್ನು ಮಾಡುವುದು ಅಪಾಯಕಾರಿ. ಆಗ ಬೇರೆಲ್ಲಾ ಕೆಲಸಗಳನ್ನೂ ಬದಿಗಿಟ್ಟು ತೆಗೆಯುವ ಒಂದು ಸಣ್ಣನಿದ್ರೆ ಒತ್ತರಿಕೆಯನ್ನು ದೂರಮಾಡುತ್ತದೆ.
ಖಿನ್ನತೆ ಉಳ್ಳವರಲ್ಲಿ ಅತೀನಿದ್ರೆ ಇಲ್ಲವೇ ನಿದ್ರಾಹೀನತೆ ಕಾಣಬಹುದು. ಮೈಗ್ರೆನ್ ತಲೆನೋವು, ಅಧಿಕ ರಕ್ತದೊತ್ತಡ, ಅಪಸ್ಮಾರ, ಮಧುಮೇಹ ಮುಂತಾದ ಸಮಸ್ಯೆಗಳು ನಿದ್ರಾಹೀನತೆಯಿಂದ ಹೆಚ್ಚಾಗುತ್ತವೆ. ಶರೀರದ ರಕ್ಷಕ ವ್ಯವಸ್ಥೆಯ ಸಾಮರ್ಥ್ಯ ಕುಸಿದು, ಸೋಂಕುಗಳು ಸಂಭವಿಸಬಹುದು. ಇಂತಹ ಸಮಸ್ಯೆಗಳು ಉಳ್ಳವರು ಚೆನ್ನಾಗಿ ನಿದ್ರೆ ಮಾಡಬೇಕು. ಯಾವುದೇ ಕಾರಣಕ್ಕೂ ಒಂದು ದಿನವೂ ನಿದ್ರೆಯಿಂದ ವಂಚಿತರಾಗಬಾರದು.
ನಿದ್ರಾಹೀನತೆಯಿಂದ ಮಿದುಳಿನ ಕೆಲವು ಭಾಗಗಳಿಗೆ ಹೆಚ್ಚು ತೊಂದರೆಯಾಗುತ್ತದೆ. ಭಾಷೆಯ ಬಳಕೆಯನ್ನು ನಿಯಂತ್ರಿಸುವ ಭಾಗಕ್ಕೆ ಅಧಿಕವಾಗಿ ಸಮಸ್ಯೆ ಆಗುತ್ತದೆ; ಮಾತು ತೊದಲುತ್ತದೆ. ವಸ್ತುಗಳ ಬಿಂಬಗಳನ್ನು ಗ್ರಹಿಸುವ ಭಾಗಕ್ಕೆ ಧಕ್ಕೆಯಾಗುತ್ತದೆ; ನೋಟದ ಸ್ಥಿರತೆ ಕುಗ್ಗಿ, ವಸ್ತುಗಳ ಗಾತ್ರ ಬದಲಾದಂತೆ ಕಾಣುತ್ತದೆ. ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ ಕಡಿಮೆಯಾಗುತ್ತದೆ. ಹೀಗಾಗಿ, ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಇರುವವರು ನಿದ್ರೆಗೆಡುವುದು ಸೂಕ್ತವಲ್ಲ.
ಉಸಿರಾಟದ ಸಮಸ್ಯೆಗಳು; ದೀರ್ಘಕಾಲಿಕ ರಾತ್ರಿ-ಪಾಳಿ ಕೆಲಸ; ರಾತ್ರಿಯಿಡೀ ಮೋಜು ಮಾಡಿ, ಹಗಲಿನಲ್ಲಿ ಕೆಲಗಂಟೆಗಳ ಕಾಲ ಮಾತ್ರ ಮಲಗುವುದು; ರಾತ್ರಿ ನಿದ್ರೆಯ ವೇಳೆ ಆಗಾಗ ಎಚ್ಚರಾಗಬೇಕಾದ ಉದ್ಯೋಗ; ಯಾವುದೋ ಕೆಲಸ ಇಲ್ಲವೇ ಹವ್ಯಾಸಕ್ಕೆ ಸಿಲುಕಿ, ನಿದ್ರೆಯ ಸಮಯವನ್ನು ಕಡಿಮೆ ಮಾಡಿಕೊಳ್ಳುವುದು – ಇವೆಲ್ಲವೂ ನಿದ್ರಾಹೀನತೆಯಿಂದ ಉಂಟಾಗುವ ಪರಿಣಾಮಗಳನ್ನೇ ತೋರುತ್ತವೆ. ಕಾರಣಗಳ ಹೊರತಾಗಿಯೂ ನಿದ್ರಾಹೀನತೆಯಿಂದ ಬಳಲುವವರು, ಎಷ್ಟೋ ಪ್ರಯತ್ನ ಮಾಡಿದರೂ ನಿದ್ರೆ ಬಾರದವರಿದ್ದಾರೆ. ಇಂತಹವರು ಒಂದು ನಿಶ್ಚಿತ ಸಮಯಕ್ಕೆ ಮಲಗುವ ಮತ್ತು ಏಳುವ ಪದ್ಧತಿ ಮಾಡಿಕೊಳ್ಳಬೇಕು; ವಾರಾಂತ್ಯಕ್ಕಾಗಲೀ, ಬೇರೆ ನೆಪಗಳಿಗಾಗಲೀ ಇದನ್ನು ಬದಲಾಯಿಸಬಾರದು. ನಿದ್ರೆಯ ಸಮಯಕ್ಕೆ ಒಂದು ತಾಸು ಮುನ್ನ ತುಸುವೇ ಬೆಳಕಿನಲ್ಲಿ ಕಾಲ ಕಳೆಯಬೇಕು. ಈ ಸಮಯದಲ್ಲಿ ದೂರದರ್ಶನ, ಕಂಪ್ಯೂಟರ್, ಮೊಬೈಲ್ ನೋಡಬಾರದು. ಮನಸ್ಸಿಗೆ ಆಪ್ತವಾದ ಪುಸ್ತಕವನ್ನು ಓದುವುದು ಒಳಿತು. ನಿದ್ರೆಯ ಸಮಯದಲ್ಲಿ ಸಾಮಾನ್ಯ ಆಹಾರ ಸೇವನೆ ಸೂಕ್ತ; ಭೂರಿಭೋಜನ, ಮದ್ಯಪಾನ, ಧೂಮಪಾನ, ಕಾಫಿ-ಟೀಗಳನ್ನು ದೂರವಿಡಬೇಕು. ಎಚ್ಚರದ ಸಮಯದಲ್ಲಿ ಭೌತಿಕ ಚಟುವಟಿಕೆ ಇರಬೇಕು. ಸ್ವಲ್ಪ ವ್ಯಾಯಾಮ, ತೋಟದ ಕೆಲಸ, ನಡಿಗೆ ಒಳ್ಳೆಯದು. ನಿದ್ರೆಯ ಕೋಣೆ ತಂಪಾಗಿ, ನಿಶ್ಶಬ್ದವಾಗಿ, ಮಂದಬೆಳಕಿನಿಂದಿರುವುದು ಅಗತ್ಯ. ನಿದ್ರೆಗೆ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ, ಧ್ಯಾನ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಹಗಲುವೇಳೆಯಲ್ಲಿ ಮಲಗುವುದು ಕೂಡ ರಾತ್ರಿ ನಿದ್ರೆ ಬಾರದಿರುವುದಕ್ಕೆ ಕಾರಣ.
ನಿದ್ರೆ ಆರೋಗ್ಯದ ಭಾಗ; ಈ ಬಗ್ಗೆ ಯಾವುದೇ ಸಮಸ್ಯೆ ಇದ್ದರೂ ನಿಮ್ಮ ವೈದ್ಯರು ನೆರವಾಗಬಲ್ಲರು.
------------------
ಪ್ರಜಾವಾಣಿ ಪತ್ರಿಕೆಯಲ್ಲಿನ ಲೇಖನದ ಕೊಂಡಿ: https://www.prajavani.net/.../donot-neglect-about-sleep...

 ಮೊಬೈಲ್ ಫೋನ್ ಆಪ್ (App) ಬಳಕೆ ಸಾರ್ವತ್ರಿಕ. ಎಲ್ಲರ ಆರೋಗ್ಯದ ನಿಗಾ ಇಡುವ ವೈದ್ಯರು ಯಾವ ವೃತ್ತಿ-ಸಂಬಂಧಿ ಆಪ್ ಬಳಸುತ್ತಾರೆ ಎಂಬ ಕುತೂಹಲ ಇರಲು ಸಾಧ್ಯ. ವೈದ್ಯಕೀಯ ಆಪ್ ಜಗತ್ತಿನ ಸ್ಥೂಲ ಪರಿಚಯ ನೀಡುವ ನನ್ನ ಲೇಖನ 1 ಸೆಪ್ಟೆಂಬರ್ ೨೦೨೧ ರ "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಲೇಖನದ ಪೂರ್ಣಪಾಠ ಇಲ್ಲಿದೆ. ಈ ವಿಷಯವನ್ನು ಸೂಚಿಸಿ, ಪತ್ರಿಕೆಯಲ್ಲಿ ಪ್ರಕಟಿಸಿದ ಶ್ರೀಯುತ ಸೂರ್ಯಪ್ರಕಾಶ ಪಂಡಿತ್ ಅವರಿಗೆ ಧನ್ಯವಾದಗಳು.

**ನಿಮ್ಮ ವೈದ್ಯರು ಯಾವ ಆಪ್ ಬಳಸುತ್ತಾರೆ?**
ನಮ್ಮ ಜೀವನಕಾಲದ ಇದುವರೆಗಿನ ಅತ್ಯಂತ ಉಪಯುಕ್ತ ಮತ್ತು ರೋಚಕ ಆವಿಷ್ಕಾರ ಎಂದರೆ ಸ್ಮಾರ್ಟ್-ಫೋನು. “ಜಗತ್ತು ನಮ್ಮ ಅಂಗೈನಲ್ಲಿದೆ” ಎಂಬ ಭಾವನೆ ಮೂಡಿಸುವ ಸ್ಮಾರ್ಟ್-ಫೋನುಗಳು ತಮ್ಮ ವಿಧವಿಧವಾದ ‘ಆಪ್’ (app) ಎಂಬ ಕಿರುತಂತ್ರಾಂಶಗಳ ಮೂಲಕ ನಮ್ಮ ಜೀವನಕ್ರಮವನ್ನೇ ಬದಲಿಸಿವೆ. ಗ್ರಾಹಕರ ಬಳಕೆಯ ಲೆಕ್ಕಾಚಾರದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಆಪ್’ಗಳು ಮನರಂಜನೆಯ ಆಪ್’ಗಳ ನಂತರದ ಸ್ಥಾನದಲ್ಲಿವೆ. ಆರೋಗ್ಯಾಸಕ್ತರು ವ್ಯಾಯಮಕ್ಕೆ ಸಂಬಂಧಿಸಿದ, ಸೇವಿಸುವ ಕ್ಯಾಲರಿಗಳಿಗೆ ಲೆಕ್ಕ ಇಡುವಂತಹ ಆಪ್’ಗಳನ್ನು ಬಳಸುತ್ತಾರೆ. ರೋಗಿಗಳು ತಾವು ಸೇವಿಸಬೇಕಾದ ಔಷಧಗಳ ಅನುಸರಣೆಗೆ, ವೈದ್ಯರನ್ನು ಕಾಣಬೇಕಾದ ಅಗತ್ಯಗಳಿಗೆ ಆಪ್’ಗಳ ಮೊರೆ ಹೋಗುತ್ತಿದ್ದಾರೆ. ವೈದ್ಯರ ಜೊತೆಗೆ ವಿಡಿಯೋ ಸಮಾಲೋಚನೆ ಮಾಡಿಸುವ ಆಪ್’ಗಳು ಜನಪ್ರಿಯವಾಗುತ್ತಿವೆ. ಖಾಸಗಿ ವಲಯದ ಬೃಹತ್ ಆಸ್ಪತ್ರೆಗಳು ತಮ್ಮ ರೋಗಿಗಳಿಗಾಗಿ ತಮ್ಮದೇ ಆದ ಆಪ್’ಗಳನ್ನು ಅಭಿವೃದ್ಧಿಪಡಿಸಿವೆ. ಇವುಗಳ ಮೂಲಕ ರೋಗಿಗಳು ಖಾಸಗಿಯಾಗಿ ವೈದ್ಯರ ಸಲಹೆ ಪಡೆಯುವುದು, ತಮ್ಮ ಪರೀಕ್ಷೆಗಳ ಫಲಿತಾಂಶವನ್ನು ಹಂಚಿಕೊಳ್ಳುವುದು ಮುಂತಾದ ಸೌಲಭ್ಯಗಳಿವೆ. ಮಕ್ಕಳ ಆರೋಗ್ಯ, ಲಸಿಕೆಗಳು, ವೃದ್ಧರ ಆರೈಕೆ, ಸಾಕುಪ್ರಾಣಿಗಳ ಪೋಷಣೆ – ಹೀಗೆ ಪ್ರತಿಯೊಂದು ಆರೋಗ್ಯ ಅಗತ್ಯಗಳನ್ನೂ ಈ ಕಿರುತಂತ್ರಾಂಶಗಳು ಪೋಷಿಸುತ್ತಿವೆ.
ಎಲ್ಲರಿಗೂ ಆವಶ್ಯಕ ಎನಿಸಿರುವ ಆಪ್’ಗಳ ಜೊತೆಗೆ ಇನ್ನೂ ಕೆಲವು ವಿಶೇಷ ಆಪ್’ಗಳು ವೈದ್ಯರಿಗೂ ಬೇಕಾಗುತ್ತವೆ. ಇವುಗಳಲ್ಲಿ ಬಹುತೇಕವು ಹಣ ನೀಡಿ ಪಡೆಯುವಂತಹವು. ಇವನ್ನು ಕಾಲಕಾಲಕ್ಕೆ ನವೀಕರಿಸಬೇಕು. ವೈದ್ಯಕೀಯದಂತಹ ಕಠಿಣ ವೃತ್ತಿಯಲ್ಲಿ ಈ ರೀತಿಯ ಆಪ್’ಗಳು ಬಹಳ ಸಹಕಾರಿ. ವೈದ್ಯರು ಬಳಸುವ ಕೆಲವು ವಿಶಿಷ್ಟ ಆಪ್’ಗಳ ಪರಿಚಯ ಇಲ್ಲಿದೆ:
ಕುಟುಂಬ ವೈದ್ಯರಾಗಲೀ ಅಥವಾ ತಜ್ಞವೈದ್ಯರಾಗಲೀ, ತಂತಮ್ಮ ವಿಷಯಜ್ಞಾನವನ್ನು ಕಾಲಕಾಲಕ್ಕೆ ಹರಿತಗೊಳಿಸುತ್ತಲೇ ಇರಬೇಕು. ಜಗತ್ತಿನಲ್ಲಿ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳ ವಿವರಗಳನ್ನು ಒಂದೇ ಸಮನೆ ಗಮನಿಸುವುದು ಯಾರೊಬ್ಬರಿಗೂ ಆಗದ ಕೆಲಸ. ಅದರಲ್ಲೂ ತಮ್ಮ ವೃತ್ತಿಜೀವನದಲ್ಲಿ ಬಿಡುವನ್ನು ಕಂಡುಕೊಳ್ಳಲು ಹೆಣಗಾಡುವ ವೈದ್ಯರಿಗೆ ತಮ್ಮ ಕ್ಷೇತ್ರದ ಬೆಳವಣಿಗೆಗಳನ್ನು, ರೋಗಗಳ ನಿರ್ವಹಣೆಯ ಆಧುನಿಕ ಮಾರ್ಗಸೂಚಿಗಳನ್ನು ನಿಖರವಾಗಿ, ಸ್ಪಷ್ಟವಾಗಿ, ಚುಟುಕಾಗಿ ಹೇಳುವಂತಹ ಸ್ರೋತಗಳು ದೊರೆತರೆ, ಅದಕ್ಕಿಂತ ಒಳಿತು ಬೇರೊಂದಿಲ್ಲ. ಇಂತಹ ಮಾಹಿತಿಗಳನ್ನು ಒದಗಿಸುವ ಮೆಡ್’ಸ್ಕೇಪ್, ಅಪ್-ಟು-ಡೇಟ್, ಸ್ಕೈಸ್ಕೇಪ್, ಒಂನಿಯೊ, ಡೈನಮೆಡ್ ಮುಂತಾದ ಆಪ್’ಗಳ ಬಳಕೆ ವೈದ್ಯಕೀಯ ರಂಗದಲ್ಲಿ ದಿನದಿನಕ್ಕೂ ಜನಪ್ರಿಯವಾಗುತ್ತಿದೆ.
ವೈದ್ಯರು ಮತ್ತು ರೋಗಿಗಳ ನಡುವಿನ ಅತ್ಯಂತ ಮುಖ್ಯ ಸಂವಹನ ಔಷಧಗಳು. ವೈದ್ಯರ ಕೆಟ್ಟ ಬರವಣಿಗೆ ಟೀಕೆಗೆ ಒಳಗಾಗುವುದು ‘ಅವರು ಬರೆದುಕೊಡುವ ಔಷಧಗಳನ್ನು ಓದಲಾಗದು’ ಎಂಬ ಕಾರಣಕ್ಕಾಗಿಯೇ. ಈ ಗುರುತರ ಸಮಸ್ಯೆಯ ಪರಿಹಾರಕ್ಕಾಗಿ ವೈದ್ಯಕೀಯ ಮಂಡಲಿಗಳು ವೈದ್ಯರು ಬರೆಯುವ ಔಷಧಗಳ ಹೆಸರನ್ನು CAPITAL LETTERS ಬಳಸಿ ಬರೆಯಬೇಕೆಂದು ಕಡ್ಡಾಯ ಮಾಡಿದೆ. ಔಷಧಗಳ ಹೆಸರು, ಪರಿಮಾಣ, ತೆಗೆದುಕೊಳ್ಳುವ ಸಮಯ, ಅಡ್ಡಪರಿಣಾಮಗಳು, ಇತರ ಔಷಧಗಳ ಜೊತೆ ಅವು ಮಾಡಬಹುದಾದ ಒಟ್ಟಾರೆ ಪ್ರತಿಕೂಲ ಪ್ರತಿಕ್ರಿಯೆಗಳು – ಇವೆಲ್ಲವನ್ನೂ ವೈದ್ಯರು ಸಮಂಜಸವಾಗಿ ವಿವೇಚಿಸಿ, ವಿಶ್ಲೇಷಿಸಿ, ನಿರ್ಧರಿಸಿ, ರೋಗಿಗಳಿಗೆ ವಿವರಿಸಬೇಕು. ವೈದ್ಯಕೀಯ ಸಮಾಲೋಚನೆಯಲ್ಲಿ ಇದು ಅತ್ಯಂತ ಪ್ರಮುಖ ಘಟ್ಟ. ತಪ್ಪುಗಳಾಗುವ ಸಾಧ್ಯತೆ, ತಪ್ಪುಗಳಿಂದಾಗುವ ದುಷ್ಪರಿಣಾಮಗಳೂ ಈ ಹಂತದಲ್ಲೇ ಅಧಿಕ. ಹೀಗಾಗಿ, ಔಷಧಗಳನ್ನು ಸೂಚಿಸುವ ಪ್ರಕ್ರಿಯೆಯನ್ನು ಸರಾಗ ಮಾಡುವ ಆಪ್’ಗಳಿಗೆ ಬಹಳ ಬೇಡಿಕೆಯಿದೆ. ಎಪೊಕ್ರೇಟಸ್, ಲೆಕ್ಸಿಕಂಪ್, ಐಪ್ರೆಸ್ಕ್ರೈಬ್ ಮುಂತಾದ ಆಪ್’ಗಳು ಔಷಧ ವಿವರಗಳ ಸಂವಹನವನ್ನು ಅತ್ಯಂತ ವಸ್ತುನಿಷ್ಠಗೊಳಿಸಿವೆ.
ವೈದ್ಯಕೀಯ ಪಠ್ಯಪುಸ್ತಕಗಳು ಕುಟುಂಬ ವೈದ್ಯರಿಗೂ, ತಜ್ಞವೈದ್ಯರಿಗೂ ಬೇಕಾದ ಸಂಗಾತಿ. ಕೆಲವು ಅಪರೂಪದ ಕಾಯಿಲೆಗಳನ್ನು ಪತ್ತೆಹಚ್ಚಲು ಆಗಾಗ ಪಠ್ಯಗಳನ್ನು ನೋಡುತ್ತಲೇ ಇರಬೇಕಾಗುತ್ತದೆ. ಎಷ್ಟೋ ಕಾಯಿಲೆಗಳನ್ನು ನುರಿತ ವೈದ್ಯರೂ ಮೊದಲ ಬಾರಿಗೆ ನೋಡುತ್ತಾರೆ. ಪಠ್ಯಗಳಲ್ಲಿ ಅದನ್ನು ಓದಿದ ಅನುಭವ ಇದ್ದರೂ, ಅಪರೂಪದ ಕಾಯಿಲೆಗಳನ್ನು ಯಥಾವತ್ತಾಗಿ ಪತ್ತೆ ಮಾಡುವುದು ಕಷ್ಟದ ವಿಷಯ. ಈ ನಿಟ್ಟಿನಲ್ಲಿ ಆಪ್’ಗಳು ವೈದ್ಯರ ನೆರವಿಗೆ ಬಂದಿವೆ. ರೋಗಿಯ ಬಾಹ್ಯ-ರೋಗಚಿಹ್ನೆಯ ಚಿತ್ರವನ್ನು ಸ್ಮಾರ್ಟ್-ಫೋನ್ ಬಳಸಿ ತೆಗೆದು, ಅದನ್ನು ವಿಶುಯಲ್-ಡಿಎಕ್ಸ್ ನಂತಹ ಆಪ್’ಗಳಲ್ಲಿ ಏರಿಸಿದರೆ, ಅದು ತನ್ನಲ್ಲಿರುವ ಲಕ್ಷಾಂತರ ಚಿತ್ರಗಳ ಜೊತೆಯಲ್ಲಿ ಈ ಚಿತ್ರವನ್ನು ಹೋಲಿಸಿ, ಅದಕ್ಕೆ ಹೊಂದುವ ಕಾಯಿಲೆಗಳನ್ನು ಸೂಚಿಸುತ್ತದೆ. ಅಲ್ಲದೇ, ಕಾಯಿಲೆ ಸದ್ಯಕ್ಕೆ ಯಾವ ಹಂತದಲ್ಲಿದೆ, ಇದು ಮುಂದೆ ಬೆಳೆದರೆ ಯಾವ ರೀತಿ ಇರುತ್ತದೆ ಎಂಬ ವಿವರಗಳನ್ನೂ ನೀಡುತ್ತದೆ. ಬಹುತೇಕ ಬಾಹ್ಯ-ರೋಗಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡುವ ಚರ್ಮರೋಗದಂತಹ ವಿಷಯದಲ್ಲಿ ಈ ರೀತಿಯ ಆಪ್’ಗಳು ವೈದ್ಯರ ಕಲಿಕೆಗೆ, ಚಿಕಿತ್ಸೆಯ ನಿರ್ಧಾರಕ್ಕೆ, ರೋಗಗಳ ನಿರ್ವಹಣೆಗೆ ಬಹಳ ಪ್ರಯೋಜನಕಾರಿ.
ಇದು ಕಾನೂನು ಕಟ್ಟಳೆಯ ಯುಗ. ವೈದ್ಯರ ಮತ್ತು ರೋಗಿಗಳ ಸಂಬಂಧದ ನಡುವೆ ಈಗ ಕಾನೂನು ಬಂದಿದೆ. ಕಾನೂನಿಗೆ ಒಪ್ಪಿತವಾಗುವಂತೆ ರೋಗಿಯ ಮತ್ತು ರೋಗದ ಎಲ್ಲಾ ವಿವರಗಳನ್ನೂ ಸ್ಪಷ್ಟವಾಗಿ ದಾಖಲಿಸುವುದು ಪ್ರತಿಯೊಬ್ಬ ವೈದ್ಯರ ಕರ್ತವ್ಯ. ಮೊದಲು ಬರವಣಿಗೆಯ ಮೂಲಕ ಆಗುತ್ತಿದ್ದ ಈ ಪ್ರಕ್ರಿಯೆ, ನಂತರ ವೈದ್ಯರು ಹೇಳುವುದನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ನಂತರ ಕಂಪ್ಯೂಟರ್ ನಲ್ಲಿ ದಾಖಲಿಸುವ ಮೆಡಿಕಲ್ ಟ್ರಾನ್ಸ್ಕ್ರಿಪ್ಷನ್ ರೂಪಕ್ಕೆ ಬಂದಿತ್ತು. ಈಗ ವಿದ್ಯುನ್ಮಾನ ವೈದ್ಯಕೀಯ ದಾಖಲೆಗಳನ್ನು ಸರಾಗವಾಗಿ ನಿರ್ವಹಿಸುವ ನೂರಾರು ಆಪ್’ಗಳು ಲಭ್ಯವಿವೆ. ಬಹುತೇಕ ಆಸ್ಪತ್ರೆಗಳು ಇಂತಹ ಯಾವುದೋ ಒಂದು ಆಪ್ ಅನ್ನು ತಮ್ಮ ಎಲ್ಲಾ ವೈದ್ಯಕೀಯ ದಾಖಲೆಗಳ ನಿರ್ವಹಣೆಗೆ ಬಳಸುತ್ತವೆ.
ಇದು ವೈದ್ಯರು ಬಳಸುವ ಆಪ್’ಗಳ ಆರಂಭದ ಕಾಲ! ಭವಿಷ್ಯದಲ್ಲಿ ರೋಗಗಳ, ರೋಗಿಗಳ ನಿರ್ವಹಣೆಯನ್ನು ಇನ್ನೂ ಉತ್ತಮವಾಗಿ ಮಾಡಲು ತಂತ್ರಜ್ಞಾನ ಮತ್ತಷ್ಟು ಸಹಕಾರ ನೀಡುತ್ತದೆಂಬುದು ಖಚಿತ.
-----------------
ಪ್ರಜಾವಾಣಿಯ ಲೇಖನದ ಕೊಂಡಿ:

 ನೀವು + ಸಂಚಿ ಸಂಸ್ಥೆ = ಅರ್ಧ ಬೆಲೆಗೆ ನಿಮ್ಮ ಶಾಲೆಗೆ “ಸೆರೆಂಡಿಪಿಟಿ” ಪುಸ್ತಕ

“ಸೆರೆಂಡಿಪಿಟಿ” ಪುಸ್ತಕವನ್ನು ಓದಿದ ಅನೇಕ ಶಿಕ್ಷಕರು “ಶಾಲೆಗಳಲ್ಲಿ ಕಲಿಸುವ ಪಾಠಗಳು ಹೀಗೆಯೇ ಇರಬೇಕು; ಮಕ್ಕಳು ವಿಜ್ಞಾನವನ್ನು ಈ ರೀತಿಯ ಇತಿಹಾಸದ ರೋಚಕ ಪ್ರಸಂಗಗಳ ಮೂಲಕ ಕಲಿಯುವಂತೆ ಇರಬೇಕು” ಎಂದು ಅಭಿಪ್ರಾಯ ಪಟ್ಟಿದ್ದರು.
“ಸೆರೆಂಡಿಪಿಟಿ” ಪುಸ್ತಕಕ್ಕೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿ ಬಂದಿರುವ ಸಂದರ್ಭದಲ್ಲಿ ಸಂಚಿ ಸಂಸ್ಥೆ ಇಂತಹ ಒಂದು ಸಾಹಸಕ್ಕೆ ಇಂಬು ನೀಡಿದೆ.
ರೂ.290/- ಮುಖಬೆಲೆಯ “ಸೆರೆಂಡಿಪಿಟಿ” ಪುಸ್ತಕವನ್ನು ಕೇವಲ ರೂ.150/- ನೀಡಿ ನೀವು ಓದಿದ ಶಾಲೆಗಳಿಗೆ ಕೊಡುಗೆಯಾಗಿ ನೀಡಬಹುದು. ಉಳಿದ ಹಣ ಮತ್ತು ಪುಸ್ತಕವನ್ನು ಶಾಲೆಗೆ ತಲುಪಿಸುವ ಅಂಚೆ ವೆಚ್ಚವನ್ನು ಸಂಚಿ ಸಂಸ್ಥೆ ನೀಡಲಿದೆ. ಅಲ್ಲದೇ, ನೀವು ನೀಡಿದ ಕೊಡುಗೆಗೆ 80G ಪ್ರಮಾಣಪತ್ರ ನಿಮಗೆ ದೊರೆಯಲಿದೆ.
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇದ್ದಲ್ಲಿ “ಸೆರೆಂಡಿಪಿಟಿ” ಪುಸ್ತಕದ ಒಂದಕ್ಕಿಂತ ಹೆಚ್ಚು ಪ್ರತಿಗಳನ್ನು ಒಂದೇ ಶಾಲೆಗೆ ನೀಡಬಹುದು. ಅಥವಾ, ಒಂದಕ್ಕಿಂತ ಹೆಚ್ಚು ಶಾಲೆಗಳಿಗೂ ನೀವು ಕೊಡುಗೆ ನೀಡಬಹುದು.
ಈ ಕೊಡುಗೆ ಕೇವಲ ಶಾಲೆಗಳಿಗೆ ಮಾತ್ರ. “ಸೆರೆಂಡಿಪಿಟಿ” ಪುಸ್ತಕದ ಮಾಹಿತಿ ವಿದ್ಯಾರ್ಥಿಗಳನ್ನು ಸೇರಲೆಂಬ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ನೀವು ಓದಿದ ಶಾಲೆಗೆ ನಿಮ್ಮಿಂದ “ಸೆರೆಂಡಿಪಿಟಿ” ಪುಸ್ತಕ ಪುಟ್ಟ ಕೊಡುಗೆಯಾಗಿ ತಲುಪಲಿ. ನಿಮ್ಮ ಪ್ರೀತಿಯ ಕಾರ್ಯಕ್ಕೆ ಕೈಜೋಡಿಸುವ ಹೆಮ್ಮೆ ಸಂಚಿ ಸಂಸ್ಥೆಗೂ ಇರಲಿ.
ನೀವು ನೀಡಿದ ಶಾಲೆಯ ವಿಳಾಸಕ್ಕೆ “ಸೆರೆಂಡಿಪಿಟಿ” ಪುಸ್ತಕ ತಲುಪಿಸುವ ಜವಾಬ್ದಾರಿ ಸಂಚಿ ಸಂಸ್ಥೆಯದ್ದು.
ವಿವರಗಳಿಗೆ ಈ ಕೊಂಡಿಗಳನ್ನು ನೋಡಿ: https://rzp.io/l/WtVCtRxK8r


 “ಸೆರೆಂಡಿಪಿಟಿ”ಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಶಸ್ತಿಯ ಗರಿ!

2019-20 ರ ವರ್ಷಗಳಲ್ಲಿ ಪ್ರಕಟವಾದ “ಅತ್ಯುತ್ತಮ ವೈದ್ಯಕೀಯ ಪುಸ್ತಕ”ದ ಗರಿಮೆಗೆ “ಸೆರೆಂಡಿಪಿಟಿ” ಭಾಜನವಾಗಿದೆ.
ಪುಸ್ತಕವನ್ನು ಓದಿ, ಮೆಚ್ಚಿ, ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
“ಸೆರೆಂಡಿಪಿಟಿ” ಪುಸ್ತಕದ ರಚನೆಗೆ ಕಾರಣರಾದ ಶ್ರೀಯುತ ಕೊಳ್ಳೇಗಾಲ ಶರ್ಮಾ ಅವರಿಗೆ, ಪುಸ್ತಕವನ್ನು ಬಹುಮಾನಕ್ಕೆ ಕಳಿಸಲು ಕಾರಣರಾದ ಶ್ರೀಯುತ ಟಿ.ಜಿ.ಶ್ರೀನಿಧಿ ಅವರಿಗೆ ಮತ್ತು ಇ-ಪುಸ್ತಕವನ್ನು ಮುದ್ರಣಕ್ಕೆ ಒಗ್ಗುವಂತೆ ಬದಲಾವಣೆ ಮಾಡಿಕೊಟ್ಟ ಶ್ರೀಯುತ ಓಂಶಿವಪ್ರಕಾಶ್ ಅವರಿಗೆ ಕೃತಜ್ಞನಾಗಿದ್ದೇನೆ.
“ಸೆರೆಂಡಿಪಿಟಿ” ಮುದ್ರಿತ ಪುಸ್ತಕ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಲಭ್ಯವಿದೆ.
Online ಮೂಲಕ “ಸೆರೆಂಡಿಪಿಟಿ” ಮುದ್ರಿತ ಪುಸ್ತಕವನ್ನು ಖರೀದಿಸಲು ಈ ಲಿಂಕ್ ಬಳಸಿ: https://www.navakarnatakaonline.com/serendipity-a...
Amazon ಜಾಲತಾಣದ ಮೂಲಕ “ಸೆರೆಂಡಿಪಿಟಿ” ಮುದ್ರಿತ ಪುಸ್ತಕವನ್ನು ಖರೀದಿಸಲು ಈ ಲಿಂಕ್ ಬಳಸಿ: https://amzn.to/3qRSLuN
“ಸೆರೆಂಡಿಪಿಟಿ” ಇ-ಪುಸ್ತಕವನ್ನು ಉಚಿತವಾಗಿ download ಮಾಡಿಕೊಳ್ಳಲು ಈ ಲಿಂಕ್ ಬಳಸಿ: https://play.google.com/store/books/details?id=ji84EAAAQBAJ
ಮತ್ತೊಮ್ಮೆ, “ಸೆರೆಂಡಿಪಿಟಿ”ಯ ಎಲ್ಲ ಓದುಗರಿಗೂ ಧನ್ಯವಾದಗಳು.


ಮರೆವಿನ ಬಗ್ಗೆ ಹೊಸತೇನಿದೆ? ಇಂದಿನ (10/ಆಗಸ್ಟ್/2021) "ಪ್ರಜಾವಾಣಿ" ದಿನಪತ್ರಿಕೆಯ 'ಕ್ಷೇಮ-ಕುಶಲ' ವಿಭಾಗದಲ್ಲಿ ನನ್ನ ಬರಹ. ವಿಷಯವನ್ನು ಸೂಚಿಸಿ, ಬರೆಯಿಸಿ, ಪ್ರಕಟಿಸಿದ ಶ್ರೀಯುತ Suryaprakasha Pandit ಅವರಿಗೆ ಧನ್ಯವಾದಗಳು.

ಮರೆವಿನ ನೂತನ ಸಂಹಿತೆ!
ಬದುಕು ಎಂದರೆ ಲಕ್ಷಾಂತರ ಅನುಭವಗಳ ಗ್ರಹಿಕೆ. ಅದರಲ್ಲಿ ಕೆಲವು ನೆನಪುಗಳಾಗಿ ಉಳಿದರೆ, ಬಹುತೇಕ ಸಂಗತಿಗಳು ಚಿತ್ತದಿಂದ ಮರೆಯಾಗುತ್ತವೆ. “ಬದುಕಿಗೆ ಅಗತ್ಯವಾದ ವಿಷಯಗಳನ್ನು ಮಾತ್ರ ನಮ್ಮ ಮಿದುಳು ನೆನಪುಗಳ ರೂಪದಲ್ಲಿ ಉಳಿಸಿಕೊಳ್ಳುತ್ತದೆ; ಅನಗತ್ಯ ಸಂಗತಿಗಳು ನೆನಪುಗಳ ಹಂತಕ್ಕೆ ಏರದೇ ತಾನಾಗಿಯೇ ಮರೆಯಾಗುತ್ತವೆ” ಎಂದೇ ಬಹುಕಾಲ ನಂಬಲಾಗಿತ್ತು. ಅಂದರೆ, ನೆನಪು ಎನ್ನುವುದು ಪ್ರಜ್ಞಾಪೂರ್ವಕ ಪ್ರಕ್ರಿಯೆ; ಮರೆವು ಎನ್ನುವುದು ಅದಕ್ಕೆ ವಿರುದ್ಧವಾದ, ಯಾವುದೇ ಪ್ರಯತ್ನ ಬೇಡದ ಸಹಜ ಕೆಲಸ ಎನ್ನುವ ಭಾವನೆಯಿತ್ತು.
ಕಳೆದ ಒಂದು ದಶಕದಲ್ಲಿ ನಡೆದ ಹಲವಾರು ಪ್ರಯೋಗಗಳು ಮರೆವಿನ ಕುರಿತಾದ ಹೊಸ ಒಳನೋಟಗಳನ್ನು ತೆರೆದಿಟ್ಟಿವೆ. ಈ ಮುನ್ನ ಎಣಿಸಿದಂತೆ ಮರೆವು ಎನ್ನುವುದು ನೆನಪಿಗೆ ವ್ಯತಿರಿಕ್ತವಾದ ನಿಷ್ಕ್ರಿಯ ಪ್ರಕ್ರಿಯೆ ಅಲ್ಲ. ಬದಲಿಗೆ, ಮಿದುಳು ಪ್ರಯತ್ನಪೂರ್ವಕವಾಗಿ ಸಂಗತಿಗಳನ್ನು ಮರೆಯಿಸುತ್ತದೆ! ನಮ್ಮ ಮಿದುಳು ಸುಖಾಸುಮ್ಮನೆ ಏನನ್ನೂ ಮರೆಯುವುದಿಲ್ಲ; ಅದರ ಹಿಂದೆ ಯಾವುದೋ ಉದ್ದೇಶ ಇರುತ್ತದೆ ಎಂದಾಯಿತು.
ಮಿದುಳಿನ ಎಲ್ಲಾ ಭಾಗಗಳನ್ನೂ ಒಟ್ಟುಗೂಡಿಸಿದರೆ, ಅದರಲ್ಲಿ ಸುಮಾರು ಹತ್ತುಸಾವಿರ ಕೋಟಿ (ಒಂದರ ಮುಂದೆ ಹನ್ನೊಂದು ಸೊನ್ನೆಗಳು) ನರಕೋಶಗಳಿವೆ ಎಂದು ಅಂದಾಜು. ಈ ಬೃಹತ್ ಸಂಖ್ಯೆಯ ನರಕೋಶಗಳು ತಂತಮ್ಮ ನಡುವೆ ಸುಮಾರು ಎರಡು ಕೋಟಿ ಕೋಟಿ (ಎರಡರ ಮುಂದೆ ಹದಿನಾಲ್ಕು ಸೊನ್ನೆಗಳು) ಸಂಪರ್ಕಗಳನ್ನು ಸಾಧಿಸುತ್ತವೆ ಎಂಬ ಊಹೆಯಿದೆ. ನಮ್ಮ ಅನುಭವಕ್ಕೆ ಬಂದ ಪ್ರತಿಯೊಂದು ಘಟನೆಯೂ ಈ ನರವ್ಯೂಹದಲ್ಲಿ ಒಂದು ಹೊಸ ಸಂಪರ್ಕಜಾಲವನ್ನು ಸೃಜಿಸುತ್ತದೆ. ಈ ಜಾಲ ಕೆಲಸೆಕೆಂಡುಗಳ ಕಾಲದಿಂದ ಹಿಡಿದು, ಹಲವಾರು ವರ್ಷಗಳವರೆಗೆ ಸಕ್ರಿಯವಾಗಿ ಇರಬಹುದು. ಆಯಾ ಅನುಭವಕ್ಕೆ ಸಂಬಂಧಿಸಿದ ನರಗಳ ಸಕ್ರಿಯ ಜಾಲವನ್ನು “ಆಯಾ ಘಟನೆಯ ನೆನಪು” ಎಂದು ಕರೆಯಬಹುದು. ಯಾವುದೇ ಅನುಭವವನ್ನು ನಾವು ಪುನಃ ಚಿತ್ತದಲ್ಲಿ ತರಲು ಇಚ್ಛಿಸಿದಾಗ ಆ ವಿಶಿಷ್ಟ ಸಂಪರ್ಕಜಾಲ ಉದ್ದೀಪನಗೊಳ್ಳುತ್ತಾ ನೆನಪಿನ ರೂಪದಲ್ಲಿ ಗ್ರಹಿಕೆಗೆ ಬರುತ್ತದೆ. ಇಂತಹ ಕೋಟ್ಯಂತರ ನೆನಪುಗಳನ್ನು ಶೇಖರಿಸಿ ಇಟ್ಟುಕೊಳ್ಳಬಲ್ಲ ಸಾಮರ್ಥ್ಯ ನಮ್ಮ ಮಿದುಳಿಗೆ ಇದೆ.
ನೆನಪುಗಳ ರಚನೆಯ ಹಿನ್ನೆಲೆಯಲ್ಲಿ ಮರೆಯುವಿಕೆಯನ್ನು ವಿಶ್ಲೇಷಿಸಬಹುದು. ನೆನಪಿನ ಕುರಿತಾದ ಸಂಪರ್ಕಜಾಲ ಮಿದುಳಿನಲ್ಲಿ ರೂಪುಗೊಂಡಿದ್ದರೂ, ಅದು ಸಮಯಕ್ಕೆ ಸರಿಯಾಗಿ ಉದ್ದೀಪನಗೊಳ್ಳದಿದ್ದರೆ ಗ್ರಹಿಕೆಗೆ ಬರುವುದಿಲ್ಲ. “ತಲೆಯಲ್ಲಿದೆ; ಆದರೆ ಈ ಕ್ಷಣಕ್ಕೆ ನೆನಪಾಗುತ್ತಿಲ್ಲ” ಎನ್ನುವ ಹಳಹಳಿಕೆ ಇಂತಹದ್ದೇ. ಮರೆವಿನ ಮತ್ತೊಂದು ವಿಧಾನದಲ್ಲಿ ನೆನಪು ಶೇಖರವಾಗಿರುವ ಎಡೆಯನ್ನು ತಲುಪಲು ಅಗತ್ಯವಾದ ಪ್ರಕ್ರಿಯೆ ಅಶಕ್ತವಾಗಿರಬಹುದು. ಇದರಲ್ಲಿ ಯಾವುದೋ ಒಂದು ನೆನಪು ಮಾತ್ರ ಮಸುಕಾಗುವುದಿಲ್ಲ. ಬದಲಿಗೆ, ನೆನಪುಗಳನ್ನು ಮರುಕಳಿಸುವ ಇಡೀ ಪ್ರಕ್ರಿಯೆ ವಿಫಲವಾಗುತ್ತದೆ. ಮೂರನೆಯ ವಿಧಾನದಲ್ಲಿ ಮಿದುಳಿನ ಒಂದು ಭಾಗದಲ್ಲಿ ಶೇಖರವಾಗಿರುವ ನೆನಪುಗಳನ್ನು ಗ್ರಹಿಕೆಗೆ ಬಾರದಂತೆ ಮಿದುಳಿನ ಮತ್ತೊಂದು ಬಲಶಾಲಿ ಭಾಗ ವ್ಯವಸ್ಥಿತವಾಗಿ ನಿಗ್ರಹಿಸಬಲ್ಲದು. ಅಂದರೆ, ನೆನಪುಗಳು ಇದ್ದರೂ, ಅವುಗಳನ್ನು ತಲುಪಬಲ್ಲ ವ್ಯವಸ್ಠೆ ಇದ್ದರೂ, ಆ ಪ್ರಕ್ರಿಯೆ ಸಾಕಾರವಾಗದಂತೆ ಮತ್ತೊಂದು ಭಾಗದಿಂದ ಒತ್ತಡ ಬಂದರೆ, ಒಟ್ಟಾರೆ ಮರೆವಿನ ಸಂದರ್ಭವೇ ಆಗುತ್ತದೆ. ಈ ರೀತಿ ಮಿದುಳಿನ ಒಂದು ಭಾಗ ಮತ್ತೊಂದು ಭಾಗವನ್ನು ನಿಗ್ರಹಿಸುತ್ತಾ, ಪ್ರಯತ್ನಪೂರ್ವಕವಾಗಿ ಮರೆವು ಮೂಡುವಂತೆ ಮಾಡುತ್ತದೆ.
ಇಷ್ಟೊಂದು ವ್ಯವಸ್ಥಿತವಾದ ಮರೆವಿನ ಅಗತ್ಯವಾದರೂ ಏನು? ಲಕ್ಷಾಂತರ ಪ್ರಭೇದಗಳ ಜೀವಿಗಳನ್ನು ನಿರ್ವಹಿಸುವ ಪ್ರಕೃತಿ, ಇದಕ್ಕಾಗಿ ಒಂದು ವಿನ್ಯಾಸವನ್ನು ಅಂತರ್ಗತಗೊಳಿಸಿರುತ್ತದೆ. ಜೀವಿಗಳು ಆ ವಿನ್ಯಾಸದ ಭಾಗ. ಈ ಪ್ರಕ್ರಿಯೆಯಲ್ಲಿ ಆಯಾ ಜೀವಿಯ ಪಾತ್ರ ನಿರ್ವಹಣೆಗೆ ಪೂರಕವಾದ ನೆನಪುಗಳು ಉಳಿದುಕೊಳ್ಳುತ್ತವೆ; ಪೂರಕವಲ್ಲದ ನೆನಪುಗಳನ್ನು ಜೀವಿಯ ಮಿದುಳು ನಿಗ್ರಹಿಸುತ್ತದೆ ಎಂದು ತಜ್ಞರ ಅಭಿಮತ. ಇದಕ್ಕಾಗಿ, ನೆನಪುಗಳನ್ನು ಉಳಿಸಿಡಲು ಮಾಡುವಷ್ಟೇ ಪ್ರಯತ್ನವನ್ನು ಮರೆವು ಮೂಡಿಸಲೂ ಮಾಡಬೇಕು ಎನ್ನುವುದು ಸೋಜಿಗ. ಕಾಯಿಲೆಯಿಂದ ಬಳಲುವಾಗ ಅನುಭವಿಸಿದ ತೀವ್ರ ನೋವು ಕೆಲದಿನಗಳಲ್ಲಿ ತನ್ನ ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಕೆಲವರಿಗೆ ಆ ಸಂದರ್ಭದ ಹಲವಾರು ಪ್ರಸಂಗಗಳ ನೆನಪು ಇರುವುದೇ ಇಲ್ಲ. ಇದರ ಹಿಂದೆ ಇರುವ ರಾಸಾಯನಿಕ ಪ್ರಕ್ರಿಯೆಗಳನ್ನು ವಿಜ್ಞಾನಿಗಳು ಅಧ್ಯ್ಯಯನ ಮಾಡುತ್ತಿದ್ದಾರೆ.
ಇದನ್ನು ಅರಿಯುವುದರ ಪ್ರಯೋಜನವೇನು? ಮರೆವಿಗೆ ಸಂಬಂಧಿಸಿದ ಅನೇಕ ವ್ಯಾಧಿಗಳಿಗೆ, ಮಾನಸಿಕ ಸ್ಥಿತಿಗಳಿಗೆ ಉತ್ತರ ದೊರೆಯಬಹುದು. ಮಿದುಳಿನ ಒಂದು ಭಾಗದ ಮೇಲೆ ಮತ್ತೊಂದು ಭಾಗದ ನಿಯಂತ್ರಣವನ್ನು ಹತ್ತಿಕ್ಕುವ ಮೂಲಕ, ಮರೆವಿನ ಕಾರಣದಿಂದ ಭಾವನೆಗಳ ಮೇಲೆ ಆಗುವ ಪರಿಣಾಮಗಳನ್ನು ಅರಿಯಬಹುದು. ಮರೆಯುವಿಕೆಯ ಪ್ರಕ್ರಿಯೆ ನಮ್ಮ ಮಿದುಳಿನ ಕಾರ್ಯವನ್ನು, ನಮ್ಮ ಒಟ್ಟಾರೆ ಜೀವನವನ್ನು ಯಾವ ರೀತಿ ಪ್ರಭಾವಿಸುತ್ತದೆ ಎಂಬುದನ್ನು ಬಲ್ಲೆವು. ಇದನ್ನು ಉತ್ತಮಗೊಳಿಸುವ ವಿಧಾನಗಳನ್ನು ಪತ್ತೆ ಮಾಡಬಹುದು.
ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಿರುವ ಓರ್ವ ವಿಜ್ಞಾನಿ ಹೇಳುವಂತೆ, “ಜೀವವಿಕಾಸ ನೆನಪು ಮತ್ತು ಮರೆವಿನ ನಡುವೆ ಒಂದು ಚಂದದ ಸಮತೋಲನ ಸಾಧಿಸಿದೆ. ಬೇಕಿದ್ದನ್ನು ಬಲವಾಗಿ ಉಳಿಸಿಕೊಂಡು, ಬೇಡದ್ದನ್ನು ನಿರ್ಭಾವುಕವಾಗಿ ಮರೆಯುವುದು ಜೀವನದ ಬಗ್ಗೆ ನಮ್ಮ ಆಶಾಭಾವ, ಗಟ್ಟಿತನ, ಛಲಗಳ ಸಂಕೇತ.”
----------------------------
ಪ್ರಜಾವಾಣಿ ಲೇಖನದ ಕೊಂಡಿ: https://www.prajavani.net/.../memory-remembering-and...