ಸೋಮವಾರ, ಮಾರ್ಚ್ 11, 2019


#ಚುನಾವಣೆಯ_ಇತಿಹಾಸದ_ಪಾಠಗಳು - ೧. ತುಕಡಾ ಪಕ್ಷಗಳು ದೇಶದ ಪ್ರಗತಿಗೆ ಮಾರಕ

ಸ್ವತಂತ್ರ ಭಾರತದ ಇತಿಹಾಸ ಮತದಾರರಿಗೆ ಕಲಿಸಿರುವ ಅತೀ ದೊಡ್ಡ ಪಾಠ ಇದು! ಭಾರತದ ಮತದಾರ ಇದರ ಮೊದಲ ರುಚಿ ಸವಿದದ್ದು ೧೯೭೭ ರ ಲೋಕಸಭಾ ಚುನಾವಣೆಯಲ್ಲಿ. ಸುಮಾರು ೧೨ ವಿವಿಧ ಪಕ್ಷಗಳ ಮಿಶ್ರಣದಿಂದ ತಯಾರಾದ ಜನತಾ ಪಕ್ಷ ೫೪೨ ಸೀಟುಗಳ ಪೈಕಿ ೨೯೮ ಸೀಟುಗಳನ್ನು ಪಡೆಯಿತು. ಅಧಿಕಾರ ಬರುತ್ತಿದ್ದಂತೆಯೇ ಒಂದೊಂದು ತುಕಡಾ ಪಕ್ಷದ ಮುಖವಾಡ ಕಳಚಿತು. ಅಧಿಕಾರ ಲಾಲಸೆ ಬಯಲಾಯಿತು; ಚುನಾವಣಾಪೂರ್ವ ಸಿದ್ಧಾಂತಗಳು ಮಾಯವಾದವು; ಅಧಿಕಾರಕ್ಕಾಗಿ ಯಾವ ಗಟಾರಕ್ಕೆ ಬೇಕಾದರೂ ಇಳಿಯಬಲ್ಲ ಮನಸ್ಥಿತಿ ಅನಾವರಣಗೊಂಡಿತು. ಈ ತುಕಡಾ ಪಕ್ಷಗಳ ನಾಯಕರ ಅಂತರಿಕ ಕಚ್ಚಾಟ ಅವರಿಗೆ ವೋಟು ಹಾಕಿದ ಪ್ರಜೆಗಳ ಮನಸ್ಸಿನಲ್ಲಿ ಹೇವರಿಕೆ ಹುಟ್ಟುವಂತೆ ಮಾಡಿತು. ದೇಶದ ಪ್ರಗತಿ ಪಾತಾಳಕ್ಕೆ ಇಳಿಯಿತು. ದೇಶದ ಅಂತರಿಕ ಮತ್ತು ಬಾಹ್ಯ ಭದ್ರತೆ ಶಿಥಿಲಗೊಂಡಿತು. ದೇಶದಲ್ಲಿ ಇಂದು ನಾವು ಕಾಣುತ್ತಿರುವ ಅನೇಕ ಸಮಸ್ಯೆಗಳು ಆರಂಭವಾದದ್ದು, ಉಲ್ಬಣಗೊಂಡದ್ದು ಇದೇ ಕಾಲದಲ್ಲಿ. ಕೇಂದ್ರದ ನಾಯಕರು ತೀರಾ ಅಲ್ಪಮಟ್ಟದಲ್ಲಿ ಕಚ್ಚಾಡುತ್ತಿದ್ದುದು ವಿದೇಶೀ ಶಕ್ತಿಗಳಿಗೆ ಸುಗ್ಗಿಯಾಯಿತು. ಏನಿಲ್ಲವೆಂದರೂ ದೇಶದ ಪ್ರಗತಿ ಹತ್ತಾರು ವರ್ಷಗಳು ಹಿಂದಕ್ಕೆ ಸರಿಯಿತು. ಅವಧಿಪೂರ್ವ ಚುನಾವಣೆ ಅಗತ್ಯವಾಯಿತು.

ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕರಾಳ ಘಟ್ಟ ೧೯೮೯ರ ಲೋಕಸಭೆ. ಸಿಕ್ಕ ಸಿಕ್ಕ ತುಕಡಾ ಪಕ್ಷಗಳೆಲ್ಲಾ ಸೇರಿ ಅಧಿಕಾರಕ್ಕೆ ಬಂದು ದೇಶದ ಮಾನವನ್ನು ಜಾಗತಿಕ ಮಟ್ಟದಲ್ಲಿ ಹರಾಜು ಹಾಕಿದವು. ಸ್ವತಂತ್ರವಾಗಿ, ದಿಟ್ಟವಾಗಿ ಒಂದೇ ಒಂದು ನಿರ್ಧಾರವನ್ನೂ ತೆಗೆದುಕೊಳ್ಳುವ ಸಾಮರ್ಥ್ಯ ಇಲ್ಲದವರೆಲ್ಲಾ ದೇಶದ ಪ್ರಮುಖ ಹುದ್ದೆಗಳಿಗೆ ನಿಯೋಜಿತರಾದರು. ಅದರ ಮೇಲೆ ಗೃಹ ಮಂತ್ರಿ ಸ್ಥಾನದಲ್ಲಿ ಇದ್ದ ವ್ಯಕ್ತಿಯಂತೂ ತನ್ನ ಆಡಳಿತ ವೈಖರಿಯಿಂದ ಕಾಶ್ಮೀರವನ್ನು ಸ್ಮಶಾನವಾಗಿಸಿದರು. ವೈರಿ ದೇಶಗಳಿಗಂತೂ ಆ ಕಾಲಮಾನ ಸುಗ್ಗಿಯೋ ಸುಗ್ಗಿ! ಅಂದು ತೀವ್ರವಾಗಿ ಹಾಳಾದ ಕಾಶ್ಮೀರ ಪರಿಸ್ಥಿತಿ ಇಂದಿಗೂ ನಮಗೆ ಪ್ರತಿದಿನದ ಸವಾಲಾಗಿ ಪರಿಣಮಿಸಿದೆ. ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಇಳಿದು ದೇಶದ ಚಿನ್ನವನ್ನು ಒತ್ತೆ ಇಡುವಂತೆ ಆಯಿತು. ಆ ನಷ್ಟವನ್ನು ತುಂಬಿಕೊಳ್ಳಲು ಕಡೆಗೆ ನಮ್ಮ ರೂಪಾಯಿ ಬೆಲೆಯನ್ನು ಅರ್ಧಕ್ಕೆ ಇಳಿಸುವಂತಾಯಿತು. ದೇಶದ ಮಾನ ಮರ್ಯಾದೆ ಸಾವಿರಾರು ಪಾಲು ಹಾಳಾಯಿತು. ಮತ್ತೊಮ್ಮೆ ಅವಧಿಪೂರ್ವ ಚುನಾವಣೆ ಅಗತ್ಯವಾಯಿತು.

ಇನ್ನು ೧೯೯೬ ರ ಲೋಕಸಭೆ ಚುನಾವಣೆಯಂತೂ ಪ್ರಜಾಪ್ರಭುತ್ವ ಪದ್ದತಿಯ ವಿಡಂಬನೆಯೇ ಆಯಿತು. ಚುನಾವಣೆಯ ನಂತರದ ಮೈತ್ರಿ ಎಂಬ ಅಸಹ್ಯ ಪದ್ಧತಿ ವೋಟು ಹಾಕಿದ ಅಸಹಾಯಕ ಪ್ರಜೆಗಳನ್ನು ಅಣಕಿಸಿ ಚುನಾವಣೆಗಳ ಬಗ್ಗೆ ಪ್ರಜೆಗಳಿಗೆ ಇದ್ದ ಗೌರವವನ್ನು ಕಳೆಯಿತು. “ಈ ದೇಶಕ್ಕೆ ಯಾರು ಬೇಕಾದರೂ ಪ್ರಧಾನಿ ಆಗಬಹುದು” ಎಂಬ ನುಡಿಗಟ್ಟು ಆರಂಭವಾದದ್ದು ಆ ಕಾಲದಲ್ಲೇ! ಏನೂ ಕೆಲಸ ಮಾಡದೇ “ನನಗೆ ಅವಕಾಶ ಇದ್ದಿದ್ದರೆ ಮಾಡುತ್ತಿದ್ದೆ; ಆ ಯೋಜನೆಯ ಹಿಂದಿನ ಚಿಂತನೆ ನನ್ನದೇ” ಎಂಬ ಪೊಳ್ಳು ಮಾತುಗಳು ಕೇವಲ ಪ್ರಜೆಗಳ ಅಸಹಾಯಕತೆಯನ್ನಷ್ಟೇ ಅಲ್ಲದೇ ಆಳುಗರ ಅಸಹಾಯಕತೆಗೂ ಕನ್ನಡಿ ಆಯಿತು! ನಮ್ಮ ನೆರೆ ರಾಷ್ಟ್ರಗಳು ನಮಗೇ ಧಮಕಿ ಹಾಕುವಂತಹ ಪರಿಸ್ಥಿತಿ ನಿರ್ಮಾಣವಾಯಿತು. “ಮೊದಲು ನಿಮ್ಮದನ್ನು ಸರಿ ಮಾಡಿಕೊಳ್ಳಿ; ನಂತರ ನಮ್ಮ ವಿಷಯಕ್ಕೆ ಬನ್ನಿ” ಎಂದು ನಮ್ಮ ಸುತ್ತಮುತ್ತಲಿನ ಮಿತ್ರದೇಶಗಳು ನಮ್ಮನ್ನು ಅವಹೇಳನ ಮಾಡಿದವು. ದಶಕಗಳಿಂದ ನಮ್ಮ ಹಿಡಿತದಲ್ಲಿದ್ದ ನೆರೆ ರಾಷ್ಟ್ರಗಳು ನಮ್ಮ ಕೈ ತಪ್ಪಿ ನಮ್ಮ ಶತ್ರುದೇಶಗಳ ಸಖ್ಯ ಬೆಳೆಸಿದವು. ಇದು ದೇಶದ ಭದ್ರತೆಗೆ ಇನ್ನಿಲ್ಲದ ಹೊಡೆತ ನೀಡಿತು. ತನ್ನ ಖುರ್ಚಿಯ ಕಾಲೇ ಬಲವಾಗಿ ಇಲ್ಲದ ನಾಯಕ ಇನ್ನು ದೇಶದ ಬಲ ಹೇಗೆ ತಾನೇ ಬೆಳೆಸಿಯಾನು? ಸಣ್ಣ ಪುಟ್ಟ ದೇಶಗಳೂ ಕೇರ್ ಮಾಡದ ಸ್ಥಿತಿಗೆ ನಮ್ಮ ನಾಯಕರು ನಮ್ಮನ್ನು ತಂದು ನಿಲ್ಲಿಸಿದರು. ಅವಧಿಪೂರ್ವ ಚುನಾವಣೆಯಲ್ಲದೆ ಬೇರ್ಯಾವ ಗತ್ಯಂತರವೂ ಉಳಿಯಲಿಲ್ಲ.

ಇದು ಪರಿಸ್ಥಿತಿ. ಇಲ್ಲಿ ಆ ಪಕ್ಷ – ಈ ಪಕ್ಷ ಎಂಬುದಿಲ್ಲ. ಒಟ್ಟಿನಲ್ಲಿ ದೇಶ ಬಲವಾಗಿ, ಮರ್ಯಾದೆಯಾಗಿ, ತಲೆ ಎತ್ತಿ ನಿಲ್ಲಬೇಕಾದರೆ ಕೇಂದ್ರದಲ್ಲಿ ಒಂದು ಪಕ್ಷ ಆಡಳಿತದಲ್ಲಿ ಇರಬೇಕು. ಅದಕ್ಕೆ ಯಾವ “ಮಿತ್ರ ಪಕ್ಷ” ಎನಿಸಿಕೊಂಡವರ ಬೆದರಿಕೆಗಳೂ ಇರಬಾರದು. ಇನ್ನು ಹತ್ತಾರು ತುಕಡಾ ಪಕ್ಷಗಳ ಸಮಾಗಮವಂತೂ ದೇಶವನ್ನು ಅರಾಜಕತೆಗೆ ಒಯ್ಯುವ ರಹದಾರಿ; ಅವಧಿಪೂರ್ವ ಚುನಾವಣೆ ಖಚಿತ ಎಂಬುದು ನಮಗೆ ನಮ್ಮ ದೇಶದ ಚುನಾವಣಾ ಇತಿಹಾಸ ಕಲಿಸಿರುವ ಪಾಠ.

ಈ ಚುನಾವಣೆ ನಮಗೆಲ್ಲಾ ಬಹಳ ಮಹತ್ವದ್ದು. ಎಲ್ಲರೂ ತಪ್ಪದೇ ವೋಟು ಹಾಕಲೇ ಬೇಕು. ಎಲ್ಲರೂ ತಂತಮ್ಮ ವೋಟಿನ ಚೀಟಿಯನ್ನು ಪಡೆದಿರಬೇಕು. ಎಲ್ಲರೂ ತಮ್ಮ ವೋಟು ಯಾವ ಕ್ಷೇತ್ರದಲ್ಲಿ, ಯಾವ ಮತಗಟ್ಟೆಯಲ್ಲಿ ಬರುತ್ತದೆ ಎಂಬುದನ್ನು ತಿಳಿದಿರಬೇಕು. ಎಲ್ಲರೂ ದೇಶದ ಸುಭದ್ರತೆಯ ದೃಷ್ಟಿಯಿಂದ ತುಕಡಾ ಪಕ್ಷಗಳನ್ನು ತಿರಸ್ಕರಿಸಬೇಕು. ಇದೇ ಕಾಲಾತೀತ ಸತ್ಯ. ಇಂದಿನ ದಿನ ಪಕ್ಷ ಯಾವುದೇ ಆಗಿರಲಿ – ಸಮಗ್ರವಾಗಿ ನಿಂತಿರುವ ಒಂದು ಬಲಿಷ್ಠ ಪಕ್ಷವನ್ನು ಬೆಂಬಲಿಸಬೇಕು. ಭವಿಷ್ಯದಲ್ಲಿ ಒಂದು ವೇಳೆ ಈ ಪಕ್ಷ ಇನ್ನೊಂದು ತುಕಡಾ ಪಕ್ಷವಾಗಿ ಪರಿಣಮಿಸಿದರೆ ಆಗ ಅದನ್ನೂ ತಿರಸ್ಕರಿಸುವ ಮತದಾರನೇ ನೈಜ ದೇಶಪ್ರೇಮಿ. ಚುನಾವಣೆ ಎಂಬುದು ಪಕ್ಷದ ಕಾರಣಕ್ಕಲ್ಲ; ಅದು ದೇಶದ ಕಾರಣಕ್ಕೆ. ದೇಶಕ್ಕೆ ಯಾವುದು ಹಿತ ಎಂಬುದೇ ಮುಖ್ಯ. ಆ ಹಿತಕ್ಕೆ ಸಮೀಪವಾಗಿರುವ ಪಕ್ಷಕ್ಕೆ ಮತ ಇರಲಿ. ಏನಾದರೂ ಸರಿಯೇ – ದಯವಿಟ್ಟು ಮತ ಚಲಾಯಿಸಿ.    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ