ಶುಕ್ರವಾರ, ಜುಲೈ 20, 2018


ವೃದ್ಧಾಪ್ಯದಲ್ಲಿ ಆರೋಗ್ಯ ರಕ್ಷಣೆ – ಯಾರ ಜವಾಬ್ದಾರಿ?!
ಲೇಖಕ: ಡಾ ಕಿರಣ್ ವಿ ಎಸ್
ಅಮೇರಿಕಾದಲ್ಲಿ ಮಕ್ಕಳು ಬೆಳೆದ ನಂತರ ತಂದೆ-ತಾಯಿಯರ ಬಳಿ ಇರುವುದೇ ಇಲ್ಲ. ಅವರೇ ದುಡಿದು, ಅವರೇ ಓದುತ್ತಾ ಅವರ ಜೀವನ ಅವರೇ ಕಟ್ಟಿಕೊಳ್ಳುತ್ತಾರೆ. ಎಂದೋ ಒಂದು ಬಾರಿ ತಂದೆ-ತಾಯಿಯರ ಭೇಟಿ ಮಾಡುತ್ತಾರೆ. ನಮ್ಮಲ್ಲಿ ಮಕ್ಕಳು ಮನೆ ಬಿಟ್ಟು ಹೋದರೆ ಅವರ ಬಗ್ಗೆ ಸಮಾಜ ನಾನಾ ಮಾತುಗಳಾಡುತ್ತದೆ. ನಮ್ಮ ಮಕ್ಕಳೂ ಸ್ವತಂತ್ರ ಆಲೋಚನೆ ಕಲಿಯಬೇಕುಹೀಗೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಬಾರಿ ಸಂದೇಶಗಳು ಬರುತ್ತಲೇ ಇರುತ್ತವೆ. ಒಂದೋ ಎರಡೋ ತಿಂಗಳು ಅಮೇರಿಕಾ ಪ್ರವಾಸ ಮಾಡಿ ಬಂದ ಜನರ ಬಾಯಲ್ಲಿ ಕೂಡ ಈ ಮಾತುಗಳು ಸರ್ವೇ ಸಾಮಾನ್ಯ!
ಈ ಮಾತುಗಳಲ್ಲಿ ಸತ್ಯದ ಅಂಶವೇನೋ ಇದೆ. ಆದರೆ ವಸ್ತುಸ್ಥಿತಿಯ ಸರಿಯಾದ ಅರಿವು ಇಲ್ಲದ ಜನ ನಿರ್ಣಾಯಕವಾಗಿ ಮಾತನಾಡುವುದು ತಮಾಷೆ ಅನಿಸುತ್ತದೆ. ಬಹಳಷ್ಟು ಜನರಿಗೆ ವಿಷಯದ ಗಹನತೆಯನ್ನಾಗಲೀ, ಎರಡೂ ದೇಶಗಳ ನಡುವಿನ ವ್ಯವಸ್ಥೆಯ ವ್ಯತ್ಯಾಸವನ್ನಾಗಲೀ ಅರ್ಥ ಮಾಡಿಸುವುದು ಬಹಳ ತ್ರಾಸದ ವಿಷಯ.

ಆರೋಗ್ಯದ ಅವಶ್ಯಕತೆಯ ಬಗ್ಗೆ ಭಾರತೀಯರು ತೀರಾ ಅನಾಸಕ್ತರು! ನಡುವಯಸ್ಸಿನಲ್ಲಿ ಆರೋಗ್ಯ ರಕ್ಷಣೆಯ ಬಗ್ಗೆ ಏನಾದರೂ ಹೇಳಿದರೆ “ತೊಂದರೆ ಬಂದಾಗ ನೋಡಿಕೊಳ್ಳೋಣ” ಎಂಬ ಉಡಾಫೆಯ ಮನೋಭಾವ ವೃದ್ಧಾಪ್ಯದಲ್ಲಿ ಬಹಳ ಸಂಕಷ್ಟಗಳನ್ನು ಒಡ್ಡುತ್ತದೆ. “ಆರೋಗ್ಯವೇ ಮಹಾಭಾಗ್ಯ” ಎಂಬ ಅಣಿಮುತ್ತುಗಳನ್ನು ಉದುರಿಸುವ ಬಹಳಷ್ಟು ಮಂದಿ ತಮ್ಮ ಆರೋಗ್ಯ ವಿಮೆಯ ವಿಷಯದಲ್ಲಿ ತಾತ್ಸಾರ ಹೊಂದಿರುತ್ತಾರೆ. ಆರೋಗ್ಯ ಕೆಟ್ಟಾಗ ಆಸ್ಪತ್ರೆಗಳನ್ನೂ, ವೈದ್ಯರನ್ನೂ ಬೈಯುವ ಕಾಯಕ ಹಲವರದ್ದು. ವೃದ್ಧಾಪ್ಯದಲ್ಲಿ ಆರೋಗ್ಯ ರಕ್ಷಣೆಯ ಹೊಣೆಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಎಲ್ಲರೂ ತಿಳಿದಿರಬೇಕಾದ ವಿಷಯ.

ಇದಕ್ಕೆ ಮುನ್ನ ವೃದ್ಧರ ಆರೋಗ್ಯದ ವಿಷಯದಲ್ಲಿ ಸರ್ಕಾರ ಏನು ಮಾಡುತ್ತಿದೆ ಎಂಬುದು ಮುಖ್ಯ. ವಿಪರ್ಯಾಸವೆಂದರೆ, ಈ ವಿಷಯದಲ್ಲಿ ಜನಸಾಮಾನ್ಯರಿಗೆ ನಿರಾಸೆಯೇ ಸರಿ! “ಅತ್ಯಂತ ಅಧಿಕ ಸಂಖ್ಯೆಯ ಯುವ ಜನತೆ ಇರುವ ದೇಶ ನಮ್ಮದು” ಎಂದು ಕೊಚ್ಚಿಕೊಳ್ಳುವ ಸರ್ಕಾರ, ಇನ್ನು ಕೆಲವೇ ದಶಕಗಳಲ್ಲಿ ಇದು “ಅತ್ಯಂತ ಅಧಿಕ ಸಂಖ್ಯೆಯ ವೃದ್ಧರು ಇರುವ ದೇಶ ಇದು” ಎಂಬ ಸ್ಥಿತಿಗೆ ಜಾರುತ್ತದೆ ಎನ್ನುವ ವಾಸ್ತವದ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣುವುದಿಲ್ಲ. ಪ್ರಜೆಗಳ ಆರೋಗ್ಯದ ವಿಷಯವಾಗಿ ಅತ್ಯಂತ ಎಚ್ಚರ ವಹಿಸುವ ಹಲವಾರು ಮುಂದುವರೆದ ದೇಶಗಳಲ್ಲಿ ಕೂಡ ವೃದ್ಧರ ಆರೋಗ್ಯ ರಕ್ಷಣೆಯ ಸಮಸ್ಯೆ ಈಗಾಗಲೇ ತಲೆ ಎತ್ತಿದೆ. ಅದನ್ನು ನಿರ್ವಹಿಸಲಾರದೇ ಅಲ್ಲಿನ ಸರ್ಕಾರಗಳು ಪರಿಹಾರೋಪಾಯಗಳ ಕುರಿತು ಚಿಂತಿಸುತ್ತಿವೆ. ಆದರೆ ನಮ್ಮ ಸರ್ಕಾರಗಳು ಅದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಏನು ತೊಂದರೆ ಆದರೂ ಖಾಸಗೀ ಆಸ್ಪತ್ರೆಗಳನ್ನೂ, ವೈದ್ಯರನ್ನೂ ಹೊಣೆ ಮಾಡಿ ಪ್ರಜೆಗಳನ್ನು ರೊಚ್ಚಿಗೆಬ್ಬಿಸಿ ಪರಿಸ್ಥಿತಿ ಉಲ್ಬಣವಾಗಲು ನೆರವು ನೀಡುತ್ತವೆ. 

ನಮ್ಮ ದೇಶದ ಪ್ರಜೆಗಳು ವೈದ್ಯಕೀಯ ವಿಮೆಯ ಮೇಲೆ ಕೂಡ ಅತ್ಯಧಿಕ ಸ್ತರದ ತೆರಿಗೆ ತೆರುವ ನತದೃಷ್ಟರು! “ಆರೋಗ್ಯ ರಕ್ಷಣೆ ಪ್ರಜೆಗಳ ಹಕ್ಕು; ಸರ್ಕಾರಗಳ ಕರ್ತವ್ಯ” ಎಂಬುದು ನಮ್ಮ ದೇಶಕ್ಕೆ ಅನ್ವಯವಾಗುವುದಿಲ್ಲ! ಹೋಗಲಿ; ಪ್ರಜೆಗಳು ವಿಮಾ ಸಂಸ್ಥೆಗಳ ಆರೋಗ್ಯ ವಿಮೆಯ ಮೊರೆ ಹೋದರೆ ಅದಕ್ಕೆ ಬೆನ್ನು ಮುರಿಯುವಷ್ಟು ವಾರ್ಷಿಕ ವೆಚ್ಚ, ಅದರ ಮೇಲೆ ಬರೆ ಹಾಕಿದಂತೆ ಶೇಕಡಾ 18ರ ತೆರಿಗೆ! ಇದರ ಮೇಲೆ “ಇಂಥಿಂಥಾ ಖಾಯಿಲೆಗಳಿಗೆ ವಿಮೆ ಇಲ್ಲ” ಎನ್ನುವ ಷರತ್ತು. ಅಲ್ಲದೇ ವೃದ್ಧರಿಗೆ “ಇಂತಿಷ್ಟು ವರ್ಷ ವಯಸ್ಸಾದ ಮೇಲೆ ವಿಮೆ ಸೌಲಭ್ಯ ಇಲ್ಲ” ಎನ್ನುವ ನಿಯಮ! ಆಸ್ಪತ್ರೆಗೆ ಮಾಡಿದ ಖರ್ಚನ್ನು ವಿಮಾ ಸಂಸ್ಥೆಯಿಂದ ಪಡೆದುಕೊಳ್ಳುವುದು ಕೂಡ ಸುಲಭದ ಮಾತೇನೂ ಅಲ್ಲ. ಆದರೆ ಬಡಪಾಯಿ ಪ್ರಜೆಗಳಿಗೆ ಬೇರೆ ಪರ್ಯಾಯವೇ ಇಲ್ಲ.

ಇಂತಹ ಪರಿಸ್ಥಿತಿಯಲ್ಲಿ ಯೋಜನಾಬದ್ಧವಾಗಿ ಆಲೋಚಿಸಿ ವ್ಯವಸ್ಥಿತವಾಗಿ ವೃದ್ಧಾಪ್ಯದ ಆರೋಗ್ಯ ರಕ್ಷಣೆಯನ್ನು ಪ್ರಜೆಗಳು ರೂಢಿಸಿಕೊಳ್ಳಲೇಬೇಕು. ಸರ್ಕಾರವನ್ನು ನಂಬಿದರೆ ಪ್ರಯೋಜನವಿಲ್ಲ. “ನಮ್ಮ ಆರೋಗ್ಯ ನಮ್ಮ ಕೈಯಲ್ಲಿ” ಎಂಬ ಆಲೋಚನೆಯೇ ಸರಿ! ಇದರ ಕೆಲವು ಮಾರ್ಗೋಪಾಯಗಳನ್ನು ಆಲೋಚಿಸಬಹುದು.

೧. ನಡುವಯಸ್ಸಿನಿಂದಲೇ ಆರೋಗ್ಯ ರಕ್ಷಣೆಯ ಕಡೆ ಗಮನ ಕೊಡಬೇಕು. ನಿಯಮಿತ ವ್ಯಾಯಾಮ, ಕ್ಲುಪ್ತ ಸಮಯಕ್ಕೆ ಊಟ, ಸಮತೋಲಿತ ಆಹಾರ ಇವುಗಳನ್ನು ಪದ್ದತಿಯಂತೆ ಅನುಸರಿಸಬೇಕು. ಒಬ್ಬಿಬ್ಬರು ಒಳ್ಳೆಯ ಕುಟುಂಬ ವೈದ್ಯರನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಇಡೀ ಕುಟುಂಬದ ಆರೋಗ್ಯ ನಿರ್ವಹಣೆಯನ್ನು ಅವರ ಹೊಣೆಗಾರಿಕೆಗೆ ಬಿಡಬೇಕು. ಇಂತಹ ವೈದ್ಯರನ್ನು ಸಂಪರ್ಕಿಸಿ ತಮ್ಮ ಕುಟುಂಬದಲ್ಲಿ ಪ್ರಚಲಿತವಿರುವ ಆರೋಗ್ಯ ಸಮಸ್ಯೆಗಳನ್ನು ಅವರಲ್ಲಿ ಚರ್ಚಿಸಿ ಅವುಗಳನ್ನು ನಿಯಂತ್ರಿಸುವ ಯಾ ಬಾರದಂತೆ ತಡೆಯುವ ಮಾರ್ಗಗಳ ಬಗ್ಗೆ ಮಾಹಿತಿ ಪಡೆಯಬೇಕು. ವಾರ್ಷಿಕವಾಗಿ ವೈದ್ಯರ ಸಲಹೆ ಪಡೆದು ಅವಶ್ಯಕ ಎನಿಸಿದ ಕೆಲವೇ ಪರೀಕ್ಷೆಗಳನ್ನು ಮಾತ್ರ ಮಾಡಿಸಬೇಕು. ಕಾರ್ಪೋರೆಟ್ ಆಸ್ಪತ್ರೆಗಳ “ಮಾಸ್ಟರ್ ಚೆಕಪ್” ಎಂಬ ಜಾಹೀರಾತುಗಳಿಗೆ ಬಲಿ ಬೀಳುವ ಅವಶ್ಯಕತೆ ಇಲ್ಲ! ತೀರಾ ಅಗತ್ಯ ಬಿದ್ದಾಗ ಮಾತ್ರ ತಮ್ಮ ಕುಟುಂಬ ವೈದ್ಯರು ಸೂಚಿಸುವ ತಜ್ಞ ವೈದ್ಯರ ಸಲಹೆ ಪಡೆದರೆ ಸಾಕು. 

೨. ವಿಮಾ ತಜ್ಞರ ಸಲಹೆ ಪಡೆದು ಒಂದು ಒಳ್ಳೆಯ ಆರೋಗ್ಯ ವಿಮೆಯನ್ನು ಇಡೀ ಕುಟುಂಬಕ್ಕೆ ಅನ್ವಯವಾಗುವಂತೆ ಪಡೆಯಬೇಕು. ವಯಸ್ಸಿನ, ಆರೋಗ್ಯ ಪರಿಸ್ಥಿತಿಯ ಅನುಗುಣವಾಗಿ ಆ ವಿಮೆಯ ಮೊತ್ತವನ್ನು ಹೆಚ್ಚಿಸುತ್ತಾ ಹೋಗಬೇಕು. ಸಾಮಾನ್ಯವಾಗಿ ಕೆಲವು ವರ್ಷಗಳ ಕಾಲ ಸತತವಾಗಿ ವಿಮೆ ಪಡೆದರೆ ಸರಿಸುಮಾರು ಎಲ್ಲಾ ಕಾಯಿಲೆಗಳೂ ವಿಮೆಯ ಅಡಿಯಲ್ಲಿ ಬರುತ್ತವೆ. ಕಾಯಿಲೆ ಬರುವ ಮುನ್ನವೇ ಈ ವಿಮೆಯ ರಕ್ಷಣೆ ಪಡೆಯುವುದೇ ಸೂಕ್ತ. ಒಮ್ಮೆ ಕಾಯಿಲೆ ಆವರಿಸಿದರೆ ಆನಂತರ ಪಡೆಯುವ ವಿಮೆ ಅನೂರ್ಜಿತವಾಗಬಹುದು. ವಿಮೆಯ ಮೊತ್ತವನ್ನು ತಮ್ಮ ವೈದ್ಯರ ಬಳಿ ಚರ್ಚಿಸಬಹುದು.

೩. ಕಾಯಿಲೆ ಬಾರದ ಮನುಷ್ಯರೇ ಇಲ್ಲ. ವೃದ್ಧಾಪ್ಯದ ಕೆಲವು ಕಾಯಿಲೆಗಳು ಅನುವಂಶೀಯವಾಗಿ ಬಂದರೆ ಇನ್ನು ಕೆಲವು ಪರಿಸ್ಥಿತಿಯ ಪ್ರಭಾವದಿಂದ ಬರುತ್ತವೆ. ಹೀಗೆ ಬಂದ ಕಾಯಿಲೆಗಳಿಂದ ದಿಕ್ಕೆಡಬಾರದು. ಕಾಯಿಲೆಗಳ ನಿಯಂತ್ರಣಕ್ಕೆ ಈಗ ಬಹಳ ಉತ್ತಮ ಮಾರ್ಗಗಳಿವೆ. ವೈದ್ಯರ ಸಲಹೆ ಪಡೆದು ಈ ಮಾರ್ಗಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಕೆಲವೇ ಕೆಲವು ಕಾಯಿಲೆಗಳನ್ನು ಹೊರತುಪಡಿಸಿ ಎಲ್ಲಾ ಕಾಯಿಲೆಗಳ ನಿಯಂತ್ರಣವೂ ಸಾಧ್ಯ. ಕಾಯಿಲೆಯ ಜೊತೆ ಸುಖವಾಗಿ ಬದುಕಿದ ಜನರ ಸಾವಿರಾರು ಉದಾಹರಣೆಗಳು ಸಿಗುತ್ತಲೇ ಇರುತ್ತವೆ.

೪. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಮುಖ್ಯ. ಒಂದು ಸಮಾನ ಅಭಿರುಚಿಯ ಗೆಳೆಯರ ಬಳಗ ಇರಬೇಕು. ಯಾವುದಾದರೂ ಒಂದು ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಮನೆಮಂದಿಯ ಜೊತೆ ಆಗಾಗ ಕಾಲಕಳೆಯುವುದು ಕೂಡ ಮಾನಸಿಕ ಆರೋಗ್ಯ ಉತ್ತಮಗೊಳ್ಳುವ ವಿಧಾನ. ಇದರೊಂದಿಗೆ ಸಾಕಷ್ಟು ನಿದ್ರೆ, ನಶೆಯಿಂದ ದೂರ ಉಳಿಯುವಿಕೆ ಕೂಡ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.

೫. ಬದಲಾವಣೆ ಜಗದ ನಿಯಮ. ಬದಲಾಗುವ ಜೀವನಶೈಲಿ, ವಸ್ತುಸ್ಥಿತಿಗೆ ಹೊಂದಿಕೊಳ್ಳಲೇ ಬೇಕು. ವೃದ್ಧಾಪ್ಯಕ್ಕೆ ಸರಿಹೊಂದುವ ಹಣಕಾಸು ವ್ಯವಸ್ಥೆಯನ್ನು ಹಲವಾರು ವರ್ಷಗಳ ನಿಯಮಿತ ಉಳಿತಾಯದಿಂದ ಮಾಡಿಕೊಳ್ಳಬೇಕು. ಇದಕ್ಕೆ ಆರ್ಥಿಕ ತಜ್ಞರ ಸಲಹೆ ಪಡೆಯಬಹುದು. ವೃದ್ಧಾಪ್ಯದಲ್ಲಿ ಒಳ್ಳೆಯ ಆರ್ಥಿಕ ಬೆಂಬಲ ಇದ್ದರೆ ಹಲವಾರು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಯಾರ ಮೇಲೂ ಆರ್ಥಿಕ ಅವಲಂಬನೆ ಇಲ್ಲದೆ ಬದುಕುವ ವಿಧಾನವೇ ಅತ್ಯಂತ ಸೂಕ್ತ.

ಈ ವಿಷಯವಾಗಿ ಸರ್ಕಾರ ಏನು ಮಾಡಬೇಕು? ನಾವು ಆಶಿಸಬಹುದೇ ವಿನಃ ನಂಬುವಂತಿಲ್ಲ! ಆದರೂ ಪರಿಗಣನೆಗೆ ಈ ಸಲಹೆಗಳಿವೆ.

೧. ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ತಜ್ಞ ವೈದ್ಯ ವ್ಯಾಸಂಗವನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಇಂತಹ ತಜ್ಞರಿಗೆ ನಗರಗಳ, ಜಿಲ್ಲೆಗಳ ಮುಖ್ಯ ಆಸ್ಪತ್ರೆಗಳಲ್ಲಿ ವಿಭಾಗಗಳನ್ನು ಸೃಜಿಸಬೇಕು. ಈ ವ್ಯವಸ್ಥೆ ಸದ್ಯಕ್ಕೆ ಸರಕಾರೀ ಆಸ್ಪತ್ರೆಗಳಲ್ಲಿ ಇಲ್ಲ.

೨. ವೃದ್ಧರಿಗೆ ಸಹಾಯವಾಗುವಂತೆ ಆಸ್ಪತ್ರೆಗಳ ವಿನ್ಯಾಸವನ್ನು ಬದಲಿಸಬೇಕು. ಸಣ್ಣ ಎತ್ತರದ ಅಗಲ ಮೆಟ್ಟಿಲುಗಳು, ಜಾರದಂತಹ ನೆಲಹಾಸು, ಸಣ್ಣ ಕೋನದ ಇಳಿಜಾರು, ಲಿಫ್ಟ್ ವ್ಯವಸ್ಥೆ, ನೆಲಮಹಡಿಯಲ್ಲೇ ವೃದ್ಧರ ಎಲ್ಲಾ ಆರೋಗ್ಯ ವಿಭಾಗಗಳು ಇರಬೇಕು.

೩. ವೃದ್ಧರಿಗೆ ಆರೋಗ್ಯ ವಿಮೆಯ ಸೌಲಭ್ಯವನ್ನು ವಿಸ್ತರಿಸಬೇಕು. ತಮ್ಮ ಜೀವನದುದ್ದಕ್ಕೂ ಈ ವೃದ್ಧರು ಸರ್ಕಾರಕ್ಕೆ ನಾನಾ ತೆರಿಗೆಗಳನ್ನು ಕಟ್ಟಿದ್ದಾರೆ ಎಂಬ ಋಣಭಾವನೆ ಸರ್ಕಾರಕ್ಕೆ ಇರಬೇಕು. ಇದಕ್ಕೆ ಪ್ರತಿಯಾಗಿ ಕನಿಷ್ಠ ವೃದ್ಧರ ಆರೋಗ್ಯವನ್ನಾದರೂ ಸರ್ಕಾರ ಕಾಯಬೇಕು.

೪. ಮಕ್ಕಳ ಸಹಕಾರ ಇಲ್ಲದ ವೃದ್ಧರ ಆರೋಗ್ಯ ಸಂರಕ್ಷಣೆಗೆ ಅಲ್ಲಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳ ಮೂಲಕ ವೃದ್ಧರ ಮನೆಬಾಗಿಲಿಗೆ ದಾಯಿಯರನ್ನೋ, ಆರೋಗ್ಯ ಸಹಾಯಕರನ್ನೋ ಕಳಿಸುವ ವ್ಯವಸ್ಥೆ ಮಾಡಬೇಕು.

೫. ವೃದ್ಧರಿಗೆ ತೀರಾ ಅವಶ್ಯಕವಾದ ಔಷಧಗಳನ್ನು ರಿಯಾಯತಿ ದರದಲ್ಲಿ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕು.

೬. ನಡುವಯಸ್ಸಿನವರಿಗೆ ವೃದ್ಧಾಪ್ಯದ ಆರೋಗ್ಯ ರಕ್ಷಣೆಯ ವಿಷಯವಾಗಿ ಜಾಗೃತಿ ಮೂಡಿಸಿ, ಅದಕ್ಕೆ ಸರ್ಕಾರದ ಕಡೆಯಿಂದ ವಿಮೆಯ ಸೌಲಭ್ಯ ಒದಗಿಸಬೇಕು. ಸರ್ಕಾರಗಳು ಬದಲಾದಂತೆ ಈ ಸೌಲಭ್ಯಗಳು ಬದಲಾಗದಂತೆ ಸ್ವಾಯತ್ತ ಸಂಸ್ಥೆಯ ಅಧೀನದಲ್ಲಿ ಈ ಸೌಲಭ್ಯವನ್ನು ಇಟ್ಟು ಅದರ ಕಾರ್ಯ ಕೆಡದಂತೆ ಎಚ್ಚರ ವಹಿಸಬೇಕು. 

ವೃದ್ಧಾಪ್ಯ ಜೀವನದ ಅನಿವಾರ್ಯತೆ. ಅದನ್ನು ಸಹನೀಯವಾಗಿಸಿ ಆನಂದಿಸುವುದು ಬದುಕಿನ ಮೂಲ ಧ್ಯೇಯಗಳಲ್ಲಿ ಒಂದು. ಅದು ವ್ಯಕ್ತಿಯ ದೃಷ್ಟಿಯಿಂದಲೂ, ಸಮಷ್ಟಿಯ ದೃಷ್ಟಿಯಿಂದಲೂ ಬಹಳ ಮುಖ್ಯ.

1 ಕಾಮೆಂಟ್‌: