ಸೋಮವಾರ, ಮಾರ್ಚ್ 11, 2019


 #ಚುನಾವಣೆಯ_ಇತಿಹಾಸದ_ಪಾಠಗಳು

ಪಾಠ ೨: ನಮ್ಮ ವೋಟು ತಲುಪುವುದು ರಾಜಕೀಯ ಪಕ್ಷಕ್ಕೆ; ಕೇವಲ ಅಭ್ಯರ್ಥಿಗೆ ಮಾತ್ರ ಅಲ್ಲ!

“ನಾವು ಯಾರಿಗೆ ವೋಟು ಹಾಕಬೇಕು?” ಎಂಬ ಜಿಜ್ಞಾಸೆ ಕಾಡಿದಾಗಲೆಲ್ಲಾ “ಯಾವುದೇ ರಾಜಕೀಯ ಪಕ್ಷದವರಾದರೂ ಸರಿ; ಕೇವಲ ಒಳ್ಳೆಯ ಅಭ್ಯರ್ಥಿಯನ್ನು ಚುನಾಯಿಸಿ” ಎಂಬ ಸಲಹೆಗಳು ನೆನಪಾಗುತ್ತವೆ. ಆದರೆ ಆ ಒಳ್ಳೆಯ ಅಭ್ಯರ್ಥಿಗೆ ಒಳ್ಳೆಯದನ್ನು ಮಾಡುವ ಸ್ವಾತಂತ್ರ್ಯ ಇದೆಯೇ?
ಪಕ್ಷೇತರ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸುವ ಕಾಲ ಪ್ರಾಯಶಃ ನಮ್ಮ ದೇಶದಲ್ಲಿ ಕೊನೆಗೊಂಡಿದೆ! ವಿಧಾನಸಭೆಯಲ್ಲಿ ಮೇಜಿನ ಮೇಲೆ ಜಿಗಿಯುತ್ತಾ ಅಂಗಿ ಹರಿದುಕೊಂಡು ಚೀರಾಡಿದ ಪಕ್ಷೇತರ ಶಾಸಕರು ಮತದಾರನ ನೆನಪಿನಿಂದ ಮರೆಯಾಗಲಾರರು! ಈಗ ಉಳಿದಿರುವುದು ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಚುನಾಯಿಸುವ ಆಯ್ಕೆ ಮಾತ್ರ.

ವೈಯಕ್ತಿಕವಾಗಿ ಅಭ್ಯರ್ಥಿಗಳು ಎಷ್ಟೇ ಒಳ್ಳೆಯವರೂ, ಸಮರ್ಥರೂ ಆಗಿದ್ದರೂ ಕಡೆಗೆ ಅವರು ಆಯಾ ರಾಜಕೀಯ ಪಕ್ಷಗಳ ಮುಖಂಡರ ಆಣತಿ ಪಾಲಿಸಲೇಬೇಕು. ಇಲ್ಲಿ ಅವರಿಗೆ “ಸರಿ-ತಪ್ಪು”ಗಳ ಆಯ್ಕೆ ಇಲ್ಲ! ಈಗ ಶಾಸನಸಭೆಯಲ್ಲಿ ಯಾವುದೋ ಒಂದು ಶಾಸನ ಮಂಡಿಸಿದ್ದಾರೆ ಎನ್ನೋಣ. ಆ ಶಾಸನ ಬಹಳ ಒಳ್ಳೆಯದೆಂದೂ, ಅದರಿಂದ ಪ್ರಜೆಗಳಿಗೆ ಪ್ರಯೋಜನವಾಗುವುದೆಂದೂ ಆ ಒಳ್ಳೆಯ ಅಭ್ಯರ್ಥಿಗೆ ವೈಯಕ್ತಿಕವಾಗಿ ಗೊತ್ತು. ಆದರೆ, ಆತ ಪ್ರತಿನಿಧಿಸುವ ರಾಜಕೀಯ ಪಕ್ಷ ಈ ಶಾಸನಕ್ಕೆ ವಿರೋಧಿ. ಆ ಪಕ್ಷದ “ಹೈ-ಕಮಾಂಡ್”ನಿಂದ “ಆ ಶಾಸನವನ್ನು ವಿರೋಧಿಸಬೇಕು” ಎಂಬ ಆಣತಿ ಬರುತ್ತದೆ; ವಿಪ್ ಜಾರಿಯಾಗುತ್ತದೆ. ಆ ಆಣತಿಗೆ ಎದುರು ಮಾತಿಲ್ಲ; ಸಲಹೆ / ಚರ್ಚೆ ಇಲ್ಲ. ತನ್ನ ವೈಯಕ್ತಿಕ ಅಭಿಪ್ರಾಯ ಏನೇ ಆದರೂ ಪಕ್ಷದ ನಿಲುವನ್ನು ಬೆಂಬಲಿಸುವುದೊಂದೇ ಪರ್ಯಾಯ. ಅಭ್ಯರ್ಥಿಯ ಒಳ್ಳೆಯತನ ಇಲ್ಲಿ ಕೆಲಸಕ್ಕೆ ಬಾರದು.

ಇಂತಹ ಪರಿಸ್ಥಿತಿಯಲ್ಲಿ ಮತದಾರರ ಆಯ್ಕೆಗಳು ಏನಾಗಿರಬೇಕು? ನಮ್ಮ ಲೋಕಲ್ ಅಭ್ಯರ್ಥಿ ಎಷ್ಟೇ ಸಮರ್ಥನಿದ್ದರೂ ಆತ ತನ್ನ ರಾಜಕೀಯ ಪಕ್ಷದ ಅಡಿಯಾಳು ಮಾತ್ರ. ಅಂತಹ ಆಡಳಿತ ಪಕ್ಷದ “ಹೈ-ಕಮಾಂಡ್” ಎಷ್ಟು ಸಮರ್ಥವೋ ನಮ್ಮ ಅಭ್ಯರ್ಥಿ ಕೂಡ ಅಷ್ಟೇ. ಅಂದರೆ, ನಾವು ಒಂದು ಅಭ್ಯರ್ಥಿಯ ರೂಪದಲ್ಲಿ ನಿಜವಾಗಿ ವೋಟು ಹಾಕುತ್ತಿರುವುದು ಆಯಾ ಪಕ್ಷದ ಮುಖಂಡರಿಗೆ! ನಮ್ಮ ಪ್ರತೀ ವೋಟು ಒಂದು ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಿಂತ ಹೆಚ್ಚಾಗಿ ಆಯಾ ರಾಜಕೀಯ ಪಕ್ಷದ ನಾಯಕರನ್ನು ಬಲಗೊಳಿಸುತ್ತದೆ. ಪುರಸಭೆ – ನಗರಸಭೆ ಚುನಾವಣೆಗಳಲ್ಲಿ ಕೂಡ ಇದು ಸತ್ಯ. ಚುನಾವಣೆಯ ವ್ಯಾಪ್ತಿ ಹೆಚ್ಚಾದಷ್ಟೂ ಈ ಸಂಗತಿಯ ಬಲ ಅಧಿಕ. ಅಂದರೆ, ಲೋಕಸಭೆಯ ಚುನಾವಣೆಯಲ್ಲಿ ಇದು ಪರಮಸತ್ಯ.

“ಒಳ್ಳೆಯ ಅಭ್ಯರ್ಥಿ”ಯನ್ನು ನಾವು ಚುನಾಯಿಸುವುದಕ್ಕಿಂತ “ಒಳ್ಳೆಯ ಅಭ್ಯರ್ಥಿ”ಯನ್ನು ಕಣಕ್ಕೆ ಇಳಿಸುವ ಜವಾಬ್ದಾರಿ ರಾಜಕೀಯ ಪಕ್ಷಗಳ ಮೇಲಿದೆ. ತೀರಾ ಗೂಂಡಾ ಹಿನ್ನೆಲೆಯ, ಸಮಾಜ ಕಂಟಕ ಕಾರ್ಯಗಳಲ್ಲಿ ಭಾಗಿಯಾದವರನ್ನು ಚುನಾವಣೆಯಲ್ಲಿ ಸೋಲಿಸುವುದು ಕೂಡ ಮತದಾರರ ಕರ್ತವ್ಯ. ಅದು ಆ ವ್ಯಕ್ತಿಯ ಸೋಲು ಮಾತ್ರವಲ್ಲ; ಆತನಿಗೆ ತನ್ನ ಪಕ್ಷದ ಟಿಕೆಟ್ ನೀಡಿದ ರಾಜಕೀಯ ಪಕ್ಷಕ್ಕೆ ಮತದಾರ ನೀಡಿದ ಪ್ರಹಾರ. ಇಂತಹ ಸಂದರ್ಭದಲ್ಲಿ ಮತದಾರರ ಆಯ್ಕೆ ಸುಲಭ!
ಒಂದು ವೇಳೆ ಚುನಾವಣೆಗೆ ನಿಂತ ಅಭ್ಯರ್ಥಿಗಳು ತಕ್ಕ ಮಟ್ಟಿಗೆ ಗೌರವಸ್ಥರು ಎನ್ನೋಣ. ಆಗ ನಮ್ಮ ಆಯ್ಕೆ ಕೇವಲ ಅಭ್ಯರ್ಥಿ ಮಾತ್ರವಲ್ಲ. ಈ ಚುನಾವಣೆಯಲ್ಲಿ ನಮ್ಮ ಮತ ಪರೋಕ್ಷವಾಗಿ ರಾಹುಲ / ಸೋನಿಯಾರವರಿಗೋ, ದೇವೇಗೌಡರಿಗೋ, ಮುಲಾಯಂ ಯಾದವರಿಗೋ, ನರೇಂದ್ರ ಮೋದಿ ಅವರಿಗೋ ಎನ್ನುವ ಜಿಜ್ಞಾಸೆ ಕೂಡ ಮತದಾರರಿಗೆ ಇರಬೇಕಾದ್ದೇ.

ಈ ಚುನಾವಣೆಯಲ್ಲಿ ನಿಮ್ಮ ಅಭ್ಯರ್ಥಿ ತೀರಾ ಅಯೋಗ್ಯನಾಗಿದ್ದರೆ ಯಾವ ಮುಲಾಜೂ ಇಲ್ಲದೆ ಅವರನ್ನು ತಿರಸ್ಕರಿಸಿರಿ. ಆದರೆ, ಕೇವಲ ಅಭ್ಯರ್ಥಿಯ ವೈಯಕ್ತಿಕ ಯೋಗ್ಯತೆಗೆ ಮಾತ್ರ ಸಂಪೂರ್ಣ ಅಂಕ ನೀಡಬೇಡಿ! “ಕೇಂದ್ರದಲ್ಲಿ ನೀವು ಯಾರನ್ನು ಪ್ರಧಾನ ಮಂತ್ರಿಯನ್ನಾಗಿ ನೋಡಬೇಕು ಎಂದು ಬಯಸುತ್ತೀರಿ” ಎಂಬ ಪ್ರಶ್ನೆಗೆ ಯಾವ ಉತ್ತರ ಬರುತ್ತದೋ ಅದು ನಿಮ್ಮ ವೋಟಿನ ನಿರ್ಧಾರಕ್ಕೆ ತಳಹದಿ ಆಗಿರಲಿ. ಅಂತಿಮವಾಗಿ ದೇಶಕ್ಕೆ ಯಾವುದು ಹಿತ ಎಂಬುದೇ ನಮ್ಮಂತಹ ಪ್ರಜೆಗಳಿಗೆ ಮುಖ್ಯ. ಆ ಹಿತಕ್ಕೆ ಸಮೀಪವಾಗಿರುವ ಪಕ್ಷದ ಅಭ್ಯರ್ಥಿಗೆ ನಿಮ್ಮ ಮತ ಇರಲಿ. ಏನಾದರೂ ಸರಿಯೇ – ದಯವಿಟ್ಟು ಮತ ಚಲಾಯಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ