ಗುರುವಾರ, ಮಾರ್ಚ್ 14, 2019


#ಚುನಾವಣೆಯ_ಇತಿಹಾಸದ_ಪಾಠಗಳು

ಪಾಠ ೩: ನೋಟಾ (NOTA) ಎಂಬ ಹಲ್ಲು ಕಿತ್ತ ಹಾವು!

೨೦೧೩ ನೆಯ ವರ್ಷದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಚುನಾವಣಾ ಆಯೋಗ ನೋಟಾ (NOTA – None Of The Above) ಎಂಬ ಆಯ್ಕೆಯನ್ನು ಮತದಾರರಿಗೆ ನೀಡಿತು. “ನನ್ನ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಯಾವುದೇ ಸ್ಪರ್ಧಿಯೂ ತನ್ನ ವೋಟಿಗೆ ಅರ್ಹನಲ್ಲ” ಎಂದು ಭಾವಿಸುವವರಿಗೆ ಕೂಡ ಒಂದು ಆಯ್ಕೆ ಇರಬೇಕು; ಅಂತಹ ಭಾವನೆ ಉಳ್ಳವರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯದೇ ಅಂತಹವರು ತಮ್ಮ ಅಸಮ್ಮತಿಯನ್ನಾದರೂ ವ್ಯಕ್ತಪಡಿಸುವ ಆಯ್ಕೆ ನೀಡಬೇಕು ಎನ್ನುವ ಕಾರಣಕ್ಕೆ ಬಂದದ್ದು ನೋಟಾ ವ್ಯವಸ್ಥೆ.

ಚುನಾವಣೆ, ಭ್ರಷ್ಟ ರಾಜಕಾರಣ, ಕೆಟ್ಟ ವ್ಯವಸ್ಥೆಯ ವಿರುದ್ಧ ಪ್ರಜೆಗಳು ದನಿ ಎತ್ತಲು ಇದು ಬಹಳ ಉತ್ತಮ ವಿಧಾನ ಎಂದು ಮೇಲ್ನೋಟಕ್ಕೆಅನಿಸಬಹುದು. ಆದರೆ, ಈ ವ್ಯವಸ್ಥೆಯನ್ನು ೨೦೦೯ರಲ್ಲಿ ಪ್ರತಿಪಾದಿಸಿದಾಗ ಇದನ್ನು ಯಾವ ರಾಜಕೀಯ ಪಕ್ಷವೂ ಬೆಂಬಲಿಸಲಿಲ್ಲ. ಕಡೆಗೆ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿ ೨೦೧೩ ರಲ್ಲಿ ಇದನ್ನು ಜಾರಿಗೆ ತಂದದ್ದಾಯಿತು. ಅಷ್ಟರಲ್ಲಿ “ಈ ವ್ಯವಸ್ಥೆಯನ್ನು ಹೇಗೆ ನಿರ್ವೀರ್ಯಗೊಳಿಸಬೇಕು?” ಎಂದು ರಾಜಕೀಯ ಪಕ್ಷಗಳು ಲೆಕ್ಕಾಚಾರ ಮಾಡಿದ್ದವು. ಅದರ ಪರಿಣಾಮವೇ “ನೋಟಾ ಎಂಬ ಹಲ್ಲು ಕಿತ್ತ ಹಾವು”!

ಈ ನೋಟಾ ವ್ಯವಸ್ಥೆಯಿಂದ ನಾವು ರಾಜಕಾರಣಿಗಳಿಗೆ ಏನು ಪಾಠ ಕಲಿಸಬಹುದು? ಉತ್ತರ: ಏನೂ ಇಲ್ಲ! ಏಕೆಂದರೆ, ನೋಟಾ ವೋಟುಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ವ್ಯವಸ್ಥೆಯನ್ನು ಭದ್ರಪಡಿಸಲಾಗಿದೆ! ಹಿಂದೆ ಮುದ್ರಿತ ಕಾಗದದ ಮೇಲೆ ಮತ ಒತ್ತುವ ವ್ಯವಸ್ಥೆ ಇದ್ದಾಗ ಕೆಲವರು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿಗೆ ಸೀಲು ಒತ್ತುತ್ತಿದ್ದರು. ಇಂತಹ ಮತಗಳನ್ನು “ಕುಲಗೆಟ್ಟ ಮತಗಳು” ಎಂದು ಎಣಿಸಿ ಅದನ್ನು ಗಣನೆಯಿಂದ ಹೊರಗೆ ಇಡುತ್ತಿದ್ದರು. ಈಗ ಉಪಯೋಗಿಸುವ ವಿದ್ಯುನ್ಮಾನ ಮತಯಂತ್ರಗಳಲ್ಲಿ ಒಂದು ಬಾರಿ ಗುಂಡಿ ಒತ್ತಿದರೆ ವೋಟು ಅಂಗೀಕಾರವಾದಂತೆ. ಎರಡನೇ ಬಾರಿ ಒತ್ತಿದರೆ ಅದು ಗಣನೆಗೂ ಬಾರದು. ಆದ್ದರಿಂದ ವಿದ್ಯುನ್ಮಾನ ಮತಯಂತ್ರಗಳಲ್ಲಿ ಕುಲಗೆಟ್ಟ ಮತಗಳು ಬರುವುದಿಲ್ಲ. ಆದರೆ ಈಗ ಈ ನೋಟಾ ವೋಟುಗಳನ್ನು “ಕುಲಗೆಟ್ಟ ಮತಗಳು” ರೀತಿಯಲ್ಲಿ ಎಣಿಸಲಾಗುತ್ತಿದೆ! ಅಂದರೆ ನಾವು ನೋಟಾ ಒತ್ತಿದರೆ ಅದು ಕುಲಗೆಟ್ಟ ಮತಕ್ಕೆ ಸಮಾನ!

ಒಂದು ಉದಾಹರಣೆಯಿಂದ ಇದನ್ನು ಸ್ಪಷ್ಟಪಡಿಸಬಹುದು: ಈಗ ಲೋಕ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿ ರೂ. ೨೫,೦೦೦/- ಠೇವಣೆಯನ್ನು ಚುನಾವಣಾ ಆಯೋಗಕ್ಕೆ ನೀಡಬೇಕು. ಯಾವ ಸ್ಪರ್ಧಿಗೆ ೧೬.೬೭ ಪ್ರತಿಶತ ವೋಟು ಬರುವುದಿಲ್ಲವೋ ಅವರು ಈ ಮೊತ್ತವನ್ನು ಕಳೆದುಕೊಳ್ಳುತ್ತಾರೆ. ಅಂದರೆ, ಒಟ್ಟು ಒಂದು ಲಕ್ಷ ಮಂದಿ ವೋಟು ಹಾಕಿದ್ದರೆ ಠೇವಣೆ ವಾಪಸ್ ಬರಲು ಕನಿಷ್ಠ ೧೬೬೬೭ ವೋಟುಗಳನ್ನಾದರೂ ಪಡೆಯಬೇಕು. ಮುದ್ರಿತ ಕಾಗದದ ಮೇಲೆ ವೋಟು ಹಾಕುವ ಪದ್ಧತಿ ಇದ್ದಾಗ ಒಂದು ಲಕ್ಷ ವೋಟುಗಳಲ್ಲಿ ೨೦೦೦ ವೋಟು ಕುಲಗೆಟ್ಟಿವೆ ಎಂದಾದಲ್ಲಿ “ಚಲಾವಣೆ ಆಗಿರುವ ವೋಟುಗಳು ೯೮೦೦೦ ಮಾತ್ರ” ಎಂದು ಎಣಿಸಿ ೧೬೩೩೪ ವೋಟು ಬಂದರೂ ಠೇವಣೆ ವಾಪಸ್ ಮಾಡುತ್ತಿದ್ದರು. ಈಗ ಅದೇ ಒಂದು ಲಕ್ಷ ವೋಟುಗಳಲ್ಲಿ ೫೦೦೦ ವೋಟುಗಳು “ನೋಟಾ” ಎಂದು ಭಾವಿಸಿ. ಈಗ “ಚಲಾವಣೆ ಆಗಿರುವ ವೋಟುಗಳು ೯೫೦೦೦ ಮಾತ್ರ” ಎಂದು ಲೆಕ್ಕ ಹಾಕುತ್ತಾರೆ. ಅಂತೆಯೇ ೧೫೮೩೪ ವೋಟು ಬಂದರೂ ಅಂತಹವರ ಠೇವಣೆ ವಾಪಸ್ ಆಗುತ್ತದೆ! ಅಂದರೆ, ನಾವು “ನೋಟಾ” ಒತ್ತಿದರೆ ನಮ್ಮ ಕೈಯಾರ ನಮ್ಮ ವೋಟನ್ನು “ಕುಲಗೆಟ್ಟ ಮತ” ಎಂದು ಘೋಷಿಸಿದಂತೆ! ಸ್ಪರ್ಧಿಯ ಅರ್ಹತೆಯನ್ನು ಅಂತಿರಲಿ; ಅವರ ಠೇವಣೆಯನ್ನು ಕೂಡ ಇದರಿಂದ ನಾವು ಕಳೆಯಲಾರೆವು. ಇದು ನಾವು ಸ್ಪರ್ಧಿಯನ್ನು ತಿರಸ್ಕರಿಸಿದಂತೆ ಅಲ್ಲ; ಸ್ಪರ್ಧಿಗಳೇ ನಮ್ಮನ್ನು ತಿರಸ್ಕರಿಸಿದಂತೆ! ಒಂದು ರೀತಿಯಲ್ಲಿ ಆಕಾಶಕ್ಕೆ ಉಗಿದು ನಮ್ಮ ಮುಖದ ಮೇಲೆ ಅದನ್ನು ಚೆಲ್ಲಿಕೊಂಡಂತೆ!

ಒಂದು ವೇಳೆ ನೋಟಾ ಮತಗಳೇ ಅತ್ಯಧಿಕ ಸಂಖ್ಯೆಯಲ್ಲಿ ಚಲಾವಣೆ ಆದರೆ? ರಾಜಕಾರಣಿಗಳಿಗೆ ಅದರ ಚಿಂತೆಯೂ ಇಲ್ಲ! ಅಂತಹ ಸಂದರ್ಭದಲ್ಲಿ ಎರಡನೇ ಸ್ಥಾನ ಪಡೆದ ಅಭ್ಯರ್ಥಿಯೇ ವಿಜಯಿ! ಏಕೆಂದರೆ ನೋಟಾ ಮತಗಳನ್ನು “ಕುಲಗೆಟ್ಟ ಮತ” ಎಂದೆ ಪರಿಗಣಿಸಲಾಗುತ್ತದೆ. ಒಂದು ಲಕ್ಷ ಮತಗಳ ಪೈಕಿ ೫೫೦೦೦ ಮತಗಳು ನೋಟಾ ಆದರೂ “ಚಲಾವಣೆ ಆದ ಒಟ್ಟು ಮತಗಳು ೪೫೦೦೦” ಎಂದು ಲೆಕ್ಕ ಹಾಕಿ ಅದರಲ್ಲಿ ವಿಜಯಿಯನ್ನು ಘೋಷಿಸಲಾಗುತ್ತದೆ!

ಸದ್ಯದ ಪರಿಸ್ಥಿತಿಯಲ್ಲಿ ನೋಟಾ ಮತಗಳಿಗೆ ಯಾವ ಕಿಮ್ಮತ್ತೂ ಇಲ್ಲದಂತೆ ನಮ್ಮ ರಾಜಕೀಯ ಪಕ್ಷಗಳು ವ್ಯವಸ್ಥೆ ಮಾಡಿವೆ. ನೋಟಾ ಒತ್ತುವುದರಲ್ಲಿ ಇರುವ ಒಂದೇ ಲಾಭ ಎಂದರೆ ನಮ್ಮ ಮತವನ್ನು ನಾವೇ ಚಲಾವಣೆ ಮಾಡಿರುತ್ತೇವೆ! ನಮ್ಮ ಬದಲಿಗೆ ನಮ್ಮ ಮತವನ್ನು ಮೋಸದಿಂದ ಇನ್ಯಾವನೋ ಚಲಾವಣೆ ಮಾಡದಂತೆ ತಡೆಯುತ್ತೇವೆ. ಆದರೆ, ಅದೇ ಸಮಯಕ್ಕೆ ನಮ್ಮ ಮತವನ್ನು ಕುಲಗೆಡಿಸಿರುತ್ತೇವೆ ಕೂಡ!

ಒಟ್ಟಾರೆ, ನೋಟಾದಿಂದ ಈಗ ಸದ್ಯಕ್ಕೆ ಯಾವ ಬದಲಾವಣೆಯೂ ಸಾಧ್ಯವಿಲ್ಲ. “ಯಾವ ಅಭ್ಯರ್ಥಿಯೂ ಸರಿಯಿಲ್ಲ” ಎಂದು ಅನಿಸಿದಾಗ ನೋಟಾ ಒತ್ತುವ ಬದಲಿಗೆ ಕನಿಷ್ಠ “ನಮ್ಮ ದೇಶಕ್ಕೆ ಯಾರು ಪ್ರಧಾನಿ ಆದರೆ ಕ್ಷೇಮ?” ಎಂದು ಪ್ರಶ್ನಿಸಿಕೊಳ್ಳಬೇಕು. ಆ ಪ್ರಶ್ನೆಗೆ ನಮ್ಮ ಬುದ್ಧಿ ಯಾವ ಉತ್ತರ ಹೇಳುತ್ತದೋ ಆ ಪಕ್ಷದ ಅಭ್ಯರ್ಥಿಗೆ ವೋಟು ಹಾಕಬೇಕು. ಇದೊಂದೇ ದಾರಿ; ಇದೊಂದೇ ಸರಿಯಾದ ದಾರಿ ಕೂಡ! ಪರೋಕ್ಷವಾಗಿ ನಮ್ಮ ಪ್ರಧಾನಿಯನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕೋ ಅಥವಾ ಪ್ರತ್ಯಕ್ಷವಾಗಿ ಆಕಾಶಕ್ಕೆ ಉಗಿದು ನಮ್ಮ ಮುಖವನ್ನು ನಾವೇ ಹೊಲಸು ಮಾಡಿಕೊಳ್ಳಬೇಕೋ ಎಂಬುದು ನಮಗಿರುವ ಆಯ್ಕೆಗಳು! ನಿರ್ಧಾರಗಳು, ಒಲವುಗಳು ಏನಾದರೂ ಸರಿಯೇ – ದಯವಿಟ್ಟು ತಪ್ಪದೇ ಮತ ಚಲಾಯಿಸಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ