ಮಂಗಳವಾರ, ಏಪ್ರಿಲ್ 9, 2024

 


ಕಣ್ಣಿನ ಗಣಿತ - ಭಾಗ 1

 ಡಾ. ಕಿರಣ್ ವಿ.ಎಸ್.

ವೈದ್ಯರು

 ನಮ್ಮ ದೇಹದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ವಿಕಾಸವಾಗಿರುವ ಅಂಗ ಕಣ್ಣು. ಈ ಪ್ರಮಾಣದ ಸಂಕೀರ್ಣ ರಚನೆಯ ಅಂಗ ಇಡೀ ಶರೀರದಲ್ಲಿ ಮತ್ತೊಂದಿಲ್ಲ. ಇದು ಕಾಲಾಂತರದಿಂದ ಎಲ್ಲರನ್ನೂ ಚಕಿತಗೊಳಿಸಿರುವ ಸಂಗತಿ. "ಕಣ್ಣಿನಂತಹ ಅತ್ಯುನ್ನತ ಮಟ್ಟದ ಸಂಕೀರ್ಣ, ಅದ್ಭುತ ವಿನ್ಯಾಸವನ್ನು ನಿರ್ಮಿಸಲು ಯಾವುದೇ ಗೊತ್ತು-ಗುರಿ ಇಲ್ಲದೇ ಸಿಕ್ಕಸಿಕ್ಕ ಹಾದಿಯಲ್ಲಿ ಸಾಗುವ ಜೀವವಿಕಾಸಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ, ಸೃಷ್ಟಿಯನ್ನು ಒಂದು ನಿರ್ದಿಷ್ಟ ದಿಕ್ಕಿನೆಡೆಗೆ ರಚಿಸುತ್ತಿರುವ ಯಾವುದೋ ಬುದ್ಧಿಶಾಲಿ ನಿರ್ಮಾತೃ ಇರಲೇಬೇಕು. ದೇವರ ಅಸ್ತಿತ್ವಕ್ಕೆ ಕಣ್ಣುಗಳ ರಚನೆಯೇ ಸಾಕ್ಷಿ" ಎಂದು ಜೀವವಿಕಾಸದ ವಿರೋಧಕರು ವಾದಿಸುತ್ತಾರೆ. ಈ ಸಂವಾದ The Blind Watchmaker ಎನ್ನುವ ವಾಗ್ಯುದ್ಧದಿಂದ ವಿಜ್ಞಾನರಂಗದಲ್ಲಿ ಪ್ರಸಿದ್ಧವಾಗಿದೆ. ತನ್ನನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಜೀವವಿಕಾಸದ ಪರ-ವಿರೋಧಗಳ ಯುದ್ಧವನ್ನು ಕಣ್ಣುಗಳು ಮೂಕಸಾಕ್ಷಿಯಂತೆ ನೋಡುತ್ತಿವೆ!

 ವಿಶ್ವದ ಆರಂಭ ಎನ್ನಲಾಗುವ ಮಹಾಸ್ಫೋಟ ಆದದ್ದು ಸುಮಾರು 1380 ಕೋಟಿ ವರ್ಷಗಳ ಹಿಂದೆ ಎಂದು ಅಂದಾಜು. ಭೂಮಿಯ ಮೇಲೆ ಮೊದಲ ಏಕಕೋಶ ಜೀವಿ ಉಗಮವಾದದ್ದು ಸುಮಾರು ಮುನ್ನೂರು ಕೋಟಿ ವರ್ಷಗಳ ಹಿಂದೆ ಎಂದು ನಂಬಲಾಗಿದೆ. ಜೀವವಿಕಾಸದಲ್ಲಿ ಮೊದಲ ಬಾರಿಗೆ ಕಣ್ಣಿನ ಕೋಶಗಳು ಉದಿಸಿ, ಸುಧಾರಿಸುತ್ತಾ ಇಂದಿನ ರಚನೆಗೆ ಬಂದದ್ದು ಸುಮಾರು 55 ಕೋಟಿ ವರ್ಷಗಳ ಕಾಲಾವಧಿಯಲ್ಲಿ. ಈ ಪ್ರಕ್ರಿಯೆಯಲ್ಲಿ, ಇಷ್ಟು ಕಡಿಮೆ ಕಾಲಾವಧಿಯಲ್ಲಿ, ಇಷ್ಟೊಂದು ಶೀಘ್ರವಾಗಿ ವಿಕಾಸಗೊಂಡು ಅತ್ಯುನ್ನತ ಮಟ್ಟದ ಸಂಕೀರ್ಣತೆಯನ್ನು ತಲುಪಿದ ಅಂಗ ಶರೀರದಲ್ಲಿ ಬೇರೊಂದಿಲ್ಲ. ಕಣ್ಣಿನ ರಚನೆ, ಕಾರ್ಯನಿರ್ವಹಣೆ, ವೇಗ - ಎಲ್ಲವೂ ಚಕಿತಗೊಳಿಸುವಷ್ಟು ಕೌಶಲ್ಯಪೂರ್ಣ.

 ಕ್ಯಾಮೆರಾದಂತೆ ವರ್ತಿಸುವ ನಮ್ಮ ಕಣ್ಣುಗಳು ಎದುರಿನ ಬಿಂಬವನ್ನು ಗ್ರಹಿಸುವ ಗ್ರಾಹಿಗಳು ಮಾತ್ರ. ಈ ನೋಟ ದೃಷ್ಟಿಯಾಗಿ ಮಾರ್ಪಾಡಾಗುವುದು ಮಿದುಳಿನಲ್ಲಿ. ಪ್ರತಿಯೊಂದು ಕಣ್ಣನ್ನೂ ಮುಂದಿನ, ಮಧ್ಯ, ಮತ್ತು ಒಳ ಎನ್ನುವ ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಬಹುದು. ಇವುಗಳಲ್ಲಿ ಒಟ್ಟು ಏಳು ವಿಭಾಗಗಳಿವೆ. ಪ್ರತಿಯೊಂದು ವಿಭಾಗವನ್ನೂ ಜೀವಕೋಶಗಳ ರಚನೆಯ ಮತ್ತು ಕೆಲಸದ ದೃಷ್ಟಿಯಿಂದ ಇನ್ನಷ್ಟು ಪದರಗಳಾಗಿ ವಿಭಜಿಸಬಹುದು. ಕಣ್ಣಿನ ಮುಂಭಾಗದ ಪಾರದರ್ಶಕ ಕಾರ್ನಿಯಾ ಪದರಕ್ಕೆ ರಕ್ತಸಂಚಾರವೇ ಇಲ್ಲ. ಅದು ನೇರವಾಗಿ ವಾತಾವರಣದಿಂದ ಆಕ್ಸಿಜನ್ ಹೀರಿ ತನ್ನ ಕೋಶಗಳನ್ನು ಸಲಹುತ್ತದೆ. ಕಣ್ಣಿನ ಒಳಭಾಗದಲ್ಲಿರುವ ಸಿನೆಮಾ ಪರದೆಯಂತಹ ರೆಟಿನಾದಲ್ಲಿ ಒಟ್ಟು ಹತ್ತು ಪದರಗಳನ್ನು ಸದ್ಯಕ್ಕೆ ಗುರುತಿಸಲಾಗಿದೆ! ಇಷ್ಟಾಗಿಯೂ, ಕಣ್ಣಿನ ರಚನೆಯನ್ನು ಅರ್ಥಮಾಡಿಕೊಳ್ಳುವ ಪ್ರಾಥಮಿಕ ಹಂತವನ್ನೂ ನಾವು ದಾಟಿಲ್ಲ ಎಂದು ವಿಜ್ಞಾನಿಗಳ ಅನಿಸಿಕೆ. ಬೆಳಕು ಕಣ್ಣಿನ ಮೂಲಕ ಇಷ್ಟೆಲ್ಲಾ ಪದರಗಳನ್ನು ದಾಟಿ ಮಿದುಳನ್ನು ತಲುಪಿ, ಅಲ್ಲಿ ದೃಷ್ಟಿ ಸಂಸ್ಕರಣವಾಗಲು ಹಿಡಿಯುವ ಸಮಯ ಕೇವಲ 13 ಮಿಲಿಸೆಕೆಂಡುಗಳು - ಅಂದರೆ, ಒಂದು ಸೆಕೆಂಡಿನ ಸಾವಿರ ಭಾಗಗಳಲ್ಲಿ 13 ಭಾಗಗಳು. ಮಿದುಳು ಆ ದೃಶ್ಯದ ಮಹತ್ವವನ್ನು ಗ್ರಹಿಸಿ, ಏನು ಮಾಡಬೇಕೆಂಬ ಸೂಚನೆಯನ್ನು ನರಮಂಡಲದ ಮೂಲಕ ಸ್ನಾಯುಗಳಿಗೆ ಕಳಿಸಲು ತಗುಲುವ ಸಮಯ ಸುಮಾರು ಅರ್ಧ ಸೆಕೆಂಡು! ಕ್ರಿಕೆಟ್ ಆಟದಲ್ಲಿ ಧೋನಿಯವರು ಸ್ಟಂಪಿಂಗ್ ಮಾಡುವ ವೇಗದ ಅವಧಿಯನ್ನು ಅತ್ಯಂತ ನಿಖರ ಎಲೆಕ್ಟ್ರಾನಿಕ್ ಗಡಿಯಾರಗಳನ್ನು ಮೂಲಕ ತೋರಿಸುತ್ತಾರಷ್ಟೇ? ಅದು ಕಣ್ಣು ಮತ್ತು ಮಿದುಳಿನ ಪರಸ್ಪರ ಹೊಂದಾಣಿಕೆಯ ಸಾಮರ್ಥ್ಯವನ್ನು ತೋರುವ ನಿದರ್ಶನ. ಮನುಷ್ಯರಿಗಿಂತಲೂ ಪ್ರಾಣಿಗಳಲ್ಲಿ ಈ ಹೊಂದಾಣಿಕೆಯ ವೇಗ ಹೆಚ್ಚು ಎಂದು ಅಧ್ಯಯನಗಳು ತೋರಿವೆ.

 ಕಣ್ಣುಗಳ ಸಾಮರ್ಥ್ಯ ಕೇವಲ ವೇಗಕ್ಕೆ ಸೀಮಿತವಾಗಿಲ್ಲ; ಅದರ ಗುಣಮಟ್ಟವೂ ಅತ್ಯಧಿಕವೇ. ಈಗೆಲ್ಲ ಮೊಬೈಲ್ ಫೋನಿನ ಕ್ಯಾಮೆರಾಗಳನ್ನು ಮೆಗಾಪಿಕ್ಸೆಲ್ ಮಾಪನದಲ್ಲಿ ಅಳೆಯುತ್ತಾರೆ. ಆ ಲೆಕ್ಕಾಚಾರದಲ್ಲಿ ಮನುಷ್ಯರ ಕಣ್ಣಿನ ಸೂಕ್ಷ್ಮತೆಯ ಸಾಮರ್ಥ್ಯ ಸುಮಾರು 576 ಮೆಗಾಪಿಕ್ಸೆಲ್. ಇಷ್ಟು ಸಾಮರ್ಥ್ಯದ ದಕ್ಷತೆಯ ಉದಾಹರಣೆ ಎಂದರೆ, ನಿರ್ಜನ ಪ್ರದೇಶದ ಬೆಟ್ಟದ ಮೇಲೆ ನಿಂತಿರುವ ವ್ಯಕ್ತಿ, ನಡುವೆ ಯಾವ ಅಡತಡೆಯೂ ಇಲ್ಲದಿದ್ದರೆ ಸುಮಾರು 22 ಕಿಲೋಮೀಟರ್ ದೂರದಲ್ಲಿ ಬೆಳಗುತ್ತಿರುವ ದೀಪದ ಬೆಳಕನ್ನು ಗ್ರಹಿಸಬಲ್ಲ. ಒಂದು ಕಣ್ಣಿನ ನೋಟವೂ ಮಿದುಳಿಗೆ ಎರಡು ಆಯಾಮಗಳಲ್ಲಿ ಎಲ್ಲ ಸಂದೇಶಗಳನ್ನೂ ರವಾನಿಸಬಲ್ಲದು. ಆದರೆ, ಎರಡು ಕಣ್ಣುಗಳ ಸಮಗ್ರ ನೋಟದಿಂದ ಮಿದುಳಿಗೆ ಆಳದ ಆಯಾಮ ತಿಳಿಯುತ್ತದೆ. ಇದನ್ನು ಪರೀಕ್ಷಿಸಲು ಒಂದು ಸರಳ ಪ್ರಯೋಗ ಮಾಡಬಹುದು. ಎರಡೂ ಕೈಗಳಲ್ಲಿ ಒಂದೊಂದು ಸೂಜಿಯನ್ನು ಹಿಡಿದು, ಕೈಗಳನ್ನು ಕಣ್ಣಿನ ಮಟ್ಟದಲ್ಲಿ ಪೂರಾ ಚಾಚಿ, ಒಂದು ಕಣ್ಣನ್ನು ಮುಚ್ಚಿಕೊಂಡು ಸೂಜಿಗಳ ತುದಿಗಳನ್ನು ನಿಧಾನವಾಗಿ ಒಂದಕ್ಕೊಂದು ತಾಕಿಸಲು ಪ್ರಯತ್ನಿಸಿದರೆ ಸಫಲವಾಗುವ ಸಾಧ್ಯತೆಗಳು ತೀರಾ ಕಡಿಮೆ. ಇದೇ ಕೆಲಸವನ್ನು ಎರಡೂ ಕಣ್ಣುಗಳನ್ನು ತೆರೆದಾಗ ಆರಾಮವಾಗಿ ಮಾಡಬಹುದು. ಯಾವುದೇ ವಸ್ತು ಎಷ್ಟು ದೂರದಲ್ಲಿದೆ ಎಂದು ಗ್ರಹಿಸಲು ಎರಡು ಕಣ್ಣುಗಳ ಇರುವಿಕೆ ಅಗತ್ಯ.

 ಕಣ್ಣಿನ ಚಲನೆಯನ್ನು ನಿಯಂತ್ರಿಸಲು ಪಟ್ಟಿಯಂತಹ ತಲಾ ಆರು ಮಾಂಸಖಂಡಗಳಿವೆ. ಶರೀರದಲ್ಲಿ ಸಾಮಾನ್ಯವಾಗಿ ಆಯಾ ಕೀಲಿನ ಚಲನೆಗೆ ಅಗತ್ಯವಾದಷ್ಟು ಶಕ್ತಿಯ ಮಾಂಸಖಂಡಗಳು ಮಾತ್ರ ಇರುತ್ತವೆ. ಆದರೆ ಕಣ್ಣಿನ ಮಾಂಸಪಟ್ಟಿಗಳ ಒಟ್ಟಾರೆ ಶಕ್ತಿ ಕಣ್ಣಿನ ಚಲನೆಗೆ ಬೇಕಾದ ಅಗತ್ಯಕ್ಕಿಂತಲೂ ಸುಮಾರು ನೂರು ಪಟ್ಟು ಹೆಚ್ಚು. ಇದರಿಂದ ಮಿಲಿಮೀಟರ್ ಮಟ್ಟದಲ್ಲಿ ಕಣ್ಣಿನ ಅತ್ಯಂತ ನಿಖರ ಚಲನೆಗೆ ಅವಕಾಶ ದೊರೆಯುತ್ತದೆ. ಎರಡೂ ಕಣ್ಣುಗಳ ಮಾಂಸಪಟ್ಟಿಗಳು ಸಂಪೂರ್ಣವಾಗಿ ಸ್ವತಂತ್ರವಾಗಿದ್ದರೂ ಅವುಗಳ ಚಲನೆ ಪರಸ್ಪರ ಪೂರಕವಾಗಿರುತ್ತದೆ. ಎಡಗಣ್ಣು ಹೇಗೆ ಚಲಿಸುತ್ತದೋ ಬಲಗಣ್ಣು ಕೂಡ ಅಯಾಚಿತವಾಗಿ, ಯಥಾವತ್ತಾಗಿ ಹಾಗೆಯೇ ಚಲಿಸುತ್ತದೆ. ಇಡೀ ದೇಹದ ಮಾಂಸಖಂಡಗಳ ಪೈಕಿ ಕಣ್ಣಿನವು ಅತ್ಯಂತ ಚುರುಕು. ಕೇವಲ ಸೆಕೆಂಡಿನ ನೂರನೆಯ ಒಂದು ಅಂಶದ ಅವಧಿಯಲ್ಲಿ ಅವು ಪ್ರತಿಕ್ರಿಯೆ ತೋರುತ್ತವೆ. ಎಚ್ಚರವಾಗಿರುವ ಪ್ರತಿಯೊಂದು ಕ್ಷಣ ಮತ್ತು ನಿದ್ರೆಯ ಸಾಕಷ್ಟು ಅವಧಿಯಲ್ಲಿ ಕಣ್ಣಿನ ಮಾಂಸಪಟ್ಟಿಗಳು ಒಂದೇ ಸಮನೆ ಕೆಲಸ ಮಾಡುತ್ತಲೇ ಇರುತ್ತವೆ. ಒಟ್ಟಾರೆ ಏಳು ಬಗೆಯ ಚಲನೆಗಳು ಕಣ್ಣಿಗೆ ಈ ಮಾಂಸಪಟ್ಟಿಗಳಿಂದ ಸಾಧ್ಯವಾಗುತ್ತದೆ. ಈ ಮಾಂಸಪಟ್ಟಿಗಳ ಪೈಕಿ ಯಾವುದೇ ಒಂದರಲ್ಲಿ ಅನತಿ ದೋಷವಿದ್ದರೂ ಮೆಳ್ಳಗಣ್ಣು ಉಂಟಾಗುತ್ತದೆ. 

 ಕಣ್ಣಿನ ಮುಂಭಾಗದಲ್ಲಿರುವ ಐರಿಸ್ ಎನ್ನುವ ವಿಭಾಗ ಕಣ್ಣುಗುಡ್ಡೆಗೆ ಬಣ್ಣವನ್ನು ನೀಡುತ್ತದೆ. ಇದರಲ್ಲಿನ ಮೆಲನಿನ್ ಎಂಬ ವರ್ಣದ್ರವ್ಯದ ಪ್ರಮಾಣದ ಅನುಸಾರ ಕಣ್ಣಿನ ಬಣ್ಣ ಬದಲಾಗುತ್ತದೆ. ಪ್ರಪಂಚದಲ್ಲಿ ಅತ್ಯಂತ ಹೆಚ್ಚಾಗಿ ಕಾಣುವ ಕಣ್ಣುಗಳ ಬಣ್ಣ ಕಂದು. ಜೀವವಿಕಾಸದ ರೀತ್ಯಾ ನೀಲಿ ಬಣ್ಣದ ಕಣ್ಣುಗಳು ತೀರಾ ಈಚಿನವು - ಪ್ರಾಯಶಃ ಕಳೆದ ಹತ್ತು ಸಾವಿರ ವರ್ಷಗಳ ಹಿಂದೆ ಮೊದಲಿಗೆ ಕಾಣತೊಡಗಿದವು ಎಂದು ಸಂಶೋಧಕರ ಅಭಿಮತ. ಹೀಗಾಗಿ, "ನೀಲಿ ಕಣ್ಣು ಇರುವ ಎಲ್ಲರೂ ಪರಸ್ಪರ ಜೆನೆಟಿಕ್ ಸಂಬಂಧಿಗಳು" ಎಂದು ವಿಜ್ಞಾನಿಗಳ ಅಭಿಪ್ರಾಯ. ಎರಡೂ ಕಣ್ಣುಗಳೂ ಬೇರೆ ಬೇರೆ ಬಣ್ಣದಲ್ಲಿರುವುದೂ ಸಾಧ್ಯ. ಅಂತಹವರ ಸಂಖ್ಯೆ ವಿರಳ. ಕಣ್ಣುಗಳ ಗಾತ್ರ ಜನ್ಮದಿಂದ ಸಾಯುವವರೆಗೆ ಹೆಚ್ಚು ಬದಲಾಗುವುದಿಲ್ಲ. ಹೀಗಾಗಿ ಮಕ್ಕಳ ಮುಖದಲ್ಲಿ ಕಣ್ಣುಗಳು ಪ್ರಧಾನವಾಗಿ ಕಾಣುತ್ತವೆ. ಪ್ರಾಣಿವರ್ಗದ ಬಹುತೇಕ ಜೀವಿಗಳಲ್ಲಿ ಹೀಗೆಯೇ ಇರುತ್ತದೆ. ಉಷ್ಟ್ರಪಕ್ಷಿಯ ಕಣ್ಣುಗಳು ಅವುಗಳ ಮಿದುಳಿನ ಗಾತ್ರಕ್ಕಿಂತಲೂ ದೊಡ್ಡವು.

 ಕಣ್ಣಿನ ರೆಪ್ಪೆಗಳು ಕಣ್ಣನ್ನು ಹೊರಗಿನ ಅಪಾಯಗಳಿಂದ ಕಾಪಾಡುವ ಹೊಣೆ ಹೊತ್ತಿವೆ. ಕಣ್ಣು ಮಿಟುಕಿಸುವುದು ದೇಹದ ಅತ್ಯಂತ ವೇಗದ ಚಲನೆಗಳಲ್ಲಿ ಒಂದು. ಇದು ಸುಮಾರು 100-150 ಮಿಲಿಸೆಕೆಂಡುಗಳಲ್ಲಿ ಆಗುವ ಪ್ರಕ್ರಿಯೆ. ದಿನವೊಂದಕ್ಕೆ ಸುಮಾರು 12000 ದಂತೆ ಇಡೀ ಜೀವನದಲ್ಲಿ ಸುಮಾರು 32 ಕೋಟಿ ಬಾರಿ ನಮಗೆ ಅರಿವಿಲ್ಲದಂತೆ ಕಣ್ಣು ಮಿಟುಕಿಸಿರುತ್ತೇವೆ. ಪ್ರತಿ ಬಾರಿ ಕಣ್ಣು ಮಿಟುಕಿಸಿದಾಗ ದೃಷ್ಟಿಗೆ ವಿಶ್ರಾಂತಿ ದೊರೆಯುತ್ತದೆ. ಜೊತೆಗೆ ಕಣ್ಣಿನ ಆರ್ದ್ರತೆಯ ನವೀಕರಣವಾಗುತ್ತದೆ. ಕಂಪ್ಯೂಟರ್, ಮೊಬೈಲ್ ಫೋನ್, ದೂರದರ್ಶನಗಳ ಬೆಳಕಿನ ಪರದೆಯನ್ನು ನೋಡುವಾಗ ಕಣ್ಣು ಮಿಟುಕಿಸುವುದು ಕಡಿಮೆಯಾಗುತ್ತದೆ. ಆಗ ಕಣ್ಣುಗಳ ಸ್ನಾಯುಗಳಿಗೆ ವಿಶ್ರಾಂತಿ ಕಡಿಮೆಯಾಗಿ, ನೀರಿನ ಪಸೆ ಆರಿ ಹೋಗಿ ಕಣ್ಣು ನೋಯುತ್ತದೆ. ಇಂತಹ ವೃತ್ತಿಗಳಲ್ಲಿ ನಿರತರಾಗಿರುವವರು ಆಗಾಗ್ಗೆ ಪರದೆಯಿಂದ ದೂರಾಗಿ ಕಣ್ಣುಗಳಿಗೆ ವಿಶ್ರಾಂತಿ ನೀಡಬೇಕು. ಹೆಚ್ಚು ಮಾತನಾಡುವವರು ತಮಗೆ ಅರಿವಿಲ್ಲದಂತೆ ಹೆಚ್ಚು ಬಾರಿ ಕಣ್ಣು ಮಿಟುಕಿಸುತ್ತಾರೆ.

 ಪರದೆಯ ಮೇಲಿನ ಪಠ್ಯವನ್ನು ಓದಲು ಕಾಗದದ ಮೇಲಿನ ಮುದ್ರಿತ ವಾಕ್ಯಗಳನ್ನು ಓದುವುದಕ್ಕಿಂತಲೂ ಸುಮಾರು ಶೇಕಡಾ 25ರಷ್ಟು ಹೆಚ್ಚು ಕಾಲ ಹಿಡಿಯುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಇದಕ್ಕೆ ನಿರ್ದಿಷ್ಟ ಕಾರಣಗಳು ತಿಳಿದಿಲ್ಲವಾದರೂ, ಮಿದುಳು ಕಾಗದಕ್ಕೆ ಹೆಚ್ಚಾಗಿ ಹೊಂದಿಕೊಂಡಿದೆ ಎನ್ನಬಹುದು.

 ಕಣ್ಣುಗಳ ಗಣಿತ ಅಸಾಮಾನ್ಯ. ಇದನ್ನು ಎರಡನೆಯ ಭಾಗದಲ್ಲಿ ಮುಂದುವರೆಸಿ, ಉಳಿದ ಕೌತುಕಗಳತ್ತ ಕಣ್ಣು ಹಾಯಿಸೋಣವಂತೆ!   

 --------------------

ಫೆಬ್ರವರಿ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಫೆಬ್ರವರಿ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://flipbookpdf.net/web/site/4a1b9b67da571e0b61a775dcbe352aba964bcb3c202402.pdf.html

 

 


ಮಧುಮೇಹಿಗಳಲ್ಲಿ ಹೃದ್ರೋಗ

ಡಾ. ಕಿರಣ್ ವಿ.ಎಸ್.

ವೈದ್ಯರು

 ನಮ್ಮ ದೇಶದ ಆರೋಗ್ಯ ಸಮಸ್ಯೆಗಳಲ್ಲಿ ಮಧುಮೇಹ ಮತ್ತು ಹೃದ್ರೋಗ ಪ್ರಮುಖವಾದುವು. ಇವೆರಡಕ್ಕೂ ಪರಸ್ಪರ ಸಂಬಂಧವೂ ಇದೆ. ಮಧುಮೇಹಿಗಳಲ್ಲಿ ಹೃದ್ರೋಗದ ಸಾಧ್ಯತೆ ಸಾಮಾನ್ಯ ಜನರಿಗಿಂತಲೂ ಸಾಕಷ್ಟು ಹೆಚ್ಚು. ಹೃದ್ರೋಗ ಎಂದರೆ ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯದ ಕಾರ್ಯ ವೈಫಲ್ಯ ಮೊದಲಾದುವು. ಮಧುಮೇಹಿಗಳಲ್ಲಿ ಈ ಎಲ್ಲ ಸಮಸ್ಯೆಗಳೂ ಸಾಮಾನ್ಯ ಜನರಿಗಿಂತ ಅಧಿಕ ಪ್ರಮಾಣದಲ್ಲಿ ಕಂಡುಬರುತ್ತದೆ. ಮಧುಮೇಹಿಗಳಲ್ಲಿ ರಕ್ತದೊತ್ತಡದ ಸಾಧ್ಯತೆ ನಾಲ್ಕು ಪಟ್ಟು ಹೆಚ್ಚು; ಹೃದಯಾಘಾತದ ಪ್ರಮಾಣ ಶೇಕಡಾ 58 ಅಧಿಕ; ಹೃದಯದ ಕಾರ್ಯ ವೈಫಲ್ಯ ಶೇಕಡಾ 12 ಹೆಚ್ಚು; ಅನಾರೋಗ್ಯಕರ ಕೊಲೆಸ್ಟ್ರಾಲ್ ಮಟ್ಟ ಹತ್ತು ಪಟ್ಟು ಹೆಚ್ಚಾಗಿರುತ್ತದೆ ಎಂದು ಕಂಡುಬಂದಿದೆ. ಅಂತೆಯೇ, ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಮಧುಮೇಹಿಗಳಲ್ಲಿ  ಮೂರೂವರೆ ಪಟ್ಟು ಅಧಿಕವಾಗಿರುತ್ತದೆ.  

 ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಸಕ್ಕರೆಯ ಮಟ್ಟ ಏರಿದಂತೆಲ್ಲ ರಕ್ತನಾಳಗಳಿಗೆ ಹಾನಿಯಾಗುತ್ತದೆ; ನಾಜೂಕಾದ ನರತಂತುಗಳು ಹಾಳಾಗುತ್ತವೆ; ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಚಯವಾಗಿ, ನಾಳದ ಆಂತರಿಕ ವ್ಯಾಸ ಕಿರಿದಾಗುತ್ತದೆ. ಇದರಿಂದ ರಕ್ತಸಂಚಾರಕ್ಕೆ ಅಡ್ಡಿಯಾಗುತ್ತದೆ. ದೇಹದಲ್ಲಿ ರಕ್ತವನ್ನು ಎಲ್ಲ ಅಂಗಗಳಿಗೂ ತಲುಪಿಸುವ ಹೊಣೆ ಹೃದಯದ್ದು. ಘಾಸಿಯಾದ ರಕ್ತನಾಳಗಳಲ್ಲಿ ರಕ್ತವು ಸರಾಗವಾಗಿ ಹರಿಯುವುದಿಲ್ಲ; ಅದನ್ನು ಅಧಿಕ ಒತ್ತಡದ ಮೂಲಕ ಮುಂದಕ್ಕೆ ಸಾಗಿಸಬೇಕಾಗುತ್ತದೆ. ಇದರಿಂದ ಹೃದಯದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಹೀಗೆಯೇ ಮುಂದುವರೆದು ರಕ್ತನಾಳಗಳು ಶಿಥಿಲವಾದರೆ ಆಯಾ ಅಂಗಗಳಿಗೆ ರಕ್ತಸಂಚಾರ ಕಡಿಮೆಯಾಗುತ್ತದೆ. ಹೃದಯದ ಕೆಲಸಕ್ಕೆ ಬೇಕಾದ ರಕ್ತವನ್ನು ಸರಬರಾಜು ಮಾಡುವ ಕರೋನರಿ ರಕ್ತನಾಳಗಳು ಕೂಡ ಮಧುಮೇಹದ ಈ ಪರಿಣಾಮವನ್ನು ಅನುಭವಿಸುತ್ತವೆ. ಹೀಗೆ, ಒಂದೆಡೆ ಇತರ ರಕ್ತನಾಳಗಳ ಸಮಸ್ಯೆಯಿಂದ ಹೃದಯದ ಮೇಲೆ ಅಧಿಕ ಒತ್ತಡ; ಮತ್ತೊಂದೆಡೆ ಸ್ವಯಂ ಹೃದಯದ ರಕ್ತನಾಳಗಳ ಶೈಥಿಲ್ಯ – ಇವೆರಡೂ ಸೇರಿ ಹೃದಯದ ಒಟ್ಟಾರೆ ಕಾರ್ಯಕ್ಷಮತೆ ಕುಂಠಿತವಾಗುತ್ತದೆ.   

ಮಧುಮೇಹಿಗಳಲ್ಲಿ ಹೃದ್ರೋಗದ ಸಮಸ್ಯೆಯನ್ನು ನಿಯಂತ್ರಣದಲ್ಲಿ ಇಡಲು ತಜ್ಞರು ಕೆಲವು ಸೂತ್ರಗಳನ್ನು ಶಿಫಾರಸ್ಸು ಮಾಡಿದ್ದಾರೆ. ಇವುಗಳ ಪಾಲನೆಯಿಂದ ಮಧುಮೇಹಿಗಳು ತಮ್ಮ ಹೃದಯವನ್ನು ಸುರಕ್ಷಿತವಾಗಿರಸಬಹುದು.

·         ಹೃದಯದ ಸಮಸ್ಯೆ ಇರುವ ಹಲವಾರು ರೋಗಿಗಳಲ್ಲಿ ಮಧುಮೇಹ ಇರುವುದು ಪತ್ತೆಯಾಗದೇ ಇರಬಹುದು. ಅಂದರೆ, ಹೃದ್ರೋಗವೇ ಮಧುಮೇಹದ ಮೊದಲ ಚಿಹ್ನೆಯಾಗಿ ಕಾಣಬಹುದು. ಹೀಗಾಗಿ, ಹೃದ್ರೋಗ ಇರುವ ಪ್ರತಿಯೊಬ್ಬರೂ ಮಧುಮೇಹ ಪತ್ತೆಮಾಡುವ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.

·         ಮಧುಮೇಹದ ಪ್ರತಿಯೊಬ್ಬ ರೋಗಿಯೂ ಕಾಲಕಾಲಕ್ಕೆ ಹೃದಯದ ಕಾರ್ಯಕ್ಷಮತೆಯ ತಪಾಸಣೆ ಮಾಡಿಸುವುದು ಅಗತ್ಯ. ಹೃದ್ರೋಗದ ಚಿಹ್ನೆಗಳಿಗಾಗಿ ಕಾಯುವುದು ಸೂಕ್ತವಲ್ಲ. ಯಾವುದೇ ಕಾಯಿಲೆಯನ್ನಾದರೂ ಆರಂಭಿಕ ಹಂತದಲ್ಲಿ ಪತ್ತೆ ಮಾಡಿದರೆ ಚಿಕಿತ್ಸೆ ಸುಲಭ, ಸೋವಿ, ಮತ್ತು ಸರಳವಾಗುತ್ತದೆ.

·         ಮಧುಮೇಹ ನಿಯಂತ್ರಣದಲ್ಲಿ ಇಲ್ಲದ ಪ್ರತಿಯೊಬ್ಬ ರೋಗಿಯನ್ನೂ ಹೃದ್ರೋಗಿಯ ರೀತಿಯಲ್ಲೇ ಪರಿಗಣಿಸಬೇಕು. ಕರೋನರಿ ರಕ್ತನಾಳಗಳ ತಪಾಸಣೆ ಮತ್ತು ಹೃದಯದ ಕಾರ್ಯಕ್ಷಮತೆಯ ಪರೀಕ್ಷೆ ಅತ್ಯಗತ್ಯ.

·         ಮಧುಮೇಹದಲ್ಲಿ ಘಾಸಿಗೊಳಗಾಗುವ ಮತ್ತೊಂದು ಪ್ರಮುಖ ಅಂಗ ಮೂತ್ರಪಿಂಡಗಳು. ಶರೀರದ ರಕ್ತದೊತ್ತಡವನ್ನು ನಿರ್ವಹಿಸುವಲ್ಲಿ ಮೂತ್ರಪಿಂಡಗಳ ಪಾತ್ರ ಹಿರಿದು. ಮಧುಮೇಹದ ಕಾರಣದಿಂದ ಮೂತ್ರಪಿಂಡಗಳು ಹಾಳಾದರೆ, ಅದರ ಪರೋಕ್ಷ ಪರಿಣಾಮವನ್ನು ಹೃದಯವೇ ಅನುಭವಿಸಬೇಕು.

·         ಮಧುಮೇಹದ ಔಷಧಗಳ ಜೊತೆಗೆ ಹೃದಯದ ಸಮಸ್ಯೆಗಳನ್ನು ನಿರ್ವಹಿಸುವ ಔಷಧಗಳನ್ನೂ ಇಂತಹ ರೋಗಿಗಳು ಸೇವಿಸಬೇಕು. ಕೇವಲ ಮಧುಮೇಹದ ಔಷಧಗಳನ್ನು ಮಾತ್ರ ಸೇವಿಸುವುದು ಹೃದ್ರೋಗಕ್ಕೆ ಪರಿಹಾರವಲ್ಲ.

·         ಬೊಜ್ಜು ಅಥವಾ ಅಧಿಕ ಮೈತೂಕ ಹೃದಯ ಕಾಯಿಲೆಗಳಿಗೆ ಮತ್ತೊಂದು ಪ್ರಮುಖ ಕಾರಣ ಮಧುಮೇಹಿಗಳಲ್ಲಿ ಬೊಜ್ಜಿನ ಸಾಧ್ಯತೆ ಸಾಮಾನ್ಯ ಜನರಿಗೆ ಹೋಲಿಸಿದರೆ ಎರಡರಿಂದ ಮೂರು ಪಟ್ಟು ಹೆಚ್ಚು. ಬೊಜ್ಜಿನ ನಿಯಂತ್ರಣ ಮಧುಮೇಹದ ಮೇಲೆ ಮತ್ತು ಹೃದ್ರೋಗದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ, ಸರಿಯಾದ ಮೈತೂಕವನ್ನು ಹೊಂದುವ ಪ್ರತಿಯೊಂದು ಸುರಕ್ಷಿತ ವಿಧಾನವನ್ನೂ ಅನುಸರಿಸಲು ಮಧುಮೇಹಿಗಳನ್ನು ಪ್ರೋತ್ಸಾಹಿಸಬೇಕು.

·         ನಿಯಮಿತ ವ್ಯಾಯಾಮ ಮಧುಮೇಹದ ನಿಯಂತ್ರಣದಲ್ಲಿ ಔಷಧ ಚಿಕಿತ್ಸೆಯಷ್ಟೇ ಪರಿಣಾಮಕಾರಿ. ಸಮಂಜಸ ಆಹಾರ, ಸರಿಯಾದ ಔಷಧ ಚಿಕಿತ್ಸೆ ಮತ್ತು ನಿಯಮಿತ ವ್ಯಾಯಾಮಗಳು ಮಧುಮೇಹ ಚಿಕಿತ್ಸೆಯ ಮೂರು ಅತ್ಯಗತ್ಯ ಅಂಗಗಳು. ಇವುಗಳಲ್ಲಿ ಒಂದು ಭಾಗ ಮುಕ್ಕಾದರೂ ಮಧುಮೇಹ ನಿಯಂತ್ರಣ ಅಪೂರ್ಣವೆಂದೇ ಅರ್ಥ.

·         ಧೂಮಪಾನ ಮತ್ತು ಮದ್ಯಪಾನ ಮಧುಮೇಹದ ನಿಯಂತ್ರಣವನ್ನು ಏರುಪೇರಾಗಿಸುತ್ತವೆ. ಇವೆರಡೂ ಪ್ರತ್ಯೇಕವಾಗಿ ಹೃದ್ರೋಗಕ್ಕೆ ಕಾರಣವಾಗಬಲ್ಲವು. ಹೀಗಾಗಿ, ಮಧುಮೇಹಿಗಳು ಧೂಮಪಾನ ಮತ್ತು ಮದ್ಯಪಾನಗಳಿಂದ ದೂರ ಉಳಿಯುವುದು ತಮ್ಮ ಹೃದಯಕ್ಕೆ ನೀಡಬಹುದಾದ ಕಾಣಿಕೆ.   

·         ಮಾನಸಿಕ ಸಂತುಲನವನ್ನು ಕಾಯ್ದುಕೊಳ್ಳುವುದು ಮಧುಮೇಹಿ ಹೃದ್ರೋಗಿಗಳಲ್ಲಿ ಬಹಳ ಮುಖ್ಯ. ಮನಸ್ಸು ವ್ಯಗ್ರವಾದಷ್ಟೂ ಶರೀರದಲ್ಲಿ ಹಾರ್ಮೋನುಗಳ ಮಟ್ಟ ಏರುಪೇರಾಗುತ್ತದೆ. ಇದರ ಪರೋಕ್ಷ ಪರಿಣಾಮ ರಕ್ತದಲ್ಲಿನ ಸಕ್ಕರೆಯ ಅಂಶದ ಮೇಲೆ, ಹೃದಯದ ಗತಿಯ ಮೇಲೆ ಬೀಳುತ್ತದೆ; ರಕ್ತನಾಳಗಳಲ್ಲಿನ ಒತ್ತಡ ಏರುತ್ತದೆ. ಇಂತಹ ಒತ್ತಡಗಳು ಪ್ರತಿದಿನವೂ ಹಲವು ಬಾರಿ ಆಗುತ್ತಿದ್ದರೆ ಹೃದಯಕ್ಕೆ ಹಾನಿ ಖಚಿತ. ಮಧುಮೇಹಿಗಳು ನಿಯಮಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳ ಮೂಲಕ ತಮ್ಮ ಮನೋವ್ಯಾಪಾರಗಳನ್ನು ಹತೋಟಿಯಲ್ಲಿ ಇಡಬೇಕು.

ಮಧುಮೇಹ ಮತ್ತು ಹೃದ್ರೋಗದ ಅವಿನಾಭಾವ ಸಂಬಂಧವನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಅವೆರಡನ್ನೂ ಚೆನ್ನಾಗಿ ನಿಯಂತ್ರಿಸಬಹುದು. ಇವೆರಡಕ್ಕೂ ಉತ್ತಮ ಔಷಧಗಳು ಇಂದು ಲಭ್ಯವಿವೆ. ಸೂಕ್ತ ಆಹಾರ, ಔಷಧ, ಮತ್ತು ವ್ಯಾಯಾಮಗಳ ನೆರವಿನಿಂದ ಜಗತ್ತಿನಲ್ಲಿ ಲಕ್ಷಾಂತರ ಮಧುಮೇಹಿಗಳು ತಮ್ಮ ಸಮಸ್ಯೆಯನ್ನು ಸರಾಗವಾಗಿ ನಿರ್ವಹಿಸುತ್ತಿದ್ದಾರೆ. ಇದು ಎಲ್ಲ ಮಧುಮೇಹಿಗಳೂ ತಮ್ಮ ದೈನಂದಿನ ಬದುಕಿನಲ್ಲಿ ಅನುಸರಿಸಬಹುದಾದ ಆಶಾದಾಯಕ ಸಂಗತಿ.

-------------------------

ದಿನಾಂಕ 6/2/2024 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/heart-problems-and-diabetes-doctor-suggestions-to-control-cholestral-2672435

 


ಕೂದಲಿನ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

 ಕೂದಲು ಮತ್ತು ಉಗುರುಗಳು ಚರ್ಮದ ವಿಸ್ತೃತ ಭಾಗಗಳು. ಅವು ಚರ್ಮದಿಂದ ಮೇಲೇಳುತ್ತವೆ. ಅವುಗಳ ಪೋಷಣೆ ಚರ್ಮದಿಂದಲೇ ಆಗುತ್ತದೆ. ಆದರೆ ಚರ್ಮದಿಂದ ಪ್ರತ್ಯೇಕಗೊಂಡ ಭಾಗಕ್ಕೆ ನರಗಳ ಸಂವೇದನೆ ಇರುವುದಿಲ್ಲ. ಆ ಭಾಗಗಳನ್ನು ಕತ್ತರಿಸಿದರೆ ನೋವಾಗುವುದಿಲ್ಲ. ಶರೀರದ ಕೆಲಭಾಗಗಳನ್ನು ಹೊರತುಪಡಿಸಿ ಎಲ್ಲೆಡೆ ಕೂದಲು ಇರುತ್ತದೆ. ಇದು ಹೇರಳವಾಗಿಯೂ, ಸಾಂದ್ರವಾಗಿಯೂ ಇರುವುದು ನೆತ್ತಿಯ ಮೇಲೆ. ವ್ಯರ್ಥ ಶ್ರಮಕ್ಕೆ ಸಂವಾದಿಯಾಗಿ "ಕೂದಲು ಎಣಿಸುವ ಕೆಲಸ"ವನ್ನು ಉದಾಹರಣೆಯಾಗಿ ನೀಡಲಾಗುತ್ತದೆ. ಆದರೆ ಈ ಕೆಲಸವನ್ನೂ ವಿಜ್ಞಾನಿಗಳು ಅಂದಾಜಿಸಿದ್ದಾರೆ. ನೆತ್ತಿಯ ಮೇಲೆ ಸುಮಾರು 100,000 ರಿಂದ 150,000 ಕೂದಲ ತಂತುಗಳು ಇರುತ್ತದೆಂದು ಲೆಕ್ಕಾಚಾರ. ಸಂಖ್ಯೆಯ ಲೆಕ್ಕದಲ್ಲಿ ಕೆಂಚು ಕೂದಲು ಉಳ್ಳವರ ನೆತ್ತಿಯಲ್ಲಿ ಕಪ್ಪು ಕೂದಲಿನವರಿಗಿಂತಲೂ ಹೆಚ್ಚು ತಂತುಗಳು ಇರುತ್ತವೆ. ಕೂದಲನ್ನು ಉತ್ಪತ್ತಿ ಮಾಡುವ ಜೀವಕೋಶಗಳು 5ನೆಯ ತಿಂಗಳ ಗರ್ಭಸ್ಥ ಶಿಶುವಿನ ಹಂತದಲ್ಲಿ ಮೊಳೆದಿರುತ್ತವೆ. ಜೀವನದುದ್ದಕ್ಕೂ ಮತ್ತೊಮ್ಮೆ ಈ  ಜೀವಕೋಶಗಳು ಹೊಸದಾಗಿ ತಯಾರಾಗುವುದಿಲ್ಲ.

 ಕೂದಲು ಬಹಳ ವೇಗವಾಗಿ ಬೆಳೆಯುವ ಅಂಗಾಂಶ. ಮೂಳೆಯ ಒಳಗೆ ರಕ್ತಕಣಗಳನ್ನು ತಯಾರಿಸುವ ಅಸ್ಥಿಮಜ್ಜೆ ಮತ್ತು ಕರುಳಿನ ಕೆಲವು ಭಾಗಗಳನ್ನು ಹೊರತುಪಡಿಸಿದರೆ ಕೂದಲಿನಷ್ಟು ವೇಗವಾಗಿ ವೃದ್ಧಿಯಾಗುವ ಜೀವಕೋಶಗಳು ಬೇರೆ ಇಲ್ಲ. ಕ್ಯಾನ್ಸರ್ ಚಿಕಿತ್ಸೆಯ ವೇಳೆಯಲ್ಲಿ ತೀವ್ರಗತಿಯಿಂದ ಬೆಳೆಯುವ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡುವ ಔಷಧ ನೀಡಲಾಗುತ್ತದೆ. ಇಂತಹ ಔಷಧಗಳು ಶರೀರದೊಳಗೆ ವೇಗವಾಗಿ ವೃದ್ಧಿಸುವ ಎಲ್ಲ ಜೀವಕೋಶಗಳನ್ನೂ ನಾಶ ಮಾಡಬಲ್ಲವು. ಈ ಕಾರಣಕ್ಕೇ ಕ್ಯಾನ್ಸರ್ ಚಿಕಿತ್ಸೆಯ ವೇಳೆ ಕೂದಲು ಬಹಳ ಉದುರಿ, ತಲೆ ಬೋಳಾಗುತ್ತದೆ. ಆರೋಗ್ಯವಂತ ತಲೆಗೂದಲು ಸುಮಾರು 4 ರಿಂದ 7 ವರ್ಷಗಳ ಕಾಲ ಸ್ವಸ್ಥಾನದಲ್ಲಿ ಇರಬಲ್ಲವು. ದಿನವೊಂದಕ್ಕೆ 40 ರಿಂದ 150 ಕೂದಲ ತಂತುಗಳು ಉದುರುತ್ತವೆ. ಸಣ್ಣ ವಯಸ್ಸಿನಲ್ಲಿ ಅವು ಮತ್ತೆ ಅದೇ ಪ್ರಮಾಣದಲ್ಲಿ ಬೆಳೆಯುತ್ತವೆ. ಹೀಗೆ ಉದುರಿದ ಕೂದಲು ಸುಮಾರು 20 ಬಾರಿ ಮತ್ತೆ ಬೆಳೆಯುವಷ್ಟು ಸಾಮರ್ಥ್ಯ ತಲೆಗೂದಲಿನ ಬುಡಗಳಲ್ಲಿ ಇರುತ್ತದೆ. ಆದರೆ ವಯಸ್ಸು ಏರಿದಂತೆ ಕೂದಲ ಉದುರುವಿಕೆ ಹೆಚ್ಚಿ, ಪುನಃ ಬೆಳೆಯುವಿಕೆ ಕಡಿಮೆಯಾಗುತ್ತದೆ. ತಲೆಗೂದಲಿನ ಶೇಕಡಾ 50 ತಂತುಗಳು ಕಡಿಮೆಯಾದರೆ ತಲೆ ಬೋಳಾಗಿ ಕಾಣುತ್ತದೆ. ಹೀಗಾಗಿ ವೃದ್ಧಾಪ್ಯದಲ್ಲಿ ಬಹುತೇಕರಿಗೆ ಬಕ್ಕತಲೆಯಾಗುತ್ತದೆ. ಇದರೊಡನೆ ಹಾರ್ಮೋನುಗಳ ಪ್ರಭಾವ, ಮಾನಸಿಕ ಒತ್ತಡ, ಆಹಾರದ ಪೋಷಕಾಂಶಗಳಲ್ಲಿ ಏರುಪೇರು, ಡಯಟಿಂಗ್ ಹೆಸರಿನಲ್ಲಿ ಅಗತ್ಯ ವಿಟಮಿನ್ ಮತ್ತು ಖನಿಜಗಳ ಸೇವನೆಯಲ್ಲಿ ಕಡಿತ ಮೊದಲಾದುವು ಕೂದಲಿನ ಬೆಳವಣಿಗೆಯನ್ನು ಪ್ರಭಾವಿಸುತ್ತವೆ. 50 ವರ್ಷ ವಯಸ್ಸು ದಾಟಿದ ಶೇಕಡಾ 50 ಗಂಡಸರು ಬಕ್ಕತಲೆಯಾಗುತ್ತಾರೆ. ಅಂತೆಯೇ, 50 ವರ್ಷ ವಯಸ್ಸು ದಾಟಿದ ಶೇಕಡಾ 40ರಷ್ಟು ಹೆಂಗಸರಲ್ಲೂ ಈ ಸಮಸ್ಯೆ ಕಾಣುತ್ತದೆ.

 ತಲೆಗೂದಲಿನ ಸರಾಸರಿ ದಪ್ಪ ಸುಮಾರು 50 ಮೈಕ್ರಾನುಗಳು. ಅಂದರೆ, ಸುಮಾರು ತಲೆಗೂದಲಿನ 20 ತಂತುಗಳನ್ನು ಒತ್ತಟ್ಟಾಗಿಸಿ ಬಿಗಿದರೆ 1 ಮಿಲಿಮೀಟರ್ ದಪ್ಪವಾಗುತ್ತದೆ. ಕೂದಲು ಬೆಳೆಯುವ ವೇಗ ಗಂಡಸರಲ್ಲಿ ಹೆಚ್ಚು. ಕೂದಲಿನ ತಲಾ ತಂತು ಪ್ರತಿದಿನವೂ ಸುಮಾರು 0.35 ಮಿಲಿಮೀಟರ್ ಉದ್ದಕ್ಕೆ ಬೆಳೆಯುತ್ತದೆ. ಆದರೆ ತಲೆಯಲ್ಲಿ ಸುಮಾರು 100,000 ಕೂದಲಿನ ತಂತುಗಳು ಇರುವುದರಿಂದ ಇದನ್ನು ಒಗ್ಗೂಡಿಸಿದರೆ ದಿನವೊಂದಕ್ಕೆ ಕೂದಲು ಬೆಳೆಯುವ ಒಟ್ಟು ಪ್ರಮಾಣ 35 ಮೀಟರ್ ಉದ್ದವಾಯಿತು! 70 ವರ್ಷಗಳ ಜೀವಿತಾವಧಿಯಲ್ಲಿ ಬೆಳೆದ ವ್ಯಕ್ತಿಯೊಬ್ಬರ ತಲೆಗೂದಲಿನ ಎಲ್ಲ ತಂತುಗಳನ್ನೂ ಒಂದರ ಹಿಂದೊಂದರಂತೆ ಒಂದೇ ಸಾಲಿನಲ್ಲಿ ಜೋಡಿಸಿದರೆ 1000 ಕಿಲೋಮೀಟರ್ ಆಗುತ್ತದೆ.

 ಕೂದಲಿನ ರಚನೆ ಆಗಿರುವುದು ಮುಖ್ಯವಾಗಿ ಕೆರಟಿನ್ ಎಂಬ ರಾಸಾಯನಿಕ ಸಂಯುಕ್ತದಿಂದ. ನಮ್ಮ ಚರ್ಮ ಮತ್ತು ಉಗುರುಗಳಲ್ಲಿ ಇರುವ ಪ್ರಮುಖ ವಸ್ತು ಇದೇ ಕೆರಟಿನ್. ಪ್ರಾಣಿಗಳ ಕೊಂಬು, ಗೊರಸು, ಪಂಜ, ರೆಕ್ಕೆಗಳು, ಕೊಕ್ಕು ಮೊದಲಾದ ಬಲಿಷ್ಠ ಅಂಗಾಂಶಗಳು ಮೂಲತಃ ಕೆರಟಿನ್ ಸಂಯುಕ್ತವೇ. ಹೀಗಾಗಿ, ಕೂದಲು ಸಾಕಷ್ಟು ಬಲಿಷ್ಠವಾಗಿರುತ್ತದೆ. ಆರೋಗ್ಯವಂತ ಕೂದಲಿನ ಒಂದು ತಂತು ಸುಮಾರು 85 ಗ್ರಾಂ ತೂಕವನ್ನು ಹೊರಬಲ್ಲದು. ಆ ಲೆಕ್ಕಕ್ಕೆ ತಲೆಗೂದಲಿನ ಎಲ್ಲ ತಂತುಗಳ ಒಟ್ಟಾರೆ ಬಲ ಸುಮಾರು 9.5 ಟನ್ - ಅಂದರೆ ಸುಮಾರು 4 ಕಾರುಗಳ ತೂಕ. ಕೂದಲ ತಂತುವಿಗೆ ಅದೇ ಗಾತ್ರದ ಉಕ್ಕಿನಷ್ಟು ಬಲ ಇರುತ್ತದೆ. ತಲೆಗೂದಲು ತನ್ನಷ್ಟೇ ಗಾತ್ರದ ತಾಮ್ರದ ತಂತಿಗಿಂತಲೂ ಹೆಚ್ಚು ಬಲಶಾಲಿ. ಕೂದಲ ತಂತುವಿನ ಎರಡೂ ತುದಿಗಳನ್ನು ಹಿಡಿದು ಎಳೆದರೆ ಮುರಿಯುವ ಮುನ್ನ ಅದು ತನ್ನ ಉದ್ದದ ಸುಮಾರು 1.5 ಪಟ್ಟು ಲಂಬವಾಗಬಲ್ಲದು. ಅದೇ ತಂತುವನ್ನು ನೀರಿನಿಂದ ಒದ್ದೆ ಮಾಡಿದರೆ ಮುರಿಯುವ ಮುನ್ನ ಇನ್ನೂ 20 ಪ್ರತಿಶತ ಲಂಬವಾಗುತ್ತದೆ.

 ತಲೆಗೂದಲನ್ನು ಸೀಳಿ, ಸೂಕ್ಷ್ಮದರ್ಶಕದಲ್ಲಿ ನೋಡಿದರೆ 3 ಪದರಗಳು ಕಾಣುತ್ತವೆ. ಕೂದಲಿಗೆ ಹೊಳಪನ್ನು ನೀಡುವ ಹೊರ ಆವರಣವನ್ನು ಕ್ಯುಟಿಕಲ್ ಎನ್ನುತ್ತಾರೆ. ಕೂದಲಿಗೆ ಬಣ್ಣ ನೀಡುವ ಮಧ್ಯದ ಪದರಕ್ಕೆ ಕಾರ್ಟೆಕ್ಸ್ ಎಂದು ಹೆಸರು. ಈ ಬಣ್ಣ ಬರುವುದು ಮೆಲನಿನ್ ಎಂಬ ರಾಸಾಯನಿಕದಿಂದ. ಮೆಲನಿನ್ ಇಲ್ಲದ ಕೂದಲು ಬೆಳ್ಳಗಾಗುತ್ತದೆ. ಕೂದಲಿನ ಬುಡಕ್ಕೆ ಒಮ್ಮೆ ಮೆಲನಿನ್ ಉತ್ಪಾದಿಸುವ ಸಾಮರ್ಥ್ಯ ಕಳೆದುಹೋದರೆ ಮತ್ತೊಮ್ಮೆ ಅದು ಹಿಂದಿರುಗುವುದಿಲ್ಲ. ಹೀಗಾಗಿ, ಒಮ್ಮೆ ಬೆಳ್ಳಗಾದ ಕೂದಲಿಗೆ ಮತ್ತೊಮ್ಮೆ ಸ್ವಾಭಾವಿಕ ಬಣ್ಣ ಬರುವುದಿಲ್ಲ. ಕೂದಲಿನ ಅತ್ಯಂತ ಒಳಗಿನ ಪದರವನ್ನು ಮೆಡುಲ್ಲ ಎನ್ನುತ್ತಾರೆ. ಕ್ಯುಟಿಕಲ್ ಆವರಣ ಸಾಕಷ್ಟು ನೀರು-ನಿರೋಧಕ. ಒಂದು ಕೂದಲ ತಂತು ತನ್ನ ತೂಕದ ಶೇಕಡಾ 30 ರಷ್ಟು ನೀರನ್ನು ಮಾತ್ರ ಹೀರಬಲ್ಲದು. ಇಂತಹ ಒದ್ದೆ ಕೂದಲನ್ನು ಬಿಸಿ ಗಾಳಿಗೆ ಒಡ್ಡಿದರೆ, ಅದರ ಮೇಲ್ಮೈ ಆವರಣಕ್ಕೆ ಘಾಸಿಯಾಗಿ, ಕೂದಲಿನ ರಚನೆಯ ಬಲಗುಂದುತ್ತದೆ. ಜಗತ್ತಿನ ವಿವಿಧ ಭಾಗಗಳಲ್ಲಿ ಆಯಾ ವಾತಾವರಣಕ್ಕೆ ಸರಿಯಾಗಿ ಜನರ ತಲೆಗೂದಲಿನ ರಚನೆ ಇರುತ್ತದೆ. ಇದರಲ್ಲಿ ಜೀನ್'ಗಳ ಪಾತ್ರವಿದೆ. ಜನರ ಭೌಗೋಳಿಕ ವಾಸಸ್ಥಾನ ಬದಲಾದಾಗ ಕೆಲ ಪೀಳಿಗೆಗಳವರೆಗೆ ಕೂದಲಿನ ಮೂಲ ರಚನೆ ಹಂತಹಂತವಾಗಿ ಮಾರ್ಪಾಡಾಗುತ್ತದೆ.

 ರಾಸಾಯನಿಕ ಧಾತುಗಳ ದೃಷ್ಟಿಯಿಂದ ತಲೆಗೂದಲಿನ ಶೇಕಡಾ 50 ಇಂಗಾಲ, ಶೇಕಡಾ 21 ಆಕ್ಸಿಜನ್, ಶೇಕಡಾ 17 ನೈಟ್ರೋಜನ್, ಶೇಕಡಾ 6 ಹೈಡ್ರೋಜನ್ ಮತ್ತು ಶೇಕಡಾ 5 ಗಂಧಕ. ಕೂದಲು ಸುಟ್ಟಾಗ ಬರುವ ಕಮಟು ವಾಸನೆಗೆ ಕಾರಣ ಈ ಗಂಧಕವೇ. ಇದರ ಜೊತೆಗೆ ಅಲ್ಪ ಪ್ರಮಾಣದಲ್ಲಿ ಮೆಗ್ನೀಶಿಯಂ, ಕಬ್ಬಿಣ, ಕ್ರೋಮಿಯಂ, ಬಂಗಾರ ಮತ್ತು ನಮ್ಮ ಶರೀರ ಸೇರಿದ ಒಟ್ಟು 14 ಬಗೆಯ ಧಾತುಗಳು ಇರುತ್ತವೆ. ಒಂದು ಕಾಲಾವಧಿಯಲ್ಲಿ ವಿಷಕಾರಿ ರಾಸಾಯನಿಕಗಳ ಸೇವನೆಯಿಂದ ಮರಣಿಸಿದವರ ಕೂದಲನ್ನು ರಾಸಾಯನಿಕ ಪರೀಕ್ಷೆ ಮಾಡುವ ಮೂಲಕ ಅವರ ಮರಣಕ್ಕೆ ಕಾರಣವಾದ ಭಾರಲೋಹ ಧಾತುವನ್ನು ಪತ್ತೆ ಮಾಡಲು ಸಾಧ್ಯ. ಆರ್ಸೆನಿಕ್ ವಿಷವನ್ನು ಉಣಿಸಿ ಜನರನ್ನು ಕೊಂದ ಕೆಲವು ಪ್ರಕರಣಗಳು ಈ ಮಾರ್ಗದ ಮೂಲಕ ಪತ್ತೆಯಾಗಿವೆ. ಅಷ್ಟೇ ಅಲ್ಲದೆ, ತಲೆಗೂದಲಿನ ರಾಸಾಯನಿಕ ಪರೀಕ್ಷೆಯಿಂದ ಆಯಾ ವ್ಯಕ್ತಿ ಸೇವಿಸಿರುವ ಔಷಧಗಳು, ವಿಟಮಿನ್ನುಗಳ ಮಟ್ಟ, ನಶೆಯ ಮದ್ದುಗಳು, ಮೊದಲಾದುವುಗಳನ್ನು ಪತ್ತೆ ಮಾಡಬಹುದು. ಕತ್ತರಿಸಿದ ಕೂದಲಿನಿಂದ ವ್ಯಕ್ತಿಯ ಲಿಂಗ ಮತ್ತು ವಯಸ್ಸನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಆದರೆ, ಬುಡಸಮೇತ ಕಿತ್ತ ಕೂದಲು ಇದನ್ನೂ ಸಾಧ್ಯವಾಗಿಸಬಲ್ಲದು! ತಲೆಗೂದಲಿನಲ್ಲಿ ಸತುವಿನ ಮತ್ತು ತಾಮ್ರದ ಪ್ರಮಾಣ ಹೆಚ್ಚಾಗಿರುವವರ ಮಿದುಳಿನ ಕಲಿಕೆಯ ಸಾಮರ್ಥ್ಯ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ.

 ತಲೆಗೂದಲನ್ನು ಹೊರತುಪಡಿಸಿಯೂ ದೇಹದ ಬಹುತೇಕ ಭಾಗಗಳಲ್ಲಿ ಕೂದಲು ಇರುತ್ತದೆ. ಕಂಕುಳಿನಂತಹ ಭಾಗಗಳಲ್ಲಿ ಕೂದಲು ಉದ್ದವಾಗಿ, ಒತ್ತಾಗಿ ಬೆಳೆಯುತ್ತದೆ. ನಡೆಯುವಾಗ, ಓಡುವಾಗ ಭುಜಗಳ ಚಲನೆ ಹೆಚ್ಚಾಗಿರುವುದರಿಂದ ಆಚೀಚಿನ ಚರ್ಮದ ಭಾಗಗಳು ಒಂದಕ್ಕೊಂದು ಹೆಚ್ಚಾಗಿ ಘರ್ಷಿಸುತ್ತವೆ. ಇದರಿಂದ ಚರ್ಮಕ್ಕೆ ಘಾಸಿಯಾಗದಂತೆ ಅಲ್ಲಿನ ಕೂದಲು ಕಾಪಾಡುತ್ತದೆ. ಚರ್ಮದ ಮೇಲಿನ ಸಣ್ಣ ಗಾತ್ರದ ಕೂದಲಿಗೆ ರೋಮ ಎಂದು ಹೆಸರು. ನಮ್ಮ ಶರೀರದಲ್ಲಿ ಅಂಗೈ, ಅಂಗಾಲು, ತುಟಿಗಳು, ಮತ್ತು ಕಣ್ಣು ರೆಪ್ಪೆಗಳನ್ನು ಹೊರತುಪಡಿಸಿ ರೋಮಗಳು ಎಲ್ಲೆಡೆಯೂ ಇರುತ್ತವೆ. ನವಜಾತ ಶಿಶುವಿನಲ್ಲಿ ಸುಮಾರು 50 ಲಕ್ಷ ರೋಮಗಳು ಇರುತ್ತವೆ. ಈ ಸಂಖ್ಯೆ ಜೀವನದ ಉದ್ದಕ್ಕೂ ಮತ್ತಷ್ಟು ಹೆಚ್ಚುವುದಿಲ್ಲ. ಚರ್ಮದ ಒಂದು ಚದರ ಸೆಂಟಿಮೀಟರ್ ವಿಸ್ತೀರ್ಣದಲ್ಲಿ ಸುಮಾರು 1000 ರೋಮಗಳು ಇರುತ್ತವೆ. ವಯಸ್ಸಾದಂತೆಲ್ಲ ಈ ಸಂಖ್ಯೆ ಕಡಿಮೆಯಾಗುತ್ತದೆ.  

 ಕೂದಲಿನ ಗಣಿತ ಅದರ ಬಗ್ಗೆ ಜನಕ್ಕೆ ಇರುವ ಭಾವನಗಳಷ್ಟೇ ವಿಸ್ಮಯಕಾರಿ! 

------------------------


ಜನವರಿ 2024 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯ ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/27b251aaca3f197c7c757b899d27f963ab5249d0202401.pdf.html?fbclid=IwAR1-P_MYVJu8e6FOUmaFlM87weFbyeMOsLsQNjgKjJX3qszr5VnNIwvNp9A

 

 


ಮಕ್ಕಳಲ್ಲಿ ನ್ಯುಮೋನಿಯಾ - ಎಚ್ಚರ ಅಗತ್ಯ

ಡಾ. ಕಿರಣ್ ವಿ.ಎಸ್.

ವೈದ್ಯರು

 ಎಳೆಯ ವಯಸ್ಸಿನ ಮಕ್ಕಳಲ್ಲಿ ಶ್ವಾಸಕೋಶಗಳ ಸಮಸ್ಯೆ ಗಂಭೀರವಾದದ್ದು. ಜಗತ್ತಿನಾದ್ಯಂತ ಐದು ವರ್ಷಗಳ ಒಳಗಿನ ಮಕ್ಕಳ ಅನಾರೋಗ್ಯ ಮತ್ತು ಸಾವಿಗೆ ಪ್ರಮುಖ ಕಾರಣ ನ್ಯುಮೋನಿಯಾ. ಗ್ರೀಕ್ ಭಾಷೆಯಲ್ಲಿ ನ್ಯುಮೋನ್ ಎಂದರೆ ಶ್ವಾಸಕೋಶಗಳು ಎಂದರ್ಥ. ನ್ಯುಮೋನಿಯಾ ಎಂದರೆ ಶ್ವಾಸಕೋಶಗಳ ಸೋಂಕು. ಪ್ರತಿವರ್ಷ ಪ್ರಪಂಚದಲ್ಲಿ ಎರಡು ಲಕ್ಷ ನವಜಾತ ಶಿಶುಗಳೂ ಸೇರಿ ಐದು ವರ್ಷಗಳ ಒಳಗಿನ ಸುಮಾರು 7,50,000 ಮಕ್ಕಳು ನ್ಯುಮೋನಿಯಾ ಕಾರಣದಿಂದ ಮರಣಿಸುತ್ತಾರೆ. ಮಕ್ಕಳ ಸಾವುಗಳ ಎಲ್ಲ ಕಾರಣಗಳ ಪೈಕಿ ನ್ಯುಮೋನಿಯಾ ಶೇಕಡಾ 15 ಎಂದು ಅಂದಾಜು. ವಯಸ್ಸು ಕಡಿಮೆಯಿದ್ದಷ್ಟೂ ಮಕ್ಕಳು ನ್ಯುಮೋನಿಯಾದಿಂದ ಬಳಲುವ ಸಾಧ್ಯತೆಗಳು ಅಧಿಕ. ಸರಿಯಾದ ಲಸಿಕೆ ಮತ್ತು ಚಿಕಿತ್ಸೆಗಳು ದಕ್ಕಿದರೆ ಈ ಎಲ್ಲ ಮಕ್ಕಳ ಮರಣವನ್ನೂ ತಡೆಗಟ್ಟಬಹುದು. ನ್ಯುಮೋನಿಯಾ ಕಾರಣದಿಂದ ಆಗುವ ಮಕ್ಕಳ ಮರಣ ಆಯಾ ದೇಶದ ಆರೋಗ್ಯ ವ್ಯವಸ್ಥೆಯ ನ್ಯೂನತೆಗಳ ಮಾಪಕ.

 ಮಕ್ಕಳಲ್ಲಿ ರೋಗ-ನಿರೋಧಕ ಶಕ್ತಿ ಕ್ಷೀಣವಾಗಿರುತ್ತದೆ. ಬಹುತೇಕ ಬಡದೇಶಗಳ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಾರೆ. ಅಂತಹವರಲ್ಲಿ ಯಾವುದೇ ಸೋಂಕು ಘಾತಕವಾಗಬಲ್ಲದು. ನ್ಯುಮೋನಿಯಾ ರೋಗಿಗಳು ಕೆಮ್ಮುವಾಗ, ಸೀನುವಾಗ ರೋಗಕಾರಕ ಪರೋಪಜೀವಿಗಳು ಸಣ್ಣ ಬಿಂದುಗಳ ಗಾತ್ರದಲ್ಲಿ ಗಾಳಿಯನ್ನು ಸೇರುತ್ತವೆ. ಈ ಹಾದಿಯಲ್ಲಿ ಉಸಿರಾಟದ ಮೂಲಕ ಒಬ್ಬರಿಂದೊಬ್ಬರಿಗೆ ಹಬ್ಬುವ ನ್ಯುಮೋನಿಯಾ ಸೋಂಕಿಗೆ ವ್ಯಾಪಕವಾಗಿ ಹರಡುವ ಸಾಮರ್ಥ್ಯವಿದೆ. ಬ್ಯಾಕ್ಟೀರಿಯಾ, ವೈರಸ್ ಅಥವಾ ಫಂಗಸ್ ಸೋಂಕುಕಾರಕ ಪರೋಪಜೀವಿಗಳು ನ್ಯುಮೋನಿಯಾ ಉಂಟುಮಾಡಬಲ್ಲವು. ವೈರಸ್ ನ್ಯುಮೋನಿಯಾ ಮುಖ್ಯವಾಗಿ ಒಂದು ತಿಂಗಳ ವಯಸ್ಸಿನಿಂದ ಎರಡು ವರ್ಷದವರೆಗಿನ ಮಕ್ಕಳಲ್ಲಿ ಕಾಣುತ್ತದೆ. ಸೋಂಕಿನಲ್ಲಿ ರೋಗ ಲಕ್ಷಣಗಳು ತೀವ್ರವಾಗಿರುತ್ತವೆ. ಇದರಲ್ಲಿ ಆಂಟಿಬಯಾಟಿಕ್ ಔಷಧಗಳು ಕೆಲಸ ಮಾಡಲಾರವು. ಎರಡು ವರ್ಷದ ವಯಸ್ಸಿನ ನಂತರ ಬ್ಯಾಕ್ಟೀರಿಯಾ ಮೂಲದ ನ್ಯುಮೋನಿಯಾ ಸಾಧ್ಯತೆಗಳು ಏರುತ್ತಾ ಹೋಗುತ್ತವೆ. ಈ ಸೋಂಕಿನ ಚಿಕಿತ್ಸೆಯಲ್ಲಿ ಸೂಕ್ತ ಆಂಟಿಬಯಾಟಿಕ್ ಔಷಧಗಳನ್ನು ಬಳಸಬೇಕು. ಫಂಗಸ್ ಮೂಲದ ನ್ಯುಮೋನಿಯಾ ಸಾಮಾನ್ಯವಾಗಿ ರೋಗ-ನಿರೋಧಕ ಶಕ್ತಿ ಕುಂಠಿತವಾಗಿರುವ ಮಕ್ಕಳನ್ನು ಕಾಡುತ್ತದೆ. ಇದನ್ನು ಪತ್ತೆ ಮಾಡುವುದು ಮತ್ತು ಚಿಕಿತ್ಸೆ ನೀಡುವುದು ಸವಾಲಿನ ಸಂಗತಿ.

 ಉಸಿರಿನ ಮೂಲಕ ಶ್ವಾಸನಾಳಗಳನ್ನು ಪ್ರವೇಶಿಸುವ ಸೋಂಕುಕಾರಕ ಪರೋಪಜೀವಿಗಳು ಶ್ವಾಸಕೋಶಗಳಲ್ಲಿ ಹರಡಿ ನ್ಯುಮೋನಿಯಾ ಲಕ್ಷಣಗಳನ್ನು ತೋರುತ್ತವೆ. ಮಗುವಿಗೆ ಜ್ವರ, ಕೆಮ್ಮು ಕಾಡುತ್ತದೆ. ಉಸಿರಾಟದ ಗತಿ ತೀವ್ರವಾಗುತ್ತದೆ. ಮೂಗಿನ ಹೊಳ್ಳೆಗಳು ಹಿಗ್ಗುವಿಕೆ, ಎದೆಯ ಪಕ್ಕೆಗಳ ಸೆಳೆತಗಳು ಮಗು ಉಸಿರನ್ನು ಎಳೆದುಕೊಳ್ಳಲು ಕಷ್ಟಪಡುವುದನ್ನು ಸೂಚಿಸುತ್ತವೆ. ಪ್ರತಿಯೊಂದು ಉಸಿರಿನ ಜೊತೆಗೂ ಮಗು ಮುಲುಗುವಂತೆ ಸದ್ದು ಮಾಡುತ್ತದೆ. ನಿಶ್ಶಕ್ತಿ ಆವರಿಸಿ, ಮಗು ಚಟುವಟಿಕೆಯಿಲ್ಲದೆ ಮಂಕಾಗುತ್ತದೆ. ಹಾಲು ಕುಡಿಯಲು, ಆಹಾರ ಸೇವಿಸಲು ನಿರಾಕರಿಸುತ್ತದೆ. ಇದು ಮುಂದುವರೆದು ಮಗು ಅರೆ-ಪ್ರಜ್ಞಾವಸ್ಥೆಗೆ ಜಾರಬಹುದು; ಸೆಳೆತ ಉಂಟಾಗಬಹುದು. ಇದು ಅತ್ಯಂತ ತೀವ್ರ ನ್ಯುಮೋನಿಯಾದ ಸಂಕೇತ. ಈ ಹಂತದಲ್ಲೂ ಚಿಕಿತ್ಸೆ ದೊರೆಯದಿದ್ದರೆ ಮರಣ ಸಂಭವಿಸಬಹುದು.

 ನುರಿತ ವೈದ್ಯರು ನ್ಯುಮೋನಿಯಾ ಸೋಂಕನ್ನು ಶ್ವಾಸಕೋಶಗಳ ಭೌತಿಕ ಪರೀಕ್ಷೆಯಿಂದ ಅನುಮಾನಿಸಬಲ್ಲರು. ಇದಕ್ಕೆ ಪೂರಕವಾಗಿ ರಕ್ತದ ಪರೀಕ್ಷೆಗಳು ಮತ್ತು ಶ್ವಾಸಕೋಶಗಳ ಎಕ್ಸ್-ರೇ ತಪಾಸಣೆ ನೆರವಾಗುತ್ತವೆ. ನ್ಯುಮೋನಿಯಾ ಚಿಕಿತ್ಸೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಪ್ರಮಾಣಿಸಲ್ಪಟ್ಟ, ಜಾಗತಿಕವಾಗಿ ಮಾನ್ಯವಾದ ಚಿಕಿತ್ಸೆಯ ಮಾರ್ಗಸೂಚಿಗಳಿವೆ. ಅದರ ಪ್ರಕಾರ ನೀಡುವ ಚಿಕಿತ್ಸೆ ಬಹುತೇಕ ಮಕ್ಕಳಲ್ಲಿ ಫಲಕಾರಿಯಾಗುತ್ತದೆ. ತೀವ್ರವಾದ ನ್ಯುಮೋನಿಯಾ ಇರುವ ಮಕ್ಕಳನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಬೇಕು. ಬಾಯಿಂದ ಔಷಧ ಸೇವಿಸಲು ಅಸಮರ್ಥರಾದ ಮಕ್ಕಳಿಗೆ ನೇರವಾಗಿ ರಕ್ತಕ್ಕೆ ಔಷಧ ನೀಡಬೇಕಾಗುತ್ತದೆ. ಉಸಿರಾಟಕ್ಕೆ ಹೋರಾಡುವ ಮಕ್ಕಳಿಗೆ ಆಕ್ಸಿಜನ್ ನೀಡಬೇಕು. ಕೆಲವೊಮ್ಮೆ ಕೃತಕ ಉಸಿರಾಟ ಯಂತ್ರಗಳ ನೆರವೂ ಬೇಕಾಗಬಹುದು. ಸೋಂಕಿಗೆ ಕಾರಣವಾಗಿರುವ ರೋಗಕಾರಕ ಪರೋಪಜೀವಿಗೆ ಅನುಗುಣವಾಗಿ ಚಿಕಿತ್ಸೆ ನಡೆಯಬೇಕು.

 ಯಾವುದೇ ಸಾಂಕ್ರಾಮಿಕ ಕಾಯಿಲೆಯ ಚಿಕಿತ್ಸೆಯಷ್ಟೇ ಮುಖ್ಯವಾದದ್ದು ಅದನ್ನು ಬಾರದಂತೆ ತಡೆಯುವ ವಿಧಾನಗಳು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನಿಸೆಫ್ ಸಂಘಟನೆಗಳು ಮಕ್ಕಳಲ್ಲಿ ನ್ಯುಮೋನಿಯಾ ತಡೆಗಟ್ಟಲು ಮತ್ತು ಸೂಕ್ತ ಚಿಕಿತ್ಸೆ ನೀಡಲು ಕಾರ್ಯತಂತ್ರವನ್ನು ರೂಪಿಸಿದೆ. ನ್ಯುಮೋನಿಯಾ ತಡೆಗಟ್ಟುವಲ್ಲಿ ಪೌಷ್ಟಿಕ ಆಹಾರ ಸೇವನೆ, ಕಾಯಿಲೆಯಿಂದ ಬಳಲುತ್ತಿರಬಹುದಾದವರಿಂದ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಸಾಬೂನು ಬಳಸಿ ಚೆನ್ನಾಗಿ ತೊಳೆಯುವುದು, ಅಡುಗೆ ಮಾಡಲು ಉರುವಲು ಉರಿಸುವಾಗ ಬರುವ ಹೊಗೆಯ ಮಾಲಿನ್ಯವನ್ನು ತಗ್ಗಿಸುವ ಪ್ರಯತ್ನಗಳು, ಪೋಷಕರು ಧೂಮಪಾನದಿಂದ ದೂರವಿರುವುದು, ಮಕ್ಕಳಿಗೆ ಬದುಕಿನ ಮೊದಲ ಆರು ತಿಂಗಳ ಕಾಲ ಕೇವಲ ತಾಯ ಮೊಲೆಹಾಲನ್ನು ಕುಡಿಸುವುದು, ಆಯಾ ವಯಸ್ಸಿನ ಲಸಿಕೆಗಳ ಬಳಕೆ ಮೊದಲಾವುಗಳು ಪರಿಣಾಮಕಾರಿ. ಕಾಯಿಲೆಯ ಲಕ್ಷಣಗಳನ್ನು ಸರಿಯಾಗಿ ಅರಿತು, ಕಾಯಿಲೆ ಇನ್ನೂ ಪ್ರಾಥಮಿಕ ಮಟ್ಟದಲ್ಲಿ ಇರುವಾಗಲೇ ಚಿಕಿತ್ಸೆ ಪಡೆಯುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಬಹಳ ಸೂಕ್ತ. ನಮ್ಮ ದೇಶದಲ್ಲಿ ನ್ಯುಮೋನಿಯಾ ಬಾರದಂತೆ ಕಾಪಾಡುವ ಲಸಿಕೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

 ಮಕ್ಕಳಲ್ಲಿ ನ್ಯುಮೋನಿಯಾ ಕಾಯಿಲೆಯನ್ನು ಯಾವ ಕಾರಣಕ್ಕೂ ಅವಗಣಿಸಬಾರದು. ಪೋಷಕರ ಸಹಕಾರ, ವೈದ್ಯರ ಪ್ರಯತ್ನ, ಉತ್ತಮ ಲಸಿಕೆಗಳು, ಪರಿಣಾಮಕಾರಿ ಚಿಕಿತ್ಸೆ ಮತ್ತು ಸರ್ಕಾರಗಳ ಬೆಂಬಲದಿಂದ ಮಕ್ಕಳ ನ್ಯುಮೋನಿಯಾ ಚಿಕಿತ್ಸೆಯಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಕಳೆದ ಎರಡು ದಶಕಗಳಲ್ಲಿ ನ್ಯುಮೋನಿಯಾದಿಂದ ಮರಣಿಸುವ ಮಕ್ಕಳ ಸಂಖ್ಯೆ ಶೇಕಡಾ 60 ಕಡಿಮೆಯಾಗಿದೆ. ಆದರೂ ಈ ನಿಟ್ಟಿನಲ್ಲಿ ಸಾಧಿಸಬೇಕಾದ ಬೆಳವಣಿಗೆ ಇನ್ನೂ ಸಾಕಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಉತ್ತಮಗೊಳಿಸುವುದು ಮುಂದಿನ ದಶಕದ ಧ್ಯೇಯ. ಇದು ಸಾಧ್ಯವಾದರೆ ಮಕ್ಕಳ ನ್ಯುಮೋನಿಯಾ ಚಿಕಿತ್ಸೆಯಲ್ಲಿ ಗಣನೀಯ ಪ್ರಗತಿ ಸಾಧಿಸಬಹುದಾಗಿದೆ.  

------------

 ದಿನಾಂಕ 19/12/2023 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/pneumonia-in-children-be-aware-health-care-2608247

 

 

 


ಕೀಲುಗಳ ಗಣಿತ

ಡಾ. ಕಿರಣ್ ವಿ.ಎಸ್.

ವೈದ್ಯರು

ಶರೀರದಲ್ಲಿ ಕನಿಷ್ಠ ಎರಡು ಮೂಳೆಗಳು ಪರಸ್ಪರ ಸಂಧಿಸುವ ಸ್ಥಾನವನ್ನು ಕೀಲು ಎನ್ನಬಹುದು. ಒಂದು ಕೀಲಿನಲ್ಲಿ ಎರಡಕ್ಕಿಂತ ಹೆಚ್ಚಿನ ಮೂಳೆಗಳೂ ಇರಬಹುದು. ನಮ್ಮ ಶರೀರದಲ್ಲಿ 206 ಮೂಳೆಗಳು ಇವೆಯೆಂದು ಬಲ್ಲೆವು. ಇವುಗಳು ಒಟ್ಟು 360 ಕೀಲುಗಳ ಮೂಲಕ ಬೆಸೆದುಕೊಂಡಿವೆ. ನವಜಾತ ಶಿಶುವಿನಲ್ಲಿ ಕೀಲುಗಳ ಸಂಖ್ಯೆ ಇನ್ನೂ ಹೆಚ್ಚು. ಶಿಶುವಿಗೆ ವಯಸ್ಸಾದಂತೆಲ್ಲ ಕೆಲ ಮೂಳೆಗಳು ಪರಸ್ಪರ ಬೆಸೆದು ವಯಸ್ಕರ ಹಂತಕ್ಕೆ ಬರುತ್ತವೆ. 360 ಕೀಲುಗಳ ಪೈಕಿ ಅತಿ ಹೆಚ್ಚು ಸಂಖ್ಯೆ ತಲೆಬುರುಡೆಯದು -.ಇದರಲ್ಲಿ 86 ಕೀಲುಗಳಿವೆ. ಎರಡನೆಯ ಸ್ಥಾನ ಒಟ್ಟು 76 ಕೀಲುಗಳಿರುವ ಬೆನ್ನುಮೂಳೆ ಮತ್ತು ಸೊಂಟ ಪ್ರದೇಶದ್ದು. 12 ಜೋಡಿ ಪಕ್ಕೆಲುಬುಗಳು ಹಿಂಬದಿಯಲ್ಲಿ ಬೆನ್ನುಮೂಳೆಯ ಆಸರೆ ಪಡೆದರೆ, ಮುಂಬದಿಯಲ್ಲಿ ಎದೆಯ ಮಧ್ಯಭಾಗದ ಮೂಳೆಗೆ ಮತ್ತು ತಂತಮ್ಮಲ್ಲೇ ಬೆಸೆಯುತ್ತವೆ. ಇದು 66 ಕೀಲುಗಳಿಗೆ ಕಾರಣವಾಗಿದೆ. ಪ್ರತಿಯೊಂದು ಕೈಗೆ 32 ರಂತೆ ಎರಡೂ ಕೈಗಳಿಂದ 64 ಕೀಲುಗಳಿವೆ. ಅಂತೆಯೇ, ಪ್ರತಿಯೊಂದು ಕಾಲಿಗೆ 31 ರಂತೆ ಎರಡು ಕಾಲುಗಳಿಂದ 62 ಕೀಲುಗಳಾಗುತ್ತವೆ. ಸಂಖ್ಯೆಯಲ್ಲಿ ಕೊನೆಯ ಸ್ಥಾನ ಕುತ್ತಿಗೆಯದ್ದು. ಇದರಲ್ಲಿ 6 ಕೀಲುಗಳಿವೆ. ಕತ್ತಿನಲ್ಲಿರುವ ಹಯಾಯ್ಡ್ ಎನ್ನುವ ಒಂದು ಮೂಳೆಗೆ ಯಾವುದೇ ಕೀಲು ಇಲ್ಲ. ಇದೊಂದು ರೀತಿ ಯಾವುದೇ ಜೋಡಣೆಯಿಲ್ಲದ ಮುಕ್ತಾತ್ಮ ಮೂಳೆ.

ಚಲನೆಯನ್ನು ಆಧರಿಸಿ ಶರೀರದ ಕೀಲುಗಳನ್ನು ಸರಳವಾದ ವಿಧಾನದಲ್ಲಿ ವಿಂಗಡಿಸಬಹುದು. ಎಲ್ಲ ಕೀಲುಗಳಲ್ಲೂ ಚಲನೆ ಇರಬೇಕೆಂದಿಲ್ಲ. ಚಲನೆ ಇಲ್ಲದ ಕೀಲುಗಳು ಮೊದಲನೆಯ ಗುಂಪಿನವು. ಇಡೀ ತಲೆ ಬುರುಡೆಯಲ್ಲಿ 86 ಕೀಲುಗಳಿದ್ದರೂ ದವಡೆಗೆ ಮಾತ್ರ ಚಲನೆಯಿದೆ. ಶಿರಸ್ಸಿನ ಉಳಿದೆಲ್ಲ ಕೀಲುಗಳೂ ಚಲನೆ ಇಲ್ಲದ ಮೊದಲನೆಯ ವರ್ಗಕ್ಕೆ ಸೇರಿವೆ. ಎರಡನೆಯದು: ಮಿತವಾದ ಚಲನೆಯಿರುವ ಕೀಲುಗಳು. ನಮ್ಮ ಬೆನ್ನುಮೂಳೆಯ ಪರಸ್ಪರ ವಿಭಾಗಗಳ ನಡುವೆ ಇರುವ ಕೀಲುಗಳಲ್ಲಿ ಅಲ್ಪ ಅಂತರವಿರುತ್ತದೆ. ಇದು ಅತ್ಯಲ್ಪ ಚಲನೆಗೆ ಅವಕಾಶ ಮಾಡಿಕೊಡುತ್ತದೆ. ಎರಡು ಬೆನ್ನುಮೂಳೆಯ ಘಟಕಗಳ ನಡುವಿನಿಂದ ನರತಂತುಗಳು ಹೊರಹೋಗುತ್ತವೆ. ನರತಂತುಗಳ ಮೇಲೆ ಒತ್ತಡ ಬೀಳಬಾರದೆಂದು ಈ ಕೀಲುಗಳ ನಡುವಣ ಚಲನೆಗೆ ಹೆಚ್ಚು ವ್ಯಾಪ್ತಿಯಿಲ್ಲ. ಮೂರನೆಯದು ಹೆಚ್ಚು ಚಲನೆಗೆ ಅವಕಾಶವಿರುವ ಕೀಲುಗಳು. ಭುಜದ ಕೀಲುಗಳು, ಮಂಡಿಯ ಕೀಲುಗಳು ಮೊದಲಾದುವು ಈ ಗುಂಪಿಗೆ ಸೇರುತ್ತವೆ.

ಚಲಿಸುವ ಕೀಲುಗಳನ್ನು ರಚನೆಯ ಆಧಾರದ ಮೇಲೆ ವಿಂಗಡಿಸಬಹುದು. ಪೃಷ್ಠದ ಕೀಲು ಮತ್ತು ಭುಜದ ಕೀಲು “ಬಾಲ್ ಅಂಡ್ ಸಾಕೆಟ್” ಎನ್ನುವ ಬಗೆಯದ್ದು. ಕುಳಿಯೊಳಗೆ ಮುಕ್ತವಾಗಿ ತಿರುಗಬಲ್ಲ ಚೆಂಡಿನಂತಹ ರೀತಿಯ ಈ ಕೀಲುಗಳು ಬೇರೆ ಬೇರೆ ದಿಕ್ಕುಗಳಲ್ಲಿ ಹೆಚ್ಚಿನ ಕೋನಗಳಲ್ಲಿ ತಿರುಗಬಲ್ಲವು. ಇದರ ಚಲನೆಯನ್ನು ಕಾಲಿನ ಹಿಮ್ಮಡಿಯ ಅಥವಾ ಹೆಬ್ಬರಳಿನ ಬುಡದ ಕೀಲುಗಳ ಜೊತೆಗೆ ಹೋಲಿಸಬಹುದು. ಕುದುರೆಗೆ ಕಟ್ಟಿದ ಜೀನಿನ ಮಾದರಿಯ ಈ ಕೀಲುಗಳು ಹಿಂದೆ-ಮುಂದೆ ಮತ್ತು ಅಕ್ಕ-ಪಕ್ಕಕ್ಕೆ ಚಲಿಸಬಲ್ಲವು. ಆದರೆ ವೃತ್ತದ ಆವರ್ತದಲ್ಲಿ ಚಲಿಸಲಾರವು. ಕೋಣೆಯ ಬಾಗಿಲಿನಂತೆ ಒಂದು ದಿಕ್ಕಿನಲ್ಲಿ ಹಿಂದು-ಮುಂದು ಚಲಿಸುವ ಕೀಲುಗಳಿವೆ. ಮೊಣಕೈ ಕೀಲು ಮತ್ತು ಮಂಡಿಯ ಕೀಲುಗಳು ಇದಕ್ಕೆ ಉದಾಹರಣೆ. ಕೈನ ಮಣಿಕಟ್ಟು ಮತ್ತು ಕಾಲಿನ ಪಾದಗಳ ಕಣಕಾಲಿನ ಕೀಲುಗಳ ಮೂಳೆಗಳು ಒಂದರ ಮೇಲೊಂದು ನಯವಾಗಿ ಜೋಡಣೆಯಾಗಿವೆ. ಇವು ಒಂದು ಹಂತದವರೆಗೆ ತಮ್ಮ ತುದಿಗಳ ಮೇಲೆ ಜಾರಬಲ್ಲವು. ಹೀಗಾಗಿ, ಈ ಕೀಲುಗಳು ಒಂದು ನಿರ್ದಿಷ್ಟ ಕೋನದವರೆಗೆ ತಿರುಗಿ, ನಂತರ ತಮ್ಮ ಚಲನೆಯ ದಿಕ್ಕನ್ನು ಬದಲಿಸುತ್ತವೆ. ನಮ್ಮ ಶರೀರದಲ್ಲಿ ಅತ್ಯಂತ ಹೆಚ್ಚಿನ ಚಲನೆಯ ವ್ಯಾಪ್ತಿ ಹೊಂದಿರುವ ಕೀಲು ಎಂದರೆ ಭುಜ. ಎರಡನೆಯ ಸ್ಥಾನ ಪೃಷ್ಠದ ಕೀಲಿನದ್ದು. 

ಚಲನೆ ಇರುವ ಕೀಲುಗಳಲ್ಲಿನ ಮೂಳೆಗಳನ್ನು ಬೆಸೆಯುವ ಪಟ್ಟಿಯಂತಹ ಅಂಗಾಂಶಗಳನ್ನು ಮೂಳೆರಜ್ಜು (ligament) ಎನ್ನುತ್ತಾರೆ. ಇವು ನಾರಿನಂತಹ ಅಂಗಾಂಶಗಳಿಂದ ತಯಾರಾಗಿರುವ ಬಲಿಷ್ಠವಾದ ಪಟ್ಟಿಗಳು. ಮೂಳೆರಜ್ಜುಗಳ ಉದ್ದ, ಅಗಲ ಮತ್ತು ದಪ್ಪಗಳು ಆಯಾ ಕೀಲಿನ ಚಲನೆ, ವ್ಯಾಪ್ತಿ ಮತ್ತು ಸ್ಥಿರತೆಯನ್ನು ನಿರ್ಧರಿಸುತ್ತವೆ. ಅಪಘಾತಗಳಂತಹ ವೇಳೆ ಕೀಲುಗಳು ತಮ್ಮ ಚಲನೆಯ ವ್ಯಾಪ್ತಿಯನ್ನು ವಿಪರೀತ ವೇಗದಲ್ಲಿ ಮೀರಬಹುದು. ಆಗ ಮೂಳೆರಜ್ಜುಗಳಿಗೆ ಮೊದಲ ಪೆಟ್ಟು. ರಜ್ಜುಗಳ ಶಕ್ತಿಯನ್ನು ಮೀರಿದ ಚಲನೆ ಸಂಭವಿಸಿದರೆ ರಜ್ಜುಗಳು ಹರಿದು, ಮೂಳೆಗಳೂ ಮುರಿಯಬಹುದು. ಆಗ ಆಯಾ ಕೀಲಿನ ಚಲನೆ ದುರ್ಭರವಾಗುತ್ತದೆ. ಪೃಷ್ಠದ ಕೀಲಿನಲ್ಲಿ ಇಡೀ ದೇಹದ ಅತ್ಯಂತ ಬಲಶಾಲಿ ಮೂಳೆರಜ್ಜು ಇರುತ್ತದೆ.  

ಮೂಳೆಗಳು ಗಟ್ಟಿಯಾಗಿ, ಉರುಟಾಗಿ ಇದ್ದರೂ ಕೀಲುಗಳು ಅತಿ ಕಡಿಮೆ ಘರ್ಘಣೆಯಲ್ಲಿ ಚಲಿಸುತ್ತವೆ. ಇದಕ್ಕೆ ಕಾರಣ ಕೀಲುಗಳ ಸಂಪರ್ಕಕ್ಕೆ ಬರುವ ಮೂಳೆಗಳ ಮೇಲ್ಮೈನಲ್ಲಿ ಹರಡಿರುವ ಮೃದ್ವಸ್ಥಿ ಹಾಗು ನಯವಾದ ಲೋಳೆಪದರ. ಇಂತಹ ಲೋಳೆಪದರ ಸ್ರವಿಸುವ ಅಲ್ಪ ಪ್ರಮಾಣದ ಕೀಲೆಣ್ಣೆಯಂತಹ ದ್ರವವಸ್ತುವು ಕೀಲುಗಳ ಘರ್ಷಣೆಯನ್ನು ಬಹುವಾಗಿ ನಿಯಂತ್ರಿಸುತ್ತವೆ. ಈ ರೀತಿ ಘರ್ಷಣೆಯನ್ನು ನಿಯಂತ್ರಿಸುವ ವ್ಯವಸ್ಥೆಗೆ ಏನಾದರೂ ತೊಂದರೆಯಾದರೆ ಕೀಲುಗಳ ಚಲನೆ ತ್ರಾಸದಾಯಕವಾಗುತ್ತದೆ. ಅಂತೆಯೇ, ಕೀಲುಗಳಲ್ಲಿ ಉರಿಯೂತ ಸಂಭವಿಸಿದರೆ ಸಂಧಿವಾತದ ಲಕ್ಷಣಗಳು ಕಾಣುತ್ತವೆ. ಇವು ವಯೋಸಹಜ ದೌರ್ಬಲ್ಯದ ಕಾರಣದಿಂದ ಕಾಣಬಹುದು. ಅಥವಾ, ಕೀಲುಗಳಿಗೆ ಆಗುವ ಪೆಟ್ಟು, ಸೋಂಕು, ಇಲ್ಲವೇ ಶರೀರದ ರಕ್ಷಕ ವ್ಯವಸ್ಥೆಯ ಏರುಪೇರಿನಿಂದ ಆಗಬಹುದು. ಶರೀರದ ರಾಸಯನಿಕ ಕ್ರಿಯೆಗಳ ಹದ ತಪ್ಪಿ, ದೇಹದಲ್ಲಿನ ಸಹಜ ರಾಸಾಯನಿಕಗಳ ಮಟ್ಟ ಏರುಪೇರಾದರೂ ಕೀಲುಗಳಿಗೆ ಘಾಸಿಯಾಗಬಹುದು. ಕೆಲವು ಕಾಯಿಲೆಗಳು ನಿರ್ದಿಷ್ಟ ಕೀಲುಗಳನ್ನು ಕಾಡುತ್ತವೆ. ಇನೂ ಕೆಲವು ಯಾವ ಕೀಲುಗಳನ್ನಾದರೂ ತೊಂದರೆಗೆ ಸಿಲುಕಿಸಬಲ್ಲವಾದರೂ, ದೊಡ್ಡ ಗಾತ್ರದ, ಹೆಚ್ಚು ಚಲನೆಯಲ್ಲಿರುವ ಕೀಲುಗಳು ಇವಕ್ಕೆ ತುತ್ತಾಗುವುದು ಹೆಚ್ಚು. ಮಾನಸಿಕ ಒತ್ತಡಗಳ ಕಾರಣದಿಂದಲೂ ಕೆಲವು ಕೀಲುನೋವುಗಳು ಉಂಟಾಗುವುದು ಮೊದಲಿನಿಂದಲೂ ತಿಳಿದಿತ್ತಾದರೂ, ಇವು ಇತ್ತೀಚಿನ ದಿನಗಳಲ್ಲಿ ಏರುತ್ತಿದೆ. 

ಶರೀರದ ತೂಕವನ್ನು ಹೊರುವುದು ಕೀಲುಗಳು. ಪ್ರತಿಯೊಂದು ಭಂಗಿಯಲ್ಲಿಯೂ ಕೆಲವು ಕೀಲುಗಳು ಹೆಚ್ಚು ತೂಕ ಹೊರುತ್ತವೆ. ಕೀಲುಗಳು ಸುಸ್ಥಿತಿಯಲ್ಲಿ ಇರಬೇಕೆಂದರೆ ಅವುಗಳ ನೈಸರ್ಗಿಕ ರಚನೆ ಸಮತೋಲನ ಕಾಯ್ದುಕೊಳ್ಳಬೇಕು. ಅಂದರೆ, ಕತ್ತಿನ ಭಾಗ ನೇರವಾಗಿರಬೇಕು. ಬೆನ್ನಿನ ಮೂಳೆ ತನ್ನ ಸಹಜ ವಕ್ರತೆಯನ್ನು ಮೀರಬಾರದು. ಕಾಲುಗಳು ನೆಟ್ಟಗೆ ನಿಲ್ಲಬೇಕು. ಈ ಸಹಜ ಭಂಗಿ ಚಲನೆಯ ವೇಳೆಯೂ ತನ್ನ ಗುರುತ್ವ ಬಿಂದುಗಳನ್ನು ಕಾಯ್ದುಕೊಳ್ಳಬೇಕು. ಕೂರುವಾಗ, ನಡೆಯುವಾಗ ಯಾವುದಾದರೂ ಕಾರಣದಿಂದ ಭಂಗಿ ಅಸಮರ್ಪಕವಾಗಿದ್ದರೆ, ಅದರ ಪರಿಣಾಮವನ್ನು ಕೀಲುಗಳು ಅನುಭವಿಸುತ್ತವೆ. ಕುಳಿತಾಗ, ನಿಂತಾಗ, ನಡೆಯುವಾಗ ಸದಾ ಕಾಲ ಮೊಬೈಲ್ ಫೋನನ್ನು ದಿಟ್ಟಿಸುತ್ತಲೇ ಇರುವವರ ಹಲವಾರು ಕೀಲುಗಳು ಬಹಳ ಬೇಗ ತ್ರಾಸಗೊಳ್ಳುತ್ತವೆ. ಅಂತೆಯೇ, ಬೆನ್ನು ಬಾಗಿಸಿ ಕೂರುವುದು, ಭುಜಗಳನ್ನು ಜೋತು ಬೀಳಿಸುವುದು, ಹೆಚ್ಚು ಕಾಲ ಒಂದೇ ಕಾಲಿನ ಮೇಲೆ ತೂಕ ಬೀಳುವಂತೆ ನಿಲ್ಲುವುದು ಮೊದಲಾದುವು ಕೀಲುಗಳ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ.

ಶರೀರದ ತೂಕ ಕೀಲುಗಳ ಆರೋಗ್ಯದ ಮಾರ್ಗದರ್ಶಿ. ದೇಹದ ತೂಕ ಅಗತ್ಯಕ್ಕಿಂತ 5 ಕಿಲೋಗ್ರಾಂ ಹೆಚ್ಚಾದರೂ ಕೀಲುಗಳ ಮೇಲೆ ಸುಮಾರು 20 ಕಿಲೋಗ್ರಾಂ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ಸಂಶೋಧನೆಗಳು ತಿಳಿಸಿವೆ. ಕೀಲುನೋವುಗಳಿಂದ ಬಳಲುವವರಲ್ಲಿ ಬೊಜ್ಜು ಉಳ್ಳವರದ್ದು ಮೊದಲ ಸ್ಥಾನ. ಇಂತಹವರ ಪ್ರಾಥಮಿಕ ಚಿಕಿತ್ಸೆ ದೇಹದ ತೂಕ ಇಳಿಸುವ ನಿಟ್ಟಿನಲ್ಲಿ ಸಾಗಬೇಕು. ಬೊಜ್ಜಿನ ದೇಹದ ಒತ್ತಡ ಬೀಳುವುದು ಕಾಲುಗಳ ಮೇಲೆ. ಶರೀರದ ಮೂರು ಅತ್ಯಂತ ಬಲಶಾಲಿ ಕೀಲುಗಳಾದ ಪೃಷ್ಠದ ಕೀಲು, ಮಂಡಿಯ ಕೀಲು ಮತ್ತು ಕಣಕಾಲಿನ ಕೀಲುಗಳು ಕಾಲುಗಳಲ್ಲಿವೆ. ಬೊಜ್ಜಿನ ಕಾರಣದಿಂದ ಹೆಚ್ಚಿನ ಸಮಸ್ಯೆ ಅನುಭವಿಸುವುದು ಮಂಡಿಯ ಕೀಲು. ನಿಂತಿರುವಾಗ ದೇಹದ 80% ತೂಕದಷ್ಟು ಒತ್ತಡ ಕೀಲುಗಳ ಮೇಲಿರುತ್ತದೆ. ಇದು ನಡೆಯುವಾಗ 150% ಗೆ ಏರುತ್ತದೆ. ವೇಗವಾಗಿ ಓಡುವ ಕ್ರೀಡಾಪಟುಗಳ ಮಂಡಿ ಕೀಲುಗಳು ಅವರ ದೇಹ ತೂಕದ ಸುಮಾರು ಎಂಟು ಪಟ್ಟು ಒತ್ತಡಕ್ಕೆ ಸಿಲುಕುತ್ತವೆ ಎಂದು ಅಂದಾಜು.

ದೇಹದ ಪ್ರತಿಯೊಂದು ಪ್ರಮುಖ ಕೀಲಿನಲ್ಲೂ ದುರ್ಬಲ ಭಾಗವೊಂದಿರುತ್ತದೆ. ಉದಾಹರಣೆಗೆ ಭುಜದ ಕೀಲಿನ ಮುಂಭಾಗ ದುರ್ಬಲ; ಪೃಷ್ಠದ ಕೀಲಿನ ಹಿಂಭಾಗ ದುರ್ಬಲ. ಇಂತಹ ದುರ್ಬಲ ಭಾಗದ ಮೂಲಕ ಕೀಲುಗಳು ಸ್ವಸ್ಥಾನದಿಂದ ಜಾರಬಹುದು. ಅಪಘಾತಗಳಲ್ಲಿ ಈ ರೀತಿಯ ಜಾರುವಿಕೆ ಸಾಮಾನ್ಯ. ಆಗ ಕೀಲುಗಳನ್ನು ಸ್ವಸ್ಥಾನಕ್ಕೆ ಮರಳಿಸುವ ಪ್ರಕ್ರಿಯೆಯನ್ನು ನುರಿತ ವೈದ್ಯರು ನಾಜೂಕಾಗಿ ಮಾಡಬೇಕು. ತಪ್ಪುತಪ್ಪಾಗಿ ಮಾಡಿದರೆ ಜೀವನದ ಉದ್ದಕ್ಕೂ ನರಳಬೇಕಾಗುತ್ತದೆ.

ಕೀಲುಗಳ ಗಣಿತ ಅಗಣಿತ ವಿಸ್ಮಯಗಳ ಗಣಿ.

-------------------

ಡಿಸೆಂಬರ್ 2023 ರ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಸಂಪೂರ್ಣ ಸಂಚಿಕೆಯನ್ನು ಓದಲು ಕೊಂಡಿ: https://www.flipbookpdf.net/web/site/0759b401c2226fec6e898955e89e666828bdfbad202312.pdf.html?fbclid=IwAR33nM3rX4Q2o5GGiA_Fh8ucOi-c4qET-cYe1c2Ysqrzzl5Jj-9IaXK_U0w#page/1

 


ಚಳಿಗಾಲಕ್ಕೆ ಸಿದ್ಧರಾಗಿ

ಡಾ. ಕಿರಣ್ ವಿ.ಎಸ್.

ವೈದ್ಯರು

 

ಚಳಿಗಾಲದಲ್ಲಿ ಸಮಸ್ತ ಜೀವಪ್ರಭೇದಗಳೂ ತಮ್ಮ ಆಕ್ರಮಣಶೀಲತೆಯನ್ನು ಬದಿಗಿಟ್ಟು ವಿಶ್ರಾಂತಿ ಪಡೆಯುತ್ತವೆ. ಕೆಲವು ಪ್ರಾಣಿಗಳಂತೂ ಹೈಬರ್ನೇಶನ್ ಎಂಬ ದೀರ್ಘ ನಿದ್ರೆಗೆ ಜಾರುತ್ತವೆ. ಆದರೆ ನಾಗರಿಕತೆಯ ಸುಳಿಗೆ ಸಿಲುಕಿರುವ ಮನುಷ್ಯರಿಗೆ ಅಂತಹ ಐಷಾರಾಮದ ಅನುಕೂಲವಿಲ್ಲ! ಚಳಿಗಾಲದಲ್ಲಿ ಚರ್ಮದ ಸಮಸ್ಯೆಗಳು, ಉಸಿರಾಟದ ತೊಂದರೆ, ಸ್ನಾಯು-ಕೀಲುಗಳ ನೋವು, ಮಾನಸಿಕ ಒತ್ತಡ ಹೆಚ್ಚಾಗುತ್ತವೆ. ಶರೀರವನ್ನು ಬೆಚ್ಚಗೆ ಇರಿಸಲು ಹೆಚ್ಚು ಕ್ಯಾಲರಿಗಳ ಆವಶ್ಯಕತೆ ಇರುತ್ತದೆ. ಇದರಿಂದ ಮಧುಮೇಹದ ನಿಯಂತ್ರಣ ಕಷ್ಟವಾಗುತ್ತದೆ. ಮೈ ತೂಕದಲ್ಲಿ ಏರುಪೇರಾಗುತ್ತದೆ. ಹೀಗಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಚಳಿಗಾಲದಲ್ಲಿ ವಿಶೇಷ ಪ್ರಯತ್ನಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬಲ್ಲ ಕೆಲವು ಸಲಹೆಗಳನ್ನು ಪರಿಗಣಿಸಬಹುದು.

 ನಿಯಮಿತ ವ್ಯಾಯಾಮವನ್ನು ತಪ್ಪಿಸಬಾರದು. ಚಳಿಗಾಲದಲ್ಲಿ ಹಾಸಿಗೆ ಬಿಟ್ಟು ಏಳುವುದು ಶ್ರಮದ ಕೆಲಸ. ಬೆಚ್ಚಗೆ ಇನ್ನೊಂದಷ್ಟು ಕಾಲ ಮಲಗಿರುವ ಬಯಕೆ ಸಾಮಾನ್ಯ. ಆದರೆ ಈ ಮನೋವಾಂಛೆ ಆರೋಗ್ಯದ ಅವನತಿಗೆ ಕಾರಣವಾಗಬಾರದು. ಉಸಿರಾಟದ ಸಮಸ್ಯೆ ಇರುವವರು ಚಳಿಗಾಳಿಗೆ ಹೋಗದೆ, ಮನೆಯ ಬೆಚ್ಚಗಿನ ವಾತವರಣದಲ್ಲಿ ವ್ಯಾಯಾಮ ಮಾಡುವುದು ಸೂಕ್ತ. ಇಂತಹ ಸಮಸ್ಯೆ ಇಲ್ಲದವರು ತಮ್ಮ ನಿಯಮಿತ ವ್ಯಾಯಾಮವನ್ನು ಜಾರಿಯಿಡಬೇಕು. ಪ್ರತಿದಿನವೂ ಸುಮಾರು 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ದೇಹವನ್ನು ಮತ್ತು ಮನಸ್ಸನ್ನು ಆರೋಗ್ಯವಾಗಿಡುತ್ತದೆ. ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಆರೋಗ್ಯಕ್ಕೆ ಬೇಕಾದ ವಿಟಮಿನ್-ಡಿ ತಯಾರಿಕೆಗೆ ನೆರವಾಗುತ್ತದೆ.

 ಆಹಾರ ಸೇವನೆಯಲ್ಲಿ ಶಿಸ್ತನ್ನು ಅನುಸರಿಸಬೇಕು. ಶರೀರದ ಶಾಖವನ್ನು ಕಾಪಾಡಿಕೊಳ್ಳಲು ಹೆಚ್ಚಿನ ಆಹಾರದ ಅಗತ್ಯ ಇರುತ್ತದೆ. ಚಳಿಗಾಳಿಯಿಂದ ಚರ್ಮದ ಮೇಲ್ಪದರಗಳ ತೈಲಾಂಶ ಕಡಿಮೆಯಾಗುತ್ತದೆ. ಚರ್ಮದ ಅಡಿಯ ಕೊಬ್ಬಿನ ಪದರ ಹೆಚ್ಚಾದಷ್ಟೂ ದೇಹದ ತಾಪಮಾನವನ್ನು ನಿಯಂತ್ರಿಸುವುದು ಸುಲಭ. ಈ ಕಾರಣಗಳಿಗೆ ಮಿದುಳು ತೈಲಯುಕ್ತ ಆಹಾರವನ್ನು ಬಯಸಿ, ನಾಲಿಗೆಗೆ ಸಂಕೇತಗಳನ್ನು ಕಳಿಸುತ್ತದೆ. ಈ ಪ್ರಲೋಭನೆಯ ಹಿನ್ನೆಲೆಯಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಸೇವಿಸುವ  ಬಯಕೆಯಾಗುತ್ತದೆ. ಇದನ್ನು ನಿಯಂತ್ರಣದಲ್ಲಿ ಇಡಬೇಕು. ಆಹಾರದಲ್ಲಿ ಪ್ರೋಟೀನ್ ಅಂಶವನ್ನು ಹೆಚ್ಚಿಸುವುದು ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಟ್ಟು, ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಇಡೀ ಧಾನ್ಯಗಳು, ಬೇಳೆ-ಕಾಳುಗಳು, ಮೊಟ್ಟೆ, ಮೀನುಗಳ ಬಿಸಿಯಾದ ತಾಜಾ ಆಹಾರ ಒಳ್ಳೆಯದು. ಚಳಿ ಋತುಗಳ ಹಣ್ಣುಗಳು ಮತ್ತು ತರಕಾರಿಗಳ ಬಳಕೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ನಾರಿನ ಅಂಶಗಳನ್ನು ನೀಡಿ, ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತವೆ. ವಿಟಮಿನ್-ಸಿ ಇರುವ ಆಹಾರ ಪದಾರ್ಥಗಳು ಶರೀರದ ರೋಗ-ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. 

 ಚಳಿಗಾಲದಲ್ಲಿ ದೇಹವು ಹೆಚ್ಚು ನಿದ್ರೆಯನ್ನು ಬಯಸುತ್ತದೆ. ಪ್ರತಿ ರಾತ್ರಿ 7-8 ಗಂಟೆಗಳ ಕಾಲದ ನಿದ್ರೆ ದೇಹಕ್ಕೆ ಒಳಿತು. ಆದರೆ ರಾತ್ರಿವೇಳೆಯಲ್ಲಿ ತಾಪಮಾನ ಕಡಿಮೆಯಾಗುವುದರಿಂದ ಉಸಿರಾಡುವ ಗಾಳಿ ತಂಪಾಗಿರುತ್ತದೆ. ಇದು ಶ್ವಾಸ-ಸಂಬಂಧಿ ಕಾಯಿಲೆಗಳನ್ನು ಹೆಚ್ಚಿಸುತ್ತದೆ. ಅಸ್ಮಾ (ಅಸ್ತಮಾ) ಮಾದರಿಯ ಉಸಿರಾಟದ ಸಮಸ್ಯೆಗಳು ಚಳಿಗಾಲದಲ್ಲಿ ಉಲ್ಬಣಗೊಳ್ಳುತ್ತವೆ. ಶ್ವಾಸನಾಳಗಳ ಗಾತ್ರ ಕಿರಿದಾಗಿ ಕಫ ಹೊರಬರುವುದು ಕಷ್ಟವಾಗುತ್ತದೆ. ರಾತಿಯ ವೇಳೆ ಮಲಗುವ ಕೋಣೆಯನ್ನು ಬೆಚ್ಚಗೆ ಇಟ್ಟುಕೊಳ್ಳುವುದು ಸೂಕ್ತ. ಉಸಿರಾಟದ ಸಮಸ್ಯೆ ಇರುವವರು ರಾತ್ರಿ ವೇಳೆಯ ತಾಮಮಾನವನ್ನು ಅಳೆದು, ಅದು ಒಂದು ಹಂತಕ್ಕಿಂತ ಕಡಿಮೆಯಾದಾಗ ರೂಮ್-ಹೀಟರ್ ಅಥವಾ ಉಷ್ಣತೆಯನ್ನು ಏರಿಸಬಲ್ಲ ಹವಾನಿಯಂತ್ರಕಗಳನ್ನು ಬಳಸಬಹುದು. ನಡುರಾತ್ರಿಯಲ್ಲಿ ಉಲ್ಬಣವಾಗುವ ಅಸ್ಮಾ ಸಮಸ್ಯೆಗೆ ವೈದ್ಯರ ಸಲಹೆ ಪಡೆದು ರಾತ್ರಿ ಮಲಗುವ ಮುನ್ನ ಇನ್'ಹೇಲರ್ ಬಳಸಬಹುದು. ಧೂಮಪಾನದ ಅಭ್ಯಾಸವನ್ನು ಶಾಶ್ವತವಾಗಿ ನಿಲ್ಲಿಸಲು ಚಳಿಗಾಲ ಬಹಳ ಸೂಕ್ತ. ದೀರ್ಘಕಾಲಿಕ ಉಸಿರಾಟದ ಸಮಸ್ಯೆ ಇರುವವರು ತಮ್ಮ ವೈದ್ಯರ ಅಭಿಪ್ರಾಯವನ್ನು ಪಡೆದು ಫ್ಲೂ-ನಿರೋಧಕ ಲಸಿಕೆ ಹಾಕಿಸಿಕೊಳ್ಳಬಹುದು.

 ವಾತಾವರಣದ ತಾಪಮಾನ ಕಡಿಮೆಯಾದಂತೆ ರಕ್ತನಾಳಗಳು ಸಂಕುಚಿಸುತ್ತವೆ. ಹೃದಯಾಘಾತದ ಸಾಧ್ಯತೆಗಳು ಚಳಿಗಾಲದಲ್ಲಿ ಹೆಚ್ಚು. ಹೃದಯ-ಸಂಬಂಧಿ ಸಮಸ್ಯೆಗಳು ಇರುವವರಿಗೆ ಶರೀರಕ್ಕೆ ಹೆಚ್ಚು ಚಳಿ ತಾಕದಂತಹ ವಸ್ತ್ರ ಸಂಹಿತೆ ಇರಬೇಕು. ಚಳಿಯಲ್ಲಿ ಓಡಾಡುವ ಅಗತ್ಯ ಇರುವಾಗ ತುಂಬು ತೋಳಿನ ಅಂಗಿ, ಕಿವಿಗಳನ್ನು ಮುಚ್ಚುವಂತಹ ಟೋಪಿ ಅಥವಾ ಮೇಲ್ವಸ್ತ್ರ, ಬೆಚ್ಚಗಿನ ಉಣ್ಣೆ ಬಟ್ಟೆಗಳ ಬಳಕೆ, ಪಾದಗಳನ್ನು ಮುಚ್ಚುವಂತಹ ಪಾದರಕ್ಷೆಗಳು, ಪ್ರಯಾಣದ ವೇಳೆ ವಾಹನದ ಕಿಟಕಿಗಳನ್ನು ಮುಚ್ಚುವುದು, ಸಾಧ್ಯವಾದರೆ ವಾಹನದ ಹೀಟರ್ ಚಲಾವಣೆ ಮೊದಲಾದುವು ಸಮಸ್ಯೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ. ಯಾವುದೇ ಆರೋಗ್ಯ ಸಮಸ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ ಎನಿಸಿದರೆ ಕೂಡಲೇ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಈ ವಿಷಯದಲ್ಲಿ ರಾಜಿಯಾಗಬಾರದು.

 ಚಳಿಗಾಳಿ ಹೆಚ್ಚಾದಂತೆ ಚರ್ಮದ ಸಮಸ್ಯೆಗಳೂ ಏರುತ್ತವೆ. ಚರ್ಮ ಒಣದಾಗಿ, ಬಿರುಕುಗಳಾಗುತ್ತವೆ. ಇದರ ಮೂಲಕ ಸೋಂಕು ಸುಲಭವಾಗಿ ಒಳಗೆ ನುಗ್ಗಬಹುದು. ಚರ್ಮದ ಸ್ವಾಸ್ಥ್ಯಕ್ಕೆ ಬೆಚ್ಚಗಿನ ನೀರನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಬೇಕು. ಚರ್ಮದಿಂದ ದೂರವಾಗಿರುವ ನೀರು ಮತ್ತು ತೈಲವನ್ನು ಮರಳಿ ನೀಡಲು ಗಾಢವಾದ ಎಣ್ಣೆ ಅಥವಾ ಜಿಡ್ಡಿನ ಅಂಶವಿರುವ ದಪ್ಪದ ಲೇಪನಗಳನ್ನು ಬಳಸಬಹುದು. ಬಿರುಕುಗಳು ಮೂಡಿದ ತುಟಿಗಳ ಮತ್ತು ಒಡೆದ ಹಿಮ್ಮಡಿಗಳ ರಕ್ಷಣೆ ಬಹಳ ಮುಖ್ಯ. ಅಂಗೈ ಮತ್ತು ಪಾದಗಳನ್ನು ನಿಯಮಿತವಾಗಿ ಮಾಲೀಷು ಮಾಡುವುದು ರಕ್ತಸಂಚಾರವನ್ನು ಹೆಚ್ಚಿಸಿ, ಚರ್ಮದ ರಕ್ಷಣೆಗೆ ನೆರವಾಗುತ್ತದೆ. ಅಂತೆಯೇ ಕೂದಲಿನ ಬುಡಕ್ಕೂ ಎಣ್ಣೆ ಮಾಲೀಷು ಮಾಡುವುದು ಕೂದಲು ಉದುರುವುದನ್ನು ತಡೆಯುತ್ತದೆ.  ಮೈಗೆ ಹಿತವೆನಿಸಿದರೂ ಬಹಳ ಬಿಸಿಯಾದ ನೀರಿನಲ್ಲಿ ಸ್ನಾನ ಮಾಡುವುದು ಚರ್ಮಕ್ಕೆ ಘಾಸಿ ಮಾಡಬಹುದು ಎನ್ನುವ ಎಚ್ಚರ ಇರಬೇಕು.

 ಚಳಿಗಾಲವನ್ನು ಆನಂದಿಸುವುದರ ಜೊತೆಗೆ ಜಾಗರೂಕತೆಯೂ ಮುಖ್ಯ. ಜೀವನಶೈಲಿಯಲ್ಲಿ ಮಾಡುವ ಸರಳ ಬದಲಾವಣೆಗಳು ಚಳಿಗಾಲವನ್ನು ಸುರಕ್ಷಿತವಾಗಿಸುತ್ತವೆ.

------------------

ದಿನಾಂಕ 05/12/2023 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ:

https://www.prajavani.net/health/health-care-and-winter-2589241

 


ಮಧುಮೇಹದಲ್ಲಿ ಆಹಾರ ಪದ್ಧತಿ

 ಡಾ. ಕಿರಣ್ ವಿ.ಎಸ್.

ವೈದ್ಯರು

 ಭಾರತದಲ್ಲಿ ಹತ್ತು ಕೋಟಿಗೂ ಹೆಚ್ಚು ಮಂದಿ ಮಧುಮೇಹಿಗಳಿದ್ದಾರೆ. ಇವರ ಜೊತೆಗೆ ಸುಮಾರು ಹದಿಮೂರು ಕೋಟಿ ಮಂದಿ ಮಧುಮೇಹಿಗಳಾಗುವ ನಿಟ್ಟಿನಲ್ಲಿ ಮುನ್ನಡೆದಿದ್ದಾರೆ. ಜಗತ್ತಿನ ಶೇಕಡಾ 17 ಮಧುಮೇಹಿಗಳು ಭಾರತದಲ್ಲಿ ಇದ್ದಾರೆ ಎಂದು ಅಂದಾಜು. ಮಧುಮೇಹ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ಕಾಯಿಲೆಯಲ್ಲ. ಅದು ಮೂಲತಃ ಇನ್ಸುಲಿನ್ ಎಂಬ ಹಾರ್ಮೋನಿನ ಕೊರತೆ. ನಾವು ಸೇವಿಸುವ ಆಹಾರದಲ್ಲಿನ ಪಿಷ್ಟ ಪದಾರ್ಥಗಳು ಜೀರ್ಣವಾದ ನಂತರ ಗ್ಲುಕೋಸ್ ಎಂಬ ಸರಳ ಸಕ್ಕರೆಯ ರೂಪದಲ್ಲಿ ರಕ್ತವನ್ನು ಸೇರುತ್ತವೆ. ನಮ್ಮ ದೇಹದ ಬಹುತೇಕ ಜೀವಕೋಶಗಳು ಕೆಲಸ ನಿರ್ವಹಿಸಲು ಗ್ಲುಕೋಸ್ ಅಗತ್ಯವಿದೆ. ರಕ್ತದಲ್ಲಿನ ಗ್ಲುಕೋಸ್ ಅನ್ನು ಜೀವಕೋಶಗಳ ಒಳಗೆ ಸೇರಿಸುವುದು ಇನ್ಸುಲಿನ್ ಹಾರ್ಮೋನಿನ ಕೆಲಸ. ಒಂದು ವೇಳೆ ಶರೀರದಲ್ಲಿ ಇನ್ಸುಲಿನ್ ಕೊರತೆಯಾದರೆ, ರಕ್ತದೊಳಗಿನ ಗ್ಲುಕೋಸ್ ಅಂಶ ಅಂಗಾಂಗಗಳ ಜೀವಕೋಶಗಳ ಒಳಗೆ ಸೇರುವುದು ಕಡಿಮೆಯಾಗುತ್ತದೆ. ಆಗ ಜೀವಕೋಶಗಳಿಗೆ ಶಕ್ತಿಯ ಸಂಚಯ ಕಡಿಮೆಯಾಗಿ, ಅವು ಕಾರ್ಯವಿಮುಖವಾಗಿ, ಕಡೆಗೆ ನಶಿಸುತ್ತವೆ. ಹೀಗೆ ಇನ್ಸುಲಿನ್ ಕೊರತೆ ಉಂಟಾಗುವ ಶರೀರದ ಅವ್ಯವಸ್ಥೆಯೇ ಮಧುಮೇಹ.

 ನಾವು ಸೇವಿಸುವ ಆಹಾರದಲ್ಲಿನ ಸಕ್ಕರೆಯ ಅಂಶವನ್ನು ಕರುಳಿನ ಲೋಳೆಪದರದ ಕೋಶಗಳು ಹೀರುತ್ತಾ, ರಕ್ತದಲ್ಲಿನ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುತ್ತವೆ. ಮಧುಮೇಹಿಗಳಲ್ಲಿ ಇನ್ಸುಲಿನ್ ಕೊರತೆಯ ಕಾರಣದಿಂದ ರಕ್ತದಲ್ಲಿನ ಗ್ಲುಕೋಸ್ ಜೀವಕೋಶಗಳ ಒಳಗೆ ಸೇರುವುದಿಲ್ಲ. ಜೀವಕೋಶಗಳು “ನಾವು ಕೆಲಸ ಮಾಡಲು ನಮ್ಮಲ್ಲಿ ಗ್ಲುಕೋಸ್ ದಾಸ್ತಾನು ಇಲ್ಲ” ಎಂದು ಮಿದುಳಿಗೆ ಸಂದೇಶ ರವಾನಿಸುತ್ತವೆ. ಮಿದುಳು ಇದನ್ನು “ಜೀವಕೋಶಗಳಲ್ಲಿ ಗ್ಲುಕೋಸ್ ಇಲ್ಲ ಎಂದರೆ ಶರೀರಕ್ಕೆ ಆಹಾರದ ಅವಶ್ಯಕತೆ ಇದೆ” ಎಂದು ಅರ್ಥೈಸುತ್ತದೆ; ಹೊಟ್ಟೆಗೆ ಹಸಿವಿನ ಸಂಕೇತಗಳನ್ನು ರವಾನಿಸುತ್ತದೆ. ಹೀಗಾಗಿ ಮಧುಮೇಹದ ರೋಗಿಗಳಿಗೆ ಹಸಿವು ಹೆಚ್ಚು; ಯಾವಾಗಲೂ ಏನನ್ನಾದರೂ ತಿನ್ನುತ್ತಲೇ ಇರಬೇಕು ಎಂಬ ಬಯಕೆ. ಹೀಗೆ ಹೆಚ್ಚಾಗಿ ತಿನ್ನುತ್ತಲೇ ಇರುವುದರಿಂದ ಮತ್ತಷ್ಟು ಗ್ಲುಕೋಸ್ ರಕ್ತವನ್ನು ಸೇರಿ, ಅಲ್ಲಿಯೇ ಉಳಿದುಬಿಡುತ್ತದೆ. ಹೀಗಾಗಿ, ಮಧುಮೇಹದ ನಿಯಂತ್ರಣದಲ್ಲಿ ಔಷಧದಷ್ಟೇ ಮಹತ್ವ ಆಹಾರ ಸೇವನೆಯ ಶಿಸ್ತಿಗೂ ಇದೆ.

 ಆಹಾರದಲ್ಲಿ ಮೂರು ಮುಖ್ಯ ಘಟಕಗಳಿವೆ - ಪಿಷ್ಟ ಪದಾರ್ಥಗಳು, ಪ್ರೋಟೀನ್, ಮತ್ತು ತೈಲ. ಪಿಷ್ಟ ಪದಾರ್ಥಗಳಲ್ಲಿ ಸಕ್ಕರೆಯ ಅಂಶ ಹೆಚ್ಚಾಗಿ ಇರುತ್ತದೆ. ಸರಳ ಸಕ್ಕರೆಯ ಅಂಶ ಅಧಿಕವಾಗಿರುವ ಹರಳು ಸಕ್ಕರೆ, ಜೇನು, ಬೆಲ್ಲ, ಸಬ್ಬಕ್ಕಿ, ಮೈದಾ, ಹಣ್ಣಿನ ರಸ, ತಂಪು ಪಾನೀಯಗಳು ಇರುವ ಆಹಾರ ಬೇಗನೆ ಜೀರ್ಣವಾಗಿ, ಮಧುಮೇಹಿಗಳ ರಕ್ತದ ಸಕ್ಕರೆಯ ಅಂಶವನ್ನು ಬಹಳ ಶೀಘ್ರವಾಗಿ ಏರಿಸುತ್ತವೆ. ಇದಕ್ಕೆ ವಿರುದ್ಧವಾಗಿ ಧಾನ್ಯಗಳ ಹಿಟ್ಟಿನಲ್ಲಿ ಸಕ್ಕರೆಯ ಅಂಶ ಸಂಯುಕ್ತ ಅಣುಗಳ ರೂಪದಲ್ಲಿ ಬೆಸೆದುಕೊಂಡಿರುತ್ತದೆ. ಇದರ ಜೊತೆಗೆ ನಾರಿನ ಅಂಶವೂ ಇರುತ್ತದೆ. ಇದರಿಂದ ಸಕ್ಕರೆಯ ಅಂಶ ಬಿಡುಗಡೆಗೊಳ್ಳಲು ಸಮಯ ಹಿಡಿಯುತ್ತದೆ. ಹಿಟ್ಟಿನ ಆಹಾರ ಮಧುಮೇಹಿಗಳಲ್ಲಿ ಸಕ್ಕರೆಯ ಅಂಶವನ್ನು ಏಕಾಏಕಿ ಏರಿಸುವುದಿಲ್ಲ. ಹೀಗಾಗಿ, ಸರಳ ಸಕ್ಕರೆಗಿಂತಲೂ ನಾರಿನ ಅಂಶ ಅಧಿಕವಾಗಿರುವ, ಪಾಲಿಶ್-ರಹಿತ ಇಡೀ ಧಾನ್ಯದ ಹಿಟ್ಟಿನ ಸೇವನೆ ಮಧುಮೇಹಿಗಳಿಗೆ ಸೂಕ್ತ. ಆಹಾರದ ನಾರಿನ ಅಂಶವನ್ನು ಹೆಚ್ಚಿಸಲು ತರಕಾರಿಗಳ ಸೇವನೆ ಸಹಾಯಕ. ಇದರಿಂದ ಪಿಷ್ಟದಲ್ಲಿನ ಸಕ್ಕರೆಯ ಅಂಶ ಬಿಡುಗಡೆಯಾಗಲು ಇನ್ನಷ್ಟು ಕಾಲಾವಕಾಶ ದೊರೆಯುತ್ತದೆ. ಮಲಬದ್ಧತೆಯ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ ಶರೀರಕ್ಕೆ ಅಗತ್ಯವಾದ ವಿಟಮಿನ್ ಮತ್ತು ಖನಿಜಗಳು ಲಭಿಸುತ್ತವೆ.

 ಮಧುಮೇಹಿಗಳಲ್ಲಿ ಪ್ರೋಟೀನ್ ಸೇವನೆ ತೀರಾ ಅಧಿಕವಾಗಬಾರದು. ಆದರೆ, ಶರೀರಕ್ಕೆ ಅಗತ್ಯವಾದಷ್ಟು ಒಳ್ಳೆಯ ಗುಣಮಟ್ಟದ ಪ್ರೋಟೀನ್ ಸೇವನೆ ಸೂಕ್ತ. ಮಾಂಸಾಹಾರಿಗಳು ಮೀನು, ಮೊಟ್ಟೆ, ಕಡಿಮೆ ಜಿಡ್ಡಿನ ಅಂಶದ ಮಾಂಸಗಳನ್ನು ಬಳಸಬಹುದು. ಸಸ್ಯಾಹಾರಿಗಳು ಬೇಳೆಕಾಳು, ಸೊಯಾಬೀನ್, ಮೊಳಕೆ ಕಟ್ಟಿದ ಕಾಳುಗಳಿಂದ ಪ್ರೋಟೀನ್ ಪಡೆಯಬಹುದು. ಆಹಾರದಲ್ಲಿ ಅನಗತ್ಯ ತೈಲದ ಪ್ರಮಾಣ ಕಡಿಮೆಯಾಗಬೇಕು. ಆದರೆ, ಅಗತ್ಯವಿದ್ದಷ್ಟು ಎಣ್ಣೆಯ ಬಳಕೆ ಒಳಿತು. ಅಡುಗೆ ಮಾಡಲು ಸಸ್ಯಮೂಲದ ತೈಲಗಳ ಬಳಕೆ ಸೂಕ್ತ. ಮೀನೆಣ್ಣೆಯಲ್ಲಿ ಹೃದಯದ ಆರೋಗ್ಯಕ್ಕೆ ನೆರವಾಗಬಲ್ಲ ಪೋಷಕಾಂಶಗಳಿರುತ್ತವೆ. ಅನಾರೋಗ್ಯಕರ ಕೊಲೆಸ್ಟ್ರಾಲ್ ಹೆಚ್ಚಿಸುವ ಎಣ್ಣೆಗಳ ಬಳಕೆ ಮಧುಮೇಹಿಗಳಿಗೆ ಒಳ್ಳೆಯದಲ್ಲ.

 ಸಮತೋಲಿತ ಆಹಾರ ಮಧುಮೇಹಿಗಳ ಸೂತ್ರವಾಗಬೇಕು. ಸೇವಿಸುವ ಆಹಾರದ ಒಟ್ಟು ಕ್ಯಾಲರಿಗಳು ಆಯಾ ವ್ಯಕ್ತಿಯ ತೂಕ ಮತ್ತು ಕೆಲಸದ ಪ್ರಮಾಣಕ್ಕೆ ತಕ್ಕನಾಗಿರಬೇಕು. ಕ್ಯಾಲರಿಗಳು ಹೆಚ್ಚಾದರೆ ಮೈತೂಕದ ನಿಯಂತ್ರಣ ಏರುಪೇರಾಗುತ್ತದೆ. ಕ್ಯಾಲರಿಗಳು ತೀರಾ ಕಡಿಮೆಯಾದರೆ ಸುಸ್ತು, ಬವಳಿಕೆಗಳು ಕಾಡುತ್ತವೆ. ಹೀಗಾಗಿ, ತಮ್ಮ ವೈದ್ಯರ, ಆಹಾರ ತಜ್ಞರ ಜೊತೆಗೆ ಚರ್ಚಿಸಿ ತಮಗೆ ಅಗತ್ಯವಾದ ಕ್ಯಾಲರಿಗಳ ಮಟ್ಟವನ್ನು ನಿರ್ಧರಿಸಬೇಕು. ಮನಸ್ಸಿನ ಹಿಡಿತ ತಪ್ಪಿದರೆ ಐದು ನಿಮಿಷಗಳಲ್ಲಿ 500 ಕ್ಯಾಲರಿ ದೇಹ ಸೇರಿಬಿಡುತ್ತದೆ! ಆದರೆ ಅದನ್ನು ಕರಗಿಸಲು ಎರಡು ತಾಸು ವ್ಯಾಯಾಮ ಮಾಡಬೇಕಾಗುತ್ತದೆ. "ನಾಳೆಯೋ, ಮುಂದಿನ ವಾರವೋ ಸಖತ್ ವ್ಯಾಯಾಮ ಮಾಡಿ ತಿಂದಿದ್ದನ್ನೆಲ್ಲಾ ಕರಗಿಸಿಬಿಡುತ್ತೇನೆ" ಎನ್ನುವ ಶಪಥ ಮಾಡಿ ಸಿಹಿ ತಿಂಡಿಗಳನ್ನು ಯಥೇಚ್ಛವಾಗಿ ಸೇವಿಸುವ ಬಹುತೇಕ ಮಂದಿ ಕ್ಯಾಲರಿಗಳ ಬದಲಿಗೆ ತಮ್ಮ ಮಧುಮೇಹ ನಿಯಂತ್ರಣವನ್ನು ಕರಗಿಸುತ್ತಾರೆ. ಇಂತಹ ಆಲೋಚನೆಯೇ ತಪ್ಪು. ಮಧುಮೇಹದ ನಿಯಂತ್ರಣ ಒಂದು ನಿರಂತರ ಪ್ರಕ್ರಿಯೆ. ಇದನ್ನು ಕಂತು-ಕಂತಾಗಿ ನಿರ್ವಹಿಸುವುದು ಆರೋಗ್ಯಕರವಲ್ಲ. ತೂಕ ಕರಗಿಸಲು ಡಯಟ್ ಮಾಡುವ ಮಂದಿ "ಚೀಟ್-ಡೇ" ಹೆಸರಿನಲ್ಲಿ  ಅದನ್ನು ಸಡಲಿಸುವ ವಿಧಾನ ಮಧುಮೇಹಿಗಳಿಗೆ ಅನ್ವಯವಾಗುವುದಿಲ್ಲ.

 ಔಷಧ, ಆಹಾರ, ವ್ಯಾಯಾಮ, ಮತ್ತು ಇವುಗಳ ಸಮನ್ವಯದಲ್ಲಿನ ಶಿಸ್ತು ಮಧುಮೇಹವನ್ನು ಸಹ್ಯವಾಗಿಸುತ್ತದೆ. ಆರೋಗ್ಯಕರ ಬಾಳ್ವೆಗೆ ಮಧುಮೇಹಿಗಳು ಈ ಸಮನ್ವಯವನ್ನು ತಪ್ಪದೇ ಸಾಧಿಸಬೇಕು.

-------------

 ದಿನಾಂಕ 27/11/2023 ರ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಮೂಲ ಲೇಖನದ ಕೊಂಡಿ: https://www.prajavani.net/health/eating-culture-in-diabetics-2579141