ಭಾನುವಾರ, ಜುಲೈ 10, 2022

 ಏನಾದರೂ ಮಾಡುತಿರು ತಮ್ಮ; ಸುಮ್ಮನೆ ಕುಳಿತಿರಬೇಡ!

ಡಾ. ಕಿರಣ್ ವಿ.ಎಸ್.

ವೈದ್ಯರು

“ಕೂತು ಉಣ್ಣುವವನಿಗೆ ಕುಡಿಕೆ ಹೊನ್ನು ಸಾಲದು” ಎನ್ನುವ ಗಾದೆಯಿದೆ. “ಹಾಗಿದ್ದರೆ ಇನ್ನು ಮುಂದೆ ನಿಂತೋ, ಮಲಗಿಯೋ ಉಣುತ್ತೇನೆ” ಎನ್ನುವ ಕಥಾನಾಯಕನೂ ಬೀಚಿಯವರ ಕಾದಂಬರಿಯಲ್ಲಿ ಇದ್ದಾನೆ! ಅದು ಸ್ವಂತ ಸಂಪಾದನೆಯಿಲ್ಲದೆ, ಹಿರಿಯರು ಮಾಡಿಟ್ಟ ಆಸ್ತಿಯನ್ನು ಕರಗಿಸುವವರ ಕುರಿತಾದ ನಾಣ್ಣುಡಿ. ಆದರೆ ಉದ್ಯೋಗ ಮಾಡುವಾಗ ಬಹಳ ಕಾಲ ಒಂದೇ ಸಮನೆ ಕೂತಿದ್ದರೆ? “ಅಂಥವರಿಗೆ ಉಳಿಯುವುದು ಸಣ್ಣ ಕುಡಿಕೆಯಷ್ಟು ಆಯುಷ್ಯ ಮಾತ್ರ” ಎನ್ನುತ್ತಾರೆ ವಿಜ್ಞಾನಿಗಳು. ಒಟ್ಟಿನಲ್ಲಿ ಉಣ್ಣುವುದೋ ಅಥವಾ ಕೆಲಸ ಮಾಡುವುದೋ, ಕೂತು ಮಾಡಬಾರದು ಎಂದಾಯಿತು. ಏನಿದು ಕೂತು ಕೆಲಸ ಮಾಡುವವರ ಕತೆ?

ಕೆಲವರ್ಷಗಳ ಹಿಂದೆ ಅಮೆರಿಕದ ಮೆಯೊ ಕ್ಲಿನಿಕ್ ನಿರ್ದೇಶಕರಾದ ಜೇಮ್ಸ್ ಲೆವಿನ್ ಅವರು ಸಂದರ್ಶನವೊಂದರಲ್ಲಿ ಬಹಳ ಕಾಲ ಸುಮ್ಮನೆ ಕುಳಿತಿರುವವರ ಕುರಿತಾಗಿ ಮಾತನಾಡುತ್ತಾ, “ಧೂಮಪಾನ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ಯಾವ ರೀತಿ ಆಗುತ್ತವೋ, ಅದಕ್ಕಿಂತ ಹೆಚ್ಚಿನ ಆರೋಗ್ಯ ಸಮಸ್ಯೆಗಳು ಚಟುವಟಿಕೆ ಇಲ್ಲದೆ ಸುಮ್ಮನೆ ಕುಳಿತಿರುವವರಲ್ಲಿ ಆಗುತ್ತದೆ” ಎನ್ನುವ ಸಾಮ್ಯ ಕೊಟ್ಟಿದ್ದರು. ಇದು ವಿಶ್ವದಾದ್ಯಂತ “ಕುಳಿತಿರುವುದು ಧೂಮಪಾನಕ್ಕೆ ಸಮ” ಎನ್ನುವ ಅರ್ಥದಲ್ಲಿ ಪ್ರಸಿದ್ಧವಾಯಿತು. ಧೂಮಪಾನದ ಸಾಮ್ಯ ಕೇವಲ ಅಪಾಯದ ಮಟ್ಟವನ್ನು ವಿವರಿಸಲು ಮಾತ್ರ. ಬೇರೆ ಯಾವುದೇ ಚಟಗಳಿಲ್ಲದೆ ಕೇವಲ ಧೂಮಪಾನ ಮಾತ್ರ ಮಾಡುವವರಿಗೂ ಬಹಳಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಅಂತೆಯೇ, ಬೇರೆ ಯಾವುದೇ ದುರಭ್ಯಾಸಗಳು ಇಲ್ಲದವರೂ ದಿನದ ಬಹುಕಾಲ ಚಟುವಟಿಕೆಯಿಲ್ಲದೆ ಕೂರುವುದು ಹಲವಾರು ಅನಾರೋಗ್ಯಗಳಿಗೆ ದಾರಿಯಾಗುತ್ತದೆ ಎಂದು ಅರ್ಥ.  

ಸುಮ್ಮನೆ ಕುಳಿತಿದ್ದರೆ ಏನು ಸಮಸ್ಯೆ? “ಜಡವಾಗಿ ಬಿದ್ದುಕೊಂಡಿರುವಾಗಲೇ ಮನುಷ್ಯ ಸುರಕ್ಷಿತ; ಆಗ ಆತ ಯಾರಿಗೂ ಕೇಡು ಮಾಡಲಾರ” ಎನ್ನುವ ಚಮತ್ಕಾರದ ಮಾತುಗಳಿವೆ. ಸಮಸ್ಯೆ ಇತರರಿಗೆ ಕೇಡು ಮಾಡುವುದಲ್ಲ; ನಮ್ಮ ದೇಹಕ್ಕೇ ಅಪಾಯ ತಂದುಕೊಳ್ಳುವುದು. ನಮ್ಮ ದೇಹ ನಿರಂತರವಾಗಿ ಕೆಲಸ ಮಾಡುತ್ತಿರುವ ಹಲವಾರು ಅಂಗಗಳ ಘಟಕ. ಇದು ಸರಾಗವಾಗಿ ಕಾರ್ಯ ನಿರ್ವಹಿಸಲು ಅಹರ್ನಿಶಿಯೂ ರಕ್ತ ಪರಿಚಲನೆ ಆಗಬೇಕು. ಹೃದಯದಿಂದ ಒತ್ತಲ್ಪಡುವ ರಕ್ತ ದೇಹದ ಎಲ್ಲ ಮೂಲೆಗಳಿಗೂ ತಲುಪಲು ಮಾಂಸಖಂಡಗಳ ಸಹಕಾರ ಬೇಕು. ಇದು ಸಾಧ್ಯವಾಗುವುದು ಶರೀರದ ಚಲನೆಯಿಂದ. ಇದಕ್ಕಾಗಿಯೇ ನಮ್ಮ ಶರೀರಕ್ಕೆ ಕ್ಲುಪ್ತ ವ್ಯಾಯಾಮ ಅಗತ್ಯ ಎಂದು ವೈದ್ಯರು ತಾಕೀತು ಮಾಡುತ್ತಾರೆ.

ಚಟುವಟಿಕೆಯಿಲ್ಲದೆ ಕುಳಿತುಕೊಂಡಿರುವುದು ನಮ್ಮ ಕಾಲಘಟ್ಟದ ಅತಿರೇಕಗಳಲ್ಲಿ ಒಂದು. ಈಗಂತೂ ಬಯಸಿದ ವಸ್ತುಗಳು ಮನೆಬಾಗಿಲಿಗೆ ತಲುಪುತ್ತವೆ. ಅದನ್ನೂ ಕೂತ ಕಡೆಯಿಂದ ಕದಲದೆ ಫೋನಿನಲ್ಲೊ, ಗಣಕದಲ್ಲೂ ಸಂದೇಶ ಕಳಿಸಿ ತರಿಸಬಹುದು. ನೋಡಲು ನೂರಾರು ಕಾರ್ಯಕ್ರಮಗಳ, ಸಿನೆಮಾಗಳ ಆಯ್ಕೆಗಳಿರುವ ದೂರದರ್ಶನವನ್ನು ಕೂತ ಸೋಫಾದಿಂದ ಎದ್ದೇಳದೇ ರಿಮೋಟ್ ಮೂಲಕ ನಿರ್ವಹಿಸಬಹುದು. ಕೋವಿಡ್-19 ಎನ್ನುವ ಜಾಗತಿಕ ಕಾಯಿಲೆ “ಮನೆಯಿಂದಲೇ ಕಚೇರಿಯ ಕೆಲಸ ಮಾಡುವ” ಸೌಲಭ್ಯ ಕಲ್ಪಿಸಿತು. ಇದರ ಲಾಭಗಳನ್ನು ಗ್ರಹಿಸಿದ ಸಂಸ್ಥೆಗಳು ಆ ಸೌಲಭ್ಯವನ್ನು ಮುಂದುವರೆಸಿದವು. ಮುಂಜಾನೆ ಬೇಗನೆ ಎದ್ದು, ಸಿದ್ಧರಾಗಿ, ಆಫೀಸಿನ ವಾಹನ ಹಿಡಿದು ನಿರ್ದಿಷ್ಟ ಕಾಲಕ್ಕೆ ಕಚೇರಿ ತಲುಪುತ್ತಿದ್ದ ಪೀಳಿಗೆಯೊಂದು, ನಿಧಾನವಾಗಿ ಎದ್ದು, ಯಾವುದೇ ತಯಾರಿ ಇಲ್ಲದೆ, ನೇರವಾಗಿ ಮನೆಯ ಮೂಲೆಯೊಂದರಿಂದ ಕಚೇರಿಯ ಕೆಲಸವನ್ನು ಮಾಡುವ ಅವಕಾಶ ದೇಹದ ಚಟುವಟಿಕೆಯನ್ನು ಇನ್ನಷ್ಟು ಕಡಿಮೆ ಮಾಡಿದೆ. ಹೀಗೆ, ನಮ್ಮ ಜೀವನಶೈಲಿ ನಿಧಾನವಾಗಿ ಸೋಮಾರಿತನವನ್ನು ಪ್ರೋತ್ಸಾಹಿಸುತ್ತಿದೆ. ಇದರಿಂದ ದೀರ್ಘಕಾಲಿಕವಾಗಿ ಶರೀರದ ನಿರ್ವಹಣೆಯ ಮೇಲೆ ಸಾಕಷ್ಟು ಕೆಟ್ಟ ಪ್ರಭಾವ ಆಗುತ್ತದೆ.    

ಶರೀರದ ಸೌಖ್ಯದ ಮೇಲೆ ನಿಯಮಿತ ವ್ಯಾಯಾಮದ ಒಳ್ಳೆಯ ಪರಿಣಾಮಗಳನ್ನು ತಜ್ಞರು ಸಾವಿರಾರು ಸಂಶೋಧನೆಗಳ ಮೂಲಕ ಸಾಬೀತು ಪಡಿಸಿದ್ದಾರೆ. ಅಂತೆಯೇ, ಸುಮ್ಮನೆ ಕುಳಿತಿರುವ ಇಲ್ಲದ ದೇಹದ ಮೇಲೆ ಆಗಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆಯೂ ಅಧ್ಯಯನಗಳಿವೆ. ಮೂವತ್ತು ನಿಮಿಷಗಳ ಕಾಲ ಚಟುವಟಿಕೆ ಇಲ್ಲದೆ ಕುಳಿತಿದ್ದರೆ ದೇಹದ ಚಯಾಪಚಯಗಳು ಶೇಕಡಾ 90 ಕಡಿಮೆಯಾಗುತ್ತವೆ. ಚಲನೆಯ ಕಾರಣದಿಂದ ಬಳಕೆಯಾಗಬೇಕಾದ ಕೊಬ್ಬು ಕರಗದೆ ಶರೀರದೊಳಗೆ ಜಮೆಯಾಗುತ್ತದೆ. ಮಾಂಸಖಂಡಗಳ ರಕ್ತಸಂಚಾರ ಇಳಿದು, ಬಿಗುವು ಕಾಣುತ್ತದೆ. ಶರೀರದ ಕೆಳಭಾಗಗಳಲ್ಲಿ  ಸಂಗ್ರಹವಾದ ರಕ್ತ ಸರಾಗವಾಗಿ ಹರಿಯದೆ ರಕ್ತನಾಳಗಳು ಹಿಗ್ಗುತ್ತವೆ. ಇವುಗಳೊಳಗೆ ಜಮೆಯಾದ ರಕ್ತ ಅಲ್ಲಿಯೇ ಹೆಪ್ಪುಗಟ್ಟಬಹುದು. ಈ ಪ್ರಕ್ರಿಯೆ ಪ್ರತಿದಿನವೂ ಮುಂದುವರೆದರೆ ಮಧುಮೇಹ, ಬೊಜ್ಜು, ಆತಂಕ, ಬೆನ್ನುನೋವು, ಹೃದ್ರೋಗ, ಪಾರ್ಶ್ವವಾಯು, ಶ್ವಾಸಕೋಶಗಳ ಸಮಸ್ಯೆ, ಅಧಿಕ ರಕ್ತದೊತ್ತಡದ ಸಾಧ್ಯತೆಗಳು ಗಣನೀಯವಾಗಿ ಏರುತ್ತವೆ. ಇವೆಲ್ಲದರ ಮೂಲಕ ವೃದ್ಧಾಪ್ಯಕ್ಕೆ ಮುನ್ನವೇ ಮರಣದ ಸಾಧ್ಯತೆ ಹೆಚ್ಚುತ್ತದೆ.

ಹಾಗೆಂದು ಕೂಡದೆ ಇರಲಾದೀತೆ? ಇಲ್ಲಿನ ಸಮಸ್ಯೆ ಆಯಾಸವಾದಾಗ ವಿಶ್ರಾಂತಿಗೆ ಕೂರುವುದಲ್ಲ; ಹಾಗೆ ಕೂತ ಮನುಷ್ಯ ಬಹಳ ಕಾಲ ಅಲ್ಲಿಂದ ಏಳದಿರುವುದು. ಮನರಂಜನೆಗೋ, ಕೆಲಸಕ್ಕೋ, ಓದುವ ಹವ್ಯಾಸದಿಂದಲೋ, ಮತ್ಯಾವುದೋ ಕಾರಣಕ್ಕೆ ಗಂಟೆಗಟ್ಟಲೇ ಒಂದೇ ಸ್ಥಾನದಲ್ಲಿ ಕೂರುವುದು ಆರೋಗ್ಯಕರವಲ್ಲ. ಹೀಗೆ ಕೂರುವಾಗ ನಮಗೆ ಅರಿವಿಲ್ಲದೆಯೇ ಶರೀರ ಸೊಟ್ಟದಾದ ಕೆಟ್ಟ ಭಂಗಿಗೆ ಬಂದಿರುತ್ತದೆ. ಇದು ಮೂಳೆಗಳ ಮೇಲೆ ಅನಗತ್ಯ ಒತ್ತಡಕ್ಕೆ ಕಾರಣವಾಗಿ, ಕೀಲುಗಳು ಘಾಸಿಯಾಗುತ್ತವೆ. ರಕ್ತನಾಳಗಳ ಮೇಲೆ ಅಸಮವಾದ ಒತ್ತಡ ಬಿದ್ದು ರಕ್ತಸಂಚಾರ ಏರುಪೇರಾಗುತ್ತದೆ. ಫಲಿತಾಂಶವಾಗಿ ಮಾಂಸಖಂಡಗಳು ಬಿಗಿದುಕೊಳ್ಳುತ್ತವೆ. ಭಂಗಿಯನ್ನು ಬದಲಿಸುವಾಗ ಈ ಸೆಟವು ನೋವುಂಟುಮಾಡುತ್ತದೆ. ಪರಿಣಾಮ, ಇರುವ ಭಂಗಿಯಲ್ಲೆ ಮತ್ತಷ್ಟು ಕಾಲ ಇರುವಂತೆ ನಮ್ಮ ಸೋಮಾರಿತನ ಉತ್ತೇಜಿಸುತ್ತದೆ. ಹೀಗಾಗಿ, ವಿಶ್ರಾಂತಿಗಾಗಿ ಕೂರುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದು ಅಗತ್ಯ.

ಕಚೇರಿ ಕೆಲಸವನ್ನು ಕುಳಿತು ಮಾಡುವುದು ಬಹುತೇಕರಿಗೆ ಅವಶ್ಯ. ಇಲ್ಲಿ ಭಿನ್ನತೆಯನ್ನು ಸಾಧಿಸಲಾಗದು. ಇಂತಹ ಸಂದರ್ಭಗಳಲ್ಲಿ ಕನಿಷ್ಟ ಅರ್ಧ ಗಂಟೆಗೊಮ್ಮೆ ಎದ್ದು ಮೈಮುರಿದು, ಮಾಂಸಖಂಡಗಳನ್ನು ಹಿಗ್ಗಿಸಬೇಕು. ತಲೆಯನ್ನು ಒಂದೆರಡು ಬಾರಿ ನಿಧಾನವಾಗಿ ಏರಿಳಿಸಬೇಕು. ಬೆನ್ನನ್ನು ನಿಧಾನವಾಗಿ ಬಾಗಿಸಿ ಪಾದಗಳನ್ನು ಸೋಕಬೇಕು. ಸಾಧ್ಯವಾದರೆ ಸ್ವಲ್ಪ ದೂರ ನಡೆದು ಬರಬೇಕು. ಈ ಕ್ರಿಯೆಗಳ ಮೂಲಕ ಮಾಂಸಖಂಡಗಳು ಸಡಿಲಗೊಂಡು, ರಕ್ತಸಂಚಾರ ಸರಾಗವಾಗುತ್ತದೆ. ಯಾವುದೇ ಕಾರಣಕ್ಕೆ ಬಹಳ ಕಾಲ ಕೂರುವ ಅಗತ್ಯವುಳ್ಳವರು ಇದನ್ನು ಮಾಡುವುದು ಸೂಕ್ತ. ಇದೇ ಅಲ್ಲದೆ, ದಿನನಿತ್ಯದಲ್ಲಿ ಶರೀರದ ಚಲನೆಗೆ ಪ್ರೋತ್ಸಾಹ ನೀಡುವ ಕೆಲಸಗಳನ್ನು ಮಾಡುವುದು ಒಳಿತು. ಬೈಸಿಕಲ್ ಬಳಕೆ; ಕಚೇರಿಯ ವಾಹನ ನಿಲ್ದಾಣದಲ್ಲಿ ಸಾಧ್ಯವಾದಷ್ಟೂ ದೂರದಲ್ಲಿ ವಾಹನ ನಿಲ್ಲಿಸಿ, ಅಲ್ಲಿಂದ ನಡೆಯುವುದು; ಲಿಫ್ಟ್ ಬದಲಿಗೆ ಮೆಟ್ಟಿಲು ಬಳಸುವುದು; ಸಹೋದ್ಯೋಗಿಗಳ ಜೊತೆಯಲ್ಲಿ ಫೋನಿನ ಬದಲಾಗಿ ಅವರ ತಾಣಕ್ಕೆ ಹೋಗಿ ನೇರವಾಗಿ ಮಾತನಾಡುವುದು; ಕಚೇರಿಯಿಂದ ಸ್ವಲ್ಪ ದೂರವಿರುವೆಡೆ ಮಧ್ಯಾಹ್ನದ ಊಟಕ್ಕೆ ಹೋಗುವುದು; ಎಲ್ಲೆಲ್ಲಿ ನಡೆಯುವ ಅವಕಾಶವಿದೆಯೋ ಅಲ್ಲೆಲ್ಲಾ ನಡೆದೇ ಹೋಗುವುದು – ಇವುಗಳನ್ನು ಪಾಲಿಸಬಹುದು. ಇದರ ಜೊತೆಗೆ ಈಜು, ಯೋಗಾಸನ, ನೃತ್ಯ, ಕಸರತ್ತು ಮೊದಲಾದ ಆರೋಗ್ಯಕರ ಭೌತಿಕ ಚಟುವಟಿಕೆಗಳನ್ನು ನಿಯಮಿತವಾಗಿ ಮಾಡುವುದು ಸೂಕ್ತ.   

ಚಟುವಟಿಕೆಯಿಲ್ಲದೆ ಕೂರುವುದು ತಾತ್ಕಾಲಿಕವಾಗಿ ಮುದ ನೀಡುತ್ತದೆ. ಆದರೆ ದೀರ್ಘಕಾಲಿಕವಾಗಿ ಘಾಸಿ ಮಾಡುತ್ತದೆ. ಹೀಗಾಗಿ, ಬಹಳ ಕಾಲ ಒಂದೇ ಸಮನೆ ಕುಳಿತುಕೊಳ್ಳುವುದು ನಮ್ಮ ಜೀವನದ ಭಾಗವಾಗಿಲ್ಲದಿರುವುದೇ ಲೇಸು. ಈ ರೀತಿಯ ಸಂದರ್ಭಗಳನ್ನು ಪ್ರಜ್ಞಾಪೂರ್ವಕವಾಗಿ ಗುರುತಿಸಿ, ಅದನ್ನು ಕಡಿಮೆ ಮಾಡಿಕೊಳ್ಳಬೇಕು. ಆರೋಗ್ಯವೆಂಬುದು ಅನಗತ್ಯ ಆರಾಮದಲ್ಲಿರುವುದಿಲ್ಲ ಎಂಬುದು ನಾವು ಅರಿಯಬೇಕಾದ ಅಂಶ.

--------------------------

ಪ್ರಜಾವಾಣಿ ದಿನಪತ್ರಿಕೆಯ 5/7/2022 ರ ಸಂಚಿಕೆಯ ಕ್ಷೇಮಕುಶಲ ವಿಭಾಗದಲ್ಲಿ ಪ್ರಕಟವಾದ ಲೇಖನ. ಕೊಂಡಿ: https://www.prajavani.net/health/active-lifestyle-tips-for-healthy-life-951369.html

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ