ಭಾನುವಾರ, ಜುಲೈ 10, 2022

 

ಹೀಗೊಂದು ವಿಷ(ಷಾ)ದ ಕತೆ

ಡಾ. ಕಿರಣ್ ವಿ.ಎಸ್.

“ಸರ್....”

ಗಂಭೀರವಾಗಿ ಬರೆಯುತ್ತಿದ್ದ ಪ್ರೊಫೆಸರರು ಸ್ವಲ್ಪ ಕೋಪದಿಂದಲೇ ತಲೆ ಎತ್ತಿ ನೋಡಿದರು. ಅವರ ವಿದ್ಯಾರ್ಥಿ ಬಾಗಿಲಲ್ಲಿ ನಿಂತಿದ್ದ.

“ಏನು?” ಎನ್ನುವಂತೆ ಹುಬ್ಬೇರಿಸಿದರು. ವಿದ್ಯಾರ್ಥಿ ದಿಗಿಲಿನಿಂದಲೇ ಹೇಳಿದ: “ಒಂದು ಕೇಸ್ ಬಗ್ಗೆ ಚರ್ಚೆ ಮಾಡೋದಿತ್ತು”

ಮಕ್ಕಳ ಕಾಯಿಲೆಗಳ ಅತ್ಯಂತ ದೊಡ್ಡ ತಜ್ಞ ಎಂದು ಹೆಸರಾಗಿದ್ದ ಪ್ರೊಫೆಸರರು ಮುಖ್ಯವಾದ ಪುಸ್ತಕ ಬರೆಯಲು ಕಳೆದ ಮೂರು ತಿಂಗಳಿನಿಂದ ರಜೆಯ ಮೇಲಿದ್ದರು. ಆಸ್ಪತ್ರೆಗೆ ಬಂದು, ತಮ್ಮ ಕೊಠಡಿಯಲ್ಲಿ ಕೂತು ಬರವಣಿಗೆ ಮಾಡುತ್ತಿದ್ದರು. ತಮ್ಮನ್ನು ಯಾರೂ ಡಿಸ್ಟರ್ಬ್ ಮಾಡಬಾರದು ಎಂದು ಅವರ ಕಟ್ಟಾಜ್ಞೆ. ಅದನ್ನು ಮೀರಿ ವಿದ್ಯಾರ್ಥಿಯೊಬ್ಬ ಅವರ ಕೋಣೆಗೆ ಬಂದಿದ್ದಾನೆ ಎಂದರೆ ಪರಿಸ್ಥಿತಿ ಗಂಭೀರವಾಗಿಯೇ ಇದ್ದಿರಬೇಕು.

ಆತನನ್ನು ಒಳಗೆ ಬರುವಂತೆ ಸನ್ನೆ ಮಾಡಿದ ಪ್ರೊಫೆಸರರು ಬರೆಯುತ್ತಿದ್ದ ಹಾಳೆಗಳನ್ನು ಬದಿಗೆ ಸರಿಸಿ ಮತ್ತೊಮ್ಮೆ ಹುಬ್ಬೇರಿಸಿದರು.

“ಆರು ವರ್ಷದ ಹುಡುಗ ಸರ್. ಈಚೆಗೆ ಮೂರ್ನಾಲ್ಕು ತಿಂಗಳ ಹಿಂದೆ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ವಾರಕ್ಕೆ ಒಂದೋ ಎರಡೋ ದಿನ ಮಾತ್ರ ಶಾಲೆಗೆ ಹೋಗುತ್ತಾನೆ. ಆದರೆ ಸ್ಕೂಲಿನಲ್ಲಿ ಅವನದ್ದು ವಿಪರೀತ ಗಲಾಟೆ; ವೈದ್ಯಕೀಯ ಪರೀಕ್ಷೆ ಮಾಡಿಸಿ ಎಂದು ಶಾಲೆಯ ಶಿಕ್ಷಕಿ ಹೇಳಿ ಕಳಿಸಿದ್ದಾರೆ. ತಂದೆತಾಯಿ ತುಂಬಾ ಬಡವರು. ಹೆದರಿದ್ದಾರೆ. ಎಲ್ಲಾ ಪರೀಕ್ಷೆ ಮಾಡಿದ್ದೇವೆ. ಏನೂ ತಿಳಿಯುತ್ತಿಲ್ಲ. ಅದಕ್ಕೇ...” ವಿದ್ಯಾರ್ಥಿ ತಡವರಿಸಿದ.

“ಡೀಟೈಲಾಗಿ ಹೇಳಿ” ಪ್ರೊಫೆಸರರು ಅಭಯ ನೀಡಿದರು.

“ಮಗುವಿನ ತಂದೆತಾಯಿ ಬೆಳಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಹಿಂದಿರುಗುತ್ತಾರೆ. ಮಗುವು ವಯಸ್ಸಾದ ಓರ್ವ ಅಜ್ಜಿಯ ಸುಪರ್ದಿಯಲ್ಲಿ ಇರುತ್ತದೆ. ಅವನ ದಿನನಿತ್ಯದ ಚಟುವಟಿಕೆಗಳ ಬಗ್ಗೆ ತಾಯಿಗೆ ಹೆಚ್ಚು ತಿಳಿದಿಲ್ಲ. ಮೊದಲಿನಿಂದಲೂ ತಂಟೆ ಹೆಚ್ಚು ಅಂತ ಅವನನ್ನು ನೋಡಿಕೊಳ್ಳುವ ಅಜ್ಜಿ ಹೇಳುತ್ತಾರೆ. ಬೆಳಗ್ಗಿನಿಂದ ಎಲ್ಲಿರುತ್ತಾನೆ ಎಂದು ಅಜ್ಜಿಗೆ ತಿಳಿದಿಲ್ಲ. ಹಸಿವಾದಾಗ ಮನೆಗೆ ಬರುತ್ತಾನೆ. ಹಾಗಾಗಿ, ಮನೆಯಿಂದ ಹೆಚ್ಚು ದೂರ ಹೋಗುವುದಿಲ್ಲವೆಂದು ಅನಿಸುತ್ತದೆ ಸರ್. ಈಚೆಗೆ ಅವನ ರಂಪ-ರಗಳೆ ಮತ್ತೂ ಜಾಸ್ತಿಯಾಗಿದೆ ಎನುತ್ತಾರೆ. ಹುಡುಗ ಹೈಪರ್ ಇದ್ದಾನೆ. ಕೂತ ಕಡೆ ಕೂರುವುದಿಲ್ಲ. ಶಾಲೆಯಲ್ಲಿ ತುಂಬಾ ರೆಸ್ಟ್ಲೆಸ್, ಜಗಳಗಂಟ ಎಂದು ಶಿಕ್ಷಕಿ ಹೇಳುತ್ತಾರೆ. ನಾವು ಪರೀಕ್ಷಿಸಿದಂತೆ ಅವನಿಗೆ ಬುದ್ಧಿಮಾಂದ್ಯತೆ ಏನಿಲ್ಲ; ಸ್ವಂತವಾಗಿ ಬಟ್ಟೆ ಧರಿಸಲು ಬರುತ್ತದೆ; ಬಣ್ಣಗಳನ್ನು ಗುರುತಿಸುತ್ತಾನೆ; ದೃಷ್ಟಿ ಚೆನ್ನಾಗಿದೆ; ಕಿವಿ ಸ್ವಲ್ಪ ಮಂದ; ಆದರೆ ಕಿವುಡು ಇಲ್ಲ. ಸ್ವಲ್ಪ ತೊದಲುತ್ತಾನೆ; ಪದಗಳ ಕಲಿಕೆ ವಯಸ್ಸಿಗಿಂತ ಕಡಿಮೆ; ಆಟ ಹೆಚ್ಚು; ಊಟದಲ್ಲಿ ಆಸಕ್ತಿ ಕಡಿಮೆ. ಸ್ವಲ್ಪ ತೂಕ ಕಡಿಮೆ ಇದ್ದಾನೆ. ರಕ್ತದಲ್ಲಿ ಹೀಮೊಗ್ಲೊಬಿನ್ ಕಡಿಮೆಯಿದೆ; ಆದರೆ ಮಲದಲ್ಲಿ, ಮೂತ್ರದಲ್ಲಿ ರಕ್ತ ನಷ್ಟವಾಗುತ್ತಿಲ್ಲ. ಕೆಂಪು ರಕ್ತಕಣಗಳು ಸಣ್ಣ ಇದ್ದವೆಂದು ಎರಡು ತಿಂಗಳು ಕಬ್ಬಿಣ ಅಂಶದ ಸಿರಪ್ ಕೊಟ್ಟೆವು. ಆದರೆ ರಕ್ತ ಕಣಗಳು ಹಾಗೆಯೇ ಇವೆ. ಉಳಿದಂತೆ ಶರೀರ ಪರೀಕ್ಷೆಯಲ್ಲಿ ಏನೂ ವ್ಯತ್ಯಾಸ ಇಲ್ಲ. ನಾರ್ಮಲ್ ಕಾಣುತ್ತಾನೆ”  

“ಕರ್ಕೊಂಬನ್ನಿ” ಪ್ರೊಫೆಸರರು ಆಜ್ಞಾಪಿಸಿದರು.

ವಿದ್ಯಾರ್ಥಿ ಓಡಿ ಹೋಗಿ ಕೆಲಕ್ಷಣಗಳಲ್ಲಿ ಹುಡುಗನ ಜೊತೆ ವಾಪಸ್ಸಾದ. ತುಂಬಾ ಕೊಸರಾಡುತ್ತಿದ್ದ, ಕತ್ತಿನ ಸುತ್ತಲೂ ನಾಲ್ಕು ತಾಯತ್ತುಗಳನ್ನು ಕಟ್ಟಿಸಿಕೊಂಡಿದ್ದ ಹುಡುಗನನ್ನು ಪ್ರೊಫೆಸರರು ತಾಳ್ಮೆಯಿಂದ ಪರೀಕ್ಷಿಸಿದರು. ಆನಂತರ “ಇವನ ಅಪ್ಪ ಅಮ್ಮ ಯಾರಾದರೂ ಇದ್ದರೆ ಕರೆಸಿ” ಎಂದು ಹುಡುಗನನ್ನು ಹೋಗಗೊಟ್ಟರು.

ಹೆದರಿ ಮುದ್ದೆಯಾಗಿದ್ದ ಹುಡುಗನ ತಾಯಿ ಪ್ರೊಫೆಸರರ ಮುಂದೆ ನಿಂತರು. ಆಕೆಯ ಕೆಲಸ, ವಾಸ, ಮನೆಯ ವಿಳಾಸ, ಜೀವನ ಶೈಲಿಗಳನ್ನು ವಿಚಾರಿಸಿದರು. ಮಗುವಿನ ತಂದೆಯ ಬಗ್ಗೆ ವಿವರ ತಿಳಿದರು. ಆಕೆಯ ಕೈಬೆರಳು, ಉಗುರು, ಕಣ್ಣುಗಳ ಪರೀಕ್ಷೆ ಮಾಡಿದರು. ನಂತರ ವಿದ್ಯಾರ್ಥಿಯನ್ನು ಕರೆದರು. ಆತನಿಗೆ ಒಂದು ಚೀಟಿ ಕೊಟ್ಟು ಹೇಳಿದರು: “ಮೊದಲು ಮಗುವಿನ ಮತ್ತು ತಾಯಿಗೆ ನಾನು ಬರೆದಿರುವ ರಕ್ತ ಪರೀಕ್ಷೆ ಮಾಡಿಸಿ. ನಂತರ ಈಕೆಯ ಜೊತೆಯಲ್ಲಿ ಇವರ ಮನೆಗೆ ಹೋಗಿ. ಮನೆಯ ಪರಿಸ್ಥಿತಿ, ಗೋಡೆಗಳು, ನೆಲ, ಜಂತಿ, ಛಾವಣಿ, ನೀರಿನ ಪೈಪು ಎಲ್ಲವನ್ನೂ ಪರೀಕ್ಷೆ ಮಾಡಿ. ಬರುವಾಗ ಇವರ ನಲ್ಲಿಯ ನೀರಿನ ಸ್ಯಾಂಪಲ್ ಬೇಕು. ಹಾಗೆಯೇ ಗೋಡೆಯ ಪೈಂಟು, ಮಗು ಆಡುವ ಆಟಿಕೆಗಳು, ಮನೆಯ ಸುತ್ತಮುತ್ತಲ ವಾತಾವರಣ ಎಲ್ಲವನ್ನೂ ಗಮನಿಸಿ ವರದಿ ಮಾಡಬೇಕು. ಅಕ್ಕಪಕ್ಕದವರ ಅನುಮತಿ ಪಡೆದು ಮನೆಯ ಸುತ್ತಮುತ್ತಲಿನ ಫೋಟೊ ತೆಗೆದು ತನ್ನಿ. ಈಕೆಯ ಮನೆಯ ಆಸುಪಾಸಿನಲ್ಲಿ ಇರುವ ಇತರ ಮಕ್ಕಳಲ್ಲೂ ಇಂತಹುದೇ ಲಕ್ಷಣಗಳು ಇವೆಯೇ ಎಂದು ವಿಚಾರಿಸಿ. ಹುಡುಗನ ಜೊತೆಗೆ ಇರುವ ಅಜ್ಜಿಯ ರಕ್ತದ ಸ್ಯಾಂಪಲ್ ಕೂಡ ಬೇಕು. ಅವರ ರಕ್ತ ಪರೀಕ್ಷೆಯ ರಿಪೋರ್ಟ್ ಬಂದ ನಂತರ ಉಳಿದದ್ದನ್ನು ಹೇಳುತ್ತೇನೆ” ಎಂದು ಪ್ರೊಫೆಸರರು ತಮ್ಮ ಬರವಣಿಗೆಯಲ್ಲಿ ಮಜ್ಞರಾದರು.

ತಾಯಿ ಮತ್ತು ಮಗುವಿನ ರಕ್ತ ತೆಗೆದು, ಅದನ್ನು ತನ್ನ ಸಹಪಾಠಿಯ ಕೈಲಿಟ್ಟು. ಪ್ರೊಫೆಸರರು ಹೇಳಿದ ಪರೀಕ್ಷೆ ಮಾಡಿಸಲು ತಿಳಿಸಿದ ವಿದ್ಯಾರ್ಥಿ, ತಾಯಿಯ ಜೊತೆಗೆ ಹೊರಟು ಪ್ರೊಫೆಸರರು ಹೇಳಿದ ರೀತಿಯಲ್ಲಿ ಮಾಹಿತಿ ಸಂಗ್ರಹಿಸಿದ. ಮಗುವಿನ ಅಜ್ಜಿಯ ರಕ್ತವನ್ನು, ಮಗುವಿನ ಮನೆಯ ನೀರಿನ ಸ್ಯಾಂಪಲ್ ಅನ್ನೂ ಪ್ರೊಫೆಸರರು ಹೇಳಿದ ಪರೀಕ್ಷೆಗೆ ಕಳಿಸಿದ. ತನ್ನ ಪರಿವೀಕ್ಷಣೆಯ ವಿವರಗಳನ್ನೆಲ್ಲಾ ನೀಟಾಗಿ ಬರೆದು, ದಾಖಲೆಗಳನ್ನು ಜೊತೆ ಮಾಡಿ, ಮಗುವಿನ ಕೇಸ್ ಫೈಲಿನಲ್ಲಿಟ್ಟು ಪ್ರೊಫೆಸರರ ಬಳಿ ನೀಡಿದ. ಆತ ತಂದ ಚಿತ್ರಗಳನ್ನು ಪ್ರೊಫೆಸರರು ವಿವರವಾಗಿ ಪರಿಶೀಲಿಸಿದರು. ಮಗುವಿನ ವಾಸದ ಮನೆಯ ಗೋಡೆಗಳಿಗೆ ಸುಣ್ಣ ಹೊಡೆದಿದ್ದರು. ಯಾವ ಗೋಡೆಗಳಿಗೂ ಪೈಂಟಿನ ಬಣ್ಣವಿರಲಿಲ್ಲ. ಮಗುವಿನ ಮನೆಯ ಸುತ್ತಮುತ್ತಲ ಮಕ್ಕಳಲ್ಲಿ ಯಾರಿಗೂ ಈ ರೀತಿಯ ಸಮಸ್ಯೆ ಇಲ್ಲವೆಂದು ತಿಳಿಯಿತು. ಅಲ್ಲದೆ, ಈ ಜಗಳಗಂಟ ಮಗುವಿನ ಜೊತೆಯಲ್ಲಿ ಮನೆಯ ಸುತ್ತಮುತ್ತಲ ಬೇರ್ಯಾವ ಮಗುವೂ ಆಡುವುದಿಲ್ಲವೆಂದೂ, ಅಜ್ಜಿಯ ಆರೈಕೆಯಲ್ಲಿ ಬೆಳೆಯುತ್ತಿರುವ ಈ ಮಗು ಬಹುತೇಕ ಸಮಯ ಎಲ್ಲಿರುತ್ತದೆ ಎಂದು ಅಜ್ಜಿಗೆ ತಿಳಿದೇ ಇರುವುದಿಲ್ಲವೆಂದೂ ವಿದ್ಯಾರ್ಥಿ ವರದಿ ಮಾಡಿದ. ಅಷ್ಟು ವೇಳೆಗೆ ಮಗುವಿನ, ತಾಯಿಯ, ಅಜ್ಜಿಯ ರಕ್ತದ ಪರೀಕ್ಷೆ, ಮತ್ತು ನಲ್ಲಿ ನೀರಿನ ಪರೀಕ್ಷೆಗಳ ವರದಿಗಳೂ ಬಂದವು. ಸೀಲು ಮಾಡಿದ ಲಕೋಟೆ ಒಡೆದು ವರದಿಗಳನ್ನು ನೋಡಿ ಗಂಭೀರವದನರಾದ ಪ್ರೊಫೆಸರರು ಎದ್ದು ನಿಂತು “ಮಗುವನ್ನು ಕರೆದು ತಾ. ಹೋಗೋಣ” ಎಂದು ವಿದ್ಯಾರ್ಥಿಗೆ ಹೇಳಿದರು.

ಮಗುವಿನ ವಾಸದ ಸ್ಥಳಕ್ಕೆ ಬಂದ ಪ್ರೊಫೆಸರರು ಮಗುವಿನ ಕೈಗೆ ದೊಡ್ಡ ಚಾಕಲೇಟೊಂದನ್ನು ಕೊಟ್ಟು, “ನೀನು ದಿನವೆಲ್ಲಾ ಎಲ್ಲಿ ಆಡುತ್ತೀಯೆ?” ಎಂದು ಕೇಳಿದರು. ಚಾಕಲೇಟಿನಿಂದ ಖುಷಿಯಾದ ಮಗು, ತಾನು ದಿನವೂ ಆಡುವ ಜಾಗದ ಬಳಿ ಪ್ರೊಫೆಸರನ್ನು ಕರೆದೊಯ್ದಿತು. ಮಗುವಿನ ಮನೆಯಿಂದ ಒಂದೆರಡು ಬ್ಲಾಕ್ ದೂರದಲ್ಲಿದ್ದ ನಿರ್ಜನ ಸ್ಥಳವೊಂದರಲ್ಲಿ ಹಾಳುಗೂಡಿನಂತೆ ನಿರ್ಮಾಣವಾಗಿದ್ದ ಒಂದು ಷೆಡ್ಡಿನ ಬಳಿ ಮಗುವಿನ ಜೊತೆಗೆ ಬಂದ ಪ್ರೊಫೆಸರರು, ಆ ಷೆಡ್ಡಿಗೆ ಜಡಿದಿರುವ ಬೀಗವನ್ನು ನೋಡಿ, “ಇದರೊಳಗೆ ಹೋಗುವುದು ಹೇಗೆ?” ಎಂದರು. ಮಗು ಆ ಷೆಡ್ಡಿನ ಹಿಂಭಾಗದಲ್ಲಿರುವ ಸಣ್ಣ ಕಿಂಡಿಯನ್ನು ತೋರಿಸಿತು. ಅದರೊಳಗೆ ದೊಡ್ಡವರು ಹೋಗುವಷ್ಟು ಸ್ಥಳಾವಕಾಶ ಇರಲಿಲ್ಲ. ಮಗು ಮಾತ್ರ ಅದರಲ್ಲಿ ಆರಾಮವಾಗಿ ತೂರಿಕೊಂಡು ಒಳಗೆ ಹೋಯಿತು. ಆ ಕಿಂಡಿಯ ಬಳಿ ಮಂಡಿಯೂರಿ ಕುಳಿತ ಪ್ರೊಫೆಸರರು ದೀರ್ಘ ಶ್ವಾಸ ಎಳೆದುಕೊಂಡರು. ನಂತರ ಮಗುವನ್ನು ಹೊರಗೆ ಕರೆದು, ಅದರ ಜೊತೆಯಲ್ಲಿ ವಾಪಸ್ ಆಸ್ಪತ್ರೆಗೆ ಹೊರಟರು. ದಾರಿಯುದ್ದಕ್ಕೂ ಯಾರ ಜೊತೆಯಲ್ಲೋ ಫೋನಿನಲ್ಲಿ ಮಾತನಾಡಿದರು.

ಈ ಘಟನೆಯಾದ ಎರಡು ದಿನಗಳಿಗೆ ದಿನಪತ್ರಿಕೆಗಳು ಪ್ರಮುಖ ಕ್ರೈಂ ಸುದ್ಧಿ ಪ್ರಕಟಿಸಿದವು. ಹಳೆಯ ಲೆಡ್-ಆಸಿಡ್ ಬ್ಯಾಟರಿಗಳನ್ನು ಅನಧಿಕೃತವಾಗಿ ನವೀಕರಿಸಿ, ಅವಕ್ಕೆ ದೊಡ್ಡ ಕಂಪನಿಗಳ ಲೇಬಲ್ ಹಚ್ಚಿ, ಆ ಕಳ್ಳ ಮಾಲನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಖದೀಮರ ಗುಂಪೊಂದನ್ನು ಪೋಲೀಸರು ಸೆರೆ ಹಿಡಿದ ಪ್ರಸಂಗ. ಮನೆಗಳಲ್ಲಿನ ಯು.ಪಿ.ಎಸ್ ಬ್ಯಾಟರಿ, ಪಾರ್ಕಿಂಗ್ ಮಾಡಿದ್ದ ಕಾರುಗಳ ಬ್ಯಾಟರಿ, ಸಣ್ಣ-ಪುಟ್ಟ ಕಾರ್ಖಾನೆಗಳಲ್ಲಿ ಬಳಸುತ್ತಿದ್ದ ಬ್ಯಾಟರಿಗಳು, ಗುಜರಿ ಅಂಗಡಿಗಳಿಂದ ಪಡೆದ ಬ್ಯಾಟರಿಗಳು – ಹೀಗೆ ಹಲವಾರು ಲೆಡ್-ಆಸಿಡ್ ಬ್ಯಾಟರಿಗಳನ್ನು ತಮ್ಮ ಷೆಡ್ಡಿಗೆ ತಂದು, ಅಲ್ಲಿ ಹಳೆಯ ಸೀಸದ ಸರಳುಗಳನ್ನು ಅನಧಿಕೃತವಾಗಿ ಸಂಸ್ಕರಿಸಿ, ಹೊಸ ಆಸಿಡ್ ತುಂಬಿ, ಬ್ಯಾಟರಿ ಅಲ್ಪಸ್ವಲ್ಪ ಕೆಲಸ ಮಾಡುವಂತೆ ಮಾಡಿ, ಅವನ್ನು ಹೊಸ ಬ್ಯಾಟರಿಗಳ ಸೋಗಿನಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದ ಕಳ್ಳರ ದೊಡ್ಡ ಜಾಲವೊಂದು ಪೋಲೀಸರ ಬಲೆಗೆ ಸಿಲುಕಿತ್ತು. ಅನೇಕ ದಿನಗಳಿಂದ ಈ ವಂಚನೆಯ ಜಾಲವನ್ನು ಪತ್ತೆಮಾಡಲು ಪ್ರಯತ್ನಿಸುತ್ತಿದ್ದ ಪೋಲೀಸರಿಗೆ ಅನಿರೀಕ್ಷಿತವಾಗಿ ದೊರೆತ ಮಹತ್ವವ ಸುಳಿವಿನಿಂದ ಈ ಮೋಸಗಾರರ ತಂಡ ಪತ್ತೆಯಾಯಿತು ಎಂದು ವರದಿಯಾಗಿತ್ತು. ಸುಳಿವು ನೀಡಿದ ವ್ಯಕ್ತಿಯ ಹಿನ್ನೆಲೆಯನ್ನು ಗೌಪ್ಯವಾಗಿ ಇರಿಸಿದ ಪೋಲೀಸರು, ಆ ವ್ಯಕ್ತಿಗೆ ನಗದು ಬಹುಮಾನ ಘೋಷಿಸಿದ್ದರು.

ಇತ್ತ ಆಸ್ಪತ್ರೆಯಲ್ಲಿ ಸಂಭ್ರಮದ ವಾತಾವರಣ. ಹುಡುಗನ ತಾಯಿಗೆ ಭಾರಿ ಹಿಗ್ಗು. ಯಾರೋ ಅನಾಮಧೇಯ ವ್ಯಕ್ತಿ ಆಕೆಯ ಮಗನ ಚಿಕಿತ್ಸೆಗೆಂದು ದೊಡ್ಡ ಮೊತ್ತ ನೀಡಿದ್ದರು. ತನ್ನ ಜೀವನದಲ್ಲಿ ಎಂದೂ ಐದು ಅಂಕಿಯ ಮೊತ್ತವನ್ನು ನೋಡಿಲ್ಲದ ಆಕೆ ಬಹಳ ಸಂತಸಗೊಂಡಿದ್ದರು. ಹುಡುಗನ ಚಿಕಿತ್ಸೆಯ ವೆಚ್ಚದ ನಂತರವೂ ಉಳಿಯುವ ಸಾಕಷ್ಟು ಹಣದಲ್ಲಿ ತನ್ನ ಸಾಲಗಳನ್ನು ತೀರಿಸಿ, ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸುವ ಯೋಜನೆ ಆಕೆಯದ್ದು. ಈ ಹಣ ಎಲ್ಲಿಂದ ಬಂದಿತೆಂಬ ಆಲೋಚನೆ ಆಕೆಯನ್ನು ಹೆಚ್ಚು ಬಾಧಿಸಲಿಲ್ಲ. ಕಷ್ಟಕಾಲಕ್ಕೆ ದೇವರು ನೆರವಾದನೆಂದು ಎಲ್ಲರಲ್ಲೂ ಹೇಳಿಕೊಳ್ಳುತ್ತಿದ್ದರು.

ವಿದ್ಯಾರ್ಥಿ ಮತ್ತೊಮ್ಮೆ ಪ್ರೊಫೆಸರರ ಕೋಣೆಗೆ ಬಂದ. ಯಥಾರೀತಿ ಬರವಣಿಗೆಯಲ್ಲಿ ನಿರತರಾಗಿದ್ದ ಪ್ರೊಫೆಸರರು ಆತನನ್ನು ನೋಡಿ ಕೂರುವಂತೆ ಸೂಚಿಸಿದರು. ತಮ್ಮ ಪೆನ್ನನ್ನು ಬದಿಗಿಟ್ಟು “ಏನು?” ಎನ್ನುವಂತೆ ಆತನನ್ನು ನೋಡಿದರು. ವಿದ್ಯಾರ್ಥಿಯ ಮುಖದಲ್ಲಿ ಹಿಗ್ಗು ಕಾಣುತ್ತಿತ್ತು. “ನೀವು ಹೇಳಿದ ಚಿಕಿತ್ಸೆ ನೀಡಿದೆವು ಸರ್. ಹುಡುಗ ಈಗ ಬಹಳ ಚೇತರಿಸಿಕೊಂಡಿದ್ದಾನೆ. ದೇಹದಲ್ಲಿ ರಕ್ತದ ಅಂಶ ಹೆಚ್ಚಿದೆ. ಮೊದಲಿನ ಹಾಗೆ ತಂಟೆ ಮಾಡುತ್ತಿಲ್ಲ. ಸಾಕಷ್ಟು ಚೂಟಿ ಹುಡುಗ ಸರ್. ಶಾಲೆಯಲ್ಲಿ ಚೆನ್ನಾಗಿ ಓದಿಸಿದರೆ ಒಳ್ಳೆಯ ಭವಿಷ್ಯವಿದೆ. ಆತನ ಕುಟುಂಬದವರು ನಮ್ಮನ್ನು ಬಹುವಾಗಿ ಹೊಗಳುತ್ತಿದ್ದಾರೆ. ಆದರೆ ಇದನ್ನೆಲ್ಲಾ ಮಾಡಿದ್ದು ನೀವು ಎನ್ನುವುದು ಅವರಿಗೆ ತಿಳಿದಿಲ್ಲ. ಪೋಲೀಸರಿಂದ ನಿಮಗೆ ಬಂದ ಬಹುಮಾನದ ಎಲ್ಲ ಹಣವನ್ನೂ ಆ ಕುಟುಂಬಕ್ಕೆ ನೀಡಿದ್ದೀರಿ ಎಂಬುದು ನಿಮಗೆ ಮತ್ತು ನನಗೆ ಮಾತ್ರ ತಿಳಿದಿದೆ. ಅಜಮಾಸು ಏನಾಯಿತು ಎಂಬ ಅಂದಾಜಿದ್ದರೂ, ನಿಖರವಾಗಿ ಈ ಕೇಸನ್ನು ನೀವು ಹೇಗೆ ಪರಿಹರಿಸಿದಿರಿ ಎಂದು ಸ್ಪಷ್ಟವಿಲ್ಲ. ನಿಮಗೆ ಅನುಕೂಲವಾದಾಗ ಹೇಳಿದರೆ ನಮಗೂ ತಿಳಿದಂತಾಗುತ್ತದೆ” ಎಂದ.

ಪ್ರೊಫೆಸರರು ಗಂಭೀರವಾಗಿ ಹೇಳಿದರು: “ಮತ್ತೆ ಮತ್ತೆ ನನ್ನನ್ನು ಡಿಸ್ಟರ್ಬ್ ಮಾಡದಿದ್ದರೆ ಈಗಲೇ ಹೇಳುತ್ತೇನೆ. ಹುಡುಗನ ರೋಗಲಕ್ಷಣಗಳನ್ನು ಕೇಳಿದಾಗಲೇ ಇದು ಸೀಸದ ವಿಷಕಾರಿ ಪರಿಣಾಮ ಇರಬಹುದು ಎಂದು ಅಂದಾಜಾಗಿತ್ತು. ಆತನನ್ನು ಪರೀಕ್ಷೆ ಮಾಡಿದಾಗ ಬೇರೆ ಯಾವ ಸಾಧ್ಯತೆಗಿಂತಲೂ ಸೀಸದ ಪರಿಣಾಮವೇ ಹೆಚ್ಚು ಅನಿಸಿತು. ಅದಕ್ಕಾಗಿಯೇ ಆತನ ಮನೆಗೆ ನಿಮ್ಮನ್ನು ಕಳಿಸಿದ್ದು. ಹುಡುಗನ ರಕ್ತದ ಪರೀಕ್ಷೆ ಸೀಸದ ಅಂಶವನ್ನು ಧೃಡಪಡಿಸಿತು. ಆದರೆ, ಆತನ ತಾಯಿಯ ಮತ್ತು ಅಜ್ಜಿಯ ರಕ್ತದಲ್ಲಿ ಸೀಸದ ಅಂಶ ಹೆಚ್ಚಾಗಿರಲಿಲ್ಲ. ಜೊತೆಗೆ, ಆತನ ಮನೆಯ ನಲ್ಲಿ ನೀರಿನಲ್ಲಿ ಸೀಸದ ಅಂಶವೇನೂ ಇರಲಿಲ್ಲ. ಸೀಸ ಇರಬಲ್ಲ ಬಣ್ಣವಾಗಲೀ, ಆಟಿಕೆಯಾಗಲೀ ಮಗುವಿನ ಬಳಿ ಇಲ್ಲ. ಅಂದರೆ, ಹುಡುಗ ಓಡಾಡುವ ಯಾವುದೋ ಜಾಗದಿಂದ ಸೀಸ ಆತನ ದೇಹವನ್ನು ಸೇರುತ್ತಿರಬೇಕು.”

ಮೇಜಿನ ಮೇಲಿದ್ದ ಪುಸ್ತಕಗಳನ್ನು ಮುಚ್ಚಿ ಪ್ರೊಫೆಸರರು ಮುಂದುವರೆಸಿದರು: “ಈ ಸೀಸ ಎನ್ನುವುದು ಮನುಷ್ಯನ ದೇಹದಲ್ಲಿ ಸಹಜವಾಗಿ ಇರುವ ಲೋಹವಲ್ಲ. ನಮ್ಮ ದೇಹದಲ್ಲಿ ಸೀಸದ ಅಂಶವಿದೆ ಎಂದರೆ ಅದು ಹೊರಗಿನಿಂದಲೇ ಬಂದಿದೆ ಎಂದರ್ಥ. ಈಗ ಹುಡುಗನ ಮನೆಯವರಿಗೆ ಇಲ್ಲದ ಸೀಸದ ಅಂಶ ಹುಡುಗನ ರಕ್ತದಲ್ಲಿದೆ ಎಂದರೆ, ದಿನವಿಡೀ ಮನೆಯಿಂದ ಹೊರಗೆ ಇರುವ ಹುಡುಗ ಆ ಸಮಯದಲ್ಲಿ ಎಲ್ಲೋ ಸೀಸದ ವಾತಾವರಣದಲ್ಲಿ ಕಾಲ ಕಳೆಯುತ್ತಿದ್ದಾನೆ ಎಂದೇ ತಿಳಿಯುತ್ತದೆ. ತಾನು ಎಲ್ಲಿಗೆ ಹೋಗುತ್ತಿದ್ದೇನೆ ಎಂಬುದನ್ನು ವಿವರಿಸಲು ಬಾರದ ಹುಡುಗನನ್ನು ಸುಮ್ಮನೆ ಕೇಳಿ ಪ್ರಯೋಜನವಿಲ್ಲ. ಅದಕ್ಕೇ ಆತನನ್ನು ಕರೆದುಕೊಂಡು ಆತನ ಮನೆಯ ಬಳಿ ಹೋದದ್ದು. ತಾನು ದಿನವಿಡೀ ಆಟವಾಡುತ್ತಿದ್ದ ಷೆಡ್ಡನ್ನು ಆ ಹುಡುಗ ತೋರಿಸಿದ. ತಾವು ಮಾಡುವ ಅಪಮಾರ್ಗದ ಕೆಲಸ ಯಾರಿಗೂ ತಿಳಿಯಬಾರದೆಂದು ಹಗಲು ವೇಳೆ ಬೀಗ ಹಾಕುತ್ತಿದ್ದ ಷೆಡ್ಡಿನ ಕೆಲಸ ಆರಂಭವಾಗುತ್ತಿದ್ದೇ ಸಂಜೆಯ ನಂತರ. ಷೆಡ್ಡಿನ ಹಿಂಬದಿಯಲ್ಲಿ ಮಕ್ಕಳು ತೂರಿ ಬರಬಹುದಾದ ಕಿಂಡಿ ಇದೆಯೆಂದು ಪ್ರಾಯಶಃ ಆ ಷೆಡ್ಡಿನಲ್ಲಿ ಕೆಲಸ ಮಾಡುವವರಿಗೂ ತಿಳಿದಿಲ್ಲ. ಯಾರ ಸಮಸ್ಯೆಯೂ ಇಲ್ಲದೇ ಆಡುವಷ್ಟು ದೊಡ್ಡದಾದ ಜಾಗದಲ್ಲಿ ಆ ಮಗು ತನ್ನ ಮನಸ್ಸಿಗೆ ಬೇಕಾದಂತೆ ಇರುತ್ತಿತ್ತು. ಹಸಿವಾದಾಗ, ಕತ್ತಲೆಯಾದಾಗ ಅಲ್ಲಿಂದ ಹೋಗುತ್ತಿತ್ತು. ಸೀಸವನ್ನು ಕಾಯಿಸುತ್ತಿದ್ದ ಆ ಷೆಡ್ಡಿನ ವಾತಾವರಣದಲ್ಲಿ ದಿನದ ಬಹುಭಾಗ ಆಡುತ್ತಿದ್ದ ಮಗುವಿನ ದೇಹಕ್ಕೆ ಅನಾಯಾಸವಾಗಿ ವಿಫುಲ ಸೀಸದ ಅಂಶ ಸೇರಿ ಹೋಗಿತ್ತು. ಇವನ್ನೆಲ್ಲಾ ಒಂದಕ್ಕೊಂದು ತಾಳೆ ಮಾಡಿದ ನಂತರ ನಾನು ಪೋಲೀಸರಿಗೆ ಇದರ ಬಗ್ಗೆ ತನಿಖೆ ಮಾಡಲು ಸೂಚಿಸಿದೆ. ಹುಡುಗನ ಮೂಲದಿಂದ ದೊರೆತ ಬಹುಮಾನದ ಹಣವನ್ನು ಅವನಿಗೇ ನೀಡಿದೆ” ಎಂದು ಪ್ರೊಫೆಸರರು ಮಾತು ಮುಗಿಸಿದರು.

ವಿದ್ಯಾರ್ಥಿ ಕಣ್ಣರಳಿಸಿ ಕೇಳುತ್ತಿದ್ದ. ಆತನ ಮುಂದೆ ವೈದ್ಯಕೀಯ ಪತ್ತೆದಾರಿಕೆಯ ಹೊಸದೊಂದು ಅಧ್ಯಾಯವೇ ತೆರೆದು ಇಟ್ಟಂತಾಗಿತ್ತು. ಸಾರ್ವಜನಿಕ ಸಾರಿಗೆ ಸಾಕಷ್ಟಿಲ್ಲದ ನಮ್ಮ ದೇಶದಲ್ಲಿ ಕಾರು, ಬೈಕುಗಳ ಮೇಲೆ ನಮಗಿರುವ ಅವಲಂಬನೆ; ಯಾವುದೇ ಪೂರ್ವಸೂಚನೆಯಿಲ್ಲದೆ ವಿದ್ಯುತ್ ಕಡಿತ ಮಾಡುವ ನಿಗಮಗಳ ಬೇಜವಾಬ್ದಾರಿಗೆ ಪರಿಹಾರವಾಗಿ, ಮಾಡುವ ಕೆಲಸ ಕೆಡದಂತೆ ಯು.ಪಿ.ಎಸ್. ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ; ಇದಕ್ಕೆಲ್ಲ ಮೂಲವಾದ ಬ್ಯಾಟರಿಗಳ ಮೇಲಿನ ನಿರ್ಭರತೆ; ಜನರ ಈ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಬ್ಯಾಟರಿ ವ್ಯವಹಾರದಲ್ಲಿ ಅವ್ಯವಹಾರ ಮಾಡುವ ದುರುಳರ ಕಾರ್ಯಯೋಜನೆ ಮೊದಲಾದುವು ಆತನ ಚಿತ್ತದಲ್ಲಿ ಸುಳಿದವು. ಯಾರದ್ದೋ ಅವ್ಯವಹಾರದಲ್ಲಿ ಇನ್ಯಾರೋ ಬಲಿಯಾಗುವ ವಿಪರ್ಯಾಸ ಆತನ ಕಣ್ಣನ್ನು ಮಂಜಾಗಿಸಿತು. ಒಂದು ದಿನ ತಾನೂ ತನ್ನ ಪ್ರೊಫೆಸರರಂತೆ ತಾರ್ಕಿಕವಾಗಿ ಆಲೋಚಿಸಿ, ಮತ್ತೊಬ್ಬರ ಯೋಗಕ್ಷೇಮಕ್ಕೆ ಕಾರಣವಾಗಬೇಕೆಂಬ ಹೆಬ್ಬಾಸೆಯೊಂದಿಗೆ ವಿದ್ಯಾರ್ಥಿ ಪ್ರೊಫೆಸರರಿಗೆ ನಮಿಸಿ ಹೊರನಡೆದ.  

-----------------------------

ಜುಲೈ 2022 ಮಾಹೆಯ ಕುತೂಹಲಿ ವಿಜ್ಞಾನ ಮಾಸಪತ್ರಿಕೆಯಲ್ಲಿ ಪ್ರಕಟವಾದ ವೈಜ್ಞಾನಿಕ ಕತೆ. ಈ ಕತೆ ಬರೆಯಲು ಕಾರಣ ಶ್ರೀಯುತ ಕೊಳ್ಳೆಗಾಲ ಶರ್ಮಾ ಅವರು. 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ